ಸ್ತೋತ್ರಸಂಹಿತಾ ೨.೧ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)
ಲಕ್ಷ್ಮೀನಾರಾಯಣಪ್ರಪತ್ತಿ:
(ವಸಂತತಿಲಕಾವೃತ್ತಮ್)
ಲಕ್ಷ್ಮೀತರಂಗಯುತಸಾಗರರೂಪಧಾರಿನ್
ನಾರಾಯಣಾಚ್ಯುತಪದಸ್ಥಿತವಿಷ್ಣುರೂಪಿನ್ |
ವೇದಾಂತವೇದ್ಯ ನಿಖಿಲಾಗಮಶಾಸ್ತ್ರಸಾರ
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೧||
ಸಿರಿತರಂಗನೆ ಸಾಗರಾತ್ಮನೆ
ಹರಿನರಾತ್ಮಾಚ್ಯುತಪದಸ್ಥಿತ
ಕರಿವರದ ನಾರಯಣ ವಿಷ್ಣುವೆ ವೇದಪ್ರತಿಪಾದ್ಯ |
ಪರಿಪರಿಯ ಶಾಸ್ತ್ರಗಳ ಸಾರನೆ
ಪರಿಹರಿಸು ಸಜ್ಜನರ ಸಂಕಟ
ಸಿರಿಯರಸ ಲಕುಮಿಪತಿ ದೇವನ ಶರಣು ಪೋಗುವೆನು ||
(ಲಕ್ಷ್ಮೀ-ತರಂಗಯುತ-ಸಾಗರರೂಪಧಾರಿನ್—ಸಿರಿ-ತರಂಗನೆ ಸಾಗರಾತ್ಮನೆ) ಮಹಾಲಕ್ಷ್ಮಿಯೆಂಬ ಅಲೆಗಳುಳ್ಳ ಸಾಗರಕ್ಕೂ ಆತ್ಮನಾಗಿರುವ ರೂಪವನ್ನು ಧರಿಸಿದವನೆ! (ನಾರಾಯಣ—ನಾರಯಣ)(ನಾರ—ಮೋಕ್ಷ, ಅಯನ—ಆಶ್ರಯ, ಪಥ) ಮೋಕ್ಷಸ್ವರೂಪನಾಗಿ ನಾರಾಯಣನೆನಿಸಿದವನೆ! ಹೇ ನಾರಾಯಣನೆ! (ಅಚ್ಯುತಪದಸ್ಥಿತ—ಹರಿ-ನರ-ಆತ್ಮಾ-ಅ-ಚ್ಯುತ-ಪದ-ಸ್ಥಿತ) ಎಂದೆಂದೂ ನಾಶವಿರದ ಸ್ಥಾನದಲ್ಲಿರುವನಾದರೂ ಹರಿ-ನರ-ಆತ್ಮ-ಅಚ್ಯುತವೆಂಬಂತೆ (ವಿಷ್ಣುರೂಪಿನ್—ವಿಷ್ಣುವೆ) ಸರ್ವವ್ಯಾಪಕನಾದ ಮಹಾವಿಷ್ಣುಸ್ವರೂಪನೆ! (ಕರಿ-ವರ-ದ) ಗಜೇಂದ್ರಗೊಲಿದು ವರವಿತ್ತ ಶ್ರೀಹರಿಯೆ! (ವೇದಾನ್ತವೇದ್ಯ—ವೇದ-ಪ್ರತಿಪಾದ್ಯ) ವೇದ-ವೇದಾಂತ / ಉಪನಿಷತ್ತುಗಳಿಂದ ಪ್ರತಿಪಾದ್ಯನಾಗಿ ತಿಳಿಯಲ್ಪಡತಕ್ಕವನೆ! (ನಿಖಿಲಾಗಮಶಾಸ್ತ್ರಸಾರ—ಪರಿಪರಿಯ ಶಾಸ್ತ್ರಗಳ ಸಾರನೆ) ಎಲ್ಲ ವಿಧದ ಆಗಮ-ಶಾಸ್ತ್ರಾದಿಗಳ ಸಾರಸ್ವರೂಪನೆ! (ಪರಿಹರಿಸು ಸಜ್ಜನರ ಸಂಕಟ) ನೀನು ಸಜ್ಜನರ ಸಂಕಷ್ಟಗಳನ್ನು ಪರಿಹರಿಸು. ( ಲಕ್ಷ್ಮೀಪತೇ) ಅಂತಹ ಹೇ ಸಿರಿಯ (ಶ್ರೀ ಸಂಸ್ಕೃತ, ಸಿರಿ ತದ್ಭವ) ಅರಸನೆ! ಲಕ್ಷ್ಮೀಪತಿಯೆ! (ಲಕ್ಷ್ಮೀ—ಲಕುಮಿ) ಅಂತಹ ಬೆಳಗುವ ದೇವದೇವನಾದ (ತವ ಪದಂ) ನಿನ್ನ ಚರಣಾರವಿಂದಕ್ಕೆ, (ಶರಣಂ ಪ್ರಪದ್ಯೇ—ಶರಣು ಪೋಗುವೆನು) ಶರಣಾಗುತ್ತೇನೆ.
ದೇವಾಧಿದೇವ ಮೃದುಪಂಕಜಪದ್ಮಪಾದ
ಕ್ಷೀರಾಬ್ಧಿವಾಸ ವಿಧಿಶಂಕರಪೂಜ್ಯಮೂರ್ತೇ |
ಹೇ ಶೇಷತಲ್ಪ ರಮಯಾರ್ಚಿತದಿವ್ಯದೇಹ
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೨||
ದೇವರಧಿಪನೆ ದೇವಕಾರಣ
ದೇವಸುಮಮೃದುಪಾದಪಂಕಜ
ಹಾವ ಮೇಲೊರಗಿರುವ ಹಾಲಸಮುದ್ರಶಾಯಿ ಹರೇ |
ಭಾವಕೊಲಿವನೆ ರುದ್ರಬೊಮ್ಮರ
ಸೇವೆಗೊಂಬನೆ ಸಿರಿಯ ಸಂತತ
ಸಾವ ಮೀರಿದ ಗತಿಯ ನೀಡುವನನ್ನು ಶರಣಾಪೆ ||
(ದೇವ-ಅಧಿ-ದೇವ—ದೇವರಧಿಪನೆ ದೇವಕಾರಣ) ಸಕಲ ದೇವರ ದೇವನೆ! ಸರ್ವದೇವತೆಗಳ ಮೂಲಕಾರಣನೆ! (ಮೃದು-ಪಂಕಜ-ಪದ್ಮಪಾದ—ದೇವ-ಸುಮ-ಮೃದು-ಪಾದ-ಪಂಕ-ಜ) ದೈವೀಪುಷ್ಪದಷ್ಟು ಮೃದುವಾದ ಚರಣಕಮಲವನ್ನುಳ್ಳವನೆ! (ಪಂಕ—ಕೆಸರು, ಜ—ಜನಿಸಿದ, ಪಂಕಜ—ಕೆಸರಲಿ ಪುಟ್ಟಿದ), (ಕ್ಷೀರಾಬ್ಧಿವಾಸ—ಹಾಲಸಮುದ್ರ-ಶಾಯಿ ಹರೇ) ಹೇ ಕ್ಷೀರಸಾಗರನಿವಾಸನೆ! ಹಾಲಿನ ಸಮುದ್ರದಲ್ಲಿ ಪವಡಿಸಿರುವ ಶ್ರೀಹರಿಯೇ! (ಹೇ ಶೇಷತಲ್ಪ—ಹಾವ ಮೇಲೆ ಒರಗಿರುವ) ಹೇ ಆದಿಶೇಷನನ್ನೇ ಹಾಸಿಗೆಯನ್ನಾಗಿಸಿದವನೆ! ಶೇಷನ ಮೇಲೆ ಮಲಗಿರುವವನೆ! (ಭಾವಕೆ ಒಲಿವನೆ) ಭಕ್ತಿ, ಪ್ರೇಮ, ಭಾವನೆಗಳಿಗೆ ಒಲಿಯುವವನೆ! (ವಿಧಿ-ಶಂಕರ-ಪೂಜ್ಯ-ಮೂರ್ತೇ—ರುದ್ರ-ಬೊಮ್ಮರ ಸೇವೆ ಕೊಂಬನೆ) ಬ್ರಹ್ಮಾ-ಶಿವರಿಂದ ಪೂಜಿತನಾದವನೆ! (ರಮಯಾ-ಅರ್ಚಿತ-ದಿವ್ಯದೇಹ—ಸಂತತ ಸಿರಿಯ ಸೇವೆಗೊಂಬನೆ) ಅನುಕ್ಷಣವೂ ಶ್ರೀದೇವಿಯಿಂದ ಸೇವೆಯನ್ನು ತೆಗೆದುಕೊಳ್ಳುವ ದಿವ್ಯದೇಹಧಾರಿಯೆ! (ಸಾವ ಮೀರಿದ ಗತಿಯ ನೀಡುವನನ್ನು) ಹುಟ್ಟು ಸಾವುಗಳಾಚೆಯ ಅಮೃತತ್ವ / ಮುಕುತಿಯನ್ನೀವ ಹೇ ಶ್ರೀಹರಿಯೆ! (ಲಕ್ಷ್ಮೀಪತೇ) ಲಕ್ಷ್ಮೀನಾರಾಯಣನೆ! (ತವ ಪದಂ) ನಿನ್ನ ಪದಾರವಿಂದಗಳಿಗಿದೋ, (ಶರಣಂ ಪ್ರಪದ್ಯೇ—ಶರಣು ಆಪೆ) ನಾ ಶರಣಾಗುವೆನು.
ಕೌಮೋದಕೀವರಗದಾಯುಧಚಾರುಗಾತ್ರ
ಹೇ ಪಾಂಚಜನ್ಯಕರ ಕೌಸ್ತುಭಹಾರಪಾತ್ರ |
ಹೇ ಚಕ್ರಧಾರಿ ಕಮಲಾಕರ ಪದ್ಮನೇತ್ರ
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೩||
ಕುಮುದಕೀಯ ಗದಾಧರನೆ ಹರಿ
ಸಮುದಯಿಸುತಿಹ ಭಾನುತೇಜನೆ
ಕುಮುದಗಾತ್ರನೆ ಪಾಂಚಜನ್ಯಾತ್ಮಕನೆ ಶಂಖಾತ್ಮ |
ಪ್ರಮುದಿತಾತ್ಮನೆ ಚಕ್ರಧಾರಿಯೆ
ಕುಮುದಕರ ಕೌಸ್ತುಭವನುರದೊಳು
ಸಮುಚಿತದಿ ಧರಿಸಿರ್ಪ ಶ್ರೀಪತಿಯನ್ನು ಶರಣೆಂಬೆ ||
(ಕೌಮೋದಕೀ-ವರ-ಗದಾ-ಆಯುಧ-ಚಾರು-ಗಾತ್ರ—ಕುಮುದಕೀಯ ಗದಾ ಧರನೆ ಹರಿ) ಕೌಮೋದಕೀ ಎಂಬ ಶ್ರೇಷ್ಠವಾದ ಗದಾಯುಧವನ್ನು ಧರಿಸಿರುವ ಸುಂದರವಾದ ದಿವ್ಯಶರೀರಿಯೆ, (ಸಮುದಯಿಸುತಿಹ ಭಾನುತೇಜನೆ) ಉದಯರವಿಯಂತಹ ತೇಜಸ್ಸುಳ್ಳವನೆ, (ಕುಮುದ-ಗಾತ್ರನೆ) ಕಮಲದಂತಹ ಸುಕೋಮಲತನುವುಳ್ಳವನೆ, (ಹೇ ಪಾಂಚಜನ್ಯ-ಕರ—ಪಾಂಚಜನ್ಯಾತ್ಮಕನೆ ಶಂಖಾತ್ಮ) ಪಾಂಚಜನ್ಯವೆಂಬ ಶಂಖವನ್ನು ಕೈಯಲ್ಲಿ ಧರಿಸಿದವನೆ, (ಪ್ರಮುದಿತಾತ್ಮನೆ) ಸಚ್ಚಿದಾನಂದಸ್ವರೂಪನೆ, (ಹೇ ಚಕ್ರಧಾರಿ—ಚಕ್ರಧಾರಿಯೆ) ಸುದರ್ಶನವೆಂಬ ಚಕ್ರಾಯುಧವನ್ನು ಧರಿಸಿರುವವನೆ, (ಕೌಸ್ತುಭ-ಹಾರ-ಪಾತ್ರ—ಕೌಸ್ತುಭವನು ಉರದೊಳು ಸಮುಚಿತದಿ ಧರಿಸಿರ್ಪ) ವರಕೌಸ್ತುಭಮಣಿಯನ್ನು ಎದೆಯಲ್ಲಿ ಸುಂದರವಾಗಿ ಧರಿಸಿರುವವನೆ, (ಕಮಲಾ-ಆಕರ) ಕಮಲಾಸನೆಯಾಗಿ ಕಮಲಾನಾಮಕಳೂ ಆದ ಮಹಾಲಕ್ಷ್ಮಿಯ ಆಶ್ರಯಸ್ಥಾನನೆ, (ಕುಮುದಕರ) ಪದ್ಮಪುಷ್ಪವನ್ನೂ ಕರದಲ್ಲಿ ಪಿಡಿದವನೆ, (ಪದ್ಮನೇತ್ರ) ಕಮಲನಯನನೆ, (ಲಕ್ಷ್ಮೀಪತೇ, ತವ ಪದಂ—ಶ್ರೀಪತಿಯನ್ನು) ಹೇ ಲಕ್ಷ್ಮೀನಾರಾಯಣನೆ! ನಿನ್ನ ಪಾದಪದ್ಮಗಳಲ್ಲಿ, (ಶರಣಂ ಪ್ರಪದ್ಯೇ—ಶರಣು ಎಂಬೆ) ಶರಣುಹೊಂದಿರುವೆನು.
ಮತ್ಸ್ಯಾವತಾರ ನಿಗಮಾದಿಸುರಕ್ಷಣಾಂಗ
ಸತ್ಯವ್ರತಾಯಮನುಪಟ್ಟವರಪ್ರದೇಶ |
ವೇದಾಪಹಾರಕತಮಾಸುರಹಾ ರಮೇಶ
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೪||
ಮೀನರೂಪವನಾಂತ ಮಹಿಮನೆ
ಆ ನಿಗಮತಸ್ಕರನ ತಮನನು
ಹನನ ಮಾಡಿಯೆ ವೇದರಾಶಿಯ ರಕ್ಷಿಸಿದೆ ನೀನು |
ಜನಪ ಸತ್ಯವ್ರತಗೆ ಮನುಪದ
ವನುಗ್ರಹಿಸಿ ಹಯಗ್ರೀವದೈತ್ಯನ
ತನುವ ಛೇದಿಸಿದಾ ಸಿರಿಪತಿಗೆ ಶರಣು ಶರಣೆಂಬೆ ||
(ಮತ್ಸ್ಯಾವತಾರ—ಮೀನರೂಪವನಾಂತ ಮಹಿಮನೆ) ಹೇ ಮತ್ಸ್ಯಾವತಾರವನ್ನು ತಾಳಿದ (ಲಕ್ಷ್ಮೀಪತೇ) ಲಕ್ಷ್ಮೀನಾರಾಯಣನೆ! (ಸತ್ಯವ್ರತಾಯ-ಮನು-ಪಟ್ಟ-ವರ-ಪ್ರದ-ಈಶ—ಜನಪ ಸತ್ಯವ್ರತಗೆ ಮನುಪದವ ಅನುಗ್ರಹಿಸಿ)ರಾಜಾ ಸತ್ಯವ್ರತನ ಅರ್ಘ್ಯಜಲದಲ್ಲಿ ಸಣ್ಣ ಮೀನಾಗಿ ತೋರಿ ರಕ್ಷಿಸಲು ಕೋರಿ, ಬಳಿಕ ಬೃಹತ್ತಾಗಿ ಬೆಳೆದು, ಆ ರಕ್ಷಕನಿಗೆ ವೈವಸ್ವತಮನುಪದವಿಯನ್ನಿತ್ತ ಪರಮೇಶ್ವರನು ನೀನು. ಮನ್ವಂತರಪ್ರಳಯದಲ್ಲಿ ಸತ್ಯವ್ರತನ ಮೂಲಕ ಭಾವೀಸೃಷ್ಟಿಬೀಜಗಳನ್ನು ಬೃಹತ್ ನೌಕೆಯೊಂದರಲ್ಲಿ ಕಾಪಿಡಿಸಿ, ಅದನ್ನು ಪ್ರಲಯಪಯೋಧಿಜಲದಲ್ಲಿ ಮತ್ಸ್ಯಾವತಾರಿಯಾದ ನೀನು ರಕ್ಷಿಸಿದೆ. ಆ ಸಮಯದಲ್ಲಿ ಚತುರ್ಮುಖನು ನಿದ್ದೆಹೋಗಲು, ಅವನಲ್ಲಿದ್ದ (ವೇದ-ಅಪಹಾರಕ-ತಮಾಸುರಹಾ ರಮೇಶ—ಆ ನಿಗಮ ತಸ್ಕರನ ತಮನನು ಹನನ ಮಾಡಿಯೆ) ಸಮಸ್ತ ವೇದಶಾಸ್ತ್ರವನ್ನು ತಮಾಸುರ (ಹಯಗ್ರೀವಾಸುರ)ನು ಕದ್ದು ಪಾತಾಳಕ್ಕೊಯ್ದಾಗ ರಮಾಪತಿಯಾದ ನೀನು (ಹಯಗ್ರೀವದೈತ್ಯನ ತನುವ ಛೇದಿಸಿದಅವನನ್ನು ಸಂಹರಿಸಿ (ನಿಗಮಾದಿ-ಸು-ರಕ್ಷಣ-ಅಂಗ—ವೇದರಾಶಿಯ ರಕ್ಷಿಸಿದೆ ನೀನು) ನಿಗಮತತಿಯನ್ನು ಮತ್ತೆ ತಂದಿತ್ತು ಚೆನ್ನಾಗಿ ರಕ್ಷಿಸಿರುವ ಪರಮಾತ್ಮನ ರೂಪವಾಗಿರುವೆ. (ಆ ಸಿರಿಪತಿಗೆ) ಅಂತಹ ಹೇ ಪರಮಾತ್ಮನೆ! ಶ್ರೀಪತಿಯೆ! ಲಕ್ಷ್ಮೀವಲ್ಲಭನೆ! (ತವ ಪದಂ) ನಿನ್ನ ಚರಣಕಮಲಗಳಿಗೆ (ಶರಣಂ ಪ್ರಪದ್ಯೇ–ಶರಣು ಶರಣು ಎಂಬೆ) ಶರಣಾಗುತ್ತೇನೆ.
ಕೂರ್ಮಾವತಾರ ಗಿರಿಮಂದರಧಾರಣಾಂಗ
ಕ್ಷೀರಾಬ್ಧಿಜಾರಮಣ ವಾರುಣಪುತ್ರಿಭರ್ತ: |
ಶ್ರೀಕಚ್ಛಪೇಶ ದನುಜಾಂತಕ ಮೋಹನಾಂಗ
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೫||
ಮತ್ತೆ ಕಚ್ಛಪರೂಪ ತಾಳಿದೆ
ಎತ್ತರದ ಮಂದರವನೆತ್ತಿದೆ
ಮುತ್ತಿನಾಕರಪುತ್ರಿ ಲಕುಮಿಯ ಮತ್ತೆ ಕೈಪಿಡಿದೆ |
ಸುತ್ತ ಸಾಗರ ನಿತ್ತ ಪರ್ವತ
ಸತ್ತು ಹುಟ್ಟುವುದನ್ನು ಬಿಡಿಸೆಲೊ
ಚಿತ್ತಜೋದ್ಭವತಾತ ಮುದದಿಂ ನಿನಗೆ ಶರಣಾದೆ ||
(ಕೂರ್ಮಾವತಾರ—ಮತ್ತೆ ಕಚ್ಛಪರೂಪ ತಾಳಿದೆ) ಅಯ್ಯಾ! ಪುನಃ ಆಮೆಯ ರೂಪವನಾಂತ ಕೂರ್ಮಾವತಾರಿ ಮಹಾವಿಷ್ಣುವೆ! (ಗಿರಿ-ಮಂದರ-ಧಾರಣ-ಅಂಗ—ಸುತ್ತ ಸಾಗರ, ನಿತ್ತ ಪರ್ವತ, ಎತ್ತರದ ಮಂದರವನು ಎತ್ತಿದೆ) ದೇವಾಸುರರ ಕ್ಷೀರಸಾಗರಮಥನದಲ್ಲಿ ವಿಸ್ತಾರವಾಗಿ ಹಬ್ಬಿದ್ದ ಕ್ಷೀರಸಾಗರದ ನಡುವೆ ನಿಲ್ಲಿಸಿದ ಉನ್ನತವಾದ ಮಂದರಗಿರಿಯು ಮುಳುಗದಂತೆ ನೀನು ಅದನ್ನು ಆಧರಿಸಿದೆ. (ಕ್ಷೀರಾಬ್ಧಿಜಾ-ರಮಣ) ಕ್ಷೀರಸಾಗರಸಂಭವೆಯಾದ ಲಕ್ಷ್ಮಿಯ ರಮಣನೆ! (ವಾರುಣಪುತ್ರಿ-ಭರ್ತಃ—ಮುತ್ತಿನ ಆಕರ ಪುತ್ರಿ ಲಕುಮಿಯ ಮತ್ತೆ ಕೈ ಪಿಡಿದೆ) ರತ್ನಾಕರನೆನಿಸಿದ ಸಾಗರಾಧಿಪ ವರುಣದೇವನ ಪುತ್ರಿಯಾದ ಲಕುಮಿಯನ್ನು ಪುನಃ ಕೈ ಹಿಡಿದ ಶ್ರೀಪತಿಯೆ! (ಶ್ರೀಕಚ್ಛಪ-ಈಶ) ಶ್ರೀ ಆದಿಕಚ್ಛಪಾವತಾರನೆ(ಆಮೆ, ಕೂರ್ಮ)! (ದನುಜ-ಅಂತಕ) ದುಷ್ಟಸಂಹಾರಕನೆ! (ಮೋಹನ-ಅಂಗ) ಸರ್ವಾಕರ್ಷಕ ಮೋಹಕ ಸ್ವರೂಪನೆ! (ಲಕ್ಷ್ಮೀಪತೇ) ಹೇ ಲಕ್ಷ್ಮೀವಲ್ಲಭನೆ! (ಚಿತ್ತ-ಜ-ಉದ್ಭವ-ತಾತ) ಮನಸಿನಿಂದುದಿಸುವ ಮನ್ಮಥನ ಪಿತನೆ! (ಮುದದಿಂ ನಿನಗೆ ಶರಣಾದೆ) ಸಂತೋಷದಿಂದ, ಪ್ರೀತಿಯಿಂದ (ತವ ಪದಂ ಶರಣಂ ಪ್ರಪದ್ಯೇ) ನಿನ್ನ ಪಾದಕಮಲಗಳನ್ನು ಆಶ್ರಯಿಸಿರುವೆ. (ಸತ್ತು ಹುಟ್ಟುವುದನ್ನು ಬಿಡಿಸು ಎಲೊ) ನನ್ನನ್ನು ಭವಬಂಧನದಿಂದ ಮುಕ್ತನನ್ನಾಗಿಸು ದೇವ!
ಹೇ ಸೂಕರಾಕೃತಿ ವರಾಹ ಧರೋದ್ಧರಾಂಗ
ಹೇ ದೀನಪಾಲ ದಿತಿಜಾಂತಕ ಪೃಥ್ವಿಭರ್ತ: |
ಹೇ ಶ್ರೀಧರಾಧರ ಮಹಾದಶನಪ್ರತಾರ
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೬||
ಹರಿಯೆ ನೀ ಸೂಕರನ ರೂಪದಿ
ಬರಿದೆ ದುಷ್ಟ ಹಿರಣ್ಯನೇತ್ರನ
ತರಿದೆ ಜಗದೊಳಗವತರಿಸಿ ಭೂಭಾರವಿಳಿಸಿರುವೆ |
ಜಾರಿದಾ ಭೂದೇವಿಯನು ತಾ
ಹರಿತ ದಂತದಿ ಮೇಲಕೆತ್ತುತ
ಭೂರಿ ವಿಕ್ರಮ ತೋರಿ ಸ್ಥಿರಪಡಿಸಿಹಗೆ ನಾ ಶರಣು ||
(ಹೇ ಸೂಕರಾಕೃತಿ ವರಾಹ—ಹರಿಯೆ ನೀ ಸೂಕರನ ರೂಪದಿ) ಹಂದಿಯ(ಸೂಕರ / ವರಾಹದ) ರೂಪವನ್ನು ಧರಿಸಿ ಬಂದು ಆದಿ-ಭೂ-ಯಜ್ಞ-ಶ್ವೇತ-ವರಾಹ-ಸ್ವಾಮಿಯೆನಿಸಿದ ಲಕ್ಷ್ಮೀನಾರಾಯಣನೆ! (ಧರಾ-ಉತ್-ಧರ-ಅಂಗ—ಧರೆಯನ್ನು-ಮೇಲಕ್ಕೆತ್ತಿ-ಆಧರಿಸಿದ ವರಾಹಾವತಾರನೆ) ಹಾಗೆ ಬಂದು, (ಜಗದ ಒಳಗೆ ಅವತರಿಸಿ) ಧರೆಯಲ್ಲವತರಿಸಿ, (ದಿತಿ-ಜ-ಅಂತಕ—ಬರಿದೆ ದುಷ್ಟ ಹಿರಣ್ಯನೇತ್ರನ ತರಿದೆ) ದುಷ್ಟ ಆದಿದೈತ್ಯನಾದ ದಿತಿಸುತ ಹಿರಣ್ಯಾಕ್ಷನನ್ನು ಕೊಂದು, (ಭೂ-ಭಾರವ ಇಳಿಸಿರುವೆ) ಭೂಭಾರವಿಳಿಸಿ, (ಹೇ ದೀನಪಾಲ)ದೀನಳಾದ ಭೂದೇವಿಯನ್ನು ಪಾಲನೆಮಾಡಿದ (ಪೃಥ್ವಿಭರ್ತಃ) ಪೃಥ್ವೀಪತಿಯೆ! (ಜಾರಿದ ಆ ಭೂದೇವಿಯನು ತಾ) ತನ್ನದಾದ ಅಕ್ಷ (ದೈನಂದಿನ ಚಲನೆಯ ಆಧಾರರೇಖೆ) / ಕಕ್ಷೆ (ವಾರ್ಷಿಕಪರಿಭ್ರಮಣಪಥ)ಗಳಿಂದ ಪತನಗೊಂಡ ಆ ಧರೆಯನ್ನು ಸ್ವಸ್ಥಾನಕ್ಕೆತ್ತಿಟ್ಟ ದೇವದೇವನೆ! (ಹೇ ಶ್ರೀಧರಾ-ಧರ) ಹೇ ಲಕ್ಷ್ಮೀಧರನೆ, ಶ್ರೀಧರನೆ, (ಮಹಾ-ದಶನ-ಪ್ರತಾರ) (ಹರಿತ ದಂತದಿ ಮೇಲಕೆತ್ತುತ) ತನ್ನದಾದ ಕೋರೆಹಲ್ಲುಗಳಿಂದ ಧರಣಿಯನ್ನು ಚೆನ್ನಾಗಿ ರಕ್ಷಿಸಿ ಸುಸ್ಥಿತಗೊಳಿಸಿ (ಭೂರಿ ವಿಕ್ರಮ ತೋರಿ ಸ್ಥಿರಪಡಿಸಿ ಇಹಗೆ) ತನ್ನ ಅಮಿತ ಪರಾಕ್ರಮವನ್ನು ತೋರಿದ ಸರ್ವಶಕ್ತನೆ (ಪ್ರಕೃಷ್ಟೇನ ತಾರಯತೀತಿ ಪ್ರತಾರಃ, ಸಂಬೋಧನಾಯಾಂ ಪ್ರತಾರ), ನಮ್ಮನ್ನೆಲ್ಲ ಆಧರಿಸು. (ಲಕ್ಷ್ಮೀಪತೇ)ಹೇ ಲಕ್ಷ್ಮೀರಮಣ, (ತವ ಪದಂ ಶರಣಂ ಪ್ರಪದ್ಯೇ—ನಾ ಶರಣು)ನಿನ್ನ ಪಾದಕಮಲಕ್ಕೆ ಶರಣುಹೊಂದುತ್ತೇನೆ.
ಸೂಕರಃ—"ಸೂ-ಇತಿ ಅವ್ಯಕ್ತಶಬ್ದಂ ಕರ್ತುಂ ಶೀಲಮ್ ಅಸ್ಯ"—ಸೂ ಎಂಬ ಅವ್ಯಕ್ತವಾದ ಶಬ್ದವನ್ನು ಉಂಟುಮಾಡುವ ಸ್ವಭಾವವಿರುವುದರಿಂದ ಹಂದಿಗೆ ಸೂಕರವೆನ್ನಲಾಗಿದೆ.
ವರಾಹಃ—"ವರಾನ್ ಆಹನ್ತಿ ಇತಿ"—ಶ್ರೇಷ್ಠವಾದವು (ಗೆಡ್ಡೆ ಗೆಣಸುಗ)ಳನ್ನು (ತಿಂದು) ನಾಶಪಡಿಸುವುದರಿಂದಲೂ, ದುಷ್ಟರ ವರಗಳನ್ನೂ ವ್ಯರ್ಥಗೊಳಿಸುವುದರಿಂದಲೂ ಹಂದಿಯು ವರಾಹವೆನಿಸಿರುವುದು.
ಲಕ್ಷ್ಮೀನೃಸಿಂಹ ಖಲಭಂಜನ ಕ್ರೂರರೂಪ
ಲಕ್ಷ್ಮೀಶ ತೀಕ್ಷ್ಣನಖದಂಷ್ಟ್ರಕರಾಲಕೋಪ |
ಭೀಭತ್ಸರೌದ್ರ ನತಭಕ್ತಸುಖಪ್ರತಾಪ
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೭||
ಲಕುಮಿನರಸಿಂಹಾವತಾರಿಯೆ
ಭಕುತ ಪ್ರಹ್ಲಾದಾಖ್ಯಗೊಲಿದಿಹೆ
ರಕುತ ಹೀರಿದೆ ದುಷ್ಟ ದೈತ್ಯ ಹಿರಣ್ಯಕಶಿಪುವಿನ |
ಮುಕುತಿ ನೀಡಿದೆ ಭಕ್ತನಾರ್ತಿಗೆ
ಶಕುತಿ ನೀಡಿದೆ ಸತ್ಯಧರ್ಮಕೆ
ಯುಕುತಿ ನೀನೇ ಲಕುಮಿಪತಿ ಪರಗತಿಗೆ ಶರಣೆಂಬೆ ||
(ಲಕ್ಷ್ಮೀ-ನೃ-ಸಿಂಹ) ಹೇ ಲಕ್ಷ್ಮೀನರಸಿಂಹಾವತಾರಿಯಾದ ಮಹಾವಿಷ್ಣುವೆ! (ತೀಕ್ಷ್ಣ-ನಖ-ದಂಷ್ಟ್ರ-ಕರಾಲ-ಕೋಪ) ಹರಿತವಾದ ಉಗುರುಗಳನ್ನೂ, ದಂತಪಂಕ್ತಿಯನ್ನೂ ಹೊಂದಿದ (ಖಲ-ಭಂಜನ ಕ್ರೂರರೂಪ) ಸಿಂಹಶಿರ ಹಾಗೂ ನರದೇಹವುಳ್ಳವನಾಗಿ, ತನ್ನ ಪರಮಭಕ್ತ ಬಾಲಕನಾದ ಪ್ರಹ್ಲಾದನ ರಕ್ಷಣೆಗಾಗಿ, ಧರ್ಮಸಂಸ್ಥಾಪನೆಗಾಗಿ, ಪ್ರಹ್ಲಾದನ ತಂದೆ ಆದಿದೈತ್ಯ ದುಷ್ಟ ಹಿರಣ್ಯಕಶಿಪುವಿನ ಮೇಲೆ ಭಯಾನಕ ಕೋಪದಿಂದ, ಕಂಬದಿಂದವತರಿಸಿ, ಆತನ ವರದಂತೆಯೇ ಹಗಲೂ ಅಲ್ಲದ ಇರುಳೂ ಅಲ್ಲದ ಸಂಧ್ಯಾಕಾಲದಲ್ಲಿ, ಒಳಗೂ ಅಲ್ಲದ ಹೊರಗೂ ಅಲ್ಲದ ಮೇಲೂ ಅಲ್ಲದ ಕೆಳಗೂ ಅಲ್ಲದ ಮನೆಬಾಗಿಲ ಹೊಸ್ತಿಲಿನ ಮೇಲೆ ಕುಳಿತು, ನಿರಾಯುಧನಾಗಿ ಕೇವಲ ತನ್ನ ನಖ-ದಂತಗಳಿಂದ ಹಿರಣ್ಯಕಶಿಪುವಿನ ಕರುಳನ್ನು ಬಗೆದ ದೃಶ್ಯವು (ಭೀಭತ್ಸ-ರೌದ್ರ) ಭೀಭತ್ಸ-ರೌದ್ರರಸಗಳಿಂದ ಭಯಾನಕವಾದುದು. (ನತ-ಭಕ್ತ-ಸುಖ-ಪ್ರತಾಪ) ಬಳಿಕ ಭಕ್ತ ಪ್ರಹ್ಲಾದನ ಮುಗ್ಧಸ್ತುತಿಗೊಲಿದು ಪ್ರಸನ್ನನಾಗಿ, ಶಾಂತನಾಗಿ, ಆತನನ್ನು ಅನುಗ್ರಹಿಸಿ, ಲೋಕದಲ್ಲಿ ಧರ್ಮವನ್ನು ನೆಲೆಗೊಳಿಸಿದ ಮುಕ್ತಿಗೊಡೆಯನಾದ (ಲಕ್ಷ್ಮೀಪತೇ) ಹೇ ಲಕ್ಷ್ಮೀಪತಿಯೆ! (ಲಕ್ಷ್ಮೀಶ) ಲಕ್ಷ್ಮಿಯ ಒಡೆಯನೆ! (ತವ ಪದಂ) ನಿನ್ನ ಪಾದಾರವಿಂದಗಳಿಗೆ ನಾನು (ಶರಣಂ ಪ್ರಪದ್ಯೇ) ಸದಾ ಶರಣು ಶರಣೆಂಬೆನಯ್ಯ.
ಹೇ ವಾಮನಾಖ್ಯ ಬಲಿಬಂಧನ ಬ್ರಹ್ಮಚಾರಿನ್
ತ್ರೈಲೋಕ್ಯದಿವ್ಯಪದಮಂಡಿತ ವಿಕ್ರಮಾಖ್ಯ |
ದೈತ್ಯಾಯಶಕ್ರಪದದಾಪಿತಭಕ್ತದಾಸ
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೮||
ವಾಮನನೆ ವಟುರೂಪಿ ಮಾಧವ
ಆ ಮಹಾಬಲಿದೈತ್ಯನಿದಿರಲಿ
ಕಾಮಿಸಿದೆ ಮೂರಡಿಯ ಭೂಮಿಯ ಯಾಗಕಾಲದಲಿ |
ಧಾಮ ಮೂರನು ಮೂರಡಿಯೊಳಾ
ಕ್ರಮಿಸಿ ಬಲಿಯ ರಸಾತಲಕೆ ನೀ
ಪ್ರೇಮದಿಂದಲಿ ಕಳುಹಿ ಸುರಪನ ಪದವ ಬಳಿಕಿತ್ತೆ ||
(ಹೇ ವಾಮನಾಖ್ಯ) ಹೇ ವಾಮನಾವತಾರಿಯಾದ ಮಹಾವಿಷ್ಣುವೆ! ಮಾ(ಲಕ್ಷ್ಮೀ, ಜಗನ್ಮಾತೆ)ಧವನೆ(ಪತಿಯೆ)! ಬಲಿಮಹಾರಾಜನು ವಿಶ್ವಜಿತ್ ಯಾಗ ಮಾಡುವ ಕಾಲದಲ್ಲಿ, ಪುರಂದರನೆಂಬ ಈಗಿನ ಇಂದ್ರನ ಪ್ರಾರ್ಥನೆಯ ಮೇರೆಗೆ, ಆತನ ಅವಧಿಯು ಇನ್ನೂ ಇರುವಾಗಲೇ ಬಲಿಯು ಶತಾಶ್ವಮೇಧಕ್ರತುಕರ್ತೃವಾದರೆ ಲೋಕನಿಯಮವಿರುದ್ಧವಾಗಿ ಇಂದ್ರಪದವಿಯು ಆತನಿಗೆ ಬರುವುದನ್ನು ತಪ್ಪಿಸಲು, ಲೋಕಪಾಲಕನಾದ ನೀನು ವಾಮನಾವತಾರ ತಾಳಿ, (ಬ್ರಹ್ಮಚಾರಿನ್) ವಟು(ಬ್ರಹ್ಮಚಾರಿ)ವೇಷದಿಂದ ಬಲಿಯಲ್ಲಿ ಮೂರು ಹೆಜ್ಜೆ ಭೂದಾನ ಬೇಡಿದೆ. ಬಳಿಕ, ಅಸುರಗುರು ಶುಕ್ರಾಚಾರ್ಯರ ಸೂಚನೆಯನ್ನೂ ಧಿಕ್ಕರಿಸಿ, ಆ ಮಹಾಬಲಿಯು ದಾನ ನೀಡಲು ಒಪ್ಪಿದಾಗ, (ತ್ರೈಲೋಕ್ಯ-ದಿವ್ಯ-ಪದಮಂಡಿತ-ವಿಕ್ರಮಾಖ್ಯ) ನೀನು ತ್ರಿ-ವಿಕ್ರಮನಾಗಿ ಭೂಮಿ, ಗಗನಗಳನ್ನು ೨ ಪಾದಗಳಿಂದಳೆದು, ಮೂರನೇ ಹೆಜ್ಜೆಯನ್ನು ಬಲಿಯ ಪ್ರಾರ್ಥನೆಯಂತೆ ಆತನ ಶಿರದೊಳಿರಿಸಿ, (ಬಲಿಬಂಧನ) ಆತನನ್ನು ರಸಾತಲಕ್ಕೆ ತಳ್ಳಿ ಅಲ್ಲೇ ಬಂಧಿಸಿ, ಅಲ್ಲೂ ಆತನ ದ್ವಾರಪಾಲಕನಾಗಿ, (ದೈತ್ಯಾಯ-ಶಕ್ರಪದ-ದಾಪಿತ-ಭಕ್ತದಾಸ) ಮುಂದಿನ ಇಂದ್ರಪದವಿಯನ್ನೂ ಬಲಿಗೆ ದಯಪಾಲಿಸಿ, ನೀನು ಭಕ್ತಪರಾಯಣನೆಂದು ತೋರಿಕೊಟ್ಟಿರುವೆ. (ಲಕ್ಷ್ಮೀಪತೇ) ಅಂತಹ ಹೇ ಲಕ್ಷ್ಮೀಪತಿಯೆ, (ತವ ಪದಂ) ನಿನ್ನ ಪಾದಗಳನ್ನು (ಶರಣಂ ಪ್ರಪದ್ಯೇ) ಶರಣುಹೊಂದುತ್ತೇನೆ.
ಹೇ ಪರ್ಶುರಾಮ ಜಮದಗ್ನಿಜ ಭಾರ್ಗವಾಖ್ಯ
ಹೇ ಕಾರ್ತವೀರ್ಯಖಲಮರ್ದನ ರುದ್ರಶಿಷ್ಯ |
ಹೇ ಕ್ಷತ್ರನಾಶಕ ಮಹೋಗ್ರಗುಣಪ್ರತಾಪಿನ್
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೯||
ಪರಶುಧರನಾವೇಶರೂಪದಿ
ಪರಶಿವನ ಶಿಷ್ಯತ್ವ ಚರಿಸುತ
ಪರಮ ಋಷಿ ಜಮದಗ್ನಿ ರೇಣುಕೆಯರಿಗೆ ಸುತನಾಗಿ |
ದುರುಳ ರಾಜರ ತರಿದು ಜಗದೊಳು
ಪರಮ ಭಾರ್ಗವರಾಮನೆನಿಸುತ
ನರಪ ಕಾರ್ತವಿರ್ಯಾರ್ಜುನನ ಸಂಹರಿಸಿದಗೆ ಶರಣು ||
(ಹೇ ಪರ್ಶುರಾಮ—ಪರಶುಧರನು ಆವೇಶರೂಪದಿ) ಮಹಾವಿಷ್ಣುವಿನ ಆವೇಶಾವತಾರಿಯಾದ ಹೇ ಪರಶುರಾಮನೆ! (ಜಮದಗ್ನಿಜ—ಪರಮ ಋಷಿ ಜಮದಗ್ನಿ ರೇಣುಕೆಯರಿಗೆ ಸುತನಾಗಿ) ಭೃಗುಕುಲದ ಜಮದಗ್ನಿಮಹರ್ಷಿಯ ಹಾಗೂ ರೇಣುಕೆಯ ಸುತನಾಗಿ (ಭಾರ್ಗವಾಖ್ಯ—ಪರಮ ಭಾರ್ಗವರಾಮನೆನಿಸುತ) ಭಾರ್ಗವರಾಮನೆನಿಸಿ, (ರುದ್ರಶಿಷ್ಯ—ಪರಶಿವನ ಶಿಷ್ಯತ್ವ ಚರಿಸುತ) ಪರಶಿವನ ಶಿಷ್ಯನಾಗಿ, ಪರಶುಧರನಾಗಿ, ಕಾಮಧೇನುಪುತ್ರಿ ನಂದಿನಿಗಾಗಿ ತಂದೆ ಜಮದಗ್ನಿಯ ಶಿರಶ್ಛೇದಗೈದ (ಹೇ ಕಾರ್ತವೀರ್ಯ-ಖಲ-ಮರ್ದನ—ನರಪ ಕಾರ್ತವಿರ್ಯಾರ್ಜುನನ ಸಂಹರಿಸಿದಗೆ) ರಾಜಾ ಕಾರ್ತವೀರ್ಯನ ಹನನಮಾಡಿ, (ಹೇ ಕ್ಷತ್ರನಾಶಕ—ದುರುಳ ರಾಜರ ತರಿದು ಜಗದೊಳು) ಭೂಮಂಡಲವನ್ನೆಲ್ಲ ಸುತ್ತಿ, ದುಷ್ಟಕ್ಷತ್ರಿಯಸಂಹಾರಗೈದು ಧರ್ಮಸ್ಥಾಪನೆ ಮಾಡಿದ (ಮಹೋಗ್ರ-ಗುಣ-ಪ್ರತಾಪಿನ್) ಉಗ್ರಪ್ರತಾಪಿಯಾದ, (ಲಕ್ಷ್ಮೀಪತೇ) ಹೇ ಲಕ್ಷ್ಮೀಪತಿಯೆ! (ತವ ಪದಂ ಶರಣಂ ಪ್ರಪದ್ಯೇ—ಶರಣು) ನಿನಗಿದೋ ನಾ ಶರಣುಬಂದಿಹೆನು.
ಶ್ರೀರಾಮಚಂದ್ರ ರವಿವಂಶಜ ಸುಂದರಾಂಗ
ಸೀತಾಪತೇ ದಶರಥಾತ್ಮಜ ಲಕ್ಷ್ಮಣಾಗ್ರ |
ಕೋದಂಡಪಾಣಿ ಖಲರಾವಣನಾಶಜನ್ಮ
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೧೦||
ಇನಕುಲದಿ ಕೌಸಲ್ಯೆ ದಶರಥ
ರನವರತ ಸೇವಿಸುತ ಕೌಶಿಕ
ಮುನಿವರನ ಮಖ ಕಾಯುತಲಿ ಶ್ರೀರಾಮರೂಪಿನಲಿ |
ಜನಕಸುತೆ ಕೈವಿಡಿದು ಲಂಕೆಯ
ಜನಪ ರಾವಣದೈತ್ಯನಾಶವ
ನನುನಯದಿ ಕೈಕೊಂಡು ಧರ್ಮವ ಪಾಲಿಸಿದೆ ನೀನು ||
(ರವಿವಂಶಜ—ಇನಕುಲದಿ) ಜಗಕ್ಕೆಲ್ಲ ಪ್ರತ್ಯಕ್ಷವಾಗಿ ತೋರುವ ಏಕೈಕನಾದ ಸೂರ್ಯದೇವನ ವಂಶದಲ್ಲಿ, (ದಶರಥಾತ್ಮಜ—ಕೌಸಲ್ಯೆ ದಶರಥರ ಅನವರತ ಸೇವಿಸುತ) ದಶರಥ ಮಹಾರಾಜ ಹಾಗೂ ರಾಣಿ ಕೌಸಲ್ಯಾದೇವಿಯರ ಸುತನಾಗಿ ಅವತರಿಸಿ, ತನ್ನ ಮಾತಾಪಿತರನ್ನು ಎಡೆಬಿಡದೆ ಸೇವೆಗೈಯುತ್ತ, (ಲಕ್ಷ್ಮಣಾಗ್ರಜ—"ಅಗ್ರೇ ಜಾತಃ, ಅಗ್ರಜಃ"—ಮೊದಲು ಹುಟ್ಟಿದವನೇ ಅಗ್ರಜ) ಸಾಕ್ಷಾತ್ ಶೇಷಾವತಾರಿಯಾದ ಲಕ್ಷ್ಮಣನ ಪ್ರೀತಿಯ ಅಣ್ಣನೂ ಮಾರ್ಗದರ್ಶಕನೂ ಆಗಿ, (ಕೌಶಿಕ ಮುನಿವರನ ಮಖ ಕಾಯುತಲಿ) ಕುಶಿಕಮಹಾರಾಜನ ಪುತ್ರ ಕೌಶಿಕ ಬ್ರಹ್ಮರ್ಷಿ ವಿಶ್ವಾಮಿತ್ರರ ಯಾಗರಕ್ಷಣೆಯನ್ನೂ ಮಾಡಿ, ಅವರಿಂದ ಬಲ-ಅತಿಬಲಾದಿ ಅನೇಕ ಅಸ್ತ್ರ-ಶಸ್ತ್ರಾದಿ ವಿದ್ಯೆಗಳನ್ನೂ ಪಡೆದು, (ಕೋದಂಡಪಾಣಿ) ಕೋದಂಡಧನುಸ್ಸನ್ನು ಧರಿಸಿ ಕೋದಂಡರಾಮನೆನಿಸಿದ, (ಸೀತಾಪತೇ—ಜನಕಸುತೆ ಕೈವಿಡಿದು) ವಿದೇಹರಾಜಾ ಜನಕನಿಗೆ ಭೂಮಿಯಲ್ಲಿ ದೊರೆತು ಸುತೆಯಾದ ಸಿತಾದೇವಿಯನ್ನು ವರಪರೀಕ್ಷೆಯಲ್ಲಿ ಶಿವಧನುರ್ಭಂಗಗೈದು ವರಿಸಿ ಸೀತಾರಾಮನೆನಿಸಿದ, (ಶ್ರೀರಾಮಚಂದ್ರ—ಶ್ರೀರಾಮರೂಪಿನಲಿ) ಮಹಾವಿಷ್ಣುವೇ ಶ್ರೀರಾಮಚಂದ್ರನಾಗಿ ಅವತರಿಸಿ, (ಖಲ-ರಾವಣ-ನಾಶ-ಜನ್ಮ—ಲಂಕೆಯ ಜನ-ಪ ರಾವಣದೈತ್ಯ ನಾಶವನು ಅನುನಯದಿ ಕೈಕೊಂಡು ಧರ್ಮವ ಪಾಲಿಸಿದೆ ನೀನು) ಮನುಷ್ಯಲೋಕಕ್ಕೆ ಧಾರ್ಮಿಕಜೀವನದ ಆದರ್ಶರೂಪೀ ಮರ್ಯಾದಾ ಪುರುಷೋತ್ತಮನಾಗಿ ದಾರಿದೀಪವಾಗಿ ಬೆಳಗಿ, ಲಂಕಾಧಿಪ ದುಷ್ಟ ರಾವಣಾಸುರನಿಗೂ ಮುಕ್ತಿಯನ್ನೀಯಲೆಂದೇ ಜನ್ಮವೆತ್ತಿರುವೆ ಹೇ ದೇವನೆ. (ಲಕ್ಷ್ಮೀಪತೇ) ಅಂತಹ ಹೇ ಲಕ್ಷ್ಮೀರಮಣನೆ! (ತವ ಪದಂ) ನಿನ್ನ ಚರಣಕಮಲಗಳಿಗೆ, (ಶರಣಂ ಪ್ರಪದ್ಯೇ) ಶರಣಾಗುತ್ತೇನೆ.
ಟಿಪ್ಪಣಿ—
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||
ರಾಮಾಯ—(ರಾಮನಿಗೆ) ಶ್ರೀರಾಮಚಂದ್ರನನ್ನು ಕುಲಗುರುಗಳಾದ ಬ್ರಹ್ಮರ್ಷಿ ವಸಿಷ್ಠರು, ಪಾರ್ವತೀರಮಣ ಶಿವನೇ ಮುಂತಾದವರು "ರಾಮ" ("ರಮತೇ ಇತಿ ರಾಮಃ, ರಂ ಕ್ರೀಡಾಯಾಮ್"—ಎಲ್ಲರನ್ನೂ ಆನಂದಪಡಿಸುವವ)ನೆಂದು ಕರೆಯುತ್ತಾರೆ.
ರಾಮಭದ್ರಾಯ—(ರಾಮಭದ್ರನಿಗೆ) ತಂದೆಯಾದ ದಶರಥ ಮಹಾರಾಜನು ಪುತ್ರಪ್ರೇಮದಿಂದ ಮಂಗಲಸ್ವರೂಪನಾದ ಶ್ರೀರಾಮನನ್ನು "ರಾಮಭದ್ರ (ಭದ್ರ=ಮಂಗಲ)" ನೆಂದು ಕರೆಯುತ್ತಾನೆ.
ರಾಮಚಂದ್ರಾಯ—(ರಾಮಚಂದ್ರನಿಗೆ) ತಾಯಿಯಾದ ಕೌಸಲ್ಯಾದೇವಿಯು ತನ್ನ ಚಂದಿರನಂತಹ ಮುಖವುಳ್ಳ ಸುಂದರಶಿಶುವನ್ನು ಮುದ್ದಿಕ್ಕುತ್ತಾ "ರಾಮಚಂದ್ರ"ನೆಂದು ಕರೆದಳು.
ವೇಧಸೇ—(ವೇಧಸನಿಗೆ) ವೈದಿಕ ಋಷಿಗಳು ಆತನನ್ನು ಸಮಸ್ತ ಸೃಷ್ಟಿಯ ಪರಮಕಾರಣಕರ್ತನೆಂದು ತಿಳಿದು, "ವೇಧಾಃ(ವೇಧಸ್ ಶಬ್ದಃ; "ವಿ-ದಧಾತಿ ಇತಿ"—ವಿಶೇಷವಾದ ಜಗತ್ತನ್ನು ನಿರ್ವಿಶೇಷತತ್ತ್ವದಿಂದ ಉಂಟುಮಾಡುವವನು)" ಎಂದು ಸ್ತುತಿಸಿದರು. ("ಆ ವೇಧಸಂ ನೀಲಪೃಷ್ಠಂ ಬೃಹನ್ತಮ್ |"— ಋಗ್ವೇದ ೫|೪೩|೧೨)
ರಘುನಾಥಾಯ—(ರಘುನಾಥನಿಗೆ) ರಾಜ್ಯದ ಪ್ರಜೆಗಳೆಲ್ಲ ಶ್ರೀರಾಮನನ್ನು ತಮ್ಮ ಒಡೆಯನೆಂದು ತಿಳಿದು "ಹೇ ರಘುನಾಥನೆ" (ರಘುಃ— ಲಂಘತಿ ಜ್ಞಾನಸೀಮಾಂ ಪ್ರಾಪ್ನೋತಿ ಇತಿ—ಭವಸಾಗರವನ್ನು ದಾಟಿ ಬ್ರಹ್ಮಾತ್ಮಜ್ಞಾನವೆಂಬ ದಡವನ್ನು ಹೊಂದಬಲ್ಲವನಾದ ಜೀವನು. ಅಂತಹ ಜೀವರೊಡೆಯನೇ ರಘುನಾಥನು.) ಎಂದು ಸಂಬೋಧಿಸಿದರು.
ನಾಥಾಯ—(ನಾಥನಿಗೆ) ಸೀತಾಮಾತೆಯಾದರೋ ತನ್ನ ಪತಿಯನ್ನು "ನಾಥ" (=ನನ್ನ ಸ್ವಾಮಿಯೆ) ಎಂದು ಕರೆಯುತ್ತಿದ್ದಳು. ("ನಾಥತಿ ಈಶ್ವರೋ ಭವತೀತಿ ನಾಥಃ"—ನಾಥನಾಗುತ್ತಾನೆ, ಅಧಿಪತಿಯಾಗುತ್ತಾನಾದ್ದರಿಂದ ನಾಥನು.)
ಸೀತಾಯಾಃ ಪತಯೇ—(ಸೀತೆಯ ಪತಿಗೆ) ರಾಮ-ಸೀತೆಯರ ಸಖ-ಸಖಿಯರು, ಮಿತ್ರರು ರಾಮನನ್ನು "ಸೀತಾಪತೇ" ಎಂದು ಕರೆಯುತ್ತಿದ್ದರಂತೆ.
ನಮಃ—(ನಮಸ್ಕಾರವು) ಅಂತಹ ಆದರ್ಶ ಶಿಷ್ಯ, ಮರ್ಯಾದಾಪುರುಷೋತ್ತಮ, ಧರ್ಮಮೂರ್ತಿ, ದಾಶರಥಿ, ಕೌಸಲ್ಯಾನಂದವರ್ಧನ, ಪರಬ್ರಹ್ಮಸ್ವರೂಪ, ಪ್ರಜಾರಂಜಕ, ವೈದೇಹೀರಮಣ ಶ್ರೀರಾಮಚಂದ್ರನಿಗೆ ನಮಸ್ಕಾರ.
ಇದು ಈ ಲೋಕಪ್ರಸಿದ್ಧ ರಾಮಸ್ತುತಿಶ್ಲೋಕದ ಪರಮಾದ್ಭುತ ಗೂಢಾರ್ಥವಾಗಿದೆ.
ಶ್ರೀಕೃಷ್ಣ ಶೌರಿ-ಯದುವಂಶಜ ದ್ವಾರಕೇಶ
ಗೋಲೋಕನಾಥ ಖಲಮರ್ದನ ವೇಣುಮೋದ |
ಪೂರ್ಣಾವತಾರ ನಿಜಗೀತಸುಬೋಧಮೂರ್ತೇ
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೧೧||
ಗೋಪಕುಲದಲಿ ಕೃಷ್ಣನಾಗಿಯೆ
ಭೂಪ ಕಂಸಾದಿಗಳ ಕೊಲ್ಲುತ
ಚಾಪಧರ ನರಗಾದೆ ಸಾರಥಿ ಧರ್ಮಯುದ್ಧದಲಿ |
ಪಾಪಭಾವವ ಕಳೆಯಲೋಸುಗ
ತಾಪಹರ ಶ್ರೀಗೀತೆ ಬೋಧಿಸಿ
ಶ್ರೀಪತಿಯೆ ನೀ ಶಿಷ್ಟರಕ್ಷಕನೆಂಬುದನು ತೋರ್ದೆ ||
(ಯದುವಂಶಜ—ಗೋಪಕುಲದಲಿ) ಗೋಪಾಲಕರ ರಾಜನಾಗಿದ್ದ ಯದುಮಹಾರಾಜನ ವಂಶದಲ್ಲಿ ಅವತರಿಸಿ ಯಾದವಕುಲತಿಲಕನೆನಿಸಿ, (ಶೌರಿ)ಶೂರಮಹಾರಾಜನ ಕುಲದಲ್ಲವತರಿಸಿ ಶೌರಿಯೆನಿಸಿ, (ಶ್ರೀಕೃಷ್ಣ—ಕೃಷ್ಣನಾಗಿಯೆ) ವಸುದೇವ-ದೇವಕಿಯರ ಮಗನಾಗಿ ವಾಸುದೇವ ದೇವಕೀನಂದನ ಕೃಷ್ಣನೆಂಬ ನಾಮಾಂಕಿತನಾಗಿ, (ಖಲಮರ್ದನ—ಭೂಪ ಕಂಸಾದಿಗಳ ಕೊಲ್ಲುತ) ದುಷ್ಟ ಭೂಪತಿಯಾದ ಕಂಸನೇ ಮೊದಲಾದವರನ್ನು ಸಂಹರಿಸಿ ಭೂಭಾರವನ್ನು ತಗ್ಗಿಸಿ, (ಚಾಪಧರ ನರಗಾದೆ ಸಾರಥಿ ಧರ್ಮಯುದ್ಧದಲಿ) ಧರ್ಮಸಂಸ್ಥಾಪನೆಗಾಗಿ "ಪಾರ್ಥ ಏವ ಧನುರ್ಧರಃ" ಎಂದು ತನ್ನ ಗುರು ದ್ರೋಣಾಚಾರ್ಯರಿಂದಲೇ ಪ್ರಶಂಸಿತನಾದ ಹಾಗೂ "ಪಾಂಡವಾನಾಂ ಧನಂಜಯಃ" ಎಂದು ಸ್ವತಃ ಪರಮಾತ್ಮನಿಂದಲೇ ಕರೆಯಲ್ಪಟ್ಟ ಕೌಂತೇಯ ಅರ್ಜುನನ ಸಾರಥ್ಯವನ್ನು ವಹಿಸಿ ಪಾರ್ಥಸಾರಥಿಯೆಂಬ ಬಿರುದನ್ನು ಪಡೆದು, ಕುರುಕ್ಷೇತ್ರದ ಪಾಂಡವ-ಕೌರವರ ಧರ್ಮಕ್ಕಾಗಿ ನಡೆದ ಧರ್ಮಯುದ್ಧದಲ್ಲಿ, ದುಷ್ಟ ಕೌರವಾದಿಗಳ ಸಂಹಾರ ಮಾಡಿಸಿ, (ನಿಜ-ಗೀತ-ಸುಬೋಧ-ಮೂರ್ತೇ—ಪಾಪಭಾವವ ಕಳೆಯಲೋಸುಗ ತಾಪಹರ ಶ್ರೀಗೀತೆ ಬೋಧಿಸಿ) ಗುರು-ಬಂಧು-ಸ್ವಜನಹತ್ಯಾಪಾಪಪ್ರಜ್ಞೆಯ ಪರಿತಾಪದ ನಿವಾರಣೆಗೆ ಆತ್ಮಗೀತೋಪದೇಶದ ಮೂಲಕ ಬ್ರಹ್ಮಾತ್ಮ / ಮೋಕ್ಷಜ್ಞಾನ, ಭಕ್ತಿ, ಪ್ರಪತ್ತಿ, ಕರ್ಮಯೋಗ, ವಿಶ್ವರೂಪ, ಪುರುಷ-ಪ್ರಕೃತಿ-ಪುರುಷೋತ್ತಮಯೋಗ, ಧ್ಯಾನ-ರಾಜಯೋಗ, ಸಾಂಖ್ಯ-ಸಂನ್ಯಾಸಾದಿ ಯೋಗಗಳು ಹಾಗೂ ಸ್ವಧರ್ಮಪಾಲನೆಯನ್ನು ಬೋಧಿಸಿ, (ದ್ವಾರಕೇಶ) ದ್ವಾರಕಾವತಿಯೆಂಬ ನವದ್ವೀಪನಗರಿಯನ್ನೇ ನಿರ್ಮಿಸಿ ದ್ವಾರಕಾಧೀಶನೆನಿಸಿ, (ಗೋಲೋಕ-ನಾಥ) ಇಹದಲ್ಲೂ ಗೋಸಾಮ್ರಾಜ್ಯಪಾಲಕನಾಗಿ ಪರದಲ್ಲೂ ಗೋಲೋಕಾಧಿಪತಿಯಾಗಿ ಇಂದ್ರನಿಂದ ಗೋವಿಂದನೆಂದು ನುತಿಸಲ್ಪಟ್ಟು, (ವೇಣು-ಮೋದ) ವೃಂದಾವನದ ವ್ರಜಭೂಮಿಯಲ್ಲಿ ರಾಸಕ್ರೀಡೆಯ ಸಹಿತ ಮುರಲೀಗಾನಲೋಲನಾಗಿ, (ಪೂರ್ಣಾವತಾರ) "ಕೃಷ್ಣಸ್ತು ಭಗವಾನ್ ಸ್ವಯಮ್" ಎಂಬಂತೆ ನವರಸಭರಿತನಾಗಿ ಭೋಗಿಯಂತೆ ತೋರಿದರೂ ಪರಮಯೋಗೇಶ್ವರನೂ ಯೋಗೀಶ್ವರನೂ ಆಗಿ ಭಗವಂತನ ಪೂರ್ಣಾವತಾರಿಯೆಂಬ ಪೊಗಳಿಕೆಯನ್ನು ಪಡೆದ (ಲಕ್ಷ್ಮೀಪತೇ) ಹೇ ಲಕ್ಷ್ಮೀಪತಿಯೆ! (ನೀ ಶಿಷ್ಟರಕ್ಷಕನೆಂಬುದನು ತೋರ್ದೆ) ನೀನು ಶರಣಾಗತರ, ಸಜ್ಜನರ, ನಿನ್ನ ನಿಜಭಕ್ತರ ರಕ್ಷಕನೆಂಬುದನ್ನು ಲೋಕಮುಖಕ್ಕೆ ತೋರಿಕೊಟ್ಟೆ. (ಶ್ರೀಪತಿಯೆ) ಅಂತಹ ಹೇ ಶ್ರೀಪತಿಯೆ! (ತವ ಪದಂ ಶರಣಂ ಪ್ರಪದ್ಯೇ) ನಿನ್ನ ಪಾದಾರವಿಂದಗಳನ್ನು ಶರಣುಹೊಂದುತ್ತೇನೆ.
ಹೇ ಬುದ್ಧರೂಪ ತ್ರಿಪುರಾಂತಕಮಿತ್ರ ದೇವ
ಪಾಖಂಡವಾದಿ ಖಲಮೋಹನ ದಿವ್ಯಶಕ್ತ |
ಕಾರುಣ್ಯಭಾವ ನಿರಪೇಕ್ಷ ನಿರೀಹ ನಿತ್ಯ
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೧೨||
ಹರಿಯೆ ಬುದ್ಧನ ರೂಪ ತಾಳಿದೆ
ತರಿದೆ ಹರ ನೀನಾಗಿ ತ್ರಿಪುರರ
ಅರಿವಿಮೋಹನನಾಗಿ ರಿಪುಸತಿವ್ರತವ ಕೆಡಿಸುತಲಿ |
ಪರಿಪರಿಯ ರುಜಿನಗಳ ಮರಣವ-
-ನರಿತು ಜಗ ನಶ್ವರತೆ ಕಾಣುತ
ಬರಿಯ ವೈರಾಗ್ಯದಲೆ ಶಾಂತಿಯ ತೋರಿದಗೆ ಶರಣಂ ||
(ತ್ರಿಪುರಾಂತಕಮಿತ್ರ—ತರಿದೆ ಹರ ನೀನಾಗಿ ತ್ರಿಪುರರ) ತ್ರಿಪುರಾಸುರರ ಹನನಕ್ಕೆ ಹರನಿಗೆ ಸಹಕರಿಸಲು ಅಥವಾ ಹರನ ರೂಪ ತಾಳಿ, (ಹೇ ಬುದ್ಧರೂಪ—ಹರಿಯೆ ಬುದ್ಧನ ರೂಪ ತಾಳಿದೆ) ಬುದ್ಧನಾಗಿ ಅವತರಿಸಿ, (ರಿಪು-ಸತಿ-ವ್ರತವ ಕೆಡಿಸುತಲಿ) ತ್ರಿಪುರಾಸುರರ ಪತ್ನಿಯರ ಪಾತಿವ್ರತ್ಯವನ್ನು ಕೆಡಿಸಿ, (ಪಾಖಂಡವಾದಿ ಖಲಮೋಹನ—ಅರಿ-ವಿಮೋಹನನಾಗಿ) ದುಷ್ಟರನ್ನು ಪಾಖಂಡ / ನಾಸ್ತಿಕ ಬೋಧನೆಯಿಂದ ಮೋಹಗೊಳಿಸಿ, ದುಷ್ಟಶಿಕ್ಷಣ—ಶಿಷ್ಟರಕ್ಷಣ ಹಾಗೂ ಧರ್ಮಸ್ಥಾಪನೆಗಾಗಿ ಅವರನ್ನು ದಾರಿ ತಪ್ಪಿಸಿ ಶಿಕ್ಷಿಸಿದನು. (ದಿವ್ಯಶಕ್ತ ದೇವ) ದಿವ್ಯಶಕ್ತಿಯುಳ್ನವನಾದ ಈ ಬುದ್ಧದೇವನು, (ಕಾರುಣ್ಯಭಾವ) ಸಕಲರಲ್ಲೂ ಕಾರುಣ್ಯವುಳ್ಳವನಾಗಿ, (ನಿರಪೇಕ್ಷ ನಿರೀಹ ನಿತ್ಯ) ಯಾವುದೇ ಅಪೇಕ್ಷೆ-ಬಯಕೆಗಳಿಲ್ಲದೆ ನಿರಪೇಕ್ಷ ನಿರೀಹನೂ ನಿತ್ಯಾತ್ಮನೂ ಆಗಿರುವನು. (ಪರಿಪರಿಯ ರುಜಿನಗಳ ಮರಣವನು ಅರಿತು) ಲೋಕದಲ್ಲಿ ವಿಧ ವಿಧವಾದ ರೋಗ ಸಂಕಟ ಮರಣಾದಿಗಳನ್ನು ಕಂಡು, (ಜಗ ನಶ್ವರತೆ ಕಾಣುತ) ಜಗದ ಕ್ಷಣಿಕತೆಯನ್ನರಿತು, (ಬರಿಯ ವೈರಾಗ್ಯದಲೆ ಶಾಂತಿಯ ತೋರಿದಗೆ) ಪರಮವಿರಕ್ತಿಯನ್ನು ಹೊಂದಿ, "ಆಸೆಯೇ ದುಃಖಕ್ಕೆ ಮೂಲ; ವೈರಾಗ್ಯದಿಂದಲೇ ಶಾಂತಿ"ಯೆಂಬುದನ್ನು ಮನಗಂಡು ಲೋಕಕ್ಕೆ ಬೋಧಿಸಿದ ಬುದ್ಧಾವತಾರಿಯಾದ (ಲಕ್ಷ್ಮೀಪತೇ) ಹೇ ಲಕ್ಷ್ಮೀನಾರಾಯಣನೆ! (ತವ ಪದಂ) ನಿನ್ನ ಪದಸರೋಜಗಳಿಗೆ (ಶರಣಂ ಪ್ರಪದ್ಯೇ—ಶರಣಂ) ಶರಣು ಶರಣು. "ಬುದ್ಧಂ ಶರಣಂ ಗಚ್ಛಾಮಿ".
ಟಿಪ್ಪಣಿಗಳು—
೧) ಬುದ್ಧಃ— "ಬುಧ್ಯತೇ ಸ್ಮ ಇತಿ"— ಪರಮಸತ್ಯವನ್ನು ತಿಳಿದಿದ್ದ ಜ್ಞಾನಿ, ಜಾಗೃತ, ಪ್ರಬುದ್ಧ, ಅಜ್ಞಾನನಿದ್ರೆಯಿಂದ ಎಚ್ಚರಗೊಂಡವನು;
"ಬುದ್ಧಂ ಜ್ಞಾನಮ್ ಅಸ್ಯ ಅಸ್ತಿ ಇತಿ"— ಸಮ್ಯಕ್ ಜ್ಞಾನವು ಇವನಿಗಿದೆಯೆಂಬುದರಿಂದ ಬುದ್ಧನು.
ವಿಷ್ಣುವಿನ ಪ್ರಸಿದ್ಧವಾದ ದಶಾವತಾರಗಳಲ್ಲಿ ನವಮ (೯ನೆಯ) ಅವತಾರ.
"ತತಃ ಕಲೌ ಸಂಪ್ರವೃತ್ತೇ ಸಂಮೋಹಾಯ ಸುರದ್ವಿಷಾಮ್ |
ಬುದ್ಧೋ ನಾಮ್ನಾಞ್ಜನಸುತಃ ಕೀಕಟೇಷು ಭವಿಷ್ಯತಿ ||"
(ಭಾಗವತ ಸ್ಕಂಧ ೧. ಅಧ್ಯಾಯ ೩)
"ಬಳಿಕ ಕಲಿಯುಗವು ಬರಲಾಗಿ, ದೇವಶತ್ರುಗಳ ಸಂಮೋಹನಕ್ಕಾಗಿ ಅಂಜನ / ಅಜಿನ ಸುತನಾಗಿ ಶ್ರೀಹರಿಯು ಕೀಕಟದೇಶದಲ್ಲಿ (ಈಗಿನ ಮಧ್ಯಗಯಾದಲ್ಲಿ) ಅವತರಿಸುವನು."
"ಸಂಸಾರೋऽಯಮಸಾರಃ, ಸಾರೋ ನಿರ್ವಾಣಮೇವ | ತದರ್ಥಂ ಯತಸ್ವ "— ಈ ಸಂಸಾರವೆಲ್ಲವೂ ನಿಸ್ಸಾರವಾದುದು, ನಿರ್ವಾಣ / ಮೋಕ್ಷವೇ ಸಾರತಮವಾದುದು. ಅದಕ್ಕಾಗಿ ಯತ್ನಿಸು ಎಂದುಪದೇಶಿಸಿದ.
"ಸರ್ವಜ್ಞಃ, ಸುಗತಃ, ಬುದ್ಧಃ, ಧರ್ಮರಾಜಃ, ತಥಾಗತಃ |
ಸಮನ್ತಭದ್ರಃ, ಭಗವಾನ್, ಮಾರಜಿತ್, ಲೋಕಜಿತ್, ಜಿನಃ ||"
(ಅಮರಕೋಷ)
"ಬೌದ್ಧಶಾಸ್ತ್ರಗಳಲ್ಲಿ ೨೫ ಬುದ್ಧರನ್ನು ಹೇಳಲಾಗಿದೆ. ಅವರಲ್ಲಿ ಶುದ್ಧೋದನನ ಔರಸದಿಂದ ಮಾಯಾದೇವಿಯ ಗರ್ಭದಿಂದುದಿಸಿದ, ಶಾಕ್ಯಸಿಂಹ-ಸರ್ವಾರ್ಥಸಿದ್ಧ-ಅರ್ಕಬಂಧು-ಗೌತಮ ಎಂಬ ನಾಮಚತುಷ್ಟಯದಿಂದ ಲೋಕವಿಶ್ರುತನಾದ, ಕೊನೆಯ ಬುದ್ಧನು ಕಪಿಲವಸ್ತುನಗರದಲ್ಲಿ, ಕಲಿಯುಗದ ೨,೪೮೬ ವರ್ಷಗಳು ಕಳೆಯಲಾಗಿ, ಒಂದು ಶುಕ್ರವಾರ, ಸುರದ್ವೇಷಿಗಳ ಸಂಮೋಹನಕ್ಕಾಗಿ ಸಾಕ್ಷಾತ್ ವಿವೇಕವೇ ಮೂರ್ತಿವೆತ್ತಂತೆ, ಸ್ವೇಚ್ಛಾಶರೀರಧಾರಿಯಾಗಿ ಪ್ರಾದುರ್ಭವಿಸಿದನು"— ಎಂದಿದೆ ಲಲಿತವಿಸ್ತರವೆಂಬ ಗ್ರಂಥ.
೨) ಪಾಖಂಡಃ— "ಪಾತಿ ಇತಿ ಪಾಃ, ಪಾಃ ತ್ರಯೀಧರ್ಮಃ, ತಂ ಖಂಡಯತಿ ಇತಿ ಪಾಖಂಡಃ"— ಋಗ್ಯಜುಸ್ಸಾಮಾತ್ಮಕವಾಗಿಯೂ, ಸಂಹಿತಾ/ಮಂತ್ರ-ಬ್ರಾಹ್ಮಣ-ಆರಣ್ಯಕೋಪನಿಷತ್ತೆಂಬುದಾಗಿಯೂ ತ್ರಯೀ ಎನಿಸಿದ ವೇದಗಳ ಧರ್ಮವನ್ನು ಪಾಲಿಸುತ್ತಾನಾದ್ದರಿಂದ ಪಾಃ | ಅದನ್ನು ಖಂಡಿಸುವವನೇ ಪಾಖಂಡನು.
"ಪಾಲನಾಚ್ಚ ತ್ರಯೀಧರ್ಮಃ ಪಾ-ಶಬ್ದೇನ ನಿಗದ್ಯತೇ |
ತಂ ಖಂಡಯಂತಿ ತೇ ಯಸ್ಮಾತ್ ಪಾಖಂಡಾಸ್ತೇನ ಹೇತುನಾ ||"
ಇವರನ್ನು ಪಾಷಂಡರೆಂದೂ ಕರೆಯುತ್ತಾರೆ. "ಪಾಪಂ ಸನೋತಿ ದರ್ಶನ-ಸಂಸರ್ಗಾದಿನಾ ದದಾತಿ ಇತಿ"—ಯಾರು ಕೇವಲ ದರ್ಶನ/ಸಂಸರ್ಗ/ಸಂಗ/ಸಂಪರ್ಕ ಮಾತ್ರದಿಂದಲೇ ಪಾಪವನ್ನು ಕೊಡುತ್ತಾರೋ ಅವರು ಪಾಷಂಡಿಗಳು / ಪಾಷಂಡರು. "ಪಾಂ ಷಂಡಯತಿ ಖಂಡಯತಿ ವಾ ಇತಿ"— ವೇದೋಕ್ತಧರ್ಮಪಾಲಕರನ್ನು ಖಂಡಿಸುವವರೇ ಪಾಷಂಡರು.
೩) ತ್ರಿಪುರಮ್— "ತ್ರಯಾಣಾಂ ಪುರಾಣಾಂ ಸಮಾಹಾರಃ"— ಮೂರು ಪಟ್ಟಣಗಳ ಸಮೂಹ. ಅಸುರಶಿಲ್ಪಿ ಮಯನಿಂದ ನಿರ್ಮಿತವಾದ, ಪ್ರತಿಯೊಂದೂ ಶತ ಯೋಜನವಿಸ್ತಾರವುಳ್ಳದ್ದಾದ, ದೇವಲೋಕದಸ್ತರದಲ್ಲಿನ ಚಿನ್ನದ ಪುರದಲ್ಲಿ ತಾರಕಾಕ್ಷನೂ, ಅಂತರಿಕ್ಷಸ್ತರದಲ್ಲಿನ ಬೆಳ್ಳಿಯ ಪಟ್ಟಣದಲ್ಲಿ ಕಮಲಾಕ್ಷನೂ, ಭೂಚಕ್ರಸ್ತರದಲ್ಲಿನ ಕಬ್ಬಿಣದ ನಗರದಲ್ಲಿ ವಿದ್ಯುನ್ಮಾಲಿಯೂ— ಈ ಮೂರು ಅಸುರರಾಜರು ವರಬಲದಿಂದ ಮೆರೆಯುತ್ತಿದ್ದರು. ಅವರನ್ನು ಸಂಹರಿಸಲು ಶಿವನಿಗೆ ಹರಿಯಾದಿಯಾದ ಎಲ್ಲ ದೇವಾನುದೇವತೆಗಳೂ ರಥಾಯುಧಾದಿಪರಿಕರಗಳ ರೂಪದಿಂದ ಸಹಕರಿಸಿದರು.
ಅಶ್ವಾಧಿರೂಢ ಕಲಿಹಂತಕಕರ್ಮಜನ್ಮ
ಕಲ್ಕ್ಯಾವತಾರ ವರಭಾರ್ಗವಶಿಷ್ಯಧರ್ಮ |
ಖಡ್ಗಾಯುಧ ಪ್ರಮಥನಪ್ರಥ ಮ್ಲೇಚ್ಛನಾಶ
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೧೩||
ಕಡೆಗೆ ಕಲಿಯುಗದೊಳಗೆ ಕಲ್ಕಿಯ
ಪಡೆದು ರೂಪವ ಶಂಬಳದಿ ತಾ
ಬಿಡದಿಯಲಿ ವಿಷ್ಣುಯಶ ಸುಮತಿಯ ತನಯನಾಗುತಲಿ |
ಪೊಡಮಡುತ ಗುರು ಭಾರ್ಗವನ ಶ್ರೀ
ಮೃಡತಪದಿ ಕರವಾಲ ಪಡೆಯುತ
ಬಿಡದೆ ದುಷ್ಟ ಮ್ಲೇಚ್ಛ ಯವನಾದಿಗಳ ನೀ ಕೊಲುವೆ ||
(ಕಡೆಗೆ ಕಲಿಯುಗದೊಳಗೆ) ಕೃತ-ತ್ರೇತಾ-ದ್ವಾಪರ-ಕಲಿಯೆಂಬ ಯುಗಚತುಷ್ಟಯದಲ್ಲಿ, ಕೊನೆಯದಾದ ಕಲಿಯುಗದಲ್ಲಿ, (ಶಂಬಳದಿ ತಾ ಬಿಡದಿಯಲಿ ವಿಷ್ಣುಯಶ ಸುಮತಿಯ ತನಯನಾಗುತಲಿ) ನೇಪಾಳದೇಶದ ಶಂಬಳ ಗ್ರಾಮದಲ್ಲಿ ವಿಷ್ಣುಯಶ-ಸುಮತಿ ಎಂಬ ಬ್ರಾಹ್ಮಣದಂಪತಿಗಳ ಸುತನಾಗಿ, (ಕಲ್ಕ್ಯಾವತಾರ—ಕಲ್ಕಿಯ ರೂಪವ ಪಡೆದು) ಕಲ್ಕಿನಾಮಕನಾಗಿ ಅವತರಿಸಿ, (ವರ-ಭಾರ್ಗವ-ಶಿಷ್ಯಧರ್ಮ—ಗುರು ಭಾರ್ಗವನ ಪೊಡಮಡುತ) ಶಾಸ್ತ್ರ-ಶಸ್ತ್ರಾಸ್ತ್ರವಿಶಾರದರಾದ, ಭೃಗುವಂಶಜ, ಜಮದಗ್ನಿಸುತ, ವಿಷ್ಣುವಿನ ಆವೇಶಾವತಾರಿಗಳಾದ ಪರಶುರಾಮರ ಶಿಷ್ಯನಾಗಿ, (ಶ್ರೀಮೃಡತಪದಿ) ಪರಶಿವನ ತಪಗೈದು, (ಖಡ್ಗಾಯುಧ—ಕರವಾಲ ಪಡೆಯುತ) ದಿವ್ಯವಾದ ಒರೆಯಿಲ್ಲದ ಖಡ್ಗಾಯುಧವನ್ನು ಪಡೆದು, (ಅಶ್ವಾಧಿರೂಢ) ಬೆತ್ತಲೆ ಹಯವನೇರಿ, (ಪ್ರಮಥನ-ಪ್ರಥ) ದುಷ್ಟಸಂಹಾರಕನೆಂದು ಖ್ಯಾತಿವಡೆದವನೆ! (ಮ್ಲೇಚ್ಛನಾಶ—ಬಿಡದೆ ದುಷ್ಟ ಮ್ಲೇಚ್ಛ ಯವನಾದಿಗಳ ನೀ ಕೊಲುವೆ) ಸತ್ಸಂಸ್ಕಾರರಹಿತ, ದುಷ್ಟ ಮ್ಲೇಚ್ಛ-ಯವನಾದಿಗಳನ್ನು ಸಂಹರಿಸಿ, (ಕಲಿಹಂತಕಕರ್ಮ-ಜನ್ಮ) ಕಲಿಯುಗವನ್ನು ಅಂತ್ಯಗೊಳಿಸಿ, ಧರ್ಮಸ್ಥಾಪನೆ ಮಾಡುವುದಕ್ಕಾಗಿಯೇ ಹುಟ್ಟಿದ, ಧರ್ಮಮಯ ಕೃತಯುಗವನ್ನು ತರುವ, (ಲಕ್ಷ್ಮೀಪತೇ) ಹೇ ಲಕ್ಷ್ಮೀಪತಿಯೇ! (ತವ ಪದಂ ಶರಣಂ ಪ್ರಪದ್ಯೇ) ನಿನ್ನ ಪಾದಾರವಿಂದಗಳಲ್ಲಿ ಶರಣು ಶರಣು.
ಟಿಪ್ಪಣಿ—
ಭಾರ್ಗವಃ— "ಭೃಗೋಃ ವಂಶೇ ಜಾತಃ"— ಭೃಗುಮಹರ್ಷಿಯ ವಂಶದಲ್ಲಿ ಹುಟ್ಟಿದವನು. ಶುಕ್ರಾಚಾರ್ಯನೂ ಭಾರ್ಗವನೆಂದು ಪ್ರಸಿದ್ಧ. ಹಾಗಾಗಿ, ಶುಕ್ರವಾರವನ್ನು ವೈದಿಕ/ಸಂಸ್ಕೃತದಲ್ಲಿ ಭಾರ್ಗವವಾಸರವೆಂದೇ ಕರೆಯುತ್ತಾರೆ. ಭೃಗು-ಖ್ಯಾತಿಯರ ಮಗಳಾಗಿ ಸಾಕ್ಷಾತ್ ಮಹಾಲಕ್ಷ್ಮಿಯೇ ಭಾರ್ಗವಿಯಾಗಿ ಅವತರಿಸಿದ್ದಳು. ಮುಂದೆ ಅದೇ ವಂಶದ ಜಮದಗ್ನಿ-ರೇಣುಕೆಯರಿಗೆ ಮಗನಾಗಿ ಮಹಾವಿಷ್ಣುವೇ ಪರಶುರಾಮನಾಗಿ ಅವತರಿಸಿ, ಭಾರ್ಗವರಾಮನೆಂದೂ ಪ್ರಸಿದ್ಧನಾದನು. ಪರಶು / ಪರ್ಶು / ಕೊಡಲಿಯನ್ನೇ ಆಯುಧವನ್ನಾಗಿಸಿದ್ದರಿಂದ ಪರಶುರಾಮನು. ಇಂತಹ ಋಷಿ-ಸಂತ-ಮಹಾಂತರ ಕುಲದಲ್ಲೇ ನಾವೆಲ್ಲರೂ ಕೂಡ ಹುಟ್ಟಿರುವೆವೆಂಬುದನ್ನೊಮ್ಮೆ ಮನಸ್ಸಿಗೆ ತಂದುಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ, ಮನದುಂಬಿ ಪುಳಕಿತವಾಗುತ್ತದೆ, ಮಾತು ಭಾವೋದ್ವೇಗದಿಂದ ಮೂಕವಾಗಿಬಿಡುತ್ತದೆ.
ಹೇ ವಾಸುದೇವ ಭವಭಂಜನ ದೀನಬಂಧೋ
ವೈಕುಂಠ ಕೇಶವ ಜನಾರ್ದನ ಹಸ್ತಿಬಂಧೋ |
ಹೇ ನಾರದಾದಿಮುನಿವಂದ್ಯ ದಯಾದಿಸಿಂಧೋ
ಲಕ್ಷ್ಮೀಪತೇ! ತವಪದಂ ಶರಣಂ ಪ್ರಪದ್ಯೇ ||೧೪||
ವಾಸುದೇವನೆ ದೀನಬಂಧುವೆ
ಈಸುವಿದ್ಯಾಪ್ರದನೆ ಲೋಕದಿ
ಲೇಸು ವೈಕುಂಠಾಧಿಪನೆ ತವ ಶರಣನಾಗುವುದು |
ಏಸು ವಿದ್ಯೆಗಳಿಂದಲೇನಹು-
-ದೇಸು ಸಂಪದದಿಂದಲೇನಹು-
-ದೀ ಸಗುಣ ನಿರ್ಗುಣನನಾತ್ಮನ ಶರಣು ಮೋಕ್ಷದವು ||
(ಹೇ ವಾಸುದೇವ—ವಾಸುದೇವನೆ) ಅಯ್ಯಾ ವಾಸುದೇವನೆ! (ಭವ-ಭಂಜನ) ಭವ / ಸಂಸಾರ / ಹುಟ್ಟು-ಸಾವು ಸುಖ-ದುಃಖಾದಿ ದ್ವಂದ್ವಾತ್ಮಕವಾದ ಸರಪಣಿಯೆಂಬ ಮಾಯಾಮೋಹವನ್ನು ತುಂಡರಿಸಿ, ನಾವು ನಿಜವಾಗಿಯೂ ಈಗಾಗಲೇ ಮುಕ್ತರೆಂಬುದನ್ನು ಮನಗಾಣಿಸುವ ಬ್ರಹ್ಮಾತ್ಮೈಕ್ಯ (ಈಸು ವಿದ್ಯಾಪ್ರದನೆ) ಮೋಕ್ಷಜ್ಞಾನಪ್ರದನೆ! ಸಮಸ್ತ ಪರಾ ಅಪರಾ ಇಷ್ಟೂ ವಿದ್ಯೆಗಳ ಉಪದೇಶಕನೆ! (ದೀನಬಂಧೋ—ದೀನಬಂಧುವೆ) ದೀನರ, ಅನಾಥರ, ಬಡವರ, ಆರ್ತರ ಹಿತೈಷಿಯೆ, ಮಿತ್ರನೆ, ಪರಿಪಾಲಕನೆ, ಬಂಧುವೆ! (ವೈಕುಂಠ) ಹೇ ವೈಕುಂಠಾಧಿಪನೆ! ವೈಕುಂಠಸ್ವರೂಪನೆ! (ಕೇಶವ) ಅಯ್ಯಾ ಕೇಶವನೆ! (ಜನಾರ್ದನ) ದುಷ್ಟಜನರ ಶಿಕ್ಷಕನೂ, ಶಿಷ್ಟಪರಿಪಾಲಕನೂ ಆದವನೆ! (ಹಸ್ತಿಬಂಧೋ) ಕರಿವರದನೆ, ಆನೆಯ ಆರ್ತಮೊರೆಗೆ ಓಗೊಟ್ಟು ಹರಿಯಾಗಿ ಬಂದು ಮೊಸಳೆಯಿಂದ ಬಿಡಿಸಿದ ನಕ್ರಹರನೆ! (ಹೇ ನಾರದಾದಿಮುನಿವಂದ್ಯ) ಅಯ್ಯಾ ದೇವರ್ಷಿ ತ್ರಿಲೋಕಸಂಚಾರಿ ಲೋಕಕಲ್ಯಾಣನಿರತ ಮುಕ್ತಿಮಾರ್ಗಪ್ರದ ನಾರದರೇ ಮುಂತಾದ ಮುನಿಗಣಗಳಿಂದ ವಂದಿಸಲ್ಪಡುವವನೆ! (ದಯಾದಿಸಿಂಧೋ) ದಯೆಯೇ ಮುಂತಾದ ಸಮಸ್ತ ಕಲ್ಯಾಣಗುಣಸಾಗರನೆ! (ಲಕ್ಷ್ಮೀಪತೇ) ಹೇ ಲಕ್ಷ್ಮೀನಾರಾಯಣನೇ! (ತವ ಪದಂ ಶರಣಂ ಪ್ರಪದ್ಯೇ) ನಿನ್ನ ಪಾದಾಂಬುಜಗಳನ್ನು ಆಶ್ರಯಿಸುತ್ತೇನೆ. (ಲೋಕದಿ ಲೇಸು ವೈಕುಂಠಾಧಿಪನೆ ತವ ಶರಣನಾಗುವುದು) ಯಾಕೆಂದರೆ ಈ ಲೋಕದಲ್ಲಿ ಪರಮಾತ್ಮನನ್ನು ಶರಣಾಗುವುದೇ ಎಲ್ಲಕ್ಕಿಂತ ಶ್ರೇಷ್ಠವಾದುದು. (ಏಸು ವಿದ್ಯೆಗಳಿಂದಲಿ ಏನು ಅಹುದು) ಎಷ್ಟೆಷ್ಟು ವಿದ್ಯೆಗಳಿಂದ ಏನು ಫಲವಾಯಿತು? (ಏಸು ಸಂಪದದಿಂದಲಿ ಏನು ಅಹುದು) ಎಷ್ಟು ಧನಕನಕಾದಿ ಸಂಪಾದನೆ ಮಾಡಿದರೂ ಏನನ್ನು ಸಾಧಿಸಿದಂತಾಯ್ತು? (ಈ ಸಗುಣ ನಿರ್ಗುಣನನು ಆತ್ಮನ ಶರಣು ಮೋಕ್ಷದವು) ಸತ್ವರಜಸ್ತಮೋಗುಣಮಯನಾಗಿ ಸಗುಣನಾಗಿ ತೋರಿದರೂ ಮೂಲದಲ್ಲಿ ತ್ರಿಗುಣಾತೀತ ನಿರ್ಗುಣವಾದ ಆತ್ಮತತ್ತ್ವವೇ ಆಗಿರುವ ಈ ಪರಮಾತ್ಮನನ್ನು ಶರಣಾಗುವುದು ಮೋಕ್ಷಜ್ಞಾನಪ್ರದಾಯಕವಾಗಿರುವುದು.
ಟಿಪ್ಪಣಿ—
ವಾಸುದೇವಃ—
(೧)
"ವಸುದೇವಸ್ಯ ಅಪತ್ಯಂ ಪುಮಾನ್"
"ವಸುದೇವಸ್ಯ ಜಾತೋऽಸೌ ವಾಸುದೇವಃ ಸನಾತನಃ"
(ಪದ್ಮಪುರಾಣ, ಉತ್ತರಖಂಡ)
ವಸುದೇವನ ಮಗನಾದ್ದರಿಂದ ವಾಸುದೇವನು.
(೨)
"ಸರ್ವತ್ರ ಅಸೌ ವಸತಿ ಆತ್ಮರೂಪೇಣ ವಿಶ್ವಂಭರತ್ವಾತ್"
ವಿಶ್ವವನ್ನೆಲ್ಲ ಆತ್ಮರೂಪದಿಂದ ವ್ಯಾಪಿಸಿ ತುಂಬಿಕೊಂಡು ವಿಶ್ವವನ್ನೇ ಆಧರಿಸಿ ಭರಿಸಿ ವಿಶ್ವಂಭರನೆನಿಸಿರುವುದರಿಂದ, ಎಲ್ಲೆಡೆ ಎಲ್ಲರಲ್ಲೂ ವಾಸವಾಗಿರುವುದರಿಂದ ವಾಸುದೇವನು.
(೩)
"ಸರ್ವತ್ರಾಸೌ ಸಮಸ್ತಂ ಚ ವಸತ್ಯತ್ರೇತಿ ವೈ ಯತಃ |
ಶುಕ್ಲವಸ್ತ್ರಧರಂ ದೇವಂ ಪ್ರಮಾಣಾದ್ವಾಮನಂ ಸದಾ ||"
(ಕಾಲಿಕಾಪುರಾಣ)
ಗಾತ್ರದಿಂದ ವಾಮನ / ಸಣ್ಣ / ಸೂಕ್ಷ್ಮವಾಗಿ, ಎಲ್ಲೆಡೆಯೂ ವಾಸವಾಗಿರುವ ಇವನು ಸಮಸ್ತವೂ ತಾನೇ ಆಗಿರುವನು.
(೪) ಪರಮಾತ್ಮನಾದ ವಾಸುದೇವನನ್ನು ಸಗುಣ ಸಾಕಾರ (ನಿರ್ಗುಣ ನಿರಾಕಾರ) ನಾಗಿ ಚತುರ್ಮೂರ್ತಿಸ್ವರೂಪನೆಂದೂ, ಚತುರ್ವ್ಯೂಹಾತ್ಮಕನೆಂದೂ ಕರೆಯುತ್ತಾರೆ. ಅನಿರುದ್ಧ (ಎಚ್ಚರ), ಪ್ರದ್ಯುಮ್ನ (ಕನಸು), ಸಂಕರ್ಷಣ (ಗಾಢನಿದ್ದೆ) ಹಾಗೂ ವಾಸುದೇವ (ಅವಸ್ಥಾತ್ರಯಾತೀತ, ತುರೀಯ, ಸಾಕ್ಷೀ)— ಇವು ಜೀವನ ಜಾಗ್ರತ್-ಸ್ವಪ್ನ-ಸುಷುಪ್ತಿಗಳೆಂಬ ೩ ಅವಸ್ಥೆಗಳಲ್ಲಿನ ಆತ್ಮಸ್ವರೂಪಗಳು. ಇವನ್ನೇ ವಿಶ್ವ / ವೈಶ್ವಾನರ, ತೈಜಸ, ಪ್ರಾಜ್ಞ, ತುರೀಯನೆಂದೂ ಮಾಂಡೂಕ್ಯೋಪನಿಷತ್ತು ಹೇಳಿದೆ.
(೫)
"ಸರ್ವತ್ರಾಸೌ ಸಮಸ್ತಂ ಚ ವಸತ್ಯತ್ರೇತಿ ವೈ ಯತಃ |
ತತಃ ಸ ವಾಸುದೇವೇತಿ ವಿದ್ವದ್ಭಿಃ ಪರಿಪಠ್ಯತೇ " (ವಿಷ್ಣುಪುರಾಣ)
"ವಸತಿ ವಾಸಂ ಗಚ್ಛತಿ ವಾ ವಾಸುಃ, ದೀವ್ಯತಿ ಕ್ರೀಡತಿ ಜಿಗೀಷತೇ ವ್ಯವಹರತಿ ದ್ಯೋತತೇ ಸ್ತೂಯತೇ ಮುಮುಕ್ಷುಭಿರ್ವಾ ಗಚ್ಛತಿ ಇತಿ ವಾ ದೇವಃ | ವಾಸುಶ್ಚಾಸೌ ದೇವಶ್ಚ ವಾಸುದೇವಃ ||"— (ಎಲ್ಲೆಲ್ಲೂ) ವಾಸವಾಗಿದ್ದಾನೆಂಬುದರಿಂದ ವಾಸುವು, ಬೆಳಗುತ್ತಾನೆ ಕ್ರೀಡಿಸುತ್ತಾನೆ ಸದಾ ಗೆಲ್ಲುವ ಇಚ್ಛೆಯುಳ್ಳವನಾಗಿರುತ್ತಾನೆ ಲೋಕವ್ಯವಹಾರವನ್ನು ಮಾಡಿಸುತ್ತಾನೆ ಪ್ರಕಾಶಸಿತ್ತಾನೆ / ದ್ಯುತಿಯಿಂದ, ಬೆಳಕಿನಿಂದ ಕೂಡಿದವನಾಗಿದ್ದಾನೆ ಮೋಕ್ಷಾಕಾಂಕ್ಷಿಗಳಿಂದ ಸ್ತುತಿಸಲ್ಪಡುತ್ತಾನೆ ಅಥವಾ ಮುಮುಕ್ಷುಗಳು ಇವನೆಡೆಗೆ ತೆರಳುತ್ತಾರೆಂಬುದರಿಂದ ದೇವನು. ಹೀಗೆ ವಾಸುವೂ ದೇವನೂ ಆಗಿರುವವನೇ ವಾಸುದೇವನು.
(೬)
"ಛಾದಯಾಮಿ ಜಗದ್ವಿಶ್ವಂ ಭೂತ್ಯಾ (=ಮಾಯಯಾ) ಸೂರ್ಯ ಇವಾಂಶುಭಿಃ | ಸರ್ವಭೂತಾಧಿವಾಸಶ್ಚ ವಾಸುದೇವಸ್ತತಃ ಸ್ಮೃತಃ ||"
ಸದಾ ಪರಿವರ್ತನಶೀಲವಾಗಿರುವುದರಿಂದ, ಚಲಿಸುತ್ತಿರುವುದರಿಂದ ಸೃಷ್ಟಿಯು ಜಗತ್ ಎನಿಸಿದೆ. "ಗಚ್ಛತಿ ಇತಿ ಜಗತ್". ಅಂತಹ ಸಮಗ್ರ ವಿಶ್ವವನ್ನು (ವಿಶ್ವಮ್ ಹಾಗೂ ಇತರ ವಿಷ್ಣುಸಹಸ್ರನಾಮಗಳ ವಿಸ್ತಾರವಾದ ೧೦೦ಕ್ಕೂ ಮಿಕ್ಕಿದ ನಾನಾರ್ಥಗಳ ಶ್ಲೋಕರೂಪೀ ವಿವರಣೆಗೆ ಇದೇ ಲೇಖಕರಿಂದ ಮುಂದೆ ಪ್ರಕಟವಾಗಲಿರುವ "ವಿಷ್ಣುಸಾಹಸ್ರೀ" ಕೃತಿಯನ್ನು ನೋಡಿ) / ಜಗತ್ತನ್ನು ತನ್ನದಾದ ವಿಭೂತಿ / ಮಹಿಮೆ / ಮಾಯೆಯಿಂದ—ಸೂರ್ಯನು ತನ್ನ ಕಿರಣಗಳಿಂದ ಮುಚ್ಚಿದಂತೆ—ಮುಚ್ಚುತ್ತಾನೆ / ಆವರಿಸುತ್ತಾನೆ / ಚಂದಗೊಳಿಸುತ್ತಾ, ಸರ್ವ ಚರಾಚರಗಳಲ್ಲೂ ವಾಸವಾಗಿರುವುದರಿಂದ ವಾಸುದೇವನೆಂದು ಸ್ಮರಿಸಲ್ಪಟ್ಟಿರುವನು.
(೭)
"ವಸನಾತ್ ಸರ್ವಭೂತಾನಾಂ ವಾಸುತ್ವಾದ್ದೇವಯೋನಿತಃ |
ವಾಸುದೇವಸ್ತತೋ ಜ್ಞೇಯೋ ಯೋಗಿಭಿಸ್ತತ್ತ್ವದರ್ಶಿಭಿಃ ||"
ಸ್ಥಾವರಜಂಗಮಾತ್ಮಕವಾದ ಸಕಲ ಭೂತರಾಶಿಗಳಲ್ಲಿ ವಾಸವಾಗಿರುವುದರಿಂದಲೂ, ಅವೆಲ್ಲವನ್ನೂ ವಸನ / ವಸ್ತ್ರದಂತೆ ಆವರಿಸಿರುವುದರಿಂದಲೂ, ಸಮಗ್ರ ಐಶ್ವರ್ಯ / ವಸು / ಸಂಪತ್ತಿನ ಆಧಿಪತ್ಯವಿರುವುದರಿಂದಲೂ ವಾಸುತ್ವವೂ, ಸಮಸ್ತ ದೇವತೆಗಳಿಗೂ ಮೂಲವಾದ್ದರಿಂದ ದೇವತ್ವವೂ, ಇವುಗಳಿಂದಾಗಿ ಪರಮಾತ್ಮನು ತತ್ತ್ವದರ್ಶಿಗಳಾದ ಯೋಗಿಗಳಿಂದ ವಾಸುದೇವನೆಂದು ತಿಳಿಯಲ್ಪಡತಕ್ಕವನಾಗಿದ್ದಾನೆ.
ಭವಃ— ಇದರ ಸವಿಸ್ತಾರ ವಿವರಣೆಯನ್ನು ಇದೇ ಲೇಖಕರ "ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ" ಎಂಬ ಕೃತಿಯಲ್ಲಿ ನೋಡಬಹುದು.
ದೀನಃ—
"ನಿಃಸ್ವಸ್ತು ದುರ್ವಿಧೋ ದೀನೋ ದರಿದ್ರೋ ದುರ್ಗತೋऽಪಿ ಸಃ |
ವನೀಯಕೋ ಯಾಚನಕೋ ಮಾರ್ಗಣೋ ಯಾಚಕಾರ್ಥಿನೌ ||"
(ಅಮರಕೋಷಃ)
"ದೀಯತೇ ಸ್ಮ ಇತಿ ನಿಷ್ಠಾ ತಸ್ಯ"
ಬೇಡಿದಾಗ ಕೊಡುತ್ತಿದ್ದನು ಎಂಬ ನಂಬಿಕೆ ಯಾವ ಬಡವನಿಗಿದೆಯೋ ಆತನೇ ದೀನನು. ಸ್ವತ್ತು / ತನ್ನದೆಂಬುದು ಇಲ್ಲದ ನಿಃಸ್ವನು, ವಿಧಿಯ ಕ್ರೂರತೆಗೆ ಬಲಿಯಾದ ಕೀಳು ತರದಂತಾದ ದುರ್ವಿಧನು, ಏನೂ ಇಲ್ಲದ ದರಿದ್ರನು, ಕೆಟ್ಟ ಗತಿ(ದುರ್ಗತಿ)ಯನ್ನು ಹೊಂದಿದ ದುರ್ಗತನು, ವನಿ / ಯಾಚನೆಯನ್ನು ಇಚ್ಛಿಸುವ ವನೀಯಕನು, ಯಾಚನಕನು, ಧನಿಕರ ಬೆನ್ನು ಬಿಡದೆ ಅಡ್ಡಗಟ್ಟುವ ಮಾರ್ಗಣನು, ಯಾಚಕನು, ಇಷ್ಟಾರ್ಥಗಳನ್ನು ಬಯಸುವ ಅರ್ಥೀ.
ವೈಕುಂಠಃ—
"ವಿಕುಂಠಾಯಾಃ ಅಪತ್ಯಂ ವೈಕುಂಠಃ"
"ಚಾಕ್ಷುಷಸ್ಯಾಂತರೇ ದೇವೋ ವೈಕುಂಠಃ ಪುರುಷೋತ್ತಮಃ |
ವಿಕುಂಠಾಯಾಮಸೌ ಜಜ್ಞೇ ವೈಕುಂಠೇ ದೈವತೈಃ ಸಹ ||"
(ವಿಷ್ಣುಪುರಾಣಮ್)
ವಿಕುಂಠಾ ಎಂಬವಳ ಮಗನೇ ವೈಕುಂಠನು. ಈ ದೇವನಾದ ಪುರುಷೋತ್ತಮನು / ಶ್ರೀಮನ್ನಾರಾಯಣನು ಚಾಕ್ಷುಷಮನ್ವಂತರ ಕಾಲದೊಳಗೆ / ಅವಧಿಯಲ್ಲಿ, ವಿಕುಂಠಾಳಲ್ಲಿ ದೇವತೆಗಳೊಂದಿಗೆ ವೈಕುಂಠದಲ್ಲಿ ಜನಿಸಿದನು.
"ವಿಷ್ಣುರ್ನಾರಾಯಣಃ ಕೃಷ್ಣೋ ವೈಕುಂಠೋ ವಿಷ್ಟರಶ್ರವಾಃ |
ದಾಮೋದರೋ ಹೃಷೀಕೇಶಃ ಕೇಶವೋ ಮಾಧವಃ ಸ್ವಭೂಃ ||"
(ಅಮರಕೋಷಃ)
"ವಿಕುಂಠಾಯಾಂ ಭವಃ"— ವಿಕುಂಠೆಯಲ್ಲಿ ಇರುವ / ಜನಿಸಿದ.
"ವಿವಿಧಾ ಕುಂಠಾ ಮಾಯಾ ಯಸ್ಯ"—ನಾನಾ ಮಾಯೆಗಳು ಯಾವನಲ್ಲಿವೆಯೋ ಅವನು.
"ಮಯಾ ಸಂಶ್ಲೇಷಿತಾ ಭೂಮಿರದ್ಭಿರ್ವ್ಯೋಮ್ನಾ ಚ ವಾಯುನಾ |
ವಾಯುಶ್ಚ ತೇಜಸಾ ಸಾರ್ಧಂ ವೈಕುಂಠತ್ವಂ ತತೋ ಮಮ ||"
(ಮಹಾಭಾರತೇ, ಶಾಂತಿಪರ್ವಣಿ)
ನನ್ನಿಂದ ಭೂಮಿಯು ನೀರಿನಿಂದಲೂ, ಆಕಾಶದಿಂದಲೂ, ವಾಯುವಿನಿಂದಲೂ ಕೂಡಿರುವಂತೆ ಆಯಿತು. ವಾಯುವೂ ಅಗ್ನಿಯೊಂದಿಗೆ ಸೇರಿರುವಂತೆ ಮಾಡಿದೆನು. ಹೀಗಾಗಿ ನನಗೆ ವೈಕುಂಠತ್ವವು ಬಂತು ಎಂದಿರುವನು ಪರಮಾತ್ಮ. "ಕುಂಠಾ ಜಡಮ್, ತಂ ವಿಶಿಷ್ಟಂ ಕರೋತೀತಿ ಪ್ರಕೃತಿಃ ಮಾಯಾ ವಿಕುಂಠಾ | ತಯಾऽಪಿ ಪರೋ ಭವತೀತಿ ವೈಕುಂಠಃ"— ಕುಂಠಾ ಎಂದರೆ ಜಡ. ಅದನ್ನು ತ್ರಿಗುಣಾತ್ಮಕವಾಗಿ ವಿಶಿಷ್ಟವಾಗಿಸುವ ಪ್ರಕೃತಿ / ಮಾಯೆಯೇ ವಿಕುಂಠಾ. ಅವಳನ್ನೂ ಮೀರಿದ ಪರತತ್ತ್ವವೇ ವೈಕುಂಠ / ಆತ್ಮಾ / ಪರಮಾತ್ಮಾ.
"ಕುಂಠಂ ಜಡಂ ಚ ವಿಶ್ವೌಘಂ ವಿಶಿಷ್ಟಂ ಚ ಕರೋತಿ ಯಾ |
ವಿಕುಂಠಾಂ ಪ್ರಕೃತಿಂ ವೇದಾಶ್ಚತ್ವಾರಶ್ಚ ವದಂತಿ ತಾಮ್ ||
ಗುಣಾಶ್ರಯೇನ ಭಗವಾನ್ ತಸ್ಯಾಂ ಜಾತಃ ಸ್ವಸೃಷ್ಟಯೇ |
ಪರಿಪೂರ್ಣತಮಂ ತೇನ ವೈಕುಂಠಂ ಚ ವಿದುರ್ಬುಧಾಃ ||"
ವಿಶ್ವಸಮೂಹವಾದ ಕುಂಠವೆಂಬ ಜಡವನ್ನು ಯಾವ ವಿಕುಂಠಾ ಎಂಬ ಪ್ರಕೃತಿಯು ವಿಶಿಷ್ಟವನ್ನಾಗಿಸುವಳೋ, ಅವಳನ್ನೇ ನಾಲ್ಕೂ ವೇದಗಳು ಸ್ತುತಿಸುತ್ತಿವೆ. ಸತ್ತ್ವ-ರಜ-ತಮವೆಂಬ ತ್ರಿಗುಣಗಳನ್ನಾಶ್ರಯಿಸಿ ಭಗವಂತನು ಆ ವಿಕುಂಠೆಯಲ್ಲಿ ತಾನಾಗಿ ಹುಟ್ಟಿ, ಸೃಷ್ಟಿಯನ್ನು ಪರಿಪೂರ್ಣವಾಗಿಸಿದನೆಂಬುದರಿಂದ ಜ್ಞಾನಿಗಳು ಆ ಪರಮಾತ್ಮನನ್ನು ವೈಕುಂಠನೆಂದು ತಿಳಿಯುವರು. ಆತನ ಪರಮಧಾಮವು ೧೪ ಲೋಕಗಳಲ್ಲಿ (ಭೂಮಿಯ ಕೆಳಗಿನ ಅತಲ-ವಿತಲ-ಸುತಲ-ತಲಾತಲ-ರಸಾತಲ-ಮಹಾತಲ-ಪಾತಾಲವೆಂಬ ೭, ಮೇಲಿನ ಭೂಃ, ಭುವಃ, ಸುವಃ, ಮಹಃ, ಜನಃ, ತಪಃ, ಸತ್ಯಮ್ ಎಂಬ ೭) ಮೇಲಿನದಾದ ಸತ್ಯಲೋಕಕ್ಕಿಂತಲೂ ಮೇಲಿರುವುದು.
ಕೇಶವಃ— ಈ ಶಬ್ದದ ವಿವರಣೆ ಮುಂದೆ "ನಾರಾಯಣಶತಕಮ್" ನಲ್ಲಿ ೬೧, ೬೨, ೬೩, ೬೪ನೆಯ ಶ್ಲೋಕ-ವಿವರಣೆಗಳಲ್ಲಿ ಬಂದಿದೆ.
ಜನಾರ್ದನಃ—
"ದೈತ್ಯಾರಿಃ ಪುಂಡರೀಕಾಕ್ಷೋ ಗೋವಿಂದೋ ಗರುಡಧ್ವಜಃ |
ಪೀತಾಂಬರೋऽಚ್ಯುತಃ ಶಾರ್ಙ್ಗೀ ವಿಷ್ವಕ್ಸೇನೋ ಜನಾರ್ದನಃ ||"
(ಅಮರಕೋಷಃ)
"ಜನೈಃ ಅರ್ದ್ಯತೇ ಪ್ರಾರ್ಥ್ಯತೇ ಪುರುಷಾರ್ಥಲಾಭಾಯ, ಅರ್ದ ಯಾಚನೇ"
ಜನರಿಂದ ಧರ್ಮಾರ್ಥಕಾಮಮೋಕ್ಷವೆಂಬ ಚತುರ್ವಿಧ ಪುರುಷಾರ್ಥ ಪ್ರಾಪ್ತಿಗಾಗಿ ಪ್ರಾರ್ಥಿಸಲ್ಪಡುವವನು.
"ಜನಂ ಜನನಮ್ ಭಕ್ತಾನಾಮ್ ಅರ್ದತಿ ಹಿನಸ್ತಿ"
ತನ್ನ ಭಕ್ತರ ಜನನ-ಮರಣಗಳನ್ನು ನಿವಾರಿಸಿ ಮೋಕ್ಷವೀಯುವವನು.
"ತಾಡಯತಿ ಜನಾನ್ ಸಮುದ್ರವಾಸಿನಃ ಅಸುರಭೇದಾನ್ ಅರ್ದಯತಿ ವಾ"
ಸಮುದ್ರವಾಸಿಗಳಾದ ಜನರೆಂಬ ಅಸುರರನ್ನು ಸಂಹರಿಸಿದವನು.
"ಜನಾನ್ ಅರ್ದತಿ ಹರರೂಪೇಣ ಸಂಹಾರಕತ್ವಾತ್"
ಹರರೂಪಿನಿಂದ ಜನಸಂಹಾರಮಾಡುವುದರಿಂದ ಜನಾರ್ದನನು.
"ಜನಯತಿ ಉತ್ಪಾದಯತಿ ಲೋಕಾನ್ ಬ್ರಹ್ಮರೂಪೇಣ ಸೃಷ್ಟಿಕರ್ತೃತ್ವಾತ್"
ಬ್ರಹ್ಮನ ರೂಪದಿಂದ ಜನರನ್ನು ಸೃಷ್ಟಿ ಮಾಡುವುದರಿಂದ ಜನಾರ್ದನನು.
"ಜನಶ್ಚಾಸೌ ಅರ್ದನಶ್ಚೇತಿ ಜನಾರ್ದನಃ"
ಇವನು ಜನರಂತೆಯೂ, ಅವರ ಅರ್ದಕ(ಸೃಷ್ಟಿ, ಸ್ಥಿತಿ, ಸಂಹಾರಕ)ನಂತೆಯೂ ತೋರುವವನು.
"ಜನಾನ್ ಲೋಕಾನ್ ಅರ್ದತಿ ಗಚ್ಛತಿ ಪ್ರಾಪ್ನೋತಿ ರಕ್ಷಣಾರ್ಥಂ ಪಾಲಕತ್ವಾದಿತಿ"
ಜನರನ್ನು ಪಾಲಿಸುವವನು.
|| ಇತಿ ಶ್ರೀಲಕ್ಷ್ಮೀನಾರಾಯಣಪ್ರಪತ್ತಿಃ ಗುರುಪರಮಾತ್ಮಾರ್ಪಿತಮಸ್ತು ||
Comments
Post a Comment