ಸ್ತೋತ್ರಸಂಹಿತಾ ೩.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)
ಅನಘೋಽಪತಿರಾಲಮ್ಬಶ್ಚಾಘಹಾರೀ ಘನಾಘನಃ।
ಗುರುರ್ಲಘುಃ ಕೃಶಸ್ಸ್ಥೂಲಃ ಕೇವಲೋ ನಿರ್ಗುಣಶ್ಶಿವಃ॥೪೪॥(೩೧೧)
ಅನಘನಘರಹಿತನೆ ಮಹಾತ್ಮನೆ
ವಿನುತ ಪಾಪವಿದೂರ ಕೃಷ್ಣನೆ
ಮನೆಮನಗಳನು ಬೆಳಗುತಿರುವ ಮಹಾಮಹಿಮ ಹರಿ |
ಅನಘನಘಹರ ಪುಣ್ಯಪ್ರೇರಕ
ಸನುಮತದಿ ಸನ್ಮಾರ್ಗದರ್ಶಕ
ವನದಿ ಜಲಮಧ್ಯದಲಿ ಕಾಯುವ ದೇವ ಶ್ರೀಕೃಷ್ಣ || ೩೦೦ ||
ಅಪತಿಯಧಿಪತಿರಹಿತ ಕೃಷ್ಣನೆ
ಸಪತಿಗಳ ಪತಿ ಸಕಲಪತಿ ಹರಿ
ಭೂಪತಿಯೆ ಶ್ರೀಪತಿಯೆ ನಿನಗಾರಿಹರು ನಾಯಕರು |
ಕಪಟನಾಟಕಸೂತ್ರಧಾರಿಯೆ
ವಿಪದ ಕಳೆಯುತ ಸುಜನ ರಕ್ಷಕ
ಕುಪಥರನು ತರಿದಿಕ್ಕಿ ಧರ್ಮವ ಸ್ಥಾಪಿಸುವ ದೇವ || ೩೦೧ ||
ಆಲಂಬ ಸರ್ವಕು ಕೃಷ್ಣ ನೀನೇ
ಸಾಲಂಬರೆಲ್ಲರು ನಿನ್ನ ಹೊರತಿಲಿ
ವಿಲಂಬಿಸದಿವರನ್ನು ಕಾಯೈ ಹೇ ನಿರಾಲಂಬ |
ಕಲಂಕವ ತೊಳೆ ಸುಮತಿ ನೀಡೈ
ಸುಲಂಕೃತ ಹರಿಯಹಂಕೃತಿ ಕಳೆ
ಸುಲಂಬನೆ ಸುಜನರಿಗೆ ಧರ್ಮಾಲಂಬ ನಿಜಮೂರ್ತಿ || ೩೦೨ ||
ಕೃಷ್ಣ ನೀಯಘಹಾರಿಯಘ ಕಳೆ
ಕೃಷ್ಣ ಪಾಪವ ನಾಶಮಾಡುವೆ
ಕೃಷ್ಣ ದುರಿತವ ಹರಣಗೈಯುವೆ ಪುಣ್ಯಪಾಪಹನೆ |
ಕೃಷ್ಣ ಪುಣ್ಯದ ಬಂಧ ಕಳೆಯುವೆ
ಕೃಷ್ಣ ಪಾಪದ ಕರ್ಮ ಕಳೆಯುವೆ
ಕೃಷ್ಣ ಬ್ರಹ್ಮಾತ್ಮದ ಸುಬೋಧದವಿದ್ಯೆನಾಶಕನೆ || ೩೦೩ ||
ಘನಾಘನ ಹರಿ ಘನನು ಕೃಷ್ಣನ-
-ಘನನು ದ್ರವನಿಲರೂಪ ಶ್ರೀಹರಿ
ಘನವನಘನವಗೈವ ಮೂಕನ ವಾಕ್ಪಟುವ ಗೈವ |
ಘನವು ಸಚ್ಚಿತ್ಸುಖವು ಬ್ರಹ್ಮವ-
-ಘನವು ಮಾಯಾವಿದ್ಯೆರೂಪವು
ಘನಾಘನವಾತ್ಮನಾತ್ಮವು ಪರಬೊಮ್ಮ ಸದಸತ್ತು || ೩೦೪ ||
ಗುರು ಪರಾತ್ಪರ ಕೃಷ್ಣ ಲೋಕಕೆ
ಗುರುವು ಗೀತಾಚಾರ್ಯ ಸೃಷ್ಟಿಗೆ
ಗುರುವವಿದ್ಯಾತಮವ ಕಳೆದು ಜ್ಞಾನವನು ಕೊಡುವ |
ಉರುತರದ ವೇದಾಂತನಿಧಿ ಹರಿ
ಪರತರದಲಧ್ಯಾತ್ಮಬೋಧಕ
ಪರಮ ವೇದದ ಸಾರವೆಲ್ಲಕುವಧಿಕಭಾರ ಹರಿ || ೩೦೫ ||
ಲಘುವು ನೀನೇ ಹಗುರ ನೀನೇ
ಲಘುವು ಗಾಯತ್ರಸಾಮವು ಹರಿ
ಲಘುವು ತಾನಣು ಮಹತಿಯೆಲ್ಲವು ಶ್ರೀಪರಬ್ರಹ್ಮ |
ಲಘುತರದ ಮನವೀತಗಿಹುದೈ
ಲಗುಬಗೆಯ ಬದುಕಲ್ಲವೀತನ
ಲಘುತೆ ಗುರುತೆಗಳೆರಡ ಮೀರಿದಮೇಯ ಪರತತ್ತ್ವ || ೩೦೬ ||
ಕೃಶನು ಕೃಷ್ಣನು ಸ್ಥೌಲ್ಯರಹಿತನು
ಕೃಶಶರೀರಿಯು ಸೂಕ್ಷ್ಮತತ್ತ್ವವು
ಕೃಶತೆ ಸ್ಥೂಲತೆ ಮೀರಿರುವ ಪರಮಾತ್ಮ ಶ್ರೀಕೃಷ್ಣ |
ಕೃಶತನುವು ತೋರಿಕೆಯ ಸತ್ಯವು
ಕೃಶತನದಿ ಸಕಲರೊಳು ನಿಂತಿಹ
ಕೃಶತೆಯದು ಸ್ಥೂಲತೆಯ ತಾಳ್ವುದು ಜ್ಞಾನಭಕ್ತಿಯಲಿ || ೩೦೭ ||
ಸ್ಥೂಲನಂತೆಯೆ ತೋರ್ವ ಕೃಷ್ಣನೆ
ಸ್ಥೂಲತನುವದು ಮತ್ತೆ ಮಿಥ್ಯೆಯು
ಸ್ಥೂಲತನ ಸೂಕ್ಷತೆಗಳಾಚೆಯು ಬ್ರಹ್ಮತತ್ತ್ವವದು |
ಸ್ಥೂಲನಾದರು ಸ್ಥೂಲನಲ್ಲವು
ಸ್ಥೂಲತನ ತೋರಿಕೆಯ ಸತ್ಯವು
ಸ್ಥೂಲ ಬ್ರಹ್ಮಾಂಡದೊಳು ವ್ಯಾಪಿಸಿ ಕೃಷ್ಣ ಪರಬೊಮ್ಮ || ೩೦೮ ||
ಕೇವಲನೆ ಕೈವಲ್ಯರೂಪನೆ
ಕೇವಲವು ಪರಮಾತ್ಮರೂಪವು
ಕೇವಲಜ್ಞಾನದಲಿ ಕೇವಲರೂಪ ತಾನಹುದು |
ಕೇವಲಾತ್ಮಕ ಮುಕ್ತಿರೂಪನೆ
ಕೇವಲವು ತಾನಾತ್ಮಮಾತ್ರವು
ಕೇವಲವನಾತ್ಮಗಳ ಬಿಟ್ಟಿಹದೇಕ ಪರತತ್ತ್ವ || ೩೦೯ ||
ನಿರ್ಗುಣನೆ ಗುಣಹೀನ ಕೃಷ್ಣನೆ
ನಿರ್ಗುಣನೆ ತ್ರಿಗುಣಗಳ ಮೀರಿಹ
ನಿರ್ಗುಣನೆ ಸಾತ್ತ್ವಿಕವ ರಾಜಸ ತಾಮಸವ ಮೀರಿ |
ನಿರ್ಗುಣಾತ್ಮಕ ಬೊಮ್ಮರೂಪನೆ
ನಿರ್ಗುಣನೆ ನಾಮವನು ಮೀರಿಹ
ನಿರ್ಗುಣನೆ ರೂಪವನು ಮೀರಿಹ ಸಗುಣದಾಚೆಗಿನ ||೩೧೦ ||
ಶಿವನೆ ಮಂಗಲರೂಪ ಕೃಷ್ಣನೆ
ಶಿವನೆ ಶುಭಕಾರಕನೆ ಶ್ರೀಹರಿ
ಶಿವನೆ ಲಯಕರ ಹರನೆ ಪರಮಾನಂದ ಪರಮಾತ್ಮ |
ಶಿವನೆ ಸಕಲೇಂದ್ರಿಯಗಳ ವಶಿಯೆ
ಶಿವನಶುಭಹರನಷ್ಟಸಿದ್ಧಿಪ
ಶಿವ ಶಿವಾ ಮೂರ್ಲೋಕದಲಿ ಸಜ್ಜನರ ನೀ ಕಾಯೈ || ೩೧೧ ||
ಪರೇಶಃ ಪರಮೋತ್ಕೃಷ್ಟಃ ಪರಾಮೂರ್ತಿಃ ಪರಾಗತಿಃ।
ಪರಮಾಣುಃ ಪರಂಬ್ರಹ್ಮ ಪರಾವರಃ ಪರಾತ್ಪರಃ॥೪೫॥(೩೧೯)
ಪರೇಶನೆ ಪರಮೇಶ ಕೃಷ್ಣನೆ
ಪರೇಶ್ವರ ಪ್ರಕೃತೀಶ ಕೃಷ್ಣನೆ
ಪರಾಪತಿ ಪರತತ್ತ್ವ ರಾಧಾರಮಣ ಶ್ರೀಕೃಷ್ಣ |
ಪರಾತ್ಮಕ ಪ್ರಕೃತಿಸ್ಥ ಶ್ರೀಹರಿ
ಪರಾಧಿಪ ಶ್ರೇಷ್ಠಕ್ಕೆ ಶ್ರೇಷ್ಠನು
ಪರಾತ್ಪರ ಪರಮೇಶ್ವರನೆ ಪರಬೊಮ್ಮ ಶ್ರೀಕೃಷ್ಣ || ೩೧೨ ||
ಪರಮೋತ್ಕೃಷ್ಟ ದೇವ ಕೃಷ್ಣನೆ
ಪರಮ ಶ್ರೇಷ್ಠನು ಸರ್ವಶ್ರೇಷ್ಠನು
ಪರಮನುತ್ಕೃಷ್ಟನೂ ಶ್ರೀಹರಿ ಪರತಮನು ಬೊಮ್ಮ |
ಪರಮಜ್ಯೋತಿಯು ಪರಮಸತ್ಯವು
ಪರಮಧ್ಯಾತವ್ಯನು ಪರಾಪರ
ಪರಮಹಂಸನು ಪರಮತತ್ತ್ವವು ಬೊಮ್ಮ ಸರ್ವಾತ್ಮ || ೩೧೩ ||
ಪರಾಮೂರ್ತಿಯೆ ವಾಸುದೇವನೆ
ಪರಾಶಕ್ತಿಯ ಮೂರ್ತರೂಪನೆ
ಪರಬ್ರಹ್ಮವೆ ಮೂರ್ತಿವೆತ್ತಂತಿಹನೆ ಶ್ರೀಕೃಷ್ಣ |
ಪರಮನಿರ್ಗುಣ ಸಗುಣನಾಗುತ
ಪರಮಸತ್ತ್ವದ ಮೂರ್ತಿಯಾಗುತ
ಪರಮಧರ್ಮವ ರಕ್ಷಿಸಿದ ದುಷ್ಟರನು ಶಿಕ್ಷಿಸುತ || ೩೧೪ ||
ಪರಾಗತಿ ಪರಗತಿಯೆ ಶ್ರೀಹರಿ
ಪರಮಗತಿ ಮುಕುತಿಪ್ರದನೆ ಹರಿ
ಚರಮಗತಿ ಮೋಕ್ಷಸ್ವರೂಪನೆ ಸರ್ವರೊಳಗಿಹನೆ |
ಪರಮ ವೈಕುಂಠನೆ ಸದಾ ಶಿವ
ವರದಮೂರ್ತಿಯೆ ತನ್ನ ಭಕುತಗೆ
ಗುರುವೆ ಪತಿ ಜಗದೀಶನಚ್ಯುತನುರು ತ್ರಿವಿಕ್ರಮನೆ || ೩೧೫ ||
ಪರಮಾಣುವೆ ಪರಬ್ರಹ್ಮವೆ
ಪರಮಸೂಕ್ಷ್ಮನೆ ಕಣದೊಳಿರುವನೆ
ಪರಮಬೃಹದಾಕೃತಿಯೆ ಸರ್ವವನಾವರಿಸುವವನೆ |
ಕರಣ ಕಾರಣ ಹರಣ ಮರಣನೆ
ಚರಣರಜಕಣಪಾವನನೆ ಹರಿ
ವಿರಳ ಸಾಂದ್ರನೆ ಕರುಣ ನಿಷ್ಠುರ ದೇವ ನಾರಯಣ || ೩೧೬ ||
ಪರಂ ಬ್ರಹ್ಮನೆ ಪರಬ್ರಹ್ಮನೆ
ಪರಮಪದ ಸರ್ವಾತ್ಮ ಬೊಮ್ಮನೆ
ಪರಂಪರೆಯಾದಿಯೆ ಮಹಾತ್ಮನೆ ಸರ್ವಮೂಲ ಗುರೋ |
ಪರಮದೇವನೆ ಪರಮಕಾರಣ
ಪರನಿಹಪರಗಳಿಂಗೆ ಪರಗತಿ
ಪರಮಮಂಗಲರೂಪ ಪರಮೇಶ್ವರನೆ ಶ್ರೀಕೃಷ್ಣ || ೩೧೭ ||
ಪರಾವರ ಪರನವರನವನೇ
ಪರನು ಶ್ರೇಷ್ಠನು ತಾ ಕನಿಷ್ಠನು
ಪರನವರನವ ಮಧ್ಯಮನು ಸಹ ಸರ್ವಲೋಕಮಯ |
ಜರಾಮರಣವಿವರ್ಜಿತನು ಸಿರಿ-
-ಯರಸ ಮೂಜಗದೊಡೆಯ ಸದ್ಗುರು
ಮೂರುಲೋಕದ ಸಕಲವೂ ಪರಬೊಮ್ಮ ತಾನಯ್ಯ || ೩೧೮ ||
ಪರಾತ್ಪರ ಪರಮೇಶ ಕೃಷ್ಣನೆ
ಪರಕು ಪರ ಸರ್ವಾಧಿಪತಿ ಗುರು
ಪರಾಪ್ರಕೃತಿಯಧಿಪತಿಯೆ ಚೇತನಶಕ್ತಿ ಜಡಜಗಕೆ |
ಪರಮಶಂಕರ ಪರಮಶುಭಕರ
ಪರಮಸತ್ತ್ವನೆ ಪರಮಚಿತ್ತನೆ
ಪರಮಸುಖರೂಪನೆ ಪರಾತ್ಪರ ಸಚ್ಚಿದಾನಂದ || ೩೧೯ ||
ಪರಂಜ್ಯೋತಿಃ ಪರಂಧಾಮ ಪರಮೇಶಃ ಪರಾಪರಃ।
ಪರಾಶಕ್ತಿಪ್ರಿಯೋಽಪಾರೋ ಪಾರದಃ ಪ್ರಣವಸ್ತಥಾ॥೪೬॥(೩೨೭)
ಪರಂಜ್ಯೋತಿಯೆ ಪರಮಪ್ರಭೆ ಹರಿ
ಪರಮತೇಜಃಪುಂಜ ಕೃಷ್ಣನೆ
ಪರಮಗುರು ಪರಮಾತ್ಮ ಸರ್ವಕು ಮೂಲ ಬೆಳಕು ಹರಿ |
ಪರಂಜ್ಯೋತಿಯ ಮುಂದೆ ರವಿಶಶಿ
ಕಿರಣ ನಕ್ಷತ್ರಾಗ್ನಿ ಬೆಳಗದು
ಪರಂಜ್ಯೋತಿಯೆ ಮೂಲ ಸೂರ್ಯಾದಿಗಳು ಬೆಳಗಲಿಕೆ || ೩೨೦ ||
ಪರಂಧಾಮನೆ ಪರಮಧಾಮನೆ
ಪರಮಜ್ಯೋತಿಯೆ ಪುಣ್ಯಲೋಕನೆ
ಪರಗತಿಯ ದಾಯಕನೆ ವಿಷ್ಣುವೆ ಕೇಶವನೆ ಶಿವನೆ |
ಪರತರನೆ ಪರತಮನೆ ಕೃಷ್ಣನೆ
ಪರಮಕಾರುಣಿಕಾತ್ಮ ಶ್ರೀಹರಿ
ಪರಂಧಾಮ ವಿಕುಂಠಪುರ ವೈಕುಂಠ ಶ್ರೀಹರಿಯೆ || ೩೨೧ ||
ಪರಮೇಶನೆ ಮಹಾವಿಷ್ಣುವೆ
ಪರಮಪತಿ ಜಗಕೆಲ್ಲ ಕೃಷ್ಣನೆ
ಚರಣಕೊಂದಿಪೆ ಸಗುಣಪರಮೇಶ್ವರಗೆ ನಿರ್ಗುಣಗೆ |
ಪರನು ಮಾಯೆಯುಪಾಧಿಯೀಶ್ವರ
ಪರನವಿದ್ಯೆಯುಪಾಧಿ ಜೀವನು
ಪರನುಪಾಧಿಯ ರಹಿತ ನಿರ್ಗುಣ ಮೂಲದಲಿ ಬೊಮ್ಮ || ೩೨೨ ||
ಪರಾಪರ ಪರಮಾತ್ಮ ಬೊಮ್ಮನು
ಚರಾಚರಗುರು ವಾಸುದೇವನು
ಪರಬ್ರಹ್ಮಾಪರಬ್ರಹ್ಮನು ಕಾರ್ಯಕಾರಣನು |
ಪರನು ಕಾರಣನಪರ ಕಾರ್ಯನು
ಪರನು ನಿರ್ಗುಣನಪರ ಸಗುಣನು
ಪರನಾತ್ಮ ಸೂತ್ರಾತ್ಮನಪರ ಹಿರಣ್ಯಗರ್ಭನೆಲ || ೩೨೩ ||
ಪರಾಶಕ್ತಿಪ್ರಿಯನೆ ದೇವನೆ
ಪರಮಪುರುಷನೆ ಶಕ್ತಿರೂಪನೆ
ಪರಾಶಕ್ತಿಸ್ವರೂಪಿಣಿಯ ರಾಧೆಯ ಮನೋಹರನೆ |
ಪರಮಪುರುಷೋತ್ತಮನೆ ಪ್ರಕೃತಿಪ
ಪರಾದೇವತೆರಮಣ ಕೃಷ್ಣನೆ
ಪರಾತ್ಮನೆ ಪರಮಾತ್ಮ ಪರಬೊಮ್ಮನೆ ಪರೇಶ್ವರನೆ || ೩೨೪ ||
ಅಪಾರನೆ ದಡರಹಿತ ಸಾಗರ-
-ನಪಾಯವ ಭವಸಾಗರದ ನೀ-
-ನುಪಾಯದಿ ಕಳೆಯಾತ್ಮವಿದ್ಯೆಯ ನೀಡಿ ಭಕುತರಿಗೆ |
ಸಿಪಾಯಿಗಳಧ್ಯಾತ್ಮ ಮಾರ್ಗದ
ಸುಪಾ-ಯಚತು-ಷ್ಟಯವ ಕರುಣಿಸು-
-ತಪಾಯವನಜ್ಞಾನತಮ ಹರಿಸಯ್ಯ ಶ್ರೀಕೃಷ್ಣ || ೩೨೫ ||
ಪಾರದನೆ ಪಾರಪ್ರದಾಯಕ
ಪಾರ ಮೋಕ್ಷವು ಮೋಕ್ಷದಾಯಕ
ಪಾರ ಭವಸಾಗರದ ಮತ್ತೊಂದೆಡೆಯ ತಟವಹುದು |
ಪಾರುಗಾಣಿಸು ಪಾರದನೆ ಹರಿ
ಮಾರುಹೋಗದ ತೆರದಿ ಮಾಯೆಗೆ
ಮೂರುದಿನದೀ ಬಾಳ ಸಾರ್ಥಕಗೊಳಿಸು ಪರಮಾತ್ಮ || ೩೨೬ ||
ಪ್ರಣವ ಕೃಷ್ಣನೆ ಪ್ರಕೃಷ್ಟನೆ ನವ
ಪ್ರಣತಿ ನಿನಗಿದೊ ಶ್ರೇಷ್ಠ ನೂತನ
ಪ್ರಣವವೋಂಕಾರವದು ನೀನೆಲ ಹರಿಃ ಓಂ ತತ್ಸತ್ |
ಪ್ರಣವ ಪ್ರಾಣವು ಪ್ರಣವ ಜೀವವು
ಪ್ರಣವವಾತ್ಮವು ಪ್ರಣವ ಮೂಲವು
ಪ್ರಣವವಾಚ್ಯನೆ ಪ್ರಣವರೂಪನೆ ಪ್ರಣವಧನು ಕೃಷ್ಣ || ೩೨೭ ||
ಪಿತೃರೂಪಶ್ಚ ಪೀಯೂಷಂ ಪೀತಾಂಬರಸುಶೋಭಿತಃ।
ಪುಣ್ಯಲೋಕಸ್ತು ಪೂರ್ವೇಶಃ ಪಣ್ಡಿತಃ ಪೈತೃಕಃ ಪತಿಃ॥೪೭॥(೩೩೫)
ಪಿತೃರೂಪನೆ ಪೂರ್ವಜನೆ ಹರಿ
ಪಿತೃವು ಲೋಕದ ಸಕಲರಿಗೆ ಹರಿ
ಪಿತೃವಿನನುಗ್ರಹ ಸಕಲ ಸಂತತಿವೃದ್ಧಿಗಾಸರೆಯು |
ಪಿತೃ ಪಿತಾಮಹ ನೀನೆ ಕೃಷ್ಣನೆ
ಪಿತೃವು ಲೋಕದಲಿರುವ ಜೀವರ
ಪಿತೃವು ತಂದೆಯು ಜನಕ ಪಿತ ಹರಿ ಬೊಮ್ಮ ಪರಮೇಶ || ೩೨೮ ||
ಹರಿಯೆ ನೀ ಪೀಯೂಷ ಸಕಲಕು
ಪರಮಮಂಗಲ ಸುಧೆಯು ಸೃಷ್ಟಿಗೆ
ಬರಿಯ ಸುರಸುಧೆಯಲ್ಲ ಮೋಕ್ಷಾಮೃತನು ಹೇ ಕೃಷ್ಣ |
ಹರಿಯ ಭಕ್ತಿಯು ಗಿಣ್ಣುಹಾಲದು
ಗುರಿಯ ಸೇರಲು ಮೊದಲ ಪೌಷ್ಟಿಕ
ಸರಿಯು ನಿನಗಾರಿಹರು ಪರಮೇಶ್ವರನೆ ಪರಬೊಮ್ಮ || ೩೨೯ ||
ಪೀತಾಂಬರಸುಶೋಭಿತ ಹರಿ
ಪೀತ ಹಳದಿಯ ರೇಷ್ಮೆ ಪಟ್ಟೆಯ
ಖ್ಯಾತ ಹರಿ ಧರಿಸುತ್ತ ಶೋಭಿಸುತಿರುವ ಶ್ರೀಕೃಷ್ಣ |
ವಾತಸಂಭವಪ್ರೀಯ ರಾಘವ
ಭೀತ ಭಕುತರ ಪಾಲಿಪನು ಹರಿ
ನೂತನದಿ ದ್ವಾರಕೆಯ ಕಟ್ಟಿದ ಗಟ್ಟಿಗನು ಕೃಷ್ಣ || ೩೩೦ ||
ಕೃಷ್ಣ ನೀ ಪು-ಣ್ಯಲೋಕವೆ ಹರಿ
ವಿಷ್ಣು ವೈಕುಂಠದಲಿ ಶ್ರೀಹರಿ
ಕೃಷ್ಣ ಗೋಲೋಕದಲಿ ಕ್ಷೀರಾಬ್ಧಿಯಲಿ ನಾರಯಣ |
ಕೃಷ್ಣ ಬೊಮ್ಮನು ಸತ್ಯಲೋಕದಿ
ಕೃಷ್ಣ ಶಿವ ಕೈಲಾಸಲೋಕದಿ
ಕೃಷ್ಣ ದೇವಿಯು ಮಣಿದ್ವೀಪದಿ ಪುಣ್ಯಲೋಕ ಹರಿ || ೩೩೧ ||
ವಾಸುದೇವನೆ ನೀನು ಪೂರ್ವೇ-
-ಶಾ ಸುಜನರಕ್ಷಕನೆ ಕೃಷ್ಣನೆ
ರಾಸು ಕಾವನೆ ಸೂಸಿ ಭಜಿಪರ ಕಾಯುವನೆ ಕೃಷ್ಣ |
ವಾಸುದೇವನೆ ಮೊದಲ ನಾಯಕ
ವಾಸುದೇವನೆ ಹಿಂದಿನಧಿಪತಿ
ವಾಸುದೇವನೆ ಪೂರ್ವದಿಕ್ಕಿನ ಪತಿಯೆ ದೇವೇಂದ್ರ || ೩೩೨ ||
ಪಂಡಿತನೆ ಸುಜ್ಞಾನಿ ಮುಕ್ತನೆ
ಪಂಡ ಮುಕುತಿಯ ಜ್ಞಾನವಿರುವನೆ
ಪಾಂಡುರಂಗನೆ ಪಂಡರಾಪುರನಾಯಕನೆ ಕೃಷ್ಣ |
ಪಾಂಡವಪ್ರಿಯ ನರನಾರಾಯಣ
ಪಂಡಿತಪ್ರಿಯ ಪಂಡಿತರ ಗುರು
ಪುಂಡರನು ತರಿದಿಕ್ಕಿ ಭೂಭಾರವನು ಕಳೆಯುವನು || ೩೩೩ ||
ಕೃಷ್ಣ ಪೈತೃಕ ಪಿತೃಸಂಬಂಧಿಯು
ಕೃಷ್ಣ ಪಿತೃಗಳನುದ್ಧರಿಪ ಗುರು
ಕೃಷ್ಣ ಪೂರ್ವಜರನುಗ್ರಹ ನಮಗೀವ ಕರುಣೆಯಲಿ |
ಕೃಷ್ಣ ದಾಯಪ್ರಸಾದ ಪೈತೃಕ
ಕೃಷ್ಣ ದಾಯದ ಭಾಗ ಪೈತೃಕ
ಕೃಷ್ಣ ಪೈತೃಕವೀವ ಪ್ರೇಮದಿ ಗಳಿಸಿ ಧನ್ಯತೆಯ || ೩೩೪ ||
ಪತಿಯೆ ಮೂರ್ಲೋಕಕ್ಕೆ ಕೃಷ್ಣನು
ಸತಿಯು ಸೃಷ್ಟಿಯು ವಾಸುದೇವನ
ಮಿತಿಯದಿಲ್ಲವು ದೇವದೇವಗೆ ಮಿತಿಯ ಮೀರಿಹನು |
ಖತಿಯ ಗೊಳದಿರು ಕೃಷ್ಣ ಕಾವನು
ಮತಿಯ ಕೊಡು ಪರಮಾತ್ಮತಿಳಿವಿಗೆ
ಗತಿಯವನೆ ಸಕಲರಿಗು ಮುಕುತಿಪ್ರದಾತ ಪರಬೊಮ್ಮ || ೩೩೫ ||
ಫಲರೂಪಃ ಫಾಲವಾಸೋಽನನ್ತಶೀರ್ಷಶ್ಚ ಪೂರುಷಃ।
ಅನನ್ತಾಕ್ಷೋಽಗ್ನಿರೂಪಶ್ಚಾನನ್ತಪಾದಸ್ತ್ರಿವಿಕ್ರಮಃ॥೪೮॥(೩೪೩)
ಫಲರೂಪನೆ ಕೃಷ್ಣದೇವನೆ
ಫಲನು ಯಜ್ಞಕೆ ಸಕಲ ಕರ್ಮಕೆ
ಫಲವ ನೀಡುವ ದೇವ ಫಲರೂಪಾತ್ಮಕನೆ ಹರಿಯೆ |
ಫಲಿತ ನೀ ಫಲಕಾರಣನು ನೀ
ಫಲಕಾರಕನು ಫಲದಾಯಕನು ಹರಿ
ಫಲವೆ ನೀ ಪರಮಾತ್ಮ ಗತಿಯಿನ್ನಾರು ಲೋಕದಲಿ || ೩೩೬ ||
ಫಾಲವಾಸನೆ ಹಣೆಯ ಚಕ್ರದಿ
ಭಾಲದೇಶದಲಾಜ್ಞೆಚಕ್ರದಿ
ಮಾಲೆ ಧರಿಸಿಹ ಕೃಷ್ಣ ನಿಂತಾಜ್ಞೆಯನು ಮಾಡುತಿಹ |
ಬಾಲಕೃಷ್ಣನೆ ಸಕಲರಧಿಪತಿ
ಫಾಲನೇತ್ರನ ಸಖನೆ ಕೃಷ್ಣನೆ
ಕಾಲಪುರುಷನೆ ಕಾಲಕಾಲನೆ ಕೃಷ್ಣ ಶ್ರೀಕೃಷ್ಣ || ೩೩೭ ||
ದೇವ ಕೃಷ್ಣನನಂತಶೀರ್ಷನೆ
ಭಾವಕೊಲಿವನೆ ವಿರಾಟ್ಪುರುಷನೆ
ಜೀವರೊಡೆಯನೆ ವಿಶ್ವರೂಪನೆ ಹೇ ಸಹಸ್ರಾಕ್ಷ |
ಕಾವ ಸಕಲರ ಶಿರಗಳಾತನ-
-ವಾವನಿಹ ಪರಮಾತ್ಮನಿಗೆ ಸಮ-
-ನೀವ ನಿಜಭಕುತರಿಗೆ ಮುಕುತಿಯ ಶ್ರೀ ಜನಾರ್ದನನು || ೩೩೮ ||
ಪೂರುಷನೆ ಪೂರ್ವದಲೆ ನೆಲೆಸಿಹ
ಸಾರುವತ್ರಿಕ ಪರಮಸತ್ಯನೆ
ಪೂರುಷನು ತಾ ದೇಹಪುರಿಯೊಳು ನಿತ್ಯ ವಾಸಿಸುವ |
ಮಾರುವೇಷದಿ ಸೃಷ್ಟಿರೂಪನೆ
ಪಾರುಗಾಣಿಸು ಕೃಷ್ಣದೇವನೆ
ಕಾರುಣಿಕ ಪರಮಾತ್ಮ ಸುಜನರ ರಕ್ಷಿಸನವರತ || ೩೩೯ ||
ಅನಂತಾಕ್ಷನಸಂಖ್ಯನೇತ್ರನೆ-
-ಯನಂತಾಸನನಂತಕರಮನೆ-
-ಯನಂತನೆಯಂ-ತರಹಿತನೆ ಹರಿ ವಾಸುದೇವ ವಿಭೋ |
ಅನಂ-ತಶಯನನನಂತ-ಶಕ್ತಿ-
-ಯನಂತಜ್ಞಾನನಂತಪ್ರಭ-
-ನನಂತವಿರಕ್ತ್ಯನಂತಪ್ರೇಮನಂತಾನಂತ || ೩೪೦ ||
ಅಗ್ನಿರೂಪನೆ ಬೆಂಕಿಯಂತಿಹ-
-ನಗ್ನಿಯನಲನೆ ಜ್ಯೋತಿರೂಪನೆ-
-ಯಗ್ನಿಯವಮನು ವಿಷ್ಣುವುತ್ತಮ ದ್ವಾದಶಾದಿತ್ಯ |
ಅಗ್ನಿ ಯಜ್ಞದಿ ಮತ್ತೆ ಜಠರದಿ-
-ಯಗ್ನಿ ಜೀವರ ದೇಹತಾಪದಿ-
-ಯಗ್ನಿ ಪ್ರಾಣನು ಚಿತ್ತ ಕರಣಗಳಧಿಪ ಶ್ರೀಕೃಷ್ಣ || ೩೪೧ ||
ಕೃಷ್ಣ ನೀನನಂತಪಾದನೆ
ವಿಷ್ಣು ನೀನಸಂಖ್ಯಚರಣನೆ
ಜಿಷ್ಣು ಸಕಲರ ಪಾದ ನಿನ್ನದೆ ವಿಶ್ವದಾಧಾರ |
ಕೃಷ್ಣ ನಿನ್ನಯ ಪಾದ ಭೂಮಿ ಸ-
-ಹಿಷ್ಣು ಜೀವರ ಪಾಪ ಸಹಿಸುವೆ
ವಿಷ್ಣು ಶಿವ ವಿಧಿ ಶಕ್ತಿಯಾಗಿಹ ತತ್ತ್ವ ಪರಬೊಮ್ಮ || ೩೪೨ ||
ತ್ರಿವಿಕ್ರಮ ತ್ರಿಜಗವನು ಕ್ರಮಿಸಿದ
ಹವಿಷ್ಪತಿ ಮೂರ್ಹೆಜ್ಜೆಯಳೆದಿಹ
ಭವಿಷ್ಯದ ಭೂತದ ಪ್ರಸಕ್ತದ ನಾಯಕನೆ ಕೃಷ್ಣ |
ತ್ರಿವಿಕ್ರಮನುರುಕ್ರಮನೆ ವಾಮನ
ಸವಿಸ್ತರ ಬ್ರಹ್ಮಾಂಡ ಧರಿಸಿಹ
ಕವಿ ಬ್ರಹ್ಮ ಮಹಾಪರಾಕ್ರಮಿ ವಿಶ್ವವ್ಯಾಪಕನೆ || ೩೪೩ ||
ಮಹೇನ್ದ್ರೋ ಮಘವಾ ರುದ್ರೋ ಮಹಾವೀರೋ ಮಹೋರಗಃ।
ಮನ್ದರೋದ್ಧಾರಕೋ ಮನ್ದಶ್ಚಾಽಽಮುಖಂ ಮನ್ದಮಾರುತಃ॥೪೯॥(೩೫೨)
ಮಹೇಂದ್ರನೆ ಸುರಪತಿಯೆ ಕೃಷ್ಣನೆ
ಮಹೇಂದ್ರನೆ ಬೃಹದಿಂದ್ರದೇವನೆ
ಗುಹೇಂದ್ರನೆ ಪರಮೇಶನಿಂದ್ರಿಯಪತಿಯೆ ದೇವೇಂದ್ರ |
ಮಹೇಂದ್ರನೆ ಶತಮಖನುಪೇಂದ್ರನೆ
ಮಹೇಂದ್ರನೆ ಕರಣಕ್ಕು ಕರಣನೆ
ಗುಹೇಂದ್ರನೆ ಹೃದಯದೊಳು ನೆಲೆಸಿಹ ಸರ್ವವ್ಯಾಪಕನೆ || ೩೪೪ ||
ಮಘವಾ ಮೇಘಕಾರಕನೆ ಹರಿ-
-ಯಘವ ಕಳೆವ ಸುರೇಶ ಕೃಷ್ಣನೆ
ಮಘವಾನಿಂದ್ರ ವರ್ಷಕಾರಕ ದೇವ ನಾರಯಣ |
ಮಘವಾ ಮಹಿಮ ಪೂಜ್ಯ ದೇವನೆ-
-ಯಘವಿರಹಿತನೆಯಘವಿನಾಶಕ
ಮಘವಾನಮಿತತೇಜ ಪರಬೊಮ್ಮನೆ ಸದಾ ಶಿವನೆ || ೩೪೫ ||
ರುದ್ರ ಪರಶಿವಮೂರ್ತಿ ಕೃಷ್ಣನೆ
ಭದ್ರ ಮಂಗಲಕಾರಕನೆ ಹರಿ
ಕ್ಷುದ್ರರುಪಟಳ ಲಯಿಸಿ ಭಕ್ತರ ಶ್ರದ್ಧೆಯಲಿ ಕಾವ |
ವಿದ್ರವಿಪನಾರ್ತರನು ಕಾಣುತ
ರುದ್ರ ದೈವೀವೈದ್ಯ ಭವದಲಿ
ರುದ್ರನೋಂಕಾರಾದಿಶ್ರುತಿಮೂಲಾತ್ಮ ಶ್ರೀಕೃಷ್ಣ || ೩೪೬ ||
ಮಹಾವೀರನೆ ಶೂರ ಧೀರನೆ
ಗುಹಾಂತರ ಪರಮಾತ್ಮ ವಿಶ್ವಗ
ಮಹಾತ್ಮನೆ ಬಹುಬಲನೆ ಸರ್ವೇಶ್ವರ ನಿಯಾಮಕನೆ |
ಮಹಾವೀರನೆ ಜೈನಸಾಧುವೆ
ಮಹಾವೀರನೆ ಕೃಷ್ಣ ಬೊಮ್ಮನೆ
ಮಹಾವೀರ ಪರಾಕ್ರಮಿಯೆ ಜಗದೀಶ ನಾರಯಣ || ೩೪೭ ||
ಮಹೋರಗ ಜಗ ಧರಿಸಿರುವ ಹರಿ
ಮಹೋರಗನಾ-ದಿಶೇಷನು ತಾ
ಮಹೋತ್ಪಾತಗಳಿಂದ ಲೋಕವ ರಕ್ಷಿಸುವ ಸ್ವಾಮಿ |
ಮಹೋನ್ನತ ಪದವಿಯಲಿ ನಿಂತಿಹ
ಮಹೋರಗ ಮಹಿಮಾಯುತನೆ ಹರಿ
ಮಹೋತ್ತಮನಘ ಸುಡುವ ವಿಷಧರ ಕೃಷ್ಣ ಪರಬೊಮ್ಮ || ೩೪೮ ||
ಮಂದರೋದ್ಧಾರಕನೆ ಕೃಷ್ಣನೆ
ಮಂದರಾಚಲವೆತ್ತಿ ಕೂರ್ಮನು
ಮಂದಗಮನನು ಮೂಲಕೂರ್ಮನು ವಿಷ್ಣು ನಾರಯಣ |
ಮಂದರವ ಮಥನವನು ಮಾಡಿಯೆ
ಮಂದದಲಿ ಸಾಗರವ ಕಡೆದರು
ಮಂದರವ ಕೂರ್ಮಾವತಾರಿಯು ತೇಲಿಸಿದನೆತ್ತಿ || ೩೪೯ ||
ಮಂದ ಶನಿ ಮಂ-ದಗತಿಯಿರುವನೆ
ಮಂದಿರದಿ ನೆಲೆಗೊಂಡ ಗ್ರಹ ತಾ
ಮುಂದೆ ಸುಖವೀಯುವನು ಪಾಪವ ಮುಗಿಸಿ ಸಕಲರಿಗೆ |
ಮಂದಗತಿಯಿಂ ಮಂದನೆನಿಸಿದ
ಮಂದಚರ ಶನಿರೂಪಿ ಕೃಷ್ಣನು
ಮಂದಬುದ್ಧಿಯ ಕಳೆದು ಸತ್ಪ್ರೇರಣೆಯ ನೀಡಯ್ಯ || ೩೫೦ ||
ಆಮುಖನೆ ಪ್ರ-ಸ್ತಾವನೆಯೆ ಹರಿ
ನೀ ಮುಖವು ಸಕಲರಿಗೆ ಲೋಕದಿ
ಹೇ ಮುಖ್ಯಪ್ರಾಣಪ್ರೀಯನೆ ಹೇ ಪರಾತ್ಪರನೆ |
ಶ್ರೀಮುಖನೆ ಕ್ರಿಯೆಗಳಿಗೆ ಕಾರಣ
ನೀ ಮುಖ್ಯ ಪೀಠಿಕೆಯು ಸಕಲಕೆ
ನೀ ಮುಂದೆ ನಾವ್ ಹಿಂದೆ ನಡೆವುದು ನಿನ್ನ ಸಂಕಲ್ಪ || ೩೫೧ ||
ಮಂದಮಾ-ರುತ ಕೃಷ್ಣ ಶ್ರೀಹರಿ
ಸುಂದರೇಕ್ಷಣ ಸುಂದರಾನನ
ಮಂದದಲಿ ಬೀಸುತ್ತ ಹಿತಗೊಡುವಂತ ವಾಯುವು ನೀ |
ಮುಂದೆ ನೀನಿಹೆ ಹಿಂದೆ ನೀನಿಹೆ
ಮಂದ ಗಂಧದ ವಾಹ ವಾಯು ಸು-
-ಗಂಧ ಬೀರುತ ಕಾಯೊ ಸುಜನರ ಸತ್ಪಥದಿ ನಡೆಸೋ || ೩೫೨ ||
ಮಾಙ್ಗಲ್ಯೋ ಮಙ್ಗಲಾಕಾರೋ ಮಿತ್ರಂ ಮಿತ್ರೋಽಮಿತಾಕ್ಷರಃ।
ಮೀರಾನಾಥೋ ಮಿತ್ರಪಾಲೋ ಮುಖ್ಯಪ್ರಾಣಶ್ಚ ಮೂರ್ತಿಮಾನ್॥ ೫೦॥(೩೬೧)
ಮಾಂಗಲ್ಯನೆ ಮಂಗಲನೆ ಹಿತ
ಮಂಗಲತಮ ಮಂಗಲಾಕರ
ಮಂಗಲಾತ್ಮಕ ಹರಿಯೆ ಕೃಷ್ಣನೆ ದೇವ ಪರಬೊಮ್ಮ |
ಮಂಗಲತನುವೆ ಮಂಗಲಕರನೆ
ಸಂಗವರ್ಜಿತನಖಿಲಲೋಕದಿ
ಕಂಗಳಿಗೆ ತೋರಯ್ಯ ನಾರಾಯಣನೆ ಶ್ರೀಕೃಷ್ಣ || ೩೫೩ ||
ಮಂಗಲಾಕಾರನೆ ಮಹಾತ್ಮನೆ
ಭಂಗಗೊಳಿಸೈ ಲಿಂಗದೇಹವ
ಸಂಗ ನೀಗುತ ಹಂಗ ತೊರೆಯಿಸೊ ಮಂಗಲಾತ್ಮಕನೆ |
ಅಂಗಜನ ಪಿತ ಕೃಷ್ಣದೇವನೆ
ಸಿಂಗರಿಸಿದಂತಿಹ ಮಹಾತ್ಮನೆ
ಮಂಗಲಾಕೃತಿ ಮಂಗಲಸ್ವರೂಪ ಪರಬೊಮ್ಮ || ೩೫೪ ||
ಮಿತ್ರ ಸಖ ಸಜ್ಜನರ ಪೊರೆವನೆ
ಸೂತ್ರ ಧರ್ಮಕೆ ಕೃಷ್ಣಮಾತ್ರನು
ಪಾತ್ರ ಪೂಜೆಗೆ ಪ್ರೇಮಭಕ್ತಿಗೆ ವಾಸುದೇವನೆಲ |
ಸತ್ರ ವೈರಾಗ್ಯದ ಸುಭಕ್ತಿಯ
ಮಿತ್ರ ಪಾರ್ಥನ ಧರ್ಮಪಕ್ಷದ
ಮಿತ್ರ ರುದ್ರನ ಪಿತನು ಬೊಮ್ಮನ ಹೇ ಪರಬ್ರಹ್ಮ || ೩೫೫ ||
ಮಿತ್ರ ಸೂರ್ಯನೆ ರವಿಯೆ ಭಾನುವೆ
ಮಿತ್ರ ಭಾಸ್ಕರ ಹೇ ಸವಿತೃವೆ
ಮಿತ್ರ ನಾರಾಯಣನೆ ಭರ್ಗನೆ ಕೃಷ್ಣ ಸಲಹಯ್ಯ |
ಚಿತ್ರತರದ ವಿಚಿತ್ರ ಸೃಷ್ಟಿಯ
ಸತ್ರದೊಲು ಸೃಜಿಸುತ್ತ ರಕ್ಷಿಸಿ
ಮಿತ್ರ ತಾ ಲಯಗೊಳಿಪ ಸರ್ವವ ಹೇ ಪರಬ್ರಹ್ಮ || ೩೫೬ ||
ಅಮಿತಾಕ್ಷರನೆ ಹರಿ ಕೃಷ್ಣ ವಿಷ್ಣುವೆ
ಸಮಿತನಲ್ಲವನಮಿತನಕ್ಷರ
ನಮಿತ ಮಿತಿರಹಿತಾತ್ಮನಕ್ಷರ ನಾಶವಿಲ್ಲದವ |
ಕುಮತಿಗಳಿಗೊಲಿಯದವ ಕೃಷ್ಣನು
ಸುಮತಿಗೊಲಿಯುವ ನಿತ್ಯ ಶುದ್ಧನು
ವಿಮನ ಮಾಡದೆ ಸುಮನದಿಂದಲಿ ಭಜಿಸು ದೇವನನು || ೩೫೭ ||
ಮೀರಾನಾಥನೆ ಗೋಪ ಕೃಷ್ಣನೆ
ಮೀರಾಬಾಯಿಗೊಲಿದ ದೇವನೆ
ಮೇರೆ ಮೀರಿದ ಪ್ರೇಮಭಕ್ತಿಗೆ ಕರಗಿದನು ಕೃಷ್ಣ |
ಮೇರಾ ಗಿರಿಧರನಾಥನೆಂದರೆ
ಮೂರುಲೋಕದ ಪತಿಯು ಬಂದನು
ಸಾರಿದನು ಪರಮಾತ್ಮಪ್ರೇಮವು ಸಕಲಕತಿಶಯವು || ೩೫೮ ||
ಮಿತ್ರಪಾಲನೆ ಸಖರ ಕಾವನೆ
ಮಿತ್ರಮಿತ್ರನೆ ವಾಸುದೇವನೆ
ಮಿತ್ರಭಾವದ ಭಕುತಿಗೊಲಿದನು ನರಗೆ ಶ್ರೀಕೃಷ್ಣ |
ಸತ್ರರಕ್ಷಕ ಸಖ್ಯಭಕ್ತರ
ಮಿತ್ರನುದ್ಧವಸಖನು ಕೃಷ್ಣನು
ಮಿತ್ರಭಾವದಿ ಕಾಣಿ ಪರಮಾತ್ಮನನು ತಮ್ಮೊಳಗೇ || ೩೫೯ ||
ಮುಖ್ಯಪ್ರಾಣನೆ ಪ್ರಾಣವಾಯುವೆ
ಮುಖ್ಯ ಸಕಲರ ಪ್ರಾಣ ಕಾವನೆ
ಮುಖ್ಯ ಪಂಚಪ್ರಾಣಗಳಲಿ ಪ್ರಾಣ ಶ್ರೀಕೃಷ್ಣ |
ಸಖ್ಯ ಸಕಲರ ದೇಹಗಳಿಗಿದೆ
ಪ್ರಖ್ಯಾತನಾಗಿಹನು ಪ್ರಾಣನು
ಮುಖ್ಯಪ್ರಾಣನು ಜೀವರುಸಿರಾಗಿಹನು ಶ್ರೀಕೃಷ್ಣ || ೩೬೦ ||
ಮೂರ್ತಿಮಾನ್ ಶ್ರೀಕೃಷ್ಣದೇವನೆ
ಮೂರ್ತಿವೆತ್ತಿಹ ಪರಬ್ರಹ್ಮವೆ
ಮೂರ್ತರೂಪದಿ ತೋರ್ವಮೂರ್ತಸ್ವರೂಪ ಪರತತ್ತ್ವ |
ಮೂರ್ತಿ ಕೃಷ್ಣನ ವಾಸುದೇವನ
ಸ್ಫೂರ್ತಿ ಲೋಕಕೆ ಜೀವಜಡರಿಗೆ
ಕೀರ್ತಿ ನಿನ್ನದೆ ಮೂರು ಲೋಕದಿ ಸಕಲರಾತ್ಮನು ನೀ || ೩೬೧ ||
ಆಶ್ಚರ್ಯೋ ಮೃಡಮೃದ್ರೂಪೋ ಲೋಕಮೇಖಲಸೂತ್ರಧೃತ್।
ಮೇದಿನೀಪತಿರಾರಾಧ್ಯೋ ಮೈತ್ರೀಕಲಹನಾಯಕಃ॥೫೧॥(೩೬೮)
ಆಶ್ಚರ್ಯ ಕೃಷ್ಣನೆ ಪರಬ್ರಹ್ಮನೆ
ನಿಶ್ಚಲಾತ್ಮರಿಗೊಲಿವ ದೇವನೆ
ದುಶ್ಚರಿತೆಗಳ ಕಳೆ ಸುಚರಿತವ ಬೆಳೆಸು ನಮ್ಮೊಳಗೆ |
ಪಶ್ಚಿಮದ ಸಂಸ್ಕೃತಿಯ ನೀ ಕಳೆ
ಪಶ್ಚಿಮಾಪರ ವಿಶ್ವಧರ್ಮವ
ನಿಶ್ಚಿತದಿ ಜಗಕೆಲ್ಲ ಪಸರಿಸಿ ಶಾಂತಿ ಬೆಳಗಿಸೆಲೊ || ೩೬೨ ||
(ಆಃ + ಚರ್ಯ— ಆಹಾ ಎನ್ನುವಂತಹ ಅದ್ಭುತವೂ ಅಚ್ಚರಿ ಹುಟ್ಟಿಸುವುದೂ ಆದ ಚರಿತೆ / ಚರ್ಯೆ ಯಾವನದೋ ಅಂತಹ ಭಗವಂತನೇ ಆಶ್ಚರ್ಯರೂಪನು. "ಆಶ್ಚರ್ಯೋ ವಕ್ತಾ…"—ಗೀತೆ.)
ಮೃಡನೆ ಮೃಡಯತಿ ಸುಖವನೀವನೆ
ಮೃಡನೆ ರುದ್ರನೆ ಸುಖಸ್ವರೂಪನೆ
ಬಿಡದೆ ಕಾಯೈ ಶಿವನ ರೂಪವನಾಂತ ಶ್ರೀಕೃಷ್ಣ |
ಒಡಲೊಳಗೆ ಮೂರ್ಲೋಕ ಧರಿಸಿದ
ಕಡಲಶಯನನೆ ಪರಬ್ರಹ್ಮನೆ
ಕಡೆಗಣಿಸದೆಯೆ ನಿನ್ನ ಭಕ್ತರನುದ್ಧರಿಸು ದೇವ || ೩೬೩ ||
ಮೃದ್ರೂಪ ಹರಿ ಪೃಥ್ವಿರೂಪನೆ
ಸದ್ರೂಪ ನೀ ಜಗಕೆಲ್ಲ ಭೂಪತಿ
ಚಿದ್ರೂಪನೇ ಕೃಷ್ಣ ಸುಖತನು ಸಚ್ಚಿದಾನಂದ |
ಮದ್ರೂಪ ನೀ ಜಗದಾದಿಬೊಮ್ಮನು
ವಿದ್ರೋಹಿಗಳ ಶಿಕ್ಷಿಸುವ ಹರಿ
ನಿದ್ರೆ ಕಳೆ ಸುಜ್ಞಾನದೆಚ್ಚರ ಮಾಡಿಸೈ ಜಗಕೆ || ೩೬೪ ||
ಲೋಕಮೇಖಲಸೂತ್ರಧೃತ ಹರಿ
ಲೋಕ ರಕ್ಷಿಪ ಕಟಿಯ ಸೂತ್ರವ
ಲೋಕಕಟಿಸೂತ್ರವನೆ ಧರಿಸಿದ ವಿಶ್ವರೂಪ ಹರಿ |
ನಾಕ ನರಕ ಭುವಾದಿ ರೂಪನೆ
ಪಾಕಶಾಸನವಂದ್ಯ ಕೃಷ್ಣನೆ
ಕಾಕುಜನಮರ್ದನನೆ ಸುಜನರ ಕಾಯೊ ಗೋವಿಂದ || ೩೬೫ ||
ಮೇದಿನೀಪತಿ ಕೃಷ್ಣ ಶ್ರೀಪತಿ
ಮೇದಿನಿಯ ನಿರ್ಮಿಸಿದ ಮಧುಹರ
ಮೋದದಿಂದಲಿ ಕೈಟಭಾಂತಕ ಕಠಿಣ ಪರ್ವತವ |
ನಾದಮೂರುತಿ ಬೋಧಕೀರುತಿ
ವೇದಸೇವಿತ ಪಾದಪದ್ಮನೆ
ಮಾಧವನೆ ಪರಮೇಶ್ವರನೆ ಭವ ಕಳೆದು ಮುಕುತಿ ಕೊಡು || ೩೬೬ ||
ಆರಾಧ್ಯ ದೇವನೆ ಸರ್ವರಿಗು ತಾ-
-ನಾರಾಧನೆಗೆ ಯೋಗ್ಯಾತ್ಮ ಕೃಷ್ಣನೆ
ಸಾರತಮ ವೈಕುಂಠ ಸರ್ವಾತ್ಮನೆ ಪರಬ್ರಹ್ಮ |
ಕಾರಣನೆ ಜಗಕೆಲ್ಲ ಸಂತತ
ಪಾರುಗಾಣಿಸು ಭವಸಮುದ್ರದ
ಕಾರುಣಿಕ ಪರಮಾತ್ಮ ನಿನ್ನಾರಾಧನೆಯ ಮಾಳ್ಪೆ || ೩೬೭ ||
ಮೈತ್ರೀಕಲಹನಾಯಕನೆ ಹರಿ
ಮೈತ್ರಿಕಾರಕ ಕಲಹಕಾರಕ
ಮೈತ್ರಿ ಭಗವದ್ಭಕ್ತರೊಳು ನೀ ಕರುಣಿಸೈ ಕೃಷ್ಣ |
ಮಿತ್ರ ನೀನೊಲಿದಿರುವೆ ಪಾರ್ಥಗೆ
ಮಿತ್ರ ನೀನು ಸುಧಾಮವರ್ಯಗೆ
ಮೈತ್ರಿ ಕರುಣಿಸು ಸರ್ವರೊಳು ಕಲಹವನು ಪರಿಹರಿಸು || ೩೬೮ ||
ಮೋಹನಾಙ್ಗೋ ಮೋಕ್ಷರೂಪೋ ಮೋಹನಾಶನವಿಗ್ರಹಃ।
ಅಕಾರಾದಿಕ್ಷಕಾರಾನ್ತಸರ್ವವರ್ಣಪರಿಷ್ಟುತಃ॥೫೨॥(೩೭೨)
ಮೋಹನಾಂಗನೆ ಸರ್ವಮೋಹನ
ಮೋಹಗೊಳಿಸುತ ಸಕಲ ಲೋಕವ
ಮೋಹನನೆ ನೀ ದುಷ್ಟಶಿಷ್ಟರ ಸೆಳೆದು ನಿನ್ನೆಡೆಗೆ |
ಮೋಹದಲಿ ದುಷ್ಟರನು ಕೆಡಹುವೆ
ಮೋಹದಲಿ ಶಿಷ್ಟರಿಗೆ ಕರುಣಿಪೆ
ಮೋಹ ನಿನ್ನೊಳು ಶಿಷ್ಟರುದ್ಧಾರಕ್ಕೆ ರಹದಾರಿ || ೩೬೯ ||
ಮೋಕ್ಷರೂಪನೆ ವಾಸುದೇವನೆ
ಮೋಕ್ಷದಾಯಕ ಮೋಕ್ಷಧಾಮನೆ
ಮೋಕ್ಷವಿಜ್ಞಾನವನು ನೀಡುವ ಕೃಷ್ಣ ಪರಮಾತ್ಮ |
ಮೋಕ್ಷಪದ ಭವಮುಕ್ತಿಕಾರಣ
ಮೋಕ್ಷಕಾರಣ ಮೋಕ್ಷನಾಯಕ
ಮೋಕ್ಷ ಸರ್ವಾಂತರನು ಜೀವರ ಮೂಲನಿಜರೂಪ || ೩೭೦ ||
ಮೋಹನಾಶನವಿಗ್ರಹನೆ ಹರಿ
ಮೋಹ ಕಳೆವ ಮುಮುಕ್ಷುಗಳ ನಿಜ
ಮೋಹ ಬೆಳೆಸುವನಾತ್ಮವಿಜ್ಞಾನದೊಳು ಮೋಕ್ಷದೊಳು |
ಮೋಹ ಲೌಕಿಕ ಮೋಹ ವಿತ್ತದ
ಮೋಹ ಪತ್ನೀಸುತರ ಭೂಮಿಯ
ಮೋಹ ಕಳೆಯುವ ಮೂರ್ತಿ ಕೃಷ್ಣನು ಭಕ್ತರುದ್ಧರ್ತಾ || ೩೭೧ ||
ಅಕಾರಾದಿ-ಕ್ಷಕಾರಾಂತ-
ಸರ್ವವರ್ಣಪರಿಷ್ಟುತನೆ ಹರಿ
ಸಕಾರಣನಖಿಲಕ್ಕು ಸರ್ವಾಕ್ಷರಗಳಿಂ ಸ್ತುತನೆ |
ವಿಕಾರವ ಕಳೆ ಸುಕಾರವ ಬೆಳೆ
ಪ್ರಕಾರಾಕಾರಗಳ ನೀಗಿ ನಿ-
-ರಾಕಾರ ಪ-ರಾತ್ಮನೊಲು ಸರ್ವಾತ್ಮತ್ವ ತಿಳುಹಯ್ಯ || ೩೭೨ ||
ಮೌಢ್ಯನಾಶಕೃದೇಕಾತ್ಮಾ ವಿಶ್ವಾತ್ಮಾ ವಿಶ್ವರೂಪಧೃತ್।
ಸರ್ವಾತ್ಮಾ ಸರ್ವಭೂತಾತ್ಮಾ ಪರಮಾತ್ಮಾಽಽತ್ಮನಿಗ್ರಹೀ॥೫೩॥(೩೮೦)
ಕೃಷ್ಣ ನೀನೇ ಮೌಢ್ಯನಾಶಕೃತ್
ಕೃಷ್ಣ ಮೂಢತೆ ಕಳೆಯುವವ ನೀ
ಕೃಷ್ಣಭಕ್ತರಜ್ಞಾನಮೌಢ್ಯವ ಕಳೆದು ಸುಜ್ಞಾನ |
ಕೃಷ್ಣ ನೀಡಯ್ಯಾತ್ಮಜ್ಞಾನವ
ಕೃಷ್ಣವಿದ್ಯೆಯ ಕಳೆಯೊ ಭಕ್ತರ
ಕೃಷ್ಣ ನಿನ್ನಾಶ್ರಯಿಸಿದವರನು ಕಾಯೊ ಕರುಣಾಳು || ೩೭೩ ||
ಕೃಷ್ಣ ನೀನ್ ಏಕಾತ್ಮ ಸರ್ವರ
ವಿಷ್ಣು ನೀ ವಿಶ್ವಾತ್ಮ ಲೋಕದ
ಜಿಷ್ಣು ನೀ ಸಾಗರದ ನೀರಿನ ತೆರದಿ ಸರ್ವಗತ |
ಕೃಷ್ಣ ನೀ ಬ್ರಹ್ಮಾತ್ಮ ಮೂಲದಿ
ವಿಷ್ಣು ನೀನೀ ಸೃಷ್ಟಿರೂಪದಿ
ಜಿಷ್ಣು ತೋರುವೆ ಮಾಯೆಯನು ವೈವಿಧ್ಯ ಮಿಥ್ಯೆಯನು || ೩೭೪ ||
ದೇವ ನೀ ವಿಶ್ವಾತ್ಮ ವಿಶ್ವವ
ಕಾವ ಮೂಲಾಧಾರ ಬೊಮ್ಮನು
ಸಾವ ಮೀರಿದ ಕೃಷ್ಣ ವಿಷ್ಣುವೆ ಹೇ ಸದಾ ಶಿವನೆ |
ನೋವ ಮರೆಸುವ ನಲಿವ ತೋರುವ
ಭಾವಕೊಲಿಯುವ ನಮ್ಮೊಳಾತ್ಮನು
ಶ್ರೀವನಿತೆಯರಸನು ಮಹಾತ್ಮನು ಸರ್ವರೊಳಹೊರಗು || ೩೭೫ ||
ವಿಶ್ವರೂಪಧೃತ್ ಕೃಷ್ಣದೇವನೆ
ವಿಶ್ವರೂಪವ ಧರಿಸಿ ನಿಂತಿಹೆ
ವಿಶ್ವದಾಕಾರದಲಿ ತೋರುವ ವಿಶ್ವಮೂರುತಿಯೆ |
ವಿಶ್ವ ನಶ್ವರ ಮಿಥ್ಯೆ ಲೌಕಿಕ
ಶಾಶ್ವತವು ಪರಬೊಮ್ಮ ನೀನೇ
ನಶ್ವರದಿ ಪರಮಾರ್ಥಬುದ್ಧಿಯ ಬಿಟ್ಟು ಮೇಲೇಳಿ || ೩೭೬ ||
ಸರ್ವಾತ್ಮ ನೀನೇ ವಾಸುದೇವನೆ
ಶರ್ವಾತ್ಮ ಬೊಮ್ಮನು ವಿಷ್ಣು ಶಕ್ತಿಯು
ಪರ್ವ ಹೃದಯದ ಕಳೆದು ಸಂಶಯ ಮುಕ್ತಿಬೋಧ ಕೊಡು |
ಉರ್ವಿಯೊಳು ಪೆಸರಾಂತ ಶ್ರೀಹರಿ
ಸರ್ವರಂತರ್ಯಾಮಿ ಸರ್ವನೆ
ಜೀವದೇವಜಗದ್ಭೇದಾತೀತ ನಾವಹುದು || ೩೭೭ ||
ಹರಿಯೆ ಸರ್ವಭೂತಾತ್ಮ ನಿತ್ಯನೆ
ಸರಿಯೆ ಭಕ್ತರ ಕಾಯದಿರ್ಪುದು
ಕರಿಯೆ ಕರೆಯಲು ಮಕರವಂ ತರಿದ್ಯಲ್ಲೊ ಪರಮಾತ್ಮ |
ಪರಿಯೆ ಸರ್ವ ಚರಾಚರಂಗಳ
ಹರಿಯೆ ಪಂಚಮಹಾದಿಭೂತದ
ಹಿರಿಯ ಮೂಲನೆಯಂತರಾತ್ಮನೆ ಸಚ್ಚಿದಾನಂದ || ೩೭೮ ||
ಪರಮಾತ್ಮಾ ಶ್ರೇಷ್ಠನಾತ್ಮನು
ಪರಮ ಶಕ್ತಿಯು ಸಕಲ ಜೀವರ
ಪರಮನಾತ್ಮನು ಪಾರ್ವತೀಪ ರಮೇಶ್ವರನು ತಾನು |
ವರದೆ ವಾಣಿಯ ಪತಿಯು ಬೊಮ್ಮನು
ಸರುವ ದೇವತೆಗಳೊಳಗಾತ್ಮನು
ಕರುಣಿಸೈ ಬ್ರಹ್ಮಾತ್ಮಜ್ಞಾನಾನುಭವನಿಷ್ಠೆಯನು || ೩೭೯ ||
ವಾಸುದೇವನೆಯಾತ್ಮನಿಗ್ರಹಿ
ವಾಸುದೇವನೆ ಲೋಕನಿಗ್ರಹಿ
ವಾಸುದೇವನೆ ಸರ್ವರಂತರ್ಯಾಮಿ ಜಗದೀಶ |
ಈಸು ದಿನ ಭಜಿಸಿಹೆನು ನಿನ್ನನು
ಸಾಸಿರಸ್ವರೂಪ ಶ್ರೀಹರಿ
ಶೇಷಶಯನನೆ ಚಿತ್ತಕರಣಂಗಳನು ನಿಗ್ರಹಿಸು || ೩೮೦ ||
ಕೇಶವೋಽಧೋಕ್ಷಜಃ ಪೃಥ್ವೀಪತಿಃ ಕಾರುಣ್ಯಮೂರ್ತಿಮಾನ್।
ಭೂತೋಽವ್ಯಕ್ತೋಽಮೃತೇಶಶ್ಚ ಭವದ್ಭವ್ಯಭಯಾಪಹಃ॥೫೪॥(೩೮೮)
ಕೇಶವನೆ ಕೇಶಿಯನು ಕೊಂದನೆ
ಕೇಶ ಸುಂದರ ಶಿರದೊಳಿರ್ಪನೆ
ಕೇಶ ಕ ಬ್ರಹ್ಮನನು ತಾನೀಶ್ವರನ ವಶಗೊಳಿಸಿ |
ಕೇಶವನು ಕೇ ಜಲದಿ ಶಯನಿಸಿ
ಕೇಶವನು ದೇಹಕ್ಕು ಕರಣಗ-
-ಳೀಶನಾಗಿಹ ಕೃಷ್ಣ ಜೀವಾತ್ಮನು ಹೃಷೀಕೇಶ || ೩೮೧ ||
ಅಧೋಕ್ಷಜ ಹರಿಯಧೋದ್ವಾರಜ
ವಿಧಿಯನೊಳ ಪರಿಕಿಸುತ ವಿಷ್ಣುವು
ಹಾದಿಗಾಣದೆ ಕೊನೆಗೆ ಪಾಯುದ್ವಾರದಲಿ ಬಂದ |
ಪದುಮನಾಭನು ಪದುಮಜನ ಪಿತ
ಪದುಮೆ ರಮಣನು ಪದುಮನೇತ್ರನು
ವಿಧಿಯಧೋಕ್ಷಜ ವಿಷ್ಣು ಕೃಷ್ಣನೆ ಸಚ್ಚಿದಾನಂದ || ೩೮೨ ||
ಹರಿಯೆ ಪೃಥ್ವೀಪತಿಯೆ ಕೃಷ್ಣನೆ
ಸಿರಿಯ ವಲ್ಲಭ ಧರಣಿರಮಣನೆ
ಕರಿಯ ಕಾಯ್ದನೆ ಬರಿಯ ಮೊರೆಗಾರ್ತಾಪ್ತ ರಕ್ಷಕನೆ |
ಧರಣಿಯಾಪತ್ತನ್ನು ಕಳೆವನೆ
ದುರುಳ ಹಿರಣ್ಯಾಕ್ಷನ್ನ ಕೊಂದನೆ
ವರದ ವಾರಾಹಾಕೃತಿಯೆ ಭೂಕಕ್ಷೆ ಕಾಯ್ದವನೆ || ೩೮೩ ||
ಕರುಣೆಯಾ ವಿಗ್ರಹನೆ ಕೃಷ್ಣನೆ
ಕರವ ಪಿಡಿಯುತ ಮುಕುತಿಗೊಯ್ವನೆ
ಗುರುವೆ ಕಾರುಣ್ಯಮೂರ್ತಿಮಾನ್ ಹರಿಯೆ ಪರಮಾತ್ಮ |
ಮರುಳೆ ಮನುಜನ್ಮವನು ಕೆಡಿಸದೆ
ದುರುಳ ಚಿತ್ತಾದಿಗಳ ಗುಡಿಸುತ
ತರುಣ, ಕೃಷ್ಣನ ಸರ್ವರೊಳಗಿಹ, ಚಿಂತಿಸನವರತ || ೩೮೪ ||
ಭೂತ ನೀನೆ ಚರಾಚರನೆ ಹರಿ
ಭೂತಿ ನಿನ್ನದೆ ಸೃಷ್ಟಿಗೋಚರ
ಮಾತಿಗೊಲಿಯದ ಮಹಿಮ ಕೃಷ್ಣನೆ ಹೇ ಪರಾತ್ಪರನೆ |
ಖ್ಯಾತ ಸಕಲಸ್ಥಿತನೆ ಬೊಮ್ಮನೆ
ಹೇತು ಸರ್ವಕು ನಾಥ ನಿತ್ಯನೆ
ಭೂತನಾಥನೆ ಭೂತರೂಪನೆ ಸಕಲಭೂತಸ್ಥ || ೩೮೫ ||
ಕೃಷ್ಣ ನೀನ್-ಅವ್ಯಕ್ತ ತೋರದೆ
ಕೃಷ್ಣ ನಿಲುಕನು ಕರಣಗಳಿಗಹೊ
ಕೃಷ್ಣನವ್ಯಕ್ತನು ಪರಬ್ರ-ಹ್ಮನು ಪರಾತ್ಪರನು |
ಕೃಷ್ಣ ತೋರಿದ ಕೃಷ್ಣರೂಪದಿ
ಕೃಷ್ಣ ತೋರಿದ ಸೃಷ್ಟಿರೂಪದಿ
ಕೃಷ್ಣ ಸರ್ವಾತ್ಮನು ಮಹಾತ್ಮನು ಸಚ್ಚಿದಾನಂದ || ೩೮೬ ||
ಅಮೃತೇಶ ಹರಿಯಮೃತಾಧಿಪತಿ ನೀ-
-ನಮೃತ ಮೃತವಾಗದಿಹ ತತ್ತ್ವವು
ಸ್ವಮೃತವಜರಮರನಣುವಣು ಮಹದಾತ್ಮ ನಿರ್ಗುಣವು |
ಅಮೃತ ಮೋಕ್ಷವು ಮೋಕ್ಷದಧಿಪತಿ-
-ಯಮೃತ ತತ್ತ್ವಸ್ವರೂಪ ಕೃಷ್ಣನು
ಸ್ವಮೃತ ಸ್ವಾಂತರ ಸಕಲರಂತರ ಸಚ್ಚಿದಾನಂದ || ೩೮೭ ||
ಭವದ್-ಭವ್ಯ-ಭಯಾಪಹ ಹರಿ
ಭವತಿ ನಡೆಯುತ್ತಿರುವ ಭಯ ಹರ
ಭವಿತ ಭವ್ಯ ಭವಿಷ್ಯ ಭಯ ಹರ
(ಭವದ ಭಯಗಳನಪಹರಿಸುವನೆ) ಕೃಷ್ಣ ಪರಬೊಮ್ಮ |
ಭಾವಜನ ಪಿತ ಭವದ ತಾರಕ
ಭಾವಜಾರಿಯ ಸಖನೆ ಭಾವನ
ಭಾವಕೊಲಿಯುವ ಹರಿಯೆ ಕೇಶವನಾದಿನಾರಯಣ || ೩೮೮ ||
ಅಮೃತಾಂಶೂದ್ಭವೋ ದಿವ್ಯೋ ವಿಶ್ವೈಕಪಾದರೂಪಧೃತ್।
ದಿವಾಮೃತತ್ರಿಪಾದಶ್ಚ ತ್ರಿಪಾದೂರ್ಧ್ವೈಕಪಾದಸೃತ್॥೫೫॥(೩೯೪)
ಕೃಷ್ಣನಮೃತಾಂಶೂದ್ಭವನೆ ಹರಿ
ಕೃಷ್ಣನಮೃತದ ಕಿರಣಸಂಭವ
ಕೃಷ್ಣ ಬೆಳದಿಂಗಳಲಿ ಪುಟ್ಟಿದನಮೃತಸೂರ್ಯನಲಿ |
ಕೃಷ್ಣ ಚೆಲ್ಲಿದನಮೃತ ಕಿರಣವ
ಕೃಷ್ಣ ಪೂರೈಸಿದನು ಬಯಕೆಯ
ಕೃಷ್ಣ ಭಕ್ತರ ಕಷ್ಟ ಪರಿಹರಿಸಿದನು ಪ್ರೇಮದಲಿ || ೩೮೯ ||
ದಿವ್ಯ ರೂಪನೆ ಭವ್ಯ ತೇಜನೆ
ನವ್ಯ ಸವ್ಯಪಸವ್ಯ ಸರ್ವನೆ
ಹವ್ಯ ಕವ್ಯವ ಗೊಂಬ ನಾರಾಯಣನೆ ಶ್ರೀಕೃಷ್ಣ |
ದಿವ್ಯತೆಯ ಸಾಕಾರಮೂರ್ತಿಯು
ದಿವ್ಯ ದೀಪ್ತಿಯು ಪರಂಜ್ಯೋತಿಯು
ದಿವ್ಯ ಕ್ರೀಡಾಜಿಗೀಷುವು ಕಾಂತ್ಯಾದಿ ವ್ಯವಹಾರಿ || ೩೯೦ ||
ವಿಶ್ವೈಕಪಾ-ದರೂಪಧೃತ್ ಹರಿ
ವಿಶ್ವವೆಲ್ಲವದೊಂದು ಪಾದವು
ವಿಶ್ವ ಪರಮಾತ್ಮನಲಿ ನಾಲ್ಕರಲೊಂದು ಭಾಗವದು |
ವಿಶ್ವ ಕೃಷ್ಣನ ಪಾದ ಸಕಲವು
ಶಾಶ್ವತವು ಮೂಲದಲಿ ಪಾದವು
ನಶ್ವರವು ತೋರಿಕೆಯ ಸೃಷ್ಟಿಯು ಕೃಷ್ಣ ಪರಬೊಮ್ಮ || ೩೯೧ ||
ದಿವಾಮೃತತ್ರಿಪಾದನೆ ಹರಿ
ದಿವಿಯಲಿರುವುದು ಮೂರು ಪಾದವು
ದಿವಿಯು ದೇವರ ಲೋಕ ಮುಕ್ಕಾಲಿಹುದು ಪರಬೊಮ್ಮ |
ದಿವಿಯು ಮೃತಿರಹಿತವದು ಧಾಮವು
ಭುವಿಯು ಮರ್ತ್ಯವು ಮಿಥ್ಯ ತೋರಿಕೆ
ದಿವಿಭುವಿಗಳಾಚೆಗಿನ ಸತ್ಯವೆ ಸಚ್ಚಿದಾನಂದ || ೩೯೨ ||
ತ್ರಿಪಾತ್ ಕೃಷ್ಣನೆ ವಾಸುದೇವನೆ
ತ್ರಿಪಾದಗಳವನೈಸಿರಿಯು ನಿಜ-
-ವುಪಾಧಿಗಳಿಲ್ಲದಿಹ ಪರತತ್ತ್ವವದು ಪರಬೊಮ್ಮ |
ತ್ರಿಪಾದನು ಹರಿ ವೇದ ಮೂರರ
ತ್ರಿಪಾದನು ಗಾಯತ್ರಿಯಲಿ ತಾ
ತ್ರಿಪಾದನು ಪ್ರಣವದಲಿ ನಾಡಿಗಳಲ್ಲಿ ತ್ರಿಗುಣದಲಿ || ೩೯೩ ||
ಕೃಷ್ಣ ತಾನ್-ಊರ್ಧ್ವೈಕಪಾದಸೃತ್
ಕೃಷ್ಣ ವಿಷ್ಣುವಿನೊಂದು ಪಾದದಿ
ಕೃಷ್ಣ ಸಂಚರಿಸಿದನು ಲೋಕದಿ ದುಷ್ಟಶಿಕ್ಷಣಕೆ |
ಕೃಷ್ಣ ಚರಿಪನು ಸುಷುಮ್ನೆಯ ತೆರ
ಕೃಷ್ಣಗತಿ ತಾನೂರ್ಧ್ವದಿಶೆಯೊಳು
ಕೃಷ್ಣನನು ನಂಬಿದರೆ ಪರಗತಿ, ಪತನವಿರದವಗೆ || ೩೯೪ ||
Comments
Post a Comment