ಸ್ತೋತ್ರಸಂಹಿತಾ ೧.೧ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)
ಶ್ರೀಭಗವತ್ತತ್ತ್ವರತ್ನಾಕರ ೨
ಸ್ತೋತ್ರಸಂಹಿತಾ ೧
ಸಂಶೋಧನೆ, ಸಂಪಾದನೆ, ಸಂಗ್ರಹಣೆ ಮತ್ತು ಸಂರಚನೆ—
ಡಾ || ಕೃಷ್ಣಮೂರ್ತಿ ಶಾಸ್ತ್ರೀ, ದಂಬೆ, ಪುಣಚ
ಲೇಖಕನ ಪ್ರಸ್ತಾವನೆ
ಶ್ರೀಭಗವಂತನ ಕೃಪೆ ಹಾಗೂ ಪ್ರೇರಣೆಗಳಿಂದ “ಶ್ರೀಭಗವತ್ತತ್ತ್ವರತ್ನಾಕರ” (ಶ್ರೀಭಗವತ್-ತತ್-ತ್ವ-ರತ್ನ-ಆಕರ) ಎಂಬ ಈ ಕೃತಿಸಂಗ್ರಹವನ್ನು ಭಗವಂತನಿಗೇ ಅರ್ಪಿಸಿ, ಭಗವಂತನದೇ ಒಂದು ರೂಪವಾದ ನಿಮ್ಮ ಕರಕಮಲಗಳಲ್ಲಿಡುತ್ತಿದ್ದೇನೆ. ಇದು ಸಕಲ ಸಿರಿಸಂಪದಗಳೊಡೆಯನಾದ (ಶ್ರೀ) ಪರಮಾತ್ಮನ (ಭಗವತ್) ಬಗೆಗಿನ ವಿಚಾರ-ಲೀಲೆಗಳ ಸಾರ ಹಾಗೂ ಭಗವಂತನೇ ಅನುಗ್ರಹಿಸಿದ ಜ್ಞಾನದಿಂದ ಪ್ರಾಜ್ಞರು ನಮಗೆ ನೀಡಿರುವ ಸನಾತನ ಸದ್ವಿಚಾರಗಳ (ತತ್ತ್ವರತ್ನ) ಸಂಗ್ರಹ (ಆಕರ). ಈ ಕೃತಿಯಲ್ಲಿ ಸನಾತನ ಭಾರತೀಯ ಸಂಸ್ಕೃತಿ-ಪರಂಪರೆಗಳ ಆಧಾರಸ್ತಂಭಗಳಾದ ವೇದೋಪನಿಷತ್ತುಗಳು, ವೇದದ ಷಡಂಗಗಳು, ಸ್ಮೃತಿ-ಉಪಸ್ಮೃತಿಗಳು, ದರ್ಶನಗಳು, ಆಗಮ-ತಂತ್ರಶಾಸ್ತ್ರಗಳು, ಹದಿನೆಂಟು ಪುರಾಣಗಳು, ಉಪಪುರಾಣಗಳು, ರಾಮಾಯಣ-ಮಹಾಭಾರತ-ಗುರುಚರಿತ್ರೆ ಮುಂತಾದ ಇತಿಹಾಸಗ್ರಂಥಗಳು, ದ್ವೈತ-ಅದ್ವೈತಾದಿಸಿದ್ಧಾಂತಗಳು, ಗುರು-ದೇವತಾಸ್ತೋತ್ರಗಳು, ನೀತಿ-ಸದಾಚಾರಾದಿ ಸುಭಾಷಿತಗಳು— ಇತ್ಯಾದಿಗಳ ಸಾರಸರ್ವಸ್ವವು ಅನುಕ್ರಮವಾಗಿ,
(೮)ವೈದಿಕಸಂಹಿತಾ,
(೭)ವೇದಾಂಗಸಂಹಿತಾ, (೫)ಸ್ಮೃತಿಸಂಹಿತಾ, (೯)ದರ್ಶನಸಂಹಿತಾ, (೬)ತನ್ತ್ರಾಗಮಸಂಹಿತಾ, (೪)ಪುರಾಣಸಂಹಿತಾ, (೩)ಇತಿಹಾಸಸಂಹಿತಾ, (೧೦)ಸಿದ್ಧಾಂತಸಂಹಿತಾ, (೧)ಸ್ತೋತ್ರಸಂಹಿತಾ ಹಾಗೂ
(೨)ಸುಭಾಷಿತಸಂಹಿತಾ ಎಂಬ ವಿಭಾಗಗಳಲ್ಲಿ, ಅವುಗಳೊಳಗಿನ ವಿವಿಧ ಕಾಂಡಗಳಲ್ಲಿ ಉಲ್ಲೇಖಿಸಲ್ಪಟ್ಟಿರುವುದು. ಅಲ್ಲದೆ, (೧೧)ಸಂಕೀರ್ಣಸಂಹಿತಾಭಾಗದಲ್ಲಿ ಇತರ ಆಧ್ಯಾತ್ಮಿಕ, ಧಾರ್ಮಿಕ ಕೃತಿಗಳನ್ನು ನೀಡಲಾಗಿದೆ.
ನಮ್ಮೆಲ್ಲರ ಬಯಕೆಯು ಎಂದಿಗೂ ಬತ್ತದ ಸುಖ. ಅಲ್ಲವೇ? ಇದನ್ನೇ ಹಿಂದಿನವರು “ಮೋಕ್ಷ” ಎಂದರು. ಕುಟುಂಬವ್ಯವಸ್ಥೆಯಲ್ಲಿರಲಿ, ಸಂನ್ಯಾಸಿಯಾಗಿರಲಿ, ಸಕಲ ಮೋಹ-ಬಂಧನಗಳಿಗೆ ಮನಸ್ಸನ್ನು ಕೊಡದೆ, ಯಾವುದೇ ಅಪೇಕ್ಷೆಯಿಲ್ಲದೆ, ಏನಾದರೂ, ವಿಚಲಿತರಾಗದೆ ಸ್ಥಿರಬುದ್ಧಿಯಿಂದ ಕರ್ತವ್ಯಕರ್ಮಗಳ ನಿರ್ವಹಣೆಯೇ ಜೀವನ್ಮುಕ್ತತೆ. ಇದೇ ಇಹದಲ್ಲಿ ಮೋಕ್ಷ. ಇದಾದರೆ ಮಾತ್ರ ಪರದಲ್ಲೂ (ಮರಣಾನಂತರವೂ) ಪುನರ್ಜನ್ಮವಿರದ ಮೋಕ್ಷಕ್ಕೆ ಭಾಜನರಾಗುವರು ಅಥವಾ ಹುಟ್ಟಿದರೂ ಜೀವನ್ಮುಕ್ತರಾಗಿ ಲೋಕೋದ್ಧಾರಕರಾಗುವರು. ಇದರ ಮಾರ್ಗಗಳಾವುವು ಎಂಬುದನ್ನು (೧೨)ಮೋಕ್ಷೋಪಾಯಸಂಹಿತಾ ಎಂಬ ಕೊನೆಯ ಭಾಗದಲ್ಲಿ ವಿಸ್ತರಿಸಲಾಗಿದೆ.
ಈ ಕೃತಿಸುಮಮಾಲೆಯ ದ್ವಿತೀಯಭಾಗವಾಗಿ, ಶ್ರೀಭಗವತ್ತತ್ತ್ವರತ್ನಾಕರ ೨ (ಸ್ತೋತ್ರಸಂಹಿತಾ ೧) ಎಂಬ ಎರಡನೆಯ ಕೃತಿಪುಷ್ಪವನ್ನು ತಮ್ಮ ಕೈಗಳಲ್ಲಿಡುತ್ತಿದ್ದೇವೆ. ಈ ಭಾಗವನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಒಂದೊಂದು ಸ್ತೋತ್ರದ, ಅದರೊಳಗಿನ ಕೆಲಕೆಲವು ವಿಶಿಷ್ಟ ಶ್ಲೋಕಗಳ ಕುರಿತಾಗಿಯೂ, ಸಮಗ್ರ ಕೃತಿಯ ಬಗ್ಗೆಯೂ, ತುಂಬ ಪ್ರೀತಿಯಿಂದ ಪ್ರೋತ್ಸಾಹಪೂರ್ವಕವೂ ವಿದ್ವತ್ಪೂರ್ಣವೂ ಆಶೀಃಪುರಸ್ಸರವೂ ಆದ ಅದ್ಭುತ ಮುನ್ನುಡಿಯನ್ನು, ನನ್ನ ಮುಖತಃ, ವೈಯಕ್ತಿಕ ಪರಿಚಯವಿರದಿದ್ದರೂ, ಕೇವಲ ದೂರವಾಣಿಯ ಮುಖಾಂತರ ಮಾಡಿದ ಕೋರಿಕೆಯನ್ನು ಮನ್ನಿಸಿ, ತಮ್ಮ ಬಿಡುವಿರದ ಕರ್ತವ್ಯಗಳ ನಡುವೆ, ಸುಂದರವಾಗಿ ಅನುಗ್ರಹಿಸಿದ, ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನ (ರಿ.), ಬೆಂಗಳೂರು— ಇದರ ಸ್ಥಾಪಕಾಧ್ಯಕ್ಷರಾಗಿ ಸಮಾಜೋದ್ಧಾರಮುಖಿ ಕಾಯಕದಲ್ಲಿ ಬಹುತೆರನಾಗಿ ತಮ್ಮನ್ನೂ, ತಮ್ಮ ಕುಟುಂಬವನ್ನೂ ಮುಡಿಪಾಗಿಟ್ಟಿರುವ, ಡಾ|| ಗಣಪತಿ ಹೆಗಡೆ, ಪ್ರಾಂಶುಪಾಲರು, MLA ಪದವಿಪೂರ್ವಕಾಲೇಜು, ಮಲ್ಲೇಶ್ವರಮ್, ಬೆಂಗಳೂರು—ಇವರಿಗೆ ನನ್ನ ಅನಂತಾನಂತ ಕೃತಜ್ಞತೆಗಳು.
ಈ ಶ್ರೀಭಗವತ್ತತ್ತ್ವರತ್ನಾಕರವೆಂಬ ಕೃತಿಸರಣಿಯಲ್ಲಿ ಕೆಲವು ನನ್ನ ಮೂಲಕ ಭಗವಂತ ರಚನೆ ಮಾಡಿಸಿದವುಗಳೂ, ಹಲವು ಪೂರ್ವಸೂರಿಗಳ ಕೃತಿಗಳಿಂದ ಆಯ್ದುಕೊಂಡಿರುವವುಗಳೂ ಇವೆ. ಇದನ್ನು ಆದರದಿಂದ ಸ್ವೀಕರಿಸಿ, ತಪ್ಪುಗಳನ್ನು ನನಗೆ ತಿಳಿಸಿ, ಒಪ್ಪುಗಳಿಂದ ಪರಮಾನಂದ ಹೊಂದಿದರೆ ನನ್ನೀ ಪರಿಶ್ರಮವೂ, ಭಗವದ್ದತ್ತವಾದ ಈ ಸುಕೃತವೆನಿಸಿರುವ ಮಾನವ ಜನುಮವೂ ಸಾರ್ಥಕವಾಗುವುದು. ನಿಮ್ಮ ಸಲಹೆ-ಸೂಚನೆಗಳಿಗೆ ಸದಾ ಸ್ವಾಗತ.
ಇಂತೀ ಸಜ್ಜನ ವಿದ್ವಜ್ಜನ ವಿಧೇಯ,
ಡಾ || ಕೃಷ್ಣಮೂರ್ತಿಶಾಸ್ತ್ರೀ,
ಎಂ.ಬಿ.ಬಿ.ಎಸ್., ಸಂಸ್ಕೃತಕೋವಿದ,
"ಶ್ರೀಕೃಪಾ",
ದಂಬೆ ಮನೆ,
ಅಂಚೆ ಪುಣಚ,
ಬಂಟ್ವಾಳ ತಾ ||,
ವಯಾ ವಿಟ್ಲ,
ದ.ಕ. ಜಿಲ್ಲೆ,
ಪಿನ್ - 574 243,
ಫೋನ್:- +91 9972716812
ಇ-ಮೈಲ್: krishnamoorthydr77@gmail.com
ಕೃತಜ್ಞತೆಗಳು ಹಾಗೂ ಸಮರ್ಪಣೆ
ಇದರ ರಚನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರೇರಕರೂ, ಸಹಾಯಕರೂ, ಪ್ರೋತ್ಸಾಹಕರೂ, ಪರಿಷ್ಕಾರಕರೂ, ವಾಚಕರೂ ಆದ ನನ್ನ ಹೆತ್ತವರು, ಧರ್ಮಪತ್ನಿ ಹಾಗೂ ಕುಟುಂಬವರ್ಗ, ಸಹೋದ್ಯೋಗಿಗಳು, ಬಂಧುಗಳು, ಸ್ನೇಹಿತರು, ಗುರುಹಿರಿಯರು, ಜಗದ್ಗುರುಗಳು, ಸಮಸ್ತ ಹಿತಾಕಾಂಕ್ಷಿಗಳು, ಪ್ರಕಾಶಕರು, ಮುದ್ರಕರು ಹಾಗೂ ಸಿಬ್ಬಂದಿವರ್ಗ, ಮುಖಪುಟವಿನ್ಯಾಸಕಾರರು, ಉದಾರ ದಾನಿಗಳು, ಪರಿಷ್ಕರಣ-ವಿದ್ವನ್ಮಂಡಲಿ ಹಾಗೂ ಪ್ರಕೃತಿ-ಪರಮಾತ್ಮ ― ಇವರಿಗೆ ತುಂಬುಹೃದಯದ ಕೃತಜ್ಞತೆಗಳು ಹಾಗೂ ಈ ಕೃತಿಯನ್ನು ಇವರೆಲ್ಲರಿಗೆ ಸಮರ್ಪಿಸುತ್ತಿದ್ದೇನೆ.
ವಿಶೇಷವಾಗಿ ಈ ಕೃತಿಯು ಪ್ರಕಾಶಕ್ಕೆ ಬರಲು ಕಾರಣಕರ್ತರಾದ ಕೂರಡ್ಕ ಆದಿಪರಾಶಕ್ತಿ-ಕಾಲಭೈರವೇಶ್ವರ ದೇವಸ್ಥಾನದ ಮೊಕ್ತೇಸರರು, ಲೇಖಕರು ಹಾಗೂ ನಿವೃತ್ತ ಶಿಕ್ಷಕರಾದ ಶ್ರೀಯುತ ಶ್ರೀರಾಮ ಪದಕಣ್ಣಾಯರಿಗೆ ಅನಂತಾನಂತ ಕೃತಜ್ಞತೆಗಳು. ಇವರ ಸಲಹೆಯಂತೆ ನಾನು ತೇಜು ಪಬ್ಲಿಕೇಷನ್ಸ್ ನ ಶ್ರೀಯುತ ರಾಮನಾಥ, ಬೆಂಗಳೂರು— ಇವರನ್ನು ಸಂಪರ್ಕಿಸಿದಾಗ, ಕೃತಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಇನ್ನಷ್ಟು ಕೃತಿಗಳನ್ನೂ ಪ್ರಕಾಶಪಡಿಸೋಣವೆಂದು ಸಂತೋಷದಿಂದ ಪ್ರೋತ್ಸಾಹಿಸಿ, ವಿಕ್ರಂ ಪ್ರಕಾಶನದವರನ್ನು ಪರಿಚಯಿಸಿ, ಅವರ ಮೂಲಕ ಈ ಕೃತಿಯನ್ನು ಹೊರತರುತ್ತಿದ್ದಾರೆ. ಇದಕ್ಕಾಗಿ, ಇವರಿಗೂ, ವಿಕ್ರಂ ಪ್ರಕಾಶನದ ಸರ್ವರಿಗೂ ನಾನು ಚಿರಋಣಿ.
ಅಲ್ಲದೆ, ಈ ಕೃತಿಯನ್ನು ಓದಿ, ಆನಂದಿಸಿ, ಬೆನ್ನು ತಟ್ಟುವ ಸಹೃದಯಿ ವಾಚಕಬಂಧುಗಳಿಗೂ ನಾನು ಅತ್ಯಂತ ಆಭಾರಿಯಾಗಿದ್ದೇನೆ.
ಮುನ್ನುಡಿ
ವೃತ್ತಿಯಲ್ಲಿ ವೈದ್ಯರೂ, ಪ್ರವೃತ್ತಿಯಲ್ಲಿ ಸಾಹಿತಿಗಳೂ, ಸಹೃದಯರೂ, ಆತ್ಮೀಯರೂ, ಪ್ರೀತಿಪಾತ್ರರೂ ಆದ ಡಾ||ಕೃಷ್ಣಮೂರ್ತಿ ಶಾಸ್ತ್ರಿ ದಂಬೆಯವರು ಸ್ವಯಂ ಸಂರಚಿಸಿದ ಶ್ರೀ ಭಗವತ್ತತ್ತ್ವರತ್ನಾಕರಸ್ತೋತ್ರಸಂಹಿತಾ-2 ಈ ಕೃತಿಗೆ ಮುನ್ನುಡಿ ಬರೆಯಬೇಕೆಂದು ಆಹ್ವಾನ ಬಂದಿದ್ದು ಅನಾಯಾಸವಾಗಿ, ಅಷ್ಟೇ ಪ್ರೀತಿಯಿಂದ ಒಪ್ಪಿಕೊಂಡೆ ಕೂಡ. ಹಲವು ಕೃತಿಗಳ ಮೂಲಕ ಭಕ್ತಿಸಾಹಿತ್ಯಲೋಕದಲ್ಲಿ ಹೆಜ್ಜೆ ಗುರುತು ಮೂಡಿಸುತ್ತಿರುವ ಡಾ.ಕೃಷ್ಣಮೂರ್ತಿ ಅವರಿಂದ ಸಂಕಲಿತ ಸ್ತೋತ್ರಸಂಕಲನಕ್ಕೊಂದು ಮುನ್ನಡಿಯಿಡುವ, ಮುನ್ನುಡಿಯನ್ನು ಬರೆಯುವ ಸದವಕಾಶಕ್ಕಾಗಿ ಕೃತಜ್ಞತೆಗಳು.
ಭಕ್ತಿಕಾವ್ಯಕುಸುಮವೊಂದು ತನ್ನ ಅಪರಿಮಿತ ಘಮವನ್ನು ಸಹೃದಯ ಕಾವ್ಯಾಸಕ್ತರಿಗೆ ಹಂಚಿ ಸಂತೃಪ್ತಿಪಡಿಸಲು, ಇನ್ನೇನು ಕೆಲವೇ ಸಮಯದಲ್ಲಿ ಅರಳಲು ಸಜ್ಜಾಗಿ ನಿಂತಿರುವುದು ನಮ್ಮಂತಹ ಭಕ್ತಿಸಾಹಿತ್ಯಪ್ರಿಯರಿಗೆ ಅತ್ಯಂತ ಹೆಮ್ಮೆಯ ಭಾವ.
ಕವಿತ್ವಸಿದ್ಧಿಯೆಂಬುದು ಸುಲಭದ ಮಾತಲ್ಲ. ಅದಕ್ಕೊಂದು ಪಾರಂಪರಿಕ ಹಾಗೂ ಪಾರಿಸರಿಕವಾದ ಸಂಸ್ಕಾರವಿರಬೇಕು. 'ನಾನೃಷಿ: ಕುರುತೇ ಕಾವ್ಯಮ್' ಎಂಬುದಾಗಿ ಪ್ರಸಿದ್ಧವಾದ ನುಡಿಯೊಂದಿದೆ. ಕವಿತ್ವಸಿದ್ಧಿಯಾಗದ ಋಷಿಯು ಕಾವ್ಯರಚನೆಯನ್ನು ಮಾಡಲಾರ ಎಂಬುದು ಇದರ ತಾತ್ಪರ್ಯ, ನಿರಂತರ ತಪಸ್ಸು, ಅವಿರತವಾದ ಪರಿಶ್ರಮ, ಸದಾ ಕಾವ್ಯಕನ್ನಿಕೆಯ ಧ್ಯಾನ, ಹೇರಳವಾದ ವಿಷಯಸಂಗ್ರಹ, ಅದನ್ನು ಲೋಕಕ್ಕೆ ತಿಳಿಸಿಕೊಡುವ ಶಬ್ದಸಂಪತ್ತು, ಶಬ್ದಲಾಲಿತ್ಯ ಇವೆಲ್ಲವುಗಳ ಸಮತೂಕದ ಪರಿಪಾಕದ ಹದವೇ ಕಾವೋದ್ಭವಕ್ಕೆ ಮುನ್ನುಡಿಯಾಗುತ್ತದೆ. ಅಂತಹ ಸಮೃದ್ಧತೆಯನ್ನು, ಪರಿಪೂರ್ಣತೆಯನ್ನು, ತೃಪ್ತಭಾವವನ್ನು ಈ ಸ್ತೋತ್ರಸಂಕಲನದಲ್ಲಿ ನೋಡಿದ ಸಂತಸದಲ್ಲಿ ನಾನಿದ್ದೇನೆ. ಈ ಕೃತಿಯನ್ನು ಲೋಕಕ್ಕೆ ಅರ್ಪಿಸಿದ ಕವಿ ಡಾ. ಶಾಸ್ತ್ರಿಯವರ ಮುಖತಃ ಭೇಟಿ, ಪರಿಚಯ ಇವಾವವೂ ನನಗಿಲ್ಲ, ಆದರೇನಂತೆ ಅವರು ಮುತುವರ್ಜಿಯಿಂದ ಕಟ್ಟಿಕೊಟ್ಟ ಸ್ತೋತ್ರಗಳ ಮೂಲಕ ಅವರ ಸಮಗ್ರ ಪರಿಚಯವನ್ನು ಮಾಡಿಕೊಳ್ಳುವ ಸೌಭಾಗ್ಯ ನನ್ನದಾಯಿತು. ಅವರೊಳಗೆ ಅಡಗಿ ಕುಳಿತ ಕಾವ್ಯರಚನಾ ಪ್ರತಿಭೆಯ ವಿರಾಟ್ ದರ್ಶನಭಾಗ್ಯವೆನಗೀದಿನ ದೊರೆಯಿತು.
ಈ ಕೃತಿಯ ಮೊದಲನೆಯ ಶ್ರೀಗೋಕರ್ಣ ಮಂಡಲಾಧೀಶ್ವರ-ಗುರುಪರಂಪರಾ ಸ್ತೋತ್ರಮ್ ಬಹಳ ಸುಂದರ, ಕಾವ್ಯಗುಣೋಪೇತವಾಗಿದೆ. ಒಟ್ಟೂ ಹದಿನೆಂಟು ಶ್ಲೋಕಗಳಿಂದ ಶೋಭಾಯಮಾನವಾದ ಈ ಶ್ಲೋಕಗುಚ್ಛವು ಆಚಾರ್ಯ ಶಂಕರಭಗವತ್ಪಾದರಿಂದಾರಂಭಿಸಿ ಇಂದಿನ ಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರ ವರೆಗಿನ ಗುರುಪರಂಪರೆಯ ವರ್ಣನೆಯಾಗಿದೆ. ಸರಳ ಪದಪುಂಜಗಳು ಮನಸ್ಸನ್ನು ಸೂರೆಗೊಳ್ಳುತ್ತವೆ. ಇನ್ನು ಅನುಷ್ಟುಪ್ ಛಂದಸ್ಸಿನ ಗುರುದೇವತಾಸ್ತುತಿ ಬಹಳ ಮನೋಜ್ಞವಾಗಿದೆ. ಶ್ರೀರಾಘವೇಶ್ವರಭಾರತ್ಯಷ್ಟಕಮ್, ಶೃಂಗೇರಿಯತಿದ್ವಯಸ್ತೋತ್ರಚತುಷ್ಕಮ್, ಶ್ರೀಗುರುಕವಚಮ್, ಶ್ರೀಗಣೇಶಾಷ್ಟಕಮ್ ಹೀಗೆ ನೋಡುತ್ತ ಹೋದರೆ ಒಂದೇ? ಎರಡೇ? ಒಟ್ಟೂ ಹನ್ನೆರಡು ಸ್ತೋತ್ರಗಳನ್ನು ನಾವಿಲ್ಲಿ ನೋಡಬಹುದಾಗಿದೆ. ಹದಿನೇಳು ಶ್ಲೋಕಗಳಲ್ಲಿ ವಿಶ್ವತವಾದ ಆತ್ಮವಿದ್ಯಾಭುಜಂಗಮ್ ಉಪನಿಷತ್ತುಗಳ ಸಾರವನ್ನೇ ಧಾರೆಯೆರೆಯುತ್ತದೆ. ಒಟ್ಟೂ ಮುವ್ವತ್ತೈದು ಶ್ಲೋಕಗಳಲ್ಲಿ ನಿಬದ್ಧಕೃತಿಯಾದ ದೇವೀರಕ್ಷಾ ಸ್ತೋತ್ರಮ್ ಭಗವತಿಯ ಸರ್ವವ್ಯಾಪಕತೆಯನ್ನು ವಿಶದಪಡಿಸುತ್ತದೆ. ಸಗ್ಧರಾ ಛಂದಸ್ಸಿನಲ್ಲಿ ರಚಿತವಾದ ಶ್ರೀದೇವೀಸರಾನವಕಸ್ತೋತ್ರರತ್ನಮ್ ನನಗೆ ಅತ್ಯಂತ ಆನಂದವನ್ನು ಕೊಟ್ಟ ರಚನೆಯಾಗಿದೆ. ಒಂಭತ್ತು ಶ್ಲೋಕಗಳು ಹಾಗೂ ಫಲಶ್ರುತಿಯ ಈ ಸ್ತೋತ್ರವು ಗೇಯಗುಣ ಹೊದಿದೆ. ಶ್ರೀಗುರುವಾಯುಪುರಾಧೀಶಮ್ ಕೇವಲ ಮೂರೇ ಶ್ಲೋಕಗಳಿದ್ದರೂ ಮನಸ್ಸಿಗೆ ಮುದಕೊಡುವ ಶ್ಲೋಕಗಳು, ಸಗ್ಧರಾ ವೃತ್ತದಲ್ಲಿನ ಕೊನೆಯ ಮತ್ಯಂ ಕೂರ್ಮಂ ವರಾಹಮ್... ಶ್ಲೋಕದ ಮೂಲಕ ಭಗವಂತನ ಹತ್ತೂ ಅವತಾರಗಳನ್ನೂ ವಿವರಿಸಿದ್ದು ಖುಷಿಕೊಡುತ್ತದೆ. ಒಟ್ಟೂ ಇಪ್ಪತ್ತೊಂದು ಶ್ಲೋಕಗಳಿಂದ ಕೂಡಿರುವ ಕೊನೆಯ ಅನಂತಪದ್ಮನಾಭಸ್ತೋತ್ರಮ್ ಅಂತೂ ಅದ್ಭುತರಚನೆಯಾಗಿದೆ. ಶ್ಲೋಕಗಳ ವ್ಯಾಖ್ಯಾನವೂ ಅಷ್ಟೇ ಮನೋಜ್ಞವಾಗಿದೆ. ಇಂದಿನ ಪೀಳಿಗೆಗೆ ಇಂತಹ ಕೃತಿಯೊಂದರ ಅವಶ್ಯಕತೆಯಿತ್ತು. ಬಹುಶಃ ಆ ಭಗವಂತನೇ ಶ್ರೀ ಶಾಸ್ತ್ರಿಯವರ ಹಸ್ತದಿಂದ ಈ ಕೃತಿಯನ್ನು ಬರೆಯಿಸಿದನೋ ಎಂಬಷ್ಟು ಸುಂದರ ಸ್ತೋತ್ರಗಳನ್ನು ನಾವಿಲ್ಲಿ ಕಾಣಬಹುದಾಗಿದೆ.
ಈ ಕೃತಿಯಲ್ಲಿನ ರಸಪೂರ್ಣವಾದ ಶ್ಲೋಕಗಳ ಮೂಲಕ ಕವಿವರೇಣ್ಯರನ್ನು ಗುರುತಿಸುವುದು ಲೇಖನದ ಪದಗಳ ಮಿತಿಯ ದೃಷ್ಟಿಯಿಂದ ಅಸಾಧ್ಯವಾದರೂ ಯಾವುದೇ ಸ್ತೋತ್ರವನ್ನು ಮರೆತರೂ ಅದು ಅಪಚಾರವೇ ಸರಿ. ಆದರೆ ಅನಿವಾರ್ಯತೆ ನನಗೆ ಅದನ್ನೇ ಮಾಡಿಸಿದೆ. ಹಾಗೆ ಹೇಳಹೊರಟರೆ ಒಂದೊಂದು ಸ್ತೋತ್ರವೂ ವಿಶೇಷವೇ. ಪ್ರತಿಯೊಂದು ಶ್ಲೋಕವೂ ಅಷ್ಟೇ ಪ್ರೀತಿಯಿಂದ ಒಪ್ಪಿ ಅಪ್ಪಿಕೊಳ್ಳಬಹುದಾದ ಸಹಜ ಕಾವ್ಯಸೌಂದರ್ಯದ ಪ್ರತೀಕ. ಈ ಸಂಕಲನದಲ್ಲಿ ಶಾಸ್ತ್ರಿಯವರ ಕವಿದೃಷ್ಟಿ ಭಕ್ತಿಸಾಹಿತ್ಯದ ಮೂಲಕ ಎಲ್ಲ ಮಜಲುಗಳನ್ನೂ ಮುಟ್ಟಿದೆ. ರಚನಕಾರರು ಕವನಗಳನ್ನು ಜತನವಾಗಿ ರಚಿಸಿ ಭಾವತನ್ಮಯತೆಯ ದಾರದಲ್ಲಿ ಅಷ್ಟೇ ಸುಂದರವಾಗಿ ಪೋಣಿಸಿ ಹೊತ್ತಿಗೆಯ ರೂಪದಲ್ಲಿ ನೀಡಿದ್ದಾರೆ. ಇವು ಕೇವಲ ಶಬ್ದಾಡಂಬರಗಳ ಲೇಖನವಾಗದೇ ರಸರಾಗರಸಿಕರ ಹೃದಯಕ್ಕೆ ಲಗ್ಗೆಯಿಡುವ ಒಂದೊಂದು ಮುತ್ತಾಗಿ ಗೋಚರಿಸುತ್ತವೆ. ಇಷ್ಟೆಲ್ಲ ಘನಗಂಭೀರ ಶ್ಲೋಕಗಳನ್ನು ಇನ್ನಷ್ಟು ಮತ್ತಷ್ಟು ಎಂದು ಬೊಗಸೆ ತುಂಬಿ ಕೊಟ್ಟರೂ ಕೊನೆಯಲ್ಲಿ ಕವಿಹೃದಯ ಬೆಚ್ಚನೆಯ, ಆತ್ಮತೃಪ್ತಿಯ ಭಾವದಲ್ಲಿದ್ದಂತೆ ಭಾಸವಾಗುತ್ತದೆ. ಇದು ಕವಿತ್ವದ ಜೊತೆ ಮಾತೃಭಾವವನ್ನು ಬೆರೆಸಿದರಷ್ಟೇ ಸಾಧ್ಯ ಇಲ್ಲಿನ ಶ್ಲೋಕಗಳೆಲ್ಲವೂ 'ಸ್ವಾಂತಃಸುಖಾಯ' ನಮ್ಮಲ್ಲಿನ ಭಕ್ತಿ, ಶ್ರದ್ಧೆ, ನಂಬಿಕೆ, ವಿಶ್ವಾಸ, ನಲಿವು, ಭರವಸೆ, ಭಾವ, ಸಂತಸ, ದುಃಖದುಮ್ಮಾನಗಳನ್ನು ಹೊರಹಾಕಲಿರುವುದಕ್ಕೊಂದು ದಾರಿ ಕಾವ್ಯವೆಂಬ ಈ ಮಾಧ್ಯಮ. ಶಾಸ್ತ್ರಿಯವರು ಇದನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎಂಬುದು ಖಂಡಿತವಾಗಿಯೂ ಅತಿಶಯೋಕ್ತಿಯಲ್ಲ.
ಒಬ್ಬ ವೈದ್ಯನಾಗಿ ಈ ಭವದ ರೋಗಿಗಳ ರೋಗವನ್ನು ದೂರಮಾಡುವ ಕಾಯಕವೇ ಬಹು ದೊಡ್ಡದು. ಈ ಸಮಾಜಕ್ಕಾಗಿ ಸಕಲವನ್ನೂ ಮುಡಿಪಾಗಿಟ್ಟ ವೈದ್ಯರೊಬ್ಬರ ಬದುಕೇ ಒಂದು ಸುಂದರ ಕಾವ್ಯಸಂಪುಟವಾಗುತ್ತದೆ. ಅದರಲ್ಲಿನ ಅನೇಕ ಅಧ್ಯಾಯಗಳು ಹೊರಜಗತ್ತಿಗೆ ಗೋಚರಿಸುವುದೇ ಇಲ್ಲ. ಸಾಮಾಜಿಕ ಜವಾಬ್ದಾರಿಯ ನೊಗವನ್ನು ಸಮರ್ಥವಾಗಿ ಎಳೆಯುತ್ತ, ಭವಿಷ್ಯದ ಕನಸುಗಳನ್ನು ಕಾಣುತ್ತ, ಕಾವ್ಯತೋಟದಲ್ಲೂ ಸಮೃದ್ಧವಾದ ಬೆಳೆ ಬೆಳೆಯುತ್ತ, ಸಮಾಜದ ಹತ್ತು ಹಲವು ಕಾರ್ಯಕಲಾಪಗಳಲ್ಲಿ ಲೋಪದೋಷಗಳಿರದಂತೆ ಸಮರ್ಥವಾಗಿ ಭಾಗಿಯಾಗುತ್ತ, ಕಾವ್ಯರಚನೆಯಲ್ಲೂ ಮೇಲುಗೈ ಸಾಧಿಸುತ್ತ ಸ್ವತಃ ಕವಿಯಾಗಿ ಕಾವ್ಯಕೃಷಿ ಮಾಡುತ್ತಿರುವ ಗುರುತರವಾದ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿದ ಡಾ.ಶಾಸ್ತ್ರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರು ಈ ಅಪಾರವಾದ ಕಾವ್ಯ ಂಚದಲ್ಲಿ ಸಾರ್ಥಕ ಬದುಕನ್ನು ರೂಪಿಸಿಕೊಂಡಿರುವುದು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತದೆ.
ಮುಂದಿನ ದಿನಗಳಲ್ಲಿ ಭಕ್ತಿ, ಸ್ತೋತ್ರಸಾಹಿತ್ಯದ ಕಾವ್ಯಕೃಷಿ ತೋಟದ ಅನೇಕ ಫಲಗಳು ಈ ಸಮಾಜಕ್ಕೆ ಶಾಸ್ತ್ರಿಯವರಿಂದ ದೊರಯುವಂತಾಗಲಿ. ಡಾ.ಶಾಸ್ತ್ರಿಯವರ ಬಾಳಿನ ಸಾಧನೆಯ ದಾರಿಯಲ್ಲಿ ಇನ್ನಷ್ಟು ಮೈಲಿಗಲ್ಲುಗಳು ಗೋಚರಿಸಲಿ. ಅವರ ಕಾವ್ಯಪ್ರಪಂಚ ಇನ್ನಷ್ಟು ವಿಸ್ತಾರವಾಗಲಿ, ಸಾವಿರಾರು ಸಂಖ್ಯೆಯ ಒದುಗ ಅಭಿಮಾನಿಗಳು ಅವರನ್ನು ಗುರುತಿಸುವಂತಾಗಲಿ. ಅವರ ಲೇಖನಿಯಿಂದ ಹೊರಹೊಮ್ಮಿದ ಕಾವ್ಯರಸಧಾರೆಯು ಭವಿಷ್ಯದಲ್ಲಿ ನೂರಾರು ಜನರಿಗೆ ಸ್ಫೂರ್ತಿದಾಯಕ ದಾರಿದೀಪವಾಗಲಿ ಎಂದು ಈ ಸಂದರ್ಭದಲ್ಲಿ ಶುಭಹಾರೈಸುತ್ತೇನೆ. ಅಷ್ಟೇ ಅಲ್ಲದೇ ಈ ಎಲ್ಲ ಸ್ತೋತ್ರಗಳನ್ನು ಆರಿಸಿ, ಹೆಕ್ಕಿತೆಗೆದು ಅದಕ್ಕೊಂದು ಪುಸ್ತಕರೂಪವನ್ನು ಕೊಟ್ಟು ಸಹೃದಯ ಓದುಗರಿಗೆ ಒದಗಿಸಿ ಲೋಕೋಪಕಾರವನ್ನು ಮಾಡಿದ ವಿಕ್ರಂ ಪ್ರಕಾಶನದವರಿಗೂ ಶುಭವನ್ನು ಕೋರೋಣ. ಇಂತಹ ನೂರಾರು ಕೃತಿಗಳು ಅವರ ವಿಕ್ರಮದಿಂದ ಹೊರಬರಲಿ, ಒಳಿತಾಗಲಿ,
ಡಾ. ಗಣಪತಿ ಹೆಗಡೆ, ಪ್ರಾಂಶುಪಾಲರು
MLA ಪದವಿಪೂರ್ವ ಕಾಲೇಜು ಮಲ್ಲೇಶ್ವರಮ್, ಬೆಂಗಳೂರು
ಶ್ರೀಭಗವತ್ತತ್ತ್ವರತ್ನಾಕರ ಭಾಗ ೨ (ಸ್ತೋತ್ರಸಂಹಿತಾ ೧)
ರಚಿಸಿದವರು— ಡಾ || ಕೃಷ್ಣಮೂರ್ತಿ ಶಾಸ್ತ್ರೀ, ದಂಬೆ-ಪುಣಚ
|| ಓಂ ಶ್ರೀಗುರುಗಣಪತಿಭ್ಯೋ ನಮ: ||
ಶ್ರೀಗೋಕರ್ಣಮಂಡಲಾಧೀಶ್ವರ-ಗುರುಪರಂಪರಾಸ್ತೋತ್ರಮ್
(ಅನುಷ್ಟುಪ್-ಛನ್ದೋಜಾತಂ ಅನುಷ್ಟುಭ್ ವೃತ್ತಮ್; ಅಷ್ಟಾಕ್ಷರಾ ವೃತ್ತಿಃ —
"ಪಂಚಮಂ ಲಘು ಸರ್ವತ್ರ
ಸಪ್ತಮಂ ದ್ವಿಚತುರ್ಥಯೋಃ |
ಗುರು ಷಷ್ಠಂ ಚ ಪಾದಾನಾಂ
ಚತುರ್ಣಾಂ ಸ್ಯಾದನುಷ್ಟುಭಿ ||"
"...ಗುರು ಷಷ್ಠಂ ತು ಪಾದಾನಾಂ
ಶೇಷೇಷ್ವನಿಯಮೋ ಮತಃ ||")
ಸದಾಶಿವಸ್ವರೂಪಾಯ ಶ್ರೀಮನ್ನಾರಾಯಣಾಯ ಚ |
ಭಾರತೀಶಾಯ ಧಾತ್ರೇ ವೈ ವಸಿಷ್ಠಾಯ ನಮೋ ನಮ: ||೧ ||
★ಸದಾಶಿವ (ಯಾವಾಗಲೂ ಮಂಗಲ) ಸ್ವರೂಪೀ ಶ್ರೀಮನ್ನಾರಾಯಣ (ನಾರ ಅಯನ—ಮೋಕ್ಷಾಶ್ರಯ; "ಸದಾಶಿವ / ನಾರಾಯಣ ಸಮಾರಂಭಾಂ ಶಂಕರಾಚಾರ್ಯಮಧ್ಯಮಾಮ್ | ಅಸ್ಮದಾಚಾರ್ಯಪರ್ಯನ್ತಾಂ ವಂದೇ ಗುರುಪರಂಪರಾಮ್ ")
★ವಾಣೀವಲ್ಲಭ / ಭಾರತೀರಮಣ, ಸೃಷ್ಟಿಕರ್ತಾ, ಧಾತಾ, ಚತುರ್ಮುಖ ಬ್ರಹ್ಮಾ
★ಬ್ರಹ್ಮಮಾನಸಪುತ್ರರೂ, ಸಪ್ತರ್ಷಿಗಳಲ್ಲೋರ್ವರೂ, ಗೋತ್ರಪ್ರವರ್ತಕರೂ, ಸೂರ್ಯವಂಶದ ಶ್ರೀರಾಮಚಂದ್ರಾದಿಗಳ ಕುಲಪುರೋಹಿತರೂ ಆದ ಬ್ರಹ್ಮರ್ಷಿ ವಸಿಷ್ಠರು
ಇವರೆಲ್ಲರಿಗೂ ಮೊದಲಿಗೆ ನಮಸ್ಕಾರಗಳು.
ಶಕ್ತಯೇ ಗುರವೇ ಚೈವ ಪರಾಶರಾಯ ಧೀಮತೇ |
ವೇದವ್ಯಾಸಾಯ ದಿವ್ಯಾಯ ಶುಕಾಯ ಚ ಮಹಾತ್ಮನೇ ||೨ ||
★ವಸಿಷ್ಠಪುತ್ರರಾದ ಶಕ್ತಿ ಎಂಬ ಮುನಿಗಳಿಗೆ,
★ಶಕ್ತಿಪುತ್ರರೂ, ಧೀಮಂತರೂ ಆದ ಮಹರ್ಷಿ ಪರಾಶರರಿಗೆ,
★ಮಹಾವಿಷ್ಣುವಿನ ದಿವ್ಯಾವತಾರಿಗಳೂ ("ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ | ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ||") ವೇದನಿಧಿಗಳೂ, ವಸಿಷ್ಠರ ಮರಿಮಗನೂ ("ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ | ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ||"), ಶಕ್ತಿಯ ಮೊಮ್ಮಗನೂ, ಪರಾಶರರ ಪುತ್ರರೂ, ಶುಕರ ತಂದೆಯೂ, ನಿಷ್ಕಲ್ಮಷರೂ, ತಪೋನಿಧಿಗಳೂ, ಕೃಷ್ಣನಾಮಕರೂ, ದ್ವೀಪದಲ್ಲಿ ಹುಟ್ಟಿ ದ್ವೈಪಾಯನರೂ, ಬದರಿಕಾಶ್ರಮವಾಸಿಗಳಾಗಿ ಬಾದರಾಯಣರೂ, ವೇದಗಳನ್ನು ವಿಭಾಗಿಸಿ ವೇದವ್ಯಾಸರೂ ಎನಿಸಿದವರಿಗೆ,
★ಜೀವನ್ಮುಕ್ತರೂ, ರುದ್ರಾಂಶಸಂಭೂತರೂ, ವ್ಯಾಸಪುತ್ರರೂ, ಮಹಾತ್ಮರೂ ಆದ ಶುಕಮುನಿಗಳಿಗೆ
ನಮಸ್ಕಾರಗಳು.
ಗೌಡಪಾದಾಯ ಗೋವಿಂದಭಗವತ್ಪಾದರೂಪಿಣೇ |
ಶಂಕರಾಚಾರ್ಯವರ್ಯಾಯ ಸುರೇಶ್ವರಾಯ ತೇ ನಮ: ||೩ ||
★ಶಂಕರಾಚಾರ್ಯರ ಪರಮಗುರುಗಳಾದ ಶ್ರೀಗೌಡಪಾದಾಚಾರ್ಯರಿಗೂ,
★ಶಂಕರರ ಗುರುಗಳಾದ ಗೋವಿಂದಭಗವತ್ಪಾದರಿಗೂ ನಮನಗಳು.
ಇಲ್ಲಿಂದ ಮುಂದೆ ಶಂಕರಾಚಾರ್ಯ ಪೀಠಾಧಿಪತ್ಯದ ಮಠೀಯ ಗುರುಪರಂಪರೆಯು ಆರಂಭವಾಗುತ್ತದೆ.
೧) ಶಂಕರಭಗವತ್ಪಾದರು
೨) ಸುರೇಶ್ವರಾಚಾರ್ಯರು— ಇವರಿಗೆ ನಮನಗಳು.
ವಿದ್ಯಾನಂದಾಯ ಚಿದ್ಬೋಧಭಾರತೀಗುರವೇ ನಮ: |
ನಿತ್ಯಾನಂದಾಯ ಭಾರತ್ಯೈ ಪಂಚಮಾಯ ನಮೋ ನಮ: ||೪ ||
೩) ವಿದ್ಯಾನಂದಾಚಾರ್ಯ
೪) ಚಿದ್ಬೋಧಭಾರತೀಸ್ವಾಮಿಗಳು
೫) ನಿತ್ಯಾನಂದಭಾರತೀಸ್ವಾಮಿಗಳು
ಇವರಿಗೆ ನಮಸ್ಕಾರಗಳು.
ನಿತ್ಯಬೋಧಘನೇಂದ್ರಾಯ ಭಾರತೀಗುರವೇ ನಮ: |
ಸಚ್ಚಿದಾನಂದಭಾರತ್ಯೈ ಸಪ್ತಮಾಯ ನಮೋ ನಮ: ||೫ ||
೬) ನಿತ್ಯಬೋಧಘನೇಂದ್ರಭಾರತೀ
೭) ಸಚ್ಚಿದಾನಂದಭಾರತೀ
ಗುರುಗಳಿಗೆ ಪ್ರಣಾಮಗಳು.
ಚಿದ್ಘನೇಂದ್ರಾಯ ಭಾರತ್ಯೈ ಸದ್ಗುರವೇ ನಮೋ ನಮ: |
ಶ್ರೀಸೀತಾರಾಮಚಂದ್ರಾಯ ಭಾರತ್ಯೈ ಚ ನಮೋ ನಮ: ||೬ ||
೮) ಚಿದ್ಘನೇಂದ್ರಭಾರತೀ
೯) ಸೀತಾರಾಮಚಂದ್ರಭಾರತೀ
ಗುರುವರ್ಯರಿಗೆ ನಮಸ್ಕಾರಗಳು.
ಚಿದ್ಬೋಧಾಯ ಚ ಭಾರತ್ಯೈ ದಶಮಾಯ ನಮೋ ನಮ: |
ರಾಘವೇಶ್ವರಭಾರತ್ಯೈ ಗುರವೇ ಚ ನಮೋ ನಮ: ||೭ ||
೧೦) ಚಿದ್ಬೋಧಭಾರತೀ
೧೧) ರಾಘವೇಶ್ವರಭಾರತೀಗುರುಗಳಿಗೆ ಶರಣು.
ರಾಮಚಂದ್ರಾಯ ಭಾರತ್ಯೈ ಗುರವೇ ಚ ನಮೋ ನಮ: |
ಅಭಿನವಾಯ ರಾಘವೇ|ಶ್ವರಭಾರತೀರೂಪಿಣೇ ||೮ ||
೧೨) ರಾಮಚಂದ್ರಭಾರತೀ
೧೩) ಅಭಿನವರಾಘವೇಶ್ವರಭಾರತೀಗುರುಗಳಿಗೆ ನಮಸ್ಕಾರ.
ರಾಮಯೋಗೀಂದ್ರಭಾರತೀ|ಗುರವೇ ಚ ನಮೋ ನಮ: |
ಶ್ರೀನೃಸಿಂಹಾಯ ಭಾರತ್ಯೈ ಪಂಚಮಾಯ ದಶೋತ್ತರೇ ||೯ ||
೧೪) ರಾಮಯೋಗೀಂದ್ರಭಾರತೀ
೧೫) ನೃಸಿಂಹಭಾರತೀ
ಅನಂತೇಂದ್ರಾಯ ಭಾರತ್ಯೈ ರಾಮಭದ್ರಾಯ ಧೀಮತೇ |
ರಾಘವೇಶ್ವರಭಾರತ್ಯೈ ವಿದ್ಯಾಧನೇಂದ್ರರೂಪಿಣೇ ||೧೦ ||
೧೬) ಅನಂತೇಂದ್ರಭಾರತೀ
೧೭) ರಾಮಭದ್ರಭಾರತೀ
೧೮) ರಾಘವೇಶ್ವರಭಾರತೀ
೧೯) ವಿದ್ಯಾಧನೇಂದ್ರಭಾರತೀ
ರಘುನಾಥಾಯ ಭಾರತ್ಯೈ ರಾಮಚಂದ್ರಮಹಾತ್ಮನೇ |
ರಘೂತ್ತಮಾಯ ಭಾರತ್ಯೈ ಪರಮೇಶ್ವರರೂಪಿಣೇ ||೧೧ ||
೨೦) ರಘುನಾಥಭಾರತೀ
೨೧) ರಾಮಚಂದ್ರಭಾರತೀ
೨೨) ರಘೂತ್ತಮಭಾರತೀ
೨೩) ಪರಮೇಶ್ವರಭಾರತೀ
ರಾಘವೇಶ್ವರಭಾರತ್ಯೈ ರಘೂತ್ತಮಾಯ ಸ್ವಾಮಿನೇ |
ರಾಘವೇಶ್ವರಭಾರತ್ಯೈ ರಘೂತ್ತಮಾಯ ತೇ ನಮ: ||೧೨ ||
೨೪) ರಾಘವೇಶ್ವರಭಾರತೀ
೨೫) ರಘೂತ್ತಮಭಾರತೀ
೨೬) ರಾಘವೇಶ್ವರಭಾರತೀ
೨೭) ರಘೂತ್ತಮಭಾರತೀ
ಅಷ್ಟಾವಿಂಶತಿತಮಾಯ ರಾಘವೇಶ್ವರರೂಪಿಣೇ |
ರಘೂತ್ತಮಾಯ ಭಾರತ್ಯೈ ನವವಿಂಶತಿತಮಾಯ ಚ ||೧೩ ||
೨೮) ರಾಘವೇಶ್ವರಭಾರತೀ
೨೯) ರಘೂತ್ತಮಭಾರತೀ
ತ್ರಿಂಶತ್ತಮಾಯ ದಿವ್ಯಾಯ ರಾಘವೇಶ್ವರರೂಪಿಣೇ |
ರಾಮಚಂದ್ರಾಯ ಭಾರತ್ಯೈ ರಾಘವೇಂದ್ರಾಯ ತೇ ನಮ: ||೧೪ ||
೩೦) ರಾಘವೇಶ್ವರಭಾರತೀ
೩೧) ರಾಮಚಂದ್ರಭಾರತೀ
೩೨) ರಾಘವೇಂದ್ರಭಾರತೀಗಳಿಗೆ ನಮಸ್ಕಾರಗಳು.
ತ್ರಯಸ್ತ್ರಿಂಶತ್ತಮಾಯ ಶ್ರೀ|ರಾಘವೇಶ್ವರರೂಪಿಣೇ |
ರಾಮಚಂದ್ರಾಯ ಭಾರತ್ಯೈ ರಾಘವೇಂದ್ರಾಯ ಧೀಮತೇ ||೧೫ ||
೩೩) ರಾಘವೇಶ್ವರಭಾರತೀ
೩೪) ರಾಮಚಂದ್ರಭಾರತೀ
೩೫) ರಾಘವೇಂದ್ರಭಾರತೀ
ರಾಘವೇಶ್ವರಭಾರತ್ಯೈ ತು ಷಟ್-ತ್ರಿಂಶತ್ತಮಾಯ ಚ |
ಮಹಾಪ್ರಭಾವರೂಪಾಯ|ಅಸ್ಮದ್ಗುರವೇ ನಮೋ ನಮ: ||೧೬ ||
೩೬) ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಮಹಾಪ್ರಭಾವಶಾಲಿಗಳು, ನಮ್ಮ ಈಗಿನ ಗುರುಗಳು. ಇವರೆಲ್ಲರಿಗೂ ಶತಶತ ನಮನಗಳು.
ಏವಂ ಪರಂಪರಾಪ್ರಾಪ್ತಾನ್ ಶಂಕರಾಚಾರ್ಯಸದ್ಗುರೂನ್ |
ಭಾರತೀಪದಯಸಂಯುಕ್ತಾನ್ ಯೋ ಧ್ಯಾಯತಿ ಸುಭಕ್ತಿತ: ||೧೭||
(ಏವಂ) ಹೀಗೆ, (ಪರಂಪರಾಪ್ರಾಪ್ತಾನ್) ಶಂಕರಪರಂಪರೆಯಲ್ಲಿ ಪ್ರಾಪ್ತರಾದ, (ಭಾರತೀಪದಸಂಯುಕ್ತಾನ್) ಭಾರತೀಪದಭೂಷಿತರಾದ, (ಶಂಕರಾಚಾರ್ಯಸದ್ಗುರೂನ್) ಸದ್ಗುರುಗಳನ್ನು, (ಯಃ) ಯಾವನು, (ಭಕ್ತಿತಃ) ಬಹು ಭಕ್ತಿಯಿಂದ, (ಧ್ಯಾಯತಿ) ಧ್ಯಾನಿಸುತ್ತಾನೋ,
ದಿನೇ ದಿನೇ ಭವೇಚ್ಛಾಂತ|ಶ್ಚಾಯುರಾರೋಗ್ಯವಾನ್ಭವೇತ್ |
ಗುರೋರನುಗ್ರಹಾತ್ಸರ್ವಾನ್ ವಾಂಛಿತಾರ್ಥಾನವಾಪ್ನುಯಾತ್ ||೧೮ ||
(ಗುರೋಃ ಅನುಗ್ರಹಾತ್) ಅಂಥವನು ಶ್ರೀಗುರುಗಳ ಅನುಗ್ರಹಬಲದಿಂದ, (ದಿನೇ ದಿನೇ) ದಿನಗಳು ಕಳೆದಂತೆ ಪ್ರತಿದಿನವೂ, (ಶಾನ್ತಃ ಭವೇತ್) ಮನಶ್ಶಾಂತಿಯಿಂದಲೂ ಮನೋನಿಗ್ರಹದಿಂದಲೂ ಕೂಡಿದ್ದು, (ಆಯುಃ-ಆರೋಗ್ಯವಾನ್ ಭವೇತ್ ಚ) ಆಯುಸ್ಸು ಆರೋಗ್ಯಾದಿ, (ಸರ್ವಾನ್ ವಾಂಛಿತಾರ್ಥಾನ್ ಅವಾಪ್ನುಯಾತ್) ಸಕಲ ಇಷ್ಟಾರ್ಥಗಳನ್ನೂ ಪಡೆಯುತ್ತಾನೆ.
|| ಹರೇ ರಾಮ ||
ಶ್ರೀಗುರುದೇವತಾಸ್ತುತಿಃ
(ಅನುಷ್ಟುಪ್ ಛನ್ದಃ)
ವಸುದೇವಸುತಂ ವಾಸು-ದೇವಂ ಸರ್ವಜಗನ್ಮಯಮ್ |
ದೇವಕೀಪರಮಾನನ್ದಂ ಕೃಷ್ಣಂ ವನ್ದೇ ಜಗದ್ಗುರುಮ್ || ೧ ||
(ವಸುದೇವಸುತಂ) ವಸುದೇವನ ಮಗನಾಗಿ, ಸಕಲ ಸೃಷ್ಟಿಯಲ್ಲಿ ವಾಸವಾಗಿ (ವಾಸುದೇವಂ) ವಾಸುದೇವನಾದ ("ವಾಸನಾದ್ವಾಸುದೇವಸ್ಯ ವಾಸಿತಂ ಭುವನತ್ರಯಮ್ / ವಾಸಿತಂ ತೇ ಜಗತ್ತ್ರಯಮ್ | ಸರ್ವಭೂತನಿವಾಸೋऽಸಿ ವಾಸುದೇವ ನಮೋऽಸ್ತು ತೇ ||"), (ಸರ್ವಜಗನ್ಮಯಮ್) ಸರ್ವ ಜಗತ್ತಿನಲ್ಲಿ ಓತಪ್ರೋತವಾಗಿ ವ್ಯಾಪಿಸಿ ಪ್ರವೇಶಿಸಿ ವಿಷ್ಣುವಾದ ("ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ"), (ದೇವಕೀಪರಮಾನನ್ದಂ) ದೇವತಾಶಕ್ತಿಗಳಿಗೂ, ತಾಯಿ ದೇವಕಿಗೂ ಪರಮಾನಂದಕರನಾದ ("ದೇವತಾನಾಮ್ ಅಯಂ ದೇವಕೀಯಃ"), (ಜಗದ್ಗುರುಂ) ಜಗತ್ತಿಗೇ ಗುರುವಾದ, (ಕೃಷ್ಣಂ) ಭಗವಾನ್ ಶ್ರೀಕೃಷ್ಣ ಪರಮಾತ್ಮನನ್ನು, (ವನ್ದೇ) ವಂದಿಸುತ್ತೇನೆ.
ಧೀಪ್ರೇರಣಾಧಿಕರ್ತ್ರೇ ವೈ ಜ್ಞಾನದಾಯ ಚ ವನ್ದನಮ್ |
ನಾರಾಯಣಹರಾಜೇಭ್ಯಃ ಶ್ರೀಗುರುಭ್ಯೋ ನಮೋ ನಮಃ || ೨ ||
(ಧೀಪ್ರೇರಣಾಧಿಕರ್ತ್ರೇ ವೈ) ಧೀ-ಬುದ್ಧಿಗೆ, ವೈ-ನಿಶ್ಚಿತವಾಗಿಯೂ, ಪ್ರೇರಣಾಧಿಕರ್ತ್ರೇ-ಪ್ರೇರಣೆಯನ್ನು ಕೊಡುವ ದೇವಗುರು ಬೃಹಸ್ಪತಿ, ವೇದಮಾತೆ ಗಾಯತ್ರೀ ("ಧಿಯೋ ಯೋ ನಃ ಪ್ರಚೋದಯಾತ್") ಮುಂತಾಗಿರುವ (ಜ್ಞಾನದಾಯ ಚ) ಜ್ಞಾನಪ್ರದ ಗುರುಸ್ವರೂಪಕ್ಕೆ, (ವನ್ದನಮ್) ವಂದನೆ. (ನಾರಾಯಣ-ಹರ-ಅಜೇಭ್ಯಃ) ತ್ರಿಮೂರ್ತಿಸ್ವರೂಪೀ, (ಶ್ರೀಗುರುಭ್ಯಃ) ಶ್ರೀಗುರುಗಳಿಗೆ, (ನಮೋ ನಮಃ) ನಮಸ್ಕಾರಗಳು.
ಅಜ್ಞಾನತಿಮಿರಾದಸ್ಮಾಂಜ್ಞಾನಾರ್ಣವಂ ಪ್ರಣೀಯತೇ |
ವೇದಶಾಸ್ತ್ರಪುರಾಣೈಶ್ಚ ಧೀಪ್ರಚೋದನಕಾರಕೈಃ || ೩ ||
ಗುರುಃ ಸತ್ಯಂ ಗುರುರ್ಜ್ಞಾನಮನನ್ತಂ ಗುರುರುಚ್ಯತೇ |
ಪರಬ್ರಹ್ಮಸ್ವರೂಪಂ ತಂ ಪ್ರಪದ್ಯೇ ಭವತಾರಕಮ್ || ೪ ||
(ಧೀಃಪ್ರಚೋದನಕಾರಕೈಃ) ಬುದ್ಧಿಪ್ರಚೋದಕವಾದ, (ವೇದಶಾಸ್ತ್ರಪುರಾಣೈಃ) ವೇದ-ಶಾಸ್ತ್ರ-ಪುರಾಣಾದಿಗಳ ಮೂಲಕ, (ಅಜ್ಞಾನತಿಮಿರಾತ್) ಅಜ್ಞಾನದ ಅಂಧಕಾರದಿಂದ, (ಅಸ್ಮಾನ್) ನಮ್ಮನ್ನು, (ಜ್ಞಾನಾರ್ಣವಂ) ಜ್ಞಾನಸಾಗರಕ್ಕೆ, (ಪ್ರಣೀಯತೇ)ಯಾರು ಒಯ್ಯಬಲ್ಲರೋ, (ಗುರುಃ ಸತ್ಯಂ) ಅಂತಹ ಸತ್ಯಸ್ವರೂಪನೂ, (ಗುರುಃ ಜ್ಞಾನಮ್) ಜ್ಞಾನಸ್ವರೂಪಿಯೂ, (ಗುರುಃ ಅನನ್ತಮ್ ಉಚ್ಯತೇ)ಅನಂತಸ್ವರೂಪವೂ ಆಗಿ, (ಪರಬ್ರಹ್ಮಸ್ವರೂಪಂ ತಂ) ಪರಬ್ರಹ್ಮಸ್ವರೂಪವೆನಿಸಿದ, (ಭವತಾರಕಮ್) ಭವಸಾಗರದಿಂದ ದಾಟಿಸಬಲ್ಲ, (ತಂ ಪ್ರಪದ್ಯೇ) ಗುರುವನ್ನು ಶರಣುಹೊಂದುತ್ತೇನೆ.
ಶ್ರೀರಾಘವೇಶ್ವರಭಾರತ್ಯಷ್ಟಕಮ್
(ಅನುಷ್ಟುಪ್ ಛಂದ:)
ಸದ್ಗುರುಂ ಭಜ ಸರ್ವತ್ರ | ದಕ್ಷಿಣಾಮೂರ್ತಿರೂಪಿಣಮ್||
ಆತ್ಮಲಿಂಗಸ್ಥಿತಂ ಶುದ್ಧಂ | ರಾಘವೇಶ್ವರಭಾರತೀಮ್||೧||
(ಆತ್ಮಲಿಂಗಸ್ಥಿತಂ) ಶ್ರೀಗೋಕರ್ಣ ದೇವಾಲಯದ ಗರ್ಭಗುಡಿಯಲ್ಲಿರುವ ಸದಾಶಿವನ ಆತ್ಮಲಿಂಗದಲ್ಲಿ ಸಾರ್ವಭೌಮ ಮಹಾಬಲೇಶ್ವರನಾಗಿ ನೆಲೆಸಿರುವ, (ಶುದ್ಧಂ)ನಿತ್ಯಶುದ್ಧರೂ, (ಸದ್ಗುರುಂ)ಸದ್ಗುರುಗಳೂ, (ದಕ್ಷಿಣಾಮೂರ್ತಿರೂಪಿಣಮ್)ದಕ್ಷಿಣಾಮೂರ್ತಿಸ್ವರೂಪರೂ ಆದ (ರಾಘವೇಶ್ವರಭಾರತೀಮ್)ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳನ್ನು (ಸರ್ವತ್ರ)ಎಲ್ಲೆಡೆಯೂ (ಭಜ)ಭಜಿಸು ಹೇ ಮನವೇ !
ಚಾತುರ್ಮಾಸ್ಯವ್ರತೇ ನಿಷ್ಠಂ | ಚಂದ್ರಮೌಳೀಶ್ವರಪ್ರಭಮ್||
ರಾಮಚಂದ್ರಸ್ವರೂಪಂ ಚ | ಸೀತಾಂಜನೇಯಸನ್ನಿಧಿಮ್||೨||
(ಚಂದ್ರಮೌಳೀಶ್ವರಪ್ರಭಮ್)ಚಂದ್ರಮೌಳೀಶ್ವರನಂತಹ ಪ್ರಭೆಯಿಂದ ಕಂಗೊಳಿಸುವ, (ಚಾತುರ್ಮಾಸ್ಯವ್ರತೇ ನಿಷ್ಠಂ)ಪ್ರತಿವರ್ಷವೂ ಚಾತುರ್ಮಾಸ್ಯವ್ರತವನ್ನು ಪೂರ್ವಪರಂಪರೆಯಂತೆ ನಿಷ್ಠೆಯಿಂದ ಕೈಗೊಳ್ಳುವ, (ಸೀತಾಂಜನೇಯಸನ್ನಿಧಿಮ್)ಲೋಕಾನುಗ್ರಹಕ್ಕಾಗಿ ಮಠೀಯ ಸೀತಾಂಜನೇಯಾದಿವಿಗ್ರಹಗಳ ನಿತ್ಯೋಪಾಸಕರಾದ,(ರಾಮಚಂದ್ರಸ್ವರೂಪಂ ಚ)ಹಾಗೂ ಸ್ವಯಂ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರಸ್ವರೂಪರಾದ ಶ್ರೀಗುರುಗಳನ್ನು ಧ್ಯಾನಿಸು ಹೇ ಮನವೇ!
ವರದಾಭಯಹಸ್ತಂ ತಂ | ಪ್ರಸನ್ನವದನಂ ಶಿವಮ್||
ಭಕ್ತಾರ್ತಿಹರಣಂ ಕೃಷ್ಣಂ | ಜಗನ್ಮಾತೃಸ್ವರೂಪಿಣಮ್||೩||
(ವರದಾಭಯಹಸ್ತಂ)ಸದಾ ವರನೀಡುವ ಅಭಯಪ್ರದಕರಮುದ್ರಾಂಕಿತರಾದ, (ಪ್ರಸನ್ನವದನಂ)ಮಂದಸ್ಮಿತ ಶಾಂತಮುಖಮುದ್ರೆಯುಳ್ಳ, (ಶಿವಮ್)ಶಿವಸ್ವರೂಪರೂ ಮಂಗಳಮೂರ್ತಿಯೂ ಆಗಿರುವ, (ಭಕ್ತಾರ್ತಿಹರಣಂ ಕೃಷ್ಣಂ)ಭಕ್ತರ ಕಷ್ಟಗಳನ್ನು ನೀಗುವ ಸಾಕ್ಷಾತ್ ಜಗದ್ಗುರು ಶ್ರೀಕೃಷ್ಣರೂಪರಾದ,(ಜಗನ್ಮಾತೃಸ್ವರೂಪಿಣಮ್) ಜಗಜ್ಜನನೀಸ್ವರೂಪರಾದ,(ತಂ) ಸದ್ಗುರುವನ್ನು ನೆನೆ ಮನವೇ…
ರಾಘವಂ ಈಶ್ವರಂ ಚೈವ | ಭಾರತೀಪದಸಂಯುತಮ್||
ಭಸ್ಮಕುಂಕುಮಲಿಪ್ತಾಂಗಂ | ಸಾಕ್ಷಾತ್ತ್ರಿಮೂರ್ತಿರೂಪಿಣಮ್||೪||
(ರಾಘವಂ ಈಶ್ವರಂ ಚೈವ ಭಾರತೀಪದಸಂಯುತಮ್)ರಾಘವ, ಈಶ್ವರ ಹಾಗೂ ಭಾರತೀ- ಈ ಪದಗಳಿಂದ ಕೂಡಿದ ನಾಮಾಂಕಿತರಾದ,(ಭಸ್ಮಕುಂಕುಮಲಿಪ್ತಾಂಗಂ) ಭಸ್ಮ-ಕುಂಕುಮಾದಿಭೂಷಿತರಾದ,(ಸಾಕ್ಷಾತ್ತ್ರಿಮೂರ್ತಿರೂಪಿಣಮ್) ಪ್ರತ್ಯಕ್ಷ ತ್ರಿಮೂರ್ತಿಸ್ವರೂಪರಾದ ಗುರುದೇವರನ್ನು ಶರಣುಹೊಂದುತ್ತೇನೆ.
ಶರಣಾಗತಮಂದಾರಂ | ಸಂಸಾರಾರ್ತಿವಿನಾಶನಮ್||
ಅರಿತಿಮಿರಮಾರ್ತಾಂಡಂ | ಭಕ್ತಾನುಕಂಪಿನಂ ಹರಿಮ್||೫||
(ಶರಣಾಗತಮಂದಾರಂ)ಶ್ರೀಗುರುಗಳು ಶರಣಾಗತರಕ್ಷಕರೂ, (ಸಂಸಾರಾರ್ತಿವಿನಾಶನಮ್)ಸಂಸಾರಿಗಳ ಸಂಕಟವಿಮೋಚಕರೂ, (ಅರಿತಿಮಿರಮಾರ್ತಾಂಡಂ)ಅಜ್ಞಾನವೇ ಮೊದಲಾದ ಶತ್ರುಗಳೆಂಬ ಕತ್ತಲೆಯನ್ನು ಸೂರ್ಯನಂತೆ ಹೋಗಲಾಡಿಸುವವರೂ, (ಭಕ್ತಾನುಕಂಪಿನಂ)ನಿಜಭಕ್ತರ ಬಗ್ಗೆ ಅನುಕಂಪಿತಹೃದಯವುಳ್ಳವರೂ, (ಹರಿಮ್)ಸಾಕ್ಷಾತ್ ಶ್ರೀಹರಿಸ್ವರೂಪರೂ ಆಗಿದ್ದಾರೆ. ಅಂತಹ ಗುರುಚರಣಯುಗ್ಮಕ್ಕೆ ಅನಂತ ನಮನ.
ರಾಮಾಯಣಮಹಾಸತ್ರ | ಕುಂಕುಮಾರ್ಚನಪ್ರೇರಣಮ್||
ಗೋವಂಶರಕ್ಷಣೇ ಚಿತ್ತಂ | ಮುಷ್ಟಿಭಿಕ್ಷಾಪ್ರವರ್ತಕಮ್||೬||
(ರಾಮಾಯಣಮಹಾಸತ್ರಕುಂಕುಮಾರ್ಚನಪ್ರೇರಣಮ್)ಹೊಸನಗರ ರಾಮಚಂದ್ರಾಪುರಮಠದಲ್ಲಿ ರಾಮಾಯಣಮಹಾಸತ್ರ, ರಾಮತಾರಕಮಂತ್ರಯಾಗ, ವಿಶ್ವಗೋಸಮ್ಮೇಳನ- ಇತ್ಯಾದಿಗಳನ್ನೂ, ಮನೆ-ಮನೆಗಳಲ್ಲಿ ಲಲಿತಾಸಹಸ್ರನಾಮಪೂರ್ವಕ ಕುಂಕುಮಾರ್ಚನೆಯನ್ನೂ ನಡೆಯುವಂತೆ ಪ್ರೇರಣೆ ನೀಡಿದ ಮಹಾತ್ಮರಿವರು. (ಗೋವಂಶರಕ್ಷಣೇ ಚಿತ್ತಂ)ಸರ್ವದಾ ಸ್ವದೇಶೀ ಗೋತಳಿಗಳ ಸಂರಕ್ಷಣೆಯಲ್ಲೇ ತೊಡಗಿಸಿಕೊಂಡವರೂ, (ಮುಷ್ಟಿಭಿಕ್ಷಾಪ್ರವರ್ತಕಮ್)ಸಮಾಜದ ಬಡಕುಟುಂಬಗಳಿಗೆ ಅನ್ನನೀಡುವ ಮಹದುದ್ದೇಶವಿರುವ ಮುಷ್ಟಿ-ಅಕ್ಕಿ ಯೋಜನೆಯನ್ನು ಅನುಷ್ಠಾನಿಸಿದವರೂ ಇವರಾಗಿದ್ದಾರೆ.
ಸಂಧ್ಯಾವಂದನಸಂರೂಢಂ | ಭಜನಚಾಲೀಸಪ್ರೇರಕಮ್||
ರುದ್ರಾಭ್ಯಾಸಪ್ರಣೇತಾರಂ | ಕೋಟಿಲೀಲಾಪ್ರದರ್ಶಕಮ್||೭||
(ಸಂಧ್ಯಾವಂದನಸಂರೂಢಂ)ಶ್ರೀರಾಘವೇಶ್ವರರು ಸಮಸ್ತಶಿಷ್ಯವರ್ಗದಲ್ಲಿ ಲುಪ್ತವಾಗಿ ಹೋಗಿದ್ದ ಸಂಧ್ಯಾವಂದನೆಯ ನಿತ್ಯಾನುಷ್ಠಾನವನ್ನು ಪುನ: ರೂಢಿಗೆ ತಂದರು. (ಭಜನಚಾಲೀಸಪ್ರೇರಕಮ್)ಹಿಂದೆ ಮನೆಮನೆಗಳಲ್ಲಿ ನಡೆಯುತ್ತಿದ್ದು, ಮಧ್ಯೆ ಬಿಟ್ಟು ಹೋಗಿದ್ದ, ನಿತ್ಯಸಾಮೂಹಿಕಸಾಯಂಕಾಲದ ಭಜನೆಯನ್ನು ಪುನರಾರಂಭವಾಗುವಂತೆ ಮಾಡಿದರು. ಭಜಗೋವಿಂದಂ ಸ್ತೋತ್ರ,ಹನೂಮಾನ್ ಚಾಲೀಸವೇ ಮೊದಲಾದವುಗಳನ್ನು ಕಂಠಪಾಠಮಾಡಿ ಹಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಪ್ರೇರಕರಾದರು. (ರುದ್ರಾಭ್ಯಾಸಪ್ರಣೇತಾರಂ)ಶಿಷ್ಯಸಮೂಹದಲ್ಲಿ ರುದ್ರಮಂತ್ರಾಭ್ಯಾಸ ಹೆಚ್ಚು ಹೆಚ್ಚು ನಡೆಯುವಂತೆ ಪ್ರೇರೇಪಿಸಿದವರೂ, (ಕೋಟಿಲೀಲಾಪ್ರದರ್ಶಕಮ್)ಗೋಕರ್ಣದೇವಸ್ಥಾನದಲ್ಲಿ ಶಿಷ್ಯರ ಮೂಲಕ ಕೋಟಿರುದ್ರ ಸೇವೆ ನಡೆಸುವ ಬೃಹತ್ಸಂಕಲ್ಪ ತೊಟ್ಟವರೂ, ಇನ್ನೂ ಅನೇಕ, ಅನಂತ ದೈವೀಲೀಲೆಗಳನ್ನು ಲೋಕಕ್ಕೆ ಪ್ರಕಟಪಡಿಸಿದವರೂ, ಪ್ರಕಟಿಸಲಿರುವವರೂ ಆಗಿರುವ ಶ್ರೀಗುರುಚರಣಕೆ ಶರಣು.
ದಂತಸಿಂಹಾಸನಾರೂಢಂ | ಸದಾ ಪ್ರೇಮಮಯಂ ವಿಭುಮ್||
ಶ್ರೀರಾಘವೇಂದ್ರಸಂಜಾತಂ | ಶಂಕರಂ ಲೋಕಶಂಕರಮ್||೮||
(ದಂತಸಿಂಹಾಸನಾರೂಢಂ)ಪರಂಪರೆಯಲ್ಲಿ ಬಹು ಅಪರೂಪವಾಗಿ ದಂತಸಿಂಹಾಸನಾರೂಢರಾದ ಯತಿವರ್ಯರಿವರು. (ಸದಾ ಪ್ರೇಮಮಯಂ ವಿಭುಮ್)ಯಾವಾಗಲೂ ನಗುಮುಖದವರಾಗಿದ್ದು, ಎಂದೂ ಬಿಗುವದನರಾಗದೇ ಸಮಾಜಕ್ಕೆ ಭಗವತ್ಪ್ರೇಮವನ್ನು ಉಣಬಡಿಸಿದ ಅನುಪಮ ಪ್ರೇಮಮಯಿಗಳಿವರು. (ಶ್ರೀರಾಘವೇಂದ್ರಸಂಜಾತಂ)ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳ ಕರಕಮಲಸಂಜಾತರಾಗಿ, (ಲೋಕಶಂಕರಮ್)ಲೋಕಕ್ಕೆ ಶುಭದಾಯಕರಾಗಿ, (ಶಂಕರಂ)ಅಭಿನವ ಶಂಕರರಾಗಿರುವ ಶ್ರೀಮದ್ರಾಘವೇಶ್ವರಭಾರತೀ ಯತಿಪುಂಗವರನ್ನು ತ್ರಿಕರಣಪೂರ್ವಕವಾಗಿ ನಮಿಸುತ್ತೇನೆ.
ಶ್ರೀರಾಘವೇಶ್ವರಸ್ಯೇದಂ | ಅಷ್ಟಕಂ ಪಾಪನಾಶನಮ್||
ಗುರುಕೃಪಾತರಂಗಿಣ್ಯಾ | ಪಾವಿತಂ ಜನ್ಮ ಸಾರ್ಥಕಮ್||೯||
(ಶ್ರೀರಾಘವೇಶ್ವರಸ್ಯೇದಂ ಅಷ್ಟಕಂ)ಈ “ಶ್ರೀರಾಘವೇಶ್ವರಭಾರತ್ಯಷ್ಟಕ” ವು (ಪಾಪನಾಶನಮ್)ಸರ್ವಪಾಪಹರ. (ಗುರುಕೃಪಾತರಂಗಿಣ್ಯಾ)ಗುರುಕೃಪೆಯೆಂಬ ನದಿಯಲ್ಲಿ ಮಿಂದ (ಜನ್ಮ)ಜನ್ಮವು (ಪಾವಿತಂ)ಪವಿತ್ರವಾಯಿತು; (ಸಾರ್ಥಕಮ್)ಸಾರ್ಥಕವಾಯಿತು.
ಯ: ಪಠೇಚ್ಛೃಣುಯಾದ್ವಾಪಿ | ಗುರುಭಕ್ತಿಸಮನ್ವಿತ:||
ಗುರೋ: ಕೃಪಾವಿಶೇಷೇಣ | ಸ ಲೋಕಪ್ರಿಯತಾಂ ವ್ರಜೇತ್||೧೦||
(ಗುರುಭಕ್ತಿಸಮನ್ವಿತ:)ಶ್ರೀಗುರುಗಳಲ್ಲಿ ಅತಿಶಯಭಕ್ತಿಯಿಟ್ಟು (ಯ:)ಯಾವನು (ಪಠೇಚ್ಛೃಣುಯಾದ್ವಾಪಿ)ಇದನ್ನು ಅರ್ಥಾನುಸಂಧಾನದೊಂದಿಗೆ ಓದುತ್ತಾನೋ ಅಥವಾ ಕೇಳುತ್ತಾನೋ, (ಸ:)ಅವನು (ಗುರೋ:)ಗುರುಗಳ (ಕೃಪಾವಿಶೇಷೇಣ)ವಿಶೇಷವಾದ ಕೃಪೆಯಿಂದ ( ಲೋಕಪ್ರಿಯತಾಂ ವ್ರಜೇತ್)ಲೋಕದಲ್ಲಿ ಎಲ್ಲರ ಪ್ರೀತಿ-ವಿಶ್ವಾಸವನ್ನು ಗಳಿಸುತ್ತಾನೆ.
ಇತಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಪ್ರೇರಣಯಾ ದಂಬೆಕೃಷ್ಣಮೂರ್ತಿವಿರಚಿತಮಿದಂ ಶ್ರೀರಾಘವೇಶ್ವರಭಾರತ್ಯಷ್ಟಕಂ ಸದ್ಗುರುಚರಣಾರವಿಂದಯೋ: ಸಮರ್ಪಿತಮಸ್ತು||
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳ ಪ್ರೇರಣೆಯಿಂದ ದಂಬೆ ಕೃಷ್ಣಮೂರ್ತಿಯು ವಿರಚಿಸಿದ ಶ್ರೀರಾಘವೇಶ್ವರಭಾರತ್ಯಷ್ಟಕವು ಸದ್ಗುರುಚರಣಾರವಿಂದಗಳಲ್ಲಿ ಸಮರ್ಪಿತವಾಗಲಿ ||
||ಶ್ರೀ ಗುರುಭ್ಯೋ ನಮ:||
||ಹರೇ ರಾಮ||
ಶ್ರೀರಾಘವೇಶ್ವರಭಾರತೀಸ್ತುತಿಚತುಷ್ಕೀ
(ಅತಿಶಕ್ವರೀಚ್ಛನ್ದಃ— ಮಾಲಿನೀವೃತ್ತಮ್—"ನನಮಯಯಯುತೇऽಯಂ ಮಾಲಿನೀ ಭೋಗಿಲೋಕೈಃ")
ಅನುಪಮಮಹಿಮಾನಂ| ರಾಘವಂ ವಿಷ್ಣುರೂಪಂ|
ನಿಜಶರಣಗತಾನಾಂ| ಮೋಕ್ಷಸಾಫಲ್ಯಹೇತುಮ್ |
ಗುರುಮಮರಸುಪೂಜ್ಯಂ| ಲೋಕವಂದ್ಯಂ ತ್ರಿಣೇತ್ರಂ|
ಸರಸಿಜಭವರೂಪಂ| ರಾಘವೇಶಂ ಶ್ರಯಾಮ: ||೧||
(ಅನುಪಮ-ಮಹಿಮಾನಂ) ಅಪರಿಮಿತವೂ ತುಲನಾತೀತವೂ ಆದ ಮಹಿಮೆಯುಳ್ಳ, (ನಿಜಶರಣಗತಾನಾಂ ಮೋಕ್ಷಸಾಫಲ್ಯಹೇತುಮ್) ತನ್ನನ್ನು ಶರಣಾದವರಿಗೆ ಮೋಕ್ಷವನ್ನು ತೋರಬಲ್ಲವರಾಗಿ, (ವಿಷ್ಣುರೂಪಂ) ಸ್ಥಿತಿಕರ್ತಾ ಸಾಕ್ಷಾತ್ ವಿಷ್ಣುಸ್ವರೂಪರಾದ, (ಅಮರಸುಪೂಜ್ಯಂ ಗುರುಂ) ದೇವಾನುದೇವತೆಗಳಿಂದಲೂ ಸುಪೂಜಿತವಾದ ಲೋಕಗುರುಸ್ಥಾನದಲ್ಲಿರುವ, (ಲೋಕವಂದ್ಯಂ) ಸಕಲರಿಂದಲೂ ವಂದಿಸಲ್ಪಡುವ, (ತ್ರಿಣೇತ್ರಂ) ಜ್ಞಾನಪ್ರದನಾದ ಲಯಕರ್ತಾ ಸಾಕ್ಷಾತ್ ಮಹೇಶ್ವರಸ್ವರೂಪರಾದ, (ಸರಸಿ-ಜ-ಭವ-ರೂಪಂ) ಸರಸಿ-ಸರೋವರದಲ್ಲಿ, ಜ-ಜನಿಸಿದ್ದು ಕಮಲ, ಸರಸಿಜ-ಭವ— ನಾರಾಯಣನ ನಾಭೀಕಮಲಸಂಭೂತನಾದ ಸೃಷ್ಟಿಕರ್ತಾ ಚತುರ್ಮುಖ ಬ್ರಹ್ಮನ ಸ್ವರೂಪರಾದ— ಹೀಗೆ ತ್ರಿಮೂರ್ತಿಸ್ವರೂಪರಾದ ("ಗುರುರ್ಬ್ರಹ್ಮಾ ಗುರುರ್ವಿಷ್ಣುರ್ಗುರುರ್ದೇವೋ ಮಹೇಶ್ವರಃ | ಗುರುಸ್ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||") (ರಾಘವೇಶಂ) ಗೋಕರ್ಣಮಂಡಲಾಧೀಶ್ವರ ರಾಮಚಂದ್ರಪುರ ಮಠಾಧೀಶರಾದ ಶ್ರೀಶ್ರೀರಾಘವೇಂದ್ರಭಾರತೀಕರಕಮಲಸಂಜಾತರಾದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳನ್ನು, (ಶ್ರಯಾಮಃ) ಶರಣುಹೊಂದುತ್ತೇವೆ.
ಅನುಪಮಗುಣಧಾಮಂ| ಸದ್ಗುರುಂ ತಂ ಮಹಾನ್ತಂ|
ಅಭಿನವಭಗವತ್ಪಾ|ದಂ ಮಹಾಕಷ್ಟದೂರಮ್ |
ಮೃದುಮಧುರಸುವಾಣಿಂ| ಸುಸ್ಮಿತಂ ಮಂದಹಾಸಂ|
ಪ್ರಣಮತಿ ನರಸಂಘ:| ಸ್ವಾಸ್ಥ್ಯಶಾಂತ್ಯಾದಿಸಿದ್ಧ್ಯೈ ||೨||
(ಅನುಪಮ-ಗುಣಧಾಮಂ) ಉಪಮಾತೀತವಾದ ಸದ್ಗುಣಗಣಗಳ ನಿಧಿಯಾದ, (ಮಹಾನ್ತಂ ಸದ್ಗುರುಂ ತಂ) ಮಹಾತ್ಮರೂ ಸದ್ಗುರುಗಳೂ ಆದ, (ಮಹಾಕಷ್ಟದೂರಂ) ಮಹಾವಿಪತ್ತುಗಳನ್ನೂ ದೂರಮಾಡಬಲ್ಲ, (ಅಭಿನವ-ಭಗವತ್ಪಾದಂ) ಅಭಿನವಶಂಕರರೇ ಆದ, (ಮೃದು-ಮಧುರ-ಸುವಾಣಿಂ) ಮೃದು-ಮಧುರವಾದ ಒಳ್ನುಡಿಗಳನ್ನಾಡುವ, (ಸುಸ್ಮಿತಂ ಮಂದಹಾಸಂ) ಸುಂದರ ಮಂದಹಾಸಯುತರಾಗಿ ಸದಾ ಸ್ಮಿತವದನರಾದ ಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳನ್ನು, (ನರಸಂಘಃ) ಸಮಸ್ತ ಮನುಕುಲವು, (ಸ್ವಾಸ್ಥ್ಯ-ಶಾನ್ತ್ಯಾದಿ-ಸಿದ್ಧ್ಯೈ) ಆರೋಗ್ಯ, ಸುಸ್ಥಿತಿ, ಶಾಂತಿ ಮುಂತಾದುವುಗಳ ಸಿದ್ಧಿಗಾಗಿ, (ಪ್ರಣಮತಿ) ಪ್ರಣಾಮಮಾಡುತ್ತದೆ.
(ತ್ರಿಷ್ಟುಪ್ ಛನ್ದಃ— ಶಾಲಿನೀವೃತ್ತಮ್—"ಮಾನ್ತೌ ಗೌ ಚೇಚ್ಛಾಲಿನೀ ವೇದಲೋಕೈಃ")
ಶಿಷ್ಯಸ್ತೋಮಂ| ದರ್ಶನೇನೈವ ಪಾತಿ|
ನಶ್ಯತ್ಯಂಹೋ| ಯಸ್ಯ ವಾಙ್ಮಾತ್ರಕೇಣ |
ಗೋವಂಶೇ ವೈ| ಯಸ್ಯ ಚಿತ್ತಂ ತು ಲಗ್ನಂ|
ಯಂ ತಂ ಸೇವೇ| ರಾಗದೋಷಾದಿಮುಕ್ತಮ್ ||೩||
(ಶಿಷ್ಯಸ್ತೋಮಂ) ಶಿಷ್ಯಸಮೂಹವನ್ನು, (ದರ್ಶನೇನ ಏವ) ಕೇವಲ ದರ್ಶನಮಾತ್ರದಿಂದಲೇ, (ಪಾತಿ) ಪಾಲಿಸುತ್ತಾರೆ. (ಯಸ್ಯ) ಯಾರ, (ವಾಕ್-ಮಾತ್ರಕೇಣ) ಅಮೃತವಾಣಿಯಿಂದಲೇ, (ಅಂಹಃ, ನಶ್ಯತಿ) ಎಲ್ಲರ ಪಾಪಗಳು ನಾಶವಾಗುವುದೋ, (ಯಸ್ಯ ಚಿತ್ತಂ ತು) ಯಾರ ಚಿತ್ತವಾದರೋ, (ಗೋವಂಶೇ ವೈ ಲಗ್ನಂ) ಗೋವಂಶದ ಸುರಕ್ಷೆಯಲ್ಲೇ ನಾಟಿದೆಯೋ, (ಯಂ ತಂ ರಾಗದೋಷಾದಿಮುಕ್ತಂ) ರಾಗದ್ವೇಷಾದಿ ಸಮಸ್ತ ದೋಷರಹಿತರಾದ ಅಂತಹ ಶ್ರೀಗುರುಗಳನ್ನು, (ಸೇವೇ) ಸೇವೆಮಾಡುತ್ತೇನೆ.
ಬ್ರಹ್ಮಾನಂದಂ| ಧ್ಯಾನಮಾರ್ಗೇ ಪ್ಲವಂತಂ|
ಓಂಕಾರಂ ವೈ| ರಾಮಮಾರ್ಗೇ ದಿಶಂತಮ್ |
ಶಿಷ್ಯಸ್ತೋಮೇ| ಭಕ್ತಿರೂಪೇ ಲಸಂತಂ|
ಭಕ್ತ್ಯಾ ವಂದೇ| ಯೋಗಶಕ್ತ್ಯಾ ಚರಂತಮ್ ||೪||
(ಧ್ಯಾನಮಾರ್ಗೇ ಪ್ಲವಂತಂ) ಧ್ಯಾನಮಾರ್ಗಸ್ತರದಲ್ಲಿ ತೇಲುತ್ತಾ, (ಬ್ರಹ್ಮಾನಂದಂ) ಬ್ರಹ್ಮಾನಂದಸ್ವರೂಪರಾದ, (ರಾಮಮಾರ್ಗೇ) ಶ್ರೀರಾಮಚಂದ್ರನ ಕುರಿತಾದ ಭಕ್ತಿಯ ಪಥದಲ್ಲಿ, (ಓಙ್ಕಾರಂ ವೈ) ಓಂಕಾರಸ್ವರೂಪವನ್ನೇ, (ದಿಶನ್ತಂ) ತೋರುತ್ತಾ, (ಶಿಷ್ಯಸ್ತೋಮೇ) ಶಿಷ್ಯಗಡಣದಲ್ಲಿ, (ಭಕ್ತಿರೂಪೇ) ಭಕ್ತಿರೂಪದಲ್ಲಿ, (ಲಸನ್ತಂ) ನೆಲೆಸಿ ಭಕ್ತಿಯನ್ನುಂಟುಮಾಡುತ್ತಾ ಸಾನ್ನಿಧ್ಯವಹಿಸಿದವರಾದ, (ಯೋಗಶಕ್ತ್ಯಾ) ತಮ್ಮದಾದ ಯೋಗಶಕ್ತಿಯಿಂದ, (ಚರನ್ತಂ) ಎಲ್ಲೆಡೆ ಅವ್ಯಕ್ತವಾಗಿ ಸಂಚರಿಸುತ್ತಿರುವ ಸದ್ಗುರುಚರಣಸರೋರುಹದ್ವಯವನ್ನು, (ಭಕ್ತ್ಯಾ ವನ್ದೇ) ಭಕ್ತಿಯಿಂದ ವಂದಿಸುತ್ತೇನೆ.
|| ಹರೇ ರಾಮ ||
ಶೃಂಗೇರಿಯತಿದ್ವಯಸ್ತೋತ್ರಚತುಷ್ಕಮ್
|| ಶ್ರೀಗುರುಭ್ಯೋ ನಮ: ||
(ಅನುಷ್ಟುಪ್ ಛನ್ದಃ)
ವಿದ್ಯಾದಯಾಸ್ವರೂಪೌ ಚ ಜ್ಞಾನಗೀರ್ವಾಣವಾರಿಧೀ |
ಮೋಕ್ಷಾದ್ವೈತಪ್ರದೌ ಸೇವೇ ಭಾರತೀವಿಧುಶೇಖರೌ ||೧||
(ವಿದ್ಯಾ-ದಯಾ-ಸ್ವರೂಪೌ ಚ) ವಿದ್ಯೆ ಹಾಗೂ ದಯೆಯ ಸ್ವರೂಪರೂ, (ಜ್ಞಾನಗೀರ್ವಾಣವಾರಿಧೀ) ಜ್ಞಾನ ಮತ್ತು ದೇವತ್ವದ ಸಾಗರರೂ, (ಮೋಕ್ಷಾದ್ವೈತಪ್ರದೌ) ಮೋಕ್ಷ ಹಾಗೂ ಅದ್ವೈತ ಸ್ಥಿತಿಯನ್ನು ಉಂಟುಮಾಡಬಲ್ಲವರೂ ಆದ, (ಭಾರತೀ-ವಿಧುಶೇಖರೌ) ಶೃಂಗೇರಿ ಶಾರದಾಪೀಠವಿರಾಜಮಾನರಾದ ಜಗದ್ಗುರು ಶಂಕರಭಗವತ್ಪಾದಾಚಾರ್ಯ ಅನಂತಶ್ರೀವಿಭೂಷಿತ ಭಾರತೀತೀರ್ಥ ಮಹಾಸ್ವಾಮಿಗಳು ಹಾಗೂ ತತ್ಕರಕಮಲಸಂಜಾತರಾದ ಶ್ರೀಶ್ರೀ ವಿಧುಶೇಖರಭಾರತೀಸ್ವಾಮಿಗಳನ್ನು, (ಸೇವೇ) ಸೇವೆಗೈಯುತ್ತೇನೆ.
ಶಂಕರಾಚಾರ್ಯರೂಪೌ ಚ ಶಾರದಾಪೀಠಸಂಸ್ಥಿತೌ |
ಲೋಕಶಂಕರರೂಪೌ ತೌ ಭಾರತೀ-ತೀರ್ಥರೂಪಿಣೌ ||೨||
(ಶಂಕರಾಚಾರ್ಯರೂಪೌ ಚ) ಸಾಕ್ಷಾತ್ ಆದಿಶಂಕರಾಚಾರ್ಯರ ಸ್ವರೂಪರಾದ, (ಶಾರದಾಪೀಠಸಂಸ್ಥಿತೌ) ಚತುರಾಮ್ನಾಯ ಪೀಠಗಳಲ್ಲಿ ಯಜುರ್ವೇದಪೀಠವಾದ ಶೃಂಗೇರಿಯ ಶಾರದಾಪೀಠಾಧೀಶ್ವರರಾದ, (ಲೋಕಶಂಕರರೂಪೌ ತೌ) ಲೋಕಕ್ಕೆಲ್ಲ ಮಂಗಳವನ್ನುಂಟುಮಾಡುವ, (ಭಾರತೀ-ತೀರ್ಥರೂಪಿಣೌ) ಭಾರತೀ ಹಾಗೂ ತೀರ್ಥ ಎಂಬ ಸಂನ್ಯಾಸಿನಾಮಾಂಕಿತರಾದ ಶ್ರೀಶ್ರೀವಿಧುಶೇಖರಭಾರತೀ ಹಾಗೂ ಶ್ರೀಶ್ರೀಭಾರತೀತೀರ್ಥಮಹಾಸ್ವಾಮಿಗಳ ಚರಣಾರವಿಂದಗಳಿಗೆ ಪೊಡಮಡುತ್ತೇನೆ.
ಚತುರಾಮ್ನಾಯಪೀಠಸ್ಥೌ ಶೃಂಗೇರಿಪುರಸನ್ನಿಧೀ |
ಸಾಕ್ಷಾತ್ತ್ರಿಮೂರ್ತಿರೂಪೌ ಚ ವ್ಯಕ್ತವಾಣೀಸ್ವರೂಪಿಣೌ ||೩||
(ಶೃಂಗೇರಿಪುರಸಂನಿಧೀ) ಶೃಂಗೇರಿ / ಶೃಂಗಗಿರಿ / ಶೃಂಗವೇರಪುರದಲ್ಲಿ ಸಾನ್ನಿಧ್ಯವಹಿಸಿರುವ, (ಚತುರಾಮ್ನಾಯಪೀಠಸ್ಥೌ) ೪ ವೇದಗಳ ಸಂರಕ್ಷಣೆಗಾಗಿ ಭಗವತ್ಪಾದ ಶಂಕರರು ಪ್ರತಿಷ್ಠಾಪಿಸಿದ ಒರಿಸ್ಸಾದ ಪುರಿಯ ಋಗ್ವೇದೀಯ ಗೋವರ್ಧನಪೀಠ (ಪದ್ಮಪಾದ, ಪೂರ್ವ), ಕರ್ಣಾಟಕದ ಶೃಂಗೇರಿಯ ಯಜುರ್ವೇದೀಯ ಶಾರದಾಪೀಠ (ಸುರೇಶ್ವರ, ದಕ್ಷಿಣ), ಗುಜರಾತಿನ ದ್ವಾರಕೆಯ ಸಾಮವೇದೀಯ ಕಾಳಿಕಾಪೀಠ (ಹಸ್ತಾಮಲಕ, ಪಶ್ಚಿಮ)ಹಾಗೂ ಬದರಿಯ ಅಥರ್ವವೇದೀಯ ಜ್ಯೋತಿಷ್ಪೀಠ (ತೋಟಕಾಚಾರ್ಯ, ಉತ್ತರ)— ಎಂಬ ಚತುರಾಮ್ನಾಯಪೀಠಗಳಲ್ಲೊಂದಾದ ಶೃಂಗೇರಿಪೀಠಾಧಿಪತಿಗಳಾದ, (ಸಾಕ್ಷಾತ್-ತ್ರಿಮೂರ್ತಿರೂಪೌ ಚ) ಸಾಕ್ಷಾತ್ ತ್ರಿಮೂರ್ತಿಸ್ವರೂಪರಾದ, (ವ್ಯಕ್ತವಾಣೀಸ್ವರೂಪಿಣೌ) ವಾಣಿಯ ವ್ಯಕ್ತರೂಪರೇ ಆದ ಯತಿವರ್ಯರೀರ್ವರನ್ನೂ ವಂದಿಸುತ್ತೇನೆ.
ಧರ್ಮಕಾಮಾರ್ಥರೂಪೌ ತೌ ಭಕ್ತದು:ಖಾಪಹಾರಿಣೌ |
ಶಂಭುರೂಪೌ ಚ ಸದ್ಭಕ್ತ್ಯಾ ಸುಜ್ಞಾನಾರ್ಥಮಹಂ ಶ್ರಯೇ ||೪||
(ಧರ್ಮಾರ್ಥಕಾಮರೂಪೌ) ಧರ್ಮ, ಅರ್ಥ, ಕಾಮಗಳೆಂಬ ತ್ರಿವರ್ಗವನ್ನು ದಯಪಾಲಿಸಿ, (ಭಕ್ತದುಃಖಾಪಹಾರಿಣೌ) ಭಕ್ತರ ದುಃಖವನ್ನು ಹೋಗಲಾಡಿಸಿ ಇಷ್ಟಾರ್ಥಗಳನ್ನು ಈಡೇರಿಸುವಂತಹ, (ಶಂಭುರೂಪೌ ಚ) ಸಾಕ್ಷಾತ್ ಶಂಭುಸ್ವರೂಪರೇ ಆದ, (ತೌ) ಶೃಂಗೇರಿಯ ಯತಿವರ್ಯರೀರ್ವರನ್ನೂ, (ಸುಜ್ಞಾನಾರ್ಥಂ) ಮೋಕ್ಷಜ್ಞಾನಕ್ಕಾಗಿ, (ಅಹಂ) ನಾನು, (ಸದ್ಭಕ್ತ್ಯಾ) ಭಕ್ತಿಪೂರ್ವಕವಾಗಿ, (ಶ್ರಯೇ) ಶರಣುಹೊಂದುತ್ತೇನೆ.
|| ಓಂ ನಮ: ಶಿವಾಯ ||
|| ಓಂ ನಮೋ ನಾರಾಯಣಾಯ ||
ಶ್ರೀಗುರುಕವಚಸ್ತೋತ್ರಮ್
ಧ್ಯಾನಮ್
(ಅತ್ಯಷ್ಟಿಶ್ಛನ್ದೋಜಾತಂ ಶಿಖರಿಣೀವೃತ್ತಮ್; ಸಪ್ತದಶಾಕ್ಷರಾವೃತ್ತಿಃ— "ರಸೈರುದ್ರೈಶ್ಛಿನ್ನಾ ಯಮನಸಭಲಾಗಃ ಶಿಖರಿಣೀ")
ಸ್ಮರೇದ್ದಿವ್ಯೌ ಪಾದೌ ಬಹುವಿರಲಪುಣ್ಯೌ ಪ್ರತಿದಿನಂ
ನರೋ ದೇವೋ ರಕ್ಷೋ ನತಜನಸುದೀಪ್ತೌ ತಿಮಿರಹೌ |
ಮನಶ್ಶಾರೀರಾದಿಪ್ರಭವಸಕಲಾಘಃಪ್ರಶಮನೌ
ಗುರೋರ್ಬ್ರಹ್ಮಾನಂದೌ ನಿಖಿಲದುರಿತಾರ್ತಿಪ್ರಮಥನೌ ||೧||
(ನರಃ) ಮನುಷ್ಯನಾದವನೂ, (ದೇವಃ) ದೇವತೆಗಳೂ, (ರಕ್ಷಃ) ರಾಕ್ಷಸರೂ ಸಹ, (ಪ್ರತಿದಿನಂ) ಪ್ರತಿದಿನವೂ, (ಬಹುವಿರಲಪುಣ್ಯೌ) ಬಹಳ ಅಪರೂಪದ ಪುಣ್ಯವಿಶೇಷಮಾತ್ರದಿಂದ ಪ್ರಾಪ್ತವಾಗುವಂತಹ, (ನತ-ಜನ-ಸುದೀಪ್ತೌ) ನಮಸ್ಕರಿಸುವ ಜನರ ಅಜ್ಞಾನಾಂಧಕಾರವನ್ನು ನಾಶಮಾಡಿ ಜ್ಞಾನದೀಪ್ತಿಯನ್ನು ಬೆಳಗಿಸುವ, (ಮನಃ-ಶಾರೀರಾದಿ-ಪ್ರಭವ-ಸಕಲ-ಅಘಃ-ಪ್ರಶಮನೌ) ಮನಸ್ಸು-ಶರೀರಗಳಿಂದಾದ ಎಲ್ಲ ಪಾಪವನ್ನು ಪರಿಹರಿಸಬಲ್ಲ, (ಬ್ರಹ್ಮಾನಂದೌ) ಬ್ರಹ್ಮಾನಂದವನ್ನುಂಟುಮಾಡುವ, (ನಿಖಿಲ-ದುರಿತ-ಅರ್ತಿ-ಪ್ರಶಮನೌ) ಎಲ್ಲ ಪಾಪ-ಕಷ್ಟ-ಸಂಕಟಗಳನ್ನು ನಾಶಮಾಡುವಂಥ, (ಗುರೋಃ ದಿವ್ಯೌ ಪಾದೌ) ಗುರುವಿನ ದಿವ್ಯವಾದ ಪಾದಕಮಲಗಳನ್ನು, (ಸ್ಮರೇತ್) ಸದಾ ಸ್ಮರಿಸುತ್ತಿರಬೇಕು.
(ಅತಿಧೃತಿಶ್ಛನ್ದೋಜಾತಂ ಶಾರ್ದೂಲವಿಕ್ರೀಡಿತವೃತ್ತಮ್; ನವದಶಾಕ್ಷರಾ ವೃತ್ತಿಃ; "ಸೂರ್ಯಾಶ್ವೈರ್ಮಸಜಸ್ತತಾಃ ಸಗುರವಃ ಶಾರ್ದೂಲವಿಕ್ರೀಡಿತಮ್")
ವಂದೇ ಲೋಕಗುರುಂ ಹರಿಂ ಸುರಗುರುಂ ವ್ಯಾಸಂ ಚ ದತ್ತಪ್ರಭುಂ
ವಂದೇ ಜ್ಞಾನಗುರುಂ ಹರಂ ಹಿ ಚ ನಮಃ ಶ್ರೀದಕ್ಷಿಣಾಮೂರ್ತಯೇ |
ವಂದೇ ಶಂಕರರೂಪಿಣಂ ಪ್ರತಿದಿನಂ ಚಾದ್ವೈತಮೂರ್ತಿಂ ಮುದಾ
ವಂದೇ ಸರ್ವಗುರೂನನಾದಿಗುರುರೂಪಾಂ ಮಾತೃರೂಪಾಂ ಶಿವಾಮ್ ||೨||
(ಲೋಕಗುರುಂ ಹರಿಂ) ಜಗದ್ಗುರುವಾದ ಶ್ರೀಕೃಷ್ಣನನ್ನೂ, (ಸುರಗುರುಂ) ದೇವಗುರುವಾದ ಬೃಹಸ್ಪತಿಯನ್ನೂ, (ವ್ಯಾಸಂ ಚ) ಭಗವಾನ್ ವೇದವ್ಯಾಸರನ್ನೂ, ಹಾಗೆಯೇ, (ದತ್ತಪ್ರಭುಂ) ಭಗವಾನ್ ದತ್ತಾತ್ರೇಯನನ್ನೂ, (ವನ್ದೇ) ವಂದಿಸುತ್ತೇನೆ. (ಚ) ಹಾಗೆಯೇ, (ಶ್ರೀದಕ್ಷಿಣಾಮೂರ್ತಯೇ) ದಕ್ಷಿಣಾಮೂರ್ತಿಸ್ವರೂಪನಿಗೆ, (ನಮಃ) ನಮಿಸುತ್ತೇನೆ. (ಜ್ಞಾನಗುರುಂ ಹಿ) ಜ್ಞಾನಗುರುವೇ ಆದ, (ಹರಂ) ಶಂಭುಸ್ವರೂಪನನ್ನೂ, (ವನ್ದೇ) ವಂದಿಸುತ್ತೇನೆ. ("ಆರೋಗ್ಯಂ ಭಾಸ್ಕರಾದಿಚ್ಛೇತ್, ಶ್ರಿಯಮಿಚ್ಛೇತ್ ಹುತಾಶನಾತ್ | ಜ್ಞಾನಂ ಮಹೇಶ್ವರಾದಿಚ್ಛೇತ್, ಮೋಕ್ಷಮಿಚ್ಛೇತ್ ಜನಾರ್ದನಾತ್ ||"— ಆರೋಗ್ಯವನ್ನು ಸೂರ್ಯನಿಂದಲೂ, ಸಂಪತ್ತನ್ನು ಅಗ್ನಿಯಿಂದಲೂ, ಜ್ಞಾನವನ್ನು ಮಹೇಶ್ವರನಿಂದಲೂ, ಮೋಕ್ಷವನ್ನು ಜನಾರ್ದನನಿಂದಲೂ ಬೇಡಬೇಕು.) (ಅದ್ವೈತಮೂರ್ತಿಂ) ಅದ್ವೈತದ ಮೂರ್ತರೂಪರಾದ, (ಶಂ-ಕರರೂಪಿಣಂ) ಶ್ರೀ ಶಂಕರಭಗವತ್ಪಾದಾಚಾರ್ಯರನ್ನೂ, (ಪ್ರತಿದಿನಂ) ದಿನದಿನವೂ, (ಮುದಾ) ಸಂತೋಷದಿಂದ, (ವನ್ದೇ) ವಂದಿಸುತ್ತೇನೆ. (ಸರ್ವಗುರೂನ್) ಸಮಸ್ತಗುರುಪರಂಪರೆಯನ್ನೂ, (ಅನಾದಿಗುರುರೂಪಾಂ) ಅನಾದಿಗುರುರೂಪಳೂ, (ಮಾತೃರೂಪಾಂ) ಮಾತೃರೂಪಳೂ ಆದ, (ಶಿವಾಂ) ಶಿವೆಯನ್ನೂ, (ವನ್ದೇ) ವಂದಿಸುತ್ತೇನೆ.
ಇತಿ ಧ್ಯಾನಮ್
(ಅನುಷ್ಟುಭ್ ವೃತ್ತಮ್)
ಕೃಪಾ ವೈ ಸದ್ಗುರೋರ್ನಾಂತಮೇತಿ ಲೋಕೇऽಪರೇऽಪಿ ಚ |
ಗುರೋಃ ಕೃಪಾವಿಶೇಷೇಣ ಜನ್ಮ ಸಾಫಲ್ಯತಾಂ ವ್ರಜೇತ್ ||೧||
(ಸದ್ಗುರೋಃ) ಸದ್ಗುರುವಿನ, (ಕೃಪಾ, ಲೋಕೇ ಅಪರೇ ಅಪಿ ಚ ನ ಅಂತಮ್ ಏತಿ ವೈ) ಕೃಪಾಕಟಾಕ್ಷಕ್ಕೆ ಇಹಲೋಕದಲ್ಲೂ, ಪರಲೋಕದಲ್ಲೂ ನಿಶ್ಚಯವಾಗಿಯೂ ಎಣೆಯಿಲ್ಲ. (ಗುರೋಃ ಕೃಪಾವಿಶೇಷೇಣ) ಗುರುವಿನ ಕೃಪಾಮಹಿಮೆಯಿಂದ, (ಜನ್ಮ) ಜನ್ಮವೇ, (ಸಾಫಲ್ಯತಾಂ ವ್ರಜೇತ್) ಸಫಲವಾಗುವುದು.
ನೋ ಚೇನ್ನಾಸ್ತಿ ಫಲಂ ನೄಣಾಂ ಪರಿಪೂರ್ಣೇನ ಸಿದ್ಧ್ಯತಿ |
ಯತ್ಕಿಂಚಿದಪಿ ಕಾರ್ಯಂ ವೈ ತದರ್ಥಂ ಗುರುಪೂಜನಮ್ ||೨||
(ನೋ ಚೇತ್) ಗುರುಕೃಪೆಯಿಲ್ಲವಾದರೆ, (ಫಲಂ ನ ಅಸ್ತಿ) ಫಲವಿಲ್ಲ. (ನೄಣಾಂ) ಮನುಜರ, (ಯತ್ ಕಿಂಚಿತ್ ಕಾರ್ಯಮ್ ಅಪಿ) ಯಾವುದೇ ಕಾರ್ಯವೂ, (ಪರಿಪೂರ್ಣೇನ ನ ಸಿದ್ಧ್ಯತಿ) ಪರಿಪೂರ್ಣವಾಗಿ ಸಿದ್ಧಿಸದು. (ತದರ್ಥಂ ವೈ) ಹಾಗಾಗಿಯೇ, (ಗುರುಪೂಜನಂ) ಗುರುಪೂಜೆಯು, (ಕಾರ್ಯಂ) ಕರ್ತವ್ಯವಾಗಿರುವುದು.
ಕುರ್ಯಾತ್ಸರ್ವಸಮಾರಂಭಾನ್ ಗಣೇಶಾರ್ಚನಪೂರ್ವಕಮ್ |
ಗುರುರ್ದದಾತಿ ಸಂಸಿದ್ಧಿಂ ಗಣೇಶೋऽವಿಘ್ನತಾಂ ಚ ನ: ||೩||
(ಸರ್ವ-ಸಮಾರಂಭಾನ್)ಎಲ್ಲ ಕಾರ್ಯಗಳ ಆರಂಭವನ್ನು, (ಗಣೇಶಾರ್ಚನಪೂರ್ವಕಮ್) ಗಣೇಶನ ಅರ್ಚನೆಯ ಸಹಿತ ಗುರುಪೂಜೆಯೊಂದಿಗೆ ಮಾಡಬೇಕು. (ಗಣೇಶಃ) ದೇವ ಗಣೇಶನು, (ನಃ) ನಮ್ಮ ಕಾರ್ಯಕ್ಕೆ ಅವಿಘ್ನತೆಯನ್ನೂ, (ಗುರುಃ ಸಂಸಿದ್ಧಿಂ ಚ)ಗುರುವು ಪೂರ್ಣಫಲಸಿದ್ಧಿಯನ್ನೂ, (ದದಾತಿ) ಉಂಟುಮಾಡುವನು.
ಶೀರ್ಷಂ ಮೇ ಪಾತು ಶ್ರೀಕೃಷ್ಣೋ ಲಲಾಟಂ ಚ ತ್ರಿನೇತ್ರಕಃ |
ದೃಶೌ ದತ್ತಃ ಶ್ರುತೀ ದೇವ|ಗುರುಃ ಪಾತು ಬೃಹಸ್ಪತಿಃ ||೪||
(ಶ್ರೀಕೃಷ್ಣಃ) ಸುಮಾರು ೫,೦೦೦ ವರ್ಷಗಳ ಹಿಂದೆ ಗೀತೋಪದೇಶಕನಾಗಿ ಪ್ರಥಮ ಜಗದ್ಗುರುವಾದ ಶ್ರೀಕೃಷ್ಣನು (ಮೇ ಶೀರ್ಷಂ ಪಾತು)ನನ್ನ ಶಿರವನ್ನು ರಕ್ಷಿಸಲಿ. (ಚ) ಹಾಗೆಯೇ, (ತ್ರಿ-ನೇತ್ರ-ಕಃ) "ಜ್ಞಾನಂ ಮಹೇಶ್ವರಾದಿಚ್ಛೇತ್ " ಎಂಬಂತೆ ಜ್ಞಾನಗುರುವಾದ ಮುಕ್ಕಣ್ಣ ಹರನು, (ಲಲಾಟಂ) ಹಣೆಯನ್ನು ಕಾಪಾಡಲಿ. (ದತ್ತಃ) ತ್ರಿಮೂರ್ತಿಸ್ವರೂಪನೂ ಪ್ರಥಮ ಅವಧೂತನೂ ಆದ ಭಗವಾನ್ ದತ್ತಾತ್ರೇಯ ಸದ್ಗುರುವು, (ದೃಶೌ) ಕಣ್ಣುಗಳನ್ನು ರಕ್ಷಿಸಲಿ. (ದೇವಗುರುಃ ಬೃಹಸ್ಪತಿಃ) ಕಿವಿಯಿಂದ ಕೇಳಿಯೇ ಕಲಿಯುವಂಥ ವೇದಗಳ ಅಭಿಮಾನಿಯಾದ ದೇವಗುರು ಬೃಹಸ್ಪತಿಯು, (ಶ್ರುತೀ ಪಾತು) ನಮ್ಮ ಕಿವಿಗಳೆರಡನ್ನು ಪರಿಪಾಲಿಸಲಿ.
ಘ್ರಾಣಂ ಚಾವತು ಶ್ರೀದಕ್ಷಿ|ಣಾಮೂರ್ತಿರ್ವಾಸನಾಪಹಃ |
ಆನನಂ ಶಂಕರಾಚಾರ್ಯೋ ಜಿಹ್ವಾಂ ಚ ಬಾದರಾಯಣಃ ||೫||
(ಚ) ಅಂತೆಯೇ, (ವಾಸನಾಪಹಃ) ನಮ್ಮ ಪೂರ್ವಕರ್ಮವಾಸನೆಗಳನ್ನೆಲ್ಲ ನಿವಾರಿಸಬಲ್ಲ, (ಶ್ರೀದಕ್ಷಿಣಾಮೂರ್ತಿಃ) ಶ್ರೀದಕ್ಷಿಣಾಮೂರ್ತಿಯು, (ಘ್ರಾಣಮ್ ಅವತು) ನಮ್ಮ ನಾಸಿಕವನ್ನು ಸಂರಕ್ಷಿಸಲಿ. (ಶಂಕರಾಚಾರ್ಯಃ) "ಬ್ರಾಹ್ಮಣೋऽಸ್ಯ ಮುಖಮಾಸೀತ್ (ಬ್ರಾಹ್ಮಣನು ಭಗವಂತನ ಮುಖ / ಬಾಯಿಯು)" ಎಂಬ ವೇದವಾಣಿಯನ್ನು ಸಾರ್ಥಕಪಡಿಸಿದ ಜ್ಞಾನಪ್ರಧಾನವಾದ ಅದ್ವೈತಸಿದ್ಧಾಂತದ ಪ್ರವರ್ತಕರಾದ ಆದಿಶಂಕರ ಭಗವತ್ಪಾದಾಚಾರ್ಯರು, (ಆನನಂ) ನಮ್ಮ ಮುಖವನ್ನು ರಕ್ಷಿಸಲಿ. (ಚ) ಮತ್ತು, (ಜಿಹ್ವಾಂ ಬಾದರಾಯಣಃ) ನಾಲಿಗೆಯನ್ನು ಸದಾ ವೇದವಾಣಿಯನ್ನು ನುಡಿಯುವಂತೆ ಮಾಡುವ ಬದರಿಕಾಶ್ರಮವಾಸಿಗಳಾಗಿ ಬಾದರಾಯಣರೆನಿಸಿದ ("ಬದರ್ಯಾಂ ಅಯನಂ ಗೃಹಂ ಯಸ್ಯ ಸಃ") ಭಗವಾನ್ ವೇದವ್ಯಾಸರು ಸಂರಕ್ಷಿಸಲಿ.
ದಂತಾನ್ ರಕ್ಷತು ಧರ್ಮಾತ್ಮಾ ಯಮಃ ಕಂಠಂ ಸುಮಧ್ವಕಃ |
ಗ್ರೀವಾಮವತು ರಾಮಾನು|ಜಃ ಸ್ಕಂಧೌ ಬಸವೇಶ್ವರಃ ||೬||
(ಧರ್ಮಾತ್ಮಾ ಯಮಃ) ಧರ್ಮಾಧರ್ಮವಿಚಕ್ಷಣನಾದ, ಸಾಕ್ಷಾತ್ ಮೃತ್ಯುವಿನ ದವಡೆ (ದಂತಪಂಕ್ತಿ)ಯೇ ಆದ ಯಮಧರ್ಮನು, (ದನ್ತಾನ್ ರಕ್ಷತು) ನಮ್ಮ ಹಲ್ಲುಗಳನ್ನು ಕಾಪಾಡಲಿ. (ಸುಮಧ್ವಕಃ ಕಂಠಂ) ಸುಮಧುರವಾಗಿ ನುಡಿಯುವಂತೆ ನಮ್ಮ ಕಂಠಸಿರಿಯನ್ನು ಭಕ್ತಿಪ್ರಧಾನವಾದ ದ್ವೈತಸಿದ್ಧಾಂತದ ಪ್ರವರ್ತಕರಾದ ಪೂಜ್ಯ ಮಧ್ವಾಚಾರ್ಯರು ಪಾಲಿಸಲಿ. (ರಾಮಾನುಜಃ) ಸದಾ ಪರಮಾತ್ಮನಿಗೆ ತಲೆಬಾಗಬೇಕೆಂಬ ಪ್ರಪತ್ತಿ / ಶರಣಾಗತಿಪ್ರಧಾನವಾದ ವಿಶಿಷ್ಟಾದ್ವೈತಸಿದ್ಧಾಂತದ ಪ್ರವರ್ತಕರಾದ ಶ್ರೀಮದ್ರಾಮಾನುಜಾಚಾರ್ಯರು ನಮ್ಮ (ಗ್ರೀವಾಮ್ ಅವತು) ಕುತ್ತಿಗೆಯನ್ನು (ಕೊರಳನ್ನು) ಸಂರಕ್ಷಿಸಲಿ. (ಬಸವೇಶ್ವರಃ) ಕಾಯಕ-ದಾಸೋಹಪ್ರಧಾನವಾದ ಶಕ್ತಿವಿಶಿಷ್ಟಾದ್ವೈತ / ವೀರಶೈವಸಿದ್ಧಾಂತದ ಪ್ರವರ್ತಕರಾದ ಸಾಕ್ಷಾತ್ ಶಿವನಂದಿಯ ಅವತಾರವೆನಿಸಿದ ಬಸವೇಶ್ವರರು (ಉಳುವ ನೇಗಿಲನ್ನು ಹೊರುವಂತೆಯೇ) ಸಂಸಾರಭಾರವನ್ನು ಯಶಸ್ವಿಯಾಗಿ ಹೊರುವಂತೆ, (ಸ್ಕನ್ಧೌ) ನಮ್ಮ ಹೆಗಲನ್ನು ಸುಭದ್ರಗೊಳಿಸಲಿ.
ಭುಜೌ ತು ರಾಮಕೃಷ್ಣಶ್ಚ ಕರೌ ವಿವೇಕರೂಪವಾನ್ |
ಉರಃ ಪಾತು ಚ ವಿಶ್ವೇಶೋ ಹೃದಯಂ ರಾಘವೇಶ್ವರಃ ||೭||
(ರಾಮಕೃಷ್ಣಃ) ತಮ್ಮ ಬಾಹುಗಳನ್ನೆತ್ತಿ ಆರ್ತರನ್ನು ಹರಸಿ ಉದ್ಧರಿಸಿದ ಯುಗಾವತಾರ ಶ್ರೀ ರಾಮಕೃಷ್ಣ ಪರಮಹಂಸರು, (ಭುಜೌ) ನಮ್ಮ ಭುಜಗಳನ್ನು ರಕ್ಷಿಸಲಿ. (ಚ) ಹಾಗೆಯೇ, (ವಿವೇಕರೂಪವಾನ್) ಅವರ ಶಿಷ್ಯರಾದ, ಅಭಿನವ ಶಂಕರರೇ ಆದ ಯುಗಾಚಾರ್ಯ ಸ್ವಾಮಿ ವಿವೇಕಾನಂದರು ಸತ್ಕರ್ಮಗಳನ್ನೇ ಮಾಡುವಂತೆ ಪ್ರೇರೇಪಿಸಿ, (ಕರೌ) ನಮ್ಮ ಕರಗಳನ್ನು ಕಾಪಾಡಲಿ. (ವಿಶ್ವೇಶಃ) ಪೇಜಾವರ ಮಠಾಧೀಶರಾದ ಪರಮಧಾರ್ಮಿಕರೂ ಧರ್ಮಸಂಸ್ಥಾಪಕರೂ ಸಮಾಜಸುಧಾರಕರೂ ದಿಟ್ಟ ಎದೆಗಾರಿಕೆಯುಳ್ಳವರೂ ಆದ ವಿಶ್ವೇಶತೀರ್ಥ ಶ್ರೀಪಾದಂಗಳವರು, (ಉರಃ ಪಾತು) ನಮ್ಮ ಎದೆಯನ್ನು ರಕ್ಷಿಸಲಿ. (ರಾಘವೇಶ್ವರಃ) ಉದಾರಹೃದಯದ ಸಹೃದಯಿಗಳೂ ಮಾತೃಸ್ವರೂಪರೂ ಆದ ಗೋಕರ್ಣಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳು, (ಹೃದಯಂ) ನಮ್ಮ ಹೃದಯವನ್ನು ಸಂರಕ್ಷಿಸಲಿ.
ಉದರಂ ನಾಥರೂಪಶ್ಚ ಜಠರಂ ಜಾತವೇದಕಃ |
ಭಾರ್ಗವಸ್ತು ಕಟಿಂ ಪಾತು ಗುಹ್ಯಂ ರಕ್ಷತು ಸದ್ಗುರುಃ ||೮||
(ಉದರಂ) ನಮ್ಮ ಹೊಟ್ಟೆಯನ್ನು, (ನಾಥರೂಪಃ) ನಾಗಾಭರಣರಾದ ನವನಾಥರು ರಕ್ಷಿಸಲಿ. (ಚ) ಅಂತೆಯೇ, (ಜಠರಂ) ಜಠರವನ್ನು, (ಜಾತವೇದಕಃ ಪಾತು) ಜಾಠರಾಗ್ನಿರೂಪಿಯಾದ ಜಾತವೇದನು (ಅಗ್ನಿದೇವನು) ಪಾಲಿಸಲಿ. (ಕಟಿಂ ತು) ಸೊಂಟವನ್ನಾದರೋ, (ಭಾರ್ಗವಃ) ಭಾರ್ಗವ ಪರಶುರಾಮನೂ, (ಸದ್ಗುರುಃ ಗುಹ್ಯಂ ರಕ್ಷತು) ಸದ್ಗುರುವು ಗುಹ್ಯ (ಲಿಂಗ) ವನ್ನೂ ರಕ್ಷಿಸಲಿ.
ಮೇರುದಂಡಂ ಚ ಚೈತನ್ಯೋ ಮೂಲಾಧಾರಂ ವಿನಾಯಕಃ |
ನಿತ್ಯಾನಂದಶ್ಚ ಪಾತೂರೂ ಬ್ರಹ್ಮಾನಂದಶ್ಚ ಜಾನುನೀ ||೯||
(ಮೇರುದಣ್ಡಂ) ಮೇರುದಂಡವನ್ನು (spinal cord), (ಚೈತನ್ಯಃ) ಚೈತನ್ಯ ಮಹಾಪ್ರಭುವೂ, (ಚ) ಅಂತೆಯೇ, (ಮೂಲಾಧಾರಂ ವಿನಾಯಕಃ) ಮೂಲಾಧಾರವನ್ನು ವಿನಾಯಕನೂ, (ಚ) ಹಾಗೆಯೇ, (ಊರೂ) ತೊಡೆಗಳನ್ನು (ನಿತ್ಯಾನನ್ದಃ) ನಿತ್ಯಾನಂದರೂ, (ಚ ಜಾನುನೀ) ಅಂತೆಯೇ ಮೊಣಕಾಲುಗಳನ್ನು, (ಬ್ರಹ್ಮಾನನ್ದಃ ಪಾತು) ಬ್ರಹ್ಮಾನಂದರೂ ಸಂರಕ್ಷಿಸಲಿ.
ಯೋಗಾನಂದಝ ಪಾತು ಜಂಘೇ ಗುಲ್ಫೌ ಪಾತು ಪ್ರಜಾಪಿತಃ |
ಚರಣೌ ನಾರದಃ ಪಾತು ನಾರಮಾರ್ಗಪ್ರದರ್ಶಕಃ ||೧೦||
(ಯೋಗಾನನ್ದಃ) ಯೋಗಾನಂದರು, (ಜಙ್ಘೇ ಪಾತು) ಮುಂಗಾಲುಗಳನ್ನು ರಕ್ಷಿಸಲಿ. (ಪ್ರಜಾಪಿತಃ) ಪ್ರಜಾಪಿತನು, (ಗುಲ್ಫೌ ಪಾತು) ಮಣಿಕಟ್ಟುಗಳನ್ನು ಕಾಪಾಡಲಿ. ತ್ರಿಲೋಕಸಂಚಾರಿ ಬ್ರಹ್ಮಮಾನಸಪುತ್ರರಾದ (ನಾರ-ಮಾರ್ಗ-ಪ್ರದರ್ಶಕಃ) ಮೋಕ್ಷಪಥದರ್ಶಕರಾದ, (ನಾರದಃ) ದೇವರ್ಷಿ ನಾರದರು, (ಚರಣೌ ಪಾತು) ನಮ್ಮ ಪಾದಗಳನ್ನೂ ಪಾಲಿಸಲಿ.
ರಾಘವೇಂದ್ರೋ ಹೃಷೀಕಾಣಿ ದೇವೇಂದ್ರೋ ಪಾತು ನೋ ಮನಃ |
ಬುದ್ಧಿಂ ಪಾತು ಚ ಸಂಬುದ್ಧೋ ಧಿಯೋ ಯೋ ನಃ ಪ್ರಚೋದಯಾತ್ ||೧೧||
(ರಾಘವೇನ್ದ್ರಃ) ರಾಘವೇಂದ್ರಸ್ವಾಮಿಗಳು (ಹೃಷೀಕಾಣಿ) ಇಂದ್ರಿಯಗಳನ್ನೂ, (ದೇವೇನ್ದ್ರಃ) ದೇವೇಂದ್ರನು, (ನಃ—ಅಸ್ಮಾಕಂ) ನಮ್ಮ (ಮನಃ) ಮನಸ್ಸನ್ನೂ, (ಪಾತು) ಪಾಲಿಸಲಿ. (ಚ) ಹಾಗೆಯೇ, (ಸಂಬುದ್ಧಃ) ಸುಜ್ಞಾನೋದಯವಾದ ಬುದ್ಧನು, (ಬುದ್ಧಿಂ ಪಾತು) ಬುದ್ಧಿಯನ್ನೂ ರಕ್ಷಿಸಲಿ. (ಯಃ) ಯಾವ ಇವರೆಲ್ಲರೂ, (ನಃ) ನಮ್ಮ, (ಧಿಯಃ) ಬುದ್ಧಿಗಳನ್ನು, (ಪ್ರಚೋದಯಾತ್) ಸನ್ಮಾರ್ಗದಲ್ಲಿ ಪ್ರಚೋದಿಸಲಿ.
ಚಿತ್ತಾನಿ ಚಿನ್ಮಯಃ ಪಾತು ಶಿಷ್ಯಚಿತ್ತಾಪಹಾರಕಃ |
ಅಹಂತತ್ತ್ವಂ ಬ್ರಹ್ಮತತ್ತ್ವೇ ನಿಯೋಜಯತು ಕೇಶವಃ ||೧೨||
(ಚಿತ್ತಾನಿ) ನಮ್ಮ ಚಿತ್ತಗಳನ್ನು, (ಚಿನ್ಮಯಃ ಪಾತು) ಶಿಷ್ಯಚಿತ್ತಾಪಹಾರಕರಾದ ಸ್ವಾಮೀ ಚಿನ್ಮಯಾನಂದರು ಕಾಪಾಡಲಿ. (ಅಹಂತತ್ತ್ವಂ) ನಮ್ಮ ಅಹಂತತ್ತ್ವವನ್ನು, (ಕೇಶವಃ) ಆ ಕೇಶವನೇ, (ಬ್ರಹ್ಮತತ್ತ್ವೇ ನಿಯೋಜಯತು) ಬ್ರಹ್ಮತತ್ತ್ವದಲ್ಲಿ ನೆಲೆಗೊಳಿಸಲಿ.
ಆತ್ಮಾನಾತ್ಮವಿವೇಕಂ ಚ ಬ್ರಹ್ಮಾತ್ಮೈಕ್ಯಂ ತನೋತು ನಃ |
ಪ್ರಜ್ಞಾನಮಾತ್ಮಭಾವಂ ತತ್ತ್ವಮಸೀತಿ ಪ್ರಬೋಧ ಮೇ ||೧೩||
ಆ ಗುರು-ಪರಮಾತ್ಮನು, (ನಃ) ನಮಗೆ, (ಆತ್ಮಾನಾತ್ಮವಿವೇಕಂ ಚ) ಆತ್ಮ-ಅನಾತ್ಮ ವಿವೇಕವನ್ನೂ, (ಬ್ರಹ್ಮಾತ್ಮ-ಐಕ್ಯಂ ತನೋತು)ಬ್ರಹ್ಮ-ಆತ್ಮದ ಅಭೇದವನ್ನೂ ಉಂಟುಮಾಡಲಿ. (ಮೇ) ನನಗೆ, (ಪ್ರಜ್ಞಾನಮ್, ಆತ್ಮಭಾವಂ) "ನೀನು ಪ್ರಜ್ಞಾನಸ್ವರೂಪನೂ, ಆತ್ಮಸ್ವರೂಪನೂ, (ತತ್ ತ್ವಮ್ ಅಸಿ ಇತಿ) ಆ ಪರತತ್ತ್ವ / ಬ್ರಹ್ಮಸ್ವರೂಪನೂ ಆಗಿರುವಿ" ಎಂಬ, (ಪ್ರಬೋಧ) ಅರಿವನ್ನುಂಟುಮಾಡು ಹೇ ಗುರುದೇವನೆ!
ಇತ್ಥಂ ಪ್ರಕಲ್ಪ್ಯತಾಂ ರಕ್ಷಾಕವಚಂ ಧಾರ್ಯತಾಂ ನರೈಃ |
ಗುರೋರಮಿತರಕ್ಷಾರ್ಥಂ ಮಹಾಪ್ರಭಾವಸಂಯುತಮ್ ||೧೪||
(ಇತ್ಥಂ) ಈ ರೀತಿಯಾಗಿ, (ನರೈಃ) ಮನುಜರಿಂದ, (ಮಹಾಪ್ರಭಾವಸಂಯುತಮ್) ಮಹಾಪ್ರಭಾವಯುತವಾದ, (ಗುರೋಃ, ರಕ್ಷಾಕವಚಂ) ಗುರುಕವಚವು, (ಅಮಿತರಕ್ಷಾರ್ಥಂ) ಮಿತಿಯಿಲ್ಲದ ರಕ್ಷಣೆಗಾಗಿ, (ಪ್ರಕಲ್ಪ್ಯತಾಂ) ಪ್ರಕಲ್ಪಿಸಲ್ಪಟ್ಟು, (ಧಾರ್ಯತಾಂ) ಧಾರಣೆಮಾಡಿಕೊಳ್ಳಲ್ಪಡಬೇಕು.
ಸಕಲೇಷ್ಟಪ್ರದಂ ದಿವ್ಯಂ ನಿತ್ಯಂ ಭಕ್ತಿಸಮನ್ವಿತೈಃ |
ಆಯುರಾರೋಗ್ಯಮೈಶ್ವರ್ಯಂ ಮನಶ್ಶಾಂತಿಂ ಚ ಯಚ್ಛತಿ ||೧೫||
(ನಿತ್ಯಂ) ನಿತ್ಯವೂ, (ಭಕ್ತಿಸಮನ್ವಿತೈಃ) ಭಕ್ತಿಪೂರ್ವಕವಾಗಿ, (ಸಕಲೇಷ್ಟಪ್ರದಂ ದಿವ್ಯಂ) ಈ ಸಕಲ ಇಷ್ಟಾರ್ಥಗಳನ್ನೀಯಬಲ್ಲ ದಿವ್ಯವಾದ ಗುರುರಕ್ಷಾಕವಚವನ್ನು ಪಠಿಸಿದರೆ ಈ ದಿವ್ಯಮಂತ್ರವು, ("ಮನನಾತ್ ತ್ರಾಯತೇ ಇತಿ ಮನ್ತ್ರಃ"), (ಆಯುರಾರೋಗ್ಯಮೈಶ್ವರ್ಯಂ ಮನಃಶಾನ್ತಿಂ ಚ) ಆಯುಸ್ಸು, ಆರೋಗ್ಯ, ಐಶ್ವರ್ಯ ಹಾಗೂ ಮನಃಶಾಂತಿಯನ್ನು, (ಯಚ್ಛತಿ) ಉಂಟುಮಾಡುವುದು.
ಶ್ರೀಗಣೇಶಾಷ್ಟಕಮ್
(ಅನುಷ್ಟುಪ್ ಛಂದಃ — ಪ್ರಮಾಣೀವೃತ್ತಮ್)
ಭಜೇಮ ಶಕ್ತಿಬಾಲಕಂ ಸದಾ ವಿನಾಯಕಂ ವಿಭುಂ
ಭಜೇಮ ಶಙ್ಕರಾತ್ಮಜಂ ಗುಹಾಗ್ರಜಂ ಗಣೇಶ್ವರಮ್ ।
ಭಜೇಮ ಮೂಷವಾಹನಂ ನಮೇಮ ವಿಘ್ನನಾಶಕಂ
ವ್ರಜೇಮ ಚಾದಿಪೂಜಿತಸ್ಯ ಚಾಶ್ರಯಂ ಮುದಾವಹಮ್ ॥೧॥
ಶಕ್ತಿಬಾಲಕಮ್— ಪರಾಶಕ್ತಿಯೆನಿಸಿದ ಶಿವಪತ್ನಿ ಪಾರ್ವತಿಯ ಮಗನಾದ,
ವಿನಾಯಕಮ್— ವಿಶೇಷವಾದ ನಾಯಕನೂ, ಬೇರೆ ನಾಯಕ-ವಿರಹಿತನೂ (ಅವನಿಗಿಂತ ಮೇಲಾದ ನಾಯಕರು ಯಾರೂ ಇಲ್ಲ ಎಂಬಂಥವನು) ಆದ,
ವಿಭುಮ್— ತನ್ನ ಅವಯವಗಳನ್ನೇ ವಿಭಜಿಸಿ ಸಮಸ್ತ ಲೋಕಗಳನ್ನು ನಿರ್ಮಿಸಿದ (ವಿಶ್ವಕ್ಕೇ ಪ್ರಭುವಾದ) ಮಹಾಗಣಪತಿಯನ್ನು,
ಸದಾ ಭಜೇಮ— ಯಾವಾಗಲೂ ಭಜಿಸೋಣ.
ಶಙ್ಕರಾತ್ಮಜಮ್— ಶುಭವನ್ನು ಉಂಟುಮಾಡುವುದರಿಂದ ಶಂ-ಕರ(ಶಮ್— ಶುಭ, ಕರ— ಉಂಟುಮಾಡುವ)ನೆನಿಸಿದ ಪರಶಿವನ ಆತ್ಮಜ (ಸುತ; “ಆತ್ಮನಾ ಜಾಯತೇ ಇತಿ ಆತ್ಮಜಃ”— ತನ್ನಿಂದ ಜನಿಸುತ್ತಾನೆ; “ಆತ್ಮನಃ ಜಾಯತೇ”— ತನ್ನ ದೆಸೆಯಿಂದ, ತನ್ನಿಂದಾಗಿ, ತನ್ನ ಕಾರಣದಿಂದ ಜನಿಸಿದವನು ) ನಾದ,
ಗುಹಾಗ್ರಜಮ್— ಗುಹೆಯಲ್ಲಿ ತಪೋಧ್ಯಾನನಿರತನಾಗಿ ಗುಹನೆನಿಸಿದ ಸುಬ್ರಹ್ಮಣ್ಯನ ಅಗ್ರಜ (ಅಗ್ರ- ಮೊದಲು, ಜ- ಜನಿಸಿದ= ಅಣ್ಣ)ನಾದ,
ಗಣೇಶ್ವರಮ್— ಶಿವನ ವೀರಭದ್ರಾದಿ ಪ್ರಮಥಗಣಗಳ ಅಧಿಪತಿಯಾದ ಮಹಾಗಣಪತಿಯನ್ನು,
ಭಜೇಮ— ಸೇವಿಸೋಣ (ಅವನ ಸೇವೆ ಮಾಡೋಣ).
ಮೂಷವಾಹನಮ್— ಮೂಷಕ (ಇಲಿ) ವಾಹನನಾದ ಗಣಪನನ್ನು,
ಭಜೇಮ— ಭಜಿಸೋಣ.
ವಿಘ್ನನಾಶಕಮ್— ತನ್ನ ಭಕ್ತರ ವಿಘ್ನಗಳೆಲ್ಲವನ್ನೂ ನಾಶಮಾಡುವ ಗಣಪತಿಯನ್ನು,
ನಮೇಮ— ನಮಿಸೋಣ, ಪೂಜಿಸೋಣ.
ಚ— ಹಾಗೂ ಈ ಮೂಲಕ,
ಆದಿಪೂಜಿತಸ್ಯ ಚ— ಪ್ರಥಮಪೂಜ್ಯನಾದ ಮತ್ತು,
ಮುದಾವಹಮ್— ಸದಾ ಆನಂದಕ್ಕೆ ಆಸ್ಪದವಾಗಿರುವ ಗಣಪತಿಯ,
ಆಶ್ರಯಮ್— ಪರಮಧಾಮದಲ್ಲಿ ಆಶ್ರಯವನ್ನು,
ವ್ರಜೇಮ— ಹೊಂದೋಣ (ಪಡೆಯೋಣ).
ಭಜೇಮ ಹಸ್ತಿಶೀರ್ಷಕಂ ನಮೇಮ ಲಮ್ಬಜಾಠರಂ
ಸ್ತುವೇಮ ಸರ್ಪಸೂತ್ರಿಣಂ ಮದೇಭದೈತ್ಯಮರ್ದನಮ್ ।
ಪಠೇಮ ಮುದ್ಗಲಾಖ್ಯಕಂ ಪುರಾಣಕಂ ಚ ಸಾದರಂ
ಶ್ರಯೇಮ ಪಾರ್ವತೀಸುತಂ ಕಪಿತ್ಥಸಾರಭಕ್ಷಣಮ್ ॥೨॥
ಹಸ್ತಿಶೀರ್ಷಕಮ್— ಆನೆಯ ಮೊಗದವನಾದ ಗಣೇಶನನ್ನು,
ಭಜೇಮ— ಭಜಿಸೋಣ.
ಲಮ್ಬಜಾಠರಂ ನಮೇಮ— ಲಂಬೋದರನನ್ನು (ಡೊಳ್ಳು ಹೊಟ್ಟೆಯವನನ್ನು, ಬೃಹದುದರನನ್ನು) ನಮಿಸೋಣ.
ಮದೇಭದೈತ್ಯಮರ್ದನಮ್— ಮದಯುಕ್ತನಾಗಿದ್ದ (ಮದ+ಇಭ+ದೈತ್ಯ) ಗಜಾಸುರನನ್ನು ಕೊಂದವನಾದ (ನಮ್ಮ ಮನದ ಮದಗಜದಂಥ ದುರಹಂಕಾರಾದಿ— ಕಾಮ,ಕ್ರೋಧ,ಲೋಭ,ಮೋಹ,ಮದ,ಮಾತ್ಸರ್ಯವೆಂಬ— ಅರಿಷಡ್ವರ್ಗರೂಪೀ ದೈತ್ಯತ್ವವನ್ನು ಹೋಗಲಾಡಿಸುವ),
ಸರ್ಪಸೂತ್ರಿಣಮ್ ಸ್ತುವೇಮ— ನಾಗನನ್ನೇ ಹೊಟ್ಟೆಗೆ ಹಗ್ಗವಾಗಿ / ಆಭರಣವಾಗಿ ಧರಿಸಿದ ಗಣಪನನ್ನು ಸ್ತುತಿಸೋಣ. {ನಮ್ಮ ದುಷ್ಟತನದ ರಾಶಿಯನ್ನುಂಡು ನಾಶಮಾಡಿ ಹೊಟ್ಟೆಯು ಉಬ್ಬಿದಾಗ, ಅದು ಒಡೆಯದಂತೆ ನಾಗ(ಜ್ಞಾನ)ಸೂತ್ರನಾದ, ಜ್ಞಾನಸೂತ್ರದಿಂದ ಅಜ್ಞಾನವನ್ನು ಕಳೆದ ಗಣಪ}.
ಮುದ್ಗಲಾಖ್ಯಕಂ ಪುರಾಣಕಮ್— ಮುದ್ಗಲಮುನಿಯಿಂದ ಉಪದೇಶಿಸಲ್ಪಟ್ಟು ಮುದ್ಗಲಪುರಾಣವೆಂದೇ ಹೆಸರು ಪಡೆದ ಗಣೇಶಪುರಾಣವನ್ನು,
ಸಾದರಮ್— ಆದರಪೂರ್ವಕವಾಗಿ,
ಪಠೇಮ— ಪಠಿಸೋಣ.
ಚ— ಹಾಗೂ,
ಕಪಿತ್ಥಸಾರಭಕ್ಷಣಮ್— ಕಪಿತ್ಥಫಲದ ಸಾರಮಾತ್ರವನ್ನು ಭಕ್ಷಿಸುವ ಗಜವದನವುಳ್ಳವನಾದ,
ಪಾರ್ವತೀಸುತಮ್— ಪಾರ್ವತೀಪುತ್ರನಾದ ಗಣೇಶನನ್ನು,
ಶ್ರಯೇಮ— ಆಶ್ರಯಿಸೋಣ.
ಭುಜೇಮ ತತ್ಪ್ರಸಾದಕಂ ವರಾಪ್ಪರೂಪಭಕ್ಷ್ಯಕಂ
ಮಧೂರುವಾಸಿನಂ ಪರಂ ಪರಾತ್ಪರಂ ಪರೋದ್ಭವಮ್ ।
ಸಸಿದ್ಧಿಬುದ್ಧಿಭಾರ್ಯಕಂ ವರಾಙ್ಕುಶಪ್ರಧಾನಕಂ
ಭಜೇಮ ಪಾಶಧಾರಿಣಂ ಪುನಃ ಪುನರ್ನಮೇಮ ತಮ್ ॥೩॥
ಮಧೂರುವಾಸಿನಮ್— ಕೇರಳರಾಜ್ಯದ ಕಾಸರಗೋಡು ಜಿಲ್ಲೆಯ ಮಧೂರು ಕ್ಷೇತ್ರದಲ್ಲಿರುವ ಬಹು ಪುರಾತನವೂ ಕಾರಣಿಕವುಳ್ಳದ್ದೂ ಆದ ಗಜಪೃಷ್ಠಾಕಾರದ ಬೃಹತ್ತಾದ ಶ್ರೀಮದ್ ಅನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸಿದ್ಧಿವಿನಾಯಕರೂಪದಲ್ಲಿ ಪೂಜಿಸಲ್ಪಡುತ್ತಿರುವ ಮಹಾಗಣಪತಿಯನ್ನು,
ಭಜೇಮ— ಭಜಿಸೋಣ.
ತತ್ ಪ್ರಸಾದಕಮ್ ವರಾಪ್ಪರೂಪಭಕ್ಷ್ಯಕಮ್— ಅವನ ಸುಪ್ರಸಿದ್ಧ ಪ್ರಸಾದವಾದ ಶ್ರೇಷ್ಠವಾದ ಅಪ್ಪಕಜ್ಜಾಯವನ್ನು,
ಭುಜೇಮ— ಭುಂಜಿಸೋಣ (ಸವಿಯೋಣ).
ಪರಮ್— ಶ್ರೇಷ್ಠನಾದ,
ಪರಾತ್ಪರಮ್— ಶ್ರೇಷ್ಠತೆಗಳೆಲ್ಲದಕ್ಕಿಂತಲೂ ಶ್ರೇಷ್ಠತಮನಾದ,
ಪರೋದ್ಭವಮ್— ಆದಿಪರಾಶಕ್ತಿಯಾದ ಗಿರಿಜೆಯಿಂದ ಹುಟ್ಟಿದ,
ಸ-ಸಿದ್ಧಿ-ಬುದ್ಧಿ-ಭಾರ್ಯಕಮ್— ಸಿದ್ಧಿ-ಬುದ್ಧಿಯರೆಂಬ ಪತ್ನಿಯರ ಸಮೇತನಾದ,
ವರಾಙ್ಕುಶಪ್ರಧಾನಕಮ್— ಮನೋನಿಗ್ರಹಸೂಚಕವಾದ ಶ್ರೇಷ್ಠವಾದ ಅಂಕುಶವನ್ನು ಪ್ರಧಾನವಾಗಿ ಹೊಂದಿದ್ದು,
ಪಾಶಧಾರಿಣಮ್— ಇಂದ್ರಿಯನಿಗ್ರಹಸೂಚಕವಾದ ಪಾಶವನ್ನೂ ಆಯುಧವಾಗಿ ಧರಿಸಿರುವ,
ತಮ್— ಮಹಾಗಣಪತಿಯನ್ನು,
ಪುನಃ ಪುನಃ— ಮತ್ತೆ ಮತ್ತೆ,
ನಮೇಮ— ನಮಿಸೋಣ.
ನರಾಕೃತಿಂ ಗಜಾಕೃತಿಂ ನಿರಾಕೃತಿಂ ಪರಾಕೃತಿಂ
ಮಹಾಕೃತಿಂ ವರಾಕೃತಿಂ ಶ್ರಯೇಮ ಸುನ್ದರಾಕೃತಿಮ್ ।
ಮಹಾಗಣೇಶಮಾದರೇಣ ಬಾಲರೂಪಿಣಂ ಪ್ರಭುಂ
ವರೈಕದನ್ತಮಾಶ್ರಯೇಮ ಶುದ್ಧಬುದ್ಧಿದಾಯಕಮ್ ॥೪॥
ನರಾಕೃತಿಮ್— ಕುತ್ತಿಗೆಯಿಂದ ಕೆಳಗೆ ಮನುಷ್ಯನಂಥ ಆಕಾರ,
ಗಜಾಕೃತಿಮ್— ತಲೆಯು ಆನೆಯ ತಲೆಯಾಕಾರವುಳ್ಳ,
ನಿರಾಕೃತಿಮ್— ನಿರಾಕಾರನೂ,
ಪರಾಕೃತಿಮ್— ಶ್ರೇಷ್ಠಾಕಾರವುಳ್ಳವನೂ (ಪರಬ್ರಹ್ಮ / ಪರಾಶಕ್ತಿ ಸ್ವರೂಪನೂ),
ಮಹಾಕೃತಿಮ್— ಬೃಹತ್ತಾದ ಸ್ವರೂಪವುಳ್ಳ ಮಹಾಗಣಪತಿಸ್ವರೂಪನೂ,
ವರಾಕೃತಿಮ್ ಸುಂದರಾಕೃತಿಮ್— ಶ್ರೇಷ್ಠವಾದ, ಸುಂದರವಾದ ರೂಪವುಳ್ಳ ಗಣೇಶನನ್ನು,
ಶ್ರಯೇಮ— ಆಶ್ರಯಿಸೋಣ.
ಬಾಲರೂಪಿಣಂ ಪ್ರಭುಮ್— ಬಾಲಗಣಪತಿ ಸ್ವರೂಪಿಯಾದ ಲೋಕದ ಒಡೆಯನಾದ(“ಪ್ರಭವಃ ಪ್ರಭುಃ ಈಶ್ವರಃ”— ಎಲ್ಲರಿಗಿಂತ ಶ್ರೇಷ್ಠನಾಗಿರುವವ— ವಿಷ್ಣುಸಹಸ್ರನಾಮ; “ನಿಗ್ರಹಾನುಗ್ರಹೇ ಶಕ್ತಃ ಪ್ರಭುಃ ಇತಿ ಅಭಿಧೀಯತೇ”— ನಿಗ್ರಹಿಸಲೂ, ಅನುಗ್ರಹಿಸಲೂ ಶಕ್ತನಾದವ),
ಶುದ್ಧಬುದ್ಧಿದಾಯಕಮ್— ನಿಷ್ಕಲ್ಮಷವಾದ ಪರಿಶುದ್ಧ ಬುದ್ಧಿಪ್ರದಾಯಕನಾದ,
ವರ-ಏಕದಂತಮ್— ಶ್ರೇಷ್ಠನಾದ ಏಕದಂತನಾದ,
ಮಹಾಗಣೇಶಮ್— ಮಹಾಗಣೇಶನನ್ನು,
ಆದರೇಣ— ಪ್ರೀತಿಯಿಂದ,
ಆಶ್ರಯೇಮ— ಶರಣುಹೊಂದೋಣ.
ಯಜೇಮ ಬ್ರಹ್ಮಣಸ್ಪತಿಂ ಕವಿಂ ಕವೀನ್ದ್ರಪೂಜಿತಂ
ಹುವೇಮ ಜ್ಯೇಷ್ಠರಾಜಕಂ ಪ್ರಚಣ್ಡಪಾಪನಾಶಕಮ್ ।
ಭಜೇಮ ಶೂರ್ಪಕರ್ಣಕಂ ಪ್ರಪಞ್ಚಕಾರಣಂ ಗುರುಂ
ವಿಸರ್ಗಸರ್ಗಪಾಲನಂ ಶ್ರಯೇಮ ಚಾತ್ಮರೂಪಿಣಮ್ ॥೫॥
ಕವೀಂದ್ರಪೂಜಿತಂ ಕವಿಮ್— ಕವಿ / ಜ್ಞಾನಿ-ಶ್ರೇಷ್ಠರಿಂದ ಪೂಜಿತನಾದ ಪರಮಜ್ಞಾನಿಯಾದ,
ಬ್ರಹ್ಮಣಸ್ಪತಿಮ್— ವೇದಗಳಲ್ಲಿ ಬ್ರಹ್ಮಣಸ್ಪತಿಯೆಂದು ಸ್ತುತನಾದ ಗಣಪತಿಯನ್ನು,
ಯಜೇಮ— ಯಜ್ಞದ ಮೂಲಕ ಸೇವಿಸೋಣ. (ಸೇವೆ ಮಾಡೋಣ).
ಪ್ರಚಂಡಪಾಪನಾಶಕಮ್— ಎಂತೆಂತಹ ಘೋರಪಾತಕಗಳನ್ನೂ ನಾಶಮಾಡಬಲ್ಲ,
ಜ್ಯೇಷ್ಠರಾಜಕಮ್— ವೇದಗಳಲ್ಲಿ ಜ್ಯೇಷ್ಠರಾಜನೆಂದು ಪ್ರಶಂಸಿಸಲ್ಪಟ್ಟಿರುವ ಗಣೇಶನನ್ನು,
ಹುವೇಮ— ಹೋಮ ಹವನಾದಿಗಳಲ್ಲಿ ಹವಿಸ್ಸನ್ನು ನೀಡುವ ಮೂಲಕ ಪೂಜಿಸೋಣ.
ಪ್ರಪಂಚಕಾರಣಮ್— ಈ ವಿಶ್ವಕ್ಕೇ ಕಾರಣನಾದ,
ಗುರುಮ್— ಮಾರ್ಗದರ್ಶಕನಾದ,
ಶೂರ್ಪಕರ್ಣಕಮ್— ವೇದಾಂತಶಾಸ್ತ್ರ-ಸದ್ಗುರುವಾಕ್ಯಗಳ ಏಕಾಗ್ರಶ್ರವಣದ ಮಹತ್ತ್ವವನ್ನು ಸೂಚಿಸುವ ಮೊರದಂಥ ಅಗಲವಾದ ಕಿವಿಗಳುಳ್ಳ ಗಣಪನನ್ನು,
ಭಜೇಮ— ಭಜಿಸೋಣ.
ವಿಸರ್ಗ-ಸರ್ಗ-ಪಾಲನಮ್— ಪ್ರಳಯ-ಸೃಷ್ಟಿ-ಸ್ಥಿತಿಗಳಿಗೆ ಮೂಲನಾದ,
ಚ— ಹಾಗೂ,
ಆತ್ಮರೂಪಿಣಮ್— ಸಕಲ ಚರಾಚರಗಳ ಅಂತರಾತ್ಮರೂಪಿಯಾದ ಮಹಾಗಣಪತಿಯನ್ನು,
ಶ್ರಯೇಮ— ಶರಣು ಹೊಂದೋಣ.
ಗಕಾರಪೂರ್ವರೂಪಿಕಾ ಹ್ಯಕಾರಮಧ್ಯರೂಪಿಕಾ
ತಥಾನುಸ್ವಾರರೂಪಿಕಾ ಚ ಬಿನ್ದುರುತ್ತರೇ ತಥಾ ।
ಸುನಾದಸಂವಿಧಾನಿಕಾ ಸುಸಂಹಿತಾ ಚ ಸನ್ಧಿತಾ
ಗಣೇಶವಿದ್ಯಕಾ ಹಿ ಸಾ ಸ್ಮರೇಮ ತಾಂ ಚ ಸರ್ವದಾ ॥೬॥
“ಗಕಾರಃ ಪೂರ್ವರೂಪಮ್ | ಅಕಾರೋ ಮಧ್ಯಮರೂಪಮ್ | ಅನುಸ್ವಾರಶ್ಚಾಂತ್ಯರೂಪಮ್ | ಬಿಂದುರುತ್ತರರೂಪಮ್ | ನಾದಃ ಸಂಧಾನಮ್ | ಸಂಹಿತಾ ಸಂಧಿಃ | ಸೈಷಾ ಗಣೇಶವಿದ್ಯಾ | ಗಣಕ ಋಷಿಃ | ನಿಚೃದ್ಗಾಯತ್ರೀಚ್ಛಂದಃ | ಶ್ರೀಮನ್ಮಹಾಗಣಪತಿರ್ದೇವತಾ | ಓಂ ಗಮ್ | ಗಣಪತಯೇ ನಮಃ | ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ ||”— ಇದು ಗಣೇಶಾಥರ್ವಶೀರ್ಷೋಪನಿಷತ್ತಿನ ಭಾಗ. ಇದರದೇ ತಾತ್ಪರ್ಯವನ್ನು ಈ ಮೇಲಿನ ಶ್ಲೋಕವು ಹೇಳುತ್ತದೆ.
(ಗಕಾರಪೂರ್ವರೂಪಿಕಾ) ‘ಗ’ಕಾರವನ್ನು (ಗ್) ಆದಿಯಲ್ಲೂ, (ಹ್ಯಕಾರಮಧ್ಯರೂಪಿಕಾ) ‘ಅ’ಕಾರವನ್ನು ಮಧ್ಯದಲ್ಲೂ (ಹಿ+ಅಕಾರ— ಹ್ಯಕಾರ), (ತಥಾ) ಹಾಗೆಯೇ, (ಅನುಸ್ವಾರರೂಪಿಕಾ ಚ) ಅಂತ್ಯದಲ್ಲಿ ಅನುಸ್ವಾರವನ್ನೂ (ಂ/ಮ್), (ಬಿನ್ದುಃ ಉತ್ತರೇ ತಥಾ) ಮತ್ತೆ ಬಿಂದುವನ್ನೂ (|), (ಸುನಾದಸಂವಿಧಾನಿಕಾ) ನಾದವನ್ನು ಇವುಗಳ ಸಂಧಾನವಾ(ಪರಸ್ಪರ ಸೇರಿಸುವಿಕೆಯಾ)ಗಿಯೂ, (ಸುಸಂಹಿತಾ ಚ ಸನ್ಧಿತಾ ಸಾ) (ಗ್+ಅ+ಂ/ಮ್) ಇವುಗಳ ಸನ್ನಿಹಿತವಾದ ಸೇರುವಿಕೆ / ಸಂಹಿತೆಯು ಸಂಧಿಯಾಗಿಯೂ ಇರುವುದೇ, (ಗಣೇಶವಿದ್ಯಕಾ ಹಿ) ಪರಮರಹಸ್ಯವಾದ ಗಣೇಶವಿದ್ಯೆಯೆಂದು ಹೇಳಲ್ಪಟ್ಟಿದೆ. ಹಾಗೂ (ಚ), ಇದನ್ನು (ತಾಮ್), ಯಾವಾಗಲೂ (ಸರ್ವದಾ), ಸ್ಮರಿಸೋಣ (ಸ್ಮರೇಮ).
ವಿಶೇಷರಕ್ತವರ್ಣಿನಂ ಸುರಕ್ತವಾಸಸಂ ತಥಾ
ಸರಕ್ತಗನ್ಧಲೇಪನಂ ಸುರಕ್ತಪುಷ್ಪಪೂಜಿತಮ್ ।
ಸುಭಕ್ತಭಕ್ತಿವಶ್ಯಕಂ ಪ್ರಮುಕ್ತಿಶಕ್ತಿದಾಯಕಂ
ಭಜೇಮ ದೂರ್ವಯಾ ಚ ತಂ ಮಹಾಪ್ರಭಾಸುಸನ್ನಿಭಮ್ ॥೭॥
ವಿಶೇಷ-ರಕ್ತವರ್ಣಿನಮ್— ವಿಶೇಷವಾಗಿ ಕೆಂಪಾದ ಮೈಬಣ್ಣದಿಂದ ಕೂಡಿರುವವನಾದ,
ತಥಾ— ಅಂತೆಯೇ,
ಸು-ರಕ್ತವಾಸಸಮ್— ಉತ್ತಮವಾದ ಕೆಂಪುಬಣ್ಣದ ವಸನ (ವಸ್ತ್ರ)ವನ್ನು ಧರಿಸಿರುವವನಾದ,
ಸ-ರಕ್ತಗಂಧಲೇಪನಮ್— ರಕ್ತಚಂದನಾದಿ ಸುಗಂಧದ್ರವ್ಯಲೇಪಿತನಾದ,
ಸು-ರಕ್ತಪುಷ್ಪಪೂಜಿತಮ್— ಶ್ರೇಷ್ಠವಾದ ಕೆಂಪು ಹೂಗಳಿಂದ ಪೂಜಿತನಾದ,
ಸು-ಭಕ್ತ-ಭಕ್ತಿವಶ್ಯಕಮ್— ತನ್ನ ನಿಜಭಕ್ತರ ಭಕ್ತಿಗೆ ವಶನಾಗುವ,
ಪ್ರ-ಮುಕ್ತಿ-ಶಕ್ತಿ-ದಾಯಕಮ್— ಪ್ರಕೃಷ್ಟ (ಶ್ರೇಷ್ಠ)ವಾದ ಶಕ್ತಿ ಹಾಗೂ ಜೀವನ್ಮುಕ್ತಿಯನ್ನೂ ನೀಡುವವನಾದ,
ಚ— ಹಾಗೂ,
ಮಹಾ-ಪ್ರಭಾ-ಸು-ಸನ್ನಿಭಮ್— ಮಹಾಪ್ರಭಾವಲಯದ ಕಾಂತಿಯಿಂದ ಶೋಭಿಸುವವನಾದ,
ತಮ್— ಆ ಗಣಾಧಿಪನನ್ನು,
ದೂರ್ವಯಾ— ಅವನಿಗತಿಪ್ರಿಯವಾದ ಗರಿಕೆಹುಲ್ಲಿನಿಂದ,
ಭಜೇಮ— (ಭಜ ಸೇವಾಯಾಮ್ ಧಾತು) ಸೇವೆ ಮಾಡೋಣ.
ಅವತ್ವನನ್ತರೂಪಕೋಽಪಿ ಸರ್ವತೋಽಖಿಲಂ ಜಗತ್
ಪ್ರಪಞ್ಚನಾಶಭೀಷಣೋಽಪಿ ಸಜ್ಜನಾನ್ ಸುರಕ್ಷತು ।
ಚತುರ್ಥಿಜಾತಪೂಜಿತೋಽಪಿ ಸರ್ವದಾಽಪಿ ಪಾತು ನೋ
ವಿಶೇಷದೈನ್ಯಸಂಯುತಾನವತ್ವಶೇಷಪಾಠಕಾನ್ ॥೮॥
ಅನಂತರೂಪಕಃ— ಅಂತ್ಯವಿಲ್ಲದಷ್ಟು ರೂಪವುಳ್ಳವನಾದ ಗಣಪತಿಯು,
ಅಖಿಲಂ ಜಗತ್— ಇಡೀ ಜಗತ್ತನ್ನು,
ಸರ್ವತಃ ಅಪಿ— ಎಲ್ಲೆಡೆಯಿಂದಲೂ,
ಅವತು— ರಕ್ಷಿಸಲಿ.
ಪ್ರಪಂಚನಾಶಭೀಷಣಃ ಅಪಿ— ಪ್ರಪಂಚವನ್ನೇ ನಾಶಮಾಡಬಲ್ಲವನಾದರೂ,
ಸಜ್ಜನಾನ್— ಸಜ್ಜನರನ್ನು,
ಸುರಕ್ಷತು— ಚೆನ್ನಾಗಿ ರಕ್ಷಿಸಲಿ.
ಚತುರ್ಥಿಜಾತ-ಪೂಜಿತಃ ಅಪಿ— ಭಾದ್ರಪದಶುಕ್ಲ ಚತುರ್ಥಿಯಂದು ಹುಟ್ಟಿದವನೆಂದು ಅವನು ಒಂದು ವೇಳೆ ಆ ದಿನ ಮಾತ್ರ ವಿಶೇಷವಾಗಿ ಪೂಜಿಸಲ್ಪಟ್ಟರೂ,
ಸರ್ವದಾ ಅಪಿ— ಯಾವತ್ತೂ ಕೂಡ,
ನಃ— (ಅಸ್ಮಾನ್) ನಮ್ಮನ್ನು,
ಪಾತು— ಪಾಲಿಸಲಿ.
ವಿಶೇಷದೈನ್ಯಸಂಯುತಾನ್— ಅತಿಯಾದ ದೀನರಾದ,
ಅ-ಶೇಷಪಾಠಕಾನ್— ಈ ಗಣೇಶಾಷ್ಟಕವನ್ನು ಪೂರ್ಣವಾಗಿ, ಭಕ್ತಿಯಿಂದ ನಿತ್ಯವೂ ಪಠಿಸುವಂಥ ಎಲ್ಲರನ್ನೂ,
ಅವತು— ಸಲಹಲಿ.
ಆತ್ಮವಿದ್ಯಾಭುಜಙ್ಗಮ್
(ಭುಜಙ್ಗಪ್ರಯಾತವೃತ್ತಮ್)
ಮಹಾಮೇರುತುಲ್ಯಾ ಸುವಿದ್ಯಾಸು ರತ್ನಂ |
ವರಾ ಜ್ಞಾನಕೋಶೋ ಜಗದ್ಗುರ್ವನುಜ್ಞಾ ||
ಸುಧಾರೂಪಿಣೀ ದು:ಖಹಾsऽನನ್ದದಾತ್ರೀ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೧||
(ಮಹಾಮೇರುತುಲ್ಯಾ) ಬೃಹತ್ತಮವಾದ ಮೇರುಗಿರಿಗೆ ಸಮನಾದ ಮಹತ್ತ್ವವುಳ್ಳ, (ಸುವಿದ್ಯಾಸು ರತ್ನಂ) ಸದ್ವಿದ್ಯೆಗಳಲ್ಲಿ ರತ್ನಪ್ರಾಯವಾದ, (ವರಾ ಜ್ಞಾನಕೋಶಃ) ಶ್ರೇಷ್ಠವಾದ ಜ್ಞಾನಕೋಶವಾದ, (ಸುಧಾರೂಪಿಣೀ) ಅಮೃತಸ್ವರೂಪವಾದ, (ದುಃಖಹಾ) ದುಃಖನಾಶಕವೂ, (ಆನನ್ದದಾತ್ರೀ) ಆನಂದದಾಯಕವೂ ಆದ, (ಆತ್ಮವಿದ್ಯಾ) ಆತ್ಮವಿದ್ಯೆಯು, (ನೃಣಾ) ಮನುಜನಾದವನಿಂದ, (ನಿತ್ಯಸೇವ್ಯಾ) ನಿತ್ಯವೂ ಅನುಸಂಧಾನಮಾಡಲ್ಪಡಬೇಕಾದುದಾಗಿ, (ಚಕಾಸ್ತಿ) ಪ್ರಕಾಶಿಸುತ್ತದೆ ಎಂಬುದು, (ಜಗದ್ಗುರು-ಅನುಜ್ಞಾ) ಸಕಲ ಜಗದ್ಗುರುಗಳ ಅಪ್ಪಣೆಯಾಗಿರುವುದು.
ಅಖಣ್ಡಂ ನ ಭೇದ್ಯಂ ಸದಾನನ್ದರೂಪಂ |
ಪರಂ ಶಕ್ತಿರೂಪಂ ಜಗಚ್ಚಕ್ರಮೂಲಮ್ ||
ಸ್ಥಿತಂ ಸರ್ವಭೂತೇಷ್ವನಾದ್ಯಾತ್ಮವಾಚ್ಯಂ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೨||
(ಅಖಣ್ಡಂ) ಆತ್ಮವು ತುಂಡಾಗದ್ದು, (ನ ಭೇದ್ಯಂ) ಭೇದಿಸಲಾಗದ್ದು, (ಸದಾನನ್ದರೂಪಂ) ಯಾವಾಗಲೂ ಆನಂದಸ್ವರೂಪವಾದದ್ದು, (ಪರಂ ಶಕ್ತಿರೂಪಂ) ಪರಾಶಕ್ತಿಸ್ವರೂಪಿಯು, (ಜಗತ್-ಚಕ್ರಮೂಲಮ್) ಸೃಷ್ಟಿಚಕ್ರದ ಮೂಲವು. (ಸರ್ವಭೂತೇಷು ಸ್ಥಿತಂ) ಸಕಲ ಚರಾಚರಗಳಲ್ಲಿ ನೆಲೆಸಿರುವ, (ಅನಾದಿ-ಆತ್ಮ-ವಾಚ್ಯಂ) ಆದಿ-ಅಂತ್ಯಗಳಿಲ್ಲದ ಆತ್ಮನನ್ನು ಚಿಂತಿಸಬೇಕು. ಇಂತಹ, (ನೃಣಾ) ನರನಿಂದ, (ನಿತ್ಯಸೇವ್ಯಾ) ನಿತ್ಯವೂ ಸೇವಿಸಲ್ಪಡಲು ಯೋಗ್ಯವಾದ, (ಆತ್ಮವಿದ್ಯಾ) ಆತ್ಮವಿದ್ಯೆಯು, (ಚಕಾಸ್ತಿ) ಸ್ವಪ್ರಕಾಶದಿಂದಲೇ ಬೆಳಗುತ್ತದೆ.
ಅರೂಪಂ ವಿವರ್ಣಂ ನ ವಾ ಗನ್ಧಯುಕ್ತಂ |
ಚಿರಂ ಶಾನ್ತಿರೂಪಞ್ಚಿದಾತ್ಮಾನಮೇನಮ್ ||
ಸದಾ ಯೋಗಿಭಿರ್ಧ್ಯಾನಗಮ್ಯಂ ವದಂತಿ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೩||
(ಅರೂಪಂ) ಆತ್ಮನು ರೂಪರಹಿತನು, ವಿವರ್ಣಂ) ಬಣ್ಣವಿಲ್ಲದವನು, (ಗನ್ಧಯುಕ್ತಂ ವಾ ನ) ಪರಿಮಳವಿರುವವನೂ ಅಲ್ಲದವನು, (ಚಿರಂ ಶಾನ್ತಿರೂಪಂ) ಚಿರವಾದ ಶಾಂತಿರೂಪನು. (ಏನಂ ಚಿದಾತ್ಮಾನಂ)ಇಂತಹ ಚಿತ್ / ಜ್ಞಾನಪ್ರಕಾಶ ಸ್ವರೂಪಿಯಾದ ಆತ್ಮನನ್ನು, (ಸದಾ ಯೋಗಿಭಿಃ) ಸದಾ ಯೋಗಿಗಳಿಂದ, (ಧ್ಯಾನಗಮ್ಯಂ ವದನ್ತಿ) ಧ್ಯಾನದಲ್ಲಿ ತಿಳಿಯಲ್ಪಡುವವನೆಂದು ಕರೆಯುತ್ತಾರೆ. ಅಂತಹ ಆತ್ಮನ ಕುರಿತಾಗಿ (ನೃಣಾ ನಿತ್ಯಸೇವ್ಯಾ) ನರನಾದವನು ನಿತ್ಯವೂ ಚಿಂತಿಸಬೇಕು. ಇಂತಹ (ಆತ್ಮವಿದ್ಯಾ ಚಕಾಸ್ತಿ) ಆತ್ಮವಿದ್ಯಾಪ್ರಕಾಶವು ಸದಾ ಬೆಳಗುತ್ತದೆ.
ಮುದಾ ಸೃಷ್ಟಿಸಂಹಾರಕಾರ್ಯಂ ಸುರಕ್ಷಾ |
ಸದಾ ಯೇನ ಕಾರ್ಯಂ ತದೇವಾತ್ಮತತ್ತ್ವಮ್ ||
ಶರೀರೇಷು ವ್ಯಾಪ್ತಂ ತದೇವೇತಿ ಜಾನನ್ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೪||
(ಮುದಾ) ಹರ್ಷದಿಂದ, (ಸೃಷ್ಟಿ-ಸಂಹಾರಕಾರ್ಯಂ ಸುರಕ್ಷಾ) ಸೃಷ್ಟಿ, ಸುರಕ್ಷೆ ಹಾಗೂ ಸಂಹಾರಕಾರ್ಯಗಳು, (ಸದಾ ಯೇನ ಕಾರ್ಯಂ) ಯಾವಾಗಲೂ ಯಾವುದರಿಂದ ಮಾಡಲ್ಪಡಬೇಕೋ, (ತದ್ ಏವ ಆತ್ಮತತ್ತ್ವಮ್) ಅದೇ ಆತ್ಮತತ್ತ್ವವು. (ಶರೀರೇಷು ವ್ಯಾಪ್ತಂ) ಶರೀರಗಳಲ್ಲೆಲ್ಲ ವ್ಯಾಪಿಸಿರುವ ಪರತತ್ತ್ವವು, (ತದ್ ಏವ ಇತಿ ಜಾನನ್) ಅದೇ ಆಗಿದೆಯೆಂದು ತಿಳಿದು, (ನೃಣಾ ನಿತ್ಯಸೇವ್ಯಾ) ಮನುಷ್ಯನಾದವನಿಂದ ನಿತ್ಯವೂ ಸೇವನೀಯವಾಗಿರುವುದು. (ಆತ್ಮವಿದ್ಯಾ ಚಕಾಸ್ತಿ) ಅಂತಹ ಆತ್ಮತತ್ತ್ವವು ಸ್ವಪ್ರಕಾಶದಿಂದ ಬೆಳಗುತ್ತದೆ.
ಸದಾ ನಿರ್ವಿಕಾರಂ ಪರಾಶಕ್ತಿರೂಪಂ |
ಧಿಯಾ ನಿತ್ಯಚಿನ್ತ್ಯಂ ಮನೋನಿಗ್ರಹೇಣ ||
ಪರಂ ಕಾಮದಂ ವಾಞ್ಛಿತಂ ಚೇತಿ ಮತ್ವಾ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೫||
(ಸದಾ) ಎಂದೆಂದಿಗೂ, (ನಿರ್ವಿಕಾರಂ) ವಿಕಾರವನ್ನು ಹೊಂದದ, (ಪರಾಶಕ್ತಿರೂಪಂ) ಪರಾಶಕ್ತಿರೂಪವಾದ ಆತ್ಮತತ್ತ್ವವನ್ನು, (ವಾಂಛಿತಂ ಕಾಮದಂ) ಬಯಕೆಗಳನ್ನೆಲ್ಲ ಈಡೇರಿಸಬಲ್ಲದ್ದೆಂದೂ, (ಪರಮ್ ಇತಿ) ಪರಮಾರ್ಥವಾದ ಮೋಕ್ಷಸ್ವರೂಪಜ್ಞಾನವನ್ನೂ ಉಂಟುಮಾಡಬಲ್ಲದ್ದೆಂದೂ, (ಮತ್ವಾ) ತಿಳಿದು, (ಮನೋನಿಗ್ರಹೇಣ) ಮನಸ್ಸನ್ನು ನಿಗ್ರಹಿಸಿ, (ಧಿಯಾ ನಿತ್ಯಚಿಂತ್ಯಂ) ಬುದ್ಧಿಯಿಂದ ಸದಾ ಚಿಂತಿಸಲ್ಪಡತಕ್ಕದ್ದು. (ನೃಣಾ ನಿತ್ಯಸೇವ್ಯಾ) ನರರಿಂದ ನಿತ್ಯಸೇವ್ಯವಾದ, (ಆತ್ಮವಿದ್ಯಾ) ಇಂತಹ ಆತ್ಮವಿದ್ಯೆಯು ತಾನೇ ತಾನಾಗಿ "ಅಧ್ಯಾತ್ಮವಿದ್ಯಾ ವಿದ್ಯಾನಾಮ್ " ಎಂಬ ಗೀತಾಚಾರ್ಯನ ವಾಣಿಯಂತೆ, (ಚಕಾಸ್ತಿ) ಪ್ರಕಾಶಿಸುತ್ತದೆ.
ಗುರುರ್ವಿಷ್ಣುರೂಪೋ ಸದಾ ಶಂಭುರೂಪೋ |
ವಿರಿಞ್ಚ್ಯಾದಿವಾಚ್ಯೋsಲ್ಲಬುದ್ಧಾರ್ಹನಿತ್ಥಮ್ ||
ಪರಃ ಸಿಖ್ಖದೇವಶ್ಚ ಜೀಸೇತಿ ಭಾವ್ಯೋ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೬||
(ಗುರುಃ) ಗುರುಸ್ವರೂಪಿಯೂ, (ವಿಷ್ಣುರೂಪಃ) ವಿಷ್ಣುವೂ, (ಸದಾ ಶಂಭುರೂಪಃ) ಯಾವಾಗಲೂ ಮಂಗಲಸ್ವರೂಪನಾದ ಶಿವನೂ, (ವಿರಿಂಚಿ-ಆದಿ ವಾಚ್ಯಂ) ಬ್ರಹ್ಮನೆಂದು ಕರೆಯಲ್ಪಡುವವನೂ, (ಅಲ್ಲ-ಬುದ್ಧ-ಅರ್ಹನ್ ಇತ್ಥಂ) ಅಲ್ಲಾ-ಬುದ್ಧ-ಅರ್ಹನ್ (ಅರಿಹಂತ) ಎಂಬುದಾಗಿ ಪೂಜಿಸಲ್ಪಡುವವನೂ, (ಪರಃ ಸಿಕ್ಖದೇವಃ ಚ) ಪರಾತ್ಪರನೂ " ಸತ್ ಶ್ರೀ ಅಕಾಲ್ " ಎನ್ನಲ್ಪಡುವ ಸಿಖ್ಖರ ದೇವನೂ, (ಜೀಸೇತಿ ಭಾವ್ಯಃ) ಜೀಸಸ್ / ಏಸುವೆಂದು ಭಾವಿಸಲ್ಪಡುವವನೂ— ಈ ಎಲ್ಲರೂ ನಮ್ಮೆಲ್ಲರಲ್ಲಿ ವ್ಯಾಪ್ತವಾಗಿರುವ ಏಕಮೇವಾದ್ವೈತವಾದ ಆತ್ಮತತ್ತ್ವವೇ ಆಗಿರುವನು. ನಾನಾ ಹೆಸರು, ರೂಪಗಳಿಂದ ಪೂಜ್ಯನಾಗಿರುವನು. (ಆತ್ಮವಿದ್ಯಾ) ಅಂತಹ ಪರತತ್ತ್ವವು, (ನೃಣಾ) ನರನಿಂದ, (ನಿತ್ಯಸೇವ್ಯಾ) ಸದಾ ಚಿಂತನೀಯವಾಗಿ, (ಚಕಾಸ್ತಿ) ಬೆಳಗುತ್ತದೆ.
ಧೃತಂ ಯೇನ ಲೋಕಂ ಹಿ ವಿಶ್ವಾತ್ಮಭಾವೇ |
ಚರಾನ್ನಿಶ್ಚರಾನ್ವ್ಯಾಪ್ಯ ತೇಷು ಪ್ರವಿಶ್ಯ ||
ದ್ವಿಧಾsಭೂತ್ತದೇಕೋ ರಸೋ ರಞ್ಜನಾರ್ಥಂ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೭||
(ಏಕಃ, ರಸಃ) " ರಸೋ ವೈ ಸಃ " ಎಂಬ ಶ್ರುತಿಯಂತೆ ಆ ಏಕರಸವಾಗಿದ್ದ ಪರತತ್ತ್ವ / ಪರಬ್ರಹ್ಮವಸ್ತುವು, (ರಂಜನಾರ್ಥಂ) ಕ್ರೀಡಾವಿನೋದಕ್ಕಾಗಿಯೋ ಮನೋರಂಜನೆಗಾಗಿಯೋ ಎಂಬಂತೆ, (ದ್ವಿಧಾ ಅಭೂತ್) (ಸತ್ + ತ್ಯತ್ ಎಂಬ / ಸ್ತ್ರೀ + ಪುರುಷ ಎಂಬ) ಮಿಥುನವಾ (ಎರಡಾ) ಯಿತು. (ಚರಾನ್ ನಿಶ್ಚರಾನ್) ಬಳಿಕ ಚರಾಚರಗಳ ಸೃಷ್ಟಿಯಾಯಿತು. (ವ್ಯಾಪ್ಯ, ತೇಷಿ ಪ್ರವಿಶ್ಯ) ಅದು ಅವನ್ನೆಲ್ಲ ಕಣ ಕಣಗಳಲ್ಲೂ ಪ್ರವೇಶಿಸಿ, ಅವುಗಳಲ್ಲೆಲ್ಲ ವ್ಯಾಪಿಸಿ, (ವಿಶ್ವಾತ್ಮಭಾವೇ) ವಿಶ್ವವೆಲ್ಲವೂ ಯಥಾರ್ಥವಾಗಿ ಏಕಮೇವ ಬ್ರಹ್ಮಾತ್ಮವೇ ಆಗಿದ್ದರೂ (ಯೇನ ಲೋಕಂ ಧೃತಮ್) ಸೃಷ್ಟಿವೈವಿಧ್ಯವಾಗಿ ತೋರಿಕೊಂಡು, ಅದನ್ನೆಲ್ಲ ಹಿಡಿದಿಟ್ಟು ಆಧಾರವಾಗಿದ್ದು ತನ್ನ ವಿರಾಡ್ರೂಪೀಶರೀರವೋ ಎಂಬಂತೆ ಧರಿಸಿರುವುದು. (ಆತ್ಮವಿದ್ಯಾ) ಇಂತಹ ಆತ್ಮವಿದ್ಯೆಯು, (ನೃಣಾ) ಮಾನವಜನ್ಮವನ್ನು ಪಡೆದವರೆಲ್ಲರಿಂದಲೂ, (ನಿತ್ಯಸೇವ್ಯಾ) ನಿತ್ಯಾನುಸಂಧೇಯವಾದುದಾಗಿ, (ಚಕಾಸ್ತಿ) ಪ್ರಕಾಶಿಸುತ್ತದೆ.
ಪರಂ ನಿರ್ಗುಣಂ ತಚ್ಚಿದಾನನ್ದರೂಪಂ |
ಹೃದನ್ತ:ಸ್ಫುರಜ್ಜ್ಯೋತಿರೂಪಂ ಸ್ವದೀಪ್ತಮ್ ||
ತರೇದ್ಯದ್ವಿದಿತ್ವಾನೃತಂ ವಿಶ್ವಮಾಯಾಂ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೮||
(ತತ್ ಪರಂ) ಅದು ಶ್ರೇಷ್ಠವೂ, (ನಿರ್ಗುಣಂ) ನಿರ್ಗುಣವೂ (ಸತ್ತ್ವ-ರಜಸ್-ತಮಸ್ ಎಂಬ ತ್ರಿಗುಣಾತೀತವೂ), (ಚಿದಾನಂದರೂಪಂ) ಸತ್ (ಸದಾ ಇರುವುದೂ) ಚಿತ್ (ಜ್ಞಾನ / ಜ್ಯೋತಿ ಸ್ವರೂಪವೂ) ಆನಂದಸ್ವರೂಪವಾದದ್ದೂ, (ಹೃದಂತಃಸ್ಫುರತ್ ಜ್ಯೋತಿರೂಪಂ ಸ್ವದೀಪ್ತಮ್) ನಮ್ಮ ಹೃದಯಕುಹರದೊಳಗೆ ಸ್ಫುರಿಸುತ್ತಿರುವ (ಬೆಳಗುತ್ತಿರುವ) ಸ್ವಯಂ ಪ್ರಕಾಶವುಳ್ಳ ಅಂತರಾತ್ಮಜ್ಯೋತಿರೂಪವಾದುದೂ ಆಗಿರುವುದೆಂಬ, (ಯದ್) ಯಾವ ಈ ಆತ್ಮವಿದ್ಯೆಯನ್ನು (ವಿದಿತ್ವಾ) ಅರಿತು ಅನುಭವಿಸಿ, (ಅನೃತಂ ವಿಶ್ವಮಾಯಾಂ) "ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ " ಎಂಬಂತೆ ಈ ಲೋಕನಾಟಕದ ಮಾಯೆಯನ್ನು, (ತರೇತ್) ಮೀರಬೇಕು; ಸುಖ-ದುಃಖಗಳನ್ನು ಮೀರಿ ವಿಶ್ವಾತ್ಮವೇ ನಾವಾಗಬೇಕು. (ಆತ್ಮವಿದ್ಯಾ) ಇದನ್ನು ಬೋಧಿಸುವ ಆತ್ಮವಿದ್ಯೆಯು, (ನೃಣಾ ನಿತ್ಯಸೇವ್ಯಾ) ವಿವೇಕವಿಶಿಷ್ಟರಾದ ಮನುಜರಿಗೆ ನಿತ್ಯವೂ ಅನುಸಂಧೇಯವಾದುದು. (ಚಕಾಸ್ತಿ) ಇದು ಸದಾ ತಾನೇ ತಾನಾಗಿ ಪ್ರಕಾಶಿಸುತ್ತಿರುವುದು.
ಅಶೇಷೇಣ ಪೂರ್ಣಂ ವಿಶೇಷೇಣ ಮೇಯಂ |
ಮಹಾಶೇಷವತ್ಕುಣ್ಡಲಿನ್ಯಾಂ ಸುಷುಪ್ತಮ್ ||
ಇಡಾಪಿಂಗಳಾನಾಡಿಮಧ್ಯೇ ಸ್ಥಿತಂ ತತ್ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೯||
(ಅಶೇಷೇಣ) ಜಗತ್ತಿನಲ್ಲಿ ಯಾವ ಸೂಕ್ಷ್ಮತಮ ಕಣವನ್ನೂ ಬಿಡದೆ ನಿಶ್ಶೇಷವಾಗಿ ಸಮಸ್ತಸೃಷ್ಟಿಯಲ್ಲೇ (ಪೂರ್ಣಂ) ತುಂಬಿರುವ, (ವಿಶೇಷೇಣ ಮೇಯಂ) ಆದರೂ ಅನಾದಿಯಾದ ಮಾಯಾವಿಲಾಸದಿಂದಲೂ ಅವಿದ್ಯಾ-ಕಾಮ-ಕರ್ಮಾದಿ ಸಂಚಯರೂಪೀ ಭ್ರಮೆಯಿಂದಲೂ (ಅಜ್ಞಾನದಿಂದಲೂ) ದುರ್ವಿಜ್ಞೇಯವಾದ (ಅರಿಯಲು ಕಷ್ಟಸಾಧ್ಯವಾದ) ಈ ಪರಬ್ರಹ್ಮವಸ್ತುವನ್ನು ವಿಶೇಷವಾದ ಸಾಧನಚತುಷ್ಟಯಸಂಪನ್ನತೆಯಿಂದಲೇ (ನಿತ್ಯಾನಿತ್ಯವಿವೇಕ, ಇಹಾಮುತ್ರಾರ್ಥಭೋಗವಿರಾಗ, ಶಮದಮಾದಿಷಟ್ಸಂಪತ್ತಿ ಹಾಗೂ ಮುಮುಕ್ಷುತ್ವಗಳಿಂದಲೇ ಅಥವಾ ಸರಳವಾಗಿ ವಿವೇಕ, ವೈರಾಗ್ಯ, ಇಂದ್ರಿಯ-ಮನೋನಿಗ್ರಹ ಹಾಗೂ ಮೋಕ್ಷದ ತೀವ್ರಹಂಬಲಗಳಿಂದಲೇ) ಅರಿಯಬೇಕಾಗಿರುವುದು. (ಕುಂಡಲಿನ್ಯಾಂ ಮಹಾಶೇಷವತ್ ಸುಷುಪ್ತಮ್) ಯೋಗಪರಿಭಾಷೆಯಲ್ಲಿ ಈ ಆತ್ಮಶಕ್ತಿಯು ಸರ್ಪರೂಪೀ ಕುಂಡಲಿನಿಯಾಗಿ ಕೆಳಗಿನ ಚಕ್ರವಾದ ಮೂಲಾಧಾರದಲ್ಲಿ ಸುಪ್ತವಾಗಿರುತ್ತದೆ. (ಇಡಾ-ಪಿಂಗಳಾ-ನಾಡಿಮಧ್ಯೇ ಸ್ಥಿತಂ ತತ್)ಲೌಕಿಕವ್ಯವಹಾರಗಳಿಗಾಗಿ ಇಡಾ-ಪಿಂಗಳಾ ಎಂಬ ಎಡ ಬಲಗಳ ನಾಡಿಗಳಲ್ಲಿ ಪ್ರವರ್ತಿಸುತ್ತಿರುವ ಇದನ್ನು ಜಾಗೃತಗೊಳಿಸಿ ಬೆನ್ನಹುರಿಯ ನಡುವಿನ ಸುಷುಮ್ನಾನಾಡಿಯ ಮೂಲಕ ಹಂತಹಂತವಾಗಿ ಮೂಲಾಧಾರ (ಗುದ-ಲಿಂಗಗಳ ಮಧ್ಯೆ), ಸ್ವಾಧಿಷ್ಠಾನ (ಲಿಂಗ), ಮಣಿಪೂರ(ನಾಭಿ), ಅನಾಹತ(ಹೃದಯ), ವಿಶುದ್ಧ(ಕಂಠ), ಆಜ್ಞಾ(ಭ್ರೂಮಧ್ಯ)— ಎಂಬೀ ಷಟ್ ಚಕ್ರಗಳನ್ನು ದಾಟಿಸಿ, ಸಹಸ್ರಾರಕ್ಕೇ (ನೆತ್ತಿಗೇ)ರುವ ಸಾಧನೆಯ ಮೂಲಕ ಮುಕ್ತರಾಗಬಹುದು. (ಆತ್ಮವಿದ್ಯಾ) ಇಂತಹ ವಿಚಾರಗಳುಳ್ಳ ಆತ್ಮವಿದ್ಯೆಯು, (ನೃಣಾ ನಿತ್ಯಸೇವ್ಯಾ) ಸದಾ ಮಾನವರಿಂದ ಅನುಸಂಧೇಯವಾಗಿದ್ದು, (ಚಕಾಸ್ತಿ) ಬೆಳಗುತ್ತಿರುವುದು.
ಘಟಾಕಾಶರೂಪೇ ಮಹಾಕಾಶರೂಪೇ |
ಸ್ಫುರದ್ವಿಶ್ವರೂಪೋऽನ್ತರಾತ್ಮಸ್ವರೂಪಃ ||
ರಸೋ ವೈ ಸ್ವಯಂದೀಪ್ತಚಿದ್ರೂಪಧಾರೀ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೧೦||
(ವಿಶ್ವರೂಪಃ) ಸಮಸ್ತ ವಿಶ್ವರೂಪವಾಗಿಯೂ, (ಅಂತರಾತ್ಮಸ್ವರೂಪಃ) ಸರ್ವರ ಅಂತರಾತ್ಮಸ್ವರೂಪವಾಗಿಯೂ ಇರುವ ಬ್ರಹ್ಮಾತ್ಮತತ್ತ್ವವು, (ಮಹಾಕಾಶರೂಪೇ) ಒಂದೇ ಆಗಿರುವ ಆಕಾಶವು ತೋರುತ್ತಿರುವ ಹೊರಗಿನ ಮಹಾಕಾಶರೂಪದಲ್ಲೂ, (ಘಟಾಕಾಶರೂಪೇ) ಪಾತ್ರೆಯೊಳಗಿನ ಘಟಾಕಾಶರೂಪದಲ್ಲೂ ಬೇರೆ ಬೇರೆ ಯಾಗಿ ತೋರುವಂತೆ, (ಸ್ಫುರತ್) ನಮ್ಮ ಒಳಹೊರಗನ್ನೆಲ್ಲ ಬೆಳಗುತ್ತಿರುವುದು ("ಅನ್ತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ"— ನಾರಾಯಣಸೂಕ್ತ, ತೈತ್ತಿರೀಯಕೃಷ್ಣಯಜುರ್ವೇದಸಂಹಿತಾ). (ರಸಃ, ವೈ) ಆ ಪರಮಾತ್ಮನು ರಸಸ್ವರೂಪಿಯು / ಸರ್ವಸಾರಸ್ವರೂಪಿಯು ("ರಸೋ ವೈ ಸಃ"— ತೈತ್ತಿರೀಯೋಪನಿಷತ್). (ಸ್ವಯಂದೀಪ್ತ-ಚಿದ್ರೂಪಧಾರೀ)ಆತನು ಸ್ವಯಂಪ್ರಭಾಸ್ವರೂಪನು, ಚಿದ್ರೂಪನು / ಜ್ಞಾನ-ಚೈತನ್ಯಾತ್ಮಕನು. (ಆತ್ಮವಿದ್ಯಾ) ಇಂತಹ ಆತ್ಮವಿದ್ಯೆಯು, (ನೃಣಾ) ನರರಿಂದ, (ನಿತ್ಯಸೇವ್ಯಾ) ನಿತ್ಯವೂ ಚಿಂತನೀಯವಾಗಿ, (ಚಕಾಸ್ತಿ) ಬೆಳಗುತ್ತಿರುವುದು.
ನ ತು ದ್ವೈತರೂಪಂ ನ ಚಾದ್ವೈತರೂಪಂ |
ವಿಶಿಷ್ಟಂ ಚ ತನ್ನೇತಿ ಚಾದ್ವೈತರೂಪಮ್ ||
ನ ತಚ್ಛಕ್ತಿವೈಶಿಷ್ಟ್ಯಮದ್ವೈತರೂಪಂ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೧೧||
(ತತ್ ದ್ವೈತರೂಪಂ ನ ತು) ಅಂತಹ ಪರಮಾತ್ಮತತ್ತ್ವವು ಎರಡಾಗಿಲ್ಲ / ಭೇದಾತ್ಮಕವಾಗಿಲ್ಲ / ದ್ವೈತರೂಪವಾಗಿಲ್ಲ; (ನ ಚ ಅದ್ವೈತರೂಪಂ) ಒಂದಾಗಿಯೂ ತೋರುವುದಿಲ್ಲ / ಅಭೇದಾತ್ಮಕವಾಗಿಯೂ ತೋರದು / ಅದ್ವೈತವೆಂಬಂತೆಯೂ ಇಲ್ಲ; (ಚ, ತತ್ ವಿಶಿಷ್ಟಮ್, ಅದ್ವೈತರೂಪಂ ನ ಇತಿ) ಅದು ವಿಶಿಷ್ಟಾದ್ವೈತಪ್ರತಿಪಾದ್ಯವಾಗಿ ಸರ್ವರಿಗಿಂತ ಭಿನ್ನವಾಗಿಯೂ ವಿಶಿಷ್ಟವಾಗಿಯೂ ಪ್ರತ್ಯೇಕವಾಗಿಯೂ ಇಲ್ಲ; (ತತ್) ಇದು, (ಶಕ್ತಿವೈಶಿಷ್ಟ್ಯಮ್ ಅದ್ವೈತರೂಪಂ ನ) ಶಕ್ತಿವಿಶಿಷ್ಟಾದ್ವೈತಪ್ರತಿಪಾದ್ಯವಸ್ತುವೂ ಅಲ್ಲ. (ಆತ್ಮವಿದ್ಯಾ) ಇಂತಹ ಯಾವುದಕ್ಕೂ ಸಿಗದ ಪರತತ್ತ್ವದ ಕುರಿತಾದ ಆತ್ಮವಿದ್ಯೆಯು, (ನೃಣಾ ನಿತ್ಯಸೇವ್ಯಾ ಚಕಾಸ್ತಿ) ಮಾನವರಿಗೆ ಸದಾ ಧ್ಯೇಯವಾಗಿ ಪ್ರಕಾಶಿಸುತ್ತಿರುವುದು.
ನ ಸಿದ್ಧಾನ್ತಗಮ್ಯಾ ನ ತರ್ಕೇಣ ಸಾಧ್ಯಾ |
ನ ಪುಣ್ಯಾದವಾಪ್ಯಾ ನ ತು ಜ್ಞಾನಗಮ್ಯಾ ||
ಗುರೋರ್ದೃಷ್ಟಿಮಾತ್ರೇಣ ಧೀರಾವಬೋಧ್ಯಾ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೧೨||
(ಸಿದ್ಧಾಂತಗಮ್ಯಾ ನ) ದ್ವೈತ, ಅದ್ವೈತಾದಿ ಯಾವುದೇ ಸಿದ್ಧಾಂತಗಳಿಂದ ತಲುಪಲಾಗದ, (ತರ್ಕೇಣ ಸಾಧ್ಯಾ ನ) ತರ್ಕಾದಿಗಳಿಂದಲೂ ತರ್ಕಿಸಲಾಗದ, (ಪುಣ್ಯಾತ್, ಅವಾಪ್ಯಾ ನ, ನ ತು ಜ್ಞಾನಗಮ್ಯಾ) ಪುಣ್ಯದಿಂದಲಾಗಲೀ ಜ್ಞಾನದಿಂದಲಾಗಲೀ ಇಂಥದ್ದೆಂದು ಅರಿಯಲಾಗದ, (ಗುರೋಃ ದೃಷ್ಟಿಮಾತ್ರೇಣ) ಕೇವಲ ಸದ್ಗುರುವಿನ ಕೃಪಾದೃಷ್ಟಿಮಾತ್ರದಿಂದಲೇ, (ಧೀರ-ಅವಬೋಧ್ಯಾ) ಧೀರರಾದವರಿಗೆ ಮಾತ್ರ ಅನುಭವಕ್ಕೆ ಬರಬಹುದಾದ, (ಆತ್ಮವಿದ್ಯಾ) ಆತ್ಮವಿದ್ಯೆಯು, (ನೃಣಾ ನಿತ್ಯಸೇವ್ಯಾ ಚಕಾಸ್ತಿ) ಮನುಜರಿಂದ ನಿತ್ಯವೂ ಧ್ಯೇಯವಾಗಿದ್ದು ಪ್ರಕಾಶಿಸುತ್ತಿರುವುದು.
ಗುರೋರ್ವಾಕ್ಯಮೇವಂ ಸ್ವಚಿತ್ತೇ ಹಿ ಮಿತ್ವಾ |
ನಿಧಿಧ್ಯಾಸನಾದ್ವಾ ಧಿಯಾ ಧ್ಯಾನಗಮ್ಯಾ ||
ಗುರೋರ್ದಿವ್ಯತತ್ತ್ವೇ ಪ್ರಪತ್ತಿಶ್ಚ ಕುರ್ಯಾತ್ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೧೩||
(ಗುರೋಃ ದಿವ್ಯತತ್ತ್ವೇ) ಕೇವಲ ಸದ್ಗುರುವಿನ ದಿವ್ಯವಾದ ತತ್ತ್ವದಲ್ಲಿ, (ಪ್ರಪತ್ತಿಃ ಚ ಕುರ್ಯಾತ್) ಶರಣುಹೊಂದಿ, (ಗುರೋಃ ವಾಕ್ಯಮ್) ಕಿವಿಗಳಿಂದ ಶ್ರವಣ ಮಾಡಿದ ಗುರುವಾಕ್ಯವನ್ನು, (ಸ್ವಚಿತ್ತೇ ಹಿ ಮಿತ್ತ್ವಾ) ತನ್ನ ಮನಸ್ಸಿನಲ್ಲಿ ಮನನ ಮಾಡುತ್ತಲೋ, (ಧಿಯಾ) ಬುದ್ಧಿಯಲ್ಲಿ, (ನಿದಿಧ್ಯಾಸನಾತ್, ವಾ) ನಿದಿಧ್ಯಾಸನದಿಂದಲೋ, (ಧ್ಯಾನಗಮ್ಯಾ) ಆತ್ಮತತ್ತ್ವದ ಅರಿವಾಗುವುದು. (ಏವಂ ನೃಣಾ ನಿತ್ಯಸೇವ್ಯಾ) ಅಂತಹ, ಮನುಷ್ಯರಿಂದ ನಿತ್ಯವೂ ಧ್ಯಾನಯೋಗ್ಯವಾದ, (ಆತ್ಮವಿದ್ಯಾ ಚಕಾಸ್ತಿ) ಆತ್ಮವಿದ್ಯೆಯು ತಾನೇ ತಾನಾಗಿ ಸಕಲವಿದ್ಯೆಗಳಿಗೂ ಮುಕುಟದಂತೆ ಶೋಭಿಸುತ್ತಿರುವುದು.
ಯಥಾ ಚೇನ್ಧನಂ ವಾಯುಸಙ್ಗಾತ್ ಪ್ರದೀಪ್ತಂ |
ಭವತ್ಯರ್ಚನಂ ಭಕ್ತಿಯೋಗೇನ ಪೂರ್ಣಮ್ ||
ತಥಾ ಗುರ್ವನುಜ್ಞಾऽऽತ್ಮವಿದ್ಯಾಪ್ರಬೋಧಾ |
ನೃಣಾ ನಿತ್ಯಸೇವ್ಯಾऽऽತ್ಮವಿದ್ಯಾ ಚಕಾಸ್ತಿ ||೧೪||
(ಯಥಾ ಚ ಇನ್ಧನಂ) ಹೇಗೆ ತೈಲ, ಘೃತ, ಸಮಿಧೆ, ಸೌದೆಯೇ ಮುಂತಾದ ಇಂಧನಗಳು, (ವಾಯುಸಙ್ಗಾತ್ ಪ್ರದೀಪ್ತಂ) ವಾಯುವಿನ ಸಂಸರ್ಗವಿದ್ದರೆ ಮಾತ್ರ ಉರಿಯುವುವೋ, (ಅರ್ಚನಂ ಭಕ್ತಿಯೋಗೇನ ಪೂರ್ಣಂ ಭವತಿ) ಹೇಗೆ ದೇವಾರ್ಚನಾದಿ ಉಪಾಸನೆಯು ಭಕ್ತಿಯೋಗದಿಂದ ಪರಿಪೂರ್ಣವಾಗುವುದೋ, (ತಥಾ ಗುರ್ವನುಜ್ಞಾ) ಹಾಗೆಯೇ ಸದ್ಗುರುವಿನ ಉಪದೇಶಮಾತ್ರವೇ, (ಆತ್ಮವಿದ್ಯಾ ಪ್ರಬೋಧಾ) ಆತ್ಮವಿದ್ಯೆಯ ತಿಳಿವನ್ನು ನಮ್ಮಲ್ಲಿ ಜಾಗೃತಗೊಳಿಸಬಲ್ಲುದು. (ಆತ್ಮವಿದ್ಯಾ) ಅಷ್ಟು ಮಹಿಮಾನ್ವಿತವಾದ, (ಚಕಾಸ್ತಿ) ಸ್ವಯಂದೀಪ್ತವಾದ ಆತ್ಮವಿದ್ಯೆಯು, (ನೃಣಾ ನಿತ್ಯಸೇವ್ಯಾ) ಸದಾಕಾಲವೂ ಉದ್ಧಾರವನ್ನು ಬಯಸುವ ಮಾನವನಿಂದ ಧ್ಯೇಯವಾಗಿರುವುದು.
ನ ಚಾದಿರ್ನ ವಾऽನ್ತ್ಯೋ ನ ಪಾರಂ ನ ಸೀಮಾ |
ನ ಮಧ್ಯಂ ತಥಾऽऽಧ್ಯಾತ್ಮವಿದ್ಯಾಮಹಿಮ್ನಃ ||
ಅತ: ಸರ್ವಯತ್ನೇನ ಧ್ಯಾಯೇದಿಮಾಂ ತು |
ನರೋ ಸರ್ವಕಾಲೇಷ್ವವಿದ್ಯಾನಿವೃತ್ತ್ಯೈ ||೧೫||
(ಅಧ್ಯಾತ್ಮವಿದ್ಯಾಮಹಿಮ್ನಃ) ಇಂತಹ ಅಧ್ಯಾತ್ಮವಿದ್ಯೆಯ ಮಹಿಮೆಗೆ, (ನ ಚ ಆದಿಃ, ನ ವಾ ಅಂತ್ಯಃ) ತುದಿ-ಮೊದಲಾಗಲೀ, (ನ ಮಧ್ಯಂ) ನಡುವಾಗಲೀ, (ನ ಸೀಮಾ) ಮೇರೆಯಾಗಲೀ, (ತಥಾ ನ ಪಾರಂ) ಮಿತಿಯಾಗಲೀ ಇಲ್ಲವೇ ಇಲ್ಲ. (ಅತಃ) ಹಾಗಾದ್ದರಿಂದ, (ನರಃ) ಮಾನವನಾಗಿ ಹುಟ್ಟಿದವನು, (ಅವಿದ್ಯಾನಿವೃತ್ತ್ಯೈ) ತನ್ನ ಅವಿದ್ಯೆ-ಅಜ್ಞಾನಗಳ ನಿವೃತ್ತಿಗಾಗಿ, (ಸರ್ವಯತ್ನೇನ ತು) ಸರ್ವಪ್ರಯತ್ನಪೂರ್ವಕವಾಗಿಯಾದರೂ, (ಇಮಾಂ) ಆತ್ಮದ ಕುರಿತು, (ಸರ್ವಕಾಲೇಷು ಧ್ಯಾಯೇತ್) ಸದಾ ಚಿಂತಿಸುತ್ತಿರಬೇಕು, ಆತ್ಮನಿಷ್ಠನಾಗಬೇಕು, ಬ್ರಹ್ಮನಿಷ್ಠನಾಗಬೇಕು, ಜೀವನ್ಮುಕ್ತಾನಂದವನ್ನು ಹೊಂದಬೇಕು.
ಆತ್ಮವಿದ್ಯಾಭುಜಙ್ಗಂ ತು |
ಸರ್ವಾವಿದ್ಯಾವಿನಾಶನಮ್ ||
ಸರ್ವದು:ಖಹರಂ ಚೈವ |
ಸದಾನನ್ದಂ ಚ ದಾಸ್ಯತಿ ||೧೬||
(ಆತ್ಮವಿದ್ಯಾಭುಜಙ್ಗಂ ತು) ಇಂತಹ ಭುಜಂಗಪ್ರಯಾತವೃತ್ತದಲ್ಲಿ ವಿರಚಿತವಾಗಿರುವ ಆತ್ಮವಿದ್ಯಾಭುಜಂಗವು, (ಸರ್ವ-ಅವಿದ್ಯಾವಿನಾಶನಮ್) ಸಕಲ ಅವಿದ್ಯೆಗಳನ್ನೂ, (ಸರ್ವದುಃಖಹರಂ ಚ ಏವ) ದುಃಖಗಳನ್ನೂ ನಾಶಮಾಡಿ, (ಸದಾನನ್ದಂ ಚ ದಾಸ್ಯತಿ) ಸದಾ ಆನಂದವನ್ನು ಉಂಟುಮಾಡುವುದು.
ಯ: ಪಠೇಚ್ಛ್ರದ್ಧಯಾ ನಿತ್ಯಂ |
ಸ್ತೋತ್ರಾರ್ಥಂ ತು ವಿಚಿನ್ತ್ಯ ಚ ||
ಅವಿದ್ಯಾಮಾಯಯಾ ಮುಕ್ತೋ |
ವಿದ್ಯಯಾsಮೃತಮಶ್ನುತೇ ||೧೭||
(ಯಃ) ಯಾವನು, (ನಿತ್ಯಂ) ನಿತ್ಯವೂ ಇದನ್ನು, (ಸ್ತೋತ್ರಾರ್ಥಂ ತು ವಿಚಿಂತ್ಯ ಚ) ಅರ್ಥಾನುಸಂಧಾನದೊಂದಿಗೆ, (ಶ್ರದ್ಧಯಾ ಪಠೇತ್) ಶ್ರದ್ಧೆಯಿಂದ ಪಠಿಸುವನೋ ಅಂಥವನು, (ಅವಿದ್ಯಾಮಾಯಯಾ ಮುಕ್ತಃ) ಅವಿದ್ಯಾಮಾಯೆಯಿಂದ ಮುಕ್ತನಾಗಿ, (ವಿದ್ಯಯಾ ಅಮೃತಮ್ ಅಶ್ನುತೇ) ಆತ್ಮವಿದ್ಯಾಸ್ವರೂಪವಾದ ಅಮೃತತ್ವವನ್ನು ಹೊಂದುತ್ತಾನೆ.
Comments
Post a Comment