ಸ್ತೋತ್ರಸಂಹಿತಾ ೧.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)
ದೇವೀರಕ್ಷಾಸ್ತೋತ್ರಮ್
ಧ್ಯಾನಮ್
(ಶಾರ್ದೂಲವಿಕ್ರೀಡಿತವೃತ್ತಮ್)
ಯಾ ದೇವೀ ವಿಧಿವಿಷ್ಣುರುದ್ರಜನನೀ ಜಾಯಾಸ್ವರೂಪಾ ಚ ಯಾ
ತೇಷಾಂ ಶಕ್ತಿಪ್ರದಾಯಿನೀ ಭಗವತೀ ಮಾತಾ ಜಗದ್ಧಾರಿಣೀ |
ಯಾಮಾಹುರ್ನಿಖಿಲಪ್ರಜಾಸ್ತುತಿಪರಾಮಾತೇತಿ ವಿಜ್ಞಾನಿನ:
ಸಾ ನೋ ರಕ್ಷತು ದೇವದೇವವಿನುತಾ ಭುಕ್ತಿಪ್ರದಾ ಮುಕ್ತಿದಾ ||
ಇತಿ ಧ್ಯಾನಮ್
(ಯಾ ದೇವೀ) ಯಾವ ದೇವಿಯಾದ ಆದಿಮಾಯೆಯು, (ವಿಧಿ-ವಿಷ್ಣು-ರುದ್ರ-ಜನನೀ) ಬ್ರಹ್ಮಾ, ವಿಷ್ಣು, ರುದ್ರರ ತಾಯಿಯಾಗಿರುವಳೋ, (ಜಾಯಾಸ್ವರೂಪಾ ಚ ಯಾ)ಅನುಕ್ರಮವಾಗಿ ವಾಣೀ ಲಕ್ಷ್ಮೀ ಗೌರೀಸ್ವರೂಪಳಾಗಿ ಆ ತ್ರಿಮೂರ್ತಿಗಳ ಪತ್ನೀಸ್ವರೂಪಳೂ ಆಗಿ ಯಾವಳು ತೋರುವಳೋ, (ತೇಷಾಂ ಶಕ್ತಿಪ್ರದಾಯಿನೀ ಭಗವತೀ) ಅವರಿಗೆ ಶಕ್ತಿಪ್ರದಾಯಿನಿಯಾಗಿ ಭಗವತಿಯೆನಿಸಿದ ಯಾವಳು, (ಮಾತಾ ಜಗದ್ಧಾರಿಣೀ) ಜಗನ್ಮಾತೆಯೂ ಜಗತ್ತನ್ನು ಧರಿಸಿರುವವಳೂ ಆಗಿರುವಳೋ, (ಯಾಮ್) ಯಾವಳನ್ನು, (ನಿಖಿಲಪ್ರಜಾಸ್ತುತಿಪರಾಮಾತಾ) ಲೋಕದ ಸಕಲ ಪ್ರಜಾಜನರು ಮಾತೆಯೆಂದು ಸ್ತುತಿಸುವರು, (ಇತಿ ವಿಜ್ಞಾನಿನಃ) ಎಂದು ವಿಶೇಷವಾಗಿ ಜ್ಞಾನಿಗಳು ಹೇಳುವರೋ, (ದೇವದೇವವಿನುತಾ) ದೇವದೇವನಿಂದ ನುತಿಸಲ್ಪಡುವ, (ಭುಕ್ತಿಪ್ರದಾ ಮುಕ್ತಿದಾ) ಭೋಗ-ಮೋಕ್ಷಗಳೆರಡನ್ನೂ ದಯಪಾಲಿಸಬಲ್ಲ, (ಸಾ) ಆ ಆದಿಪರಾಶಕ್ತಿಯು, (ನಃ, ರಕ್ಷತು) ನಮ್ಮನ್ನು ರಕ್ಷಿಸಲಿ.
(ಅನುಷ್ಟುಭ್ ವೃತ್ತಮ್)
ಮಹಾಸರಸ್ವತೀರೂಪೇ ವಿದ್ಯಾಬುದ್ಧಿಪ್ರದಾಯಿನಿ |
ತ್ವಾಮಹಂ ಶಾರದೇ ವಂದೇ
ವಾಕ್ಸಿದ್ಧ್ಯರ್ಥಂ ಕವಿತ್ವದೇ ||೧||
ಹೇ ಜಗದಂಬೆ! (ಮಹಾಸರಸ್ವತೀರೂಪೇ) ನೀನು ಮಹಾಸರಸ್ವತೀಸ್ವರೂಪೆಯೂ, (ವಿದ್ಯಾಬುದ್ಧಿಪ್ರದಾಯಿನಿ) ಬೇಡಿದವರಿಗೆ ವಿದ್ಯಾ-ಬುದ್ಧಿಗಳನ್ನೀಯುವವಳೂ, (ಕವಿತ್ವದೇ) ಕವಿತ್ವಶಕ್ತಿಯನ್ನು ದಯಪಾಲಿಸುವವಳೂ ಆಗಿರುವೆ. (ಶಾರದೇ) ಅಂತಹ ಹೇ ಶಾರದಾಂಬೆ! (ತ್ವಾಂ) ನಿನ್ನನ್ನು, (ವಾಕ್ಸಿದ್ಧ್ಯರ್ಥಂ) ವಾಕ್ಸಿದ್ಧಿಗಾಗಿ, (ಅಹಂ ವಂದೇ) ನಾನು ವಂದಿಸಿ ಬೇಡುತ್ತೇನೆ.
ಅಂಬಾ ನ: ಪಾತು ವಾಗ್ದೇವೀ
ಭಾರತೀ ಸುರಭಾರತೀ |
ದಾಯಾನ್ನೋ ಜ್ಞಾನವೈರಾಗ್ಯೇ ಬ್ರಹ್ಮಜಾಯಾ ಸರಸ್ವತೀ ||೨||
(ಅಂಬಾ) ತಾಯಿಯಾದ, (ವಾಗ್ದೇವೀ) ಮಾತಿಗೆ ದೇವತೆಯಾದ (ವಾಗ್ದೇವಿಯಾದ), (ಬಾರತೀ) ಭಾಷೆಗೆ ದೇವತೆಯಾದ (ಭಾರತಿಯಾದ), (ಸುರಭಾರತೀ) ದೇವತೆಗಳ ಸಂಸ್ಕೃತಭಾಷಾಸ್ವರೂಪಳಾದ, (ಬ್ರಹ್ಮಜಾಯಾ) ಚತುರ್ಮುಖಬ್ರಹ್ಮನ ಪತ್ನಿಯಾದ, (ಸರಸ್ವತೀ) ಸರಸ್ವತೀದೇವಿಯು (ನಃ / ಅಸ್ಮಭ್ಯಂ) ನಮಗೆ, (ಜ್ಞಾನವೈರಾಗ್ಯೇ ದಾಯಾತ್) ಜ್ಞಾನವೈರಾಗ್ಯಗಳನ್ನೀಯಲಿ; (ನಃ / ಅಸ್ಮಾನ್) ನಮ್ಮನ್ನು, (ಪಾತು) ಪಾಲಿಸಲಿ.
ವೇದಶಾಸ್ತ್ರಪುರಾಣಾನಾಂ
ತಾತ್ಪರ್ಯಂ ದರ್ಶಯತ್ವಜಾ |
ನಾಶಯತ್ವಜ್ಞಾನರಾತ್ರಿಂ
ಜ್ಞಾನಜ್ಯೋತಿಂ ತನೋತು ನ: ||೩||
(ಅಜಾ) ಅಜನ ಪಟ್ಟದ ರಾಣಿಯೂ ಜನ್ಮರಹಿತಳೂ ಆದ ವಾಣಿಯು, (ವೇದಶಾಸ್ತ್ರಪುರಾಣಾನಾಂ) ವೇದ-ಶಾಸ್ತ್ರ-ಪುರಾಣಾದಿಗಳ, (ತಾತ್ಪರ್ಯಂ ದರ್ಶಯತು) ಸಾರವನ್ನು ತೋರಿಕೊಡಲಿ; (ನಃ / ಅಸ್ಮಾಕಂ) ನಮ್ಮ, (ಅಜ್ಞಾನರಾತ್ರಿಂ ನಾಶಯತು) ಅಜ್ಞಾನಾಂಧಕಾರವನ್ನು ಹೋಗಲಾಡಿಸಿ, (ಜ್ಞಾನಜ್ಯೋತಿಂ ತನೋತು) ಜ್ಞಾನಜ್ಯೋತಿಯನ್ನು ಬೆಳಗಿಸಲಿ.
ಮಹಾಲಕ್ಷ್ಮೀಸ್ವರೂಪೇ ತ್ವಂ ಮಹಾಸಂಪತ್ಪ್ರದಾಯಿನಿ |
ಮಹಾದೇವಿ ನಮಸ್ತುಭ್ಯಂ ವಿಷ್ಣುವಕ್ಷಸ್ಥಲಸ್ಥಿತೇ ||೪||
ಹೇ ಆದಿಮಾಯೆ! (ತ್ವಂ) ನೀನು, (ಮಹಾಲಕ್ಷ್ಮೀಸ್ವರೂಪೇ) ಮಹಾಲಕ್ಷೀಸ್ವರೂಪಳೂ ಹೌದು. (ಮಹಾಸಂಪತ್-ಪ್ರದಾಯಿನಿ) ಮಹಾಸಂಪತ್ತುಗಳನ್ನು ಕೊಡುವವಳೂ, (ವಿಷ್ಣುವಕ್ಷಸ್ಥಲಸ್ಥಿತೇ) ವಿಷ್ಣುವಿನ ಎದೆಯಲ್ಲಿ (ಹೃದಯದಲ್ಲಿ) ವಾಸವಾಗಿರುವವಳೂ, (ಮಹಾದೇವಿ) ಮಹಾದೇವಿಯೂ ಆದ, (ತುಭ್ಯಂ ನಮಃ) ನಿನಗೆ ನಮಸ್ಕಾರ.
ಹೇ ರಮಾ ಹೇ ಪದ್ಮಸಂಸ್ಥೇ ಪದ್ಮಪತ್ರಾಯತೇಕ್ಷಣೇ |
ಕಮಲೇ ಕಮಲಹಸ್ತೇ ತ್ವಮ್
ಅಲಕ್ಷ್ಮೀಂ ನಾಶಯಾಶು ನ: ||೫||
(ಹೇ ರಮಾ) ಹೇ ರಮಾದೇವಿಯೆ! (ಹೇ ಪದ್ಮಸಂಸ್ಥೇ) ಹೇ ಕಮಲಾಸನೆಯೆ! (ಪದ್ಮಪತ್ರಾಯತೇಕ್ಷಣೇ) ತಾವರೆಯೆಲೆಯಂತಹ ಕಣ್ಣುಗಳುಳ್ಳವಳೆ! (ಕಮಲೇ) ಕಮಲೆಯೆ! (ಕಮಲಹಸ್ತೇ) ಪದ್ಮದಂತಹ ಸುಕೋಮಲ ಹಸ್ತಗಳುಳ್ಳವಳೆ! (ತ್ವಂ) ನೀನು, (ನಃ / ಅಸ್ಮಾಕಂ) ನಮ್ಮ, (ಅಲಕ್ಷ್ಮೀಂ) ದಾರಿದ್ರ್ಯವನ್ನು, (ಆಶು) ಬೇಗನೆ, (ನಾಶಯ) ನಾಶಪಡಿಸು.
ಮಹಿಷಮರ್ದಿನಿರೂಪಾ ಚ
ಮೂಕಾಂಬಿಕಾ ಜನಾರ್ದನೀ |
ಪಾತು ನೋ ವಿಷ್ಣುಪತ್ನೀ ಸಾ
ವೈಷ್ಣವೀ ಕಷ್ಟಹಾರಿಣೀ ||೬||
(ಮಹಿಷಮರ್ದಿನಿರೂಪಾ)ಮಹಿಷಾಸುರನನ್ನು ಕೊಂದು ಮಹಿಷಮರ್ದಿನಿಯೆನಿಸಿದವಳು; (ಚ) ಹಾಗೆಯೇ, (ಮೂಕಾಂಬಿಕಾ) ಮೂಕಾಸುರನನ್ನು ಕೊಂದ ಮೂಕಾಂಬಿಕಾರೂಪಳೂ, (ವಿಷ್ಣುಪತ್ನೀ) ವಿಷ್ಣುಪತ್ನಿಯೂ, (ವೈಷ್ಣವೀ) ವೈಷ್ಣವಿಯೂ, (ಕಷ್ಟಹಾರಿಣೀ) ಕಷ್ಟಹಾರಿಣಿಯೂ ಆದ (ಜನಾರ್ದನೀ) ಜನಾರ್ದನನ ಪತ್ನಿಯಾದ ಮಹಾಲಕ್ಷ್ಮಿಯು, (ನಃ ಪಾತು) ನಮ್ಮನ್ನು ಪಾಲಿಸಲಿ.
ಮಹಾಕಾಲೀ ಮಹಾಗೌರೀ ಮಹಾಪ್ರಲಯರೂಪಿಣೀ |
ಶಾಂಭವೀ ರುದ್ರಪತ್ನೀ ಚ ದುಷ್ಟಸಂಹಾರಕಾರಿಣೀ ||೭||
ಹೇ ಆದಿಶಕ್ತಿಯೆ! (ಮಹಾಕಾಲೀ) ನೀನೇ ಮಹಾಕಾಲನ ಪತ್ನಿ ಕಾರಿರುಳ ಕಪ್ಪು ಬಣ್ಣದ ಮಹಾಕಾಲಿಯೂ, (ಮಹಾಗೌರೀ) ಬೆಳ್ಳಗಿನ ಗೌರ-ವರ್ಣದ ಮಹಾಗೌರಿಯೂ, (ಮಹಾಪ್ರಲಯರೂಪಿಣೀ) ಮಹಾಪ್ರಲಯಂಕರಿಯೂ, (ಶಾಂಭವೀ) ಶಂಭುಪತ್ನಿಯಾಗಿ ಶಾಂಭವಿಯೂ, (ರುದ್ರಪತ್ನೀ ಚ) ರುದ್ರಪತ್ನಿಯೂ, ಹಾಗೆಯೇ (ದುಷ್ಟಸಂಹಾರಕಾರಿಣೀ) ದುಷ್ಟಸಂಹಾರಕಾರಿಣಿಯೂ ಆಗಿರುವಿ.
ಉಮಾ ಹೈಮವತೀ ದುರ್ಗಾ ಮಹಾದುರ್ಗತಿಹಾರಿಣೀ |
ಭವಾನೀ ಸ್ಕನ್ದಮಾತಾ ತ್ವಂ ಗಣೇಶೋತ್ಪತ್ತಿಕಾರಿಣೀ ||೮||
ಹೇ ಆದಿಮಾಯೆ! (ಉಮಾ ಹೈಮವತೀ) ನೀನೇ ಕೇನೋಪನಿಷತ್-ಕಥಿತ ಉಮಾ ಹೈಮವತಿ (ಉ—ಕರೆಯುವ ಶಬ್ದ, ಮಾ—ಬೇಡ. ಪರ್ವತರಾಜನ ಮಗಳಾಗಿ ಪಾರ್ವತಿ, ಹಿಮವಂತನ ಮಗಳಾಗಿ ಹೈಮವತಿ, ಎಲೆಯನ್ನೂ ತಿನ್ನದೆ ತಪಗೈದು ಅ-ಪರ್ಣಾ, ಘೋರತಪದಿಂದ ತನ್ನ ಮಗಳ ಸುಕೋಮಲ ತನುವು ಕೆಡುವುದೆಂದು ಬಗೆದು ತಾಯಿ ಮೇನೆಯು ಕರೆದಂತೆ ಉ-ಮಾ. ದೇವತೆಗಳು ಅಸುರರನ್ನು ಗೆದ್ದು ದುರಹಂಕಾರದಿಂದಿದ್ದಾಗ ಪರಬ್ರಹ್ಮವು ಯಕ್ಷರೂಪದಿಂದ ಅವರನ್ನು ಸೋಲಿಸಿ ಮಾಯವಾಗಿ, ಕೊನೆಗೆ ಉಮಾ ಹೈಮವತಿಯಾಗಿ ಇಂದ್ರನಿಗೆ ಮೈದೋರಿ ಯಕ್ಷರಹಸ್ಯವನ್ನು ಬೋಧಿಸಿತೆಂಬುದು ಕೇನೋಪನಿಷತ್ತಿನಲ್ಲಿರುವ ಒಂದು ಪ್ರಸಂಗ.) (ಮಹಾದುರ್ಗತಿಹಾರಿಣೀ ದುರ್ಗಾ) ಮಹಾ ಮಹಾ ಸಂಕಟಗಳನ್ನು ಪರಿಹರಿಸುವ ದುರ್ಗೆಯೂ ನೀನೆ. (ಭವಾನೀ) ಸಂಸಾರಕ್ಕೆ ಕಾರಣನಾದ ಸದಾ ಇರುವವನಾದ (ಭವತಿ ಇತಿ) ಭವ (ಶಿವ)ನ ಪತ್ನಿಯಾದ ಭವಾನಿಯೂ ನೀನೆ. (ಸ್ಕಂದಮಾತಾ)ಶಿವವೀರ್ಯಸ್ಕನ್ನವಾಗಿ ಹುಟ್ಟಿ ಸ್ಕನ್ದನೆನಿಸಿದ ಕುಮಾರಸ್ವಾಮಿಯ ತಾಯಿಯಾದ ನವದುರ್ಗೆಯರಲ್ಲೋರ್ವಳಾದ ಸ್ಕನ್ದಮಾತಾ ಸ್ವರೂಪಳೂ, (ತ್ವಮ್) ನೀನೆ. (ಗಣೇಶೋತ್ಪತ್ತಿಕಾರಿಣೀ) ತನ್ನ ಸ್ನಾನದ ಹೊತ್ತಿನಲ್ಲಿ ಜಗನ್ಮಾತೆಯು ಮೈಯ ಕೊಳೆಯಿಂದ ಸುಂದರ ಮೂರುತಿಯನ್ನು ಸೃಜಿಸಿ ಗಣೇಶನ ಉತ್ಪತ್ತಿಗೆ ಕಾರಣಳೂ ಹೌದು.
ರೌದ್ರೀ ಮಾಹೇಶ್ವರೀ ಮಾಯಾ ಯೋಗಮಾಯಾ ಸನಾತನಾ |
ಆದಿಶಕ್ತಿರ್ಜಗನ್ಮಾತಾ ಪಾತು ನ: ಪಾಪನಾಶಿನೀ ||೯||
(ರೌದ್ರೀ) ರುದ್ರಪತ್ನಿಯೂ ರೌದ್ರಪ್ರಳಯರೂಪಿಣಿಯೂ ಆಗಿ ರೌದ್ರಿಯೂ, (ಮಾಹೇಶ್ವರೀ) ಮಹೇಶ್ವರನ ಪತ್ನಿ ಮಾಹೇಶ್ವರಿಯೂ, (ಮಾಯಾ) ಈಶ್ವರನ ಉಪಾಧಿಯಾದ ಅನಾದಿ ಮಾಯೆಯೂ (ನಿರ್ಗುಣಬ್ರಹ್ಮವು ಮಾಯೋಪಾಧಿಯಿಂದ ಸಗುಣೇಶ್ವರನೆನಿಸಿತು), (ಯೋಗಮಾಯಾ) ಯೋಗಮಾಯೆಯೂ, (ಸನಾತನಾ) ಸನಾತನೆಯೂ ("ಸನಾ ನಿತ್ಯಂ ಭವಾ ಸನಾತನಾ"), (ಆದಿಶಕ್ತಿಃ) ಜಗತ್ತಿನ ಮೂಲ ಪರಮಪುರುಷನ ಮೂಲಬಲವಾದ ಆದಿಶಕ್ತಿಯೂ ಪರಾಶಕ್ತಿಯೂ, (ಜಗನ್ಮಾತಾ) ಎಲ್ಲ ಸೃಷ್ಟಿಯನ್ನೂ ಪ್ರಸವಿಸಿದ ಜಗನ್ಮಾತೆಯೂ, (ಪಾಪನಾಶಿನೀ) ಸಮಸ್ತ ಪಾಪಗಳನ್ನು ನಾಶಮಾಡುವವಳೂ ಆಗಿರುವ ದೇವಿ ಪರಮೇಶ್ವರಿಯು, (ನಃ / ಅಸ್ಮಾನ್) ನಮ್ಮನ್ನು, (ಪಾತು) ಪಾಲಿಸಲಿ.
ಗಾಯತ್ರೀ ವೇದಮಾತಾ ವೈ ಛಂದಸಾಂ ಜನನೀ ಪರಾ |
ಗಾಯನ್ತಾನ್ ಪಾತು ವಿಶ್ವೇಶೇ ಗಯಾನ್ ತ್ರಾತು ದಿನೇಶ್ವರಿ ||೧೦||
(ಪರಾ, ಗಾಯತ್ರೀ) ಆದಿಮಾಯೆಯೇ ಶ್ರೇಷ್ಠವಾದ ಗಾಯತ್ರೀಸ್ವರೂಪಿಣಿಯೂ, (ವೇದಮಾತಾ ವೈ) ವೇದಮಾತೆಯೂ, (ಛಂದಸಾಂ ಜನನೀ) ಸಮಸ್ತ ಛಂದಸ್ಸುಗಳ ಜನನಿಯೂ ಆಗಿರುವಳು. (ವಿಶ್ವೇಶೇ) ಹೇ ವಿಶ್ವದೊಡತಿಯೆ! (ಗಾಯಂತಾನ್ ತ್ರಾತು) ಗಾಯತ್ರೀಮಂತ್ರವನ್ನು ಪಠಿಸುವವರನ್ನು ಪಾಲಿಸು. (ಗಯಾನ್ ತ್ರಾತು ದಿನೇಶ್ವರಿ) ನಮ್ಮೆಲ್ಲರ ಪ್ರಾಣಗಳನ್ನು ರಕ್ಷಿಸು ಹೇ ಹಗಲಿನೊಡೆಯನಾದ ಸೂರ್ಯದೇವನ ಶಕ್ತಿಸ್ವರೂಪಿಣಿಯಾದ ದಿನೇಶ್ವರಿಯೆ! (ದಿನ—ಹಗಲು, ಈಶ್ವರಿ—ಒಡತಿ)
ವಿಶ್ವಾಮಿತ್ರೇಣ ದೃಷ್ಟಾ ಸಾ ವಿಪ್ರೋದ್ಧಾರಕರೀ ಶುಭಾ |
ಸಂಧ್ಯಾದೇವೀ ಚ ಸಾವಿತ್ರೀ ಪಂಚಶೀರ್ಷಾ ಸರಸ್ವತೀ ||೧೧||
(ವಿಶ್ವಾಮಿತ್ರೇಣ ದೃಷ್ಟಾ)ಮಹರ್ಷಿ ವಿಶ್ವಾಮಿತ್ರರಿಂದ ಕಂಡುಕೊಳ್ಳಲ್ಪಟ್ಟವಳು, (ಸಾ) ಆ ಗಾಯತ್ರೀಮಾತೆ. (ವಿಪ್ರೋದ್ಧಾರಕರೀ) ತನ್ನ ಉಪಾಸನೆ ಮಾಡುವ ವೇದಾಧ್ಯಾಯೀ ವಿಪ್ರರ ("ವೇದಾಧ್ಯಯನತೋ ವಿಪ್ರಃ") ಉದ್ಧಾರಮಾಡುವ, (ಶುಭಾ) ಶುಭಕರಳು. (ಸಂಧ್ಯಾದೇವೀ) ಸಂಧ್ಯಾಕಾಲದಲ್ಲಿ ವಂದಿಸಲ್ಪಡುವ ಸಂಧ್ಯಾದೇವೀಸ್ವರೂಪಳು. (ಚ) ಹಾಗೆಯೇ, (ಸಾವಿತ್ರೀ) ಸವಿತೃದೇವನ ಶಕ್ತಿಸ್ವರೂಪೆಯಾದ ಸಾವಿತ್ರಿಯನ್ನು ಪ್ರತಿಪಾದಿಸುವ ಸವಿತೃಗಾಯತ್ರೀಮಂತ್ರವನ್ನು ವಿಶ್ವಾಮಿತ್ರರು ಕಂಡುಕೊಂಡರು. (ಪಂಚಶೀರ್ಷಾ ಸರಸ್ವತೀ) ಆಕೆಯು ಗಾಯತ್ರೀ, ಸಾವಿತ್ರೀ, ಸರಸ್ವತೀ, ಛಂದರ್ಷಿಗಳು ಹಾಗೂ ಶ್ರೀ— ಎಂಬ ಪಂಚ (5) ಶೀರ್ಷ (ತಲೆ) ಗಳುಳ್ಳವಳು.
ಅಗ್ನಿಮುಖಾ ಬ್ರಹ್ಮಾಶಿರಾ ವಿಷ್ಣುಹೃಚ್ಛಂಕರ: ಶಿಖಾ |
ಅಸ್ಯಾ: ಪೃಥ್ವೀ ಚ ಯೋನಿರ್ವೈ ಪಂಚಪ್ರಾಣಾ ಗಯಾಶ್ಚ ವೈ ||೧೨||
(ಅಗ್ನಿಮುಖಾ) ಗಾಯತ್ರೀದೇವಿಯು ಅಗ್ನಿಯನ್ನೇ ತನ್ನ ಬಾಯಿಯಿಂದ ಉಗುಳುತ್ತಿರುವವಳು / ಯಜ್ಞಾಗ್ನಿಯನ್ನೇ ತನ್ನ ಬಾಯಿಯನ್ನಾಗಿಸಿಕೊಂಡಿರುವವಳು. ಯಾಕೆಂದರೆ, ಗಾಯತ್ರಿಯು ವೇದಮಾತೆ. ಅಗ್ನಿಯು ಸಕಲದೇವತೆಗಳಿಗೂ ಹವಿಸ್ಸನ್ನೊಯ್ಯುವ ವಾಹಕದೇವತೆ. ಹಾಗಾಗಿ "ಅಗ್ನಿಮುಖಾ ವೈ ದೇವಾಃ" ದೇವತೆಗಳು ಅಗ್ನಿಯನ್ನೇ ತಮ್ಮ ಬಾಯಿಯನ್ನಾಗಿ ಉಳ್ಳವರು. ಅಂತೆಯೇ ಗಾಯತ್ರಿಯೂ ಹೌದು. (ಬ್ರಹ್ಮಶಿರಾ) ಇನ್ನು, ಆಕೆಯ ಶಿರಸ್ಸು / ತಲೆಯು ಚತುರ್ಮುಖಬ್ರಹ್ಮನ ಪ್ರತೀಕ, (ವಿಷ್ಣುಹೃತ್) ವಿಷ್ಣುವೇ ಆಕೆಯ ಹೃದಯ ಹಾಗೂ (ಶಂಕರಃ ಶಿಖಾ) ಶಂಕರನೇ ಗಾಯತ್ರಿಯ ಶಿಖೆ / ಜುಟ್ಟು. (ಪೃಥ್ವೀ ಚ) ಪೃಥ್ವಿಯೇ, (ಅಸ್ಯಾಃ) ಆಕೆಯ, (ಯೋನಿಃ, ವೈ) ಜನ್ಮಸ್ಥಾನ. ಯಾಕೆಂದರೆ ಈ ಭೂಲೋಕದಲ್ಲೇ ಮಹರ್ಷಿ ವಿಶ್ವಾಮಿತ್ರರು ಗಾಯತ್ರಿಯನ್ನು ಸಾಕ್ಷಾತ್ಕರಿಸಿಕೊಂಡರು. (ಪಂಚಪ್ರಾಣಾಃ ವೈ) ಪಂಚಪ್ರಾಣಗಳೇ ಆಕೆಯ, (ಗಯಾಃ ಚ) ಪ್ರಾಣಗಳೂ ಹೌದು. "ಗಯಾಃ ಪ್ರಾಣಾಃ, ತಾನ್ ತ್ರಾಯತೇ- ಇತಿ ಗಾಯತ್ರೀ" ಗಾಯತ್ರೀಮಂತ್ರವನ್ನು ಜಪಿಸುವ ನಮ್ಮ ಪ್ರಾಣಗಳನ್ನು ರಕ್ಷಿಸುವವಳೇ ಗಾಯತ್ರಿಯು.
ಸಾಂಖ್ಯಾಯನಸಗೋತ್ರಾ ಚ ತ್ರಿಪಾದಾ ಶ್ವೇತವರ್ಣಿಕಾ |
ಚತುರ್ವಿಂಶತ್ಯಕ್ಷರಾ ಷಟ್ಕುಕ್ಷಿರ್ಬ್ರಹ್ಮಪದಪ್ರದಾ ||೧೩||
(ಸಾಂಖ್ಯಾಯನಸಗೋತ್ರಾ) ಸಾಂಖ್ಯಾಯನ ಗೋತ್ರದವಳು ಗಾಯತ್ರೀ. ಸಾಂಖ್ಯದರ್ಶನವು ಕಪಿಲಮುನಿಪ್ರಣೀತವಾಗಿದ್ದು, ೨೪ ತತ್ತ್ವಗಳಿಂದೊಡಗೂಡಿರುವಂತೆಯೇ, ವಿಶ್ವಾಮಿತ್ರದೃಷ್ಟವಾದ ಗಾಯತ್ರೀಮಂತ್ರವೂ, (ಚತುರ್ವಿಂಶತಿ-ಅಕ್ಷರಾ) ೨೪ ಅಕ್ಷರಗಳಿಂದ ಕೂಡಿದೆ ಹಾಗೂ ಈ ೨೪ ತತ್ತ್ವಗಳ ಸೃಷ್ಟಿಗೂ ಮೂಲಾಶ್ರಯಸ್ಥಾನವಾಗಿದೆ. (ಚ) ಹಾಗೆಯೇ, (ತ್ರಿಪಾದಾ) ಗಾಯತ್ರೀಚ್ಛಂದಸ್ಸು ೮ ಅಕ್ಷರಗಳ ೩ ಪಾದಗಳುಳ್ಳದ್ದು. (ಶ್ವೇತವರ್ಣಿಕಾ) ಬಿಳಿ ಬಣ್ಣದವಳು. (ಷಟ್ಕುಕ್ಷಿಃ) ಆರು ಉದರ / ಹೊಟ್ಟೆಗಳುಳ್ಳದ್ದು (ಪಂಚಪ್ರಾಣಗಳು ಹಾಗೂ ಬ್ರಹ್ಮವಸ್ತುವೆಂಬುದಾಗಿ ೬ — ಪ್ರಾಣಾಯ ಸ್ವಾಹಾ, ಅಪಾನಾಯ...ವ್ಯಾನಾಯ..ಉದಾನಾಯ..ಸಮಾನಾಯ...ಬ್ರಹ್ಮಣೇ ಸ್ವಾಹಾ). ಇಂತಹ ಗಾಯತ್ರಿಯು ತನ್ನ ಉಪಾಸಕರಿಗೆ, (ಬ್ರಹ್ಮಪದಪ್ರದಾ) ಬ್ರಹ್ಮಜ್ಞಾನವನ್ನು, ಬ್ರಹ್ಮಪದವನ್ನು, ಬ್ರಹ್ಮತ್ವವನ್ನು ಕೊಡುವಂಥದ್ದು.
ಶೀರ್ಷಂ ಪಾತು ಜಗನ್ಮಾತಾ ಭಾಲಂ ಬಾಲಸರಸ್ವತೀ |
ಪಾರ್ವತೀ ಪಾತು ನೇತ್ರೇ ಚ ವಿಶ್ವೇಶ್ವರಪ್ರಿಯಾ ಶ್ರುತೀ ||೧೪||
(ಜಗನ್ಮಾತಾ) ಜಗನ್ಮಾತೆಯು, (ಶೀರ್ಷಂ ಪಾತು) ನಮ್ಮ ಶಿರವನ್ನು ಪಾಲಿಸಲಿ. (ಭಾಲಂ ಬಾಲಸರಸ್ವತೀ) ಹಣೆಯನ್ನು ಬಾಲಸರಸ್ವತಿಯೂ, (ಪಾರ್ವತೀ ನೇತ್ರೇ ಚ) ಪಾರ್ವತಿಯು ಕಣ್ಣುಗಳನ್ನೂ, (ವಿಶ್ವೇಶ್ವರಪ್ರಿಯಾ) ವಿಶ್ವೇಶ್ವರಪ್ರಿಯೆ ಪರಬ್ರಹ್ಮಮಹಿಷಿಯು ನಮ್ಮ, (ಶ್ರುತೀ) ಕಿವಿಗಳನ್ನೂ, (ಪಾತು) ರಕ್ಷಿಸಲಿ.
ಪ್ರಾಣೇಶೀ ನಾಸಿಕಾಂ ಪಾತು ವದನಂ ಸುಂದರಾನನಾ |
ಜಿಹ್ವಾಮವತು ವಾಗ್ದೇವೀ ರಸನಾಮವತು ರಾಧಿಕಾ ||೧೫||
(ಪ್ರಾಣೇಶೀ) ಪ್ರಾಣೇಶಿಯು ನಮ್ಮ, (ನಾಸಿಕಾಂ) ಮೂಗನ್ನೂ, (ಸುಂದರಾನನಾ) ಸುಂದರವದನೆಯಾದ ತ್ರಿಪುರಸುಂದರಿಯು ನಮ್ಮ, (ವದನಂ ಪಾತು) ಮುಖವನ್ನೂ ಪಾಲಿಸಲಿ. (ವಾಗ್ದೇವೀ) ವಾಗ್ದೇವಿಯು ನಮ್ಮ, (ಜಿಹ್ವಾಮ್ ಅವತು) ವಾಗಿಂದ್ರಿಯವಾದ ನಾಲಗೆಯನ್ನು ರಕ್ಷಿಸಲಿ. (ರಾಧಿಕಾ) ರಾಧಿಕಾದೇವಿಯು ನಮ್ಮ, (ರಸನಾಮ್ ಅವತು) ರಸನೇಂದ್ರಿಯವಾದ ಅದೇ ನಾಲಿಗೆಯನ್ನು ಸಲಹಲಿ.
ಶಿತಿಕಂಠಾ ಪಾತು ಕಂಠಂ ಗ್ರೀವಾಂ ಪಾತು ಸದಾಶಿವಾ |
ಸ್ಕಂಧೌ ಪಾತು ಸ್ಕಂದಮಾತಾ ಭುಜೌ ದುಷ್ಟವಿಭಂಜಿನೀ ||೧೬||
(ಶಿತಿಕಂಠಾ) ಶಿತಿಕಂಠನ ಮಡದಿಯು ನಮ್ಮ (ಕಂಠಂ ಪಾತು) ಕಂಠವನ್ನು ಪಾಲಿಸಲಿ. (ಸದಾಶಿವಾ ಗ್ರೀವಾಂ ಪಾತು) ಸದಾಶಿವೆಯು ಕುತ್ತಿಗೆಯನ್ನು ರಕ್ಷಿಸಲಿ. (ಸ್ಕಂದಮಾತಾ) ಸ್ಕಂದದೇವನ ತಾಯಿಯಾಗಿ ಸ್ಕಂದಮಾತಾ ಎನಿಸಿದ ದೇವಿಯು ನಮ್ಮ, (ಸ್ಕಂಧೌ ಪಾತು) ಸ್ಕಂಧ / ಹೆಗಲುಗಳನ್ನು ಕಾಪಾಡಲಿ. (ಭುಜೌ) ನಮ್ಮ ಭುಜ / ಬಾಹುಗಳನ್ನು, (ದುಷ್ಟವಿಭಂಜಿನೀ) ದುಷ್ಟರನ್ನು ಭಂಜನಮಾಡುವ ದೇವಿಯು ರಕ್ಷಿಸಲಿ.
ಇಕ್ಷುಚಾಪಧರಾ ಹಸ್ತೌ ವಿಷ್ಣುವಕ್ಷಸ್ಥಿತಾ ಹೃದಮ್ |
ಮಧ್ಯಂ ನಾರಾಯಣೀ ಪಾತು ನಾಭಿಂ ಪದ್ಮಪ್ರಿಯಾऽವತು ||೧೭||
(ಇಕ್ಷುಚಾಪಧರಾ) ಕಬ್ಬಿನ ಬಿಲ್ಲನ್ನು ಧರಿಸಿದ ದೇವಿಯು, (ಹಸ್ತೌ) ನಮ್ಮ ಹಸ್ತಗಳನ್ನು ರಕ್ಷಿಸಲಿ. (ವಿಷ್ಣುವಕ್ಷಸ್ಥಿತಾ) (ಮಹಾವಿಷ್ಣು) ಪರಮಾತ್ಮನ ಹೃದಯಸ್ಥಾನದಲ್ಲಿರುವ ಶ್ರೀದೇವಿ(ಮಹಾಲಕ್ಷ್ಮಿ)ಯು, (ಹೃದಮ್) ನಮ್ಮ ಹೃದಯವನ್ನೂ, (ನಾರಾಯಣೀ) ನಾರಾಯಣನ ಪತ್ನೀಸ್ವರೂಪಳಾದ ನಾರಾಯಣಿಯು, (ಮಧ್ಯಂ) ನಮ್ಮ ದೇಹದ ನಡುವನ್ನೂ, (ಪಾತು) ಪಾಲಿಸಲಿ. (ಪದ್ಮಪ್ರಿಯಾ) ಪದ್ಮನಾಭನ ಪತ್ನಿ ಪದ್ಮಪ್ರಿಯೆಯು, (ನಾಭಿಂ) ನಮ್ಮ ನಾಭೀದೇಶವನ್ನು, (ಅವತು) ರಕ್ಷಿಸಲಿ.
ಕಾತ್ಯಾಯನೀ ಕಟೀ ಪಾತು ಸಕ್ಥಿನೀ ಶಕ್ತಿರೂಪಿಣೀ |
ಶಿವವಾಮೋರುಪೀಠಸ್ಥಾ ಪಾತೂರೂ ಜಗದಂಬಿಕಾ ||೧೮||
(ಕಾತ್ಯಾಯನೀ) ಕಾತ್ಯಯನೀದೇವಿಯು, (ಕಟೀ) ನಮ್ಮ ಕಟಿಯ (ಸೊಂಟವ)ನ್ನೂ, (ಶಕ್ತಿರೂಪಿಣೀ) ಶಕ್ತಿರೂಪಿಣಿಯು, (ಸಕ್ಥಿನೀ) ತೊಡೆಮೂಳೆಗಳೆರಡನ್ನೂ, (ಪಾತು) ಕಾಪಾಡಲಿ. (ಶಿವ-ವಾಮ-ಊರು-ಪೀಠಸ್ಥಾ) ಶಿವನ ಎಡ ತೊಡೆಯಲ್ಲಿ ಆಸೀನಳಾದ, (ಜಗದಂಬಿಕಾ) ಪಾರ್ವತೀದೇವಿಯು / ಜಗದಂಬಿಕೆಯು, (ಊರೂ ಪಾತು) ನಮ್ಮ ತೊಡೆಗಳೆರಡನ್ನೂ ರಕ್ಷಿಸಲಿ.
ಜಾನುನೀ ಜಾಹ್ನವೀ ಪಾತು ಜಂಘೇऽಘಕುಲಹಾರಿಣೀ |
ಸಮಾಧಿವರದಾ ಪಾದೌ ಮನಶ್ಶಾಂತಾ ಚ ರಕ್ಷತು ||೧೯||
(ಜಾಹ್ನವೀ) ಜಾಹ್ನವೀ (ಜಹ್ನು ಮಹರ್ಷಿಗಳ ಕಿವಿಗಳಿಂದ ಹೊರಬಂದ ಗಂಗೆಯು ಜಾಹ್ನವಿಯೆನಿಸಿದಳು. ಭಗೀರಥನ ತಪಕ್ಕೊಲಿದು, ಶಿವಜಟೆಯಿಂದ ತನ್ನ ರಭಸವು ಭೂಮಿ ಕೊಚ್ಚಿ ಹೋಗದಂತೆ ತಡೆಯಲ್ಪಟ್ಟು, ಬಳಿಕ ಜಹ್ನು ಮಹರ್ಷಿಗಳ ಆಶ್ರಮವನ್ನು ಕೊಚ್ಚಿಕೊಂಡು ಹರಿದಾಗ ಕೋಪದಿಂದ ಅವರು ಗಂಗೆಯನ್ನು ಆಪೋಶನ ಮಾಡಿ ನುಂಗಿದರು. ತರುವಾಯ, ಭಗೀರಥನು ತನ್ನ ಪೂರ್ವಜರಾದ ಸಗರಪುತ್ರರ ಸದ್ಗತಿಗಾಗಿ ಪಾತಾಳದಲ್ಲಿರುವ ಅವರ ಚಿತಾಭಸ್ಮದ ಮೇಲೆ ಹರಿಸುವುದಕ್ಕಾಗಿ ಮಾಡಿದ ಪ್ರಾರ್ಥನೆಯನ್ನು ಮನ್ನಿಸಿ ಜಹ್ನುಮಹರ್ಷಿಗಳು ತಮ್ಮ ಕಿವಿಗಳಿಂದ ಗಂಗಾನದಿಯನ್ನು ಹೊರಬಿಟ್ಟರು. ಹೀಗೆ ಗಂಗೆಯು ದೇವಗಂಗೆಯಾಗಿ, ಭೂಗಂಗೆಯಾಗಿ, ಪಾತಾಳಗಂಗೆಯಾಗಿ ತ್ರಿಲೋಕಗಳಲ್ಲೂ ಹರಿದು ತ್ರಿಪಥಗಾ ಎನಿಸಿದಳು. ) ನಾಮಕಳಾದ ಗಂಗಾದೇವಿಯು, (ಜಾನುನೀ) ನಮ್ಮ ಜಾನು / ಮೊಣಕಾಲುಗಳೆರಡನ್ನೂ, (ಅಘ-ಕುಲ-ಹಾರಿಣೀ ಪಾತು) ಅಘ / ಪಾಪಗಳ ರಾಶಿಯನ್ನೇ ನಾಶಮಾಡುವ ದೇವಿಯು ನಮ್ಮ ಜಂಘೆ / ಕಾಲುಗಳನ್ನೂ ರಕ್ಷಿಸಲಿ. (ಸಮಾಧಿವರದಾ) ಸಮಾಧಿಯೆಂಬ ವೈಶ್ಯನಿಗೊಲಿದು ವರವನ್ನಿತ್ತ (ಮಾರ್ಕಂಡೇಯಪುರಾಣದ ದುರ್ಗಾಸಪ್ತಶತೀ / ಚಂಡೀಸಪ್ತಶತೀ / ದೇವೀಮಹಾತ್ಮೆ ಯಲ್ಲಿ ಬರುವ ಕಥೆಯಿದು) ಚಂಡಿಕೆಯು / ದುರ್ಗೆಯು, (ಪಾದೌ) ನಮ್ಮ ಪಾದಗಳನ್ನು, (ಚ) ಮತ್ತು, (ಶಾಂತಾ) ಶಾಂತದುರ್ಗೆಯು, (ಮನಃ) ನಮ್ಮ ಮನಸ್ಸನ್ನು, (ರಕ್ಷತು) ರಕ್ಷಿಸಲಿ. (ಶಾಂತವೆಂದರೆ ಮನಸ್ಸಿನ ನಿಗ್ರಹವುಳ್ಳ, ಶಮಾನ್ವಿತ ಎಂದರ್ಥ)
ಇಂದ್ರಿಯಾಣಿ ತು ದಾಂತಾ ವೈ ಧಿಯೋ ಮಾ ನ: ಪ್ರಚೋದಯಾತ್ |
ಚಿತ್ತಶುದ್ಧಿಂ ಚಿನ್ಮಯೀ ಚ ತನೋತು ಮಂಗಲಪ್ರದಾ ||೨೦||
ದಮವೆಂದರೆ ಇಂದ್ರಿಯನಿಗ್ರಹ, ದಾಂತವೆಂದರೆ ಇಂದ್ರಿಯನಿಗ್ರಹವುಳ್ಳ ಎಂದರ್ಥ. ಅಂತಹ (ದಾಂತಾ ವೈ) ನಿಶ್ಚಯವಾಗಿಯೂ ದಾಂತಾ / ದಮವುಳ್ಳ ದೇವಿಯು, (ಇಂದ್ರಿಯಾಣಿ) ನಮ್ಮ ಇಂದ್ರಿಯಗಳನ್ನೂ, (ಮಾ) ಜಗನ್ಮಾತೆಯು, (ನಃ / ಅಸ್ಮಾಕಂ) ನಮ್ಮ, (ಧಿಯಃ) ಬುದ್ಧಿಗಳನ್ನೂ, (ಪ್ರಚೋದಯಾತ್) ಸನ್ಮಾರ್ಗದಲ್ಲಿ ಪ್ರಚೋದಿಸಲಿ. ಚಿತ್ ಎಂದರೆ ಜ್ಞಾನ, ಚೈತನ್ಯ ಎಂದರ್ಥ. (ಚಿನ್ಮಯೀ ಮಂಗಲಪ್ರದಾ ಚ) ಅಂತಹ ಜ್ಞಾನ ಹಾಗೂ ಚೈತನ್ಯಸ್ವರೂಪೆಯೂ ಮಂಗಲವನ್ನೀಯುವವಳೂ ಆದ ಚಿನ್ಮಯಿಯು, (ಚಿತ್ತಶುದ್ಧಿಂ ತನೋತು) ನಮ್ಮ ಚಿತ್ತ(ಮನಸ್)ಶುದ್ಧಿಯನ್ನುಂಟುಮಾಡಲಿ.
ಅಹಂಭಾವಂ ದೇಹಭಾವಮಪಾಕರೋತು ನಿರ್ಮಮಾ |
ಆತ್ಮಭಾವಂ ಬ್ರಹ್ಮಭಾವಮನುಗೃಹ್ಣಾತು ಶಾರದಾ ||೨೧||
(ನಿರ್ಮಮಾ) ನಿರ್ಮಮೆಯಾದ (ಮಮಕಾರರಹಿತಳಾದ) ಆದಿಪರಾಶಕ್ತಿಯು, (ಅಹಂಭಾವಂ) ನಮ್ಮ "ಅಂತಃಕರಣವೇ ನಾನೆಂಬ ಅಹಂಭಾವ ಹಾಗೂ, (ದೇಹಭಾವಂ) ದೇಹವೇ ನಾನೆಂಬ ದೇಹಭಾವ " ಗಳನ್ನು, (ಅಪಾಕರೋತು) ದೂರಗೊಳಿಸಲಿ. (ಶಾರದಾ) ಜ್ಞಾನಸರಸ್ವತಿಯಾದ ಶಾರದಾಂಬೆಯು, (ಆತ್ಮಭಾವಂ ಬ್ರಹ್ಮಭಾವಂ) ನಮ್ಮಲ್ಲಿ ಬ್ರಹ್ಮಾತ್ಮಭಾವವನ್ನು ಜಾಗೃತಗೊಳಿಸಿ, (ಅನುಗೃಹ್ಣಾತು) ಅನುಗ್ರಹಿಸಲಿ.
ಪಾತ್ವಶೇಷಶರೀರಂ ಸಾ ಶೀರ್ಯಮಾಣಂ ದಿನೇ ದಿನೇ |
ಯಾವಚ್ಚ ಜೀವನ್ಮುಕ್ತಸ್ಸ್ಯಾಂ ತಾವತ್ತ್ವಂ ಸುಸ್ಥಿರಾ ಭವ ||೨೨||
(ದಿನೇ ದಿನೇ ಶೀರ್ಯಮಾಣಂ)"ದಿನೇ ದಿನೇ ಶೀರ್ಯಮಾಣಂ ಶರೀರಮ್— ದಿನದಿನವೂ ಜೀರ್ಣವಾಗುವಂಥದ್ದೇ ಶರೀರ ". (ಅಶೇಷ ಶರೀರಂ) ಅಂತಹ ನಮ್ಮ ಇಡೀ ಶರೀರವನ್ನು, (ಸಾ) ದೇವಿಯು, (ಪಾತು) ರಕ್ಷಿಸಲಿ. (ಯಾವತ್ ಚ ಜೀವನ್ಮುಕ್ತಃ ಸ್ಯಾಂ, ತಾವತ್) ನಾನು ಬ್ರಹ್ಮಭಾವವನ್ನು ಹೊಂದಿ ಜೀವನ್ಮುಕ್ತನಾಗುವವರೆಗೆ, (ತ್ವಂ) ನೀನು, (ಸುಸ್ಥಿರಾ ಭವ) ನನ್ನ ದೇಹದಲ್ಲಿ ಸ್ಥಿರವಾಗಿ ನೆಲೆಸಿ ಕಾಪಾಡು.
ಜರಾರೋಗಾದಿಭಿರ್ನಿತ್ಯಂ ಪಾಹಿ ಹೇ ಜಗದಂಬಿಕೇ |
ಸನ್ಮಾರ್ಗಸ್ಥಿತಭಕ್ತಾನಾಂ ಸರ್ವವಿಘ್ನನಿವಾರಿಣೀ ||೨೩||
(ಹೇ ಜಗದಂಬಿಕೇ!) ಹೇ ಜಗದಂಬಿಕೆ!, (ಜರಾ-ಗೋಗಾದಿಭಿಃ ನಿತ್ಯಂ) ವೃದ್ಧಾಪ್ಯ (ಜರೆ)-ರೋಗಾದಿಗಳಿಂದ ಸದಾ, (ಪಾಹಿ) ನಮ್ಮನ್ನು ಕಾಪಾಡು. (ಸನ್ಮಾರ್ಗಸ್ಥಿತ-ಭಕ್ತಾನಾಂ) ಸನ್ಮಾರ್ಗದಲ್ಲಿರುವ ಭಕ್ತರ, (ಸರ್ವವಿಘ್ನನಿವಾರಿಣೀ) ಸಕಲ ವಿಘ್ನಗಳನ್ನು ನಿವಾರಿಸುವವಳಾಗಿರುವಿ.
ಜನನೀ ಜನ್ಮದಾತ್ರೀ ಚ ಜಾಹ್ನವೀ ಚ ಜನಾರ್ದನೀ |
ಜನ್ಮಸಂಸಾರಬಂಧಾನ್ವೈ ಮೋಕ್ತ್ವಾऽನಂದಂ ಪ್ರದಾತು ನಃ ||೨೪||
ಹೇ ಜಗನ್ಮಾತೆಯೆ! ನೀನು ನಮ್ಮೆಲ್ಲರ (ಜನನೀ) ಜನನಿ, (ಜನ್ಮದಾತ್ರೀ ಚ) ಸೃಷ್ಟಿಗೆ ಕಾರಣಳು, (ಜಾಹ್ನವೀ ಚ) ಜಾಹ್ನವಿಯೆನಿಸಿದ ಗಂಗಾಮಾತೆಯೂ, (ಜನಾರ್ದನೀ) ಜನಾರ್ದನಸತಿಯೂ ಆಗಿರುವಿ. (ಜನ್ಮಸಂಸಾರಬಂಧಾನ್ ವೈ ಮೋಕ್ತ್ವಾ) ನಮ್ಮ ಹುಟ್ಟು ಸಾವುಗಳೆಂಬ ಸಂಸಾರಬಂಧನವನ್ನು ತೊಲಗಿಸಿ, (ನಃ / ಅಸ್ಮಭ್ಯಂ) ನಮಗೆ, (ಆನಂದಂ ಪ್ರದಾತು ) ಆತ್ಮಾನಂದವನ್ನು ನೀಡು.
ಲೋಕಕಲ್ಯಾಣಕರ್ಮಾಣಿ ಕಾರಯಸ್ವ ಮಯಾಂಬಿಕೇ |
ತ್ವದುಪಕರಣರೂಪೇಣ ತ್ವತ್ಕಾರ್ಯಾಣಿ ಮಹೇಶ್ವರಿ ||೨೫||
(ಅಂಬಿಕೇ) ಹೇ ಅಂಬಿಕೆ! (ಮಯಾ) ನನ್ನಿಂದ ಸದಾ, (ಲೋಕಕಲ್ಯಾಣಕರ್ಮಾಣಿ) ಲೋಕಕಲ್ಯಾಣಕರ ಕರ್ಮಗಳನ್ನೇ, (ಕಾರಯಸ್ವ) ಮಾಡಿಸು. (ಮಹೇಶ್ವರಿ) ಹೇ ಮಹೇಶ್ವರಿಯೆ!, (ತ್ವತ್-ಉಪಕರಣರೂಪೇಣ) ನಿನ್ನ ಉಪಕರಣಗಳಂತೆ ನನ್ನನ್ನು ಬಳಸಿ, (ತ್ವತ್-ಕಾರ್ಯಾಣಿ) ನಿನ್ನ ಕೆಲಸಗಳನ್ನು ಮಾಡಿಸಿಕೋ.
ಮಹಾಲಕ್ಷ್ಮೀ ಮಹಾಗೌರೀ ಗಾಯತ್ರೀ ಚ ಸರಸ್ವತೀ |
ಆದಿಶಕ್ತಿ: ಪಾತು ಭಕ್ತಾನ್ ಪ್ರಪನ್ನಾಂಶ್ಚ ದಿನೇ ದಿನೇ ||೨೬||
(ಮಹಾಲಕ್ಷ್ಮೀ, ಮಹಾಗೌರೀ, ಗಾಯತ್ರೀ ಸರಸ್ವತೀ ಚ) ಮಹಾಲಕ್ಷ್ಮಿಯೂ, ಮಹಾಗೌರಿಯೂ, ಗಾಯತ್ರಿಯೂ, ಸರಸ್ವತಿಯೂ, (ಆದಿಶಕ್ತಿಃ) ಆದಿಶಕ್ತಿಯೂ, (ದಿನೇ ದಿನೇ) ಪ್ರತಿದಿನವೂ, (ಪ್ರಪನ್ನಾನ್ ಭಕ್ತಾನ್ ಚ ಪಾತು) ಶರಣುಹೊಂದಿದ ಭಕ್ತರನ್ನು ರಕ್ಷಿಸಲಿ.
ಶಕ್ತ್ಯೈ ದಿವ್ಯಸ್ವರೂಪಾಯೈ ಚಂದ್ರಾಭಾಯೈ ನಮೋ ನಮ: |
ಪರಬ್ರಹ್ಮಮಹಿಷ್ಯೈ ಚ ಜಗನ್ಮಾತ್ರೇ ನಮೋ ನಮ: ||೨೭||
(ದಿವ್ಯಸ್ವರೂಪಾಯೈ) ದಿವ್ಯಸ್ವರೂಪಳೂ, (ಚಂದ್ರಾಭಾಯೈ) ಚಂದ್ರಕಾಂತಿಯುಳ್ಳವಳೂ, (ಶಕ್ತ್ಯೈ) ಶಕ್ತಿಸ್ವರೂಪಿಣಿಯೂ ಆದ ದೇವಿಗೆ, (ನಮೋ ನಮಃ) ಅಸಂಖ್ಯ ಪ್ರಣಾಮಗಳು. (ಪರಬ್ರಹ್ಮಮಹಿಷ್ಯೈ) ಪರಬ್ರಹ್ಮನ ರಾಣಿಯೂ, (ಜಗನ್ಮಾತ್ರೇ ಚ) ಜಗನ್ಮಾತೆಯೂ ಆದ ಆದಿಪರಾಶಕ್ತಿಗೆ, (ನಮೋ ನಮಃ) ಮತ್ತೆ ಮತ್ತೆ ಅನಂತ ನಮಸ್ಕಾರಗಳು.
(ವಸಂತತಿಲಕಾ-ವೃತ್ತಮ್)
ಶ್ರೀದೇವಿ ದೇವಿ ದನುಜಾಂತಕಿ ದೇವಿ ದೇವಿ
ಶ್ರೀದೇವಿ ದೇವಿ ಭಯಹಾರಿಣಿ ದೇವಿ ದೇವಿ |
ಶ್ರೀದೇವಿ ದೇವಿ ಜನಪಾಲಿನಿ ದೇವಿ ದೇವಿ
ಶ್ರೀದೇವಿ ದೇವಿ ಶರಣಂ ಭವ ದೇವಿ ದೇವಿ ||೨೮||
(ಶ್ರೀದೇವಿ ದೇವಿ ದನುಜ-ಅಂತಕಿ ದೇವಿ ದೇವಿ) ಹೇ ದುಷ್ಟಸಂಹಾರಿಣಿಯಾದ ದೇವಿಯೆ! (ಶ್ರೀದೇವಿ ದೇವಿ ಭಯಹಾರಿಣಿ ದೇವಿ ದೇವಿ) ಹೇ ಸಜ್ಜನರ ಭಯನಿವಾರಕಳೆ! (ಶ್ರೀದೇವಿ ದೇವಿ ಜನಪಾಲಿನಿ ದೇವಿ ದೇವಿ) ಹೇ ಶಿಷ್ಟಸಂರಕ್ಷಕಳೆ! (ಶ್ರೀದೇವಿ ದೇವಿ ಶರಣಂ ಭವ ದೇವಿ ದೇವಿ) ನೀನು ಶರಣಾಗತರಾದ ನಮಗೆ ಆಶ್ರಯನ್ನೀಯು ತಾಯೆ.
ಶ್ರೀದೇವಿದಿವ್ಯಚರಣೌ ಮನಸಾ ಸ್ಮರಾಮಿ
ಶ್ರೀದೇವಿದಿವ್ಯಚರಣೌ ವಚಸಾ ಗೃಣಾಮಿ |
ಶ್ರೀದೇವಿದಿವ್ಯಚರಣೌ ಶಿರಸಾ ನಮಾಮಿ
ಶ್ರೀದೇವಿದಿವ್ಯಚರಣೌ ಶರಣಂ ಪ್ರಪದ್ಯೇ ||೨೯||
(ಶ್ರೀದೇವಿದಿವ್ಯಚರಣೌ) ದೇವಿಯ ದಿವ್ಯಪಾದಪದ್ಮಗಳನ್ನು, (ಮನಸಾ) ಮನಸ್ಸಿನಿಂದ, (ಸ್ಮರಾಮಿ) ಸ್ಮರಿಸುತ್ತೇನೆ. (ಶ್ರೀದೇವಿದಿವ್ಯಚರಣೌ) ದೇವಿಯ ದಿವ್ಯಚರಣಪಂಕಜವನ್ನು, (ವಚಸಾ) ಸ್ತೋತ್ರಗಳ ಮೂಲಕ, (ಗೃಣಾಮಿ) ಸ್ತುತಿಮಾಡುತ್ತೇನೆ. (ಶ್ರೀದೇವಿದಿವ್ಯಚರಣೌ) ದೇವಿಯ ದಿವ್ಯಪದಸರೋರುಹದ್ವಯವನ್ನು, ಶಿರಸಾ) ತಲೆವಾಗಿ, (ನಮಾಮಿ) ನಮಿಸುತ್ತೇನೆ. (ಶ್ರೀದೇವಿದಿವ್ಯಚರಣೌ) ಶ್ರೀ ದೇವಿಯ ದಿವ್ಯವಾದ ಪದಾರವಿಂದಗಳನ್ನು, (ಶರಣಂ ಪ್ರಪದ್ಯೇ) ಶರಣುಹೊಂದುತ್ತೇನೆ.
(ಶಾಲಿನೀ-ವೃತ್ತಮ್)
ಮಾತಾ ದೇವೀ ಮತ್ಪಿತಾ ಶಾರದಾ ಚ
ಸ್ವಾಮೀ ದೇವೀ ಮದ್ಬಲಂ ರುದ್ರಪತ್ನೀ |
ಸರ್ವಸ್ವಂ ಮೇ ವಿಷ್ಣುಪತ್ನೀ ದಯಾರ್ದ್ರಾ
ನಾನ್ಯಂ ಜಾನೇ ನೈವ ಜಾನೇ ನ ಜಾನೇ ||೩೦||
(ದೇವೀ) ದೇವಿಯೇ, (ಮಾತಾ) ನನ್ನ ತಾಯಿ. (ಚ) ಹಾಗೆಯೇ, (ಶಾರದಾ) ಶಾರದಾಂಬೆಯು, (ಮತ್-ಪಿತಾ) ನನ್ನ ತಂದೆ. (ದೇವೀ) ದೇವಿಯೇ, (ಸ್ವಾಮೀ) ನನ್ನ ಸ್ವಾಮಿನಿಯು. (ರುದ್ರಪತ್ನೀ) ಪಾರ್ವತಿಯು, (ಮತ್-ಬಲಮ್) ನನ್ನ ಶಕ್ತಿ. (ದಯಾರ್ದ್ರಾ ವಿಷ್ಣುಪತ್ನೀ) ದಯಾಪೂರ್ಣಳಾದ ಮಹಾಲಕ್ಷ್ಮಿಯೇ, (ಮೇ / ಮಮ ಸರ್ವಸ್ವಂ) ನನ್ನ ಸರ್ವಸ್ವ. ಹೇ ಜಗನ್ಮಾತೆಯೆ! (ಅನ್ಯಂ) ನಿನ್ನ ಹೊರತು ಅನ್ಯರಾರನ್ನೂ, (ನ ಜಾನೇ) ಅರಿಯೆನು. (ನ ಏವ ಜಾನೇ) ಎಂದೆಂದಿಗೂ ನಾನರಿಯೆನು. (ನ ಜಾನೇ) ತಿಳಿಯಲಾರೆನು.
(ಇಂದ್ರವಜ್ರಾ-ವೃತ್ತಮ್)
ಲೋಕಪ್ರಸೂಂಶ್ಚಾಪ್ರತಿಮಪ್ರಭಾವಾಂ
ಪದ್ಮಾಯತಾಕ್ಷೀಂ ಸುರವಂಶಮೂಲಾಮ್ |
ಕಾರುಣ್ಯರೂಪಾಂ ಜಗದಾದಿಶಕ್ತಿಂ
ಬ್ರಹ್ಮಾಂಡನಾಥಾಂ ಶರಣಂ ಪ್ರಪದ್ಯೇ ||೩೧||
(ಲೋಕಪ್ರಸೂನ್) ಲೋಕವನ್ನು ಪ್ರಸವಿಸಿದ, (ಅಪ್ರತಿಮ-ಪ್ರಭಾವಾಂ) ಅವ್ಯಕ್ತವಾದ ಪ್ರಭಾವವುಳ್ಳ, (ಪದ್ಮಾಯತಾಕ್ಷೀಂ) ತಾವರೆಯಂತಹ ಅಗಲವಾದ ಕಣ್ಣುಗಳುಳ್ಳ, (ಸುರವಂಶಮೂಲಾಂ) ದೇವತೆಗಳ ಸೃಷ್ಟಿಗೆ ಕಾರಣಳಾದ, (ಕಾರುಣ್ಯರೂಪಾಂ) ಕಾರುಣ್ಯದ ಸಾಕಾರವಾದ, (ಜಗದಾದಿಶಕ್ತಿಂ) ಜಗತ್ತಿನ ಮೂಲಶಕ್ತಿಯಾದ, (ಚ) ಹಾಗೆಯೇ, (ಬ್ರಹ್ಮಾಂಡನಾಥಾಂ) ಸಮಸ್ತ ಸೃಷ್ಟಿಗೆ ಒಡತಿಯಾದ ಆದಿಪರಾಶಕ್ತಿಯನ್ನು, (ಶರಣಂ ಪ್ರಪದ್ಯೇ) ಶರಣು ಹೊಂದುತ್ತೇನೆ.
(ಅನುಷ್ಟುಭ್-ವೃತ್ತಮ್)
ಕೂಜಂತಂ ದೇವಿ ದೇವೀತಿ ಪವಿತ್ರಂ ಪ್ರಣವಾಕ್ಷರಮ್ |
ಭಾಗವತದ್ರುಮಮಾರುಹ್ಯ ವಂದೇ ಶ್ರೀವ್ಯಾಸಕೋಕಿಲಮ್ ||೩೨||
(ಭಾಗವತ-ದ್ರುಮಮ್ ಆರುಹ್ಯ) ದೇವೀಭಾಗವತವೆಂಬ ವೃಕ್ಷವನ್ನೇರಿ, (ದೇವಿ ದೇವಿ ಇತಿ) ದೇವಿ! ದೇವಿ! ಎಂದು, (ಪವಿತ್ರಂ ಪ್ರಣವಾಕ್ಷರಂ) ಪವಿತ್ರವಾದ ಪ್ರಣವಾಕ್ಷರ / ಓಂಕಾರ ಸಹಿತವಾಗಿ, (ಕೂಜಂತಂ) ಉಚ್ಚರಿಸುವ, (ಶ್ರೀವ್ಯಾಸಕೋಕಿಲಮ್) ಭಗವಾನ್ ವೇದವ್ಯಾಸರೆಂಬ ಕೋಗಿಲೆಯನ್ನು, (ವಂದೇ) ವಂದಿಸುತ್ತೇನೆ.
ದುರ್ಗದಾನವಹಂತ್ರೀಂ ತಾಂ ಸರ್ವದುರ್ಗತಿಹಾರಿಣೀಮ್ |
ದುರ್ಗಾಮಾದಿಪರಾಶಕ್ತಿಂ ಭೂಯೋ ಭೂಯೋ ನಮಾಮ್ಯಹಮ್ ||೩೩||
(ದುರ್ಗದಾನವಹಂತ್ರೀಂ) ದುರ್ಗಾಸುರನನ್ನು ಸಂಹರಿಸಿದವಳಾದ, (ಸರ್ವದುರ್ಗತಿಹಾರಿಣೀಂ) ನಮ್ಮೆಲ್ಲ ಕಷ್ಟ-ದುರ್ಗತಿಗಳನ್ನು ಹೋಗಲಾಡಿಸುವವಳಾದ, (ಆದಿಪರಾಶಕ್ತಿಂ, ತಾಂ ದುರ್ಗಾಂ) ಆದಿಪರಾಶಕ್ತಿಯಾದ ಆ ದುರ್ಗೆಯನ್ನು, (ಭೂಯಃ, ಭೂಯಃ) ಮತ್ತೆ ಮತ್ತೆ, (ಅಹಂ ನಮಾಮಿ) ನಾನು ನಮಿಸುತ್ತೇನೆ.
ತಾರಕಂ ಭವಮಗ್ನಾನಾಂ ಚಿದಾನಂದಪ್ರದಾಯಕಮ್ |
ಮಾರಕಂ ಯಮದೂತಾನಾಂ ದೇವಿ ದೇವೀತಿ ಗಾಯನಮ್ ||೩೪||
(ದೇವಿ ದೇವಿ ಇತಿ ಗಾಯನಂ) "ದೇವಿ! ದೇವಿ!" ಎಂಬಿತ್ಯಾದಿಯಾದ ನಾಮಸ್ಮರಣೆಯು, (ಭವಮಗ್ನಾನಾಂ ತಾರಕಂ) ಭವಸಾಗರದಲ್ಲಿ ಮುಳುಗಿದವರನ್ನು ಮೇಲೆತ್ತಿ, (ಚಿದಾನಂದಪ್ರದಾಯಕಮ್) ಜ್ಞಾನಾನಂದವನ್ನು ಉಂಟುಮಾಡುವುದೂ, (ಯಮದೂತಾನಾಂ ಮಾರಕಂ) ಯಮದೂತರಿಂದ ನಮ್ಮನ್ನು ರಕ್ಷಿಸಿ ಮೋಕ್ಷವನ್ನುಂಟುಮಾಡುವುದೂ ಆಗಿರುವುದು.
(ಶಾರ್ದೂಲವಿಕ್ರೀಡಿತವೃತ್ತಮ್)
ದೇವೀ ತ್ರಾತು ಮಹಾಭವಾನ್ನಿಗಮದಾ ದೇವೀಂ ಸ್ತುವೇ ಶ್ಯಾಮಲಾಂ
ದೇವ್ಯಾ ಸಂಸೃತಿಸಾಗರಾಚ್ಚ ತರಣಂ ದೇವ್ಯೈ ಚ ತಸ್ಯೈ ನಮ: |
ದೇವ್ಯಾಶ್ಚಾಶು ನಿವಾರ್ಯತೇ ಭವಭಯಂ ದೇವ್ಯಾಶ್ಚ ದಾಸೋऽಸ್ಮ್ಯಹಂ
ದೇವ್ಯಾಂ ಲೀಯತು ಚಿತ್ತಮೇವ ಸತತಂ ಹೇ ದೇವಿ ವಾಗೀಶ್ವರಿ ||೩೫||
(ನಿಗಮದಾ ದೇವೀ)ವೇದರಾಶಿಯೆಂಬ ಜ್ಞಾನದ ತವನಿಧಿಯನ್ನೀಯುವ ದೇವಿಯು ನಮ್ಮನ್ನು, (ಮಹಾಭವಾತ್) ಸಂಸಾರವೆಂಬ ಮಹಾಸಾಗರದಿಂದ, (ತ್ರಾತು) ರಕ್ಷಿಸಲಿ. (ಶ್ಯಾಮಲಾಂ ದೇವೀಂ ಸ್ತುವೇ) ಶ್ಯಾಮಲವರ್ಣದವಳಾದ ದೇವಿಯನ್ನು ಭಜಿಸುತ್ತೇನೆ. (ಚ) ಹಾಗೆಯೇ, (ದೇವ್ಯಾ) ದೇವಿಯಿಂದಲೇ, (ಸಂಸೃತಿಸಾಗರಾತ್ ತರಣಂ) ಭವಸಾಗರದಿಂದ ಜೀವರು ಪಾರಾಗುವರು. (ಚ) ಹಾಗಾಗಿ, (ತಸ್ಯೈ ದೇವ್ಯೈ ನಮಃ) ಅಂತಹ ದೇವಿಗೆ ನಮಸ್ಕಾರ. (ಚ) ಅಂತೆಯೇ, (ದೇವ್ಯಾಃ) ಆ ಜಗನ್ಮಾತೆಯ ದೆಸೆಯಿಂದಲೇ, (ಆಶು) ಬೇಗನೆ, (ಭವಭಯಂ) ಭವದ ಭಯವು, (ನಿವಾರ್ಯತೇ) ನಿವಾರಣೆಯಾಗುವುದು. (ಚ) ಅಂತಹ, (ದೇವ್ಯಾಃ) ಜಗದಂಬಿಕೆಯ, (ದಾಸಃ, ಅಸ್ಮಿ, ಅಹಂ) ದಾಸನಾಗಿರುವೆ ನಾನು. (ಹೇ ದೇವಿ ವಾಗೀಶ್ವರಿ) ಹೇ ವಾಗ್ದೇವಿಯೆ! (ದೇವ್ಯಾಮ್ ಏವ) ಅಂತಹ ಆದಿಪರಾಶಕ್ತಿಯಾದ ನಿನ್ನಲ್ಲಿಯೇ, (ಚಿತ್ತಂ) ನಮ್ಮ ಚಿತ್ತವು, (ಸತತಂ) ಎಡೆಬಿಡದೆ, (ಲೀಯತು) ಲೀನವಾಗಿರಲಿ.
ಶ್ರೀದೇವೀಸ್ರಗ್ಧರಾನವಕಸ್ತೋತ್ರರತ್ನಮ್
(ಸ್ರಗ್ಧರಾವೃತ್ತಮ್)
ಸರ್ವಾನ್ ಲೋಕಾನಜೇನ ಪ್ರಕಟಿತವಿಭವಾಂ ವಿಷ್ಣುನಾ ಪಾಲನೀಯಾನ್ |
ಯಸ್ಯಾ: ಶಕ್ತ್ಯಾ ಹರೇಣಾಪ್ರತಿಹತಲಯಕಾರ್ಯಂ ಸದಾ ಸಾಧನೀಯಮ್ ||
ಮಾಯಾರೂಪಾಂ ತ್ರಿಮೂರ್ತಿಪ್ರಜನನನಿಯತಾಂ ಸುನ್ದರೀಂ ಭಾರತೇಡ್ಯಾಂ |
ವನ್ದೇ ಮಾತಸ್ತ್ರಿಲೋಕಾಂ ಸುರವರವಿನುತಾಂ ಜ್ಞಾನದಾಮಾಶ್ರಿತಾನಾಮ್ ||೧||
(ವಿಷ್ಣುನಾ ಪಾಲನೀಯಾನ್)ಸ್ಥಿತಿಕರ್ತೃವಾದ ವಿಷ್ಣುವಿನಿಂದ ಪಾಲಿಸಲ್ಪಡಬೇಕಾದ, (ಸರ್ವಾನ್ ಲೋಕಾನ್) ಸಮಸ್ತಲೋಕಗಳನ್ನು, (ಅಜೇನ ಪ್ರಕಟಿತವಿಭವಾಂ) ಬ್ರಹ್ಮನಿಂದ ಸೃಷ್ಟಿಮೂಲಕ ಪ್ರಕಟಣೆಮಾಡಿಸುವ ವೈಭವ/ಯೋಗ್ಯತೆಯುಳ್ಳವಳಾದ, (ಯಸ್ಯಾ: ಶಕ್ತ್ಯಾ) ಯಾವಳ ಶಕ್ತಿಯ ಸಹಾಯದಿಂದ, (ಹರೇಣ ಅಪ್ರತಿಹತಲಯಕಾರ್ಯಂ) ರುದ್ರನಿಂದ ತಡೆಯಿಲ್ಲದ ಲಯಕಾರ್ಯವು (ಸದಾ ಸಾಧನೀಯಮ್) ಯಾವಾಗಲೂ ಸಾಧಿಸಲ್ಪಡಬೇಕೋ, (ಮಾಯಾರೂಪಾಂ)ಅಂತಹ ಮಹಾಮಾಯಾಸ್ವರೂಪಳೂ, (ತ್ರಿಮೂರ್ತಿಪ್ರಜನನನಿಯತಾಂ)ಕಾಲಕಾಲಕ್ಕೆ ತ್ರಿಮೂರ್ತಿಗಳ ನಿಯಮಿತವಾದ ಸೃಷ್ಟಿಯನ್ನು ಮಾಡುವವಳೂ, (ಸುನ್ದರೀಂ)ತ್ರಿಪುರಸುಂದರಿಯೂ, (ಭಾರತೇಡ್ಯಾಂ)ಜ್ಞಾನಿಗಳಿಂದ ಸ್ತುತಿಸಲ್ಪಡುವವಳೂ, ( ಆಶ್ರಿತಾನಾಂ ಜ್ಞಾನದಾಂ)ಶರಣಾಗತರಿಗೆ ಸುಜ್ಞಾನವನ್ನೀಯುವ, (ಸುರವರವಿನುತಾಂ)ಸುರಪತಿಯಿಂದ ನುತಿಗೈಯಲ್ಪಡುವ (ತ್ರಿಲೋಕಾಂ)ಮೂರುಲೋಕದ ರೂಪದಲ್ಲಿ ನಮ್ಮ ಕಣ್ಣಿಗೆ ಗೋಚರಿಸುವ,ತ್ರಿಲೋಕಸ್ವರೂಪೆಯಾದ, ಮೂರ್ಲೋಕವೇ ತನ್ನ ಶರೀರವಾಗಿರುವವಳಾದ, (ಮಾತ:)ಹೇ ತಾಯೇ! (ವನ್ದೇ)ನಿನ್ನನ್ನು ವಂದಿಸುತ್ತೇನೆ.
ದೇವೀಂ ವಾಣೀಂ ಗೃಹಾಣಾಂ ಕರಕಮಲಯುಗೇ ಭಾರತೀಂ ಶ್ರೇಷ್ಠವೀಣಾಂ |
ವನ್ದೇನ್ದುಸ್ವಚ್ಛವರ್ಣಾಂ ಸಕಲನಿಗಮದಾಂ ಕಾವ್ಯಸಾಫಲ್ಯದಾಂ ತ್ವಾಮ್ ||
ವಾಗ್ದೇವೀಂ ಬ್ರಾಹ್ಮಣೀಂ ವಿಧೃತಸುಜಪಸರಾಂ ಶಾರದಾಂ ವೇದಮಾತ: |
ತ್ವಾಂ ಬ್ರಹ್ಮಾಣೀಂ ಸಸತ್ತ್ವಾಂ ವರಯತಿವರದಾಂ ಶೃಙ್ಗಗಿರ್ಯಾಖ್ಯಪೀಠಾಮ್ ||೨||
(ವಾಗ್ದೇವೀಂ)ಮಾತಿನ ಅಧಿದೇವತೆಯಾದ (ಬ್ರಾಹ್ಮಣೀಂ) ಬ್ರಹ್ಮಮಾನಸಸಂಭೂತೆಯಾದ (ಸಸತ್ತ್ವಾಂ)ಪರಮಸಾತ್ವಿಕಗುಣಭರಿತಳಾದ(ಸಕಲನಿಗಮದಾಂ)ಸಮಸ್ತವೇದಾದಿವಿದ್ಯೆಗಳನ್ನು ಅನುಗ್ರಹಿಸುವ( ಇನ್ದುಸ್ವಚ್ಛವರ್ಣಾಂ)ಚಂದ್ರನಂತಹ ಅಚ್ಚಬಿಳಿಯಾದ ಮೈಬಣ್ಣವುಳ್ಳ(ಕರಕಮಲಯುಗೇ ಶ್ರೇಷ್ಠವೀಣಾಂ ಗೃಹಾಣಾಂ)ತನ್ನ ಕೈದಾವರೆಗಳೆರಡರಲ್ಲಿ ಪರಮ ಶ್ರೇಷ್ಠವಾದ ದೈವೀವೀಣೆಯನ್ನು ಹಿಡಿದುಕೊಂಡಿರುವ(ವಿಧೃತಸುಜಪಸರಾಂ)ಜಪಮಾಲೆಯನ್ನೂ ಧರಿಸಿರುವ(ಕಾವ್ಯಸಾಫಲ್ಯದಾಂ)ಉತ್ತಮೋತ್ತಮಕಾವ್ಯರಚನೆಯ ಯಶಸ್ಸಿಗೆ ಕಾರಣಳಾದ(ಬ್ರಹ್ಮಾಣೀಂ)ಚತುರಾನನಬ್ರಹ್ಮನ ಸತಿಯಾದ(ವರಯತಿವರದಾಂ)ಯತಿಶ್ರೇಷ್ಠರೆನಿಸಿದ ಆದಿಶಂಕರಭಗವತ್ಪಾದರಿಗೊಲಿದ(ಶೃಙ್ಗಗಿರ್ಯಾಖ್ಯಪೀಠಾಮ್)ಶೃಂಗಗಿರಿ/ಶೃಂಗೇರಿಯ ಶಂಕರಪೀಠಾಧಿಪತಿಗಳಿಂದ ನಿತ್ಯಪೂಜೆಗೊಳ್ಳುವ
(ವೇದಮಾತ:)ಹೇ! ವೇದಮಾತೆಯೇ!(ವಾಣೀಂ ದೇವೀಂ ಶಾರದಾಂ)ವಾಣಿಯೆಂದೂ ಕರೆಯಲ್ಪಡುವ ದೇವಿಶಾರದೆಯಾದ(ತ್ವಾಂ)ನಿನ್ನನ್ನು(ವನ್ದೇ)ತ್ರಿಕರಣಪೂರ್ವಕ ವಂದಿಸುತ್ತೇನೆ.
ವಿಷ್ಣೋರ್ಮಾಯಾಸ್ವರೂಪಾಂ ತ್ರಿಭುವನಜನನೀಂ ರಾಜಸಾಂ ಲೋಕವಂದ್ಯಾಂ |
ರತ್ನಪ್ರಾಯಾಂ ಗುಣಾಢ್ಯಾಮಗಣಿತಮಹಿಮಾಂ ಮಾಧವಾಂ ಪದ್ಮಸಂಸ್ಥಾಮ್ ||
ಸಂಪದ್ರೂಪಾಂ ವಿಶೇಷಾಂ ಜಲಧಿಮಥನಜಾಂ ಚಂದ್ರಮಾಸೋದರೀಂ ತಾಂ |
ವಂದೇ ದೇವಾಸುರೇಡ್ಯಾಮೃಷಿಕುಲವಿನುತಾಮಷ್ಟಲಕ್ಷ್ಮೀಸ್ವರೂಪಾಮ್ ||೩||
(ವಿಷ್ಣೋರ್ಮಾಯಾಸ್ವರೂಪಾಂ)ಮಹಾವಿಷ್ಣುವಿನ ಮಾಯಾಸ್ವರೂಪಳಾದ (ತ್ರಿಭುವನಜನನೀಂ)ಮೂರುಲೋಕಗಳಿಗೂ ತಾಯಿಯಾದ (ರಾಜಸಾಂ)ರಜೋಗುಣಪ್ರಕಟಕಳಾದ,(ಲೋಕವಂದ್ಯಾಂ)ಅಖಿಲಲೋಕವಂದಿತಳಾದ,(ರತ್ನಪ್ರಾಯಾಂ)ಹರಳುಗಳಲ್ಲಿ ಶ್ರೇಷ್ಠವಾದ ರತ್ನದಂತೆ, ದೇವಾನುದೇವತೆಗಳಲ್ಲಿ ಪರಮಶ್ರೇಷ್ಠಳಾದ,(ಗುಣಾಢ್ಯಾಮ್)ತನ್ನ ಲೋಕಲ್ಯಾಣಕಾರಕ,ಜನಹಿತಕಾರಕಗುಣಗಳಲ್ಲಿ ಆಢ್ಯಳಾದ,(ಅಗಣಿತಮಹಿಮಾಂ)ಗಣನೆಗೆ/ಲೆಕ್ಕಕ್ಕೆ ಸಿಗದಷ್ಟು ಮಹಿಮೆಗಳುಳ್ಳ, (ಮಾಧವಾಂ)ಮಾಧವನ ಭಾರ್ಯೆಯಾದ, (ಪದ್ಮಸಂಸ್ಥಾಮ್)ಕಮಲದಲ್ಲಿ ಸಂಸ್ಥಿತಳಾದ, (ಸಂಪದ್ರೂಪಾಂ)ಐಶ್ವರ್ಯಸ್ವರೂಪಳೂ, ಸಂಪತ್ಪ್ರದಾಯಕಳೂ ಆದ,(ವಿಶೇಷಾಂ)ವಿಶೇಷವಾಗಿ ಶೇಷತಲ್ಪದಲ್ಲೊರಗಿದ ಆದಿನಾರಾಯಣನ ಹೃತ್ಕಮಲವಾಸಿನಿಯಾದ, (ಜಲಧಿಮಥನಜಾಂ)ಕ್ಷೀರಸಾಗರಮಥನೋದ್ಭವೆಯಾದ, (ಚಂದ್ರಮಾಸೋದರೀಂ)ಅಮೃತ ಹಾಗೂ ಸ್ವರ್ಗಲೋಕದ ಸಕಲ ಸುವಸ್ತುಗಳಿಗಾಗಿ ಸುರಾಸುರರು ಮಂದರಪರ್ವತವನ್ನೇ ಕಡೆಗೋಲಾಗಿಯೂ,ಮಹಾವಿಷ್ಣುವಿನ ಕೂರ್ಮಾವತಾರವನ್ನೇ ಅದಕ್ಕೆ ಆಧಾರವಾಗಿಯೂ, ವಾಸುಕಿಯನ್ನೇ ಹಗ್ಗವಾಗಿಯೂ ಮಾಡಿಕೊಂಡು ನಡೆಸಿದ, ಮೊದಲು ಹುಟ್ಟಿದ ಕಾಲಕೂಟವೆಂಬ ಜಗನ್ನಾಶಕಾರಿಯಾದ ಭಯಂಕರ ವಿಷವನ್ನು ಕುಡಿದು ಶಿವನು ಲೋಕವುಳಿಸಿ ನಂಜುಂಡೇಶ್ವರನೂ ನೀಲಕಂಠನೂ ಗರಳಕಂಠನೂ ಎನಿಸಿದಂಥ ಸಮುದ್ರಮಥನದಿಂದ ಚಂದಿರನ ನಂತರ ಹುಟ್ಟಿದವಳಾದ, (ದೇವಾಸುರೇಡ್ಯಾಂ)ದೇವತೆಗಳಿಂದಲೂ, ರಾಕ್ಷಸರಿಂದಲೂ ಸ್ತುತಿಸಲ್ಪಡುವ,(ಋಷಿಕುಲವಿನುತಾಂ)ಋಷಿಮುನಿಗಳಿಂದಲೂ ವಿಶೇಷವಾಗಿ ನುತಿಗೈಯಲ್ಪಡುವ, (ಅಷ್ಟಲಕ್ಷ್ಮೀಸ್ವರೂಪಾಂ)ಆದಿಲಕ್ಷ್ಮಿ, ಧಾನ್ಯಲಕ್ಷ್ಮಿ, ಧೈರ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾಲಕ್ಷ್ಮಿ ಹಾಗೂ ಧನಲಕ್ಷ್ಮಿ- ಎಂಬ ೮ ರೂಪಗಳಿಂದ ಅಷ್ಟಲಕ್ಷ್ಮೀಸ್ವರೂಪಳಾದ,(ತಾಂ) ಆ ಮಹಾಲಕ್ಷ್ಮಿಯನ್ನು (ವನ್ದೇ) ವಂದಿಸುತ್ತೇನೆ.
ವಂದೇ ಕಾಳೀಂ ತಮೋಪೇತಗುಣಮಯಪರಾಂ ಯೋಗನಿದ್ರಾಸ್ವರೂಪಾಂ |
ದುರ್ಗಾಮೀಶಾಂ ಭವಾನೀಂ ವಿಧಿವರವಿನುತಾಂ ಚಂಡಿಕಾಸಪ್ತಶತ್ಯಾಮ್ ||
ಮಾರ್ಕಂಡೇಯಸ್ತುತಾಂ ರಾಜಸುರಥವರದಾಂ ಮೋಕ್ಷದಾಂ ವೈಶ್ಯಪೂಜ್ಯಾಂ |
ಶಕ್ತಿಂ ಮುಕ್ತಿಂ ಪ್ರದಾತ್ರೀಮಜಹರಿವರದಾಂ ಮಧ್ವರೀಂ ಕೈಟಭಾಂತ್ಯಾಮ್ ||೪||
(ತಮೋಪೇತಗುಣಮಯಪರಾಂ) ಸಕಲಸೃಷ್ಟಿಯ ಮತ್ತು ಅದರ ಜಾಗ್ರತ್ (ಎಚ್ಚರದ) (ಜಾಗ್ರತ್-ಸ್ವಪ್ನ-ಸುಷುಪ್ತಿ, ಇವು ಅವಸ್ಥಾತ್ರಯಗಳು; ಎಚ್ಚರ-ಕನಸು-ಗಾಢನಿದ್ದೆ ಎಂಬುದಾಗಿ. ಈ ಮೂರೂ ಅವಸ್ಥೆಗಳನ್ನೂ ಮೀರಿದ್ದು ತುರೀಯ/ಚತುರ್ಥ/ನಾಲ್ಕನೆಯದಾದ ಸಮಾಧಿಸ್ಥಿತಿ, ಅಷ್ಟಾಂಗಯೋಗದಲ್ಲಿ ಶೇಷಾವತಾರಿ ಮಹರ್ಷಿ ಪತಂಜಲಿಗಳು ಹೇಳಿದ ಯೋಗದ ೮ ಅಂಗಗಳಲ್ಲಿ ಅಂತಿಮವಾದದ್ದು.) ಅವಸ್ಥೆಯ ಸಂಹಾರಕ/ಲಯಕಾರಕವೂ ಆದ ಸರ್ವಾರೋಗ್ಯಕರವೂ, ವಿಶ್ರಾಂತಿಪ್ರದವೂ ಆದ ನಿದ್ರೆಯನ್ನುಂಟುಮಾಡುವ ಸತ್ತ್ವ-ರಜ-ತಮಗಳೆಂಬ ತ್ರಿಗುಣಗಳಲ್ಲಿ ಮೂರನೆಯದಾದ ತಮೋಗುಣದ ಪ್ರಧಾನಾಭಿವ್ಯಕ್ತಸ್ವರೂಪಳಾದ, (ಕಾಳೀಂ) ಕಪ್ಪು ಮೈಬಣ್ಣವುಳ್ಳವಳೂ ಕಾಳೀ ಎಂದು ಕರೆಯಲ್ಪಡುವವಳೂ ಆದ, (ಯೋಗನಿದ್ರಾಸ್ವರೂಪಾಂ) ಯೋಗನಿದ್ರಾದೇವಿಯೆನಿಸಿರುವ, (ದುರ್ಗಾಮ್) ದುರ್ಗತಿಯನ್ನೂ, ಕಷ್ಟಗಳನ್ನೂ ದೂರಮಾಡುವ, ದುರ್ಗಾಸುರನನ್ನು ಸಂಹರಿಸಿದವಳೂ ಆದ, (ಭವಾನೀಂ) ಭವ/ಸಂಸಾರಕ್ಕೆ,(ಮಾನಸಸೃಷ್ಟಿಗೆ ಪರ್ಯಾಯವಾಗಿ) ಮೈಥುನಸೃಷ್ಟಿಗೆ ಕಾರಣನಾದ ಶಿವನ ಪತ್ನಿಯಾದ, (ವಿಧಿವರವಿನುತಾಂ) ಜೀವಿಗಳ ವಿಧಿಲೇಖಕನಾದ ಚತುರ್ಮುಖಬ್ರಹ್ಮನಿಂದ ಚೆನ್ನಾಗಿ ಸ್ತುತಿಸಲ್ಪಡುವ, (ಈಶಾಂ) ಸಕಲಲೋಕದೊಡತಿಯಾದ, (ಚಂಡಿಕಾಸಪ್ತಶತ್ಯಾಮ್) ಮಾರ್ಕಂಡೇಯಪುರಾಣಾಂತರ್ಗತ ದುರ್ಗಾಸಪ್ತಶತಿಯಲ್ಲಿ, (ಮಾರ್ಕಂಡೇಯಸ್ತುತಾಂ) ಮೃಕಂಡುಮುನಿಗಳ ಮಗನಾದ ಮಾರ್ಕಂಡೇಯಮಹರ್ಷಿಗಳಿಂದ ಸ್ತುತಿಸಲ್ಪಟ್ಟ, (ರಾಜಸುರಥವರದಾಂ) ರಾಜ್ಯಭ್ರಷ್ಟನಾಗಿದ್ದ ಸುರಥನೆಂಬ ರಾಜನು ಸುಮೇಧಾ ಮಹರ್ಷಿಗಳ ಪ್ರೇರಣೆಯಿಂದ ಮಾಡಿದ ತಪಸ್ಸಿಗೆ ಮೆಚ್ಚಿ ಮನುಪದವಿಯ ವರವನ್ನು ಪ್ರದಾನಮಾಡಿದ, (ವೈಶ್ಯಪೂಜ್ಯಾಂ) ಕುಟುಂಬಭ್ರಷ್ಟನಾಗಿ ಕಾಡುಮೇಡುಗಳಲ್ಲಿ ದಿಙ್ಮೂಢನಾಗಿ ಅಲೆದಾಡುತ್ತಿದ್ದ ಸಮಾಧಿಯೆಂಬ ವೈಶ್ಯನು ಸುಮೇಧಾ ಮಹರ್ಷಿಗಳ ಪ್ರೇರಣೆಯಿಂದ ದೇವಿಯ ಕುರಿತು ತಪಗೈಯಲು, (ಮೋಕ್ಷದಾಂ) ಅವನ ಇಚ್ಛೆಯಂತೆ ಮೋಕ್ಷವಿತ್ತ, (ಮಧ್ವರೀಂ ಕೈಟಭಾಂತ್ಯಾಮ್) ಮಹಾವಿಷ್ಣುವಿನ ಕರ್ಣಕಿಲ್ಬಿಷದಿಂದ ಹುಟ್ಟಿದ ಮಧು-ಕೈಟಭರೆಂಬ ದುಷ್ಟರು ಲೋಕಕಂಟಕರಾಗಿ ಸೃಷ್ಟಿಕರ್ತಬ್ರಹ್ಮನನ್ನೇ ಪೀಡಿಸತೊಡಗಿದಾಗ, ಯೋಗಮಾಯೆಯಾಗಿ ಹರಿಗೆ ಪ್ರೇರಣೆನೀಡಿ ಅವರ ಅಂತ್ಯಕ್ಕೆ ಕಾರಣಳಾದ, (ಶಕ್ತಿಂ ಮುಕ್ತಿಂ ಪ್ರದಾತ್ರೀಮ್) ಶಕ್ತಿ-ಮುಕ್ತಿಗಳನ್ನು ದಯಪಾಲಿಸುವ, (ಅಜಹರಿವರದಾಂ) ಬ್ರಹ್ಮ-ವಿಷ್ಣುಗಳಿಗೆ ಸೃಷ್ಟಿ-ಸ್ಥಿತಿಶಕ್ತಿಗಳನ್ನು ಅನುಕ್ರಮವಾಗಿ ಅನುಗ್ರಹಿಸಿದ ಕಾಳಿರೂಪೆಯಾದ ಆದಿಮಾಯೆಯನ್ನು (ವಂದೇ) ವಂದಿಸುತ್ತೇನೆ.
ವಂದೇ ಮೂಕಾಂಬಿಕಾಖ್ಯಾಮನುಪಮವಸನಾಂ ಮೂರ್ತಿವಂಶಪ್ರದೀಪಾಂ |
ಸ್ವರ್ಣರೇಖಾವಿಭೂಷಾಂ ವರಯತಿವಿನುತಾಂ ಶಂಕರಾಚಾರ್ಯದೃಷ್ಟಾಮ್ ||
ವಂದೇ ದೇವೀಂ ಸುರೇಡ್ಯಾಮಸುರಕುಲಗತಿಂ ನಿತ್ಯಕೊಲ್ಲೂರುವಾಸಾಂ |
ಸೇವೇ ಬ್ರಹ್ಮಾಂಡಲೀಲಾಂ ಶಿವಕೃತಸುಚಲಾಂ ಸುಂದರೀಂ ಪರ್ಣತೀರ್ಥಾಮ್ ||೫||
(ಮೂಕಾಂಬಿಕಾಖ್ಯಾಮ್) ಮೂಕಾಸುರನೆಂಬ ದುಷ್ಟನನ್ನು ಸಂಹರಿಸಿ ಮೂಕಾಂಬಿಕೆಯೆಂಬ ಹೆಸರಿನವಳಾದ, (ಅನುಪಮವಸನಾಂ) ಬೇರೆ ಉಪಮೆಯೇ ಇಲ್ಲದಂಥ ವಸ್ತ್ರಾಭರಣಗಳಿಂದ ಅತಿಶಯವಾಗಿ ಅಲಂಕೃತಳಾದ, (ಮೂರ್ತಿವಂಶಪ್ರದೀಪಾಂ) “ಮೂರ್ತಿ”ಮನೆತನದವರಿಂದ ತಲೆತಲಾಂತರದಿಂದ ನಿತ್ಯವೂ ಅಲಂಕೃತಳಾಗಿ ಉತ್ಸವಮೂರ್ತಿರೂಪದಲ್ಲಿ ಶಿರೋಧಾರ್ಯಳಾಗಿದ್ದು ಆ ವಂಶಕ್ಕೇ ದಾರಿದೀಪವಾಗಿರುವ ದೇವಿಯನ್ನು (ವಂದೇ) ವಂದಿಸುತ್ತೇನೆ. (ಸ್ವರ್ಣರೇಖಾವಿಭೂಷಾಂ) ಶಿಲಾಲಿಂಗ/ವಿಗ್ರಹದಲ್ಲಿ ಸಣ್ಣ ಬಲ/ಶಿವಭಾಗವನ್ನೂ ದೊಡ್ಡ ಎಡ/ಶಕ್ತಿಭಾಗವನ್ನೂ ಪ್ರತ್ಯೇಕಿಸುವ ಸ್ವರ್ಣರೇಖಾಂಕಿತೆಯಾದ(ಲಿಂಗದಲ್ಲಿ ವಿಭಾಜಕರೇಖೆಯ ಬಲಭಾಗ ಹೆಚ್ಚಿದ್ದರೆ ಅದು ಶಿವಲಿಂಗ; ಎಡಭಾಗ ಹೆಚ್ಚಿದ್ದರೆ ದೇವೀವಿಗ್ರಹ), (ವರಯತಿವಿನುತಾಂ) ಯತಿಶ್ರೇಷ್ಠರಾದ ಗೋಕರ್ಣಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳಿಂದ ವಿಶೇಷಪೂಜೆಗೊಳ್ಳುವ, (ಶಂಕರಾಚಾರ್ಯದೃಷ್ಟಾಮ್) ಆದಿಶಂಕರಭಗವತ್ಪಾದರಿಂದ ಕೊಡಚಾದ್ರಿಗಿರಿಯಲ್ಲಿ ತಪೋದ್ವಾರಾ ಪ್ರತ್ಯಕ್ಷೀಕರಿಸಲ್ಪಟ್ಟು, ಅದರ ತಪ್ಪಲಲ್ಲೇ ಪ್ರತಿಷ್ಠಾಪಿಸಲ್ಪಟ್ಟ, (ದೇವೀಂ ವಂದೇ) ಜಗನ್ಮಾತೆಯನ್ನು ನಮಸ್ಕರಿಸುತ್ತೇನೆ. (ಸುರೇಡ್ಯಾಮ್) ದೇವಾನುದೇವತೆಗಳಿಂದ ಸ್ತುತಿಸಲ್ಪಡುವ, (ಅಸುರಕುಲಗತಿಂ) ರಾಕ್ಷಸಾದಿಗಳಿಗೂ ಪರಾಗತಿಪ್ರದಳಾದ, (ಸುಂದರೀಂ) ತ್ರಿಪುರಸುಂದರಿಯೆನಿಸಿದ, (ಶಿವಕೃತಸುಚಲಾಂ) ಸ್ಥಾಣು/ಜಡವಾಗಿರುವ ಪರಶಿವನನ್ನೂ ಚಲನಶೀಲನನ್ನಾಗಿಸುವ ಚೈತನ್ಯ/ಶಕ್ತಿಸ್ವರೂಪಿಣಿಯಾದ, (ಬ್ರಹ್ಮಾಂಡಲೀಲಾಂ) ತನ್ಮೂಲಕ ಅಖಿಲ ಬ್ರಹ್ಮಾಂಡದಲ್ಲಿ ತನ್ನ ಲೀಲೆಯನ್ನು ತೋರುವ, (ಪರ್ಣತೀರ್ಥಾಮ್) ಸೌಪರ್ಣಿಕಾನದೀತೀರದಲ್ಲಿರುವ (ನಿತ್ಯಕೊಲ್ಲೂರುವಾಸಾಂ) ಕೊಲ್ಲೂರುಕ್ಷೇತ್ರದಲ್ಲಿ ಸದಾ ಸಾನ್ನಿಧ್ಯ ಹೊಂದಿರುವ ಜಗನ್ಮಾತೆಯನ್ನು, (ಸೇವೇ) ಭಕ್ತಿ-ಶ್ರದ್ಧೆಗಳಿಂದ ಸೇವೆಮಾಡುತ್ತೇನೆ.
ಶುಂಭಾಂತ್ಯಾಂ ತಾಂ ನಿಶುಂಭಾದ್ಯಸುರತತಿಗತಿಂ ಚಂಡಕೋದಂಡಹಸ್ತಾಂ |
ಧೂಮ್ರಾರಿಂ ರಕ್ತಬೀಜಪ್ರಮುಖಮಹಿಷಹಾಂ ದುಷ್ಟಹಾಂ ಶಿಷ್ಟರಕ್ಷಾಮ್ ||
ವಂದೇ ದೇವೀಂ ಪ್ರಸನ್ನಾsವತು ಸಕಲಚರಾನ್ನಿಶ್ಚರಾನ್ ಲೋಕಪೂಜ್ಯಾ |
ಘೋರಂ ರೂಪಂ ತ್ಯಕ್ತ್ವಾsವತು ವರವರದಾ ಶಾಂತಿದಾ ಶಾಂತರೂಪಾ ||೬||
(ಶುಂಭಾಂತ್ಯಾಂ) ಶುಂಭಾಸುರಮರ್ದಿನಿಯಾದ, (ನಿಶುಂಭಾದಿ-ಅಸುರ-ತತಿ-ಗತಿಂ) ನಿಶುಂಭಾದಿ ಅಸುರರ ಸಮೂಹಕ್ಕೇ ಅಂತ್ಯಗಾಣಿಸಿದ, (ಚಂಡಕೋದಂಡಹಸ್ತಾಂ) ಪ್ರಚಂಡವಾದ ಕೋದಂಡಧನುವನ್ನು ಕೈಯಲ್ಲಿ ಧರಿಸಿದ, (ಧೂಮ್ರಾರಿಂ ರಕ್ತಬೀಜಪ್ರಮುಖಮಹಿಷಹಾಂ ದುಷ್ಟಹಾಂ) ಧೂಮ್ರಾಕ್ಷ, ರಕ್ತಬೀಜ, ಮಹಿಷಾಸುರ ಮೊದಲಾದ ದುಷ್ಟರನ್ನು ಸಂಹರಿಸಿ, (ಶಿಷ್ಟರಕ್ಷಾಂ) ಶಿಷ್ಟರನ್ನು ರಕ್ಷಿಸುವ (ದೇವೀಂ ವಂದೇ) ದೇವಿಯನ್ನು ವಂದಿಸುತ್ತೇನೆ. (ಪ್ರಸನ್ನಾ) ನಮ್ಮ ಪ್ರಾರ್ಥನೆಗೆ ಪ್ರಸನ್ನಳಾದ, (ಲೋಕಪೂಜ್ಯಾ) ಲೋಕಪೂಜ್ಯಳಾದ ಜಗನ್ಮಾತೆಯು, (ಸಕಲಚರಾನ್ ನಿಶ್ಚರಾನ್ ಅವತು) ಸಕಲ ಚರಾಚರಗಳನ್ನೂ ರಕ್ಷಿಸಲಿ. (ಘೋರಂ ರೂಪಂ ತ್ಯಕ್ತ್ವಾ) ಉಗ್ರರೂಪವನ್ನು ತೊರೆದು, (ವರವರದಾ) ಶ್ರೇಷ್ಠವರಪ್ರದಳೂ, (ಶಾಂತಿದಾ) ಶಾಂತಿದಾಯಕಳೂ, (ಶಾಂತರೂಪಾ) ಶಾಂತರೂಪೆಯೂ ಆಗಿ, (ಅವತು) ನಮ್ಮನ್ನು ರಕ್ಷಿಸಲಿ.
ವಂದೇ ಲಕ್ಷ್ಮೀಂ ಯತೀಡ್ಯಾಂ ಸಕಲದುರಿತಹಾಂ ಮಾಣಿಲೇ ಲೋಕಪೂಜ್ಯಾಂ |
ಚಂದ್ರಾಭಾಂ ಮೋಹನೇಡ್ಯಾಂ ವರಗುರುವಿನುತಾಮನ್ನಪೂರ್ಣಾಸಮೇತಾಮ್ ||
ಶ್ರೀಧಾಮೇ ನಿತ್ಯಪೂಜ್ಯಾಂ ನಿಖಿಲವಿಭವದಾಂ ಭಕ್ತಿಮುಕ್ತಿಪ್ರದಾಂ ತಾಂ |
ನಿತ್ಯಾನಂದಾಂ ಭಜೇsಹಂ ಸಕಲಜನನುತಾಂ ಸರ್ವದಾಮಾಶ್ರಿತೇಭ್ಯಃ ||೭||
(ಮಾಣಿಲೇ ಶ್ರೀಧಾಮೇ) ಮಾಣಿಲದ ಶ್ರೀಧಾಮಕ್ಷೇತ್ರದಲ್ಲಿ, (ಯತೀಡ್ಸಾಂ ಮೋಹನೇಡ್ಯಾಂ ನಿತ್ಯಪೂಜ್ಯಾಮ್ ಅನ್ನಪೂರ್ಣಾಸಮೇತಾಂ) ಯತಿಗಳಾದ ಶ್ರೀಶ್ರೀ ಮೋಹನದಾಸಸ್ವಾಮೀಜಿಯವರಿಂದ ನಿತ್ಯವೂ ಅನ್ನಪೂರ್ಣೇಶ್ವರೀಸಮೇತಳಾಗಿ ಪೂಜಿಸಲ್ಪಡುವ, (ಸಕಲದುರಿತಹಾಂ) ಸಕಲಪಾಪನಿವಾರಕಳೂ, (ಲೋಕಪೂಜ್ಯಾಂ) ಲೋಕಪೂಜ್ಯಳೂ, (ಚಂದ್ರಾಭಾಂ) ಚಂದ್ರಕಾಂತಿಯಂತೆ ಬೆಳಗುವವಳೂ, (ವರಗುರುವಿನುತಾಂ) ಸದ್ಗುರು ನಿತ್ಯಾನಂದರಿಂದ ಸ್ತುತಿಸಲ್ಪಡುವವಳೂ, (ನಿಖಿಲವಿಭವದಾಂ) ಸಕಲ ಸಂಪತ್ತು-ವೈಭವಗಳನ್ನೂ ಕೊಡುವವಳೂ ಆದ, (ಭಕ್ತಿ-ಮುಕ್ತಿಪ್ರದಾಂ) ಭಕ್ತಿ-ಮುಕ್ತಿಪ್ರದಾತೆಯೂ, (ನಿತ್ಯಾನಂದಾಂ) ನಿತ್ಯಾನಂದಸ್ವರೂಪೆಯೂ, (ಆಶ್ರೀತೇಭ್ಯಃ) ತನ್ನನ್ನಾಶ್ರಯಿಸಿದವರಿಗೆ, (ಸರ್ವ-ದಾಂ) ಎಲ್ಲವನ್ನೂ ಕೊಡುವವಳೂ, (ಸಕಲಜನ-ನುತಾಂ) ಎಲ್ಲರಿಂದ ಸ್ತುತಿಸಲ್ಪಡುವವಳೂ ಆದ, (ಲಕ್ಷ್ಮೀಂ ವಂದೇ) ಮಹಾಲಕ್ಷ್ಮಿಯನ್ನು ನಾನು ಭಜಿಸುತ್ತೇನೆ.
ವಂದೇ ದೇವೀಂ ಪುರಾಣಾಂ ಪುಣಚಪುರಹಿತಾಂ ಕೃಷ್ಣಪೂಜ್ಯಾಂ ಜನೇಡ್ಯಾಂ |
ಸೂರ್ಯಾಭಾಂ ತಾಂ ತ್ರಿಣೇತ್ರಾಂ ಹರಿಹರಸಹಿತಾಮನ್ನಪೂರ್ಣಾಸಮೇತಾಮ್ ||
ಲಕ್ಷ್ಮೀರೂಪಾಂ ದಯಾರ್ದ್ರಾಮಸುರಮಹಿಷಹಾಂ ಸಿಂಹವಾಹಸ್ವರೂಪಾಂ |
ಹೇ ಮಾತಸ್ತ್ವಾಂ ಭವಾನೀಂ ಗಜಮುಖಸಹಿತಾಂ ಬ್ರಹ್ಮವಂದ್ಯಾಂ ಸುರೇಡ್ಯಾಮ್ ||೮||
(ಹೇ ಮಾತಃ!) ಹೇ ತಾಯೇ! (ಪುರಾಣಾಂ ದೇವೀಂ) ಅನಾದಿಮಾಯೆಯಾದ, (ಪುಣಚಪುರಹಿತಾಂ) ಪುಣಚಪುರದ ಹಿತವನ್ನು ಕಾಯುವ ಗ್ರಾಮದೇವತೆಯಾದ, (ಕೃಷ್ಣಪೂಜ್ಯಾಂ) ಪ್ರಸ್ತುತ ಶ್ರೀಯುತ ಕೃಷ್ಣಬನ್ನಿಂತಾಯರಿಂದ ಪೂಜಿಸಲ್ಪಡುತ್ತಿರುವ, (ಜನೇಡ್ಯಾಂ) ಸಕಲಜನಪೂಜ್ಯಳಾದ, (ಸೂರ್ಯಾಭಾಂ) ಸೂರ್ಯನಂತೆ ಬೆಳಗುವ, (ತ್ರಿಣೇತ್ರಾಂ) ಮುಕ್ಕಣ್ಣೆಯಾದ, (ಗಜಮುಖಸಹಿತಾಂ) ಗಣೇಶ, (ಹರಿಹರಸಹಿತಾಂ) ಹರಿಹರ, (ಅನ್ನಪೂರ್ಣಾಸಮೇತಾಂ) ಅನ್ನಪೂರ್ಣೆ, ಭೂತಗಣಗಳ ಸಹಿತಳಾದ, (ಲಕ್ಷ್ಮೀರೂಪಾಂ) ಸಾಕ್ಷಾತ್ ಮಹಾಲಕ್ಷ್ಮೀಸ್ವರೂಪೆಯಾದ, (ದಯಾರ್ದ್ರಾಂ) ಸಜ್ಜನರ ಬಗ್ಗೆ ದಯಾರ್ದ್ರಳಾದ, (ಅಸುರಮಹಿಷಹಾಂ) ಮಹಿಷಾಸುರನಂಥ ದುಷ್ಟರನ್ನು ಸಂಹರಿಸಿದ, (ಸಿಂಹವಾಹಸ್ವರೂಪಾಂ) ಸಿಂಹವಾಹನೆಯಾದ, (ಬ್ರಹ್ಮವಂದ್ಯಾಂ) ಬ್ರಹ್ಮನಿಂದ ವಂದ್ಯಳಾದ, (ಸುರೇಡ್ಯಾಂ) ಸುರರಿಂದ ಸ್ತುತಿಸಲ್ಪಡುವ, (ಭವಾನೀಂ) ಭವನ ಪತ್ನಿಯಾಗಿ ಭವಾನಿಯೂ ಎನಿಸಿರುವ, (ತ್ವಾಂ) ನಿನ್ನನ್ನು, (ವಂದೇ) ವಂದಿಸುತ್ತೇನೆ.
ವಂದೇ ದುರ್ಗಾಂ ಸುತನ್ವೀಮಭಯವರಕರಾಂ ಶ್ರೀಕಟೀಲೇ ಸುವಾಸಾಂ |
ಅಸ್ರಣ್ಣೈರ್ನಿತ್ಯಸೇವ್ಯಾಮರುಣಭಯಹರಾಂ ಭ್ರಾಮರೀಮಾದಿಶಕ್ತಿಮ್ ||
ಜಾಯಾಮೀಶಾಂ ಪುರಾರೇರ್ಭವದುರಿತಹರಾಂ ಲೋಕವಂದ್ಯಾಂ ಸುರೇಡ್ಯಾಂ |
ಸೇವೇ ತಾಮನ್ನಪೂರ್ಣಾಂ ಘನಮಹಿಮಯುತಾಂ ಕೊಡ್ಯಪುರ್ಯಾಂ ಸುಪೂಜ್ಯಾಮ್ ||೯||
(ಸುತನ್ವೀಂ) ಸುಂದರವಾದ ದಿವ್ಯದೇಹವುಳ್ಳ, (ಅಭಯವರಕರಾಂ) ಅಭಯಪ್ರದ ವರದ ಹಸ್ತಮುದ್ರಾಂಕಿತೆಯಾದ, (ಶ್ರೀಕಟೀಲೇ ಸುವಾಸಾಂ) ಶ್ರೀಕಟೀಲು ಕ್ಷೇತ್ರದಲ್ಲಿ ಸುಸ್ಥಿರ ಸಾನ್ನಿಧ್ಯವನ್ನು ಹೊಂದಿರುವ, (ಅಸ್ರಣ್ಣೈಃ ನಿತ್ಯಸೇವ್ಯಾಂ) ಆನುವಂಶಿಕ ಮೊಕ್ತೇಸರರೂ ಧರ್ಮದರ್ಶಿಗಳೂ ಅರ್ಚಕರೂ ಆದ ಅಸ್ರಣ್ಣ ಮನೆತನದವರಿಂದ ನಿತ್ಯವೂ ಸೇವೆಗೊಳ್ಳುತ್ತಿರುವ, (ಅರುಣಭಯಹರಾಂ) ಅರುಣಾಸುರನಿಂದ ಲೋಕಕ್ಕಾದ ಭಯವನ್ನು ಇಲ್ಲವಾಗಿಸಿದವಳಾದ, (ಭ್ರಾಮರೀಮ್) ಅನಂತ ಭ್ರಮರಗಳ ರೂಪ ತಾಳಿ ಅರುಣಾಸುರನನ್ನು ನಿಗ್ರಹಿಸಿ ಭ್ರಾಮರೀ / ಭ್ರಮರಾಂಬೆಯೆನಿಸಿದ, (ಆದಿಶಕ್ತಿಮ್) ಆದಿಶಕ್ತಿಯ, ಆದಿಮಾಯೆಯ, ಜಗಜ್ಜನನಿಯ ಅವತಾರವಾದ, (ದುರ್ಗಾಂ) ಭಕ್ತರ ಸಕಲ ದುರ್ಗ ಸಂಕಟ ದುರಿತ ಕಷ್ಟ ಕೋಟಲೆ ದುರ್ಗತಿಗಳನ್ನು ನಿವಾರಿಸಿ ದುರ್ಗೆಯೆನಿಸಿದ, ಸಕಲಲೋಕಾಧಿನಾಯಕಿಯಾಗಿ ಪರಮೇಶ್ವರಿಯೆನಿಸಿದ ದುರ್ಗಾಪರಮೇಶ್ವರೀದೇವಿಯನ್ನು, (ವನ್ದೇ) ವಂದಿಸುತ್ತೇನೆ. (ಪುರಾರೇಃ ಜಾಯಾಂ) ತ್ರಿಪುರಾಸುರಸಂಹಾರಿಯಾಗಿ ತ್ರಿಪುರಾರಿಯೆನಿಸಿದ ಪರಮೇಶ್ವರನ ಪತ್ನಿಯಾದ, (ಈಶಾಂ) ಲೋಕದ ಈಶ್ವರಿಯಾದ / ಒಡತಿಯಾದ, (ಭವದುರಿತಹರಾಂ) ಸಂಸಾರತಾಪತ್ರಯವನ್ನು ಹೋಗಲಾಡಿಸುವವಳಾದ, (ಲೋಕವಂದ್ಯಾಂ) ಸಕಲಲೋಕವಂದಿತೆಯಾದ, (ಸುರೇಡ್ಯಾಂ) ದೇವಾನುದೇವತೆಗಳಿಂದಲೂ ಸ್ತುತಿಸಲ್ಪಡುವ (ಸುರ + ಈಡ್ಯಾ /ಸ್ತುತ್ಯಾ = ಸುರೇಡ್ಯಾ, ತಾಮ್—ಅವಳನ್ನು), (ಕೊಡ್ಯಪುರ್ಯಾಂ ಸುಪೂಜ್ಯಾಂ) ಮೂಡಬಿದಿರೆ ಸಮೀಪದ ಕೊಡ್ಯಪುರಿ / ಕೊಡ್ಯಡ್ಕದಲ್ಲಿ ವಿಧಿವತ್ತಾಗಿ ಪೂಜಿಸಲ್ಪಡುವ, (ಘನಮಹಿಮಯುತಾಂ) ಅತ್ಯಂತ ಕಾರಣಿಕವುಳ್ಳವಳಾದ, (ತಾಮ್) ಅಂತಹ ಆದಿಶಕ್ತಿಯ ಇನ್ನೊಂದು ರೂಪವಾದ, (ಅನ್ನಪೂರ್ಣಾಂ) ಶಿವನಿಗೆ ಬ್ರಹ್ಮಕಪಾಲವು ಅಂಟಿಕೊಂಡಾಗ ಅನ್ನಭಿಕ್ಷೆಯನ್ನಿತ್ತ, ನಮ್ಮೆಲ್ಲರಿಗೂ ಅನ್ನಪ್ರದಳಾದ ಅನ್ನಪೂರ್ಣೇಶ್ವರೀದೇವಿಯನ್ನು, (ಸೇವೇ) ಸೇವೆಮಾಡುತ್ತೇನೆ.
ಶ್ರೀದೇವೀಸ್ರಗ್ಧರಾಸ್ತೋತ್ರ | ರತ್ನಂ ನವಕಸಂಯುತಮ್ ||
ಸುಭಕ್ತ್ಯಾ ಯ: ಪಠೇನ್ನಿತ್ಯಂ | ಸರ್ವವಾಂಛಿತಮಾಪ್ನುಯಾತ್ ||೧೦||
(ಯಃ) ಯಾವನು, (ನಿತ್ಯಂ) ಪ್ರತಿದಿನವೂ, (ನವಕಸಂಯುತಂ ಶ್ರೀದೇವೀಸ್ರಗ್ಧರಾಸ್ತೋತ್ರರತ್ನಂ) ಸ್ರಗ್ಧರಾವೃತ್ತದಲ್ಲಿರುವ ೯ ಶ್ಲೋಕಗಳೆಂಬ ನವರತ್ನಪೂರ್ಣವಾದ ಈ "ಶ್ರೀದೇವೀಸ್ರಗ್ಧರಾನವಕಸ್ತೋತ್ರರತ್ನಮ್" ಅನ್ನು, (ಸುಭಕ್ತ್ಯಾ ಪಠೇತ್) ಅತ್ಯಂತ ಭಕ್ತಿಯಿಂದ ಪಠಿಸುತ್ತಾನೋ ಅಂಥವನು, (ಸರ್ವವಾಂಛಿತಮ್ ಆಪ್ನುಯಾತ್) ತನ್ನೆಲ್ಲ ಇಷ್ಟಾರ್ಥಗಳನ್ನು ಹೊಂದುವನು.
||ಶ್ರೀ ದೇವ್ಯೈ ಮಹಿಷಮರ್ದಿನ್ಯೈ ನಮ:||
ಶ್ರೀಗುರುವಾಯುಪುರಾಧೀಶಸ್ತೋತ್ರಮ್
(ಅನುಷ್ಟುಭ್-ವೃತ್ತಮ್)
ಗುರುವಾಯುಪುರಾಧೀಶಂ ಕೃಷ್ಣಂ ಸಂಕಷ್ಟನಾಶನಮ್ |
ವಂದೇऽಹಂ ಪರಯಾ ಪ್ರೇಮ್ಣಾ ಮುಕುಂದಂ ದೇವಕೀಸುತಮ್ ||೧||
ದೇವಕೀಸುತನೂ, ಸಂಕಟಹರಣನೂ, ಮೋಕ್ಷಪ್ರದನೂ ("ಮುಕುಂ ಮೋಕ್ಷಂ ದದಾತೀತಿ ಮುಕುನ್ದಃ") ಆದ ಗುರುವಾಯೂರಪ್ಪ ಶ್ರೀಕೃಷ್ಣನನ್ನು ನಾನು ಪರಮಾದರದಿಂದ ವಂದಿಸುತ್ತೇನೆ.
(ವಸಂತತಿಲಕಾ-ವೃತ್ತಮ್)
ಯೋऽಪಾಕರೋನ್ನರಕಬಂಧಿತನಾರಿಕಷ್ಟಂ
ದುರ್ಯೋಧನಪ್ರಜನಿತಂ ಖಲು ಪಾಂಡವಾನಾಮ್ |
ದುಶ್ಶಾಸನಾಪಹೃತಶಾಟಿಮದಾತ್ಸ್ವಯಂ ವೈ
ತಂ ವಾಸುದೇವಮಮಲಂ ಶರಣಂ ಪ್ರಪದ್ಯೇ ||೨||
ಯಾವನು (ಯಃ), ನರಕಾಸುರನು ಬಂಧನದಲ್ಲಿಟ್ಟಿದ್ದ ನಾರಿಯರ ಕಷ್ಟವನ್ನು (ನರಕ-ಬಂಧಿತ-ನಾರಿ-ಕಷ್ಟಮ್) ದೂರಮಾಡಿದನೋ (ಅಪಾಕರೋತ್), ಅಂತೆಯೇ, ಪಾಂಡವರಿಗೆ (ಪಾಣ್ಡವಾನಾಮ್), ದುರ್ಯೋಧನನಿಂದುಂಟಾದ ಕಷ್ಟವನ್ನೂ ಕೂಡ ಯಾವನು ನಿವಾರಿಸಿದನೋ (ದುರ್ಯೋಧನ-ಪ್ರಜನಿತಂ ಖಲು), ದುಃಶಾಸನನಿಂದ ಸೆಳೆಯಲ್ಪಟ್ಟ ದ್ರೌಪದಿಯ ಸೀರೆಯನ್ನು (ದುಃಶಾಸನಾಪಹೃತ-ಶಾಟಿಮ್), ಯಾವನು ತಾನೇ (ಸ್ವಯಂ ವೈ), ಮತ್ತೆ ಇತ್ತು ಅಕ್ಷಯವಾಗಿಸಿದನೋ (ಅದಾತ್), ಅಂತಹ (ತಮ್), ಅಕಳಂಕನಾದ (ಅಮಲಮ್), ವಾಸುದೇವನನ್ನು (ವಾಸುದೇವಮ್), ಶರಣುಹೊಂದುತ್ತೇನೆ (ಶರಣಂ ಪ್ರಪದ್ಯೇ).
(ಸ್ರಗ್ಧರಾ-ವೃತ್ತಮ್)
ಮತ್ಸ್ಯಂ ಕೂರ್ಮಂ ವರಾಹಂ ನರಹರಿವಟುಕೌ ಭಾರ್ಗವಂ ರಾಮಚಂದ್ರಂ
ಕೃಷ್ಣಂ ಬುದ್ಧಂ ಚ ಕಲ್ಕಿಂ ದಶವಿಧವಪುಷಂ ಮಾಧವಂ ರುಕ್ಮಿಣೀಶಮ್ |
ಶ್ರೀಕೃಷ್ಣಂ ತಂ ವಿಶೇಷಂ ಸಕಲವಿಭವದಂ ಕೇಶವಂ ವಾಸುದೇವಂ
ವಂದೇ ಪೂರ್ಣಾವತಾರಂ ನತಜನವರದಂ ದೇವಕೀಪುತ್ರಮೀಶಮ್ ||೩||
(ಮತ್ಸ್ಯಮ್) ವೇದಚೋರನಾದ ತಮಾಸುರನನ್ನು ಸಂಹರಿಸಿದ ಮೀನಿನ ರೂಪವನ್ನಾಂತ ಮತ್ಸ್ಯಾವತಾರನನ್ನು, (ಕೂರ್ಮಮ್) ದೇವಾಸುರರ ಕ್ಷೀರಸಾಗರಮಥನದಲ್ಲಿ ಮಂದರಗಿರಿಯನ್ನು ಮುಳುಗದಂತೆ ಆಧರಿಸಿದ ಆಮೆಯ ತನುವನ್ನಾಂತ ಕೂರ್ಮಾವತಾರಿಯನ್ನು, (ವರಾಹಮ್) ಆದಿದೈತ್ಯನಾದ ಹಿರಣ್ಯಾಕ್ಷನನ್ನು ಸಂಹರಿಸಿ ಭೂದೇವಿಯನ್ನು ರಕ್ಷಿಸಲು ಹಂದಿಯಾಗಿ ತೋರಿದ ವರಾಹಾವತಾರನನ್ನು, (ನರಹರಿ-ವಟುಕೌ) ಆದಿದೈತ್ಯನೂ, ಹಿರಣ್ಯಾಕ್ಷನ ಅಣ್ಣನೂ ಆದ ಹಿರಣ್ಯಕಶಿಪುವನ್ನು ಸಂಹರಿಸಿ… ಭಕ್ತ ಪ್ರಹ್ಲಾದನನ್ನು ರಕ್ಷಿಸಿದ ನರಸಿಂಹಾವತಾರಿಯನ್ನು, ಬಲಿಯನ್ನು ನಿಗ್ರಹಿಸಿದ ವಟುರೂಪೀ ವಾಮನ-ತ್ರಿವಿಕ್ರಮಾವತಾರಿಯನ್ನು, (ಭಾರ್ಗವಮ್) ಜಮದಗ್ನಿಪುತ್ರನಾಗಿ ದುಷ್ಟಕ್ಷತ್ರಿಯಸಂಹಾರಗೈದ ಆವೇಶಾವತಾರಿ ಪರಶುರಾಮನನ್ನು, (ರಾಮಚನ್ದ್ರಮ್) ದುಷ್ಟ ರಾವಣಾದಿ ಸಂಹಾರಕ್ಕಾಗಿ ರವಿಕುಲದಲ್ಲಿ ದಾಶರಥಿಯಾಗಿ ಅವತರಿಸಿದ ಕೌಸಲ್ಯಾನಂದನ ಶ್ರೀರಾಮಾವತಾರಿಯನ್ನು, (ಕೃಷ್ಣಮ್) ಕಂಸ-ಶಿಶುಪಾಲ-ಕೌರವಾದಿಸಂಹಾರಕ್ಕಾಗಿಯೂ ಧರ್ಮಸ್ಥಾಪನೆಗಾಗಿಯೂ ಯದುಕುಲದಲ್ಲಿ ವಾಸುದೇವನಾಗಿ ದೇವಕೀತನಯನಾದ ಶ್ರೀಕೃಷ್ಣನನ್ನು, (ಬುದ್ಧಮ್) ಅಸುರಮೋಹನಕ್ಕಾಗಿ ಬೌದ್ಧಾವತಾರವನ್ನಾಂತವನನ್ನು, (ಕಲ್ಕಿಮ್ ಚ) ಹಾಗೂ ಕಲಿಯುಗಾಂತ್ಯದಲ್ಲಿ ಧರ್ಮದ ಪುನಃಸ್ಥಾಪನೆಗಾಗಿ ಅವತರಿಸುವ ಕಲ್ಕಿರೂಪನನ್ನು- (ದಶವಿಧ-ವಪುಷಮ್) ಹೀಗೆ ಮುಖ್ಯವಾಗಿ ಹತ್ತು ತೆರನಾದ ರೂಪತಾಳಿದ, (ಮಾ-ಧವಮ್) ಲಕ್ಷ್ಮೀವಲ್ಲಭನಾದ ಮಹಾವಿಷ್ಣುವನ್ನೂ, (ವಿಶೇಷಂ ಪೂರ್ಣಾವತಾರಮ್) ಅದರಲ್ಲೂ ವಿಶೇಷವಾಗಿ ಪರಮಾತ್ಮನ ಪೂರ್ಣಾವತಾರವೆನಿಸಿ, (ನತಜನವರದಂ ಸಕಲವಿಭವದಮ್) ತನ್ನನ್ನು ನಮಿಸುವ ಭಕ್ತರಿಗೆ ಸಕಲವೈಭವವನ್ನೀಯುವಂತಹ, (ದೇವಕೀಪುತ್ರಮ್) ದೇವಕೀಸುತನಾದ, (ರುಕ್ಮಿಣೀಶಮ್) ರುಕ್ಮಿಣೀವಲ್ಲಭನಾದ, (ಕೇ-ಶವಮ್) ಸಾಗರಜಲಶಾಯಿಯಾದ, (ವಾಸುದೇವಂ ತಮ್) ವಸುದೇವಸುತನಾಗಿಯೂ ಸಕಲಭೂತನಿವಾಸನಾಗಿಯೂ ವಾಸುದೇವನೆನಿಸಿದಂತಹ, (ಶ್ರೀಕೃಷ್ಣಮ್) ಗೀತಾಚಾರ್ಯನಾಗಿ ಜಗದ್ಗುರುವೆನಿಸಿದ ಸರ್ವಾಕರ್ಷಕನಾದ ಶ್ರೀಕೃಷ್ಣನನ್ನು, (ವನ್ದೇ) ವಂದಿಸುತ್ತೇನೆ.
ಅನನ್ತಪದ್ಮನಾಭಸ್ತೋತ್ರಮ್
ಅನನ್ತಪದ್ಮನಾಭಂ ತಮ್
ಅನನ್ತವರದಾಯಕಮ್ |
ಅನನ್ತವಿಜಯಂ ವಿಷ್ಣುಂ
ಪದ್ಮಾಪತಿಮ್ ಇಲಾಪತಿಮ್ || ೧ ||
(ಅನ್-ಅಂತ-ವರ-ದಾಯಕಮ್)ಅಂತ್ಯವಿಲ್ಲದಷ್ಟು ವರಗಳನ್ನೀಯುವ, (ಅನಂತ-ವಿಜಯಂ)ಕೊನೆಯಿರದ ವಿಜಯವುಳ್ಳ, (ಪದ್ಮಾಪತಿಮ್)ಪದ್ಮಾ / ಲಕ್ಷ್ಮೀದೇವಿಯ ಪತಿಯಾದ, (ಇಲಾಪತಿಮ್)ಇಲಾ / ಇಳಾ / ಭೂದೇವಿಯ ಪತಿಯಾದ, (ವಿಷ್ಣುಂ—ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ ಇತಿ ವಿಷ್ಣುಃ, ತಮ್)ವಿಶ್ವವ್ಯಾಪಕನೂ ವಿಶ್ವವನ್ನು ಸೃಜಿಸಿ ಅದರೊಳಗೆ ಪ್ರವೇಶಿಸಿದವನೂ ಆಗಿ ವಿಷ್ಣುವೆನಿಸಿದ, (ತಂ)ಆ, (ಅನನ್ತಪದ್ಮನಾಭಮ್)ತಿರುವನಂತಪುರದ ಅನಂತಪದ್ಮನಾಭದೇವರನ್ನು (ನಮಿಸುತ್ತೇನೆ).
ಅನನ್ತಶಯನಂ ವನ್ದೇ
ಮಾಧವಂ ಮಧುಸೂದನಮ್ |
ಅನನ್ತಮಙ್ಗಲಾಕಾರಮ್
ಅನನ್ತಾನನ್ದರೂಪಿಣಮ್ || ೨ ||
(ಮಾಧವಂ)ಮಾ-ಧವ / ಲಕ್ಷ್ಮೀಪತಿಯೂ, (ಮಧುಸೂದನಮ್)ಮಧು-ಸೂದನ / ಮಧುದೈತ್ಯನನ್ನು ಕೊಂದವನೂ, (ಅನಂತಮಂಗಲಾಕಾರಮ್)ಅಂತವಿಲ್ಲದ ಮಂಗಲಸ್ವರೂಪನೂ, (ಅನಂತ-ಆನಂದ-ರೂಪಿಣಮ್)ಎಂದಿಗೂ ಕೊನೆಯಿಲ್ಲದ ಸದಾನಂದಸ್ವರೂಪಿಯೂ ಆದ, (ಅನಂತಶಯನಮ್)ಅನಂತ-ಶಯನ / ಅನಂತನಾದ ಶೇಷನ / ವಾಸುಕಿಯ ಮೇಲೆ ಪವಡಿಸಿದ ಶ್ರೀಮನ್ನಾರಾಯಣನನ್ನು (ವಂದೇ)ವಂದಿಸುತ್ತೇನೆ.
ಅನಙ್ಗಜನಕಂ ಕೃಷ್ಣಮ್
ಅನಙ್ಗಹರಸೌಹೃದಮ್ |
ಅನನ್ತವಾರಿವಾಸಂ ತಂ
ತಿರ್ವನನ್ತಪುರಾಧಿಪಮ್ || ೩ ||
(ಅನಙ್ಗ-ಜನಕಂ)ಹರನ ಹಣೆಗಣ್ಣಿಂದ ದಗ್ಧನಾಗಿ ಅಂಗಾಂಗರಹಿತನಾಗಿ ಅನಂಗನೆನಿಸಿದ ಮನ್ಮಥ (ಪ್ರದ್ಯುಮ್ನ)ನ ಜನನಕ್ಕೆ ಕಾರಣನಾದ ಆತನ ತಂದೆಯಾದ (ಕೃಷ್ಣಂ)ಶ್ರೀಕೃಷ್ಣನನ್ನು, (ಅನಙ್ಗ-ಹರ-ಸೌಹೃದಮ್)ಕಾಮದಹನ ಮಾಡಿದ ಹರನ ಮಿತ್ರನಾದ, (ಅನಂತವಾರಿವಾಸಂ)ಅನಂತವಾದ ಜಲಧಿಯಲ್ಲಿ ಶಯನಿಸಿರುವ, (ತಿರ್ವನನ್ತ-ಪುರ-ಅಧಿಪಮ್)ತಿರುವನಂತಪುರಾಧಿಪತಿಯಾದ (ತಂ)ಆ ಅನಂತಪದ್ಮನಾಭನನ್ನು ಶರಣುಹೊಂದುತ್ತೇನೆ.
ಅನಾದ್ಯನನ್ತರೂಪಂ ತಮ್
ಅರೂಪಮಮರೇಶ್ವರಮ್ |
ಅಪಾರಮಪ್ರಮೇಯಂ ತಮ್
ಅಜಮಚ್ಯುತಮೀಶ್ವರಮ್ || ೪ ||
(ಅನಾದಿ-ಅನನ್ತರೂಪಂ ತಮ್)ಅನಾದಿಯೂ ಅನಂತವೂ ಆದ ಸ್ವರೂಪವುಳ್ಳವನೂ (ಹುಟ್ಟು-ಸಾವು ಅಥವಾ ಆದಿ-ಅಂತ್ಯ ರಹಿತನೂ), (ಅರೂಪಮ್)ನಿರಾಕಾರನೂ, (ಅಮರೇಶ್ವರಮ್)ದೇವತೆಗಳೊಡೆಯನೂ, (ಅಪಾರಮ್)ಅಮಿತನೂ, (ಅ-ಪ್ರಮೇಯಂ)ಯಾವ ಸಿದ್ಧಾಂತಕ್ಕೂ ನಿಲುಕದವನೂ, (ಅಜಮ್)ಜನ್ಮರಹಿತನೂ, (ಅಚ್ಯುತಮ್)ನಾಶರಹಿತನೂ ಆದ (ತಂ)ಆ (ಈಶ್ವರಮ್)ಜಗದೀಶ್ವರನನ್ನು ಶರಣಾಗುತ್ತೇನೆ.
ಅಸೀಮಮಹಿಮಾವನ್ತಮ್
ಅಜೇಯಚರಿತಾಮೃತಮ್ |
ಅಗಾಧಶಕ್ತಿಸಂಪನ್ನಮ್
ಅನೇಕಾಸುರಮರ್ದನಮ್ || ೫ ||
(ಅ-ಸೀಮ-ಮಹಿಮಾ-ವನ್ತಮ್)ಮಿತಿಯಿಲ್ಲದಷ್ಟು ಮಹಿಮೆಯುಳ್ಳವನೂ, (ಅಜೇಯ-ಚರಿತ-ಅಮೃತಮ್)ಸದಾ ಜಯಶೀಲನಾಗಿರುವ ಶಾಶ್ವತಚರಿತೆಯುಳ್ಳವನೂ, (ಅಗಾಧ-ಶಕ್ತಿ-ಸಂಪನ್ನಮ್)ಅಪರಿಮಿತ ಶಕ್ತಿಸಂಪನ್ನನೂ, (ಅನ್-ಏಕ-ಅಸುರ-ಮರ್ದನಮ್)ಅನಂತ ಅಸುರರ ಸಂಹಾರಕನೂ ಆದ ಪರಮಾತ್ಮನನ್ನು ಶರಣುಹೊಂದುತ್ತೇನೆ.
ಅವಿದ್ಯಯಾ ಸಮಾಯುಕ್ತಮ್
ಅಜರಾಮರಮವ್ಯಯಮ್ |
ಅನನ್ತಶಯನಾನನ್ದಮ್
ಅನನ್ತಪದ್ಮನಾಭಮೋಮ್ || ೬ ||
(ಅವಿದ್ಯಯಾ) ಅವಿದ್ಯಾಮಾಯಾವಿಲಾಸದಿಂದ, (ಸಮ್+ಆ+ಯುಕ್ತಮ್)ಕೂಡಿರುವವನೂ, (ಅ-ಜರಾ-ಅಮರಮ್)ಜರಾಮರಣವರ್ಜಿತನೂ, (ಅವ್ಯಯಮ್)ಅವ್ಯಯನೂ, (ಅನನ್ತ-ಶಯನ-ಆನನ್ದಮ್)ಅನಂತ ಹೆಡೆಗಳಿರುವ ಶೇಷನ ಮೇಲೆ ಆನಂದದಿಂದ ಪವಡಿಸಿರುವವನೂ, (ಓಮ್)ಪ್ರಣವಸ್ವರೂಪಿಯೂ ಆದ (ಅನನ್ತ-ಪದ್ಮನಾಭಮ್)ಅನಂತಪದ್ಮನಾಭನನ್ನು (ಸ್ಮರಿಸುತ್ತೇನೆ).
ಅಪಾರಗುಣಸಮ್ಪನ್ನಮ್
ಅತುಲ್ಯವಿಭವಾತ್ಮಕಮ್ |
ಅಚಿನ್ತ್ಯರೂಪಿಣಂ ವಿಷ್ಣುಮ್
ಅನಿಶಂ ಪೂಜಯಾಮ್ಯಹಮ್ || ೭ ||
(ಅ-ಪಾರ-ಗುಣ-ಸಂ-ಪನ್ನಮ್)ಅನಂತ ಗುಣ ಪರಿಪೂರ್ಣನೂ, (ಅ-ತುಲ್ಯ-ವಿಭವಾತ್ಮಕಮ್)ಅನುಪಮ ವೈಭವವುಳ್ಳವನೂ, (ಅಚಿನ್ತ್ಯ-ರೂಪಿಣಮ್)ಚಿಂತನೆಗೆ ನಿಲುಕದ ಸ್ವರೂಪನಾದ (ವಿಷ್ಣುಮ್—ವ್ಯಾಪನಾದ್ ವಿಷ್ಣುಃ)ವಿಶ್ವವ್ಯಾಪಿಯಾದ ಪರತತ್ತ್ವವನ್ನು (ಅನಿಶಮ್)ಸರ್ವದಾ (ಯಾವಾಗಲೂ) (ಅಹಮ್)ನಾನು (ಪೂಜಯಾಮಿ)ಪೂಜಿಸುತ್ತೇನೆ.
ಅಮೇಯಮಾನುಷಾಕಾರಮ್
ಅನೂಹ್ಯಲೀಲಯಾವೃತಮ್ |
ಅಕಾರವಾಚ್ಯದೇವೇಶಮ್
ಅನನ್ತೇಶಮಹಂ ಭಜೇ || ೮ ||
ಅಳತೆಗಳವಡದ ಮಾನುಷನಾಗಿ ತೋರ್ಪ
ಊಹೆಗಳವಡದ ಲೀಲೆಗಳ ತಾ ತೋರ್ಪ |
ಆದ್ಯಕ್ಷರೋಕ್ತ, ದೇವತೆಗಳಧಿಪತಿಯ
ಅನಂತೇಶನ ನಾನು ಪೊಡಮಡುವೆ ನಿತ್ಯ ||
(ಅ-ಮೇಯ-ಮಾನುಷಾಕಾರಮ್) ಮೇಯನಲ್ಲದ, ಅಳತೆಗೆ ಅಳವಡದ, ಮಾಪನಕ್ಕೆ ನಿಲುಕದ ಸಿಲುಕದ ಅಮೇಯನಾದರೂ, ಮನುಷ್ಯರೂಪ ತಾಳಿ ಲೋಕದಲ್ಲಿ ಅವತರಿಸಿ ತೋರುವ, (ಅನೂಹ್ಯ-ಲೀಲಯಾ-ವೃತಮ್) ಊಹಿಸಲಾಗದ ಲೀಲೆಗಳಿಂದ ಕೂಡಿದವನಾದ, (ಅ-ಕಾರವಾಚ್ಯ-ದೇವೇಶಮ್) ಸರ್ವವರ್ಣಗಳಲ್ಲಿ ಆದಿವರ್ಣವೆನಿಸಿದ ಅಕಾರದಿಂದ ಕರೆಯಲ್ಪಡುವವನಾದ, ಸಕಲದೇವತೆಗಳ ಅಧಿಪತಿಯಾದ, (ಅನಂತೇಶಮ್) ತಿರುವನಂತಪುರದ ಅನಂತಪದ್ಮನಾಭದೇವರನ್ನು, (ಅಹಂ) ನಾನು, (ಭಜೇ) ಭಜಿಸುತ್ತೇನೆ, ಸೇವೆಮಾಡುತ್ತೇನೆ (ಭಜ ಸೇವಾಯಾಮ್ ಧಾತು).
ಅನ್ತರಾತ್ಮಾನಮೀಶಾನಮ್
ಅನ್ತರ್ಯಾಮಿನಮಚ್ಯುತಮ್ |
ಅನ್ತರ್ಬಹಿಃಸ್ಥಮಾದಿತ್ಯಮ್
ಅನ್ತರಙ್ಗಪ್ರಿಯಂ ಹರಿಮ್ || ೯ ||
ಸರ್ವರೊಳಗಿಹನಾತ್ಮನೀಶಾನ ಪ್ರಭುವು
ಸರ್ವರಂತರ್ಯಾಮಿ ನಾಶರಹಿತಜನು |
ಸರ್ವರೊಳಹೊರಗಿರುವನಾಕಾಶರವಿಯು
ಸರ್ವಾತಿಶಯಪ್ರಿಯನು ಶ್ರೀಹರಿಯು ತಾನು ||
(ಅಂತರಾತ್ಮಾನಮ್—ಸರ್ವರ ಒಳಗಿಹನು ಆತ್ಮನು) ಎಲ್ಲರೊಳಗಿರುವ ಆತ್ಮನು, (ಈಶಾನಮ್—ಈಶಾನ ಪ್ರಭುವು) ಸರ್ವರಧಿಪತಿಯಾಗಿ ಈಶಾನನೆನಿಸಿದನು. (ಅಂತರ್ಯಾಮಿನಮ್—ಅಂತಃಸ್ಥೋ ಯಮಯತಿ ಇತಿ ಅಂತರ್ಯಾಮಿನ್, ತಮ್—ಸರ್ವರ ಅಂತರ್ಯಾಮಿ) ಎಲ್ಲರನ್ನೂ ಒಳಗಿನಿಂದಲೇ ನಿಯಮನ / ನಿಯಂತ್ರಣಮಾಡುವ ನಿಯಾಮಕನಾದ, (ಅಚ್ಯುತಮ್—ನಾಶರಹಿತ ಅಜನು) ಎಂದೆಂದಿಗೂ ಚ್ಯುತಿಯಿರದೆ / ಕುಂದಿರದೆ / ನಾಶವಿರದೆ ಅಚ್ಯುತನೆನಿಸಿದ ಪರಮಾತ್ಮನು ಜನ್ಮರಹಿತನೂ ಆಗಿ ಅ-ಜನೆನಿಸಿರುವನು. ಯಸ್ಯ ಚ್ಯುತಿಃ ನಾಸ್ತಿ ಸಃ, ಅಚ್ಯುತಃ | ನಾಸ್ತಿ ಜನ್ಮ ಯಸ್ಯ ಸಃ, ನ ಜಾಯತೇ-ಇತಿ ವಾ ಅಜಃ—ಯಾವನಿಗೆ ಜನ್ಮವಿಲ್ಲವೋ ಅವನು ಅಥವಾ ಹುಟ್ಟುವುದಿಲ್ಲ / ಜನಿಸುವುದಿಲ್ಲ ಎಂಬುದರಿಂದ ಪರಮಾತ್ಮನು ಅಜನು, ಅನಾದಿಯು, ಆದಿರಹಿತನು. (ಅಂತರ್-ಬಹಿಃ-ಸ್ಥಮ್—ಸರ್ವರ ಒಳ-ಹೊರಗೆ ಇರುವನು) ಎಲ್ಲರ ದೇಹದ ಒಳಗೂ ಹೊರಗೂ ನೆಲೆಸಿರುವವನು. ಅಂತರ್ಬಹಿಶ್ಚ ಯತ್ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ (ವೈದಿಕ, ನಾರಾಯಣಸೂಕ್ತ). (ಆದಿತ್ಯಮ್—ಆಕಾಶರವಿಯು) ಹೊರಗೆ ತೋರುವ ಸಕಲರ ಚೇತನನಾದ ಸೂರ್ಯನೂ, ದೇಹದೊಳಗಿರುವ ಚೈತನ್ಯರೂಪನೂ ಆತನೇ. ಹೊರಗಿನಾಕಾಶ(ಮಹಾಕಾಶ, ಬ್ರಹ್ಮಾಂಡ)ದಲ್ಲಿಯೂ ಒಳಗಿನ ಅವಕಾಶ(ದೇಹಾಕಾಶ, ಪಿಂಡಾಂಡ)ದಲ್ಲೂ ವ್ಯಾಪಿಸಿರುವನು. (ಅಂತರಂಗಪ್ರಿಯಂ ಹರಿಮ್—ಸರ್ವ ಅತಿಶಯ ಪ್ರಿಯನು ಶ್ರೀಹರಿಯು ತಾನು) ಆ ಪರಮಾತ್ಮನು ಎಲ್ಲರ ಅಂತರಂಗದ ಪ್ರೇಮಿಯೂ, ಸ್ವಾಮಿಯೂ, ಸಕಲ ಪಾಪ-ದುಃಖಾದಿಗಳನ್ನು ಪರಿಹರಿಸಿ ಶ್ರೀಹರಿಯೆನಿಸಿದವನೂ, ನಾನೆಂಬ ಭಾವವನ್ನುಂಟುಮಾಡುವ ಭವನೂ, ಅಹಂತತ್ತ್ವವೂ, ಅಹಂ ಬ್ರಹ್ಮ ಅಸ್ಮಿ ಎಂಬ ಸರ್ವವ್ಯಾಪಿಯಾದ ಪರಬ್ರಹ್ಮತತ್ತ್ವವೂ ಆಗಿರುವನು. ಹೀಗೆ ನಮ್ಮ ಆತ್ಮಸ್ವರೂಪವೇ ಅವನು. ತತ್ ತ್ವಮ್ ಅಸಿ ಅದು ನೀನೇ ಆಗಿರುವಿ. ಆ ಪರಮಾತ್ಮತತ್ತ್ವವೊಂದೇ ಪರಮಾರ್ಥಸತ್ಯ, ದೇಹಾದಿಗಳೆಲ್ಲ ಬರಿಯ ವ್ಯಾವಹಾರಿಕ ಅನಿತ್ಯ ತೋರಿಕೆ ಮಾತ್ರ. ಅಂತಹ ಆತ್ಮಸ್ವರೂಪವನ್ನು ಸದಾ ಅನುಸಂಧಾನ, ಚಿಂತನ, ಶ್ರವಣ, ಕೀರ್ತನ ಮಾಡೋಣ.
ಅಮ್ಬಾಪತಿಮಜಾತ್ಮಾನಮ್
ಅಜಸ್ಯಜನಕಂ ಪ್ರಭುಮ್ |
ಅಮೂರ್ತಂ ಮೂರ್ತಿಮಾಪನ್ನಮ್
ಅನೇಕಮೂರ್ತಿಣಂ ಭಜೇ || ೧೦ ||
ಅಮ್ಮ ಲಕುಮಿಯ ರಮಣ ಜನ್ಮರಹಿತಾತ್ಮಾ
ಬೊಮ್ಮಪಿತ ಮಾ-ಧವನು ಲೋಕೈಕಪತಿಯು |
ನಿರ್ಮಲನಿರಾಕಾರ ಸಾಕಾರನಾಗಿ
ನಮ್ಮೆಲ್ಲರೊಳಗಿರುವ ಕೇಶವನ ಭಜಿಪೆ ||
(ಅಂಬಾಪತಿಮ್—ಅಮ್ಮ ಲಕುಮಿಯ ರಮಣ, ಮಾ-ಧವನು; ಮಾ—ಲಕ್ಷ್ಮೀ, ಧವ—ಪತಿ) ಜಗಜ್ಜನನಿಯಾದ ಮಹಾಲಕ್ಷ್ಮೀದೇವಿಯ ರಮಣನೂ, (ಅಜ-ಆತ್ಮಾನಮ್—ಜನ್ಮರಹಿತ ಆತ್ಮಾ) ಜನ್ಮರಹಿತನಾಗಿ ಅ-ಜನೆನಿಸಿದ ಆತ್ಮಸ್ವರೂಪಿಯೂ, (ಅಜಸ್ಯ ಜನಕಂ—ಬೊಮ್ಮಪಿತ) ಅಜನೆನಿಸಿದ ಸೃಷ್ಟಿಕರ್ತ ಚತುರ್ಮುಖಬ್ರಹ್ಮನನ್ನು ತನ್ನ ನಾಭೀಕಮಲದಿಂದ ಹುಟ್ಟಿಸಿ (ಬ್ರಹ್ಮಾ ಸಂಸ್ಕೃತ, ಬೊಮ್ಮ ತದ್ಭವ) ಜನಕನಾದ, (ಪ್ರಭುಮ್— ಲೋಕ-ಏಕಪತಿಯು) ಸಕಲಲೋಕಕ್ಕೇ ಏಕಮೇವಾದ್ವಿತೀಯ ಒಡೆಯನಾದ, (ಅಮೂರ್ತಂ ಮೂರ್ತಿಮ್ ಆಪನ್ನಂ—ನಿರ್ಮಲ ನಿರಾಕಾರ ಸಾಕಾರನಾಗಿ) ಮೂರ್ತಸ್ವರೂಪ / ಆಕಾರ ಇಲ್ಲದ ನಿರಾಕಾರ ನಿಷ್ಕಳಂಕ ಪರಬ್ರಹ್ಮವು ಮೂರ್ತರೂಪವನ್ನು / ಸಾಕಾರವನ್ನು ಹೊಂದಿ, (ಅನೇಕಮೂರ್ತಿಣಂ—ನಮ್ಮೆಲ್ಲರ ಒಳಗಿರುವ ಕೇಶವನ) ಸೃಷ್ಟಿವೈವಿಧ್ಯವಾಗಿ ನಾನಾರೂಪತಾಳಿ ಸಕಲ ಜೀವಜಡರೊಳಹೊರಗಿರುವ ಏಕೈಕ ಪರಮಾತ್ಮತತ್ತ್ವವನ್ನು, (ಭಜೇ—ಭಜಿಪೆ) ಭಜಿಸುತ್ತೇನೆ.
ಅನನ್ತಪದ್ಮನಾಭೇಶಮ್
ಆನನ್ದರಸಚಿದ್ಘನಮ್ |
ಅನನ್ತಶಾನ್ತಿದಾತಾರಮ್
ಅನನ್ತೇಶಂ ಭಜಾಮ್ಯಹಮ್ || ೧೧ ||
ಅನಂತಪದ್ಮನಾಭೇಶನ
ಆನಂದರಸಚಿದ್ಘನನ |
ಅನಂತಶಾಂತಿದಾತಾರನ
ಅನಂತೇಶನ ಭಜಿಪೆ ನಾ ||
(ಅನನ್ತ-ಪದ್ಮನಾಭ-ಈಶಮ್) ಜಗದೀಶ್ವರನಾದ, ಅನಂತವಾದ ಪದ್ಮವನ್ನು ತನ್ನ ಅನಂತವಾದ ನಾಭಿಯಲ್ಲಿ ಧರಿಸಿರುವವನಾದ, (ಆನನ್ದ-ರಸ-ಚಿದ್-ಘನಮ್) ಬ್ರಹ್ಮಾತ್ಮಾನಂದವೆಂಬ ಭಾವರಸ-ಜ್ಞಾನಚೈತನ್ಯದ ಗಟ್ಟಿಯೇ ಆಗಿರುವವನಾದ, (ಅನನ್ತ-ಶಾನ್ತಿ-ದಾತಾರಮ್) ಅಂತವಿಲ್ಲದ ಶಾಂತಿಯನ್ನು ಕೊಡುವವನಾದ, (ಅನನ್ತೇಶಮ್) ಅಂತ್ಯವಿಲ್ಲದ ಈಶನಾದ, ಅನಂತಶಯನನಾಗಿ ಅನಂತನ ಪ್ರಭುವಾದ ಅನಂತೇಶನನ್ನು, (ಅಹಂ ಭಜಾಮಿ) ನಾನು ಭಜಿಸುತ್ತೇನೆ, ಸೇವೆಮಾಡುತ್ತೇನೆ (ಭಜ ಸೇವಾಯಾಮ್).
ಶ್ರೀಮನ್ನಾರಾಯಣಂ ವನ್ದೇ
ಪದ್ಮಾಪತಿಮಪಾಂನಿಧಿಮ್ |
ಕುನ್ದನಾಭಂ ಮುಕುನ್ದಂ ತಮ್
ಸುನ್ದರಾಙ್ಗಮಹರ್ನಿಶಮ್ || ೧೨ ||
ವಂದಿಸುವೆ ನಾರಾಯಣಗೆ ತಾ
ಕಮಲರಮಣಗೆ ಸಾಗರಸ್ಥಗೆ |
ಕುಂದನಾಭ ಮುಕುಂದದೇವಗೆ
ಸುಂದರಾಂಗನಿಗೆ ||
ಸುಂದರವಾದ ಅಂಗಾಂಗಗಳುಳ್ಳ ಸುಂದರಾಂಗನೂ (ಸುನ್ದರಾಙ್ಗಮ್—ಸುಂದರಾಂಗನಿಗೆ), ಕುಂದಪುಷ್ಪ / ಬಿರಿದ ಮಲ್ಲಿಗೆಯಂತಹ ಹೊಕ್ಕುಳ / ಹೊಕ್ಕುಳು / ನಾಭಿಯುಳ್ಳ ಕುಂದನಾಭನೂ (ಕುನ್ದನಾಭಂ—ಕುಂದನಾಭ), "ಮುಕುಂ ದದಾತಿ ಇತಿ ಮುಕುನ್ದಃ"—ಮೋಕ್ಷವನ್ನೀಯುವವನೆಂಬುದರಿಂದ ಮುಕುಂದನೂ (ಮುಕುನ್ದಮ್—ಮುಕುಂದದೇವಗೆ), ಪದ್ಮಾ, ಪದ್ಮಾವತೀ, ಕಮಲಾ ಎನಿಸಿದ ಗುಣಸೌಂದರ್ಯಖನಿಯಾದ ಮಹಾಲಕ್ಷ್ಮಿಯ ವಲ್ಲಭನೂ ಆದ (ಪದ್ಮಾಪತಿಮ್—ತಾ ಕಮಲರಮಣಗೆ), ಅಪಾರಜಲರಾಶಿಯಲ್ಲಿ ನೆಲೆಸಿರುವವನಾದ (ಅಪಾಂ ನಿಧಿಮ್—ಸಾಗರಸ್ಥಗೆ), ಲಕ್ಷ್ಮೀಸಹಿತನಾದ ಶ್ರೀಮನ್- ನೀರ ಮೇಲಿರುವ, ನಾರ / ಮುಕ್ತಿಗೆ ಆಶ್ರಯನಾದ, ನಾರಾಯಣನನ್ನು (ಶ್ರೀಮನ್ನಾರಾಯಣಮ್—ನಾರಾಯಣಗೆ), (ಅಹರ್ನಿಶಮ್) ಹಗಲಿರುಳೂ ಸದಾ, (ವನ್ದೇ—ವಂದಿಸುವೆ) ವಂದಿಸುತ್ತೇನೆ, ವಂದನೆ ಮಾಡುತ್ತೇನೆ, ನಮಿಸುತ್ತೇನೆ, ಪ್ರಣಮಿಸುತ್ತೇನೆ, ಪ್ರಣಾಮ ಮಾಡುತ್ತೇನೆ, ನಮಸ್ಕರಿಸುತ್ತೇನೆ, ನಮಸ್ಕಾರ ಮಾಡುತ್ತೇನೆ.
ಅಜೇಯಮಸುರಾರಿಂ ತಂ
ಮುರಾರಿಮಮರೇಡಿತಮ್ |
ಪುರಾರಿಪ್ರಿಯಮದ್ವೈತಂ
ಸರ್ವಸಿದ್ಧಾನ್ತವರ್ಜಿತಮ್ || ೧೩ ||
ವಿಜಯಶೀಲಗೆ ದಾನವಾಂತಗೆ
ಮುರದನುಜಹರ ದೇವಪೂಜ್ಯಗೆ |
ತ್ರಿಪುರಹರಪ್ರಿಯದ್ವೈತತತ್ತ್ವಕೆ
ತತ್ತ್ವದೂರನಿಗೆ ||
(ಅಜೇಯಮ್—ಜೇತುಮ್ ಅಶಕ್ಯಮ್—ವಿಜಯಶೀಲಗೆ) ಜಯಿಸಲಸಾಧ್ಯನಾದ, (ತಮ್) ಆ, (ಅಸುರಾರಿಮ್—ದಾನವಾಂತಗೆ) ಸುರವಿರೋಧಿಗಳಾದ ಅಸುರರ ಶತ್ರುವನ್ನು / ದನುಪುತ್ರಸಂಹಾರಕನನ್ನು, (ಮುರಾರಿಮ್—ಮುರ-ದನುಜ-ಹರ) ಮುರಾಸುರನ ಅರಿ/ಶತ್ರುವಾದ ಹರಿಯನ್ನು, (ಅಮರ-ಈಡಿತಮ್—ದೇವಪೂಜ್ಯಗೆ) ಅಮೃತ ಕುಡಿದು ಮರಣವಿರದ್ದರಿಂದ ಅಮರರೆನಿಸಿದ ದೇವತೆಗಳಿಂದ ಸ್ತುತಿಸಲ್ಪಡುವ, (ಪುರಾರಿ-ಪ್ರಿಯಮ್—ತ್ರಿಪುರ-ಹರ-ಪ್ರಿಯ) ತ್ರಿಪುರಾಸುರರ ವೈರಿಯಾಗಿ (ತ್ರಿ)ಪುರಾರಿಯೆನಿಸಿದ ಶಿವನಿಗೆ ಪ್ರಿಯನಾದ, (ಅದ್ವೈತಮ್—ಅದ್ವೈತತತ್ತ್ವಕೆ) ತನಗೆ ಸಮನಾಗಿ ಅಥವಾ ಮಿಗಿಲಾಗಿ ಮತ್ತೊಂದಿಲ್ಲದೆ ಏಕಮೇವಾದ್ವೈತ ಪರತತ್ತ್ವವೆನಿಸಿದ, (ಸರ್ವಸಿದ್ಧಾಂತ-ವರ್ಜಿತಮ್—ತತ್ತ್ವದೂರನಿಗೆ) ದ್ವೈತ-ಅದ್ವೈತ-ವಿಶಿಷ್ಟಾದ್ವೈತ-ಶಕ್ತಿವಿಶಿಷ್ಟಾದ್ವೈತ-ಶೈವ-ವೀರಶೈವ-ಗೌಡೀಯ-ಭೇದಾಭೇದಾದಿ ಯಾವುದೇ ಒಂದು ಸಿದ್ಧಾಂತದ ಅಂಟಿಲ್ಲದ, ಸಕಲಸಿದ್ಧಾಂತಕ್ಕೂ ಸಾಕ್ಷಿಯಾದ ಆ ಪರಮಾತ್ಮನನ್ನು ಶರಣುಹೊಂದುತ್ತೇನೆ.
ಚರಾಚರಪತಿಂ ವಿಷ್ಣುಂ
ಪರಾತ್ಪರಂ ವ್ರಜಪ್ರಿಯಮ್ |
ಗೋವರ್ಧನೋದ್ಧರಂ ವನ್ದೇ
ಗೋವಿನ್ದಂ ಗೋಪವಲ್ಲಭಮ್ || ೧೪ ||
ಚರಾಚರಗಳ ಸ್ವಾಮಿ ವಿಷ್ಣುವ
ಪರಾತ್ಪರ ಗೋಪಾಲಪ್ರೀಯನ |
ಗಿರಿಯನೆತ್ತಿದ ಗೋಕುಲೇಶ ಗೋವಿಂದಗಭಿನಮಿಪೆ ||
(ಚರ-ಅಚರ-ಪತಿಮ್—ಚರ ಅಚರಗಳ ಸ್ವಾಮಿ) ಚಲನಶೀಲವಾದ ಪಶುಪಕ್ಷಿನರೋರಗಾದಿ ಜಂಗಮಯೋನಿಗಳ ಹಾಗೂ ಚಲಿಸಲಾಗದ ತರುಲತಾಗುಲ್ಮಪರ್ವತಾದಿ ಸ್ಥಾವರಯೋನಿಗಳೆಲ್ಲರ ಒಡೆಯನಾದ, (ವಿಷ್ಣುಮ್—"ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ ಇತಿ ವಿಷ್ಣುಃ, ತಮ್", ವಿಷ್ಣುವ) ವಿಶ್ವವನ್ನೆಲ್ಲ ವ್ಯಾಪಿಸುತ್ತಾನೆ ಹಾಗೂ ಪ್ರವೇಶಿಸುತ್ತಾನೆ ಎಂಬುದರಿಂದ ವಿಷ್ಣುವೆನಿಸಿದ ಪರಮಾತ್ಮನನ್ನು ("ತತ್ ಸೃಷ್ಟ್ವಾ ತದೇವಾನುಪ್ರಾವಿಶತ್"— ಅದನ್ನು ಸೃಜಿಸಿ ಅದನ್ನೇ ತಾನೂ ಪ್ರವೇಶಿಸಿದನು ಎಂದಿದೆ ಶ್ರುತಿ), (ಪರಾತ್ ಪರಮ್—ಪರಾತ್ಪರ) ಪರಾ ಹಾಗೂ ಅಪರಾ ಎಂದು ಪ್ರಕೃತಿಯು ದ್ವಿವಿಧ. ಅಂತಹ ಪರಾಪರಾತ್ಮಕ ಪ್ರಕೃತಿಗಿಂತಲೂ ಹೆಚ್ಚಿನವನಾದ ಪುರುಷ / ಬ್ರಹ್ಮಾತ್ಮ / ಪರಬ್ರಹ್ಮವನ್ನು, (ವ್ರಜ-ಪ್ರಿಯಮ್—ಗೋಪಾಲ ಪ್ರೀಯನ) ವ್ರಜವೆಂದರೆ ಗೋ-ಪಾಲಕರ ದೇಶ. ಅಂತಹ ವ್ರಜಜನರಿಗೆ ಅತ್ಯಂತ ಪ್ರಿಯನಾದವನನ್ನು, (ಗೋವರ್ಧನೋದ್ಧರಮ್—ಗಿರಿಯನೆತ್ತಿದ) ಗೋ-ಕುಲಕ್ಕೆ ಗೋ-ವರ್ಧನ-ಗಿರಿಯೇ ಹಸಿರು ಮೇವನ್ನೊದಗಿಸುವ ಪುಷ್ಟಿವರ್ಧಕ, ಆಧಾರ. ಹಾಗಾಗಿ ಶ್ರೀಕೃಷ್ಣನು ನಂದಗೋಕುಲದ ಸಾಂಪ್ರದಾಯಿಕ ಇಂದ್ರಯಾಗದ ಬದಲಾಗಿ ಗೋವರ್ಧನಪೂಜೆಯನ್ನು ಗೈದ. ಅದಕ್ಕೆ ಕೋಪಿಸಿದ ಇಂದ್ರನು ಮುಸಲಧಾರಾವರ್ಷವಗರೆಯಲು, ಗೋವು-ಗೋಪಾಲಕರ ರಕ್ಷಣೆಗೆ ಗೋವರ್ಧನಗಿರಿಯನ್ನೇ ಮೇಲೆತ್ತಿದ ಶ್ರೀಕೃಷ್ಣಪರಮಾತ್ಮ. ಹೀಗೆ ಗೋವರ್ಧನವನ್ನು ಉತ್-ಮೇಲಕ್ಕೆ ಧರಿಸಿ / ಉದ್ಧರಿಸಿ ಗೋವರ್ಧನೋದ್ಧಾರಿಯೆನಿಸಿದ. (ಗೋಪ-ವಲ್ಲಭಮ್—ಗೋಕುಲ+ಈಶ) ಗೋ ಎಂದರೆ ಗೋವು, ಜ್ಞಾನ, ಇಂದ್ರಿಯ, ಭೂಮಿ ಎಂದರ್ಥ. ಅವುಗಳನ್ನು ಪಾಲಿಸುವವರೇ ಗೋಪರು, ದೈವಾಂಶಸಂಭೂತರು, ಕೃಷ್ಣಾವತಾರಕ್ಕೆ ಸಹಾಯಕರು. ಅಂತಹ ಗೋಪಗೋಪಿಯರ ಅಧಿಪನೇ ಶ್ರೀಕೃಷ್ಣ. (ಗೋವಿನ್ದಂ ವನ್ದೇ—ಗೋವಿಂದಗೆ ಅಭಿ-ನಮಿಪೆ) ಅಂತಹ ಗೋವುಗಳನ್ನು, ಜ್ಞಾನವನ್ನು, ಇಂದ್ರಿಯದೇವತಾಶಕ್ತಿಗಳನ್ನು, ಭೂಮಿಯನ್ನು ಹೊಂದಿದವನೇ ಗೋವಿಂದನು. "ಗಾಂ ಧೇನುಂ ಪೃಥ್ವೀಂ ವಾ ವಿನ್ದತೀತಿ ಗೋವಿನ್ದಃ"—ಗೋವನ್ನೂ, ಪೃಥ್ವಿಯನ್ನೂ ಹೊಂದಿರುವವನು ಗೋವಿಂದನು, ಗೋಪತಿಯೂ, ಭೂಪತಿಯೂ ಹೌದು. ಅಂತಹ ಪರಮಾತ್ಮನನ್ನು ವಂದಿಸುತ್ತೇನೆ, ಎದುರಾಗಿ ನಮಿಸುತ್ತೇನೆ, ಎಲ್ಲೆಡೆಯಿಂದ (ಅಭಿತಃ) ನಮಿಸುತ್ತೇನೆ.
ಅಚ್ಯುತಾನನ್ತಗೋವಿನ್ದಂ
ಕೇಶವಂ ಕರುಣಾಕರಮ್ |
ಕೃಷ್ಣದಾಮೋದರಂ ವನ್ದೇ
ವಾಮನಂ ಚ ತ್ರಿವಿಕ್ರಮಮ್ || ೧೫ ||
ಅಚ್ಯುತನನಂತನ ಗೋವಿಂದನ
ಕೇಶವನ ಕರುಣಾಕರನ ನಾ
ಕೃಷ್ಣ ದಾಮೋದರ ತ್ರಿವಿಕ್ರಮ ವಾಮನನ ನಮಿಪೆ ||
ಅಚ್ಯುತಃ—
(ಅಚ್ಯುತ-ಅನನ್ತ-ಗೋವಿನ್ದಮ್—ಅಚ್ಯುತನ ಅನಂತನ ಗೋವಿಂದನ) ಎಂದಿಗೂ ಚ್ಯುತಿಯಿರದ / ನಾಶವಿಲ್ಲದ / ಕುಂದಿಲ್ಲದ / ಪತನವಾಗದ / ಹಾದಿತಪ್ಪದ / ನಿತ್ಯನಾದ ಪರಮಾತ್ಮನು ಅಚ್ಯುತನೆನಿಸಿದನು. "ನ ಚ್ಯವತೇ ಸ್ವರೂಪತೋ ನ ಗಚ್ಛತಿ ಯಃ ನಿತ್ಯಃ ಇತಿ ಯಾವತ್"— ತನ್ನ ಮೂಲಸ್ವರೂಪದಿಂದ ಎಂದೆಂದೂ ಪತನಹೊಂದದ, ಸದಾ ನಿತ್ಯನಾದ ಪರಮಾತ್ಮನೇ ಅಚ್ಯುತನು. "ಸ್ವರೂಪಸಾಮರ್ಥ್ಯಾತ್ ನ ಚ್ಯುತೋ ನ ಚ್ಯವತೇ ನ ಚ್ಯವಿಷ್ಯತೇ ವಾ"— ತನ್ನ ಸ್ವರೂಪ ಸಾಮರ್ಥ್ಯದ ದೆಸೆಯಿಂದ ಹಿಂದೆಯೂ ಚ್ಯುತನಾಗದ, ಇಂದೂ ಚ್ಯುತನಾಗದ, ಮುಂದೂ ಚ್ಯುತನಾಗದ, ತ್ರಿಕಾಲಾಬಾಧಿತ ತತ್ತ್ವ. ಚ್ಯು ಗತೌ ಧಾತು. "ಯಸ್ಮಾನ್ನ ಚ್ಯುತಪೂರ್ವೋऽಹಮಚ್ಯುತಸ್ತೇನ ಕರ್ಮಣಾ"— ಯಾವ ಕಾರಣದಿಂದ ನಾನು ಹಿಂದೆಂದೂ ಚ್ಯುತನಾಗಿಲ್ಲವೋ ಆ ನನ್ನ ಕರ್ಮಮಹಿಮೆಯಿಂದಾಗಿ ನಾನು ಅಚ್ಯುತನೆನಿಸಿರುವೆನೆಂಬುದು ಭಗವದ್ವಚನ. "ಅಚ್ಯುತಾ ಅಭ್ರಷ್ಟಾ ಲೀಲಾ ಯಸ್ಯ ಸಃ"— ಚ್ಯುತಿಯಿರದ, ನಷ್ಟ-ಭ್ರಷ್ಟವಾಗದ ಲೀಲೆಯುಳ್ಳವನು. "ಅಚ್ಯುತಾ ಅಚಂಚಲಾ ಚ ಸ್ಥಿತಿಃ ಯಸ್ಯ ಸಃ"— ಚಂಚಲವಾಗದ, ಸುಸ್ಥಿರವಾದ ಸ್ಥಿತಿಯುಳ್ಳವನು. "ನ ಚ್ಯೋತತಿ ಕ್ಷರತೀತಿ ಅಚ್ಯುತಃ"— ನಾಶಹೊಂದದ ಅಕ್ಷರಸ್ವರೂಪನೇ ಅಚ್ಯುತನು.
ಅನನ್ತಃ—
"ನಾಸ್ತಿ ಅನ್ತಃ ಸೀಮಾ ಯಸ್ಯ ಸಃ, ಅನನ್ತಃ"— ಯಾವನಿಗೆ ಕೊನೆ, ಗಡಿ ಇಲ್ಲವೋ ಅವನೇ ಅನಂತನು. "ನಾಸ್ತಿ ಅನ್ತಃ ವಿನಾಶೋ ಯಸ್ಯ ಸಃ"— ಯಾವನಿಗೆ ವಿನಾಶ, ಅಂತ್ಯ ಇಲ್ಲವೋ ಅಂತಹವನೇ ಅನಂತನೆನಿಸಿರುವ ಪರಮಾತ್ಮನು. "ಲೋಕೇ ನಷ್ಟೇ ದ್ವಿ-ಪರಾರ್ಧಾವಸಾನೇ ಭವಾನೇಕಃ ಶಿಷ್ಯತೇ ಶೇಷಸಂಜ್ಞಃ"(ಭಾಗವತಪುರಾಣ)— ಸೃಷ್ಟಿಕರ್ತನಾದ ಚತುರ್ಮುಖಬ್ರಹ್ಮನ ಆಯುರ್ಮಾನವಾದ ಪರಾ ಕಾಲವು ಪೂರ್ತಿಯಾಗಿ ಪರಾಂತಕಾಲದಲ್ಲಿ (೨ ಪರಾ ಅರ್ಧಗಳು ಮುಗಿಯಲಾಗಿ) ಬ್ರಾಹ್ಮಪ್ರಳಯವು ಸಂಭವಿಸಲು ಪರಮಾತ್ಮನಾದ ನೀನೋರ್ವನೇ ಶೇಷ(=ಉಳಿಕೆ)ನಾಮಕನಾಗಿ ಉಳಿಯುವೆ ಎನ್ನಲಾಗಿದೆ. ಹೀಗೆ, ದೇಶಾತೀತನಾಗಿ ಅಂತರಹಿತನೂ, ಕಾಲಾತೀತನಾಗಿ ಅನವಧಿಯೂ / ಶೇಷನೂ, ಸಮಗ್ರನಾಗಿ ಅಶೇಷನೂ, ಸರ್ವಾತಿಶಯನಾಗಿ ವಿಶೇಷನೂ, ಶೇಷಸಮೇತನಾಗಿ ಸಶೇಷನೂ, ಸೀಮಾತೀತನಾಗಿ ಅಸೀಮನೂ, ಸಕಲಕಲಾವಲ್ಲಭನಾಗಿ ನಿಸ್ಸೀಮನೂ, ಸಕಲಕರ್ಮಕುಶಲನಾಗಿ (ಯೋಗಃ ಕರ್ಮಸು ಕೌಶಲಮ್) ಯೋಗೇಶ್ವರನೂ, ಸಕಲ ಯೋಗಿಗಳ ಮೂಲನಾಗಿ ಯೋಗೀಶ್ವರನೂ, ವಿಷ್ಣುಪದನೂ / ವಿಷ್ಣುಪದವಿಯೂ / ಎಂದೂ ಕುಂಠಿತವಾಗದ ವೈಕುಂಠನೂ, ವಿಶ್ವವ್ಯಾಪಕನೂ ವಿಶ್ವಪ್ರವಿಷ್ಟನೂ ಆಗಿ ವಿಷ್ಣುವೂ ಎನಿಸಿದ ಪರಮಾತ್ಮನು ಅನಂತ ಪದ್ಮನಾಭನು. "ನಾಸ್ತಿ ಅನ್ತಃ, ಗುಣಾನಾಂ ಯಸ್ಯ ಸಃ"— ಗುಣಗಳಲ್ಲಿ ಕೊನೆಯಿರದ ಅನಂತಗುಣಪರಿಪೂರ್ಣನಾದ್ದರಿಂದಲೂ ಆ ನಿರ್ಗುಣ ಪರಮಾತ್ಮನೇ ಸಗುಣ ಭಗವಂತನಾಗಿ ಅನಂತನಾಗಿರುವನು. "ಸತ್ಯಂ ಜ್ಞಾನಮ್ ಅನನ್ತಂ ಬ್ರಹ್ಮ"— ಆ ಪರಮಾತ್ಮನು ಸತ್ಯನೂ, ಜ್ಞಾನನೂ, ಅನಂತನೂ ಆಗಿರುವನೆಂದು ಉಪನಿಷತ್ತುಗಳೂ ಕೊಂಡಾಡಿವೆ. " ಗನ್ಧರ್ವಾಪ್ಸರಸಃ ಸಿದ್ಧಾಃ ಕಿನ್ನರೋರಗಚಾರಣಾಃ | ನಾನ್ತಂ ಗುಣಾನಾಂ ಜಾನನ್ತಿ ತೇನಾನನ್ತೋऽಯಮುಚ್ಯತೇ ||"— ಯಾವನ ಗುಣಗಳ ಪಾರವನ್ನು ಗಂಧರ್ವ-ಅಪ್ಸರ-ಸಿದ್ಧ-ಕಿನ್ನರ-ಉರಗ-ಚಾರಣಾದಿ ಸಮಸ್ತ ಜೀವರೂ ಅರಿಯರೋ ಅಂತಹ ಪರಮಾತ್ಮನೇ ಈ ಕಾರಣಕ್ಕಾಗಿ ಅನಂತನೆನಿಸಿರುವನು. "ಅನನ್ತ-ಸಂಸಾರ-ಮಹಾಸಮುದ್ರೇ ಮಗ್ನಾನ್ ಸಮಭ್ಯುದ್ಧರ ವಾಸುದೇವ!"(ಭವಿಷ್ಯಪುರಾಣ)— ಅಂತ್ಯವಿಲ್ಲದ ಸಂಸಾರಸಾಗರದಲ್ಲಿ ಮುಳುಗಿರುವವರನ್ನು ಉದ್ಧಾರ ಮಾಡೋ ಹೇ ವಾಸುದೇವನೇ! ಎಂಬ ಪುರಾಣವಚನದಂತೆ ವಾಸುದೇವನು ಅನಂತನೆನಿಸಿರುವನು. "ವಿಷ್ಣುರ್ವೀರೋऽನನ್ತಃ"— ಎಂಬ ವಿಷ್ಣುಸಹಸ್ರನಾಮವಚನದಂತೆ ವಿಷ್ಣುವು ಅನಂತನು. "ಅನ್ತಃ, ಪರಿಚ್ಛೇದಃ ದೇಶತಃ ಕಾಲತಃ ವಸ್ತುತಶ್ಚ, ನಾಸ್ತಿ ಯಸ್ಯ, ತಸ್ಮಿನ್ ಪರಬ್ರಹ್ಮಣಿ"— ದೇಶ/ಪ್ರದೇಶ/ಸ್ಥಳದೃಷ್ಟಿಯಿಂದಲೂ, ಭೂತ-ವರ್ತಮಾನ-ಭವಿಷ್ಯಾದಿ ಸಮಯ / ಕಾಲದ ದೃಷ್ಟಿಯಿಂದಲೂ ("ಭೂತ-ಭವ್ಯ-ಭವತ್-ಪ್ರಭುಃ"), ವಸ್ತುವಿನ ವ್ಯಾಪ್ತಿಯ, ಹರಡಿರುವಿಕೆಯ, ಆಕಾರದ, ರೂಪದ ದೃಷ್ಟಿಯಿಂದಲೂ ಕೊನೆಯೆಂಬುದೇ ಇರದ ಪರಬ್ರಹ್ಮತತ್ತ್ವವೇ ದೇಶಕಾಲವಸ್ತ್ವತೀತ ಪರತತ್ತ್ವವಾಗಿ ಅನಂತವು.
"ನ ವ್ಯಾಪಿತ್ವಾತ್, ದೇಶತೋऽನ್ತೋ ನಿತ್ಯತ್ವಾತ್, ನಾಪಿ ಕಾಲತಃ | ನ ವಸ್ತುತೋऽಪಿ ಸರ್ವಾತ್ಮ್ಯಾತ್, ಆನನ್ತ್ಯಂ ಬ್ರಹ್ಮಣಿ ತ್ರಿಧಾ || ದೇಶಕಾಲಾನ್ಯವಸ್ತೂನಾಂ ಕಲ್ಪಿತತ್ವಾತ್ ಚ ಮಾಯಯಾ | ನ ದೇಶಾದಿಕೃತೋऽನ್ತೋऽಸ್ತಿ ಬ್ರಹ್ಮಾನನ್ತಂ ತತಃ ಸ್ಫುಟಮ್ ||(ವಿದ್ಯಾರಣ್ಯರ ಪಂಚದಶೀ)"— ಸರ್ವವ್ಯಾಪಿಯಾದ್ದರಿಂದ ಬ್ರಹ್ಮಕ್ಕೆ ದೇಶದಲ್ಲಿ ಕೊನೆಯೆಂಬುದಿಲ್ಲ; ಅರ್ಥಾತ್, ಇಲ್ಲಿ ಇದೆ, ಅಲ್ಲಿ ಇಲ್ಲವೆಂಬುದಿಲ್ಲ; ಎಲ್ಲೆಡೆಯೂ ಇದೆ; ಬ್ರಹ್ಮದ ಇರುವಿಕೆ / ಸತ್ತೆಗೆ ಕೊನೆಯಿಲ್ಲ. ಹೀಗಾಗಿ ಬ್ರಹ್ಮವು ಅನಂತ. "ವ್ಯಾಪಿತ್ವಾತ್ ದೇಶತಃ, ಅನ್ತಃ, ನ". ಹಾಗೆಯೇ, "ನಿತ್ಯತ್ವಾತ್, ಕಾಲತಃ, ಅಪಿ ನ"— ಬ್ರಹ್ಮವು ನಿತ್ಯವಾದ್ದರಿಂದ ಕಾಲದ ದೃಷ್ಟಿಯಿಂದಲೂ ಅದು ಅನಂತ; ಅಂದರೆ ಆದಿ-ಮಧ್ಯ-ಅಂತ ರಹಿತ. ಹಿಂದೆಯೂ ಇಲ್ಲದಿರಲಿಲ್ಲ; ಇಂದೂ ಇಲ್ಲದಿಲ್ಲ; ಮುಂದೆಯೂ ಇಲ್ಲದಿರುವುದಿಲ್ಲವಾದ್ದರಿಂದ ಎಂದೆಂದೂ ಇರುವುದರಿಂದ ಅನಂತ. ವಸ್ತುವಿನ ದೃಷ್ಟಿಯಿಂದ, "ಸರ್ವಾತ್ಮ್ಯಾತ್, ವಸ್ತುತಃ, ಅಪಿ ನ"— ಬ್ರಹ್ಮವು ಎಲ್ಲರ ಆತ್ಮನಾದ್ದರಿಂದ, ವಸ್ತುದೃಷ್ಟಿಯಿಂದಲೂ ಅದು ಅನಂತ. ಈ ವಸ್ತುವಿನಲ್ಲಿದೆ, ಆ ವಸ್ತುವಿನಲ್ಲಿಲ್ಲವೆಂದಿಲ್ಲ, ಅದರಲ್ಲೂ ಇದೆ. ಹೀಗೆ, ಬ್ರಹ್ಮಕ್ಕೆ / ಪರಮಾತ್ಮನಿಗೆ / ಆತ್ಮನಿಗೆ ಅನಂತತೆಯು / ಆನಂತ್ಯವು ದೇಶ-ಕಾಲ-ವಸ್ತು ದೃಷ್ಟಿಗಳಿಂದ ೩ ಬಗೆಯಾಗಿರುವುದು. "ಆನನ್ತ್ಯಂ ಬ್ರಹ್ಮಣಿ ತ್ರಿಧಾ" . ಬೇರೆ ಬೇರೆ ದೇಶ, ವಿವಿಧ ಕಾಲ, ನಾನಾ ವಸ್ತು ಪರಿಕಲ್ಪನೆಯು ಮಾಯೆಯಿಂದಾಗಿ. "ದೇಶ-ಕಾಲ-ಅನ್ಯವಸ್ತೂನಾಂ ಮಾಯಯಾ ಕಲ್ಪಿತತ್ವಾತ್ ಚ". ಹೀಗಾಗಿ, ಬ್ರಹ್ಮವಸ್ತುವಿಗೆ ದೇಶಾದಿಗಳಿಂದಾದ ಕೊನೆಯೆಂಬುದಿಲ್ಲ—"ದೇಶಾದಿಕೃತಃ, ಅನ್ತಃ ನ ಅಸ್ತಿ". ಹಾಗಾದ್ದರಿಂದಲೇ (ತತಃ / ತಸ್ಮಾತ್), ಬ್ರಹ್ಮವು (ಬ್ರಹ್ಮ), ಅನಂತವೆಂಬುದು (ಅನನ್ತಂ), ಸ್ಪಷ್ಟವಾಗುವುದು (ಸ್ಫುಟಮ್).
ಗೋವಿನ್ದಃ—
"ಗಾಂ ವೇದಮಯೀಂ ವಾಣೀಂ ಗಾಂ ಭುವಂ ಧೇನುಮೇವ ವಾ | ಗಾಂ ಸ್ವರ್ಗಂ ವಿನ್ದತೀತ್ಯೇವಂ ವಿಷ್ಣುರ್ಗೋವಿನ್ದ ಈರಿತಃ ||"— ಗೋ ಶಬ್ದಕ್ಕೆ ವೇದಮಾತಾ, ಭೂಮಾತಾ, ಗೋಮಾತಾ, ಸ್ವರ್ಮಾತಾ / ದೇವಲೋಕ / ಸ್ವರ್ಗಲೋಕ ಎಂಬರ್ಥಗಳಿವೆ. ಇವೆಲ್ಲಕ್ಕೂ ಮೂಲನು ಪರಮಾತ್ಮನಾದ್ದರಿಂದ ವಿಷ್ಣುವು ಗೋವಿಂದನೆನಿಸಿರುವನು. ಆತನು ವರಾಹರೂಪದಿಂದ ಭೂದೇವಿಯನ್ನುದ್ಧರಿಸಿ, ಇಂದ್ರನಿಂದ ಸ್ವರ್ಗವು ನಿವೇದಿತವಾಗಿ, ಮತ್ಸ್ಯರೂಪದಿಂದ ವೇದವನ್ನುದ್ಧರಿಸಿ, ವೇದಾಂತವಾಕ್ಯಗಳ ರೂಪದಿಂದ ಇರುವುದರಿಂದಾಗಿಯೂ (ವಿದ್ಯತೇ) ಪರಮಾತ್ಮನು ಗೋವಿಂದನೆನಿಸಿರುವನು. "ಗೋಭಿರೇವ ಯತೋ ವೇದ್ಯೋ ಗೋವಿನ್ದಃ ಸಮುದಾಹೃತಃ"— ಇಂತಹ ಗೋವು(ಹಸು, ಭೂಮಿ, ಸ್ವರ್ಗ, ವೇದ, ವೇದಾಂತ)ಗಳಿಂದಲೇ ವೇದ್ಯನಾಗಿರುವುದರಿಂದಾಗಿ ಗೋವಿಂದನೆನಿಸಿದ್ದಾನೆ. "ನಷ್ಟಾಂ ತು ಧರಣೀಂ ಪೂರ್ವಮ್ ಅವಿನ್ದತ್, ಯತ್ ಗುಹಾಗತಾಮ್ | ಗೋವಿನ್ದ ಇತಿ ತೇನಾಹಂ ವೇದೈರ್ವಾಗ್ಭಿರಭಿಷ್ಟುತಃ ||"— ಹಿರಣ್ಯಾಕ್ಷನೆಂಬ ಆದಿದೈತ್ಯನಿಂದ ಹಿಂದೆ ರಸಾತಲಕ್ಕೆ ಪತನಗೊಂಡಿದ್ದ ಭೂತಲವನ್ನು ಮತ್ತೆ ಪಡೆದ ಪರಮಾತ್ಮನು ಗೋವಿಂದನೆಂದು ವೇದವಾಕ್ಕುಗಳಿಂದ ಸಂಸ್ತುತಿಸಲ್ಪಟ್ಟಿರುವನು. "ಗೌರೇಷಾ ಭವತೋ ವಾಣೀ ತಾಂ ಚ ವೇದಯತೇ ಭವಾನ್ | ಗೋವಿನ್ದಸ್ತು ತತೋ ದೇವ-ಮುನಿಭಿಃ ಕಥ್ಯತೇ ಭವಾನ್ ||"(ಹರಿವಂಶ)— ವೇದವು ನಿನ್ನದೇ ವಾಣಿ. ಅದನ್ನು ಯಥಾರ್ಥವಾಗಿ ನೀನೇ ಅರಿತಿರುವೆ. ಹಾಗಾಗಿಯೇ ನೀನು ದೇವತೆಗಳಿಂದಲೂ, ಮುನಿಗಳಿಂದಲೂ ಗೋವಿಂದನೆಂದು ಪೂಜಿತನಾಗಿರುವಿ. "ಗವಾಮ್ ಇನ್ದ್ರಃ ಗೋವಿನ್ದಃ"— ಗೋವುಗಳ ಪಾಲಕನು, ಒಡೆಯನು ಗೋವಿಂದನು.
ಹೀಗೆ, ಅಚ್ಯುತನೂ, ಅನಂತನೂ, ಗೋವಿಂದನೂ ಆದವನನ್ನು ("ಅಚ್ಯುತಾನನ್ತಗೋವಿನ್ದಮ್), ವನ್ದೇ— ವಂದಿಸುತ್ತೇನೆ. ಕೇಶವಮ್— ಕೇಶವನನ್ನು.
ಕೇಶವಃ—
"ಕ + ಈಶಃ + ವಯತಿ; ಕೋ ಬ್ರಹ್ಮಾ, ಈಶೋ ರುದ್ರಃ, ತೌ ಆತ್ಮನಿ ಸ್ವರೂಪೇ, ವಯತಿ ಪ್ರಲಯೇ ಉಪಾಧಿರೂಪಮೂರ್ತಿತ್ರಯಂ ಮುಕ್ತ್ವಾ, ಏಕಮಾತ್ರ-ಪರಮಾತ್ಮಸ್ವರೂಪೇಣ ಅವತಿಷ್ಠತೇ, ಇತಿ ಕೇಶವಃ"— ಕಃ ಎಂದರೆ ಬ್ರಹ್ಮಾ, ಈಶ—ರುದ್ರ, ಏಕಮೇವ ಪರತತ್ತ್ವದ ಕೇವಲ ನಾನಾ ರೂಪಭೇದಮಾತ್ರವಾಗಿರುವ ಇವರೀರ್ವರನ್ನೂ / ತ್ರಿಮೂರ್ತಿಗಳನ್ನೂ ಪ್ರಲಯಕಾಲದಲ್ಲಿ ಉಪಾಧಿವೈವಿಧ್ಯವನ್ನು ತೊರೆದು ಏಕಮಾತ್ರ ಪರಮಾತ್ಮಸ್ವರೂಪದಲ್ಲಿ ನೆಲೆನಿಲ್ಲುವುದರಿಂದ ಪರಮಾತ್ಮನು ಕೇಶವನೆನಿಸಿದ್ದಾನೆ. "ಕೇಶಂ ಕೇಶಿನಂ ವಾತಿ ಹನ್ತಿ"— ಸುಂದರವಾದ ಕೇಶಪಾಶವನ್ನು, ಸುಳಿಗೂದಲನ್ನು ವಾಯು / ಗಾಳಿ ಬೀಸಿದಾಗ ಅಲ್ಲಾಡಿಸುವಂತೆ ಅಲುಗಾಡಿಸುವವನು ಅಥವಾ ಕೇಶಿಯೆಂಬ ದೈತ್ಯನನ್ನು ಸಂಹರಿಸಿದವನು ಕೇಶವನು. "ಯಸ್ಮಾತ್ ತ್ವಯಾ ಹತೋ ಕೇಶೀ ತಸ್ಮಾತ್ಕೇಶವ ಈರಿತಃ" . "ಕೇಶಾಃ ಪ್ರಶಸ್ತಾಃ, ಅಭಿರೂಪಾಃ, ವಾ ಸನ್ತಿ ಅಸ್ಯ"— ಸುಂದರ ಗುಂಗುರಾದ ತಲೆಗೂದಲಿರುವುದರಿಂದಲೂ ಕೇಶವನು. "ಕಶ್ಚ ಅಶ್ಚ ಈಶಶ್ಚ ಕೇಶಾಃ, ಬ್ರಹ್ಮ-ವಿಷ್ಣು-ರುದ್ರಾಃ, ನಿಯಮ್ಯತಯಾ ಸನ್ತಿ ಅಸ್ಯ"— ಕ—ಬ್ರಹ್ಮಾ, ಅ—ವಿಷ್ಣು, ಈಶ—ಶಿವ. ಕೇಶಾಃ—ತ್ರಿಮೂರ್ತಿಗಳು. ಇವರೆಲ್ಲರ ನಿಯಾಮಕನಾಗಿರುವವನೇ ಕೇಶವನು. "ಕಶ್ಚ ಈಶಶ್ಚ ಕೇಶೌ, ಪುತ್ರಪೌತ್ರತ್ವೇನ ಸ್ತಃ, ಅಸ್ಯ"— ಕಃ-ಬ್ರಹ್ಮಾ, ಈಶ-ಶಂಕರ, ಕಃ ಮತ್ತು ಈಶ—ಕೇಶರು. ಬ್ರಹ್ಮನು ಯಾವನ ಪುತ್ರನೋ, ಈಶನು ಯಾವನ ಮೊಮ್ಮಗನೋ ಅಂತಹ ವಿಷ್ಣುವೇ ಕೇಶವನು. ಪದ್ಮನಾಭನ ನಾಭೀಕಮಲಸಂಜಾತನಾದ ಸೃಷ್ಟಿಕರ್ತಾ ಬ್ರಹ್ಮಾ ವಿಷ್ಣುಪುತ್ರನೂ, ಆ ಬ್ರಹ್ಮನ ಹಣೆಯಿಂದ ಕ್ರೋಧಾಂಶಸಂಭೂತನಾದ ಹರನು ಬ್ರಹ್ಮಪುತ್ರನೂ, ಹೀಗಾಗಿ ಹರಿಯ ಪೌತ್ರನೂ ಆಗುವನು.
"ಶಂಭೋಃಪಿತಾಮಹೋ ಬ್ರಹ್ಮಪಿತಾ ಶಕ್ರಾದ್ಯಧೀಶ್ವರಃ(ಪಾದ್ಮಪುರಾಣ)— ಶಂಭುವಿನ ಅಜ್ಜನೂ, ಬ್ರಹ್ಮನ ತಂದೆಯೂ, ಇಂದ್ರಾದಿಗಳ ಅಧೀಶ್ವರನೂ ಆದವನೇ ಕೇಶವನು, ವಾಸುದೇವನು. "ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ", "ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿಃ"(ವಿಷ್ಣುಸಹಸ್ರನಾಮ)— ನರಸಿಂಹದೇಹಧಾರಿ, ಲಕ್ಷ್ಮೀಪತಿ, ಪುರುಷ-ಉತ್ತಮ / ಪರಮ-ಆತ್ಮನೇ ಕೇಶವನು, ಮೂರು ಲೋಕದ ಆತ್ಮನೂ ಮೂರ್ಲೋಕದೊಡೆಯನೂ ಕೇಶಿಯನ್ನು ಕೊಂದವನೂ ಆದ ಹರಿಯೇ ಕೇಶವನು. "ತ್ರಿಮೂರ್ತಯಃ ಯಸ್ಯ ವಶೇ ವರ್ತನ್ತೇ ಸಃ ಕೇಶವಃ"— ತ್ರಿಮೂರ್ತಿಗಳೂ ಯಾರ ವಶದಲ್ಲಿರುವರೋ ಅವನೇ ಕೇಶವನು. "ಅಂಶವೋ ಯೇ ಪ್ರಕಾಶನ್ತೇ ಮಮ ತೇ ಕೇಶಸಂಜ್ಞಿತಾಃ | ಸರ್ವಜ್ಞಾಃ ಕೇಶವಂ ತಸ್ಮಾತ್ ಪ್ರಾಹುರ್ಮಾಂ ದ್ವಿಜಸತ್ತಮಾಃ"(ಮಹಾಭಾರತ)— ನನ್ನ ಪ್ರಕಾಶಿಸುತ್ತಿರುವ ಪ್ರಭಾಕಿರಣಗಳು ಕೇಶವೆನಿಸಿವೆ. ಹಾಗಾಗಿ ಸರ್ವಜ್ಞರಾದ ದ್ವಿಜಶ್ರೇಷ್ಠರು ನನ್ನನ್ನು ಕೇಶವನೆಂದು ಕರೆಯುವರು. "ಕೋ ಬ್ರಹ್ಮೇತಿ ಸಮಾಖ್ಯಾತ ಈಶೋऽಹಂ ಸರ್ವದೇಹಿನಾಮ್ | ಆವಾಂ ತವಾಂಶಸಂಭೂತೌ ತಸ್ಮಾತ್ ಕೇಶವನಾಮವಾನ್ ||(ಹರಿವಂಶ)"— ಕಃ-ಬ್ರಹ್ಮಾ, ಈಶ-ಶಿವ, ಇವರೀರ್ವರೂ ಆ ಪರಮಾತ್ಮನ ಅಂಶಭೂತರು. ಹಾಗಾಗಿ, ಪರಮಾತ್ಮನು ಕೇಶವನು. "ಕೇ ಜಲೇ ಶವವದ್ ಭಾತಿ ತೇನ ಕೇಶವ ಈರಿತಃ"— ಶ್ರೀಮನ್ನಾರಾಯಣನು ಅಪಾರವಾದ ಕ್ಷೀರಸಾಗರದಲ್ಲಿ ಯೋಗನಿದ್ರಾನಿರತನಾಗಿರುವಾಗ ಕೇವಲ ಶವದಂತೆ ತೋರುವುದರಿಂದ ಕೇ-ಶವನು.
ಅಂತಹ ಕೇಶವನನ್ನು ವಂದಿಸುತ್ತೇನೆ. (ಕರುಣಾಕರಮ್) ಕರುಣೆಯ / ದಯೆಯ / ಅನುಕಂಪದ ಆಕರನೂ ಆಶ್ರಯನೂ ಸಾಗರನೂ ಸಮುದ್ರನೂ ತವನಿಧಿಯೂ ಆಗಿರುವ, (ಕೃಷ್ಣ-ದಾಮೋದರಂ) ಸರ್ವರನ್ನೂ ತನ್ನೆಡೆಗೆ ಆಕರ್ಷಿಸುವ (ಕರ್ಷತಿ ಇತಿ ಕೃಷ್ಣಃ), ದುಷ್ಟರನ್ನು ದೀಪದ ಹುಳುಗಳಂತೆ ದಹಿಸುವ, ಶಿಷ್ಟರನ್ನು ಉದ್ಧರಿಸುವ, ಲೋಕಸುಸ್ಥಿತಿಕಾರಕನಾದ ಸತ್-ಆನಂದ ಸ್ವರೂಪೀ ಪರಮಾತ್ಮನು ಕೃಷ್ಣನೆನಿಸಿರುವನು. ("ಕೃಷಿರ್ಭೂವಾಚಕಃ ಶಬ್ದೋ ಣಶ್ಚ ನಿರ್ವೃತಿಕಾರಕಃ | ಸದಾನಂದಸ್ವರೂಪತ್ವಾತ್ ಕೃಷ್ಣ ಇತ್ಯಭಿಧೀಯತೇ ||" ಕೃಷ್ಣಶಬ್ದಕ್ಕೆ ಹೆಚ್ಚಿನ ವಿವರಣೆಗಳನ್ನು ಶ್ರೀಕೃಷ್ಣಸಹಸ್ರನಾಮದಲ್ಲಿ ನೋಡಬಹುದು). ದಾಮೋದರ— ದಾಮ - ಹಗ್ಗ, ಉದರ - ಹೊಟ್ಟೆ. ಬಾಲಕೃಷ್ಣನ ತುಂಟತನವನ್ನು ತಾಳಲಾರದೆ ಯಶೋದೆಯು ಆತನ ಹೊಟ್ಟೆಗೆ ಹಗ್ಗ ಬಿಗಿದು ಒರಳು ಕಲ್ಲಿಗೆ ಕಟ್ಟಿಹಾಕಿದ್ದರಿಂದ ದಾಮೋದರನೆನಿಸಿದನು ಶ್ರೀಕೃಷ್ಣ. (ವಾಮನಂ) ಬಲಿನಿಗ್ರಹಕ್ಕೆ ಬಾಲವಟುವಿನ ಅವತಾರವೆತ್ತಿದ ವಿಷ್ಣುವೇ ವಾಮನನು. ವಾಮನ—ಸುಂದರರೂಪಿ, ಪರಬಲವನ್ನು ನಿಗ್ರಹಿಸಬಲ್ಲವನೆಂದರ್ಥ. (ಚ) ಹಾಗೂ, (ತ್ರಿವಿಕ್ರಮಮ್) ಮೂರು ಲೋಕಗಳನ್ನು ತನ್ನ ಮೂರು ಹೆಜ್ಜೆಗಳಲ್ಲೇ ಕ್ರಮಿಸಿದ ತ್ರಿ-ವಿಕ್ರಮರೂಪೀ ವಾಮನಾವತಾರಿ ವಿಷ್ಣುವನ್ನು ವಂದಿಸುತ್ತೇನೆ. ವಾಮನನಾಗಿ ಅವತರಿಸಿ, ತ್ರಿವಿಕ್ರಮಗಾತ್ರಕ್ಕೆ ಭಕ್ತಾನುಗ್ರಹಕ್ಕಾಗಿಯೇ ಬೆಳೆದ, ಮೂಲಸ್ವರೂಪದಲ್ಲಿ ನಿರಾಕಾರನಾದ ಪರಮಾತ್ಮನನ್ನು ವಂದಿಸುತ್ತೇನೆ, ಶರಣುಹೊಂದುತ್ತೇನೆ.
ವೇಣುಗಾನವಿನೋದಂ ಶ್ರೀ
ವೇಣುಗೋಪಾಲನಾಮಕಮ್ |
ವೀಣಾಪಾಣಿಪ್ರಿಯಂ ವಿಶ್ವಂ
ನಾರದೇಡ್ಯಮಹರ್ನಿಶಮ್ || ೧೬ ||
ವೇಣುಗಾನವಿನೋದನನು ಶ್ರೀ
ವೇಣುಗೋಪಾಲನನು ವಿಶ್ವನ
ಗಾನಋಷಿಯಿಂ ನಿತ್ಯಪೂಜಿತನನ್ನು ಪೊಡಮಡುವೆ ||
(ವೇಣುಗಾನವಿನೋದಂ) ಕೊಳಲನ್ನು ನುಡಿಸುವುದರಲ್ಲೇ ವಿನೋದ / ಆನಂದ ಹೊಂದುವವನನ್ನು / ಲೀಲೆದೋರುವವನನ್ನು; (ಶ್ರೀವೇಣುಗೋಪಾಲನಾಮಕಮ್) ಅದರಿಂದಲೇ ಶ್ರೀವೇಣುಗೋಪಾಲನೆಂಬ ಹೆಸರುಳ್ಳವನನ್ನು; (ವೀಣಾಪಾಣಿಪ್ರಿಯಂ) ಕಚ್ಛಪೀವೀಣೆಯನ್ನು ಕರದಲ್ಲಿ ಪಿಡಿದಿರುವ ಶಾರದೆಗೆ ತನ್ನ ಪತಿ ಬ್ರಹ್ಮನ ತಂದೆಯಾದ್ದರಿಂದ ಹರಿಯು ಮಾವನೂ, ತಾನು ಬ್ರಹ್ಮಪುತ್ರಿಯೂ ಆದ್ದರಿಂದ ತನ್ನ ಪಿತಾಮಹನೂ ಆದ ಶ್ರೀಹರಿಯು ಅತಿಪ್ರಿಯನಾದವನು. ಅಲ್ಲದೆ, ಮಹತೀವೀಣಾಧಾರಿಯಾದ ಬ್ರಹ್ಮಮಾನಸಪುತ್ರ ದೇವರ್ಷಿ ನಾರದರಿಗೂ ಹರಿಯು ಅತಿಪ್ರಿಯದೇವನು. ಅಂಥವನನ್ನು; (ಅಹರ್ನಿಶಂ) ಹಗಲಿರುಳೂ, ಸದಾ, (ನಾರದ-ಈಡ್ಯಮ್) ದೇವರ್ಷಿನಾರದರಿಂದ ಸಂಸ್ತುತನಾದ, (ವಿಶ್ವಂ) ವಿಶ್ವರೂಪಿಯಾದ, ಸೃಷ್ಟಿರೂಪನಾದ ಪರಮಾತ್ಮನನ್ನು ವಂದಿಸುತ್ತೇನೆ.
ಪದ್ಮಾಕ್ಷಂ ಪದ್ಮವಕ್ತ್ರಂ ಚ
ಪದ್ಮಾಲಯಾಪತಿಂ ವಿಭುಮ್ |
ಪದ್ಮಿನೀವಲ್ಲಭಂ ವನ್ದೇ
ಪದ್ಮಯೋನಿಗುರುಂ ಪರಮ್ || ೧೭ ||
ಪದುಮನೇತ್ರನ ಪದುಮವದನನ
ಪದುಮವಾಸಿನಿರಮಣ ನಾಥನ
ಪದ್ಮಿನೀವಲ್ಲಭನ ಪದ್ಮಜಪಿತನ ಪೊಡಮಡುವೆ ||
(ಪದ್ಮಾಕ್ಷಂ) ತಾವರೆಯಂತಹ ಕಣ್ಣುಳ್ಳವನನ್ನು, (ಪದ್ಮವಕ್ತ್ರಂ) ಕಮಲದಂಥ ಮೊಗ(ಮುಖ/ಬಾಯಿ)ವುಳ್ಳವನನ್ನು, (ಪದ್ಮಾಲಯಾಪತಿಂ) ಕಮಲಾಸನೆಯೂ, ಕಮಲನಿವಾಸಿನಿಯೂ, ಕಮಲವನ್ನೇ ತನ್ನ ಮನೆಯನ್ನಾಗಿಸಿಕೊಂಡವಳೂ ಆಗಿ ಪದ್ಮಾಲಯಾ ಎನ್ನಿಸಿಕೊಂಡ ಲಕ್ಷ್ಮಿಯ ಪತಿಯನ್ನು, (ಪದ್ಮಿನೀವಲ್ಲಭಂ) ಪದ್ಮಿನಿ / ಕಮಲಿನಿಯೆನಿಸಿದ ಲಕ್ಷ್ಮಿಯ ಪತಿಯನ್ನು, (ಪದ್ಮಯೋನಿಗುರುಂ) ಪದ್ಮದಲ್ಲಿ, ನಾರಾಯಣನ ನಾಭೀಕಮಲದಲ್ಲಿ ಜನಿಸಿದ ಸೃಷ್ಟಿಕರ್ತ ಚತುರ್ಮುಖಬ್ರಹ್ಮನ ಗುರು / ಜನಕನಾದವನನ್ನು, (ಚ) ಹಾಗೂ, (ಪರಂ ವಿಭುಂ) ಲೋಕದ ಪರಮಪ್ರಭು / ಸರ್ವಾಧಿಕ ಅಧಿಪತಿಯನ್ನು, (ವನ್ದೇ) ವಂದಿಸುತ್ತೇನೆ.
ಪಂಚಾನನಸಖಂ ಪಂಚ-
-ಪ್ರಾಣಮೂಲಂ ಪ್ರಪಂಚಿತಮ್ |
ಪಂಚೇನ್ದ್ರಿಯನಿಯನ್ತಾರಂ
ಪಂಚಬಾಣಗುರುಂ ಭಜೇ || ೧೮ ||
ಪಂಚಮುಖ ಶಂಕರನ ಸಖನನು
ಪಂಚಪ್ರಾಣಗಳಧಿಪ ಹರಿಯ ಪ್ರ-
-ಪಂಚಮೂಲನು ಯೆನುತ ಲೋಕಪ್ರಸಿದ್ಧಿಪಡೆದವನ |
ಪಂಚಕರಣನಿಯಂತ್ರಕನ ನಿಜ
ಪಂಚಬಾಣನ ಪಿತನ ಸಿರಿಪತಿ
ಪಂಚಭೂತಗಳಾದಿ ಬ್ರಹ್ಮಾತ್ಮನನು ಶರಣೆಂಬೆ ||
(ಪಂಚಾನನಸಖಂ) ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ—ಎಂಬ ೫ ಮುಖಗಳಿಂದ ಕೂಡಿ ಪಂಚಾನನನೆನಿಸಿದ ಪರಶಿವನ ಮಿತ್ರನಾದವನನ್ನು, (ಪಂಚಪ್ರಾಣಮೂಲಂ) ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ—ಎಂಬ ೫ ಪ್ರಾಣಗಳಿಗೂ ಮೂಲನಾದವನನ್ನು, (ಪಂಚೇಂದ್ರಿಯ-ನಿಯನ್ತಾರಂ) ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳೆಂಬ ೫ ಜ್ಞಾನೇಂದ್ರಿಯಗಳ ನಿಯಂತ್ರಕನನ್ನು / ಹೃಷೀಕೇಶನನ್ನು (ಹೃಷೀಕ—ಇಂದ್ರಿಯ, ಈಶ—ಒಡೆಯ)—(ಪ್ರಪಂಚಿತಂ) ಈ ಎಲ್ಲ ರೀತಿಗಳಿಂದ ಕೂಡಿರುವನೆಂದು ಪ್ರಪಂಚದಲ್ಲೇ ಜ್ಞಾನಿಗಳಿಂದ ಚರ್ಚಿತನಾದವನನ್ನು / ಪ್ರಪಂಚರೂಪವಾಗಿ ತೋರುವವನನ್ನು, ಪ್ರಪಂಚಕ್ಕೇ ಮೂಲನಾದವನೆಂದು ಪ್ರಸಿದ್ಧನಾದವನನ್ನು, (ಪಂಚಬಾಣಗುರುಂ) ಅಂತಹ ಪಂಚಬಾಣ / ಮನ್ಮಥ ನ ಜನಕನಾದ ವಿಷ್ಣುವನ್ನು, ಪೃಥ್ವಿ, ಅಪ್ / ಜಲ, ತೇಜ / ಅಗ್ನಿ, ವಾಯು, ಆಕಾಶಗಳೆಂಬ ಪಂಚಭೂತಗಳ ಮೂಲನಾದ ಪರಬ್ರಹ್ಮಾತ್ಮಸ್ವರೂಪನನ್ನು, (ಭಜೇ) ಭಜಿಸುತ್ತೇನೆ.
ಪಂಚಬಾಣಃ—
ಮನ್ಮಥ, ಕಾಮದೇವ, ಪ್ರದ್ಯುಮ್ನ, ಕೃಷ್ಣ-ರುಕ್ಮಿಣಿಯರ ಮಗ. "ಮದನೋ ಮನ್ಮಥೋ ಮಾರಃ ಪ್ರದ್ಯುಮ್ನೋ ಮೀನಕೇತನಃ | ಕಂದರ್ಪೋ ದರ್ಪಕೋ ಅನಙ್ಗಃ ಕಾಮಃ ಪಞ್ಚಶರಃ ಸ್ಮರಃ || ಶಂಬರಾರಿರ್ಮನಸಿಜಃ ಕುಸುಮೇಷುರನನ್ಯಜಃ | ಪುಷ್ಪಧನ್ವಾ ರತಿಪತಿರ್ಮಕರಧ್ವಜ ಆತ್ಮಭೂಃ ||"—ಇವು ಅಮರಕೋಷದಲ್ಲಿರುವ ಪರ್ಯಾಯಪದಗಳು. "ಅರವಿನ್ದಮಶೋಕಂ ಚ ಚೂತಂ ಚ ನವಮಲ್ಲಿಕಾ | ನೀಲೋತ್ಪಲಂ ಚ ಪಂಚೈತೇ ಪಞ್ಚಬಾಣಸ್ಯ ಸಾಯಕಾಃ || ಉನ್ಮಾದನಸ್ತಾಪನಶ್ಚ ಶೋಷಣಸ್ತಮ್ಭನಸ್ತಥಾ | ಸಂಮೋಹನಶ್ಚ ಕಾಮಸ್ಯ ಪಞ್ಚ ಬಾಣಾಃ ಪ್ರಕೀರ್ತಿತಾಃ || ಅರವಿಂದ, ಅಶೋಕ, ಚೂತ, ನವಮಲ್ಲಿಕಾ, ನೀಲೋತ್ಪಲಗಳು ಆತನ ಪಂಚಸುಮ (೫ ಹೂ)ಬಾಣಗಳು. ಉನ್ಮಾದನ, ತಾಪನ, ಶೋಷಣ, ಸ್ತಂಭನ, ಸಂಮೋಹನಗಳು—ಇವು ೫ ಆತನ ೫ ಭಾವವಿಕಾರಗಳನ್ನು ಮಾಡತಕ್ಕ ಕಾಮೋದ್ದೀಪಕ ಅಸ್ತ್ರಗಳು. ಇನ್ನು ಪಂಚೇಂದ್ರಿಯಗಳನ್ನು ಪ್ರಚೋದಿಸಿ ಕಾಮವಿಕಾರವುಂಟುಮಾಡುವ ಮನ್ಮಥಾಸ್ತ್ರಗಳೇ ಪಂಚಬಾಣಗಳೆಂದೂ ಹೇಳುವರು. ಕಾಮಪ್ರಚೋದಕ— ದೃಶ್ಯವನ್ನು ನೋಡುವಂತೆ, ಶ್ರಾವ್ಯವನ್ನು / ಮಾತು-ಸಂಗೀತಾದಿಗಳನ್ನು ಕೇಳುವಂತೆ, ಆಘ್ರೇಯವನ್ನು ಆಘ್ರಾಣಿಸುವಂತೆ, ಮದ್ಯಾದಿಗಳನ್ನು ರುಚಿಸುವಂತೆ, ಸ್ಪರ್ಶ್ಯಗಳನ್ನು ಸ್ಪರ್ಶಿಸುವಂತೆ ಮನಸ್ಸನ್ನೂ ಪ್ರೇರಿಸುವ ಮಾಯಾಮೋಹಕಶಕ್ತಿಯೇ ಆತನದು.
ರಾಮಾಯಣಮಹಾಲೀಲಂ
ಸಾರಾಯಣಮನಾಮಯಮ್ |
ಪಾರಾಯಣಮನನ್ಯಂ ತಂ
ನಾರಾಯಣಮಹಂ ಭಜೇ || ೧೯ ||
ರಾಮನಯನಮಹಾಂತಲೀಲನ
ಸಾರದಯನಮನಾಮಯತೆಯಿಹ
ಶೇಷಶಯನಚ್ಯುತನ ವೈಕುಂಠಾಧಿಪನ ಹರಿಯ |
ಪಾರದಯನನನನ್ಯರಹಿತನ-
-ಪಾರದಯೆಯುತನಂತಪುರಪತಿ-
-ಯಾರು ನೆನೆದರು ಕರುಣಿಪನ ತಿರು ಶರಣು ಪೋಗುವೆನು ||
(ರಾಮಾಯಣಮಹಾಲೀಲಂ) ರಾಮಾಯಣವೆಂಬ ಶ್ರೀರಾಮಚಂದ್ರನು ನಡೆದ ಅಯನ / ದಾರಿಯ ಮಹಾನ್ ಲೀಲೆಯನ್ನು ತೋರಿದ, (ಸಾರಾಯಣಮ್) ಸಕಲವೇದ-ಶಾಸ್ತ್ರಗಳ ಸಾರವಾದ ಮೋಕ್ಷಕ್ಕೆ ಅಯನ / ಆಶ್ರಯ / ಪಥವಾದ, (ಅನಾಮಯಮ್) ಯಾವುದೇ ಆಮಯ / ರೋಗ, ಕುಂದು, ಕೊರತೆ ಇಲ್ಲದ, (ಅನನ್ಯಂ ಪಾರಾಯಣಂ—ಪಾರದ ಅಯನನನು+ಅನ್ಯರಹಿತನ, ಅಪಾರದಯೆಯುತ ಅನಂತಪುರಪತಿಯ) ಅವನಂತಹ ಭವಸಾಗರದ ಪಾರ / ದಡ ಸೇರಿಸಬಲ್ಲ ಅಯನ / ದಾರಿ ಬೇರಾವುದೂ ಇಲ್ಲದ ("ನಾನ್ಯಃ ಪನ್ಥಾ ವಿದ್ಯತೇऽಯನಾಯ"— ವೈದಿಕ ಪುರುಷಸೂಕ್ತ), (ತಂ) ಅಂತಹ, (ಆರು ನೆನೆದರು ಕರುಣಿಪನ) ಯಾರು, ಎಂಥವರು ನೆನೆದರೂ ಯಾವ ಭೇದವಿಲ್ಲದೆ ಕರುಣೆದೋರುವ, (ನಾರಾಯಣಮ್) ಶ್ರೀಮನ್ನಾರಾಯಣನೆಂದೂ ಕರೆಯಲ್ಪಡುವ ಪರಮೇಶ್ವರ ಪರಮಾತ್ಮ ಭಗವಂತನನ್ನು, (ಅಹಂ ಭಜೇ—ತಿರು ಶರಣು ಪೋಗುವೆನು) ನಾನು ಅತಿಶಯವಾಗಿ ಭಜಿಸುತ್ತೇನೆ, ಶರಣುಹೊಂದುತ್ತೇನೆ.
ವಿಶ್ವನಾಯಕಮೀಶಾನಂ
ವಿಶ್ವಾತ್ಮಾನಂ ಜನೇಡಿತಮ್ |
ವಿಶ್ವನಾಮಾನಮಾನನ್ದಂ
ವಿಶ್ವರೂಪಮಹಂ ಭಜೇ || ೨೦ ||
ವಿಶ್ವನಾಯಕನೀಶ್ವರನ ತಾ
ವಿಶ್ವದಾತ್ಮನ ವಿಶ್ವವಂದ್ಯನ
ವಿಶ್ವವ್ಯಾಪಕ ವಿಷ್ಣುನಾಮಕ ದೇವದೇವನನು |
ವಿಶ್ವನಾಮಕ ವಿಶ್ವರೂಪನ
ವಿಶ್ವಸುಖಮೂಲಾತ್ಮರೂಪನ
ವಿಶ್ವಪ್ರಾಣನ ಸಚ್ಚಿದಾನಂದಾತ್ಮಕನ ನೆನೆವೆ ||
(ವಿಶ್ವನಾಯಕಮ್—ವಿಶ್ವನಾಯಕನ) ವಿಶ್ವಕ್ಕೇ ನಾಯಕನಾದ, (ಈಶಾನಂ—ಈಶ್ವರನ) ಈಶ್ವರನಾದ, (ವಿಶ್ವಾತ್ಮಾನಂ—ತಾ ವಿಶ್ವದ ಆತ್ಮನ) ಎಲ್ಲರ, ಎಲ್ಲದರ ಆತ್ಮನೇ ಆದ, (ಜನೇಡಿತಂ—ವಿಶ್ವವಂದ್ಯನ) ಸಕಲ ಜನರಿಂದಲೂ ಸ್ತುತಿಸಲ್ಪಡುವ, (ವಿಶ್ವನಾಮಾನಮ್) ವಿಶ್ವಮ್ ಎಂಬ ಹೆಸರಿನಿಂದ ವಿಷ್ಣುಸಹಸ್ರಾದಿಯಲ್ಲೇ ಮುಂತಾಗಿ ಸ್ತುತನಾದ, (ವಿಶ್ವರೂಪಂ) ಈ ಸಮಸ್ತ ಸೃಷ್ಟಿರೂಪದಿಂದ ವಿಶ್ವಾಕಾರವಾಗಿ ತೋರುತ್ತಿರುವ, (ಆನನ್ದಮ್) ಪರಮಾನಂದ / ಬ್ರಹ್ಮಾನಂದ / ಆತ್ಮಾನಂದ / ಸಚ್ಚಿದಾನಂದ ಸ್ವರೂಪವನ್ನು, (ಅಹಂ) ನಾನು, (ಭಜೇ) ಭಜಿಸುತ್ತೇನೆ.
ವಿಶ್ವಮ್—
"ವಿಶತಿ ಸ್ವಕಾರಣಮ್, ವಿಶ ಪ್ರವೇಶನೇ" ತನ್ನ ಮೂಲಕಾರಣವನ್ನೇ ಕೊನೆಗೆ ಪ್ರವೇಶಿಸುವ ಈ ಜಗವೇ ವಿಶ್ವವು. "ವಿಶ್ವಂ ವೈ ಬ್ರಹ್ಮ ತನ್ಮಾತ್ರಂ ಸಂಸ್ಥಿತಂ ವಿಷ್ಣುಮಾಯಯಾ | ಈಶ್ವರೇಣ ಪರಿಚ್ಛಿನ್ನಂ ಕಾಲೇನಾವ್ಯಕ್ತಮೂರ್ತಿನಾ ||(ಭಾಗವತ)" ವಿಶ್ವವು / ಎಲ್ಲವೂ ಬ್ರಹ್ಮವೇ ಮೂಲವಾಗುಳ್ಳದ್ದು. ವಿಷ್ಣುಮಾಯೆಯಿಂದ ತೋರುತ್ತಿರುವುದು. ತೋರದೇ ಅವ್ಯಕ್ತವಾಗಿರುವ ಕಾಲಪುರುಷನಾದ ಪರಮೇಶ್ವರನಿಂದ / ಭವನಿಂದ ಅಖಂಡವಾದ ಬ್ರಹ್ಮವು ಪರಿಚ್ಛಿನ್ನವಾಗಿ, ಬೇರೆ ಬೇರೆಯಾಗಿ, ಖಂಡ ಖಂಡವಾಗಿ ಭವಸಾಗರವಾಗಿ ತೋರುತ್ತಿರುವುದು. "ವಿಶ್ವಮಶೇಷಂ ಕೃತ್ಸ್ನಂ, ಸಮಸ್ತ-ನಿಖಿಲಾಖಿಲಾನಿ | ನಿಃಶೇಷಂ ಸಮಗ್ರಂ ಸಕಲಂ, ಪೂರ್ಣಮಖಣ್ಡಂ ಸ್ಯಾದನೂನಕೇ || (ಅಮರಕೋಷ)" ಸಕಲ, ಸರ್ವ, ಸಮಗ್ರ, ಎಲ್ಲ, ಪೂರ್ಣ, ಅಖಂಡ, ನ್ಯೂನತೆಯಿಲ್ಲದ / ಅನ್ಯೂನ, ನಿಃಶೇಷ, ಅಶೇಷ, ಸಮಸ್ತ, ನಿಖಿಲ, ಅಖಿಲ ಎಂಬರ್ಥಗಳೂ ಇವೆ.
ನಾಯಕಃ—
"ನಯತಿ ಪ್ರಾಪಯತಿ ಇತಿ" ಕರೆದೊಯ್ಯುತ್ತಾನೆ, ಗುರಿತಲುಪಿಸುತ್ತಾನೆಂಬುದರಿಂದ ನಾಯಕನು. "ಅಧಿಭೂರ್ನಾಯಕೋ ನೇತಾ ಪ್ರಭುಃ ಪರಿವೃಢೋऽಧಿಪಃ | ಅಧಿಕರ್ದ್ಧಿಃ ಸಮೃದ್ಧಃ ಸ್ಯಾತ್ ಕುಟುಂಬವ್ಯಾಪೃತಸ್ತು ಯಃ ||(ಅಮರಕೋಷ)" ಇವು ಪರ್ಯಾಯವಾಚಿಗಳು.
ಸರ್ಗಸ್ಥಿತಿಲಯಾಧೀಶಂ
ಬ್ರಹ್ಮವಿಷ್ಣುಶಿವಾತ್ಮಕಮ್ |
ಪರಾಶಕ್ತಿಯುತಂ ವನ್ದೇ
ಚರಾಚರಸ್ವರೂಪಿಣಮ್ || ೨೧ ||
ಸೃಷ್ಟಿಕಾರಣ ಪಾಲನಾದಿ ವಿ-
-ಸೃಷ್ಟಿಕಾರಕ ಬೊಮ್ಮ ಹರಿ ಮೃಡ-
-ರಿಷ್ಟಕಾರಕ ಸರ್ವಮೂಲಾತ್ಮಕನೆ ಪರಬೊಮ್ಮ |
ಕಷ್ಟಹಾರಕ ಶಕ್ತಿರೂಪನ-
-ನಿಷ್ಟದಾಯಕ ಮುಕುತಿಗೊಡೆಯನ
ಸೃಷ್ಟಿರೂಪಾತ್ಮಕನ ನೆನೆನೆನೆದೈಕ್ಯಗೊಳು ಮನವೆ ||
(ಸರ್ಗ-ಸ್ಥಿತಿ-ಲಯ-ಅಧೀಶಂ) ಸೃಷ್ಟಿ, ಸ್ಥಿತಿ, ಲಯಗಳಿಗೆ ಅಧಿಪತಿಯಾದ, (ಬ್ರಹ್ಮ-ವಿಷ್ಣು-ಶಿವಾತ್ಮಕಂ) ಅನುಕ್ರಮವಾಗಿ ಆಯಾ ಕಾರ್ಯಗಳಿಗೆ ಬ್ರಹ್ಮಾ, ವಿಷ್ಣು, ಶಿವನಾಗಿ ತೋರುವ, ಅವರೆಲ್ಲರ ಆತ್ಮನಾದ, (ಚರ-ಅಚರ-ಸ್ವರೂಪಿಣಮ್) ಸಮಸ್ತ ಚರಾಚರಗಳ, ಸ್ಥಾವರ-ಜಂಗಮಯೋನಿಗಳ, ಜಡ-ಚೇತನರ ಸ್ವರೂಪನಾಗಿ ತೋರುವ, (ಪರಾಶಕ್ತಿಯುತಂ) ಪರಾಶಕ್ತಿಯಿಂದ ಕೂಡಿಕೊಂಡಿರುವಂತೆ ತೋರುವ, ನಿರ್ಗುಣ ನಿರುಪಾಧಿಕ ಪರಬ್ರಹ್ಮ ಪರಮಾತ್ಮನನ್ನು, (ವನ್ದೇ) ವಂದಿಸುತ್ತೇನೆ.
ಸೃಷ್ಟಿಗೆ ಕಾರಣನಾದ, ಪಾಲನೆ-ಲಯಗಳಿಗೂ ಕಾರಕನಾದ, ಬ್ರಹ್ಮ ವಿಷ್ಣು, ಮೃಡರ ಹಾಗೂ ಸಕಲರ ಮೂಲ ಆತ್ಮನಾಗಿ ಬೇಕಾದ ಇಷ್ಟವನ್ನೀಯುವ ಪರಬ್ರಹ್ಮನು, ಸಕಲರ ಸಂಕಟಪರಿಹಾರಕನೂ ಹೌದು. ಅಂತಹ ಶಕ್ತಿರೂಪನನು, ಇಷ್ಟದಾಯಕನನ್ನು, ಮುಕ್ತಿಗಧಿಪತಿಯಾದವನನ್ನು, ಸೃಷ್ಟಿರೂಪದಿಂದ ತೋರುವ ಹಾಗೂ ಅದರೊಳಗಿನ ಚಾಲಕ ಆತ್ಮನಾದ ನಮ್ಮಂತರಾತ್ಮನಾದ ಪರಮಾತ್ಮನನ್ನು ಸದಾ ಪುನಃಪುನಃ ಸ್ಮರಿಸುತ್ತಾ ತನ್ಮಯನಾಗಿ ಅದೇ ತಾನಾಗಿಬಿಡು ಹೇ ನನ್ನ ಮನವೆ!
Comments
Post a Comment