ಸ್ತೋತ್ರಸಂಹಿತಾ ೫.೩ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)
೨೨. ಶ್ರೀಷಣ್ಮುಖಷಟ್ಕಮ್
(ಅನುಷ್ಟುಪ್)
ಪರಂಬ್ರಹ್ಮ ಪರಂಧಾಮ ಪರಾತ್ಪರಂ ಪರೇಶ್ವರಮ್ |
ಪರಂಜ್ಯೋತಿಸ್ವರೂಪಂ ತಂ ಪರಾಶಕ್ತಿಸುತಂ ಭಜೇ || ೧ ||
ಪರಂಬ್ರಹ್ಮ— ದೇವದೇವನೂ, ಮೂಲಚೈತನ್ಯಸ್ವರೂಪನೂ, ಸಕಲದೇವತೆಗಳ ಮೂಲಶಕ್ತಿಯೂ, ಬೃಹತ್ತೂ ಮಹತ್ತೂ ಆಗಿರುವ ಪರಬ್ರಹ್ಮಸ್ವರೂಪನೂ,
ಪರಂಧಾಮ— ಪರಮಧಾಮನಿವಾಸಿಯೂ, ಮೋಕ್ಷನಿಲಯನೂ ಆದ,
ಪರಾತ್ಪರಂ— ಪರಾತ್ಪರ ಎಂದರೆ ಶ್ರೇಷ್ಠಾತಿಶ್ರೇಷ್ಠನೂ,
ಪರೇಶ್ವರಮ್— ಸಕಲಶ್ರೇಷ್ಠತೆಗಳ ಒಡೆಯನೂ,
ಪರಂಜ್ಯೋತಿಸ್ವರೂಪಂ— ಶ್ರೇಷ್ಠವೂ ಮೂಲವೂ ಆದ ಬೆಳಕಿನ ರೂಪನಾದ,
ತಂ ಪರಾಶಕ್ತಿಸುತಂ— ಆ ಪರಾಶಕ್ತಿಯೆನಿಸಿದ ಪರಶಿವನ ಅರ್ಧಾಂಗಿನಿಯಾದ ಪಾರ್ವತಿಯ ಮಗನಾದ ಸುಬ್ರಹ್ಮಣ್ಯನನ್ನು,
ಭಜೇ— ಭಜಿಸುತ್ತೇನೆ.
ಇಚ್ಛಾಜ್ಞಾನಕ್ರಿಯಾಪೂರ್ಣಶಕ್ತಿತ್ರಯಸ್ವರೂಪಿಣಮ್ |
ಪಂಚೇಂದ್ರಿಯಮನೋऽಧೀಶಂ ಷಣ್ಮುಖಂ ಪ್ರಣಮಾಮ್ಯಹಮ್ || ೨ ||
ಇಚ್ಛಾ-ಜ್ಞಾನ-ಕ್ರಿಯಾ-ಪೂರ್ಣ-ಶಕ್ತಿ-ತ್ರಯ-ಸ್ವರೂಪಿಣಮ್— ಇಚ್ಛಾಶಕ್ತಿ (ಸಂಕಲ್ಪಶಕ್ತಿ), ಜ್ಞಾನಶಕ್ತಿ ( ವಿಚಾರಶಕ್ತಿ / ಬ್ರಹ್ಮಜ್ಞಾನಶಕ್ತಿ), ಹಾಗೂ ಕ್ರಿಯಾಶಕ್ತಿ (ಕರ್ತೃತ್ವಶಕ್ತಿ)— ಈ ಮೂರರಲ್ಲೂ ಪರಿಪೂರ್ಣತೆ ಹೊಂದಿರುವ ಶಕ್ತಿತ್ರಯಸ್ವರೂಪಿಯಾದ,
ಪಂಚೇಂದ್ರಿಯಮನೋऽಧೀಶಮ್— ಕಣ್ಣು-ಕಿವಿ-ಮೂಗು-ನಾಲಿಗೆ-ಚರ್ಮಗಳೆಂಬ ೫ ಜ್ಞಾನೇಂದ್ರಿಯಗಳು (ಹಾಗೂ ಮಾತು-ಕೈ-ಕಾಲು-ಗುದ-ಗುಹ್ಯಗಳೆಂಬ ಪಂಚ ಕರ್ಮೇಂದ್ರಿಯಗಳು) ಹಾಗೂ ಮನಸ್ಸು (ಮನ-ಬುದ್ಧಿ-ಅಹಂಕಾರ-ಚಿತ್ತಗಳೆಂಬ ೪ ಅಂತರಿಂದ್ರಿಯಗಳು)— ಹೀಗೆ ೬ರ ಅಧಿಪತಿಯಾದ,
ಷಣ್ಮುಖಂ— ೬ ಮಂದಿ ಕೃತ್ತಿಕಾದೇವಿಯರಿಂದ ಏಕಕಾಲದಲ್ಲಿ ಆರುಮುಖದವನಾಗಿ ಸ್ತನ್ಯಪಾನಮಾಡಿದ ಸುಬ್ರಹ್ಮಣ್ಯನನ್ನು,
ಅಹಮ್— ನಾನು,
ಪ್ರಣಮಾಮಿ— ಪ್ರಣಾಮ ಮಾಡುತ್ತೇನೆ.
ಈಶಪುತ್ರಂ ಶಕ್ತಿಹಸ್ತಂ ಸುಬ್ರಹ್ಮಣ್ಯಂ ಮಯೂರಗಮ್ |
ಕೃತ್ತಿಕಾದೇವಿಸಂಪುಷ್ಟಂ ಕಾರ್ತಿಕೇಯಂ ಸಮಾಶ್ರಯೇ || ೩ ||
ಈಶಪುತ್ರಮ್— ಪರಮೇಶ್ವರನಾದ ಶಂಕರನ ಸುತನಾದ,
ಶಕ್ತಿಹಸ್ತಮ್— ಶಕ್ತ್ಯಾಯುಧವನ್ನು ಕೈಯಲ್ಲಿ ಧರಿಸಿರುವ,
ಮಯೂರಗಮ್— ನವಿಲ ಮೇಲೇರಿ ಗಮನ ಮಾಡುವವನಾದ (ಮಯೂರವಾಹನನಾದ),
ಕೃತ್ತಿಕಾದೇವಿಸಂಪುಷ್ಟಂ— ಆರು ಮಂದಿ ಕೃತ್ತಿಕಾದೇವಿಯರಿಂದ ಎದೆಹಾಲುಣಿಸಲ್ಪಟ್ಟು ಚೆನ್ನಾಗಿ ಪುಷ್ಟಿಹೊಂದಿ,
ಕಾರ್ತಿಕೇಯಮ್— ಕಾರ್ತಿಕೇಯನೆಂಬ ಹೆಸರನ್ನು ಪಡೆದ,
ಸುಬ್ರಹ್ಮಣ್ಯಮ್— ಶ್ರೇಷ್ಠವಾದ ಬ್ರಹ್ಮಜ್ಞಾನಿಯೂ, ಪರಬ್ರಹ್ಮಸ್ವರೂಪನೂ ಆದ ಸುಬ್ರಹ್ಮಣ್ಯದೇವನನ್ನು,
ಸಮಾಶ್ರಯೇ— ಬಹುವಾಗಿ (ಅತಿಯಾಗಿ) ಆಶ್ರಯಿಸುತ್ತೇನೆ (ಶರಣುಹೊಂದುತ್ತೇನೆ).
ಜ್ಞಾನಿನಾಮಗ್ರಗಣ್ಯಂ ತಂ ಶುದ್ಧಜ್ಞಾನಪ್ರದಂ ಶುಭಮ್ |
ಆಧಿವ್ಯಾಧಿಹರಂ ವಂದೇ ಸತ್ಸಂತತಿಪ್ರದಾಯಕಮ್ || ೪ ||
ಜ್ಞಾನಿನಾಮಗ್ರಗಣ್ಯಮ್— ಜ್ಞಾನಿಗಳಲ್ಲಿ ಅಗ್ರಗಣ್ಯನಾದ (ಶ್ರೇಷ್ಠನಾದ),
ಶುದ್ಧಜ್ಞಾನಪ್ರದಮ್— ವಿಶುದ್ಧವೂ, ಸತ್ಯವೂ, ನಿತ್ಯವೂ, ನಿಷ್ಕಳಂಕವೂ ಆದ ಆತ್ಮಜ್ಞಾನವನ್ನು ನೀಡುವವನಾದ,
ಶುಭಮ್— ಸಕಲಭಕ್ತರಿಗೂ ಮಂಗಲಪ್ರದನಾದ,
ಆಧಿವ್ಯಾಧಿಹರಮ್— ಮಾನಸಿಕರೋಗ ಹಾಗೂ ಚರ್ಮವ್ಯಾಧಿಯೇ ಮುಂತಾದ ದೈಹಿಕರೋಗ ನಿವಾರಕನಾದ,
ಸತ್ಸಂತತಿಪ್ರದಾಯಕಮ್— ಉತ್ತಮ ಸಂತಾನವನ್ನೀಯುವಂಥ,
ತಮ್— ಆ ಸುಬ್ರಹ್ಮಣ್ಯನನ್ನು,
ವಂದೇ— ವಂದಿಸುತ್ತೇನೆ.
ತೋಯಮೂಲಂ ಸ್ಮರೇನ್ನಿತ್ಯಂ ದುಃಸ್ವಪ್ನಹರಮೀಶ್ವರಮ್ |
ನಾಗರೂಪಸಮಾರಾಧ್ಯಂ ಸ್ಕಂದಂ ಗಜಮುಖಾನುಜಮ್ || ೫ ||
ತೋಯಮೂಲಮ್— ಜಲಮೂಲಕ್ಕೆ ಆಶ್ರಯನಾದ,
ದುಃಸ್ವಪ್ನಹರಮ್— (ಮಲಗುವಾಗ,
“ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್ |
ಶಯನೇ ಯಃ ಸ್ಮರೇನ್ನಿತ್ಯಂ ದುಃಸ್ವಪ್ನಂ ತಸ್ಯ ನಶ್ಯತಿ ||”
ಎಂಬುದಾಗಿ ಸ್ಕಂದನಾಮಕನಾದ ಸುಬ್ರಹ್ಮಣ್ಯನನ್ನು ನೆನೆದರೆ) ಕೆಟ್ಟ ಕನಸುಗಳು ಬಾರದಂತೆ ಮಾಡುವವನಾದ,
ಈಶ್ವರಮ್— ಸಕಲರ ಒಡೆಯನಾದ,
ನಾಗರೂಪಸಮಾರಾಧ್ಯಮ್— ನಾಗನ ರೂಪದಲ್ಲಿ ಲೋಕದಲ್ಲಿ ಆರಾಧಿಸಲ್ಪಡುವ,
ಗಜಮುಖಾನುಜಮ್— ಗಣಪತಿಯ ತಮ್ಮನಾದ,
ಸ್ಕಂದಮ್— ಸ್ಕಂದನನ್ನು,
ನಿತ್ಯಮ್— ಪ್ರತಿದಿನವೂ,
ಸ್ಮರೇತ್— ಸ್ಮರಿಸಬೇಕು (ನೆನಪು ಮಾಡಬೇಕು).
(ಭುಜಂಗಪ್ರಯಾತಮ್)
ಭಜೇ ದೇವದೇವಂ ಗುಹಂ ಷಣ್ಮುಖಾಖ್ಯಂ
ಪರಂ ಶಂಭುಸೂನುಂ ಪರಾಶಕ್ತಿಪುತ್ರಮ್ |
ಗುರುಂ ಕಾರ್ತಿಕೇಯಂ ಸವಲ್ಲಿಂ ಸಶಕ್ತಿಂ
ಕುಮಾರಂ ಸದಾ ದೇವಸೇನಾಗ್ರಗಣ್ಯಮ್ || ೬ ||
ಗುಹಮ್— ಗುಹೆಯೊಳಗೆ ಸದಾ ಧ್ಯಾನಮಗ್ನನಾಗಿ ಗುಹನೆಂದು ಪ್ರಸಿದ್ಧನಾದ,
ಷಣ್ಮುಖಾಖ್ಯಮ್— ಷಡಾನನ, ಷಣ್ಮುಖನೆಂದೂ ಸ್ತುತಿಸಲ್ಪಡುವ,
ಶಂಭುಸೂನುಮ್— ಶಂಭುವಿನ ಪುತ್ರನಾದ,
ಪರಾಶಕ್ತಿಪುತ್ರಮ್— ಪಾರ್ವತಿಯ ಸುತನಾದ,
ಪರಮ್— ಶ್ರೇಷ್ಠನಾದ,
ಗುರುಮ್— ಗುರುಸ್ವರೂಪಿಯೂ ಆದ,
ಕಾರ್ತಿಕೇಯಮ್— ಕಾರ್ತಿಕೇಯನೆನಿಸಿದ,
ಸವಲ್ಲಿಮ್— ವಲ್ಲಿಯೆಂಬ ಪತ್ನಿಯ ಸಹಿತನಾದ,
ಸಶಕ್ತಿಮ್— ಶಕ್ತ್ಯಾಯುಧ ಸಮೇತನಾದ,
ಕುಮಾರಮ್— ಕುಮಾರಸುಬ್ರಹ್ಮಣ್ಯನೆಂದು ಪ್ರಸಿದ್ಧನಾದ,
ದೇವಸೇನಾಗ್ರಗಣ್ಯಮ್— ತಾರಕಾಸುರಾದಿ ದುಷ್ಟಸಂಹಾರಕಾಲದಲ್ಲಿ ದೇವತೆಗಳ ಸೇನಾನಿಯಾದ,
ದೇವದೇವಮ್— ದೇವರ ದೇವನನ್ನು,
ಸದಾ ಭಜೇ— ಯಾವಾಗಲೂ ಭಜಿಸುತ್ತೇನೆ.
॥श्री:॥
೨೩. ಆಂಜನೇಯಾಷ್ಟಕಮ್
(ಅನುಷ್ಟುಪ್ ಛಂದಃ)
ಅಂಜನಾನಂದನಂ ವಂದೇ | ವಂದೇsಹಂ ಪವನಾತ್ಮಜಮ್ ||
ರಾಮದಾಸವರೇಣ್ಯಂ ತಂ | ರುದ್ರಾಂಶಸಂಭವಂ ಹರಿಮ್ || ೧ ||
(ಅಂಜನಾನಂದನಂ)ಅಂಜನಾದೇವಿಗೆ ಆನಂದದಾಯಕನೂ, ಮಗನೂ ಆದಂತಹ, (ಪವನಾತ್ಮಜಮ್)ವಾಯುದೇವನ ಪ್ರಭಾವದಿಂದ ಜನಿಸಿದ, (ರಾಮದಾಸವರೇಣ್ಯಂ)ಶ್ರೀರಾಮಚಂದ್ರದೇವನ ದಾಸರಲ್ಲಿ ಅಗ್ರಗಣ್ಯನಾದ, (ರುದ್ರಾಂಶಸಂಭವಂ) ರುದ್ರದೇವರ ಅಂಶದಿಂದಲೂ ಕೂಡಿದ, (ಹರಿಮ್) ವಾನರರೂಪಿಯೂ, ಸಾಕ್ಷಾತ್ ಶ್ರೀಹರಿಸ್ವರೂಪನೂ ಆಗಿರುವ ಆಂಜನೇಯನನ್ನು (ವಂದೇsಹಂ)ನಾನು ನಮಸ್ಕರಿಸುತ್ತೇನೆ. (ವಂದೇ) ಮತ್ತೆ ಮತ್ತೆ ವಂದಿಸುತ್ತೇನೆ.
ವಜ್ರಾಹತಹನೂಮಂತಂ | ರವಿಬಿಂಬಾಭಿಧಾವಿತಮ್ ||
ವಜ್ರಕಾಯಂ ಕಪಿಶ್ರೇಷ್ಠಂ | ಕಿಷ್ಕಿಂಧಾವನವಾಸಿನಮ್ || ೨ ||
(ರವಿಬಿಂಬಾಭಿಧಾವಿತಮ್)ಆಕಾಶದಲ್ಲಿ ಬೆಳಗುವ ಸೂರ್ಯನನ್ನು ಹಣ್ಣೆಂದು ಭಾವಿಸಿ ತಿನ್ನುವುದಕ್ಕೋಸ್ಕರ ಆ ಕಡೆಗೆ ಹಾರಿದ ಆಂಜನೇಯನನ್ನು ಕಂಡ ದೇವೇಂದ್ರನು, (ವಜ್ರಾಹತಹನೂಮಂತಂ)ತನ್ನ ವಜ್ರಾಯುಧದಿಂದ ಆತನ ಕೆನ್ನೆಗೆ ಹೊಡೆದುದರಿಂದ, ಕೆನ್ನೆ ಊದಿಕೊಂಡು ‘ಹನೂಮಾನ್’ ಎನಿಸಿಕೊಂಡನು. (ವಜ್ರಕಾಯಂ)ವಜ್ರದಂತೆ ದೃಢವಾದ ಶರೀರವುಳ್ಳವನೂ,(ಕಪಿಶ್ರೇಷ್ಠಂ)ಸುಗ್ರೀವನೇ ಮೊದಲಾದ ಕಪಿಗಳಲ್ಲಿ ಸುಜ್ಞಾನಿಯೂ,ವ್ಯಾಕರಣಜ್ಞನೂ,ಉತ್ತಮ ವಾಗ್ಮಿಯೂ ಆಗಿ ಶ್ರೇಷ್ಠನೆನಿಸಿಕೊಂಡವನಾಗಿದ್ದಾನೆ. (ಕಿಷ್ಕಿಂಧಾವನವಾಸಿನಮ್)ಕಿಷ್ಕಿಂಧೆಯಲ್ಲಿದ್ದ ವಾನರವನರಾಜ್ಯದಲ್ಲಿ ವಾಸವಾಗಿದ್ದ ವಾಯುತನಯನನ್ನು ಪುನ: ವಂದಿಸುತ್ತೇನೆ.
ಸೀತಾನ್ವೇಷಣಕಾರ್ಯಾರ್ಥಂ | ಕೃತಸಾಗರಲಂಘನಮ್ ||
ಮೈನಾಕಮವಲೋಕ್ಯಾಶು | ಗತಂ ಲಂಕಾಪುರೀಂ ಕ್ಷಣಾತ್ || ೩ ||
(ಸೀತಾನ್ವೇಷಣಕಾರ್ಯಾರ್ಥಂ)ಸೀತಾಮಾತೆಯನ್ನು ಹುಡುಕುವುದಕ್ಕೋಸ್ಕರ, (ಕೃತಸಾಗರಲಂಘನಮ್) ಈಗ ಹಿಂದೂ ಮಹಾ ಸಾಗರವೆಂದು ಕರೆಯಲ್ಪಡುವ, ದಕ್ಷಿಣ ಸಮುದ್ರವನ್ನು ಹಾರಿ ದಾಟುವಾಗ, (ಮೈನಾಕಮವಲೋಕ್ಯಾಶು)ಮಧ್ಯೆ ಮೇಲೆದ್ದು ಬಂದ ಮೈನಾಕಪರ್ವತವನ್ನು ಒಂದು ಕ್ಷಣ ದಿಟ್ಟಿಸಿ, (ಕ್ಷಣಾತ್)ಕೂಡಲೇ (ಲಂಕಾಪುರೀಂ)ಲಂಕಾಪಟ್ಟಣದತ್ತ (ಗತಂ)ನೆಗೆದನು. ಅಂತಹ ಹನೂಮಂತನನ್ನು ನಮಿಸುತ್ತೇನೆ.
ಲಂಕಿಣೀಂ ಚೈವ ಹಂತಾರಂ | ಅಶೋಕಾವನದರ್ಶನಮ್ ||
ಸೀತಾನ್ವೇಷಣಸಿದ್ಧಾರ್ಥಂ | ದತ್ತಮುದ್ರಾಂಗುಲೀಯಕಮ್ || ೪ ||
(ಲಂಕಿಣೀಂ ಏವ ಹಂತಾರಂ ಚ )ಲಂಕಾಪ್ರವೇಶಕ್ಕೆ ಮೊದಲು,ಲಂಕಾಲಕ್ಷ್ಮಿಯಂತಿದ್ದ ಲಂಕಿಣಿಯನ್ನೇ ಕೊಂದನು ಹಾಗೂ (ಅಶೋಕಾವನದರ್ಶನಮ್)ರಾವಣನು ಸೀತೆಯನ್ನಿರಿಸಿದ್ದ ಅಶೋಕವನವನ್ನು ಕಂಡನು. (ಸೀತಾನ್ವೇಷಣಸಿದ್ಧಾರ್ಥಂ)ಸೀತೆಯನ್ನು ಅರಸುವ ಕಾಯಕದಲ್ಲಿ ಸಫಲತೆಯನ್ನು ಕಂಡ ಹನುಮನು, (ದತ್ತಮುದ್ರಾಂಗುಲೀಯಕಮ್) ಶ್ರೀರಾಮನು ನೀಡಿದ ಮುದ್ರೆಯುಂಗುರವನ್ನು ಸೀತಾಮಾತೆಗೆ ನೀಡಿ, ಅವಳ ಶೋಕನಿವಾರಣೆಗೆ ಮತ್ತು ಆನಂದಕ್ಕೆ ಕಾರಣನಾದನು.
ಇಂದ್ರಜಿತ್ಪ್ರೇಷಿತಾಸ್ತ್ರೇಣ | ಬ್ರಹ್ಮಬಂಧನಗೌರವಮ್ ||
ರಾಮಕಾರ್ಯಪ್ರವಕ್ತಾರಂ | ಕೃತಲಂಕಾವಿದಾಹನಮ್ || ೫ ||
(ಇಂದ್ರಜಿತ್ಪ್ರೇಷಿತಾಸ್ತ್ರೇಣ ಬ್ರಹ್ಮಬಂಧನಗೌರವಮ್) ಅವನನ್ನು ಬಂಧಿಸಲು ರಾವಣಪುತ್ರ ಇಂದ್ರಜಿತನು ಪ್ರಯೋಗಿಸಿದ ಅಸ್ತ್ರಗಳೆಲ್ಲವೂ ವ್ಯರ್ಥವಾಗಲು, ಕೊನೆಗೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದಾಗ ಅದಕ್ಕೂ ಆಂಜನೇಯನು ಬಗ್ಗಲಿಲ್ಲ. ಆದರೂ, ಬ್ರಹ್ಮನ ಮೇಲಿನ ಗೌರವದಿಂದ ಅದನ್ನು ನಮಸ್ಕರಿಸಿ, ಸುಮ್ಮನೆ ಕುಳಿತುದರಿಂದ ಸ್ವತ: ಬಂಧನಕ್ಕೊಳಗಾದನು. (ರಾಮಕಾರ್ಯಪ್ರವಕ್ತಾರಂ) ರಾಮನು ತನ್ನನ್ನು ಕಳುಹಿಸಿದ ಉದ್ದೇಶವನ್ನು ರಾವಣನಿಗೆ ಅರುಹುವ ಅವಕಾಶಕ್ಕೋಸ್ಕರವೇ ತಾನೇ ಬಂಧನಕ್ಕೊಳಪಟ್ಟು, ಇಂದ್ರಜಿತುವಿನೊಂದಿಗೆ ರಾವಣನ ಆಸ್ಥಾನಕ್ಕೆ ಹೋಗುತ್ತಾನೆ. ಅಲ್ಲಿ ತಾನು, ಸೀತಾನ್ವೇಷಣೆಗಾಗಿ ರಾಮನಿಂದ ಚೋದಿತನಾದ ಸುಗ್ರೀವನ ಆಜ್ಞೆಯಂತೆ ಬಂದುದಾಗಿ ರಾವಣನಿಗೆ ತಿಳಿಸುತ್ತಾನೆ. (ಕೃತಲಂಕಾವಿದಾಹನಮ್)ಆಗ ಕಪಿಚೇಷ್ಟೆಗಳಿಂದಾಗಿ ಮೊದಲೇ ಸಿಟ್ಟಾಗಿದ್ದ ರಾವಣನು, ಹನುಮನ ಸದ್ದಡಗಿಸುವೆನೆಂದು ಭಾವಿಸಿ, ಅವನ ಬಾಲಕ್ಕೆ ಬೆಂಕಿ ಕೊಟ್ಟು ಮೆರವಣಿಗೆ ಮಾಡಲು ಭಟರನ್ನು ಆಜ್ಞಾಪಿಸಿದನು. ಆಗ ಹನುಮನು ಇಡೀ ಲಂಕೆಯನ್ನು ಸುಟ್ಟನು.
ಚೂಡಾಮಣಿಪ್ರಸಂಗೇಣ | ರಾಮಾಭೇದಪ್ರದರ್ಶಕಮ್ ||
ವಿಭೀಷಣಪ್ರಸಂಗೇ ಚ | ಶರಣಾಗತವತ್ಸಲಮ್ || ೬ ||
(ಚೂಡಾಮಣಿಪ್ರಸಂಗೇಣ ರಾಮಾಭೇದಪ್ರದರ್ಶಕಮ್)ಲಂಕಾದಹನಕ್ಕೆ ಮುನ್ನ ರಾಮನ ಮುದ್ರೆಯುಂಗುರ ಪಡೆದ ಸೀತಾದೇವಿಯು, ಹನೂಮಂತನಿಗೆ ತನ್ನ ಚೂಡಾಮಣಿಯುಂಗುರವನ್ನು ನೀಡಿರುತ್ತಾಳೆ. ಅದನ್ನು ಹನುಮನು, ಲಂಕೆಯಿಂದ ಹಿಂದಿರುಗಿದ ನಂತರ ರಾಮನಿಗೊಪ್ಪಿಸಿ, ಸೀತಾವೃತ್ತಾಂತವನ್ನರುಹಿದಾಗ ಶ್ರೀರಾಮನು ಆನಂದದಿಂದ ಹನುಮನನ್ನು ಆಲಿಂಗಿಸಿಕೊಂಡು, ನಿನಗೆ ಕೊಡಲು ಆಲಿಂಗನವಲ್ಲದೇ ಬೇರೇನೂ ಯೋಗ್ಯವಾದುದು ನನ್ನಲ್ಲಿಲ್ಲ; ಲೋಕಮುಖಕ್ಕೆ ನಾವಿಬ್ಬರು ಎರಡು ಬೇರೆ ಬೇರೆ ಶರೀರಧಾರಿಗಳಾದರೂ, ಪಾರಮಾರ್ಥಿಕವಾಗಿ ರಾಮನಿಗೂ ಹನುಮನಿಗೂ ಭೇದವಿಲ್ಲ; ದೇಹ ೨, ಆತ್ಮ೧ ಎಂದು ನುಡಿಯುತ್ತಾನೆ. (ಚ)ಹಾಗೆಯೇ, (ವಿಭೀಷಣಪ್ರಸಂಗೇ)ರಾಮ-ರಾವಣ ಸೈನ್ಯದ ನಡುವಿನ ಕದನಕ್ಕೂ ಮೊದಲು,ನೀತಿಮಾತುಗಳಿಗೆ ಕಿವಿಗೊಡದ ರಾವಣನನ್ನು ತೊರೆದ ವಿಭೀಷಣನು ರಾಮನನ್ನು ಶರಣುಹೊಂದಿದಾಗ, ಹನುಮನು (ಶರಣಾಗತವತ್ಸಲಮ್) ತನ್ನ ಶರಣಾಗತರ ಕಾವ ಗುಣವನ್ನು ಪ್ರದರ್ಶಿಸಿ, ಅವನು ಶತ್ರುಪಕ್ಷದವನಾದರೂ, ನಿನ್ನ ಭಕ್ತನಾಗಿದ್ದಾನೆ; ಮೇಲಾಗಿ ಶರಣರ ರಕ್ಷಣೆ ಧರ್ಮಸಮ್ಮತ ಎಂದು ರಾಮನಲ್ಲಿ ನುಡಿಯುತ್ತಾನೆ.
ಸಂಜೀವಿನೀಪ್ರದಾತಾರಂ | ರಾಮಸೈನ್ಯಸುರಕ್ಷಕಮ್ ||
ರಾಮಾವತಾರನಿರ್ಯಾಣೇ | ಸಾಕ್ಷೀಭೂತಂ ಚಿರಂ ಯತಿಮ್ || ೭ ||
(ಸಂಜೀವಿನೀಪ್ರದಾತಾರಂ)ಯುದ್ಧಕಾಲದಲ್ಲಿ ರಾಮನ ಕಡೆಯವರೆಲ್ಲಾ ಧರೆಗೊರಗಿದಾಗ, ಸಂಜೀವಿನೀ ಪರ್ವತವನ್ನೇ ಉತ್ತರದ ಹಿಮಾದ್ರಿಯಿಂದ ತಂದು, ಅಚೇತನರಾಗಿದ್ದ ಅವರನ್ನೆಲ್ಲ ಪುನಶ್ಚೇತನಗೊಳಿಸಿದನು. (ರಾಮಸೈನ್ಯಸುರಕ್ಷಕಮ್)ಹೀಗೆ, ರಾಮಸೇನೆಯನ್ನು ಸುರಕ್ಷಿಸಿದ ಮಹಿಮ ಹನುಮ. (ರಾಮಾವತಾರನಿರ್ಯಾಣೇ)ಶ್ರೀರಾಮಾವತಾರದ ಸಮಾಪ್ತಿಕಾಲದಲ್ಲೂ, (ಸಾಕ್ಷೀಭೂತಂ)ಅದನ್ನು ಪ್ರತ್ಯಕ್ಷ ಕಂಡವನೂ, (ಚಿರಂ ಯತಿಮ್)ಚಿರಂಜೀವಿಯೂ, ಅಖಂಡ ಬ್ರಹ್ಮಚರ್ಯದಿಂದ ಯತಿಯೆನಿಸಿಕೊಂಡವನೂ ಆಗಿದ್ದಾನೆ ಈ ಆಂಜನೇಯನೆಂಬ ಮಹಾತ್ಮನು.
ದ್ವಾಪರೇ ದೃಷ್ಟಶ್ರೀರಾಮಂ | ಪೃಥಾಸುತಮದಾಪಹಮ್ ||
ಭುಃಕಾರಕೃತಸ್ತ್ರೀರಾಜ್ಯಂ | ಮತ್ಸ್ಯೇಂದ್ರನಾಥಪಾಲಕಮ್ || ೮ ||
(ದ್ವಾಪರೇ ದೃಷ್ಟಶ್ರೀರಾಮಂ)ದ್ವಾಪರಯುಗದಲ್ಲೂ ಕೃಷ್ಣಾವತಾರಿಯಲ್ಲಿ ಶ್ರೀರಾಮನನ್ನು ಕಂಡ ಮಹಾಮಹಿಮ. (ಪೃಥಾಸುತಮದಾಪಹಮ್)ಕುಂತೀಪುತ್ರರಾದ ಭೀಮಾರ್ಜುನರ ಗರ್ವಭಂಗಮಾಡಿದವನೂ ಇವನೇ. ಸೌಗಂಧಿಕಾಪುಷ್ಪಹರಣ ಹಾಗೂ ಪುರುಷಾಮೃಗ/ರಾಜಸೂಯಪ್ರಸಂಗಗಳಲ್ಲಿ ಹನುಮನ ಬಲ ಹಾಗೂ ಅತುಲ ಶಿವಭಕ್ತಿ-ಶಕ್ತಿಗಳು ಪ್ರಕಟವಾಗಿ ಭೀಮನ ಗರ್ವಭಂಗವಾಯಿತು; ಶರಸೇತುಬಂಧದ ಸಂದರ್ಭ, ಪಾರ್ಥನ ಅಹಂಕಾರಕ್ಕೆ ಪೆಟ್ಟು ಕೊಟ್ಟಿತು. (ಭುಃಕಾರಕೃತಸ್ತ್ರೀರಾಜ್ಯಂ ಮತ್ಸ್ಯೇಂದ್ರನಾಥಪಾಲಕಮ್) ಹಿಂದೊಮ್ಮೆ ಯುದ್ಧಾನಂತರ ಸೀತಾರಾಮಾದಿಗಳು ಪುಷ್ಪಕವಿಮಾನದಲ್ಲಿ ಅಯೋಧ್ಯೆಗೆ ಹಿಂದಿರುಗುವಾಗ, ಅದರಲ್ಲಿದ್ದ ಹನುಮನನ್ನು ಬಳಿಗೆ ಕರೆದ ಸೀತಾದೇವಿಯು, ‘ನೀನು ನಮ್ಮನ್ನು ಪುನಃ ಒಂದುಗೂಡಿಸಿದೆ. ಆದರೆ,ನೀನಿನ್ನೂ ಬ್ರಹ್ಮಚಾರಿ. ನೀನೂ ವಿವಾಹಿತನಾಗಿ,ಸಂಸಾರಾದಿಸುಖವನ್ನನುಭವಿಸಬೇಕೆಂಬುದು ನನ್ನ ಇಚ್ಛೆ’ ಎಂದಳು. ಆಗ ಹನುಮನು, ‘ಅಮ್ಮಾ..ನನಗೆ ಬ್ರಹ್ಮಚಾರಿಯಾಗಿಯೇ ಇರಬೇಕೆಂಬ ಆಕಾಂಕ್ಷೆ. ಯಾವುದಕ್ಕೂ ಒಮ್ಮೆ ನನ್ನ ರಾಮದೇವರಲ್ಲಿ ಕೇಳುತ್ತೇನೆ’ ಎಂದು, ರಾಮನಲ್ಲಿ ವಿಷಯವನ್ನು ಪ್ರಸ್ತಾಪಿಸಿದಾಗ, ರಾಮನು, ‘ಅಯ್ಯಾ ಹನುಮ! ನಿನ್ನಿಚ್ಛೆಯೂ, ಸೀತೆಯ ಇಷ್ಟವೂ ಎರಡೂ ನೆರವೇರುವಂತೆ ಒಂದು ಉಪಾಯವಿದೆ. ಸ್ತ್ರೀರಾಜ್ಯದ ರಾಣಿ ಪಿಂಗಳೆಯು ನಿನ್ನನ್ನು ಮದುವೆಯಾಗಬೇಕೆಂದು ತಪಗೈಯ್ಯುತ್ತಿರುವಳು. ದೂರದಿಂದ ಮಾಡಿದ ನಿನ್ನ ಭುಃಭುಃಕಾರಮಾತ್ರದಿಂದ ಸ್ತ್ರೀರಾಜ್ಯದವರೆಲ್ಲರೂ ನಿನ್ನ ಸ್ಪರ್ಶವಿಲ್ಲದೇ ಗರ್ಭವತಿಯರಾಗುವರು. ಆದರೆ, ಅವರ ಒಡತಿ ಪಿಂಗಳೆಯು ಇದಕ್ಕೆ ಒಪ್ಪಲಾರಳು. ಮುಂದೆ ಕಲಿಯುಗದಲ್ಲಿ ಮತ್ಸ್ಯೇಂದ್ರನಾಥನೆಂಬ ನಾಥಪಂಥದ ಆದಿಯೋಗಿಯು ಬಂದು ನಿನ್ನ ವಾಂಛಿತವನ್ನು ಈಡೇರಿಸುವನೆಂದು ಅವಳಿಗೆ ಹೇಳು’ಎಂದನು. ಮುಂದೆ ಮತ್ಸ್ಯೇಂದ್ರನು ರಾಮಸೇತುಕ್ಷೇತ್ರವಾದ ರಾಮೇಶ್ವರದಲ್ಲಿ ಹನುಮನನ್ನು ಭೇಟಿಯಾಗಿ,ಹನುಮನ ಅನುಗ್ರಹ ಹೊಂದಿದನು.
ಆಂಜನೇಯಾಷ್ಟಕಂ ಭದ್ರಂ | ರಾಮಾನುಗ್ರಹಕಾರಕಮ್ ||
ಬುದ್ಧಿರ್ಬಲಯಶೋಧೈರ್ಯ | ದಾಯಕಂ ಪಾಪನಾಶನಮ್ || ೯ ||
(ಭದ್ರಂ)ಈ ಮಂಗಳಕರವಾದ (ಆಂಜನೇಯಾಷ್ಟಕಂ)ಆಂಜನೇಯಾಷ್ಟಕವು, (ರಾಮಾನುಗ್ರಹಕಾರಕಮ್) ಶ್ರೀರಾಮನ ಅನುಗ್ರಹವನ್ನು ಉಂಟುಮಾಡುವಂತಹುದು. (ಬುದ್ಧಿರ್ಬಲಯಶೋಧೈರ್ಯದಾಯಕಂ ಪಾಪನಾಶನಮ್)ಬುದ್ಧಿ,ಬಲ,ಕೀರ್ತಿ,ಧೈರ್ಯಗಳನ್ನು ಕೊಡುವಂಥದ್ದು. ಸರ್ವಪಾಪಹರ.
ಯಚ್ಛೃಣೋತಿ ಪಠೇದ್ವಾಪಿ | ನಿತ್ಯಂ ಭಕ್ತಿಸಮನ್ವಿತಃ ||
ಹನೂಮತ್ಕೃಪಯಾ ಶಾಂತಿಂ | ಭುಕ್ತಿಂ ಮುಕ್ತಿಂ ಚ ವಿಂದತಿ || ೧೦ ||
(ನಿತ್ಯಂ ಭಕ್ತಿಸಮನ್ವಿತಃ)ನಿತ್ಯವೂ ಭಕ್ತಿಯಿಂದ (ಯಚ್ಛೃಣೋತಿ ಪಠೇದ್ವಾಪಿ)
ಯಾರು ಇದನ್ನು ಕೇಳುತ್ತಾರೋ,ಓದುತ್ತಾರೋ, ಅವರು (ಹನೂಮತ್ಕೃಪಯಾ)ಹನೂಮಂತನ ಕೃಪೆಯಿಂದ (ಶಾಂತಿಂ ಭುಕ್ತಿಂ ಮುಕ್ತಿಂ ಚ ವಿಂದತಿ)ಶಾಂತಿ,ಭೋಗ ಹಾಗೂ ಮುಕ್ತಿಗಳನ್ನು ಹೊಂದುತ್ತಾರೆ.
೨೪. ದಿಕ್ಪಾಲಗ್ರಹಸ್ತೋತ್ರಮ್
ರವಿಃ ಶುಕ್ರಃ ಕುಜಶ್ಚೈವ ರಾಹುಃ ಶನಿಃ ಶಶೀ ತಥಾ |
ಬುಧೋ ಬೃಹಸ್ಪತಿಶ್ಚೈವ ದಿಶಾಧೀಶಾಃ ಕ್ರಮಾಗತಾಃ || ೧ ||
ಸೂರ್ಯಾಯ ಪೂರ್ವದಿಗ್ವರ್ತಿ|ಗ್ರಹಾಧೀಶಾಯ ವನ್ದನಮ್ |
ಆಗ್ನೇಯಾಧಿಪತಿಂ ವನ್ದೇ ಭಾರ್ಗವಂ ಶುಕ್ರಮೇವ ಹಿ || ೨ ||
ಕುಜಾಯ ದಕ್ಷಿಣೇಶಾಯ ಮಙ್ಗಲಾಯ ನಮೋ ನಮಃ |
ನೈರೃತ್ಯಾಧಿಪತಿಂ ವನ್ದೇ ಗ್ರಹಂ ರಾಹುಂ ನಮಾಮ್ಯಹಮ್ || ೩ ||
ಶನೈಶ್ಚರ ನಮಸ್ತುಭ್ಯಂ ಪಶ್ಚಿಮಾಧಿಪತೇ ಪ್ರಭೋ |
ಸೋಮಾಯ ವಾಯುದಿಗ್ವರ್ತಿಚಂದ್ರಾಯ ಚ ನಮೋ ನಮಃ || ೪ ||
ಉತ್ತರಾಧಿಪತಿಂ ಸೌಮ್ಯಂ ಬುಧಂ ವನ್ದೇ ಪುನಃ ಪುನಃ |
ಈಶಾನ್ಯದಿಕ್ಪತಿಂ ವನ್ದೇ ದೇವಗುರುಂ ಬೃಹಸ್ಪತಿಮ್ || ೪ || ೫ ||
ರವಿ / ಸೂರ್ಯನು ಪೂರ್ವದಿಕ್ಪತಿ. ಆಗ್ನೇಯದಿಕ್ಪಾಲಕನು ಶುಕ್ರನು. ಮಂಗಳನು ದಕ್ಷಿಣಕ್ಕೂ, ರಾಹುವು ನೈರುತ್ಯಕ್ಕೂ, ಶನಿಯು ಪಶ್ಚಿಮಕ್ಕೂ, ಚಂದ್ರನು ವಾಯವ್ಯಕ್ಕೂ, ಉತ್ತರಕ್ಕೆ ಬುಧನೂ, ಈಶಾನ್ಯಕ್ಕೆ ದೇವಗುರು ಬೃಹಸ್ಪತಿಯೂ ಅಧಿಪತಿಗಳಾಗಿರುವರು. ಅವರೆಲ್ಲರಿಗೂ ನಮಸ್ಕಾರಗಳು.
೨೫. ಪ್ರಾತಃಸ್ಮರಣಾಷ್ಟಕಮ್
(ವಸನ್ತತಿಲಕಾವೃತ್ತಮ್)
ಪ್ರಾತಃ ಸ್ಮರಾಮಿ ಪರಮಾತ್ಮಪದಂ ಸುಭಕ್ತ್ಯಾ
ಆದ್ಯಾಂ ಚ ಶಕ್ತಿಮಥ ವಿಷ್ಣುಪದಂ ಗಿರೀಶಮ್ ।
ಧಾತಾರಮೀಶರಮಣೀಮಥ ಶಾರದಾಂ ಚ
ಲಕ್ಷ್ಮೀಂ ವಿನಾಯಕಮಹಂ ಮನಸಾ ಧಿಯಾ ಚ ॥ ೧ ॥
ಪರಮಾತ್ಮಪದವನ್ನೂ, ಆದಿಶಕ್ತಿಯನ್ನೂ, ಅತ್ಯಂತ ಭಕ್ತಿಯಿಂದ ಪ್ರಾತಃಕಾಲದಲ್ಲಿ ಸ್ಮರಿಸುತ್ತೇನೆ. ಅಂತೆಯೇ, ಮಹಾವಿಷ್ಣುವಿನ ಪದಕಮಲವನ್ನೂ ಕೈಲಾಸಗಿರಿನಾಥನಾದ ಗಿರೀಶ ಶಿವನನ್ನೂ, ವಿಧಾತೃವಾದ ಬ್ರಹ್ಮನನ್ನೂ, ಈಶ್ವರನ ಪತ್ನಿಯಾದ ಪಾರ್ವತಿಯನ್ನೂ, ಬ್ರಹ್ಮಪತ್ನಿ ಶಾರದೆಯನ್ನೂ, ನಾರಾಯಣವಲ್ಲಭೆಯಾದ ಮಹಾಲಕ್ಷ್ಮಿಯನ್ನೂ, ಗಜಮುಖನಾದ ವಿನಾಯಕನನ್ನೂ ಮನ-ಬುದ್ಧಿಗಳಿಂದ ಮುಂಜಾನೆಯಲ್ಲೇ ನಾನು ಸ್ಮರಿಸುತ್ತೇನೆ.
ಪ್ರಾತರ್ನಮಾಮಿ ಸವಿತಾರಮನನ್ತತೇಜ-
ಸಂ ಲೋಕಚಕ್ಷುಮಮಿತಪ್ರಭವಾದಿಹೇತುಮ್ ।
ಧೀಃಪ್ರೇರಕಂ ಸಕಲಲೋಕನಿಧಾನಭೂತಂ
ಪ್ರತ್ಯಕ್ಷದೇವವದನಂ ಗ್ರಹನಾಥರೂಪಮ್ ॥೨॥
ಅಮಿತವೂ ಅನಂತವೂ ಆದ ತೇಜಸ್ಸುಳ್ಳ , ಲೋಕಕ್ಕೇ ಕಣ್ಣಾದ, ಮಿತಿಯಿಲ್ಲದ ಸೃಷ್ಟ್ಯಾದಿಗಳಿಗೆ ಕಾರಣನಾದ, ಸಕಲರ ಬುದ್ಧಿಯ ಪ್ರೇರಕನಾದ, ಎಲ್ಲ ಲೋಕಗಳಿಗೂ ಆಶ್ರಯನಾದ, ಸಕಲ ದೇವರುಗಳ ಪ್ರತ್ಯಕ್ಷಗೋಚರವಾದ ಮುಖದಂತಿರುವ, ಎಲ್ಲ ಗ್ರಹಗಳ ಅಧಿಪತಿಯಾದ, ಶ್ರೀಸವಿತೃಸೂರ್ಯನಾರಾಯಣದೇವನನ್ನು ಪ್ರಾತಃಕಾಲದಲ್ಲಿ ನಮಿಸುತ್ತೇನೆ.
ಪ್ರಾತರ್ಭಜಾಮಿ ಸುರನಾಥಮಚಿನ್ತ್ಯಶಕ್ತಿಂ
ವಾಯುಂ ಹುತಾಶನಮಹಂ ವರುಣಂ ಕುಬೇರಮ್ ।
ದಿಕ್ಪಾಲಕಾನಥ ಮಹಾಸುರರೂಪಿಣಸ್ತಾನ್
ಪುಣ್ಯಾಧಿಕಾಂಶ್ಚ ಸುರಲೋಕನಿವಾಸಿನಶ್ಚ ॥೩॥
ದೇವತೆಗಳ ಒಡೆಯನಾದ, ಚಿಂತನೆಗೆ ನಿಲುಕದ ಶಕ್ತಿಯುಳ್ಳ , ದೇವೇಂದ್ರನನ್ನೂ, ವಾಯುದೇವನನ್ನೂ, ಹೋಮದಲ್ಲಿ ಹುತವಾದದ್ದನ್ನು ಉಣ್ಣುವುದರಿಂದ ಹುತಾಶನನೆನಿಸಿದ ಅಗ್ನಿದೇವನನ್ನೂ, ಸಮುದ್ರಾಧಿಪತಿ ವರುಣದೇವನನ್ನೂ, ಸಂಪತ್ತಿನ ಅಧಿಪ ಕುಬೇರನನ್ನೂ, ಅಷ್ಟದಿಕ್ಕುಗಳ ಪಾಲಕರಾದ ಮಹಾನ್ ದೇವತೆಗಳನ್ನೂ, ತಮ್ಮ ಅತಿಶಯವಾದ ಪುಣ್ಯಸಂಚಯದಿಂದಾಗಿ ದೇವಲೋಕವಾಸಿಗಳಾಗಿರುವ ಸಮಸ್ತರನ್ನೂ ನಾನು ಬೆಳಗ್ಗೆ ಭಜಿಸುತ್ತೇನೆ.
ಪ್ರಾತಃ ಸ್ತವೀಮಿ ಶಶಿಭೌಮಬುಧಾನ್ಗುರುಂ ಚ
ಶುಕ್ರಂ ಶನಿಂ ರವಿಸುತಂ ಬಹುಧರ್ಮದೃಷ್ಟಿಮ್ ।
ರಾಹುಂ ಚ ಕೇತುಮತಿಭಾವಹೃದಾ ಚ ಭಕ್ತ್ಯಾ
ಕಾಲೇ ಪ್ರದಾನಫಲದಾನ್ನರಪುಣ್ಯಪಾಪೈಃ ॥೪॥
ಚಂದ್ರ, ಭೂಮಿಪುತ್ರ ಭೌಮ / ಮಂಗಳ / ಅಂಗಾರಕ, ಬುಧ, ಗುರು, ಶುಕ್ರ, ಬಹುಧರ್ಮದೃಷ್ಟಿಯುಳ್ಳ ಸೂರ್ಯಪುತ್ರ ಶನಿ, ರಾಹು ಮತ್ತು ಕೇತು— ಆಯಾಕಾಲಕ್ಕೆ ಮನುಜರ ಪುಣ್ಯಪಾಪಗಳ ಫಲಸೂಚನೆಯನ್ನು ಕೊಡುವ ಈ ಸಮಸ್ತ ಗ್ರಹರುಗಳನ್ನು ಅತಿಶಯ ಭಕ್ತಿಭಾವಪೂರ್ಣ ಹೃದಯದಿಂದ ಮುಂಜಾನೆ ಸ್ತುತಿಸುತ್ತೇನೆ.
ಪ್ರಾತಃ ಸ್ಮರಾಮಿ ಶುಕನಾರದಶಙ್ಕರಾರ್ಯಾನ್
ರಾಮಾನುಜಂ ಧ್ರುವಪದಂ ವರಮಧ್ವತೀರ್ಥಮ್।
ವ್ಯಾಸಂ ಮೃಕಣ್ಡುತನಯಂ ಬಲಿಮಾಞ್ಜನೇಯಂ
ದ್ರೌಣಿಂ ವಿಭೀಷಣಮಹಂ ಕೃಪಭಾರ್ಗವೌ ಚ ॥೫॥
ವ್ಯಾಸಪುತ್ರ ರುದ್ರಾಂಶಸಂಭೂತ ಜೀವನ್ಮುಕ್ತರಾದ ಶುಕಮುನಿಗಳನ್ನೂ, ಬ್ರಹ್ಮಮಾನಸಪುತ್ರ ಪರಮಭಕ್ತ ದೇವರ್ಷಿ ನಾರದರನ್ನೂ, ಅದ್ವೈತಬ್ರಹ್ಮನಿಷ್ಠ ಭಗವಾನ್ ಆದಿಶಂಕರಾಚಾರ್ಯರನ್ನೂ, ಆಚಾರ್ಯರಾವತಾರಿಗಳಾದ ರಾಮಾನುಜ-ಮಧ್ವ(ಆನಂದತೀರ್ಥ)ರನ್ನೂ, ಪುಣ್ಯಾತ್ಮ ಭಕ್ತ ಧ್ರುವನನ್ನೂ, ವೇದಗಳನ್ನು ನಾಲ್ಕಾಗಿ ವಿಭಜಿಸಿ ೧೮ ಪುರಾಣಗಳನ್ನೂ ಲೋಕಕ್ಕೆ ಅನುಗ್ರಹಿಸಿದ ವೇದವ್ಯಾಸರನ್ನೂ, ಮೃಕಂಡುಮುನಿಪುತ್ರ ಸಪ್ತಕಲ್ಪಗಳ ವರೆಗೆ ಚಿರಂಜೀವಿಗಳಾದ ಮಾರ್ಕಂಡೇಯಮುನಿಯನ್ನೂ, ವಿರೋಚನಪುತ್ರ ಭಾವೀ ದೇವೇಂದ್ರ ಬಲಿಮಹಾರಾಜನನ್ನೂ, ಅಂಜನಾಸೂನು ರಾಮದಾಸವರೇಣ್ಯ ಆಂಜನೇಯನನ್ನೂ, ದ್ರೋಣಪುತ್ರ ಭಾವೀ ವ್ಯಾಸರೆನಿಸಿದ ಅಶ್ವತ್ಥಾಮರನ್ನೂ, ಕೃಪಾಚಾರ್ಯರನ್ನೂ, ಭೃಗುವಂಶಜ ಜಮದಗ್ನಿಜ ಪರಶುಧರ ಹರಿಯ ಆವೇಶಾವತಾರಿ ಭಾರ್ಗವರಾಮನನ್ನೂ ಪ್ರಾತಃಕಾಲದಲ್ಲೇ ಈ ಎಲ್ಲ ಪುಣ್ಯವಂತರನ್ನೂ ಸ್ಮರಿಸುತ್ತೇನೆ.
ಗಙ್ಗಾಮನನ್ತಫಲದಾಂ ಯಮುನಾಂ ಚ ಸಿನ್ಧುಂ
ಗೋದಾವರೀಮಥ ಸರಸ್ವತಿನರ್ಮದೇ ಚ ।
ಕಾವೇರಿಕೃಷ್ಣಸರಯೂನಥ ಪುಣ್ಯತೀರ್ಥಾನ್
ಪ್ರಾತಃ ಸ್ತುವಾಮ ಜಲಮೂಲಸರಿದ್ವರೇಣ್ಯಾನ್ ॥೬॥
ಅನಂತವಾದ ಪುಣ್ಯಫಲಪ್ರದೆಯೂ ಪಾಪಹಾರಿಣಿಯೂ ಆದ ಗಂಗಾನದಿ, ಯಮುನಾ, ಸಿಂಧೂ, ಗೋದಾವರೀ, ಸರಸ್ವತೀ, ನರ್ಮದಾ, ಕಾವೇರಿ, ಕೃಷ್ಣ, ಅಯೋಧ್ಯೆಯ ಸರಯೂ ಮುಂತಾದ ಸಕಲ ಪುಣ್ಯತೀರ್ಥಗಳನ್ನೂ ಜಲಮೂಲಗಳಾದ ವರನದಿಗಳನ್ನೂ ಪ್ರಾತಃಕಾಲದಲ್ಲಿ ಸ್ತುತಿಸುತ್ತೇವೆ.
ಮೈನಾಕಮನ್ದರಗಿರೀ ಮಲಯಂ ಚ ಸಹ್ಯಂ
ಕೈಲಾಸಮೇರುಶಿಖರೌ ವರಪುಣ್ಯನಾಮೌ ।
ಹೈಮಾಚಲಂ ಮುನಿಭಿರೀಡಿತದಿವ್ಯಧಾಮ
ಪ್ರಾತಃ ಸ್ಮರಾಮ ಪರಮಾನತಿಭಕ್ತಿಯುಕ್ತಾಃ ॥೭॥
ಪುಣ್ಯತಮ ಪರವತಗಳಾದ ಮೈನಾಕಪರ್ವತ, ಮಂದರಗಿರಿ, ಮಲಯಾಚಲ, ಶಿವನ ನಿವಾಸ ಕೈಲಾಸಾದ್ರಿ, ಮೇರುಪರ್ವತಶಿಖರ, ಮುನಿಗಳಿಂದ ಸ್ತುತವಾದ ದೇವತಾಸನ್ನಿಧಿಯುಳ್ಳ ಶ್ರೇಷ್ಠವಾದ ಹಿಮಾಲಯಪರ್ವತಶ್ರೇಣಿ—ಇವುಗಳನ್ನೆಲ್ಲ ಅತಿಶಯ ಭಕ್ತಿಯಿಂದ ಪ್ರಾತಃಕಾಲದಲ್ಲಿ ಸ್ಮರಿಸುತ್ತೇವೆ.
ವೇದಾನ್ ಷಡಙ್ಗಸಹಿತಾನುಪವೇದಶಾಸ್ತ್ರಾನ್
ಷಡ್ದರ್ಶನಾನಿ ಪರಮಾಃ ಪತಿಭಕ್ತಿಯುಕ್ತಾಃ ।
ಸಪ್ತರ್ಷಿಸಪ್ತಜಲಧೀ ದಶರೂಪಿವಿಷ್ಣುಂ
ಸ್ಮರ್ಯೇ ಪ್ರಭಾತಸಮಯೇಽನ್ಯಪವಿತ್ರರೂಪಾನ್ ॥೮॥
ಶಿಕ್ಷಾ, ವ್ಯಾಕರಣ, ಛಂದಸ್, ಜ್ಯೌತಿಷ, ನಿರುಕ್ತ, ಕಲ್ಪಗಳೆಂಬ ೬ ವೇದಾಂಗಗಳ ಸಹಿತವಾದ ಋಕ್-ಯಜುಸ್-ಸಾಮ-ಅಥರ್ವಗಳೆಂಬ ೪ ವೇದಗಳನ್ನೂ, ಆಯುರ್ವೇದ, ಧನುರ್ವೇದ, ಗಾಂಧರ್ವವೇದ ಹಾಗೂ ಸ್ಥಾಪತ್ಯವೇದ (ವಾಸ್ತು-ಶಿಲ್ಪವಿದ್ಯಾ)ಗಳೆಂಬ ಉಪವೇದಗಳನ್ನೂ, ಅಷ್ಟಾದಶ ಪುರಾಣಾದಿ ಸಮಸ್ತಶಾಸ್ತ್ರಗಳನ್ನೂ, ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವಮೀಮಾಂಸಾ ಮತ್ತು ಉತ್ತರಮೀಮಾಂಸಾ / ವೇದಾಂತಗಳೆಂಬ ೬ ದರ್ಶನಗಳನ್ನೂ, ಅನಸೂಯಾ-ಸೀತಾ-ಅಹಲ್ಯಾ-ದ್ರೌಪದೀ-ಸೀತಾ-ತಾರಾ-ಮಂಡೋದರೀ ಮುಂತಾದ ಪರಮಪತಿವ್ರತೆಯರನ್ನೂ, ಎಲ್ಲ ಮನ್ವಂತರಗಳ ಸಪ್ತರ್ಷಿಗಣವನ್ನೂ, ಸಪ್ತಸಾಗರವನ್ನೂ, ದಶಾವತಾರನೆಂದು ಪ್ರಸಿದ್ಧನಾದ ಅನಂತರೂಪನಾದ ಮಹಾವಿಷ್ಣುವನ್ನೂ ಆತನ ಅನಂತಾವತಾರಗಳನ್ನೂ, ಅಂತೆಯೇ ಪವಿತ್ರವಾದವುಗಳಿನ್ನೇನೇನಿವೆಯೋ ಅವೆಲ್ಲವನ್ನೂ ಸುಪ್ರಭಾತಕಾಲದಲ್ಲಿ ಭಕ್ತಿಯಿಂದ ಸ್ಮರಿಸುತ್ತೇನೆ.
೨೬. ವಿವಿಧದೇವತಾಸ್ತೋತ್ರಾಷ್ಟಕಮ್
(ವಸನ್ತತಿಲಕಾವೃತ್ತಮ್)
ವಿದ್ಯಾಂ ಚ ಸರ್ವಸುಖದಂ ಪರಮಾತ್ಮತತ್ತ್ವಂ |
ದತ್ತ್ವಾ ವಿಮೋಚ್ಯ ನಿಖಿಲಂ ದುರಿತಾಘವೃನ್ದಮ್ ||
ರಕ್ಷ ತ್ವಮೇತದಖಿಲಂ ವಿನಿಹತ್ಯ ವಿಘ್ನಂ |
ವಿಘ್ನೇಶ್ವರ! ಪ್ರಥಮವನ್ದಿತ! ವಂದಿತೋsಸಿ ||೧||
(ಪ್ರಥಮವನ್ದಿತ) ಹೇ ಆದಿಪೂಜಿತನೇ! (ವಿಘ್ನೇಶ್ವರ) ಸಕಲ ವಿಘ್ನಗಳಿಗೆ ಒಡೆಯನೂ, ವಿಘ್ನನಿವಾರಕನೂ ಆದ ದೇವನೇ! (ವನ್ದಿತಃ ಅಸಿ) ನೀನು ನಮ್ಮೆಲ್ಲರಿಂದ ವಂದಿಸಲ್ಪಟ್ಟವನೂ, ವಂದಿಸಲ್ಪಡುವವನೂ ಆಗಿದ್ದಿ. ಆದ್ದರಿಂದ,
(ಸರ್ವಸುಖದಂ) ಎಲ್ಲರೀತಿಯಿಂದ ಹಿತಕರವಾದ ಸುಖ-ಸಂತೋಷಗಳನ್ನು ನೀಡಬಲ್ಲ, (ವಿದ್ಯಾಂ ಚ) ಸದ್ವಿದ್ಯೆಯನ್ನು ಹಾಗೂ (ಪರಮಾತ್ಮತತ್ತ್ವಂ) ಬ್ರಹ್ಮಜ್ಞಾನವನ್ನು/ಆತ್ಮತತ್ತ್ವಜ್ಞಾನವನ್ನು (ದತ್ತ್ವಾ) ನೀಡಿ, (ನಿಖಿಲಂ ದುರಿತಾಘವೃನ್ದಮ್) ಎಲ್ಲವಿಧದ ಪಾಪಸಮೂಹವನ್ನು (ವಿಮೋಚ್ಯ) ನಿವಾರಿಸಿ, (ಏತದಖಿಲಂ) ನಮ್ಮ ಸರ್ವಕಾರ್ಯಾದಿಗಳಿಗೆ ಅಡ್ಡಿಪಡಿಸುವಂಥ ಎಲ್ಲಾ, (ವಿಘ್ನಂ ವಿನಿಹತ್ಯ) ವಿಘ್ನಗಳನ್ನು ನಿವಾರಿಸಿ, (ತ್ವಂ) ನೀನು ನಮ್ಮೆಲ್ಲರನ್ನು, (ರಕ್ಷ) ಕಾಪಾಡು ದೇವ!
ಈಶಂ ತ್ವಶೇಷಜನವನ್ದ್ಯಪರಂ ಪುರಾರಿಂ |
ಸರ್ಪಃ ಕೃತಃ ಸ್ವಕಟಿಬನ್ಧಗುಣಸ್ತು ಯೇನ ||
ಕಾಶೀಶ್ವರಂ ಪ್ರಮಥಸೇವಿತಭೂತನಾಥಂ |
ರುದ್ರಂ ಶಿವಂ ಗರಳಕಣ್ಠಮಹೇಶಮೀಡೇ ||೨||
(ಸರ್ಪಃ) ನಾಗರಹಾವು, (ಯೇನ ತು) ಯಾವನಿಂದಲಾದರೋ, (ಸ್ವಕಟಿಬನ್ಧಗುಣಃ) ತನ್ನ ಸೊಂಟಪಟ್ಟಿಯನ್ನಾಗಿ, (ಕೃತಃ) ಮಾಡಲ್ಪಟ್ಟಿದೆಯೋ, ಅಂತಹ, (ಅಶೇಷಜನವನ್ದ್ಯಪರಂ) ಸರ್ವ/ಎಲ್ಲ-ರಿಂದಲೂ ಸರ್ವದಾ/ಯಾವಾಗಲೂ ನಮಸ್ಕರಿಸಲ್ಪಡುತ್ತಿರುವ (ಅಶೇಷ=ನ ಶೇಷಮ್ ಅಸ್ತಿ, ಉಳಿಕೆಯಿಲ್ಲದ/ಬಾಕಿ ಇಲ್ಲದ), (ಪುರಾರಿಂ) ತ್ರಿಪುರಾಸುರರ ಸಂಹಾರಕನಾದ, (ಕಾಶೀಶ್ವರಂ) ಮೋಕ್ಷಪುರವಾದ ವಾರಾಣಸೀಕ್ಷೇತ್ರದ ಅಧಿಪತಿಯಾದ, (ಈಶಂ) ಎಲ್ಲಕ್ಕೂ ಒಡೆಯನಾದ, (ಪ್ರಮಥಸೇವಿತಭೂತನಾಥಂ)ವೀರಭದ್ರ, ಗಣಮಣಿಯೇ ಮೊದಲಾದ ಪ್ರಮಥ/ಶಿವ-ಗಣಗಳಿಂದ ಸೇವಿತನಾದ, ಸಕಲಭೂತಗಳ ಅಧಿಪತಿಯಾದ, (ರುದ್ರಂ) "ರುದಾನ್ ತ್ರಾಯತೇ ಇತಿ ರುದ್ರಃ"—ದುಃಖತಪ್ತರಾಗಿ ಅಳುತ್ತಿರುವವರ ದುಃಖವನ್ನು ನಿವಾರಿಸಿ ಕಾಯುವವನಾದ, (ಶಿವಂ) ಮಂಗಳಕರನಾದ, (ಗರಳಕಣ್ಠಮಹೇಶಮ್ ಈಡೇ) ವಿಷಕಂಠನೂ, ಅಖಿಲಾಂಡಕೋಟಿಬ್ರಹ್ಮಾಂಡನಾಯಕನಾದ ಪರಮಜ್ಞಾನಪ್ರದನಾದ ಸದಾಶಿವನನ್ನು ಸ್ತುತಿಸುತ್ತೇನೆ.
ಟಿಪ್ಪಣಿ—
ಆರೋಗ್ಯಂ ಭಾಸ್ಕರಾದಿಚ್ಛೇತ್ |
ಶ್ರಿಯಮಿಚ್ಛೇತ್ ಹುತಾಶನಾತ್ ||
ಜ್ಞಾನಂ ಮಹೇಶ್ವರಾದಿಚ್ಛೇತ್ |
ಮೋಕ್ಷಮಿಚ್ಛೇಜ್ಜನಾರ್ದನಾತ್ ||
ಸೂರ್ಯನಿಂದ ಆರೋಗ್ಯವನ್ನೂ, ಅಗ್ನಿಯಿಂದ ಸಂಪತ್ತನ್ನೂ, ಈಶ್ವರನಿಂದ ಸುಜ್ಞಾನವನ್ನೂ ಹಾಗೂ ವಿಷ್ಣುವಿನಿಂದ ಮೋಕ್ಷವನ್ನೂ ಬೇಡಿ ಪಡೆಯಬೇಕು.
ವನ್ದೇ ಶಿವಾಮಖಿಲವಿಶ್ವನಿಧಾನಭೂತಾಂ |
ತ್ರೈಲೋಕ್ಯಮಾತರಮಿಮಾಂ ಬಹುಧಾ ಸುಪೂಜ್ಯಾಮ್ ||
ಬ್ರಹ್ಮೇಶವಿಷ್ಣುಜನನೀಂ ಸುರರಾಕ್ಷಸೇಡ್ಯಾಂ |
ಗೌರೀರಮಾವಿಧಿಸತೀತ್ರಿಗುಣಾತ್ಮರೂಪಾಮ್ ||೩||
(ಅಖಿಲವಿಶ್ವನಿಧಾನಭೂತಾಂ) ಇಡಿಯ ಜಗತ್ತಿಗೆ ಮೂಲಕಾರಣಸ್ವರೂಪಳೂ, ಆಶ್ರಯಸ್ಥಾನವೂ ಆದ, (ತ್ರೈಲೋಕ್ಯಮಾತರಂ) ಮೂರೂ ಲೋಕಗಳ ಜನನಿಯಾದ, (ಬಹುಧಾ) ಅನೇಕ ಪ್ರಕಾರಗಳಿಂದ, ಬಹುವಿಧಗಳಿಂದ, (ಸುಪೂಜ್ಯಾಮ್) ಪೂಜಿಸಲ್ಪಡುವ, (ಬ್ರಹ್ಮೇಶವಿಷ್ಣುಜನನೀಂ) ತ್ರಿಮೂರ್ತಿಗಳ ತಾಯಿಯಾದ, (ಸುರರಾಕ್ಷಸೇಡ್ಯಾಂ) ದೇವತೆಗಳಿಂದಲೂ, ರಾಕ್ಷಸರಿಂದಲೂ ಸ್ತುತಿಸಲ್ಪಡುವ, (ಗೌರೀರಮಾವಿಧಿಸತೀತ್ರಿಗುಣಾತ್ಮರೂಪಾಮ್) ತಮೋಗುಣಾಧಿಕಾರಿಣಿಯಾದ ಗೌರಿ/ಪಾರ್ವತಿ, ರಜೋಗುಣಪ್ರಕಟಪಡಿಸುವ ಲಕ್ಷ್ಮೀ ಹಾಗೂ ಸತ್ತ್ವಗುಣಕ್ಕೆ ಅಧಿಕಾರಿಣಿಯಾದ ಬ್ರಹ್ಮನ ರಾಣಿ ಶಾರದೆ-ಈ ಮೂವರ ಮೂಲಸ್ವರೂಪಳಾದ, ತ್ರಿಗುಣಾತ್ಮಿಕೆಯಾದ, (ಇಮಾಂ ಶಿವಾಂ) ಈ ಆದಿಶಕ್ತಿರೂಪಿಣಿಯಾದ ಮಂಗಳಸ್ವರೂಪೆಯನ್ನು, (ವನ್ದೇ) ವಂದಿಸುತ್ತೇನೆ.
ವಿಷ್ಣುಂ ತು ಶೇಷಶಯನಂ ಗರುಡಾಧಿರೂಢಂ |
ಕೃಷ್ಣಂ ಸುದರ್ಶನಯುತಂ ಮುರವೈರಿಮೀಶಮ್ ||
ಸತ್ತ್ವಂ ಶುಭಂ ಗುಣನಿಧಿಂ ರಘುವಂಶಕೀರ್ತಿಂ |
ವನ್ದೇ ಹರಿಂ ಗಜಗತಿಂ ಕಲಿಪಾಪನಾಶಮ್ ||೪||
(ಶೇಷಶಯನಂ) ಆದಿಶೇಷನ ಮೇಲೆ ಪವಡಿಸಿದ, (ಗರುಡಾಧಿರೂಢಂ) ವಿನುತೆಯ ಮಗನಾದ ವೈನತೇಯನೆಂಬ ಗರುಡನ ಬೆನ್ನೇರಿ ಸಂಚರಿಸುವ, ಗರುಡವಾಹನನಾದ, (ಸುದರ್ಶನಯುತಂ) ಸುದರ್ಶನಚಕ್ರವನ್ನು ತನ್ನ ಕರದಲ್ಲಿನ ಆಯುಧವನ್ನಾಗಿ ಧರಿಸಿದ, (ಮುರವೈರಿಮ್) ಮುರಾಸುರನೆಂಬ ದುಷ್ಟರಕ್ಕಸನನ್ನು ಕೊಂದ, (ಸತ್ತ್ವಂ) ಸಾತ್ವಿಕಗುಣಭರಿತನಾದ, (ಗುಣನಿಧಿಂ) ಸದ್ಗುಣಪೂರ್ಣನಾದ, (ಶುಭಂ) ಸದಾ ಸರ್ವರಿಗೂ ಮಂಗಳಕರನಾದ, (ರಘುವಂಶಕೀರ್ತಿಂ) ರಘುಕುಲಭೂಷಣನೆನಿಸಿದ ಶ್ರೀರಾಮಾವತಾರಿಯಾದ, (ಕೃಷ್ಣಂ) ಪೂರ್ಣಾವತಾರಿಯೆನಿಸಿದ ವಾಸುದೇವನಾದ, (ಗಜಗತಿಂ) ಮೊಸಳೆ ಹಿಡಿದೆಳೆದಾಗ ಪ್ರಾಣಭಯದಲ್ಲಿ ಹರಿಯನ್ನು ಗೋಗರೆದು ಶರಣಾದ ಗಜೇಂದ್ರನಿಗೆ ಮೋಕ್ಷವನಿತ್ತ, (ಹರಿಂ) ಶ್ರೀಹರಿಸ್ವರೂಪನಾದ, (ತು ಕಲಿಪಾಪನಾಶಮ್) ಕೇವಲ ತನ್ನ ನಾಮಸ್ಮರಣೆಮಾತ್ರದಿಂದಲೇ ಕಲಿಯುಗದ ಪಾಪಗಳನ್ನು ತೊಳೆಯುವ, (ವಿಷ್ಣುಮೀಶಂ) "ವಿಷ್ಣುಃ ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ"—ಸಮಸ್ತ ಜಗತ್ತನ್ನು ವ್ಯಾಪಿಸಿ, ಅದನ್ನು ಸ್ವತಃ ಪ್ರವೇಶಿಸಿ, ಅದರೊಳಗಿರುವ ಮಹಾವಿಷ್ಣುಸ್ವರೂಪನೂ, ಜಗದೊಡೆಯನೂ ಆದವನನ್ನು, (ವಂದೇ) ವಂದಿಸುತ್ತೇನೆ.
ಬ್ರಹ್ಮನ್! ವಿಧೀಶ! ವರದಂ ಚತುರಾನನಾಖ್ಯಂ |
ಸೃಷ್ಟಿಂ ವಿರಚ್ಯ ಜಗತಾಂ ಹರಿನಾಭಿದೇಶಮ್ ||
ಪದ್ಮಾಸನಂ ನಿಗಮದಂ ನಿಖಿಲಂ ಪುರಾಣಂ |
ತ್ವಾಂ ಶಾರದಾಪ್ರಿಯವರಂ ನಿಜಲೋಕಮೀಡೇ ||೫||
(ಚತುರಾನನಾಖ್ಯಂ) ಚತುರ್ಮುಖಬ್ರಹ್ಮನೆಂಬ ಹೆಸರಿನ ಸೃಷ್ಟಿಕರ್ತನಾದ, (ಬ್ರಹ್ಮನ್) ಹೇ ಬ್ರಹ್ಮನೇ! (ವಿಧೀಶ) ವಿಧಿಬರಹದ ಲೇಖಕನೇ! ವಿಧಿ ನಿರ್ಣಯಕಾರನೇ! ವಿಧಾತನೇ! (ವರದಂ) ಬೇಡಿದವರಿಗೆ ಕೃಪಾಳುವಾಗಿ ವರವನ್ನು ನೀಡುವ, (ಸೃಷ್ಟಿಂ ವಿರಚ್ಯ ಜಗತಾಂ) ಈ ಪ್ರಪಂಚದ/ಬ್ರಹ್ಮಾಂಡದ ಸೃಷ್ಟಿಯನ್ನು ಮಾಡಿ, (ಹರಿನಾಭಿದೇಶಮ್ ಪದ್ಮಾಸನಂ) ಶ್ರೀಮನ್ನಾರಾಯಣನ ಹೊಕ್ಕುಳಲ್ಲಿರುವ ತಾವರೆಯಲ್ಲಿ ಪದ್ಮಾಸನನಾಗಿ ಆಸೀನನಾದ, (ನಿಖಿಲಂ ನಿಗಮದಂ ಪುರಾಣಂ) ಶ್ರೀಹರಿ ಹಾಗೂ ಆದಿಮಾಯೆಯನ್ನು ಕುರಿತು ತಪಗೈದು ಪಡೆದ ಸಕಲ ವೇದಪುರಾಣಾದಿಗಳನ್ನು ತನ್ನ ನಾಲ್ಕು ಮುಖ(ಬಾಯಿ)ಗಳಿಂದ ಲೋಕಮುಖಕ್ಕೆ ಪ್ರಪ್ರಥಮವಾಗಿ ಪ್ರಕಾಶಿಸಿ ಪಿತಾಮಹನೂ,ಪುರಾತನನೂ ಎಂದೆನಿಸಿದ, (ಶಾರದಾಪ್ರಿಯವರಂ) ವೀಣಾಪಾಣಿ-ಪನ್ನಗವೇಣಿ-ಕಲಕೀರವಾಣಿ-ಬ್ರಹ್ಮಾಣಿ(ಬ್ರಹ್ಮಸತಿ)ಯೂ ಬ್ರಾಹ್ಮಣಿ(ಬ್ರಹ್ಮಸುತೆ)ಯೂ ಆದ(ಏಕೆಂದರೆ ಎಲ್ಲರೂ ಬ್ರಹ್ಮಸೃಷ್ಟಿಯಾದುದರಿಂದ ಮನುಷ್ಯಲೋಕದೃಷ್ಟಿಯಿಂದ ಅವನಿಗೆ ಮಕ್ಕಳೇ ಆಗುತ್ತಾರೆ. ಆದರೆ “ನ ದೈವ ಚರಿತಂ ಚರೇತ್” ಎಂಬ ಪೂರ್ವೋಕ್ತಿಯಂತೆ ದೇವಲೋಕದವರ ನಡತೆಯನ್ನು ಅನುಸರಿಸತಕ್ಕದ್ದಲ್ಲ. ಮನುಷ್ಯಲೋಕದ ನಿಯಮಗಳು ದೇವಾದಿಗಳಿಗೆ ಅನ್ವಯಿಸುವುದಿಲ್ಲ.) ವಿದ್ಯಾಧಿದೇವತೆಯೆನಿಸಿದ ಸರಸ್ವತಿ/ಶಾರದೆಯ ಪ್ರಿಯರಮಣನಾದ, (ನಿಜಲೋಕಂ) ಸತ್ಯಲೋಕವಾಸಿಯಾದ (ತ್ವಾಂ ಈಡೇ) ನಿನ್ನನ್ನು ಸ್ತುತಿಸುತ್ತೇನೆ.
(ಉಪಜಾತಿವೃತ್ತಮ್)
ಷಾಣ್ಮಾತುರಂ ಶಿಖಿವಹಂ ಸುರಸೈನ್ಯಮುಖ್ಯಂ |
ರುದ್ರಾತ್ಮಜಂ ತನಯದಂ ಗಿರಿಜಾಪ್ರಸೂತಮ್ ||
ಶ್ರೀಕುಕ್ಕೆನಾಥಮರವಿನ್ದದಳಾಯತಾಕ್ಷಂ |
ವನ್ದೇ ಕುಮಾರಗಿರಿಸಾನುಪುರಾಧಿವಾಸಮ್ ||೬||
(ಷಾಣ್ಮಾತುರಂ) ಆರು ಮುಖಗಳಿಂದ ಆರು ಮಂದಿ ಕೃತ್ತಿಕಾದೇವಿಯರ ಸ್ತನ್ಯಪಾನಮಾಡಿ ಬೆಳೆದು ಆರು ತಾಯಂದಿರ ಶಿಶುವೆಂದು ಷಾಣ್ಮಾತುರನೆಂದೂ, ಆರು ಮೊಗದವನಾದ್ದರಿಂದ ಷಣ್ಮುಖನೆಂದೂ ಪ್ರಸಿದ್ಧನಾದ, (ಶಿಖಿವಹಂ) ನವಿಲನ್ನು ತನ್ನ ವಾಹನವಾಗಿ ಮಾಡಿಕೊಂಡ, (ಸುರಸೈನ್ಯಮುಖ್ಯಂ) ದೇವಸೈನ್ಯದ ಸೇನಾನಿಯಾಗಿ ಲೋಕಕಂಟಕನಾಗಿದ್ದ ತಾರಕಾಸುರನನ್ನು ಸಂಹರಿಸಿದ, (ರುದ್ರಾತ್ಮಜಂ) ಶಿವನ ನಂದನನಾದ, (ಗಿರಿಜಾಪ್ರಸೂತಮ್) ಪಾರ್ವತಿಯಲ್ಲಿ ಜನಿಸಿದ, (ತನಯದಂ) ತನ್ನ ಸೇವೆಗೈದು ಬೇಡಿದರೆ ಸಂತಾನವಾಗದವರಿಗೆ ಸತ್ಪುತ್ರಾದಿ ಸಂತತಿಯನ್ನು ದಯಪಾಲಿಸುವ, (ಕುಮಾರಗಿರಿಸಾನುಪುರಾಧಿವಾಸಮ್) ಕುಮಾರಪರ್ವತದ ಶ್ರೋಣಿ/ತಪ್ಪಲುಪ್ರದೇಶದಲ್ಲಿರುವ ಪ್ರಸಿದ್ಧವಾದ ಕುಮಾರಧಾರಾನದೀತೀರದ ಪುಣ್ಯತಮವಾದ ತೀರ್ಥಕ್ಷೇತ್ರದಲ್ಲಿ ನೆಲೆಸಿರುವ, (ಅರವಿನ್ದದಳಾಯತಾಕ್ಷಂ) ತಾವರೆಯ ಎಸಳಿನಂತಹ ಸುಂದರವಾದ, ಅಗಲವಾದ ನಯನಗಳಿಂದ ಕೂಡಿದ, (ಶ್ರೀಕುಕ್ಕೆನಾಥಂ) ಕುಕ್ಕೆಸುಬ್ರಮಣ್ಯಕ್ಷೇತ್ರಾಧಿಪತಿಯನ್ನು, (ವನ್ದೇ) ವಂದಿಸುತ್ತೇನೆ.
(ಶಿಖರಿಣೀವೃತ್ತಮ್)
ಹರಿಃ ಸ್ಮರ್ಯೋ ವೈದ್ಯೇ ಶಯನಸಮಯೇ ಮಾರುತಿವಿಭುಃ |
ಗುರುಃ ಸ್ತುತ್ಯೋ ಕಾವ್ಯೇ ಪ್ರಥಮಚರಣೇ ಶ್ರೀಗಣಪತಿಃ ||
ಪರಾ ನುತ್ಯಾ ಕಾಲೇ ಸತಿ ಸುಮಧುರೇ ಭೋಜನಪರೇ |
ಪತಿಶ್ಚಿನ್ತ್ಯೋ ರತ್ಯೌ ಸರಸಸಹಿತೇ ಶ್ರೀಯುತಹರಿಃ ||೭||
(ವೈದ್ಯೇ) ಅನಾರೋಗ್ಯದ ಚಿಕಿತ್ಸೆಗಾಗಿ ವೈದ್ಯರ ಭೇಟಿಮಾಡುವಾಗ/ ಔಷಧಿಮಾಡುವಾಗ, (ಹರಿಃ ಸ್ಮರ್ಯಃ) “ಶರೀರೇ ಜರ್ಝರೀಭೂತೇ ವ್ಯಾಧಿಗ್ರಸ್ತೇ ಕಲೇವರೇ | ಔಷಧೀ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿ: ||” “ಸಂಕಟ ಬಂದಾಗ ವೇಂಕಟರಮಣ” ಎಂಬಂತೆ ಶ್ರೀಹರಿಯನ್ನು ಸ್ಮರಿಸುತ್ತಿರಬೇಕು. (ಶಯನಸಮಯೇ) ಮಲಗುವ ಕಾಲದಲ್ಲಿ, (ಮಾರುತಿವಿಭುಃ) “ರಾಮಂ ಸ್ಕನ್ದಂ ಹನೂಮನ್ತಂ ವೈನತೇಯಂ ವೃಕೋದರಮ್ | ಶಯನೇ ಯಃ ಸ್ಮರೇನ್ನಿತ್ಯಂ ದುಃಸ್ವಪ್ನಂ ತಸ್ಯ ನಶ್ಯತಿ”, “ಆಞ್ಜನೇಯಂ ಮಹಾವೀರಂ ಕೋವಿದಂ ರಿಪುಭೈರವಮ್ | ವಾನರಾಧ್ಯಕ್ಷಸಂಸೇವ್ಯಂ ರಾಮದೂತಂ ಸ್ಮರಾಮ್ಯಹಮ್” ಎಂಬಂತೆ ಹನೂಮಂತನ ಸ್ಮರಣೆ ಮಾಡಿದರೆ ದುಃಸ್ವಪ್ನಗಳು ಕಾಡುವುದಿಲ್ಲ. (ಕಾವ್ಯೇ ಪ್ರಥಮಚರಣೇ) ಯಾವುದೇ ಗ್ರಂಥಾದಿಗಳ ರಚನೆಯ ಆರಂಭದಲ್ಲಿ, (ಶ್ರೀಗಣಪತಿಃ) ಸರ್ವವಿಘ್ನನಿವಾರಕನೂ,ಸರ್ವಕಾರ್ಯಾರ್ಥಸಾಧಕನೂ ಆದಿವಂದಿತನೂ ಆದ ಮಹಾಗಣಪತಿಯ ಹಾಗೂ (ಗುರುಃ ಸ್ತುತ್ಯಃ) “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” "ಮನಶ್ಚೇನ್ನ ಲಗ್ನಂ ಗುರೋರಙ್ಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್” ಎಂಬಂತೆ ಶ್ರೀಗುರುಚರಣಗಳ ಸ್ಮರಣೆ-ಸ್ತುತಿಗಳನ್ನು ಮಾಡಬೇಕು. (ಸುಮಧುರೇ ಭೋಜನಪರೇ ಕಾಲೇ ಸತಿ) ಮೃಷ್ಟಾನ್ನಭೋಜನವನ್ನು ಮಾಡುವ ಹೊತ್ತಿಗೆ, (ಪರಾ ನುತ್ಯಾ) ಪರಾಶಕ್ತಿಯಾದ, ಶಿವನಿಗೂ ಭಿಕ್ಷೆ ನೀಡಿದ ಅನ್ನಪೂರ್ಣೆಯನ್ನು ಸ್ತುತಿಸಬೇಕು. (ಸರಸಸಹಿತೇ ರತ್ಯೌ) ಸರಸದಿಂದ ಕೂಡಿದ ಮೈಥುನಕಾಲದಲ್ಲಿ, (ಪತಿಃ ಶ್ರೀಯುತಹರಿಃ ಚಿನ್ತ್ಯಃ) ತನ್ನ ಗಂಡನನ್ನು ಸಾಕ್ಷಾತ್ ಶ್ರೀಹರಿಸ್ವರೂಪನೆಂದು ಭಾವಿಸಬೇಕು.
(ಶಾರ್ದೂಲವಿಕ್ರೀಡಿತವೃತ್ತಮ್)
ವನ್ದೇ ಹಸ್ತಿಮುಖಂ ಗುರುಂ ಸರಸಿಜಂ ವನ್ದೇ ಜಗತ್ಪಾಲಕಂ |
ವನ್ದೇ ಪನ್ನಗಭೂಷಣಂ ಗಿರಿಸುತಾಂ ವನ್ದೇ ರಮಾಂ ಶಾರದಾಮ್ ||
ವನ್ದೇ ಪನ್ನಗರೂಪಿಣಂ ಸುರಮುನಿಂ ವ್ಯಾಸಂ ಶುಕಂ ಶಙ್ಕರಂ |
ವನ್ದೇ ಯೋಗಿಭಿರನ್ತರಾತ್ಮಕುಹರೇ ಧ್ಯಾತಂ ಪರಂ ನಿರ್ಗುಣಮ್ ||೮||
(ಹಸ್ತಿಮುಖಂ) ಕರಿವದನನಾದ ಶ್ರೀಗಣೇಶನನ್ನು ಹಾಗೂ (ಗುರುಂ) ತ್ರಿಮೂರ್ತಿಸ್ವರೂಪನಾದ ದತ್ತಾತ್ರೇಯಾದಿ ಗುರುಪರಂಪರೆಯನ್ನು (ವನ್ದೇ) ವಂದಿಸುತ್ತೇನೆ. (ಸರಸಿಜಂ) ಪದುಮಸಂಭವನಾದ ಸೃಷ್ಟೀಶನೂ,ವಿಧೀಶನೂ ಆದ ಚತುರಾನನಬ್ರಹ್ಮನನ್ನೂ, (ಜಗತ್ಪಾಲಕಂ) ತ್ರೈಲೋಕನಾಥನೂ,ಸ್ಥಿತಿಕರ್ತನೂ ಆದ ಹರಿಯನ್ನೂ, (ವನ್ದೇ) ವಂದಿಸುತ್ತೇನೆ. (ಪನ್ನಗಭೂಷಣಂ) ನಾಗಾಭರಣನಾದ, ಲಯಕರ್ತೃವಾದ ಪರಶಿವನನ್ನೂ (ಗಿರಿಸುತಾಂ) ಅವನ ಅರ್ಧಾಂಗಿನಿಯಾದ ಗಿರಿಜೆಯನ್ನೂ (ವನ್ದೇ) ನಮಿಸುತ್ತೇನೆ. (ರಮಾಂ) ಶ್ರೀಹರಿವಲ್ಲಭೆಯೂ, ಸರ್ವಸಂಪತ್ತಿಗೆ ಅಧಿದೇವತೆಯೂ ಆದ ಮಹಾಲಕ್ಷ್ಮಿಯನ್ನೂ (ಶಾರದಾಮ್) ಶರತ್ಕಾಲದ ಪೂರ್ಣಚಂದ್ರನ ಬೆಳದಿಂಗಳಂತಹ ವರ್ಣಯುತಳೂ, ವಿದ್ಯಾಧಿದೇವತೆಯೂ ಬ್ರಹ್ಮಾಣಿಯೂ ಆದ ಸರಸ್ವತಿಯನ್ನೂ (ವನ್ದೇ) ವಂದಿಸುತ್ತೇನೆ. (ಪನ್ನಗರೂಪಿಣಂ) ಸರ್ಪಾಕಾರದಲ್ಲಿ ಪೂಜಿತನಾದ, ಚರ್ಮಮಾನಸಿಕಾಧಿವ್ಯಾಧಿಗಳ ಪರಿಹಾರಕನೂ,ಸಂತಾನಪ್ರದನೂ,ಜಲಮೂಲದಾತೃವೂ ಆದ ಸುಬ್ರಹ್ಮಣ್ಯನನ್ನೂ, (ಸುರಮುನಿಂ) ಸದಾ ನಾರಾಯಣಮಂತ್ರಜಪಕರೂ, ತ್ರಿಲೋಕಸಂಚಾರಿಗಳೂ,ದೇವರ್ಷಿಗಳೂ, ಮೋಕ್ಷದಾಯಕರೂ(ನಾರಾಃ- ಮೋಕ್ಷ , ದ- ದದಾತಿ,ಕೊಡುತ್ತಾರೆ) ಆದ ನಾರದಮುನಿಗಳನ್ನೂ,
(ವ್ಯಾಸಂ) ಕಲಿಯುಗದ ಜನರು ಅಲ್ಪಮೇಧಾವಿಗಳೆಂದು, ಅವರ ಅನುಕೂಲಕ್ಕಾಗಿ, ಅನಂತವಾಗಿ, ಓತಪ್ರೋತವಾಗಿದ್ದ ವೇದರಾಶಿಯನ್ನು ಕ್ರಮಬದ್ಧವಾಗಿ ನಾಲ್ಕು ವೇದಗಳಾಗಿ ವಿಭಾಗಿಸಿದ, ವೇದಾಂತವನ್ನು/ವೇದಸಾರವನ್ನು ಬ್ರಹ್ಮಸೂತ್ರರೂಪದಲ್ಲಿ ನಿರ್ವಚಿಸಿದ, ಮತ್ತೂ ಅರ್ಥವಾಗದವರಿಗೆ “ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ | ಬಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರಹರೇದಿತಿ” ಎಂಬಂತೆ ವೇದವು ಅಲ್ಪಜ್ಞರ ಅಪಾರ್ಥಗಳಿಗೆ ಹೆದರಿ, ರಾಮಾಯಣ-ಮಹಾಭಾರತದಂತಹ ಇತಿಹಾಸಗಳು ಹಾಗೂ “ಮ-ದ್ವಯಂ ಭ-ದ್ವಯಂ ಚೈವ ಬ್ರ-ತ್ರಯಂ ವ-ಚತುಷ್ಟಯಮ್ | ಅ-ನಾ-ಪ-ಲಿಙ್-ಗ-ಕೂ-ಸ್ಕಾ-ನಿ ಪುರಾಣಾನಿ ಪ್ರಚಕ್ಷತೇ” ಎಂಬಂತೆ ಮತ್ಸ್ಯ-ಮಾರ್ಕಣ್ಡೇಯ, ಭವಿಷ್ಯ-ವಿಷ್ಣು/ದೇವೀಭಾಗವತ, ಬ್ರಹ್ಮ-ಬ್ರಹ್ಮವೈವರ್ತ-ಬ್ರಹ್ಮಾಣ್ಡ, ವರಾಹ-ವಾಮನ-ವಾಯು-ವಿಷ್ಣು, ಅಗ್ನಿ-ನಾರದ-ಪದ್ಮ-ಲಿಙ್ಗ-ಗರುಡ-ಕೂರ್ಮ-ಸ್ಕನ್ದಪುರಾಣಗಳೆಂಬ ಅಷ್ಟಾದಶ ಮಹಾಪುರಾಣಗಳು ಹಾಗೂ ಗಣೇಶ-ಪರಾಶರ-ಕಲ್ಕಿ-ಶಿವ-ಶಿವಧರ್ಮ-ಸನತ್ಕುಮಾರ-ನಾರಸಿಂಹ-ಆದಿ-ವಾಸಿಷ್ಠ-ಕಾಪಿಲ-ಮಾನವ-ಔಷನಸ-ವಾರುಣ-ಕಾಲಿಕಾ-ಸಾಮ್ಬ-ಸೌರ-ಮಾರೀಚ-ಭಾರ್ಗವಪುರಾಣಗಳೆಂಬ ೧೮ ಉಪಪುರಾಣಗಳ ಮೂಲಕ ವೇದಾರ್ಥವನ್ನರಿಯಬೇಕೆಂಬುದಾಗಿ, ಅಂತಹವುಗಳನ್ನು ಸರಳವಾಗಿ ವಿರಚಿಸಿ, ಕಥಾರೂಪದಲ್ಲಿ ವೇದತತ್ವವನ್ನು ನಿಹಿತಗೊಳಿಸಿದ, “ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ | ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ||” ಎಂಬಂತೆ ಸಾಕ್ಷಾತ್ ಮಹಾವಿಷ್ಣುವಿನ ಅವತಾರಿಯಾದ, ಭಗವಾನ್ ಕೃಷ್ಣದ್ವೈಪಾಯನ ಬಾದರಾಯಣ ವೇದವ್ಯಾಸರನ್ನೂ,
(ಶುಕಂ) ವ್ಯಾಸಪುತ್ರರೂ, ರುದ್ರಾಂಶರೂ, ಅರಣಿಮಥನ-ಘೃತಾಚೀ ಅಪ್ಸರಾಪ್ರೇರಣಾ ಸಂಭವರೂ, ನಿತ್ಯಮುಕ್ತರೂ, ಪರಮಭಾಗವತರೂ, ವಿರಕ್ತರೂ, ಭಾಗವತಪುರಾಣವನ್ನು ಪರೀಕ್ಷಿತಮಹಾರಾಜನಿಗೆ ಮೊತ್ತಮೊದಲಿಗೆ ಉಪದೇಶಿಸಿ, ಮೋಕ್ಷಪಥಪ್ರದರೂ ಆದ ಶುಕಮಹಾಮುನಿಗಳನ್ನೂ,
(ಶಙ್ಕರಂ) ಅದ್ವೈತಸಿದ್ಧಾಂತಪ್ರತಿಷ್ಠಾಪನಾಚಾರ್ಯರೂ, ಶಿವಸ್ವರೂಪರೂ, ಗೋವಿಂದಭಗವತ್ಪಾದರ ಶಿಷ್ಯರೂ, ಅಸಂಖ್ಯದೇವ-ದೇವೀ-ಗುರು-ವೇದಾಂತಪರ ಸ್ತೋತ್ರಗಳು, ಪ್ರಕರಣಗ್ರಂಥಗಳು, ಪ್ರಸ್ಥಾನತ್ರಯಭಾಷ್ಯಗಳು ಮತ್ತಿತರ ಹಲವಾರು ಸಂಸ್ಕೃತಕೃತಿಗಳನ್ನು ರಚಿಸಿ, ಸೂರ್ಯಗಣಪತ್ಯಂಬಿಕಾಶಿವವಿಷ್ಣು-ಎಂಬ ಪಂಚಬ್ರಹ್ಮರ ಪಂಚಾಯತನ ಪೂಜಾಪದ್ಧತಿಯ ಮೂಲಕ ಸೈದ್ಧಾಂತಿಕ ಭೇದಭಾವ, ವಿದ್ವೇಷಗಳನ್ನು ತೊಡೆದುಹಾಕಿದವರೂ, ನಾಲ್ಕು ವೇದಗಳ ಸಂರಕ್ಷಣೆಗೆ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದವರೂ ಆದ ಪೂಜ್ಯ ಆದಿಶಂಕರಭಗವತ್ಪಾದರನ್ನೂ (ವನ್ದೇ) ನಮಿಸುತ್ತೇನೆ. (ಯೋಗಿಭಿರನ್ತರಾತ್ಮಕುಹರೇ ಧ್ಯಾತಂ) ಯೋಗಿಗಳಿಂದ ತಮ್ಮೊಳಗೆ ಧ್ಯಾನದಲ್ಲಿ ಕಂಡುಕೊಳ್ಳಲ್ಪಡುವ, (ಪರಂ ನಿರ್ಗುಣಮ್) ಶ್ರೇಷ್ಠವಾದ ನಿರ್ಗುಣ, ನಿರಾಕಾರಪರಬ್ರಹ್ಮವನ್ನು (ವನ್ದೇ) ವಂದಿಸುತ್ತೇನೆ.
(ಅನುಷ್ಟುಪ್ ಛನ್ದಃ)
ವಿವಿಧದೇವಪಾರಮ್ಯಂ | ಅಷ್ಟಕಂ ದುಃಖನಾಶನಮ್ ||
ಸರ್ವವಾಞ್ಛಿತಸಿದ್ಧ್ಯರ್ಥಂ | ಪಠೇನ್ನಿತ್ಯಂ ಸುಭಕ್ತಿತಃ ||೯||
(ದುಃಖನಾಶನಂ ವಿವಿಧದೇವಪಾರಮ್ಯಂ ಅಷ್ಟಕಂ) ಸರ್ವದುಃಖಾಪಹಾರಿಯಾದ, ಈ ವಿವಿಧದೇವಾನುದೇವತೆಗಳ ಮಹಿಮೆಯನ್ನು ವರ್ಣಿಸುವ ಅಷ್ಟಕವನ್ನು (ಸರ್ವವಾಞ್ಛಿತಸಿದ್ಧ್ಯರ್ಥಂ) ಸಕಲ ಇಷ್ಟಾರ್ಥಗಳ ಪ್ರಾಪ್ತಿಗಾಗಿ (ನಿತ್ಯಂ ಸುಭಕ್ತಿತಃ) ಪ್ರತಿದಿನವೂ ಒಳ್ಳೆಯ ಶ್ರದ್ಧಾಭಕ್ತಿಗಳಿಂದ (ಪಠೇತ್) ಓದಬೇಕು, ಪಠಣ ಮಾಡಬೇಕು.
ಧರ್ಮಾರ್ಥಕಾಮಮೋಕ್ಷಾಖ್ಯಂ | ಚತುರ್ವಿಧಫಲಪ್ರದಮ್ ||
ಪ್ರಭಾತೇ ಚ ಪಠೇತ್ಯಃ ಸಃ | ಸರ್ವವೇದಾರ್ಥವಿದ್ಭವೇತ್ ||೧೦||
ಇದರಿಂದ ಪ್ರಸನ್ನರಾಗಿ (ಧರ್ಮಾರ್ಥಕಾಮಮೋಕ್ಷಾಖ್ಯಂ) ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ (ಚತುರ್ವಿಧಫಲಪ್ರದಮ್) ನಾಲ್ಕುವಿಧವಾದ ಪುರುಷಾರ್ಥಗಳನ್ನು ಈ ಸ್ತೋತ್ರಪ್ರತಿಪಾದ್ಯದೇವತೆಗಳು ಪಾಠಕನಿಗೆ ದಯಪಾಲಿಸುತ್ತಾರೆ. (ಚ ಪ್ರಭಾತೇ ಯಃ ಪಠೇತ್ ಸಃ) ಹಾಗೆಯೇ, ಪ್ರಾತ:ಕಾಲದಲ್ಲಿ ಶುದ್ಧಮನಸ್ಸಿನಿಂದ ಯಾರು ಇದನ್ನು ನಿತ್ಯವೂ ಓದುತ್ತಾನೋ, ಅವನು (ಸರ್ವವೇದಾರ್ಥವಿದ್ಭವೇತ್) ಸಕಲವೇದಸಾರವನ್ನು ಬಲ್ಲ ಸುಜ್ಞಾನಿಯಾಗುವುದರಲ್ಲಿ ಸಂಶಯವಿಲ್ಲ.
Comments
Post a Comment