ಸ್ತೋತ್ರಸಂಹಿತಾ ೩.೧ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)
ಸುರಧೇನುಸ್ಸುರಾವಾಸಸ್ಸ್ವರ್ಪತಿರ್ವಿಶ್ವಮೋಹಕಃ |
ಪ್ರಾಣಪತಿಸ್ತ್ರಯೀರೂಪಶ್ಚೇಶ್ವರಃ ಕೌಸ್ತುಭಪ್ರಿಯಃ || ೨೯ || (೨೦೦)
ಸುರಧೇನು ಕಾಮದುಘೆ ಶ್ರೀಹರಿ
ಸುರರ ವಾಂಛಿತವೀವ ದೇವನೆ
ವರದ ಕೃಷ್ಣನೆ ಸರ್ವದೇವಾತ್ಮಕನೆ ಪರಬೊಮ್ಮ |
ಪರಮಮಂಗಲರೂಪ ಸಂತತ
ಚರಮಗತಿದಾಯಕ ಪರಾತ್ಪರ
ಕರುಣವಾರಿಧಿ ರುಕ್ಮಿಣೀವಲ್ಲಭನೆ ಶ್ರೀಕೃಷ್ಣ || ೧೯೩ ||
ಸುರಾವಾಸನೆ ದೇವತಾಶ್ರಯ
ಸುರರ ಮೂಲನೆ ವಾಸುದೇವನೆ
ಸುರರೊಳತಿ ವಿಭವದಲಿ ಸಂನಿಧಿ ಹೊಂದಿರುವ ಕೃಷ್ಣ |
ಸುರರ ಸ್ವರ್ಲೋಕಾತ್ಮಕನೆ ಹರಿ
ಸುರವರದ ಪರಮಾತ್ಮ ಸುರನುತ
ಸುರರ ರೂಪಿಲಿ ಲೋಕ ಪಾಲಿಸುವಂತೆ ತೋರುವನೆ || ೧೯೪ ||
ದೇವಲೋಕದ ಪತಿಯೆ ಸ್ವರ್ಪತಿ
ಕಾವ ಮೂವತ್ಮೂರು ಕೋಟಿಯ
ದೇವನಿಕರವ ಲೋಕಧರ್ಮವ ದೇವ ಶ್ರೀಹರಿಯೆ |
ಭಾವಕೊಲಿವ ಮಹಾತ್ಮ ಸ್ವರ್ಗದ
ದೇವಲೋಕವ ಕಾಯ್ವ ಶ್ರೀಪತಿ
ಸಾವಿನಾಚೆಯ ಮುಕುತಿ ತೋರೆಮಗೆನುತ ಶರಣಾದೆ || ೧೯೫ ||
ವಿಶ್ವಮೋಹಕ ಕೃಷ್ಣದೇವನೆ
ವಿಶ್ವವನೆ ಮೋಹದೊಳು ಕೆಡಹಿದ
ವಿಶ್ವಮಾಯಾಲೋಲ ವಿಶ್ವದ ರೂಪ ಶ್ರೀಕೃಷ್ಣ |
ವಿಶ್ವಜನಮೋಹನನೆ ಮೋಹಿನಿ
ವಿಶ್ವದಸುರರ ಮೋಹಗೊಳಿಸಿಹೆ
ವಿಶ್ವನಾಥಸುಪುತ್ರ ಹರಿಹರನನ್ನು ಹೆತ್ತವನೆ || ೧೯೬ ||
ಪ್ರಾಣಪತಿ ಜಗಜೀವನನೆ ಹರಿ
ಕಾಣದಸುವಿಗು ಮೂಲಶಕ್ತಿಯೆ
ಪ್ರಾಣವ್ಯಾನೋದಾನಪಾನಸಮಾನ ಪಂಚಪತಿ |
ಪ್ರಾಣರೂಪನೆ ಮುಖ್ಯಪ್ರಾಣನೆ
ಪ್ರಾಣವಾಯುವಿನಧಿಪ ಕೃಷ್ಣನೆ
ಪ್ರಾಣನಂತರ್ಯಾಮಿ ಪಂಚಪ್ರಾಣ ಸಕಲರಿಗೆ || ೧೯೭ ||
ತ್ರಯೀರೂಪನೆ ವೇದರೂಪನೆ
ತ್ರಯೀನಾಮ ಋಗ್ಯಜುಸ್ಸಾಮನೆ
ತ್ರಯೀಶನೆ ಸಂಹಿತಾಬ್ರಾಹ್ಮಣರಣ್ಯಕೋಪನಿಷತ್ |
ತ್ರಯೀರೂಪಾಧಿದೈವನೆ ಹರಿ
ತ್ರಯೀತನುವಧಿಭೂತ ಕೃಷ್ಣನೆ
ತ್ರಯೀಕಾಯಧ್ಯಾತ್ಮ ತ್ರಿಗುಣಾತ್ಮಕ ಗುಣಾತೀತ || ೧೯೮ ||
ಈಶ್ವರನೆ ಸಕಲಕ್ಕು ಸೃಷ್ಟಿಯ
ನಶ್ವರದ ತೋರಿಕೆಯ ಮೂಲನೆ
ಪಶ್ವಾದಿ ಜೀವರನು ಕಾಯುವ ಸಗುಣ ಪರಬೊಮ್ಮ |
ವಿಶ್ವರೂಪನೆ ವಿಶ್ವಮೂಲನೆ
ವಿಶ್ವನಾಥನೆ ವಿಶ್ವನಾಶನೆ
ವಿಶ್ವಪಾಲಕ ವಿಶ್ವಕರ್ತನೆ ನಿರ್ಗುಣನೆ ಬೊಮ್ಮ || ೧೯೯ ||
ಕೌಸ್ತುಭಪ್ರಿಯ ಕೃಷ್ಣರೂಪನೆ
ಕೌಸ್ತುಭಾಖ್ಯ ಸುರತ್ನಧಾರನೆ
ಕೌಸ್ತುಭವ ಮಥನದಲಿ ಸಾಗರದಿಂದ ಪಡೆದವನೆ |
ಕೌಸ್ತುಭ ಕು ಭೂಮಿಯಲಿ ವ್ಯಾಪಕ
ಕುಸ್ತುಭವು ಸಾಗರವದರಲಿಹ
ಕುಸ್ತುಭನ ವಿಷ್ಣುವಿನ ರತ್ನವು ಕೃಷ್ಣಗತಿಪ್ರಿಯವು || ೨೦೦ ||
ಅಕ್ರೂರವರದಶ್ಚೈವ ಪ್ರಲಮ್ಬಾಸುರಭಞ್ಜನಃ|
ಉದ್ಧವಪ್ರಿಯನಾಥಶ್ಚ ಮಹೇನ್ದ್ರಗರ್ವಹಾರಕಃ||೩೦||(೨೦೪)
ಅಕ್ರೂರವರದಪ್ರಮೇಯನೆ
ವಿಕ್ರಮದಿ ದುಷ್ಟರನು ಗೆಲಿದನೆ
ಶಕ್ರವಂದಿತ ಕಂಸಮಂತ್ರಿಗೆ ವರವ ತಾನಿತ್ತ |
ಚಕ್ರಧಾರಿಯೆ ಕೃಷ್ಣ ಮಾಧವ
ವಕ್ರದಾರಿಯ ಸರಿಪಡಿಸುವವ
ನಕ್ರಹರ ಕರಿವರದ ಶ್ರೀಹರಿ ಶರಣು ಶರಣೆಂಬೆ || ೨೦೧ ||
ಪ್ರಲಂಬಾಸುರಭಂಜನನೆ ಹರಿ
ವಿಲಂಬವ ಮಾಡದಲೆ ದುಷ್ಟನ
ಪ್ರಲಂಬನ ಸಂಹರಿಸಿ ಬಾಲರ ರಕ್ಷಿಸಿದ ಕೃಷ್ಣ |
ಸ್ವಲಂಕೃತ ಬಾಲಕನ ವೇಷದಿ
ಪ್ರಲಂಬನು ಗೋಪಾಲಬಾಲರ-
-ನಲಂಬಿಸಿ ಬಂದಾಗ ನಿಗ್ರಹಿಸಿದವಗೆ ನಾ ಶರಣು || ೨೦೨ ||
ಉದ್ಧವಪ್ರಿಯನಾಥ ಕೃಷ್ಣನೆ
ಸಿದ್ಧಸಾಧ್ಯರನುದ್ಧರಿಸಿದನೆ
ಬುದ್ಧಿಮೂಲನೆ ಗೋಪವಂಶಜ ವಾಸುದೇವನೆಲಾ |
ಬದ್ಧವೈರಿಧ್ವಂಸಕಾರಕ
ಶುದ್ಧಭಕ್ತಶ್ರೇಯಕಾರಕ
ಬುದ್ಧಶುದ್ಧವಿಮುಕ್ತ ಸರ್ವಾಂತರ ಪರಬ್ರಹ್ಮ || ೨೦೩ ||
ಮಹೇಂದ್ರಗರ್ವಹಾರಕನೆ ಹರಿ
ಮಹೇಂದ್ರನ ಸುರಪತಿಯ ದರ್ಪವ
ಮಹೇಂದ್ರನ ಗರ್ವವನು ಮುರಿದಿಕ್ಕಿದನು ಶ್ರೀಕೃಷ್ಣ |
ಮಹೇಂದ್ರನು ಬಲುವರ್ಷ ಸುರಿಸಲು
ಮಹೇಂದ್ರನಿಗಿದಿರಾಗಿ ಗಿರಿಧರ
ಮಹೇಂದ್ರನ ಬಲ ಭಂಗಗೊಳಿಸಿದ ಗೋ-ಜನರ ಕಾಯ್ದ || ೨೦೪ ||
ರಾಧಾಪ್ರಿಯತಮಶ್ಶ್ರೀಮಾನ್ ರುಕ್ಮಿಣೀವಲ್ಲಭೇಶ್ವರಃ|
ನಾಥನಾಥಶ್ಚ ಶ್ರೀನಾಥೋ ಲಕ್ಷ್ಮೀನಾಥೋ ಹ್ಯನಾಥಪಃ||೩೧||(೨೧೧)
ರಾಧಾಪ್ರಿಯತಮನೆ ಕೃಷ್ಣನೆ
ರಾಧೆಗತಿಪ್ರಿಯ ಪ್ರಕೃತಿಪುರುಷನೆ
ರಾಧೆಯಾರಾಧನೆಗೆ ತಾನೊಲಿದಿರುವ ಪರತತ್ತ್ವ |
ರಾಧೆ ಶಕ್ತಿಯು ಕೃಷ್ಣ ಪುರುಷನು
ರಾಧೆ ಕೃಷ್ಣನಭಿನ್ನ ಶಕ್ತಿಯು
ರಾಧೆ ಕೃಷ್ಣನ ಪ್ರೇಮಭಕ್ತಿಲಿ ವಶವ ಗೈದಿಹಳು || ೨೦೫ ||
ಶ್ರೀಮಾನ್ ಸಿರಿ ಲಕುಮಿಸಹಿತನೆ
ಶ್ರೀಯುತನೆ ಲಕ್ಷ್ಮೀಶ ಶ್ರೀಹರಿ
ಶ್ರೀಭೂಮಿಯರ ಪತಿಯೆ ನಾರಾಯಣ ಪರಬ್ರಹ್ಮ |
ಶ್ರೀಶ ಶ್ರೀಪತಿ ಶ್ರೀಪ ಶ್ರೀನಿಧಿ
ಶ್ರೀವರನೆ ಶ್ರೀಕೃಷ್ಣ ಶ್ರೀಧರ
ಶ್ರೀಧಾಮ ಶ್ರೀಲೋಲ ಶ್ರೀಕರ ಶ್ರೀರಮಣ ಶ್ರೀದ || ೨೦೬ ||
ರುಕ್ಮಿಣೀವಲ್ಲಭೇಶ್ವರ ಹರಿ
ರುಕ್ಮವರ್ಣೆಯ ಹೊನ್ನ ಬಣ್ಣದ
ರುಕ್ಮಿಸೋದರಿ ಭೀಷ್ಮಕಾತ್ಮಜೆ ಕಮಲೆ ವೈದರ್ಭೀ |
ರುಕ್ಮಿಣಿಯ ಪತಿ ಕೃಷ್ಣನೀಶ್ವರ
ರುಕ್ಮವಸ್ತ್ರನು ಪೀತದಂಬರ
ರುಕ್ಮಿಣೀಪತಿ ಲೋಕದೊಡೆಯನಗೆ ಶರಣು ಶ್ರೀಕೃಷ್ಣ || ೨೦೭ ||
ನಾಥನಾಥ ಜಗನ್ನಾಥ ಹರಿ
ನಾಥರಧಿಪತಿ ಲೋಕನಾಥನೆ
ನಾಥ ದೀನರನಾಥಬಂಧುವೆ ಭಕ್ತರಾಧೀನ |
ಭೂತಪತಿನೇಹಿಗನೆ ವಿಷ್ಣುವೆ
ಮಾತನಾಡದವನಿಗೆ ವಾಕ್ಪ್ರದ
ನಾಥ ರುಕ್ಮಿಣಿನಾಥ ಸದ್ಗುರುನಾಥ ಶ್ರೀನಾಥ || ೨೦೮ ||
ಶ್ರೀನಾಥ ಸಿರಿರಮಣ ಕೃಷ್ಣನೆ
ಶ್ರೀನಾಥ ಭೂಪತಿ ಜಗಪತಿಯೆ ಹರಿ
ಹೇ ನಾಥ ಮೂರ್ಲೋಕಕ್ಕೆ ನಾರದವಂದ್ಯ ನಾರಯಣ |
ಸನ್ನಾಥ ಯದುನಾಥ ಗೋಪತಿ
ತನ್ನಾಥ ತದ್ವಾಚ್ಯ ಬೊಮ್ಮನೆ
ಶಂನಾಥ ಮಂಗಲನಾಥ ದೇವ ದಯಾನಿಧಿಯೆ ಕೃಷ್ಣ || ೨೦೯ ||
ದೇವ ಲಕ್ಷ್ಮೀನಾಥ ವಿಷ್ಣುವೆ
ಕಾವ ಮೂಜಗವನ್ನು ನಿತ್ಯವು
ಸಾವ ಮೀರಿದ ಮುಕುತಿಯೀವ ಮಹಾತ್ಮ ಶ್ರೀಕೃಷ್ಣ |
ಭಾವಕೊಲಿವನೆ ಲಕುಮಿವರನೇ
ಮಾವ ಕಂಸಗೆ ಮೃತ್ಯು ದುಷ್ಟಗೆ
ನೋವ ಕಳೆ ಸಚ್ಚಿತ್ಸುಖದ ದರುಶನವ ನೀಡಯ್ಯ || ೨೧೦ ||
ಅನಾಥಪ ಹರಿ ಕೃಷ್ಣದೇವನೆ
ವಿನಾ ನಿನ್ನಾರಿಹರು ಲೋಕದಿ
ಸುನಾಥನು ನೀನನಾಥರಿಗೆನುತಾನು ಬಿನ್ನವಿಪೆ |
ಜನಾರ್ದನ ಜಗದೇಕನಾಥನೆ
ಸನಾತನ ನಿತ್ಯ ನೂತನ ಹರಿ
ವಿನಾ ನಿನ್ನಲುಗಾಡದೀ ತೃಣ ಕೂಡ ಜಗದೊಳಗೆ || ೨೧೧ ||
ನರಕಾಸುರಸಂಹರ್ತಾ ಸ್ತ್ರೀಬಂಧನವಿಮೋಚಕಃ|
ಮಾರಪಿತಸ್ಸ್ಮೇರಮುಖೋ ಹಾರತೂಣೀರಭೂಷಣಃ||೩೨||(೨೧೬)
ನರಕಾಸುರಸಂಹರ್ತ ಹರಿ
ನರಕನೆಂಬಸುರನು ಭುವಿಯ ಸುತ
ನರಕ ಭೌಮನು ಷೋಡಶದ ಸಾಸಿರದ ಷೋಡಶಿಯ |
ಸೆರೆಗೆ ನೂಕಿದ ಗಣವ ರಾಜ ಕು-
-ವರಿಯರನು ಬಿಡಿಸಿದನು ಕೃಷ್ಣನು
ಧರಣಿಯಂಶಜೆ ಸತ್ಯಭಾಮೆಯ ಕೂಡಿ ಸೆಣಸಾಡಿ || ೨೧೨ ||
ಸ್ತ್ರೀಬಂಧನವಿಮೋಚಕ ಹರಿ
ತಾ ಬಂದು ನರಕಾಸುರನ ವಶ-
-ದಾ ಬಂಧನದಲಿದ್ದ ಷೋಡಶ ಕನ್ಯೆಸಾಸಿರವ |
ನೀ ಬಂಧು ದೀನರನು ಬಿಡಿಸಿದೆ
ಹೇ ಬಂಧ ಭವವನ್ನು ಕಳೆವನೆ
ಸ್ತ್ರೀಬಂಧ ನಿನಗಾಯ್ತಬಂಧವು ನರಕನಾಶನವು || ೨೧೩ ||
ಮಾರಪಿತ ಮನ್ಮಥನ ತಂದೆಯೆ
ಮೂರು ಲೋಕಗಳೊಡೆಯ ಕೃಷ್ಣನೆ
ಪಾರುಗಾಣಿಸು ಭವದಿ ನಿನ್ನನುದಿನವು ಭಜಿಪರಿಗೆ |
ಮೇರೆ ಮೀರಿದ ಶಕ್ತಿ ನಿನ್ನದು
ಮಾರಮಣ ಮಾರಹರಮಿತ್ರನೆ
ಮಾರಣದಿ ಹೂರಣವ ತುಂಬುತ ಸೃಷ್ಟಿಸ್ಥಿತಿಗೈದೆ || ೨೧೪ ||
ಸ್ಮೇರಮುಖ ಸ್ಮಿತವದನ ಕೃಷ್ಣನೆ
ಚೋರಗುರು ಸುಂದರನೆ ಶ್ರೀಹರಿ
ಪಾರಮಾರ್ಥಿಕ ಜ್ಞಾನವಿತ್ತೆಮಗೀಯೊ ಕೈವಲ್ಯ |
ಕ್ರೂರ ಕರಣಾದಿಗಳ ತಡೆಹಿಡಿ
ಮಾರಪಿತ ಮಾರನನು ತಡೆಹಿಡಿ
ತೋರದಾತ್ಮವ ತೋರು ನೀನನುಭವದಿ ಶರಣಾದೆ || ೨೧೫ ||
ಹಾರತೂಣೀರಭೂಷಣ ಹರಿ
ಹಾರ ಬತ್ತಳಿಕೆಗಳ ಧರಿಸಿಹ
ನಾರಯಣ ಶಾರ್ಙ್ಗಧರ ಕೇಶವ ಮಾಧವನೆ ಕೃಷ್ಣ |
ಸಾರಸರ್ವನೆ ಮೇರುತುಲ್ಯನೆ
ಸಾರಸಾಂಬಕ ಚಾರುಭೂಷಣ
ಕಾರುಣಿಕ ಪರಮಾತ್ಮ ಶ್ರೀಧರ ದೇವ ಪರಬೊಮ್ಮ || ೨೧೬ ||
ಶಮ್ಭುಪ್ರಿಯಶ್ಚ ಸಾನನ್ದೋ ಬ್ರಹ್ಮಾನನ್ದೋ ವಿಧಿಸ್ತುತಃ|
ಶಙ್ಖಧಾರೀ ಯಮಶ್ಶಾರ್ಙ್ಗೀ ರಾಘವೋ ರವಿವಂಶಜಃ||೩೩||(೨೨೫)
ಶಂಭುಪ್ರಿಯನೆ ಕೃಷ್ಣ ವಿಷ್ಣುವೆ
ನಂಬಿದವರನು ಕಾಯುತಿರುವನೆ
ಬೆಂಬಿಡದೆ ನೂರ್ಕಾಲ ರಕ್ಷಿಸಿ ಮುಕ್ತಿಬೋಧಪ್ರದ |
ಶಂಭು ಶಂ ಮಂಗಳಕೆ ಕಾರಣ
ಶಂ ಭವತಿ ಹರನಿಂದ ಕೃಷ್ಣನು
ಶಂಭುಮಿತ್ರನು ಪ್ರಿಯನು ಕೇಶವ ಶಿವನುತನೆ ಹರಿಯೆ || ೨೧೭ ||
ಸಾನಂದನೇ ಶ್ರೀಕೃಷ್ಣದೇವನೆ
ಸ್ವಾನಂದರೂಪ ಪರಬ್ರಹ್ಮನೆ
ಹೇ ನಂದನಂದನ ಚಿದಾನಂದ ಸದಾನಂದನಿಧೇ |
ಸಾನಂದ ತಾನಂದ ಸಹಿತನೆ
ಶ್ರೀನಂದ ಸಿರಿರಮಣ ವಿಷ್ಣುವೆ
ಭಾನಂದ ಸುಜ್ಞಾನಾತ್ಮರಮಣ ಸಚ್ಚಿತ್ಸುಖ ಪರಾನಂದ || ೨೧೮ ||
ಬ್ರಹ್ಮಾನಂದ ಭೂಮಾನಂದ
ಬ್ರಹ್ಮ ಬೃಂಹಣ ವಿಸ್ತರಾತ್ಮನೆ
ಬ್ರಹ್ಮ ನಿತ್ಯಾನಂದ ಪರಮಾನಂದ ಸಚ್ಚಿತ್ಕ |
ಬ್ರಹ್ಮ ಬೃಹದಿದು ಬ್ರಹ್ಮ ಮಹದಿದು
ಬ್ರಹ್ಮಾನಂದ ಮಹದಾನಂದ
ಬ್ರಹ್ಮ ಬೃಹದಾನಂದ ಕೃಷ್ಣನೆ ಸಚ್ಚಿದಾನಂದ || ೨೧೯ ||
ವಿಧಿಸ್ತುತ ಹರಿ ಬೊಮ್ಮನುತ ಹೇ
ವಿಧಾತಪ್ರಿಯ ಬೊಮ್ಮಪಿತ ಹರಿ
ಸುಧಾಸಾಗರ ವಿಧಾಯಕ ಶ್ರೀಕೃಷ್ಣ ನಾರಯಣ |
ಆದಿಯಲಿ ಸ್ತುತಿಸುವನು ಬೊಮ್ಮನ-
-ನಾದಿದೇವನ ನಡುವೆ ಕೊನೆಯೊಳು
ಬೋಧ ನೀಡೈ ಕ್ಷೇಮ ನೀಡೈ ಯೋಗ ನೀಡೆಂದು || ೨೨೦ ||
ಶಂಖಧಾರೀ ಪಾಂಚಜನ್ಯವ
ಶಂಖದೈತ್ಯನ ಪಂಚಜನನನು
ಶಂಕೆಯಿಲ್ಲದೆ ಕೊಂದು ಧರಿಸುತ ಶಂಖಧರನಾದೆ |
ಶಂಖ ಶಂ-ಕರವರಿಭಯಂಕರ
ಪಂಖ ಶಿಷ್ಟರ ತಂಪು ಮಾಡುವ
ಶಂಖ ದುಷ್ಟರ ಗರ್ಭನಾಶಕ ಕೃಷ್ಣಕರದೊಳಗೆ || ೨೨೧ ||
ಯಮನೆ ನೀ ಹರಿ ನಿಯಮ ನೀನೇ
ಯಮ ನಿಯಮಗಳ ನಿಯತಿ ನೀನೇ
ಯಮನ ನಿಯಮನ ಫಲಾಫಲಗಳ ನೀನೆ ಶ್ರೀಕೃಷ್ಣ |
ಸುಮನ ಸಹಮನ ಜವನ ರೂಪನ
ಕುಮನ ಹನನನ ಘನಮಹಿಮನನು
ವಿಮನವಿರದಮಿತಾದರದಿ ಯಮನಿಯಮದಲಿ ನುತಿಪೆ || ೨೨೨ ||
ಧನುವು ಶಾರ್ಙ್ಗವು ಹರಿಯೆ ಶಾರ್ಙ್ಗೀ
ಧನುವ ಧರಿಸುತ ಶಾರ್ಙ್ಗಪಾಣೀ
ದನುಜಮರ್ದನ ದುಷ್ಟಶಿಕ್ಷಣ ಶಿಷ್ಟರಕ್ಷಣಕೆ |
ಜನುಮ ಕೃಷ್ಣನ ಸೇವೆಗೈಯಲು
ವಿನುತ ಸೇವಿತ ಪಾದಪದುಮನು
ಜನುಮ ಜನುಮದಿ ಸೇವೆಗೈಯುವ ಭಾಗ್ಯ ಕೊಡಲೆಮಗೆ || ೨೨೩ ||
ರಾಘವನೆ ರಘುವಂಶಜನೆ ಹರಿ
ನಾಗಶಯನನೆ ಭಾಗವತಪ್ರಿಯ
ಸಾಗರದಿ ಮಲಗಿರುವ ಶ್ರೀಮನ್ನಾದಿನಾರಯಣ |
ತೂಗಿ ಪಾಡುವೆ ಬಾಲಕೃಷ್ಣನೆ
ಯೋಗಿಧ್ಯೇಯನೆ ಸಾಗಿ ಬಾರೈ
ರೋಗದೂರನೆ ವಿಹಗವಾಹನ ಕೃಷ್ಣ ಹೇ ವಿಷ್ಣೋ || ೨೨೪ ||
ರವಿವಂಶಜಾತ್ಮಕ ರಾಮ ಶ್ರೀಹರಿ
ಸವೆಸಿದೆಯ ಜೀವನವ ವನದಲಿ
ಭವವ ಕಳೆ ಸಂಭವಿಸು ಕಲಿಯಲಿ ದುಷ್ಟಶಿಕ್ಷಣಕೆ |
ಕವಿಯ ಹೃದಯಜ ಸಂತಹೃಜ್ಜನೆ
ಸವಿವ ಲೌಕಿಕ ಜೀವರೂಪನೆ
ರವಿಯ ವಂಶದಿ ಜನಿಸಿದಂಥ ಮಹಾನುಭಾವ ಹರಿ || ೨೨೫ ||
ಮಧುಪಣ್ಡಿತಸೇವ್ಯಶ್ಚೇಶಾನಶ್ಚ ಯದುವಂಶಜಃ|
ಭಕ್ತಿವೇದಾನ್ತವನ್ದ್ಯಶ್ಚ ಶ್ರೀಮದ್ಭಾಗವತಾಮೃತಃ||೩೪||(೨೩೦)
ಮಧುಪಂಡಿತಸೇವ್ಯ ಕೃಷ್ಣನೆ
ಮಾಧವಪ್ರಿಯಭಕ್ತಸೇವಿತ
ಮಧುವ ತವ ಚರಣಕಮಲದಲಿಹನರಿತಿರುವ ಜ್ಞಾನಿ |
ಮಧುಪಂಡಿತನು ಭಕ್ತಿಮಾರ್ಗದಿ
ಮಾಧವನ ಹರೆ ಕೃಷ್ಣ ಮಾರ್ಗದಿ
ಸಾದರದಿ ಭಜಿಸುತ್ತ ಕೃಷ್ಣಪ್ರಜ್ಞೆ ಪಡೆದಿಹನು || ೨೨೬ ||
ಈಶಾನ ತವ ಚರಣ ಪಿಡಿವೆನು
ಸಾಶನರ ನಿರಶನರ ಪತಿ ಹರಿ
ಪಾಶ ಹರಿದೊಗೆ ಜನನ ಮರಣದ ಮುಕ್ತಿ ದಯಮಾಡು |
ಈಶ ನೀ ಜಗಕೆಲ್ಲ ಕೃಷ್ಣನೆ
-ಯೀಶಾನ ರೂಪಿನಲಿ ದಿಕ್ಪತಿ
ಪಾಶ ಮಾಯೆಯ, ಪತಿಯು ಸಹ, ಕೈಮುಗಿದು ಶರಣಾದೆ || ೨೨೭ ||
ಯದುವಂಶಜನೆ ಯಾದವನೆ ಹರಿ
ಯದುಮಹಾರಾಜಾನ್ವಯಕೆ ಸಿರಿ
ಯದುಪತಿಯೆ ಯದುಪಾಲಕನೆ ಗೋಪಾಲ ಶ್ರೀಕೃಷ್ಣ |
ಯಾದವಾಗ್ರಣಿ ಯಾದಸಾಂಪತಿ
ಯಾದಿಗಟ್ಟಲೆ ಕನ್ನೆಯರಸನೆ
ಮೋದಬೋಧಸದಮಲರೂಪನೆ ಸಚ್ಚಿದಾನಂದ || ೨೨೮ ||
ಭಕ್ತಿವೇದಾಂತವಂದ್ಯನೆ ಹರಿ
ಭಕ್ತಿದಾತನೆ ಭಕ್ತಿವಶ್ಯನೆ
ಭಕ್ತಿಸಾಧನನಿರತ ಸಾಧುಗಳಿಂದ ಪೂಜಿತನೆ |
ಭಕ್ತಿರೂಪನೆ ಭಕ್ತಪ್ರೀಯನೆ
ಭಕ್ತಿಯಲಿ ವೇದಾಂತಿಗೊಲಿದನೆ
ಭಕ್ತಿವೇದಾಂತಾಪ್ತ ಕೃಷ್ಣಪ್ರಜ್ಞೆ ವಿಶ್ವಾತ್ಮ || ೨೨೯ ||
ಶ್ರೀಮದ್ಭಾಗವತಾಮೃತನೆ ಹರಿ
ಶ್ರೀಮಹಾನುಭವಾತ್ಮ ಕೃಷ್ಣನೆ
ಕಾಮಪಿತ ಭಾಗವತರೂಪದಿ ನಿತ್ಯ ನೆಲೆಸಿಹನೆ |
ಭೂಮ ಭಾಗವತಾಮೃತನೆ ಹರಿ
ಸಾಮ ಭಗವಾನ್ ಕೃಷ್ಣಚಂದಿರ
ಸೋಮಸುಂದರ ದೇವ ರಕ್ಷಿಸು ನಮ್ಮನನವರತ || ೨೩೦ ||
ಸತ್ಯಸನ್ಧಶ್ಚ ಸತ್ತ್ವಸ್ಥೋ ಸತ್ತ್ವದಸ್ಸಾತ್ವತಾಂ ಪತಿಃ|
ಸದ್ಗುಣಾಢ್ಯಸ್ಸದಾಚಾರಸ್ಸನ್ಮಾರ್ಗೋ ಮಾರ್ಗದರ್ಶಕಃ||೩೫||(೨೩೮)
ಸತ್ಯಸಂಧನೆ ಕೃಷ್ಣದೇವನೆ
ಸತ್ಯವನು ಕಾಯಲಿಕೆ ಲೋಕದಿ
ಸತ್ಯನಿಜರೂಪವನು ತೋರಿದೆ ಬೋಧಿಸಿದೆ ನರಗೆ |
ಸತ್ಯದನುಸಂಧಾನಿ ನಿತ್ಯವು
ಸತ್ಯಬಂಧನದಲ್ಲಿ ಬದುಕಿದೆ
ಸತ್ಯಸಂಕಲ್ಪಾತ್ಮಕನೆ ಹರಿ ಸಲಹು ಸಂತತದಿ || ೨೩೧ ||
ಸತ್ತ್ವಸ್ಥ ಹರಿ ಸತ್ತ್ವಗುಣಧಾಮನೆ
ಸತ್ತ್ವ ಜಗದಸ್ತಿತ್ವ ಸತ್ತೆಯು
ಸತ್ತ್ವ ಸಾರವು ಚಿತ್ತಸ್ಥ ಹರಿ ವಾಸುದೇವನೆಲಾ |
ಸತ್ತ್ವಶುದ್ಧಿಯ ನೀಡು ಭಕ್ತಗೆ
ಸತ್ತ್ವಗುಣವನು ನೀಡು ಜ್ಞಾನಿಗೆ
ಸತ್ತ್ವ ಸಚ್ಚಿತ್ಸುಖಸ್ವರೂಪನೆ ಸಚ್ಚಿದಾನಂದ || ೨೩೨ ||
ಸತ್ತ್ವದನೆ ಸತ್ತ್ವವನು ನೀಡುವಿ
ಸತ್ತ್ವ ನಿನ್ನದೆ ಸತ್ತ್ವ ನೀನೆಲೆ
ಸತ್ತು ಹುಟ್ಟುವುದನ್ನು ಹೋಗಿಸು ಸಾತ್ವತರ ಪತಿಯೆ |
ಸತ್ತ್ವವಸ್ತಿತ್ವವದು ಸರ್ವಕು
ಸತ್ತ್ವ ಚಿತ್ತವು ನಿಖಿಲ ಜೀವರ
ಸತ್ತ್ವ ನೀಡುತ ಪೋಷಿಸುವ ಹರಿ ಕೃಷ್ಣ ಪರಮಾತ್ಮ || ೨೩೩ ||
ಸಾತ್ವತಾಂಪತಿ ಸಾತ್ತ್ವತರ ಪತಿ
ಸಾತ್ತ್ವತರ ಯಾದವರ ನಾಯಕ
ಸಾತ್ವತರ ಕುಲಪಾವನನೆ ಹರಿ ಕೃಷ್ಣ ಪರಮಾತ್ಮ |
ಸತ್ತ್ವಗುಣಸಂಪನ್ನ ವಿಷ್ಣುವೆ
ಸಾತ್ವತನ ಕುಲದಲ್ಲಿ ಜನಿಸಿದೆ
ಸತ್ತ್ವ ತತ್ತ್ವ ಜಗತ್ತ್ವ ಪರಮಾತ್ಮತ್ವ ನಿನಗಿಹುದು || ೨೩೪ ||
ಸದ್ಗುಣಾಢ್ಯನೆ ಸಜ್ಜನರ ದೊರೆ
ಮದ್ಗುಣವ ಪೊರೆ ದುರ್ಗುಣವ ಕಳೆ
ಮದ್ಗುಣದಿ ಲೋಕಹಿತ ಕಾಪಿಡುವಂತೆ ಪ್ರೇರಕನೆ |
ಸದ್ಗುಣಗಳಿಂ ಶ್ರೇಷ್ಠನಾಗಿಹೆ
ಸದ್ಗುಣಗಳನು ನೀಡು ಸಂತತ
ಸದ್ಗುಣಾಢ್ಯ ಗುಣಾಢ್ಯನಾಢ್ಯನು ದೇವದೇವ ಹರಿ || ೨೩೫ ||
ಸದಾಚಾರನೆ ಕೃಷ್ಣ ಶ್ರೀಹರಿ
ಸದಾ ಸಚ್ಚರಿತನು ಮಹಾತ್ಮನು
ಸದಾ ಚರಿಪನುಮಾತ್ಮರೂಪಿಲಿ ಸ್ಥಾಣುವಾಗಿರುವ |
ವಿಧಾಯಕ ಹರಿ ಸಕಲ ಲೋಕಕೆ
ಮುದಾತ್ಮಕ ಮದರಹಿತ ಕೃಷ್ಣನೆ
ವಿದಾಯವ ದೌಷ್ಟ್ಯಕ್ಕೆ ನೀಡೆಲೆ ವಾಸುದೇವ ಹರಿ || ೨೩೬ ||
ಸನ್ಮಾರ್ಗ ಹರಿ ಕೃಷ್ಣ ದೇವನೆ
ಸನ್ಮಾರ್ಗರೂಪನೆ ನಿಖಿಲ ಜೀವಕೆ
ಸನ್ಮಾರ್ಗ ಸದ್ಗತಿ ಸದಯನನೆ ನಾರಾಯಣನೆ ದೇವ |
ಸನ್ಮಾರ್ಗ ತೋರುವ ಮೋಕ್ಷಧಾಮನೆ
ಸನ್ಮನವ ಸಂತತವು ಕರುಣಿಸು
ಸನ್ಮತವ ಲೋಕದಲಿ ಹಬ್ಬಿಸಿ ಶಾಂತಿ ಕಾಪಾಡು || ೨೩೭ ||
ಮಾರ್ಗದರ್ಶಕ ಕೃಷ್ಣದೇವನೆ
ಮಾರ್ಗ ನಿನ್ನದೆ ಮಾರ್ಗ ನೀನೇ
ಮಾರ್ಗ ತೋರುವ ಹೇ ಮಹಾತ್ಮನೆ ಧೀಪ್ರಚೋದಕನೆ |
ಮಾರ್ಗ ಮುಕ್ತಿಯ ಭಕ್ತಿಶಕ್ತಿಯ
ಮಾರ್ಗ ಜ್ಞಾನವಿರಕ್ತಿಭುಕ್ತಿಯ
ಮಾರ್ಗ ತೋರೈ ದೇವದೇವನೆ ಸಲಹು ಸಕಲರನು || ೨೩೮ ||
ವಿದ್ಯಾವಾನಮಿತಾದ್ಯಶ್ಚ ಸದುದ್ಯಮಪ್ರದಃ ಪರಃ|
ಪ್ರದ್ಯೋತಶ್ಚಾತ್ಮವಿದ್ಯಶ್ಚ ವಿದ್ಯುತ್ಪ್ರಭಾಸಮನ್ವಿತಃ||೩೬||(೨೪೬)
ವಿದ್ಯಾವಾನ್ ಶ್ರೀಕೃಷ್ಣದೇವನೆ
ವಿದ್ಯಾಯುತನೆ ಬ್ರಹ್ಮನಿಷ್ಠನೆ
ವಿದ್ಯಾಧಿಪನೆ ಬ್ರಹ್ಮವಿದ್ಯೋಪದೇಶಕ ಕೃಷ್ಣ |
ವಿದ್ಯೆಯೀವನೆ ವಿದ್ಯೆರೂಪನೆ
ವಿದ್ಯೆಯುಳ್ಳವರಧಿಪ ಶ್ರೀಹರಿ
ವಿದ್ಯೆನೀಡುವ ಗುರುಗಳಿಗೆ ಗುರು ಹೇ ಜಗದ್ಗುರುವೆ || ೨೩೯ ||
ಅಮಿತನೇ ಹರಿ ಕೃಷ್ಣದೇವನೆ
ಸಮಿತನಲ್ಲವು ಮಿತಿಯ ರಹಿತನೆ
ಕುಮತಿದೂರನಸೀಮನತಿಸೀಮನೆಲ ನಿಸ್ಸೀಮ |
ಅಮತಿಗಳನುದ್ಧರಿಪ ಮತಿದನೆ
ವಿಮತಿಗಳ ಸರಿಹೊಂದಿಸುವ ಹರಿ
-ಯಮಿತ ಮಿತಿಗಳವಡದಮೇಯನೆಯಪ್ರಮೇಯ ಹರಿ || ೨೪೦ ||
ಆದ್ಯದೇವನೆ ಮೊದಲ ತತ್ತ್ವವೆ
ಬಾಧ್ಯನಲ್ಲವು ಸಕಲರಿಂದಲು
ಸಾಧ್ಯ ಸಾಧಕಪ್ರೇರಕನೆ ಹರಿ ದೇವ ಪರಮಾತ್ಮ |
ಆದ್ಯತೆಯು ನಿನಗಿಹುದು ಸರ್ವದಿ
ಸಾಧ್ಯತೆಯು ಸಕಲಾಪ್ತಿ ಕರುಣದಿ
ವೇದ್ಯ ವೇದಾಂತಾದಿಶಾಸ್ತ್ರಗಳಿಂದ ಶ್ರೀಕೃಷ್ಣ || ೨೪೧ ||
ಸದುದ್ಯಮಪ್ರದನೆ ಕೃಷ್ಣನೆ
ಸದುದ್ಯೋಗವ ತೋರ್ವ ದೇವನೆ
ವಿದುರವಂದ್ಯನೆ ಸತ್ಕರ್ಮದಲಿ ಪ್ರೇರಿಪನೆ ಹರಿಯೆ |
ಕದಾಚಿತ್ ಕಷ್ಟವನು ಕಂಡರೆ
ಸದಾ ಹರಿಚಿತ್ತವಿದು ತಿಳಿಯುತ
ಮುದದಿ ತವಸೇವೆಯವೊಲದ ಪರಿಹರಿಸು ಭಕ್ತಿಯಲಿ || ೨೪೨ ||
ಪರನೆ ಶ್ರೇಷ್ಠನೆ ಸಕಲದಾಚೆಯ
ಪರಮತತ್ತ್ವನೆ ಜೀವನೊಳಗಿಹ
ಪರಮಶಕ್ತಿಯೆ ಚರಮಗತಿ ಪರಮಾತ್ಮ ಪರಬೊಮ್ಮ |
ಹರನ ರೂಪದಿ ಲಯವ ಗೈಯುತ
ಹರಿಯ ರೂಪದಿ ಪಾಲಿಸುತಲಿಹ
ತ್ವರಿತ ಸೃಷ್ಟಿಲಿ ಬೊಮ್ಮನಾಗುವ ದೇವ ಪರಮೇಶ || ೨೪೩ ||
ಕೃಷ್ಣ ನೀ ಪ್ರದ್ಯೋತನಹುದೈ
ಕೃಷ್ಣನುರುತರ ಬೆಳಗುತಿರುವನು
ಕೃಷ್ಣ ಪರಮಜ್ಯೋತಿ ಸಕಲವ ಬೆಳಗಿ ತೋರುವನು |
ಕೃಷ್ಣ ವಿಷ್ಣುವು ವಿಶ್ವವ್ಯಾಪಕ
ಕೃಷ್ಣ ಶಿವ ಹೃದಯದಲಿ ಬೆಳಗುವ
ಕೃಷ್ಣ ಬೊಮ್ಮನು ಬೃಂಹಣದಿ ಸರ್ಗವನು ವಿಸ್ತರಿಸಿ || ೨೪೪ ||
ಆತ್ಮವಿದ್ಯನೆ ಕೃಷ್ಣದೇವನೆ
-ಯಾತ್ಮರೂಪನೆ ಸೃಷ್ಟಿರೂಪನೆ
-ಯಾತ್ಮವಿದ್ಯಾರೂಪ ಪರಮಾತ್ಮಾತ್ಮ ಪರಬೊಮ್ಮ |
ಆತ್ಮನೇಕನನೇಕರಹಿತನು-
-ಮಾತ್ಮಜ್ಞಾನವು ಮುಕ್ತಿದಾಯಕ-
-ವಾತ್ಮರೂಪವೆ ನಮ್ಮದೆಲ್ಲವು ಬೋಧಿಸಿದ ಕೃಷ್ಣ || ೨೪೫ ||
ವಿದ್ಯುತ್ಪ್ರಭಾಸಮನ್ವಿತ ಹರಿ
ವಿದ್ಯುತ್ತಿನ ಜ್ಯೋತಿಯಂತಿಹ
ವಿದ್ಯುತಿಯು ವಿಶಿಷ್ಟ ದ್ಯುತಿ ಸರ್ವಕ್ಕು ಮೂಲದ್ಯುತಿ |
ವಿದ್ಯುದಾದಿಗಳಲ್ಲಿ ಬೆಳಗವು
ವಿದ್ಯೆಯೊಂದೇ ಜ್ಯೋತಿರೂಪವು
ವಿದ್ಯೆ ಮಿಂಚಿನ ತೆರದಿ ತೋರಿಯು ತೋರದಿಹುದಿಲ್ಲಿ || ೨೪೬ ||
ಭಯಕೃದ್ಭಯಹಾರೀ ಚ ವಿಘ್ನಕೃದ್ವಿಘ್ನಹಾರಕಃ|
ಅನಾದಿರ್ಬ್ರಹ್ಮಚಾರೀ ಚ ಧರ್ಮಾಧರ್ಮವಿವರ್ಜಿತಃ||೩೭||(೨೫೩)
ಭಯಕೃದಚ್ಯುತ ಭಯವನೀವನೆ
ಭಯವ ದೌಷ್ಟ್ಯಕೆ ಹಿತಕಭಯವನು
ಭಯಂಕರ ಭಯಕಾರಣನೆ ಭಯಕಾರಕನೆ ಕೃಷ್ಣ |
ಭಯದ ಭೀತಿಯ ದುಷ್ಟರಿಗೆ ತಾ
ಭಯದ ಭೀತಿಯ ಕೆಟ್ಟ ಕರ್ಮಿಗೆ
ಭಯದ ಶಿಕ್ಷಣವಿತ್ತು, ಶಿಷ್ಟರ ರಕ್ಷಿಸುವೆ ನೀನು || ೨೪೭ ||
ಭಯಹಾರೀ ಭಯದ ನಾಶಕ
ಭಯವಿದೂರನೆ ಶಿಷ್ಟರಿಗೆ ನೀ
ಭಯವ ತೊಲಗಿಸಿ ಧರ್ಮಕರ್ಮವ ನಡೆಸುವಾ ಕೃಷ್ಣ |
ಭಯವಧರ್ಮದ ಭಯವ ದುಷ್ಟರ
ಭಯವ ವಿಘ್ನದ ಕಳೆದು ಸುಜನರ
ಭಯನಿವಾರಿಸಿ ಲೋಕ ರಕ್ಷಿಪ ಕೃಷ್ಣ ಪರಮಾತ್ಮ || ೨೪೮ ||
ವಿಘ್ನಕೃತ್ ಕೃಷ್ಣನೇ ದೇವನೆ
ವಿಘ್ನ ನೀಡುವೆ ದುಷ್ಟ ಕರ್ಮಕೆ
ವಿಘ್ನ ನೀಡುವೆ ದುರ್ಜನರಿಗಿದು ಸತ್ಯ ಲೋಕದಲಿ |
ವಿಘ್ನಕಾರಕ ವಿಘ್ನಕಾರಣ
ವಿಘ್ನನಾಯಕ ವಿಘ್ನದಧಿಪತಿ
ವಿಘ್ನಕೃಂತನ ವಿಘ್ನನಾಶಕ ಕೃಷ್ಣ ಕಾಪಾಡು || ೨೪೯ ||
ವಿಘ್ನಹಾರಕ ವಿಘ್ನನಾಶಕ
ವಿಘ್ನಗಳ ಕಳೆ ಸುಜನಭಕ್ತರ
ವಿಘ್ನ ಕಳೆ ಧರ್ಮವನು ರಕ್ಷಿಸುವಂಥ ಮಾರ್ಗದಲಿ |
ವಿಘ್ನಹರಣನೆ ವಿಘ್ನಮಾಲಿಯೆ
ವಿಘ್ನಭೂಷಣ ವಿಘ್ನಮಾರಣ
ವಿಘ್ನ ತಂದಧಮರನು ತರಿ ಸುಜನರನು ಕಾಯಯ್ಯ || ೨೫೦ ||
ಅನಾದಿಯೆ ನೀನಾದಿರಹಿತನೆ
ವಿನಾದಿಯೆ ಶ್ರೀಕೃಷ್ಣದೇವನೆ
-ಯನಾದಿತ್ವವೆ ಮಧ್ಯವಂತವಿರಹಿತನೆ ಕೃಷ್ಣ |
ವಿನಾ ನಿನ್ನನು ಸೃಷ್ಟಿಯಿಲ್ಲವು
ವಿನಾ ನಿನ್ನನು ಸ್ಥಿತಿಯದಿಲ್ಲವು
ವಿನಾ ನಿನ್ನನು ಲಯವದಿಲ್ಲವು ನೀನೇ ಸರ್ವಾತ್ಮಾ || ೨೫೧ ||
ಬ್ರಹ್ಮಚಾರೀ ಬ್ರಹ್ಮನಿಷ್ಠನೆ
ಬ್ರಹ್ಮತತ್ತ್ವದಿ ನೆಲಿಸಿರುವವನೆ
ಬ್ರಹ್ಮವೇ ಬ್ರಹ್ಮೋಪದೇಶವ ಮಾಡಿದಂಥವನೆ |
ಬ್ರಹ್ಮಚರ್ಯದಿ ಸೋಳಸಾಸಿರ
ಬ್ರಹ್ಮಚರ್ಯದಿಯಷ್ಟಮಹಿಷ್ಯರ
ಬ್ರಹ್ಮಚರ್ಯದಿ ನಿಷ್ಠ ಕೃಷ್ಣನು ಗೂಢ ಬಹುಜನಕೆ || ೨೫೨ ||
ಧರ್ಮಾಧರ್ಮವಿವರ್ಜಿತನೆ ಹರಿ
ಧರ್ಮರೂಪನಧರ್ಮರೂಪನೆ
ಧರ್ಮಾಧರ್ಮವಿದೂರಕಾರಣ ದೇವ ಶ್ರೀಕೃಷ್ಣ |
ಧರ್ಮಮರ್ಮವಧರ್ಮಮರ್ಮವ
ಧರ್ಮಕರ್ಮವಧರ್ಮಕರ್ಮವ
ಮರ್ಮವರಿತದ ಮೀರಿದಗೆ ಶ್ರೀಕೃಷ್ಣನಿಗೆ ಶರಣು || ೨೫೩ ||
ಜಗದ್ಗುರುಶ್ಚಕ್ರಧಾರೀ ಶಙ್ಖಪದ್ಮಗದಾಧರಃ|
ಶ್ರೀವತ್ಸಾಙ್ಕಶ್ಚತುರ್ವೇದಶ್ಶ್ರುತಿಸ್ಮೃತಿಪುರಾಣಧೃತ್||೩೮||(೨೫೯)
ಜಗದ್ಗುರು ಶ್ರೀಕೃಷ್ಣದೇವನೆ
ಜಗಕೆ ಗೀತೆಯ ಬೋಧಿಸಿರುವನೆ
ಖಗದಿ ಚರಿಪನೆ ಮೃಗಧರಾಪ್ತನೆ ನಗುತ ಹರಸುವನೆ |
ಬಗೆ ಬಗೆಯ ಹಾರಸುಶೋಭಿತ
ಜಗದವಿದ್ಯಾತಮವ ಸರಿಸುವ
ಸೊಗದ ಬ್ರಹ್ಮಜ್ಞಾನ ತೋರಿದನಾದಿಗುರು ಜಗಕೆ || ೨೫೪ ||
ಚಕ್ರಧಾರೀ ಕಾಲಚಕ್ರವ
ನಕ್ರಹರ ಸುದರ್ಶನಾಖ್ಯವ
ವಿಕ್ರಮದಿ ಶತ್ರುಗಳ ತರಿಯುವ ವಿಷ್ಣು ಶ್ರೀಚಕ್ರ |
ಸಕ್ರಮದಿ ಪಿಡಿದಿರುವ ಕರದಲಿ
-ಯಾಕ್ರಮಿಪ ದುಷ್ಟರನು ಕೊಲ್ಲುವ
-ನೀ ಕ್ರಮದ ಚಕ್ರಾಯುಧವು ಬೇರಿಲ್ಲ ಮಾಯೆಯದು || ೨೫೫ ||
ಶಂಖಪದ್ಮಗದಾಧರನೆ ಹರಿ
ಕಿಂಕರರ ಕಾವಂಥ ಕಣ್ಮಣಿ
ಬಿಂಕ ತೋರದೆ ಭಜಿಸಿ ಧ್ಯಾನಿಸಿ ದೇವದೇವನನು |
ಶಂಖ ಪಾಂಚಜನ್ಯನಾಮಕ
ಪಂಕಜವು ಲಕುಮಿಯ ಸ್ವರೂಪವು
ಬಿಂಕ ಕೌಮೋದಕಿಯು ಗದೆಯದು ನೀ ಚತುರ್ಭುಜನು || ೨೫೬ ||
ಶ್ರೀವತ್ಸಾಂಕ ದೇವ ವಿಷ್ಣುವೆ
ಶ್ರೀವತ್ಸಲಾಂಛನವೆದೆಯೊಳಿರುವನೆ
ಶ್ರೀವತ್ಸ ಶ್ರೀದೇವಿಯನು ಹೃದಯದಿ ಧರಿಸಿಕೊಂಡಿಹನೆ |
ದೇವನೆದೆಯಲಿ ದಿವ್ಯಮಣಿಯದು
ದೇವನೆದೆಯಲಿಯಿರುವ ಶ್ವೇತರೋ-
-ಮಾವಲಿಯದನ್ಯರಿಗೆಯಿರದಿಹ ಮಹಾಪುರುಷಸಂಜ್ಞೆ || ೨೫೭ ||
ಚತುರ್ವೇದನೆ ಕೃಷ್ಣದೇವನೆ
ಚತುರ ಚಾತುರ್ಯಾತ್ಮ ಶ್ರೀಹರಿ
-ಯತುಲವೇದಸ್ವರೂಪ ಸಾಮಾಥರ್ವ ಋಗ್ಯಜುವು |
ಹಿತವು ಲೋಕಕೆ ಧರ್ಮಮೂಲವು
ಗೀತಶಿಲ್ಪವು ಪದ್ಯಗದ್ಯವು
ಮಾತುಮೀರಿದಲೌಕಿಕವನಿಷ್ಟಹರವಿಷ್ಟಪ್ರದ || ೨೫೮ ||
ಶ್ರುತಿಸ್ಮೃತಿಪುರಾಣಧೃತ ಹರಿ
ಶ್ರುತಿಯು ವೇದವು ಸ್ಮೃತಿಯು ಶಾಸ್ತ್ರವು
ಮತಿಗೆ ಹಿತವೀಯುವ ಪುರಾಣವು ಮೂರನೆಯ ಮಜಲು |
ಮತಿಯು ಪೌರಾಣಿಕವನೊಪ್ಪದೆ
ಸ್ಮೃತಿಯನೊಪ್ಪದ ಧರ್ಮಸೂಕ್ಷ್ಮಕೆ
ಶ್ರುತಿಯದಂತ್ಯಪ್ರಮಾಣ ಮೂರರ ಧರಿಸಿಹನು ಕೃಷ್ಣ || ೨೫೯ ||
ನನ್ದಗೋಪಕುಮಾರಶ್ಚ ಗೋಪೀವಸ್ತ್ರಾಪಹಾರಕಃ|
ವಸುದೇವಾತ್ಮಜಶ್ಶ್ರೀಜಿದ್ದ್ರೌಪದೀವಸ್ತ್ರದಾಯಕಃ||೩೯||(೨೬೪)
ನಂದಗೋಪಕುಮಾರ ಕೃಷ್ಣನೆ
ಮಂದಹಸಿತಾನನನೆ ನಂದನ
ಕಂದ ಗೋವಿಂದನೆ ಮುಕುಂದನೆ ಗೋಪತನಯ ಹರೇ |
ಸುಂದರಾಂಗನೆ ಗೋವ ಪಾಲಿಪ
ನಂದಗೋಪನ ಕುವರ ಯಶೋದೆ
ನಂದನನೆ ದೇವಕೀವಸುದೇವಾತ್ಮಜನೆ ಕಾಯೋ || ೨೬೦ ||
ಗೋಪೀವಸ್ತ್ರಾಪಹಾರಕನೆ ಹರಿ
ಗೋಪಿಯರ ಬಟ್ಟೆಯನು ಕದ್ದೆಯ
ಗೋಪಿಯರು ನದಿಯಲ್ಲಿ ಮಜ್ಜನಗೈವ ವೇಳೆಯಲಿ |
ಹೇ ಪಿತನೆ ನಗ್ನದಲಿ ಸ್ನಾನವ
ಗೋಪಿಯರು ಮಾಡಿದರೆ ಪಾಠವ
ಕಾಪಿನಲಿ ಲೋಕಕ್ಕೆ ಮಾಡಿದೆ ಶಾಸ್ತ್ರಬೋಧನೆಯ || ೨೬೧ ||
ವಸುದೇವಾತ್ಮಜನೆ ಶೌರಿಯೆ
ವಸುದೇವದೇವಕಿಯ ಸುತನೆ
ವಾಸವಾಗಿಹ ಸಕಲರೊಳು ತಾ ವಾಸುದೇವ ಹರಿ |
ವಸುದೇವ ಕಶ್ಯಪನಂಶ ಹಿಂದಿನ
ಜಸವಡೆದ ವರ ನೀಡಿದಂತೆಯೆ
ಪೊಸತು ಜನ್ಮವನಾಂತು ಭೂಭಾರವನು ಕಳೆದಿಕ್ಕಿ || ೨೬೨ ||
ಶ್ರೀಜಿತನೆ ಸಿರಿಯರಸ ಲಕ್ಷ್ಮೀ
ವಿಜಯ ಸಾಗರಮಥನಕಾಲದಿ
ವಾಜಿಮುಖ ಕಚ್ಛಪನೃಸಿಂಹನೆ ವ್ಯಾಸ ಧನ್ವಂತ್ರಿ |
ಹೇ ಜಿತೇಂದ್ರಿಯ ಹೃಷೀಕೇಶನೆ
ಸೋಜಿಗದ ಸೃಷ್ಟಿಯನು ಹೂಡಿದೆ
ಗಾಜಿನಂತೆಯೆ ಪಾರದರ್ಶಕ ಬದುಕ ನೀ ತೋರ್ದೆ || ೨೬೩ ||
ದ್ರೌಪದೀವಸ್ತ್ರದಾಯಕ ಹರಿ
-ಯಾಪತ್ತಿಗೆಯಾರ್ತಮೊರೆಗೆ
ಭೂಪ ಕೌರವಸಭೆಯ ದುಶ್ಶಾಸನನು ಸೀರೆಯನು |
ದ್ರೌಪದಿಯನವಮಾನಗೈಯಲು
ತಾಪನಾಶಕ ಕೃಷ್ಣ ಹರಸಿದ
ದ್ರೌಪದಿಯ ಭಕ್ತಿಯಲಿ ಕರಗುತಲಕ್ಷಯಾಂಬರವ || ೨೬೪ ||
ಕ್ಷತ್ರಾನ್ತಕೋ ಭಾರ್ಗವಶ್ಚ ವೇದವ್ಯಾಸೋ ಮಹಾಮತಿಃ|
ಹಲಾಯುಧಶ್ಚ ವಿಕ್ರಾನ್ತಸ್ಸವಿತಾ ನನ್ದನೋ ಮಹಾನ್||೪೦||(೨೭೩)
ಕ್ಷತ್ರಾಂತಕನೆ ದೇವ ಕೃಷ್ಣನೆ
ಕ್ಷತ್ರಿಯರಲಿ ದುಷ್ಟರನು ತರಿದಿಹೆ
ಕ್ಷಾತ್ರತೇಜದಿ ಜಾಮದಗ್ನಿಯರೂಪ ತಾಳುತಲಿ |
ಕ್ಷಾತ್ರ ರಾಜರು ದುಷ್ಟರಾಗಿರೆ
ಪಾತ್ರತೆಯ ರಹಿತರನು ಮಡುಹಿದೆ
ಗಾತ್ರತ್ರಾಣನೆ ಪಾತ್ರತ್ರಾಣನೆ ಗೋತ್ರತ್ರಾಣನೆಲ || ೨೬೫ ||
ಭಾರ್ಗವನೆ ಭೃಗುವಂಶಜನೆ ಹರಿ
ಭರ್ಗಶಿಷ್ಯನೆ ರೇಣುಕಾಸುತ
ಸರ್ಗಮಾರಕ ದುಷ್ಟರಾಜರ ತರಿದು ಜಗದೊಳಗೆ |
ಸ್ವರ್ಗ ಮಾಡಿದೆ ಭೂಸುರರ ನೀ
ಸರ್ಗಗೈದಿಯೆ ವರುಣಭಾಗವ
ದುರ್ಗಮದ ತಪಗೈದು ಭಾವೀಗೋತ್ರಪತಿಯಪ್ಪೆ || ೨೬೬ ||
ವೇದವ್ಯಾಸನೆ ವಿಷ್ಣುರೂಪನೆ
ವೇದಗಳ ವಿಂಗಡಣೆ ಮಾಡಿದೆ
ವೇದವೇಕವನೇಕವಾದುವು ಶಾಖೆಯುಪಶಾಖೆ |
ಭೇದರೂಪಿಲಿ ನಾಲ್ಕು ವೇದವ
ಕಾದೆ ನಾಲ್ವರು ಶಿಷ್ಯರೂಪಿಲಿ
ಪಾದಕೊಂದಿಪೆ ಬಾದರಾಯಣ ಕೃಷ್ಣ ದ್ವೀಪಜನೆ || ೨೬೭ ||
ಮಹಾಮತಿ ಹರಿ ಕೃಷ್ಣ ಕೇಶವ
ಮಹಾಬುದ್ಧಿಯೆ ಧೀಪ್ರಚೋದಕ
ಮಹಾಮಹಿಮನೆ ಸರ್ವಮತಿ ನೀ ಸರ್ವರೊಳಗಿರುವೆ |
ಸಹಾಯವು ನಿನದಿರಲಿ ಸುಜನರ
ಮಹಾಸತ್ಕರ್ಮಗಳ ಯಜ್ಞಕೆ
ಮಹಾಮಾಯಿಯೆ ಮಹಾದೇವಪ್ರಿಯನೆ ನಾರಯಣ || ೨೬೮ ||
ಹಲಾಯುಧ ಬಲರಾಮ ಹಲಧರ
ಹಲವು ನೇಗಿಲು ಶಸ್ತ್ರವಿವನಿಗೆ
ಬಲನು ಶೇಷಾಂಶದಲಿ ನಾರಾಯಣನ ಶೇಷಾಂಶ |
ಬಲನು ರೋಹಿಣಿತನಯ ಕೃಷ್ಣಗೆ
ಬಲನು ತಾನಗ್ರಜನು ರಾಜನು
ಹಲಾಯುಧ ಬಲರಾಮ ಚಕ್ರಾಯುಧನೆ ಶ್ರೀಕೃಷ್ಣ || ೨೬೯ ||
ವಿಕ್ರಾಂತ ಹರಿ ಕ್ರಮಿಸಿಹ ವಿಶೇಷದಿ
ವಿ-ಕ್ರಮನು ತ್ರಿಜಗದೊಳು ವಾಮನ
ಸಕ್ರಮಿಸಿ ವಿಕ್ರಮದ ಬಲಿನಿಗ್ರಹವ ಗೈದಿಹನು |
ಪ್ರಕ್ರಮವು ಕಾಲೋಚಿತವು ಹರಿ
-ಯಕ್ರಮವ ನಿಗ್ರಹಿಸಿ ಸುಸ್ಥಿತಿ
ಸಕ್ರಮಮವ ಗೈದಿಹನು ಭಕುತನ ಬಾಗಿಲನು ಕಾಯ್ದ || ೨೭೦ ||
ಸವಿತಾ ಪ್ರಸವಿತೃವು ಸಕಲಕು
ಸವಿವ ಸಕಲವ ಸೃಜಿಪ ಭೋಗಿಪ
ಸವಿತೃನಾರಾಯಣನ ರೂಪದಿ ಜಗವ ಬೆಳಗುವನು |
ಕವಿದ ಕತ್ತಲೆ ದೂಡುವನು ಹರಿ
ಹವಿಷವುಣ್ಣುವ ದೇವತಾತ್ಮನು
ಭವಿತಭೂತಭವತ್ಪ್ರಕಾಶಕ ತ್ರಿಕಾಲಾತೀತ || ೨೭೧ ||
ನಂದನನೆ ಗೋವಿಂದ ಕೃಷ್ಣನೆ
ನಂದಯತಿ ನಂದತಿಯು ಹರಿಯಾ-
-ನಂದಸಚ್ಚಿದ್ಘನನು ಪರಮಾನಂದ ಸುಂದರನು |
ಮಂದಹಸಿತನಾನಂದ ಕೊಡುವನು
ಬೆಂದ ಧಾನ್ಯದಲನ್ನಬ್ರಹ್ಮನು
ಮುಂದೆ ಗತಿ ನೀ ಕೃಷ್ಣ ವಿಷ್ಣು ಮಹೇಶ್ವರನ ಕಾಯೋ || ೨೭೨ ||
ಮಹಾನ್ ದೊಡ್ಡವನೆಲ್ಲಕಿಂತಲು
ಮಹಾತತ್ತ್ವವದಾತ್ಮಬ್ರಹ್ಮವು
ಮಹಾನಾರಾಯಣನು ವಿಷ್ಣುವು ಮಹೇಶ್ವರನು ಕೃಷ್ಣ |
ಮಹತ್ತತತ್ತ್ವನು ಸಕಲತತ್ತ್ವಕು
ಮಹಾಮೂಲನು ಮಹಿಮ ಪೂಜ್ಯನು
ಮಹಾಪುರುಷನು ಸರ್ವರಂತರ್ಯಾಮಿ ತತ್ತ್ವಮಸಿ || ೨೭೩ ||
ಋಷಭಃ ಕಪಿಲೋ ಜಿಷ್ಣುಃ ಕೃಷ್ಣದ್ವೈಪಾಯನೋ ವಿಭುಃ।
ಬುಧಪ್ರಿಯೋ ಬುದ್ಧಿರೂಪೋ ಬುದ್ಧಿದಾತಾ ಧನಪ್ರದಃ॥೪೧॥(೨೮೨)
ಹೇ ಮಹಾವಿಷ್ಣುವೇ ಋಷಭನೆ
ಹೇ ಮಹಿಮನದ್ಯಾತ್ಮಬೋಧಕ
ಹೇ ಮಹಾವೈರಾಗ್ಯಮೂರ್ತಿಯೆ ಭಾಗವತಪ್ರೋಕ್ತ |
ಧಾಮ ಜ್ಞಾನದ, ಋಷಿಯೆ ಋಷಭನೆ
ನೀ ಮಹಿಮ ಸ್ವಾರೋಚಿಷದಿ ಕೃತ
ಜನ್ಮ ನಾಭೀರಾಜಸುತ ಜಡಭರತಪಿತ ಹರಿಯೆ || ೨೭೪ ||
ಕಪಿಲಮುನಿ ಸಾಂಖ್ಯವನು ಬೋಧಿಸಿ
ಗುಪಿತ ಜ್ಞಾನವ ಭಕುತಿ ಯೋಗವ
ಸ್ಥಾಪಿಸಲು ಬೋಧಿಸಿದ ಮಾತೆಗೆ ದೇವಹೂತಿಗೆ ತಾ |
ಕಪಿಲ ಸಿದ್ಧನು ಕರ್ದಮನ ಸುತ
ಜಪಿಸಿಯಿಪ್ಪತ್ತೈದು ತತ್ತ್ವವ
ವಪನಗೈದನು ಸಾಂಖ್ಯದರ್ಶನಬೀಜ ಜಗದೊಳಗೆ || ೨೭೫ ||
ಜಿಷ್ಣು ಜಯಿಸುವ ವಿಷ್ಣು ವಿಕ್ರಮಿ
ವಿಷ್ಣು ಶಾಶ್ವತನಾಗ್ಯನಂತನು
ಕೃಷ್ಣ ಗೋವ್ಗಳ ಹೃದಯವರಿಯುತ ಮತ್ತೆ ಗೋವಿಂದ |
ಜಿಷ್ಣುವರ್ಜುನ ಪಾಂಡವರಲಿಹ
ಜಿಷ್ಣು ವಿಷ್ಣು ಜಯಿಷ್ಣು ಜೇತೃವು
ಕೃಷ್ಣ ನೀ ಶಾಶ್ವತದಿ ಜಯಶೀಲನು ಸರುವಶಕ್ತ || ೨೭೬ ||
ಕೃಷ್ಣದ್ವೈಪಾಯನನೆ ವ್ಯಾಸನೆ
ಕೃಷ್ಣನಂಕಿತ ದ್ವೀಪದಾಶ್ರಯ
ಕೃಷ್ಣ ವೇದ-ವ್ಯಾಸನಷ್ಟಾದಶಪುರಾಣಕೃತ್ |
ಕೃಷ್ಣ ಪಾರಾಶರ್ಯ ಬಾದರಿ
ಕೃಷ್ಣ ಸತ್ಯವತೀಜ ಕುರುಕುಲ
ಕೃಷ್ಣ ರಕ್ಷಕ ನೂರು ಕೌರವಭ್ರೂಣ ಘೃತಭಾಂಡ || ೨೭೭ ||
ವಿಭು ವಿಶೇಷದಿ ಸರ್ವಗತ ಹರಿ
ಪ್ರಭುವು ಮೂರ್ಲೋಕಕ್ಕೆ ಕೃಷ್ಣನು
ವಿಭುವು ಶಂಕರ ಬೊಮ್ಮ ವಿಷ್ಣುವು ಸಕಲರಾಂತರನು |
ವಿಭುವು ನಿತ್ಯನು ಸರ್ವಪೂಜ್ಯನು
ವಿಭು ಸಕಲ ಸಾಕಾರಲೋಕವು
ವಿಭುವು ಕಾಲನು ವ್ಯಾಪಕನು ದೃಢ ಪರಮಮಹಿಮಯುತ || ೨೭೮ ||
ಬುಧಪ್ರಿಯ ಹರಿ ಬುಧಗ್ರಹಪ್ರಿಯ
ಬುಧನ ದೇವತೆ ವಿಷ್ಣು ಕೃಷ್ಣನು
ಬುಧನ ಪೀಡೆಯು ನಾಶ ವಿಷ್ಣುವೆ ನಿನ್ನ ದಯದಿಂದ |
ಬಧಿರನಿಗೆ ಶ್ರವಣೇಂದ್ರಿಯವ ಕೊಡು–
-ವಧಿಕಮಹಿಮನೆ ಜ್ಞಾನಿಯಾತ್ಮ ವಿ-
-ಬುಧರ ಪ್ರಿಯ ಬಹುಜನರ ಪ್ರಿಯ ಬ್ರಾಹ್ಮಣನ ಪೂಜಿಪನೆ || ೨೭೯ ||
ಬುದ್ಧಿರೂಪ ವಿಶುದ್ಧಿರೂಪನೆ
ಬುದ್ಧಿಯಿವ ಸಕಲರಲು ನೆಲೆಸಿಹ
ಬುದ್ಧಿಪ್ರೇರಕ ಬುದ್ಧ ಬದ್ಧರ ಮುಕ್ತಿಗೊಳಿಸುವನೆ |
ಬುದ್ಧಿಶಕ್ತಿಯು ಕೃಷ್ಣ ನೀನೇ
ಸಿದ್ಧಿ ಸಕಲವು ದೇವದೇವ ಪ್ರ-
-ಸಿದ್ಧನಾತ್ಮನು ಬೊಮ್ಮ ಸಕಲರ ಹೃದಯದೊಳಹೊರಗೆ || ೨೮೦ ||
ಬುದ್ಧಿದಾತನೆ ಹರಿ ಸಕಲರಿಗೆ
ಬುದ್ಧಿ ಕೊಡುವನು ಶುದ್ಧಿ ಕೊಡುವನು
ಸಿದ್ಧಿ ಕೊಡುವನು ಜೀವಕರ್ಮದ ಫಲಸ್ವರೂಪದಲಿ |
ಬುದ್ಧಿ ದೇಹಕೆಯಾತ್ಮ ಕೊಡುವನು
ಬದ್ಧ ಜೀವನು ತಾನು ಬ್ರಹ್ಮವು
ಬುದ್ಧಿ ಸಿದ್ಧಿಗೆ ಸಾಕ್ಷಿ ಸರ್ವಾಂತರನು ಪರಬೊಮ್ಮ || ೨೮೧ ||
ಧನಪ್ರದ ಹರಿ ಶ್ರೀಪತಿಯು ತಾ
ಧನವ ಸಂಪದವೀವ ಕರುಣದಿ
ಜನವ ವಿದ್ಯೆಯ ಗುಣವ ಭಕ್ತಿಯ ನಿಖಿಲ ಸಂಪದವ |
ಧನವದಾರೋಗ್ಯಾದಿ ಶಾಂತಿಯು
ಧನವು ಬುದ್ಧಿಯು ಶುದ್ಧಿ ಜ್ಞಾನವು
ಧನವು ವೈರಾಗ್ಯಾದಿ ಸಕಲವು ಕೃಷ್ಣದಯೆಯಿಂದ || ೨೮೨ ||
ಸಕಲಗ್ರಹನಾಥಶ್ಚ ಸರಸೀರುಹಲೋಚನಃ।
ಸರಸಸ್ಸಾರಸಸ್ಸೀರಸ್ಸುರಸ್ಸುರವರಸ್ಸ್ವರಾಟ್॥೪೨॥(೨೯೦)
ಸಕಲಗ್ರಹನಾಥನೆ ಮಹೇಶ್ವರ
ಸಕಲ ಗ್ರಹಗಳಿಗೊಡೆಯ ಕೃಷ್ಣನೆ
ಸಕಲ ಗ್ರಹಬಲ ನೀನೆ ದೇವನೆ ಸರಸಿಜಾಕ್ಷ ಹರಿ |
ಸಕಲ ಕಲವಂಶಾತ್ಮಕನು ಸಕಲನು
ಸಕಲ ಗ್ರಹ ಗ್ರಹಣದಲಿ ಜೀವರ
ಸಕಲ ಗತಿವಡೆವಂಥ ಗ್ರಹಫಲದಾತ ಶ್ರೀಕೃಷ್ಣ || ೨೮೩ ||
ಸರಸೀರುಹಲೋಚನನೆ ಹರಿ
ಸರಸಿಯಲಿಯಾರೋಹಿಸಿದ ಸುಮ
ಸರಸಿಜದವೊಲು ನೇತ್ರ ಸುಂದರ ದೇವ ಶ್ರೀಕೃಷ್ಣ |
ಸರಸಿಜಾಂಬಕ ಪದ್ಮನಯನನೆ
ಸರಸಿಜೋದ್ಭವಪಿತನೆ ಕಮಲಪ
ಸರಸಿಜಾಸನೆರಮಣ ಸಲಹುಗೆ ಸುಜನಸಂಕುಲವ || ೨೮೪ ||
ಸರಸ ನೀ ರಸಸಹಿತ ಕೃಷ್ಣನೆ
ಸುರಸ ನೀ ಸರ್ವಕ್ಕು ಸೃಷ್ಟಿಯ
ವಿರಸನಾಶನ ಸರಸಕಾರಣ ಸಮರಸನೆ ಕೃಷ್ಣ |
ಪರ ಸನಾತನ ರಸವು ತತ್ತ್ವವು
ವರ ಪುರಾತನ ಪುರುಷ ಶ್ರೀಹರಿ
ಸರ-ಸಹಿತ ಸರಸ-ಹಿತಕಾರಕ ದೇವ ಸರ್ವೇಶ || ೨೮೫ ||
ಸಾರಸನೆಯರಸಾತ್ಮಕನೆ ಹರಿ
ಸಾರ ಸತ್ತ್ವನೆ ಚಂದ್ರಮನೆ ಹರಿ
ಸಾರಸದಲಾಕ್ಷನೆ ಜಲಾಧಿಪ ನೀರಶಯನ ಹರಿ |
ಸರಸಭಾವನೆ ಸರಸಿಭವ ಹರಿ
ಸುರಸಿಕನೆ ಜಲರೂಪಿ, ಸರಸಿಜ
ಸಾರಸಾತ್ಮಕ ಸರ್ವಸಾರನೆ ದೇವ ಪರಬೊಮ್ಮ || ೨೮೬ ||
ಸೀರ ಕೃಷ್ಣನೆ ನೇಗಿಲಿನ ತನು
ವೀರ ಭೂಮಿಯನುಳುವ ಹಲತನು
ಸೀರಪಾಣಿಯ ತಮ್ಮ ಬಲರಾಮಾನುಜನೆ ಕೃಷ್ಣ |
ಸೀರರೂಪಿಲಿಯನ್ನವೀವನೆ
ಸೀರರೂಪಿಲಿ ವೃಷಭಸಹಗತಿ
ಕ್ಷೀರವಾರಿಧಿಶಯನ ಶೇಷನ ಮೇಲೆ ಮಲಗಿಹನೆ || ೨೮೭ ||
ಸುರನೆ ಕೃಷ್ಣನೆ ಹರಿಯೆ ವಿಷ್ಣುವೆ
ಸುರನು ಸುಷ್ಠು ರಾತ್ಯಭೀಷ್ಟವ
ಸುರನು ಬೇಡಿದ ವರವನೀವನು ದೇವದೇವ ಹರಿ |
ಸುರನೆ ಸುಂದರ ಬೆಳಗುದೀಪ್ತಿಯು
ಸುರನು ತಾನೈಶ್ವರ್ಯವಂತನು
ಸುರನದಿತಿಕಶ್ಯಪರ ಸೂನುವು ವಿಷ್ಣು ಶ್ರೀಕೃಷ್ಣ || ೨೮೮ ||
ಸುರವರನೆ ತಾನಮರಶ್ರೇಷ್ಠನೆ
ಸುರರ ಗಡಣಕೆ ನಾಯಕನೆ ಹರಿ
ಸುರರೊಳುನ್ನತ ದೇವದೇವನೆ ತಾನುಪೇಂದ್ರನೆಲ |
ಸುರರೊಳವರನು ವಾಮನನು ಮಿಗೆ
ಸುರರೊಳಮಿತಪ್ರತಾಪಶಾಲಿಯು
ಸುರರ ಕಾವನೆ ಸುರರೊಳಧಿಕನೆ ಹೇ ಪರಂಜ್ಯೋತಿ || ೨೮೯ ||
ಸ್ವರಾಟ್ ಕೃಷ್ಣನೆ ಸ್ವಯಂ ಬೆಳಗುವ
ಸ್ವರಾಜನೆ ತಾ ವಿರಾಜನೆ ಹರಿ
ಸ್ವರಾಡಧಿಪತಿ ಸಕಲ ಸೃಷ್ಟಿಗೆ ದೇವ ಪರಮೇಶ |
ವಿರಾಜಿಸುತಿಹ ದಿವ್ಯಜ್ಯೋತಿಯೆ
ಸುರಾಸುರರಿಂ ವಂದ್ಯಪಾದನೆ
ಸುರನರೋರಗದೈತ್ಯಕಿನ್ನರಪೂಜ್ಯ ಶ್ರೀಕೃಷ್ಣ || ೨೯೦ ||
ಸೂರ್ಯಸ್ಸೃಷ್ಟಿಪತಿಸ್ಸೇವಾಪ್ರಿಯಸ್ಸೈಕತಪುಣ್ಡ್ರಕಃ।
ಸೋಮಸ್ಸೋಮಪ್ರಿಯಸ್ಸೌತಿಸ್ಸಂಪದೇಶೋ ಮಹೀಶ್ವರಃ॥೪೩॥(೨೯೯)
ಸೂರ್ಯರೂಪಿಯೆ ದೇವಕೃಷ್ಣನೆ
ಸೂರ್ಯ ಸರಿವನು ಗಗನಮಾರ್ಗದಿ
ಸೂರ್ಯ ಕರ್ಮಪ್ರೇರಕನು ಜಗದಲ್ಲಿ ನೀ ಸಾಕ್ಷಿ |
ಸೂರ್ಯದೇವನು ಸೃಷ್ಟಿಕಾರಣ
ಸೂರ್ಯನೇ ಪಾಲಿಪನು ಲಯಿಸುವ
ಸೂರ್ಯನಂತರ್ಯಾಮಿ ನಾರಾಯಣನೆ ಗಾಯತ್ರೀ || ೨೯೧ ||
ಸೃಷ್ಟಿಪತಿ ಪರಮಾತ್ಮ ಕೃಷ್ಣನೆ
ಸೃಷ್ಟಿಯೆಲ್ಲದರಧಿಪತಿಯು ತಾ
ಸೃಷ್ಟಿಗೀಶನು ಸೃಷ್ಟಿಕಾರಕ ಸೃಷ್ಟಿಪಾಲಕನು |
ದೃಷ್ಟಿ ಪೂರ್ಣವು ಸಕಲವರಿತಿಹ
ಸೃಷ್ಟಿಮಾಯೆಯ ನಾಟಕವ ತಾ
ಸೃಷ್ಟಿಸಿದವೊಲು ತೋರುತಿರುವನು ಬ್ರಹ್ಮವದೆ ಸತ್ಯ || ೨೯೨ ||
ಸೇವಾಪ್ರಿಯನೆ ಸೇವಕರ ಪ್ರಿಯ
ಸೇವೆ ಮಾಡುವ ಭಕ್ತಸೇವಕ
ಸೇವೆಯನು ಪ್ರೀತಿಯಲಿ ಕೊಳ್ಳುವ ದೇವ ಶ್ರೀಕೃಷ್ಣ |
ಸೇವೆಗೊಲಿದಿಹನಾ ಸುಧಾಮನ
ಸೇವೆಗೊಲಿದಿಹ ಪಾಂಡುಸುತರಿಗೆ
ಸೇವ್ಯಸೇವಕಭಾವರಹಿತನೆ ಹೇ ಪರಬ್ರಹ್ಮ || ೨೯೩ ||
ಸೈಕತಪುಂಡ್ರಕನೆ ರಾಮನೆ
ಸಿಕತ ಮರಳಲಿ ಸೇವೆ ಗೈದಿಹ
ಮಿಕವದಳಿಲಿಗೆ ಸೇತುಬಂಧದಿ ಮೂರು ನಾಮವನು |
ಅಕಟಕಟ ಪ್ರೇಮದಲಿ ಗೀರಿದೆ
ಸಕಲವಲ್ಲಭ ರಾಮ ಕೃಷ್ಣನೆ
ವಿಕಲರಿಗು ಸಕಲವನು ನೀಡುವ ಹೇ ದಯಾಸಿಂಧು || ೨೯೪ ||
ಸೋಮ ಸೋಮಲತಾರಸಾಮೃತ
ಸೋಮ ಚಂದಿರ ಸುಂದರಾಂಗನೆ
ಸೋಮ ಶಕ್ತಿಯ ಸಹಿತ ಪುರುಷನೆ ಹೇ ಪರಬ್ರಹ್ಮ |
ಸೋಮವಾನಂದಾಬ್ಧಿ ಸಂತತ
ಸೋಮನಮೃತಾಂಶುವೆ ಸುಖಪ್ರದ
ಸೋಮಶಂಕರಪ್ರಿಯನೆ ಸಾಮಪ್ರಿಯನೆ ಶ್ರೀಕೃಷ್ಣ || ೨೯೫ ||
ಸೋಮಪ್ರಿಯನೆ ರುದ್ರಸಖ ಹರಿ
ಸೋಮನುಮೆಸಹಿತದಲಿ ಶಂಕರ
ಸೋಮಪ್ರಿಯ ಹರನಾತ್ಮ ಹರನಿಜಭಕ್ತ ಹೇ ಕೃಷ್ಣ |
ಸೋಮರಸಪ್ರಿಯ ಸೋಮಕ್ರತುಪತಿ
ಸೋಮಸುಂದರನುಡುಪತಿಯ ತಪ
ಕಾಮನೆಗೆ ತಾನೊಲಿದು ದಕ್ಷನ ಶಾಪ ಕಳೆದವನೆ || ೨೯೬ ||
ಸೌತಿ ಸೂತಮಹರ್ಷಿಪುತ್ರನೆ
ಸೌತಿರೂಪಿಲಿ ಬೋಧಿಸಿದ ಹರಿ
ಸೌತಿಯಾಗಿ ಪುರಾಣವಿತಿಹಾಸಾದಿ ಸಕಲವನು |
ಸೌತಿಯುಗ್ರಶ್ರವನು ಕಲಿಯಲಿ
ಸೌತಿ ರೋಮಹರ್ಷಣಿಯ ಪುತ್ರನು
ಸೌತಿ ನೈಮಿಷವನದಿ ಶೌನಕಮುಖ್ಯರಿಗೆ ಕೃಷ್ಣ || ೨೯೭ ||
ಸಂಪದೇಶನೆ ಸಂಪದಧಿಪತಿ
ಸಂಪದವು ಸಿರಿ ಲಕುಮಿ ತಾ ಪತಿ
ಸೊಂಪಿನಲಿ ಸಂಪದವನೀವನು ಕೃಷ್ಣ ಹೇ ವಿಷ್ಣೋ |
ಸಂಪದವು ನೂರಾರು ರೂಪವು
ಪೆಂಪು ಧನ ಕನಕ ಪ್ರವಿದ್ಯೆಯು
ತಂಪುಮನ ಭಕ್ತಿಯ ವಿರಕ್ತಿಯ ಪತಿಯೆ ಶ್ರೀಕೃಷ್ಣ || ೨೯೮ ||
ಮಹೀಶ್ವರ ಹರಿ ಭೂಮಿವಲ್ಲಭ
ಮಹಿಯು ಪೂಜ್ಯವು ಕೃಷ್ಣ ಗೋಪತಿ
ಸಹಿತ ಲಕುಮಿಯ ಮಹಿಯ ಶ್ರೀಹರಿ ಲೋಕಪತಿ ತಾನು |
ಅಹಿಶಯನ ಹರಿ ಮಹಿಯ ಕಾವನೆ
ಮಹಿಯನೆತ್ತುತ ಕೊಂದ ದೈತ್ಯನ
ಮಹಿ ರಸಾತಲದಿಂದ ಸುಸ್ಥಿತಿವಡೆಯೆ ವಾರಾಹಿ || ೨೯೯ ||
Comments
Post a Comment