ಸ್ತೋತ್ರಸಂಹಿತಾ ೪.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

 ಜಗನ್ನಿವಾಸರೂಪಶ್ಚ ಸ್ವಭಕ್ತಾಭಯಕಾರಕಃ।

ಸತ್ಯವ್ರತಸ್ತ್ರಿಸತ್ಯಶ್ಚ ಸದ್ಯೋನಿಸ್ಸತ್ಯಭಾವನಃ॥೮೯॥(೬೦೭)


ಜಗನ್ನಿವಾಸರೂಪ ಕೃಷ್ಣನೆ

ಜಗವ ತನ್ನ ನಿವಾಸ ಮಾಡಿಹ

ಜಗದಿ ವಾಸಿಸುವಂಥ ರೂಪನೆ ಹೇ ವಿರಾಡ್ರೂಪ |

ಜಗವ ಝಗಮಗಿಪಂತೆ ತೋರುವ

ಖಗವಿಹಾರನೆ ಸರ್ವವ್ಯಾಪಕ

ಮುಗುದನಂದದಿ ಶುದ್ಧಪ್ರೇಮದಿ ಕಾಣು ಜಗವನ್ನು || ೬೦೨ ||


ಸ್ವಭಕ್ತಾಭಯಕಾರಕನೆ ಹರಿ

ಸ್ವಭಕ್ತರಿಗಭಯಕ್ಕೆ ಕಾರಣ

ಸುಭಕ್ತರಿಗೊಲಿದೀವ ನಿರ್ಭಯ ಬ್ರಹ್ಮಜ್ಞಾನವನು |

ವಿಭಕ್ತಿಯ ಪದದಿಂದ ಮೇಲಕೆ

ಸುಭಕ್ತಿಜ್ಞಾನಗಳ ಕೃಪೆಯಲಿ-

-ಯಭಕ್ತಿಯನವಿಭಾಗರೂಪದದ್ವೈತವನು ಪಡೆವ || ೬೦೩ ||


ಸತ್ಯವ್ರತ ವಾಸುದೇವನೆ

ಸತ್ಯಸಂಕಲ್ಪನೆ ಮಹಾತ್ಮನೆ

ಸತ್ಯರೂಪನೆ ಕಲ್ಪಿಸುತ ತತ್ಪೂರ್ಣ ಗೈಯುವನೆ |

ಸತ್ಯವೇ ಭಗವತ್ಸ್ವರೂಪವು

ಸತ್ಯವ್ರತವಾತನ ಸ್ವಭಾವವು

ಸತ್ಯದಲಿ ನೆಲೆಸಿದ್ದು ಕಾವನು ಸತ್ಯವಂತರನು || ೬೦೪ ||


ತ್ರಿಸತ್ಯನೆ ಮೂರ್ಕಾಲ ಸತ್ಯನೆ

ಸಸತ್ಯನೆ ಮಾಯೆಯಿಂ ತೋರ್ವನೆ

ಸುಸತ್ಯನೆ ತ್ರಯಿಯ ಸ್ವರೂಪನೆ ವೇದರೂಪ ಹರಿ |

ಅಸಮತತ್ತ್ವವೆ ವಿಷಮರಹಿತನೆ

ಸುಸಮಯವಿದೆಂದರಿತು ಭಜಿಸಿರಿ

ವಿಷಮಯದ ಸಂಸಾರ ದಾಟಿರಿ ಕೃಷ್ಣಕೃಪೆಯಿಂದ || ೬೦೫ ||


ಸದ್ಯೋನಿಯೆ ಸನ್ಮೂಲ ಕೃಷ್ಣನೆ

ಸದ್ಯ ತೋರುವ ಜಗದ ಕಾರಣ

ಪದ್ಯ ಗದ್ಯದ ಚಂಪುವಿನ ರೂಪದಲಿ ತೋರುವನೆ |

ಸದ್ಯದಲೆ ಪರಮಾತ್ಮಚಿಂತನೆ

ಸದ್ಯ ಮುಕುತಿಯ ತೋರುವುದು ದಿಟ

ವಿದ್ಯೆಯಿಂ ಬಂಧನವ ಕಳೆಯುತ ಪರವಿರಕ್ತಿಯನು || ೬೦೬ ||


ಸತ್ಯಭಾವನ ಕೃಷ್ಣದೇವನೆ

ಸತ್ಯದಲಿ ನೆಲೆಸಿರುವ ಶ್ರೀಹರಿ

ಸತ್ಯವನೆ ಭಾವಿಸುತ ಸಲಹುವ ಸತ್ಯವಾದಿಗಳ |

ಸತ್ಯ-ಋತಗಳೆ ನಿನ್ನ ಮುಖಗಳು

ಸತ್ಯವೇ ಗೆಲ್ಲುವುದು ಸತ್ಯವು

ಸತ್ಯಕಪಜಯವಿಲ್ಲವೆಂದಿದೆ ಶುದ್ಧ ವೇದಾಂತ || ೬೦೭ ||


ಸತ್ಯೇನಿಹಿತರೂಪಶ್ಚ ಸತ್ಯಸ್ಯಸತ್ಯರೂಪಧೃತ್।

ಋತಸತ್ಯದ್ವಿನೇತ್ರಶ್ಚ ಸತ್ಯಾತ್ಮಕಸ್ವರೂಪವಾನ್॥೯೦॥(೬೧೧)


ಸತ್ಯೇ-ನಿಹಿತರೂಪ ಕೃಷ್ಣನೆ

ಸತ್ಯದಲೆ ನೆಲೆಸಿರುವ ರೂಪನೆ

ಸತ್ಯವೇ ಸ್ವರೂಪವಾಗುಳ್ಳವನೆ ಪರಮೇಶ |

ಸತ್ಯತತ್ತ್ವದಲಿರುವ ಸತ್ತೆಯೆ

ಸತ್ಯ ಸದ್ರೂಪನೆ ಚಿದಾತ್ಮಕ

ಸತ್ಯ ಚಿತ್ ಪರಮಾನಂದ ಹರಿ ಸಚ್ಚಿದಾನಂದ || ೬೦೮ ||


ಸತ್ಯಸ್ಯ-ಸತ್ಯರೂಪ-ಧೃತ್ ಹರಿ

ಸತ್ಯದ ನಿಜರೂಪ ಕೃಷ್ಣನೆ

ಸತ್ಯವೇ ತವ ಪ್ರಾಣವಾತ್ಮವು ಸತ್ಯ ತ್ವದ್ರೂಪ |

ಸತ್ಯದಿಂದಲೆ ಧರ್ಮ ನ್ಯಾಯವು

ಸತ್ಯದಿಂದಲೆ ಚಿತ್ತಶುದ್ಧಿಯು

ಸತ್ಯದಿಂ ಬ್ರಹ್ಮಾತ್ಮಜ್ಞಾನವವಿದ್ಯೆನಾಶನವು || ೬೦೯ ||


ಋತ-ಸತ್ಯ-ದ್ವಿನೇತ್ರನೆ ಹರಿ

ಋತವು ಸತ್ಯವದೆರಡು ಕಣ್ಗಳು

ಋತ ವಿಚಾರವು ಸತ್ಯವಾಚಾರವದು ಧರ್ಮಕ್ಕೆ |

ಋತವು ನಿಯತಿಯು ಗತಿಯು ಲೋಕದ

ಋತದ ವ್ಯಕ್ತಸ್ವರೂಪ ಸತ್ಯವು

ಋತವು ಸತ್ಯಜ್ಞಾನನಂತದ ವ್ಯಕ್ತ ಕ್ರಮವಹುದು || ೬೧೦ ||


ಸತ್ಯಾತ್ಮಕ-ಸ್ವರೂಪವಾನ್ ಹರಿ

ಸತ್ಯವಾತ್ಮವು ಕೃಷ್ಣ ನಿನ್ನಯ

ಸತ್ಯದಿಂ ಕೂಡಿಹ ಸ್ವರೂಪವು ನಿನ್ನದೈ ಕೃಷ್ಣ |

ಸತ್ಯವಾತ್ಮಸ್ವರೂಪವಾಗಿದೆ

ಸತ್ಯ ಬ್ರಹ್ಮಸ್ವರೂಪವಾಗಿದೆ

ಸತ್ಯಕಿಂ ಮಿಗಿಲಾದ ತಪವಿನ್ನಿಲ್ಲ ಜಗದೊಳಗೆ || ೬೧೧ ||


ಪ್ರಪನ್ನಾರ್ತಿಹರಶ್ಚೈವ ಪ್ರಪನ್ನಾರ್ಥಪ್ರದಾಯಕಃ।

ಪ್ರಪನ್ನರಮಮಾಣಶ್ಚ ಪನ್ನಗಾಶನವಾಹನಃ॥೯೧॥(೬೧೫)


ಪ್ರಪನ್ನಾರ್ತಿಹರನೆ ಕೃಷ್ಣನೆ

ಪ್ರಪನ್ನರ ಶರಣರ ದುಃಖಹರ

ಪ್ರಪನ್ನಾತ್ಮರ ಯೋಗ-ಕ್ಷೇಮವ ಕಾವ ಕರುಣಾಳು |

ವಿಪತ್ ಪರಿಹರಿಸುವ ಮಹಾತ್ಮನೆ

ಸಪತ್ನೀಕರಿಗೀವ ಸಂತತಿ

ಕುಪಥಿಗಳಿಗೀವನು ಸುಶಿಕ್ಷಣ ವಿನುತಬಂಧು ಹರಿ || ೬೧೨ ||


ಪ್ರಪನ್ನಾರ್ಥ-ಪ್ರದಾಯಕ ಹರಿ

ಪ್ರಪನ್ನರಿಗೀವನು ಸ್ವಭೀಷ್ಟವ

ವಿಪತ್-ಹಾರಿಯು ಸಕಲವಾಂಛಿತಪ್ರದನು ಶ್ರೀಕೃಷ್ಣ |

ಅಪಹರಿಸಿ ಸಕಲಾಘಸಂಕುಲ-

-ವುಪಕರಿಸಿ ಸರ್ವಾರ್ಥವೀಯುತ

ಸುಪಥ ತೋರುವ ಶರಣುಹೊಂದಿದ ತನ್ನ ಭಕುತರಿಗೆ || ೬೧೩ ||


ಪ್ರಪನ್ನ-ರಮಮಾಣ ಕೃಷ್ಣನೆ

ಪ್ರಪನ್ನರ ಶರಣರ ರಮಿಸುವನು

ಪ್ರಪತ್ತಿಗೆ ತಾನೊಲಿದು ಪರಮಾನಂದವೀಯುವನು |

ಪ್ರಪತ್ತಿಯಲರ್ಪಿಸಿದರಾತ್ಮವ

ವಿಪತ್ತೆಲ್ಲವ ಕಳೆದು ಸಂಪದ

ಸಪದಿ ನೀಡುವ ಭಕುತಿ ಜ್ಞಾನ ವಿರಕ್ತಿ ಮುಕುತಿಗಳ || ೬೧೪ ||


ಪನ್ನಗಾಶನ-ವಾಹನನೆ ಹರಿ

ಪನ್ನಗವ ಸರ್ಪವನು ತಿನ್ನುವ

ಪನ್ನಗಾರಿಯ ವೈನತೇಯನ ಮೇಲೆ ಸಂಚರಿಪ |

ನನ್ನ ಪ್ರಿಯತಮ ಭಿನ್ನನಲ್ಲದ

ಸನ್ಮತಿಪ್ರದ ವಾಸುದೇವನೆ

ಜನ್ಮಮರಣದ ಚಕ್ರ ಭೇದಿಸಿ ತೋರು ಮುಕುತಿಯನು || ೬೧೫ ||


ಏಕೈಕಾಶ್ರಯರೂಪೀ ಚೈಕಾಯನಶ್ಚ ಸತಃಪ್ರಸೂಃ।

ಸಂನಿಧಾನಸ್ವರೂಪಶ್ಚಾನುಗ್ರಹಾತ್ಮಕಮೂರ್ತಿಮಾನ್॥೯೨॥(೬೨೦)


ಏಕೈಕಾಶ್ರಯರೂಪಿ ಕೃಷ್ಣನೆ

ಶ್ರೀಕರನೆ ಶ್ರೀದರನೆ ಶ್ರೀಪತಿ-

-ಯೇಕಮೇವಾಶ್ರಯನು ಮೋಕ್ಷಕೆ ಕೃಷ್ಣ ಪರಬೊಮ್ಮ |

ನಾಕದಲ್ಲಿರನಾ ಮಹಾತ್ಮನು

ಲೋಕ ಮೂರರ ಸಾರಸತ್ತ್ವನು

ಪಾಕಶಾಸನವಂದ್ಯ ಜ್ಞಾನೀಭಕ್ತಹೃದಯಗನು || ೬೧೬ ||


ಏಕಾಯನ ವಾಸುದೇವನೆ

ಲೋಕರಿಗೆ ತಾನೇಕ ನೆಲೆ ಹರಿ

ಕಾಕುಜನಹರ ಸಾಧುಪ್ರೀಯನೆ ಮುಕ್ತಿಧಾಮ ಹರಿ |

ನಾಕು ಜನರೊಳು ಬೆರೆತು ಬೆಳೆಯೆಲೊ

ಬೇಕು ಲೋಕಕೆ ನೀನುಯೆನಿಸಿಕೊ

ಸಾಕು ವೈಭವ ಬೇಕು ಸರಳತೆ ಶುದ್ಧಹೃದಯವದು || ೬೧೭ ||


ಸತಃಪ್ರಸೂಃ ಕೃಷ್ಣದೇವನೆ

ವಿತತ ಬ್ರಹ್ಮವೆ ಮೂರು ಲೋಕದಿ

ಸತತ ನಿನ್ನನು ಧ್ಯಾನಿಸುತ ಬ್ರಹ್ಮಾತ್ಮಬೋಧೆಯಲಿ |

ಸತ್ತೆ ನಿನ್ನಲಿ ಪ್ರಸವಹೊಂದಿತು

ಮತ್ತೆ ನಿನ್ನಲೆ ವರ್ತಿಸುತ್ತಿದೆ

ಸುತ್ತಿ ಕೊನೆಗದು ಲೀನವಪ್ಪುದು ಕೃಷ್ಣ ನಿನ್ನೊಳಗೆ || ೬೧೮ ||


ಸಂನಿಧಾನಸ್ವರೂಪನೆ ಹರಿ

ತ್ವನ್ನಿಧಾನವದಾಶ್ರಯವು ನಿಜ

ಮುನ್ನ ಕಾಯೋ ದೇವದೇವನೆ ಶ್ರೀಪತೇ ಕೃಷ್ಣ |

ಇನ್ನು ನೀನೇ ಸರ್ವವೆನ್ನುತ

ತನ್ನ ತಾನೆಂಬುದನು ತೊಲಗಿಸು

ಪನ್ನಗಾಶನವಾಹನನೆ ನಾರಾಯಣನೆ ಬೊಮ್ಮ || ೬೧೯ ||


ಅನುಗ್ರಹಾತ್ಮಕಮೂರ್ತಿಮಾನ್ ಹರಿ-

-ಯನುಗ್ರಹದ ಸ್ವರೂಪವೆತ್ತಿಹೆ

ಸನುಮತದಿ ಕರುಣಿಪುದು ಮುಕುತಿಯ ಭಕುತಿ ವಿರಕುತಿಯ |

ಹನುಮ ಬಲ್ಲನು ಭೀಮ ಬಲ್ಲನು

ಜನುಮ ಜನುಮದಿ ಮುಕ್ತ ಬಲ್ಲನು

ಮನುಜರೂಪಿನ ಕೃಷ್ಣ ತಾ ಪರಿಪೂರ್ಣ ಪರಮಾತ್ಮ || ೬೨೦ ||


ಸರ್ವಸತ್ವೋಽಮ್ಬುಜಾಕ್ಷಶ್ಚ ಲೋಕಕ್ಷೇಮಪರಾಯಣಃ।

ಕೃತಗೋವತ್ಸಪಾದಪ್ರಮಾಣಸಂಸಾರಸಾಗರಃ॥೯೩॥(೬೨೪)


ಸರ್ವಸತ್ತ್ವನೆ ವಾಸುದೇವನೆ

ಸರ್ವ ಸೃಷ್ಟಿಯ ಸಾರಸತ್ತ್ವನೆ

ಸರ್ವಕಾಲಕು ಸರ್ವದೇಶಕು ಮೂಲ ಪರಬೊಮ್ಮ |

ಸರ್ವಮೂಲನೆ ಸೃಷ್ಟಿಕಾರಣ

ಸರ್ವಪಾಲಕ ಸ್ಥಿತಿಯ ಕಾರಣ

ಸರ್ವನಾಶಕ ಲಯದ-ಧಿಪತಿಯು ಶರ್ವ ಶ್ರೀಕೃಷ್ಣ || ೬೨೧ ||


ಅಂಬುಜಾಕ್ಷನೆ ಕೃಷ್ಣ ಶ್ರೀಹರಿ

ನಂಬಿರುವೆ ಕಮಲಾಕ್ಷ ದೇವನ

ಬೆಂಬಿಡದೆ ಸಲಹಯ್ಯ ತಾವರೆಗಣ್ಣ ಶ್ರೀಕೃಷ್ಣ |

ಕಂಬದಿಂದುದಿಸಿರುವ ನರಹರಿ

ಶಂಭುಸಖ ಗೋಪೀಶ ಚಿನ್ಮಯ

ಶಂಬಳದಿ ಕಲ್ಕಿತ್ವದಲವತರಿಪನ ಶರಣೆಂಬೆ || ೬೨೨ ||


ಲೋಕಕ್ಷೇಮಪರಾಯಣ ಹರಿ

ಲೋಕಗಳ ಹಿತದಲ್ಲೆ ನಿರತನು

ಶ್ರೀಕರನು ಶ್ರೀಪತಿಯು ಶ್ರೀಧರ ಶ್ರೀಶ ಶ್ರೀಕೃಷ್ಣ |

ಲೋಕ ಮೂರರ ಪಾಲಕನೆ ಹರಿ

ಕಾಕು ಜನರನು ಶಿಕ್ಷಿಪನೆ ಹರಿ

ಸಾಕು ಬಂಧವು ತೋರು ಜೀವನ್ಮುಕ್ತಿ ಪರಬೊಮ್ಮ || ೬೨೩ ||


ಕೃತಗೋವತ್ಸಪಾದಪ್ರ-

-ಮಾಣಸಂಸಾರಸಾಗರ ಹರಿ-

-ಯಮಿತ ಭವಸಾಗರವ ಕರುಹೆಜ್ಜೆಯಷ್ಟಕ್ಕಿಳಿಸಿ |

ಹಿತನು ಲೋಕಕೆ ಮುಕುತಿಯೀವನು

ಪಿತನು ಸರ್ವಕು ಭವವ ಕಳೆವನು

ಜಿತನು ಸಕಲವನೀಶ್ವರನು ನಿರ್ಗುಣ ಪರಬ್ರಹ್ಮ || ೬೨೪ ||


ಭವಾರ್ಣವನಿಮಗ್ನಾನಾನ್ತಾರರೂಪೀಪದಾಮ್ಬುಜಃ|

ಸತ್ತ್ವೋ ವಿಶುದ್ಧರೂಪಶ್ಚ ಕ್ರಿಯಾಯೋಗತಪಾರ್ಚಿತಃ॥೯೪॥(೬೨೮)


ಭವಾರ್ಣವ-ನಿಮಗ್ನಾನಾಂ

ತಾರರೂಪೀ-ಪದಾಂಬುಜ ಹರಿ

ಭವಸಮುದ್ರದಿ ಮುಳುಗಿರುವರನು ದಾಟಿಸುವ ಪಾದ |

ನಾವು ಭವಸಾಗರವ ದಾಟಲು

ನಾವೆ ಕೃಷ್ಣನ ಪಾದಕಮಲವು

ಕಾವುದೀ ನತಭಕ್ತತತಿಯನು ಹೇ ಹೃಷೀಕೇಶ || ೬೨೫ ||


ಸತ್ತ್ವ ಶ್ರೀಹರಿ ವಾಸುದೇವನೆ

ಸತ್ತೆಯಸ್ತಿತ್ವವದು ಮೂಲವು

ಸತ್-ಚಿದಾತ್ಮಕ ಕೃಷ್ಣನಾನಂದಾತ್ಮಕನು ವಿಷ್ಣು |

ಸತ್ತ್ವವಿರವಿನ ಶುದ್ಧಭಾವವು

ಮತ್ತೆಯರಿವದು ಚಿತ್ ಸ್ವಭಾವವು

ಸತ್ತೆ ಚಿನ್ಮಯ ಶುದ್ಧಸತ್ತ್ವಾನಂದ ಬ್ರಹ್ಮವದು || ೬೨೬ ||


ವಿಶುದ್ಧರೂಪ ವಾಸುದೇವನೆ

ವಿಶೇಷ ನಿರ್ವಿಶೇಷ ಶುದ್ಧನೆ

ಸುಶುದ್ಧಾತ್ಮ ಬ್ರಹ್ಮವಸ್ತುವೆ ದೇವ ಶ್ರೀಕೃಷ್ಣ |

ಅಶುದ್ಧವ ಕಳೆ ತನುಮನಗಳಲಿ

ವಿಶುದ್ಧಿಯ ಕರುಣಿಸು ಪರಾತ್ಮನೆ

ವಿಶುದ್ಧನೆ ಸಕಲಾಂತರಾತ್ಮನೆ ದೇವ ಪರಬೊಮ್ಮ || ೬೨೭ ||


ಕ್ರಿಯಾಯೋಗತಪಾರ್ಚಿತನೆ ಹರಿ

ಕ್ರಿಯಾ ಕರ್ಮವು ಕರ್ಮಯೋಗದಿ

ಭಯಾಪಹವಷ್ಟಾಂಗಯೋಗದಿ ತಪದಿ ಪೂಜಿತನೆ |

ಕ್ರಿಯಾಯೋಗವು ಕರ್ಮಕುಶಲತೆ

ಕ್ರಿಯಾಫಲದಾಶೆಯನು ಮಾಡದೆ

ಮಯಾರ್ಚಿತ ಶ್ರೀಕೃಷ್ಣ ತಪಯೋಗಾದಿಪ್ರಿಯನಹುದು || ೬೨೮ ||


ಸಮಾಧಿಸ್ಥಿತಿಗಮ್ಯಶ್ಚ ಭಕ್ತಿವಶ್ಯೋ ಭವಾಪಹಃ।

ನೃಶ್ರೇಯೋಪಾಯನಶ್ಚೈವಾಜ್ಞಾನಾಪಹಾರಿಜ್ಞಾನವಾನ್॥೯೫॥(೬೩೩)


ಸಮಾಧಿಸ್ಥಿತಿಗಮ್ಯ ಕೃಷ್ಣನೆ

ಸಮಾಧಿಸ್ಥಿತಿಯಲ್ಲಿ ತೋರ್ವನೆ

ಸಮಾಧಿಯದಷ್ಟಾಂಗಯೋಗದ ಚರಮಗತಿಯಹುದು |

ಸಮಾಧಿಯು ಚಿತ್ತದ ನಿಮಗ್ನತೆ

ಸಮಾಧಿಯು ಯೋಗದ ಸಮಾಧಿಯು

ರಮಾವಲ್ಲಭ ಯೋಗಿಹೃದಯಕೆ ಮಾತ್ರ ನಿಲುಕುವನು || ೬೨೯ ||


ಭಕ್ತಿವಶ್ಯನೆ ವಾಸುದೇವನೆ

ಭಕ್ತಿಗೊಲಿವನೆ ದೇವ ಕೃಷ್ಣನೆ

ಭಕ್ತಿಯಿಂ ಮುಕ್ತಿಯನು ಪಡೆಯುವ ಜ್ಞಾನ ಲಭಿಸುವುದು |

ಶಕ್ತಿವಶ್ಯತೆಯಿಲ್ಲ ಕೃಷ್ಣಗೆ

ಯುಕ್ತಿವಶ್ಯತೆಯಿಲ್ಲ ದೇವಗೆ

ಭಕ್ತಿವಶ್ಯನೆ ಹರಿಯು ಜ್ಞಾನಾನಂದಸದ್ರೂಪ || ೬೩೦ ||


ಭವಾಪಹ ಶ್ರೀಕೃಷ್ಣದೇವನು

ಭವವ ಸಂಸಾರವನು ಕಳೆವನು

ಭವವು ಜನಿ ಮೃತಿಯದನಪಹರಿಪ ಹರಿಯೆ ಶ್ರೀಕೃಷ್ಣ |

ಭವಸಮುದ್ರಕವಿದ್ಯೆ ಕಾರಣ-

-ವವಿದ್ಯೆಯಿಂ ಕಾಮ, ಕರ್ಮವು

ಭವವು ಕರ್ಮದ ಫಲಗಳಿಂ ತದತೀತನಾಗಿಸೆಲೊ || ೬೩೧ ||


ನೃಶ್ರೇಯೋಪಾಯನನೆ ಕೃಷ್ಣನೆ

ಸುಶ್ರೇಯಸಿಗೆ ಮೋಕ್ಷಕ್ಕುಪಾಯನೆ

ನಿಃಶ್ರೇಯಸಿಗೆ ಕರೆದೊಯ್ವ ನರರನು ಜ್ಞಾನಿ-ಭಕ್ತರನು |

ಆಶ್ರಯನು ಮೋಕ್ಷಕ್ಕೆ ನರರಿಗೆ

ಪ್ರಶ್ರಯದಿ ನಾರಾಯಣನ ತಾ

ನಿಃಶ್ರೇಯಸಿಗೆ ಭಜಿಸಿ ಶರಣಾದರದೆ ಸದ್ಗತಿಯು || ೬೩೨ ||


ಅಜ್ಞಾನಾಪಹಾರಿ-ಜ್ಞಾನವಾ-

-ನಜ್ಞಾನವನಪಹರಿಪ ಶ್ರೀಹರಿ

ಸುಜ್ಞಾನಮುಕ್ತಿಯನೀವ ಸದ್ಗುರುದೇವ ಶ್ರೀಕೃಷ್ಣ |

ಸುಜ್ಞಾನವಂತನು ದೇವ ಮಾಧವ

ವಿಜ್ಞಾನಿಯನುಭವಿ ಗೀತಬೋಧಕ

ಸುಜ್ಞತ್ವದಜ್ಞತ್ವಾಪಹನೆ ಸರ್ವಜ್ಞ ಪರಮಾತ್ಮ || ೬೩೩ ||


ಸರ್ವಗುಣಪ್ರಕಾಶಾತ್ಮಾ ಸರ್ವಸಾಕ್ಷೀ ತಥೇಶಿತಾ।

ಅನಾಮಾಽರೂಪವಾನ್ಜನ್ಮಕರ್ಮಗುಣವಿವರ್ಜಿತಃ॥೯೬॥(೬೩೯)


ಸರ್ವಗುಣಪ್ರಕಾಶಾತ್ಮನೆ

ಸರ್ವ ಗುಣಗಳ ಪ್ರಕಾಶಿಸುವನೆ

ಸರ್ವ ಸತ್ತ್ವರಜಸ್ತಮಂಗಳ ಸುಗುಣ ದುರ್ಗುಣವ |

ಸರ್ವ ನಿರ್ಗುಣ ಸಗುಣರೂಪವ

ಸರ್ವವಂ ಪ್ರಕಟಿಸುವ ಕೃಷ್ಣನೆ

ಸರ್ವರೂಪನೆ ವಿಷ್ಣುಪೂರ್ಣಾವತಾರಿಯೆ ಕೃಷ್ಣ || ೬೩೪ ||


ಸರ್ವಸಾಕ್ಷಿಯೆ ವಾಸುದೇವನೆ

ಸರ್ವಕೂ ನೀ ಸಾಕ್ಷಿ ಕೃಷ್ಣನೆ

ಸರ್ವವನು ಕಾಣುವನೆ ಕೇಳುವ ದೇವ ಶ್ರೀಕೃಷ್ಣ |

ಸರ್ವಜೀವರ ಪ್ರತ್ಯಗಾತ್ಮನೆ

ಸರ್ವಜಡಗಳಲಿರುವ ಬ್ರಹ್ಮವೆ

ಸರ್ವರೊಳಗಿರುವಂಥ ಚಾಲಕಶಕ್ತಿ ಶ್ರೀಕೃಷ್ಣ || ೬೩೫ ||


ಈಶಿತಾ ಪರಮೇಶ್ವರನೆ ಹರಿ-

-ಯೀಶಿತೃವೆ ಸಕಲಕ್ಕು ಪತಿ ನೀ-

-ಯೀಶಿತನೆಯಾಳುವನೆ ಸೃಷ್ಟಿಯ ಜೀವಜಡಗಳನು |

ನಾಶವಾಗುವ ಸರ್ವಸೃಷ್ಟಿಗೆ-

-ಯೀಶನಂತೆಯೆ ತೋರ್ವ ಬೊಮ್ಮನೆ

ಪಾಶ ಕಳೆ ಮುಕುತಿಪ್ರಬೋಧವನಿತ್ತು ಶ್ರೀಕೃಷ್ಣ || ೬೩೬ ||


ಅನಾಮನೆ ಪರಬೊಮ್ಮ ಕೃಷ್ಣನೆ

ವಿನಾಮನೆ ಪೆಸರಿಲ್ಲದನೆ ಹರಿ

ಸುನಾಮಗಳಿಂ ನುತಿಪರಧ್ಯಾರೋಪದೃಷ್ಟಿಯಲಿ |

ನೀ ನಾಮರಹಿತನೆ ಪರಾತ್ಮನು

ವಿನಾ ನಿನ್ನನು ಶೂನ್ಯ ಸೃಷ್ಟಿಯು

ಸನಾತನ ನಿರ್ಗುಣನೆ ಪರಮಾರ್ಥದಲಿ ಶ್ರೀಕೃಷ್ಣ || ೬೩೭ ||


ಅರೂಪವಾನ್ ರೂಪರಹಿತನೆ

ಸರೂಪ ಸೃಷ್ಟಿಯ ತೆರದಿ ತೋರ್ವನೆ

ವಿರಾಡ್ರೂಪನೆ ಸ್ವರಾಡ್ರೂಪನೆ ರೂಪರಹಿತ ಹರಿ |

ನೀರೂಪನೆ ನೀಯರೂಪನೆ

ನಾರಾಯಣನೆ ನೀ ಪರಾತ್ಪರ

ಪಾರಮೇಶ್ವರದುಪಾಧಿಯು ಮಿಥ್ಯವದು ಕೊನೆಯಲ್ಲಿ || ೬೩೮ ||


ಜನ್ಮಕರ್ಮಗುಣವರ್ಜಿತನೆ ಹರಿ

ಜನ್ಮರಹಿತನೆ ಕರ್ಮ ಮೀರಿಹ

"ಮನ್ಮನಾ ಭವ" ವೆಂದು ಬೋಧಿಸಿದಂಥ ಶ್ರೀಕೃಷ್ಣ |

ಸನ್ಮತಿಯ ಕೊಡು ತ್ರಿಗುಣವರ್ಜಿತ

ಮನ್ಮಥನ ಪಿತ ವಾಸುದೇನೆ

ಜನ್ಮನಾಶಕ ಭಕ್ತಿಮುಕ್ತಿಜ್ಞಾನ ಕರುಣಿಪುದು || ೬೩೯ ||


ಸತ್ತ್ವಾಶ್ರಯೋ ವಿಶುದ್ಧಾತ್ಮಾ ಮನೋವಾಕ್ಪೂಜ್ಯಪೂರುಷಃ।

ಮಙ್ಗಲನಾಮರೂಪಾಭ್ಯಾಮ್ಭವತಾರಣಕಾರಣಃ॥೯೭॥(೬೪೩)


ಸತ್ತ್ವಾಶ್ರಯನೆ ಸತ್ತ್ವಮೂಲನೆ

ಸತ್ತ್ವಗುಣನಿಧಿ ಸತ್ತ್ವರೂಪನೆ

ಸತ್ತ್ವಸಾರನೆ ಸಾರಸತ್ತ್ವನೆ ದೇವ ಪರಬೊಮ್ಮ |

ಸತ್ತ್ವ ಸದ್ಗುಣ ಸತ್-ಸ್ವಭಾವವು

ಸತ್ತ್ವ ಚಿತ್ತವದಂತಃಕರಣವು

ಸತ್ತ್ವಕಾಸರೆ ಚಿತ್ತಪ್ರೇರಕ ದೇವ ಶ್ರೀಕೃಷ್ಣ || ೬೪೦ ||


ವಿಶುದ್ಧಾತ್ಮನೆ ವಿಶೇಷಾತ್ಮನೆ

ವಿಶೇಷನು ಪರಿಶುದ್ಧನಾತ್ಮನು

ವಿಶುದ್ಧನು ತಾನಾತ್ಮರೂಪನು ಕೃಷ್ಣ ಪರಬೊಮ್ಮ |

ವಿವಿಧ ವಿಧದಿಂ ಶುದ್ಧನಾತ್ಮನು

ವಿಶದ ಸುಸ್ಪಷ್ಟಾತ್ಮನಮಲನು

ವಿತತ ವಿಸ್ತೃತ ಸತತ ಗತಿಶೀಲಾತ್ಮ ಪರಮಾತ್ಮ || ೬೪೧ ||


ಮನೋವಾಕ್-ಪೂ-ಜ್ಯಪೂರುಷ ಹರಿ

ಮನಸಿನಿಂ ಮಾತಿನಿಂ ಪೂಜಿತ

ಮನಕು ಮಾತಿಗು ನಿಲುಕದಿಹ ಪರಮಾತ್ಮ ಶ್ರೀಕೃಷ್ಣ |

ತನುವಿನಲಿ ಮೊದಲಿರ್ಪ ಪೂರುಷ

ತನುಮನವ ಜಗವೆಲ್ಲ ತುಂಬಿಹ

ಮನನ-ಕೀರ್ತನ-ಪೂಜನಾರ್ಹನು ದೇವ ಶ್ರೀಕೃಷ್ಣ || ೬೪೨ ||


ಮಂಗಲ-ನಾಮರೂಪಾಭ್ಯಾಂ-

ಭವ-ತಾರಣ-ಕಾರಣನೆ ಹರಿ

ಮಂಗಲಾತ್ಮಕ ಹೆಸರು ರೂಪಗಳಿಂದ ಮುಕ್ತಿಪ್ರದ |

ಮಂಗಲಾಂಗನೆ ಮಂಗಲಾಕೃತಿ

ಮಂಗಲಾಕಾರನೆ ಮಹಾತ್ಮನೆ

ಮಂಗಲಪ್ರದನಚ್ಯುತಾನಂ-ತ ಗೋವಿಂದ ಹರೇ || ೬೪೩ ||


ಸರ್ವಗುಹಾಶ್ರಯಸ್ಸ್ವಾಮೀ ಪೂರ್ಣೇನ್ದುವದನೋ ಜಗತ್।

ಅಂಬುಜೇಕ್ಷಣಯುಕ್ತಶ್ಚ ಚತುರ್ಭುಜಯುತೋ ಮಹತ್॥೯೮॥(೬೫೦)


ಸರ್ವಗುಹಾಶ್ರಯನೆ ಕೃಷ್ಣನೆ

ಸರ್ವರೊಳಗಿಹ ಹೃದಯವಾಸನೆ

ಸರ್ವರೊಳು ಹುದುಗಿರುವ ಚೇತನ ಶಕ್ತಿ ಪರಬೊಮ್ಮ |

ಸರ್ವನಾಮನೆ ಸರ್ವರೂಪನೆ

ಸರ್ವಗನೆ ಸರ್ವದನೆ ಸರ್ವನೆ

ಸರ್ವರಾತ್ಮನೆಯೇಕಮೇವಾದ್ವಯ ಚಿದಾನಂದ || ೬೪೪ ||


ಸ್ವಾಮಿ ನೀ ಮೂರ್ಲೋಕಗಳಿಗೂ

ಸ್ವಾಮಿ ಪತಿ ಭರ್ತೃವೆ ಜನಾಧಿಪ

ಕಾಮಿಗಳ ಕಾಮದನು ಧರ್ಮಸುರಕ್ಷಕನು ಕೃಷ್ಣ |

ನಾಮಿ ನಾಮನು ರೂಪಿ ರೂಪನು

ಹೇ ಮಹಾಪ್ರಳಯಂಕರನೆ ಹರ

ಸ್ವಾಮಿ ಸೃಜಿಪನು ಕಾವ ಬೊಮ್ಮನೆ ವಿಷ್ಣು ಪರಬೊಮ್ಮ || ೬೪೫ ||


ಪೂರ್ಣೇಂದುವದನನೆ ವಾಸುದೇವನೆ

ಪೂರ್ಣ ಚಂದ್ರಮನಂಥ ಮೊಗವಿಹ

ಪೂರ್ಣ ಪುರುಷೋತ್ತಮನೆ ನಾರಾಯಣ ಪರಾತ್ಪರನೆ |

ಪೂರ್ಣ ಸುಂದರ ಸತ್ಯ ಶಿವದನೆ

ಪೂರ್ಣ ಸೃಷ್ಟಿಯೊಳಾತ್ಮರೂಪದಿ

ಪೂರ್ಣ ನಿರ್ಗುಣ ದೇವ ಸದಸದ್ರೂಪ ಶ್ರೀಕೃಷ್ಣ || ೬೪೬ ||


ಜಗತ್ ಕೃಷ್ಣನು ಜಂಗಮಾತ್ಮಕ

ಜಗವು ಕೃಷ್ಣನದೊಂದು ರೂಪವು

ಜಗವು ಚರಿಪುದು ನಿತ್ಯ ಸಂತತ ಕಾಲಚಕ್ರದಲಿ |

ಖಗಮೃಗೋರಗ ಮನುಜವಾನರ

ನಗಸರಿತೆವನಸಾಗರಾದಿಯು

ಭಗವದಾಕೃತಿ ವ್ಯಕ್ತ ತೋರಿಕೆ ಜಗದ ರೂಪಿನಲಿ || ೬೪೭ ||


ಅಂಬುಜೇಕ್ಷಣಯುಕ್ತ ಕೃಷ್ಣನೆ

ನಂಬಿದರೆ ಕೈಬಿಡದ ಕೃಷ್ಣನೆ

ಬೆಂಬಿಡದೆ ಭಜಿಸುವೆನು ತಾವರೆಕಂಗಳುಳ್ಳವನೆ |

ಅಂಬು ನೀರದರಲ್ಲಿ ಜನಿಸಿದ-

-ರಂಬುಜವು ತಾವರೆಯು ಸಂದರ-

-ನಂಬುಜೇಕ್ಷಣ ನಿನ್ನ ಕಂಗಳು ಕಾಯೊ ಕರುಣಾಳು || ೬೪೮ ||


ಚತುರ್ಭುಜಯುತನೆ ಕೃಷ್ಣನೆ

ಚತುರ್ಬಾಹುಸಮನ್ವಿತನೆ ಹರಿ

ಚತುರನಸುರಾದಿಗಳ ಶಿಕ್ಷಕ ಶಿಷ್ಟರಕ್ಷಕನು |

ಚತುರ್ವದನನ ಪಿತನೆ ಪಶುಗಳ

ಪತಿಯ ಸಖ ಲಕ್ಷ್ಮೀಶ ವಿಹಗಗ

ಖತಿಯ ಕಳೆಯುವನಭಯವರದನೆ ವಾಸುದೇವ ಹರೇ || ೬೪೯ ||


ಮಹತ್ ತತ್ತ್ವನೆ ಪರಬ್ರಹ್ಮನೆ

ಮಹದ್ ದೊಡ್ಡದು ಸರ್ವಕತಿಶಯ

ಬೃಹದ್ ಬ್ರಹ್ಮವು ಕೃಷ್ಣ ಪರಬೊಮ್ಮನದೆ ಸಾಕಾರ |

ಮಹತ್ತಮ ಮಹಿಮಾನ್ವಿತನೆ ಹರಿ

ಬೃಹತ್ತಮವಣುತಮದ ತತ್ತ್ವವು

ಮಹತಿ ನಿನ್ನದು ಮಹಾನ್ ನೀ ಪರಬೊಮ್ಮ ಶ್ರೀಕೃಷ್ಣ || ೬೫೦ ||


ಪಾಞ್ಚಜನ್ಯಕರಶ್ಚೈವ ಮೇಘಶ್ಯಾಮವಪುರ್ಗತಿಃ।

ಕಿರೀಟಕುನ್ಡಲಜ್ಯೋತಿಭೂಷಿತಾನನ್ತಕುನ್ತಲಃ॥೯೯॥(೬೫೪)


ಪಾಂಚಜನ್ಯಕರ ಶ್ರೀಹರಿ

ಪಾಂಚಜನ್ಯವೆ ಶಂಖ ಹಸ್ತದಿ

ಪಂಚಜನ ರಾಕ್ಷಸನ ಸ್ವೀಕರಿಸಿದನು ಶ್ರೀಕೃಷ್ಣ |

ಪಂಚಜನ ಸಾಂದೀಪನಿಯ ಸುತ-

-ವಂಚನೆಯಲಪಹರಣ ಗೈದುದ

ಮುಂಚೆ ಬಿಡಿಸುತ ಗುರುವಿಗರ್ಪಿಸಿದಾತ ಶ್ರೀಕೃಷ್ಣ || ೬೫೧ ||


ಮೇಘಶ್ಯಾಮವಪುವೆ ಕೃಷ್ಣನೆ

ಮೇಘ ನೀರದ ನೀಲವರ್ಣನೆ

ಮೇಘ ಕಪ್ಪಿನ ನೀಲ ಮೋಡದ ಬಣ್ಣ ಮೈಯವನೆ |

ಮೋಘವಾಗದ ತೆರದಿ ಕಾಯೋ

ನಾಗಶಯನನೆ ಪರಬ್ರಹ್ಮವೆ

ಭಾಗವತರನು ಸಲಹು ನಾರಾಯಣನೆ ಕೇಶವನೆ || ೬೫೨ ||


ಗತಿಯು ನೀ ಪರಗತಿಯು ಸರ್ವಕೆ

ಸ್ಥಿತಿಯವಗತಿಯು ಜ್ಞಾನವನುಭವ

ಪತಿಯು ಪ್ರಾಪ್ಯನು ಕೃಷ್ಣ ಗೋವಿಂದನೆ ಜನಾರ್ದನನೆ |

ಮಿತಿರಹಿತ ಹರಿಯಮಿತ ವಿಷ್ಣುವೆ

ಮತಿಗೆ ಪ್ರೇರಕ ಗತಿವಿಧಾಯಕ

ನುತಿನತಿಗಳಿಂ ಗತಿಗೆ ಬೇಡುವೆ ಜೀವಸದ್ಗತಿಗೆ || ೬೫೩ ||


ಕಿರೀಟ-ಕುಂಡಲ-ಜ್ಯೋತಿಯಿಂ

ಹರಿ ವಿಭೂಷಿತಾನಂತ-ಕುಂತಲ

ಕಿರೀಟ-ಕಿವಿಯಾಭರಣಗಳು ಬೆಳಗುತಿಹ ಕೃಷ್ಣ |

ಹರಿಯಗಣಿತದ ಗುಂಗುರುಗಳಿಂ

ವರ ಸುಕೇಶಗಳಿಂದ ಶೋಭಿಪ

ಬರಿಯ ನರತನುವಲ್ಲ ದಿವ್ಯನು ದೇವ ಶ್ರೀಕೃಷ್ಣ || ೬೫೪ ||



ಶ್ರೇಷ್ಠಕಾಞ್ಚ್ಯಙ್ಗದೀ ಸೃಷ್ಟಿರುದ್ದಾಮಕಙ್ಕಣೈರ್ಯುತಃ।

ಕೇವಲಾನುಭವಾದ್ವೇದ್ಯಃ ಕೇವಲಃ ಪ್ರಕೃತೇಃಪರಃ॥೧೦೦॥(೬೬೦)


ಶ್ರೇಷ್ಠಕಾಂಚ್ಯಂಗದೀ ಕೃಷ್ಣನೆ

ಶ್ರೇಷ್ಠ ಕಟಿಯಾಭರಣಭೂಷಿತ

ಶ್ರೇಷ್ಠ ಕೇಯೂರಗಳ ಧರಿಸಿಹ ವಾಸುದೇವ ಹರೇ |

ಶ್ರೇಷ್ಠವುತ್ತಮ ಸೊಂಟಪಟ್ಟಿಯ

ಶ್ರೇಷ್ಠ ಸುಂದರ ಭುಜದ ಕೀರ್ತಿಯ

ಶ್ರೇಷ್ಠ ಪರತತ್ತ್ವಾತ್ಮಕನು ಹರಿ ಧರಿಸಿರುವ ಕೃಷ್ಣ || ೬೫೫ ||


ಸೃಷ್ಟಿ ಶ್ರೀಹರಿ ಸಗುಣರೂಪದಿ

ಸೃಷ್ಟಿಯಿದು ಪರಮಾತ್ಮ ಮಹಿಮೆಯು

ಸೃಷ್ಟಿರೂಪದಿ ತೋರುತಿರುವವ ದೇವ ಶ್ರೀಕೃಷ್ಣ |

ಸೃಷ್ಟಿ ಮಿಥ್ಯೆಯು ಬ್ರಹ್ಮ ಸತ್ಯವು

ಸೃಷ್ಟಿವೈವಿಧ್ಯವದು ತೋರಿಕೆ

ಸೃಷ್ಟಿ ವ್ಯವಹಾರವದು ಬೊಮ್ಮವು ಪಾರಮಾರ್ಥಿಕವು || ೬೫೬ ||


ಉದ್ದಾಮ-ಕಂಕಣೈ-ರ್ಯುತನೆ ಕೃಷ್ಣನೆ-

-ಯುದ್ದಾಮ ದೊಡ್ಡ ಸುಹಸ್ತ ಬಳೆಗಳು

ಶುದ್ಧ ಪರಬೊಮ್ಮನ ಸರೂಪತೆ ತ್ರಿಗುಣಮಾಯೆಯಲಿ |

ಉದ್ಧವಪ್ರಿಯ ಭೂಷಿತಾಂಗನೆ

ಬದ್ಧಕಂಕಣ ಭಕ್ತಪ್ರೀಯನೆ

ಬುದ್ಧ ಜಿಜ್ಞಾಸುಗಳ ಪರಭಕ್ತರ ಪರಾಗತಿಯೆ || ೬೫೭ ||


ಕೇವಲಾನುಭವಾದ್-ವೇದ್ಯನೆ 

ಕೇವಲಾನುಭವಕೆ ನಿಲುಕುವ

ಕೈವಲ್ಯರೂಪನೆಯನುಭವಕೆ ಮಾತ್ರವೇ ನಿಲುಕುವನೆ |

ಕೇವಲವು ಪರಬೊಮ್ಮ ಮುಕ್ತಿಯು

ಕೈವಲ್ಯ ಮೋಕ್ಷವು ಪರಾಗತಿಯದು

ಕೇವಲಾನುಭೂತಿಮಾತ್ರದಿ ಬ್ರಹ್ಮಾತ್ಮಜ್ಞಾನದಲಿ || ೬೫೮ ||


ಕೇವಲನೆ ಚಿನ್ಮಾತ್ರ ಕೃಷ್ಣನೆ

ಭಾವಕೊಲಿವನೆ ಭಕ್ತಿವಶ್ಯನೆ

ನಾವು ನಿಷ್ಕಪಟದಲಿ ಭಜಿಸಲು ಹೃದಯದಿಂ ತೋರ್ವ |

ಕಾವ ದೇವನೆ ಕೇವಲಾತ್ಮನೆ

ನೋವ ಮರೆಸುವ ಸುಖಸ್ವರೂಪನೆ

ಭಾವ ಸದ್ರೂಪನೆ ಮಹಾತ್ಮನೆ ಸಚ್ಚಿದಾನಂದ || ೬೫೯ ||


ಪ್ರಕೃತೇಃ ಪರ ವಾಸುದೇವನೆ

ಪ್ರಕೃತಿ ಮೀರಿದ ಪರಮ ತತ್ತ್ವವೆ

ಪ್ರಕೃತ ಪೂಜಿಪೆ ಭಜಿಪೆ ಧ್ಯಾನಿಪೆ ನುತಿಪೆ ಶ್ರೀಕೃಷ್ಣ |

ವಿಕೃತಿಯಳಿಸುತ ಪ್ರಕೃತಿ ಮೀರುತ

ಸಂಸ್ಕೃತಿಯ ಗೂಢವನು ಶೋಧಿಪ

ಸುಕೃತಿಯಂ ಕೈಗೂಡಿಸೆಲೆ ಪರಮಾತ್ಮ ನಮ್ಮಿಂದ || ೬೬೦ ||


ಕೇವಲಾನನ್ದರೂಪಶ್ಚ ಜಗತ್ಕರ್ತಾ ಜಗದ್ಗೃಹಃ।

ಜಗತ್ಪ್ರವಿಷ್ಟರೂಪೀ ಸಚ್ಚಾಪ್ರವಿಷ್ಟಜಗತ್ಪ್ರಭುಃ॥೧೦೧॥(೬೬೬)


ಕೇವಲಾನಂದರೂಪ ಕೃಷ್ಣನೆ

ಕೇವಲನೆ ಕೈವಲ್ಯರೂಪನೆ

ಕೈವಲ್ಯದಾನಂದನೆ ಬ್ರಹ್ಮಾನಂದ ಚಿನ್ಮಯನೆ |

ಕಾವ ದೇವನೆ ಶುದ್ಧಸುಖದನೆ

ಸಾವಿರದ ಶಾಶ್ವತನೆ ಸತ್ಯನೆ

ನೋವಿರದ ಸುಖ ಬೋಧರೂಪೀ ಸಚ್ಚಿದಾನಂದ || ೬೬೧ ||


ಜಗತ್ಕರ್ತಾ ವಾಸುದೇವನೆ

ಜಗವ ಸೃಷ್ಟಿಸಿದಂತೆ ತೋರ್ವನೆ

ಜಗವದಾತ್ಮದ ಸೃಷ್ಟಿ ಮಿಥ್ಯೆಯು ಬರಿಯ ಗೋಚರವು |

ಜಗದ ಮೂಲವು ಬ್ರಹ್ಮವಾತ್ಮವು

ಜಗವು ವ್ಯವಹಾರದಲಿ ಸತ್ಯವು

ಭಗವತ್ತತ್ತ್ವವೆ ಪಾರಮಾರ್ಥಿಕ ಸತ್ಯ ಶಾಶ್ವತವು || ೬೬೨ ||


ಜಗದ್-ಗೃಹ ನೀ ವಾಸುದೇವನೆ

ಜಗಕೆ ನೀ ಮನೆಯಾಶ್ರಯವು ಹರಿ

ಜಗವೆ ನಿನ್ನಯ ಮನೆಯು ಜಗದಣುರೇಣು ನೀನೆ ಹರಿ |

ಜಗದಿ ವಾಸಿಸಿ ವಾಸುದೇವನು

ಜಗದಿ ವಾಸಿಪ ಶ್ರೀನಿವಾಸನೆ

ಜಗನ್ನಿವಾಸ ಕೃಷ್ಣ ನೀನೆಯನನ್ಯ ಗತಿಯೆಮಗೆ || ೬೬೩ ||


ಜಗತ್-ಪ್ರವಿಷ್ಟರೂಪಿ ಕೃಷ್ಣನೆ

ಜಗವನೊಳಹೊಕ್ಕಿರುವನೀಶ್ವರ

ಜಗ ಪ್ರವೇಶಿಸಿ ಜಡಕೆ ಚೇತನವಿತ್ತ ಚೈತನ್ಯ |

ಖಗದಿ ಚರಿಪನು ಗರುಡವಾಹನ

ನಗಪತಿಯಸುತೆಯರಸಸಖ ಹರಿ

ಭಗವದವತಾರಗಳ ತಾಳುವ ದೇವ ನಾರಯಣ || ೬೬೪ ||


ಸತ್ ಸ್ವರೂಪನೆ ವಿಶ್ವಸತ್ತೆಯೆ

ಸತ್ ತತ್ತ್ವ ಲೋಕಗಳಯಿರವದು

ಸತ್ತ್ವ ಚಿತ್ತ್ವ ಸುಖತ್ವ ಬೊಮ್ಮನೆ ಸಚ್ಚಿದಾನಂದ |

ತತ್ ಸ್ವರೂಪನೆ ತತ್ತ್ವರೂಪನೆ

ಚಿತ್ ಸ್ವರೂಪನೆ ಜ್ಞಾನ-ಚೇತನ

ಸತ್ ಚಿದಾನಂದಾತ್ಮಕನೆ ತತ್ ಪರಂಬ್ರಹ್ಮ ಹರಿ || ೬೬೫ ||


ಅಪ್ರವಿಷ್ಟ-ಜಗತ್ಪ್ರಭು ಹರಿ

ಸುಪ್ರವಿಷ್ಟನುವಪ್ರವಿಷ್ಟನು

ತಾ ಪ್ರವೇಶಿಸಿದಂತೆ ತೋರುವ ಸತ್ಯ ತೋರಿಕೆಯು |

ಅಪ್ರಮೇಯನೆ ಸುಪ್ರತೀಕನೆ

ಸುಪ್ರಕಾಶನೆ ಸುಪ್ರವೀಣನೆ

ಶ್ರೀಪ್ರಕಾಶನೆ ನಿರ್ಗುಮನೆ ಜಗದಾದಿಗುರು ಕೃಷ್ಣ || ೬೬೬ ||


ಪ್ರಾಣಮೂಲೋ ಮನೋಮೂಲೋ ಹೃಷೀಕಾಧಿಪತಿರ್ಮತಿಃ।

ಆಕಾಶೋ ವಾಯುರಗ್ನಿಶ್ಚಾಪ: ಪೃಥ್ವೀ ವಿಶ್ವಧಾರಣ:॥೧೦೨॥(೬೭೬)


ಪ್ರಾಣಮೂಲನೆ ವಾಯುಮೂಲನೆ

ಪ್ರಾಣವಾಯುವಿನುಸಿರ ಕಾರಣ

ಪ್ರಾಣಪಂಚಕ ಮುಖ್ಯಪ್ರಾಣನ ಪ್ರಾಣ ಶ್ರೀಕೃಷ್ಣ |

ಜಾಣ ಸರ್ವಜ್ಞನೆ ಪರಾತ್ಪರ

ಕಾಣದಿಹ ಪರಬೊಮ್ಮ ನಿರ್ಗುಣ

ವೇಣುಲೋಲನೆ ಪರಮಮಂಗಲಧಾಮ ಕೃಷ್ಣಾತ್ಮಾ || ೬೬೭ ||


ಮನೋಮೂಲನೆ ಮನಕೆ ಕಾರಣ

ಮನಕೆ ಚೇತನವಿರವು ಸೌಖ್ಯವು

ಕನಸ ತೋರುವ ಯೋಚಿಸುವ ಶಕ್ತಿಯೇ ಶ್ರೀಕೃಷ್ಣ |

ಘನನೆ ನೀ ಮನಸಿಗೂ ಪೂರ್ವನೆ

ಮನದ ಭಾವನೆಗೊಲಿವ ಮಹಿಮನೆ

ಮನಕು ಮಾತಿಗು ನಿಲುಕದಾತ್ಮವೆ ಜೀವ ಪರಬೊಮ್ಮ || ೬೬೮ ||


ಹೃಷೀಕಾಧಿಪತಿಯೆ ಕೃಷ್ಣನೆ

ಹೃಷೀಕೇಶನೆ ಕರಣಗಳ ಪತಿ

ಹೃಷೀಕೇಂದ್ರಿಯದಶಕದಧಿಪತಿ ದೇವ ಶ್ರೀಕೃಷ್ಣ |

ಹೃಷ್ಯತ್ಯನೇನೇತಿ ಹೃಷೀಕ

ಹರ್ಷಗೊಂಬುದು ಮನವು ಕರಣದಿಂ

ಹೃಷೀಕದಶಸಮೂಹ ಕರ್ಮಜ್ಞಾನಪ್ರೇರಕನು || ೬೬೯ ||


ಮತಿಯು ಬುದ್ಧಿಯು ನೀನೆ ಕೃಷ್ಣನೆ

ಮತಿಯ ನಿಶ್ಚಯ ಮತವು ನಿನ್ನದೆ

ಹಿತವ ಕಾಯುವ ಪಂಚಕೋಶವು ನೀನೆ ಶ್ರೀಕೃಷ್ಣ |

ಸತಿಯ ಪುತ್ರರ ಪತಿಯ ರೂಪದಿ

ಹಿತಕರರ ಸಖ ಸಖಿಯ ರೂಪದಿ

ಪಿತನ ಮಾತೆಯ ಸಕಲ ರೂಪದಿ ಕಾವ ಶ್ರೀಕೃಷ್ಣ || ೬೭೦ ||


ಆಕಾಶವು ನೀನೆ ಕೃಷ್ಣನೆ

ಪ್ರಕಾಶಿಪ ಸಕಲವೂ ಶ್ರೀಹರಿ

ವಿಕಾಸಿಪ ಸಕಲವವಕಾಶವು ನೀನೆ ಶ್ರೀಕೃಷ್ಣ |

ಆಕಾಶದ ಸರ್ವರೂಪವು

ಪ್ರಕಟವಪ್ರಕಟಗಳ ರೂಪದಿ

ನಕಾಶೆಯಲಿಹುದಿರದುದೆಲ್ಲವಕಾಶ ಪರಮಾತ್ಮ || ೬೭೧ ||


ವಾಯುದೇವನು ನೀನೆ ಕೃಷ್ಣನೆ

ವಾಯುವನಿಲನು ಪವನ ಮಾರುತ

ಕಾಯುವನು ಜೀವರನು ಮುಖ್ಯಪ್ರಾಣದುಸಿರಿನಲಿ |

ಸಾಯುವುದು ಜೀವವಪ್ರಾಣವು

ಬೇಯುವುದು ವಾಯ್ವಗ್ನಿಯಿಂದಲಿ

ವಾಯು ಬೊಮ್ಮವು ಲೋಕದಲಿಯನುಭವದಿ ಶ್ರೀಕೃಷ್ಣ || ೬೭೨ ||


ಅಗ್ನಿದೇವನು ನೀನೆ ಶ್ರೀಹರಿ-

-ಯಗ್ನಿಯವಮನು ವಿಷ್ಣುವುತ್ತಮ

ನಗ್ನಸತ್ಯವು ದ್ವಾದಶಾದಿತ್ಯರಲಿ ವೈವಿಧ್ಯ |

ಅಗ್ನಿ ಕಾಶ್ಯಪಿ ವಿಷ್ಣು ಕಾಶ್ಯಪಿ-

-ಯಗ್ನಿವಿಷ್ಣುಗಳೀರ್ವರೇಕರು

ಭಗ್ನ ದ್ವೈತವು ಪಾರಮಾರ್ಥಿಕದೃಷ್ಟಿಯಿಂ ನೋಡೆ || ೬೭೩ ||


ಆಪ ಜಲ ನೀರವದು ಕೃಷ್ಣನೆ

ಪಾಪ ತೊಳೆಯುವ ತೋಯ ವಾರಿಯು

ಕೋಪವಿಲ್ಲದೆ ಪ್ರೀತಿಯಿಡು ಜಲದೇವರೂಪಿನಲಿ |

ತಾಪಹರ ಜೀವನವು ಸರ್ವರ

ಶಾಪಜಲ ನಿಗ್ರಹದ ಶಕ್ತಿಯು

ಭೂಪರಭಿಷೇಕಕ್ಕೆ ಬೇಕದು ದೇವ ತವ ರೂಪ || ೬೭೪ ||


ಪೃಥ್ವಿ ನೀನೇ ಕೃಷ್ಣದೇವನೆ

ಪೃಥ್ವಿರೂಪದಿ ವ್ಯಕ್ತವಾಗಿಹೆ

ಪೃಥ್ವಿದೇವಿಯ ಪತಿಯೆ ನೀನೇಕನೇ ಬಹುವಾದೆ |

ಪೃಥ್ವಿ ಸಕಲರಿಗಾಸರೆಯು ನೀ

ಪೃಥ್ವಿ ಪೋಷಿಸುತಿಹುದು ಜೀವರ

ಪೃಥ್ವಿ ಪೃಥು ಸ್ಥೂಲತ್ವಗುಣಯುತ ಸೂಕ್ಷ್ಮ ಪರಬೊಮ್ಮ || ೬೭೫ ||


ವಿಶ್ವಧಾರಣ ದೇವ ಕೃಷ್ಣನೆ

ವಿಶ್ವವನು ಧರಿಸಿರುವ ಬೊಮ್ಮವೆ

ವಿಶ್ವ ಸಕಲಕೆ ಚರಕೆಯಾಸರೆಯಂತೆ ತೋರ್ವವನೆ |

ನಶ್ವರದ ತೋರಿಕೆಯ ವಿಶ್ವಕೆ

ಶಾಶ್ವತದ ಸತ್ಯಾತ್ಮವಾಸರೆ

ವಿಶ್ವದಾತ್ಮವೆ ವಿಶ್ವಧಾರಣ ಕೃಷ್ಣ ಗೋವಿಂದ || ೬೭೬ ||


ಬ್ರಹ್ಮಮೂಲೋ ರುದ್ರಮೂಲಶ್ಚೇನ್ದ್ರಮೂಲಃ ಪ್ರಜೇಶಪ:|

ದ್ವಾದಶಾದಿತ್ಯಮೂಲಶ್ಚೈಕಾದಶರುದ್ರನಾಯಕ:॥೧೦೩॥(೬೮೨)


ಬ್ರಹ್ಮಮೂಲನೆ ವಾಸುದೇವನೆ

ಬ್ರಹ್ಮ ವಿಧಿಯಜ ಸೃಷ್ಟಿಕರ್ತನು

ಬ್ರಹ್ಮಜನಕನು ಪದ್ಮನಾಭನು ಪದ್ಮಜನ ಪಿತನು |

ಬ್ರಹ್ಮನುದಿಸಿದ ನಿನ್ನ ನಾಭಿಲಿ

ಬ್ರಹ್ಮ ಹರಿನಾಭಿಯ ಕಮಲಜನು

ಬ್ರಹ್ಮನಿಗು ಕಾರಣನು ಯೋನಿಯು ನೀನೆ ಶ್ರೀಹರಿಯೆ || ೬೭೭ ||


ರುದ್ರಮೂಲನೆ ವಾಸುದೇವನೆ

ರುದ್ರನುದಿಸಿದ ಬೊಮ್ಮಹಣೆಯಲಿ

ರುದ್ರಪಿತ ಹರಿಸುತನು ಬೊಮ್ಮನು ರುದ್ರ ಮೊಮ್ಮಗನು |

ರುದ್ರನಿಂ ರೋದನವು ದುಷ್ಟರ

ರುದ್ರನಿಂ ರುಜೆ ರೋಗ ನಾಶವು

ರುದ್ರನೋಂಕಾರಸ್ವರೂಪದಿ ಸಜ್ಜನತ್ರಾತ || ೬೭೮ ||


ಇಂದ್ರಮೂಲನೆ ವಾಸುದೇವನೆ-

-ಯಿಂದ್ರ ಶಕ್ರನು ವಾಸುದೇವಜ

ಚಂದ್ರಶೇಖರಮಿತ್ರ ನಾರಾಯಣನೆ ಶ್ರೀಕೃಷ್ಣ |

ಇಂದ್ರ ಶತಕ್ರತು ದೇವ ಸುರಪತಿ

ಮಂದ್ರ ತಾರ ಸ್ವರೂಪ ಶ್ರೀಪತಿ

ಚಂದ್ರಸೂರ್ಯಸುನೇತ್ರ ಕೇಶವ ದೇವ ಪರಬೊಮ್ಮ || ೬೭೯ ||


ಪ್ರಜೇಶಪ ವಿಧಿಪತಿಯೆ ಶ್ರೀಹರಿ

ಪ್ರಜಾಪತಿಗಳ ಮೂಲ ಕೃಷ್ಣನೆ

ಪ್ರಜಾರಾಜ್ಯವ ಸೃಜಿಪ ಬೊಮ್ಮಾದಿಗಳ ನಾಯಕನೆ |

ಪ್ರಜೆಗಳಧಿಪತಿಪತಿಯೆ ದೇವನೆ

ಪ್ರಜೆಗಳನು ಪಾಲಿಸುವ ಪಾಲಕ

ಪ್ರಜಾರಂಜಕ ಪ್ರಜಾರಕ್ಷಕ ಪ್ರಜಾಪತಿಪತಿಯೆ || ೬೮೦ ||


ದ್ವಾದಶಾದಿತ್ಯಮೂಲ ಶ್ರೀಹರಿ

ದ್ವಾದಶಾದಿತ್ಯರಿಗೆ ಕಾರಣ

ದ್ವಾದಶರು ಹನ್ನೆರಡು ಕಾಶ್ಯಪರಾದಿತೇಯರು ತಾ |

ಮಾಧವನು ಸರ್ವರಿಗು ಮೂಲನು

ಮೋದಬೋಧಗಳಿರವ ರೂಪನು

ಸಾಧುವಂದಿತ ಭೇದದೂರನೆ ಸಚ್ಚಿದಾನಂದ || ೬೮೧ ||


ಏಕಾದಶರುದ್ರನಾಯಕನೆ ಹರಿ

ಶ್ರೀಕಪಾಲ್ಯಾದಿಗಳ ನಾಯಕ

ಶ್ರೀಕಪೀಶ್ವರರೂಪ ಮೊದಲಾದವರ ಕಾರಣನೆ |

ಏಕರೂಪನನೇಕರೂಪನೆ

ಪಾಕಶಾಸನವಂದ್ಯ ಕೃಷ್ಣನೆ

ಲೋಕ ಮೂರನು ಕಾವ ಕರುಣಾಸಾಗರನೆ ಕೃಷ್ಣ || ೬೮೨ ||


ವಸುಮೂಲಶ್ಛನ್ದಸಾಂಶ್ಚ  ಮೂಲಸ್ಸರ್ವಫಲಪ್ರದಃ |

ಸರ್ವೇಷಾಂ ಚಾಲಶಕ್ತಿಶ್ಚ ಜಗಜ್ಜಾಲಸ್ಯ ನಾಯಕಃ ॥೧೦೪॥(೬೮೭)


ವಸುಮೂಲನೆ ವಾಸುದೇವನೆ

ವಸುವು ಸಂಪದವದಕೆ ಮೂಲನು

ವಸುನಿಧಿಯು ವಸುದೇವಸುತ ಶ್ರೀಕೃಷ್ಣ ಮಾಧವನು |

ವಸುಗಳೆಂಟಿಹರವರ ಮೂಲನು

ವಾಸವಾಗಿಹನಖಿಲಸೃಷ್ಟಿಲಿ

ವಸತಿ ನಿನ್ನದೆ ವಾಸವಸ್ತುತ ರಕ್ಷಿಸನವರತ || ೬೮೩ ||


ಛಂದಸಾಂ ಮೂಲ ವಾಸುದೇವನೆ

ಛಂದಸ್ಸುಗಳ ಮೂಲನಿಧಿ ಹರಿ

ಛಂದ ಗತಿಯದು ವೇದನಿಧಿಯದು ಸರ್ವ ಶ್ರೀಕೃಷ್ಣ |

ಛಂದವಾಹ್ಲಾದಕರ ಲೋಕಕೆ

ಛಂದ ಬೋಧಪ್ರದವದಿಹದಲಿ

ಛಂದಗಳ ಕಾರಣನೆ ದೇವನೆ ಸಚ್ಚಿದಾನಂದ || ೬೮೪ ||


ಸರ್ವಫಲಪ್ರದ ದೇವ ಕೃಷ್ಣನೆ

ಸರ್ವಕರ್ಮಕು ಫಲವನೀವನೆ

ಸರ್ವ ಜೀವರಿಗೀವ ಫಲಗಳ ರಕ್ಷಿಸನವರತ |

ಸರ್ವವಾಂಛಿತಫಲಗಳೀವನೆ

ಸರ್ವಫಲಗಳ ಸುಪ್ರದಾಯಕ

ಗರ್ವನಾಶಕ ಶರ್ವಮಿತ್ರನೆ ಸರ್ವರಾತ್ಮ ವಿಭೋ || ೬೮೫ ||


ಸರ್ವೇಷಾಂ ಚಾಲಶಕ್ತಿ ಕೃಷ್ಣನೆ

ಸರ್ವ ಭೂತಗಳಿಂಗೆ ಚಾಲಕ

ಸರ್ವಲೋಕದ ಶಕ್ತಿ ಚೈತನ್ಯನು ಪರಬ್ರಹ್ಮ |

ಸರ್ವಶಕ್ತನೆ ಸರ್ವವಿಜ್ಞನೆ

ಸರ್ವರಾತ್ಮನೆ ಶುದ್ಧಬುದ್ಧನೆ

ಸರ್ವರಕ್ಷಕ ನಿತ್ಯಮುಕ್ತನೆ ಸಚ್ಚಿದಾನಂದ || ೬೮೬ ||


ಜಗಜ್ಜಾಲಸ್ಯ ನಾಯಕನೆ ಹರಿ

ಜಗದ ಸೃಷ್ಟಿಯು ಮೋಹಜಾಲವು

ಜಗನ್ನಾಟಕಸೂತ್ರಧಾರನೆ ಕೃಷ್ಣ ಪರಬೊಮ್ಮ |

ಬಗೆಬಗೆಯ ಸೃಷ್ಟಿಯವೊಲ್ ತೋರುವ

ನಗುಬಿಗುವೆ ಮೊದಲಾದ ಭಾವದ

ಸೊಗ ಕರಾಳಗಳೆಲ್ಲದರ ಸನ್ನಾಯಕನೆ ಕೃಷ್ಣ || ೬೮೭ ||


ಲೋಕಪ್ರಲಯಮೂಲಶ್ಚ ಲೋಕಪಾಲನಕಾರಕಃ|

ಲೋಕಸರ್ಗಸ್ಯ ಮೂಲಶ್ಚ ಸರ್ವಲೋಕಮಹೇಶ್ವರಃ ॥೧೦೫॥(೬೯೧)


ಲೋಕಪ್ರಲಯಮೂಲ ಶ್ರೀಹರಿ

ಲೋಕ ಸಂಹರಿಸುವನು ರೌದ್ರದಿ

ಲೋಕ ಸೃಜಿಸುವ ಬ್ರಹ್ಮರೂಪದಿ ಪಾಲಿಸುವ ಹರಿಯು |

ಲೋಕ ನಿಗ್ರಹನುಗ್ರಹದ ಹರಿ

ಲೋಕದಲಿ ಪಂಚಕೃತನೀಶ್ವರ

ಲೋಕ ತೋರಿಕೆ ನಿರ್ಗುಣಾತ್ಮಕ ಪರಬ್ರಹ್ಮನಲಿ || ೬೮೮ ||


ಲೋಕಪಾಲನಕಾರಕನೆ ಹರಿ

ಲೋಕವೆಲ್ಲ ಪಾಲಿಸುತಿರುವ

ಲೋಕಪಾಲಕನೀಶ್ವರನು ನಾರಾಯಣನು ದೇವ |

ಶಾಖ ತಂಪುಗಳೀವ ಲೋಕಕೆ

ಬೇಕು ಬೇಡಗಳೀವ ಜನರಿಗೆ

ನಾಕಪತಿವಂದಿತನು ಕೇಶವ ಕೃಷ್ಣ ಪರಬೊಮ್ಮ || ೬೮೯ ||


ಲೋಕಸರ್ಗಸ್ಯ ಮೂಲ ಶ್ರೀಹರಿ

ಲೋಕ ಸೃಷ್ಟಿಗೆ ಮೂಲಕಾರಣ

ಲೋಕ ಸೃಜಿಸುವ ಧಾತೃರೂಪದಿ ವೇದಜ್ಞಾನದಲಿ |

ಲೋಕವೆಲ್ಲವ ಹಿಂದಿನಂತೆಯೆ

ಬಾಕಿಯಾಗದ ತೆರದಿ ಸೃಷ್ಟಿಪ

ಲೋಕಪಿತ ನಾರಾಯಣನು ಪರಬೊಮ್ಮನೀಶ್ವರನು || ೬೯೦ ||


ಸರ್ವಲೋಕಮಹೇಶ್ವರನೆ ಹರಿ

ಸರ್ವಲೋಕದ ಪತಿಗಳಧಿಪತಿ

ಸರ್ವಸೃಷ್ಟಿಯ ಸಾರ್ವಭೌಮನು ದೇವ ಶ್ರೀಕೃಷ್ಣ |

ಶರ್ವರೂಪದಿ ಪ್ರಲಯ ಗೈವನು

ಸರ್ವವನು ವಿಧಿಯಾಗಿ ಸೃಜಿಪನು

ಗರ್ವಕೊಲಿಯದ ಸರ್ವಲೋಕನಿಯಂತೃ ಬ್ರಹ್ಮಾತ್ಮ || ೬೯೧ ||


ವಿದಿಶಶ್ಚ ದಿಶಶ್ಚೈವೋರ್ಧ್ವಶ್ಚಾಧಶ್ಚ ದಿಶಾಪ್ರದಃ |

ಅನ್ತಃಸ್ಥಶ್ಚ ಬಹಿಃಸ್ಥಶ್ಚ ಭೂತಂ ಭವ್ಯಂ ಭವತ್ಪ್ರಭುಃ ॥೧೦೬॥(೭೦೧)


ವಿದಿಶವುಪದಿಕ್ಕುಗಳು ಕೃಷ್ಣನೆ

ವಿದಿಶವಾಗ್ನೇಯ ನೈರುತ್ಯವು

ವಿದಿಶ ವಾಯವ್ಯವೀಶಾನ್ಯವು ಸರ್ವವೂ ಹರಿಯು |

ವಿಧ ವಿಧದ ದಿಕ್ಕುಗಳು ಕಿವಿಗಳು

ಬಧಿರನಲ್ಲವು ಸರ್ವಶ್ರೋತೃವು

ಪದುಮನಾಭನು ದೇವನೀಶ್ವರ ಕೃಷ್ಣ ಪರಬೊಮ್ಮ || ೬೯೨ ||


ದಿಶಗಳೂ ಹರಿ ವಾಸುದೇವನೆ

ದಿಶವು ಪೂರ್ವವು ದಕ್ಷಿಣವು ಸಹ

ದಿಶವು ಪಶ್ಚಿಮವುತ್ತರಗಳಖಿಲಾತ್ಮ ಶ್ರೀಕೃಷ್ಣ |

ದಿಶೆಯು ದಿಕ್ಕದು ಮಾರ್ಗದರ್ಶಕ

ದಿಶೆಯಲೆಲ್ಲೆಲ್ಲೂ ಹರಿಯಿಹ

ಪಶುತೆಯಿಂ ಬ್ರಹ್ಮತ್ವಕೇರಿಸೊ ದೇವ ಪರಬೊಮ್ಮ || ೬೯೩ ||


ಊರ್ಧ್ವ ನೀ ಹರಿ ವಾಸುದೇವನೆ-

-ಯೂರ್ಧ್ವದಿಶೆಯೀಶ್ವರನು ಬೊಮ್ಮನು-

-ವೂರ್ಧ್ವಪತಿಯಧಿಪತಿಯೆ ನಾರಾಯಣನೆ ಶ್ರೀಕೃಷ್ಣ |

ಊರ್ಧ್ವ ಮೇಲಿನ ದಿಕ್ಕು ಸರ್ವದ-

-ಲೂರ್ಧ್ವವುತ್ತಮ ಶ್ರೇಷ್ಠವಾಗಿಹು-

-ದೂರ್ಧ್ವಗತಿಯುನ್ನತಿಯು ಜೀವಕೆ ಬ್ರಹ್ಮಭಾವವದು || ೬೯೪ ||


ಅಧೋದಿಶೆಯೂ ನೀನೆ ಕೃಷ್ಣನೆ-

-ಯಧವು ಕೆಳಗಿನ ದಿಕ್ಕನಂತನ-

-ದಧದಧಿಪನನಂತನಾತನು ಶಯನ ವಿಷ್ಣುವಿಗೆ |

ವಿಧಿಯದೂರ್ಧವನಂತನಧಕಿಹ

ಪದುಮನಾಭನ ಸುತನು, ಹಾಸಿಗೆ

ಹದನವರಿಯದಜ್ಞಾನಿಗಳಿಗೀಯಯ್ಯ ಸುಜ್ಞಾನ || ೬೯೫ ||


ದಿಶಾಪ್ರದ ಹರಿ ವಾಸುದೇವನೆ

ದಿಶಾ ದಿಕ್ಕನು ತೋರುವಂಥವ

ವಿಶಾರದನವ ಜೀವರಿಗೆ ಸನ್ಮಾರ್ಗದರ್ಶಕನು |

ವಿಶಾಂಪತಿ ಜಗದೇಕಗುರು ಹರಿ

ದಿಶಾದರ್ಶಿಯು ಗೀತೆರೂಪದಿ

ಕುಶಾದಿಪ್ರಿಯ ಕೃಷ್ಣ ಪರಬೊಮ್ಮಾತ್ಮ ಕೇಶವನೆ || ೬೯೬ ||


ಅಂತಃಸ್ಥನೆ ವಾಸುದೇವನೆ-

-ಯಂತರಂಗದಿ ವಾಸವಾಗಿಹ-

-ನಂತರ್ಯಾಮಿಯು ಸಕಲ ಜೀವರ ಬ್ರಹ್ಮತತ್ತ್ವ ಹರೇ |

ಸಂತಹೃದಯದಿ ತೋರ್ವ ಧ್ಯಾನದಿ

ಚಿಂತೆ ಕಳೆಯುವನಂತರೂಪನೆ

ಕಂತುಪಿತ ಪರಮಾತ್ಮನೀಶ್ವರ ಸರ್ವಹೃದ್ವಾಸ || ೬೯೭ ||


ಬಹಿಃಸ್ಥನೆ ಶ್ರೀಕೃಷ್ಣದೇವನೆ

ಬಹಿಯು ಹೊರಗಡೆ ಸಕಲ ಜೀವರ

ಬಹಿರಂತರದಿ ನೆಲೆಸಿರುವ ಪರಮಾತ್ಮ ಪರಬೊಮ್ಮ |

ಅಹಿಶಯನ ನಾರಾಯಣನೆ ನೀ

ಸಹಿಯ ಮಾಡದೆ ಕಾರ್ಯವಾಗವು

ಕಹಿಯ ಮಾತ್ರೆಯ ನೀಡಿ ಭವರೋಗವನು ಕಳೆಯುತಿಹೆ || ೬೯೮ ||


ಭೂತ ನೀ ಹರಿ ವಾಸುದೇವನೆ

ಭೂತಕಾಲದ ಸಕಲ ಕೃಷ್ಣನೆ

ಭೂತ ಕಳೆದಿಹ ಸಕಲ ಕಾರ್ಯಕು ಕಾರಣನು ನೀನೆ |

ಪಾತಕಗಳನು ಕಳೆದು ಜೀವರ

ಭೂತಕರ್ಮದ ಬಿಡಿಸಿ ಬಂಧವ

ಪಾತು ಮುಕುತಿಯ ನೀಡಿ ಪರಮಾತ್ಮಾತ್ಮ ಶ್ರೀಕೃಷ್ಣ || ೬೯೯ ||


ಭವ್ಯ ನೀ ಭವಿತವ್ಯ ನೀ ಹರಿ

ಭವ್ಯ ಭವಿಷ್ಯದಾಗುಹೋಗದು

ನವ್ಯಪ್ರಾಚೀನಗಳು ಸಕಲವು ನೀನೆ ಶ್ರೀಕೃಷ್ಣ |

ಭವ್ಯ ನಿನ್ನಯ ಮಹಿಮೆ ಕೃಷ್ಣನೆ

ಭವ್ಯ ನಿನ್ನಯ ಲೀಲೆ ಕೃಷ್ಣನೆ

ಭವ್ಯ ನಿನ್ನಯ ರೂಪಗುಣಶಕ್ತ್ಯಖಿಲ ಶ್ರೀಕೃಷ್ಣ || ೭೦೦ ||


ಭವತ್ಪ್ರಭು ಹರಿ ವಾಸುದೇವನೆ

ಭವತ್ಕಾಲವು ವರ್ತಮಾನವು

ಪ್ರವರ್ತಿಸುತಿಹ ಪ್ರಸ್ತುತದ ಕಾಲಾಧಿಪತಿ ಕೃಷ್ಣ |

ಭವದ್ರಾಜನು ಭವದ ಮಾಯೆಯು

ಭವವ ಬಿಡಿಸುವನುಗ್ರಹಾತ್ಮನು

ಭವಭವಗಳಲಿ ನಿರತ ಭಕ್ತಿ ಜ್ಞಾನ ಮುಕ್ತಿದನು || ೭೦೧ ||


ನಿರ್ವಿಕಲ್ಪೋ ನಿರಾಖ್ಯಾತೋ ನಿಷ್ಕಲಙ್ಕೋ ನಿರಞ್ಜನಃ।

ಪ್ರತ್ಯಗಾನನ್ದರೂಪಶ್ಚ ಷೋಡಶಾಕ್ಷರಮೂರ್ತಿಮಾನ್॥೧೦೭॥(೭೦೭)


ನಿರ್ವಿಕಲ್ಪನೆ ವಾಸುದೇವನೆ

ನಿರ್ವಿಕಲ್ಪನೆ ಕಲ್ಪನೆಗೆ ಸಿಗ

ನಿರ್ವಿಕಲ್ಪನೆ ಮನಕೆ ನಿಲುಕದ ಚಿಂತನಾತೀತ |

ಸರ್ವರೂಪನೆ ಸರ್ವನಾಮನೆ

ನಿರ್ವಿಕಾರನೆ ರೂಪರಹಿತನೆ

ನಿರ್ಮಲನೆ ನಾಮಾತೀತ ಹರಿ ಸಚ್ಚಿದಾನಂದ || ೭೦೨ ||


ನಿರಾಖ್ಯಾತನೆ ವಾಸುದೇವನೆ

ಪರಾತ್ಪರ ವ್ಯಾಖ್ಯಾನಕಳವಡ

ನರಾತ್ಮಕ ನಾರಾಯಣನೆ ಗೋವಿಂದ ಶ್ರೀಕೃಷ್ಣ |

ವಿರಾಡ್ರೂಪನೆಯಣುತಮನೆ ಹರಿ

ಸ್ವರಾಡ್ರೂಪನೆ ವಿಶ್ವರೂಪನೆ

ವಿರಾಜಿಪ ತನುಮನಜಡಂಗಳ ನೇತಿ ನೇತ್ಯಾತ್ಮಾ || ೭೦೩ ||


ನಿಷ್ಕಲಂಕನೆ ದೇವ ಕೃಷ್ಣನೆ

ಶುಷ್ಕನಾರ್ದ್ರನೆ ಶುದ್ಧರೂಪನೆ

ನಿಷ್ಕಲಂಕನೆ ಕಳಂಕಾತೀತನೆ ಪರಬ್ರಹ್ಮ |

ನಿಷ್ಕಲಂಕನೆಯಕಳಂಕ ಹರಿ

ಪುಷ್ಕರಾತ್ಮಕ ವಿಮಲಚಿಹ್ನನೆ

ನಿಷ್ಕಪಟ ನಿರುಪಾಧಿಕನೆ ಪರಮಾತ್ಮ ಪರಬೊಮ್ಮ || ೭೦೪ ||


ನಿರಂಜನ ಶ್ರೀಕೃಷ್ಣ ರಂಗನೆ

ನಿರಂಜನ ಕಪ್ಪಿರದ ಶ್ವೇತನೆ

ನಿರಂಜನನಜ್ಞಾನತಿಮಿರಾತೀತ ಪರಬೊಮ್ಮ |

ನಿರಂಜನ ನಿರ್ದೋಷತತ್ತ್ವವೆ

ನಿರಂಜನ ನಿರವದ್ಯ ಸದ್ಘನ

ಪರಂಪರೆಗಳ ಮೂಲ ಚಿದ್ಘನ ಸಚ್ಚಿದಾನಂದ || ೭೦೫ ||


ಪ್ರತ್ಯಗಾನಂದರೂಪ ಕೃಷ್ಣನೆ

ಪ್ರತ್ಯಗೊಳಗಿನ ಸುಖಸ್ವರೂಪನೆ

ಪ್ರತ್ಯೇಕವಾಗಿ ತೋರುತಿಹ ಜೀವರೊಳು ಬೆಳಗುತಿಹ |

ಪ್ರತ್ಯಗಾತ್ಮನೆ ಜೀವರೊಳಗಣ

ಪ್ರತ್ಯಗಭಿನ್ನ ಪರಾಗಾತ್ಮನೆ

ಪ್ರತ್ಯಕ್-ಪರಾಗ್ರೂಪಿ ಬ್ರಹ್ಮಾತ್ಮನೆ ಪರಂಜ್ಯೋತಿ || ೭೦೬ ||


ದ್ವಾದಶಾಕ್ಷರಮೂರ್ತಿಮಾನ್ ಹರಿ

ದ್ವಾದಶಾಕ್ಷರವಾದಿ ಪ್ರಣವದಿ

ದ್ವಾದಶವು ಭಗವತೇ ನಮೋ ವಾಸುದೇವಾಯ |

ದ್ವಾದಶಾಕ್ಷರಿ ಜಪಿಸಿ ಧ್ರುವಪದ

ದ್ವಾದಶಾಕ್ಷರಿ ವಾಸುದೇವನೆ

ಪಾದದಲಿ ಶರಣಾದೆ ನಿನ್ನಯ ಸರ್ವಹೃದ್ವಾಸೀ || ೭೦೭ ||


ಪ್ರಜ್ಞಾನಘನತತ್ತ್ವಶ್ಚ ಹೃತ್ಪುಣ್ಡರೀಕವಾಸಕಃ |

ಬ್ರಹ್ಮಣ್ಯೋ ಬ್ರಹ್ಮವಿದ್ಯಾವೇ-ದ್ಯೋ ವಿಶ್ವಾಕ್ಷಶ್ಚ ಶಾಶ್ವತಃ || ೧೦೮ || (೭೧೩)


ಪ್ರಜ್ಞಾನಘನತತ್ತ್ವ ಕೃಷ್ಣನೆ

ಪ್ರಜ್ಞಾನ ಗಟ್ಟಿ ತತ್ತ್ವ ಶ್ರೀಹರಿ

ಪ್ರಜ್ಞೆ ಬೋಧ ಜ್ಞಾನಶ್ರೇಷ್ಠವು ಸಾಂದ್ರ ಪರಬೊಮ್ಮ |

ವಿಜ್ಞಾನ ಬುದ್ಧಿ ಮನೋಮಯನಿಹ

ಪ್ರಜ್ಞಾನ ಪ್ರಾಣವನ್ನಮಯನಿಹ

ಸು-ಜ್ಞಾನ-ವಾನಂ-ದಮಯದೊಳಗಿನ ಸಚ್ಚಿದಾನಂದ || ೭೦೮ ||


ಹೃತ್ಪುಣ್ಡರೀಕವಾಸಕನೆ ಹರಿ

ಹೃತ್-ಹೃದಯ ಕಮಲದಲಿ ನೆಲೆಸಿಹೆ

ಚಿತ್ತದೊಳಗಿಹೆ ಮತ್ತೆ ಬೆಳಗುವೆ ಮನೇಂದ್ರಿಯಗಳನು |

ಹೃತ್ತಾಪ ಪರಿಹರಿಪ ಗುರುವೆ

ಚಿತ್ತಾಪಹಾರಕನೆ ಕೃಷ್ಣನೆ

ಮತ್ತೆ ಮತ್ತೆ ನೆನಪಿಸುತ ಮಾಯೆಯನು ಪರಿಹರಿಸು ||  ೭೦೯ ||


ಬ್ರಹ್ಮಣ್ಯನೇ ವಾಸುದೇವನೆ

ಬ್ರಹ್ಮದಲಿ ನಿಹಿತಾತ್ಮ ಕೃಷ್ಣನೆ

ಬ್ರಹ್ಮರೂಪವೆ ಬ್ರಹ್ಮತತ್ತ್ವವೆ ಬ್ರಹ್ಮ ಪರಬೊಮ್ಮ |

ಬ್ರಾಹ್ಮಗುಣಯುತ ನಿರ್ಗುಣನೆ ಹರಿ

ಬ್ರಹ್ಮಜನಕನೆ ಬ್ರಹ್ಮವೇತೃವೆ

ಬ್ರಹ್ಮನಿಷ್ಠನೆ ಬ್ರಹ್ಮಭೂತನೆ ಸಚ್ಚಿದಾನಂದ || ೭೧೦ ||


ಬ್ರಹ್ಮವಿದ್ಯಾವೇದ್ಯ ಕೃಷ್ಣನೆ

ಬ್ರಹ್ಮವಿದ್ಯೆಯದಾತ್ಮವಿದ್ಯೆಯು

ಬ್ರಹ್ಮವಿದ್ಯೆಯ ಮೂಲಕವೆ ತಿಳಿಯಿರೈ ತತ್ತ್ವವನು |

ಬ್ರಹ್ಮವಾತ್ಮವು ಬ್ರಹ್ಮ ಸರ್ವವು

ಬ್ರಹ್ಮವಜರಜವಮರನಿತ್ಯವು

ಬ್ರಹ್ಮ ನಿಷ್ಕಲ್ಮಷ ನಿರಂತರವಾದ್ಯಂತರಹಿತ || ೭೧೧ ||


ವಿಶ್ವಾಕ್ಷ ಪರಮಾತ್ಮ ಕೃಷ್ಣನೆ

ವಿಶ್ವದೆಲ್ಲೆಡೆ ಕರಣಯುತ ಹರಿ

ವಿಶ್ವವೇ ಕರಣಗಳು ನಾರಾಯಣಗೆ ಕೇಶವಗೆ |

ವಿಶ್ವರೂಪನ ಚಕ್ಷುವಗಣಿತ

ವಿಶ್ವಚಕ್ಷುಗೆ ಶ್ರೋತ್ರವಗಣಿತ

ವಿಶ್ವಶ್ರೋತ್ರನ ಘ್ರಾಣಜಿಹ್ವಾತ್ವಚೆಗಳಗಣಿತವು || ೭೧೨ ||


ಶಾಶ್ವತನೆ ಹರಿ ವಾಸುದೇವನೆ

ಶಾಶ್ವತಾತ್ಮನೆ ಪರಬ್ರಹ್ಮವೆ

ನಶ್ವರದ ತೋರಿಕೆಯ ಜಗರೂಪಿನಲಿ ಕಾಂಬವನೆ |

ವಿಶ್ವಕಾಯನೆ ಕಾಯರಹಿತನೆ

ವಿಶ್ವನಾಮನೆ ನಾಮರಹಿತನೆ

ಶಾಶ್ವತದಿ ಮೂರ್ಕಾಲದಲಿರುವ ತತ್ತ್ವವೊಂದಿದುವೆ || ೭೧೩ ||


ವಿಶ್ವಶಮ್ಭುವಹೇತುಶ್ಚ ವಿಶ್ವಾತ್ಮೇಶ್ವರಭಾಸುರ:|

ಪರೋಜ್ಯೋತಿ: ಪರಾತ್ಮಾ ಚ ಮಹಾಜ್ಞೇಯ: ಪರಾಯಣ:||೧೦೯||(೭೧೯)


ವಿಶ್ವಶಮ್ಭುವಹೇತು ಕೃಷ್ಣನೆ

ವಿಶ್ವಮಂಗಲಭುವನಕಾರಣ

ಶಾಶ್ವತಾನಂದಾತ್ಮ ಪರಬೊಮ್ಮನೆ ನಿರಾಮಯನೆ |

ಪಶ್ವಾದಿಗಳ ಪತಿಯೆ ರುದ್ರನೆ

ವಿಶ್ವಶುಭಕಾರಣನೆ ಶಂಭುವೆ

ವಿಶ್ವಕಾರಣ ಮಂಗಲಕರನೆ ಭುವನ ಸದ್ರೂಪ || ೭೧೪ ||


ವಿಶ್ವಾತ್ಮೇಶ್ವರಭಾಸುರನೆ ಹರಿ

ವಿಶ್ವದಾತ್ಮನೆ ಪತಿ ಸ್ಫಟಿಕಪ್ರಭೆ

ವಿಶ್ವ ಬೆಳಗುವ ಗೆಲುವ ವೀರನೆ ಕೃಷ್ಣ ಪರಬೊಮ್ಮ |

ಅಶ್ವರೋಹಿಯೆ ಕಲಿಯುಗಾಂತ್ಯದಿ

ಶಾಶ್ವತದ ಧರ್ಮವನು ರಕ್ಷಿಪೆ

ನಶ್ವರದಧರ್ಮವನು ನಿಗ್ರಹಿಸುತಲಿ ಕೃತ ತರುವೆ || ೭೧೫ ||


ಪರೋ ಜ್ಯೋತಿಯೆ ಶ್ರೇಷ್ಠ ಪ್ರಭೆ ಹರಿ

ಪರಮ ಸುಜ್ಞಾನದ ಸುದೀಪ್ತಿಯೆ

ಪರತಮನೆ ತಮದೂರನಜ್ಞಾನಕೆ ಕುಠಾರ ಹರಿ |

ಪರಮ ಮಂಗಲ ದೀಪ ಕೃಷ್ಣನೆ

ಚರಮ ಕೈವಲ್ಯಾತ್ಮ ಕೃಷ್ಣನೆ

ವರದ ಬ್ರಹ್ಮಾಂಡಕ್ಕೆ ಭಜಿಪರಿಗೀವನಿಷ್ಟಗಳ || ೭೧೬ ||


ಪರಾತ್ಮಾ ಹರಿ ವಾಸುದೇವನೆ

ಪರಮನಾತ್ಮನು ಪರಬ್ರಹ್ಮವೆ

ಪರಾತ್ಪರ ಪರಂಜ್ಯೋತಿ ಪರತಮ ಪರಾಗತಿ ಕೃಷ್ಣ |

ಸುರಪತಿಸ್ತುತ ಸುಜನಸೇವಿತ

ಸುರಸುರಕ್ಷಕ ಸುಮುಖತೇಜನೆ

ಸುರಪತೀಶ್ವರ ಸುಂದರಾನನ ಸುಜನಸುಗತಿಪ್ರದ || ೭೧೭ ||


ಮಹಾಜ್ಞೇಯನೆ ವಾಸುದೇವನೆ

ಮಹತ್ ತತ್ತ್ವವೆ ತಿಳಿಯಬೇಕಿಹ

ಮಹಾಮಹಿಮನೆ ಸತ್ತ್ವರಜತಮರಹಿತ ಶ್ರೀಕೃಷ್ಣ |

ಮಹಾನಾತ್ಮನೆ ಸರ್ವರಾತ್ಮನೆ

ಮಹೇಶ್ವರ ನಾರಾಯಣನೆ ಹರಿ 

ಮಹಾವೈಭವಯುತನೆ ನಿರ್ಗುಣ ಸಗುಣ ಸಂಪನ್ನ || ೭೧೮ ||


ಪರಾಯಣ ಹರಿ ವಾಸುದೇವನೆ

ಪರಾತ್ಪರ ಪಥ ಮೋಕ್ಷಪಥ ಹರಿ

ಪರಾಗತಿ ಪರಕಾಶ್ರಯನೆ ನಾರಾಯಣನೆ ಕೃಷ್ಣ |

ಪರಾಸನ್ನಿಧಿ ಪರೇಶ್ವರ ಹರಿ

ಪರಂಜ್ಯೋತಿಯೆ ಪರಬ್ರಹ್ಮವೆ

ಪರಾವರ ಸಕಲವೂ ಕೇಶವ ರುದ್ರ ಬೊಮ್ಮ ಶಿವ || ೭೧೯ ||


ಪರಬ್ರಹ್ಮ ಪರಂತತ್ತ್ವಂ ಪರೋಧ್ಯಾತಾ ಸದವ್ಯಯ:|

ಪರಂಧ್ಯಾನಂ ಸಮುದ್ರೇsನ್ತ: ಕವಿರ್ವಿಶ್ವಸದಾಶ್ರಯ:||೧೧೦||(೭೨೭)


ಪರಬ್ರಹ್ಮನೆ ವಾಸುದೇವನೆ

ಪರಂ ಬ್ರಹ್ಮನೆ ಪರಮ ತತ್ತ್ವವೆ

ವರದ ಮಥುರಾಧಿಪತಿ ಕೃಷ್ಣನೆ ಸರ್ವರಾತ್ಮ ಹರಿ |

ಪರಮಪುರುಷನೆ ಕಾಮಧೇನುವೆ

ಚರಣವಾಶ್ರಯಿಸುವೆನು ಸಂತತ

ತರಣ ಭವಸಾಗರದಿ ತವ ಕೃಪೆಯಿಂದ ಹೇ ದೇವ || ೭೨೦ ||


ಪರಂ ತತ್ತ್ವನೆ ಶ್ರೇಷ್ಠತತ್ತ್ವವೆ

ಪರಮಸತ್ಯನೆ ಪರಮತತ್ತ್ವನೆ

ವಿರಮಿಸದೆ ನೆರೆ ನಂಬಿರುವೆ ತವ ಚರಣಪಂಕಜವ |

ಕರುಣವಾರಿಧಿ ಸುರಮುನಿಸ್ತುತ

ಸರುವರಾತ್ಮನೆ ಕೃಷ್ಣ ಶ್ರೀಪತೆ

ಗರುವ ತೊರೆದಿವನನ್ನೆ ನಂಬಿಹೆ ಕಾಯೊ ಸಂತತದಿ || ೭೨೧ ||


ಪರೋ ಧ್ಯಾತೃವೆ ಪರಮಧ್ಯೇಯನೆ

ಪರತಮದ ಧ್ಯಾನದಲಿ ನಿರತನೆ

ಪರತತ್ತ್ವ ಚಿಂತಕನೆ ಪರತತ್ತ್ವನೆ ನಿಯಾಮಕನೆ |

ವರಪ್ರದನೆ ಹರಿ ಧ್ಯಾನಶೀಲನೆ

ಶರಣರಕ್ಷಕ ಶ್ರೇಷ್ಠ ಚಿಂತಕ

ಚರಣ ಪಿಡಿದಿಹೆನಾದಿ ಮುನಿ ತಾಪಸನ ಮುದದಿಂದ || ೭೨೨ ||


ಸದವ್ಯಯ ಹರಿ ವಾಸುದೇವನೆ

ಸದಸ್ತಿತ್ತ್ವನೆ ಶಾಶ್ವತನೆ ಪರ

ಸದನ ನಿನ್ನದೆ ವಿಶ್ವವೆಲ್ಲವು ಪದುಮನಾಭ ಹರಿ |

ವದನ ಚಂದಿರ ಮೃಡನ ಮಂದಿರ

ಸದನ ವೈಕುಂಠವದು ವಾರಿಧಿ

ಮದನಪಿತ ವ್ಯಯರಹಿತನಕ್ಷರತತ್ತ್ವ ಪರಬೊಮ್ಮ || ೭೨೩ ||


ಪರಂಧ್ಯಾನನೆ ವಾಸುದೇವನೆ

ಪರಮ ಧ್ಯಾನಸ್ವರೂಪ ಕೃಷ್ಣನೆ

ಚರಮ ಗತಿ ಮುಕ್ತಿಯದ ಕರುಣಿಸು ದೇವ ಭಗವಂತ |

ಕರಣದೊಡೆಯನೆ ಹೃಷೀಕೇಶನೆ

ಚರಣ ಪಿಡಿಯುವೆ ವೇದವೇದ್ಯನೆ

ನರನ ಸಾರಥಿ ನಡೆಸು ಭಕುತರ ಬದುಕಿನಾ ರಥವ || ೭೨೪ ||


ಸಮುದ್ರೇऽನ್ತನೆ ವಾಸುದೇವನೆ

ಸಮುದ್ರದೊಳಗೆ ವಾಸವಾಗಿಹೆ

ಜಮುನೆಪ್ರೀಯನೆ ಕ್ಷೀರಸಾಗರಶಾಯಿ ನಾರಯಣ |

ಕಾಮಜನಕನೆ ಭಾಮೆಯರಸನೆ

ಪ್ರೇಮದಲಿ ಭಜಿಸುವೆನು ವರುಣನೆ

ನಾಮಸ್ಮರಣೆಯ ರೂಪಗುಣಲೀಲೆಗಳ ಕೀರ್ತನೆಯ || ೭೨೫ ||


ಕವಿಯೆ ಸರ್ವಜ್ಞೇಶ್ವರನೆ ಹರಿ

ಕವಿಗಳಾದಿಯೆ ಪ್ರೇರಕನೆ ಹರಿ

ನವಿಲಗರಿ ಧರಿಸಿರುವ ದೇವನೆ ಕೃಷ್ಣ ಪರಬೊಮ್ಮ |

ಸಾವಿರದ ಶಿರನೇತ್ರಕರಣನೆ

ತೋರದಿಹನವ್ಯಕ್ತತತ್ತ್ವವೆ

ಚಾರುಲೀಲನೆ ಸಾರಸಾಕ್ಷನೆ ಕಾವ್ಯ ಕರುಣಿಪುದು || ೭೨೬ ||


ಕೃಷ್ಣ ವಿಶ್ವಸದಾಶ್ರಯನೆ ಹರಿ

ಕೃಷ್ಣ ವಿಶ್ವಕೆ ಸತ್ತೆಯಾಸರೆ

ಕೃಷ್ಣ ಸೃಷ್ಟಿಗೆ ಮೂಲದಾಧಾರನು ಪರಬ್ರಹ್ಮ |

ಕೃಷ್ಣ ಸರ್ವಕು ಮೂಲನಾಶ್ರಯ

ಕೃಷ್ಣ ನಿತ್ಯವು ಸರ್ವರಾಶ್ರಯ

ಕೃಷ್ಣನಾಶ್ರಯದಲ್ಲೆ ಜನಿಸ್ಥಿತಿಮೃತಿಗಳಿಹವಿಲ್ಲಿ || ೭೨೭ ||


ಅಧೋಮುಖಹೃದಾದಿತ್ಯೋ ಜ್ವಾಲಮಾಲಾಕುಲಾಧಿಪ:|

ಪದ್ಮಕೋಶಪ್ರತೀಕಾಶಹೃದಯಶ್ಚೋಶನಾಕವಿ:||೧೧೧||(೭೩೧)


ಅಧೋಮುಖಹೃದಾದಿತ್ಯನೆ-

-ಯಧೋದಿಕ್ಕಿಗೆ ಮುಖವಿರುವ ಹೃತ್

ಸದೋದಿತ ಭಾಸ್ಕರನೆ ಹೃತ್ಸ್ಥನೆ ಕೃಷ್ಣ ಪರಬೊಮ್ಮ |

ಹೃದಯ ತೆರೆದಿದೆ ಕೆಳಮುಖದಿ ತಾ

ಸದಯ ಹೃದಯನೆ ಕೋಟಿಸೂರ್ಯನೆ

ಪದುಮನಾಭನೆ ನೀಡು ಜೀವನ್ಮುಕ್ತಿ ಸದ್ಯದಲೆ || ೭೨೮ ||


ಜ್ವಾಲಮಾಲಾಕುಲಾಧಿಪ ಹರಿ

ಜ್ವಾಲೆಗಳ ಮಾಲೆಗಳಿಗಧಿಪತಿ

ಜ್ವಾಲಮಾಲಾ ಸಂಕುಲಕೆ ನಾಯಕನು ಭಾಸ್ಕರನು |

ಜ್ವಾಲಮಾಲೆಯು ದೇಹ ನಾಡಿಯು

ಜ್ವಾಲನಾಯಕ ಸುಷುಮ್ನೆಯು ತಾ

ಮಾಲಪ್ರಿಯ ವನಮಾಲಿ ಕೃಷ್ಣನೆ ರಕ್ಷಿಸನವರತ || ೭೨೯ ||


ಪದ್ಮಕೋಶಪ್ರತೀಕಾಶ

-ಹೃದಯ ಕೃಷ್ಣನೆ ಕಮಲಕೋಶಕೆ

ಪದುಮಕೋಶದ ತೆರದ ಹೃದಯವಧೋಮುಖದಿ ತೆರೆದು |

ಸದನವದು ಪರಮಾತ್ಮ ನಿನ್ನದು

ವದನವನು ಮನಸಾರೆ ವೀಕ್ಷಿಪೆ

ಹದನವಿದು ಯೋಗೀಶ್ವರನ ಶ್ರೀಕೃಷ್ಣ ರಕ್ಷಿಪುದು || ೭೩೦ ||


ಉಶನಾಕವಿ ಶುಕ್ರ ಕೃಷ್ಣನೆ-

-ಯಸುರಗುರು ಭಾರ್ಗವನ ರೂಪನೆ

ವೆಸನಗಳೆವಾನಂದರೂಪನೆ ಲೋಕಗುರು ಹರಿಯೆ |

ಅಶನ ವಸನಾದಿಗಳ ಮೂಲನೆ

ಹಸಿವೆಯಡಗಿಸುವಂಥ ಮಹಿಮನೆ

ಪಶುಪತಿಯೆ ಪಾಶುಪತಪ್ರೀಯನೆ ಪಾಶ ಬಿಡಿಸುವನೆ || ೭೩೧ ||


ಶಿಲಾಭಿರ್ಲಮ್ಬಮಾನಾರ್ಚಿರ್ವಿಶ್ವಸ್ಯಾಯತನಂ ಹವಿಃ |

ಶಿಲಾಗ್ರಸ್ಥಸುಶೀರ್ಷಶ್ಚ ಸುಶೀರ್ಷಾನ್ತರವಹ್ನಿಪಃ || ೧೧೨ || (೭೩೬)


ಶಿಲಾಭಿರ್ಲಂಬಮಾನಾರ್ಚಿಯೆ

ಶಿಲಾ ನರಗಳಲೇರುತಿಹ ದ್ಯುತಿ

ಕಲಾಮಯ ನರನಾಡಿಗತಿಯುತ ವಿದ್ಯುದಾದಿತ್ಯ |

ಫಲಾಫಲನಿರಪೇಕ್ಷ ಫಲದನೆ

ವಿಲಾಪವ ಕೊನೆಗಾಣಿಪನೆ ಹರಿ

ಜಲಾಶ್ರಯ ನಾರಾಯಣನೆ ಶ್ರೀಕೃಷ್ಣ ಪರಬೊಮ್ಮ || ೭೩೨ ||


ವಿಶ್ವಸ್ಯಾಯತನ ಶ್ರೀಕೃಷ್ಣನೆ

ವಿಶ್ವದಾಶ್ರಯ ನೀನೆ ಶ್ರೀಹರಿ

ವಿಶ್ವವೆಲ್ಲವು ನೀನೆ ನಿನ್ನೊಳಗಿಹುದು ತ್ವದ್ರೂಪ |

ಶಾಶ್ವತನೆ ಪರತತ್ತ್ವ ವಿಶ್ವನೆ

ವಿಶ್ವರೂಪದಿ ತೋರ್ವ ಬೊಮ್ಮನೆ

ನಶ್ವರದ ಜಗ ಶಾಶ್ವತದ ಪರಬೊಮ್ಮ ನೀನೆ ಹರಿ || ೭೩೩ ||


ಹವಿಯೆ ಯಜ್ಞಕೆ ಕೃಷ್ಣ ನೀ ಹರಿ

ಹವಿಯು ಸಮಿಧೆಯು ಹವ್ಯವಾಜ್ಯವು

ಸವಿಯು ಸವಿವನು ಸವಿಯುವಿಕೆ ತ್ರಿಪುಟಿಯು ಪರಬ್ರಹ್ಮ |

ಕವಿಯು ಸುಂದರ ವೇದಕಾವ್ಯಕೆ

ಸವಿಯು ಷಡ್ರಸಭರಿತವೂಟಕೆ

ನವಿರು ಹಾಸ್ಯವು ದಣಿದ ಮನ ತಣಿಸಲು ಸದಾ ಶಿವನೆ || ೭೩೪ ||


ಶಿಲಾಗ್ರಸ್ಥ-ಸುಶೀರ್ಷನೆ ಹರಿ

ಶಿಲಾ ನಾಡಿಯ ತುದಿ ವಿಶೇಷನೆ

ಶಿಲಾಗ್ರದಿ ಸಂವೇದನೆಯ ಸ್ವೀಕರ್ತ ಶ್ರೀಕೃಷ್ಣ |

ಶಿಲಾ ನರಕೋಶದ ತುದಿಯಲಿಹ

ಶಿಲಾಗ್ರದ ಗ್ರಾಹಕನೆ ಶಕ್ತಿಯೆ

ಶಿಲಾಗ್ರದಿ ನೆಲೆನಿಂತು ಸಂವೇದನೆಗಳರಿವೀವೆ || ೭೩೫ ||


ಸುಶೀರ್ಷಾಂತರ-ವಹ್ನಿಪನೆ ಹರಿ

ಸುಶೀರ್ಷವು ನರಗ್ರಾಹಕವು ತಾ

ಸುಶೀರ್ಷದಲೊಳಗಿರುವ ಗ್ರಾಹಕಶಕ್ತಿ ಶ್ರೀಕೃಷ್ಣ |

ಸುಶೀರ್ಷದ ವಿದ್ಯುದ್ವಿಶೇಷವು

ಸುಶೀರ್ಷದ ಕಾಂತೀಯ ಚೇತನ

ಸುಶೀರ್ಷಸ್ಥ ಸುಚೇತನಾಗ್ನಿಯ ಪತಿಯೆ ಪರಬೊಮ್ಮ || ೭೩೬ ||


ಅಗ್ರಭುಗ್ವಿಶ್ವಭುಗ್ವಿದ್ಯುದ್ವಿಶ್ವಾರ್ಚಿರ್ವಿಶ್ವತೋಮುಖ:|

ಸದಾಸರ್ವಗರಶ್ಮೀಶೋ ದೇಹತಾಪಪ್ರಪಾಲಕ:||೧೧೩||(೭೪೩)


ಅಗ್ರಭುಕ್ ಶ್ರೀಕೃಷ್ಣನಗ್ನಿಯು

ವ್ಯಗ್ರತ್ವವಿರದಂಥ ಶಾಂತನು

ಶೀಘ್ರಫಲದನು ಪ್ರೇಮಪ್ರೀತಾತ್ಯುಗ್ರರಿಗೆ ಕ್ರೂರ |

ಅಗ್ರನಾದಿಯು ಮುಖ್ಯಭೋಕ್ತೃವು

ಸಾಗ್ರಭುಕ್ ನೀನಗ್ನಿಸಹಿತ ಸ-

-ಮಗ್ರವುಣ್ಣುವ ವಹ್ನಿ ನೀನೇ ರುದ್ರ ಶ್ರೀಕೃಷ್ಣ || ೭೩೭ ||


ವಿಶ್ವಭುಕ್ ಶ್ರೀಕೃಷ್ಣದೇವನೆ

ವಿಶ್ವವೆಲ್ಲವನುಂಬ ರುದ್ರನೆ

ವಿಶ್ವ ಸಕಲವು ನಿನ್ನುದರದಿಹುದಲ್ಲವೇ ಕೃಷ್ಣ |

ಶಾಶ್ವತನು ಹರಿ ವಿಷ್ಣು ಬೊಮ್ಮನು

ವಿಶ್ವಮೂರುತಿ ವಿರಾಡ್ರೂಪನೆ

ವಿಶ್ವಸೃಜ್ ವಿಶ್ವಹೃದ್ರುದ್ರನೆ ಪರಬ್ರಹ್ಮ ಹರಿ || ೭೩೮ ||


ಕೃಷ್ಣ ವಿದ್ಯುದ್ರೂಪ ಶ್ರೀಹರಿ

ಕೃಷ್ಣ ಚೈತನ್ಯಾತ್ಮಕನೆ ಹರಿ

ಕೃಷ್ಣ ಸರ್ವಕು ಮೂಲಶಕ್ತಿಯೆ ವಿದ್ಯುದಾದಿತ್ಯ |

ಕೃಷ್ಣ ಮಿಂಚಿನ ಪ್ರಭೆಯ ರೂಪನೆ

ಕೃಷ್ಣ ಬ್ರಹ್ಮಾತ್ಮನೆ ಚಿದಾತ್ಮಕ

ಕೃಷ್ಣ ಶಕ್ತಿಸ್ವರೂಪ ಜ್ಞಾನಾನಂದ ಸದ್ರೂಪ || ೭೩೯ ||


ಕೃಷ್ಣನೇ ವಿಶ್ವಾರ್ಚಿ ನೀ ಹರಿ

ಕೃಷ್ಣ ವಿಶ್ವಕೆ ಜ್ಯೋತಿಕಿರಣವು

ಕೃಷ್ಣ ಸರ್ವವ ಬೆಳಗುವಂತಹ ಪರಾತ್ಪರ ಜ್ಯೋತಿ |

ಕೃಷ್ಣನೇ ಜಗಜ್ಜ್ಯೋತಿ ಸಂತತ

ಕೃಷ್ಣನೇ ವಿಶ್ವಾತ್ಮ ಕೇಶವ

ಕೃಷ್ಣ ನೀನಲ್ಲದಿಲ್ಲವು ಜಗವೆಲ್ಲ ನಶ್ವರವು || ೭೪೦ ||


ವಿಶ್ವತೋಮುಖ ವಾಸುದೇವನೆ

ವಿಶ್ವದೆಲ್ಲೆಡೆ ನಿನ್ನದೇ ಮುಖ

ವಿಶ್ವವೆಲ್ಲವನೀಕ್ಷಿಸುತಲುಣ್ಣುತಲಿ ಸೃಜಿಸುತಲಿ |

ವಿಶ್ವಸಾಕ್ಷಿಯೆ ಸರ್ವತೋಮುಖ

ಶಾಶ್ವತಾತ್ಮನೆ ಪರಬ್ರಹ್ಮವೆ

ನಶ್ವರದ ತೋರಿಕೆಯ ಜಗವಿದು ನೀನೆ ಶಾಶ್ವತನು || ೭೪೧ ||


ಸದಾ-ಸರ್ವಗ-ರಶ್ಮೀಶ ಹರಿ

ಸದಾ ಸರ್ವತ್ರವೂ ವ್ಯಾಪಕ

ಸದಾ ಶಿವ ವ್ಯಾಪಕಜ್ಯೋತಿಯೆ ದೇವ ಶ್ರೀಕೃಷ್ಣ |

ವಿಧಾತೃವೆ ಪರಬೊಮ್ಮ ರುದ್ರನೆ

ನಿದಾನವು ಜಗಕೆಲ್ಲ ವಿಷ್ಣುವೆ

ಸದಾ ಸರ್ವತ್ರವೂ ಗಮಿಸುವ ಗಮನಿಸುವ ಬೆಳಕೆ || ೭೪೨ ||


ದೇಹ-ತಾಪ-ಪ್ರಪಾಲಕ ಹರಿ

ದೇಹದುಷ್ಣತೆ ಕಾಪಿಡುವ ಹರಿ

ದೇಹ ರಕ್ಷಿಪ ಮೂರವಸ್ಥೆಗಳಲ್ಲಿ ಜೀವರನು |

ಆಹ! ನೀಯನಿರುದ್ಧ ಜಾಗೃತ

ದೇಹ ಪ್ರದ್ಯಮ್ನನೇ ಸ್ವಪ್ನದಿ

ದೇಹ ಸಂಕರ್ಷಣನು ಸುಪ್ತಿಲಿ ಕಾವ ಶ್ರೀಕೃಷ್ಣ || ೭೪೩ ||


ನೀಲತೋಯದಮಧ್ಯಸ್ಥವಿದ್ಯುಲ್ಲೇಖಾತಿಭಾಸ್ಕರ:|

ನೀವಾರಶೂಕವತ್ತನ್ವೀ ಪೀತಾಭಸ್ತು ಹ್ಯಣೂಪಮಃ ||೧೧೪||(೭೪೭)


ನೀಲತೋಯದಮಧ್ಯಸ್ಥ-ವಿ-

-ದ್ಯುಲ್ಲೇಖಾತಿಭಾಸ್ಕರನೆ ಹರಿ

ನೀಲಮೇಘದ ನಡುವೆ ಮಿಂಚಿಗು ಮೀರಿ ಬೆಳಗುವನೆ |

ನೀಲಮೇಘಶ್ಯಾಮ ಕೃಷ್ಣನೆ

ನೀಲಿ ಮಿಂಚಿಗು ಮೀರಿ ಬೆಳಗುವ

ನೀಲ ನೀರದ ಕೋಟಿಸೂರ್ಯಪ್ರಕಾಶ ಶ್ರೀಹರಿಯೆ || ೭೪೪ ||


ನೀವಾರ-ಶೂಕವತ್-ತನ್ವೀ

ನೀವಾರ ಕಾಡಕ್ಕಿಯ ತುದಿಯ ತೆರ

ಭಾವಕೊಲಿವನು ತೆಳ್ಳಗಿನ ಸುಂದರ ಶರೀರಿ ಹರಿ |

ಕಾವ ಸುಜನರ ಸೋಮಸುಂದರ

ನೋವಪಹರಿಸುತಲಿ ಸುಖದನು

ಸಾವ ಕಳೆದಮೃತತ್ವ ನೀಡೈ ದೇವ ಶ್ರೀಕೃಷ್ಣ || ೭೪೫ ||


ಪೀತಾಭ ಹರಿ ಪೀತಾಂಬರನೆ ನೀ

ಪೀತವರ್ಣದ ಹಳದಿ ರೇಶಿಮೆ

ಪೀತಾಂಬರಧರನೆ ಹಳದಿಯ ಪಟ್ಟೆ ಹೊಳಪಿಹನೆ |

ಪೀತವರಿಶಿನ ರೋಗನಾಶಕ

ಶೀತಹರವರ್ಬುದನಿವಾರಕ

ಕಾತರಿಸಿಹೆನು ಕೃಷ್ಣ ನಿನ್ನಯ ಪುಣ್ಯದರ್ಶನಕೆ || ೭೪೬ ||


ವಾಸುದೇವನೆ! ಅಣೂಪಮ ಹರಿ

ವಾಸಿಸಿಹೆ ಸೂಕ್ಷ್ಮಾತಿಸೂಕ್ಷ್ಮದಿ

ಸೂಸಿ ಭಜಿಪೆನು ವಿಶ್ವವ್ಯಾಪಕನಣುವಿಗಿಂತಣುವ |

ಈಸಬೇಕಿಹ ಜನನ ಮರಣದಿ

ಜಯಿಸಬೇಕಿದೆ ಸ್ಥಿತಪ್ರಜ್ಞೆಲಿ

ಸಾಸಿರದ ನಾಮದಿಂ ಪೂಜಿಪೆ ಕೃಷ್ಣ ಪರಮಾತ್ಮ || ೭೪೭ ||


ವಹ್ನಿಶಿಖಾನ್ತರಸ್ಥಶ್ಚ ಕೃಷ್ಣಪಿಙ್ಗಲವರ್ಣಧೃತ್|

ಊರ್ಧ್ವರೇತಾ ವಿರೂಪಾಕ್ಷೋ ವಿಶ್ವರೂಪೋ ಸುರೂಪದಃ || ೧೧೫ || (೭೫೩)


ವಹ್ನಿಶಿಖಾಂತರಸ್ಥ ಶ್ರೀಹರಿ

ವಹ್ನಿಶಿಖೆ ನರವಿದ್ಯುದಗ್ನಿಯು

ವಹ್ನಿಶಿಖೆಯೊಳಗಿರುವ ನಿಜ ಚೈತನ್ಯ ಶ್ರೀಕೃಷ್ಣ |

ವಹ್ನಿ ನೀ ವಹ್ನಿಯ ಶಿಖೆಯು ನೀ

ವಹ್ನಿಶಿಖೆಯಾಂತರಿಕ ಶಕ್ತಿಯು

ವಹ್ನಿ ವಿದ್ಯುತ್ಕಾಂತವಾಹವು ನರದಿ ನಾಡಿಯಲಿ || ೭೪೮ ||


ಕೃಷ್ಣಪಿಂಗಲವರ್ಣಧೃತ್ ಹರಿ

ಕೃಷ್ಣ ಕಪ್ಪನೆ ಕಂದು ಮೈಯಿಹ

ಕೃಷ್ಣ ಕಲಿಯುಗತಮದಿ ಧರಿಸಿಹ ಕಪ್ಪು ಬಣ್ಣವನು |

ಕೃಷ್ಣ ಕೆಂಚಿನ ಹಳದಿ ಕೆಂಪಿನ 

ಕೃಷ್ಣ ಕೆಂಬಣ್ಣವನು ಕಂದನು

ಕೃಷ್ಣ ಧರಿಸಿಹ ಮೈಯಲೀ ಕಲಿಯುಗದಿ ರಕ್ಷಿಸಲಿ || ೭೪೯ ||


ಊರ್ಧ್ವರೇತನೆ ವಾಸುದೇವನೆ-

-ಯೂರ್ಧ್ವ ಮೇಲಕೆ ವೀರ್ಯ ಹಿಡಿದಿಹ-

-ನೂರ್ಧ್ವವೀರ್ಯನು ಬ್ರಹ್ಮಚಾರಿಯು ಪತನರಹಿತ ಹರಿ |

ಊರ್ಧ್ವಶುಕ್ಲನು ವೀರಪುರುಷನು

ಸೋರ್ಧ್ವತೇಜನು ಶಾಂತ ದಾಂತನು-

-ವೂರ್ಧ್ವಗತಿ ಯೋಗದ ಸಮಾಧಿಯು ಸಹಸ್ರಾರಸ್ಥ || ೭೫೦ ||


ವಿರೂಪಾಕ್ಷನೆ ಭಾಲನೇತ್ರನೆ

ಸುರೂಪನೆ ತಾ ರುದ್ರರೂಪನೆ

ಸರೂಪನು ತಾನರೂಪನು ಪರಬೊಮ್ಮ ಶ್ರೀಕೃಷ್ಣ |

ಕುರೂಪಿಲಿರುವ ಸುರೂಪಿಲಿರುವ

ವಿರೂಪದಲಿಹ ಸರೂಪದಲಿಹ-

-ನರೂಪಿಯು ತಾ ಸರೂಪನ ತೆರ ತೋರ್ವ ಜಗದಂತೆ || ೭೫೧ ||


ವಿಶ್ವರೂಪನೆ ಜಗದ ರೂಪನೆ

ವಿಶ್ವಮೂರುತಿ ಲೋಕದಾಕೃತಿ

ವಿಶ್ವದಾಕಾರವನು ತಾಳಿದ ತೆರದಿ ಶ್ರೀಕೃಷ್ಣ |

ವಿಶ್ವ ನೀನೇ ವಿಶ್ವಕಾರಣ

ವಿಶ್ವಮೂಲನೆ ವಿರಾಟ್ಪುರುಷನೆ

ವಿಶ್ವದಾದ್ಯಂತಗಳು ಮಧ್ಯವು ಸಕಲ ಶ್ರೀಕೃಷ್ಣ || ೭೫೨ ||


ಸುರೂಪದ ಹರಿ ವಾಸುದೇವನೆ

ಸುರೂಪವ ಸುಂದರದ ರೂಪವ

ಸುರೂಪದ ಸೌಂದರ್ಯವೀಯುವ ದೇವ ಶ್ರೀಕೃಷ್ಣ |

ವಿರೂಪವ ಪರಿಹರಿಸಿ ಕುಬ್ಜೆಗೆ

ಸುರೂಪವ ತಂದಿಕ್ಕಿ ಲೋಕಕೆ-

-ಯರೂಪದ ಪರಬೊಮ್ಮ ಸುಂದರ ಸೃಷ್ಟಿಯಾದನಹೋ || ೭೫೩ ||


ತ್ರೈಲೋಕ್ಯಮೋಹನಶ್ಚೈವ ಸ್ವಾತ್ಮಾರಾಮೋ ನಿರಞ್ಜನಃ |

ಜಾಮದಗ್ನ್ಯೋ ಮಹಾವೀರಃ ಪಾರಾಶರ್ಯಸ್ಸ್ವಯಂಭವಃ ||೧೧೬|| (೭೬೦)


ತ್ರೈಲೋಕ್ಯಮೋಹನನೆ ಕೃಷ್ಣನೆ

ಮೂರ್ಲೋಕಗಳ ಮೋಹಗೊಳಿಪನೆ

ತ್ರಿಲೋಕದ ಸಕಲರನು ತನ್ನೆಡೆ ಕರ್ಷಿಪನು ಕೃಷ್ಣ |

ದ್ಯುಲೋಕದ ದೇವತೆಗಳಧಿಪನೆ

ಭೂಲೋಕದ ಜೀವರುಗಳಧಿಪಧೋ-

-ಲೋಕ ಜೀವಿಗಳಧಿಪ ಪರಮಾತ್ಮನೆ ಪರಬ್ರಹ್ಮ || ೭೫೪ ||


ಸ್ವಾತ್ಮಾರಾಮ ವಾಸುದೇವನೆ

ಸ್ವಾತ್ಮದಲೆ ರಮಿಸುತಿಹ ಜ್ಞಾನಿಯೆ

ಸ್ವಾತ್ಮರತ ಪರಮಾತ್ಮ ನಾರಾಯಣನೆ ಶ್ರೀಕೃಷ್ಣ |

ಆತ್ಮರೂಪನೆ ಬ್ರಹ್ಮರೂಪನೆ

ಸ್ವಾತ್ಮದಲಿ ನೆಲೆನಿಂತ ರೂಪನೆ

ಸ್ವಾತ್ಮನಿಷ್ಠನೆ ಪರಬ್ರಹ್ಮನೆ ಸರ್ವರಾತ್ಮ ಹರಿ || ೭೫೫ ||


ನಿರಂಜನ ಹರಿ ವಾಸುದೇವನೆ

ನಿರ್-ಅಂಜನ ಕತ್ತಲೆರಹಿತ ಹರಿ

ನಿರಂಜನ ಸುಜ್ಞಾನ ಬೆಳಕದು ಕೃಷ್ಣರೂಪವದು |

ಸುರಂಜನ ನಿಜ ಭಕ್ತರಿಗೆ ತಾ

ನಿರಂಜನ ನಿತ್ಯವೂ ರಂಜಿಪ

ನಿರಂತರದಾನಂದ ಚಿತ್ಸದ್ರೂಪ ಶ್ರೀಕೃಷ್ಣ || ೭೫೬ ||


ಜಾಮದಗ್ನ್ಯನೆ ಪರಶುರಾಮನೆ

ಜಮದಗ್ನಿಸುತ ಭಾರ್ಗವಾಖ್ಯನೆ

ರಾಮ ರೇಣುಕೆಪುತ್ರ ಕಾರ್ತವೀರ್ಯಾರ್ಜುನನ ಕೊಂದ |

ರಾಮ ದುಷ್ಟಕ್ಷತ್ರಿಯಾಂತಕ

ಕಾಮಹರಶಿಷ್ಯ ಪ್ರಚಂಡನೆ

ರಾಮನಾವೇಶಾವತಾರಿಯು ನೀನೆ ಶ್ರೀಕೃಷ್ಣ || ೭೫೭ ||


ಮಹಾವೀರನೆ ಜೈನಸ್ಥಾಪಕ

ಮಹಾತಾಪಸಿ ಯತಿ ವಿರಾಗಿಯು

ಮಹಾऽಹಿಂಸಾವಾದಿ ಜಿನಮತ ಸುಪ್ರವರ್ತಕನೆ |

ಮಹಾಜಿನ ತೀರ್ಥಂಕರನೆ ಹರಿ

ಮಹಾ ನಾಸ್ತಿಕ ವೇದನಿಂದಕ

ಮಹಾ ನಟ ಯಜ್ಞದ ವಿರೋಧಿಯೆ ದೇವ ಶ್ರೀಕೃಷ್ಣ || ೭೫೮ ||


ಪಾರಾಶರ್ಯ ವಾಸುದೇವನೆ

ಪರಾಶರಮುನಿಸೂನು ಕೃಷ್ಣನೆ

ಪರಾತ್ಪರ ದ್ವೈಪಾಯನನೆ ವೇದವ್ಯಾಸ ಮುನಿಪ |

ಪರಮ ಬ್ರಹ್ಮಸೂತ್ರ ರಚಿಸಿದ

ಪರಮ ವೇದವ ವಿಭಾಗಿಸಿದನು

ವರ ಪುರಾಣಗಳನ್ನು ರಚಿಸಿದ ಶ್ರೇಷ್ಠ ಸ್ಮೃತಿಕಾರ || ೭೫೯ ||


ಸ್ವಯಂಭವ ತನಗಿಲ್ಲ ಕಾರಣ

ಸ್ವಯಂ ಪರಬೊಮ್ಮನು ವಿರಾಜಿಪ

ನಿಯಂತ್ರಕ ಜಗದಾಗುಹೋಗಿಗೆ ದೇವ ಶ್ರೀಕೃಷ್ಣ |

ಸ್ವಯಂ ತನ್ನಿಚ್ಛೆಯಲಿ ಪುಟ್ಟುವ

ಸ್ವಯಂ ತನ್ನ ಸಂಕಲ್ಪ ಗೈಯುವ

ಸ್ವಯಂ ರಾಜನು ಬೇರೆಯಧಿಪರು ಯಾರಿಹರು ನಿನಗೆ || ೭೬೦ ||


ಮಹಾಜ್ವಾಲಸ್ಸಪ್ತಜಿಹ್ವೋ ವೈಶ್ವಾನರೋऽಗ್ನಿರೂಪಧೃತ್ |

ಸುರಾಚಾರ್ಯಸ್ಸುರಶ್ರೇಷ್ಠೋ ಬೃಹಸ್ಪತಿಃ ಪುರಾಧಿಪಃ ||೧೧೭|| (೭೬೮)


ಮಹಾಜ್ವಾಲನೆ ವಾಸುದೇವನೆ

ಮಹಾಗ್ನಿಯ ಜ್ವಾಲಂಯಂತಿಹ

ಮಹಾತ್ಮನೆ ಜ್ವಲದಗ್ನಿರೂಪನೆ ಕೃಷ್ಣತೇಜಸ್ಸೆ |

ಗುಹಾಶ್ರಯ ಹೃತ್ಕುಹರವಾಸನೆ

ಸುಹಾಸನೆ ಬಲು ಮಂದಹಾಸನೆ

ಮಹಾಜ್ವಾಲಾಮಾಲೆಯಂತಿಹ ದೇವ ಶ್ರೀಕೃಷ್ಣ || ೭೬೧ ||


ಸಪ್ತಜಿಹ್ವನೆ ದೇವ ಕೃಷ್ಣನೆ

ಸಪ್ತವರ್ಣದ ಬೆಳಕಿನಾಕೃತಿ

ಸಪ್ತ ನಾಲಿಗೆಯುಳ್ಳ ವಹ್ನಿಯೆ ವಾಸುದೇವ ಹರಿ |

ಸಪ್ತ ಜ್ವಾಲೆಯ ಯಜ್ಞರೂಪನೆ

ಸಪ್ತಾಶ್ವರಥವೇರಿದರ್ಕನೆ

ಸಪ್ತಸಾಗರಸೃಷ್ಟಿಕರ್ತನೆ ಪರಬ್ರಹ್ಮ ಶಿವ || ೭೬೨ ||


ವೈಶ್ವಾನರನೆ ಕೃಷ್ಣನೇ ಹರಿ

ವಿಶ್ವರೂಪನೆ ಜಾಗ್ರತಿಯಲಿವ

ಶಾಶ್ವತನೆ ಜಾಗ್ರತ್ ಸುಷುಪ್ತಿ ಸ್ವಪ್ನದಾಚೆಗಿನ |

ನಶ್ವರದ ಲೋಕದ ತುರೀಯನೆ

ವಿಶ್ವದಾಕಾರದಲಿ ತೋರ್ವನೆ

ಪಶ್ವಾದಿಗಳ ಮೂಲ, ಪಾಲಕ, ಲಯದ ಕರ್ತ ಶಿವ || ೭೬೩ ||


ಕೃಷ್ಣ ನೀನ್ ಅಗ್ನಿರೂಪಧೃತ್

ಕೃಷ್ಣ ತೋರುವ ಬೆಂಕಿಯಲ್ಲಿಹೆ

ಕೃಷ್ಣನಗ್ನಿಯ ಸುಡುವ ಶಕ್ತಿಯು ಶಾಖ ಕೇಶವನೆ |

ಕೃಷ್ಣ ನಾಕಾಗ್ನಿಯೂ ಭೂಮಿಯ

ಕೃಷ್ಣ ಭೂರಗ್ನಿ ದ್ಯುಲೋಕದ

ಕೃಷ್ಣ ವಿದ್ಯುನ್ಮಿಂಚು ಗುಡುಗುಗಳೆಲ್ಲ ತ್ವದ್ರೂಪ || ೭೬೪ ||


ಸುರಾಚಾರ್ಯನೆ ವಾಸುದೇವನೆ

ಸುರರ ಗುರು ದೇವಗುರು ಕೃಷ್ಣನೆ

ಸುರಾರಾಧಿತ ಸುರಸುರಕ್ಷಕ ಬೃಹಸ್ಪತಿ ನೀನೆ |

ಸುರೆಯ ಕುಡಿಯನು ಸುರರ ಕೈಬಿಡ

ತ್ವರೆಯ ಮಾಡದೆ ಸಾವಧಾನದಿ

ಪರಮ ವೇದಾಚಾರ್ಯ ಧರ್ಮಾಚಾರ್ಯ ಶ್ರೀಕೃಷ್ಣ || ೭೬೫ ||


ಸುರಶ್ರೇಷ್ಠನೆ ವಾಸುದೇವನೆ

ಸುರಪತಿಯೆ ಸುರಗುರುವೆ ಸುರಭೃತ್

ಸುರರ ಮೂಲನೆ ಸುರವಿಶೇಷನೆ ಸುರುಚಿರನೆ ಕೃಷ್ಣ |

ಪರಮಮಂಗಲಧಾಮ ಶ್ರೀಹರಿ

ಚರಮಗತಿ ಜೀವರಿಗೆ ಮುಕುತಿಯು

ಕರುಣಿಸೈ ಭಕುತಿಯನು ಭವ ಭವದಲ್ಲು ಸಂತತವು || ೭೬೬ ||


ಬೃಹಸ್ಪತಿ ಹರಿ ವಾಸುದೇವನೆ

ಬೃಹತ್ ಪತಿ ನೀ ಬ್ರಹ್ಮಣಸ್ಪತಿ 

ಮಹತ್ ಶಾಶ್ವತ ವಿಶುದ್ಧಾತ್ಮ ನಿರಾಮಯನೆ ಕೃಷ್ಣ |

ಸಹಾಯನೆ ಸುರಪತಿಗೆ ಧರ್ಮಕೆ

ಮಹಾಮಹಿಮನೆ ಮಾರ್ಗದರ್ಶಕ

ಮಹಾದೇವನೆ ಸದಾಶಿವ ಲೋಕಕ್ಕೆ ಬೆಳಕು ಹರಿ || ೭೬೭ ||


ಪುರಾಧಿಪ ಶ್ರೀಕೃಷ್ಣದೇವನೆ

ಪುರವು ದೇಹವು ದೇಹ ನಿನ್ನದು

ಪುರದಧಿಪ ಹರಿ ನಗರದಧಿಪತಿ ಸರ್ವಲೋಕಪತಿ |

ಪುರದಿ ಪೂರ್ವದಿ ಶಯನಿಸಿದನಿವ

ಪುರುಷ ಪುರುಷೋತ್ತಮನೆ ಶ್ರೀಹರಿ

ಪರಮಪುರುಷನೆ ವಾಸುದೇವನೆ ದೇಹದೊಳಗಿರುವ || ೭೬೮ ||


ವೈವಸ್ವತೋ ಯಮಃ ಕಾಲಪುರುಷಸ್ಸೂರ್ಯನನ್ದನಃ |

ದಣ್ಡಹಸ್ತೋ ಮಹಾಕಾಲಶ್ಶೂಲಹಸ್ತಷ್ಷಡಾನನಃ ||೧೧೮|| (೭೭೬)


ವೈವಸ್ವತನೆ ವಾಸುದೇವನೆ

ವಿವಸ್ವಾನ್ ಸುತ ಸೂರ್ಯಪುತ್ರನೆ

ದೇವ ಯಮ ಶನಿ ಮನುಗಳೆಲ್ಲರು ವಿವಸ್ವಾನ್ ಸುತರು |

ವೈವಸ್ವತರು ದೇವರಂಶರು

ವಿವಸ್ವಾನಾದಿತ್ಯ ಕಶ್ಯಪ-

-ಭವನದಿತಿಸುತ ವಿಧಿಯ ಮೊಮ್ಮಗ ವಿಷ್ಣುನಪ್ತೃ ನಮೋ || ೭೬೯ ||


ಯಮನೆ ಕೃಷ್ಣನೆ ನಿಯಮಪಾಲಕ

ಯಮನಿಯಮಕಾರಣನೆ ಧರ್ಮನೆ

ವಿಮನವಿಲ್ಲದೆ ನಿಯಮ ಪಾಲಿಸಿ ಮುಕ್ತಿಗೇರಯ್ಯ |

ಸುಮನ ಸುಕರಣ ಶುದ್ಧ ಚೇತನ

ಕುಮನಹಂ ತೊರೆ ಸಮತ್ವವ ಪಡೆ

ಹೇಮಮೃತ್-ಸ್ತ್ರೀಮೋಹ ತೊರೆಯುತ ಭಕ್ತಿಯನು ಬೆಳೆಸೋ || ೭೭೦ ||


ಕಾಲಪುರುಷನೆ ವಾಸುದೇವನೆ

ಕಾಲಕಾಲನೆ ಕಾಲಕಾರಣ

ಕಾಲ ನೀ ಕಾಲಾತೀತ ತ್ರಿಕಾಲೇಶ ಹರಿ |

ಕೇಲಿ ನಿನ್ನದು ಸೃಷ್ಟಿಯೆಲ್ಲವು

ಮಾಲಿಕನು ನೀ ಕೂಲಿಗಳು ನಾವ್

ಪಾಲಿಸೈ ಪಾಮರರ ಸುಜನರ ಧರ್ಮದಲಿ ನಡೆಸು || ೭೭೧ ||


ಸೂರ್ಯನಂದನ ವಾಸುದೇವನೆ

ಸೂರ್ಯ ನೀನೇ ಮನುವು ನೀನೇ

ಕಾರ್ಯಕಾರಣಕರಣಪಂಚಸುಕೃತ್ಯ ನೀ ಕೃಷ್ಣ |

ಸೂರ್ಯಸುತ ಯಮ ಮನು ಶನಿಗಳಿರ

ಕಾರ್ಯಸಾಧಕರೆಮಗೆ ಸಂತತ

ಶೌರ್ಯಧೈರ್ಯಾರ್ಯತ್ವ ಸೌಕರ್ಯಗಳ ಕಾರಣರು || ೭೭೨ ||


ದಂಡಹಸ್ತನೆ ಕೃಷ್ಣದೇವನೆ

ದಂಡ ಪಿಡಿದಿಹ ಯಮನೆ ಕಾಲನೆ

ದಂಡಿ ಬೊಮ್ಮನೆ ಮುನಿಯೆ ರಾಜನೆ ನ್ಯಾಯದಧಿಪತಿಯೆ |

ಚಂಡನೇ ಸುಪ್ರಚಂಡನೆ ಹರಿ

ಕಂಡ ಕಂಡವರನ್ನು ಕರ್ಷಿಸಿ

ಭಂಡರನು ಚೆಂಡಾಡಿ ಕೊಂಡಾಡುವಿಯೊ ಸುಜನರನು || ೭೭೩ ||


ಮಹಾಕಾಲನೆ ವಾಸುದೇವನೆ

ಮಹಾಕಾಲೇಶ್ವರನೆ ಶಂಭುವೆ

ಮಹಾಕಾಳಿಯ ಪತಿಯೆ ಸಂಹಾರಕನೆ ಪರಬೊಮ್ಮ |

ಮಹಾರುದ್ರನೆ ಲೋಕಶಂಕರ

ಮಹಾದೇವನೆ ಸದಾಶಿವ ಹರ

ಮಹಾಶಾಂತನೆ ಚಿನ್ಮಯನೆ ಹರಿ ಸಚ್ಚಿದಾನಂದ || ೭೭೪ ||


ಶೂಲಹಸ್ತನೆ ವಾಸುದೇವ ತ್ರಿ-

-ಶೂಲಪಾಣಿಯೆ ರುದ್ರರೂಪನೆ

ಫಾಲನೇತ್ರನೆ ರುಂಡಮಾಲಾಧರನ ರೂಪ ಹರಿ |

ಸೋಲದಿಹ ಶೂಲಿಯೇ ಶ್ರೀಹರ

ಪಾಲಿಸುವ ದೇವನೇ ಶ್ರೀಹರಿ

ಮೂಲಕರ್ತನೆ ಬೊಮ್ಮ ತ್ರೈಮೂರ್ತ್ಯೇಕ ಪರತತ್ತ್ವ || ೭೭೫ ||


ಷಡಾನನ ಹರಿ ವಾಸುದೇವನೆ

ಷಡಾನನ ಷಣ್ಮುಖನ ರೂಪನೆ

ಷಡಾನನ ಬ್ರಹ್ಮನ ಕುಮಾರನೆ ಶಿವಕುಮಾರ ಹರಿ |

ಷಡಾನನ ಸುಬ್ರಹ್ಮಣ್ಯ ಹರಿ

ಷಡಾನನ ಸುಜ್ಞಾನಿ ದೇವನೆ

ಷಡಾನನ ಶ್ರೀಕೃಷ್ಣ ಸ್ಕಂದನೆ ಸುಬ್ರಹ್ಮಣ್ಯ ಹರಿ || ೭೭೬ ||


ಜಗನ್ಮಙ್ಗಲರೂಪಶ್ಚ ಭಕ್ತಾನಾಮಭಯಙ್ಕರಃ |

ಸರ್ವಾತ್ಮಕ ಆತ್ಮಭೂತೋ ಜಗನ್ನಿವಾಸರೂಪಧೃತ್ ||೧೧೯|| (೭೮೧)


ಜಗನ್ಮಂಗಲರೂಪ ಕೃಷ್ಣನೆ

ಜಗಕೆ ಮಂಗಲವೀವ ಶ್ರೀಹರಿ

ಜಗದ ಮಂಗಲರೂಪ ಸೃಷ್ಟಿಯೆ ವಾಸುದೇವ ಹರೇ |

ಭಗವದವತಾರದಲಿ ಕಾಯುವ

ಖಗದಿ ಚರಿಪನೆ ಕೇಶವಾಚ್ಯುತ

ಸಿಗನು ಕಪಟಕೆ ಶುದ್ಧಭಕ್ತಜ್ಞಾನಿಗೊಲಿಯುವನು || ೭೭೭ ||


ಭಕ್ತಾನಾಮಭಯಂಕರನೆ ಹರಿ

ಭಕ್ತರಿಗೆ ನಿರ್ಭಯವನೀಯುವ

ಭಕ್ತರಿಗೆ ಸುಜ್ಞಾನ ಮುಕ್ತಿಯ ಕರುಣಿಪನು ಕೃಷ್ಣ |

ಭಕ್ತವಶ್ಯನು ಭಕ್ತಬಂಧುವು

ಭಕ್ತಪ್ರೇಮಿಯು ಭಕ್ತವತ್ಸಲ

ಭಕ್ತರಕ್ಷಕ ಭಕ್ತಶತ್ರುನಿವಾರಕನೆ ಕೃಷ್ಣ || ೭೭೮ ||


ಸರ್ವಾತ್ಮಕನೆ ವಾಸುದೇವನೆ

ಸರ್ವರಾತ್ಮನೆ ಸರ್ವಸಂಸ್ಥಿತ

ಸರ್ವಮೂಲನೆ ಸರ್ವಪಾಲಕ ಸರ್ವಸಂಹಾರಿ |

ಸರ್ವರೊಳಹೊರಗಿರುವ ಬ್ರಹ್ಮನೆ

ಸರ್ವಕರ್ತನೆ ವಿಧಿಯೆ ವಿಷ್ಣುವೆ

ಸರ್ವವ್ಯಾಪಕ ಶರ್ವ ಲಯಕರ್ತನೇ ಶ್ರೀಕೃಷ್ಣ || ೭೭೯ ||


ಆತ್ಮಭೂತನೆ ಸರ್ವರಾತ್ಮನೆ-

-ಯಾತ್ಮರೂಪದಿ ಬೆಳಗುತಿರುವನೆ-

-ಯಾತ್ಮ ನೀ ಪರಬೊಮ್ಮ ಕೃಷ್ಣನೆ ಸಚ್ಚಿದಾನಂದ |

ಆತ್ಮ ನೀ ಜೀವರಿಗೆ ಸೃಷ್ಟಿಗೆ-

-ಯಾತ್ಮನಸ್ತಿತ್ತ್ವವದು ಸತ್ತೆಯ-

-ದಾತ್ಮ ಚಿಚ್ಛಕ್ತಿಯೆ ಸುಬೋಧವೆ ಪರಾನಂದಸುಖ || ೭೮೦ ||


ಜಗನ್ನಿವಾಸರೂಪಧೃತ್ ಹರಿ

ಜಗದಿ ವಾಸಿಪ ವಾಸುದೇವನೆ

ಜಗತ್-ಸ್ಥಿತ ಹರಿ ಶ್ರೀನಿವಾಸ ಜಗನ್ನಿವಾಸ ವಿಭೋ |

ಬಗೆ ಬಗೆಯ ಸೃಷ್ಟಿಯಲಿ ತೋರ್ವನೆ

ಸಿಗದೆ ದುಷ್ಟಗೆ ಹಗೆಯ ರೂಪನೆ

ಜಗವ ಪೊರೆವನು ಶಿಷ್ಟದುಷ್ಟರನುದ್ಧರಿಪ ಕೃಷ್ಣ || ೭೮೧ ||


ಧಾತಾ ಸರ್ವಗುಣೋಪೇತೋ ಭರ್ತಾ ಪರಮಶೋಭನಃ |

ಉಡ್ವೀಶವದನೋ ಭವ್ಯೋ ಭಾವ್ಯಸ್ಸರ್ವಗುಹಾಸ್ಥಿತಃ ||೧೨೦|| (೭೮೯)


ಧಾತೃವೇ ಹರಿ ವಾಸುದೇವನೆ

ಧಾತೃರೂಪನೆ ಬೊಮ್ಮನಾಗಿಹೆ

ಪಿತೃವೆ ಲೋಕಕೆ ಸೃಷ್ಟಿಕರ್ತನೆ ಹೇ ಚತುರ್ಮುಖನೆ |

ಪಿತೃವೆ ಬೊಮ್ಮಗೆ ರುಕ್ಮಿಣೀಶನೆ

ಮಾತೃ ಲೋಕಕೆ ದಾತೃ ಧಾತೃವೆ

ವೇತ್ತೃ ಸರ್ವಾಧಾರ ದುಷ್ಟನಿಬರ್ಹಣನೆ ಕೃಷ್ಣ || ೭೮೨ ||


ಸರ್ವಗುಣೋಪೇತ ಕೃಷ್ಣನೆ

ಸರ್ವಸದ್ಗುಣನಿಧಿಯೆ ಬೊಮ್ಮನೆ

ಸರ್ವದೋಷವಿವರ್ಜಿತನೆ ಹರಿ ಸರ್ವರಕ್ಷಕನೆ |

ಉರ್ವಿಪತಿ ಗೋವಿಂದ ಕೇಶವ

ಶರ್ವಮಿತ್ರನೆ ಶ್ರೀಪತಿಯೆ ಹರಿ

ಸರ್ವಸದ್ಗುಣವೀಯೊ ದುರ್ಗುಣ ನಾಶಗೊಳಿಸೊ ಹರಿ || ೭೮೩ ||


ಭರ್ತನೇ ಹರಿಯಖಿಲ ಲೋಕಕೆ

ಭರ್ತ ಭರಿಸಿಹ ಸರ್ವಸೃಷ್ಟಿಯ

ಭರ್ತ ತನ್ನೊಳು ತುಂಬಿಕೊಂಡಿಹ ವಿಶ್ವಪತಿ ಕೃಷ್ಣ |

ಶರ್ತರಹಿತದಿ ವಿಶ್ವಪ್ರೇಮಿಯು

ವರ್ತಮಾನದಿ ಭೂತಭವ್ಯದಿ

ಕರ್ತನೊಲು ತೋರುವನು ಪುಸಿಜಗಕೀ ಮಹಾವಿಷ್ಣು || ೭೮೪ ||


ಪರಮಶೋಭನ ವಾಸುದೇವನೆ

ಪರಮ ಶ್ರೇಷ್ಠನು ಶೋಭೆ ಸುಂದರ

ಹರಿಯು ಪರಮಾತ್ಮನು ಶುಭಾವಹ ಶೋಭಾಯಮಾನ |

ಗುರುವು ಲೋಕಕೆ ದೇವ ಕೃಷ್ಣನು

ಹರನ ಸಖ ನಾರಾಯಣನು ಹರಿ

ಚಿರಸುಖವ ಮೋಕ್ಷವನು ನೀಡುವ ಸಚ್ಚಿದಾನಂದ || ೭೮೫ ||


ಕೃಷ್ಣ ನೀನ್ ಉಡ್ವೀಶವದನನು

ಕೃಷ್ಣ ಚಂದಿರವದನ ಸುಂದರ

ಕೃಷ್ಣನುಡು ತಾರೆಯರ ಪತಿ ಶಶಿನಿಭನು ಸುಖದಾತ |

ವಿಷ್ಣುಮೂಲನು ವಾಸುದೇವನು

ಕೃಷ್ಣ ದೇವಕಿಸುತನು ಚಂದಿರ

ಕೃಷ್ಣಚಂದ್ರನೆ ರಾಮಚಂದ್ರನೆ ರಕ್ಷಿಸನವರತ || ೭೮೬ ||


ಭವ್ಯ ಶ್ರೀಹರಿ ಕೃಷ್ಣ ಶ್ರೇಷ್ಠನು

ಭವ್ಯ ಭವಿತವ್ಯನೂ ಕೃಷ್ಣನೆ

ನವ್ಯ ಪ್ರಾಚೀನಗಳು ಸಕಲವು ವಾಸುದೇವ ಹರಿ |

ಸವ್ಯಸಾಚಿಯು ಹವ್ಯಭೋಕ್ತೃವು

ಶ್ರಾವ್ಯ ದೃಶ್ಯಗಳೆಲ್ಲ ಕೃಷ್ಣನೆ

ಭವ್ಯವದ್ಭುತ ಯೋಗ್ಯ ಸತ್ಯವು ಭಾವಿ ಶ್ರೀಕೃಷ್ಣ || ೭೮೭ ||


ಭಾವ್ಯ ಭಾವಿಸಲರ್ಹ ಕೃಷ್ಣನು

ಸೇವ್ಯ ಸ್ವಾಮಿಯು ಭಕ್ತಜನರಿಗೆ

ಕಾವ್ಯಪ್ರೀಯನು ಬಾವಕೊಲಿಯುವ ವಾಸುದೇವ ಹರಿ |

ದಿವ್ಯ ಶಕ್ತಿಯು ಪರಬ್ರಹ್ಮವು

ಭವ್ಯ ರೂಪವರೂಪವಾತ್ಮವು

ಸವ್ಯವಪಸವ್ಯಗಳು ಸಕಲಕು ಮೂಲ ಶ್ರೀಕೃಷ್ಣ || ೭೮೮ ||


ಸರ್ವಗುಹಾಸ್ಥಿತ ವಾಸುದೇವನೆ

ಸರ್ವಜೀವರ ಹೃದಯವಾಸನೆ

ಸರ್ವಸೃಷ್ಟಿಯೊಳಂತರಾತ್ಮನೆ ಹೇ ಪರಬ್ರಹ್ಮ |

ಸರ್ವಶಕ್ತನೆ ಸರ್ವವಿದ ಹರಿ

ಸರ್ವಕಾರಣ ಸರ್ವಮೂಲನೆ

ಶರ್ವಬೊಮ್ಮನೆ ದೇವಿ ನಾರಾಯಣನೆ ಶ್ರೀಕೃಷ್ಣ || ೭೮೯ ||


ಸರ್ವಧ್ಯೇಯಶ್ಚ ಸರ್ವೇಡ್ಯಸ್ಸರ್ವಲೋಕಪ್ರಪೂಜಿತಃ |

ಶರಣ್ಯಶ್ಚ ವರೇಣ್ಯಶ್ಚ ಶರಣಾಗತವತ್ಸಲಃ ||೧೨೧|| (೭೯೫)


ಸರ್ವಧ್ಯೇಯನೆ ವಾಸುದೇವನೆ

ಸರ್ವರಿಂ ಧ್ಯಾನಿಸಲು ಯೋಗ್ಯನೆ

ಸರ್ವಲೋಕಕೆ ಧ್ಯೇಯ ಪೂಜ್ಯನೆ ಸೇವ್ಯ ಚಿಂತ್ಯ ಹರಿ |

ಸರ್ವಗುರು ಸರ್ವಾತ್ಮ ಕೃಷ್ಣನೆ

ಸರ್ವರಂತರ್ಯಾಮಿ ಕೃಷ್ಣನೆ

ಸರ್ವರಕ್ಷಕ ಸರ್ವಹಿತಚಿಂತಕನೆ ಶ್ರೀಕೃಷ್ಣ || ೭೯೦ ||


ಸರ್ವೇಡ್ಯ ಶ್ರೀಕೃಷ್ಣದೇವನೆ

ಸರ್ವರಿಂ ಸ್ತುತ್ಯನೆ ಪರಾತ್ಮನೆ

ಸರ್ವಸೇವ್ಯನೆ ಸರ್ವಪೂಜ್ಯನೆ ಸರ್ವವಂದಿತನೆ |

ಸರ್ವಲೋಕಪಿತಾಮಹನೆ ಹರಿ

ಸರ್ವಸೃಷ್ಟಿಯ ಮೂಲಕಾರಣ

ಸರ್ವವೂ ಪರಮಾತ್ಮ ಕೃಷ್ಣನೆ ದೇವ ಪರಬೊಮ್ಮ || ೭೯೧ ||


ಸರ್ವಲೋಕಪ್ರಪೂಜಿತ ಹರಿ

ಸರ್ವಲೋಕಗಳಿಂದ ಪೂಜಿತ

ಸರ್ವರಿಂ ಪರಮಾದರದಿ ಪೂಜಿತನು ಶ್ರೀಕೃಷ್ಣ |

ಶರ್ವವಂದಿತ ಸರ್ವರಕ್ಷಕ

ಸರ್ವರೊಡೆಯನೆ ಸರ್ವರಾತ್ಮನೆ

ಸರ್ವರೂಪನೆ ವಾಸುದೇವನೆ ಸಚ್ಚಿದಾನಂದ || ೭೯೨ ||


ಶರಣ್ಯನೆ ಹರಿ ಕೃಷ್ಣ ದೇವನೆ

ಶರಣು ಬಂದವರಾಶ್ರಯನೆ ಹರಿ

ಮರಣದಾಚೆಯ ಮುಕುತಿಯೀವನೆ ಭಕ್ತಿಜ್ಞಾನದಲಿ |

ಶರವ ಪಿಡಿಯುತ ರಾಮನಾಗಿಹೆ

ವರವನೀಯುವ ವಿಷ್ಣುವಾಗಿಹೆ

ಕರವ ಪಿಡಿಯುತ ಪ್ರೇಮದಿಂ ಸಲಹುವನೆ ಶ್ರೀಕೃಷ್ಣ || ೭೯೩ ||


ವರೇಣ್ಯನೆ ಶ್ರೀಕೃಷ್ಣ ಕೇಶವ

ವರಣೀಯ ಹರಿ ಸರ್ವರಿಂದಲು

ಪರಮಶ್ರೇಷ್ಠನು ಸರ್ವರೊಳಗಿಹನೀ ಪರಬ್ರಹ್ಮ |

ಹರಣರೂಪದಿ ಚರಣರೂಪದಿ

ಕರಣರೂಪದಿ ಜೀವರೂಪದಿ

ಮೆರೆಯುವಂತಿಹ ಶುದ್ಧನಿರುಪಾಧಿಕ ಪರಬ್ರಹ್ಮ || ೭೯೪ ||


ಶರಣಾಗತವತ್ಸಲನೆ ಹರಿ

ಶರಣು ಬಂದಿಹರಿಂಗೆ ಮಾತೆಯು

ಪರಮಮಂಗಲಧಾಮನಾತ್ಮನು ದೇವ ಶ್ರೀಕೃಷ್ಣ |

ಗುರುವು ಬ್ರಹ್ಮನು ದೇವನೀಶ್ವರ

ನಿರತಿಶಯ ಪರಮಾತ್ಮತತ್ತ್ವವು

ಚರಮಗತಿ ಮುಕುತಿಯು ತುರೀಯವು ಸರ್ವಸಾಕ್ಷಿ ಶಿವ || ೭೯೫ ||


ರಕ್ತವರ್ಣವಿಧಾತಾ ವೈ ರಜೋಗುಣಪ್ರಕಾಶಕಃ |

ಶುಕ್ಲವರ್ಣಮಯಶ್ಚೈವ ಸತ್ತ್ವರೂಪೀ ಸ್ಥಿತೀಶ್ವರಃ ||೧೨೨|| (೮೦೦)


ರಕ್ತವರ್ಣವಿಧಾತೃ ಕೃಷ್ಣನೆ

ರಕ್ತದಂತಹ ಕೆಂಪುಮೈಯವ

ಶಕ್ತ ಸೃಷ್ಟಿಗೆ ಚತುರ್ಮುಖನೆ ವಿಧಾತನೇ ಬ್ರಹ್ಮಾ |

ಮುಕ್ತಿಯನು ಭಕ್ತರಿಗೆ ನೀಡುವ

ಶಕ್ತಿಯನು ಬೇಡಿದರಿಗೀಯುವ

ಭಕ್ತಿಭುಕ್ತಿವಿರಕ್ತಿಯಿತ್ತಖಿಲರನು ರಕ್ಷಿಸುವ || ೭೯೬ ||


ರಜೋಗುಣಪ್ರಕಾಶಕನೆ ಹರಿ

ರಜೋಗುಣ ರಾಜಸವು ಸೃಷ್ಟಿಗೆ

ಪ್ರಜಾಲೋಕವ ಸೃಜಿಸಲೋಸುಗ ಧರಿಸುವನು ಕೃಷ್ಣ |

ನಿಜಸುಭಕ್ತರ ಸೃಜಿಸಿ ಕಾಯುವ

ಭಜಕ ಪ್ರಜೆಗಳ ಬಿಡದೆ ರಕ್ಷಿಪ

ಕುಜನತತಿಗೀಯುವನು ಶಿಕ್ಷಣ ನಿಖಿಲಪಿತ ಕೃಷ್ಣ || ೭೯೭ ||


ಶುಕ್ಲವರ್ಣಮಯನೆ ನಾರಾಯಣ

ಶುಕ್ಲವರ್ಣವು ಬಿಳಿಯ ಬಣ್ಣವು

ಶುಕ್ಲವರ್ಣವು ಮೈಯ ಬಣ್ಣವು ಲೋಕಪಾಲನದು |

ಶುಕ್ಲ ಸಾತ್ತ್ವಿಕ ರಕ್ತ ರಾಜಸ

ಶುಕ್ಲ ವಿಷ್ಣುವು ರಕ್ತ ಬ್ರಹ್ಮನು

ಶುಕ್ಲ ಪಾಲಕ ರಕ್ತ ಸೃಜಕನು ಸತ್ತ್ವಮಯ ಕೃಷ್ಣ || ೭೯೮ ||


ಸತ್ತ್ವರೂಪಿಯೆ ವಾಸುದೇವನೆ

ಸತ್ತ್ವ ಸತ್ತೆಯದಿರವು ಸನ್ಮಯ

ಸತ್ತ್ವವಿರದೀ ಜಗಕೆ ನೀನಿರದಿರಲು ಶ್ರೀಕೃಷ್ಣ |

ಚಿತ್ತ್ವರೂಪಿಯೆ ಜ್ಞಾನಚೇತನ

ಚಿತ್ತ್ವ ಚಿತ್ತೆಯದರಿವು ಚಿನ್ಮಯ

ಚಿತ್ತ್ವವಿರದಿಹ ಜಗವು ಬರಿ ಜಡ ಸಚ್ಚಿದಾನಂದ || ೭೯೯ ||


ಸ್ಥಿತೀಶ್ವರ ಹರಿ ವಾಸುದೇವನೆ

ಸ್ಥಿತಿಗೆ ಪತಿ ನೀ ಕೃಷ್ಣ ವಿಷ್ಣುವೆ

ಸ್ಥಿತಿಯ ಪಾಲಕ ಸೃಷ್ಟಿರಕ್ಷಕ ದೇವ ಪರಮಾತ್ಮಾ |

ಸ್ಥಿತಿಗಧಿಪ ಶ್ರೀಕೃಷ್ಣ ಸೃಷ್ಟಿಯ

ಗತಿಯು ಮತಿಯಹುದೀತ ಚಿತಿ ಸತಿ

ಸ್ಥಿತಿಗತಿಗಳೆಲ್ಲಕ್ಕು ಕಾರಣ ಕೃಷ್ಣ ಪರಬೊಮ್ಮ || ೮೦೦ ||


ಕೃಷ್ಣವರ್ಣಸ್ತಮೋರೂಪೀ ಜಗತ್ಪ್ರಲಯಕಾರಕಃ |

ಸರ್ವಲೋಕರಿರಿಕ್ಷಿಷುಸ್ಸರ್ವಕಾರಣಕಾರಣಃ ||೧೨೩|| (೮೦೫)


ಕೃಷ್ಣವರ್ಣನೆ ಕಪ್ಪು ಬಣ್ಣನೆ

ಕೃಷ್ಣ ನೀ ಕಲಿಯುಗದಿ ಕಪ್ಪಗೆ

ಕೃಷ್ಣ ತಮಸಿನ ದ್ಯೋತಕವ ತೋರುವನು ಯುಗಮಹಿಮೆ |

ಕೃಷ್ಣ ನೀಲದ ಮೇಘಶ್ಯಾಮನೆ

ಕೃಷ್ಣ ನೀಲೋತ್ಪಲದ ಬಣ್ಣನೆ

ಕೃಷ್ಣ ಕಾಡಿಗೆಬಣ್ಣ ಗುಪ್ತ ರಹಸ್ಯ ಸೂಚಕವು || ೮೦೧ ||


ತಮೋರೂಪಿಯೆ ವಾಸುದೇವನೆ

ತಮೋರೂಪದಿ ತೋರಿಕೊಂಬನೆ

ತಮೋರೂಪವು ಕಲಿಯುಗದಧರ್ಮದ ಸುಸೂಚಕವು |

ತಮವು ಕಪ್ಪನೆಯಂಧಕಾರವು

ತಮವು ತಿಮಿರವವಿದ್ಯೆರೂಪವು

ತಮದಿ ಕರ್ರಗೆ ಕೃಷ್ಣನಿಹ ಸರ್ವರಲು ಚೇತನವು || ೮೦೨ ||


ಜಗತ್ಪ್ರಲಯಕಾರಕನೆ ಹರಿ

ಜಗವ ಲಯಗೈಯುವ ಶಿವಾತ್ಮಕ

ಬಗೆ ಬಗೆಲಿ ತೋರುವನನಂತನೆ ವಿಷ್ಣು ಶ್ರೀಕೃಷ್ಣ |

ಸೊಗವ ತೋರುವ ಮಾಯೆಬಲೆಯಲಿ

ಹಗಲಿರುಳು ಬೀಸುವನು ಜಾಲವ

ನಗ ನಾಣ್ಯ ಮಗ ಪತ್ನಿ ಮಣ್ಣಿನ ಮೋಹ ಬೆರೆಸುತಲಿ || ೮೦೩ ||


ಸರ್ವಲೋಕರಿರಿಕ್ಷಿಷುವೆ ಹರಿ

ಸರ್ವ ಸೃಷ್ಟಿಯ ಕಾವ ಬಯಕೆಯ

ಸರ್ವಪಾಲಕ ಸ್ಥಿತಿಪ್ರದಾಯಕ ಕೃಷ್ಣ ನಾರಯಣ |

ಸರ್ವ ಚೇತನ ಜಡದ ಪಾಲಕ

ಸರ್ವ ಭೂತದ ಸುಸ್ಥಿತಿಗೆ ಹಿತ

ಸರ್ವಜೀವರು ಮುಕ್ತರೆಂಬುದ ತೋರ್ವ ಭಕ್ತರಿಗೆ || ೮೦೪ ||


ಸರ್ವಕಾರಣಕಾರಣನೆ ಹರಿ

ಸರ್ವಕಾರಣಗಳಿಗು ಕಾರಣ

ಸರ್ವಕಾರಣಗಳಿಗು ತಾನೇಕೈಕ ಕಾರಣನು |

ಸರ್ವರಿಚ್ಛೆಗೆ ಕಾರಣನು ಹರಿ

ಸರ್ವಜ್ಞಾನದ ಮೂಲ ಕೃಷ್ಣನು

ಸರ್ವಕ್ರಿಯೆಗಳ ಕಾರಣನು ಪರಮಾತ್ಮ ಪರಬೊಮ್ಮ || ೮೦೫ ||


ಮುಕ್ತಿರ್ಜ್ಯೋತಿರ್ನಿರೀಹಞ್ಚ  ಮಹಾಪುರುಷಲಕ್ಷಣಃ |

ಸತ್ತಾಮಾತ್ರೋ ನಿರ್ವಿಕಾರೋ ನಿರ್ವಿಶೇಷೋ ನಿರೀಶ್ವರಃ ||೧೨೪|| (೮೧೩)


ಮುಕ್ತಿ ನೀ ಶ್ರೀಕೃಷ್ಣ ನಿತ್ಯನೆ

ಮುಕ್ತಿರೂಪನೆ ಮೋಕ್ಷರೂಪನೆ

ಶಕ್ತಿ ನೀ ಜೀ-ವರೊಳ-ಹೊರಗಿಹ ಹರಿಯೆ ಬ್ರಹ್ಮಾತ್ಮ |

ಮುಕ್ತಿ ಬಿಡುಗಡೆ ಭವದ ಮೋಹದ

ಮುಕ್ತಿ ಬಿಡುಗಡೆ ಜನನ ಮರಣದ

ಭಕ್ತಿಜ್ಞಾನವಿರಕ್ತಿಯೊದಗಿಸಿ ಮುಕ್ತಿ ತೋರೆಮಗೆ || ೮೦೬ ||


ಜ್ಯೋತಿ ಶ್ರೀಹರಿ ವಾಸುದೇವನೆ

ಜ್ಯೋತಿ ಬೆಳಕದು ಜ್ಞಾನದ ಪ್ರಭೆ

ಜ್ಯೋತಿ ಚಿತ್ ಕೃಷ್ಣನೇ ನೀ ಜಗಕೆಲ್ಲ ನಾರಯಣ |

ನೀತಿಜ್ಯೋತಿಯೆ ಭಕ್ತಿಜ್ಯೋತಿಯೆ

ಜ್ಯೋತಿ ವೈರಾಗ್ಯದ ಸದಾತ್ಮದ

ಖ್ಯಾತಿ ಪರಮಜ್ಯೋತಿ ನೀ ಹರಿ ಸಚ್ಚಿದಾನಂದ || ೮೦೭ ||


ನಿರೀಹನೆ ನೀ ಕೃಷ್ಣದೇವನೆ

ಹರಿಯೆ ನೀನೀಹಾವಿರಕ್ತನೆ

ಬರಿಯ ಕಾಮನೆಯಿರದ ಸತ್ಯಸಂಕಲ್ಪ ಲೋಕಹಿತ |

ಕರಿಯ ಕಾಯ್ದನೆ ಕಾಮಜನಕನೆ

ಸುರಿವ ತಾನನುಗ್ರಹವ ಭಕ್ತಗೆ

ಜರೆಯದಿರು ಕಷ್ಟದಲಿ ದೇವನ ನಿನ್ನೊಳಗಿನಾತ್ಮಾ || ೮೦೮ ||


ಮಹಾಪುರುಷಲಕ್ಷಣನೆ ಹರಿ

ಮಹಿಗೆ ಪತಿ ಮಹಿಮಾತ್ಮ ಬೊಮ್ಮನೆ

ಮಹಾತ್ಮನೆ ಪುರುಷೋತ್ತಮನೆ ಶ್ರೀಕೃಷ್ಣ ಪರಮಾತ್ಮಾ |

ಸಹಾಯನು ನಿಜಭಕ್ತರಿಗೆ ತಾ

ಮಹಾತ್ಮರ ಲಕ್ಷಣಗಳುಳ್ಳವ

ಮಹಾಜ್ಞಾನಿಯೆ ಬ್ರಹ್ಮನಿಷ್ಠನೆ ವಾಸುದೇವ ಹರೇ || ೮೦೯ ||


ಸತ್ತಾಮಾತ್ರನೆ ಕೇವಲನೆ ಸತ್

ಚಿತ್ತದೊಲ್ಲಭ ಬುದ್ಧಿಯಧಿಪತಿ

ಕತ್ತ ಕಾಯುವ ಮತ್ತ ರಕ್ಕಸನಾಶ ಶ್ರೀಕೃಷ್ಣ |

ಮಿಥ್ಯಜಗದಲಿನಿರವು ಮಾತ್ರವು

ಸತ್ಯ ಬ್ರಹ್ಮಾತ್ಮವು ನಿರಂತರ

ಸತ್ಯಮಿಥ್ಯದ ಜಾಲ ಬೇಧಿಸಿ ಶುದ್ಥಜ್ಞಾನ ಕೊಡು || ೮೧೦ ||


ವಾಸುದೇವನೆ ನಿರ್ವಿಕಾರನೆ

ಸೂಸಿ ಭಜಿಪೆನು ಶರಣು ಬಂದಿಹೆ

ವಾಸವಾಗಿಹೆ ಕಣಕಣಗಳಲು ಕೃಷ್ಣ ಪರಮಾತ್ಮ |

ಶೇಷ ಹಾಸಿಗೆ ಶ್ರೀಶ ನೀನಿಹೆ

ಪಾಶುಪತಧರಸಖನೆಯಜಪಿತ

ವೇಷನಂತವ ಧರಿಸಿದರುವವಿಕಾರಿ ಕರುಣಾಳು || ೮೧೧ ||


ಕೃಷ್ಣದೇವನೆ ನಿರ್ವಿಶೇಷನೆ

ಕೃಷ್ಣ ನೀ ವೈಶಿಷ್ಟ್ಯರಹಿತನೆ

ಕೃಷ್ಣ ಮೂಲದಿ ಪರಬ್ರಹ್ಮವೆ ವಿಶೇಷಾತೀತ |

ಕೃಷ್ಣ ನಿರ್ಗುಣ ನಿರಾಕಾರನೆ

ಕೃಷ್ಣ ಪರಮಾರ್ಥದಲಿ ಬೊಮ್ಮನೆ

ಕೃಷ್ಣ ಸರ್ವಾಂತರನೆ ಸಕಲರೊಳಾತ್ಮ ಚಿನ್ಮಾತ್ರ || ೮೧೨ ||


ನಿರೀಶ್ವರ ಹರಿ ವಾಸುದೇವನೆ

ಹರಿಯೆ ನಿನಗಿಲ್ಲಧಿಪ ಜಗದೊಳು

ಹರಿಯೆ ಹರನಜಶಕ್ತಿಸೃಷ್ಟಿಗಳೀಶ್ವರೇಶ್ವರನೆ |

ಬರಿಯ ತೋರಿಕೆಯನ್ನು ನಂಬದೆ

ಹರಿಯ ನಿತ್ಯವು ಧ್ಯಾನಿಸುತ ನರ

ಹರಿಯ ಕೃಪೆಯಿಂ ಶುದ್ಧ ಬ್ರಹ್ಮಾತ್ಮತ್ವವರಿ ಮನುಜ || ೮೧೩ ||


ಶೇಷಶ್ಚಾಧ್ಯಾತ್ಮದೀಪಶ್ಚ ವಿಶ್ವಚೇಷ್ಟಶ್ಚತುರ್ವಿಧಃ |

ಭೃತ್ಯವಿತ್ರಾಸಹಾರೀ ಚ ಮಹೀಯಾಂಕ್ಷೇಮಧಾಮಪಃ ||೧೨೫|| (೮೨೦)


ಶೇಷ ನೀ ಪ್ರಲಯಾಂತ್ಯಶೇಷನೆ

ಶೇಷತಲ್ಪನೆ ಶೇಷರೂಪನೆ

ಶೇಷ ಶೇಷಿಯು ನೀನೆ ನಾರಾಯಣನೆ ಶ್ರೀಕೃಷ್ಣ |

ನಾಶರಹಿತನೆ ಪಾಶಮೋಚಕ

ವೇಷಧರನವತಾರಿ ನಾನಾ

ತೋಷಮೂಲನೆ ಕೇಶವನೆ ಸರ್ವೇಶ ಶ್ರೀಕೃಷ್ಣ || ೮೧೪ ||


ಅಧ್ಯಾತ್ಮದೀಪ ವಾಸುದೇವನೆ

ಸದ್ಯ ಭಕ್ತಿ ವಿಮುಕ್ತಿ ದಾತನೆ

ವಿದ್ಯೆ ನೀಡುತವಿದ್ಯೆ ಕಳೆವನೆ ಪದ್ಮನಾಭ ಹರೇ |

ಅಧ್ಯಾತ್ಮವಿದ್ಯೆಗೆ ಮಾರ್ಗದರ್ಶಕ-

-ನಧ್ಯಾತ್ಮರೂಪೀ ಪರಂಜ್ಯೋತಿಯೆ

ಖದ್ಯೋತ ಜೀವದ ಭಾವ ಕಳೆ ಬ್ರಹ್ಮಾತ್ಮಭಾವಪ್ರದ || ೮೧೫ ||


ವಿಶ್ವಚೇಷ್ಟನೆ ವಿಶ್ವಚೇತನ

ವಿಶ್ವದಲಿ ಕರ್ಮಗಳ ಚೋದಕ

ವಿಶ್ವಕರ್ಮನೆ ವಿಶ್ವಶಕ್ತಿಯೆ ಸರ್ವಚೇಷ್ಟಿತನೆ |

ವಿಶ್ವಕಾರಣ ವಿಶ್ವಮೂರುತಿ

ವಿಶ್ವಪಾಲಕ ವಿಶ್ವಕೀರುತಿ

ವಿಶ್ವಸಂಹಾರಕನೆ ಪರಮಾತ್ಮಾತ್ಮ ಶ್ರೀಕೃಷ್ಣ || ೮೧೬ ||


ಚತುರ್ವಿಧ ಹರಿ ಕೃಷ್ಣನಚ್ಯುತ

ಚತುರ್ಮೂರ್ತಿಯು ಚತುರ್ವ್ಯೂಹನು

ಚತುರಾತ್ಮಾನಿರುದ್ಧನೆ ಜಾಗ್ರತಿನ ಪಾಲಕನು |

ಚತುರ್ವಿಧ ಪ್ರದ್ಯುಮ್ನ ಸ್ವಪ್ನದಿ

ಪತಿಯು ಸಂಕರ್ಷಣನು ಸುಪ್ತಿಲಿ

ಗತಿ ತುರೀಯದಿ ವಾಸುದೇವ ಚತುರ್ವಿಧದಿ ಕಾವ || ೮೧೭ ||


ಭೃತ್ಯವಿತ್ರಾ-ಸಹಾರಿಯೆ ಹರಿ

ಭೃತ್ಯರಾಯಾಸವನು ಕಳೆವನೆ

ಭೃತ್ಯರ ತ್ರಾಸವನು ಕಳೆಯುತ ಸಂತಸವನೀವೆ |

ಭೃತ್ಯ-ಸ್ವಾಮಿಯ ಭೇದ ತೋರದೆ

ಭೃತ್ಯನೊಳು ತನ್ನನ್ನೆ ಕಾಣುತ

ಭೃತ್ಯಭೃತ್ಯನ ತೆರದಿ ವರ್ತಿಪ ದೇವ ಶ್ರೀಕೃಷ್ಣ || ೮೧೮ ||


ಮಹೀಯಾನ್ ಶ್ರೀಕೃಷ್ಣದೇವನೆ

ಮಹೀಯನು ನೀ ಮಹಾಮಹಿಮನು

ಮಹಿಮೆ ನಿನ್ನದು ಮಹಾನ್ ಸರ್ವೇಶ್ವರನೆ ಪರಬೊಮ್ಮ |

ಮಹತಿ ದೊಡ್ಡದು ಸರ್ವಸೃಷ್ಟಿಲಿ

ಮಹಿಮ ಸರ್ವಾಧಾರ ಕೇಶವ

ವಿಹಿತಧರ್ಮಿಯ ಬಿಡದೆ ಕಾವ ಪರಾತ್ಪರನೆ ಕೃಷ್ಣ || ೮೧೯ ||


ಕ್ಷೇಮಧಾಮಪ ವಾಸುದೇವನೆ

ಕ್ಷೇಮಧಾಮದ ಪತಿ ವಿಕುಂಠನೆ

ನೇಮಿಗಳ ಕ್ಷೇಮವನು ಕಾಯುವ ದೇವ ಶ್ರೀಕೃಷ್ಣ |

ಕಾಮಪಿತ ವೈಕುಂಠನಾಥನೆ

ಹೇಮಭೂಷಿತ ಮೋಕ್ಷಧಾಮನೆ

ನಾಮಸ್ಮರಣೆಗೆ ಪಾಪ ತೊಳೆದೊಲಿಯುವನು ಪರಮಾತ್ಮ || ೮೨೦ ||


ಅಧ್ಯಕ್ಷೋऽವ್ಯಕ್ತಬನ್ಧುಶ್ಚ ಧ್ಯಾನಧಿಷ್ಣ್ಯಸ್ವರೂಪವಾನ್|

ಅಪ್ರತ್ಯಕ್ಷಶ್ಚ ಪ್ರತ್ಯಕ್ಷಶ್ಚಾಲೌಕಿಕಸ್ವರೂಪಧೃತ್ ||೧೨೬|| (೮೨೬)


‍‌ಅಧ್ಯ‍ಕ್ಷನೆ ಸಕಲಸೃಷ್ಟಿಗೆ

ಸದ್ಯದಲೆ ಮುಕ್ತಿದನೆ ಕೃಷ್ಣನೆ

ಮಧ್ಯಸ್ಥನೆ ಮೂರು ಮೂರ್ತಿಗಳಲ್ಲಿ ಕೇಶವನೆ |

ಸಿದ್ಧ್ಯಸಿದ್ಧಿಗಳಲ್ಲಿ ನೀ ಸಮ

ಪದ್ಯಗದ್ಯಗಳಲ್ಲಿ ಸ್ತುತ್ಯನೆ

ವೇದ್ಯವೇದನವೇತೃ ತ್ರಿಪುಟಿಯ ಮೀರಿಹನೆ ಬೊಮ್ಮ || ೮೨೧ ||


ಅವ್ಯಕ್ತಬಂಧು ವಾಸುದೇವನೆ

ಸುವ್ಯಕ್ತನಾಗದಲೆ ಹಿತದನೆ

ನವ್ಯ ಪ್ರಾಚೀನಗಳ ಮೂಲನೆ ಲೋಕಬಂಧು ಹರಿ |

ಸವ್ಯ ನೀನಪಸವ್ಯ ಕೃಷ್ಣನೆ

ಕಾವ್ಯ ನೀ ಕವಿ ಶ್ರೋತೃ ಪ್ರೇಕ್ಷಕ

ಭವ್ಯಭಾವ್ಯನೆ ಭೂತಪ್ರಸ್ತುತ ತ್ರಿಕಾಲಾತೀತ || ೮೨೨ ||


ಧ್ಯಾನಧಿಷ್ಣ್ಯಸ್ವರೂಪವಾನ್ ಹರಿ

ಧ್ಯಾನಸ್ಥಾನಿಯೆ ರುಕ್ಮಿಣೀಶನೆ

ಧ್ಯಾನಗಮ್ಯನೆ ಧ್ಯಾನಶಕ್ತಿಯೆ ಧ್ಯೇಯ ಶ್ರೀಹರಿಯೆ |

ಧ್ಯಾನಕೊಲಿವನೆ ಯೋಗಿಹೃದಯಗ

ಮಾನ ಕಾವನೆ ಸಾನುರಾಗನೆ

ಧೇನುಪಾಲಕ ಮನಸಿಜನ ಪಿತ ದೇವ ಪರಬೊಮ್ಮ || ೮೨೩ ||


ಅಪ್ರತ್ಯಕ್ಷನೆ ವಾಸುದೇವನೆ

ನೀ ಪ್ರತ್ಯಕ್ಷದಿ ತೋರದಿರುತಿಹೆ

ವಿಪ್ರಪೂಜ್ಯನೆ ಸುಪ್ರಕಾಶನೆ ರುಕ್ಮಿಣೀಪತಿಯೆ |

ಅಪ್ರಕಾಶನು ಚಕ್ಷ್ವಾದಿಗಿವ

ಸುಪ್ರಕಾಶನು ಭಕ್ತಿಜ್ಞಾನಕೆ

ಸುಪ್ರಸಿದ್ಧನು ಲೋಕದೊಳ್ ತಾನವ್ಯಕ್ತ ಕೃಷ್ಣ || ೮೨೪ ||


ಪ್ರತ್ಯಕ್ಷ ಹರಿ ವಾಸುದೇವನೆ

ಪ್ರತ್ಯಕ್ಷನೀ ಸೃಷ್ಟಿರೂಪದಿ

ಪ್ರತ್ಯಯನು ಸುಜ್ಞಾನಭಕ್ತಿವಿರಕ್ತಿಗಳಿಗೀತ |

ಅತ್ಯುದಾರನು ಸರ್ವಹಿತಕರ

ನೀತ್ಯುಪದೇಶಕನು ಲೋಕಕೆ

ಸತ್ಯಸಂಕಲ್ಪನು ಪರಾತ್ಪರ ಭಾಸ್ಕರನೆ ಕೃಷ್ಣ || ೮೨೫ ||


ಅಲೌಕಿಕಸ್ವರೂಪಧೃತ್ ಹರಿ

-ಯಲೌಕಿಕ ಲೋಕಾತೀತ ತತ್ತ್ವವು

ಕುಲಾದಿಗಳನು ಮೀರಿರುವ ಪರಮಾರ್ಥ ಶ್ರೀಕೃಷ್ಣ |

ಚಲಾಚಲಗಳ ಮೂಲಕಾರಣ

ಫಲಾಫಲಗಳ ದಾತೃ ಸತ್ಯನು

ಹಲಾಯುಧನನುಜನು ಪರಾತ್ಪರ ಹೇ ಪರಬ್ರಹ್ಮ || ೮೨೬ ||


ಶಙ್ಖಚಕ್ರಗದಾಪದ್ಮಶ್ರಿಯಾಜುಷ್ಟಚತುರ್ಭುಜಃ |

ವಿಶ್ವಕರ್ತಾ ಜಗದ್ಭರ್ತಾ ಲೋಕಹರ್ತಾ ತ್ರಿಮೂರ್ತಿಪಃ ||೧೨೭|| (೮೩೧)


ಶಂಖಚಕ್ರಗದಾಪದ್ಮ

ಶ್ರಿಯಾಜುಷ್ಟಚತುರ್ಭುಜ ಹರಿ

ಭಯಾಪಹ ಪಾಂ-ಚಜನ್ಯವ ಸುದರ್ಶನವ ಪಿಡಿದ |

ಜಯ ಕೌಮೋ-ದಕಿಯ ಪಿಡಿದಗೆ

ಜಯತು ಪದ್ಮಕ-ರನಿಗೆ ಶ್ರೀಶಗೆ

ಹಯವದನ ನಾಲ್ದೋಳ ವಿಷ್ಣು ವಿಶಿಷ್ಟ ಕೃಷ್ಣನಿಗೆ || ೮೨೭ ||


ವಿಶ್ವಕರ್ತಾ ಸೃಷ್ಟಿಕರ್ತನೆ

ವಿಶ್ವವನು ಸೃಜಿಸಿರುವ ದೇವನೆ

ವಿಶ್ವಕೆಲ್ಲಕು ಮೂಲ ಕಾರಣ ಕೃಷ್ಣ ಪರಬೊಮ್ಮ |

ವಿಶ್ವಕ್ಕೆ ತಾ ಮೂಲವಸ್ತುವೆ

ವಿಶ್ವನಿರ್ಮಾತೃವೆ ನಿಮಿತ್ತನೆ

ವಿಶ್ವರೂಪಿಲಿ ತೋರ್ವ ಪರಬೊಮ್ಮನೆ ಪರಾತ್ಪರನೆ || ೮೨೮ ||


ಜಗದ್ಭರ್ತಾ ಜಗವ ಭರಿಸಿಹ

ಜಗವ ಭರ್ತೃವೆ ಪತಿಯೆ ಕೃಷ್ಣನೆ

ಜಗಕೆ ಮೂಲಾಧಾರವಸ್ತುವೆ ಜಗವೆ ಶ್ರೀಕೃಷ್ಣ |

ಬಗೆಬಗೆಯ ರೂಪಿಂದ ತೋರ್ವನೆ-

-ಯಗಣಿತದಿ ಮಹಿಮಾನ್ವಿತನೆ ಹರಿ

ಸೊಗವನೀಯುವ ಜಗಕೆ ಶಕ್ತಿಯೆ ದೇವ ಪರಬೊಮ್ಮ || ೮೨೯ ||


ಲೋಕಹರ್ತಾ ರುದ್ರ ಕೃಷ್ಣನೆ

ಲೋಕಪ್ರಳಯದ ಮೂಲಕಾರಣ

ನಾಕಸಹಿತದಿ ಲೋಕವೆಲ್ಲವ ನುಂಗಿ ನೀರ್ಗುಡಿವ |

ಬೇಕು ನಿನ್ನಯ ಕರುಣ ಶಂ-ಕರ

ಸಾಕು ನಿನ್ನಯ ಕೋಪ ತಾಪವು

ನಾಕು ಜನರೊಳು ಬೇಕಿವನೆನಿಪ ಗತಿಯ ನೀನೀಡು || ೮೩೦ ||


ತ್ರಿಮೂರ್ತಿಪ ಹರಿ ವಾಸುದೇವನೆ

ಸುಮೂರ್ತಿಯು ಸುಂದರನು ಸೃಷ್ಟಿಯ

ಸಮೂಹದ ಪತಿ ಬ್ರಹ್ಮಹರಿಹರರಂತರಾತ್ಮ ವಿಭೋ |

ಸುಮವನೀಯುವೆ ಭಕ್ತಿರೂಪಿನ

ಸಮನು ಯಾರಿಹ ಕೃಷ್ಣ ನಿನಗಾ

ಯಮನು ನಮಿಪನು ಕಾಲ ನಿನ್ನೊಳಗಿಹುದು ಕಾಲೇಶ || ೮೩೧ ||


ದೇವಕೀಗರ್ಭಗಶ್ಚೈವ ವರದೋ ವಸುಧಾಧಿಪಃ |

ಪೃಶ್ನಿಗರ್ಭೋऽಸುರದ್ವಿಚ್ಚ ಪ್ರಾಕೃತಶಿಶುರೂಪಧೃತ್ ||೧೨೮|| (೮೩೭)


ದೇವಕೀಗರ್ಭಗನೆ ಕೃಷ್ಣನೆ

ದೇವಕೀವಸುದೇವಪುತ್ರನೆ

ದೇವಕಿಯ ಗರ್ಭವನು ಪಾವನಗೊಳಿಸಿದಂಥವನೆ |

ದೇವಕಾರ್ಯಕೆ ದುಷ್ಟಶಿಕ್ಷೆಗೆ

ದೇವಹೂತಿಗೆ ಕರ್ದಮರ ತಪ

ಭಾವಭಕುತಿಗೆ ತಾನೊಲಿದು ಮಗುವಾದ ಮರುಜನಿಯೊಳ್ || ೮೩೨ ||


ವರದ ಕೃಷ್ಣನೆ ವರವನೀವನೆ

ಪರಮ ಭಕುತರಿಗೊಲಿದು ಬರುವನೆ

ಚರಮಗತಿದನೆ ಭಕ್ತಿಭುಕ್ತಿವಿಮುಕ್ತಿವರದಾತ |

ಹರನ ಸಖ ತಾನಮರವಂದಿತ

ಕರಣಪತಿ ಗುರು ಸಕಲಲೋಕಕೆ

ಕರುಣೆಯಿಂ ಕಾಯಯ್ಯ ಸುಜನರ ನಿನ್ನ ಭಕುತರನು || ೮೩೩ ||


ವಸುಧಾಧಿಪ ಕೃಷ್ಣ ಭೂಪತಿ

ವಸುವ ಸಂಪದ ಧರಿಸಿ ಭೂಮಿಯು

ವಸುಧೆಯೆನಿಸಿತು ವಸುಧೆಗಧಿಪತಿ ವಾಸುದೇವ ಹರಿ |

ವಸುಧೆ ಭೂದೇವಿಯು ಹರಿಯ ಸತಿ

ಹಸುವ ಪೃಥ್ವಿಯ ಕರಣಗಳ ಪತಿ

ಬಿಸಜನಾಭನು ಹೃಷೀಕೇಶನು ಭೂಪ ಶ್ರೀಪ ವಿಭು || ೮೩೪ ||


ಪೃಶ್ನಿಗರ್ಭನೆ ಸ್ವಾಯಂಭುವದಿ

ಪೃಶ್ನಿ-ಸುತಪರ ಸುತನೆ ದೇವನೆ

ಪೃಶ್ನಿಯದಿತಿಯ ಜನ್ಮದಲಿ ವಾಮನನ ಹಡೆದಿಹಳು |

ಪೃಶ್ನಿ ದೇವಕಿಯಾಗಿ ಕೃಷ್ಣನ

ಪೃಶ್ನಿ ವೇದಾನ್ನಾಪಮೃತವನು

ಪೃಶ್ನಿಗರ್ಭನು ಧರಿಸಿಹನು ತಾ ಕೃಷ್ಣ ನಾರಯಣ || ೮೩೫ ||


ಅಸುರದ್ವಿಟ್ ಕೃಷ್ಣದೇವನೆ-

-ಯಸುರಗುಣವನು ದ್ವೇಷಿಸುವ ಹರಿ-

-ಯಸುವ ಹೀರುವ ದುಷ್ಟರಿಗೆ ಯಮ ತಾನೆ ಶ್ರೀಕೃಷ್ಣ |

ಅಸಮವೀರನೆ ವಾಸುದೇವನೆ

ಮೊಸರ ಕದ್ದನೆ ವಿಷವ ಕುಡಿದನೆ

ಹಸುವ ಕಾಯ್ದನೆ ದುಷ್ಟಶಿಕ್ಷಕ ಶಿಷ್ಟರಕ್ಷಕನೆ || ೮೩೬ ||


ಪ್ರಾಕೃತಶಿಶುರೂಪಧೃತ್ ಹರಿ

ಪ್ರಾಕೃತದ ನರಶಿಶುವಿನಂತಹ

ಪ್ರಕೃತದಲಿ ಪಾಂ-ಚಭೌತಿಕರೂ-ಪವನು ಧರಿಸಿಹನೆ |

ಆಕೃತಿಯ ತಳೆದಿಹ ನಿರಾಕೃತಿ

ಪ್ರಾಕೃತದಿ ತೋರಿರುವಪ್ರಾಕೃತ

ಸುಕೃತಿಗಳ ಪರಭಕ್ತಿಗೊಲಿಯುವ ಕೃಷ್ಣ ಪರಬೊಮ್ಮ || ೮೩೭ ||


ವಿಶ್ವೇಶ್ವರೋऽನನ್ತರೂಪೋ ನನ್ದಾತ್ಮಜಃ ಪ್ರತಾಪವಾನ್ |

ಆಢ್ಯೋऽಗ್ನಿಗರ್ಭರೂಪಶ್ಚೇ ನ್ದುವದನೇಶ್ವರೇಶ್ವರಃ ||೧೨೯|| (೮೪೫)


ವಿಶ್ವೇಶ್ವರನೆ ವಾಸುದೇವನೆ

ವಿಶ್ವದಧಿಪತಿ ಸೃಷ್ಟಿಗೀಶ್ವರ

ಶಾಶ್ವತನು ಪರತತ್ತ್ವ ಸರ್ವಾತ್ಮಕನು ಪರಬೊಮ್ಮ |

ವಿಶ್ವ ನೀನೇ ವಿಶ್ವ ನಿನ್ನದೆ

ವಿಶ್ವಮೂಲನೆ ವಿಶ್ವಕಾರಣ

ವಿಶ್ವರೂಪನೆ ವಿಶ್ವನಾಥನೆ ಕೃಷ್ಣ ಶ್ರೀಕೃಷ್ಣ || ೮೩೮ ||


ಅನಂತರೂಪ ವಾಸುದೇವನೆ

ವಿನಂತಿಪೆ ಕರುಣಾಳು ರಕ್ಷಿಸು-

-ತನಂತತೆಯನುಭವವ ಕೊಡಿಸೆಮಗೀಶ್ವರಾತ್ಮ ಹರೇ |

ಅನಂತವದಂತರಹಿತನು ಹರಿ-

-ಯನಂತರ ನೀನಂತರಿಲ್ಲದ

ಸ್ವನಂತನಾದ್ಯಮರನಜರನು ಕೃಷ್ಣ ಪರಬೊಮ್ಮ || ೮೩೯ ||


ನಂದಾತ್ಮಜನೆ ದೇವ ಕೃಷ್ಣನೆ

ನಂದಗೋಪನ ಸಾಕುಮಗ ಹರಿ

ನಂದದಾನಂದವನು ಕೊಡಿಸೆಮಗೀಶ್ವರೇಶ್ವರನೆ |

ಮಂದಹಸಿತನೆ ಸುಂದರಾಂಗನೆ

ಚಂದ್ರವದನನೆಯಿಂದಿರೇಶನೆ

ಕಂದ ದೇವಕಿಯಾತ್ಮ ಸಕಲರ ಸಚ್ಚಿದಾನಂದ || ೮೪೦ ||


ಪ್ರತಾಪವಾನ್ ವಾಸುದೇವನೆ

ಪ್ರತಾಪಶೀಲ ಶತ್ರುಗಳಿಗಿವ

ಪ್ರಕೃಷ್ಟದ ತಾಪದಿಂ ಕೂಡಿಹ ದೇವ ಶ್ರೀಕೃಷ್ಣ |

ಸುತಾಪನೆ ನಿಜ ಸಜ್ಜನರಿಗಿವ

ಕುತಾಪನೆ ಕುಜನರಿಗೆ ಕೃಷ್ಣನು

ಪ್ರತಾಪದಿ ದುಷ್ಟರನು ಮಡುಹಿದ ಹೇ ಪರಬ್ರಹ್ಮ || ೮೪೧ ||


ಆಢ್ಯ ಧನಿಕನು ಶ್ರೀಪ ಕೃಷ್ಣನು

ಸ್ವಾಢ್ಯ ಸಕಲ ಸುವಸ್ತುಯುಕ್ತನು

ಪಾಡ್ಯ ಬಿದಿಗೆಗತೀತ ಕೃಷ್ಣ ವಿಶಿಷ್ಟನನ್ವಿತನು |

ಜಾಡ್ಯಹರ ಹರಿ ಜ್ಞಾನದಾಯಕ-

-ನಾಢ್ಯ ಜಗದೊಳು ಸರ್ವರಾತ್ಮ ಹ-

-ರೀಡ್ಯ ಬೊಮ್ಮನು ಸರ್ವಸಾರನು ವಾಸುದೇವ ಹರಿ || ೮೪೨ ||


ಅಗ್ನಿಗರ್ಭರೂಪ ಶ್ರೀಹರಿ-

-ಯಗ್ನಿಮೂಲನು ಯಜ್ಞಪುರುಷನು

ಭಗ್ನ ಮಾಡನು ತನ್ನ ಭಕುತರ ಯೋಗಕ್ಷೇಮಗಳ |

ವಿಘ್ನ ತರುವನು ದುಷ್ಟಕಾರ್ಯಕೆ-

-ಯಗ್ನಿಯೊಳಗಿಹನಗ್ನಿಜನಕನು

ಭಗ್ನಗೈಸಿದ ಖಾಂಡವವನವ ಪಾರ್ಥಸಾರಥಿಯು || ೮೪೩ ||


ಇಂದುವದನನೆ ವಾಸುದೇವನೆ

ಚಂದ್ರನಂತಹ ಸುಂದರಾಕೃತಿ

ಚಂದ್ರಮುಖನಾಹ್ಲಾದಕಾರಕ ಸಚ್ಚಿದಾನಂದ |

ಇಂದು ಮೊರೆಹೊಕ್ಕಿರುವೆ ಕೃಷ್ಣನೆ

ಸುಂದರನೆ ಶಿವ ಸತ್ಯರೂಪನೆ

ಕಂದ ಬಾರೈ ಮುದ್ದಿಸುವೆ ಪೂಜಿಸುವೆ ಶಿಶು ಕೃಷ್ಣ || ೮೪೪ ||


ಈಶ್ವರೇಶ್ವರ ವಾಸುದೇವನೆ-

-ಈಶ್ವರರ ಪತಿ ಸರ್ವಕೀಶ್ವರ

ನಶ್ವರಕು ಶಾಶ್ವತಕು ಮಾಯೆಗು ಬ್ರಹ್ಮ ತಾ ಕೃಷ್ಣ |

ವಿಶ್ವದೀಶ್ವರ ನಾಯಕೇಶ್ವರ

ಶಾಶ್ವತಾತ್ಮನೆ ಬ್ರಹ್ಮರೂಪನೆ

ವಿಶ್ವಶಕ್ತಿಯೆ ಕಾರಣನೆ ಪರಮೇಶ್ವರೇಶ್ವರನೆ || ೮೪೫ ||


ಉತ್ತರಶ್ಚೋರ್ಧ್ವಗಶ್ಚರ್ಷಿಶ್ಚರ್ಷ್ಟಿಸ್ಸ್ಮಿತಶ್ಚ ಲೃಪ್ರಭುಃ |

ಏಕವೀರಶ್ಚೈನ್ದ್ರಿರೂಪಶ್ಚೌದನಶ್ಚೌಕ್ಷಕಪ್ರಿಯಃ ||೧೩೦|| (೮೫೫)


ಉತ್ತರನೆ ಶ್ರೀಕೃಷ್ಣ ಶ್ರೇಷ್ಠನೆ-

-ಯುತ್ತರೋತ್ತರಗತಿಯನೀವನೆ

ಸತ್ತರೂ ಸಾಯದಿಹ ಜೀವನ್ಮುಕ್ತಿದಾಯಕನೆ |

ಉತ್ತರದಿ ಧ್ರುವತಾರೆಯಂದದಿ

ಸತ್ತರೂ ತಾನಮೃತನೆಂಬುದ-

-ನುತ್ತಮಾಧಿಕಾರಿಯರಿಯುತ ಮುಕ್ತಿಯಂ ಪಡೆವ || ೮೪೬ ||


ಊರ್ಧ್ವಗನೆ ಶ್ರೀಕೃಷ್ಣ ಸಂತತ-

-ವೂರ್ಧ್ವದಿಶೆಯೊಳು ಗತಿಯಿವನಿಗಿದೆ-

-ಯೂರ್ಧ್ವಗತಿದಾಯಕನು ನಿಜಭಕ್ತರಿಗೆ ಪರಮಾತ್ಮ |

ಊರ್ಧ್ವಗತಿ ಮೋಕ್ಷದವು ಭಕ್ತರಿ-

-ಗೂರ್ಧ್ವಮಾರ್ಗವು ಶ್ರೇಯಸಾಧನ-

-ವೂರ್ಧ್ವಗನು ತಾನುದ್ಧರಿಪ ನಿಜಭಕ್ತರನು ಸತತ || ೮೪೭ ||


ಋಷಿಯೆ ನೀ ಶ್ರೀಕೃಷ್ಣ ಸರ್ವಕು

ಖುಷಿಯ ಮೂಲನೆ ವೇದಮೂಲನೆ

ಶಶಿಮುಖನೆ ಪರಮಾತ್ಮ ನಮ್ಮನು ರಕ್ಷಿಸನವರತ |

ಹಸಿವು ತೃಷೆಗಳ ಮೂಲ ತೃಪ್ತಿಯೆ

ವಿಷಮ ಸಮಗಳ ಮೀರ್ದ ತತ್ತ್ವವೆ

ವಶನು ಬ್ರಹ್ಮಜ್ಞಾನಿ ಭಕ್ತರಿಗೀವೆ ಸದ್ಗತಿಯ || ೮೪೮ ||


ಋಷ್ಟಿ ನೀ ಹರಿ ವಾಸುದೇವನೆ

ಋಷ್ಟಿ ದೀಪ್ತಿಯು ಖಡ್ಗವಹುದೈ

ಋಷ್ಟಿ ಗಮನಾಗಮನಶೀಲವತಾರ ಶ್ರೀಕೃಷ್ಣ |

ಷಷ್ಟಿ ಸಪ್ತಮಿಯೆಲ್ಲ ನೀನೇ

ವ್ಯಷ್ಟಿ ಸಮಷ್ಟಿರೂಪಿ ನೀನೇ

ಋಷ್ಟಿ ಜ್ಞಾನದೀಪ್ತಿ ದುಷ್ಟಸಂಹಾರಿ ಖಡ್ಗ ಹರಿ || ೮೪೯ ||


ಸ್ಮಿತವು ವದನದಿ ಕೃಷ್ಣ ನಿನ್ನಯ

ಸ್ಮಿತವದನ ಹರಿ ನಗುಮುಖದ ಹರಿ

ನತರಿಗೀಯುವ ಸಕಲ ವಿಭವವ ಜ್ಞಾನಭಕ್ತಿಗಳ |

ಹಿತವನೀಯುವ ಸುಖವನೀಯುವ

ಮಿತದಿ ಬದುಕುವ ಕಲೆಯನೀಯುವ

ಖತಿಗೊಳದೆ ಸ್ಥಿರಮತಿಯ ಬದುಕನು ಕೃಷ್ಣನೀಯುವನು || ೮೫೦ ||


ಲೃಪ್ರಭುವೆ ಶ್ರೀಕೃಷ್ಣದೇವನೆ

ಲೃಪ್ರಕಾಶನೆ ಸರ್ವವರ್ಣನೆ-

-ಯಪ್ರಮೇಯನಮೇಯನಾಯಕ ದೇವ ಪರಬೊಮ್ಮ |

ವಿಪ್ರಪ್ರೀಯನೆ ಭಕ್ತಪ್ರಿಯ ಹರಿ

ಕುಪ್ರಚಾರವಿರೋಧಿ ಮಾಧವ

ಸುಪ್ರೇಮಕೊಲಿವಂಥ ಸಜ್ಜನರಕ್ಷ ಪರಮಾತ್ಮ || ೮೫೧ ||


ಏಕವೀರನೆ ವಾಸುದೇವನ-

-ನೇಕವೀರರೊಳೀತ ಶ್ರೇಷ್ಠನೆ

ಕಾಕುಜನಶಿಕ್ಷಕನೆ ಸಜ್ಜನತ್ರಾಣ ಶ್ರೀಕೃಷ್ಣ |

ಸಾಕು ಸಾವಿರ ದೇವಪೂಜೆಯು

ಬೇಕು ತಾನೇಕೈಕದೇವನ-

-ನೇಕವೀರನ ಮಹಾವೀರನ ಪರಬ್ರಹ್ಮಪದ || ೮೫೨ ||


ಐಂದ್ರಿರೂಪ ಜಯಂತ ಕೃಷ್ಣನೆ-

-ಯಿಂದ್ರಪುತ್ರನುಪೇಂದ್ರ ವಿಷ್ಣುವೆ

ಚಂದ್ರರೂಪನೆ ಸುಂದರಾಕೃತಿ ಮಂದಹಸಿತ ವಿಭೋ |

ಇಂದಿರಾಪತಿ ನಂದನಂದನ

ಚಂದ್ರಶೇಖರಸಖನೆ ಕೃಷ್ಣನೆ

ಕಂದ ಬಾರೈ ಮುಕ್ತಿಯಾನಂದವನು ತೋರಯ್ಯ || ೮೫೩ ||


ಓದನವೆ ನೀನನ್ನರೂಪವು

ಪಾದ ನಂಬಿದೆಯನ್ನಬೊಮ್ಮನ

ಹೇ ದಯಾನಿಧಿಯನ್ನಮಯಕೋಶವನು ಪೋಷಿಸೆಯ |

ಮಾಧವನೆ ನೀ ಸ್ಥೂಲದೇಹವ

ಕಾದು ಧರ್ಮದಿ ನಡೆಸು ತನುಮನ

ಶೋಧಿಸೈ ಚಿತ್ತವನು ಸುಜ್ಞಾನವನು ನೀಡಯ್ಯ || ೮೫೪ ||


ಔಕ್ಷಕಪ್ರಿಯ ವೃಷಭಪ್ರೀಯನೆ

ಶಿಕ್ಷಕನೆ ದುಷ್ಟರಿಗೆ ಕೃಷ್ಣನೆ

ರಕ್ಷಕನೆ ಶಿಷ್ಟರಿಗೆ ಧರ್ಮಸ್ಥಾಪಕನೆ ದೇವ |

ಔಕ್ಷಕವು ಪುಂಗವಸಮೂಹವು

ವಕ್ಷಕೌಸ್ತುಭ ಗೋವಿಂದ ಹರಿ

ಸ್ವಕ್ಷ ಪರಬೊಮ್ಮನೆ ಪರಾತ್ಪರ ತತ್ತ್ವ ಶ್ರೀಕೃಷ್ಣ || ೮೫೫ ||


ಅಂಹಹಾರೀಯಹಃಪಾತಾ ಕಂಸಾರಾತಿಶ್ಚ ಕಕ್ಖಟಃ |

ಕಾಕುತ್ಸ್ಥಃ ಕಕುದಃ ಕಙ್ಕಃ ಕಙ್ಕಟಃ ಕಚ್ಛಪೇಶ್ವರಃ ||೧೩೧|| (೮೬೪)


ಅಂಹಹಾರಿಯೆ ವಾಸುದೇವನೆ-

-ಯಂಹ ಪಾಪವ ನಾಶಗೈವನೆ

ಸಂಹರಿಸಿ ದೌಷ್ಟ್ಯವನು ಶಿಷ್ಟತೆ ಸುಜನತೆಯ ಬೆಳೆಸು |

ಅಂಹವಮತಿ ಚ ಗಚ್ಛತೀತಿ ಚ-

-ವಂಹ ಪ್ರಾಯಶ್ಚಿತ್ತದಿಂದಲಿ-

-ಯಂಹ ನಶಿಪುದು ನಿನ್ನ ದಯೆಯಿಂ ಕೃಷ್ಣ ಶ್ರೀಕೃಷ್ಣ || ೮೫೬ ||


ಅಹಃಪಾತಾ ದೇವ ಕೃಷ್ಣನೆ-

ಯಹೋ ಹಗಲನು ಪಾತಿ ರಕ್ಷತಿ

ಬಹುಬಲದಿ ರಕ್ಷಿಪನು ಬೆಳಕನು ಲೋಕ ಬೆಳಗುವನು |

ಅಹಹ ನಿನ್ನಯ ಮಹಿಮೆಯತುಲವ-

-ದಹಹ ಹಗಲಿನ ದೇವತೆಯೆ ನೀ-

-ನಹಹ ಜ್ಞಾನಜ್ಯೋತಿ ಬೆಳಗಿಸು ಹರಿಸವಿದ್ಯೆತಮ || ೮೫೭ ||


ಕಂಸಾರಾತಿ ವಾಸುದೇವನೆ

ಕಂಸವೈರಿಯು ಕಂಸನಳಿಯನು

ಹಂಸವಾಹನಜನಕ ನಾರಾಯಣ ಪರಬ್ರಹ್ಮ |

ಶಂಸನೀಯನು ಸರ್ವರಿಂದಲಿ

ವಂಶ ನಿನ್ನಿಂದಲೆ ಸುಪಾವನ

ಕಂಸಧ್ವಂಸಿಯೆ ದುಷ್ಟಶಿಕ್ಷಕ ಕೃಷ್ಣ ದೇವಕಿಜ || ೮೫೮ ||


ಕಕ್ಖಟನೆ ಸುಪ್ರಸನ್ನನೆ ಹರಿ

ಕಕ್ಖಟನೆ ದುಷ್ಟರಿಗೆ ಕಠಿನನೆ

ಕಕ್ಖಟನೆ ಶ್ರೀಕೃಷ್ಣ ಶಿಷ್ಟರಿಗೀವೆ ಮಂಗಲವ |

ಕಕ್ಖಟನೆ ನಗುಮೊಗದ ದೇವನೆ

ಕಕ್ಖಟನೆ ಕ್ರೂರಿಗಳ್ಗೆ ಸಿಂಹನೆ

ಕಕ್ಖಟನೆ ಪರಬೊಮ್ಮ ಭವನಾಟಕವ ಹೆಣೆದವನೆ || ೮೫೯ ||


ಕಾಕುತ್ಸ್ಥ ಹರಿ ರಾಮ ಕೃಷ್ಣನೆ

ಕಕುತ್ಸ್ಥವಂಶಜನೆ ಶ್ರೀಹರಿ

ಕಾಕು ಜನರನು ಶಿಕ್ಷಿಪನೆ ಸಜ್ದನರ ರಕ್ಷಿಪನೆ |

ನಾಕು ವೇದಗಳಾದಿಮೂಲನೆ

ಪಾಕಶಾಸನವಂದ್ಯ ಕೃಷ್ಣನೆ

ನಾಕಭೂಪಾತಾಳದೊಡೆಯನೆ ಹೇ ಪರಬ್ರಹ್ಮ || ೮೬೦ ||


ಕಕುದ ಕೃಷ್ಣನೆ ವಾಸುದೇವನೆ

ಕಕುದ ಸುಖದನೆ ಸುಖದ ಮೂಲನೆ

ಕಕುದ ಸುಖದ ಪ್ರಕಾಶಕನೆ ನಾರಾಯಣನೆ ಹರಿಯೆ |

ಸಕಲಲೋಕದ ಸುಖದ ಕಾರಣ

ವಿಕಲತೆಯ ಕಳೆದಿಕ್ಕಿ ಸುಕಲವ

ಸಕಲರಿಗೆ ನೀಡುವನೆ ಕೃಷ್ಣನೆ ಸಚ್ಚಿದಾನಂದ || ೮೬೧ ||


ಕಂಕ ಕೃಷ್ಣನೆ ವಾಸುದೇವನೆ

ಬಿಂಕವಿಲ್ಲದೆ ಮೇಲೆ ಗಮಿಸುವ

ಸುಂಕ ಬೇಡದ ಸಂಕರುಷಣನ ಮೇಲೆ ಮಲಗಿರುವ |

ಶಂಕರನ ಸಖ ಭಕ್ತಕಿಂಕರ

ಕಂಕ ದೀರ್ಘದ ಪಾದವುಳ್ಳವ

ಕಂಕ ಸಾಕ್ಷಾದ್ಧರ್ಮ ಯಮ ನಿಜ ಸೃಷ್ಟಿಸ್ಥಿತಿಲಯದ || ೮೬೨ ||


ಕಂಕಟನೆ ಶ್ರೀಕೃಷ್ಣ ಕೇಶವ

ಕಂ ಕಟತಿ ದೇಹವನು ರಕ್ಷಿಪ

ಕಂಕಟನು ದೃಢಕವಚ ಜೀವರ ಜೀವರಕ್ಷಕನೆ |

ಬಿಂಕ ತೊರೆಯುತ ಭಜಿಸಿ ಕೃಷ್ಣನ

ಸಂಕಟವ ಪರಿಹರಿಪ ಭಜಕರ

ವೇಂಕಟೇಶ್ವರ ತಿರುಮಲೇಶ್ವರ ಶ್ರೀನಿವಾಸ ಹರೇ || ೮೬೩ ||


ಕಚ್ಛಪೇಶ್ವರ ಕೂರ್ಮರಾಜನೆ

ಸ್ವಚ್ಛವರ್ಣನೆ ಮಂದರೋದ್ಧರ

ಕಚ್ಛಪನೆ ತಾನಾದಿಕೂರ್ಮನೆ ಭೂಮಿ ಹೊತ್ತವನೆ |

ಅಚ್ಛ ಬಣ್ಣದ ಬಿಚ್ಚು ಮನಸಿನ

ಸ್ವಚ್ಛ ಹಸ್ತದ ಶುದ್ಧ ಕರಣದ

ಕಿಚ್ಚಿಗಾದಿಯ ಪಚ್ಚೆಗರಪತಿಯನ್ನು ಶರಣಾದೆ || ೮೬೪ ||


ಕಜ್ಜಲಾಭಃ ಕಜ್ಜಲೀ ಚ ಕಜ್ಜ್ವಲಂ ಕಞ್ಜಲೋಚನಃ |

ಕಠಮರ್ದ್ದಃ ಕಠಿಞ್ಜರಪ್ರಿಯಃ ಕಠಿನಪೃಷ್ಠಕಃ ||೧೩೨|| (೮೭೧)


ಕಜ್ಜಲಾಭನೆ ದೇವ ಕೃಷ್ಣನೆ

ಕಜ್ಜಲದ ಕಾಡಿಗೆಯ ಕಪ್ಪಿನ

ಕಜ್ಜಲದ ತೆರದಲ್ಲಿ ಹೊಳೆಯುವ ಕೃಷ್ಣಮೂರುತಿಯೆ |

ಸಜ್ಜನರ ಪೊರೆವಂಥ ದೇವನೆ

ದುರ್ಜನರ ಶಿಕ್ಷಿಸುವ ಶ್ರೀಹರಿ

ದುರ್ಜಯನೆ ರಣದೊಳಗೆ ನಿಜಭಕುತರನು ಕಾಯುವನೆ || ೮೬೫ ||


ಕಜ್ಜಲೀ ಶ್ರೀಹರಿಯೆ ಕೃಷ್ಣನೆ

ಕಜ್ಜಲಿಯು ರೋಗದ ನಿವಾರಕ

ಸಜ್ಜನರಿಗಾರೋಗ್ಯದಾಯಕ ತನ್ನ ಭಕುತರಿಗೆ |

ವಿಜ್ಜನರ ವಿದ್ವಾಂಸರಧಿಪನೆ

ಕಜ್ಜವೆಲ್ಲವ ಗೈಸಿಕೊಡುವನೆ

ದುರ್ಜನಾಂತಕ ಸತ್ಯಸಂಕಲ್ಪನೆ ಜಗನ್ನಾಥ || ೮೬೬ ||


ಕಜ್ವಲನೆ ಶ್ರೀಕೃಷ್ಣ ಮಾಧವ

ಪ್ರಜ್ವಲಿಪ ಚಕ್ಷುವಿನ ರೋಗವ

ಸಜ್ಜನಾಪ್ತನೆ ಪರಿಹರಿಸುವನು ಕಜ್ವಲಾಖ್ಯ ಹರಿ |

ಸಜ್ಜನಗೆ ಸನ್ಮಾರ್ಗದಾಯಕ

ದುರ್ಜನಗೆ ಸದ್ಧರ್ಮಬೋಧಕ

ವಿಜ್ಜನರ ತಾನಾತ್ಮನಾತ್ಮಜ್ಞಾನಿಪ್ರೀಯ ಹರಿ || ೮೬೭ ||


ಕಂಜಲೋಚನ ವಾಸುದೇವನೆ

ಕಂಜ ಜಲಜದ ತೆರದ ನೇತ್ರನೆ

ಕುಂಜದಲಿ ಸುವಿಹಾರಿ ಕಂಜಜಪಿತನೆ ಪರಬೊಮ್ಮ |

ಸಂಜೆಯಲಿ ಯಮುನಾವಿಹಾರಿಯೆ

ಕಂಜನಾಭನೆ ಕಂಜಪಾದನೆ

ಕಂಜನೇತ್ರನೆ ಪಾಲಿಸೈ ನಿಜಭಕ್ತಪರಿವಾರ || ೮೬೮ ||


ಕಠಮರ್ದ್ದನೆ ವಾಸುದೇವನೆ

ಕಠವ ಕಷ್ಟದ ಬದುಕ ಮೃದುಕರ

ಕಠಿನ ಭವಸಾಗರವ ದಾಟಿಸುವವನೆ ಶ್ರೀಕೃಷ್ಣ |

ಕಟು ಭವಾರ್ಣವ ಮರ್ದನನೆ ಹರಿ

ವಿಠಲ ಕೇಶವ ಮಾಧವಾಚ್ಯುತ

ಕಟಕಟನೆ ದುಃಖಗಳ ಭುಂಜಿಸಿ ಸುಖದ ನರಸಿಂಹ || ೮೬೯ ||


ವಾಸುದೇವನೆ ಕಠಿಂಜರಪ್ರಿಯ

ವಾಸುದೇವನೆ ತುಲಸಿಪ್ರೀಯನೆ

ವಾಸುದೇವನೆ ಶುದ್ಧಭಕ್ತಿಯ ಮಹಿಮೆ ತೋರಿದನೆ |

ವಾಸುದೇವನೆ ಬಹುಪವಿತ್ರನೆ

ವಾಸವೇಡ್ಯನೆ ತುಲಸಿಪೂಜಿತ

ಮಾಸದಲೆ ಕಡುಭಕುತಿಯಿತ್ತೆಮ್ಮನು ಸಲಹು ಕೃಷ್ಣ || ೮೭೦ ||


ಕೃಷ್ಣ ಕೂರ್ಮನೆ ಕಠಿನಪೃಷ್ಠಕ

ವಿಷ್ಣುವಿನ ಕೂರ್ಮಾವತಾರನೆ

ಕೃಷ್ಣ ಗಟ್ಟಿಯ ಚಿಪ್ಪಿರುವ ಕಚ್ಛಪನೆ ಮಂದರಧೃತ್ |

ಕೃಷ್ಣ ಕ್ಷೀರಾಬ್ಧಿಮಥನದೊಳು

ಕೃಷ್ಣ ಮಂದರವೆತ್ತಿರುವೆ ನೀ

ಕೃಷ್ಣ ಕೂರ್ಮನ ರೂಪಿನಲಿ ನಮನಗಳ ನಿನಗೀವೆ || ೮೭೧ ||


Comments

Popular posts from this blog

ಸ್ತೋತ್ರಸಂಹಿತಾ ೫.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೫ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೩ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)