ಸ್ತೋತ್ರಸಂಹಿತಾ ೨.೩ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)
ॐ
||ಶ್ರೀಗುರುಭ್ಯೋ ನಮ:| ಹರಿ: ಓಮ್||
ಓಂ ಗಣಾನಾಂ ತ್ವಾ ಗಣಪತಿಗ್ಂ ಹವಾಮಹೇ ಕವಿಂ ಕವೀನಾಮುಪಮಶ್ರವಸ್ತಮಮ್ | ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನಃ ಶೃಣ್ವನ್ನೂತಿಭಿಸ್ಸೀದಸಾದನಮ್|| ಶ್ರೀ ವಿಘ್ನೇಶ್ವರಾಯ ನಮಃ||
ಗಣಗಳಧಿಪನ ಗಣಪತಿಯ ತಾ
ಗುಣಗಳೊಡೆಯನ ಮುದದಿ ಪೂಜಿಸಿ
ಗಣಪ ಕವಿವರ ರಾಜರಾಜನ ವಿಘ್ನವಾರಕನ |
ಗಣಿಸಿ ಮೊದಲಿಗೆ ನುತಿಸಿ ಭಕ್ತಿಲಿ
ಮಣಿದು ಶ್ರೀಕೃಷ್ಣನ ಸಹಸ್ರದ
ಮಣಿಮುಕುಟ ನಾಮಗಳ ಸ್ತೋತ್ರವ ವಿರಚಿಸುವೆ ಮುದದಿ ||
ಅಥ
ಶ್ರೀಕೃಷ್ಣಸಹಸ್ರನಾಮಸ್ತೋತ್ರಮ್
||ಧ್ಯಾನಮ್||
(ಶಾರ್ದೂಲವಿಕ್ರೀಡಿತವೃತ್ತಮ್)
ಶ್ರೀಕೃಷ್ಣೋ ಮುರಳೀಧರೋ ಗಿರಿಧರೋ ಗೋವರ್ಧನಶ್ಶ್ರೀಧರೋ
ಮಾಯಾಮೋಹನಪೂರ್ಣವಿಷ್ಣುಪರಮೋ ನಾರಾಯಣಃ ಕೇಶವಃ|
ಪೂರ್ಣಜ್ಞಾನವಿಶೇಷದಿವ್ಯಪುರುಷಶ್ಶ್ರೀದೇವಕೀನನ್ದನಃ
ಪಾಯಾನ್ನಶ್ಶರಣಾಗತಾಂಶ್ಚ ಕೃಪಯಾ ದೀಯಾತ್ಪರಂ ಮಙ್ಗಲಮ್||
ಮುರಳಿಮೋಹನ ಕೃಷ್ಣ ಗಿರಿಧರ
ಪರಮಮಂಗಲಪೂರ್ಣ ವಿಷ್ಣುವು
ವರದ ಮಾಯಾಧೀಶ ನಾರಾಯಣನು ಕೇಶವನು |
ಪರಮ ಸರ್ವಜ್ಞೇಶ್ವರಾತ್ಮಕ
ನರನ ರೂಪಿಲಿ ತೋರ್ದ ದೇವಕಿ
ಯರಸಿತನಯ ಕೃಪಾನಿಧಿಯು ಪಾಲಿಸಲಿ ಮಂಗಲವ ||
(ಅನುಷ್ಟುಬ್-ವೃತ್ತಮ್)
ದೇವಕೀನನ್ದನ: ಕೃಷ್ಣೋ ವಸುದೇವಾತ್ಮಜೋ ಹರಿ:|
ಅಷ್ಟಮೀತಿಥಿಸಮ್ಭೂತಶ್ಶ್ರಾವಣೇಕೃಷ್ಣಸಮ್ಭವ:||೧||(೬)
ದೇವತಾಕಾರ್ಯವನು ಮಾಡಲು
ದೇವಕಿಯ ಗರ್ಭದೊಳು ಜನಿಸಿದೆ
ದೇವಕೀಯದ ರಾಜಕೀಯದಿ ಧರ್ಮ ರಕ್ಷಿಸಿದೆ |
ದೇವಕೀನಂದನನೆ ಶ್ರೀಪತೆ
ದೇವಕಿಯೊಳಾನಂದ ತುಂಬಿದೆ
ದೇವಕಿಯ ಮಡಿಲನ್ನು ತುಂಬುತ ದೇವದೇವಾತ್ಮ || ೧ ||
ಅಖಿಲ ಲೋಕಾಕರ್ಷಕನೆ ಗುರು
ನಿಖಿಲ ಲೋಕಸ್ಥಿತಿಯ ಕಾಯ್ವನೆ
ನಿಖಿಲ ಶಿಷ್ಟರ ಧರ್ಮ ರಕ್ಷಿಸಿ ಭಕುತಿ ಮುಕುತಿಪ್ರದ |
ಅಖಿಲ ದುಷ್ಟಾಕರ್ಷಕನೆ ಹರಿ
ನಿಖಿಲ ದೌಷ್ಟ್ಯಪತಂಗನಿವಹವ
ನಖಿಲ ಮೂಲಜ್ಯೋತಿಯಲಿ ಸುಡುವಂಥ ಶ್ರೀಕೃಷ್ಣ || ೨ ||
ವಾಸುದೇವನೆ ಗೋಕುಲೇಶನೆ
ವಾಸವಾದಿಗಳಿಂದ ವಿನುತ ನಿ
ವಾಸ ದ್ವಾರಕೆಯಲ್ಲಿ ಗೋಕುಲದಲ್ಲಿ ಮಥುರೆಯಲಿ |
ವಾಸ ವಸುದೇವಾತ್ಮಜನು ಶ್ರೀ
ವಾಸನೈಶ್ವರ್ಯಾತ್ಮದೇವ ನಿ
ವಾಸವಾಗಿಹ ಕಶ್ಯಪಾತ್ಮಜನಾಗಿ ಶ್ರೀಕೃಷ್ಣ || ೩ ||
ಹರಿಯೆ ನೀ ಪರಿಹರಿಪೆ ತಮವನು
ಹರಿಯೆ ನೀನಜ್ಞಾನವನು ಸಹ
ಹರಿಯೆ ಸರ್ವಾಘಂಗಳನು ತಾ ಪರಿಹರಿಪ ಸ್ವಾಮಿ |
ಹರಿಯೆ ದುರ್ಗುಣವಾರಕನೆ ಗುರು
ಹರಿಯೆ ಸಂಕಟಹಾರಕನೆ ನೀ
ಹರಿಸಿ ಕರುಣೆಯ, ಮರೆತು ಪಾಪವನುದ್ಧರಿಸು ಕೃಷ್ಣ || ೪ ||
ಅಷ್ಟಮಿಯ ತಿಥಿಯಲ್ಲಿ ಜನಿಸಿದೆ
ಕಷ್ಟಗಳ ಪರಿಹರಿಸು ಕೃಷ್ಣನೆ
ನಷ್ಟಲಾಭಾದಿಗಳ ದ್ವಂದ್ವವ ಕಳೆದು ಸ್ಥಿರತೆಯನು |
ಇಷ್ಟಲಾಭವ ನೀಡು ಸಕಲವ
ನಿಷ್ಟಗಳ ಕಳೆ ವಾಸುದೇವ ನೀನ್
ಅಷ್ಟಮೀತಿಥಿಸಂಭೂತನೆಂದಾದೆ ವಿಖ್ಯಾತ || ೫ ||
ಶ್ರಾವಣದ ಮಾಸದಲಿ ಮಥುರೆಲಿ
ಭಾವಕೊಲಿಯುವ ಕೃಷ್ಣದೇವನು
ಮಾವ ಕಂಸಗೆ ಶತ್ರು ಜನಿಸಿದ ಕೃಷ್ಣಪಕ್ಷದಲಿ |
ಆವ ದೇವರ ಬೇಡಲೆನ್ನುವ
ಭಾವಶೂನ್ಯತೆ ತೊರೆದು ಭಜಿಸೆಲೊ
ಶ್ರಾವಣೇಕೃಷ್ಣಸಂಭವನನ್ನು ಶುದ್ಧಭಕ್ತಿಯಲಿ || ೬ ||
ವಿಷ್ಣುಪೂರ್ಣಾವತಾರಃ ಕೋ ಮಥುರಾಪುರಜನ್ಮಭೂಃ |
ವಾಸುದೇವೋ ಮಹಾತೇಜಃ ಕೋಟಿಸೂರ್ಯಪ್ರಭಾಯುತಃ ||೨||(೧೨)
ವಿಷ್ಣುವಿನ ಪೂರ್ಣಾವತಾರಿಯು
ಕೃಷ್ಣರೂಪದಿ ಜನಿಸಿ ಲೋಕದಿ
ವಿಷ್ಣು ವ್ಯಾಪಕನಾಗಿ ಸಕಲವ ತಾ ಪ್ರವೇಶಿಸಿದ |
ಕೃಷ್ಣ ಸೃಷ್ಟಿ ಸ್ಥಿತಿ ಲಯಾಧಿಪ
ಕೃಷ್ಣ ಲೀಲೆಯ ತೋರ್ದನಿಳೆಯೊಳು
ವಿಷ್ಣುಪೂರ್ಣಾವತಾರಾಖ್ಯದಿ ಲೋಕಜಸವಡೆದ || ೭ ||
ಕಃ ಪರಾತ್ಮನು ಸೃಷ್ಟಿಕರ್ತನು
ತಾ ಪರಮ ಚತುರ್ಮುಖನರೂಪಿನ
ಲೀ ಪರಿಯ ಲೋಕಗಳ ಸೃಜಿಸಿದನಾ ಪರಬ್ರಹ್ಮ |
ಆ ಪರಾತ್ಪರ ಜ್ಯೋತಿ ಬೆಳಗುವ
ನಾ ಪರಮಧಾಮಾತ್ಮ ಕೃಷ್ಣನು
ಪಾಪಪುಣ್ಯವಿದೂರ ಸರ್ವರ ಜನಕ ಬ್ರಹ್ಮಾತ್ಮಾ || ೮ ||
ಮಥುರಾಪುರಜನ್ಮಭೂ ತಾ
ಮಥುರೆಯೆಂಬುವ ಪಟ್ಟಣದಿ ನಿಜ
ಮಥುರನಾಥ ಶ್ರೀಕೃಷ್ಣರೂಪಿಲಿ ಜನುಮ ಗ್ರಹಿಸಿದನು |
ಅತುಲಬಲದರ್ಪಿಗಳ ದೈತ್ಯರ
ಪತನಗೈದು ಸುಧರ್ಮರಕ್ಷೆಯ
ಜತನದಲಿ ಕಾಪಿಡಲು ದೇವಕಿಪುಣ್ಯಗರ್ಭದೊಳು || ೯ ||
ವಾಸುದೇವ ಮಹಾನುಭಾವನು
ವಾಸವಾಗಿಹನಖಿಲಲೋಕದಿ
ವಾಸನಾಧಿಕ್ಯತೆಯ ಲೋಕದಿ ಚೇತನವ ತುಂಬಿ |
ವಾಸುಕಿಯ ಶಯನೇಶ ಶ್ರೀಶನ
ವಾಸವಾದಿಗಳೆಲ್ಲ ನುತಿಸಲು
ರಾಸುರಕ್ಷಕ ಕೃಷ್ಣ, ವಸುದೇವನಿಗೆ ಮಗನಾದ || ೧೦ ||
ಮಹಾತೇಜವೆ ನಿನಗೆ ನಮನವು
ಮಹಾಜ್ಯೋತಿಯೆ ನಿನಗೆ ವಂದನೆ
ಮಹಾಶಕ್ತಿಸ್ವರೂಪಿ ಸಕಲಾತ್ಮಕ ಪರಂಜ್ಯೋತಿ |
ಮಹಜ್ಜ್ಞಾನಮಯಾತ್ಮರೂಪನೆ
ಮಹತ್ತತ್ತ್ವದ ಮೂಲಕಾರಣ
ಮಹಾಸೃಷ್ಟಿಸ್ಥಿತಿಪ್ರಲಯದ ಮೂಲತೇಜಸ್ಸೆ || ೧೧ ||
ಕೋಟಿಸೂರ್ಯಪ್ರಭಾಯುತನನು
ಮೇಟಿವಿದ್ಯೆಗೆ ಕೃಷ್ಣನಗ್ರಜ
ವಾಟಿಕೆಯ ವಿಹರಿಸಿದ ವೃಂದಾವನದ ಗೋಪೇಶ |
ಚಾಟಿ ಪಿಡಿದಿಹ ಪಾರ್ಥಸಾರಥಿ
ನಾಟಿಜನ ಮಂದಾರ ಶ್ರೀಪತಿ
ಸಾಟಿ ನಿನಗಾರಿಹರು ಸುಂದರಮೂರ್ತಿ ಶ್ರೀಕೃಷ್ಣ || ೧೨ ||
ಅಷ್ಟಮಗರ್ಭಸಮ್ಭೂತೋ ಜಾತರೋಹಿಣಿತಾರಕಃ|
ನನ್ದಗೋಪಕುಮಾರಶ್ಚ ಗೋಕುಲೇಶಃ ಪ್ರತಾಪವಾನ್||೩||(೧೭)
ಅಷ್ಟಮಗರ್ಭಸಂಭೂತ ನೀ
ನಷ್ಟಮಿಯಲಾಧರ್ಮ ಮೀರಲು
ಶಿಷ್ಟತೆಯ ಪಕ್ಷದಲಿಯರ್ಧವ ಭ್ರಷ್ಟಚಾರವದು |
ಶಿಷ್ಟಜನರುದ್ಧಾರ ಮಾಡಲು
ದುಷ್ಟಶಿಕ್ಷಣ ಶಿಷ್ಟರಕ್ಷಣ
ಭ್ರಷ್ಟರನು ತಾ ಶಿಕ್ಷೆ ಶಿಕ್ಷಣದಿಂದಲುದ್ಧರಿಸೆ || ೧೩ ||
ಜಾತರೋಹಿಣಿತಾರಕನೆ ಸಿರಿ
ಮಾತೆ ದೇವಕಿಯುದರದಲಿ ತಾ
ಖ್ಯಾತ ಕೃಷ್ಣನು ವಾಸುದೇವನ ರೂಪವನ್ನಾಂತು |
ಜಾತ ನಕ್ಷತ್ರದಲಿ ರೋಹಿಣಿ
ಪಾತಕಿಗಳತ್ಯಂತ ಲೀಲೆಯೊ
ಳಾತ ಮುಗಿಸಿದ ಕೃಷ್ಣಚಂದ್ರ ವಿಚಿತ್ರ ಸಚ್ಚರಿತ || ೧೪ ||
ನಂದಗೋಪಕುಮಾರ ಕೃಷ್ಣನೆ
ಸಂದ ದ್ವಾಪರದಲ್ಲಿ ಕೊನೆಯಲಿ
ನಂದಗೋಪನ ಗೋಕುಲದಲಾನಂದದಿಂದ |
ಕಂದ ಬಾಲ್ಯದಿ ಲೀಲೆ ತೋರಿದೆ
ಬಂದೆ ಮಥುರಾನಗರಿಯಿಂದಲಿ
ತಂದೆ ವಸುದೇವನಿಗೆ ಪ್ರೇರಣೆ ಕೊಟ್ಟು ಸೆರೆಯಿಂದ || ೧೫ ||
ಗೋಕುಲೇಶ ಪರಾತ್ಪರನೆ ಹರಿ
ಕಾಕುಜನರಿಗೆ ಸಿಂಹಸ್ವಪ್ನನೆ
ಸಾಕುತಾಯಿ ಯಶೋದೆಗತಿಮುದವಿತ್ತೆ ಲೀಲೆಯಲಿ |
ಬೇಕು ಬೇಕೆಂಬವರ ಮನದಲಿ
ಸಾಕು ಸಾಕೆಂಬಂತೆ ಮನೆಯಲಿ
ಗೋಕುಲದಿ ಶಶಿಯಂತೆ ಬೆಳಗಿದೆ ಗೋಕುಲೋದ್ಧಾರ || ೧೬ ||
ಪ್ರತಾಪವಾನ್ ಪರಮೇಶ ಕೃಷ್ಣನೆ
ಪ್ರತಾಪವ ತೋರಿರುವೆ ಬಾಲ್ಯದಿ
ಹಿತಾಹಿತರೆಂಬುದನು ಗಣಿಸದೆ ಧರ್ಮ ರಕ್ಷಿಸಿದೆ |
ಗತಾಗತಿಕತೆಯುಳ್ಳ ಲೋಕದಿ
ಸ್ವತಾ ನವಮಾರ್ಗವನೆ ತೋರುತ
ಮತಾಚಾರ್ಯರಿಗಾದಿಗುರು ಗೀತಾತ್ಮ ನೀನಾದೆ || ೧೭ ||
ಶಶಿಕೋಟಿಮನೋಹ್ಲಾದೀ ಮಾಯಾಮೋಹನನಾಟಕಃ|
ಪೂತನಾದತ್ತವಿಷಭುಕ್ ಪೂತನಾದೇಹನಾಶನಃ||೪||(೨೧)
ಶಶಿಕೋಟಿಮನೋಹ್ಲಾದೀ
ಶಶಿಯನಂತದ ತೆರದಿ ಮನಸಿಗೆ
ಖುಷಿಯ ಕೊಡುವಾಹ್ಲಾದಮೂಲಗೆ ಕೃಷ್ಣನಿಗೆ ಶರಣು |
ಶಿಶುವಿನೊಲು ಲೀಲೆಗಳ ತೋರಿದ
ಪಶುತೆಯಿಂದುನ್ನತಿಯ ತೋರಿದ
ವಶವ ಮಾಡಿದನಖಿಲಲೋಕವ ಕರ್ಷಿಸುತ ತಾನು || ೧೮ ||
ಮಾಯಾಮೋಹನನಾಟಕನು ನೀ
ಮಾಯಾಜಾಲದಿ ಬೀಳಿಸಿಹೆ ಸಿರಿ
ಮಾಯಾಮೋಹದಿ ಸಿಲುಕಿ ನಲುಗಿಹುದೀ ಸಮಸ್ತ ಜಗ |
ಜಾಯಾಮೋಹದಿ ಕಾಯಮೋಹದಿ
ಆಯಾ ಮೋಹದಿ ಬೀಳಿಸಿಹ ನೀ
ಮಾಯಾಮೋಹನನಾಟಕವ ತೋರಿರುವೆ ಜಗದೊಳಗೆ || ೧೯ ||
ಪೂತನಾದತ್ತವಿಷಭುಕ್
ಪೂತನಿಯ ರಕ್ಕಸಿಯ ಕುಚದೊಳು
ಪೂತಿ ಪರ್ಯುಷಿತತ್ವಯುತ ವಿಷ ತುಂಬಿ ತುಳುಕಿರಲು |
ಪಾತಕಿಯ ವಿಷವನ್ನೆ ಕುಡಿದಿಹ
ನಾತತಾಯಿಯ ಪೂರ್ವಜನ್ಮದ
ಮಾತನುಳಿಸುತ ಪೂತನೆಗೆ ಪೂತತ್ವ ಕರುಣಿಸಿದೆ || ೨೦ ||
ಹಿಂದೆ ಬಲಿಸುತೆ ವಾಮನಾಕೃತಿ
ಯಂದು ನೋಡುತ ಪುತ್ರಭಾವದಿ
ಕಂದ ತನ್ನವನೆಂದು ಮೊಲೆಯೂಡಿಸಲು ಹಾತೊರೆಯೆ |
ಮುಂದಿರುವ ದ್ವಾಪರದಿ ಶ್ರೀಹರಿ
ನಂದಗೋಕುಲದಲ್ಲಿ ಬೆಳೆಯಲು
ಕೊಂದು ಸದ್ಗತಿಯಿತ್ತ ಪೂತನಾದೇಹನಾಶನಃ || ೨೧ ||
ಶಕಟಾಸುರಸಂಹಾರೀ ಯಶೋದಾನನ್ದನ: ಪ್ರಭು:|
ಗೋಪಿಕಾವಲ್ಲಭೋ ಗೋಪೋ ಯಾದವವಂಶಭೂಷಣ:||೫||(೨೭)
ಶಕಟಾಸುರಸಂಹಾರಿಯು
ವಿಕಟ ಕಂಸಾಸುರನು ಕಳುಹಿದ
ಶಕಟರೂಪದ ರಕ್ಕಸನ ತಾ ಬಾಲ್ಯದಲ್ಲಿ |
ಅಕಟ ಮುರಿದಿಕ್ಕಿದನು ಲೀಲೆಯೊ
ಳಕಟ ಕೃಷ್ಣನು ಲೋಕಪಾಲಕ
ನಕಟಕಟಕಟವೇನು ಮಹಿಮೆಯೊ ಭಕ್ತವತ್ಸಲನ || ೨೨ ||
ಯಶೋದಾನಂದನನೆ ಕೃಷ್ಣನೆ
ಯಶೋಗಾಥೆಯು ನಿನ್ನದಮಿತವು
ಯಶೋಗಾನವು ಮೊಳಗಿಹುದು ಯುಗ ಯುಗಾಂತರದಲ್ಲಿ |
ಯಶೋದೆಗೆ ಜನಿಸದೇ ದೇವನೆ
ಯಶೋದೆಯ ಸುತನೆಂದು ಬೆಳಗಿದೆ
ಯಶೋದೆಗೆ ಪರಮಾರ್ಥಸಂತಸವನ್ನು ನೀನಿತ್ತೆ || ೨೩ ||
ಪ್ರಭುವೆ ಕೃಷ್ಣನೆ ಲೋಕದೊಡೆಯನೆ
ವಿಭುವೆ ವೈಕುಂಠಕ್ಕೆ ಮುಕುತಿಗೆ
ಪ್ರಭವ-ಸುಸ್ಥಿತಿ-ವಿಲಯಮೂಲನೆ ಧರ್ಮರಕ್ಷಕನೆ |
ಪ್ರಭಾವಾತುಲಯುತನೆ ಬ್ರಹ್ಮವೆ
ಪ್ರಭಾಯುತ ಪರಮಾತ್ಮಜ್ಯೋತಿಯೆ
ಪ್ರಭಾವಿತನತ್ಯಂತ ಜಗದೊಳು ಸರ್ವರೊಳಗಿಹನೆ || ೨೪ ||
ಗೋಪಿಕಾವಲ್ಲಭನೆ ಕೃಷ್ಣನೆ
ಗೋಪಿಗೋಪರ ನಾಯಕನೆ ಬಹು
ಗೋಪಿಕೆಯರಾಂತರಿಕಪೂಜ್ಯನೆ ಗೋಪಗೋಪೀಶ |
ಗೋಪಿಚಂದನ ಪೂಸಿಕೊಂಡಿಹ
ಗೋಪಿ ರಾಧಾಪ್ರಿಯತಮನೆ ಸಿರಿ
ಗೋಪಿ ಪ್ರಕೃತಿಯು ಕೃಷ್ಣ ಪುರುಷನು ಸೃಷ್ಟಿಮಿಥುನವಿದು || ೨೫ ||
ಗೋಪನೇ ಗೋವುಗಳ ಪತಿಯೇ
ಗೋಪನಿಂದ್ರಿಯಪತಿ ಧರಣಿಪತಿ
ಗೋಪ ಕೃಷ್ಣನೆ ಜ್ಞಾನಪತಿ ಶ್ರೀಸಚ್ಚಿದಾನಂದ |
ಭೂಪ ಶ್ರೀಪ ಸುರೂಪ ನಿರ್ಗುಣ
ತಾಪ ಮೂರರ ಕಳೆಯುವಂಥ ಪ್ರ
ತಾಪಶಾಲಿ ಮಹಾಮಹಿಮ ಗೋಪಾಲ ಸರ್ವಾತ್ಮಾ || ೨೬ ||
ಯಾದವವಂಶಭೂಷಣನೆ ಹರಿ
ಮಾಧವನೆ ಯದುವಂಶತಿಲಕನೆ
ಶ್ರೀದಯಾನಿಧಿ ಕೇಶವಾಚ್ಯುತ ವಾಸುದೇವನೆ ನೀ |
ಪಾದಕೊಂದಿಪೆ ನಿನ್ನ ಕೃಷ್ಣನೆ
ಭೇದ ಮೀರಿದ ಪಾವನಾತ್ಮನೆ
ಸಾಧಕರ ಕರುಣಾಳು ಶ್ರೀಧರ ರುಕ್ಮಿಣೀಲೋಲ || ೨೭ ||
ವಂಶೀಹಸ್ತೋ ಮಹಾದೇವೋ ದೇವದೇವೋ ಜಗತ್ಪತಿ:|
ಭೂಭಾರಹರಣೋ ದಿವ್ಯೋ ಲೀಲಾಮಾನುಷರೂಪಧೃತ್||೬||(೩೪)
ಮುರಳಿಯನು ಕರದೊಳಗೆ ಪಿಡಿದಿಹ
ಮುರರಿಪುವು ಭಾಗ್ಯವನೆ ಕೊಟ್ಟನು
ಮುರಲಿಗಕಟಾ ದೇವದೇವನು ಮುತ್ತಿನೋಕುಳಿಯ |
ವರದ ವಂಶೀಹಸ್ತ ಕೃಷ್ಣನೆ
ಪುರದ ಹಿತಚಿಂತಕನೆ ಮೋಹನ
ಮುರಳಿಗಾನವಿಲೋಲ ಸರ್ವಾಕರ್ಷಣನೆ ನಮಿಪೆ || ೨೮ ||
ಹೇ ಮಹಾದೇವನೇ ನಿನ್ನಯ
ಭೂಮರೂಪ ಬ್ರಹ್ಮವಸ್ತುವು
ನಾಮರೂಪಾತೀತ ತತ್ತ್ವವು ಸರ್ವಸಾಕ್ಷಿತ್ವ |
ಕಾಮಜನಕನು ನೀನೆ ಕೃಷ್ಣನೆ
ಕಾಮಹರ ಶಂಕರನು ರುದ್ರನು
ಸಾಮಪ್ರೀಯನು ಮತ್ತೆ ಹರಿಹರಭೇದವಿಲ್ಲ || ೨೯ ||
ದೇವದೇವನೆ ದೇವರಧಿಪನೆ
ಸಾವ ಮೀರಿದ ಮೋಕ್ಷರೂಪನೆ
ಭಾವಗೊಲಿವನೆ ಪಾವನಾತ್ಮನೆ ದೇವ ವಿಶ್ವಾತ್ಮಾ |
ಕಾವ ದೇವನೆ ನೋವ ಹರಿಪನೆ
ಮೂವರೊಳು ತಾನಾತ್ಮನಾಗಿರೆ
ಕಾವ ಕೊಲುವ ವಿಸೃಜಿಸುವರ ಪತಿಗಾನು ಶರಣೆಂಬೆ || ೩೦ ||
ಜಗತ್ಪತಿಯೆ ಪರಾತ್ಪರನೆ ಗುರು
ಜಗಮಗಿಪ ಪರಂಜ್ಯೋತಿರೂಪನೆ
ಜಗದಿ ನಿನಗಾರಿಹರು ಸರಿ ಮಿಗಿಲಖಿಲರಂತಸ್ಥ |
ಖಗಪತಿಯ ವಾಹನವ ಮಾಡಿಯೆ
ಮೃಗಧರನ ಸೋದರಿಯ ಕೈಪಿಡಿ
ದಘವ ಹರಿಪನ ಪ್ರೇಮದಿಂದಲಿ ನುತಿಪೆನನುದಿನವು || ೩೧ ||
ಭೂಭಾರಹರಣನೇ ಶ್ರೀಹರಿ
ಭೂಭಾರವನು ಪರಿಹರಿಸಲೋಸುಗ
ಈ ಭಾರತದೊಳವತರಿಸಿದನು ಹಲವಾರು ಬಾರಿ |
ನಾಭಿಕಮಲದಿ ಬೊಮ್ಮನಾಗಿಯೆ
ತಾ ಭವಿಷ್ಯದಿ ಕಲ್ಕಿಯಾಗಿಯೆ
ವೈಭವದಿ ಶ್ರೀಕೃಷ್ಣನಾಗಿಯೆ ದುಷ್ಟಹತಿ ಗೈಯೆ || ೩೨ ||
ದಿವ್ಯರೂಪದಿ ಬೆಳಗುವವನೆ
ಭವ್ಯನಾಗಿಯೆ ಪೂಜ್ಯನವನೆ
ಹವ್ಯಕವ್ಯಗಳೆಲ್ಲ ಕೈಗೊಳ್ಳುವ ಪರಾತ್ಪರನೆ |
ಸವ್ಯಮೂರುತಿ ನವ್ಯಕೀರುತಿ
ಕಾವ್ಯರೂಪನೆ ಕಾವ್ಯಸ್ಫೂರ್ತಿಯೆ
ಭಾವ್ಯ ಭಾವಕ ಭಾವ ತ್ರಿಪುಟಿಯ ಮೀರಿದಾ ತತ್ತ್ವ || ೩೩ ||
ಲೀಲಾಮಾನುಷರೂಪಧೃತ್ ನೀ
ಲೀಲೆಯಿಂದಲಿ ಜನ್ಮವೆತ್ತಿದೆ
ಬಾಲಲೀಲೆಗಳನ್ನು ತೋರಿದೆ ದಿವ್ಯಲೀಲೆಯದು |
ಕಾಲ ಮೀರಿದ ತತ್ತ್ವ ನೀನೈ
ಕಾಲದೊಳಗವತರಿಸಿ ತೋರಿದೆ
ಕಾಲಕಾಲನು ನೀನೆ ಕಾಲದೊಳಿರುವ ತೆರ ಲೀಲೆ || ೩೪ ||
ಭೂಧರಶ್ಶ್ರೀಧರೋ ನಿತ್ಯಸ್ಸತ್ಯಭಾಮಾರ್ಥಪೂರಕಃ |
ಪಾರಿಜಾತಪ್ರಿಯಶ್ಚಾರುವಾಗ್ವಿಭೂಷಿತಸುನ್ದರ:||೭||(೪೦)
ಭೂಧರನೆ ವಾರಾಹರೂಪನೆ
ಮಾಧವನೆ ಭೂಪತಿಯೆ ಹರಿಯೆ
ಸಾಧಕರ ಸನ್ಮಾರ್ಗದರ್ಶಕ ಸತ್ತ್ವಗುಣಪ್ರಿಯನೆ |
ಬಾಧಕಗಳನು ಕಳೆವ ಶ್ರೀಧರ
ಮೋದದಿಂದಲಿ ನುತಿಪೆ ನಿನ್ನನು
ಹೇ ದಯಾನಿಧಿ ಹಿರಣ್ಯಾಕ್ಷಗೆ ಗತಿಯ ತೋರ್ದವನೆ || ೩೫ ||
ಶ್ರೀಲಕುಮಿಪತಿ ಶ್ರೀಧರನೆ ಹರಿ
ನೀ ಲಕುಮಿಧರ ವಕ್ಷದೇಶದಿ
ಮಾಲಕನೆ ಸಕಲರ್ಗೆ ಸಂಪದಮೂಲ ಲಕುಮಿಗೆ ತಾ |
ಪಾಲಕನೆ ಸಂಪದದ ಹರಿ ನೀ
ಕಾಲ ಕಾಲಕೆ ಕರ್ಮಫಲಪ್ರದ
ಸಾಲಗಾರನೆ ವೇಂಕಟೇಶನೆ ಲೀಲೆ ತೋರಿದನೆ || ೩೬ ||
ನಿತ್ಯ ನಿರ್ಮಲ ನೀರಜಾಕ್ಷನೆ
ಸತ್ಯರೂಪನೆ ಶಾಶ್ವತಾತ್ಮನೆ
ಮಿಥ್ಯ ಜಗದೊಳು ಸುಪ್ತವಾಗಿಹ ಸರ್ವಕಾರಣನೆ |
ನಿತ್ಯನಿತ್ಯವಿವೇಕರೂಪನೆ
ವ್ಯತ್ಯಯಕ್ಕೊಳಗಾಗದಿರುವನೆ
ಸತ್ಯಸುಂದರ ನಿತ್ಯಶಿವನೆ ಹೇ ನಿರಾಮಯನೆ || ೩೭ ||
ಸತ್ಯಭಾಮಾ ರ್ಥ ಪೂರಕನೆ
ಸತ್ಯಭಾಮೆಗೆ ಪಾರಿಜಾತವ
ಸತ್ಯಪೇಕ್ಷೆಯನರಿತು ತಂದನು ಸ್ವರ್ಗದಿಂದ |
ಸತ್ಯಭಾಮಾರಮಣ ಭೂಪತಿ
ಸತ್ಯ ವೈಕುಂಠದಲಿ ಶ್ರೀಪತಿ
ಸತ್ಯರಕ್ಷಕ ಕೃಷ್ಣ ರಕ್ಷಿಸು ನಮ್ಮನನವರತ || ೩೮ ||
ಪಾರಿಜಾತಪ್ರಿಯನೆ ಕೃಷ್ಣನೆ
ನಾರಕಾಸುರಹತವ ಗೈಯಲು
ಸಾರಿ ಬಂದಾ ಸತ್ಯಭಾಮೆಯ ಬಯಕೆಯಂತೆ |
ಪಾರಿಜಾತದ ತರುವ ದಿವಿಯಿಂ
ಸಾರಿ ಯುದ್ಧವನಿಂದ್ರನೊಂದಿಗೆ
ಭೇರಿ ಜಯವಂ ನಾರಿಪ್ರೇಮವ ಸಾರಿ ತೋರಿದನು || ೩೯ ||
ಚಾರುವಾಗ್ವಿಭೂಷಿತನೆ ಸುಂದರ
ಮೂರುಲೋಕದ ಪತಿಯೆ ಕೃಷ್ಣನೆ
ಸಾರು ಸುಂದರ ಮಾತು ಸಕಲರ ಭೂಷಣವು ದಿಟವು |
ಕೋರು ಶುಭವನು ನಿಖಿಲ ಲೋಕಕೆ
ಪಾರುಗಾಣಿಸು ಭವದ ಭಯದಿಂ
ಸೇರುವೆನು ನಾ ನಿನ್ನ ಪದದೊಳು ಮುಕ್ತಿ ತೋರೆನಗೆ || ೪೦ ||
ದ್ವಾರಕೇಶ ಆರ್ತಪಾಲೋ
ಮುರಾರಿರ್ಮಧುಸೂದನ:|
ಗೋಪಿಕೋನ್ಮಾದಹಾರೀ ಚ ಭಕ್ತದು:ಖಾಪಹಾರಕ:||೮||(೪೬)
ದ್ವಾರಕೇಶನೆ ಮಥುರಜನ್ಮನೆ
ಮಾರಪಿತ ಗೋಕುಲಾಲೀಲನೆ
ಪಾರು ಮಾಡಿದೆ ಮಾಗಧಾಸುರಪೀಡೆಯಿಂದ |
ಶೂರವಂಶದಿ ಜನಿಸಿ ಶೌರಿಯೆ
ಕ್ರೂರ ರಕ್ಕಸರನ್ನು ಕೊಂದಿಯೆ
ದ್ವಾರಕೆಯ ಕೊನೆಗೊಮ್ಮೆ ಮುಳುಗಿಸಿ ತೋರ್ದೆ ನಶ್ವರತೆ || ೪೧ ||
ಆರ್ತಪಾಲನು ಸಾನುರಾಗನು
ಸ್ವಾರ್ಥರಹಿತನು ಭಕ್ತಪ್ರೇಮಿಯು
ಮೂರ್ತರೂಪದಿ ಬಂದಮೂರ್ತನೆ ಕೃಷ್ಣಮೂರುತಿಯು |
ವ್ಯರ್ಥ ಲೋಕವು ಸಾರ್ಥ ಬ್ರಹ್ಮವು
ಕರ್ತ ಜೀವವಕರ್ತನಾತ್ಮನು
ಶರ್ತರಹಿತದಿ ಪ್ರೇಮಿಸೈ ಭಗವಂತ ಸರ್ವಾತ್ಮಾ || ೪೨ ||
ಮುರಾರಿಯೆ ಹೇ ಮುರಾಂತಕ ಹರಿ
ಪರಾತ್ಮಾ ಮುರವೈರಿ ಕೃಷ್ಣನೆ
ಚರಾಚರಗುರು ಲೋಕಗುರು ಸರ್ವಜ್ಞ ಸರ್ವಬಲ |
ಹರಾತ್ಮಕ ಪರಬೊಮ್ಮ ವಿಷ್ಣುವೆ
ವರಾತ್ಮಕ ವಿಧಿ ಶಕ್ತಿರೂಪನೆ
ಧರಾತ್ಮಕನಸುರಾಂತಕಾತ್ಮಕ ವಿಶ್ವಪಾಲಕನೆ || ೪೩ ||
ಮಧುಹರಣ ಮಧುಸೂದನನೆ ಹರಿ
ವಿಧುವಿನಂದದಿ ಚೆಲ್ವ ಕೃಷ್ಣನೆ
ಪದುಮನಾಭನೆ ಸಕಲಸದ್ಮನೆ ಸಚ್ಚಿದಾನಂದ |
ಮಧುರನೇತ್ರನೆ ಮಧುರಗಾತ್ರನೆ
ಮಧುವಿನನ್ವಯದಲ್ಲಿ ಬಂದನೆ
ಯದುಕುಲಾಗ್ರ್ಯನೆ ವಾಸುದೇವನೆ ಕೈಟಭಾಂತಕನೆ || ೪೪ ||
ಗೋಪಿಕೋನ್ಮಾದಹಾರೀಶ
ಗೋಪಿಗೋಪರ ದುಃಖದೂರನೆ
ಗೋಪಿಲೋಲನೆ ಪ್ರೇಮಘನ ಸಂಸಾರನಾಶಕನೆ |
ಗೋಪಿ ರಾಧೆಯ ಹೃದಯವಾಸನೆ
ಪಾಪಿ ದುಷ್ಟರ ಪಾಪದೂರನೆ
ಕೋಪಿತಾಪಿಪ್ರತಾಪಿಜಾಪಿಶುಭಪ್ರದನೆ ಕೃಷ್ಣ || ೪೫ ||
ಭಕ್ತದುಃಖಾ-ಪಹಾರಕನೆ ಹರಿ
ಮುಕ್ತರಾತ್ಮನೆ ಮುಕ್ತಿರೂಪನೆ
ಶಕ್ತರಲಿ ಬಲ ಭಕ್ತಭಕ್ತಿಯು ಮುಕ್ತವಿಜ್ಞಾನ |
ನಕ್ತಚರಗತಿ ಶಿಷ್ಟರಕ್ಷಕ
ಭುಕ್ತಿಭಕ್ತಿವಿಮುಕ್ತಿದಾಯಕ
ಯುಕ್ತಿಶಕ್ತಿವಿರಕ್ತಿರಕ್ತಿವಿಭಕ್ತಿಭಕ್ತಿಪ್ರದ || ೪೬ ||
ಬಲರಾಮಾನುಜಃ ಕಾಲಃ ಕರ್ಮಕೃತ್ಕರ್ಮಕಾರಕಃ|
ಕರ್ಮಾಕರ್ಮಸುವಿಜ್ಞಾತಾ ಗೀತಾಬೋಧನತತ್ಪರಃ||೯||(೫೨)
ಬಲರಾಮಾನುಜನೆ ಕೃಷ್ಣನೆ
ಹಲಧರನು ಶೇಷಾಂಶನಗ್ರಜ
ಬಲಭದ್ರ ರೋಹಿಣಿಯ ತನುಜನು ಸಂಕರುಷಣಾತ್ಮ |
ಛಲಗಾರ ಬಲರಾಮ ಸೋದರ
ಬಲವಂತ ಮಾಧವ ದೇವಕೀಸುತ
ಫಲವೇನು ಬದುಕಿಯು ನಿನ್ನ ಭಜಿಸದೆ ಸಚ್ಚಿದಾನಂದ || ೪೭ ||
ಕಾಲ ನೀನೇ ಕಾಲಮೂಲನೆ
ಕಾಲರೂಪನೆ ಕಾಲಕಾಲನೆ
ಕಾಲಪುರುಷನೆ ಕಾಲಕೇಲಿಯ ಲೀಲೆ ತೋರುವನೆ |
ಕಾಲ ಮೀರ್ದನೆ ಸರ್ವಕಾಲ ತ್ರಿ
ಕಾಲಪತಿ ಮಿಗೆ ದೇಶಪತಿ ಹರಿ
ಜಾಲಪತಿ ಮಾಯಿಕನು ತ್ರೈಲೋಕ್ಯಾಧಿಪತಿ ಬೊಮ್ಮ || ೪೮ ||
ಕರ್ಮಕೃತ್ ಕರ್ಮಗಳ ಕರ್ತೃವೆ
ಕರ್ಮಗಳ ಮಾಡಿಸುವ ಶಕ್ತಿಯೆ
ಕರ್ಮಕರ್ಮಗಳಾದಿಸಾಕ್ಷಿಯೆ ಕರ್ಮಫಲದಾತ |
ಕರ್ಮ ಗಹನವು ಮರ್ಮ ಗಹನವು
ಧರ್ಮ ಗಹನವು ವರ್ಮ ಗಹನವು
ನರ್ಮ ಗಹನವು ನಮ್ಮದೇನಿಹುದೆಲ್ಲ ನೀ ದೇವ || ೪೯ ||
ಕರ್ಮಕಾರಕ ಕೃಷ್ಣ ಶ್ರೀಹರಿ
ಕರ್ಮಸಾಧಕ ದೇವಕೃಪೆಯೈ
ಕರ್ಮಪಾಕವಿಪಾಕ ಫಲದಾತಾರ ಕರ್ಮೇಶ |
ಕರ್ಮಧಾರಕ ಕರ್ಮಪೂರಕ
ಕರ್ಮಪ್ರೇರಕ ಕರ್ಮತಾರಕ
ಕರ್ಮಯೋಗೀಶ್ವರ ನಿಯಾಮಕ ಕರ್ಮತದ್ರೂಪ || ೫೦ ||
ಕರ್ಮಾಕರ್ಮಸುವಿಜ್ಞಾತನೆ
ಕರ್ಮವಾವುದಕರ್ಮವಾವುದು
ಮರ್ಮವೀ ಕರ್ಮದ ವಿಕರ್ಮದ ಬಲ್ಲ ಶ್ರೀಕೃಷ್ಣ |
ಕರ್ಮ ಕರ್ತವ್ಯಗಳ ಗಹನತೆ
ಕರ್ಮ ವಿಧಿ ವೈವಿಧ್ಯ ನಿಪುಣತೆ
ಕರ್ಮಯೋಗ ನಿಷೇಧ ಕೌಶಲ ಫಲದ ಸರ್ವಜ್ಞ || ೫೧ ||
ಗೀತಾಬೋಧನತತ್ಪರನೆ ಹರಿ
ಗೀತಾಜ್ಞಾನಪ್ರವರ್ತಕನೆ ಹರಿ
ಗೀತಾಚಾರ್ಯ ಜಗದ್ಗುರುವೆ ನರಸಖನೆ ಮಾಧವನೆ |
ಗೀತಾಚಾರ ವಿಚಾರ ಚಾರಣ
ಗೀತಾಸಾರ ಪ್ರಸಾರ ಕಾರಣ
ಗೀತಾ ಜೀವನಧರ್ಮಯೋಗದ ದೇಶಿಕನೆ ಕೃಷ್ಣ || ೫೨ ||
ನಾರಾಯಣೋ ನರಾತ್ಮೀಯೋ ನರರೂಪೀ ಚ ನಾರದ:|
ನಾರದಮುನಿವನ್ದ್ಯಶ್ಚ ನರಸಿಂಹಾವತಾರಕ:||೧೦||(೫೮)
ದೇವ ನಾರಾಯಣನೆ ಕೃಷ್ಣನೆ
ಮೂವರೊಳು ಸತ್ತ್ವಾಧಿಕನೆ ಹರಿ
ಕಾವ ತ್ರಿಭುವನಪತಿಯೆ ಮೋಕ್ಷಾಶ್ರಯನೆ ಲಕುಮಿಪತಿ |
ಭಾವಶೋಧಕ ಭಾವಕೊಲಿವನೆ
ಪಾವನಾತ್ಮಕ ನಾರ-ಮೋಕ್ಷದ
ದೇವನಯನವೆ ನೀರಧಾಮನೆ ನರರ ಮೂಲಾತ್ಮಾ || ೫೩ ||
ನರಾತ್ಮೀಯನೆ ನರರ ಆತ್ಮನೆ
ನರರ ಅಂತರ್ಯಾಮಿ ದೇವನೆ
ನರರನುದ್ಧರಿಪಂಥ ನರಹೃದ್ದೇಶಚಾಲಕನೆ |
ಪರಮ ಆತ್ಮೀಯಾತ್ಮರೂಪನೆ
ಪರಮ ಬೊಮ್ಮ ಚರಾಚರಾಧಿಪ
ಸರುವರಂತಸ್ಸಾಕ್ಷಿ ಕೃಷ್ಣನೆ ಮುಕ್ತಿ ತೋರೆಮಗೆ || ೫೪ ||
ನರನ ರೂಪನೆ ನರಹರಿಯೆ ಗುರು
ಪರಮಮಂಗಳರೂಪ ಶ್ರೀಹರಿ
ಚರಮಗತಿದಾಯಕನೆ ನರರೂಪಿಂದ ತೋರ್ವವನೆ |
ಹರಿಹರಜರೂಪಿನಲಿ ತೋರ್ವನೆ
ಸರಿಮಿಗಿಲು ಇರದವನೆ ದೇವನೆ
ನರನೆ ಪಾರ್ಥನೆ ಪಾಂಡವರೊಳಾತ್ಮೀಯ ಪರಬೊಮ್ಮ || ೫೫ ||
ನಾರದನೆ ನಾರವನು ಈವನೆ
ನಾರದಾದಿಗಳಿಂದ ವಂದ್ಯನೆ
ನಾರದಾದಿಸ್ವರೂಪಿ ಮೋಕ್ಷಪ್ರದನೆ ಶ್ರೀಕೃಷ್ಣ |
ನೀರಶಯನನೆ ನೀರದಾತೃವೆ
ನೂರು ವತ್ಸರ ಕಾಯ್ವವನೆ ಹರಿ
ಪಾರುಗಾಣಿಸೊ ದುಃಖಶರಧಿಯ ನೀನೆ ಪರಬೊಮ್ಮ || ೫೬ ||
ನಾರದಮುನಿವಂದ್ಯ ಶ್ರೀಹರಿ
ಚಾರುಗುಣ ಸಂಪನ್ನ ಕೃಷ್ಣನೆ
ಮೂರುಮೂರ್ತಿಗಳೊಳಗೆ ನೆಲೆಸಿಹ ದೇವ ಪರಬೊಮ್ಮ |
ಸಾರಸಾಕ್ಷನೆ ಬೊಮ್ಮಸುತನುತ
ಮಾರಪಿತ ಪರಮೇಶಪ್ರೀಯನೆ
ದಾರಿಗಾಣದ ಭಕ್ತರಿಗೆ ಮುಕುತಿಯನು ತೋರ್ವವನೆ || ೫೭ ||
ನರಸಿಂಹಾವತಾರ ಶ್ರೀಹರಿ
ನರತನುವು ಸಿಂಹಾಸ್ಯ ನಿನ್ನದು
ವರವನಿತ್ತನುಗ್ರಹಿಸಿ ಪ್ರಹ್ಲಾದನ್ನ ಕಾಯ್ದೆಯಲಾ |
ಹಿರಣ್ಯಕಾಸುರನನ್ನು ಕೊಲ್ಲುತ
ಪರಮಭಕುತನ ಬಾಲಕನ ನೀ
ಪೊರೆದೆ ಭಕ್ತಾಧೀನನೆಂಬುದ ಜಗಕೆ ತೋರಿಸಿದೆ || ೫೮ ||
ಸಿದ್ಧಿರೂಪೋ ಮಹಾಮಾಯೀ ಸಿದ್ಧಿಪ್ರದವಿನಾಯಕ:|
ಸಿದ್ಧಾನ್ತಕೃದಮೇಯಾತ್ಮಾ ಪಾಞ್ಚಜನ್ಯವಿಭೂಷಿತ:||೧೧||(೬೪)
ಸಿದ್ಧಿರೂಪನೆ ಸಿದ್ಧಿಗೊಡೆಯನೆ
ಸಿದ್ಧರೊಡೆಯನೆ ಸಿದ್ಧಿದಾತನೆ
ಸಿದ್ಧಿಬುದ್ಧಿಗಳಧಿಪ ಮಾಯಾ ಸಿದ್ಧಿನಾಯಕನೆ |
ಸಿದ್ಧಾಂತಗಳ ಕರ್ತೃ ಶ್ರೀಹರಿ
ಸಿದ್ಧಹಸ್ತನಮೇಯ ಕೃಷ್ಣನೆ
ಸಿದ್ಧ ಪಂಚಜನಾಪ್ತಶಂಖವಿಭೂಷಿತಗೆ ಶರಣು || ೫೯ ||
ಮಹಾಮಾಯೀ ಮಹಾನಾತ್ಮನೆ
ಮಹಾಮಾಯೆಯ ಪತಿಯೆ ಮಾಯಿಯೆ
ಮಹಾವಿಷ್ಣುವೆ ಪರಬ್ರಹ್ಮನೆ ದೇವ ಶ್ರೀಕೃಷ್ಣ |
ಮಹಾದೇವನ ಪ್ರಿಯನೆ ಶ್ರೀಹರಿ
ಮಹಾಮಾಯಾಸೂತ್ರಧಾರಿಯೆ
ಮಹಾಪಾಪವಿನಾಶಕಾರಣ ರುಕ್ಮಿಣೀರಮಣ || ೬೦ ||
ಸಿದ್ಧಿಪ್ರದವಿನಾಯಕನೆ
ಸಿದ್ಧಿ ಸಕಲವನೊದಗಿಸುತಿಹನೆ
ಬುದ್ಧಿದಾತ ವಿನಾಯಕನೆ, ವಿಶಿಷ್ಟ ನಾಯಕನೆ |
ಋದ್ಧಿಕಾರಕ ದೇವದೇವ ವಿ
ಶುದ್ಧಿಕಾರಕ ದುಷ್ಟಶಿಕ್ಷಕ
ಸಿದ್ಧಿಬುದ್ಧಿವಿಶುದ್ಧಿ-ಋದ್ಧಿಗಳೊಡೆಯ ಶ್ರೀಕೃಷ್ಣ || ೬೧ ||
ಸಿದ್ಧಾಂತಕೃತ್ ತತ್ತ್ವಮೂಲನೆ
ಶುದ್ಧಾಂತಃಕರಣೈಕ ಕಾರಣ
ಬದ್ಧಜೀವರ ಮುಕ್ತಿಕಾರಕ ದೇವ ಪರಬೊಮ್ಮ |
ಸಿದ್ಧರಾಗಿಹ ಶಿಷ್ಯವೃಂದಕೆ
ಶುದ್ಧ ಜ್ಞಾನವ ಗುರುವಿನಂದದಿ
ಬುದ್ಧಿಗೊದಗಿಪ ಸಕಲ ಸಿದ್ಧಾಂತಗಳ ತವನಿಧಿಯೆ || ೬೨ ||
ಅಳತೆಗಳವಡದಿರುವ ತತ್ತ್ವವೆ
ಬಳಲಿಕೆಯ ಕಾಣದಿಹ ಬೊಮ್ಮನೆ
ಹೊಳೆವ ಬೆಳಕಿನ ರೂಪವಂತನೆ ರೂಪವಿರಹಿತನೆ |
ಕಳೆದ ಬಾಳಿನ ಕರ್ಮಫಲಗಳ
ನಿಳೆಯ ಜೀವರಿಗೀವನೀಶನೆ
ಮುಳುಗುತಿಹ ಜೀವರೊಳು ನೆಲೆಸಿಹನೀ, ಅಮೇಯಾತ್ಮಾ || ೬೩ ||
ಪಾಂಚಜನ್ಯವಿಭೂಷಿತನೆ ಹರಿ
ಪಂಚಜನನೆಂಬಂಥ ಶಂಖದ
ಪಂಚಬಲ ಸಂಪನ್ನ ದೈತ್ಯನ ನಿಗ್ರಹಿಸಿದವನೆ |
ಪಂಚಜನನಿಗೆ ವರವನೀಯುತ
ಪಾಂಚಜನ್ಯವ ಕರದಿ ಪಿಡಿಯುತ
ಪಾಂಚಜನ್ಯಧ್ವನಿಯ ಗೈಯಲು ದುಷ್ಟಗರ್ಭಾಂತ್ಯ || ೬೪ ||
ಶಙ್ಕರಾಚಾರ್ಯರೂಪೀ ಚ ರಾಮಾನುಜಸ್ವರೂಪಧೃತ್|
ಪೂರ್ಣಪ್ರಜ್ಞಸ್ವರೂಪಶ್ಚ ಭಗವಾನ್ ಬಾದರಾಯಣಃ ||೧೨||(೬೯)
ಶಂಕರಾಚಾ-ರ್ಯರೂಪೀ ಶ್ರೀ
ಶಂಕರನ ಅವತಾರ ನೀನೇ
ಶಂಕೆಗಳ ಪರಿಹರಿಸಿ ಭಕ್ತರ ಮುಕ್ತಗೊಳಿಸುವನೆ |
ಕಿಂಕರರ ತಾರಕನೆ ಕೃಷ್ಣನೆ
ಬಿಂಕ ಡಂಭವ ಮೆಚ್ಚದಿರುವನೆ
ಮಂಕ ಕಳೆಯುತಭೇದಶುದ್ಧಾದ್ವೈತಮುಕ್ತಿದನೆ || ೬೫ ||
ರಾಮಾನುಜ-ಸ್ವರೂಪಧೃತ
ರಾಮನನುಜನೆ ಕೃಷ್ಣರೂಪನೆ
ಕಾಮಜನಕ ಪ್ರಪತ್ತಿಮಾರ್ಗ ವಿಶಿಷ್ಟದ್ವೈತಪ್ರದ |
ಸಾಮರೂಪನೆ ಸರ್ವಪ್ರೀಯನೆ
ನಾಮ ಮೂರೂರ್ಧ್ವದ ತ್ರಿಪುಂಡ್ರನೆ
ಹೇ ಮಹಿಮ ಜೀವೇಶಜಗವಿದ ನಾರಯಣಭಕ್ತ || ೬೬ ||
ಪೂರ್ಣಪ್ರಜ್ಞಸ್ವರೂಪನೇ ಹರಿ
ಪೂರ್ಣದೇವನು ವಾಯು ಜೀವರೊಳ್
ಪೂರ್ಣನೆಂಬೀ ಮಾಧ್ವ ದ್ವೈತ ಪ್ರಚಾರಕನೆ ಗುರುವೆ |
ಪೂರ್ಣಜಗವಿದು ಪಂಚಭೇದದಿ
ಪೂರ್ಣ ಹರಿ ಜಗಜೀವರೊಳು ಮಿಗೆ
ಪೂರ್ಣ ಮುಕ್ತರು ನಾರಕೀ ಸಂಸಾರಿಭೇದವಿದ || ೬೭ ||
ಭಗವು ಷಡ್ಗುಣಪೂರ್ಣತೆಯು ಪರ
ಭಗವನುಳ್ಳವ ವಾಸುದೇವನು
ನಗಧರನು ಹರಿ ವಿಹಗವಾಹನ ಕೃಷ್ಣ ಭಗವಂತ |
ಬಗೆ ಬಗೆಯ ಸಂಪದದೊಳತಿಶಯಿ
ಮಿಗೆ ವೀರ್ಯ ಯಶ ಪರಮೇಶ್ವರತ್ವ ವಿ
ರಾಗ ಬೋಧಾತಿಶಯಿ ಭಗವಾನ್ ಪರಮ ಬೊಮ್ಮನೆಲ || ೬೮ ||
ಬಾದರಾಯಣ ವ್ಯಾಸಗುರು ಹೇ
ವಾದಶೂರ ವಿಶುದ್ಧಸತ್ತ್ವನೆ
ನಾದಬ್ರಹ್ಮ ಸದಾಶಿವಾತ್ಮಕ ವೇದವಿಸ್ತಾರ |
ಪಾದ ಹರಿಯದು ಸಕಲಶಾಸ್ತ್ರದ
ಭೇದ ವೈವಿಧ್ಯಗಳ ತೋರುತ
ಶೋಧಿಸಿದ ವೇದಾಂತಸಾರವ ಸೂತ್ರರೂಪಿನಲಿ || ೬೯ ||
ನವನೀತಪ್ರಿಯಃ ಕೃತ್ಸ್ನ ಆತ್ಮವಿತ್ಕರುಣಾಕರಃ |
ಮಹದಾದಿಚತುರ್ವಿಂಶತಿತತ್ತ್ವಾತ್ಮಕತ್ರೈಗುಣಃ ||೧೩||(೭೪)
ನವನೀತಪ್ರಿಯನೆ ಕೃಷ್ಣನೆ
ನವನವೀನ ವಿನೀತ ಕೃಷ್ಣನೆ
ಭವ ತತ್ತ್ವಸಾರ ಪ್ರತೀಕ ಕೃಷ್ಣನೆ ಭಕ್ತಕಲ್ಪತರು |
ನವ ನವೀನದ ಪ್ರಜ್ಞೆ ಪ್ರತಿಭೆಯ
ತವನಿಧಿಯೆ ಹರಿ ವಾಸುದೇವನೆ
ಭವದಿ ಜೀವನ್ಮುಕ್ತಿ ತೋರೈ ಶುದ್ಧ ಪರತತ್ತ್ವ || ೭೦ ||
ಕೃಷ್ಣ ನೀನೈ ಕೃತ್ಸ್ನ ಸಕಲವು
ಕೃಷ್ಣ ನೀನೈ ಸರ್ವ ಸೃಷ್ಟಿಯು
ಕೃಷ್ಣ ನೀನೈ ಸೃಷ್ಟಿಮೂಲವು ನಿಖಿಲ ಸರ್ವಸ್ವ |
ವಿಷ್ಣುವಿನ ಪೂರ್ಣಾವತಾರ ಸ-
-ಹಿಷ್ಣು ಭಕ್ತರ ಪಾಪರಾಶಿಯ
ಜಿಷ್ಣು ನೀ ಜಯಶೀಲ ಕಾರಣ ಕಾರ್ಯ ಕಾರಯಿತಾ || ೭೧ ||
ಆತ್ಮವಿತ್ ಪರಮಾತ್ಮ ದೇವನೆ
ಸಾತ್ಮ-ನಾತ್ಮವಿದೂರ ವಿದನೆ ವಿ-
-ನಾತ್ಮ ಶೂನ್ಯವದಾತ್ಮ ಪೂರ್ಣವದೇಕರಸವಿದನೆ |
ಆತ್ಮವರಿತವನಾತ್ಮರೂಪ ಮ-
-ಹಾತ್ಮ ಸಂತತ ಗಮನಶೀಲನ-
-ನಾತ್ಮರೂಪದಿ ತೋರ್ವ ಜಗದಾತ್ಮಾದ್ವಿತೀಯೈಕ || ೭೨ ||
ಕರುಣೆಯಾಕರ ದಯಾಸಾಗರ
ಕರುಣಮೂರುತಿ ಭಕುತಸನ್ಮತಿ
ಹರುಷದಾಯಕ ಕೃಷ್ಣ ಕರುಣಾಕರನೆ ಶಂ-ಕರನೆ |
ಉರುತರದ ವಿಕ್ರಮನೆ ವಾಮನ
ಕರುಣೆಯಿಂ ಬಲಿದೈತ್ಯಗೊಲಿದಿಹೆ
ಗುರುವೆ ನೀನನುಕಂಪವಾರಿಧಿ ಶಿಷ್ಟರಕ್ಷಕನೆ || ೭೩ ||
ತತ್ತ್ವ ಪ್ರಕೃತಿ ಪ್ರಧಾನದಿಂ ಮಹ-
-ತ್ತತ್ತ್ವಹಂ ಶಬ್ದಾದಿ ಪಂಚಕ
ತತ್ತ್ವ ನೇತ್ರಾದಿಗಳ ಪಂಚಕ ಪಾಣಿಪಾದಾದಿ |
ತತ್ತ್ವ ಭೂತದ ಪಂಚಕವು ಮನ
ತತ್ತ್ವ ಮಹದಾದಿ ಚತುರ್ವಿಂಶತಿ
ತತ್ತ್ವನಾತ್ಮಕ ತ್ರೈಗುಣನು ಸದ್-ರಜ-ತಮೋರೂಪ || ೭೪ ||
ಧರ್ಮಾರ್ಥಕಾಮಮೋಕ್ಷೇಶಃ ಕೃಷ್ಣಮೂರ್ತಿಃ ಪರಾಗತಿಃ |
ರಾಮಮೂರ್ತಿಃ ಕಲ್ಕಿರೂಪೋ ಬುದ್ಧರೂಪಶ್ಚತುರ್ವಿಧಃ ||೧೪||(೮೧)
ಧರ್ಮ-ಅರ್ಥದ ಕಾಮ-ಮೋಕ್ಷದ
ಮರ್ಮವಿದನ್-ಈಶನು ಮಹೇಶ್ವರ
ಕರ್ಮಫಲದಾತಾರ ಕೃಷ್ಣ ಪರಾತ್ಮ ಸರ್ವೇಶ |
ಚರ್ಮಚಕ್ಷುವ ಮೀರ್ದ ಶ್ರೀಹರಿ
ಕೂರ್ಮ ಮತ್ಸ್ಯಾದಿಗಳ ರೂಪಿಲಿ
ಧರ್ಮಸ್ಥಾಪನೆ ಗೈವ ತೆರದಲಿ ತೋರ್ವ ಜಗದೊಳಗೆ || ೭೫ ||
ದೇವದೇವನೆ ಕೃಷ್ಣಮೂರ್ತಿಯೆ
ಕಾವ ದೇವನೆ ವಿಷ್ಣುಮೂರ್ತಿಯೆ
ಜೀವಲೋಕದ ಮೂಲಕಾರಣ ಹರಿ ನಿರಾಕಾರ |
ಸಾವ ಹುಟ್ಟುವ ತೆರದಿ ತೋರುವ
ಭಾವಕೊಲಿಯುವ ತೆರದಿ ತೋರುವ
ಗೋವ ಕಾಯುವ ಸಕಲರಂತರ್ಯಾಮಿ ಪರಬೊಮ್ಮ || ೭೬ ||
ಪರಮ ಚರಮವನನ್ಯ ಗತಿ ನೀ
ಹರಶಕ್ತಿಹರಿಬೊಮ್ಮನೊಳಗಿಹೆ
ಪರಮಸತ್ಯ ಪರಾಗತಿಯೆ ಪರಬೊಮ್ಮ ಶ್ರೀಕೃಷ್ಣ |
ಗುರುವೆ ಲೋಕದ ಗತಿಯೆ ಜೀವರ
ಸರುವ ಸೃಷ್ಟಿಯ ಸಾರಸತ್ತ್ವವೆ
ಬರುವ ಹೋಗುವ ನಿಖಿಲ ಜಗಕಾಧಾರ ನಾರಯಣ || ೭೭ ||
ರಾಮಮೂರ್ತಿಯೆ ದಶರಥಾತ್ಮಜ
ಸೋಮಸುಂದರ ಲಕ್ಷ್ಮಣಾಗ್ರಜ
ಕಾಮಪಿತ ಕೌಸಲ್ಯನಂದನ ರಾವಣಾಂತಕನೆ |
ಸಾಮಪ್ರೀಯನೆ ನಾಮರೂಪನೆ
ನಾಮರಹಿತನೆ ರೂಪರಹಿತನೆ
ರಾಮ ಜಾನಕಿರಮಣ ಪವನಜಪ್ರೇಮ ನಿಸ್ಸೀಮ || ೭೮ ||
ಕಲ್ಕಿರೂಪನೆ ಕಲಿಯುಗಾಂತಕ
ಕಲ್ಕಿ ಕಲಿಯುಗನಾಶ ಕೀಲಿಯೆ
ಕಲ್ಕಿ ಕಲ್ಕವ ಪಾಪಕೂಪವ ನಾಶಗೈಯುವನೆ |
ಕಲ್ಕಿ ದಶಮನೆ ವಿಷ್ಣುಮೂಲನೆ
ಕಲ್ಕಿ ಶಂಬಳದೇಶಜನ್ಮನೆ
ಕಲ್ಕಿ ದುಷ್ಟವಿಮರ್ದನನೆ ಗುರುಭಾರ್ಗವನ ಶಿಷ್ಯ || ೭೯ ||
ಬುದ್ಧರೂಪನೆ ಯಜ್ಞನಿಂದಕ
ಶುದ್ಧಧರ್ಮ ಸ್ಥಾಪನಾರ್ಥವ-
-ಬದ್ಧ ದೈತ್ಯರ ಮೋಹಗೊಳಿಸುತ ಸಂಹರಿಸಿ ಜವದಿ |
ಬದ್ಧ ಜೀವರ ಮುಕ್ತಗೊಳಿಸುವ
ಶುದ್ಧಮಾರ್ಗವ ಬೋಧಿಸುತಲಿ ಪ್ರ-
-ಬುದ್ಧ ಭಾರತ ಕಟ್ಟುವಂತಹ ದಾರಿದೀಪಕನೆ || ೮೦ ||
ಹರಿ ಚತುರ್ವಿಧನೆಚ್ಚರದಲಿ ತಾ-
-ನರಿವನನಿರುದ್ಧಾತ್ಮ ಕನಸಿನೊ-
-ಳರಿವ ಪ್ರದ್ಯುಮ್ನಾತ್ಮ ತೈಜಸ ವಿಶ್ವರೂಪಿನೊಳು |
ಅರಿವ ಸುಪ್ತಿಯ ಸಂಕರುಷಣನು
ಸುರಿವನಾನಂದವ ತುರೀಯದಿ
ಹರಿಯು ಪ್ರಾಜ್ಞನು ವಾಸುದೇವನು ತಾ ಪರಬ್ರಹ್ಮ || ೮೧ ||
ಶಕ್ತಿರೂಪೋ ಭಕ್ತಿರೂಪಶ್ಚಾರೂಪೀ ಭಕ್ತರೂಪಧೃತ್ |
ನಾನಾರೂಪಧರಶ್ಶಮ್ಭುರ್ವಿಷ್ವಕ್ಸೇನಸ್ಸನಾತನಃ ||೧೫||(೮೯)
ಶಕ್ತಿರೂಪನೆ ಸರ್ವರೊಳಗಿಹ
ಮುಕ್ತಿರೂಪನೆ ಸಕಲರೊಳಗಿಹ
ಯುಕ್ತಿರೂಪ ಮಹಾತ್ಮ ಸಂತತ ಸಲಹು ಸಜ್ಜನರ |
ಶಕ್ತಿ ಶಾಶ್ವತ ದುರ್ಗೆ ಶಂಕರಿ
ಶಕ್ತಿ ಮಾಯಾದೇವಿ ಲಕುಮಿಯು
ಶಕ್ತಿ ಜಗದಾದ್ಯಖಿಲಜನವಂದಿತನು ನೀನಹುದು || ೮೨ ||
ಭಕ್ತಿರೂಪನೆ ಭಾವಕೊಲಿವನೆ
ಭಕ್ತಿವಶ್ಯನೆ ಭಾಗವತ ಹರಿ
ಭಕ್ತಿಕಾರಣ ಭಕ್ತಿಗಾಧಾರನೆ ನಿಯಾಮಕನೆ |
ಭುಕ್ತಿದಾಯಕ ದೇವದೇವನೆ
ಮುಕ್ತಿದಾಯಕ ಸರ್ವಮೂಲನೆ
ಭಕ್ತಿ ನಿರ್ಮಲ ಮನಕೆ ಕರಗುವ ಹೇ ದಯಾನಿಧಿಯೆ || ೮೩ ||
ಅರೂಪನೆ ಹರಿ ಸುರೂಪನೆ ಹರಿ
ನಿರೂಪಕ ಹರಿ ನಿರಾಮಯ ಹರಿ
ಗುರೂಪಾಧಿಯೊಳಖಿಲಜೀವರ ಮುಕ್ತಿಗುರು ನೀನೇ |
ಗುರೂಪಾಸಕರನ್ನು ಕಾಯ್ವನೆ
ವಿರೂಪಾತ್ಮಕ ಜೀವಸೆಲೆ ನೀ
ಸುರೂಪಾತ್ಮಕನಂತೆ ತೋರುವ ಮಾಯೆ ಪರಬೊಮ್ಮ || ೮೪ ||
ಅನವರತ ನೀ ಭಕ್ತರೂಪಧೃ-
-ತನವರತ ನೀ ಭಕ್ತರೂಪಿಲಿ
ದಿನ ದಿನದಿ ಪರಿಕಿಸುವೆ ಜೀವರ ಭಕ್ತಿಶುದ್ಧತೆಯ |
ಮನವರಿವ ಹರಿ ಮನದ ಸ್ವಾಮಿಯು
ತನುವ ಕಾಯುವ ಪ್ರೇಮಮೂರ್ತಿಯು
ಧನಲಕುಮಿಪತಿ ಶುದ್ಧಭಕುತರಿಗೀವ ಸರ್ವಸ್ವ || ೮೫ ||
ನಾನಾರೂಪಧರನೆ ಕೃಷ್ಣನೆ
ನಾನಾನಾಮಗಳಿಂದ ಪೂಜ್ಯನೆ
ನಾನಾಶಕ್ತಿಗಳಿಂದ ಕೂಡಿದ ದೇವ ಸರ್ವೇಶ |
ನಾನಾಮಾರ್ಗಗಳಲ್ಲಿ ದೊರಕುವ
ನಾನಾಜನ್ಮಗಳಲ್ಲಿ ತೋರುವ
ನಾನಾವಿಧದೀ ಪ್ರಕೃತಿಯೊಳಗಿಹ ಶುದ್ಧೈಕತತ್ತ್ವ || ೮೬ ||
ಶುಭನೀವನೆ ಶಂಭುವೇ ಹರಿ-
-ಯಭಯದಾಯಕ ನಾರಸಿಂಹನೆ
ಸಭಯ ಭಕ್ತರ ಗೈವ ನಿರ್ಭಯ ದೇವ ಗೋವಿಂದ |
ವಿಭವಯುತ ಹರಿ ಹರನಜಾತ್ಮಕ
ಪ್ರಭವ ಸೃಷ್ಟಿಗೆ ನಭವೆ ನಾಭಿಯು
ಶುಭಕೆ ಕಾರಣ ದೇವ ಪರಮಾತ್ಮನು ನಿರಾಕಾರ || ೮೭ ||
ಹರಿಯ ನಿರ್ಮಾಲ್ಯವನು ಧರಿಸುವ
ಹಿರಿಯ ವಿಷ್ವಕ್ಸೇನನೆಲ್ಲೆಡೆ
ಗುರಿಯ ತೋರುವ ಸೇನೆಯಧಿಪತಿ ಧರ್ಮಸೇನಾನಿ |
ಪರಿಪರಿಯ ವಿಭವವನು ಹೊಂದಿಹ
ಹರಿಯ ಸಾರೂಪ್ಯಾದಿ ಲಕ್ಷಣ
ಹರಿಯೆ ವಿಷ್ವಕ್ಸೇನ ನಮ್ಮನು ರಕ್ಷಿಸನವರತ || ೮೮ ||
ನಿತ್ಯ ಸತ್ಯನೆ ಸನಾತನ ಹರಿ
ನಿತ್ಯ ಚಿನ್ಮಯರೂಪ ಕೃಷ್ಣನೆ
ಸತ್ಯ ಮೂರ್ಕಾಲದಲು ಚಿತ್ಸುಖ ಸಚ್ಚಿದಾನಂದ |
ಸತ್ಯಲೋಕದಿ ಬೊಮ್ಮಸುತ ನೀ
ನಿತ್ಯ ಪಿತೃದೇವತೆಗಳತಿಥಿಯು
ಸತ್ಯ ದಿವ್ಯಮನುಷ್ಯ ಶಿವನಜವಿಷ್ಣು ನೀ ಕಾಯೈ || ೮೯ ||
ಮತ್ಸ್ಯರೂಪಃ ಕೂರ್ಮರೂಪೋ ವರಾಹೋ ವಾಮನೋ ವಿಭುಃ |
ಜಾಮದಗ್ನ್ಯೋ ದತ್ತಮೂರ್ತಿಸ್ತ್ರೈಲೋಕ್ಯವನ್ದಿತೋ ಗುರುಃ ||೧೬||(೯೮)
ಮದನಪಿತನೇ ಮತ್ಸ್ಯರೂಪನೆ
ಮೋದಕಾರಕನಖಿಲಲೋಕಕೆ
ಪಾದಕೊಂದಿಪೆ ತೃಪ್ತಿಯೋಗವಿಶಾರದಗೆ ಹರಿಗೆ |
ಹಿಂದೆ ಸತ್ಯವ್ರತನಿಗೊಲಿದಿಹೆ
ಮುಂದೆ ವೇದದ ಚೋರ ತಮನನು
ಕೊಂದೆ ವೈವಸ್ವತಗೆ ಮನುಪದವಿತ್ತೆ ಹೇ ದೇವ || ೯೦ ||
ಜಲದಿ ವೇಗದಿ ಚರಿಪ ರೂಪಿಯೆ
ಬಲಯುತನೆ ಹೇ ಕೂರ್ಮರೂಪನೆ
ಹಲವು ರೀತಿಲಿ ಲೋಕಪಾಲಿಸುತಿರುವ ಕರುಣಾಳು |
ಒಲವಿನಿಂದಲಿ ಮಂದರವ ತಾ
ಬಲುಹಿನಲಿ ಬ್ರಹ್ಮಾಂಡವನು ನೀ
ಸಲಹಲೋಸುಗ ಧರಿಸಿ ಶಮ ದಮ ಬೋಧಿಸಿದ ರೂಪ || ೯೧ ||
ದುಷ್ಟದೈತ್ಯರ ವರಕೆ ಹಾನಿಯು
ಶಿಷ್ಟಭಕ್ತರಿಗಿಷ್ಟವರದನು
ದಷ್ಟಪುಷ್ಟ ವರಾಹಸ್ವಾಮಿಯು ರಕ್ಷಿಸಲಿ ನಮ್ಮ |
ನಷ್ಟವಾಗದ ಗುರಿಯ ಯಜ್ಞನು
ಶ್ರೇಷ್ಠ ಗೆಡ್ಡೆಯ ಮಾತ್ರ ಭಕ್ಷಿಪ-
-ನಷ್ಟಮೂರ್ತಿ ಶ್ವೇತವರ್ಣದ ಭೂವರಾಹೇಶ || ೯೨ ||
ವಾಮನನೆ ಹರಿ ಚಾರುರೂಪನೆ
ನೇಮಿ ಬಲಿಗೊಲಿದಿಹನೆ ವಟುವಪು
ಭೂಮವಳೆದ ತ್ರಿವಿಕ್ರಮನೆ ಪರಮಾತ್ಮ ಶ್ರೀಕೃಷ್ಣ |
ನಾಮ ಸಾರ್ಥಕಗೈದ ಭಕುತ ಗು-
-ಲಾಮ ತಾನೆಂಬುದನು ಶ್ರೀಹರಿ
ಸಾಮದಲಿ ಬಲಿಗಿತ್ತನಿಂದ್ರ-ತ್ವ ಸಾವರ್ಣಿಕದಿ || ೯೩ ||
ವಿಭುವೆ ಕೃಷ್ಣನೆ ಸರ್ವವ್ಯಾಪಕ
ಪ್ರಭುವೆ ಸರ್ವಾಕಾರಸಂಯುಗ
ಪ್ರಭೆಯು ಸರ್ವಮಹತ್ತ್ವವಂತನೆ ಗುರು ಪರಂಜ್ಯೋತಿ |
ವಿಭುವೆ ನೀನೆಲ್ಲೆಡೆಯು ಪೋಪನೆ
ಪ್ರಭುವೆ ಜಗದೀಶ್ವರನೆ ಕೃಷ್ಣನೆ
ವಿಭುವೆ ಹರಿಹರನಜನೆ ನಿತ್ಯನೆ ನೀನೆ ಜೀವಾತ್ಮ || ೯೪ ||
ಕೃಷ್ಣನೇ ನೀ ಜಾಮದಗ್ನ್ಯನೆ
ವಿಷ್ಣು ಭಾರ್ಗವರಾಮ ಕ್ಷತ್ರಸ-
-ಹಿಷ್ಣು ಖಳರಸಹಿಷ್ಣು ಜಮದಗ್ನಿಜನೆ ರೇಣುಕಜ |
ಜಿಷ್ಣು ಪರಶುವ ಧರಿಸಿ ಲೋಕದಿ
ವಿಷ್ಣು ಕೃತವೀರ್ಯಾತ್ಮಜನ ತಾ
ವಿಷ್ಣು ಸಂಹರಿಸಿದನು ತಾನಾವೇಶರೂಪಿನಲಿ || ೯೫ ||
ದತ್ತಮೂರ್ತಿ ವಿಚಿತ್ರಕೀರುತಿ
ಸತ್ತವರ ಬದುಕಿಸಿದ ಸದ್ಗುರು
ಸುತ್ತಲಿನ ಜನರುದ್ಧರಿಸಿ ವರ್ಣಾದಿ ಭೇದವನು |
ಕಿತ್ತು ಮನುಜತ್ವವನೆ ನೆಚ್ಚುತ-
-ಲತ್ತು ಕರೆವರ ಕಾಯ್ವನತ್ರಿಜ
ದತ್ತನನಸೂಯಾತ್ಮಜವಧೂತೇಶ ತ್ರೈಮೂರ್ತಿ || ೯೬ ||
ಹರಿಯೆ ನೀ ತ್ರೈಲೋಕ್ಯವಂದಿತ-
-ನರಿಯೆ ನಿನ್ನ ನಿಜಾತ್ಮರೂಪವ
ಸುರಿವೆ ಭಕ್ತಿಪ್ರವಾಹ ಮೂರ್ಲೋಕದಲಿ ಪೂಜಿತನೆ |
ಕರಿಯ ಕಾಯ್ದನೆ ನಕ್ರಹರ ಹರಿ
ಗುರಿಯ ತೋರುವ ಲೋಕಗುರು ಹರಿ
ಬರಿಯ ತೋರಿಕೆ ನೆಚ್ಚ ನಿಜಭಕ್ತರಿಗೆ ತಾನೊಲಿವ || ೯೭ ||
ಗುರುವೆ ಮೂರ್ಲೋಕಕ್ಕೆ ಮೂಲನೆ
ಗುರುವೆ ಜಗದಾದೀಶ ಕೃಷ್ಣನೆ
ಹೊರುವೆ ತವಪದಪದ್ಮ ಹೃದಯದಿ ದೇವ ಸರ್ವಜ್ಞ |
ಇರುವೆ ನಿನ್ನಲಿ ನಿತ್ಯ ಸಂತತ
ಬರುವೆ ಸಂಗಡ ನೀನು ಜೀವರ
ಸರುವ ರೀತಿಲಿ ಕಾಯ್ವ ಗೀತಾಚಾರ್ಯ ವಿಶ್ವಾತ್ಮ || ೯೮ ||
ಮುಕುನ್ದೋ ಮಾಧವೋऽನನ್ತೋऽಚ್ಯುತಶ್ಚಾರುಚತುರ್ಭುಜಃ |
ಗೋವಿನ್ದಃ ಪರಮಾನನ್ದಸ್ಸತ್ಯನಾರಾಯಣೋ ರವಿಃ ||೧೭||(೧೦೭)
ಮುಕುನ್ದನೆ ಮುಕುತಿಯ ಸ್ವರೂಪನೆ
ಮುಕುತಿ ಮುಕು ಮೋಕ್ಷವನೆ ನೀಡುವ
ಭಕುತಬಂಧುವೆ ವರದ ಮುಚುಕುಂದನಿಗೆ ಕೇಶವನೆ |
ಹೇ ಕುನ್ದನೆ ಮೂರು ಮೂರುತಿ
ಶ್ರೀಕುನ್ದಸುಮಸನ್ನಿಭನೆ ಹರಿ
ನಾಕು ಪುರುಷಾರ್ಥಗಳನೀವನೆ ಕೃಷ್ಣ ಮಾಧವನೆ || ೯೯ ||
ಮಾಧವನೆ ಮಾ ಲಕುಮಿರಮಣನೆ
ಮಾಧವನೆ ವಿದ್ಯಾಧಿಪತಿ ನೀ
ಮಾಧವನೆ ಮಧುವಂಶಜನೆ ಹರಿ ವಾಸುದೇವನೆ ನೀ |
ಮೇಧೆಯನು ಕಾಪಿಡುವ ಕೃಷ್ಣನೆ
ಬಾಧೆಗಳ ಪರಿಹರಿಪ ಕೃಷ್ಣನೆ
ಸಾಧನೆಗೆ ಫಲ ಕೊಡುವ ಮಾಯಾವಲ್ಲಭನೆ ಹರಿಯೆ || ೧೦೦ ||
ಅನಂತನ ಹರಿ ಶೇಷ ಶೇಷಿಯ
ನನಂತನನಂ-ತರಹಿತನಸುರ
ಮಹಂತನನಸುರಾದಿಕೃಂತನ ಶರಣು ಶರಣೆಂಬೆ |
ಸನಾತನ ಕೇಶವನ ಕೃಷ್ಣನ
ವಿನೂತನ ವಾಸವನ ಮಿತ್ರನ
ವಿಧಾತನ ಪಿತ ಹರಿಹರಾತ್ಮಕ ಬೊಮ್ಮನನು ನಮಿಪೆ || ೧೦೧ ||
ಅಚ್ಯುತನೆ ಮಾಧವನೆ ವಿಷ್ಣುವ-
-ವಿಚ್ಯುತನೆ ಪದದಿಂದ ಕೃಷ್ಣನೆ
ಹೇ ಚ್ಯುತಿಯ ವಿರಹಿತನೆ ಸರ್ವಾಂತರನೆ ಪರಮಾತ್ಮಾ |
ಅಚ್ಯುತಾಂಘ್ರಿಗೆ ಮಣಿವೆ ನಿತ್ಯಗೆ
ಸಚ್ಯುತರವೊಲು ತೋರ್ವ ಜೀವರ
ನಚ್ಯುತನೆ ಹೃತ್ಸ್ಥಾತ್ಮ ಸರ್ವರ ನೈಜದೊಳು ಕಾವ || ೧೦೨ ||
ಚಾರುಚತುರ್ಭುಜನೆ ವಿಷ್ಣುವೆ
ಮೂರುಲೋಕದ ಸ್ವಾಮಿ ಬೊಮ್ಮನೆ
ಕಾರುಣಿಕ ಪರಮಾತ್ಮನೀಶ್ವರ ಸುಂದರಾಕಾರ |
ಬೇರು ಸೃಷ್ಟಿಗೆ ದೇವ ಕೃಷ್ಣನೆ
ಸಾರು ಗೀತೆಯ ನಾಲ್ದೆಸೆಗಳಲಿ
ಮೇರುಕೀರುತಿ ಕೃಷ್ಣಮೂರುತಿ ವೀರಮಾರುತಿಯೆ || ೧೦೩ ||
ಗೋವು ಹಸು ಗೋವಿಂದ ಹೊಂದಿದ
ಕಾವುದಾತನು ಸಕಲ ಪೃಥಿವಿಯ
ಮಾವುತನು ಕರಣಾಖ್ಯ ಹಸ್ತಿಗಳಿಂಗೆ ಶ್ರೀಕೃಷ್ಣ |
ಭಾವುಕನು ಬ್ರಹ್ಮಾತ್ಮರೂಪನು
ಸಾವು ಹುಟ್ಟನು ಮೀರಿದಾತನ
ಠಾವು ಸರ್ವಾಂತರವು ಶರಣಾಗಿಹೆನು ಸಂತತವು || ೧೦೪ ||
ಪರನು ಪರಮಾನಂದ ಕೃಷ್ಣನು
ಮುರವೈರಿ ಸದ್ರೂಪ ಕೃಷ್ ಪದ
ಹರಮಿತ್ರ ನಿರ್ವೃತಿರೂಪ ಣಾಕ್ಷರವಾಚ್ಯ ಶ್ರೀಕೃಷ್ಣ |
ಪರಮ ಮಂಗಲರೂಪ ಚಿತ್ಸುಖ
ಹರಣ ಸಂಕಟ, ಚಿದ್ವಿಲಾಸನ
ಚರಣ ನಂಬಿದೆ ಸಚ್ಚಿದಾನಂದಾಖ್ಯ ಕೇಶವನ || ೧೦೫ ||
ಸತ್ಯನಾರಾಯಣನೆ ಕೃಷ್ಣನೆ
ಸತ್ಯ ಪರಿಪಾಲಕನೆ ಲೋಕದಿ
ಸತ್ಯವೇ ಜಯವೆಂಬುದನು ತೋರ್ಪವನೆ ನಾರಯಣ |
ನಿತ್ಯ ಮೋಕ್ಷಾಶ್ರಯನೆ ನಾರ-ದ
ನಿತ್ಯ ನಾರಾಯಣನೆ ಮುಕ್ತಿಯು
ನಿತ್ಯ ಸತ್ಯ ವಿಚಿತ್ಯ ನೀನರಿ ಸಚ್ಚಿದಾತ್ಮಕನೆ || ೧೦೬ ||
ರವಿಯೆ ಸೂರ್ಯನೆ ಲೋಕ ಬೆಳಗುವ
ರವಿಯೆ ನೀನಜ್ಞಾನತಮಸಿಗೆ
ಹವಿಯೆ ಹೋಮನೆ ಹೋತೃ ಫಲದಾತಾರ ಶ್ರೀಕೃಷ್ಣ |
ಕವಿಯೆ ಸರ್ವಜ್ಞಾತ್ಮ ಶ್ರೀಹರಿ
ಸವಿಯೆ ಪರಮಾನಂದವನು ತವ
ಗವಿಯ ಹೊಗು ನಿನ್ನೊಳಗಿರುವ ಸರ್ವಾತ್ಮನೀಶ್ವರನ || ೧೦೭ ||
ಆದಿತ್ಯಃ ಕಂಸಹಾ ನಾಥೋ ನವನಾರಾಯಣೋऽಮರಃ |
ಋತಂ ಸತ್ಯಂ ಪರಬ್ರಹ್ಮ ಬ್ರಹ್ಮೋऽಪೇನ್ದ್ರೋ ಮಹೇಶ್ವರಃ ||೧೮||(೧೧೮)
ಆದಿತೇಯನನದಿತಿಪುತ್ರನ-
-ನಾ ದಿನಪ ಕಶ್ಯಪನ ಪುತ್ರನ-
-ನಾದಿಜ್ಯೋತಿಯ ಪರಂಜ್ಯೋತಿಯ ಲೋಕಚಕ್ಷುವಿನ |
ಆದಿದೇವನ ಲೋಕವಂದಿತ-
-ನಾದಿ ಶ್ರೀಪ್ರತ್ಯಕ್ಷದೇವನ-
-ನಾದಿಯಲೆ ನಮಿಸುವೆನಾದಿತ್ಯನ ಕೃಷ್ಣನಾತ್ಮಕನ || ೧೦೮ ||
ಕಂಸಹಾ ಕಂಸಹತಿಗೈದಿಹ
ಕಂಸಮಾವನ ದೌಷ್ಟ್ಯನಾಶಕೆ
ಹಂಸವಾಹನಪಿತನೆ ಕೃಷ್ಣನ ರೂಪ ತಾ ತಳೆದ |
ಕಂಸಸೋದರಿ ದೇವಕಿಯ ಸುತ
ಕಂಸನರಿ ತಾನಷ್ಟಮಾಂಶದಿ
ಕಂಸನೇ ಮೊದಲಾದ ದುಷ್ಟರ ತರಿಯಲವತರಿಸಿ || ೧೦೯ ||
ನಾಥ ಮಚ್ಛೇಂದ್ರಾಖ್ಯ ರೇವಣ
ನಾಥ ಭರ್ತೃಹರಿಯು ಜಾಲಂಧರ
ನಾಥ ವಟಸಿದ್ಧಾಖ್ಯ ನಾಗನು ನಾಥ ಗೋರಕ್ಷ |
ನಾಥ ಚರಪಟಿ ನಾಥ ಕಾನಿಫ
ನಾಥ ಗಹನಿಯು ನಾಥ ನವರು ಸ
ನಾಥರಾದರು ದತ್ತನಿಂ ನವನಾರಯಣರಿಂದ || ೧೧೦ ||
ನವನಾರಾಯಣರು ನೀನೇ
ಭವನ ಪಾರಾಯಣನು ಕೃಷ್ಣನೆ
ನವ ಪುರಾಣ ಸನಾತನೇಶ್ವರನಾದಿನಾರಯಣ |
ಕವಿ ಚಮಸ ದ್ರುಮಿಲಂತರಿಕ್ಷ ತಾ
ನವಿಹೋತೃ ಹರಿ ಪಿಪ್ಪಲಾಯನ
ಭುವಿ ಪ್ರಬುದ್ಧಿಯು ಕೃಷ್ಣ ಕರಭಾಜನನು ತಾನಿಹನು || ೧೧೧ ||
ಅಮರ ಹರಿ ತಾನಮರವಂದ್ಯನು
ವಿಮಲಚರಿತನು ತಾನುಪೇಂದ್ರನು
ಕಮಲರಮಣನು ಮಹಿಯ ವಲ್ಲಭ ರುಕ್ಮಿಣೀಶ ಗುರೋ |
ಸಮರವಿಜಯಿಯು ಸತ್ಯಧರ್ಮದ
ಭ್ರಮರಗಳಿಗಾಶ್ರಯನು ಮಧುರನು
ಯಮನ ಯಮನಮೃತದನು ತಾನಜರನಜ ತಾ ನಿತ್ಯ || ೧೧೨ ||
ಋತನೆ ಕೃಷ್ಣನೆ ಲೋಕನಿಯತಿಯೆ
ಹಿತನೆ ಸರ್ವರ ಪಿತನೆ ಬೊಮ್ಮನ
ಗತಕು ಭವಿತವ್ಯಕ್ಕು ಸೇತುವು ಕಾಲಕಾಲನೆ ನೀ |
ಹಿತದ ಜಲ ಮಾನಸಿಕ ಸತ್ಯನೆ
ಸತತವಿರುತಿಹ ಕರ್ಮಫಲ ಹರಿ
ವಿತತ ಬೊಮ್ಮನೆ ರುದ್ರ ಸತ್ಯಾಚಾರ ಕ್ರತು ಮೋಕ್ಷ || ೧೧೩ ||
ಸತ್ಯ ಶಾಶ್ವತ ನಿತ್ಯ ಸಂತತ
ಸತ್ಯ ನಾರಾಯಣನೆ ಕೃಷ್ಣನೆ
ಸತ್ಯ ಸಚ್ಚಿತ್ಸುಖನೆ ಬೊಮ್ಮನೆ ಶಪಥ ಶ್ರೀಹರಿಯೆ |
ನಿತ್ಯ ನಿರ್ಮಲ ಶುದ್ಧ ತತ್ತ್ವನೆ
ಸತ್ಯನಶ್ವತ್ಥಾತ್ಮ ತಥ್ಯನ-
-ನತ್ಯಂತ ಶಾಶ್ವತನೆ ಮುಕ್ತನೆ ಸಚ್ಚಿದಾನಂದ || ೧೧೪ ||
ಪರಬ್ರಹ್ಮನೆ ಪರಮಕಾರಣ
ಸ್ವರಬ್ರಹ್ಮನೆ ಪ್ರಣವಕಾರಣ
ಗುರುಬ್ರಹ್ಮನೆ ಪರಮಗತಿ ಪರಗತಿಯೆ ಶ್ರೀಕೃಷ್ಣ |
ಸುರಬ್ರಹ್ಮನೆ ದೇವದೇವನೆ
ನರಬ್ರಹ್ಮನೆ ಭೂಸುರೇಂದ್ರನೆ
ಹರಬ್ರಹ್ಮಾತ್ಮಕನೆ ನಾರಾಯಣನೆ ಶರಣೆಂಬೆ || ೧೧೫ ||
ಬ್ರಹ್ಮ ಸರ್ವದ ಸೃಷ್ಟಿಕಾರಣ
ಬ್ರಹ್ಮ ಶಾರದೆರಮಣ ಸದ್ಗುರು
ಬ್ರಹ್ಮ ಸಿರಿಹರಿನಾಭಿಕಮಲಜ ಕೃಷ್ಣ ನೀನಯ್ಯ |
ಬ್ರಹ್ಮ ನಾಲ್ಮೊಗರೂಪಿ ನೀನೈ
ಬ್ರಹ್ಮ ಬೃಹತನೆ ಬೊಮ್ಮ ಮಹತನೆ
ಬ್ರಹ್ಮ ಬೃಂಹಣ ವಿಸ್ತರಾತ್ಮಕ ವಿಸ್ತರಿಸು ಸತ್ಯ || ೧೧೬ ||
ಉಪೇಂದ್ರನೆ ಹರಿ ವಾಮನಾತ್ಮಕ-
-ನುಪೇಂದ್ರನೆ ನೀನಿಂದ್ರನನುಜನೆ
-ಯುಪೇತನೆ ವಟು ಕಶ್ಯಪಾದಿತಿಜ ತ್ರಿವಿಕ್ರಮನೆ |
ಅಪೇಕ್ಷಿಸೆ ವಿಭವಗಳ ಶ್ರೀಹರಿ
-ಯುಪೇಕ್ಷಿಸದಿರು ನಿನ್ನ ದಾಸನ-
-ನುಪೇಂದ್ರನೆ ತೋರಿಕೆಯು ಸಟೆ ಸರ್ವಾತ್ಮ ನೀ ದಿಟವು || ೧೧೭ ||
ಮಹೇಶ್ವರ ಸರ್ವೇಶ ಶ್ರೀಪ್ರಭು-
-ವಿಹೇಶ್ವರ ಪರದೀಶ್ವರನೆ ಗುರು
ಗುಹೇಶ್ವರ ಮಹದಾದಿಗಳ ಪತಿಯೀಶ್ವರೇಶ್ವರನು |
ಮಹೇಶ್ವರ ಮಹಿಮಾತಿಶಾಯಿಯೆ
ಮಹೇಶ್ವರ ಗರಿಮೆಯಲಿ ಶ್ರೇಷ್ಠನೆ
ಮಹೇಶ್ವರ ಸಕಲೇಶ ಸರ್ವಾತ್ಮಕನೆ ಪರಬೊಮ್ಮ || ೧೧೮ ||
ಶ್ರೀಪತಿಃ ಪರತತ್ತ್ವಶ್ಚ ಪುರಾತನಶ್ಚ ಭೂಪತಿಃ |
ಪ್ರಗ್ರಹಶ್ಶಾಶ್ವತಶ್ಚೇತಾ ನಿರ್ವಿಕಾರೋ ಧನಞ್ಜಯಃ ||೧೯||(೧೨೭)
ಶ್ರೀಪತಿಯೆ ಸಿರಿವಲ್ಲಭನೆ ಹರಿ
ಭೂಪತಿಯೆ ಗೋವಿಂದ ಮಾಧವ
ಹೇ ಪತಿಯೆ ಮೂರ್ಲೋಕದೊಡೆಯನೆ ದೇವ ನಾರಯಣ |
ತಾಪ ಮೂರನು ನಾಶಮಾಡುವ
ಗೋಪ ಗೋಕುಲನಾಥ ದೇವಕಿ
ತಾಪಹಾರಕ ವಾಸುದೇವನೆ ರಕ್ಷಿಸನವರತ || ೧೧೯ ||
ಪರತತ್ತ್ವ ಪರಬೊಮ್ಮ ಕೃಷ್ಣನೆ
ಪರಗತಿಯೆ ವರತತ್ತ್ವರೂಪನೆ
ಪರಮಾತ್ಮತತ್ತ್ವಸ್ವರೂಪ ಶ್ರೀಹರಿ ದೇವ ಪರಮೇಶ |
ಪರಮ ಸಾತ್ತ್ವಿಕ ನಾಮರೂಪನೆ
ಪರಮ ನಿರ್ಗುಣ ಮೂಲರೂಪನೆ
ಚರಮಗತಿ ನೀ ಲೋಕಕೆಲ್ಲವು ಸರ್ವರಂತಃಸ್ಥ || ೧೨೦ ||
ಪುರಾಣನು ನಿ-ತ್ಯನೂತನ ಹರಿ
ಪುರಾತನ ಸ-ತ್ಯಸಾಧ್ಯನು ಗುರು
ಪರಾತ್ಮನು ಸಜ್ಜನರ ರಕ್ಷಕ ಧರ್ಮಸಂರಕ್ಷ |
ಹರಾತ್ಮಕ ಸಚ್ಚಿದಾತ್ಮಕನಜ
ಪುರಾಧಿಪ ಪರಂಜ್ಯೋತಿ ಪ್ರಾಣನೆ
ಚರಾಚರಗುರು ಸನಾತನ ಚಿರಜೀವಚೈತನ್ಯ || ೧೨೧ ||
ಭೂಪತಿಯೆ ಭೂದೇವಿರಮಣನೆ
ಗೋಪತಿಯೆ ಗೋಪಾಲ ಕೃಷ್ಣನೆ
ಹೇ ಪರಮ ಪುರುಷೋತ್ತಮನೆ ಹರಿ ಗೋಕುಲೋತ್ತಂಸ |
ಕಾಪುರುಷಶಿಕ್ಷಕನೆ ಗೋಪನೆ
ಗೋಪಿಹೃದಯನೆ ಗೋಪಬಾಲನೆ
ಕಾಪು ನೀನೆ ಸುಧರ್ಮ ಸತ್ಯಕೆ ಭೂಪ ಧರಣೀಶ || ೧೨೨ ||
ಪ್ರಗ್ರಹನೆ ಪ್ರಕೃಷ್ಟ ಗ್ರಹಣನೆ
ವಿಗ್ರಹನೆ ಜಗರೂಪಿ ಕೃಷ್ಣನೆ
ನಿಗ್ರಹನೆ ಶರಣಾಗತನ ಕರಣಂಗಳಿಗೆ ಹರಿಯೆ |
ಸುಗ್ರಹನೆ ಮಣಿದಂಥ ಭಕ್ತಗೆ
ದುರ್ಗ್ರಹನೆ ದುಷ್ಟಾತ್ಮರುಗಳಿಗೆ
ವ್ಯಗ್ರನರಹರಿಯುಗ್ರರಿಗೆ ತಾನಗ್ರಪೂರುಷನೆ || ೧೨೩ ||
ಹರಿಯೆ ನೀ ಶಾಶ್ವತನೆ ನಿತ್ಯನೆ
ಬರಿಯ ಮಾಯೆಯು ಸೃಷ್ಟಿಯೆಂಬುದ-
-ನರಿತುಕೊಂಡರೆ ಶಾಂತಿ ಮುಕುತಿಯು ಬದುಕಿನಲ್ಲಿಹುದು |
ಸುರಿವುದಮೃತಾನಂದವರ್ಷವು
ಮರೆವುದಾಕರ್ಷಣೆಯ ಲೌಕಿಕ
ಗುರಿಯು ಜೀವನ್ಮುಕ್ತಿ ಕೈವಶ ಕೃಷ್ಣಕೃಪೆಯಿಂದ || ೧೨೪ ||
ಚೇತನವು ಚಿತ್ತದ ಪ್ರವೃತ್ತಿಯು
ಚೇತನಾತ್ಮಕನೀತ ಚೇತಾ
ಚೇತನವ ತುಂಬುತ ಪ್ರಚೋದನೆ ಕೊಡುವ ಶ್ರೀಕೃಷ್ಣ |
ಚೇತನವು ನವಶಕ್ತಿ ತುಂಬುತ
ಪಾತಕವ ಚರಿಸದೇ ನಿತ್ಯವು
ಹಾತೊರೆದು ಜನಹಿತವ ಗೈಯುವ ಭಕ್ತಿ ನೀಡೆಮಗೆ || ೧೨೫ ||
ವಿಕಾರವನೆಂದಿಗೂ ಹೊಂದದ
ವಿಕಾರೇತರ ನಿರ್ವಿಕಾರನೆ
ವಿಕಾರಾತ್ಮಕ ಲೋಕಕೇ ಕಾರಣನು ಶ್ರೀಕೃಷ್ಣ |
ಸಕಾರಾತ್ಮಕ ಧೋರಣೆಯಲಿ
ವಿಕಾರಗಳೆಲ್ಲವನು ಮೀರುತ
ಪ್ರಕಾರಾಂತರ ತಾಳದಿಹ ಪರತತ್ತ್ವವನು ಭಜಿಪೆ || ೧೨೬ ||
ಧನವ ಜಯಿಸುತ ಧನಂಜಯನೆ ನೀ
ಧನಲಕುಮಿವರ ಮಹಾವಿಷ್ಣುವೆ
ಘನಮಹಿಮ ಪಾಂಡವರ ಮಧ್ಯದಿ ನರನು ನೀನಹುದು |
ಸನುಮತದಿ ಬೋಧಿಸಿದೆ ಗೀತೆಲಿ
ಜನುಮ ಮರಣದ ಬಂಧ ಕಳೆಯೆಲೊ
ಹನುಮಪ್ರಿಯ ಭೀಮಾತ್ಮನನುಜನೆ ನಾಗ ಶ್ರೀಕೃಷ್ಣ || ೧೨೭ ||
ಪಾವಕೋ ಮಾರುತಸ್ತೋಯಶ್ಚಾಗಾಧೋ ಭಕ್ತವತ್ಸಲಃ |
ಬುದ್ಧಿಶ್ಶುದ್ಧಿರ್ಜಿತಾಮಿತ್ರೋ ದ್ವಾರಕಾಧಿಪತಿರ್ವಿರಾಟ್ ||೨೦||(೧೩೭)
ಪಾವಕನೆ ತಾನನಲ ವಹ್ನಿಯೆ
ತಾವಕವು ಸುಡುವಗ್ನಿಶಕ್ತಿಯು
ಪಾವನಾತ್ಮನೆ ಗಾರ್ಹಪತ್ಯನೆ ದಕ್ಷಿಣಾಗ್ನಿ ಹರಿ |
ಪಾವಕಾಹವನೀಯ ಕೃಷ್ಣನೆ
ಭಾವಕೊಲಿವನೆ ಭಕ್ತಪ್ರೀಯನೆ
ಕಾವ ಭಕ್ತಜ್ಞಾನಿಗಳ ಪಾಪಗಳ ದಹಿಸುತಲಿ || ೧೨೮ ||
ಮಾರುತನೆ ತಾನನಿಲ ವಾಯುವೆ
ಬೀರುತಲಿ ಪೊಸ ಘಮಲುಗಳ ಬಲು
ಸಾರುತಿಹೆ ನೀ ಮುಖ್ಯಪ್ರಾಣನ ಹೃತ್ಕಮಲವಾಸಿ |
ಸೋರುತಿಹ ಮನಕರಣಶಕ್ತಿಯ
ತೋರುತಲಿ ದಯೆ ಕಾಯೊ ಕೃಷ್ಣನೆ
ಪಾರುಗಾಣಿಸೊ ನೀಡಿ ಜ್ಞಾನ-ವಿರಕ್ತಿ-ಭಕ್ತಿಗಳ || ೧೨೯ ||
ತೋಯ ನೀ ಜಲ ವಾರಿ ನೀರನು-
-ಪಾಯ ಜೀವನ ಜೀವಧಾತುವ-
-ಪಾಯಕಾಲದಿ ಗಂಗೆ ಮುಕುತಿಯ ಸಂಜ್ಞೆ ಶ್ರೀಕೃಷ್ಣ |
ಹೇ ಯಮುನೆತೀ-ರದ ವಿಹಾರಿಯ-
-ಹೇಯನನುಪಾದೇಯನಾತ್ಮನ-
-ಮೇಯ ಬೊಮ್ಮನೆ ಸಕಲರಂತರ್ಯಾಮಿ ಸರ್ವೇಶ || ೧೩೦ ||
ಅಗಾಧನೆ ಹರಿಯಾಳ ನಿಲುಕದ
ಪ್ರಗಾಢನೆ ದೃಢನತಿಗಭೀರನೆ
ವಿಗಾನಕೆ ಕಿವಿಗೊಡದ ಮೌನಿಯೆ ಜ್ಞಾನಸಾಗರನೆ |
ಸುಗಾನಕೆ ಮನಕರಗಿ ವರದನೆ
ನಗಾದಿಸ್ಥಿತಶಯನ ಕೃಷ್ಣನ-
-ವಗಾಹನಪ್ರಿಯಪ್ರಿಯನೆ ಕೇಶವನಾದಿನಾರಯಣ ||೧೩೧ ||
ಭಕ್ತವತ್ಸಲ ಶ್ರೀಶ ಶ್ರೀಹರಿ
ನಕ್ತಚರಸಂಕ್ಷೋಭ ಕೃಷ್ಣ ವಿ-
-ವಿಕ್ತಸೇವಿಗಳಾತ್ಮ ಜನಮಾನಸದಿ ಸಂಚಾರಿ |
ಶಕ್ತರಲಿರುವ ಶಕ್ತಿ ತಾನಿಹ
ಭಕ್ತರಲಿರುವ ಭಕ್ತಿ ತಾನಿಹ
ಭಕ್ತನನು ಮಗುವಂತೆ ಕಾಯುವ ಭಕ್ತನೇಹಿಗನೆ || ೧೩೨ ||
ಬುದ್ಧಿರೂಪ ಪ್ರಬುದ್ಧರೂಪನೆ
ಬುದ್ಧಿಚೋದಕ ಪ್ರೇರಕನೆ ಹರಿ
ಬುದ್ಧಿಶುದ್ಧಿಪ್ರದನೆ ನಿರ್ಮಲ ನಿರ್ಮಮನೆ ಕೃಷ್ಣ |
ಗದ್ದಿಗೆಯ ಬಯಸದನೆ ತ್ಯಾಗಿಯೆ
ಮುದ್ದಿನಾತ್ಮೀಯ ಹರಿ ಯೋಗಿಯೆ
ಸುದ್ದಿ ಮಾಡದೆ ಶುದ್ಧಿ ಮಾಡುವ ಪರಮದೀಧಿತಿಯೆ || ೧೩೩ ||
ಕರಣಶುದ್ಧೀಕರಣಕಾರಣ
ಹರಣಶುದ್ಧೀಕರಣಕಾರಣ
ಮರಣಶುದ್ಧೀಕರಣಕಾರಣ ಶುದ್ಧಿ ಶ್ರೀಕೃಷ್ಣ |
ಚರಣಕಮಲದ್ವಯಕೆ ಪೊಡಮಡು-
-ತರುಣಕರಕಮಲಾತ್ಮಕನನತಿ-
-ಶರಣು ಹೊಂದುತಲಿರುವೆ ಚಿತ್ತವಿಶುದ್ಧಿಗೊಳಿಸಯ್ಯ || ೧೩೪ ||
ಜಿತಾಮಿತ್ರನಮಿತ್ರಸೂದನ
ಜಿತಾರೀಶ್ವರ ದುಷ್ಟವಾರಣ-
-ಜಿತಾಧಿಪನಪರಾಜಿತನೆ ಜಿತವೈರಿ ಶ್ರೀಹರಿಯೆ |
ಹತಾಸುರತತಿ ಹಿತಾಹಿತದನೆ
ಸುತಾದಿಗಳಿಗೆ ಹಿತೋದ್ಬೋಧನ-
-ಮಿತಾಕ್ಷರಿ ಹರಿ ಕೃಷ್ಣ ಸಂತತ ಪೊಡಮಡುವೆ ನಿನ್ನ || ೧೩೫ ||
ದ್ವಾರಕಾವತಿಯಧಿಪತಿಯೆ ಹರಿ
ದ್ವಾರಕಾಧೀಶ್ವರನೆ ಕೃಷ್ಣನೆ
ದ್ವಾರ ಕಾಯ್ವನೆ ಬಲಿಯ ಸುತಲದಿ ಭಕ್ತವತ್ಸಲನೆ |
ಆರ ಮೊರೆಹೊಗಲಿವನನಲ್ಲದೆ
ಯಾರ ನುತಿಸಲಿಯಾತ್ಮನಲ್ಲದೆ
ಸಾರ ನಿಖಿಲದ ಮೂಲ ನಾಮಾತೀತ ನೀರೂಪ || ೧೩೬ ||
ವಿರಾಟ್-ಪುರುಷ ವಿಶಿಷ್ಟ ರಾಜಿಪ
ವಿರಾಡ್ರೂಪನೆ ವಿಶ್ವರೂಪನೆ
ವಿರಾಜಿತ ನೀ ಸೃಷ್ಟಿವೈವಿಧ್ಯದವೊಲೀಶ್ವರನೆ |
ಸ್ವರಾಜನೆ ಪರಮಾತ್ಮ ಬೊಮ್ಮನೆ
ವಿರಾಜನೆ ನಿನಗಿಲ್ಲ ರಾಜನು
ಸುರಾಜರ ಲೋಕಕ್ಕೆ ಕರುಣಿಸು ರಾಮ ಶ್ರೀಕೃಷ್ಣ || ೧೩೭ ||
ತ್ರಿವಿಕ್ರಮಃ ಪೂರ್ಣಕಾಮಃ ಪರೇಶೋऽಮಿತವಿಕ್ರಮಃ |
ಧನುರ್ಧರಶ್ಚ ಶತ್ರುಘ್ನೋऽನಿರುದ್ಧಶ್ಚ ಗದಾಧರಃ ||೨೧||(೧೪೫)
ತ್ರಿವಿಕ್ರಮ ಹರಿ ಭೂರಿ ವಿಕ್ರಮ-
-ನವಿಕೃತನೆ ಮೂರ್ಲೋಕವಳೆದನೆ
ಸವಿವ ಜೀವರ ರೂಪಿನಲಿ ಸೃಷ್ಟಿಯ ವಿಚಿತ್ರವನು |
ನವಿರು ಹಾಸನೆ ಬಾಲಕೃಷ್ಣನೆ
ಕವಿದ ಮೂಢತೆ ಕಳೆಯಲೀಗಲುದ್-
-ಭವಿಸು ಲೋಕದಿ ಶಿಷ್ಟರಕ್ಷಣೆ ದುಷ್ಟಶಿಕ್ಷಣಕೆ || ೧೩೮ ||
ಪೂರ್ಣಕಾಮನವಾಪ್ತಕಾಮನೆ
ಪೂರ್ಣ ಪೂರೈಸಿರುವ ಕಾಮನೆ
ಪೂರ್ಣ ಪೂರಣ ತುಂಬಿ ಹಿಂತಿರುಗುತಿಹ ಕಾಮಪಿತ |
ಪೂರ್ಣವಾಗದ ಬಯಕೆಯಿಲ್ಲವು
ಪೂರ್ಣಪೂರ್ಣವ ಮೀರಿ ನಿಂತಿಹ
ಪೂರ್ಣ ಜಗಪತಿ ಜಗವ ತುಂಬಿಹ ತತ್ತ್ವ ಶ್ರೀಕೃಷ್ಣ || ೧೩೯ ||
ಪರೇಶನೆ ಪರಮೇಶ ಕೇಶವ
ಪರೇಶ್ವರ ಪರಮಾತ್ಮ ಕೃಷ್ಣನೆ
ಸುರೇಶನೆ ಪ್ರಕೃತೀಶ ಪುರುಷನೆ ಪರಾತ್ಪರ ಪ್ರಭುವೆ |
ನರೇಶೇಶ್ವರ ಸುರೇಶೇಶ್ವರ-
-ಮರೇಶೇಶ್ವರ ಪಶುಗಳಧಿಪನೆ
ಹರೇ ಮಾಧವ ಶಕ್ತ್ಯಭಿನ್ನನೆ ಸರ್ವಶಕ್ತ ಗುರೋ || ೧೪೦ ||
ಅಮಿತವಿಕ್ರಮ ಕೃಷ್ಣ ಸುಕ್ರಮ-
-ನಮಿತ ಮಿತಿಯಿರದಂಥ ಶೂರನು
ತಿಮಿರನಾಶಕ ಜ್ಞಾನಸೂರ್ಯ ವಿಶೇಷ ಕ್ರಮಯುತನೆ |
ನಮಿಪ ಭಕ್ತರಿಗೊಲಿವ ದೇವನೆ
ಘಮಿಪ ಗಂಧ ಸುಗಂಧ ಲೇಪಿತ
ನಮಿಸುವೆನು ಶಿರಬಾಗಿ ಚರಣಕೆ ಭಕ್ತಕರುಣಾಳು || ೧೪೧ ||
ಧನುರ್ಧರ ಶಾರ್ಙ್ಗವನು ಧರಿಸುತ
ಧನುವ ಧರಿಸಿಹ ಶಾರ್ಙ್ಗಪಾಣಿಯೆ
ಹನುಮನುತ ಕೋದಂಡರಾಮನೆ ಕೃಷ್ಣ ತಾನಿಹನು |
ಜನುಮ ಬಂಧವ ಕಳೆಯೊ ಶ್ರೀಹರಿ-
-ಯನುದಿನದ ಮಾಯೆಗಳ ಕಳೆಯುತ-
-ಲನುವ ಮಾಡೈ ಕಾಮ ಮೋಹಾದಿಗಳ ಕಳೆಯುತಲಿ || ೧೪೨ ||
ಶತ್ರುಗಳ ಸಂಹರಿಸಿ ಸುಜನರ
ಮಿತ್ರರಂದದಿ ರಕ್ಷಿಸುವ ಹರಿ
ಶ-ತ್ರುಘ್ನ ಕೃಷ್ಣ ಸುಧರ್ಮರಕ್ಷಕ ಭಕ್ತರಾಧೀನ |
ಸತ್ರ ಗೈಯುವೆ ನಿನ್ನ ಜ್ಞಾನದ
ಚಿತ್ರಿಸುವೆ ನಾ ನಿನ್ನ ಲೀಲೆಯ
ಚಿತ್ರ ವೈಚಿತ್ರ್ಯದ ಪ್ರಪಂಚವು ಮಿಥ್ಯ ನೀ ಸತ್ಯ || ೧೪೩ ||
ಎಚ್ಚರದಿಯನಿರುದ್ಧನಾಗುತ-
-ಲೆಚ್ಚರಿಪೆಯನುದಿನವು ಜೀವರ-
-ನೆಚ್ಚರೆಚ್ಚರವಾಗು ಮಾಯಾಸುಪ್ತಿಯಿಂದ |
ತ್ವಚ್ಚರಿತೆಯನುಪಮವು ಲೋಗರ-
-ನುಚ್ಚರಿಸೆ ಪಾಪತತಿ ಭಸ್ಮವು
ಸಚ್ಚರಿತ ಬಿಡಿಸಯ್ಯ ಭವಪಾಶಗಳ ನೀ ಬೇಗ || ೧೪೪ ||
ಗದೆಯ ಧರಿಸಿ ಗದಾಧರನು ಹರಿ
ಸುಧೆಯ ಸುರಿಸಿ ಸುಧಾಶಯನು ಹರಿ
ವಧೆಯ ಗೈದಸುರಾಂತಕನೆ ಕೌಮೋದಕೀಯ ಹರಿ |
ಅದೆ ಕು ಭೂಮಿಗೆ ಮೋದ ನೀಡುವ-
-ನಿದಕೆ ಕೃಷ್ಣ ಕುಮೋದಕನು ತವ
ಗದೆಯು ಕೌಮೋದಕಿಯು ಭೂಭಾರವನು ಹರಿಯುತಿದೆ || ೧೪೫ ||
ಸುದರ್ಶನೋ ಹಯಗ್ರೀವೋ ನೃಹರಿಃ ಪಾಪಹಾರಕಃ |
ಸಙ್ಕರ್ಷಣೋऽತ್ರಿವನ್ದ್ಯಶ್ಚಾನಸೂಯಜೋऽಕ್ಷರಪ್ರಭುಃ ||೨೨||(೧೫೩)
ಹರಿಯೆ ನೀ ಸುಂದರ ಸುದರ್ಶನ
ಹರಿಯೆ ಸುಂದರ ದರ್ಶನನೆ ಶ್ರೀ
ಕರಿಯ ಕೈಹಿಡಿದಂಥ ಮಹಿಮನೆ ಶ್ರೀಪತಿಯೆ ಕೃಷ್ಣ |
ತರಿವೆ ನೀನಸುರರನು ಚಕ್ರದಿ
ಹರಿಯೆ ಶ್ರೀಚಕ್ರವನು ಪಿಡಿದಿಹ
ಪರಿಯು ಕಾಲದ ಚಕ್ರ ಚಾರು ಸುದರ್ಶನಾತ್ಮಕನೆ || ೧೪೬ ||
ಶ್ರೀಹರಿಯೆ ಕುದುರೆಯ ಸ್ವರೂಪದಿ
ಹೇ ಹಯಗ್ರೀವನೆ ಮಹಾತ್ಮನೆ
ನೀ ಹನನ ಗೈದಿಹೆ ಹಯಗ್ರೀವಾಸುರನ ತಮನ |
ಆಹ! ವೇದಪ್ರೀತಿಯೆನಿತಿದು
ಸಾಹಸದಿ ನಿಗ್ರಹಿಸಿ ಚೋರನ
ಪಾಹಿಯೆಂದಿಹ ಬೊಮ್ಮದೇವನ ಕಾದೆ ಪ್ರಳಯದಲಿ || ೧೪೭ ||
ನರಹರಿಯೆ ನರಸಿಂಹ ನೃಹರಿಯೆ
ಹಿರಣ್ಯಕಶಿಪುವ ಸಂಹರಿಸಿ ನೀ
ತರಳ ಪ್ರಹ್ಲಾದನನು ಕಾಯ್ದುದ್ಧರಿಸಿದೆಲೆ ಹರಿಯೆ |
ಕರುಣೆಯಿಂದಲಿ ನಿನ್ನ ಭಕ್ತನ
ಕರುವ ಗೋವ್ಕಾಯ್ದಂತೆ ಸಲಹಿದೆ
ಬರುವ ವಿಘ್ನವ ಕಳೆದು ಭಕ್ತಿ ವಿರಕ್ತಿ ಜ್ಞಾನ ಕೊಡು || ೧೪೮ ||
ಪಾಪಹಾರಕ ಹರಿಯೆ ಕೃಷ್ಣನೆ
ತಾಪ ಮೂರರ ಹರಿವ ಶ್ರೀಹರಿ
ಕಾಪ ನೀನಿತ್ತಖಿಲ ಸುಜನರ ಭಕ್ತರುದ್ಧರಿಸು |
ಭೂಪ ಶ್ರೀಪಾದಿಗಳ ಸುಚರಿತೆ
ಕೂಪ ಸರಿತಾದಿಗಳ ಜಲನಿಧಿ
ಪಾಪ ಗೈಯದ ತೆರದಿ ಕಾಯೊ ಮಹಾನುಭಾವ ವಿಭೋ || ೧೪೯ ||
ದೇವ ಸಂಕರ್ಷಣನೆ ನಿದ್ದೆಲಿ
ಜೀವರನು ಕಾವಂಥ ಕೃಷ್ಣನೆ
ಹೂವನೀವೆ ಸರಸ್ವತೀವಾಙ್ಮಯದ ನೀನಿತ್ತ |
ಜೀವರನು ಸುಪ್ತಿಯಲಿ ಮಲಗಿಸಿ
ಕಾವ ಮರುಜನ್ಮದವೊಲಮಿತನೆ
-ಯೀವ ಜಾಗ್ರತ್ ಸ್ಥಿತಿಯ ಸಮ್ಯಕ್ ಕರ್ಷಿಸಿದ ಬಳಿಕ || ೧೫೦ ||
ಅತ್ರಿವನ್ದ್ಯನೆಯತ್ರಿಪುತ್ರನೆ
-ಯತ್ರ ತತ್ರ ಸ್ಥಿತನೆ ಬೊಮ್ಮನೆ
-ಯತ್ರಿ ಮೂರು ಸ್ಥಿತಿವಿರಹಿತನೆ ತ್ರಿಪುಟಿಯಾಚೆಯಿಹ |
ಶಾಸ್ತ್ರಿ ಶಾಸನ ಗುರುವನಾದಿಯು
ಹೇ ತ್ರಿಮೂರ್ತಿಸ್ವರೂಪ ಕೃಷ್ಣನೆ
-ಯತ್ತಿಯುಂಡನೆ ಗಾಂಗತೋಯವನೊಂದು ಮುಕ್ಕುಳಿಲಿ || ೧೫೧ ||
ಪರಮಪತಿವ್ರತೆಯನಸೂಯೆಯಲಿ
ವರ ಸುಜನ್ಮದ ತೆರದಿ ಬಂದಿಹ-
-ನವರಮಿತ್ರ ಸಮಾನನೇತ್ರ ವಿಚಿತ್ರ ಸಚ್ಚರಿತ |
ಗುರುವೆ ತಾನನಸೂಯಜನೆ ಹರಿ
ವರದ ದತ್ತಾತ್ರೇಯ ಮುನಿಪನೆ
ಕರಕಮಂಡಲ ಗಾಣಗಾಪುರದೀಶ ಗುರು ದತ್ತ || ೧೫೨ ||
ಅಕ್ಷರಪ್ರಭು ವಿಶ್ವರೂಪನೆ
ಭಿಕ್ಷೆಯೀವನೆ ಭಿಕ್ಷುರೂಪನೆ
ಸ್ವಕ್ಷಯುತ ಜೀವರೊಳು ತಾನಕ್ಷರನು ಕ್ಷರರಹಿತ |
ಅಕ್ಷಯನು ಹರಿಯಾತ್ಮರೂಪನು
ಪಕ್ಷರಹಿತನು ಕಕ್ಷೆರಹಿತನು
ಶಿಕ್ಷಕನು ಲೋಕಕ್ಕೆ ಗುರು ಪತಿಯಚ್ಯುತನೆ ಕೃಷ್ಣ || ೧೫೩ ||
ಸರ್ವಜ್ಞಸ್ಸರ್ವಶಕ್ತಶ್ಚ ಸರ್ವಶರ್ಮಪ್ರದಾಯಕಃ |
ಸರ್ವಗಸ್ಸರ್ವದಶ್ಶರ್ವಸ್ಸರ್ವಲೋಕಪತೀಶ್ವರಃ ||೨೩|| (೧೬೦)
ಸರ್ವಜ್ಞ ಹರಿ ಕೃಷ್ಣ ದೇವನೆ
ಸರ್ವವರಿತಿರುವಂಥ ಕಾವನೆ
ಸರ್ವವೂ ನೀನೆಂಬ ಭಾವನೆ ನಮ್ಮದಾಗಿರಲಿ |
ಸರ್ವ ಜ್ಞಾನದ ಮೂಲ ಬೊಮ್ಮನೆ
ಸರ್ವರಂತರ್ಯಾಮಿ ಶಕ್ತಿಯೆ
ಸರ್ವನಾಮಾಕೃತಿಗಳಾಸರೆ ಮೂಲ ಪರತತ್ತ್ವ || ೧೫೪ ||
ಎಲ್ಲ ಶಕ್ತಿಗಳಾದಿಮೂಲನೆ
ಬಲ್ಲ ಬಲ್ಲಿದನೆಲ್ಲ ಕೃಷ್ಣನೆ
ಸಲ್ಲದಿವನಿದಿರಾರ ಬಲವೂ ಸರ್ವಶಕ್ತ ಹರಿ |
ಕಲ್ಲಲಿರುವನು ಮಣ್ಣಲಿರುವನು
ಸೊಲ್ಲಲಿರುವನು ಕಜ್ಜ ಗೈಸುವ
ಬಿಲ್ಲ ಪಿಡಿದಗೆ ಸಲ್ಲಲಿತನಿಗೆ ವಂದಿಸುವೆ ಮುದದಿ || ೧೫೫ ||
ಸರ್ವಶರ್ಮಪ್ರದಾಯಕನೆ ಹರಿ
ಸರ್ವನರರಿಗೆ ಸುಖವನೀವನೆ
ಸರ್ವಜೀವರ ಕಾವ ಶಾಶ್ವತಸುಖವೆ ಶ್ರೀಕೃಷ್ಣ |
ಸರ್ವಲೋಕಕೆ ಶರ್ಮದಾಯಕ
ಸರ್ವಕಾಲದಿ ಸುಖಪ್ರದಾಯಕ
ಸರ್ವದೇಶವ ಕಾವ ಸೃಜಿಪ ವಿನಾಶ ಗೈವವನೆ || ೧೫೬ ||
ಎಲ್ಲ ಕಡೆಯಲು ಗಮನ ಕೊಡುತಿಹ-
-ನೆಲ್ಲೆಡೆಯು ಗಮಿಸುತಿಹ ಸರ್ವಗ-
-ನೆಲ್ಲ ತೆರದಲು ಗಮನಿಸುವ ಸಂಚರಿಪ ಶ್ರೀಕೃಷ್ಣ |
ಎಲ್ಲವನು ತಾನೊಳಪೊಗುವ ಹರಿ-
-ಯೆಲ್ಲವೂ ತಾನಾಗಿ ಗಮಿಸುವ-
-ನೆಲ್ಲರಿಂದ್ರಿಯದಲ್ಲಿ ಗಮಿಸುವನೆಲ್ಲರನು ಕಾಯ್ವ || ೧೫೭ ||
ನಿಖಿಲವನು ಹರಿಯಿತ್ತು ಸರ್ವದ
ನಿಖಿಲ ವಿಜ್ಞಾನಾದಿ ವಿದ್ಯೆಯ
ನಿಖಿಲ ಬ್ರಹ್ಮಜ್ಞಾನವೈಹಿಕ ಪಾರಲೌಕಿಕವ |
ನಿಖಿಲ ಭಕ್ತರಿಗೀವ ವಾಂಛಿತ
ನಿಖಿಲ ಶಾಂತಿ ಸಮಸ್ತ ಮಂಗಲ
ನಿಖಿಲ ಭಕ್ತಿ ವಿರಕ್ತಿ ಮುಕ್ತಿಗಳೀವ ಶ್ರೀಕೃಷ್ಣ || ೧೫೮ ||
ಸಕಲ ಜೀವರ ಪಾಪ ಕಳೆಯುವ
ಸಕಲರನು ಪ್ರಳಯದಲಿ ನುಂಗುವ
ಶಕಲಚಂದ್ರನ ಶಿರದಿ ಧರಿಸಿದ ಶರ್ವ ಶ್ರೀಕೃಷ್ಣ |
ವಿಕಲಮತಿಗಳ ಶಿಕ್ಷಿಸುವ ಹರ
ಸುಕಲಮತಿಗಳ ಕಾಯ್ವ ಶ್ರೀಹರಿ
ಸಕಲ ಲೋಕದ ಕೊಳೆಯ ಕಳೆಯುವ ಶರ್ವರೂಪದಲಿ || ೧೫೯ ||
ಸರ್ವಲೋಕಪತೀಶ್ವರನೆ ಹರಿ
ಶರ್ವಬ್ರಹ್ಮರಮೇಶಕಾರಣ
ಸರ್ವ ಲೋಕಗಳಧಿಪರಧಿಪತಿ ಕೃಷ್ಣ ಪರಬೊಮ್ಮ |
ಸರ್ವ ತಾನಿಹ ಲೋಕ ತಾನಿಹ
ಸರ್ವ ಪತಿಯಿಹನೀಶ್ವರನೆ ತಾ
ಸರ್ವಮೂಲ ನಿಮಿತ್ತಕಾರಣ ಹರಿಯುಪಾದಾನ || ೧೬೦ ||
ವಿಶ್ವಾನ್ತಕೋ ವಿಶ್ವಮೂಲೋ ವಿಶ್ವಸ್ಥಿತಿಪರಾಯಣಃ |
ವಿಶ್ವಸ್ಥೋ ವಿಶ್ವರೂಪಶ್ಚ ವಿಶ್ವಾಕಾರೋ ಮಹೀಧರಃ ||೨೪|| (೧೬೭)
ಲೋಕವೆಲ್ಲವ ಸಂಹರಿಸುವನೆ
ಪಾಕಶಾಸನವಂದ್ಯ ಕೃಷ್ಣನೆ
ನಾಕಭೂಪಾತಾಳ ನುಂಗುವ ಲಯದಿ ಗ್ರಾಸಿಷ್ಣು |
ಶೋಕನಾಶಕ ಪಾಪನಾಶಕ
ಕಾಕುನಾಶಕ ವಿಶ್ವಾಂತಕನೆ
ಬೇಕುಗಳ ಪೂರೈಸಿ ಬೇಡದ ದೋಷ ಪರಿಹರಿಪೆ || ೧೬೧ ||
ವಿಶ್ವಮೂಲ ಪ್ರಭವಿಷ್ಣು ವಿಧಿ
ನಶ್ವರದ ಜಗವನ್ನೆ ತೋರ್ಪನು
ಶಾಶ್ವತದವೊಲು ಬೊಮ್ಮ ಸತ್ಯ ಜಗತ್ತು ತಾ ಮಿಥ್ಯ |
ಅಶ್ವಕುಲ ಬ್ರಹ್ಮಾಂಡ ಮಂಡಲ
ವಿಶ್ವಕಾರಣ ವಿಶ್ವಗರ್ಭನು
ವಿಶ್ವವೂ ಮೂಲವೂ ಕೃಷ್ಣಾತ್ಮಕವು ಪರಬೊಮ್ಮ || ೧೬೨ ||
ವಿಶ್ವಸ್ಥಿತಿಪರಾಯಣ ಹರಿ
ವಿಶ್ವಪಾಲಕ ವಿಶ್ವರಕ್ಷಕ
ವಿಶ್ವಪರಿವರ್ತಕ ಪ್ರವರ್ತಕ ವಿಷ್ಣು ಜಗದೀಶ |
ವಿಶ್ವನಾಯಕ ಸರ್ವಹೃದ್ಗತ
ವಿಶ್ವಮೂರುತಿ ವಿಶ್ವಕೀರುತಿ
ವಿಶ್ವ ಪಾಲನನಿರತ ಕಾರಣ ಕೃಷ್ಣ ಪರಬೊಮ್ಮ || ೧೬೩ ||
ವಿಶ್ವಸ್ಥ ಹರಿ ವಿಶ್ವದೊಳಗಿಹ
ವಿಶ್ವದಣು ಕಣದಲ್ಲೂ ನೆಲೆಸಿಹ
ವಿಶ್ವದಸ್ತಿತ್ವವೆ ಪರಾತ್ಪರ ಕೃಷ್ಣ ಸದ್ರೂಪ |
ವಿಶ್ವಸದ್ ವಿಶ್ವದ ಚಿದಾತ್ಮಕ
ವಿಶ್ವದಾನಂದಾತ್ಮಕನೆ ಗುರು
ವಿಶ್ವದಂತರ್ಬಹಿಃಸ್ಥನೆ ಪರಬೊಮ್ಮ ಸರ್ವಾತ್ಮನ್ || ೧೬೪ ||
ವಿಶ್ವರೂಪ ವಿರಾಜಮಾನನೆ
ವಿಶ್ವದಾಕಾರದಲಿ ತೋರ್ವನೆ
ವಿಶ್ವಸೃಷ್ಟಿಗೆ ಕಾರಣನೆ ಜಗರೂಪ ಜಗದೀಶ |
ವಿಶ್ವಮಾನವ ವಿಶ್ವಧೇನುವೆ
ವಿಶ್ವನಾಗಾಸುರಮಹರ್ಷಿಯೆ
ವಿಶ್ವಸಸ್ಯಪ್ರಾಣಿಕ್ರಿಮಿದೇವಾದಿಸರ್ವಾತ್ಮನ್ || ೧೬೫ ||
ವಿಶ್ವಾಕಾರ ಶಾಂತಾಕಾರ
ವಿಶ್ವಾಕೃತಿಯೆ ಸರ್ವಾಕಾರ
ವಿಶ್ವಾತ್ಮಕನೆ ಶರ್ವಾಕಾರ ಬೊಮ್ಮ ಹೇ ವಿಷ್ಣೋ |
ವಿಶ್ವಾಧೀಶ ವಿಶ್ವೇಶ್ವರನೆ
ವಿಶ್ವಂಬರನೆ ವಿಶ್ವಂಭರನೆ
ವಿಶ್ವಮಿಥ್ಯೆಯ ತೋರ್ವ ಮಾಯಾಧೀಶ ಪರಸತ್ಯ || ೧೬೬ ||
ಹೇ ಮಹೀಧರ ಕೃಷ್ಣ ಗಿರಿಧರ
ಭಾಮೆ ಭೂದೇವಿಯನು ಧರಿಸಿಹ
ಕಾಮಪಿತ ವಾರಾಹ ಕನಕಾಕ್ಷಾಂತಕನೆ ಹರಿಯೆ |
ಶ್ರೀಮಹಾಲಕುಮಿಪತಿ ಭೂಪತಿ
ಹೇಮಸಿಂಹಾಸನವಿರಾಜಿತ
ನಾಮ ಸಂಸ್ಮರಣೆಯಲೆ ಕಾಯುವ ಪ್ರೇಮಮೂರುತಿಯೆ || ೧೬೭ ||
ಪಾಣ್ಡವಾಪ್ತೋ ಹೃಷೀಕೇಶಃ ಪುಣ್ಯೋ ಭೂಭಾರಹಾರಕಃ |
ಕೌರವಾದಿಖಲಧ್ವಂಸೀ ಕಾಲನೇಮಿಹರಃ ಪೃಥುಃ ||೨೫|| (೧೭೪)
ಪಾಂಡವಾಪ್ತನೆ ಧರ್ಮಪಕ್ಷನೆ
ಪಾಂಡವರೊಳು ಧನಂಜಯನೆ ಹರಿ
ಪಾಂಡುಪುತ್ರರ ಧರ್ಮರಾಜ್ಯವ ಕಟ್ಟಿ ಬೆಳೆಸಿದನೆ |
ಪಾಂಡವಾರಿಗಳನ್ನು ಕೊಲ್ಲಿಸಿ
ಪಾಂಡುಸುತಗಭಿಷೇಕ ಗೈಯುತ
ಪಾಂಡವರ ರಕ್ಷಿಸುತ ಧರ್ಮವ ಕಾಯ್ದ ಪರಮಾತ್ಮ || ೧೬೮ ||
ಹೃಷೀಕೇಶ ಹೃಷೀಕಗಳ ಪತಿ
ಹೃಷೀಕವದಿಂದ್ರಿಯವು ನೋಡಾ
ಖುಷಿಯ ಖೇದದ ಮನಃಪ್ರಾಣಾಹಂಗಳಧಿಪ ಹರಿ |
ವಿಷಯಗೊಳ್ಳುವ ಬಹಿಃಕರಣಗ
ಳಸಮಶಕ್ತಿಯ ಚಿತ್ತಬುದ್ಧಿಯ
ಹೃಷೀಕಗಳ ನಿಯಂತ್ರಕನು ಪರಮಾತ್ಮ ಶ್ರೀಕೃಷ್ಣ || ೧೬೯ ||
ಪುಣ್ಯ ನೀ ಶ್ರೀಕೃಷ್ಣ ಲೋಕದಿ
ಪುಣ್ಯಕರ್ಮವು ನೀನೆ ದೇವನೆ
ಪುಣ್ಯಕರ್ಮದ ಫಲವು ಫಲದಾತಾರ ತತ್ಕರ್ತಾ |
ಪುಣ್ಯಕರ್ಮದ ಫಲವ ನಾಕದಿ
ಪಣ್ಯವಾಗಿಸಿ ಮುಗಿಸಿ ಮಾನವ
ಗಣ್ಯನಾಗನು ಪುಣ್ಯಪಾಪವ ಮೀರು ನೀನೆಂದ || ೧೭೦ ||
ಭೂಭಾರಹಾರಕನೆ ಶ್ರೀಹರಿ
ನಾಭಿ ಗಗನವು ಪಾದ ಭೂಮಿಯ-
-ದಾಭರಣ ಸಂಪದವು ಲಕುಮಿಯು ವಿಷ್ಣುವಲ್ಲಭೆಯು |
ಸಾಭಿನಯ ಚತುರಾವತಾರಿಯು
ಗೋಭೂಮಿಪತಿ ದುಷ್ಟಮರ್ದನ
ಭೂಭಾರಹರಣದ ಕಾರಣನೆ ಸದ್ಧರ್ಮಸ್ಥಾಪಕನೆ || ೧೭೧ ||
ಕೌರವಾದಿಖಲಧ್ವಂಸಿಯೆ
ಕೌರವಾದಿಗಳಂಥ ದುಷ್ಟರ
ಗೌರವಾನರ್ಹರ ಕುಧರ್ಮರ ಧ್ವಂಸಗೈದ ಹರಿ |
ರೌರವಾದಿಗಳಂಥ ನರಕದ
ಕ್ರೂರದರ್ಶನ ಮಾಡಿಸಿದ ನಿಜ
ಸಾರಧರ್ಮವಿರೋಧಿಗಳ ಸದೆಬಡಿದ ಶ್ರೀಕೃಷ್ಣ || ೧೭೨ ||
ಕಾಲನೇಮಿಹರ ಪ್ರಸಿದ್ಧನೆ
ಕಾಲ ಕಾಲದಿ ದುಷ್ಟನಾಶಕ
ಮೂಲ ಸಹಿತದಿ ಕಿತ್ತೆ ವಿಷವೃಕ್ಷಗಳ ಶ್ರೀಕೃಷ್ಣ |
ಆ ಲಂಕೆಯಧಿಪತಿ ರಾವಣನ ಮಾ-
-ತುಲನ, ಕಾಲಕೆ ಮೃತ್ಯುವಿಗೆ ತಾ
ಕಾಲಚಕ್ರದ ತೆರದ ನೇಮಿಯ ಕೊಂದ ಪರಮಾತ್ಮ || ೧೭೩ ||
ಪೃಥುವೆ ವಿಷ್ಣುವಿನಂಶ ರಾಜನೆ
ಪೃಥಿವಿ ರಚಿಸಿದ ಗಹನ ವನವನು
ಮಥಿಸಿ ಭೂಮಂಡಲವ ಕೃಷಿ ವಾಸಾದಿ ನೆಲೆಗೊಳಿಸಿ |
ಮಥುರಜನ್ಮನ ಲೀಲೆ ಭೂಮಿಯೊ-
-ಳಥವ ಭೂಪತಿ ಪ್ರೇಮ ತೋರಿಯೊ
ಪ್ರಥಮ ಮಂಡಲವಾಯ್ತು ಭೂಮಂಡಲವು ಜಗದೊಳಗೆ || ೧೭೪ ||
ಕಂಸಾರಿರ್ಮಾತುಲಧ್ವಂಸೀ ಚಾರ್ತತ್ರಾಣಪರಾಯಣಃ |
ತೃಣಾವರ್ತತೃಣೀಕರ್ತಾ ಧೇನುಕಾಸುರಮರ್ದನಃ ||೨೬||(೧೭೯)
ಕಂಸಾರಿ ಹರಿ ಕಂಸವೈರಿಯೆ
ಕಂಸಸೋದರಿಸುತನೆ ಕೃಷ್ಣನೆ
ಕಂಸದೌಷ್ಟ್ಯವನರಿತು ಮಾವನ ಸಂಹರಿಸಿದವನೆ |
ಹಂಸ ಪರಮನೆ ವಂಶಪಾವನ
ಹಂಸವಾಹನಜನಕ ವಿಷ್ಣುವೆ
ಸಂಸರಿಪ ಭವ ಕಳೆದು ಜೀವನ್ಮುಕ್ತಿ ಕರುಣಿಪನೆ || ೧೭೫ ||
ಮಾತುಲಧ್ವಂಸಿಯೇ ಕೃಷ್ಣನೆ
ಯಾತುಧಾನರ ವೈರಿ ಹರಿಯೆ
ಮಾತು ತಪ್ಪದೆ ಮಾತೆಯಗ್ರಜನನ್ನು ಕೊಂದವನೆ |
ಹೇತು ಸರ್ವಕು ಧಾತುವೆಲ್ಲಕು
ಚಾತುರನು ತಾನನಾತುರ ಹರಿ
ಕೂತು ಭಜಿಪರ ನಿಂತು ನಿಂತರೆ ನಲಿದು ತಾನೊಲಿವ || ೧೭೬ ||
ಆರ್ತತ್ರಾಣಪರಾಯಣನೆ ಹರಿ-
-ಯಾರ್ತ ದುಃಖೀ ರೋಗಿ ದೀನರ
ವಾರ್ತೆ ಕಾವಲು ನಿರತ ಭಕ್ತರ ಕಲ್ಪತರು ಕೃಷ್ಣ |
ಮೂರ್ತರೂಪನು ನೀನೆ ಕೃಷ್ಣನ-
-ಮೂರ್ತರೂಪನು ನೀನೆ ಬೊಮ್ಮ-
-ನಮೂರ್ತಮೂರ್ತಾತೀತ ತತ್ತ್ವವೆ ಸರ್ವರೊಳಗಿರ್ಪ || ೧೭೭ ||
ತೃಣಾವರ್ತತೃಣೀಕರ್ತನೆ
ತೃಣಾವರ್ತಾಸುರನ ತೃಣಿಸಿದ
ತೃಣಸಮಾನವ ಗೈದು ಸಂಹರಿಸಿದನು ಶ್ರೀಕೃಷ್ಣ |
ತೃಣವನಾವರ್ತಿಸುವ ವೇಗದ
ತೃಣಾವರ್ತಾಖ್ಯಸುರ ಮಾರುತ
ಕ್ಷಣದಿ ಹುಲ್ಲಿನ ತೆರದಿ ಕಿತ್ತೆಸೆದಿಹನು ಪರಮಾತ್ಮ || ೧೭೮ ||
ಧೇನುಕಾಸುರಮರ್ದನನೆ ಹರಿ
ಧೇನುರೂಪದಿ ಕಪಟವೇಷದಿ
ತಾನು ದುಷ್ಟನು ಬಾಲಕೃಷ್ಣನ ಕೊಲ್ಲಬಂದಿದ್ದ |
ಧೇನುಪಾಲಕ ಕೃಷ್ಣ ಕೊಂದನು
ಧೇನುಕಾಸುರದೈತ್ಯರೂಪಿಯ
ವೇಣುಲೋಲನು ಗಾನಪ್ರೀಯನು ಲೋಕರಕ್ಷಣೆಗೆ || ೧೭೯ ||
ಪ್ರಲಮ್ಬಾರಿರ್ಮಧುಧ್ವಂಸೀ ಮೋಹನೋ ಮೋಹಿನೀತನುಃ |
ಕೈಟಭಾನ್ತಕರೂಪಶ್ಚ ಮೇದಿನೀಸೃಷ್ಟಿಕಾರಕಃ ||೨೭|| (೧೮೫)
ಪ್ರಲಂಬಾರಿಯೆ ಪ್ರಲಂಬನ ರಿಪು
ಪ್ರಲಂಬಾಸುರನನ್ನು ಕೊಂದನೆ
ವಿಲಂಬಿಸದಲೆ ಕಂಸ ಕಳುಹಿದನನ್ನು ಶ್ರೀಕೃಷ್ಣ |
ಅಲಂಕೃತ ಹರಿ ಬಾಲಕೃಷ್ಣನು
ಸ್ವಲಂಕೃತ ವಿಭು ಬಾಲರೂಪದಿ
ಪ್ರಲಂಬಾಖ್ಯನ ಬಾಲರೂಪದ ರಕ್ಕಸನ ಕೊಂದ || ೧೮೦ ||
ಮಧುಧ್ವಂಸಿಯೆ ಮಾಧವನೆ ಹರಿ
ಮಧುವ ಕೊಂದನೆ ಮಧ್ವರಿಯೆ ಹರಿ
ಮಧುವಿನಿಂ ಮೇದಿನಿಯ ರಚಿಸಿದನಾದಿನಾರಯಣ |
ಮಧುವು ಹರಿಕರ್ಣೋದ್ಭವನು ತಾ
ವಿಧಿಯ ಕೊಲ್ಲಲು ಹವಣಿಸಿದನವ
ಮಧುವ ಕೈಟಭಸಹಿತ ಕೊಂದನು ಯೋಗಮಾಯಾತ್ಮ || ೧೮೧ ||
ಮೋಹನನೆ ಶ್ರೀಕೃಷ್ಣಚಂದಿರ
ಮೋಹಕಾರಣ ಮೋಹನಾಶಕ
ದೇಹಮೋಹವ ಕಳೆಯೊ ದೇಹಗತಾತ್ಮ ಸರ್ವಾತ್ಮ |
ಸಾಹಸಿಗನೆಲ್ಲರನು ಕರ್ಷಿಸಿ
ಮೋಹಮಾಯಾಜಾಲ ಬೀಸುವ
ಕೋऽಹಮೆಂಬರ ಕಾಯ್ವ ಕರುಣಾಸಾಗರನೆ ಕೃಷ್ಣ || ೧೮೨ ||
ಮೋಹಿನೀತನು ಧರಿಸಿದಾತನೆ
ಮೋಹಿಸಿದನಸುರರನು ಬೇಗನೆ
ಮೋಹಿಸುತ ಮೋಸದಲಿ ಸುಧೆಯನು ದೇವವಶಗೈದ |
ಮೋಹಿಸುತ ಪರಶಿವನ ಹರಿಹರ
ದೇಹ ಹುಟ್ಟಿಸಿ ಬಳಿಕ ಭಸ್ಮನ
ಮೋಹಿಸುತಲಸುರನನು ಕೊಂದನು ಮೋಹಿನೀರೂಪಿ || ೧೮೩ ||
ಕೈಟಭಾಂತಕರೂಪ ವಿಷ್ಣುವೆ
ಕೈಟಭನು ಹರಿಕರ್ಣಮಲಜನು
ಕೈಟಭಾಸುರನನ್ನು ಕೊನೆಗೊಳಿಸಿದನು ನಾರಯಣ |
ಕಾಟ ಕೊಟ್ಟನು ಬೊಮ್ಮನಿಗೆ ತಾ-
-ನೂಟವೆಂದವನನ್ನು ತಿಳಿದನು
ಬೇಟೆಗೈಯುತ ಹರಿಯು ದುಷ್ಟನ ಕಠಿನ ಭೂಗೈದ || ೧೮೪ ||
ಮೇದಿನೀಸೃಷ್ಟಿಕಾರಕನೆ ಹರಿ
ಮೇದಿನಿಯ ಭೂಮಿಯನು ರಚಿಸಿದ
ಮೇದಸ್ಸಿನಿಂ ಮಧುಕೈಟಭಾಖ್ಯರ ಮೆದುಕಠಿಣತರದ |
ಮಾಧವನೆ ಮಧುಹಂತಕನೆ ಹರಿ
ಭೇದದೂರನೆ ಸಾಧುವಂದಿತ
ಸಾದರದಿ ಪೊಡಮಡುತ ಶರಣಾಗುವೆನು ಶ್ರೀಕೃಷ್ಣ || ೧೮೫ ||
ಬ್ರಹ್ಮತಾತೋ ಲೋಕಬನ್ಧುರಾತ್ಮರೂಪೀ ಚ ಚಿತ್ಸುಖಃ |
ಚಿನ್ಮಯಶ್ಚಿತ್ತಹಾರೀ ಚ ಸಚ್ಚಿದಾನನ್ದಮೂರ್ತಿಮಾನ್ ||೨೮|| (೧೯೨)
ಬ್ರಹ್ಮತಾತನೆ ಬ್ರಹ್ಮಜನಕನೆ
ಬ್ರಹ್ಮಚತುರ್ಮುಖ ಸೃಷ್ಟಿಕರ್ತನ
ಬ್ರಹ್ಮವಾಣೀರಮಣಪಿತ ಹರಿಯಾದಿನಾರಯಣ |
ಬ್ರಹ್ಮ ಬೃಂಹಣ ವಿಸ್ತರಾತ್ಮನು
ಬ್ರಹ್ಮ ಹರಿನಾಭಿಯ ಕಮಲಜನು
ಬ್ರಹ್ಮಪಿತ ತಾ ಪದುಮನಾಭನು ಕೃಷ್ಣ ಪರಮಾತ್ಮಾ || ೧೮೬ ||
ಲೋಕಬಂಧುವೆ ಸರ್ವಮಿತ್ರನೆ
ಲೋಕಪಿತ ಲೋಕಗಳ ಪತಿ ಹರಿ
ಲೋಕಗಳನವಲೋಕಿಸುವ ಚಣ ಚಣವು ಶ್ರೀಕೃಷ್ಣ |
ಲೋಕವವಲೋಕಿಸುವ ಸೃಷ್ಟಿಯು
ಲೋಕಬಂಧುವು ಜನಕಬಂಧುವು
ಲೋಕವೀರೇಳನ್ನು ಸೃಜಿಸುತ ಪಾಲಿಸುತ ಲಯಿಸಿ || ೧೮೭ ||
ಆತ್ಮರೂಪಿಯನಾತ್ಮರೂಪಿಯೆ
ಸಾತ್ಮನಾತ್ಮದ ತೆರದಿ ತೋರ್ಪ ಮ-
-ಹಾತ್ಮಶಕ್ತಿಯೆ ಕೃಷ್ಣ ಸರ್ವಾಂತರನು ಪರಮಾತ್ಮ |
ಆತ್ಮನತ ಸಾತತ್ಯಗಮನನ-
-ನಾತ್ಮ ಸೃಷ್ಟಿಯ ತೆರದಿ ತೋರ್ವ ಮ-
-ಹಾತ್ಮತತ್ತ್ವವರೂಪನಾಮವು ನಮ್ಮ ನಿಜರೂಪ || ೧೮೮ ||
ಚಿತ್ಸುಖನೆ ಚೈತನ್ಯ ಮೋದನೆ
ಚಿತ್ಸುಖನೆ ಸುಜ್ಞಾನ ಶಾಶ್ವತ
ಹೃತ್ಸುಖನೆ ಹರಿ ಚಿತ್ಸ್ವರೂಪನು ಸಚ್ಚಿದಾನಂದ |
ಮತ್ಸುಖನು ಶ್ರೀಕೃಷ್ಣದೇವನು-
-ವುತ್ಸುಕನು ಲೀಲೆಗಳ ತೋರ್ದನು
ಮತ್ಸರಿಪರಿಗೆ ನಿಲುಕ ನಿಜಭಕ್ತರಿಗೆ ವಶ್ಯ ಹರಿ || ೧೮೯ ||
ಚಿನ್ಮಯನೆ ಚಿಜ್ಜ್ಞಾನಮಯ ಹರಿ
ಚಿನ್ಮಯಾನಂದಾತ್ಮ ಕೃಷ್ಣನೆ
ಸನ್ಮಯನು ಚಿನ್ಮಯನು ಸುಖಮಯ ಸಚ್ಚಿದಾನಂದ |
ಚಿನ್ಮಯನು ಚಿಚ್ಛಕ್ತಿರೂಪನೆ
ಚಿನ್ಮಯನೆ ಚಿದ್ರೂಪ ಚಿತ್ತಗ
ಮನ್ಮಯನು ಮೃಣ್ಮಯನು ಸರ್ವಾಮಯರಹಿತ ಸರ್ವ || ೧೯೦ ||
ಚಿತ್ತಹಾರೀ ಮನಸ ಮೋಹಿಪ
ಚಿತ್ತವನು ಮಾಯೆಯಲಿ ಮುಸುಕುವ
ಚಿತ್ತಜನ ಪಿತನಿರವು ತಾನರಿವಾತ್ಮಸುಖರೂಪ |
ಚಿತ್ತ ಚೈತನ್ಯವನು ಸೆಳೆಯುವ
ಚಿತ್ತವಿಭ್ರಮ ಗೈವ ಕೃಷ್ಣನೆ
ಮತ್ತೆ ಶರಣಾದವರ ಚಿತ್ತದಿ ನಿತ್ಯ ಬೆಳಗುವನೆ || ೧೯೧ ||
ಸಚ್ಚಿದಾನಂದಮೂರ್ತಿಮಾನ್ ಹರಿ
ಸಚ್ಚಿತ್ಸುಖಸ್ವರೂಪನೆ ಹರಿ
ಸಚ್ಚಿದಾತ್ಮಕ ದೇವ ಪರಮಾನಂದ ಶ್ರೀಕೃಷ್ಣ |
ಸಚ್ಚಿದಾನಂದವೇ ತೋರಿದ
ಸಚ್ಚರಿತ ಶ್ರೀಕೃಷ್ಣರೂಪಿಲಿ
ನೆಚ್ಚ ದುಶ್ಚರಿತರ ಸದಾಚಾರಾಶ್ರಯನೆ ಕೃಷ್ಣ || ೧೯೨ ||
Comments
Post a Comment