ಸ್ತೋತ್ರಸಂಹಿತಾ ೫.೧ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

 ಖಕುನ್ತಲಃ ಖಗಾರೂಢಃ ಖಗೇನ್ದ್ರಧ್ವಜಸ್ಯನ್ದನಃ |

ಖದ್ಯೋತಃ ಖಣ್ಡಪರಶುಃ ಖಣ್ಡೀ ಖರಣಸಃ ಖರಾ || ೧೩೩ || (೮೭೯)


ಖಕುಂತಲ ಹರಿ ವಾಸುದೇವನೆ

ಖಕುಂತಲನು ವ್ಯೋಮಕೇಶನು

ಮುಕುಂದನೆ ಗಗನವ್ಯಾಪಿ ಕೇಶವಿರುವವನೆ |

ವಿಕುಂಠನೆ ಗುಂಗುರಿನ ಕೇಶನೆ

ಪ್ರಕಾಶನೆ ಕೇಶವನೆ ಕೃಷ್ಣನೆ

ಸುಕೇಶನೆ ಮಾಧವನೆ ಗೀತಾಚಾರ್ಯ ಗೋವಿಂದ || ೮೭೨ ||


ಖಗಾರೂಢನೆ ಗರುಡವಾಹನ

ಖಗವು ಗಗನದಿ ಗಮಿಪ ವಿಹಗವು

ಗಗನದಲಿ ಖಗವೇರಿ ಗಮಿಸುವ ವಾಸುದೇವ ಹರಿ |

ಬಗೆಬಗೆಯಲವತಾರ ತಾಳಿದ

ಮಗುವಾಗಿ ದೇವಕಿಗೆ ಕೃಷ್ಣನು

ನಗುಮೊಗದಿ ಸಕಲರನು ಕೈವಶಮಾಡಿದನು ಕೃಷ್ಣ || ೮೭೩ ||


ಖಗೇಂದ್ರಧ್ವಜಸ್ಯಂದನನೆ ಹರಿ

ಖಗೇಂದ್ರನು ತಾ ಗರುಡನವನನು

ಭಗವಂತ ತಾನೇರಿ ರಥಕೆ ಧ್ವಜವಮಾಡಿಹನು |

ಖಗವಾಹನನೆ ಗರುಡನೇ ಧ್ವಜ

ಮಗನು ಮನ್ಮಥ ಲೋಕಮಾಯೆಯು

ನಗಧರನೆ ಜಗದೊಡೆಯ ಪರಬ್ರಹ್ಮಾತ್ಮ ಶ್ರೀಕೃಷ್ಣ || ೮೭೪ ||


ಖದ್ಯೋತನೆ ಶ್ರೀಕೃಷ್ಣದೇವನೆ

ಖದ್ಯುತಿಯೆ ಬಾನುವನು ಬೆಳಗುವ

ವಿದ್ಯೆಗಧಿಪತಿ ಜ್ಞಾನಸೂರ್ಯನೆ ಗಗನಸೂರ್ಯ ಹರಿ |

ಸದ್ಯ ಮುಕ್ತಿಪ್ರದನೆ ಕೃಷ್ಣನೆ

ಪದ್ಯಪ್ರೀಯನೆ ಗದ್ಯಪ್ರಿಯ ಹರಿ-

-ಯಾದ್ಯ ಪೂಜಿತ ಪರಬ್ರಹ್ಮವೆ ರಕ್ಷಿಸನವರತ || ೮೭೫ ||


ಖಂಡಪರಶುವೆ ಪರಶುರಾಮನೆ

ಖಂಡಿಸಿದೆ ನೀ ದುಷ್ಟ ರಾಜರ

ದಂಡಿಸಿದೆ ಚಂಡಾಡಿರುವೆ ಭಾರ್ಗವನೆ ಶ್ರೀಹರಿಯೆ |

ಖಂಡ ಕೊಡಲಿಯ ತುಂಡ ಪಿಡಿಯುತ

ಭಂಡ ಕ್ಷತ್ರಿಯರನ್ನು ದಂಡಿಸಿ

ಚಂಡವಿಕ್ರಮಿಯೆನಿಸಿದಾವೇಶಾವತಾರಿ ವಿಭೋ || ೮೭೬ ||


ಖಂಡೀ ಹರಿ ಪರಬ್ರಹ್ಮವೆ

ಖಂಡದಂತೆಯೆ ತೋರಿಕೊಂಡೆಯ

ಹಿಂಡು ಸೃಷ್ಟಿಯ ತೆರದಿ ಕೃಷ್ಣನಖಂಡ ಪರಬೊಮ್ಮ |

ಖಂಡ ತುಂಡೆರಡಾದೆ ಪುಂಸ್ತ್ರೀ

ಖಂಡವಾತ್ಮದ ಮಿಥುನದಂತೆಯೆ

ಖಂಡಿಯೆನಿಸಿದೆ ಸೃಷ್ಟಿಮೂಲನೆ ದೇವ ಪರಮಾತ್ಮ || ೮೭೭ ||


ಖರಣಸನೆ ಹರಿ ವಾಸುದೇವನೆ

ಖರವು ಹರಿತವು ಚೂಪು ನಾಸವು

ಹರಿತ ತುದಿಯಿಹ ಮೂಗಿರುವ ಹರಿ ದೇವ ಶ್ರೀಕೃಷ್ಣ |

ಸರಿಯು ನಿನಗಿಹರಾರು ಸುಂದರ

ಹರಿಯೆ ಕೃಷ್ಣನೆ ಸತ್ಯ ಶಿವದನೆ

ಚರಿತೆ ಪಾವನ ಕೀರ್ತಿಪೆವು ಪರಬೊಮ್ಮ ಕಾಪಾಡು || ೮೭೮ ||


ಖರಾಕಾಶವ ಪಿಡಿವ ಕರ, ಹರಿ

ಖರಾ ಗಗನವನಳೆದ ಪದ ಹರಿ

ಮುರಾಸುರಹರ ಮುರಾರಿಯೆ ಕೈವಲ್ಯಪದವೀಯೋ |

ನರಾಧಮರನು ಶಿಕ್ಷಿಸುವ ಕರ

ನರೋತ್ತಮರನು ರಕ್ಷಿಸುವ ಹರಿ

ಪರಾತ್ಪರ ಪರಮಾರ್ಥತತ್ತ್ವವೆ ಸರ್ವರೊಳಗಿಹನೆ || ೮೭೯ ||


ಖರ್ಪರಹಾರಮಿತ್ರಞ್ಚ ಖಲಸಙ್ಕುಲಮರ್ದನಃ |

ವಿಪ್ರೋ ವಿಗ್ರಶ್ಚ ಧೀರಶ್ಚ ವೇನೋऽಧ್ವರೋ ಮಖಸ್ಸ್ವಧಾ || ೧೩೪ || (೮೮೮)


ಖರ್ಪರಹಾರಮಿತ್ರ ಕೃಷ್ಣನೆ

ಖರ್ಪರವು ಮನುಜರ ಕಪಾಲವು

ಖರ್ಪರಹಾರ ರುಂಡಮಾಲಾಧಾರಿ ಶ್ರೀರುದ್ರ |

ಖರ್ಪರಹಾರಸಖನೆ ಕೃಷ್ಣನೆ

ಸರ್ಪಧರ ಹರಮಿತ್ರ ಕೃಷ್ಣನೆ

ಶೂರ್ಪಕರ್ಣನ ಪಿತನ ಸಖ ಹರಿ ರಕ್ಷಿಸನವರತ || ೮೮೦ ||


ಖಲಸಂಕುಲಮರ್ದನನೆ ಹರಿ

ಖಳರ ದುಷ್ಟರ ಗಣವ ಶಿಕ್ಷಿಸಿ

ಬಲವನಿತ್ತನು ಸಜ್ಜನರ ಗಡಣಕ್ಕೆ ಶ್ರೀಕೃಷ್ಣ |

ಹಲವು ರಕ್ಕಸರನ್ನು ಕೊಲ್ಲುತ

ಛಲದ ಮಲ್ಲರ ದರ್ಪವಡಗಿಸು-

-ತೊಲವ ತೋರಿದ ಸತ್ಯಭಕ್ತರ ಕಡೆಗೆ ತಾ ಸತತ || ೮೮೧ ||


ವಿಪ್ರ ವೇದದ ರಕ್ಷಕನೆ ಹರಿ

ವಿಪ್ರಬಂಧುವೆ ವಿಪ್ರಪೂಜಿತ

ಸುಪ್ರಸಾದವ ನೀಡು ಜೀವನ್ಮುಕ್ತಿದನೆ ಕೃಷ್ಣ |

ವಿಪ್ರಪ್ರೀಯನೆ ಸುಪ್ರಕಾಶನೆ

ಸುಪ್ರತಾಪನೆ ಕುಪ್ರಹಾರನೆ

ವಿಪ್ರರನು ಪೂಜಿಪನೆ ವಿಪ್ರಾತ್ಮನೆ ಪರಬ್ರಹ್ಮ || ೮೮೨ ||


ವಿಗ್ರ ವಿಷ್ಣು ವಿಶಿಷ್ಟನಾಸನೆ-

-ಯುಗ್ರನೇ ತಾ ದುಷ್ಟಪಾಲಿಗೆ-

-ಯಗ್ರಭಾಗದ ನಾಸಿಕವು ಸುಂದರ ಮೂಗಿನಾ ತುದಿಯು |

ಸಾಗ್ರಭುಕ್, ಮೊದಲುಣ್ಣುವವನೇ

ಶೀಘ್ರಫಲದಾಯಕನೆ ಕೃಷ್ಣನೆ

ವ್ಯಗ್ರನಾಗದೆಯಗ್ರಪೂಜೆಯ ಗೈಯೊ ಕೃಷ್ಣನಿಗೆ || ೮೮೩ ||


ಧೀರ ವೀರನೆ ವಾಸುದೇವನೆ

ಚೋರ ಕೃಷ್ಣನೆ ಬೆಣ್ಣೆ ಕದ್ದನೆ

ನಾರಿಯರ ಸೀರೆಯನು ಸೆಳೆದನೆ ಚಾರುಮುಖ ಕೃಷ್ಣ |

ಮಾರಪಿತ ಕಮಲಾಕ್ಷ ಶ್ರೀಪತಿ

ಕಾರುಣಿಕ ಪರಮಾತ್ಮ ಶ್ರೀಹರಿ

ಪಾರುಗಾಣಿಸೊ ಕೃಷ್ಣ ಭವಸಾಗರದ ಸೆಳವಿಂದ || ೮೮೪ ||


ವೇನ ಯಜ್ಞನೆ ಪ್ರಜಾಪತಿ ಹರಿ

ವೇನ ಸತ್ಯದ ಕಾಮವಿರುವವ

ವೇನ ಮೇಧಾವಿಯೆ ಮಹಾತ್ಮನೆ ದೇವ ಶ್ರೀಕೃಷ್ಣ |

ಸಾನುರಾಗದಿ ನುತಿಪ ಭಕುತರ

ನೀನು ಸಲಹುವೆ ಪ್ರೇಮದಿಂದಲಿ

ನಾನುಭಾವವ ತೊಲಗಿಸುತ ಪರಬ್ರಹ್ಮಭಾವ ಕೊಡು || ೮೮೫ ||


ಅಧ್ವರನೆ ಸನ್ಮಾರ್ಗದಾಯಕ-

-ನಧ್ವ ಪಥ ಸತ್ಪಥಕೆ ಪ್ರೇರಕ-

-ನಧ್ವರನು ಯಜ್ಞದ ಸ್ವರೂಪಿಯು ವಿಷ್ಣು ಶ್ರೀಕೃಷ್ಣ |

ಮಧ್ವ ಪೂಜಿತ ಶುದ್ಧಸತ್ತ್ವನೆ

ವಿಧ್ವಂಸಕರ ಕೊಂದು ಸುಜನರ

ವಿದ್ವಾಂಸರನು ರಕ್ಷಿಸುತ ಸದ್ಧರ್ಮ ಸ್ಥಾಪಿಸಿದ || ೮೮೬ ||


ಮಖನೆ ಯಾಗನೆ ಯಜ್ಞರೂಪನೆ

ಮಖಿಸುವರು ಧಾವಿಸುವರೀ ಕಡೆ

ಮಖಕೆ ದೇವಾದಿಗಳು ಕರೆಯಲು ಹವಿಯನೀಯಲು ತಾ |

ಸುಖಸ್ವರೂಪನೆ ಸಚ್ಚಿದಾತ್ಮಕ-

-ಮುಖನೆ ಗೋವ್ಗಳ ಕಾದ ಕೃಷ್ಣನೆ

ಸಖನೆ ಪಾರ್ಥಗೆ ಗುರುವೆ ಲೋಕಕೆ ಸರ್ವರೊಳಗಿಹನೆ || ೮೮೭ ||


ಸ್ವಧಾರೂಪನೆ ವಾಸುದೇವನೆ

ಸುಧಾರಕ ಸೃಷ್ಟಿಯನು ಧರಿಸಿಹ

ವಿಧಾಯಕ ಸ್ಥಿತಿಗೀಶ್ವರನೆ ಪಿತೃಹವ್ಯವಾಹನನೆ |

ವಧೆಗೆ ಕಾರಕ ಲಯಕು ಕಾರಣ

ಪದುಮನಾಭನೆ ರುಕ್ಮಿಣೀಶನೆ

ಸುಧೆಯನಿತ್ತನೆ ದೇವತೆಗಳಿಗೆ ಮೋಹಿನೀರೂಪಿ || ೮೮೮ ||


ವಿದುರಾತಿಥ್ಯಸ್ವೀಕರ್ತಾऽಕ್ರೂರವರದಮೂರ್ತಿಮಾನ್ |

ಸುಭದ್ರಾಪೂರ್ವಜಾತಶ್ಚ ಭೀಷ್ಮನಿರ್ವಾಣಕಾರಣಃ || ೧೩೫ || (೮೯೨)


ವಿದುರಾತಿಥ್ಯಸ್ವೀಕರ್ತ ಹರಿ

ವಿದುರ ದಾಸೀಪುತ್ರನಾದರೂ

ಪದುಮನಾಭನು ತನ್ನ ಭಕ್ತನ ಪ್ರೇಮಕಡಿಯಾಳು |

ಸದಮಲನು ಯಮನಂಶರೂಪನು

ವಿದುರ ಸುಜ್ಞಾನಿಯು ಸುಭಕ್ತನು

ಪದವಿ ನೋಡದೆ ಕೌರವೇಶನ ಕಡೆಗೆ ಪೋಗದಲೆ || ೮೮೯ ||


ಅಕ್ರೂರವರದಮೂರ್ತಿಮಾನ್ ಹರಿ-

-ಯಕ್ರೂರ ತಾ ಕಂಸಸಚಿವನು

ವಿಕ್ರಮದ ಹಬ್ಬಕ್ಕೆ ಕರೆದೊಯ್ಯಲು ಮಹಾತ್ಮರನು |

ಚಕ್ರಪಾಣಿಯು ಹಲಧರನ ಜೊತೆ

ಪ್ರಕ್ರಮಿಸಿದನು ಮಥುರೆಯೆಡೆಗಹೊ

ಸುಕ್ರಮದಿಯಕ್ರೂರಗೊಲಿದನು ಕೃಷ್ಣ ಭಕ್ತನಿಗೆ || ೮೯೦ ||


ಸುಭದ್ರಾಪೂರ್ವಜಾತ ಕೃಷ್ಣನೆ

ಸುಭದ್ರೆಗು ಮೊದಲವತರಿಸಿದನೆ

ಸುಭದ್ರೆಯನರ್ಜುನಗೆ ಕೊಟ್ಟನು ಪ್ರೇಮಪೂರಣಕೆ |

ಸುಭದ್ರೆಯು ಮಂಗಲೆಯು ಸುಂದರಿ

ಸುಭದ್ರೆಯ ಕೌರವಗೆ ಬಲ ತಾ

ಸುಭದ್ರಿಸಯೋಚಿಸಲು ಕೃಷ್ಣನು ನರಹರಣಕಿತ್ತ || ೮೯೧ ||


ಭೀಷ್ಮನಿರ್ವಾಣಕಾರಣನೆ ಹರಿ

ಭೀಷ್ಮನಿಗೆ ಹರಿಭಕ್ತನಿಗೆ ತಾ

ಭೀಷ್ಮನಂತ್ಯದಿ ಮುಕ್ತಿ ನೀಡಿದ ದೇವ ಶ್ರೀಕೃಷ್ಣ |

ಭೀಷ್ಮಸ್ತವರಾಜದಲಿ ಪೊಗಳಲು

ಭೀಷ್ಮ ವಿಷ್ಣುಸಹಸ್ರನಾಮದಿ

ಭೀಷ್ಮನಿಗೆ ವೈಕುಂಠ ಕಡೆಗಿತ್ತನು ಮಹಾವಿಷ್ಣು || ೮೯೨ ||


ಪಾಣ್ಡವಪ್ರಾಣಮಿತ್ರಞ್ಚ ಕೌರವಕುಲಮರ್ದ್ದನಃ |

ಪಾರ್ಥಸಾರಥಿರೂಪೀ ಚ ತೀರ್ಥಪಾದ್ವೇದಪಾರಗಃ || ೧೩೬ || (೮೯೭)


ಪಾಂಡವಪ್ರಾಣಮಿತ್ರ ಕೃಷ್ಣನೆ

ಪಾಂಡವರ ಪ್ರಾಣದಾ ಗೆಳೆಯನೆ

ಪಾಂಡವರು ಪಂಚಪ್ರಾಣವೆಂದವ ದೇವ ಶ್ರೀಕೃಷ್ಣ |

ಪಾಂಡುಪುತ್ರರು ಪಾಂಡವರು ತಾ

ಪುಂಡರೀಕಾಕ್ಷನ್ನೆ ನೆನೆವರು

ಭಂಡ ದುಷ್ಟರ ತರಿದು ಧರ್ಮ ಸ್ಥಾಪಿಸಿದ ಕೃಷ್ಣ || ೮೯೩ ||


ಕೌರವಕುಲಮರ್ದ್ದನನೆ ಹರಿ

ಕೌರವರ ಕುಲವನ್ನೆ ಮಡುಹಿದ

ಕೌರವರ ನೂರ್ಮಂದಿಗಳ ಯಮಪುರಿಗೆ ಕಳುಹಿದನೆ |

ಚಾರುವದನನೆ ಮಾರಪಿತ ಹರಿ

ಘೋರದೈತ್ಯರ ರಣದಿ ಕೊಂದನೆ

ಮೂರುಮೂರ್ತಿಗಳೊಳಗಿಹನೆ ಶ್ರೀಕೃಷ್ಣ ಪರಬೊಮ್ಮ || ೮೯೪ ||


ಪಾರ್ಥಸಾರಥಿರೂಪಿ ಕೃಷ್ಣನೆ

ಸ್ವಾರ್ಥಿ ಕೌರವರನ್ನು ಕೊಂದನೆ

ಪಾರ್ಥಿವಾಗ್ರಣಿಯಾಗಿ ಧರ್ಮಜನನ್ನು ಗೈದವನೆ |

ಮೂರ್ತಿವೆತ್ತಿಹ ಧರ್ಮರೂಪನೆ

ಶರ್ತರಹಿತದ ಭಕ್ತಿಗೊಲಿವನೆ

ವ್ಯರ್ಥ ಬದುಕಿಗೆ ಸಾರ್ಥಕತೆ ಬೋಧಿಸಿದ ಶ್ರೀಕೃಷ್ಣ || ೮೯೫ ||


ತೀರ್ಥಪಾತ್ ಹರಿ ವಾಸುದೇವನೆ

ತೀರ್ಥ ಪುಟ್ಟಿತು ನಿನ್ನ ಪಾದದಿ

ತೀರ್ಥವದು ಜಾಹ್ನವಿಯು ಲೋಕಕೆ ಸರ್ವಶ್ರೇಷ್ಠವದು |

ಸಾರ್ಥಕದ ಬದುಕಿಂಗೆ ಗೀತೆಯ

ಪಾರ್ಥವ್ಯಾಜದಿ ಜಗಕೆ ಬೋಧಿಸಿ

ತೀರ್ಥವನು ವಿಧಿ ಹರರು ಧರಿಸುತ ನಿನ್ನ ಪೂಜಿಪರು || ೮೯೬ ||


ವೇದಪಾರಗ ವಾಸುದೇವನೆ

ವೇದಮೂರ್ತಿಯೆ ವೇದರೂಪಿಯೆ

ಪಾದಕೊಂದಿಪೆ ಕೃಷ್ಣ ದೇವಕಿತನಯ ಗೋವಿಂದ |

ಮೋದಬೋಧನೆ ಶುದ್ಧಸತ್ತ್ವನೆ

ಸಾಧಕರಿಗೀಯುವಿ ಸುಪಥವನು

ಮಾಧವನೆ ಮಧುಸೂದನನೆ ಕೇಶವನೆ ರಕ್ಷಿಸು ನೀ || ೮೯೭ ||


ವೇದಸಾರೋ ನಿರಾಧಾರ ಆಧಾರೋ ಭವತಾರಕಃ |

ರುಕ್ಮಿಣೀಚಿತ್ತಹಾರೀ ಚ ವ್ರಜಾರಣ್ಯವಿಹಾರಭೂಃ || ೧೩೭ || (೯೦೩)


ವೇದಸಾರನೆ ವಾಸುದೇವನೆ

ವೇದಗಳ ಸಾರಾತ್ಮಕನೆ ಹರಿ

ವೇದವೇದ್ಯನೆ ವೇದ-ವೇದಾಂತಗನೆ ಶ್ರೀಕೃಷ್ಣ |

ವೇದೋಪನಿಷತ್ ಪ್ರತಿಪಾದ್ಯ ರಂಗನೆ

ಪಾದಕೊಂದಿಪೆ ಸುಜನರಕ್ಷಕ

ಭೇದ ಕಳೆ ಬೋಧವನು ನೀಡುತ ಬಾಧೆಗಳ ಕಳೆಯೋ || ೮೯೮ ||


ನಿರಾಧಾರನೆ ದೇವ ಕೃಷ್ಣನೆ

ನಿರಾಧಾರನಾಧಾರರಹಿತನೆ

ಪರಾತ್ಪರ ಸರ್ವಾಧಾರ ಶ್ರೀಕೃಷ್ಣ ಪರಬೊಮ್ಮ |

ಹರಿಯೆ ರುದ್ರನೆ ವಿಧಿಯೆ ಶಕ್ತಿಯೆ

ಗುರುವೆ ನೀನಾಧಾರ ಸರ್ವಕೆ

ಪರನೆ ನಿನಗಾರಿಲ್ಲವಾಧಾರವು ಪರಬ್ರಹ್ಮ || ೮೯೯ ||


ಆಧಾರನೆ ಶ್ರೀಕೃಷ್ಣದೇವನೆ-

-ಯಾಧಾರನೆ ನೀ ಸಕಲ ಸೃಷ್ಟಿಗೆ-

-ಯಾಧರಿಸಿರುವೆ ಸರ್ವಲೋಕಗಳನ್ನು ಸಂತತವು |

ಭೇದ ತೋರದೆ ಪಾದರೂಪದಿ

ಸಾದರದಿ ನೀನಖಿಲಲೋಕವ

ಸಾಧುವಂದಿತನಾಧರಿಸಿ ಕಾಯುತಿಹೆ ಶ್ರೀಕೃಷ್ಣ || ೯೦೦ ||


ಭವತಾರಕ ಭವವ ಕಳೆವನೆ

ಭವವ ಸಂಸಾರದ ವಿವರ್ತವ

ಜವದಿ ಕಳೆಯುವೆ ನಿನ್ನ ನಿಜಭಕ್ತರಲಿ ಶ್ರೀಕೃಷ್ಣ |

ನವತೆ ತುಂಬುವೆ ಜಾಡ್ಯ ಕಳೆಯುವೆ

ಶವತೆ ಕಳೆಯುತ ಜನ್ಮಮರಣವ

ಭವದ ಸಾಗರ ತರಣ ಮಾಡುವ ಕೃಷ್ಣನಂಬಿಗನು || ೯೦೧ ||


ರುಕ್ಮಿಣೀಚಿತ್ತಹಾರಿ ಕೃಷ್ಣನೆ

ರುಕ್ಮಿಣಿಯ ಮನವನ್ನು ಗೆದ್ದನೆ

ರುಕ್ಮಿಣೀಪತಿಯಾದೆ ಲಕ್ಷ್ಮಿಯೆ ರುಕ್ಮಿಣೀದೇವಿ |

ರುಕ್ಮವರ್ಣೆಯ ಚಿನ್ನಬಣ್ಣದ

ರುಕ್ಮಿಣಿಯ ಭೀಷ್ಮಕನ ಕುವರಿಯ

ರುಕ್ಮನನುಜೆಯನಪಹರಿಸಿ ಶಿಶುಪಾಲನರಿಯಾದೆ || ೯೦೨ ||


ವ್ರಜಾರಣ್ಯವಿಹಾರಭೂ ಹರಿ

ವ್ರಜ ಸಮೂಹವು ಗೋಪಿಗೋಪರ

ವ್ರಜಸಮೂಹದಿ ಯುಮುನೆತೀರದಿ ವಿಹರಿಸಿದ ಕೃಷ್ಣ | 

ಪ್ರಜಾರಕ್ಷಕ ವ್ರಜಾರಂಜಕ

ವಿಜಯಸಾರಥಿ ಕೌರವಾಂತಕ

ವ್ರಜಧರಣಿಯೊಳು ಪರಿವ್ರಾಜಕನಾದ ಶ್ರೀಕೃಷ್ಣ || ೯೦೩ ||


ಪರಮಾನನ್ದರೂಪಶ್ಚ ಮಹಾಮ್ಭೋಧಿನಿವಾಸಕಃ |

ದಿವಿಜಪೋ ರುದ್ರಪೂಜ್ಯಶ್ಚ ಧೀರೈರ್ಧ್ಯೇಯೋ ವಿಧೇಃಪರಃ || ೧೩೮ || (೯೦೯)


ಪರಮಾನನ್ದರೂಪ ಕೃಷ್ಣನೆ

ಪರಮ ಶ್ರೇಷ್ಠವು ಚರಮನಂತವು

ಗುರುತಮದ ಪರತತ್ತ್ವ ಕೃಷ್ಣನೆ ಸಚ್ಚಿದಾನಂದ |

ಶರಣಗಾಶ್ರಯ ಪರಮಮಂಗಲ

ಕರುಣವಾರಿಧಿ ವಾಸುದೇವನೆ

ವಿರಮಿಸದಲೆ ಭಜಿಸುವೆನು ಕೃಷ್ಣನೆ ನಿರುತ ಭಕುತಿ ಕೊಡು || ೯೦೪ ||


ಮಹಾಂಭೋಧಿನಿವಾಸಕನೆ ಹರಿ

ಮಹಾ ಪಾಲ್ಗಡಲೊಳು ನಿವಾಸಿಪ

ಮಹಾನಾರಾಯಣನೆ ಶೇಷನ ಮೇಲೆ ಶಯನಿಪನೆ |

ಸಹಾಯನೆ ವರ ಲಕುಮಿದೇವಿಗೆ

ಗುಹಾಲಯ ಪರಮಾತ್ಮನಾತ್ಮನೆ

ಮಹಾತ್ಮನೆ ಪರಬೊಮ್ಮ ಕೃಷ್ಣನೆ ಕ್ಷೀರಸಾಗರಗ || ೯೦೫ ||


ದಿವಿಜಪನೆ ಪರಮಾತ್ಮ ಕೃಷ್ಣನೆ

ದಿವಿಜಸುರರಧಿಪತಿಯೆ ವಿಷ್ಣುವೆ

ಕವಿಯೆ ಸರ್ವಜ್ಞನೆ ಪರಾತ್ಪರತತ್ತ್ವ ಪರಬೊಮ್ಮ |

ಸವಿವೆ ತವಪದಭಜನೆಸುಖವನು

ನವನವೀನದ ನಿಖಲರೂಪನೆ

ಭವವ ಕಳೆ ನಿಜಮುಕುತಿದೋರೈ ವಾಸುದೇವ ಹರಿ || ೯೦೬ ||


ರುದ್ರಪೂಜ್ಯನೆ ವಾಸುದೇವನೆ

ರುದ್ರನೊಳಗಿನ ಶಕ್ತಿ ತತ್ತ್ವವೆ

ಭದ್ರ ಮಂಗಲವೀಯೊ ಕೃಷ್ಣನೆ ಕ್ಷುದ್ರತೆಯ ಕಳೆದು |

ರುದ್ರಸಖ ಪುರುಷೋತ್ತಮನೆ ಹರಿ

ನಿದ್ರೆ ಗೆದ್ದನ ಸಾರಥಿಯೆ ಹರಿ

ವಿದ್ರವಿಸು ಜಗಜಂಜಡವ ಕಳೆದಿಕ್ಕಿ ಮೈದೋರು || ೯೦೭ ||


ಧೀರೈರ್ಧ್ಯೇಯ ವಾಸುದೇವನೆ

ಧೀರಹೃದಯದಿ ಧ್ಯಾನಗಮ್ಯನೆ

ಧೀ-ರಮಣ ಕಮಲಾಕ್ಷ ಭೀಮನ ಪ್ರಾಣ ಶ್ರೀಕೃಷ್ಣ |

ನಾರಸಿಂಹನೆ ಪಾರಮೇಶ್ವರ

ಕ್ರೂರಿಗಳ ಯಮ ಭೂರಿವಿಕ್ರಮ

ಚಾರುರೂಪನೆ ಸಾರ್ವಭೌಮನೆ ದೇವ ಶ್ರೀಕೃಷ್ಣ || ೯೦೮ ||


ವಿಧೇಃಪರ ಹರಿ ವಾಸುದೇವನೆ

ವಿಧಿಯ ಪಿತನಜಜನಕ ವಿಷ್ಣುವೆ

ಪದುಮನಾಭನೆ ಕೃಷ್ಣ ನಾರಾಯಣನೆ ಶ್ರೀಪತಿಯೆ |

ಸದಮಲಾತ್ಮಕ ವಿದುರಬಂಧುವೆ

ಮದನಪಿತ ಪರಮೇಷ್ಠಿಜನಕನೆ

ಪದಕೆರಗುವೆನು ಶುದ್ಧಸುಜ್ಞಾನವನನುಗ್ರಹಿಸು || ೯೦೯ ||


ಮಹಾವಾಕ್ಯೈಸ್ಸುವಿಜ್ಞೇಯೋ ಹಾರ್ದಭಾವಸ್ತುತಿಪ್ರಿಯಃ |

ಮನಃಪ್ರಮಾಣದುರ್ಗಮ್ಯೋ ಮಹಾಮಾಯಾಸುಜಾಲಧೃತ್ || ೧೩೯ || (೯೧೩)


ಮಹಾವಾಕ್ಯೈಸ್ಸುವಿಜ್ಞೇಯನೆ

ಮಹಾವಾಕ್ಯಗಳಿಂದ ತಿಳಿವನೆ

ಮಹಾವಾಕ್ಯಗಳಿಹುದು ವೇದಾಂತೋಪನಿಷದಿನಲಿ |

ಮಹಾತ್ಮನೆ ತತ್ತ್ವಮಸಿ ನೀನೇ

ಮಹಾವಿಷ್ಣುವಹಂ ಬ್ರಹ್ಮಾಸ್ಮಿ

ಮಹಾನಾರಾಯಣನೆ ಪ್ರಜ್ಞಾನಂ ಬ್ರಹ್ಮ ಕೃಷ್ಣ || ೯೧೦ ||


ಹಾರ್ದಭಾವಸ್ತುತಿಪ್ರಿಯ ಹರಿ

ಹಾರ್ದ ಹೃದಯದ ಭಕ್ತಿಭಾವದ

ಹಾರ್ದಿಕದ ಸ್ತುತಿ ಪೊಗಳಿಕೆಗೆ ತಾನೊಲಿವ ಶ್ರೀಕೃಷ್ಣ |

ಹಾರ್ದಪ್ರೇಮಕೆ ವಶನು ಕೃಷ್ಣನು

ಹಾರ್ದಭಕ್ತಿಗೆ ಬರುವ ಶ್ರೀಹರಿ

ಹಾರ್ದಪೂಜಾದಿಗಳಿಗೊಲಿಯುವ ಕೃಷ್ಣ ಪರಮಾತ್ಮ || ೯೧೧ ||


ಮನಃಪ್ರಮಾಣದುರ್ಗಮ್ಯ ಹರಿ

ಮನದ ಕಲ್ಪನೆಗಿವನು ಸಿಗ ಹರಿ

ಮನವು ಮಾತುಗಳನ್ನು ಮೀರಿಹ ಕೃಷ್ಣ ಪರತತ್ತ್ವ |

ಮನಸಿಜನ ಪಿತ ಕನಸಿಗಿವ ಪಿತ

ನನಸಿಗಿವ ಪಿತ ಮನುಜರಿಗೆ ಹಿತ

ಸನುಮತಿಯ ನಮಗಿತ್ತು ಸಲಹೈ ವಾಸುದೇವ ವಿಭೋ || ೯೧೨ ||


ಮಹಾಮಾಯಾಸುಜಾಲಧೃತ್

ಮಹಾಮಾಯೆಯ ಜಾಲ ಹೆಣೆದನೆ

ಮಹಾಸೃಷ್ಟಿಯ ಸೂತ್ರಧಾರನೆ ಕೃಷ್ಣ ಪರಮಾತ್ಮ |

ಮಹಾಮಾಯಾವಿಯು ಮಹಾತ್ಮನು

ಮಹಾಮತಿಯುತ ಲೋಕನಾಟಕ

ಮಹಾಮಹಿಮನವಿದ್ಯೆ ಕಳೆದೀಯಯ್ಯ ಸುಜ್ಞಾನ || ೯೧೩ ||


ವನಮಾಲೀ ಸುಭಾಲೋ ಮಲಹಾರೀ ಗೋಪಬಾಲಕಃ |

ಕಲಾತೀತೋ ಯಜ್ಞಭೋಕ್ತಾ ಯಜ್ಞೇಶ್ವರಸ್ವರೂಪದೃಕ್ || ೧೪೦ || (೯೨೦)


ವನಮಾಲೀ ವಾಸುದೇವನೆ

ವನಸುಮದ ಹಾರವನು ಧರಿಸಿಹ

ಮನವ ತಣಿಸುವ ಮೋಹನಾಂಗನೆ ರುಕ್ಮಿಣೀಪತಿಯೆ |

ತನುಮನಗಳಿಂ ಭಜಿಪೆ ನಿನ್ನನು

ಜನುಮಮರಣವ ಕಳೆವ ಜ್ಞಾನವದ-

-ನುಚಣವು ಮನದಲ್ಲಿ ಸ್ಥಿರವಾಗಿರಲು ಕರುಣಿಪುದು || ೯೧೪ ||


ಸುಭಾಲನೆ ಶ್ರೀಕೃಷ್ಣದೇವನೆ

ಸುಭಾಲನೆ ಸುಂದರಲಲಾಟನೆ

ಶುಭಾಶಯ ಕೋರಯ್ಯ ಲೋಕಕೆ ವಾಸುದೇವ ಹರಿ |

ಸಭಾಹಿತ ಕಾಯಯ್ಯ ಲೋಕದಿ

ವಿಭಾವರಿಯಜ್ಞಾನ ಕಳೆಯುತ

ನಭವೆ ನಾಭಿಯು ಕೃಷ್ಣ ಸುಂದರ ಹಣೆಯ ತಿಲಕಯುತ || ೯೧೫ ||


ಮಲಹಾರೀ ಕೊಳೆಯ ಕಳೆವನೆ

ಕಲಿಮಲವ ಕಳೆವಂಥ ಕೃಷ್ಣನೆ

ಸುಲಲಿತದಿ ದುಷ್ಟರನು ಸಂಹರಿಸುತ್ತ ಭಕ್ತಗೊಲಿ |

ಫಲವನೀಯುವ ಬಲವು ನಿನ್ನದೆ

ಛಲವನೀಯುವ ಬಲವು ನಿನ್ನದೆ

ಗೆಲುವನೀಯುವ ಕೃಷ್ಣ ವಸುದೇವಾತ್ಮಜನೆ ಹರಿಯೆ || ೯೧೬ ||


ಗೋಪಬಾಲಕ ವಾಸುದೇವನೆ

ಗೋಪ ನಂದನ ಸಾಕುಮಗ ಹರಿ

ಗೋಪ ವಸುದೇವನೊಳು ಜನಿಸಿದ ದೇವಕೀಸುತನೆ |

ತಾಪ ಮೂರನು ಕಳೆವ ದೇವನೆ

ಶಾಪಪಾಪಗಳನ್ನು ತರಿವನೆ

ಕೋಪ ಕಳೆ ಪ್ರೇಮವನು ನಿನ್ನೊಳು ನಿತ್ಯ ಕರುಣಿಸೆಯ || ೯೧೭ ||


ಕಲಾತೀತನೆ ಕಲೆರಹಿತ ಹರಿ

ಕುಲಾತೀತನೆ ಬಲವನೀವನೆ

ಕಲೆಯದಂಶವು ನೀನಖಂಡನು ಖಂಡರಹಿತ ಹರಿ |

ಬಲೆಯ ಹೆಣೆದಿಹೆ ಮೋಹಮಾಯೆಯ

ತಲೆಯ ತಿರುಗಿಸೊ ಗರ್ವಮತ್ಸರ

ಕಳೆಯೊ ಪರಬೊಮ್ಮಾತ್ಮ ಸರ್ವಾಂತರನೆ ಶ್ರೀಕೃಷ್ಣ || ೯೧೮ ||


ಯಜ್ಞಭೋಕ್ತಾ ವಾಸುದೇವನೆ

ಯಜ್ಞದಲಿ ಹವಿಯನ್ನು ಭುಂಜಿಪ

ಯಜ್ಞರೂಪನೆ ಸುಜ್ಞ ವಿಜ್ಞನೆ ಜ್ಞಾನದಾತಾರ |

ಪ್ರಜ್ಞೆಯಾಕೃತಿ ಯಜ್ಞಫಲದನೆ

ಸುಜ್ಞ ಕುಜ್ಞನೆ ನಿನ್ನದಾಜ್ಞೆಯು

ಯಜ್ಞಭಾವವ ಸರ್ವಕರ್ಮದಿ ನೀಡು ಶ್ರೀಕೃಷ್ಣ || ೯೧೯ ||


ಯಜ್ಞೇಶ್ವರಸ್ವರೂಪದೃಕ್ ಹರಿ

ಯಜ್ಞದೊಡೆಯನ ರೂಪ ದೃಷ್ಟಿಯು

ಯಜ್ಞನಾಯಕ ಫಲವನೀಯುವ ಯಜ್ಞಪತಿ ಕೃಷ್ಣ |

ಯಜ್ಞ ನೀ ಹವಿ ಹೋತೃ ಯಾಜಕ

ಯಜ್ಞ ಋತ್ವಿಜ ಹವ್ಯವಾಹನ

ಯಜ್ಞಕುಂಡವು ಯಜ್ಞಪಾತ್ರೆಯು ಯಜ್ಞವೇ ವಿಷ್ಣು || ೯೨೦ ||



ಸರ್ವತೀರ್ಥಾತ್ಮಕಸ್ಸರ್ವಗ್ರಹರೂಪೀ ದಯಾನಿಧಿಃ |

ಯೋಗಾರೂಢೋ ಬಾಣಹನ್ತಾ ವೇಣುನಾದಸುಚಾತುರಃ || ೧೪೧ || (೯೨೬)


ಸರ್ವತೀರ್ಥಾತ್ಮಕನೆ ಕೃಷ್ಣನೆ

ಸರ್ವತೀರ್ಥಗಳಾತ್ಮರೂಪನೆ

ಸರ್ವತೀರ್ಥವು ನೀನೆ ನಿನ್ನಿಂದಾದುವೆಲ್ಲ ಹರೇ |

ಸರ್ವ ಪುಣ್ಯದ ನದಿಗಳೆಲ್ಲವು

ಸರ್ವ ಸಾಗರ ತೊರೆಗಳೆಲ್ಲವು

ಸರ್ವ ಜಲದೊರತೆಗಳು ವರುಣಾತ್ಮಕನೆ ನೀ ಕೃಷ್ಣ || ೯೨೧ ||


ಸರ್ವಗ್ರಹರೂಪಿಯೆ ಪರಾತ್ಪರ

ಸರ್ವ ಗ್ರಹಗಳ ರೂಪಿ ನೀ ಹರಿ

ಸರ್ವ ಸೂರ್ಯಾದ್ಯಖಿಲ ತಾರಾಕಾಯಗಳು ಕೃಷ್ಣ |

ಶರ್ವರೂಪನೆ ಸರ್ವರೂಪನೆ

ಪರ್ವರೂಪನೆ ಖರ್ವರೂಪನೆ

ಗುರ್ವಮೋಘನೆ ಸರ್ವಲೋಕಕೆ ಗೀತೆಯಾಚಾರ್ಯ || ೯೨೨ ||


ದಯಾನಿಧಿ ಹರಿ ವಾಸುದೇವನೆ

ದಯಾಸಾಗರ ಕರುಣೆಯಂಬುಧಿ

ದಯಾಪ್ರೇರಕ ದಾನಧರ್ಮಪ್ರೇರಕನೆ ಕೃಷ್ಣ |

ಭಯನಿವಾರಕ ಪಾಪಹಾರಕ

ನಯವಿಧಾಯಕ ನೀತಿಬೋಧಕ

ಜಯಪ್ರದಾಯಕ ಸತ್ಯದರ್ಶಕ ದೇವ ಶ್ರೀಕೃಷ್ಣ || ೯೨೩ ||


ಯೋಗಾರೂಢನೆ ವಾಸುದೇವನೆ

ಯೋಗಬೋಧಕ ತ್ಯಾಗಪ್ರೇರಕ

ಯಾಗಕಾರಕ ಕೃಷ್ಣ ಯೋಗೇಶ್ವರ ಪರಬ್ರಹ್ಮ |

ಯೋಗ ದುಃಖವಿಯೋಗಕಾರಕ

ಯೋಗ ಕರ್ಮದಿ ಕೌಶಲವು ತಾ

ಯೋಗ ಭಕ್ತಿಜ್ಞಾನಕರ್ಮಧ್ಯಾನವೈರಾಗ್ಯ || ೯೨೪ ||


ಬಾಣಹಂತಾ ವಾಸುದೇವನೆ

ಬಾಣನೆಂಬಸುರನನು ಕೊಂದಿಹೆ

ಬಾಣಸುತೆಯುಷೆಯನ್ನು ನೀನನಿರುದ್ಧಗರ್ಪಿಸಿಹೆ |

ಕಾಣದಾತ್ಮನು ಕೋಣದಾತ್ಮನು

ಬಾಣನಾತ್ಮನು ಸರ್ವಸಾರನು

ಜಾಣ ರಾಧಾರಮಣ ಗೋವಿಂದಾಚ್ಯುತನೆ ಕೃಷ್ಣ || ೯೨೫ ||


ವೇಣುನಾದಸುಚಾತುರನೆ ಹರಿ

ವೇಣು ಕೊಳಲಿನ ಗಾನ ಕೋವಿದ

ಜಾಣನುಡುಪಿಲಿ ನಿಂದ ಕಡೆಗೋಲ್ಹಸ್ತ ಶ್ರೀಕೃಷ್ಣ |

ಗೋಣ ಮುರಿದನು ದುಷ್ಟ ದನುಜರ

ಕಾಣದಾದನು ದ್ವಾಪರಾಂತ್ಯದಿ

ಕಾಣು ಹೃದಯದಿ ಸರ್ವಲೋಕದಿ ದೇವ ಶ್ರೀಹರಿಯ || ೯೨೬ ||


ಜಯೀ ಸತ್ಯವಚಾಸ್ಸತ್ಯಸಙ್ಕಲ್ಪೋऽಕ್ರೂರಪೂಜಿತಃ |

ಸತ್ಯಭಾಮಾರತೋ ಮಾಯೀ ಕೃಷ್ಣಾऽऽರ್ತಿಪರಿಹಾರಕಃ || ೧೪೨ || (೯೩೩)


ಜಯೀ ಜಯಶಾಲಿ ನೀ ಕೃಷ್ಣನೆ

ಜಯವು ನಿನಗಿಹುದೆಲ್ಲ ಕಾಲದಿ

ಜಯಿಷ್ಣುವು ಪ್ರಭವಿಷ್ಣು ಜಿಷ್ಣುವು ವಿಷ್ಣು ಶ್ರೀಕೃಷ್ಣ |

ಜಯದಭಾವವದೆಂದಿಗಿಲ್ಲವು

ಜಯದ ಪಕ್ಷವು ಸತ್ಯಧರ್ಮದ

ಜಯವು ನಿನ್ನದೆ ಜಯಿಯು ನೀನೇ ಕೃಷ್ಣ ಶ್ರೀಕೃಷ್ಣ || ೯೨೭ ||


ಸತ್ಯವಚನೆ ಹರಿ ವಾಸುದೇವನೆ

ಸತ್ಯಸಂಕಲ್ಪನೆ ಮಹಾತ್ಮನೆ

ಸತ್ಯರೂಪನೆ ನಿತ್ಯರೂಪನೆ ಸತ್ಸ್ವರೂಪ ಹರಿ |

ಸತ್ಯವಚನವು ಕೃಷ್ಣ ನಿನ್ನದು

ಸತ್ಯರಕ್ಷಣೆ ನಿನ್ನ ಗುರಿಯದು

ಸತ್ಯಜಾತನೆ ಸತ್ಯಮೂರುತಿ ಸತ್ಯಯೋನಿ ಹರಿ || ೯೨೮ ||


ಸತ್ಯಸಂಕಲ್ಪನೆ ಮಹಾತ್ಮನೆ

ಸತ್ಯವನೆ ಕಲ್ಪಿಸುವೆ ನಡೆಸುವೆ

ಸತ್ಯನಾರಾಯಣನೆ ಕೃಷ್ಣನೆ ಸತ್ಯಚಿಂತಕನೆ |

ಸತ್ಯದಿಂದಲೆ ಜಗವ ಸೃಜಿಸಿದೆ

ಸತ್ಯದಲೆ ಪಾಲಿಸುವೆ ಸೃಷ್ಟಿಯ

ಸತ್ಯಕಾಗಿಯೆ ಜಗವ ಸಂಹರಿಸುವಿಯೊ ಶ್ರೀಕೃಷ್ಣ || ೯೨೯ ||


ಅಕ್ರೂರಪೂಜಿತ ವಾಸುದೇವನೆ-

-ಯಕ್ರೂರನಿಂ ಪೂಜಿತನೆ ಕೃಷ್ಣನೆ-

ಯಕ್ರಮವ ಕಳೆದಿಕ್ಕಿ ಧರ್ಮವ ಸ್ಥಾಪಿಸಿದೆ ಹರಿಯೆ |

ವಿಕ್ರಮನೆ ಮೂರ್ಲೋಕವಳೆದನೆ

ಶಕ್ರವಂದಿತ ನಕ್ರಹರ ಹರಿ

ವಕ್ರ ಕಳೆ ಸಕ್ರಮವ ಸ್ತಾಪಿಸಿ ಶಾಂತಿ ನೀಡಯ್ಯ || ೯೩೦ ||


ಸತ್ಯಭಾಮಾರತನೆ ಕೃಷ್ಣನೆ

ಸತ್ಯಭಾಮೆಯ ಪ್ರೇಮಿ ಶ್ರೀಹರಿ

ಸತ್ಯವನೆ ಭಾಮೆಯೊಲು ಹೊಂದಿದೆ ವಾಸುದೇವ ಹರೇ |

ಮಿಥ್ಯ ಮಾಯಾಜಾಲ ಹೆಣೆದಿಹೆ

ಸತ್ಯ ಪರಬೊಮ್ಮವನು ಮುಚ್ಚಿಹೆ

ಸತ್ಯದಲಿ ನರಕಾಂತಕನೆ ಸುರತರು ಧರೆಗೆ ತಂದಿರುವೆ || ೯೩೧ ||


ಮಾಯೀ ಮಾಯದಿ ಲೋಕ ಸೃಜಿಸಿದೆ

ಮಾಯೆಯೊಳು ಪರಸತ್ಯ ಮುಚ್ಚಿದೆ

ಮಾಯೆ ನಿನ್ನದೆ ಮಾಯಿ ನೀನೇ ವಾಸುದೇವ ಹರಿ |

ಮಾಯೆ ಲೋಕವು ನೀನೆ ಸತ್ಯವು

ತೋಯಜಾಂಬಕ ಭಕ್ತಿಜ್ಞಾನವ

ಕಾಯವಿರುವನಕೀಯೊ ಜೀವನ್ಮುಕ್ತಿ ಸ್ಥಿರಪಡಿಸು || ೯೩೨ ||


ಕೃಷ್ಣಾರ್ತಿಪರಿಹಾರಕನೆ ಹರಿ

ಕೃಷ್ಣೆ ಸೌಭದ್ರೆಯು ಸುಭದ್ರೆಯು

ಕೃಷ್ಣನನುಜೆಯ ದುಃ ಪರಿಹರಿಸಿಹನು ಶ್ರೀಕೃಷ್ಣ |

ಕೃಷ್ಣೆ ಪಾರ್ಥನ ಬಯಸಿದಾಗಲೆ

ಕೃಷ್ಣ ಕಳುಹಿದನವಳ ಸುಖದಲಿ

ಕೃಷ್ಣ ಕೃಷ್ಣೆಯ ಕಷ್ಟ ಹರಿಸಿದ ವಾಸುದೇವ ಹರಿ || ೯೩೩ ||


ಅನನ್ತಬ್ರಹ್ಮಚಾರೀ ಕುಬ್ಜಾಕೃಷ್ಣಾಮ್ಬರಧಾರಕಃ |

ನರನಾರಾಯಣಾತ್ಮಾ ಚ ತುಲಸೀಸ್ರಗ್ವಿಭೂಷಣಃ || ೧೪೩ || (೯೩೭)


ಅನಂತಬ್ರಹ್ಮಚಾರಿಯು ಹರಿ-

-ಯನಂತದ ತಾನಂತ್ಯವಿಲ್ಲದ

ವಿನಾಂತಬ್ರಹ್ಮಚಾರಿಯು ಬ್ರಹ್ಮದಲೆ ಚರಿಸುತಿಹ |

ಅನಂತವು ತಾನನಾದಿಯು ಶ್ರೀ-

-ಯನಂತನ ಸುಜ್ಞಾನನಿಷ್ಠೆಯ-

-ದನಂತಾತ್ಮನು ಸರ್ವರಾತ್ಮನು ದೇವ ಶ್ರೀಕೃಷ್ಣ || ೯೩೪ ||


ಕುಬ್ಜಾಕೃಷ್ಣಾಂಬರಧಾರಕನೆ ಹರಿ

ಕುಬ್ಜೆಯಗಸಿಯು ಶುಭ್ರ ಬಟ್ಟೆಯ

ಕುಬ್ಜೆ ಧರಿಸಲು ನೀಡಿದಳು ಶ್ರೀಕೃಷ್ಣನಿಗೆ ಬಟ್ಟೆ |

ಕುಬ್ಜೆ ಕುಂಟಿಯು ಗಿಡ್ಡ ಕಾಯಳು

ಕುಬ್ಜೆಯತಿಶಯ ಭಕ್ತಿಗೊಲಿಯುತ

ಕುಬ್ಜತೆಯ ಕಳೆದಿಕ್ಕಿ ಸೌಂದರ್ಯವನು ನೀಡಿದನು || ೯೩೫ ||


ನರನಾರಾಯಣಾತ್ಮನೇ ಹರಿ

ನರನು ನಾರಾಯಣನು ಋಷಿಗಳು

ಹರಿಯೆ ತಾನವತಾರವೆತ್ತಿದ ಯುಗಳ ರೂಪಿನಲಿ |

ನರನು ತಾನರ್ಜುನನು ಕೃಷ್ಣನೆ

ನಾರಾಯಣನು ಸ್ವಯಂ ಕೃಷ್ಣನು

ನರನಾರಾಯಣಾತ್ಮಕನು ಹರಿ ವಾಸುದೇವ ವಿಭೋ || ೯೩೬ ||


ತುಲಸೀಸ್ರಗ್ವಿಭೂಷಣ ಹರಿ

ತುಲಸಿಮಾಲೆಯ ಧರಿಸಿ ಕೃಷ್ಣನು

ತುಲಸಿಯಿಂ ಶೋಭಿಪನು ತುಲಸೀಪ್ರಿಯನು ಶ್ರೀಕೃಷ್ಣ |

ತುಲನೆಯಿಲ್ಲದ ವಸ್ತು ತುಲಸಿಯು

ತುಲಸಿಯಿಲ್ಲದ ಪೂಜೆಯೊಲ್ಲನು

ತುಲಸಿ ಹರಿಗತ್ಯಂತ ಪ್ರೀಯವು ತುಲಸಿಕೃಷ್ಣ ಹರೇ || ೯೩೭ ||


ಸರ್ವಪಾಲಕರೂಪಶ್ಚ ಗೋಪಗೋಪೀಮನೋಹರಃ |

ಗೋವತ್ಸವಾಟಚಾರೀ ಚ ಯಮಳಾರ್ಜುನಭಞ್ಜನಃ || ೧೪೪ || (೯೪೧)


ಸರ್ವಪಾಲಕರೂಪ ಕೃಷ್ಣನೆ

ಸರ್ವರನು ಪಾಲಿಸುವ ರಕ್ಷಿಪ

ಶರ್ವಸಖ ಶ್ರೀಕೃಷ್ಣ ಸಲಹೈ ನಿನ್ನ ಭಕ್ತರನು |

ಉರ್ವಿಯೊಳು ವಸುದೇವಸುತನೊಲು

ಸರ್ವರಾತ್ಮನು ಕೃಷ್ಣನಾಗಿಯೆ

ಸರ್ವಲೋಕವ ಪಾಲಿಸಲು ದೇವಕಿಗೆ ಮಗನಾದ || ೯೩೮ ||


ಗೋಪಗೋಪೀಮನೋಹರ ಹರಿ

ಗೋಪ ಗೋಪಾಲಕರ ಮಿತ್ರನು

ಗೋಪಿಜನವತ್ಸಲನು ಪ್ರಿಯತಮ ಕೃಷ್ಣ ಗೋಪಾಲ |

ಗೋಪವಂಶದಿ ತಾನವತರಿಸಿ

ಗೋಪಗೋಪೀವ್ರಜದಿ ವಿಹರಿಸಿ

ಗೋಪಗೋಪೀಚಿತ್ತವನು ಸೆಳೆದವನೆ ಶ್ರೀಕೃಷ್ಣ || ೯೩೯ ||


ಗೋವತ್ಸವಾಟಚಾರಿ ಕೃಷ್ಣನೆ

ಗೋವುಕರುಗಳ ಚರದಿ ಚರಿಪನೆ

ಗೋವ ರಕ್ಷಿಪ ಗೋವಳಾಧಿಪ ಗೋಪ ಗೋಪಾಲ |

ಕಾವ ಕರಣವ ಜ್ಞಾನಪತಿ ಹರಿ

ಗೋವ ಪೃಥ್ವಿಯ ಪತಿಯೆ ಕೃಷ್ಣನೆ

ನಾವು ಶರಣಾಗಿಹೆವು ಭವಭವಗಳಲು ಭಕುತಿ ಕೊಡು || ೯೪೦ ||


ಯಮಳಾರ್ಜುನಭಂಜನನೆ ಹರಿ

ಯಮಳರವಳೀ ಗಂಧರ್ವರನು

ವಿಮಲಗೊಳಿಸಿದ ಶಾಪದಿಂದಲಿ ಬಾಲ ಶ್ರೀಕೃಷ್ಣ |

ಸುಮನಸರಧಿಪ ಕುಮತಿನಾಶಕ

ಯಮನ ಬಾಧೆಯ ಕಳೆವ ದೇವನೆ

ಕುಮನ ಬಿಟ್ಟಿನ್ನನವರತ ತವ ಭಕ್ತಿ ಬೇಡುವೆವು || ೯೪೧ ||


ನವನೀತವಿಲಿಪ್ತಾಙ್ಗಃ ಪಾರ್ಥಸೂತ್ರಧರಸ್ಸುಧೀಃ |

ಮಹಾಮನ್ತ್ರಾರ್ಚನಪ್ರೀತೋ ಮಹೈಶ್ವರ್ಯಪ್ರದಾಯಕಃ || ೧೪೫ || (೯೪೬)


ನವನೀತವಿಲಿಪ್ತಾಂಗನೇ ಹರಿ 

ನವನೀತವನು ಮೆತ್ತಿಕೊಂಡಿಹೆ

ನವನವೀನನೆ ಬಾಲಕೃಷ್ಣನೆ ಬೆಣ್ಣೆ ಮೆತ್ತಿಹನೆ |

ಮಾವ ಕಂಸನ ತರಿದ ದುಷ್ಟನ

ಕಾವ ಗೋವಳರನ್ನು ಗೋವ್ಗಳ

ಸಾವ ಮೀರುವ ಜ್ಞಾನ ಬೋಧಿಸು ಕೇವಲನೆ ಕೃಷ್ಣ || ೯೪೨ ||


ಪಾರ್ಥಸೂತ್ರಧರನೆ ಕೃಷ್ಣನೆ

ಪಾರ್ಥಸಾರಥಿ ಪಾಂಡವಾಪ್ತನೆ

ಸಾರ್ಥಕತೆ ತಂದಿತ್ತ ಪಾಂಡವಕುಲಕೆ ಶ್ರೀಕೃಷ್ಣ |

ಸಾರ್ಥ ವೇದವನರುಹು ಜೀವಕೆ

ವ್ಯರ್ಥಗೊಳಿಸದೆ ನಮ್ಮ ಬಾಳ್ವೆಯ

ಶರ್ತರಹಿತದಿ ನಿತ್ಯ ಧ್ಯಾನಿಪೆ ವಾಸುದೇವ ಹರೇ || ೯೪೩ ||


ಸುಧೀ ಕೃಷ್ಣನೆ ಶುದ್ಧಬುದ್ಧನೆ

ಸದಾ ಕರುಣಿಸು ನಿನ್ನ ಭಕ್ತಿಯ

ನಿಧಾನಿಸದಿರು ನಿತ್ಯ ಪರಮಾನಂದವನ್ನೀಯೊ |

ಮುದಾವಹ ಪರಮಾತ್ಮ ಮಾಧವ

ಪ್ರದಾನಿಸು ಪರಬೊಮ್ಮನಿಚ್ಚೆಯ

ಮದಾಪಹ ಸದಮಲನೆ ಶ್ರೀಧರ ರಕ್ಷಿಸನವರತ ||೯೪೪ ||


ಮಹಾಮಂತ್ರಾರ್ಚನಪ್ರೀತನೆ

ಮಹಾಮಂತ್ರವು ಕೃಷ್ಣಮಂತ್ರವು

ಸಹಾಯಕ ಹರಿಯೊಲಿವ ತನ್ಮಂತ್ರಾರ್ಚನೆಗೆ ನಿಜವು |

ಮಹಾರಕ್ಷಕ ಮಹಾಪೋಷಕ

ಮಹಾಪಾಲಕ ಮಹೋದ್ಧಾರಕ

ಮಹಾಮುಕ್ತಿಪ್ರದಾಯಕದ ನಿಜಭಕ್ತಿಗೊಲಿವ ಹರಿ || ೯೪೫ ||


ಮಹೈಶ್ವರ್ಯಪ್ರದಾಯಕ ಹರಿ

ಮಹತ್ತ್ವದ ವಿಶ್ವೇಶ್ವರತ್ವದ

ಮಹಿಮೆ ಸಂಪದವಧಿಪತಿತ್ವವ ನೀಡುವನು ಕೃಷ್ಣ |

ಮಹಾಮಹಿಮನು ಲೋಕದೀಶ್ವರ

ಮಹಾಧಿಪತಿತ್ವವನೆ ಕರುಣಿಪ

ಮಹೇಶ್ವರ ತಾನೆಂಬ ನಿಷ್ಠೆಯ ಪಡೆವ ಬ್ರಹ್ಮತ್ವ || ೯೪೬ ||


ಹಿರಣ್ಮಯಶರೀರಶ್ಚ ಭೃಗುಪುತ್ರೀಪ್ರಿಯಶ್ಶುಭಃ |

ಏಕಾದಶೀತಿಥಿಪ್ರೀತಸ್ಸರ್ವಮಙ್ಗಲದಾಯಕಃ || ೧೪೬ || (೯೫೧)


ಹರಿ ಹಿರಣ್ಮಯಶರೀರನೆ ಗುರು

ಹರಿಯು ಚಿನ್ನದ ಮೈಯ ಕೃಷ್ಣನೆ

ಗುರಿಯು ನೀನೇ ನಿನ್ನ ಭಕ್ತರ ಪರಮಮಂಗಲನೆ |

ಚರಿತೆ ಪಾವನ ಹರಿಯೆ ನಿನ್ನದು

ಸುರಿವೆ ಕರುಣಾವರ್ಷವೆಲ್ಲೆಡೆ

ಗರಿಮೆ ನಿನ್ನದೆ ಸರ್ವರಂತರ್ಯಾಮಿ ಶ್ರೀಕೃಷ್ಣ || ೯೪೭ ||


ಭೃಗುಪುತ್ರೀಪ್ರಿಯನೆ ವಿಷ್ಣುವೆ

ಭಾರ್ಗವೀಲಕ್ಷ್ಮಿಯ ಸುಭರ್ತನೆ

ಭಾರ್ಗವನೆ ಪರಶುಧರ ರಾಮನೆ ಭಾರ್ಗವೀರಮಣ |

ಭಗವದವತಾರಿಯೆ ಮಹಾತ್ಮನೆ

ಮಗನೆ ವಸುದೇವನ ಜಿತಾತ್ಮನೆ

ಬಗೆಬಗೆಯ ರೂಪಿಂದ ಜಗವನು ರಕ್ಷಿಸುವ ಸ್ವಾಮಿ || ೯೪೮ ||


ಶುಭನೆ ಶುಭತನು ಶುಭಕರನೆ ಹರಿ

ಶುಭವ ಮಂಗಲವೀವ ಕೃಷ್ಣನೆ

ಶುಭಸ್ವರೂಪನೆ ಮಂಗಲಾತ್ಮನೆ ವಾಸುದೇವ ಹರಿ |

ವಿಭುವೆ ಗುರು ನೀನಖಿಲಲೋಕಕೆ

ಪ್ರಭುವೆ ಸ್ವಾಮಿಯೆ ಸರ್ವರೊಳಗಿಹೆ

ಶುಭವ ತಾರೈ ಜಗದ ಜೀವರ ಬದುಕಿನಲಿ ಸತತ || ೯೪೯ ||


ಏಕಾದಶೀತಿಥಿಪ್ರೀತನೆ-

-ಯೇಕಾದಶೀವ್ರತಕೆ ತಾನೊಲಿ-

-ವೇಕಚಕ್ರೇಶ್ವರನೆ ಮೂರ್ಲೋಕಕ್ಕೆ ಪರಬೊಮ್ಮ |

ಏಕತತ್ತ್ವನನೇಕರೂಪನೆ

ಕಾಕುದೂರನೆ ನಾಕು ರೂಪನೆ

ಬೇಕು ಬೇಡಗಳನ್ನು ಕಾಯುವ ದೇವ ಶ್ರೀಕೃಷ್ಣ || ೯೫೦ ||


ಸರ್ವಮಂಗಲದಾಯಕನೆ ಹರಿ

ಸರ್ವಲೋಕಕೆ ಶುಭವನೀವನೆ

ಸರ್ವಜೀವರೊಳಿರುವ ಪರಮಾತ್ಮನೆ ನಿರಾಮಯನೆ |

ಸರ್ವನಾಟಕ ಸೂತ್ರಧಾರಿಯೆ

ಶರ್ವಸಖ ಶ್ರೀಕೃಷ್ಣ ವಿಷ್ಣುವೆ

ಸರ್ವರಂತರ್ಯಾಮಿ ಪರಬೊಮ್ಮಾತ್ಮ ಸರ್ವೇಶ || ೯೫೧ ||


ಕುರುಕ್ಷೇತ್ರಾಜಿಸಙ್ಕರ್ತಾ ಕುರುಸನ್ಧಾನವೇಷಧೃತ್ |

ಧಾರ್ತರಾಷ್ಟ್ರವಿನಾಶಶ್ಚ ಪಾಂಡುವಂಶಸುರಕ್ಷಕಃ || ೧೪೭ || (೯೫೫)


ಕುರುಕ್ಷೇತ್ರಾಜಿಸಂಕರ್ತ ಹರಿ

ಕುರುಕ್ಷೇತ್ರದಿ ಧರ್ಮಯುದ್ಧವ

ಹರಿಯೆ ಸಂಕಲ್ಪಿಸಿದ ಪಾಂಡವ ಕೌರವರ ನಡುವೆ |

ಬರಿಯ ರಾಜ್ಯಕೆ ಯುದ್ಧವಲ್ಲವು

ಸರಿ ಸುಧರ್ಮಕೆ ಸತ್ಯ ನ್ಯಾಯಕೆ

ಹರಿಯು ಕೃಷ್ಣನು ತಾನವತರಿಸಿ ರಣವ ನಡೆಸಿದನು || ೯೫೨ ||


ಕುರುಸಂಧಾನವೇಷಧೃತ್ ಹರಿ

ಕುರುಕುಲದ ಪಾಂಡುಜರ ಕೌರವ

ಪರಿವಾರಗಳ ನಡುವೆ ಸಂಧಾನಕ್ಕೆ ಹವಣಿಸಿದ |

ಬರಿದೆ ನಾಟಕ ಕೃಷ್ಣ ನಿನ್ನಯ

ಹರಿದೊಗೆದೆ ಸಂಧಾನದಿಶೆಯನು

ಕೌರವನು ತಾನೊಪ್ಪದಿರೆ ಸಂಗ್ರಾಮ ಸಾರಿದೆಯ || ೯೫೩ ||


ಧಾರ್ತರಾಷ್ಟ್ರವಿನಾಶ ಕೃಷ್ಣನೆ

ಧೂರ್ತ ಧೃತರಾಷ್ಟ್ರನ ಕುವರರನು

ಶರ್ತವಿಲ್ಲದೆ ಕೊಲ್ಲಿಸಿದೆ ರಣದಲ್ಲಿ ಶ್ರೀಹರಿಯೆ |

ಮರ್ತ್ಯ ಮಾನವನೆಂಬ ಸತ್ಯವ

ನಿತ್ಯ ತೋರಿದೆ ಜನವಿನಾಶದಿ

ಸತ್ಯಕ್ಕೆ ಸಾವಿಲ್ಲ ಸತ್ಯವ ಪಾಲಿಸೆನ್ನುತಿಹೆ || ೯೫೪ ||


ಪಾಂಡುವಂಶಸುರಕ್ಷಕನೆ ಹರಿ 

ಪಾಂಡವಾಪ್ತನೆ ಕೌರವಾರಿಯೆ

ಪಾಂಡವರ ಧರ್ಮಕ್ಕೆ ನೀನೊಲಿದವರ ಪಕ್ಷಸ್ಥ |

ದಂಡಿಸಲು ತಾನಸತ್ಯದವರ

ಖಂಡಿಸಿದೆ ಕೌರವನಧರ್ಮವ

ಭಂಡ ಕೌರವವಂಶ ನಿರ್ವಂಶವನೆ ಗೈದಿರುವೆ || ೯೫೫ ||


ಕೌರವಾಧಿಪತಿತ್ವಸ್ಯಾನ್ತಕಃ ಪಾಣ್ಡವರಾಜ್ಯದಃ |

ಅನಾಕಾಶಶ್ಚ ಗೋನಾಥೋऽನಾಕಾರೋ ಭುವನಾಕೃತಿಃ || ೧೪೮ || (೯೬೧)


ಕೌರವಾಧಿಪತಿತ್ವಸ್ಯಾಂ

-ತಕನೆ ಕೃಷ್ಣನೆ ವಾಸುದೇವನೆ

ಕೌರವನ ರಾಜತ್ವ ಕಳೆದನು ಪಾಂಡವರಿಗಿತ್ತ |

ಮಾರಪಿತ ಧರ್ಮವನು ಸ್ಥಾಪಿಸೆ

ಕೌರವಾಧರ್ಮವನು ಮಡುಹಿದ

ಸಾರಿದನು ಸತ್ಯಕ್ಕೆ ಜಯವಿದೆ ಮಿಥ್ಯಕಪಜಯವು || ೯೫೬ ||


ಪಾಂಡವ-ರಾಜ್ಯದನೆ ಕೃಷ್ಣನೆ

ಪಾಂಡವರಿಗಿತ್ತಿರುವೆ ರಾಜ್ಯವ

ಪಾಂಡುಸುತರ ಸುಧರ್ಮಸಾಮ್ರಾಜ್ಯವನು ನಿರ್ಮಿಸಿದೆ |

ಕಂಡೆ ಕೌರವ ಧರ್ಮ ಮೀರ್ದುದ

ಭಂಡತನವನು ನಾಶಪಡಿಸಿದೆ

ಮಂಡಿಸಿದೆ ಪಾಂಡವರ ರಾಜ್ಯದಿ ಧರ್ಮರೂಪದಲಿ || ೯೫೭ ||


ಅನಾಕಾಶನೆ ವಾಸುದೇವನೆ

ವಿನಾಕಾಶನೆ ಜ್ಞಾನಘನ ಹರಿ

ಸನಾತನ ಪರಬೊಮ್ಮ ಪರಿಪೂರ್ಣನೆ ನಿರಾಕಾರ |

ವಿ-ನಾಯಕ ವಿಜ್ಞಾನನಿಧಿ ಹರಿ

ಸುನಾಥನೆ ಮೂಜಗಕೆ ಸದ್ಗುರು

ದಿನಾ ನಿನ್ನನು ಭಜಿಪೆ ಸರ್ವಾತ್ಮಕ ಸದಾನಂದ || ೯೫೮ ||


ಗೋನಾಥ ಹರಿ ವಾಸುದೇವನೆ

ಗೋವಿನೊಡೆಯನೆ ಗೋಪನಾಥನೆ

ಗೋ ಪೃಥಿವಿ ಕರಣಗಳು ಜ್ಞಾನಗಳೊಡೆಯ ಶ್ರೀಕೃಷ್ಣ |

ಗಾನಲೋಲನೆ ಮೋಹನಾಂಗನೆ

ಮಾನ ಕಾವನೆ ಮಾರಜನಕನೆ

ಧೇನುಪ್ರೀಯನೆ ಶ್ರೀನಿವಾಸನೆ ರಕ್ಷಿಸನವರತ || ೯೫೯ ||


ಅನಾಕಾರನೆ ವಾಸುದೇವನೆ

ವಿನಾ ರೂಪದ ನಿರಾಕಾರನೆ

ಸನಾತನ ನಾರಾಯಣನೆ ಪರಮಾತ್ಮ ಪರಬೊಮ್ಮ |

ಜನಾಶ್ರಯ ಜನರಕ್ಷಕನೆ ಹರಿ

ಜನಾಧಿಪ ಪರಮೇಶ್ವರನೆ ಹರಿ

ವಿನೂತನ ನೀ ಪುರಾತನ ನೀ ನಿತ್ಯ ನಿರ್ಲಿಪ್ತ || ೯೬೦ ||


ಭುವನಾಕೃತಿಯೆ ವಾಸುದೇವನೆ

ಭುವನ ಮೂರರ ರೂಪದಲ್ಲಿಹೆ

ಹವನ ಹೋಮಗಳಲ್ಲಿ ನೆಲೆಸಿಹೆ ದೇವ ಶ್ರೀಕೃಷ್ಣ |

ಭವನ ಸಖ ತ್ರಿಭುವನದ ಪತಿ ನೀ

ಜವನ ಬಾಧೆಯ ಕಳೆವ ಶ್ರೀಹರಿ

ಸುವನಮಾಲಿಯೆ ರುಕ್ಮಿಣೀಶನೆ ರಕ್ಷಿಸನವರತ || ೯೬೧ ||


ಮೃತ್ತಿಕಾಖಾದನಾರ್ಥಂ ಯಶೋದಾತಾಡನಶೈಶವಃ |

ರಾಧಿಕಾರಾಧಿತೋ ಜಿಷ್ಣುರ್ಗೋಪಿಕಾಸೇವಿತಪ್ರಭುಃ || ೧೪೯ || (೯೬೫)


ಮೃತ್ತಿಕಾಖಾದನಾರ್ಥಂ ಯ-

-ಶೋದಾತಾಡನಶೈಶವನೆ ಹರಿ

ಮೃತ್ತಿಕೆಯ ಮಣ್ಣನ್ನು ತಿನ್ನಲು ತಾಯಿ ಹೊಡೆದಿಹಳು |

ಚಿತ್ತವಿಸು ಶಿಶು ಕೃಷ್ಣ ಬಾಲನೆ

ಮತ್ತೆ ತೋರೈ ನಿನ್ನ ಲೀಲೆಯ

ಸತ್ತವರ ಬಡಿದೆಬ್ಬಿಸುತ ನೀ ಜ್ಞಾನ ಬೆಳಗಿಸೆಲೋ || ೯೬೨ ||


ರಾಧಿಕಾರಾಧಿತನೆ ಕೃಷ್ಣನೆ

ರಾಧಿಕೆಯ ಪ್ರೇಮಕ್ಕೆ ಪಾತ್ರನೆ

ರಾಧೆಯಾರಾಧನೆಗೆ ತನ್ನನೆ ತಾನು ಕೊಟ್ಟವನೆ |

ರೋದಿಸುವ ಭಕ್ತರನು ಕಾಯುವ

ಮಾಧವನೆ ಕೇಶವನೆ ಕೃಷ್ಣನೆ

ಮೋದ ಬೋಧವನೀಯೊ ಕರುಣಾಕರನೆ ರಾಧೇಶ || ೯೬೩ ||


ಜಿಷ್ಣು ಜಯಶೀಲನೆ ಪರಾತ್ಮನೆ

ವಿಷ್ಣು ಕೃಷ್ಣನೆ ವಿಜಯಶಾಲಿ ಜ-

-ಯಿಷ್ಣು ನಾರಾಯಣನೆ ಮಾಧವ ಜಯವನೀಯೆಮಗೆ |

ಕೃಷ್ಣ ನೀನು ಸಹಿಷ್ಣು ಪಾಪಕೆ

ಜಿಷ್ಣು ಜಯಕಾರಣನೆ ವಿಷ್ಣು ಸ-

-ಹಿಷ್ಣು ನಮ್ಮ ಪ್ರಮಾದ ಗಣಿಸದೆ ಪೊರೆಯೊ ಕರುಣಾಳು || ೯೬೪ ||


ಗೋಪಿಕಾಸೇವಿತಪ್ರಭು ಹರಿ

ಗೋಪಿಕಾಸ್ತ್ರೀವ್ರಜಸುಶೋಭಿತ

ಗೋಪಿಕಾಪೂಜಿತ ಮಹಾತ್ಮನೆ ಗೋಪಿವಲ್ಲಭನೆ |

ಪಾಪಿಗಿತ್ತನು ಪಾಪಮುಕ್ತಿಯ

ಗೋಪಿಗಿತ್ತನು ಭಕ್ತಿಮುಕ್ತಿ ಪ್ರ-

-ತಾಪಿ ಭೂಭಾರವನು ತಗ್ಗಿಸಿ ಸಜ್ಜನರ ಕಾದ || ೯೬೫ ||


ಶ್ರಿಯಾಶ್ಲಿಷ್ಟವಪುರ್ವೇದವಿಷಯಸ್ಸ್ಥಿರಚರಾಕೃತಿಃ |

ವಿಶ್ವಮಸ್ತಿಷ್ಕಸಾಕ್ಷೀ ಚ ಶುದ್ಧಬುದ್ಧಪ್ರಸಿದ್ಧಪಃ || ೧೫೦ || (೯೭೦)


ಶ್ರಿಯಾಶ್ಲಿಷ್ಟವಪುವೆ ಕೃಷ್ಣನೆ

ಶ್ರಿಯಾಲಿಂಗಿತ ವಾಸುದೇವನೆ

ಶ್ರಿಯಾ ಸಿರಿಲಕುಮಿಯಿಂ ತಾನಪ್ಪಿದ ಶರೀರ ಹರಿ |

ಅಯಾಚಿತದಲು ದಯಾವಾರಿಧಿ 

ತ್ವಯಾರ್ಪಿತಮನಬುದ್ಧಿಯಿಂದಲಿ

ಸುಯಾಚಿಪೆ ನೀ ಬ್ರಹ್ಮನಿಷ್ಠೆಯ ಕರುಣಿಸೈ ಜಗಕೆ || ೯೬೬ ||


ವೇದವಿಷಯನೆ ವಾಸುದೇವನೆ

ವೇದಪ್ರತಿಪಾದ್ಯನೆ ಪರಾತ್ಮನೆ

ವಾದದೂರನೆ ಸಾಧಕರ ಹೃದಯದಲಿ ಬೆಳಗುವನೆ |

ಮೋದಬೋಧಸದಾತ್ಮಕನೆ ಹರಿ

ಶೋಧಿಸೈ ನಮ್ಮಗಳ ಚಿತ್ತವ

ಸಾಧುವಂದಿತ ನಾದಬ್ರಹ್ಮನೆ ದೇವ ಶ್ರೀಕೃಷ್ಣ || ೯೬೭ ||


ಸ್ಥಿರಚರಾಕೃತಿ ಬ್ರಹ್ಮವಸ್ತುವೆ

ಸ್ಥಿರನೆ ಸ್ಥಾವರ ನಿರ್ಗುಣನೆ ಹರಿ

ಚರನೆ ಜಂಗಮ ಸಗುಣ ಸಾಕಾರನೆ ಪರಬ್ರಹ್ಮ |

ಮರಣಜನಿರಹಿತನೆ ಪರಾತ್ಪರ

ಚರಣ ಪಿಡಿದಿಹೆ ಮುಕುತಿ ಕರುಣಿಸು

ಹರಣ ಕಳೆಯುವ ಮೊದಲು ನಿಜನಿಷ್ಠೆಯನು ಹರಿ ನೀಡು || ೯೬೮ ||


ವಿಶ್ವಮಸ್ತಿಷ್ಕಸಾಕ್ಷಿ ಕೃಷ್ಣನೆ

ವಿಶ್ವಪ್ರಜ್ಞೆ ಸಮಷ್ಟಿಚಿತ್ತಕೆ

ವಿಶ್ವಮನಸಿಗೆ ಸಾಕ್ಷಿ ಚೇತನ ಧೀಪ್ರಚೋದಕನೆ |

ಶಾಶ್ವತನೆ ಸರ್ವಾಂತರಾತ್ಮನೆ

ನಶ್ವರದ ಜಗಕಧಿಷ್ಠಾನನೆ

ವಿಶ್ವದಾತ್ಮನೆ ಸರ್ವಚೇತನ ಮೂಲವಸ್ತು ವಿಭೋ || ೯೬೯ ||


ಶುದ್ಧಬುದ್ಧಪ್ರಸಿದ್ಧಪನೆ ಹರಿ

ಶುದ್ಧನಕಳಂಕನೆ ಸುನಿರ್ಮಲ

ಬುದ್ಧ ಸುಜ್ಞಾನಿಯೆ ಪ್ರಸಿದ್ಧನೆ ಸರ್ವಕಧಿಪತಿಯೆ |

ಬದ್ಧಭಾವದ ಜೀವರೂಪನೆ

ಸಿದ್ಧಭಾವದ ದೇವರೂಪನೆ

ಬುದ್ಧಭಾವದ ಬ್ರಹ್ಮವಸ್ತುವೆ ಸಚ್ಚಿದಾನಂದ || ೯೭೦ ||


ಗಙ್ಗಾಜನಕಗೌರಾಙ್ಗೋ ಗಂ ಗೋ ಗಗ್ಘಮುಖೋ ಗಡುಃ |

ಗಡೋ ಗಡೇರವರ್ಣಶ್ಚ ಗಡೋಲಪ್ರಿಯಗಣ್ಡಕಃ || ೧೫೧ || (೯೮೦)


ಗಂಗಾಜನಕ ವಾಸುದೇವನೆ

ಗಂಗೆಯುದಿಸಿತು ನಿನ್ನ ಪಾದದಿ

ಗಂಗೆಗಾದೆಯೊ ವಿಷ್ಣು ನೀ ಪಿತ ದೇವ ಶ್ರೀಕೃಷ್ಣ |

ಗಂಗೆ ಭೂಮಿಗೆ ಬಂದಿಳಿದ ಸುಧೆ

ಗಂಗೆಯನು ಹರ ಶಿರದಿ ಧರಿಸಿಹ

ಗಂಗೆ ಬ್ರಹ್ಮಕಮಂಡಲುವಿನೊಳ್ ತುಂಬಿ ತುಳುಕಿಹುದು || ೯೭೧ ||


ಗೌರಾಂಗ ಹರಿ ವಾಸುದೇವನೆ

ಗೌರವರ್ಣನೆ ಕೃಷ್ಣವರ್ಣನೆ

ಹೇ ರಮಾಪತಿ ಸರ್ವವರ್ಣಾತ್ಮಕನೆ ಭಾವಜನೆ |

ಘೋರದುರಿತಸಮೂಹ ತರಿವನೆ

ಮಾರಜನಕನೆ ಸಾರಸಾಕ್ಷನೆ

ವೀರ ಧೀರ ಪರಾಕ್ರಮಿಯೆ ಪರಬೊಮ್ಮ ಕೇಶವನೆ || ೯೭೨ ||


ಗಂ ಗೀತಾರೂಪನೇ ಕೃಷ್ಣನೆ

ಸಂಗೀತಪ್ರಿಯ ಸಾಮಪ್ರೀಯನೆ

ಗಂಗೆಯಪ್ಪನೆ ತುಂಗಕೀರ್ತಿಯೆ ಭಂಗರಹಿತ ಹರಿ |

ಸಂಗರಹಿತನೆ ಸಿಂಗರಿಸಿಹನೆ

ಕಂಗಳಿಗೆ ತಾ ಸುಂದರಾಂಗನೆ

ಮಂಗಳಾಂಗನೆ ಭಂಗಬಾರದ ಶುದ್ಧಭಕ್ತಿ ಕೊಡು || ೯೭೩ ||


ಗೋ ಕೃಷ್ಣ ತಾ ಗೋರೂಪಿಯಹ

ಗೋ ಕೃಷ್ಣ ತಾ ಕರಣರೂಪಿಯು

ಗೋ ಕೃಷ್ಣ ತಾ ಶೀಘ್ರಗಾಮಿಯು ಕಿರಣರೂಪಿ ಹರಿ |

ಗೋ ಕೃಷ್ಣ ತಾ ವಜ್ರ ಹೀರಕ

ಗೋ ಕೃಷ್ಣ ಚಂದ್ರಾರ್ಕರೂಪನು

ಗೋ ಕೃಷ್ಣ ಗೋಮೇಧರೂಪನು ಪಾಹಿ ಗೋಪಾಲ || ೯೭೪ ||


ಗಗ್ಘಮುಖ ಹರಿ ವಾಸುದೇವನು

ಗಗ್ಘ ಹಸಿತವು ನಗುಮೊಗದ ಹರಿ

ಬಗ್ಗುವೆವು ಹರಿ ಪದಕೆ ಸಂತತ ಸಗ್ಗಕಾರಣನ |

ನುಗ್ಗುತಿಹ ದೌಷ್ಟ್ಯವನು ಸದೆಬಡಿ

ಹಿಗ್ಗುಕುಗ್ಗಿನ ಬದುಕು ಮಿಥ್ಯೆಯು

ಹಗ್ಗವನು ಕಡಿ ಮನದ, ಬ್ರಹ್ಮಾತ್ಮನೇ ನೀನು ತಿಳಿ || ೯೭೫ ||


ಗಡುವೆ ವಾಮನ ಹರಿಯೆ ಕೃಷ್ಣನೆ

ನಡುಗಿಸಿದೆ ಮೂರ್ಲೋಕವಳೆಯುತ

ಬಿಡದೆ ಬಲಿಯನು ನೀ ರಸಾತಲಕಿಳಿಸಿ ವಿಕ್ರಮನೆ |

ಸಡಗರದಿ ಪ್ರಾರ್ಥಿಸುವೆ ನಿನ್ನನು

ಮಡುವಿನೊಳು ಕಾಳಿಂಗನರ್ತನ

ಸುಡುವ ಭವತಾಪವನು ಕಳೆ ಕೊಡು ಸುಸ್ಥಿರದ ಭಕುತಿ || ೯೭೬ ||


ಗಡನೆ ಮತ್ಸ್ಯನೆ ವಾಸುದೇವನೆ

ಬಿಡದೆ ಕಾದೆಯ ಸತ್ಯವ್ರತನನು

ಪೊಡಮಡುವೆ ತವ ಪದಸರೋಜಕೆ ದೇವ ಶ್ರೀಕೃಷ್ಣ |

ನಡುಗಿದನು ಹಯಗ್ರೀವತಮ ತಾ

ಕೆಡಹಿದನು ಹರಿ ನಿಗಮಚೋರನ

ಪೊಡವಿಪತಿ ಮನುವಾದ ನಿನ್ನನುಗ್ರಹದ ಬಲದಿಂದ || ೯೭೭ ||


 ವಾಸುದೇವ ಗಡೇರವರ್ಣನೆ

ನೀ ಸುಶ್ಯಾಮಲನೀಲಮೇಘನೆ

ಮಾಸದಿಹ ಕಡುಗಪ್ಪುಬಣ್ಣನೆ ಮೇಘಶ್ಯಾಮ ಹರಿ |

ಹಾಸು ಶೇಷನು ಪೀತವಸ್ತ್ರನೆ

ಸೂಸಿ ಭಜಿಪೆನು ನಿತ್ಯ ನಿನ್ನನು

ಭಾಸುರಾಂಗನೆ ದೇವ ಕೃಷ್ಣನೆ ಶಾಶ್ವತನೆ ಬೊಮ್ಮ || ೯೭೮ ||


ಗಡೋಲಪ್ರಿಯ ಕೃಷ್ಣದೇವನೆ

ಗಡೋಲವು ಗುಡ ಬೆಲ್ಲ ಸಿಹಿಯದು

ಬಿಡದೆ ಕೊಡುವೆನು ಪಡೆದು ತಿನ್ನೈ ವಾಸುದೇವ ಹರೇ |

ಅಡಗದಲೆ ಮುಂದೋರಿ ಬಾರೈ

ಬಡವನನು ಕಡೆಗಣಿಸದಿರು ಹರಿ

ಪಡೆವೆ ತವಭಕುತಿಯನು ಸುಜ್ಞಾನವನು ಕರುಣಿಸೆಯ || ೯೭೯ ||


ಗಂಡಕನೆ ಖಡ್ಗಧರ ಕೃಷ್ಣನೆ

ಗಂಡವಡ್ಡಿಯನೊಡ್ಡು ಖಳರಿಗೆ

ಮಂಡಿಸೈ ಮಮ ಹೃದಯಮಂದಿರದೊಳಗೆ ಸಂತತವು |

ಖಂಡಿಸೈ ದೌಷ್ಟ್ಯವನು ಕೃಷ್ಣ ಪ್ರ-

-ಚಂಡ ತಂತ್ರದಿ ಬ್ರಹ್ಮಜ್ಞಾನದಿ

ಸೊಂಡಿಲಿನ ದೇವನಿಗೆ ಮೊದಲಿನ ಪೂಜೆ ನೀನಿತ್ತೆ || ೯೮೦ ||


ಘಟೋ ಘಟಕರೂಪೀ ಚ ಘನಸಾರೋ ಘನಸ್ವನಃ |

ಚಕ್ರಪಾಣಿಶ್ಚಙ್ಗರೂಪೀ ಛೋಲಙ್ಗಪ್ರಿಯಛತ್ವರಃ || ೧೫೨ || (೯೮೮)


ಘಟವೆ ಕಲಶನೆ ವಾಸುದೇವನೆ

ಘಟವು ದೇವಳ ಮುಕುಟ ಕುಂಭವು

ಘಟದ ರೂಪಿಲಿ ಬೆಳಗುತಿಹ ಶ್ರೀಕೃಷ್ಣ ಸರ್ವೇಶ |

ನಟನ ಕೋವಿದ ಕಟುಕನಾಶಕ

ಸಟೆಗೆ ಮೆಚ್ಚದ ಶುದ್ಧಸತ್ಯನೆ

ಪಟುವೆ ಸಂಕಟಹಾರಿ ವೇಂಕಟರಮಣ ಲಕ್ಷ್ಮೀಶ || ೯೮೧ ||


ಘಟಕರೂಪೀ ನಿಖಿಲಯೋಜಕ

ಘಟನೆಗಳಿಗಿವ ಸಾಕ್ಷಿ ಚೋದಕ

ಘಟಿಪುದಕೆ ಕಾರಣನು ಕೃಷ್ಣನು ಸರ್ವರಾತ್ಮ ಹರಿ |

ವಿಟಪಿಯಲಿ ರಕ್ಷಿಪನು ಭಕ್ತರ

ನಟಿಪ ಭಕ್ತರಿಗೊಲಿಯನೀತನು

ಸಟೆಯಿರದ ನಿಜಭಕ್ತರಿಗೆ ತಾ ಕಾಮಧೇನು ಹರಿ || ೯೮೨ ||


ಘನಸಾರನೆ ವಾಸುದೇವನೆ

ಘನದ ಸಾರವು ಮೇಘವರ್ಷವು

ಘನಮಹಿಮ ಶ್ರೀಕೃಷ್ಣ ಜೀವದ್ರವನು ಜೀವರಿಗೆ |

ಮನವ ಸಂತತ ಹರಿಯಲಿಡುತಲಿ

ಕನಸುಮನಸಲು ನೆನೆದು ನೆನೆಯುತ

ಹನುಮಪ್ರೀಯನ ಚರಣವನ್ನಾಶ್ರಯಿಪೆ ನಾ ನಿತ್ಯ || ೯೮೩ ||


ಘನಸ್ವನ ಹರಿ ದೇವ ಕೃಷ್ಣನೆ

ಘನವು ಮೋಡವು ಮೇಘನಾದನೆ

ಸನುಮತದಿ ಹರಿನಾಮರೂಪವ ನೆನೆದು ಸಂಸ್ತುತಿಸಿ |

ಪ್ರಣವರೂಪನ ಪರಬ್ರಹ್ಮನ

ಮನಕು ಮಾತಿಕು ನಿಲುಕದಾತ್ಮನ

ವಿನಾ ಜಗವೇನಿಹುದು? ಸರ್ವವು ಬ್ರಹ್ಮಮಯವಿಹುದು || ೯೮೪ ||


ಚಕ್ರಪಾಣಿಯೆ ವಿಷ್ಣು ಕೃಷ್ಣನೆ

ಚಕ್ರವನು ಕರದಲ್ಲಿ ಪಿಡಿದಿಹ

ಚಕ್ರಧಾರಿಯೆ ಸುದರ್ಶನಚಕ್ರವನು ಪಿಡಿದಿಹನೆ |

ಚಕ್ರ ಕಾಲದ ಚಕ್ರ ಸೃಷ್ಟಿಯ

ಚಕ್ರ ಖಲಸಂಹಾರಕವು ಶ್ರೀ

ಚಕ್ರ ಯಂತ್ರವದಾಯುಧವು ಸಂತತವು ತಿರುಗುವುದು || ೯೮೫ ||


ಚಂಗರೂಪಿಯೆ ಶೋಭನಾಂಗನೆ

ಚಂಗ ಚಂದ್ರಮನಂಥ ರೂಪನೆ

ಭಂಗವಾಗದ ದಕ್ಷತೆಯ ಸುರಸುಂದರಾಂಗ ಹರಿ |

ಅಂಗಸೌಷ್ಟವ ನಿರುಪಮವು ತವ

ಮಂಗಳಾಕೃತಿ ಸಂಗರಹಿತವು

ಹಂಗಿರದ ಪರಮಾರ್ಥತತ್ತ್ವವೆ ಸರ್ವರಾತ್ಮ ಹರಿ || ೯೮೬ ||


ಛೋಲಂಗಪ್ರಿಯ ವಾಸುದೇವನೆ

ಛೋಲಂಗವದು ಮಾತುಲುಂಗವು

ಮಾಲಾಪ್ರಿಯ ಸತ್ಯನಾರಾಯಣಗೆ ಬಲು ಮೆಚ್ಚು |

ಕಾಲಪುರುಷಗೆ ಮಾಬಲದಹುಳಿ

ಮೇಲು ಭಕ್ತಿಯ ಶರ್ಕರವು ತಾ-

-ನೋಲಿ ಬರುವನು ಭಕ್ತಗೊಲಿಯುತ ಕೃಷ್ಣ ಶ್ರೀಕೃಷ್ಣ || ೯೮೭ ||


ಛತ್ವರನೆ ಶ್ರೀಕೃಷ್ಣ ಸರ್ವರ

ಛತ್ವರವು ಗೃಹವಾಶ್ರಯವು ಬನ

ಛತ್ವರವು ಹೂಕುಂಜವುದ್ಯಾನವು ಪರಾತ್ಪರನ |

ಸತ್ವರದಿ ನೀನೊಲಿದೆ ಗೋಪೀ-

ಛತ್ವರದಿ ಯಮುನಾವಿಹಾರದಿ

ನೀ ತ್ವರೆಯಲೆಮ್ಮನ್ನು ಕಾಯೈ ಭಕ್ತಿಬೋಧಪ್ರದ || ೯೮೮ ||


ಜಗದಾಧಾರಶಕ್ತಿಶ್ಚ ಜಗ್ಮಿರ್ಝಮ್ಪಾರುಸೇವಿತಃ |

ಝರ್ಝರಕಪಾಪಹಾರೀ ಚಞ್ಚಲೇಶಷ್ಟಿಟ್ಟಿಭಾನ್ತಕಃ || ೧೫೩ || (೯೯೪)


ಜಗದಾಧಾರಶಕ್ತಿ ಕೃಷ್ಣನೆ

ಜಗಕೆ ನೀನಾಧಾರ ದೇವನೆ

ಜಗವನಾಧರಿಸಿರುವ ಚೈತನ್ಯವೆ ಪರಾತ್ಪರನೆ |

ಬಗೆ ಬಗೆಯ ಸೃಷ್ಟಿಯೊಲು ತೋರುವೆ

ನಗಧರನೆ ಬ್ರಹ್ಮಾಂಡಧರ ಹರಿ

ನಗು ನಗುತ ಬದುಕಲು ಪ್ರಚೋದಿಸು ತುಂಬು ದಯದಿಂದ || ೯೮೯ ||


ಕೃಷ್ಣ ಜಗ್ಮಿಯೆ ವಾಸುದೇವನೆ

ಕೃಷ್ಣ ವಾಯುವೆ ಸರ್ವಪ್ರಾಣನೆ

ಕೃಷ್ಣ ಚರಿಪನು ಸರ್ವದೇಹಕು ವಾಯುರೂಪಿನಲಿ |

ಕೃಷ್ಣ ಜಂಗಮ ಸ್ಥಾವರವು ಸಹ

ಕೃಷ್ಣ ನಿಖಿಲವು ಸಕಲ ಸೃಷ್ಟಿಯು

ಕೃಷ್ಣ ಸೃಷ್ಟಿಯ ಮೂಲ ಕರ್ತನು ಲಯವ ಗೈಯುವನು || ೯೯೦ ||


ಕೃಷ್ಣ ನೀ ಝಂಪಾರುಸೇವಿತ

ಕೃಷ್ಣ ವಾನರರಿಂದ ಸೇವಿತ

ಕೃಷ್ಣ ತ್ರೇತಾಯುಗದಿ ರಾಮನು ವಾನರೇಡ್ಯ ಹರಿ |

ಕೃಷ್ಣ ವಿಷ್ಣುವು ಪೂರ್ಣಶಕ್ತಿಯು

ಕೃಷ್ಣ ಸುಗ್ರೀವಾದಿ ಸೇವಿತ

ಕೃಷ್ಣ ಮಾರುತಿಸೇವ್ಯ ಪರಮಾತ್ಮನೆ ಪರಬ್ರಹ್ಮ || ೯೯೧ ||


ಝರ್ಝರಕಪಾಪಹಾರಿ ಕೃಷ್ಣನೆ

ಝರ್ಝರಕ ಕಲಿಯುಗದ ಪಾಪದ

ಮಾರ್ಜನದಿ ಕಳೆಯುವಿಯೊ ತವ ನಾಮದ ಸುಕೀರ್ತನೆಯಿಂ |

ಸರ್ಜನಾತ್ಮಕ ಲೋಕಹಿತದಲಿ

ವರ್ಜಿಸದೆ ಸಕಲರನು ಕಾಯುವ

ಮರ್ಜಿ ನಿನ್ನದು ಕೃಷ್ಣ ಪಾಪವ ಕಳೆದು ಮುಕ್ತಿ ಕೊಡು || ೯೯೨ ||


ಚಂಚಲೇಶನೆ ಲಕುಮಿಪತಿ ಹರಿ

ಚಂಚಲೆಯು ತಾ ಲಕುಮಿದೇವಿಯು

ಮುಂಚೆಯೇ ನೀನವಳ ಪತಿ ಹರಿ ವಾಸುದೇವ ವಿಭೋ |

ಸಂಚು ಮಾಡುತ ಕೌರವರ ನೀ

ವಂಚಕರ ಕೊಲ್ಲಿಸಿದೆ ರಣದಲಿ

ಪಂಚಪಾಂಡವರನ್ನು ರಕ್ಷಿಸಿದವಗೆ ನಾ ಶರಣು || ೯೯೩ ||


ಕೃಷ್ಣನೇ ನೀ ಟಿಟ್ಟಿಭಾಂತಕ

ಕೃಷ್ಣ ಕೊಂದಿಹೆಯಸುರಪಕ್ಷಿಯ

ಕೃಷ್ಣ ರಕ್ಷಿಸು ಸಜ್ಜನರ ನೀನನವರತ ದೇವ |

ವಿಷ್ಣು ರುದ್ರರು ಬ್ರಹ್ಮ ನೀನೇ

ಕೃಷ್ಣ ಶಕ್ತಿಯು ಗುಹನು ನೀನೇ

ಕೃಷ್ಣ ಗಣಪತಿ ಬ್ರಹ್ಮಣಸ್ಪತಿ ಲೋಕಗುರು ಹರಿಯೆ || ೯೯೪ ||


ಟ್ವಲಹಾರೀ ಚ ಠೋ ಲೄಶ್ಚ ೠ ಡಮರುಧರಪ್ರಿಯಃ |

ಡಿತ್ಥೋ ಢುಣ್ಢಿಪ್ರಿಯೋ ಣಶ್ಚ ತರ್ಕಾತರ್ಕವಿವರ್ಜಿತಃ || ೧೫೪ || (೧೦೦೩)


ಟ್ವಲಹಾರೀ ಭಯವಿದೂರನೆ

ಟ್ವಲವು ವಿಹ್ಲವ ವಿಕ್ಲವತೆಗಳು

ಟ್ವಲವ ದೂರೀಕರಿಸಿ ಕಾಯುವ ದೇವ ಶ್ರೀಕೃಷ್ಣ |

ಒಲವ ತೋರುತ ಕಾಯೊ ಕೃಷ್ಣನೆ

ಬಲವನೀಯುತ ಸಲಹೊ ಕೃಷ್ಣನೆ

ಹಲವು ಭಯಗಳ ನೀಗಿ ನೀನಭಯವನು ನೀಡಯ್ಯ || ೯೯೫ ||


ಠಕಾರನೆ ಶಿವ ವಾಸುದೇವನೆ

ಸಾಕಾರ ಹರಿ ಕೃಷ್ಣರೂಪನೆ

ವಿಕಾರವ ನೀಗಿಸುವ ದೇವನೆ ಚಂದ್ರಮಂಡಲನೆ |

ಏಕ ಮಂಡಲ ಮಹಾಧ್ವನಿ ಹರಿ

ಲೋಕಗೋಚರ, ಶೂನ್ಯ, ಕೃಷ್ಣನೆ

ಠಕ್ಕರಿಗೆ ತಕ್ಕಂಥ ಪಾಠವ ಕಲಿಸುವಂಥ ವಿಭೋ || ೯೯೬ ||


ಲೄಕಾರ ಹರಿ ವಾಸುದೇವನೆ

ಶ್ರೀಕಾರ ನಿನಗನವರತವಿದೆ

ಜೈಕಾರದಿಂ ನಿನ್ನ ಭಕುತರು ಪೊಗಳುವರು ನಿನ್ನ |

ಓಂಕಾರಮೂರುತಿಯೆ ಬ್ರಹ್ಮವೆ

ಸಾಕಾರ ಪರಬ್ರಹ್ಮ ಧರ್ಮವೆ

ವಿಕಾರಗಳನು ತಿದ್ದಿ ಸದ್ರೂಪವನು ನೀಡಯ್ಯ || ೯೯೭ ||


ೠಕಾರ ಶ್ರೀಕೃಷ್ಣದೇವನೆ

ಋಕ್ಷಭಲ್ಲೂಕಾದಿಸೇವಿತ

ಋಷಿಮುನಿಗಳಿಂ ನಿತ್ಯಧ್ಯಾತನೆ ವಾಸುದೇವ ಹರಿ |

ಋತದ ರೂಪನೆ ಸತ್ಯರೂಪನೆ

ಹಿತವನೀವನೆ ಮಿತಿಯಲೀವನೆ

ಖತಿವಿದೂರನೆ ಮತಿಯನೀವನೆ ಪತಿತಪಾವನನೆ || ೯೯೮ ||


ಡಮರುಧರಪ್ರಿಯ ವಾಸುದೇವನೆ

ಡಮರುಧರ ಹರ ಕೃಷ್ಣ ಹರಸಖ

ವಿಮಲರೂಪನೆ ಸುಮನದಾತನೆ ಕುಮನದೂರ ಹರಿ |

ಗಮನವೀಯೆಲೊ ನಿನ್ನ ಭಕ್ತಗೆ

ವಮನಗೈಸೆಲೊ ದುರ್ಗುಣಗಳನು

ಸಮನು ಯಾರೈ ಸರ್ವರಂತರ್ಯಾಮಿ ಪರಮಾತ್ಮಾ || ೯೯೯ ||


ಡಿತ್ಥ ನಾರಾಯಣನೆ ಕೃಷ್ಣನೆ

ಡಿತ್ಥ ಪುರುಷ ವಿಶಿಷ್ಟಲಕ್ಷಣ

ಡಿತ್ಥ ಶ್ಯಾಮನೆ ಯುವಕ ವಿದ್ವಾನ್ ಸುಂದರನೆ ಕೃಷ್ಣ |

ಪಿತ್ತಹಾರಕ, ಶಾಸ್ತ್ರವೇತ್ತೃವೆ

ಡಿತ್ಥ ಪ್ರಿಯದರ್ಶನನೆ ಶ್ರೀಹರಿ

ಚಿತ್ತ ನಿರ್ಮಲಗೊಳಿಸಿ ಬ್ರಹ್ಮದಿ ನಿಷ್ಠೆ ನೀ ಕೊಡಿಸು || ೧೦೦೦ ||


ಢುಂಢಿಪ್ರಿಯನೆ ಕೃಷ್ಣದೇವನೆ

ಢುಂಢಿ ದೇವ ಗಣೇಶ ಹರಸುತ

ಢುಂಢಿಪ್ರಿಯ ವಾಸುದೇವನೆ ವಿಷ್ಣು ನಾರಯಣ |

ಖಂಡಿಸುವೆ ನೀನಧರ್ಮವ ಮಿಗೆ

ದಂಡಿಸುವೆ ಖಳರನ್ನು ಲೋಕದಿ

ಮಂಡಿಸುವೆ ನಿಜಭಕ್ತಹೃದಯದಿ ರಾಧೆಯಧಿಪ ಹರಿ || ೧೦೦೧ ||


ಣಕಾರನೆ ನೀ ಕೃಷ್ಣದೇವನೆ

ಣಕಾರನು ನಿರ್ವೃತಿಯ ಕಾರಕ

ಣಕಾರನು ನಿಶ್ಚಯನು ಜ್ಞಾನನು ಬುದ್ಧದೇವ ಹರಿ |

ವಿಕಾರೇತರ, ಗುಣವಿವರ್ಜಿತ

ಣಕಾರನು ಭೂಷಣನು ಸೃಷ್ಟಿಗೆ

ಣಕಾರಾನಂದಸ್ವರೂಪನು ಸಚ್ಚಿದಾನಂದ || ೧೦೦೨ ||


ತರ್ಕಾತರ್ಕವಿವರ್ಜಿತ ಹರಿ

ತರ್ಕದೂರನತರ್ಕದೂರನು

ತರ್ಕ ನ್ಯಾಯಕೆ ತಾನೊಲಿಯದಿಹ ಭಕ್ತಪ್ರೇಮಿ ವಿಭೋ |

ಅರ್ಕರೂಪನೆ ನಿಖಿಲಲೋಕಕೆ

ಶರ್ಕರನೆ ಮಧುರಾತ್ಮಕನೆ ಹರಿ

ಕರ್ಕಶಕೆ ಮಾಧುರ್ಯ ನೀಡುವ ಕೃಷ್ಣ ಶ್ರೀಕೃಷ್ಣ || ೧೦೦೩ ||


ದಂಷ್ಟ್ರೀ ಚ ದಕ್ಷಸಾವರ್ಣಿಕಾಯಾಂ ತು ಪರಮರ್ಷಭ|

ಧನದೇಶೋ ಧರ್ಮಕಾಯೋ ಧನ್ವನ್ತರಿರ್ಧನುಷ್ಕರಃ || ೧೫೫ || (೧೦೦೯)


ದಂಷ್ಟ್ರಿ ಶ್ರೀನರಸಿಂಹ ಕೃಷ್ಣನೆ

ದಂಷ್ಟ್ರವುಳ್ಳ ವರಾಹಸ್ವಾಮಿಯೆ

ದಂಷ್ಟ್ರ ಹರಿತದ ಕೋರೆದಾಡೆಯ ಭೂವರಾಹವಿಭೋ |

ದಂಷ್ಟ್ರಿ ಶ್ವೇತವರಾಹಸ್ವಾಮಿಯೆ

ದಂಷ್ಟ್ರಿ ಯಜ್ಞವರಾಹಸ್ವಾಮಿಯೆ

ದಂಷ್ಟ್ರಿ ದುಷ್ಟವಿನಾಶ ಸಜ್ಜನಪಾಲ ಶ್ರೀಕೃಷ್ಣ || ೧೦೦೪ ||


ದಕ್ಷಸಾವರ್ಣಿಕಾಯಾಂ ಶ್ರೀ

ದಕ್ಷ ಪರಮನೆ ಋಷಭದೇವನೆ

ಯಕ್ಷಕಿನ್ನರನರಾಸುರಸುರವಂದ್ಯ ಶ್ರೀಕೃಷ್ಣ |

ಸಕ್ಷಮನೆ ದುಷ್ಟಾಂತ್ಯ ಕೃಷ್ಣನೆ

ವಕ್ಷದಲಿ ಲಕುಮಿಯನು ಪೊತ್ತನೆ

ಶಿಕ್ಷೆಯಿಂ ಶಿಕ್ಷಣವ ದುಷ್ಟರಿಗಿತ್ತು ಸಲಹುವನೆ || ೧೦೦೫ ||


ಧನದೇಶನೆ ಕುಬೇರಾಧಿಪ

ಧನವನೀವ ಕುಬೇರನಧಿಪತಿ

ಧನಲಕುಮಿಪತಿ ಮನಸಿಜನ ಪಿತ ದೇವ ಶ್ರೀಕೃಷ್ಣ |

ಜನರ ಬೇಡಿಕೆಯೀವ ಶ್ರೀಹರಿ

ಮನವ ಶುಚಿಗೊಳಿಸುವ ಮಹಾತ್ಮನೆ

ಜನನಮರಣವ ಕಳೆವ ಸುಜ್ಞಾನವನು ನೀಡೆಮಗೆ || ೧೦೦೬ ||


ಧರ್ಮಕಾಯನೆ ವಾಸುದೇವನೆ

ಧರ್ಮಮೂರ್ತಿಯೆ ಕೃಷ್ಣಮೂರ್ತಿಯೆ

ಧರ್ಮರಕ್ಷಣೆಗಾಗಿ ನೀನವತರಿಸಿ ಲೀಲೆಯಲಿ |

ಕರ್ಮಕರ್ಮದ ಮರ್ಮ ತಿಳುಹಿದೆ

ಚರ್ಮಚಕ್ಷುವಗೋಚರನೆ ಹರಿ

ದುರ್ಮನವ ತೊಳೆ ಸತ್ಪಥದಿ ಮುನ್ನಡೆಸು ಶ್ರೀಕೃಷ್ಣ || ೧೦೦೭ ||


ಧನ್ವನ್ತರಿಯೆ ವಾಸುದೇವನೆ

ಧನ್ವನ್ತರಿಯೆ ವೈದ್ಯದೇವನೆ

ಧನ್ವನ್ತರಿಯೆ ಪೂರ್ಣಾಮೃತದ ಕಲಶ ಪಿಡಿದಿಹನೆ |

ಮನ್ವಾದಿಗಳ ಮೂಲ ಮಾಧವ

ಧೇನ್ವಾದಿಗಳ ಕಾವ ಕೇಶವ

ಧನ್ವನ್ತರಿಯೆ ಕೃಷ್ಣ ಕಾಯೈ ನೀಡನಾಮಯತೆ || ೧೦೦೮ ||


ಧನುಷ್ಕರ ಶ್ರೀಕೃಷ್ಣ ರಾಮನೆ

ಧನುವ ಕರದಲಿ ಪಿಡಿದ ಶಾರ್ಙ್ಗಿಯೆ

ಹನುಮಗೊಲಿದನೆ ಜನುಮಸಾರ್ಥಕಗೊಳಿಸು ದಯದಿಂದ |

ಸನುಮತದಿ ತವ ಭಕ್ತಿ ಕರುಣಿಸು

ಮನುಕುಲವ ಬಡಿದೆಬ್ಬಿಸುತ ನೀ

ಮನುತೆಯಿಂ ದೇವತ್ವ ಬ್ರಹ್ಮತ್ವಕ್ಕೆ ಕರೆದೊಯ್ಯೋ || ೧೦೦೯ ||


ಹಿರಣ್ಯಪಾಣಿಶ್ಶತ್ರುಘ್ನೋ ವೀತಿಹೋತ್ರಃ ಕ್ರತೋಃಪತಿಃ|

ರುದ್ರಶಕ್ತಿರ್ಮಹಾವಿಷ್ಣುಸ್ಸರ್ವಶಾನ್ತಿಪ್ರದಾಯಕಃ || ೧೫೬ || (೧೦೧೬)


ಹಿರಣ್ಯಪಾಣಿ ವಾಸುದೇವನೆ

ಹಿರಣ್ಯದ ಕರ ಚಿನ್ನಕೈ ಹರಿ

ಹರಬ್ರಹ್ಮಹರಿಶಕ್ತಿಯಾತ್ಮನೆ ಕೃಷ್ಣ ಪರಬೊಮ್ಮ |

ನರನ ಕರ ಜೀವರ ಕರವು ಹರಿ

ಹಿರಣ್ಯಾತ್ಮಕ ಹಸ್ತ ಶುದ್ಧವು

ಪರಮಮಂಗಲಧಾಮ ಸರ್ವಾಂತರನೆ ಪರಮಾತ್ಮ || ೧೦೧೦ ||


ಶತ್ರುಘ್ನ ಶ್ರೀಕೃಷ್ಣದೇವನೆ

ಶತ್ರುಗಳ ಘಾತಿಸುವ ಶ್ರೀಹರಿ

ಶತ್ರುನಾಶನ ಶತ್ರುವನ್ನುದ್ಧರಿಪ ಶ್ರೀಕೃಷ್ಣ |

ಶತ್ರುಶಿಕ್ಷಣ ಶತ್ರುಹನನವು

ಶತ್ರುಪಾಪವಿನಾಶ ಪುಣ್ಯದ

ಶತ್ರುಮೋಕ್ಷದ ಮಿತ್ರಕಾರಕ ವಿಷ್ಣು ಪರಬೊಮ್ಮ || ೧೦೧೧ ||


ವೀತಿಹೋತ್ರನೆ ವಾಸುದೇವನೆ

ವೀತಿಹೋತ್ರನೆ ಹವ್ಯವುಂಬನೆ

ನೀತಿಬೋಧಕನಗ್ನಿರೂಪನೆಯವಮನುತ್ತಮನೆ |

ವಾತರೂಪನೆ ನಭಸ್ವರೂಪನೆ

ಸೂತ ನೀ ಜಗನಾಟಕಕೆ ಹರಿ

ಮಾತು ನಿನ್ನದು ಹೇತು ನೀನೆಲೊ ಯಾತುಧಾನಹನೆ || ೧೦೧೨ ||


ಕ್ರತೋಃಪತಿ ಹರಿ ವಾಸುದೇವನೆ

ಕ್ರತುವು ಯಜ್ಞವು ಯಜ್ಞಪತಿ ಹರಿ

ಕ್ರತುಪತಿಯು ನೀ ವ್ರತಪತಿಯು ನೀ ದೇವ ಶ್ರೀಕೃಷ್ಣ |

ಗತವು ನೀನೇ ಭವ್ಯ ನೀನೇ

ಹಿತನು ನೀನೇ ಗತಿಯು ನೀನೇ

ಪಥವು ಪಥಿಕನು ಪಥಪ್ರದರ್ಶಕ ಸರ್ವ ಶ್ರೀಕೃಷ್ಣ || ೧೦೧೩ ||


ರುದ್ರಶಕ್ತಿಯೆ ದೇವ ಕೃಷ್ಣನೆ

ರುದ್ರನೊಳಗಿಹೆ ರುದ್ರನಾಗಿಹೆ

ರುದ್ರಚೇತನ ಲಯದ ಶಕ್ತಿಯೆ ದೇವ ಪರಬೊಮ್ಮ |

ಭದ್ರ ಮಂಗಲರೂಪ ಶುಭದನೆ

ಕ್ಷುದ್ರಚಿತ್ತವಿಭೇದಕನೆ ಹರಿ

ಸುದ್ರವದಿ ಶಯನಿಪನೆ ಶೇಷಿಯೆ ವಿಷ್ಣು ಶ್ರೀಪತಿಯೆ || ೧೦೧೪ ||


ಮಹಾವಿಷ್ಣುವೆ ನಾರಾಯಣನೆ ಹರಿ

ಮಹಾನಾತ್ಮನೆ ಸರ್ವರಾತ್ಮನೆ

ಮಹಾಬಲ ಮಹತೋಭಾರ ಹರಬ್ರಹ್ಮಕೇಶವನೆ |

ಮಹತ್ತತ್ತ್ವನೆ ಮಹಾಶಕ್ತಿಯೆ

ಮಹಾವ್ಯಾಪಕತತ್ತ್ವ ಕೃಷ್ಣನೆ

ಮಹಾಸೃಷ್ಟಿಯ ಪ್ರವೇಶಿಸಿ ಚೈತನ್ಯದಾಯಕನೆ || ೧೦೧೫ ||


ಸರ್ವಶಾನ್ತಿಪ್ರದಾಯಕ ಹರಿ

ಸರ್ವರಿಗು ಸರ್ವಕ್ಕು ಶಾಂತಿಯ

ಸರ್ವ ಜೀವಕು ಮನಶ್ಶಾಂತಿಯನೀವ ಶ್ರೀಕೃಷ್ಣ |

ಸರ್ವರೀತಿಯ ಶಾಂತಿದಾಯಕ

ಸರ್ವಕಾಲದಿ ಶಾಂತಿದಾಯಕ

ಸರ್ವದೇಶದಿ ಶಾಂತಿಯೀವ ಪರಾತ್ಮನಿಗೆ ಶರಣು || ೧೦೧೬ ||


ಫಲಶ್ರುತಿಃ

ಇತ್ಥಂ ಪ್ರಕೀರ್ತಿತಂ ಸ್ತೋತ್ರಂ ಸಹಸ್ರಂ ಹ್ಯೇತದುತ್ತಮಮ್|

ಕೃಷ್ಣಸ್ಯಾಮಿತರೂಪಸ್ಯ ಕೃಷ್ಣಾನುಗ್ರಹಕಾರಕಮ್ || ೧೫೭ ||


ಅನಂತನಾಮರೂಪನಾದ ಶ್ರೀಕೃಷ್ಣನ ಈ ಉತ್ತಮವಾದ ಸಹಸ್ರನಾಮಸ್ತೋತ್ರರತ್ನವು ಹೀಗೆ ಚೆನ್ನಾಗಿ ಕೀರ್ತಿತವಾಗಿ, ಕೃಷ್ಣನ ಅನುಗ್ರಹಕ್ಕೆ ಕಾರಣವಾಗಿರುವುದು.


ಧರ್ಮಾರ್ಥಕಾಮಮೋಕ್ಷಾಣಾಂ ಸಾಧಕಂ ನಾತ್ರ ಸಂಶಯಃ |

ದೇವದೇವಸ್ಯ ಪುಣ್ಯಾನಿ ನಾಮಾನ್ಯಗಣಿತಾನಿ ವೈ || ೧೫೮ ||


ಅಲ್ಲದೆ, ಇದು ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಸಾಧಿಸಿಕೊಡುವಂಥದ್ದು ಎಂಬುದರಲ್ಲಿ ಸಂಶಯವಿಲ್ಲ. ದೇವದೇವನಾದ ಶ್ರೀಕೃಷ್ಣಪರಮಾತ್ಮನ ಪುಣ್ಯತಮವಾದ ಹೆಸರುಗಳು (ನಾಮಗಳು) ನಿಶ್ಚಯವಾಗಿಯೂ ಗಣನೆಗೆ ಸಿಲುಕದಷ್ಟು ಅಸಂಖ್ಯ, ಅನಂತವಾಗಿವೆ.


ತಥಾಪ್ಯಹಂ ಸುಯತ್ನೇನ ಯಥಾಶಕ್ತಿ ಸ್ಮರಾಮಿ ತಾನ್ |

ಅನನ್ತನಾಮರೂಪಂ ತಮೀಡೇ ಸ್ತೋತ್ರೇಣ ಭಕ್ತಿತಃ || ೧೫೯ ||


ಆದರೂ ಕೂಡ, ನಾನು ಬಹುಪ್ರಯತ್ನದಿಂದ ನನಗೆ ಶಕ್ತಿಯಿದ್ದಷ್ಟು (ಪರಮಾತ್ಮ ಕೊಟ್ಟಷ್ಟು) ಆತನ ನಾಮಗಳನ್ನು ಸ್ಮರಿಸುತ್ತೇನೆ. ಅನಂತವಾದ, ಅಂತ್ಯವಿಲ್ಲದ, ಕೊನೆಯಿಲ್ಲದ ನಾಮ-ರೂಪಗಳುಳ್ಳ ಆತನನ್ನು ಈ ಸಹಸ್ರನಾಮಸ್ತೋತ್ರದಿಂದ ಭಕ್ತಿಪೂರ್ವಕ ಸ್ತುತಿಸುತ್ತೇನೆ.


ಕೃಷ್ಣಾನುಗ್ರಹಮಾತ್ರೇಣ ನಾತ್ರ ಕಾರ್ಯಾ ವಿಚಾರಣಾ |

ಕೃಷ್ಣಸಾಯುಜ್ಯತಾಂ ಯಾತಿ ಶ್ರದ್ಧಯಾ ಯಃ ಪಠೇನ್ಮುದಾ || ೧೬೦ ||


ಈ ಕಾರ್ಯವು ಕೇವಲ ಆ ಶ್ರೀಕೃಷ್ಣನ ಅನುಗ್ರಹದಿಂದಲೇ ಆಗಿರುವುದಲ್ಲದೆ, ನನ್ನದೇನೂ ಇಲ್ಲ. ಈ ವಿಚಾರದಲ್ಲಿ ಸಂದೇಹ, ಹೆಚ್ಚಿನ ವಿವರಣೆ ಅನಗತ್ಯ. ನಿಶ್ಚಯವಾಗಿಯೂ ಇದು ಆತನ ಪ್ರೇರಣೆಯೇ ಸರಿ. ಇದನ್ನು ಯಾವನು ಶ್ರದ್ಧಾದರಾತಿಶಯದಿಂದ ಪಠಿಸುತ್ತಾನೋ ಅವನು ಶ್ರೀಕೃಷ್ಣನೊಂದಿಗೆ ಸಾಯುಜ್ಯಮುಕ್ತಿಯನ್ನೇ ಇಹಪರಗಳಲ್ಲೂ ಹೊಂದಿ ಐಕ್ಯವಾಗುವನು.


ವಾಞ್ಛಿತಾರ್ಥಮವಾಪ್ನೋತಿ ಲೌಕಿಕಂ ಪಾರಲೌಕಿಕಮ್ |

ಶ್ರೀತುಷ್ಟಿಪುಷ್ಟಿಕಾಮಶ್ಚೇನ್ನಿತ್ಯಂ ಪಠ್ಯಂ ಸುಭಕ್ತಿತಃ || ೧೬೧ ||


ಅಲ್ಲದೆ, ಅಂಥವನು ಬಯಸಿದ್ದೆಲ್ಲವನ್ನೂ— ಲೌಕಿಕ, ಪಾರಲೌಕಿಕವೆರಡರಲ್ಲೂ— ಪಡೆಯುತ್ತಾನೆ. ಸಿರಿ(ಸಂಪದ), ಸಂತುಷ್ಟಿ, ಆರೋಗ್ಯ / ಪುಷ್ಟಿಗಳನ್ನು ಬಯಸುವುದಾದರೆ ಇದನ್ನು ಪ್ರತಿನಿತ್ಯ ಒಳ್ಳೆಯ ಶುದ್ಧಮನದಿಂದ ಭಕ್ತಿಪೂರ್ವಕ ಪಠಿಸಬೇಕು.


ಕಲತ್ರಪುತ್ರಪೌತ್ರಾದಿಸರ್ವೈಹಿಕಮವಾಪ್ನುಯಾತ್ |

ಆಮುಷ್ಮಿಕಂ ಗತಿಂ ಶ್ರೇಷ್ಠತಮಂ ಪ್ರಾಪ್ನೋತಿ ಶಾಶ್ವತಮ್ || ೧೬೨ ||


ಹಾಗೆ ಪಠಿಸಿದರೆ ಪತ್ನಿ, ಸಂತತಿ, ಮಕ್ಕಳು, ಮೊಮ್ಮಕ್ಕಳು ಮೊದಲಾದ ಸಕಲ ಐಹಿಕ (ಇಹಲೋಕದ) ಇಷ್ಟಗಳನ್ನೂ ಪಡೆಯುವನು. ಅಲ್ಲದೆ, ಪರಲೋಕದ (ಆಮುಷ್ಮಿಕ) ಶಾಶ್ವತವೂ ಶ್ರೇಷ್ಠತಮವೂ ಆದ ಪರಗತಿಯನ್ನೂ ಹೊಂದುವನು.


ಪಠೇತ್ ಸ್ತೋತ್ರಮಿದಂ ದಿವ್ಯಮರ್ಥಾನನ್ವಿಷ್ಯ ಯತ್ನತಃ |

ವಾಗರ್ಥಾಭ್ಯಾಂ ಮನ್ಥನಾಚ್ಚ ಪರಿಪೂರ್ಣಫಲಂ ಭವೇತ್ || ೧೬೩ ||


ಈ ದಿವ್ಯವಾದ ಸ್ತೋತ್ರವನ್ನು ಪ್ರಯತ್ನಪೂರ್ವಕ ಅರ್ಥಾನುಸಂಧಾನ ಸಹಿತ ಪಠಿಸಬೇಕು. ಹೀಗೆ ವಾಕ್ ಮತ್ತು ಅರ್ಥಗಳೆರಡರ ಚಿಂತನ-ಮಂಥನದಿಂದ ಇದರ ಪರಿಪೂರ್ಣವಾದ ಫಲವುಂಟಾಗುವುದು.


ಬ್ರಹ್ಮಜ್ಞಾನಮಥಾದ್ವೈತಮುಕ್ತಿಮಾತ್ಯನ್ತಿಕಂ ಪರಮ್ |

ಮನಶ್ಶಾನ್ತಿಮಥಾರೋಗ್ಯಂ ದೀರ್ಘಾಯುಷ್ಯಂ ಸಮನ್ತತಃ || ೧೬೪ ||


ಅಂತಹ ಪರಿಪೂರ್ಣಫಲವೇ ಬ್ರಹ್ಮಾತ್ಮಾಭೇದಜ್ಞಾನ, ಕೊಟ್ಟಕೊನೆಯದಾದ ಶ್ರೇಷ್ಠವಾದ ಅದ್ವೈತಮುಕ್ತಿ. ಹಾಗೆಯೇ, ಎಲ್ಲರೀತಿಯಿಂದಲೂ ಮನಃಶಾಂತಿ, ಸಮಾಧಾನ, ನೆಮ್ಮದಿ, ತೃಪ್ತಿ, ಆನಂದ, ಆರೋಗ್ಯ, ದೀರ್ಘಾಯುಷ್ಯಗಳನ್ನೂ ಪಡೆಯುವನು. 


ಋದ್ಧಿಂ ವೃದ್ಧಿಂ ಸಮೃದ್ಧಿಂ ಚ ಸುಖವೃದ್ಧಿಮವಾಪ್ನುಯಾತ್ |

ವಿದ್ಯಾಂ ಬುದ್ಧಿಂ ತಥೈಶ್ವರ್ಯಂ ಸಾಮ್ರಾಜ್ಯಂ ಸ್ವರ್ಗಮಿಚ್ಛುಕಃ || ೧೬೫ ||


ಬಯಸಿದವನು ಋದ್ಧಿಯನ್ನೂ (ಯೋಗ್ಯತೆ, ಸಂಪತ್ತು), ವೃದ್ಧಿಯನ್ನೂ (ಸಂಪದಭಿವೃದ್ಧಿ), ಹಾಗೂ ಸಮೃದ್ಧಿ (ಸಾಕಷ್ಟು, ಬೇಕಾದಷ್ಟು, ಧಾರಾಳ, ಹೇರಳ ಇರುವಿಕೆ)-ಸುಖದ ಹೆಚ್ಚಳವನ್ನೂ ಪ್ರಾಪ್ತಿಮಾಡಿಕೊಳ್ಳುವನು. ಅಲ್ಲದೆ, ಇಚ್ಛಿಸಿದರೆ ವಿದ್ಯೆ, ಬುದ್ಧಿ, ಐಶ್ವರ್ಯ / ಈಶ್ವರತ್ವ / ಒಡೆತನ / ಸ್ವಾಮಿತ್ವ, ಸಾಮ್ರಾಜ್ಯ, ಸ್ವರ್ಗ—ಇವನ್ನೂ ಹೊಂದುವನು.


ಕೃಷ್ಣಾಮೃತರಸಾಸ್ವಾದಾತ್ ಕಿಂ ನ ಪ್ರಾಪ್ನೋತಿ ಪಾಠಕಃ |

ಸರ್ವಮೇವ ತಥಾಪ್ನೋತಿ ವಾಸುದೇವಸ್ಯ ಲೀಲಯಾ || ೧೬೬ ||


ಕೃಷ್ಣಾಮೃತದ ರಸಾಸ್ವಾದದ ದೆಸೆಯಿಂದ ಪಠಿಸುವವನು ಏನನ್ನು ತಾನೇ ಪಡೆಯನು? ಆ ಪರವಾಸುದೇವನ ಲೀಲೆಯಿಂದ ಎಲ್ಲವನ್ನೂ ಹೊಂದುವನು.


|| ಇತಿ ಶ್ರೀಕೃಷ್ಣಸಹಸ್ರನಾಮಸ್ತೋತ್ರಂ ಸಂಪೂರ್ಣಮ್ | ಶ್ರೀಕೃಷ್ಣಾರ್ಪಣಮಸ್ತು ||


ಓಂ ಶಾನ್ತಿಶ್ಶಾನ್ತಿಶ್ಶಾನ್ತಿ:|| ಹರಿ: ಓಮ್||



Comments

Popular posts from this blog

ಸ್ತೋತ್ರಸಂಹಿತಾ ೫.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೫ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೩ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)