ಸ್ತೋತ್ರಸಂಹಿತಾ ೪.೧ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)
4. ಶ್ರೀಭಗವತ್ತತ್ತ್ವರತ್ನಾಕರ ಭಾಗ ೨ (ಸ್ತೋತ್ರಸಂಹಿತಾ ೧)
ಪದ್ಮಾಕ್ಷಃ ಪದ್ಮನಾಭಶ್ಚ ಪದ್ಮಾಪತಿರಪಾಂಪತಿಃ।
ಪದ್ಮಪಾತ್ಪದ್ಮಹಸ್ತೋ ವೈ ಪದ್ಮನೇತ್ರೋಽಹ್ಯಯೋನಿಜಃ॥೫೬॥(೪೦೨)
ಪದ್ಮಾಕ್ಷನೆ ಪದುಮಕರಣನೆ
ಪದ್ಮ ತಾವರೆಯಂಥಯಿಂದ್ರಿಯ
ಸದ್ಮ ವೈಕುಂಠದಲಿ ನಾರಾಯಣನೆ ಶ್ರೀಕೃಷ್ಣ |
ಪದ್ಮಕೋಮಲ ಪದ್ಮವರ್ಣದ
ಪದ್ಮದಂತಿಹ ಮೂಗು ಕಿವಿಗಳು
ಪದ್ಮಲೋಚನ ರಸನ ಚರ್ಮವು ಕರ್ಮಕರಣಗಳೂ || ೩೯೫ ||
ಪದ್ಮನಾಭನೆ ಹೇ ಮುಕುಂದನೆ
ಪದ್ಮದಂತಿಹ ನಾಭಿ ಹೊಕ್ಕುಳ
ಪದ್ಮೆಯನು ಪೆತ್ತಂಥ ಶ್ರೀಪತಿ ಪದ್ಮವಲ್ಲಭನೆ |
ಪದ್ಮನಾಭಿಜ ವಿಧಿಯು ಬೊಮ್ಮನು
ಪದ್ಮನಾಭನ ಸುತನು ಧಾತೃವು
ಪದ್ಮಜನ ಪಿತ ಪದ್ಮಸ್ಥಿತೆಯರಸನೆ ಪರಾತ್ಮ ಹರಿ || ೩೯೬ ||
ಪದ್ಮಾಪತಿ ವಿಷ್ಣು ಕೃಷ್ಣನೆ
ಪದ್ಮೆ ಕಮಲೆಯ ಸಿರಿಯ ರಮಣನೆ
ಪದ್ಮನಾಭನೆ ಪದುಮನೇತ್ರನೆ ಲಕುಮಿವಲ್ಲಭನೆ |
ಸದ್ಮ ವೈಕುಂಠವು ಪರಾತ್ಮನೆ
ಛದ್ಮವೇಷದಿ ಕಾಲಕಾಲಕೆ
ಪದ್ಮೆಯರಸನೆ ವಿಷ್ಣು ನೀನವತರಿಸಿ ರಕ್ಷಿಸುವೆ || ೩೯೭ ||
ಕೇಶವನೆ ನೀನ್ ಅಪಾಂಪತಿಯಹು-
-ದಾ ಶರಧಿಯೊಳು ಪವಡಿಸಿಹೆಯೈ
ನಾಶರಹಿತನೆ ಶೇಷಶಯನನೆ ಹೇ ಜಲಾಧಿಪನೆ |
ಪಾಶವಂತನೆ ವರುಣರೂಪನೆ
ಕೋಶ ಪಂಚ ವಿದೂರ ನೀರಪ
ದೇಶಕಾಲಾತೀತ ಸರ್ವಾಧಾರ ಶ್ರೀಕೃಷ್ಣ || ೩೯೮ ||
ಹೇ ಮುಕುಂದನೆ ಪದ್ಮಪಾತ್ ಹರಿ
ಕಾಮಪಿತ ತಾವರೆಯ ಚರಣನೆ
ಕಮಲ ಕೋಮಲ ಪವಳವರ್ಣವು ಕೃಷ್ಣಪಾದವದು |
ವಿಮಲ ಚರಿತನೆ ಸುಮನಚೇಷ್ಟನೆ
ಕುಮತಿನಾಶನೆ ಸುಮತಿದಾತನೆ
ಕೋಮಲಾಂಗನೆ ಕಳೆದವಿದ್ಯೆಯ ಮುಕುತಿಯನ್ನೀಯೋ || ೩೯೯ ||
ಮಾಧವನೆ ಹೇ ಪದ್ಮಹಸ್ತನೆ
ಶ್ರೀಧವನೆ ಭೂಧವನೆ ಕೃಷ್ಣನೆ
ಹೇ ಧವಳಗಿರಿಪತಿಗೆ ಪ್ರೀಯನೆ ಕಮಲಕರ ಕೃಷ್ಣ |
ವೇಧಸನ ಪಿತ ಕಮಲ ಕೋಮಲ
ಶ್ರೀದ ಕರ ರಕ್ತೋತ್ಪಲದ ತೆರ
ನಾದಮೂರುತಿ ಭೇದ ಕಳೆ ನೀಡಾತ್ಮನಿಷ್ಠೆಯನು || ೪೦೦ ||
ಕೃಷ್ಣ ಮಾಧವ ಪದ್ಮನೇತ್ರನೆ
ಕೃಷ್ಣ ಕಮಲಾಕ್ಷನೆ ಮಹಾತ್ಮನೆ
ಕೃಷ್ಣ ಪದ್ಮದಳಾಯತಾಂಬಕ ಪದ್ಮನಯನ ಹರೇ |
ವಿಷ್ಣು ಕೋಮಲ ನೇತ್ರ ಲೋಕದಿ
ಜಿಷ್ಣು ಸುಂದರಚಕ್ಷು ಸಂತತ
ಕೃಷ್ಣ ಭಕ್ತಿಜ್ಞಾನವೈರಾಗ್ಯಗಳ ನೀಡೆಮಗೆ || ೪೦೧ ||
ಅಯೋನಿಜ ಹರಿ ಕೃಷ್ಣ ವಿಷ್ಣುವೆ
ಸುಯೋನಿಜರಾಂತರ್ಯಬಂಧುವೆ
ಕುಯೋನಿಜ ನಿಜಶತ್ರುವವತರಿಸಿರುವೆ ಸ್ವೇಚ್ಛೆಯಲಿ |
ಮಾಯೆ ನಿನ್ನಯಧೀನ ಕೃಷ್ಣನೆ
ಮಾಯೆಯನ್ನಾಶ್ರಯಿಸಿ ತೋರಿದೆ
ಮಾಯಿ ಲೋಕದಿ ಮಿಥ್ಯೆ ಸತ್ಯ ವಿವೇಕ ನೀಡೆಮಗೆ || ೪೦೨ ||
ಸಾಶನಾಧಿಪತಿಶ್ಚೈವಾನಶನಾಧಿಪತಿಶ್ಚ ಯಃ।
ಉರುಕ್ರಮೋ ವಿರಾಟ್ಪೂರ್ವಶ್ಚಾತ್ಮವಿಸ್ತಾರವಿಶ್ವಸೃತ್॥೫೭॥(೪೦೭)
ಸಾಶನಾಧಿಪತಿಯೆ ಕೃಷ್ಣನೆ
ಸಾಶನರು ಜೀವಿಗಳುವುಂಬರು
ಕೇಶವನು ಪ್ರಾಣಿಗಳ ನಾಯಕನಶನವುಂಬವರ |
ಅಶನವನ್ನವು ಜೀವ ಚಿತ್ತಕೆ-
-ಯಶನ ಜಲ ಪ್ರಾಣಕ್ಕೆ ಜೀವರ
ವಶನು ಕೃಷ್ಣನು ನೈಜ ಭಕ್ತರ ಕಪಟವಿರದವರ || ೪೦೩ ||
ಅನಶನಾಧಿಪತಿಯೆ ಕೃಷ್ಣನೆ-
-ಯನಶನರು ನಿರ್ಜೀವರುಣ್ಣರು
ಮನಸಿಜನ ಪಿತ ಕೃಷ್ಣ ಜಡರಧಿಪತಿಯು ತಾನಿಹನು |
ಮನದ ದೃಷ್ಟಿಯ ತೆರದಿ ಸೃಷ್ಟಿಯು
ಕನಸುಜಾಗ್ರತಸುಪ್ತಿ ಮೀರಿದ
ಹನುಮನಂತರ್ಯಾಮಿ ಜೀವದ ಜಡದಲೊಳಹೊರಗೆ || ೪೦೪ ||
ಉರುಕ್ರಮ ನೀ ವಾಸುದೇವನೆ-
-ಯುರುತರದ ವಿಸ್ತಾರ ಕ್ರಮಣವು
ಗುರುತರದ ಮೂರ್ಲೋಕ ಗಮನವು ಹೆಜ್ಜೆ ಮೂರರಲಿ |
ಉರುತರದಿ ಚೆನ್ನಾಗಿ ಕ್ರಮಿಸುವೆ
ಸರುವ ಲೋಕದಿ ಕ್ರಮವನರಿಯುತ
ಗರುವ ರಹಿತ ತ್ರಿವಿಕ್ರಮನೆ ವಾಮನನೆ ಶ್ರೀಕೃಷ್ಣ || ೪೦೫ ||
ವಿರಾಟ್-ಪೂರ್ವನೆ ದೇವ ಪರಬ್ರಹ್ಮನೆ
ವಿರಾಜಿಪ ಪರಮಾತ್ಮಜ್ಯೋತಿಯೆ
ವಿರಾಡ್ರೂಪನೆ ವಿರಾಣ್ಮೂಲನೆ ದೇವ ಶ್ರೀಕೃಷ್ಣ |
ವಿರಾಜನೆ ವೈಶಿಷ್ಟ್ಯಪೂರ್ಣನೆ
ವಿ-ರಾಡ್ ದೀಪ್ತಿಯೆ ಪರಮಪುರುಷನೆ
ವಿರಾಡ್ ಸೃಷ್ಟಿಗೆ ಕಾರಣನೆ ಪುರ ದೇಹದಲ್ಲಿಹನೆ || ೪೦೬ ||
ಆತ್ಮವಿಸ್ತಾರವಿಶ್ವಸೃತ್ ಹರಿ-
-ಯಾತ್ಮವನೆ ವಿಸ್ತರಿಸಿ ವಿಶ್ವವ-
-ನಾತ್ಮದಿಂ ಸೃಜಿಸಿದನು ಸಂಚರಿಸುತಿಹ ಸಂತತವು |
ಆತ್ಮನ್ "ಅತ ಸಾತತ್ಯ ಗಮನ " ವ-
-ದಾತ್ಮವಮೃತದ ವಾಹಿನಿಯು ತಾ-
-ನಾತ್ಮನಣುರೇಣವಲು ಚರಿಸುತ ಬೊಮ್ಮ ತಾ ಕೃಷ್ಣ || ೪೦೭ ||
ವಿರಾಜಾಧಿಪತಿಶ್ಚೈವ ವಸನ್ತಾಜ್ಯಶ್ಶರದ್ಧವಿಃ।
ಗ್ರೀಷ್ಮೇಧ್ಮೋ ಯಜ್ಞರೂಪಶ್ಚರ್ಷಿಸ್ಸಾಧ್ಯೋ ದೇವದುನ್ದುಭಿಃ॥೫೮॥(೪೧೫)
ವಿರಾಜಾಧಿಪತಿಯೆ ಕೃಷ್ಣನೆ
ವಿರಾಜನು ತಾ ವಿರಾಟ್ಪುರುಷನು
ವಿರಾಡ್ರೂಪನು ಪರಮಪುರುಷೋತ್ತಮನ ಸೃಷ್ಟಿಯಹೊ |
ವಿರಾಗವ ಭ-ಕ್ತಿಯನು ಜ್ಞಾನವ
ಸರಾಗದಿ ಕೊಡಿಸೆಮಗೆ ನಿತ್ಯವು
ಕುರಾಗದ್ವೇಷಗಳ ನೀಗಿಸು ಹೇ ಮಹಾವಿಷ್ಣೋ || ೪೦೮ ||
ವಸಂತಾಜ್ಯನೆ ಪರಬ್ರಹ್ಮನೆ
ವಸಂತರ್ತುವೇ ಹವ್ಯ ತುಪ್ಪವು
ವಸಂತದಿ ಯಾಗವನು ಮಾಡಿಸುತಿರುವ ಋತ್ವಿಜನೆ |
ವಸಂತಿ ಮದನೋತ್ಸವಗಳಹೊ
ವಸಂತಾಖ್ಯವು ಋತುವು ಚೈತ್ರದಿ
ವಸಂತವು ಘೃತವಾಜ್ಯ ಯಾವನಿಗಾತ ಶ್ರೀಕೃಷ್ಣ || ೪೦೯ ||
ಶರದ್ಧವಿ ಶರದ್ರುತುವು ಹವ್ಯವು
ಶರತ್ಕಾಲವದಾಶ್ವಯುಜದಲಿ
ಶರತ್ ಶೄ ಹಿಂಸೆಯದು ಕ್ರಿಮಿಕೀಟಾದಿ ಬಾಧೆಯದು |
ಶರತ್ಕಾಲವು ಕಾರ್ತಿಕದಿ ತಾ
ಸುರಾಧಿಪ ಹವಿಸನ್ನು ಶರತಿನ
ಪರಮಮಂಗಲ ಕೃಷ್ಣ ಸ್ವೀಕರಿಸುವನು ಪ್ರೀತಿಯಲಿ || ೪೧೦ ||
ಕೃಷ್ಣ ನೀ ಗ್ರೀಷ್ಮೇಧ್ಮ ಗ್ರೀಷ್ಮದಿ
ಕೃಷ್ಣ ನೀ ಋತುವಿನಲಿ ಗ್ರೀಷ್ಮದ
ಕೃಷ್ಣ ನೀನದನಿಂಧನವ ಮಾಡಿರುವೆ ಯಜ್ಞದಲಿ |
ಕೃಷ್ಣ ಗ್ರಸತೇ ರಸಗಳನು ತಾ
ಕೃಷ್ಣ ಕಾಷ್ಠವೆ ನಿನಗೆ ಗ್ರೀಷ್ಮವು
ಕೃಷ್ಣ ರಸ ಪರಮಾತ್ಮ ನಿರ್ಗುಣ ಬ್ರಹ್ಮ ಸದ್ವಿದ್ಯೆ || ೪೧೧ ||
ಯಜ್ಞರೂಪನೆ ಯಜ್ಞ ವಿಷ್ಣುವೆ
ಯಜ್ಞ ಹರಿ ತಾ ಯಜ್ಞ ಕೃಷ್ಣನೆ
ಯಜ್ಞದಗ್ನಿಯೆ ಕುಂಡ ಶಾಲೆಯೆ ಸಮಿಧೆಯಾಜ್ಯವು ತಾ |
ಯಜ್ಞದಂಗೋಪಾಂಗಮುಖ ಹರಿ
ಯಜ್ಞಕರ್ತನು ಯಜ್ಞಭೋಕ್ತನು
ಯಜ್ಞ ಋತ್ವಿಜ ಯಜ್ಞಫಲದಾತಾರ ಶ್ರೀಕೃಷ್ಣ || ೪೧೨ ||
ಋಷಿಯೆ ಕೃಷ್ಣನೆ ಸಕಲ ವೇದಕೆ
ಖುಷಿಯೆ ಸರ್ವದಾ ಸುಖಸ್ವರೂಪನೆ
ಶಶಿಯು ತಾರಾಮಂಡಲಕೆ ಶ್ರುತಿಯುಸಿರು ಶ್ರೀಕೃಷ್ಣ |
ಋಷಿಯು ದರ್ಶನದಿಂದ ಮಂತ್ರದ
ಋಷಿಯು ತಾನರ್ಥವನು ತಿಳಿಯಲು
ಋಷಿಯು ಪರಗತಿಯೆಡೆಗೆ ಪ್ರಾಪಕ ದೇವ ಗುರು ಕೃಷ್ಣ || ೪೧೩ ||
ಸಾಧ್ಯ ನೀ ಹರಿ ವಾಸುದೇವನೆ
ಬಾಧ್ಯ ಪೀಡಾಹರನೆ ಕೃಷ್ಣನೆ
ಭೇದ್ಯ ನಿಜಸಾಧಕರಿಗಾನಂದವನು ತೋರುವನೆ |
ಸಾಧ್ಯ ನೀ ಸಾಧಕರ ಭಕ್ತಿಗೆ
ಬೋಧ್ಯ ಜ್ಞಾನವೆ ಮನುಜರಿಗೆ ತಾನ-
-ಭೇದ್ಯನಾತ್ಮನು ಬೊಮ್ಮ ಸರ್ವರೊಳವಿತುಕೊಂಡಿರುವ || ೪೧೪ ||
ದೇವದುಂದುಭಿ ವಾಸುದೇವನೆ
ದೇವತೆಗಳಿಗೆ ಹರ್ಷಜನಕನೆ
ದೇವತೆಗಳುತ್ಸಾಹವರ್ಧಕ ಮೊಳಗು ಡಂಗುರವೆ |
ದೇವ ಬೆಳಗುವ ಧರ್ಮಜ್ಯೋತಿಯು
ದೇವ ಲೋಕದ ದಿಕ್ಕಿನಧಿಪರು
ದೇವತೆಗಳನು ಕಾಯ್ವ ಪರಮಾತ್ಮನೆ ನಿರಾಮಯನೆ || ೪೧೫ ||
ಸರ್ವಹುತ್ ಪೃಷದಾಜ್ಯಶ್ಚ ವಾಯವ್ಯಭೂತಕೃಚ್ಚ ಯಃ।
ಆರಣ್ಯಭೂತಕೃದ್ಗ್ರಾಮ್ಯಭೂತಕೃದ್ಭೂತಸಾರಥಿಃ ॥೫೯॥ (೪೨೧)
ಸರ್ವಹುತ್ ಸರ್ವವನು ಹೋಮಿಪ
ಸರ್ವ ಸೃಷ್ಟಿಯ ಸೃಷ್ಟಿಗರ್ಪಿಸಿ
ಸರ್ವ ಜೀವರ ಸುಖಕೆ ಜಡಪ್ರಕೃತಿಯನು ಸರಕಾಗಿ |
ಸರ್ವ ಲೋಕವ ಸೃಜಿಸಿ ಕೊಟ್ಟಿಹ
ಸರ್ವ ಸೌಕರ್ಯಗಳನಿತ್ತಿಹ
ಸರ್ವ ಜಗ ಕಾರಣನೆ ಕೃಷ್ಣನೆ ದೇವ ಪರಬೊಮ್ಮ || ೪೧೬ ||
ಕೃಷ್ಣ ನೀ ಪೃಷದಾಜ್ಯ ಸೃಷ್ಟಿಗೆ
ಕೃಷ್ಣ ಸೃಷ್ಟಿಯ ಯಜ್ಞಕಾಜ್ಯವು
ಕೃಷ್ಣ ಕೇವಲ ಕೇಶವನು ಕೈವಲ್ಯಮೂರುತಿಯೆ |
ಕೃಷ್ಣ ದಧಿಮಿಶ್ರಿತದ ಘೃತ ನೀ
ಕೃಷ್ಣ ನೀ ಸಕಲರಿಗೂ ಪ್ರಾಣನು
ಕೃಷ್ಣ ಯಜ್ಞನು ಯಜ್ಞದಾಜ್ಯವು ಹೇ ಮಹಾವಿಷ್ಣೋ || ೪೧೭ ||
ವಾಯವ್ಯಭೂತಕೃತ್ ಕೃಷ್ಣನೆ
ವಾಯುದೇವರ ಭುವರ್ಲೋಕದ
ವಾಯುವನ್ನುಸಿರಾಡುಂತಹ ಪಶುಗಳನು ಸೃಜಿಪ |
ವಾಯವ್ಯಭೂತವು ವಾಯುವೆಂಬುದು
ವಾಯುಜನಕನು ವಾಸುದೇವನು
ವಾಯು ಪ್ರಾಣನು ಪ್ರಾಣನಿಗು ಪ್ರಾಣ ಪರಮೇಶ || ೪೧೮ ||
ಆರಣ್ಯಭೂತಕೃತ್- ವಾಸುದೇವನೆ-
-ಯರಣ್ಯದ ನಿವಾಸಿ ಪಶುಗಳ
ವಿರಚಿಸಿದ ಸೃಜಿಸಿದನು ಸಿಂಹಾದಿಗಳ ವನದೊಳಗೆ |
ಪರಮಕರುಣಾಳುವೆ ಪರಾತ್ಪರ
ಚರಮಗತಿ ಕರುಣಿಪುದು ಭಕ್ತಗೆ
ವಿರಮಿಸದೆ ಧ್ಯಾನಿಸುವೆ ಚಿಂತಿಪೆ ಕೃಷ್ಣನನವರತ || ೪೧೯ ||
ಗ್ರಾಮ್ಯಭೂತಕೃತ್-ಅಚ್ಯುತನೆ ಹರಿ
ಗ್ರಾಮ್ಯ ನಾಡಿನ ಪ್ರಾಣಿಗಳ ತಾ
ಗ್ರಾಮ್ಯ ಸಾಕುಪ್ರಾಣಿಗಳ ಸೃಜಿಸಿಹನು ಪರಮಾತ್ಮ |
ರಮ್ಯವಾಗಿಹ ಸಾಧು ಪಶುಗಳ
ನಮ್ಯವಾಗಿಹ ಗೋಶುನಕಗಳ
ಕಾಮ್ಯವಾಗಿಹ ಪ್ರಾಣಿಸಂಪದ ಸೃಜಿಪ ಶ್ರೀಕೃಷ್ಣ || ೪೨೦ ||
ಭೂತಸಾರಥಿ ಪಾರ್ಥಸಾರಥಿ
ಜಾತವೆಲ್ಲಕು ಕೃಷ್ಣ ಸಾರಥಿ
ಕಾತರವ ಬಿಡು ಶರಣು ಪೊಗು ಪರಮಾತ್ಮತತ್ತ್ವವನು |
ಭೀತಿಯೇತಕೆ ಮರುಗದಿರು ನರ
ಮಾತಿನಲಿ ಕಾಲವನು ಕಳೆಯದೆ
ಮಾತಲೀಶ್ವರವಂದ್ಯ ಕೃಷ್ಣನ ನೆನೆಯೊ ಪ್ರೇಮದಲಿ || ೪೨೧ ||
ಋಕ್ಕರ್ತಾ ಸಾಮಕರ್ತಾ ಚ ಛನ್ದಃಕರ್ತಾ ಯಜುರ್ನಿಧಿಃ।
ಬ್ರಾಹ್ಮಣಾಸ್ಯೋ ಬ್ರಹ್ಮಮುಖಃ ಕ್ಷತ್ರಿಯಭುಜಸಂಯುತಃ ॥೬೦॥ (೪೨೮)
ಋಕ್ಕರ್ತನೆ ಋಕ್ಕುಗಳ ಹರಿ
ಋಕ್ಕರ್ತನೆ ಸೃಜಿಸಿದನು ತಾ
ಋಕ್ಕುಗಳ ಸಂಹಿತೆಯನಾದಿಯಲೀಶನುಸಿರಿದನು |
ಹಕ್ಕು ತಾನುಪನೀತ ವಟುವಿಗೆ
ಕಕ್ಕುಲಿಸದಿರು ವೇದಸಾರವ-
-ನಕ್ಕರೆಯಲುಸುರಿಹನು ಸಕಲರಿಗಾಗಿ ಹರಿ ತಾನು || ೪೨೨ ||
ಸಾಮಕರ್ತನೆ ಸಾಮಪ್ರೀಯನೆ
ಸಾಮಗಾನಕೆ ಬೇಗನೊಲಿವನೆ
ಸಾಮದಲಿ ಕಾಯ್ವವನೆ ಲೋಕವ ಕೃಷ್ಣ ಶ್ರೀಕೃಷ್ಣ |
ಸೋಮಸುಂದರ ಗೀತಪ್ರೀಯನೆ
ಸೋಮಶೇಖರಮಿತ್ರ ಕೇಶವ
ನೇಮ ಸುಜ್ಞಾನಗಳ ಕರುಣಿಸು ಭಾಮೆಯಧಿಪತಿಯೆ || ೪೨೩ ||
ಛಂದಃಕರ್ತಾ ದೇವ ಕೃಷ್ಣನೆ
ಛಂದಗಳ ಕಾರಣನೆ ಚಂದ್ರನೆ
ಮಂದಹಸಿತಾನನೆ ಕರುಣಾಪಾಂಗ ಶ್ರೀಕೃಷ್ಣ |
ಚಂದಗಾಣಿಪ ವಾಙ್ಮಯವ ತಾ
ಚಂದಗಾಣಿಪ ಗೇಯ ರೂಪಕ
ಸಂದರಾನನನಿಂದಿರಾಮಂದಿರನೆ ಶ್ರೀಕೃಷ್ಣ || ೪೨೪ ||
ಯಜುರ್ನಿಧಿ ಯಜು-ರುವೇದದ ಪತಿ
ಯಜುಸ್ಸುಗಳಿಗೆ ಮೂಲಕಾರಣ
ಯಜುರ್ವೇದವ ಯಜ್ಞಕಾಗಿಯೆ ವಿರಚಿಸಿದನೊಲಿದು |
ಯಜುರ್ಗದ್ಯವು ನಿಗದವೆಂಬರು
ಯಜುವ ಹೊರತಾ ಪದ್ಯ ಋಚೆ ತಾ
ಭಜಿಪೆ ವೇದಾತ್ಮಕ ಪುರಾಣೈಕೇಶ ಪೂರುಷನ || ೪೨೫ ||
ಬ್ರಾಹ್ಮಣಾಸ್ಯನೆ ಬ್ರಾಹ್ಮಮುಖವಿಹ
ಬ್ರಾಹ್ಮಣಪ್ರಿಯ ವಿಷ್ಣು ಕೃಷ್ಣನೆ
ಬ್ರಾಹ್ಮವಿಜ್ಞಾನವನು ಬೆಳಗಿದ ಶಂಕರಾತ್ಮಕನೆ |
ಬ್ರಹ್ಮವಿಜ್ಞಾನವದು ಶ್ರೇಷ್ಠವು
ಬ್ರಾಹ್ಮಗುಣಕರ್ಮಗಳು ಸಾತ್ತ್ವಿಕ
ಬ್ರಹ್ಮತತ್ತ್ವವನರಿತ ಬ್ರಹ್ಮವೆ ಕೃಷ್ಣ ತಾನಯ್ಯ || ೪೨೬ ||
ಬ್ರಹ್ಮಮುಖ ಪರಬೊಮ್ಮವದನನೆ
ಬ್ರಹ್ಮ ವೇದವು ಬ್ರಾಹ್ಮಣನು ಸಹ
ಬ್ರಹ್ಮ ತಪತತ್ತ್ವಗಳು ಕೇಶವ ಬೊಮ್ಮಮೊಗ ತಾನೈ |
ಬ್ರಹ್ಮ ವಿಧಿ ತಾ ಸೃಷ್ಟಿಕರ್ತನು
ಬ್ರಹ್ಮ ಪ್ರಜೆಗಳ ಪತಿಯು ಕೃಷ್ಣನು
ಬ್ರಹ್ಮವೇ ಮುಖವಾಗಿರುವ ಹರಿ ಕೃಷ್ಣ ಪರಬೊಮ್ಮ || ೪೨೭ ||
ಕ್ಷತ್ರಿಯಭುಜಸಂಯುತನೆ ಹರಿ
ಕ್ಷತ್ರಿಯರ ಸ್ವ-ಬಾಹು ಮಾಡಿಹ
ಕ್ಷತ್ರಿಯರ ಕಾಯ್ವಂತ ಶಕ್ತಿಯೆ ಕೃಷ್ಣ ಪರಬೊಮ್ಮ |
ಕ್ಷಾತ್ರತೇಜನೆ ಕ್ಷಾತ್ರವೀರ್ಯನೆ
ಕ್ಷಾತ್ರಗುಣಸಂಪನ್ನ ಶ್ರೀಹರಿ
ಕ್ಷಾತ್ರಬ್ರಾಹ್ಮಸುತೇಜದಿಂದಲಿ ಧರ್ಮ ರಕ್ಷಿಪನು || ೪೨೮ ||
ವೃನ್ದಾವನಸುಸಞ್ಚಾರೀ ಸಂಸಾರಾರ್ಣವತಾರಕಃ।
ಮುಕುನ್ದೋಽರಿಷ್ಟಹಾರೀ ಚ ವೃಷಭಾಸುರಮಾರಕಃ॥೬೧॥(೪೩೩)
ವೃಂದಾವನಸುಸಂಚಾರಿಯೆ
ವೃಂದೆಯರ ವೃಂದದಲಿ ಚರಿಸುತ
ವೃಂದಾವನ ಯಮುನೆ ತೀರದಿ ರಾಸವಾಡಿದನೆ |
ವೃಂದ ಗೋಪಿಯರಂದು ಕೃಷ್ಣನು
ನಂದನಂದನನಾನಂದದಲಿ
ಮಂದ ಮಂದದ ಹಸಿತದಲಿ ತಾನಂದು ನರ್ತಿಸಿದ || ೪೨೯ ||
ಸಂಸಾರಾರ್ಣವತಾರಕನೆ ಹರಿ
ಸಂಸಾರಸಾ-ಗರವ ದಾಟಿಸು
ಸಂಸರಣ ಜನಿ ಮರಣವೆಂಬಿದ ಕಳೆದು ಮುಕ್ತಿ ಕೊಡು |
ಅಂಶ ನಾವೈ ಪೂರ್ಣ ನೀನೈ
ಕಂಸಬುದ್ಧಿಯ ಕಳೆಯೆ ಪೂರ್ಣತೆ
ಹಂಸಪಥ ದೊರಕುವುದು ಸದ್ಯೋಮುಕ್ತಿ ಶ್ರೀಕೃಷ್ಣ || ೪೩೦ ||
ಮುಕುಂದನೆ ಶ್ರೀಕೃಷ್ಣದೇವನೆ
ಮುಕುವ ಮುಕುತಿಯ ದಾತೃ ಕೃಷ್ಣನೆ
ಮುಕುತಿ ಭಕುತಿಯ ಶಕುತಿ ಯುಕುತಿಯ ನೀಡಿ ನೀ ಸಲಹು |
ಮುಕುತಿರೂಪನೆ ಮುಕುತಿಧಾಮನೆ
ಮುಕುತಿದಾತಾರನೆ ಮಹಾತ್ಮನೆ
ಮುಕುಂದನೆ ಮಾಧವನೆ ಕೇಶವ ರಕ್ಷಿಸನವರತ || ೪೩೧ ||
ಅರಿಷ್ಟಹಾರಿ ನೀ ಕೃಷ್ಣನೆ-
-ಯರಿಷ್ಟಗಳನು ಪರಿಹರಿಪ ಹರಿ
ಬರಿ ಪ್ರಚಾರಕ್ಕೊಲಿಯದವನಾಚಾರಸುವಿಚಾರ |
ವಿರಿಂಚಿಯ ಪಿತನರಿಷ್ಟನೇಮಿ
ಪರಮಕರುಣಾಸಾಗರನೆ ಗುರು
ಚರಮಗತಿದಾತಾರ ವಿಘ್ನನಿವಾರಕನೆ ಕೃಷ್ಣ || ೪೩೨ ||
ವೃಷಭಾಸುರಮಾರಕನೆ ಹರಿ
ವೃಷಭವೆತ್ತಿನ ರೂಪದಸುರನ
ವೃಷಭದೈತ್ಯನ ಕೊಂದ ರಾಧಾಕೃಷ್ಣ ಪರಮಾತ್ಮ |
ವೃಷಭ ಧರ್ಮದ ರೂಪ ಶಿವನಿಗೆ
ವೃಷಭನಂದದಿ ಕಪಟವಾಡಿದ
ವೃಷಭರೂಪಿನ ದುಷ್ಟ ಕಪಟಿಯ ಕೊಂದನಾ ಹರಿಯು || ೪೩೩ ||
ಬಕಹಾ ಚ ಪ್ರಲಮ್ಬಘ್ನೋ ದಯಾಲುರಘಭಞ್ಜನಃ।
ವ್ರಜಕ್ರೀಡೋ ವ್ರಜೇಶಶ್ಚ ವ್ರಜಬಾಲಾಪ್ರಿಯಸ್ಸುಹೃತ್॥೬೨॥(೪೪೧)
ಬಕಹಾ ಬಕದೈತ್ಯಹರ ಹರಿ
ಬಕದ ಕೊಕ್ಕರೆ ರೂಪಿನಸುರನ
ಬಕಾಸುರನನು ಕೊಂದ ಕಂಸಪ್ರೇಷಿತನ ಕೃಷ್ಣ |
ಬಕವು ವಂಕಿಸುತಿಹುದು ವಕ್ರದಿ
ಬಕವು ಕುಟಿಲದ ಗತಿಯನುಳ್ಳದು
ಬಕನ ದುಷ್ಟನ ಸಂಹರಿಸಿದನು ವಾಸುದೇವ ಹರಿ || ೪೩೪ ||
ಪ್ರಲಂಬಘ್ನನೆ ಕೃಷ್ಣದೇವನೆ
ಪ್ರಲಂಬನ ದುಷ್ಟಸುರದೈತ್ಯನ
ವಿಲಂಬಿಸದೆಲೆ ಕೊಂದ ದೇವಕಿತನಯ ಶ್ರೀಕೃಷ್ಣ |
ಪ್ರಲಂಬನು ಬಲು ದೀರ್ಘದೇಹನು
ಪ್ರಲಂಬನು ದನುಪುತ್ರ ದೈತ್ಯನು
ಪ್ರಲಂಬನು ನರವಧ್ಯ ನರರೂಪಿಂದ ಹರಿ ಕೊಂದ || ೪೩೫ ||
ದಯಾಲುವೆ ಹರಿ ಕೃಷ್ಣ ಕೇಶವ
ದಯಾನಿಧಿ ಕರುಣೆಯ ಪಯೋಧಿಯೆ
ದಯಾಯುಕ್ತನೆ ದಯವ ತೋರುವ ಸಕಲ ಸೃಷ್ಟಿಯಲಿ |
ಭಯಾಭಯಗಳನೀವ ಶ್ರೀಹರಿ
ಜಯಾಪಜಯಗಳನ್ನು ಮೀರಿಹ
ಹಯಾನನ ದ್ವೈಪಾಯನನೆ ನಾರಾಯಣನೆ ಕೃಷ್ಣ || ೪೩೬ ||
ಅಘಭಂಜನ ಹರಿಯೆ ಕೃಷ್ಣನೆ
ಭಗವಂತನೆ ಪಾಪನಾಶಕ
ನಗನಾಣ್ಯಗಳಾಚೆಗಿನ ಪರಮಾತ್ಮಸುಖರೂಪ |
ಬಗೆ ಬಗೆಯ ಲೌಕಿಕದ ಮಾಯೆಯ
ಲಗು ಬಗೆಯ ಜಂಜಡದ ಬದುಕನು
ಖಗವಾಹನನೆ ದಾಟಿಸೈ ಮುಕುತಿಯನು ಶ್ರೀಪತಿಯೆ || ೪೩೭ ||
ವ್ರಜಕ್ರೀಡನೆ ವಾಸುದೇವನೆ
ವ್ರಜವು ಮಂಡಲ ಗೋಪಿಯರ ತಾ
ವ್ರಜದಿ ರಾಸಕ್ರೀಡೆಯಾಡಿದ ಯಮುನೆಯಾ ತಟದಿ |
ವ್ರಜ ಸಮೂಹವು ಕ್ರೀಡೆಯಾಟವು
ಭಜಿಪರೊಡನಾಡುವನು ಕೃಷ್ಣನು
ವ್ರಜವು ಕೃಷ್ಣಪ್ರೇಮಿಭಕುತರ ಗುಂಪು ಪ್ರಸ್ತುತದಿ || ೪೩೮ ||
ವ್ರಜೇಶನೆ ಶ್ರೀಕೃಷ್ಣ ಮಾಧವ
ಬ್ರಜೇಶನು "ವಬಯೋರಭೇದಃ"
ವಿಭೂಷಿತ ಗೋಪಿಯರ ಮಂಡಲದಲ್ಲಿ ರಾಧೇಶ |
ವ್ರಜದ ಪತಿ ಗೋಪಿಯರ ಹರಿ ತಾ
ಸಜೆ ರಹಿತ ಸ್ವಾತಂತ್ರ್ಯವಲ್ಲಿದೆ
ಭಜಿಪರಿಗೆ ಮುಕುತಿಯಲಿ ಭಕುತಿಯಲಿಹುದು ಸ್ವಾತಂತ್ರ್ಯ || ೪೩೯ ||
ವ್ರಜಬಾಲಾಪ್ರಿಯನೆ ಕೃಷ್ಣನೆ
ವ್ರಜಮಂಡಲಬಾಲೆ ರಾಧೆಯು
ವ್ರಜದಿ ಕೃಷ್ಣನ ಪ್ರಿಯತಮೆಯು ತಾ ಪ್ರಕೃತಿಶಕ್ತಿಯಹೋ |
ವಿಜಯಸಖ ವ್ರಜಕ್ರೀಡ ಕೃಷ್ಣನೆ
ವಿಜಯಶೀಲನೆ ವಾಜಿವದನನೆ
ಭಜಿಪ ಪ್ರೇಮೀಭಕುತಜನಮಾನಸದಿ ನೆಲೆಸಿಹನೆ || ೪೪೦ ||
ಸುಹೃತ್ ಕೃಷ್ಣನೆ ನೈಜಭಕುತರ
ಸುಹೃತ್ ಸುಂದರ ಹೃದಯವಿರುವನೆ
ಸುಹೃತ್ ಸುಂದರ ಮನದ ಕೃಷ್ಣನೆ ಭಕುತಸನ್ಮಿತ್ರ |
ಸಹೃದಯನೆ ನಿಜಪ್ರೇಮಿಭಕುತರ
ಸುಹೃದಮೇಯನೆ ಸರ್ವಹೃದಯನೆ
ಸುಹೃಚ್ಛ್ರೀಕೃಷ್ಣನು ಪರಾತ್ಪರ ವಾಸುದೇವ ಹರಿ || ೪೪೧ ||
ಮಧುಪುರೇಶ್ವರಶ್ಶ್ಯಾಮೋ ಯದುಪೋ ಯಾದವಾಗ್ರಣೀಃ।
ಕಲಿಕಲ್ಮಷಹಾರೀ ಚ ರಾಮಕೃಷ್ಣಮಹಾಪ್ರಭುಃ॥೬೩॥(೪೪೭)
ಮಧುಪುರೇಶ್ವರ ಕೃಷ್ಣದೇವನೆ
ಮಧುರೆಯಲಿ ತಾನವತರಿಸಿದನೆ
ಮಧುರೆ ಪುರದಧಿಪನೆ ಮಹಾತ್ಮನೆ ಕಂಸಸಂಹಾರಿ |
ಮಧುರೆ ಪಟ್ಟಣನಾಥ ಕೃಷ್ಣನೆ
ಮಧುರೆಪುರಪಾವನನೆ ಶ್ರೀಹರಿ
ಮಧುರಹೃದಯನೆ ಮಧುರಕಾಯನೆ ಸರ್ವಮಧುರ ಹರಿ || ೪೪೨ ||
ಶ್ಯಾಮ ನೀಲದ ಮೇಘವರ್ಣನೆ
ಸೋಮಸುಂದರ ಕೃಷ್ಣವರ್ಣನೆ
ಭಾಮ ಸಹಿತದಿ ಪೊರೆಯೊ ಲೋಕದ ಸುಜನರನು ಸತತ |
ನೇಮ ನಿಷ್ಠೆಯ ಕಾಯೊ ಸಕಲರ
ಕಾಮ ದುರ್ಗುಣ ಸಾಯುವಂದದಿ
ಶ್ರೀಮಹಾಲಕುಮಿಪತಿ ರುಕ್ಮಿಣಿಯರಸ ಶ್ರೀಕೃಷ್ಣ || ೪೪೩ ||
ಯದುಪ ಯಾದವಕುಲದ ರಾಯನೆ
ಯದುಮಹಾರಾಜನ ಕುಲೋದ್ಭವ
ಯದುಕುಲಕೆ ಮುಕುಟಮಣಿ ಕೃಷ್ಣನು ದೇವ ಪರಬೊಮ್ಮ |
ಮುದುಕಯುವಕರ ಬಾಲಶಿಶುಗಳ
ಹದಿಹರೆಯ ಸ್ತ್ರೀಪುರುಷರಖಿಲರ
ಪದುಮನಾಭನು ಪೂಜ್ಯ ಬಂಧು ಸದಾತ್ಮಕನೆ ಕೃಷ್ಣ || ೪೪೪ ||
ಯಾದವಾಗ್ರಣಿ ವಾಸುದೇವನೆ
ಸಾದರದಿ ಭಕುತರನು ಕಾವನೆ
ಮೋದಬೋಧಪ್ರದನೆ ಮಾಧವ ರಕ್ಷಿಸನವರತ |
ಯದುಕುಲಜರಲಿ ಶ್ರೇಷ್ಠರತ್ನವೆ
ಪದವಿ ಬಯಸದ ಪದುಮಪಾದನೆ
ಸದಯಹೃದಯನೆ ಮುದದಿ ಭಜಿಸುವೆ ಕೃಷ್ಣ ತವ ಚರಣ || ೪೪೫ ||
ಕಲಿಕಲ್ಮಷಹಾರಿ ಕೃಷ್ಣನೆ
ಕಲಿಯುಗದಿ ತವ ನಾಮವಘಹರ
ಕಲಿಮಲವ ಕಳೆಯುವುದು ಸಂತತ ನಾಮಕೀರ್ತನೆಯು |
ಕುಲದ ಜಾತಿಯ ಮತದ ಧರ್ಮದ
ಮಲವ ಕಳೆಯುವ ಕಾಮಧೇನುವು
ಕಲುಷಹರ ಕಲಿಯುಗದ ಕಲ್ಪಲತೇಶ ಶ್ರೀಕೃಷ್ಣ || ೪೪೬ ||
ರಾಮಕೃಷ್ಣಮಹಾಪ್ರಭುವೆ ಹರಿ
ಕಾಮಪಿತ ರಾಮಾವತಾರಿಯೆ
ಕಾಮಹರಸಖ ಕೃಷ್ಣ ಲೋಕೈಕೇಶ್ವರನೆ ಪ್ರಭುವೆ |
ರಾಮಕೃಷ್ಣನೆ ಪರಮಹಂಸನೆ
ಸೋಮವದನನೆ ಸಾಮಪ್ರೀಯನೆ
ನಾಮಕೀರ್ತನಪ್ರಿಯನೆ ಕಲಿಮಲಹರನೆ ಪರಮಾತ್ಮ || ೪೪೭ ||
ಗೋಪತಿಶ್ಚ ರಮಾನಾಥಃ ಕ್ಷೀರಸಾಗರಸನ್ನಿಧಿಃ।
ವೃಷಾಕಪಿರ್ದೇವಪೂಜ್ಯಃ ಕಲಾನನ್ತಃ ಪ್ರತಾಪವಾನ್॥೬೪॥(೪೫೪)
ಗೋಪತಿಯೆ ಭೂಪತಿಯೆ ಕೃಷ್ಣನೆ
ಗೋಪತಿಯು ಕರಣೇಶ ಕಿರಣಪ
ಗೋಪ ವಾಕ್ಪತಿ ಧೇನುಪತಿ ಗೋವಿಂದ ಗೋಪಾಲ |
ಗೋಪ ಜ್ಞಾನದ ಪತಿಯು ಶರಪತಿ
ಗೋಪ ಜಲಪತಿ ಸ್ವರ್ಪತಿಯ ಪತಿ
ಗೋಪ ಪಶುಪತಿಪತಿಯು ದಿಕ್ಪತಿ ನೇತ್ರಪತಿ ಕೃಷ್ಣ || ೪೪೮ ||
ರಮಾನಾಥನೆ ಲಕುಮಿವಲ್ಲಭ
ರಮಯತಿ ಪ್ರಸನ್ನವದನೆಯು
ರಮಿಸುವಳು ವಿಷ್ಣುವನು ಕ್ಷೀರಾಬ್ಧಿಯೊಳು ಸೇವಿಪಳು |
ರಮಾದೇವಿಯ ರಮಣ ವಿಷ್ಣುವು
ರಮಾವಲ್ಲಭ ರುಕ್ಮಿಣೀಶನು
ರಮಿಸುವನು ರಮೆಯೊಡನೆ ಲೋಕದಿ ಸುಖವ ತೋರುವನು || ೪೪೯ ||
ಕ್ಷೀರಸಾಗರಸಂನಿಧಿಯೆ ಹರಿ
ಕ್ಷೀರಸಾಗರ ಪಾಲ್ಗಡಲು ತಾ
ವಾರಿಧಿಯು ಹರಿಸಂನಿಧಾನವು ಶೇಷಪರ್ಯಂಕ |
ನೀರಜಾಕ್ಷಿಯ ಸೇವೆ ಪಡೆಯುತ
ಮೂರು ಲೋಕವ ಪಾಲಿಸುವ ಹರಿ
ಕೋರಿದವರಿಗೆ ಸಲಿಸುವನು ಕೋರಿಕೆಗಳನು ಕೃಷ್ಣ || ೪೫೦ ||
ವೃಷಾಕಪಿ ಹರಿ ವಾಸುದೇವನೆ
ವೃಷವು ಧರ್ಮವು ವೃಷಭರೂಪವು
ವೃಷಾಕಪಿ ಧರ್ಮವನು ರಕ್ಷಿಸುವಂಥ ಶ್ರೀಕೃಷ್ಣ |
ವೃಷಾಕಪಿ ಹರರೂಪಿ ಕೃಷ್ಣನು
ವೃಷಭವಾಹನ ಧರ್ಮಪಾಲಕ
ವೃಷದ ರೂಪದಿ ವರ್ಷಿಸುವ ಧರ್ಮವನು ಲೋಕದಲಿ || ೪೫೧ ||
ದೇವಪೂಜ್ಯನೆ ದೇವದೇವನೆ
ದೇವದೇವತೆಗಳ ನಿಯಾಮಕ
ದೇವತಾತ್ಮನು ಜೀವರಾತ್ಮನು ಸಕಲ ಲೋಕಾತ್ಮಾ |
ಸಾವ ಮೀರಿದ ಶಕ್ತಿ ಧರ್ಮದ
ಭಾವಕೊಲಿಯುವ ಶುದ್ಧಸತ್ತ್ವನೆ
ಜೀವಭಾವವ ಕಳೆದು ಬ್ರಹ್ಮಾತ್ಮವಗತಿಯ ನೀಡು || ೪೫೨ ||
ಕಲಾನಂತನೆ ದೇವ ಕೃಷ್ಣನೆ
ಕಲೆಗಳಗಣಿತ ನಿನಗೆ ಬೊಮ್ಮನೆ
ಕಲಾನಿಧಿ ನಿಷ್ಕಲನು ಸಕಲನು ಸಗುಣನಿರ್ಗುಣನು |
ಕಲಾವಿದ ಕಲೆಗಳಿಗೆ ಕಾರಣ
ಮಲಾಪಹ ಕಲಿಯುಗದಿ ಪಾಪದ
ಸಲಹು ಸುಜನರ ಜಗದಿ ಭಕ್ತಿಜ್ಞಾನಧರ್ಮಗಳ || ೪೫೩ ||
ಪ್ರತಾಪವಾನ್ ಹರಿ ಕೃಷ್ಣ ಜಗದಲಿ
ಪ್ರತಾಪಗಳಿಗೆ ಮೂಲಕಾರಣ
ಪ್ರಕೃಷ್ಟದಿ ಶತ್ರುಗಳಿಗಿವ ತಾಪವನು ನೀಡುವನು |
ಪ್ರತಾಪವು ಹರಿ ನಿನ್ನದೇ ನಿಜ
ಕುತಾಪವು ಬರಿ ನನ್ನದೇ ದಿಟ
ಸುತಾಪದಿ ಲೋಕವನು ರವಿಯಂತವನ ಮಾಡುತಿಹೆ || ೪೫೪ ||
ಪ್ರಜಾಪತಿಪತಿಶ್ಶೌರಿಸ್ಸಹಸ್ರವದನಃ ಕ್ರತುಃ।
ದೇಹೀ ಧೇನುಪತಿರ್ದಾತಾ ದೇವಾಂಶಯಾದವಾವೃತಃ॥೬೫॥(೪೬೨)
ಪ್ರಜಾಪತಿಪತಿ ವಾಸುದೇವನೆ
ಪ್ರಜಾಪತಿ ವಿಧಿ ವಿಧಿಪತಿಯು ಹರಿ
ಪ್ರಜೆಗಳಧಿಪತಿಜನಕ ನಾರಾಯಣನೆ ಶ್ರೀಕೃಷ್ಣ |
ಪ್ರಜಾಪತಿ ಸೃಷ್ಟಿಯನು ಗೈವನು
ಪ್ರಜಾಸಂಪದವಾತನಿಂದಲೆ
ಪ್ರಜಾಪತಿಗಳ ಪಿತನು ಪರಮಾತ್ಮನು ಪರಬ್ರಹ್ಮ || ೪೫೫ ||
ಶೌರಿ ಶೂರನ ವಂಶಜನೆ ಹರಿ
ಶೌರಿ ಶೌರ್ಯಪ್ರತಾಪಶಾಲಿಯೆ
ಹರಿಯೆ ಕೃಷ್ಣನೆ ವಾಸುದೇವನೆ ದೇವಕೀತನಯ |
ಕ್ರೂರಿ ಕಂಸನ ಸಂಹರಿಸಿದನೆ
ಭಾರಿ ದೈತ್ಯರು ಶೈಶವದಿ ಹತ
ತೋರಿಕೊಡೊ ಬ್ರಹ್ಮಾತ್ಮಜ್ಞಾನವ ಸಚ್ಚಿದಾನಂದ || ೪೫೬ ||
ಸಹಸ್ರವದನನೆ ವಿರಾಜಿಪ
ಸಹಸ್ರವು ಸಾಸಿರವನಂತವು
ಸಹಸ್ರವು ಮುಖವನಂತವು ಜಗದೊಳಗಿರುವ ಸಕಲ |
ಮಹತ್ತಮದ ವಿರಾಡ್ರೂಪನೆ
ಬಹುವಿಧದ ವದನಗಳು ನಿನ್ನವೆ
ಸಹಕರಿಸು ಮುಕುತಿಯನು ತಿಳಿಯಲು ಲೋಕದಾದಿಗುರೋ || ೪೫೭ ||
ಕ್ರತುವೆ ಯಜ್ಞವೆ ವಾಸುದೇವನೆ
ಕ್ರತುವೆ ಸಪ್ತರ್ಷಿಗಳಲೋರ್ವನೆ
ಕ್ರತುವೆ ಕರ್ದಮಪುತ್ರಿಕ್ರಿಯೆವಲ್ಲಭನೆ ಪರಮಾತ್ಮ |
ಕ್ರತುವೆ ಪಿತ ನೀ ವಾಲಖಿಲ್ಯರ
ಕ್ರತುವೆ ಯಾಗವು ಕಾಲಕಾಲಕೆ
ಕ್ರತುವೆ ತ್ಯಾಗವು ಸೇವೆ ಸಹಕಾರಗಳು ನಮ್ಮೊಳಗೆ || ೪೫೮ ||
ದೇಹೀ ದೇಹವ ಧರಿಸಿ ತೋರ್ವನೆ
ದೇಹೀ ದೇಹಾಕೃತಿಯ ಜೀವನೆ
ದೇಹೀ ದೇಹದೊ-ಳಗಿರುವಾತ್ಮನೆ ಸರ್ವರಾತ್ಮ ಹರಿ |
ದೇಹ ನಿನ್ನದು ದೇಹಿ ನೀನೆಯು
ದೇಹ ದೇಹಿಗಳೆರಡು ನೀನೆಯು
ದೇಹದೊಳಹೊರಗಿರುವ ತತ್ತ್ವವೆ ನೀನು ಶ್ರೀಕೃಷ್ಣ || ೪೫೯ ||
ಧೇನುಪತಿ ನೀ ಹರಿಯೆ ಕೃಷ್ಣನೆ
ಧೇನು ಗೋವುಗಳೊಡೆಯ ಶೌರಿಯೆ
ಸಾನುರಾಗದಿ ಕಾದೆ ಗೋವ್ಗಳ ಗೋಪ ಗೋಪಿಯರ |
ಭಾನುಮಂಡಲದೊಳಗಿರುವ ಹರಿ
ನಾನು ನನ್ನವರೆಂಬುದನು ತೊಡೆ
ಧೇನುಮಂಡಲಮಧ್ಯಗನೆ ಶ್ರೀಕೃಷ್ಣ ಗೋಪಾಲ || ೪೬೦ ||
ದಾತಾ ದಾನಶೀಲ ಕೃಷ್ಣನೆ
ದಾತ ನೀ ಸರ್ವಕ್ಕು ಶ್ರೀಹರಿ
ಸೂತ್ರಧಾರಿಯು, ನಾವು ಸಕಲರು ಪಾತ್ರಧಾರಿಗಳು |
ಪಾತಕವ ಕಳೆ ಬಾಲಕೃಷ್ಣನೆ
ಹೇತು ನೀನಖಿಲಾಂಡಕೋಟಿಗೆ
ಮಾತು ನಿನ್ನದು ಪಾತು ಮಾಂ ಸರ್ವದನೆ ಶ್ರೀಕೃಷ್ಣ || ೪೬೧ ||
ದೇವಾಂಶಯಾ-ದವಾವೃತನೆ ಹರಿ
ದೇವತೆಗಳಂಶಾಂಶ ಯಾದವ
ನಿವಹದಿಂದೊಡಗೂಡಿರುವ ಯದುವರನೆ ಶ್ರೀಕೃಷ್ಣ |
ದೇವಕಾರ್ಯಕೆ ಧರ್ಮಕಾರ್ಯಕೆ
ಭಾವಕೊಲಿಯುವ ದೇವ ಬಂದಿಹ
ಸಾವ ಕಳೆದಮೃತತ್ತ್ವದರಿವನ್ನೀವ ಕೇಶವನೆ || ೪೬೨ ||
ವೈಶ್ಯೋರುಶ್ಶೂದ್ರಪಾದಶ್ಚ ಮಥುರಾಪುರಪಾಲಕಃ।
ಚನ್ದ್ರಮನಾ ಅರ್ಕಚಕ್ಷುರಗ್ನೀನ್ದ್ರಾನನಯಜ್ಞಪಃ ॥೬೬॥(೪೬೯)
ವೈಶ್ಯೋರುವೆ ತೊಡೆಯೆ ವೈಶ್ಯನು
ವೈಶ್ಯವರ್ಣವು ದೇವನೂರದು
ಕಶ್ಯಪಾದಿಗಳಿಂದ ಸೃಷ್ಟಿಯು ಬೊಮ್ಮ ಚೈತನ್ಯ |
ವೈಶ್ಯ ಕೃಷಿ ಗೋರಕ್ಷೆ ವಣಿಜನು
ವೈಶ್ಯಧರ್ಮವದೊಂದು ಪಾದವು
ವೈಶ್ಯಶೂದ್ರಕ್ಷಾತ್ರಬ್ರಾಹ್ಮಗಳೆಂಬ ನಾಲ್ಕರಲಿ || ೪೬೩ ||
ಶೂದ್ರಪಾದನೆ ಕೃಷ್ಣದೇವನೆ
ಶೂದ್ರವರ್ಣವು ನಿನ್ನ ಚರಣವು
ಶೂದ್ರ ಶೋಕಾಕುಲನು ನಿತ್ಯವು ಕಷ್ಟನಷ್ಟದಲಿ |
ಶೂದ್ರ ಪರಿಚರ್ಯಾತ್ಮಕರ್ಮನು
ಶೂದ್ರನಜ್ಞಾನದಲಿ ಬೇವನು
ಶೂದ್ರಪಾದನು ದೇವ ಸಕಲರು ಪೂಜಿಸುವ ಪಾದ || ೪೬೪ ||
ಮಥುರಾಪುರಪಾಲಕನೆ ಹರಿ
ಮಥುರೆ ನಗರವ ಪಾಲಿಸುವ ಹರಿ
ಮಥುರೆಯಲಿ ಪುಟ್ಟಿದನು ದುಷ್ಟರಸರನು ತರಿದ ಹರಿ |
ಮಥುರನಾಥನನುಗ್ರಸೇನನ
ಸುತನು ಕಂಸನು ಪಿತನ ಬಂಧಿಸಿ
ಪಥವ ಬದಲಿಸಲಾಗ ದುಷ್ಟನ ಮಥಿಸಿದನು ಕೃಷ್ಣ || ೪೬೫ ||
ಚಂದ್ರಮನ ಹರಿ ಕೃಷ್ಣದೇವನೆ
ಚಂದ್ರನೀತನ ಮನವು ಚಂದವು
ಚಂದದಿಂದಲಿ ಲೋಕಕಾಹ್ಲಾದವನು ಕರುಣಿಪನು |
ಮಂದಹಸಿತನು ಸುಂದರಾಂಗನು
ಚಂದ್ರಶೇಖರಸಖನು ಕೃಷ್ಣನು
ಚಂದ್ರರೂಪದಿ ಜೀವಮನಕಾಹ್ಲಾದ ನೀಡುತಿಹ || ೪೬೬ ||
ಅರ್ಕಚಕ್ಷುವೆ ವಾಸುದೇವನೆ-
-ಯರ್ಕ ಸೂರ್ಯನೆ ಕೃಷ್ಣನೇತ್ರವು
ಕರ್ಕ ಮಕರದಿ ದಕ್ಷಿಣೋತ್ತರ ಪಥದಿ ಸಂಚರಿಪ |
ಅರ್ಕನರ್ಚ್ಯನು ಲೋಕಪೂಜ್ಯನು
ಶರ್ಕರದ ತೆರ ಜೀವಜೀವನು-
-ವರ್ಕನೆಕ್ಕಪ್ರಿಯನು ರವಿರೂಪಿನಲಿ ಸಾಕ್ಷಿ ಹರಿ || ೪೬೭ ||
ಅಗ್ನೀಂದ್ರಾನನ ದೇವ ಕೃಷ್ಣನೆ-
-ಯಗ್ನಿಯಿಂದ್ರರೆ ಬಾಯಿ ಮುಖ ತವ
ಭಗ್ನವಾಗದ ಯಜ್ಞದಗ್ನಿಯ ತನುವಿನಿಂ ತಿಂಬ |
ಅಗ್ನಿಯಧಿಪತಿ ಶಕ್ರ ಸುರಪತಿ
ವಿಘ್ನಹರ ತೇಜಸ್ವಿ ಲೋಕಪ
ಮಗ್ನವಾಗಿಹ ಸೃಷ್ಟಿರಕ್ಷೆಲಿ ಸುರಪರೂಪಿನಲಿ || ೪೬೮ ||
ಯಜ್ಞಪನೆ ಶ್ರೀಕೃಷ್ಣ ದೇವನೆ
ಯಜ್ಞ ಯಾಗ ಕ್ರತುಗಳಧಿಪತಿ
ಯಜ್ಞರೂಪನೆ ಯಜ್ಞಪಾಲಕ ಯಜ್ಞಫಲದಾತ |
ಯಜ್ಞ ವಿಷ್ಣುವು ಯಜನ ವಿಷ್ಣುವು
ಯಜ್ಞ ಯಾಜನ ದೇವ ನೀ ಹರಿ
ಯಜ್ಞಪತಿ ಪಿತ ಯಾಜಕನೆ ಪರಬೊಮ್ಮ ಸರ್ವಾತ್ಮನ್ || ೪೬೯ ||
ಪವನಮೂಲಸಪ್ರಾಣೋಽನ್ತರಿಕ್ಷನಾಭಿಮಣ್ಡಲಃ।
ಶೀರ್ಷಜಾತದ್ಯುಲೋಕಶ್ಚ ಭೂಮಿಪಾಚ್ಛ್ರೋತ್ರದಿಕ್ತನುಃ॥೬೭॥(೪೭೪)
ಪವನಮೂಲಸಪ್ರಾಣನೆ
ಪವನ ಪ್ರಾಣವಾಯುಮೂಲನೆ
ಪವನ ಪುನಾತಿ ಪಾವನಕು ಪಾವನನು ಮೂಲನಿಲ |
ಪವನರೂಪನೆ ಪ್ರಾಣರೂಪನೆ
ಭವನ ರೂಪನೆ ಭಾವರೂಪನೆ
ಜವನ ರೂಪನೆ ಜಾವರೂಪನೆ ಸಕಲ ಶ್ರೀಕೃಷ್ಣ || ೪೭೦ ||
ಅಂತರಿಕ್ಷ-ನಾಭಿಮಂಡಲ-
-ವಂತರಿಕ್ಷವು ಹರಿಯ ನಾಭಿಯು
ಸಂತರರಿತಿಹರಿದನು ನಭವಿಡಿ ಕೃಷ್ಣನಾಭಿಯದು |
ಹಂತಕರ ಸದೆಬಡಿಯಲೋಸುಗ
ಹೊಂತಕಾರಿಯ ತೆರದಿ ಬಂದಿಹ-
-ನಂತಕಾಂತಕನಂತಮಹಿಮನು ತಾನು ಶ್ರೀಕೃಷ್ಣ || ೪೭೧ ||
ಶೀರ್ಷಜಾತದ್ಯುಲೋಕನು ಹರಿ
ಶೀರ್ಷ ಶಿರದಿಂ ದೇವಲೋಕವು
ಶೀರ್ಷ ಹರಿ ತಲೆಯಿಂದ ಬಂತೈ ಪುಣ್ಯ ಸ್ವರ್ಲೋಕ |
ಹರ್ಷಕಾರಕ ಹರ್ಷರೂಪಿನ
ಹರ್ಷಮಯ ಸುರಲೋಕವುದಿಸಿತು
ಕರ್ಷಣಾತ್ಮಕ ಕೃಷ್ಣಶಿರದಿಂ ನಮಿಪೆನನವರತ || ೪೭೨ ||
ಭೂಮಿಪಾತ್ ಪೃಥ್ವಿಯೇ ಪಾದವು
ಭೂಮಿ ಶ್ರೀಕೃಷ್ಣನಿಗೆ ಚರಣವು
ಭೂಮಿರೂಪದಿ ನಮಗೆ ಹರಿಪಾದಗಳ ದರ್ಶನವು |
ಕಾಮಿತಾರ್ಥವನೀವ ಕೃಷ್ಣನು
ಭೂಮಿಹಿತ ಕಾಯ್ವವರ ಕಾಯ್ವನು
ಭೂಮಿಪತಿ ಶ್ರೀಪತಿಯು ಲಕ್ಷ್ಮೀವರನು ಶ್ರೀಹರಿಯು || ೪೭೩ ||
ಶ್ರೋತ್ರದಿಕ್ತನು ವಾಸುದೇವನೆ
ಶ್ರೋತ್ರ ಕಿವಿಗಳೆ ದಿಕ್ಕುಗಳು ದಶ
ಸೂತ್ರಧಾರನ ದೇವ ಕೃಷ್ಣನ ಕಿವಿಗಳೇ ದಿಕ್ಕು |
ಪಾತ್ರಧಾರಿಗಳಿವರು ಜೀವರು
ಶಾಸ್ತ್ರವೇದ್ಯನು ಸರ್ವರೊಳಗಿಹ
ಸ್ತೋತ್ರಯೋಗ್ಯನು ನಮ್ಮ ಮೂಲಸ್ವರೂಪ ಪರಬೊಮ್ಮ || ೪೭೪ ||
ಸಾನ್ತಜೀವತ್ವಮಾಪನ್ನಾನನ್ತಪೂರುಷಭಾಸುರಃ।
ಆದ್ಯಧರ್ಮಪಿತಾ ಚೈವ ಭಾಯುತೋ ಭಾಪ್ರದಾಯಕಃ॥೬೮॥(೪೭೮)
ಸಾಂತಜೀವತ್ವಮಾಪನ್ನಾ-
-ನಂತಪೂರುಷಭಾಸುರನೆ ಹರಿ-
-ಯಂತ್ಯವಿಹ ಜೀವತ್ವ ಪಡೆದಿತ ಸ್ವಂತದಿಚ್ಛೆಯಲಿ |
ಅಂತವಿರದಿಹನಂತಪುರುಷನೆ
ಕಂತುಪಿತ ಸ್ಫಾಟಿಕನೆ ವೀರನೆ
ಸಂತಹೃದಯನೆ ಹಂತಕಾಂತಕ ದೇವ ಶ್ರೀಕೃಷ್ಣ || ೪೭೫ ||
ಆದ್ಯಧರ್ಮಪಿತಾ ಕೃಷ್ಣನೆ
-ಯಾದ್ಯ ಮೊದಲಿನ ಧರ್ಮಜನಕನು
ಪಾದ್ಯವರ್ಘ್ಯವನಿತ್ತು ಪೂಜಿಪೆ ಧರ್ಮಕಾರಣನ |
ಆದ್ಯ ಮುಖ್ಯ ಪ್ರಶಸ್ತ ಧರ್ಮವು
ವೇದ್ಯ ವೇದಾಂತದಲಿ ಜಗಪಿತ
ಸಾಧ್ಯ ಭಕ್ತಿವಿರಕ್ತಿಜ್ಞಾನದಿ ದೇವ ಶ್ರೀಕೃಷ್ಣ || ೪೭೬ ||
ಭಾಯುತನೆ ಬೆಳ-ಕು ಸಹಿತನೆ ಹರಿ
ಭಾಯುತನು ಬೋ-ಧಾತ್ಮಜ್ಯೋತಿಯು
ಕಾಯುವುದು ಭಾ-ರತರ ಸಂತತ ದೇವ ಶ್ರೀಕೃಷ್ಣ |
ಆಯುರಾರೋಗ್ಯೈಸಿರಿಯ ಬಲು-
-ಪಾಯಭಕುತಿಯ ಮುಕುತಿ ಶಕುತಿಯ
ತಾಯ ತೆರದಲಿ ಕರುಣಿಪುದು ಸುಜನರ್ಗೆ ಸಂತತವು || ೪೭೭ ||
ಭಾಪ್ರದಾಯಕ ಭಾನುರೂಪನೆ
ಭಾಪ್ರದಾನಿಪ ಜ್ಞಾನದಾತನೆ
ಭಾಪ್ರದನು ಹರಿ ನಾರಯಣ ಸುರವ್ರಾತಪೂಜ್ಯನಹೋ |
ಸಾಂಪ್ರದಾಯಿಕ ಕರ್ಮಠರ ತಾ
ಭಾಪ್ರದಾನಿಸಿ ಜ್ಞಾನವೀಯುತ
ಸುಪ್ರಸನ್ನನೆ ಕೃಷ್ಣ ಜೀವನ್ಮುಕ್ತಿ ನೀಡಯ್ಯ || ೪೭೮ ||
ಆದಿತ್ಯವರ್ಣಸಂಶೋಭ್ಯೋ ನಾನಾನಾಮಾತ್ಮಕೋ ಹರಃ।
ಧಾತಾರ್ಚಿತಾದ್ಯಪಾದಶ್ಚ ಶಕ್ರಪೂಜಿತಪಾವನಃ॥೬೯॥(೪೮೩)
ಆದಿತ್ಯವರ್ಣಸಂಶೋಭ್ಯ ಹರಿ-
-ಯಾದಿತ್ಯ ರವಿಯಂಥ ಹೊನ್ನಿನ
ಕಾದಿರುವ ಬಣ್ಣದಲಿ ಶೋಭಿಪ ದೇವ ಶ್ರೀಕೃಷ್ಣ |
ಮಾಧವನೆ ಪೀತಾಂಬರನೆ ಹರಿ
ಪಾದಕೊಂದಿಪೆ ದೇವ ಬೊಮ್ಮನೆ
ಸಾಧಕರಿಗೀಯಯ್ಯ ಜೀವನ್ಮುಕ್ತಿಜ್ಞಾನವನು || ೪೭೯ ||
ನಾನಾನಾಮಾತ್ಮಕನೆ ಕೃಷ್ಣನೆ
ನಾನಾ ವಿಧದ ಹೆಸರಿರುವವನೆ
ಶ್ರೀನಾರಾಯಣನೆ ಕೇಶವ ವಾಸುದೇವ ಹರಿ |
ಶ್ರೀನಾಥನೆ ಪರಬ್ರಹ್ಮನೆ
ನಾನಾವತಾರಧಾರಿ ದೇವನೆ
ಮಾನ ಕಾಯೈ ಸುಜನ ಭಕುತರ ಜ್ಞಾನ ನೀಡಯ್ಯ || ೪೮೦ ||
ಹರನೆ ಶಂಕರರೂಪಿ ಕೃಷ್ಣನೆ
ಪರನೆ ರುದ್ರಸ್ವರೂಪಿ ಶ್ರೀಹರಿ
ಗುರುವೆ ದಕ್ಷಿಣಾಮೂರ್ತಿ ಪರಮೇಶ್ವರನೆ ಪರಬೊಮ್ಮ |
ಪರಶಿವನೆ ಪರಮಾತ್ಮ ಮಾಧವ
ಕರಿವರದ ಗೋವಿಂದ ಶ್ರೀಪತಿ
ಪರಮಮಂಗಲರೂಪ ಸರ್ವಾತ್ಮಕನೆ ನಾರಯಣ || ೪೮೧ ||
ಧಾತಾರ್ಚಿತಾದ್ಯಪಾದ ಕೃಷ್ಣನೆ
ಧಾತ ಬೊಮ್ಮನು ಪೂಜಿಸಿಹ ಪದ
ಹೇತು ಸರ್ವಕು ಪುಣ್ಯಚರಣಕೆ ಶರಣು ಶರಣೆಂಬೆ |
ಯಾತುಧಾನರ ವೈರಿ ವಿಷ್ಣುವೆ
ಪಾತು ಸಕಲರ ನಿನ್ನ ಭಕುತರ
ನೀತಿವಂತನೆ ಕಾಯೊ ಸುಜನರ ಮುಕುತಿಯೊದಗಿಸು ನೀ || ೪೮೨ ||
ಶಕ್ರಪೂಜಿತಪಾವನನೆ ಹರಿ
ಶಕ್ರ ಶತಕ್ರತು ಸುರಪಪೂಜ್ಯನೆ
ನಕ್ರಹರ ಪಾವನನೆ ಸಕಲರ ಪಾಪಹರ ಕೃಷ್ಣ |
ಶುಕ್ರಶಿಷ್ಯರ ವೈರಿ ಮಾಧವ-
-ನಕ್ರೂರಗೊಲಿದಿರುವ ಕೃಷ್ಣ ತ್ರಿ-
-ವಿಕ್ರಮನೆ ಸುರಪತಿಸುಪೂಜಿತ ಪಾದಪದ್ಮಯುತ || ೪೮೩ ||
ಯಜ್ಞಧರ್ಮಪ್ರತಿಷ್ಠಶ್ಚ ಯಜ್ಞಧರ್ಮಪ್ರವರ್ತಕಃ।
ಯಜ್ಞಧರ್ಮಸುಕೃಚ್ಚೈವ ಯಜ್ಞಾಗ್ನಿರ್ಯಜ್ಞಪೂರುಷಃ॥೭೦॥(೪೮೮)
ಯಜ್ಞಧರ್ಮಪ್ರತಿಷ್ಠನೆ ಹರಿ
ಯಜ್ಞಧರ್ಮದಿ ನೆಲೆಸಿರುವವನೆ
ಯಜ್ಞ ಸೇವಾ ಯಾಗ ಜಪ ಯೋಗಾದಿ ಸುಜ್ಞಾನ |
ಯಜ್ಞಧರ್ಮವು ತ್ಯಾಗ ಸೇವೆಯು
ಯಜ್ಞ ಜನತಾದೇವಸೇವೆಯು
ಯಜ್ಞಧರ್ಮದಿ ಸೃಷ್ಟಿ ನಿಂತಿದೆ ಯಜ್ಞಸ್ಥಿತ ಕೃಷ್ಣ || ೪೮೪ ||
ಯಜ್ಞಧರ್ಮಪ್ರವರ್ತಕನೆ ಹರಿ
ಸುಜ್ಞ ಸರ್ವಜ್ಞಾತ್ಮ ಕೃಷ್ಣನೆ
ಯಜ್ಞಧರ್ಮವ ಲೋಕದಲಿ ನಡೆಸುವನೆ ಪರಮಾತ್ಮ |
ವಿಜ್ಞರಾತ್ಮನು ಯಜ್ಞಪುರುಷನು
ಯಜ್ಞ ಚಾಗಾದಿಗಳ ಕಾರಣ-
-ನಜ್ಞರಿಗೆ ಸುಜ್ಞಾನ ಕರುಣಿಸಿ ಕಾಯೊ ಶ್ರೀಕೃಷ್ಣ ||೪೮೫ ||
ಯಜ್ಞಧರ್ಮಸುಕೃತ್ ಕೃಷ್ಣನೆ
ಯಜ್ಞಧರ್ಮವ ಚರಿಪ ವಿಹಿತದಿ
ಸುಜ್ಞಹೃದಯಗನಜ್ಞರೊಳಗಿಹ ವ್ಯಕ್ತನವ್ಯಕ್ತ |
ಅಜ್ಞಸುಜ್ಞರ ವಿಶೇಷಜ್ಞರ
ಯಜ್ಞರೂಪದಿ ನಡೆಸುವಾ ಸರ್-
-ವಜ್ಞಮೂರುತಿ ಕೃಷ್ಣ ಸಲಹೈ ನಮ್ಮನನವರತ || ೪೮೬ ||
ಯಜ್ಞಾಗ್ನಿಯೆ ವಾಸುದೇವನೆ
ಯಜ್ಞದಲಿ ಸುಡುವಂಥ ವಹ್ನಿಯೆ
ಯಜ್ಞಹವಿಯನು ಸುರರಿಗೊಯ್ಯುವ ಹವ್ಯವಾಹನನೆ |
ಯಜ್ಞದಗ್ನಿಯೆ ದೇವವದನನೆ
ಯಜ್ಞಕರ್ತರಿಗಿಷ್ಟವೀವನೆ
ಯಜ್ಞದನಲನೆ ಯಜ್ಞ ಪೂರೈಸುವ ಮಹಾಮಹಿಮ || ೪೮೭ ||
ಯಜ್ಞಪೂರುಷ ದೇವ ಕೃಷ್ಣನೆ
ಯಜ್ಞಪುರುಷನೆ ಯಜ್ಞಸ್ಥಿತ ಹರಿ
ಯಜ್ಞದೊಳಹೊರಗಿರುವ ಪರಮಾತ್ಮನೆ ಪರಬ್ರಹ್ಮ |
ಯಜ್ಞ ಸುರತರ್ಪಣವು ಸುರರಿಂ
ಯಜ್ಞದಿಂ ಮಳೆ ಬೆಳೆಯು ಲೋಕಕೆ
ಯಜ್ಞಪೂರುಷನಿಂದ ನೆಮ್ಮದಿ ಶಾಂತಿ ಸಂಪದವು || ೪೮೮ ||
ಬಹುಧಾಜಾಯಮಾನಶ್ಚಾಜಾಯಮಾನೋ ಜಗತ್ಪತಿಃ।
ಜಗದ್ಯೋನಿಶ್ಚ ಹ್ರೀಭರ್ತಾ ಶ್ರೀಭರ್ತಾ ದಿವಿಜೇಶ್ವರಃ॥೭೧॥(೪೯೫)
ಬಹುಧಾಜಾಯಮಾನನೇ ಹರಿ
ಬಹು ವಿಧಗಳವತಾರ ತಾಳುತ
ಬಹುವಿಧದಿ ಸೃಷ್ಟಿಯಲಿ ತೋರುತ ಜನಿಸುವನು ಕೃಷ್ಣ |
ಬಹುವದೇಕ ಬ್ರಹ್ಮತತ್ತ್ವವು
ಬಹು ತೆರದಿ ತೋರುವುದು ಮಿಥ್ಯೆಯು
ಬಹುವಿಧದ ಪೆಸರಿಂದ ರೂಪಗಳಿಂದ ತೋರ್ವ ಹರಿ || ೪೮೯ ||
ಅಜಾ-ಯಮಾನ ಶ್ರೀಕೃಷ್ಣನೀ-
-ನಜನು ಜನಿಸದ ಬೊಮ್ಮ ತತ್ತ್ವವು
ಪ್ರಜೆಯ ತೆರದಲಿ ಹುಸಿಯ ತೋರಿಕೆ ನೀನ-ಜರಮರಣ |
ಅಜೇಯನು ನೀ ಸದಾ ವಿಜಯಿಯು
ಪ್ರಜಾರಂಜಕ ಜನುಮರಹಿತನು
ಜನಿಸಿದಂತೆಯೆ ತೋರುತಿರುವವ ಶುದ್ಧ ಪರಬೊಮ್ಮ || ೪೯೦ ||
ಜಗತ್ಪತಿ ಶ್ರೀಕೃಷ್ಣದೇವನೆ
ಜಗದ ನಾಯಕನೊಡೆಯನಧಿಪತಿ
ಭಗವದವತಾರವದು ಪೂರ್ಣವು ಕೃಷ್ಣರೂಪವದು |
ಜಗದ ಪತಿ ಜಗನ್ನಾಥ ಕೇಶವ
ಜಗದೊಡೆಯ ಪರಬೊಮ್ಮನೀಶ್ವರ
ಮಗುವುತನದಲೆ ಲೀಲೆ ತೋರಿದನೀ ಮಹಾಮಹಿಮ || ೪೯೧ ||
ಜಗದ್ಯೋನಿಯೆ ವಾಸುದೇವನೆ
ಜಗದ ಮೂಲನೆ ಕಾರಣನೆ ಹರಿ
ಜಗದ ರೂಪದಿ ತೋರಿಕೊಂಡ ಪರಾತ್ಪರಾತ್ಮ ನಮೋ |
ಖಗವೆ ವಾಹನ ಮಗನು ಮನ್ಮಥ
ಸಿಗದು ತವ ಕೃಪೆ ಕಪಟಿಮಂದಿಗೆ
ಮುಗುಧ ಭಕುತಿಗೆ ಶುದ್ಧಜ್ಞಾನಕೆ ವಶನು ಶ್ರೀಕೃಷ್ಣ || ೪೯೨ ||
ಹ್ರೀಭರ್ತಾ ಲ-ಜ್ಜೆಯಧಿಪತಿ ಹರಿ
ಶೋಭನಾಂಗಿಯು ಲಜ್ಜಾದೇವಿಯು
ನೀ ಭಕುತವರದಾತ್ಮ ಹ್ರೀಪತಿ ಶ್ರೀಪತಿಯೆ ಪುರುಷ |
ನಾಭಿ ಗಗನವು ಪಾದ ಭೂಮಿಯು
ಹೇ ಭಿಷಗ್ವರ ಭವದ ರೋಗಕೆ
ಸಾಭಿಲಾಷರಿಗಿಷ್ಟದನು ನಿಷ್ಕಾಮರಿಗೆ ಮುಕುತಿ || ೪೯೩ ||
ಶ್ರೀಭರ್ತಾ ಸಿರಿವಲ್ಲಭನೆ ಹರಿ
ಶ್ರೀಭಗವತಿಯು ಲಕುಮಿದೇವಿಯು
ತಾ ಭಕುತೆಯನು ವರುಣಸುತೆಯನು ವರಿಸಿದನು ವಿಷ್ಣು |
ಶೋಭಿಸುವ ಸಿರಿಗೊಡತಿ ಮಾಧವಿ
ನೀ ಭಕುತರನು ಪೊರೆವ ಶ್ರೀಪತಿ
ಲಾಭಕಾರಣೆರಮಣ ನಾರಾಯಣನೆ ಶ್ರೀಕೃಷ್ಣ || ೪೯೪ ||
ದಿವಿಜೇಶ್ವರನೆ ವಾಸುದೇವನೆ
ದಿವಿಜರಧಿಪತಿ ನೀನೆ ಸುರಪತಿ
ದಿವಿಯು ಸ್ವರ್ಗವು ದಿವಿಜರಮರರು ಪುಣ್ಯಜೀವಿಗಳು |
ದಿವಿಜ ದಿವಿಯಲಿ ಜನಿಸಿದವ ಸುರ
ಭುವಿಯ ಸಕಲವ ಕಾವರಮರರು
ದಿವಿಜರೊಡೆಯನ ನಾಥ ಲಕ್ಷ್ಮೀನಾಥ ಶ್ರೀಹರಿಯು || ೪೯೫ ||
ಪವಿತ್ರಃ ಪಾಪಹಾರೀ ಚ ಫಲೀ ಪದ್ಮಮುಖಃ ಪುರಮ್।
ಅಮೃತವಾಗಮೃತವಪುರಮೃತಾತ್ಮಕರೂಪದಃ॥೭೨॥(೫೦೩)
ಪವಿತ್ರನೆ ಶ್ರೀಕೃಷ್ಣ ದೇವನೆ
ಪವನ ಪಾವನ ಪೂಯಮಾನನು
ಪವಿತ್ರಿತಗೊಳಿಸುವನು ಸಕಲರ ಭಕ್ತ ಸುಜನರನು |
ಪವಿ ಪುನಾತಿಯು ಪಾವಕನು ತಾ
ಪವಿಯ ತ್ರಾಣನು ರಕ್ಷಕನು ಹರಿ
ಪವಿತ್ರನು ಶುಚಿ ಶುದ್ಧ ಪುಣ್ಯನು ದೇವ ಪರಬೊಮ್ಮ || ೪೯೬ ||
ಪಾಪಹಾರೀ ಪಾಪನಾಶಕ
ಪಾಪಗಳನಪಹರಿಸು ಶ್ರೀಹರಿ
ಪಾಪತಾಪಹರ ಪ್ರತಾಪವು ನಿನ್ನಲಿಹುದಯ್ಯ |
ಕೋಪ ಬಿಡು ಬಡಪಾಯಿಯಲಿ ನೀ
ಶಾಪ ತಡೆ ನಿಜಭಕುತರಲಿ ಹರಿ
ಹೇ ಪರಾತ್ಮನೆ ವಾಸುದೇವನೆ ದುರಿತಹರ ಹರಿಯೆ || ೪೯೭ ||
ಫಲೀ ಫಲವುಳ್ಳವನೆ ಕೃಷ್ಣನು
ಫಲಸ್ವರೂಪಿಯು ಫಲಪ್ರದಾತೃವು
ಫಲದ ನಿಧಿ ಕರ್ಮಗಳ ಸಕಲರ ಸರ್ವಕಾಲದಲಿ |
ಪಾಲಿಸುವ ಪರಮೇಶ ಫಲದನು
ಕಾಲ ಕಾಲಕೆ ಫಲವನೀವನು
ಕಾಲನಿರ್ಣಯಿಸುವನು ಪುಣ್ಯಕು ಪಾಪಫಲಗಳಿಗೂ || ೪೯೮ ||
ಪದ್ಮಮುಖ ಶ್ರೀಕೃಷ್ಣದೇವನೆ
ಪದ್ಮ ತಾವರೆಯಂತೆ ಸುಂದರ
ಪದ್ಮವದನನೆ ಸದ್ಮ ವೈಕುಂಠದಲಿ ಶ್ರೀಹರಿಯೆ |
ಛದ್ಮವೇಷದಿ ಸೃಷ್ಟಿ ತೋರ್ವನೆ
ಪದ್ಮಸುಂದರ ಜಲಪ್ರಫುಲ್ಲಿತ
ಸದ್ಮ ನಿನ್ನದು ನಾವು ನಿನ್ನವರೆಂಬುದನು ತಿಳುಹು || ೪೯೯ ||
ಪುರವೆ ದೇಹವೆ ಕೃಷ್ಣದೇವನು
ಪುರವು ಪ್ರೀತಿಗೆ ಯೋಗ್ಯವಹುದಿದು
ಪುರವು ತುಂಬಿರುವುದಿದು ಪುರುಷೋತ್ತಮನ ತತ್ತ್ವದಲಿ |
ಪರಮ ಪುರುಷನು ಬೊಮ್ಮನಾತ್ಮನು
ಪುರದ ಹೊರಗೊಳಗಿಹನು ಸಂತತ-
-ವಿರದ ಸ್ಥಾನವದಿಲ್ಲ ಪರಬೊಮ್ಮಾತ್ಮ ನಾವಹುದು || ೫೦೦ ||
ಅಮೃತವಾಕ್ ಶ್ರೀಕೃಷ್ಣದೇವನು
ಸ್ವಮೃತವಾಣಿಯು ಜಗದ್ಗುರುಕ್ತಿಯ-
-ದಮೃತವಚನವು ಗೀತೆಯುಪದೇಶಿಸಿದ ಕೃಷ್ಣನದು |
ಅಮೃತ ಮೃತಿಯಿರದಂಥ ಶಾಶ್ವತ-
-ವಮೃತವಮರವು ಕೃಷ್ಣಬೋಧನೆ-
-ಯಮೃತರಸಧಾರೆಯಲಿ ಮಿಂದು ಪುನೀತರಾಗೋಣ || ೫೦೧ ||
ಅಮೃತವಪು ಹರಿ ವಾಸುದೇವನೆ
ವಿಮೃತ ಮರಣಾತೀತ ದಿವ್ಯವ-
-ದಮೃತಕಾಯವು ಕೃಷ್ಣ ನಿನ್ನದು ದೈವಿಕವು ತನುವು |
ಅಮೃತ ಮೃತಿವಿರಹಿತವು ವಿಮೃತವು
ಸ್ವಮೃತ ಸುಂದರವಮೃತದೇಹವ-
-ದಮೃತತತ್ತ್ವಕೆ ನಮ್ಮನೊಯ್ಯುವ ಗುರುವೆ ಶ್ರೀಕೃಷ್ಣ || ೫೦೨ ||
ಅಮೃತಾತ್ಮಕರೂಪದನೆ ಹರಿ-
-ಯಮೃತಾತ್ಮಸ್ವರೂಪಬೋಧಕ-
-ನಮೃತಾತ್ಮಕರೂಪದರ್ಶಕ ಜಗದ್ಗುರು ಕೃಷ್ಣ |
ಅಮೃತವಾತ್ಮವು ಬ್ರಹ್ಮವದುವೇ
ವಿಮೃತತತ್ತ್ವವು ನಮ್ಮ ಮೂಲವು
ಸ್ವಮೃತರಿಹೆ ನಾವ್ ದೇಹಮನಗಳ ಮೀರಿರುವ ತತ್ತ್ವ || ೫೦೩ ||
ಸುಧಾಮ್ಬುಧಿಸ್ಸುಧೀಶಶ್ಚ ವಸುಧಾಧಿಪತಿಸ್ಸುಧೀಃ।
ಗಙ್ಗಾಚರಣಸುದ್ವನ್ದ್ವೋ ಗಣ್ಡಕೀಸ್ಥಶಿಲಾಸ್ಥಿತಃ॥೭೩॥(೫೦೯)
ಸುಧಾಂಬುಧಿಯೆ ವಾಸುದೇವನೆ
ಸುಧೆಯ ಸಾಗರನಮೃತ ತವನಿಧಿ
ವಿಧಿಯ ಜನಕನೆ ಪದುಮನಾಭನೆ ಹರಿಯೆ ಕೇಶವನೆ |
ಸುಧೆಯು ಸುಂದರತರದಿ ಧರಿಪುದು
ಸುಧೆಯದಮರತ್ವವನು ಕೊಡುವುದು
ಭೋಧವಾತ್ಮದ ಸುಧೆಯು ನಾರಾಯಣನ ಪರಬೊಮ್ಮ || ೫೦೪ ||
ಸುಧೀಶನೆ ಶ್ರೀಕೃಷ್ಣದೇವನೆ
ಸು-ಧೀಶಕ್ತಿಯ ಮೂಲಕಾರಣ
ಸುಧೀಶನು ತಾನುರುತರದ ಬುದ್ಧಿಯ ಪತೀಶ್ವರನು |
ಸುಧೀರನು ಹರಿ ಸುಧೆಯ ಪತಿ ತಾ
ವಿಧೀಶನು ಪರಬೊಮ್ಮ ಮಾಧವ
ಸದಾಶಿವಪ್ರಿಯ ದಿತಿಜವೈರಿಯೆ ಹೇ ಮಹಾವಿಷ್ಣೋ || ೫೦೫ ||
ವಸುಧಾಧಿಪತಿಯೆ ಕೃಷ್ಣನೆ
ವಸುಧೆ ಭೂಮಿಯು ಭೂಪತಿಯು ಹರಿ
ವಸುವ ಸಂಪದವನ್ನು ಧರಿಸಿಹ ಧರಣಿರಮಣ ಹರೇ |
ವಸುವು ಸಿರಿ ಸಿರಿಪತಿಯು ವಿಷ್ಣುವು
ವಸುಧೆ ಶ್ರೀಧರೆ ಪೃಥ್ವಿಪತಿ ಹರಿ-
-ಯಸುವ ಕಾಯೈ ಜ್ಞಾನಭಕುತಿವಿರಾಗ ನೀಡುತಲಿ || ೫೦೬ ||
ಸುಧೀ ಸುಂದರ ಬುದ್ಧಿಶಾಲಿಯೆ
ಸು-ಧೀ ಪಂಡಿತ ತ್ರಿಕಾಲಜ್ಞನೆ
ಸುಧೀ ಸರ್ವಜ್ಞಾತ್ಮ ಬೊಮ್ಮನೆ ದೇವ ಶ್ರೀಕೃಷ್ಣ |
ಪದಾಂಬುಜಕೆರಗುತಲಿ ಬೇಡುವೆ
ಮದಾಪಹ ಮುದದಾಯಕನೆ ಹರಿ
ಪ್ರದಾನಿಸು ಬ್ರಹ್ಮಾತ್ಮನಿಷ್ಠೆಯನವಗತಿಯ ಗತಿಯ || ೫೦೭ ||
ಗಂಗಾಚರಣಸುದ್ವಂದ್ವ ಹರಿ
ಗಂಗಾಜನಕ ಪರಮಪಾವನ
ಗಂಗೆಯುದಿಸಿತು ನಿನ್ನ ಪದದ್ವಯದಿಂದ ನಾರಯಣ |
ಭಂಗವಾಗದು ಲಿಂಗದೇಹವು
ಭಂಗವಾಗದವಿದ್ಯೆಯಿಂದಲಿ
ಗಂಗಾಪಿತನೆ ಕಳೆದವಿದ್ಯೆಯ ಮುಕುತಿ ಸದ್ಯದಲೇ || ೫೦೮ ||
ಗಂಡಕೀಸ್ಥ-ಶಿಲಾಸ್ಥಿತನೆ ಹರಿ
ಗಂಡಕೀಶಿಲೆ ಶಾಲಗ್ರಾಮವು
ಗಂಡಕೀನದಿಯಲ್ಲಿನೀ ಶಿಲೆ ನಿನ್ನ ಸಂನಿಧಿಯು |
ಗಂಡಕಿಯು ನೇಪಾಳದಲ್ಲಿದೆ
ಗಂಡಕಿಯು ವರಪಾವನಾತ್ಮಕಿ
ಚಂಡಪಾಪಹರಾತ್ಮಕವು ತವ ಶಿಲೆಯು ನದಿಯೊಳಗೆ || ೫೦೯ ||
ಶಾಲಗ್ರಾವಶಿಲಾಮೂರ್ತಿಸ್ಸಾಲಿಗ್ರಾಮಪ್ರಪೂಜಿತಃ।
ಉಡುಪೀಶಸ್ಸುಮಧ್ವೇಶೋ ಗುರುವಾತಪುರೀಶ್ವರಃ॥೭೪॥(೫೧೪)
ಶಾಲಗ್ರಾವಶಿಲಾಮೂರ್ತಿಯೆ
ಸಾಲಿಗ್ರಾಮಶಿಲೆಯೆ ಕೃಷ್ಣನು
ಮಾಲಿಕನು ಶಿಲೆಯಲ್ಲು ಮರಳಲು ಮಣ್ಣಲಿರುತಿಹನು |
ಮೂಲಬಲ ಸರ್ವರಿಗು ಲೋಕಕೆ
ಬಾಲಕೃಷ್ಣನು ಸರ್ವಪೂಜ್ಯನು
ಭಾಲಲೋಚನಪ್ರೀಯ ರಕ್ಷಿಸು ನಮ್ಮನನವರತ || ೫೧೦ ||
ಸಾಲಿಗ್ರಾಮಪ್ರಪೂಜಿತ ಹರಿ
ಸಾಲಿಗ್ರಾಮಶಿಲೆಯ ರೂಪದಿ
ಸಾಲಿಗ್ರಾಮದಿ ಕೃಷ್ಣಸಂನಿಧಿಯನ್ನು ಪೂಜಿಪರು |
ಪಾಲಿಸಲು ಚೆನ್ನಾಗಿ ಪೂಜಿತ
ಸೋಲಿಸದೆ ರಕ್ಷಿಸಲು ನಮ್ಮನು
ಗಾಳಿ ನೀರಾಹಾರ ಶುದ್ಧಿಗಳೀಯೊ ಪರಮಾತ್ಮ || ೫೧೧ ||
ಉಡುಪೀಶನೆ ಕೃಷ್ಣದೇವನೆ-
ಯುಡುಪತಿಯ ಚಂದಿರನ ತಪದಿಳೆ-
-ಯುಡುಪಿಯಾಯಿತು ಚಂದ್ರಮೌಳೀಶ್ವರನ ವರದಿಂದ |
ಉಡುಪಿಯಲಿ ಮಧ್ವರಿಂ ಸ್ಥಾಪಿತ-
-ನುಡುಪಿಯೀಶನು ಬಾಲಕೃಷ್ಣನು
ಪಡುಗಡಲ ತೀರದಲಿ ನೆಲೆಸುತ ಸಕಲರನು ಪೊರೆವ || ೫೧೨ ||
ಸುಮಧ್ವೇಶನೆ ಮಧ್ವರೊಡೆಯನೆ
ಸುಮನಸರ ಕಾಯುವನೆ ಕೃಷ್ಣನೆ-
-ಯಮಲಗುಣಧಾಮನೆ ಪರಾತ್ಪರ ರುಕ್ಮಿಣೀರಮಣ |
ಅಮಿತ ಖ್ಯಾತಿ ಪೂರ್ಣಪ್ರಜ್ಞರು
ಸುಮನದಿಂ ಜನರುನ್ನತಿಗೆ ದ್ವೈತವ
ವಿಮಲ ಭಕುತಿಯ ತಿಳುಹಿದರು ಮಧ್ವೇಶ ವಿಠ್ಠಲನ || ೫೧೩ ||
ಗುರುವಾತಪುರೀಶ್ವರನೆ ಹರಿ
ಗುರುವಾಯುಪುರದಲ್ಲಿ ನೆಲೆಸಿಹ
ಗುರು ಬೃಹಸ್ಪತಿದೇವ ಕೃಷ್ಣನ ಸಂನಿಧಿಯ ಕ್ಷೇತ್ರ |
ಗುರುವು ಲೋಕಕೆ ಗೀತೆ ಪೇಳಿದ
ಗುರುವು ಸುರರಿಗೆ ತಾ ಬೃಹಸ್ಪತಿ
ಗುರು-ವಾಯುಗಳ ಪುರದಿ ಸ್ಥಾಪಿತ ದೇವ ಶ್ರೀಕೃಷ್ಣ || ೫೧೪ ||
ಪೆರುವಾಯಿಪುರಸ್ಥಸ್ಸನ್ತಾನಗೋಪಾಲನಾಮಕಃ।
ಬನಾರಿಪುರವಾಸೀ ಚ ಗೋಪಾಲಕೃಷ್ಣನಾಮಕಃ॥೭೫॥(೫೧೮)
ಪೆರುವಾಯಿಪುರಸ್ಥನೆ ಹರಿ
ಗುರುವೆ ಮೂರ್ಲೋಕಕ್ಕೆ ಕೃಷ್ಣನೆ-
-ಯಿರುವೆ ಗೋಪಾಲಸ್ವರೂಪದಿ ನೀಡಿ ಸಂತಾನ |
ಕರುವ ತೆರದಲಿ ಕಾದೆಯಡಿವಾಯ್-
-ಲಿರುವ ಹವ್ಯಕ ಮನೆತನವ ನೀ
ಬರುವ ತೊಂದರೆ ನೀಗಿ ಸಂತತಿಯಿತ್ತು ಕರುಣಿಸಿದೆ || ೫೧೫ ||
ಸಂತಾನಗೋಪಾ-ಲನಾಮಕ ಹರಿ
ಚಿಂತೆ ಕಳೆದಡ್ವಾಯಿವಿಪ್ರರ
ಸಂತತಿಯ ನೀನಿತ್ತು ರಕ್ಷಿಸಿದ್ಯಲ್ಲೊ ಹೇ ಕೃಷ್ಣ |
ಮುಂದೆ ಬರುವಂತಿಪ್ಪ ಸಂಕಟ
ನಿಂದು ಕಳೆಯುತ ಸುಖ ಸಮೃದ್ಧಿಯ
ಬಂದು ನೀನೀಯುತಲಿ ರಕ್ಷಿಸು ಸರ್ವರನವರತ || ೫೧೬ ||
ಬನಾರಿಪುರವಾಸಿ ಕೃಷ್ಣನೆ
ವಿನಾ ನಿನ್ನನು ತೃಣವದಲುಗದು
ಸನಾತನ ಸಂತಾನವೀಯುತ ಕಾದೆ ಭಕುತರನು |
ವಿನೂತನ ಮಂದಿರವ ಕಟ್ಟಿಸಿ
ಜನಾರ್ದನನಾರ್ತರನು ಪೊರೆಯುತ
ಸುನಾಭನೆ ಪ-ದ್ಮನಾಭನೆ ಹರಿ ಕಾಯೊ ಸಂತತವು || ೫೧೭ ||
ಗೋಪಾಲಕೃ-ಷ್ಣ-ನಾಮಕ ಹರಿ
ನೀ ಪಾಲಿಸಿಹೆ ಕನ್ಯಾನ ಸನಿಹದ
ಕಾಪಾಡಿರುವೆ ಬನಾರಿಮಂದಿರದಲ್ಲಿ ನೆಲೆಯಾಗಿ |
ಗೋಪ ಗೋವ್ಗಳ ಪಾಲಿಸುತ ನೀ
ಗೋಪ ಭೂಪ ಸುಜ್ಞಾನಪತಿ ಹರಿ
ಗೋಪನಿಂದ್ರಿಯಪತಿ ಹೃಷೀಕೇಶನೆ ಪರಾತ್ಪರನೆ || ೫೧೮ ||
ವಿಠ್ಠಲಪುರಸಂಸ್ಥಶ್ಚ ಪಾಣ್ಡುರಙ್ಗಸುವಿಠ್ಠಲಃ।
ತಿರುಪತ್ಯಾಖ್ಯಕ್ಷೇತ್ರಸ್ಥೋ ವೇಙ್ಕಟಾಖ್ಯೋ ಮಹಾಧನಃ॥೭೬॥(೫೨೩)
ವಿಠ್ಠಲಪುರಸಂಸ್ಥ ವಿಠಲನೆ
ವಿಠ್ಠಲನೆ ಮಂದಿರದಿ ಸ್ಥಾಪಿತ-
-ನಿಟ್ಟಿಗೆಯ ಮೇಲಿರುತ ಭಕುತನ ಕಾದೆ ತ್ರೀಭಂಗಿ |
ಇಟ್ಟ ಪ್ರೀತಿಯ ಬಿಡದೆ ಪಿತರನು
ಬಿಟ್ಟಗಲದೆಯೆ ಸೇವಿಸುತ್ತಿಹ
ಪುಟ್ಟ ಪಂಢರಿಯನ್ನು ಕಾದೆಯ ಪಾಂಡುರಂಗ ಹರೇ || ೫೧೯ ||
ಪಾಂಡುರಂಗಸುವಿಠ್ಠಲನೆ ಹರಿ
ಪಂಢರಿಯ ಕಾಯ್ದಂಥ ಕೃಷ್ಣನೆ
ಪಾಂಡು ಬಿಳಿರಂಗಿನ ಸುವಿಠ್ಠಲ ಕಾಯೊ ಕರುಣಾಳು |
ಪುಂಡರೀಕಾಕ್ಷನೆ ಮಹಾತ್ಮನೆ
ಪಂಢರಿಯ ಪಿತೃಭಕ್ತಿಗೊಲಿದಿಹೆ
ಪಾಂಡುರಂಗನೆ ವಿಠ್ಠಲನೆ ಪರಮಾತ್ಮ ಶ್ರೀಕೃಷ್ಣ || ೫೨೦ ||
ತಿರುಪತ್ಯಾಖ್ಯಕ್ಷೇತ್ರಸ್ಥ ಹರಿ
ತಿರುಮಲೆಯ ಮೇಲಿರುವ ವೇಂಕಟ
ತಿರುಪತಿಯ ತಿಮ್ಮಪ್ಪ ಶೇಷಿಯೆ ತಿರುಮಲೇಶ್ವರನೆ |
ಉರುತರದ ಕಲಿಯುಗದ ಪುಣ್ಯವು
ಪರಮಮಂಗಲ ಶ್ರೀನಿವಾಸನ
ವರದೆ ಪದ್ಮಾವತೀಸಹಿತದ ಕ್ಷೇತ್ರವಾಸಿ ಹರೇ || ೫೨೧ ||
ವೇಂಕಟಾಖ್ಯನೆ ಮಹಾವಿಷ್ಣುವೆ
ಸಂಕಟವ ಪರಿಹರಿಪ ಕೃಷ್ಣನೆ
ಕಿಂಕರರ ಕಾಯುತಿಹ ಕೇಶವ ಕಲಿವರದ ಹರಿಯೆ |
ಮಂಕರನು ಪಂಡಿತರ ಮಾಡುವ
ಮೂಕರನು ವಾಗ್ಮಿಗಳ ಮಾಡುವ
ಶಂಕರನ ಸನ್ಮಿತ್ರನಳಿಯನಾಕಾಶರಾಯನಿಗೆ || ೫೨೨ ||
ಮಹಾಧನ ತಿಮ್ಮಪ್ಪ ವೇಂಕಟ
ಮಹಾಮಹಿಮನೆ ಶ್ರೀನಿವಾಸನೆ
ಮಹಾಧನಿಕನೆ ಕಲಿಯುಗದಿ ಸಾಲವನು ತೀರಿಸುತ |
ಮಹಾನಾಟಕ ಸೂತ್ರಧಾರಿಯೆ
ಮಹಾದೇವಪ್ರೀಯ ಕೃಷ್ಣನೆ
ಮಹಾಪಾಪವಿನಾಶಕರ ಸಿರಿಲೋಲ ಶ್ರೀಹರಿಯೆ || ೫೨೩ ||
ಪಣ್ಢರಾಪುರದೇಶಸ್ಥಃ ಪಾಣ್ಡುರಙ್ಗಮಹಾಪ್ರಭುಃ।
ನವನಗರದೇಶೇಶಶ್ಶ್ರೀರಾಮಚನ್ದ್ರರೂಪವಾನ್॥೭೭॥(೫೨೭)
ಪಂಢರಾಪುರದೇಶಸ್ಥ ಹರಿ
ಪಂಢರಾಪುರದೊಳಗೆ ನೆಲೆಸಿಹ
ಪಂಡರಿಗೆ ತಾನೊಲಿದು ನಿಂತ ತ್ರಿಭಂಗಿ ಶ್ರೀಕೃಷ್ಣ |
ಪಂಢರಾಪುರ ಮಹಾರಾಷ್ಟ್ರದಿ
ಕಂಡೆ ಕರ್ಣಾಟಕದಲುತ್ತರ
ದಂಡೆಯಾಚೆಗೆ ಪಾಂಡುರಂಗನ ಸಂನಿಧಾನವನು || ೫೨೪ ||
ಪಾಂಡುರಂಗಮಹಾಪ್ರಭುವೆ ಹರಿ
ಪಾಂಡು ಬಿಳಿಬಣ್ಣದಲಿ ರಂಗಲಿ
ಪಾಂಡವಾಪ್ತನು ಲೋಕದೊಡೆಯನು ಬೆಳಗುತಿಹನಿಲ್ಲಿ |
ಪಂಡರಾಪುರ ದಿವ್ಯಕ್ಷೇತ್ರದಿ
ಪಿಂಡ-ಬ್ರಹ್ಮಾಂಡಾಧಿಪತಿ ವಿಭು
ಕಂಡುಬರುವನು ಕಾಯಲೆಮ್ಮನು ನಿತ್ಯ ಶ್ರೀಕೃಷ್ಣ || ೫೨೫ ||
ನವನಗರದೇಶೇಶ ರಾಮನು
ನವವು ಹೊಸನಗರಾಖ್ಯ ಪುರವದು
ಭವದ ತಾರಕ ರಾಮಚಂದ್ರನ ರೂಪದಲಿ ಕೃಷ್ಣ |
ಶಿವನ ಸಹಿತಲಿ ರಾಘವೇಶ್ವರ
ನವಯತಿಗಳಿಂ ಪೂಜೆ ಪಡೆಯುವ
ಹವನಮುಖ್ಯರ ಗುರುಸಹಿತ ಶ್ರೀಕೃಷ್ಣಗಭಿನಮಿಪೆ || ೫೨೬ ||
ಶ್ರೀರಾಮಚಂದ್ರರೂಪವಾನ್ ಹರಿ
ಶ್ರೀರಾಮಚಂದ್ರನ ರೂಪ ಧರಿಸಿಹ
ಶ್ರೀರಾಮಸತಿ ಸೀತೆ ಲಕುಮಿಯು ರಾಮ ಚಂದ್ರನಿಭ |
ಶ್ರೀರಾಮ ರಂಜಿಸುತಿರುವ ಲೋಕವ
ಶ್ರೀರಾಮ ಕೃಷ್ಣನೆ ಹರಿಯೆ ವಿಷ್ಣುವೆ
ಶ್ರೀರಾಮ ಮಾಧವ ಪಾಲಿಸೀ ಜಗ ಸಕಲವನು ಸತತ || ೫೨೭ ||
ಗೋವರ್ಧನಪುರೀಶಶ್ಚ ಜಗನ್ನಾಥೋಽಮರಪ್ರಭುಃ।
ನಾನಾಪುಣ್ಯಕ್ಷೇತ್ರವಾಸಸ್ತೀರ್ಥಾವಾಸೋಽತಿಪಾವನಃ॥೭೮॥(೫೩೩)
ಗೋವರ್ಧನಪುರೀಶನೆ ಹರಿ
ಗೋವರ್ಧನಪುರಿಯ ನಾಥನೆ
ಗೋವರ್ಧನ ಕೀರುತಿಯೆ ಹರಿ ಕೃಷ್ಣಮೂರುತಿಯೆ |
ಗೋವ ಕಾವನೆ ಭಾವಕೊಲಿವನೆ
ನೋವ ಕಳೆವನೆ ಸಾವ ಗೆಲಿದನೆ
ಬೇವ ಮನಕಾನಂದವೀಯುತ ಕಾವ ಪರಮಾತ್ಮ || ೫೨೮ ||
ಜಗನ್ನಾಥನೆ ಕೃಷ್ಣದೇವನೆ
ಜಗಕೆ ನಾಯಕ ಪರಮ ಸಾತ್ತ್ವಿಕ
ಭಗವತಿಯ ಭಗವಾನ ಭಾರತಜನ್ಮ ಭಗವಂತ |
ಸೋಗು ಜನಗಳ ಮೆಚ್ಚದಿರುವನೆ
ಭಾಗವತರಿಗೆ ತಾನೊಲಿಯುವನೆ
ವೇಗದಿಂ ಮುಕುತಿಯನು ನೀಡುವ ಭಕುತಬಂಧು ಹರಿ || ೫೨೯ ||
ಅಮರಪ್ರಭು ಮರಣರಹಿತನೆ
ಸಮರದಲಿ ಧರ್ಮಕ್ಕೆ ಜಯದನೆ
ಸುಮನಸರ ಕಾಯುವನೆ ವಿಷ್ಣುವೆ ದೇವ ನಾರಯಣ |
ಕುಮತಿಗಳ ಶಿಕ್ಷಕನೆ ನರಹರಿ
ಸುಮತಿಗಳ ರಕ್ಷಕನೆ ಶ್ರೀಹರಿ
ಸುಮನದಿಂದಲೆ ಭಜಿಸುವರ ಕಾಯಯ್ಯ ಕರುಣಾಳು || ೫೩೦ ||
ನಾನಾಪುಣ್ಯಕ್ಷೇತ್ರವಾಸನೆ
ಸಾನುರಾಗದಿ ಭಕುತಗೊಲಿವನೆ
ಭಾನುತೇಜನೆ ಜ್ಞಾನಭಾಸ್ಕರ ಕೃಷ್ಣ ಶ್ರೀಕೃಷ್ಣ |
ನಾನು ನನ್ನವರೆಂಬ ಭಾವವ
ತಾನು ಸುಟ್ಟೊದಗಿಪನು ಜ್ಞಾನವ
ಮಾನುಷಾಕೃತಿ ದೇವ ಪರಬೊಮ್ಮನೆ ಪರಾತ್ಪರನೆ || ೫೩೧ ||
ತೀರ್ಥಾವಾಸನೆ ಕೃಷ್ಣದೇವನೆ
ತೀರ್ಥಕ್ಷೇತ್ರಗಳಲ್ಲಿ ನೆಲೆಸಿಹ
ಪಾರ್ಥಸಾರಥಿ ಕೃಷ್ಣ ಪುಣ್ಯದ ಪಾಪನಾಶಕರ |
ಸಾರ್ಥಕದ ಬದುಕೀವೆ ಭಕುತರ
ಕರ್ತ ಭೋಕ್ತನೆ ನೀನು ಸುಮ್ಮನೆ
ಮರ್ತ್ಯ ತಾ ನೆಪಮಾತ್ರ ಸರ್ವಕು ಮೂಲಕಾರಣ ನೀ || ೫೩೨ ||
ಅತಿಪಾವನನೆ ದೇವ ಕೃಷ್ಣನೆ
ಖತಿಯ ಕಳೆಯುತಲಭಯ ನೀಡುತ
ಮತಿಯ ಶುದ್ಧಿಯ ಗೈಯಲೆನ್ನುತ ಹರಿಯ ಬೇಡುವೆನು |
ಪತಿತಪಾವನ ಸಕಲವಂದಿತ
ಮತಿಗೆ ನಿಲುಕದ ಬೊಮ್ಮತತ್ತ್ವವೆ
ಪತಿಯೆ ಲೋಕಕೆ ಸರ್ವರಾತ್ಮನೆ ಜೀವಬಂಧು ಹರಿ || ೫೩೩ ||
ಮಹಾಶಕ್ತಿರ್ಮಹಾತೃಪ್ತಿರ್ಮಹಾಭುಕ್ತಿರ್ಮಹಾತಪಾಃ।
ಮಹಾನನ್ದೋ ದೀನಬನ್ಧುರ್ಬನ್ಧಮೋಕ್ಷಪ್ರದಾಯಕಃ॥೭೯॥(೫೪೦)
ಮಹಾಶಕ್ತಿಯೆ ಮಹಾನ್ ಬಲಯುತ
ಮಹಾನ್ ಸಾಮರ್ಥ್ಯದಿಂ ಸಹಿತನು
ಮಹಾತ್ಮನು ಶ್ರೀಕೃಷ್ಣ ಬ್ರಹ್ಮಜ್ಞಾನಿಯವತಾರ |
ಮಹಾಬಲಯುತ ಶಕ್ತಿ ನಿನ್ನದೆ
ಮಹಾಬಲಸಖ ಯುಕ್ತಿ ನಿನ್ನದೆ
ಮಹಾನಂದಸ್ವರೂಪ ಮಾಧವ ಸಚ್ಚಿದಾನಂದ || ೫೩೪ ||
ಮಹಾತೃಪ್ತಿಯೆ ಸರ್ವತೃಪ್ತಿಯೆ
ಮಹಾಮಹಿಮನೆ ಭೂಮತೃಪ್ತನೆ
ಮಹಾಲೀಲನೆ ಸಕಲರಲಿರುವ ತೃಪ್ತಿ ಶ್ರೀಕೃಷ್ಣ |
ಮಹಾಧೀಶನೆ ತೃಪ್ತಿನಿಧಿ ಹರಿ
ಮಹಾತ್ಮನೆ ತೃಪ್ತಿಪ್ರದನೆ ಹರಿ
ಮಹಾನಿಧಿ ತೃಪ್ತಿಗಳ ಮೂಲನೆ ಯಶೋದಾನಂದ || ೫೩೫ ||
ಮಹಾಭುಕ್ತಿಯೆ ಸರ್ವಭಕ್ಷಕ
ಮಹಾಗ್ರಾಸನೆಯೆಲ್ಲ ನುಂಗುವ
ಮಹಾಭುಕ್ತನೆ ನಿಖಿಲಜಗವನು ಧರಿಸಿರುವ ಕೃಷ್ಣ |
ಮಹಾಬ್ರಹ್ಮಾಂ-ಡ ಭಾಂಡೋದರ
ಮಹಾನಾರಾಯಣನೆ ಶ್ರೀಹರಿ
ಮಹಾತ್ಮಾತ್ಮನೆ ಸರ್ವರಾತ್ಮನೆ ದೇವ ಪರಬೊಮ್ಮ || ೫೩೬ ||
ಮಹಾತಪಾಃ ಕಡುತಪಸ್ವಿಯೆ
ಮಹಾಕಠೋ-ರ ತಪವ ಗೈವನೆ
ಮಹಾಸೃಷ್ಟಿಯ ಸ್ಥಿತಿಯ ಪ್ರಳಯವ ತಪದ ಬಲದಿಂದ |
ಸುಹಾರನೆ ಸುಂದರನೆ ಕೃಷ್ಣನೆ
ವಿಹಾರನೆ ಯುಮುನಾ ಕಿನಾರೆಯ
ಪ್ರಹಾರಕ ದುಷ್ಟರಿಗೆ ಸುಜನರ ಪೊರೆವ ವರ ನೀಡಿ || ೫೩೭ ||
ಮಹಾನಂದನೆ ಪರಾನಂದನೆ
ಮಹಾಬಂಧುವೆ ಸರ್ವಬಂಧುವೆ
ಮಹಾಸಿಂಧುವೆ ಬಿಂದುನಿಧಿ ಹೇ ಸಚ್ಚಿದಾನಂದ |
ಮಹಾಕಾರುಣಿ ಚಿತ್ಸುಖಾತ್ಮನೆ
ಮಹಾಸಿದ್ಧನೆ ಸಿದ್ಧರಾಜನೆ
ಮಹಾಮತಿ ಸರ್ವಜ್ಞ ಪರಮಾನಂದ ಶ್ರೀಕೃಷ್ಣ || ೫೩೮ ||
ದೀನಬಂಧುವೆ ಕೃಪಾಸಿಂಧುವೆ
ದೀನರನು ರಕ್ಷಿಸುವ ದೇವನೆ
ದೀನಪಾಲಕ ವಾಸುದೇವನೆ ರುಕ್ಮಿಣೀಕೃಷ್ಣ |
ಮಾನ ಕಾವನೆ ಭಕ್ತರನು ತಾ
ಹೀನರನು ದಂಡಿಸುವ ಕೇಶವ
ಸಾನುರಾಗದಿ ಭಜಿಪೆ ಪರಬೊಮ್ಮನ ಪರಾತ್ಪರನ || ೫೩೯ ||
ಬಂಧಮೋಕ್ಷ-ಪ್ರದಾಯಕ ಹರಿ
ಬಂಧನವ ಕಳೆದಿಕ್ಕಿ ಮೋಕ್ಷವ
ನಿಂದು ಕರುಣಿಪನಾತ್ಮವಿಜ್ಞಾನವನು ಬೋಧಿಸುತ |
ಮಂದಮತಿ ಬಂಧಿತನು ಮಾಯೆಲಿ
ಬಿಂದುವನು ಸಿಂಧುವನೆ ಗೈಯಲು
ಚಂದದಿಂದಲಿ ಸುಂದರಾಂಗನ ಹರಿಯ ಭಜಿಸೋಣ || ೫೪೦ ||
ವೇದನಿಧಿಶ್ಚ ವೇದೇಶೋ ವೇದವೇದಾಙ್ಗಪಾರಗಃ।
ವೇದಾನ್ತಪ್ರತಿಪಾದ್ಯಶ್ಚ ವೇದವೇದ್ಯಶ್ಚ ವೇದವಿತ್॥೮೦॥(೫೪೬)
ವೇದನಿಧಿ ಶ್ರುತಿಗಳ ಸ್ವರೂಪನೆ
ವೇದಮೂಲನೆ ವೇದಕಾರಣ
ವೇದಪುರುಷನೆ ವೇದವೇದಾಂತಾದಿ ಪ್ರತಿಪಾದ್ಯ |
ಬಾದರಾಯಣರೂಪಿ ಕೃಷ್ಣನೆ
ವಾದಿರಾಜನೆ ಬಾಧೆ ಕಳೆವನೆ
ಸಾಧಕರಿಗೀಯುವನೆ ಜೀವನ್ಮುಕ್ತಿಬೋಧವನು || ೫೪೧ ||
ವೇದೇಶನೆ ವೇದದೊಡೆಯನೆ
ವೇದವೇ ನಿನ್ನುಸಿರು ಕೃಷ್ಣನೆ
ವೇದವುದಿಸಿತು ಮೊದಲು ಪರಮಾತ್ಮನಿಂ ಧಾತೃವಿನೊಳ್ |
ವೇದವಾತ್ಮವು ನಿನ್ನ ನೀನದ-
-ರಾದರಕೆ ಪಾತ್ರನೂ ಸನ್ನುತ
ಮೋದಬೋಧವದಿರವು ನೀನಹೆ ಸಚ್ಚಿದಾನಂದ || ೫೪೨ ||
ವೇದವೇದಾಂಗಪಾರಗನೆ ಹರಿ
ಪಾದಕೊಂದಿಪೆ ಕೃಷ್ಣ ನಿನ್ನಯ
ಮಾಧವನೆ ಗೋವಿಂದ ಕೇಶವನಾದಿನಾರಯಣ |
ನಾದಬ್ರಹ್ಮ ಪರಾತ್ಪರನೆ ಹರಿ
ಛಂದ ಜ್ಯೋತಿಷ ಶಿಕ್ಷೆ ಕಲ್ಪದ
ಬೋಧಪೂರ್ಣನೆ ನಿರುಕ್ತಜ್ಞನೆ ವ್ಯಾಕರಣಪಟುವೆ || ೫೪೩ ||
ವೇದಾಂತಪ್ರತಿಪಾದ್ಯ ಕೃಷ್ಣನೆ
ವೇದಾಂತದಲ್ಲಿಹ ಪರಬ್ರಹ್ಮವೆ
ವಾದಿರಾಜನೆ ವೇದವಂದ್ಯನೆ ವೇದಸಾರನಿವ |
ವೇದದಂತ್ಯವದುಪನಿಷತ್ತುಗ-
-ಳಾದಿಯಂತ್ಯವು ಮಧ್ಯವೆಲ್ಲವು
ಸಾದರದಿ ಚಿಂತಿಪೆವು ನಿತ್ಯಾನಿತ್ಯಗಳ ನಿತ್ಯ || ೫೪೪ ||
ವೇದವೇದ್ಯನೆ ವಾಸುದೇವನೆ
ವೇದದಿಂದರಿವುದು ಯಥಾರ್ಥವು
ಬಂಧ ಕಳೆವುದು ಮುಕ್ತಿಯರಿವುದು ನಿನ್ನ ಬೋಧ ಸಹ |
ಕಾದದಲೆ ಮೋದದಲೆ ಸೇವೆಲಿ
ಪಾದ ಹಾಕದೆ ಶ್ರವಣ ಮನನದಿ
ಸಾಧನೆಯ ಗೈದಲ್ಲಿ ವೇದದ ಬೋಧ ನಮಗಹುದು || ೫೪೫ ||
ವೇದವಿತ್ ಶ್ರುತಿಗಳನು ತಿಳಿದನೆ
ವೇದ ಬಲ್ಲವ ವೇದ ಬೋಧಿಪ
ವೇದಮೂಲನೆ ವಾದದೂರನೆ ಭಕ್ತಿಜ್ಞಾನಪ್ರದ |
ಮಾಧವನೆ ಮಾನಸದಿ ಧ್ಯಾನಿಪೆ
ಮೋದದಿಂ ಪರತತ್ತ್ವ ಬೊಮ್ಮವ
ಸಾಧುವಂದಿತ ತಮವ ಕಳೆ ಸುಜ್ಞಾನ ನೀಡುತಲಿ ||೫೪೬ ||
ನಿಗಮಾಗಮರೂಪಶ್ಚ ವೇದಾಗಮ್ಯಃ ಪುರುಷ್ಟುತಃ।
ಏಕಾಕ್ಷರೋ ವ್ಯಕ್ತರೂಪಃ ಪುರುಹೂತಃ ಪುರೋಹಿತಃ॥೮೧॥(೫೫೩)
ನಿಗಮಾಗಮರೂಪ ಕೃಷ್ಣನೆ
ನಿಗಮ ನಿರ್ಗತ ಋಷಿಗಳಿಂ ಶ್ರುತಿ
ನಿಗಮಿಸಿತು ಪರಮಾತ್ಮಧ್ಯಾನದಿಯಂತರಂಗದಲಿ |
ಆಗಮವದಾಗತವು ಶಿವನಿಂ
ನಿರ್ಗಮಿಸಿತದು ಗಿರಿಜೆ ಕರ್ಣಕೆ
ಬೇಗನೊಪ್ಪಿದ ಹರಿಯು ನಿಗಮಾಗಮವು ನೀ ಕೃಷ್ಣ || ೫೪೭ ||
ವೇದಾಗಮ್ಯನೆ ವಾಸುದೇವನೆ
ವೇದಗಳಿಗವ ನಿಲುಕದಿಹ ಹರಿ
ವಾದಕೊಲಿಯನು ಭೇದ ಕಾಣನು ಮಾಧವನು ಕೃಷ್ಣ |
ವೇದ ಯಜ್ಞಾಧ್ಯಯನ ತಪದಿಂ
ಸಾಧುವಂದಿತನೊಲಿಯ ಭಾವಜ
ಮಾಧವನು ಬರಿ ಭಕ್ತಿಬೋಧವಿರಕ್ತಿಗೊಲಿಯುವನು || ೫೪೮ ||
ಪುರುಷ್ಟುತ ಹರಿ ವಾಸುದೇವನೆ
ಪುರು ಸ್ತುತ ಬಹುವಾಗಿ ಶಂಸಿತ
ಕರುಣವಾರಿಧಿ ಸರ್ವಜನರಿಂದಲು ತ್ರಿಲೋಕದಲಿ |
ವರುಣವಾಯುಗಳಿಂದ ಸೇವಿತ
ಸರುವ ಕಾಲಪ್ರದೇಶವ್ಯಾಪಕ
ಗರುವದೂರ ಸದಾ ವಿನೋದಪ್ರಿಯನೆ ಶ್ರೀಕೃಷ್ಣ || ೫೪೯ ||
ಏಕಾಕ್ಷರನೆಯೊಂದಕ್ಷರನೆ
ಪ್ರಣವವಾಚ್ಯನೆಯಾದಿಯಕ್ಷರ-
-ವಕಾರನೆ ಹರಿ ವಿಷ್ಣು ಕೇಶವನಚ್ಯುತಾನಂತ |
ಸಕಾರಣ ತಾ ಸರ್ವ ಸೃಷ್ಟಿಗೆ
ವಿಕಾರವ ಹೊಂದದಿಹ ತತ್ತ್ವವೆ
ಪ್ರಕಾರಾಂತರವಾಗಿ ತೋರುವ ಸಚ್ಚಿದಾನಂದ || ೫೫೦ ||
ವ್ಯಕ್ತರೂಪನೆ ವಾಸುದೇವನೆ
ವ್ಯಕ್ತಸೃಷ್ಟಿಲಿ ವಾಸವಾಗಿಹ
ಮುಕ್ತನವ್ಯಕ್ತನು ಸ್ವರೂಪದಿ ಮೂಲ ಪರಬೊಮ್ಮ |
ಸಕ್ತನಂತವ ತೋರಿಕೊಳುತಿಹ
ಸಕ್ತಿರಹಿತನು ಮುಕ್ತನೀತನು
ಭಕ್ತಗೊಲಿವನು ಜ್ಞಾನಿಯಾತ್ಮನು ಕೃಷ್ಣ ಪರಮಾತ್ಮ || ೫೫೧ ||
ಪುರುಹೂತನೆ ಮೊದಲು ಕರೆಯುವೆ
ಪುರುವೆ ಪೂರ್ಣನೆ ಜಗವ ತುಂಬಿಹೆ
ಪುರುವೆ ಪೂರ್ವದಿ ಮೊದಲೆ ಕರೆಯಲ್ಪಡುವೆ ಹೋಮದಲಿ |
ಪರಮಮಂಗಲರೂಪ ಕೃಷ್ಣನೆ
ವರದ ದೇವನೆ ವಾಸುದೇವನೆ
ಕರವ ಮುಗಿಯುತ ಶಿರವ ಬಾಗುತ ನಮಿಸಿ ಶರಣಾದೆ || ೫೫೨ ||
ಪುರೋಹಿತ ಪುರ ಹಿತವ ಕಾವನೆ
ಪುರವೆ ದೇಹವು ಮೊದಲ ರಕ್ಷಕ
ಪರಮಹಿತಕಾರಕನೆ ಗುರು ಯಾಜಕನೆ ಋತ್ವಿಜನೆ |
ಚರಮಗತಿದಾಯಕನೆ ಮೋಕ್ಷದ
ಕರಿಯ ಕಾಯ್ದನೆ ನಕ್ರಹರ ಹರಿ
ಶೌರಿ ಕೃಷ್ಣನೆ ವಾಸುದೇವನೆ ದೇವಕೀತನಯ || ೫೫೩ ||
ಪರಾವರವಿಸೃಷ್ಟಾರೋ ಮಙ್ಗಲಸ್ಸದಸತ್ಪರಃ।
ಜಿತಕಾಮೋ ಜಿತಾಘಶ್ಚ ಜಿತಾರಿರಪರಾಜಿತಃ॥೮೨॥(೫೬೦)
ಪರಾವರ-ವಿಸೃಷ್ಟಾರನೆ
ಪರವನುಚ್ಚವನವರ ನೀಚವ-
-ನರೆಗಳಿಗೆಯಲಿ ಸೃಜಿಪ ತನ್ನ ವಿಶೇಷ ಬಲದಿಂದ |
ಪರನು ತಾನಪರನೂ ಕೃಷ್ಣನೆ
ಕರುಣವಾರಿಧಿ ವಿಶ್ವಪಾಲಕ
ವರದ ಶಂಕರ ಪ್ರಲಯಕಾರಕರೆಲ್ಲ ತ್ವದ್ರೂಪ || ೫೫೪ ||
ಮಂಗಲನೆ ಮಂಗಲಸ್ವರೂಪನೆ
ಸಂಗವರ್ಜಿತ ಶಂಕರನೆ ಹರಿ
ಮಂಗಳಾಂಗನೆ ಮಂಗಲದ ಮಂಗಲದ ನಿಧಿಯೆ |
ಅಂಗರಹಿತ ನಿರಾಕೃತಿಯೆ ಹರಿ-
-ಯಂಗಸಹಿತತೆ ತಾಳುವನು ತಾ-
-ನಂಗಜನ ಪಿತ ದುಷ್ಟಭಂಗ ವಿಹಂಗ ಪರಮಾತ್ಮ || ೫೫೫ ||
ಸದಸತ್ಪರ ವಾಸುದೇವನೆ
ಸದಮಲವು ಜಗಸತ್ತೆ ಕಾರಣ-
-ಸದಾಖ್ಯವವ್ಯಕ್ತವದು ಪ್ರಕೃತಿಯು ಪುರುಷ ಪರತಮನು |
ಪದವದಾತ್ಮವು ಸರ್ವಹೃದಯವು
ಸದುಮ ಸರ್ವರೊಳೆಂಬ ಸತ್ಯವ
ಪದುಮನಾಭನ ಶರಣು ಪೊಗುವೆನು ದೇವಕೀಸುತನ || ೫೫೬ ||
ಜಿತಕಾಮನೆ ಬಯಕೆ ಮೀರ್ದನೆ
ಜಿತನು ಜಯಶೀಲನು ಬಯಕೆಗಳ
ಹತವ ಮಾಡಿಹನಾಪ್ತಕಾಮನು ಪೂರ್ಣಕಾಮ ಹರಿ |
ವಿತತ ಬ್ರಹ್ಮಾಂಡವನೆ ಧರಿಸಿಹ
ಹಿತವ ಕಾಯುವ ಸರ್ವಸೃಷ್ಟಿಯ
ಮಿತದಿ ಬಳಸುವ ಭೋಗ್ಯಗಳ ಪರಮಾತ್ಮಗರ್ಪಿಸುತ || ೫೫೭ ||
ಜಿತಾಘನೆಯಘ ಪಾಪ ಗೆದ್ದವ
ಜಿತನು ಪಾಪವನೆಂದು ಮಾಡನು
ಹಿತನು ಮೂರ್ಲೋಕಕ್ಕೆ ಸಕಲವ ಧಾರೆಯೆರೆಯುವನು |
ಪಿತನು ಸರ್ವರ ಜತನದಿಂದಲಿ
ಮತಿಯ ನಿಲಿಸಿರಿ ಕೃಷ್ಣರೂಪದಿ
ಖತಿಯ ಕಳೆಯುತ ನಿರ್ಗುಣವ ಕಡೆಗೈದುವಿರಿ ದಿಟವು || ೫೫೮ ||
ಜಿತಾರಿಯೆ ಹರಿ ವೈರಿನಾಶಕ
ಜಿತನು ಗೆದ್ದಿಹನರಿಸಮೂಹವ
ಪಿತನು ಬೊಮ್ಮಗೆ ಹಿತನು ಲೋಕಕೆ ಖತಿಯ ಬಿಡಿರೆಲ್ಲ |
ಮತಿಯ ಮಾಡಿರಿ ಮನುಜರೆಲ್ಲರು
ಮಿತದ ನರತೆಯ ಮೀರಿ ದಿವ್ಯತೆ
ಪತನರಹಿತದ ಬ್ರಹ್ಮತೆಯ ತಾನರಿಯಿರಿಂದೆನುವೆ || ೫೫೯ ||
ಅಪರಾಜಿತ ಹರಿಯೆ ಕೃಷ್ಣನೆ-
-ಯಪರಾಜಿತ ಪರಾಜಯವಿರ-
-ದಪರತತ್ತ್ವವೆ ಸರ್ವದಾ ಜಯಶೀಲ ದೇವ ಹರಿ |
ತಾಪಹರ ಪರಮೇಶ್ವರನೆ ಸಂ-
-ತಾಪಹರ ಶ್ರೀವಾಸುದೇವನೆ
ಪಾಪಹರ ಹರಿ ಕೇಶವನೆ ನಾರಾಯಣನೆ ಗುರುವೆ || ೫೬೦ ||
ಜಿತೇನ್ದ್ರಿಯೋ ಜಿತಕ್ಲೇಶೋ ಜಿತಾತ್ಮಾ ಗರುಡಧ್ವಜಃ।
ಶುಚಿಶ್ಶಾನ್ತಸ್ಸುದಾನ್ತಶ್ಚಾದಮ್ಭೋ ದಮ್ಭಹರಶ್ಶಶೀ॥೮೩॥(೫೭೦)
ಜಿತೇಂದ್ರಿಯ ದೇವ ಕೃಷ್ಣನೆ
ಜಿತನೆ ಕರಣಂಗಳನು ಗೆದ್ದನೆ
ಹಿತನೆ ತಾನಿಂದ್ರಿಯಗಳನು ನಿಯಮಿಸಿ ಹೃಷೀಕೇಶ |
ಪತಿತಪಾವನ ಜೀವಕರಣವ
ಮಿತಿಯಲಿಟ್ಟಿಹ ಕರಣಪತಿ ಹರಿ
ಸತಿಯ ಪಾಲಿಸಿದಂಥ ಯತಿ ವರ ಬ್ರಹ್ಮನಿಷ್ಠ ನಿಜ || ೫೬೧ ||
ಜಿತಕ್ಲೇಶನೆ ದುಃಖ ಗೆದ್ದನೆ
ಪಿತನೆ ಲೋಕಕೆ ರುಕ್ಮಿಣೀಶನೆ
ಜತನದಿಂದಲಿ ಲೋಕವನು ಧರ್ಮವನು ಕಾಯುವನೆ |
ಸುತನು ಮದನನು ಸೃಷ್ಟಿಕಾರಕ
ಹಿತನು ಧರ್ಮದಿ ನಡೆವವರಿಗವ
ಮತವು ಶುದ್ಧಾದ್ವೈತಭಕ್ತಿವಿರಕ್ತಿಬೋಧಗಳು || ೫೬೨ ||
ಕೃಷ್ಣ ನೀನೆ ಜಿತಾತ್ಮ ಸಂತತ
ಕೃಷ್ಣ ನಿನ್ನನೆ ನೀನು ಗೆದ್ದಿಹೆ
ಕೃಷ್ಣ ಜಗವನೆ ಗೆದ್ದು ಸರ್ವಾತ್ಮತ್ವ ಪಡೆದಿರುವೆ |
ಕೃಷ್ಣನಿಂದ್ರಿಯಪ್ರಾಣಜಿತ ಹರಿ
ಕೃಷ್ಣನಂತಃಕರಣದಧಿಪತಿ
ಕೃಷ್ಣ ನೀನಿಲ್ಲದಿರೆ ಶೂನ್ಯವು ಸಕಲ ಸೃಷ್ಟಿಯಿದು || ೫೬೩ ||
ಗರುಡಧ್ವಜ ಹರಿಯೆ ಕೃಷ್ಣನೆ
ಗರುಡ ಕಶ್ಯಪವಿನತೆ-ತನಯನು
ಗರುವ ರಹಿತನು ಗರುತ ರೆಕ್ಕೆಗಳಿಂದ ಡಯಿಸುವನು |
ಗರುಡನುಡ್ಡಯನವನು ಮಾಡುವ
ಮರಣರಹಿತಮೃತತ್ವಕೊಯ್ಯುವ
ಪರಮಶ್ರುತಿಗಭಿಮಾನಿದೇವತೆ ಹರಿಯ ವಾಹನವು || ೫೬೪ ||
ಶುಚಿಯು ಶ್ರೀಕೃಷ್ಣನು ಪರಾತ್ಪರ
ಶುಚಿಯದಗ್ನಿಯು ಶೋಕಕಾರಣ
ಶುಚಿಯು ಸುಡುವನು ಸಕಲದುರಿತಂಗಳನು ಸಂತತವು |
ಶುಚಿಯು ಪಾವಕ ಶುಚಿಗೊಳಿಸುವನು
ಶುಚಿಯದಜ್ಞಾನವನು ಸುಡುವುದು
ಶುಚಿಯ ರೂಪಿಲಿ ತೋರ್ವ ಜ್ಞಾನಾನಲನೆ ಶ್ರೀಕೃಷ್ಣ || ೫೬೫ ||
ಶಾಂತ ಕೃಷ್ಣನೆ ಶಾಂತರೂಪನೆ
ಶಾಂತಿಯಿಂ ಮನ ಶಮನಗೊಳಿಸಿ ಪ್ರ-
-ಶಾಂತಮಾನಸನಾಗಿ ಭಕುತರಿಗೀವ ಶಾಂತಿಯನು |
ಶಾಂತ ಚಿತ್ತನು ಶಾಂತವದನನು
ಶಾಂತಚೇಷ್ಟನು ಬ್ರಹ್ಮರೂಪನು
ಶಾಂತಿರಕ್ಷಕ ವಿಶ್ವಶಾಂತಿಗೆ ನಾವು ಬೇಡುವೆವು || ೫೬೬ ||
ಸುದಾಂತನೆ ಹರಿ ವಾಸುದೇವನೆ
ಸುದಾಂತನು ಸರಿಯಾದ ದಮಯುತ
ಮದವಿರಹಿತನು ಕರಣನಿಗ್ರಹಿ ಶ್ರೀಹೃಷೀಕೇಶ |
ಸದಾ ತಾನಿಂದ್ರಿಯವ ದಮನಿಸಿ
ಪದವನಚ್ಯುತವನ್ನು ಪಡೆದಿಹ
ಸದಮಲಾತ್ಮಕ ಗುರುವೆ ಕೃಷ್ಣನೆ ಸಚ್ಚಿದಾನಂದ || ೫೬೭ ||
ಅದಂಭನೆ ದಂಭಾದಿ ರಹಿತನೆ
ಸದಂಭರಿಗೊಲಿಯದ ಮಹಾತ್ಮನೆ
ಕುದಂಭವ ದರ್ಪವನು ತಾಳದ ಸದಾನಂದ ಹರಿ |
ಕದಂಬವ ನಿಜಭಕ್ತಗಡಣವ-
-ನದಂಭದಿ ತಾ ಪೊರೆಯುತಿರುವನು
ಚಿದಂಬರದಲಿ ಯೋಗಿಗಳಿಗನವರತ ತೋರುವನು || ೫೬೮ ||
ದಂಭಹರ ಜಂಭವನು ಕಳೆಯುವ
ಕುಂಭಸಂಭವವರದ ರಾಮನೆ
ಶುಂಭದೈತ್ಯಾದಿಗಳ ಮರ್ದನ ದೇವಿ ಸುಕುಮಾರ |
ದಂಭವನು ಕಳೆ ದೇವ ಕೃಷ್ಣನೆ
ಜಂಭಹಂಕಾರಾದಿಗಳ ಕಳೆ
ತುಂಬಲಾರದ ಮುಕುತಿಯಮಿತವನಿತ್ತು ರಕ್ಷಿಪುದು || ೫೬೯ ||
ಶಶಿಯ ರೂಪದಿ ಹರ್ಷಕಾರಕ
ಖುಷಿಯ ಕೊಡುತಿಹ ನಿಖಿಲ ಲೋಕಕೆ
ನಿಶೆಯ ಕಾಲದಿ ಪೌರ್ಣಮಿಯ ಚಂದಿರನ ರೂಪಿನಲಿ |
ವಶವ ಮಾಡಿಹನಖಿಲ ಲೋಕವ
ಶಿಶುಸ್ವರೂಪದಿ ಲೀಲೆ ತೋರಿದ
ಪಶುಗಳನು ಕಾಯ್ದಂಥ ಗೋಪಾಲಕನೆ ಶ್ರೀಕೃಷ್ಣ || ೫೭೦ ||
ಚರಾಚರಗುರುರ್ವೇದಸ್ಸರ್ವಶಾಸ್ತ್ರಕೃದವ್ಯಯಃ।
ವೃಷ್ಣಿವಂಶೋದ್ಭವೋ ಭಾವೋ ಭವತಾಪನಿವಾರಕಃ॥೮೪॥(೫೭೭)
ಚರಾಚರಗುರು ಕೃಷ್ಣದೇವನೆ
ಚರವು ಚರಿಪುದು ಜೀವ ಚೇತನ
ಚರರಹಿತವಚರವದು ಜಡವದು ಜೀವಜಡಗುರು ನೀ |
ಸ್ಥಿರವು ಸ್ಥಾವರವಚರ ಗಿರಿವನ
ಚರವು ಜಂಗಮ ನರಮೃಗಾದಿಯು
ಪರಮಗುರು ಲೋಕಕ್ಕೆ ಪರಮಾತ್ಮನು ಮಹಾತತ್ತ್ವ || ೫೭೧ ||
ವೇದ ಕೃಷ್ಣನೆ ಜ್ಞಾನ ಕೃಷ್ಣನೆ
ಭೇದರಹಿತದ್ವೈತ ಕೃಷ್ಣನೆ
ವಾದದೂರನೆ ವೇದವಂದ್ಯನೆ ನಾದಮೂರುತಿಯೆ |
ಸಾದರದಿ ಸ್ವಾಧ್ಯಾಯ ಮಾಳ್ಪೆವು
ವೇದ ಶಾಸ್ತ್ರ ಪುರಾಣ ಸ್ಮೃತಿಗಳ
ಮೋದವೀಯುತ ಸಲಹು ಲೋಕವ ಸತ್ಯ ಧರ್ಮಗಳ || ೫೭೨ ||
ಸರ್ವಶಾಸ್ತ್ರಕೃತ್ ಶ್ರೀಕೃಷ್ಣನೆ
ಸರ್ವ ಶಾಸ್ತ್ರಕು ಮೂಲ ಶ್ರೀಹರಿ
ಸರ್ವ ಶಾಸ್ತ್ರಸ್ವರೂಪ ಶಾಸ್ತ್ರಾಧಾರ ಸರ್ವಜ್ಞ |
ಸರ್ವ ಶಾಸ್ತ್ರವ ಬೋಧಿಸಿರುವನೆ
ಸರ್ವ ಶಾಸ್ತ್ರವ ಬರೆಸಿರುವವನೆ
ಸರ್ವ ಶಾಸ್ತ್ರವ ಪ್ರಚುರಪಡಿಸುತ ಲೋಕ ಕಾಯ್ವವನೆ || ೫೭೩ ||
ಅವ್ಯಯನೆ ವ್ಯಯರಹಿತ ಕೃಷ್ಣನೆ-
-ಯವ್ಯಯನೆ ಖರ್ಚಾಗದುಳಿವನೆ-
-ಯವ್ಯಯನೆ ಪರಮಾತ್ಮನಕ್ಷಯನಮೃತನಜರಮರ |
ನವ್ಯನವ ಪ್ರಾಚೀನನಹುದೈ
ಭವ್ಯನೂ ಪ್ರಸ್ತುತನು ತಾನೈ
ಹವ್ಯ ಕವ್ಯವ ನಡೆಸಿ ಲೋಕವ ಕಾವ ಜಗದೀಶ || ೫೭೪ ||
ವೃಷ್ಣಿವಂಶೋದ್ಭವನೆ ಕೃಷ್ಣನೆ
ವೃಷ್ಣಿಗಳ ಕುಲದಲ್ಲಿ ಜನಿಸಿಹೆ
ವೃಷ್ಣಿವಂಶಪ್ರದೀಪ ಭಗವಾನ್ ಪೂರ್ಣ ರೂಪದಲಿ |
ವಿಷ್ಣುವವತರಿಸಿಹನು ವೃಷ್ಣಿಲಿ
ಕೃಷ್ಣ ವಸುದೇವಾತ್ಮಜನು ಹರಿ
ವೃಷ್ಣಿವಂಶದಿ ತಾನವತರಿಸಿ ಕುಲವ ಬೆಳಗಿದನು || ೫೭೫ ||
ಭಾವ ರೂಪನೆ ವಾಸುದೇವನೆ
ಭಾವಜನ ಪಿತ ಭಾವಕೊಲಿವನೆ
ಭಾವ ಸತ್ತೆಯದಾತ್ಮತತ್ತ್ವವು ಸರ್ವವ್ಯಾಪಕವು |
ದೇವ ನರ ಪಶು ಪಕ್ಷಿ ರೂಪದಿ
ಠಾವ ತುಂಬುತ ಸೃಜಿಸಿ ಲಯಿಸುತ
ಕಾವ ಪರಮೇಶ್ವರನೆ ಪರಬೊಮ್ಮನೆ ನಿಯಾಮಕನೆ || ೫೭೬ ||
ಭವತಾಪನಿವಾರಕನೆ ಹರಿ
ಭವದ ಲೋಕದ ದುಃಖ ಕಳೆವನು
ಜವನ ಬಾಧೆಯ ಕಳೆದು ಮುಕ್ತಿಯನೀವ ಸರ್ವಜ್ಞ |
ಭವ ನಿರಂತರ ವಿಷ್ಣುಮಾಯೆಯು
ಭವವನಾದಿಯದಂತ ಜ್ಞಾನದಿ
ಭವನಿವಾರಣವಾತ್ಮನಿಷ್ಠತೆಯದನು ನೀಡಯ್ಯ || ೫೭೭ ||
ಯದುವಂಶಾವತಾರಶ್ಚ ಭೂತಭೃದ್ಭೂತಭಾವನಃ।
ಅಮೃತತ್ವಪ್ರದೋ ಮೃತ್ಯುಪ್ರದಾಯಕೋ ವ್ರಜೇಶ್ವರಃ॥೮೫॥(೫೮೩)
ಯದುವಂಶಾವತಾರ ಕೃಷ್ಣನೆ
ಯದುಮಹಾರಾಜನ ಸುವಂಶಜ
ಪದುಮನಾಭನು ಯಾದವೇಶ್ವರ ವಾಸುದೇವ ಹರಿ |
ಪದವಿ ಬಯಸದ ಮಧುಕುಲಜ ಹರಿ
ಮದುವೆಯಾದನು ಸೋಳ ಸಾಸಿರ
ವದನ ತೋರೈ ಮುಕುತಿ ನೀಡೈ ದೇವಕೀತನಯ || ೫೭೮ ||
ಭೂತಭೃತ್ ಭೂತಗಳ ಭರಿಸಿಹ
ಭೂತಪಂಚಕವೀಚರಾಚರ
ವ್ರಾತವೆಲ್ಲವ ಧರಿಸಿ ಜಗಭಾಂಡೋದರನೆ ಹರಿಯು |
ಮಾತ ಲಾಲಿಸು ಜಾತವೇದನೆ
ಸೋತ ಧರ್ಮಿಗಳನ್ನು ಕಾವನೆ
ಪಾತಕಗಳಪಹರಿಸಿ ರಕ್ಷಿಸು ನಾಥ ಶ್ರೀಕೃಷ್ಣ || ೫೭೯ ||
ಭೂತಭಾವನ ವಾಸುದೇವನೆ
ಭೂತಗಳ ಹೊರಗೊಳಗೆ ನಿಂತಿಹ
ಭೂತಪಂಚಕಮೂಲ ನಾರಾಯಣನೆ ಶ್ರೀಕೃಷ್ಣ |
ಭೂತಸೃಷ್ಟಿಯನೆಲ್ಲ ಸೃಜಿಸುವ
ಜಾತವೆಲ್ಲವ ಸಲಹಿ ಪೋಷಿಪ
ಹೇತು ಲಯ ನಿಗ್ರಹವನುಗ್ರಹ ಪಂಚಕೃತ್ಯಗಳ || ೫೮೦ ||
ಅಮೃತತ್ವಪ್ರದನೆ ಕೃಷ್ಣನೆ
ಸ್ವಮೃತತತ್ತ್ವಪ್ರಬೋಧದನೆ ಹರಿ-
-ಯಮೃತ ನೀ ಮೃತಿಯಿರದ ತತ್ತ್ವವೆ ಸರ್ವರೊಳಗಿರುವ |
ಅಮೃತವಾತ್ಮವದದುವೆ ಬ್ರಹ್ಮವ-
-ದಮೃತ ಶಾಶ್ವತ ನಿತ್ಯ ಸತ್ಯವ-
-ದಮೃತ ನೀ ತಿಳಿಯೆಂಬ ಗೀತೆಯ ನುಡಿದ ಶ್ರೀಕೃಷ್ಣ || ೫೮೧ ||
ಮೃತ್ಯುಪ್ರದಾಯಕ ಹರನೆ ಕೃಷ್ಣನು
ಮೃತ್ಯು ನೀಡುವ ಕಾಲಕಾಲಕೆ
ಮೃತ್ಯುದೇವತೆರೂಪಿನಲಿ ಯಮ ತಾನೆ ಪರಮಾತ್ಮ |
ಸತ್ಯ ಧರ್ಮಕೆ ಪುಣ್ಯ ಪಾಪಕೆ
ಮೃತ್ಯು ನೀಡುವ ತಕ್ಕ ಲೋಕವ
ಮೃತ್ಯು ಜನಿ ಸ್ಥಿತಿ ಮೂರರೊಡೆಯನೆ ಕೃಷ್ಣಮೂರುತಿಯೆ || ೫೮೨ ||
ವ್ರಜೇಶ್ವರ ಗೋಪವ್ರಜ ನಾಯಕ
ವ್ರಜ ಸಮೂಹವು ಗೋಪಬಾಲರ
ವ್ರಜದ ಪತಿ ಗೋಪತಿಯು ಕೃಷ್ಣನು ರಾಸವಲ್ಲಭನು |
ಭಜಿಪೆವನುದಿನ ಬಾಲಕೃಷ್ಣನ
ಭಜಿಪ ಭಕ್ತರ ಕಾಯೊ ಕೃಷ್ಣನೆ
ವ್ರಜಕೆ ವಂದಿಪೆ ಕೃಷ್ಣಸಖರಿಗೆ ಪುಣ್ಯವೆಷ್ಟಿಹುದೋ || ೫೮೩ ||
ಮಾಯಾನರ ಆತ್ತಚಕ್ರೋ ಮಾನುಷೀಪಾರ್ಥಿವಾಶ್ರಯಃ।
ಮುಷ್ಟಿಕಘ್ನಶ್ಚ ಕೇಶಿಘ್ನಶ್ಚಾಣೂರಪ್ರಾಣಹಾರಕಃ॥೮೬॥(೫೮೯)
ಮಾಯಾನರ ವಾಸುದೇವನೆ
ಮಾಯೆಯಿಂ ನರರೂಪ ಧರಿಸಿದೆ
ಮಾಯೆ ಪ್ರಕೃತಿಯು ಮಾಯಿ ನೀ ಪರಮೇಶ್ವರನೆ ಕೃಷ್ಣ |
ಕಾಯ ಮಾನುಷ ಪಾಂಚಭೌತಿಕ
ಮಾಯೆಯತಿಮಾನುಷವು ದೈವವು
ಸಾಯದಮೃತತ್ವಸ್ವರೂಪದ ಜ್ಞಾನಮೂರುತಿಯೆ || ೫೮೪ ||
ಆತ್ತಚಕ್ರನೆ ದೇವ ಕೃಷ್ಣನೆ
ಕತ್ತ ಕತ್ತರಿಸಲ್ಕೆ ಚಕ್ರಿಯೆ
ಮತ್ತೆ ದುಷ್ಟರ ಕೊಂದು ಧರ್ಮವ ಸ್ಥಾಪಿಸಿದೆ ಹರಿಯೆ |
ಆತ್ತ ಪಿಡಿದಿಹೆಯಾ ಸುದರ್ಶನ
ಸುತ್ತ ಸುತ್ತುವ ಕಾಲಚಕ್ರವ
ಮತ್ತೆ ಶ್ರೀಚಕ್ರವದ ಪಿಡಿಯುತ ಭೀಷ್ಮಗೊಲಿದಿಹೆಯ || ೫೮೫ ||
ಮಾನುಷೀಪಾರ್ಥಿವಾಶ್ರಯ ಹರಿ
ಮಾನುಷಾಕೃತಿ ಪೃಥ್ವಿಯೊಳು ನೀ
ಸಾನುರಾಗದಿ ಶಿಷ್ಟರಕ್ಷಣೆಗಾಗಿ ಧರಿಸಿರುವೆ |
ಏನು ಫಲವದನರಿಯದಿದ್ದರೆ
ಮಾನವನ ಜನ್ಮವದು ವ್ಯರ್ಥವು
ವೇಣುಲೋಲನ ಬರಿಯ ನರನೆಂದರಿಯದಿರು ಮನುಜ || ೫೮೬ ||
ಮುಷ್ಟಿಕಘ್ನನೆ ಕೃಷ್ಣ ನೀನೆಲ
ಮುಷ್ಟಿಕಾಸುರನನ್ನು ನಿನ್ನಯ
ಮುಷ್ಟಿಯಿಂದಲೆ ಕೊಂದೆ ಮಥುರೆಯ ಕಂಸನರಮನೆಲಿ |
ಸೃಷ್ಟಿಗೀಶನೆ ಧರ್ಮಸ್ಥಾಪಕ-
-ನಿಷ್ಟು ಮಾತ್ರವ ಪೇಳಬಲ್ಲೆನು
ಮುಷ್ಟಿಯವಲಕ್ಕಿಯನು ಕೊಟ್ಟರು ಕಾವ ಶ್ರೀಕೃಷ್ಣ || ೫೮೭ ||
ಕೇಶಿಘ್ನ ಹರಿ ವಾಸುದೇವನೆ
ಕೇಶಿದೈತ್ಯನ ಕೊಂದ ಲೀಲನೆ
ಕೇಶವನೆ ವಸುದೇವಸುತ ಹರಿ ದೇವಕೀತನಯ |
ಆಶೆಗಳ ಕಳೆ ಮುಕುತಿ ನೀ ಕೊಡು
ಭಾಷೆ ತಪ್ಪದೆ ಭಕುತರಿಗೆ ಹರಿ-
-ದಾಸರಿಗೆ ಸುಜ್ಞಾನಭಕ್ತಿವಿರಕ್ತಿ ಕರುಣಿಪುದು || ೫೮೮ ||
ಚಾಣೂರಪ್ರಾಣಹಾರಕನೆ ಹರಿ
ಚಾಣೂರಮುಷ್ಟಿಕರ ಕೊಂದೆಯ
ವೇಣುಕರ ಶ್ರೀಕೃಷ್ಣ ಮಥುರೆಲಿ ಮುಷ್ಟಿಕಾಳಗದಿ |
ಕಾಣದಂತೆಯೆ ದೇವನೆಂಬುದ
ಮಾಣದಂತೆಯೆ ಧರ್ಮವನು ತಾ
ಗೋಣ ಮುರಿದೆಯ ಜಟ್ಟಿಗಳ ಕಂಸಾಖ್ಯನಾಳುಗಳ || ೫೮೯ ||
ಮೈನ್ದದ್ವಿವಿಧಸಂಹರ್ತಾ ಬಾಣಾಸುರಪ್ರಣಾಶಕಃ।
ಭೌಮಹನ್ತಾ ಯದುಶ್ರೇಷ್ಠೋ ಬಲೀ ಬಲವತಾಂ ವರಃ॥೮೭॥(೫೯೫)
ಮೈಂದ-ದ್ವಿವಿದಸಂಹರ್ತ ಹರಿ
ಮೈಂದ ದ್ವಿವಿದ ಕಂಸ ಶಾಂಬರು
ಸಂದರಾ ಹರಿಯಿಂದ ಮಥುರೆಲಿ ದುಷ್ಟ ದಾನವರು |
ಇಂದಿರೇಶನ ಕಂದ ಕೃಷ್ಣನ
ಮಂದಹಸಿತನ ಸುಂದರಾಂಗನ
ಚಂದದಿಂದಲಿ ನುತಿಪೆನಾನಂದವನು ಪಡೆಯುತಲಿ || ೫೯೦ ||
ಬಾಣಾಸುರ-ಪ್ರಣಾಶಕ ಹರಿ
ಬಾಣನಸುರನು ಶೈವಮುಖ್ಯನು
ಕಾಣದಂತೆಯೆ ಸಾಸಿರದ ಭುಜವಿದ್ದ ಶಿವಸಿದ್ಧ |
ಬಾಣ ಕೃಷ್ಣರ ಕದನ ನಡೆಯಲು
ಜಾಣನನಿರುದ್ಧನುಷೆಯೊಂದಿಗೆ
ಪಾಣಿಗ್ರಹಿಸಿದ ಹರಿಹರರನುಗ್ರಹವ ತಾ ಪಡೆದ || ೫೯೧ ||
ಭೌಮಹಂತಾ ವಾಸುದೇವನೆ
ಭೂಮಿಸುತ ನರಕನನು ಕೊಂದಿಹೆ
ಭೂಮಿಯಂಶಜೆ ಸತ್ಯಭಾಮಾದೇವಿಯೊಡಗೂಡಿ |
ನಾಮ ನರಕವು ನೇಮ ನರಕವು
ಹೋಮವಿಲ್ಲವು ಕಾಮವೆಲ್ಲವು
ಶ್ಯಾಮ ಷೋಡಶ ಸಾಸಿರದ ಕುವರಿಯರ ರಕ್ಷಿಸಿದ || ೫೯೨ ||
ಯದುಶ್ರೇಷ್ಠನೆ ದೇವ ಕೃಷ್ಣನೆ
ಯಾದವಾನ್ವಯಭೂಷಣನೆ ಹರಿ
ಯದುಮಹಾರಾಜನ ಕುಲದಿ ತಾನವತರಿಸಿದನು ವಿಷ್ಣು |
ಯದುಕುಲದಿ ಪರಬ್ರಹ್ಮ ಪುಟ್ಟಿದ
ಯದುಜನರ ಭಾಗ್ಯವದು ಸಂತತ
ಯದುಕುಲೇಶನ ರುಕ್ಮಿಣೀಶನ ಭಜಿಸಿ ಸುಖ ಹೊಂದಿ || ೫೯೩ ||
ಬಲೀ ಬಲವಿಹುದಿವಗೆ ಕೃಷ್ಣಗೆ
ಬಲಿಯ ಮೆಟ್ಟಿದ ಪಾದ ವಾಮನ
ಬಲವದಖಿಲಸೃಷ್ಟಿಗಧಿಕವು ಸೃಷ್ಟಿಕರ್ತನದು |
ಒಲವಿನಿಂದಲಿ ಕಾಲ ತ್ರಿಭುವನ
ಬಲುಹಿನಿಂದಲಿ ದುಷ್ಟನಿಗ್ರಹ
ಸಲಹು ಶಿಷ್ಟರ ಧರ್ಮರಕ್ಷಕ ಮುಕುತಿಯನ್ನೀಯೋ || ೫೯೪ ||
ಬಲವತಾಂ ವರ ಕೃಷ್ಣದೇವನೆ
ಬಲಯುತರಲತಿಶಯಿಯು ಲೋಕದಿ
ಹಲವು ತೆರದೀಕ್ಷಿಸುವ ಲೋಕವ ಸರ್ವರೂಪಿ ಹರಿ |
ನಲವಿನಿಂ ಭಕುತರನು ಕಾಯುವ
ಗೆಲುವಿನಿಂ ಸಜ್ಜನರ ರಕ್ಷಿಪ
ಬಲುಹಿನಿಂ ದುಷ್ಟರನು ಶಿಕ್ಷಿಪ ಲೋಕಪಾಲಕನು || ೫೯೫ ||
ಮಾಗಧಾದ್ಯಸುರದ್ವೇಷೀ ಕೌಮೋದಕೀಗದಾಯುಧಃ।
ಸಙ್ಕರ್ಷಣಾನುಜಶ್ಶನ್ತಮೇಶೋಙ್ಕಾರಸುವಿಗ್ರಹಃ॥೮೮॥(೬೦೧)
ಮಾಗಧಾದ್ಯಸುರದ್ವೇಷೀ
ಮಾಗಧಾದಿಗಳಿಂಗೆ ಶತ್ರುವು
ಶ್ರೀಗರುಡವಾಹನನೆ ಕೃಷ್ಣನೆ ದೇವಕೀಸುತನೆ |
ನಾಗಶಯನನೆ ದುಷ್ಟಶಿಕ್ಷಕ
ಬೇಗ ಶಿಶುಪಾಲಾದಿಗಳ ಮಿಗೆ
ಮಾಗದವರನು ಮಾಗಿಸಿದ ಶಿಕ್ಷಣವ ನೀಡುತಲಿ || ೫೯೬ ||
ಕೌಮೋದಕೀಗದಾಯುಧ ಹರಿ
ಕೌಮೋದಕೀ ನಾಮ ಗದೆಯನು
ಕಾಮಪಿತನಾಯುಧದ ರೂಪಿಲಿ ಧರಿಸಿಹನು ಕೃಷ್ಣ |
ಸಾಮಪ್ರೀಯನೆ ಸೋಮಸುಂದರ
ಭಾಮೆಯರಸೆ ನಾಮಪಾವನ
ನೇಮದಿಂದಲಿ ಭಜಿಸಿ ಸಂತತ ಧನ್ಯರಾಗಲಿಕೆ || ೫೯೭ ||
ಸಂಕರ್ಷಣಾನುಜನೆ ಕೃಷ್ಣನೆ
ಸಂಕರ್ಷಣನು ಬಲರಾಮ ಶೇಷನು
ಸಂ ಕರ್ಷಣ ಶಕ್ತಿಯಿಂ ಬ್ರಹ್ಮಾಂಡ ಧರಿಸಿಹನು |
ಸಂಕರುಷಣನ ಮೇಲೆ ಮಲಗಿಹ
ಬಿಂಕವಿರದಿಹ ವಿಷ್ಣುದೇವನೆ
ಸಂಕರುಷಣನ ತಮ್ಮ ಕೃಷ್ಣನೆ ಸಚ್ಚಿದಾನಂದ || ೫೯೮ ||
ಶಂ-ತಮನೆ ಮಂಗಲತಮನೆ ಹರಿ
ಹಂತಕರ ಹಂತಕನೆ ಕೃಷ್ಣನೆ
ಕಂತುಪಿತ ಶಂಕರನ ಸಖ ನಾರಾಯಣನೆ ಕೃಷ್ಣ |
ಅಂತಕಾಂತಕ ದುಷ್ಟರಂತಕ
ಚಿಂತೆ ಕಳೆಯುವ ಚಿನ್ಮಯನೆ ಹರಿ
ಕಂತುರಹಿತದಿ ಪೂರ್ಣಭಕ್ತಿಯಲಿವನ ಭಜಿಸೋಣ || ೫೯೯ ||
ಈಶನೊಡೆಯನು ಸಕಲ ಸೃಷ್ಟಿಗೆ-
-ಯೀಶ ಕರ್ಮಕೆ ಫಲಕೆ ಕಾಲಕೆ-
-ಯೀಶ ಸರ್ವರೊಳಗಿರುವಂತಹ ಹೇ ಪರಬ್ರಹ್ಮ |
ಪಾಶ ಕಳೆಯೆಲೊ ಲೋಕಬಂಧದ
ನಾಶ ಮಾಡೆಲೋ ನೀಯವಿದ್ಯೆಯ
ಕೇಶವನೆ ಮಾಧವನೆ ನಾರಾಯಣನೆ ಪರಮೇಶ || ೬೦೦ ||
ಓಂಕಾರ-ಸುವಿಗ್ರಹನೆ ಹರಿ-
-ಯೋಂಕಾರಸ್ವರೂಪ ಕೃಷ್ಣನೆ-
-ಯೋಂಕಾರನೆ ಕಾರ್ಯಬ್ರಹ್ಮನೆಯಪರಬೊಮ್ಮನಿವ |
ಝೇಂಕಾರವದೋಂಕಾರದಿ
ಹೂಂಕರಿಸುತ ಸೇರಿ ಹೋಗಲು
ಸಾಂಕರ್ಯತೆಯಿರದ ಕಾರಣಬ್ರಹ್ಮ ಪರಬೊಮ್ಮ || ೬೦೧ ||
Comments
Post a Comment