ಮಧುರಾಷ್ಟಕಮ್
ಮಧುರಾಷ್ಟಕಮ್
(ಶ್ರೀವಲ್ಲಭಾಚಾರ್ಯಕೃತಮ್)
ಅಧರಂ ಮಧುರಂ ವದನಂ ಮಧುರಂ
ನಯನಂ ಮಧುರಂ ಹಸಿತಂ ಮಧುರಮ್ |
ಹೃದಯಂ ಮಧುರಂ ಗಮನಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ || ೧ ||
ಮಧುರಾಪುರಿಯ ಅಧಿಪತಿಯಾದ / ಅಧೀಶನಾದ / ಅಧಿನಾಯಕನಾದ, ಮಧುರೆ / ಮಥುರೆಯಲ್ಲಿ ಅವತರಿಸಿದ ಪರಬ್ರಹ್ಮಸ್ವರೂಪನಾದ ಭಗವಾನ್ ಶ್ರೀಕೃಷ್ಣನ (ಮಧುರಾಧಿಪತೇಃ), ಕೆಳತುಟಿಯು (ಅಧರಮ್; ಓಷ್ಠಮ್—ಮೇಲ್ತುಟಿ), ಅತ್ಯಂತ ಸಿಹಿಯಾದುದು (ಮಧುರಮ್). ಆತನ ಬಾಯಿಯು / ಮುಖವು (ವದನಮ್), ಸವಿಯಾದುದು (ಮಧುರಮ್). ಆತನ ಕಮಲದಂತಹ ಕಣ್ಣುಗಳು (ನಯನಮ್), ಸುಮಧುರವಾದವು (ಮಧುರಮ್). ಆ ಮುದ್ದು ಬಾಲಕೃಷ್ಣನ ನಗುವೇ (ಹಸಿತಮ್), ಅತ್ಯಂತ ಮಾಧುರ್ಯದಿಂದ ಕೂಡಿದ್ದು (ಮಧುರಮ್). ಆ ಭಗವಂತನ ಹೃದಯವೂ / ಮನಸ್ಸೂ / ಭಾವನೆಯೂ (ಹೃದಯಮ್), ಅತಿಮಧುರ (ಮಧುರಮ್). ಆ ಬಾಲಕೃಷ್ಣನ ನಡೆಯೂ / ಅಂಬೆಗಾಲಿಕ್ಕುತ್ತ ನಡೆಯುವ ಶೈಲಿಯೂ (ಗಮನಮ್), ಬಲುಸುಂದರ, ಸಮನೋಹರ (ಮಧುರಮ್). ಇಂತಹ ಮಥುರಾನಾಥನ ಎಲ್ಲವೂ (ಅಖಿಲಮ್), ಚೇತೋಹಾರಿಯಾದುದೂ, ಪರಮಾನಂದಜನಕವಾದುದಾಗಿರುವುದು (ಮಧುರಮ್).
ಟಿಪ್ಪಣಿ—
"ಮಥ್ಯತೇ ಪಾಪರಾಶಿಃ ಯಯಾ ಇತಿ ಮಥುರಾ"— ಪಾಪಸಮೂಹವೆಲ್ಲಾ ಯಾವ ಪುಣ್ಯಕ್ಷೇತ್ರದಿಂದ ನಾಶವಾಗುವುದೋ ಅದೇ ಮಥುರಾ.
"ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಹ್ಯವನ್ತಿಕಾ |
ಪುರೀ ದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಕಾಃ ||"
(ಸ್ಕಾನ್ದಪುರಾಣೇ ಕಾಶೀಖಣ್ಡೇ)
ಸಪ್ತ ಮೋಕ್ಷಪ್ರದ ಕ್ಷೇತ್ರಗಳು— ಅಯೋಧ್ಯೆ, ಮಥುರೆ, ಮಾಯಾ, ಕಾಶಿ, ಕಾಂಚಿ, ಅವಂತಿ, ಪುರಿ ಮತ್ತು ದ್ವಾರಕೆ.
ಭಾಗವತಪುರಾಣ (೯|೧೧|೧೪)ದಲ್ಲಿ ಹೀಗಿದೆ—
"ಶತ್ರುಘ್ನಶ್ಚ ಮಧೋಃ ಪುತ್ರಂ ಲವಣಂ ನಾಮ ರಾಕ್ಷಸಮ್ |
ಹತ್ವಾ ಮಧುವನೇ ಚಕ್ರೇ ಮಥುರಾ ನಾಮ ವೈ ಪುರೀಮ್ ||"
ಶ್ರೀರಾಮನ ತಮ್ಮನಾದ ಶತ್ರುಘ್ನನು ಮಧುವೆಂಬವನ ಮಗನಾದ ಲವಣನೆಂಬ ರಾಕ್ಷಸನನ್ನು ಮಧುವನದಲ್ಲಿ ಕೊಂದು ಮಧುರಾ (ಮಥುರಾ) ಎಂಬ ಹೆಸರಿನ ಪಟ್ಟಣವನ್ನು ನಿರ್ಮಿಸಿದನು. ("ಮಧುಪುತ್ರಂ ರಾತಿ ಹನ್ತಿ ಅತ್ರ ಇತಿ ಮಧುರಾ"— ಮಧುಪುತ್ರನನ್ನು ಕೊಂದ ಸ್ಥಳವೇ ಮಧುರಾ) ಹೀಗೆ ಇವನ ಹೆಸರಿನಿಂದಾಗಿ ಮಥುರೆಯು ಮಧುರೆಯೆನಿಸಿತು.
ವಚನಂ ಮಧುರಂ ಚರಿತಂ ಮಧುರಂ
ವಸನಂ ಮಧುರಂ ವಲಿತಂ ಮಧುರಮ್ |
ಚಲಿತಂ ಮಧುರಂ ಭ್ರಮಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ || ೨ ||
ಮಥುರಾಧಿಪತಿಯಾದ ಶ್ರೀಕೃಷ್ಣನ (ಮಧುರಾಧಿಪತೇಃ), ಮಾತು ಮಧುರ (ವಚನಂ ಮಧುರಮ್); ಲೀಲೆ / ಚರಿತೆ / ಕಥೆ ಹೃದ್ಯ / ಹೃದಯಸ್ಪರ್ಶಿ (ಚರಿತಂ ಮಧುರಮ್); ವಸ್ತ್ರ / ಬಟ್ಟೆ / ಪೀತಾಂಬರ / ಪಟ್ಟೆಬಟ್ಟೆ / ಹಳದಿ ರೇಷ್ಮೆವಸ್ತ್ರ ದರ್ಶನೀಯವಾಗಿದೆ (ವಸನಂ ಮಧುರಮ್); ಆ ಶ್ರೀಕೃಷ್ಣನ ಶರೀರದ ೩ ಭಾಗಗಳ ಬಾಗುವಿಕೆಯ ಭಂಗಿಯು / ತ್ರಿಭಂಗಿಯು ಮನೋಹರ ಅಥವಾ ಇಂದ್ರಿಯ-ಮನೋನಿಗ್ರಹಗಳು ಅದ್ಭುತ (ವಲಿತಂ ಮಧುರಮ್, ವಲ ಸಂವರಣೇ ಸಂಚರಣೇ ಚ ಧಾತುಃ— ಸಂವರಣವೆಂದರೆ ಆವರಣ, ಇಂದ್ರಿಯನಿಗ್ರಹ. ಸಂಚರಣವೆಂದರೆ ಗಮನಶೀಲತೆ, ದೇಹಭಂಗಿ. "ತ್ರಿಭಂಗೀ ಮಧುರಾಕೃತಿಃ"— ಕೃಷ್ಣಾಷ್ಟೋತ್ತರಶತನಾಮಸ್ತೋತ್ರಮ್); ಆ ಮುದ್ದುಕೃಷ್ಣನ ಚಲನ-ವಲನಗಳೂ ನೋಡಲು ಬಹು ಆಕರ್ಷಕ (ಚಲಿತಂ ಮಧುರಮ್); ಆ ಬಾಲಕೃಷ್ಣನ ಗೋಪಬಾಲರೊಂದಿಗಿನ ಸುತ್ತಾಟವು / ಪರಿಭ್ರಮಣವು ಬಲು ಚಿತ್ತಾಕರ್ಷಕ (ಭ್ರಮಿತಂ ಮಧುರಮ್); ಹೀಗೆ ಆ ಮಾಧವನ ಎಲ್ಲವೂ ಅತ್ಯಂತ ಲೋಕಮೋಹಕವಾದುವು (ಅ-ಖಿಲಂ ಮಧುರಮ್— ಖಿಲವೆಂದರೆ ಭಾಗ, ಅಂಶ. ಅಖಿಲವೆಂದರೆ ಸಮಗ್ರ, ಅಶೇಷ, ನಿಶ್ಶೇಷ).
ವೇಣುರ್ಮಧುರೋ ರೇಣುರ್ಮಧುರಃ
ಪಾಣಿರ್ಮಧುರಃ ಪಾದೌ ಮಧುರೌ |
ನೃತ್ಯಂ ಮಧುರಂ ಸಖ್ಯಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ || ೩ ||
ಆ ಮುರಲೀಮೋಹನ, ವಂಶೀಹಸ್ತ ವೇಣುವಿನೋದನಾದ ಶ್ರೀಕೃಷ್ಣನ ವೇಣು / ಕೊಳಲ ನಾದವು ಕೇಳಲು ಬಲು ಇಂಪಾದುದು (ವೇಣುಃ ಮಧುರಃ— ವೇಣುವೆಂದರೆ ಬಿದಿರು / ವಂಶವೃಕ್ಷ. ಅದರಿಂದ ಮಾಡಿದ ಕೊಳಲು ವಂಶೀ, ಸುಷಿರ, ವೇಣು.), ಆತನ ಪಾದಧೂಳಿನ ಕಣವೂ ಪಾವನತಮವೂ ಸುಮಧುರವೂ ಆಗಿರುವುದು (ರೇಣುಃ ಮಧುರಃ); ಆತನ ಕೆಂಪಾದ ಎಳೆ ಪಾದಗಳೂ ಬಹು ಸುಕೋಮಲ (ಪಾದೌ ಮಧುರೌ); ಆ ಬಾಲಕೃಷ್ಣನ ನರ್ತನವೂ ನಯನಮನೋಹರ (ನೃತ್ಯಂ ಮಧುರಮ್); ಆ ಗೋಪಾಲಬಾಲನಾದ ವಾಸುದೇವನ ಸಖ್ಯ / ಮಿತ್ರತ್ವ / ಗೆಳೆತನವೂ ಅತಿಮಧುರವಾದುದು (ಸಖ್ಯಂ ಮಧುರಮ್); ಹೀಗೆ ಆ ಮಧುರಾಧಿಪತಿಯ ಸರ್ವವೂ ಮಾಧುರ್ಯಪೂರ್ಣವೇ ಸರಿ (ಮಧುರಾಧಿಪತೇಃ ಅಖಿಲಂ ಮಧುರಮ್).
ಗೀತಂ ಮಧುರಂ ಪೀತಂ ಮಧುರಂ
ಭುಕ್ತಂ ಮಧುರಂ ಸುಪ್ತಂ ಮಧುರಮ್ |
ರೂಪಂ ಮಧುರಂ ತಿಲಕಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ || ೪ ||
ಆತನ ಗೀತವೂ / ಗಾಯನವೂ ಸುಮಧುರ, ಸುಶ್ರಾವ್ಯ (ಗೀತಂ ಮಧುರಮ್). ಆತನ ಹಳದಿ ಪಟ್ಟೆವಸ್ತ್ರ / ಪೀತಾಂಬರವೂ ಮನೋಹರ ಅಥವಾ ಆತನು ಕುಡಿದ ಪಾನೀಯವೂ ಬಹಳ ರುಚಿಕರವಾದ ತೀರ್ಥ. ಆತನುಂಡ / ಭುಂಜಿಸಿದ ನೈವೇದ್ಯ-ಮೊಸರು-ಬೆಣ್ಣೆ ಮುಂತಾದವುಗಳೂ ಅತ್ಯಂತ ರುಚಿಕರ ಪ್ರಸಾದ. ಆತನ ಕುಡಿಯುವಿಕೆ, ಹಾಡುವಿಕೆ, ಉಣ್ಣುವಿಕೆಗಳೂ ನೋಡಲು ಬಹುಮೋಹಕ. ಆತನು ಮಲಗಿ ನಿದ್ರಿಸಿದರಂತೂ ಅದರ ಸೊಬಗು, ಆತನ ಮಗುವಿನಂತಹ ಮುಗ್ಧಚೆಲುವಿಗಾರು ತಾನೇ ಸರಿಸಾಟಿ (ಸುಪ್ತಂ ಮಧುರಮ್)? ಆತನ ಸೌಂದರ್ಯವಂತೂ ಸರ್ವರನ್ನೂ ಸೆಳೆಯುವಂಥದ್ದು (ರೂಪಂ ಮಧುರಮ್). ಶ್ರೀಕೃಷ್ಣನ ಹಣೆಯ ಕಿರುಬೊಟ್ಟಾದರೋ ಅತ್ಯಂತ ಸುಲಕ್ಷಣವಾಗಿ ತೋರುವುದು (ತಿಲಕಂ ಮಧುರಮ್). ಅಂತಹ, ಎಲ್ಲ ಮಧುರತೆಗಳಿಗೂ ಅಧಿಪತಿಯಾದ ಮುದ್ದುಕೃಷ್ಣನ ಸಕಲ ಚರಿತಗಳೂ ಸದಾ ಮಧುರತಮವೇ ಆಗಿರುತ್ತವೆ (ಮಧುರಾಧಿಪತೇಃ ಅಖಿಲಂ ಮಧುರಮ್).
ಟಿಪ್ಪಣೀ— ಹಿಂದೆ ತ್ರಿಭಂಗಿಯೆಂಬ ಪದದ ಪ್ರಸ್ತಾಪವಾಗಿತ್ತು. ಕೃಷ್ಣನ ಕುತ್ತಿಗೆ-ಕೈಗಳು, ಸೊಂಟ ಹಾಗೂ ಕಾಲುಗಳು ಎಂಬ ೩ ಕಡೆಗಳಲ್ಲಿ ವೇಣುನಾದದ ಗೋಪಾಲಕೃಷ್ಣನ ಭಂಗಿಯಲ್ಲಿ ದೇಹವು ಬಾಗಿರುವುದರಿಂದಲೇ ತ್ರಿಭಂಗೀ ಎಂಬ ಹೆಸರು ಆತನಿಗೆ. ೩ ಕಡೆ ಆತನ ದೇಹಕ್ಕೆ ಭಂಗ / ವಕ್ರತೆಗಳನ್ನು ಆತ ತೋರ್ಪಡಿಸಿದ್ದರಿಂದಲೇ ಈ ಹೆಸರು.
ಕರಣಂ ಮಧುರಂ ಚರಣಂ ಮಧುರಂ
ಹರಣಂ ಮಧುರಂ ಸ್ಮರಣಂ ಮಧುರಮ್ |
ವಮಿತಂ ಮಧುರಂ ಶಮಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ || ೫ ||
ಶ್ರೀಕೃಷ್ಣನ ಇಂದ್ರಿಯಗಳೂ (ಕರಣಮ್), ಪರಮಪವಿತ್ರ (ಮಧುರಮ್); ಆದತ ಶ್ರೀಹರಿಪಾದಗಳಂತೂ ಸಕಲರ ಪಾಪಪರಿಹಾರಕ, ಸಾಕ್ಷಾತ್ ಗಂಗೆಯು ಆತನ ಪಾದೋದಕ (ಚರಣಂ ಮಧುರಮ್); ಶ್ರೀಕೃಷ್ಣನ ಸಕಲರ ಮನಸ್ಸನ್ನೂ ಅಪಹರಿಸುವ, ತನ್ನೆಡೆಗೆ ಸೆಳೆಯುವ ಶಕ್ತಿಯಂತೂ ಬಲು ಮಧುರ. ಆತನ ಪ್ರಾಣವೂ ಸದಾ ತನ್ನ ಭಕ್ತರಿಗಾಗಿ ಮುಡಿಪಾಗಿದ್ದು ಸುಮಧುರವೂ, ಸಕಲ ಜೀವರ ಶ್ವಾಸವೂ, ಸಕಲರ ಬದುಕಿನ ವಿಶ್ವಾಸವೂ ಆಗಿದೆ (ಹರಣಂ ಮಧುರಮ್). ಆತನ ಸ್ಮರಣೆಯಂತೂ ಅತಿಮದುರಾನುಭವಪ್ರದ (ಸ್ಮರಣಂ ಮಧುರಮ್). ಬ್ರಹ್ಮಾಂಡಭಾಂಡೋದರನಾದ ಆತನ ವಮಿತ / ವಾಂತಿಯೇ ಈ ಸಮಸ್ತ ಸೃಷ್ಟಿ / ಬ್ರಹ್ಮಾಂಡ. ಅದೂ ಹರಿಮಾಯೆಯಿಂದಾಗಿ ಬಹುವೈವಿಧ್ಯಗಳಿಂದ ಕೂಡಿ ದಿನದಿನವೂ ಪರಿವರ್ತನೆಗೊಳ್ಳುತ್ತಾ ಬಲು ರಮಣೀಯವಾಗಿರುವುದು, ಸೃಷ್ಟ್ಯುನ್ಮುಖವಾಗಿರುವುದು (ವಮಿತಂ ಮಧುರಮ್). ಆತನ ಪ್ರಸನ್ನ, ಪ್ರಶಾಂತ ಚಿತ್ತವಂತೂ ಬಹುವಾಗಿ ನೋಡುಗರನ್ನು ಮುದಗೊಳಿಸಿ, ನೆಮ್ಮದಿಯನ್ನೀಯುವಂಥದ್ದು (ಶಮಿತಂ ಮಧುರಮ್— ಶಮ ಎಂದರೆ ಮನಸ್ಸಿನ ಪ್ರಶಮನ / ನಿಗ್ರಹ. ದಮ ಎಂದರೆ ಇಂದ್ರಿಯನಿಗ್ರಹ). ಹೀಗಾಗಿ, ಇಂತಹ ಸಕಲ ಮಧುರತೆಗಳ ಈಶನಾದ ಶ್ರೀಹರಿಯ ಎಲ್ಲ ಲೀಲೆಗಳೂ, ರೂಪಗಳೂ, ಭಾವ-ಭಂಗಿಗಳೂ ಮಧುರಾತಿಮಧುರ.
ಗುಂಜಾ ಮಧುರಾ ಮಾಲಾ ಮಧುರಾ
ಯಮುನಾ ಮಧುರಾ ವೀಚೀ ಮಧುರಾ |
ಸಲಿಲಂ ಮಧುರಂ ಕಮಲಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ || ೬ ||
ಯಮುನಾತೀರದ ಬೃಂದಾವನದ ಲತಾಕುಂಜಗಳಲ್ಲಿ ಗೋಪಗೋಪಿಯರೊಡನೆ ಆತನ ಪಿಸುಮಾತುಗಳು ಕೇಳಲು ಬಲು ಮಧುರ (ಗುಂಜಾ ಮಧುರಾ— ಗುಂಜಾ ಎಂದರೆ ಒಂದು ಜಾತಿಯ ಬಳ್ಳಿ, ಗುಂಜನ / ಮೆಲುದನಿ / ಪಿಸುಮಾತು ಇತ್ಯಾದಿ). ಆತನ ವನಮಾಲೆ, ತುಲಸೀಮಾಲೆ, ಕೌಸ್ತುಭಮಣಿಮಾಲೆ ಮುಂತಾದವುಗಳೂ ಬಹು ಮನೋಹರ (ಮಾಲಾ ಮಧುರಾ). ಆತನು ಅಡ್ಡಾಡಿದ, ವಿಹರಿಸಿದ ಯಮುನಾನದಿಯ ತೀರವಂತೂ ಬಲು ಮಧುರ (ಯಮುನಾ ಮಧುರಾ— ಯಮನ ಸೋದರಿ ಯಮುನಾ). ಆ ಯುಮುನಾಜಲದ ತರಂಗಗಳು ಕೃಷ್ಣನ ಮಧುರಸ್ಮರಣೆಯನ್ನುಂಟುಮಾಡುತ್ತಿವೆ, ಕೃಷ್ಣನಾಮವನ್ನೇ ಜಪಿಸುತ್ತಿವೆ (ವೀಚೀ ಮಧುರಾ— ವೀಚೀ / ವೀಚಿಃ ಅಂದರೆ ತರಂಗ, ಅಲೆ). ಕೃಷ್ಣುನ ವಿಹರಿಸಿದ ಯಮುನಾನದಿಯ ಸಲಿಲ / ನೀರೂ ಬಹುಮಧುರ (ಸಲಿಲಂ ಮಧುರಮ್). ಆತನು ವಿಹರಿಸಿದ ಯಮುನಾತೀರದಲ್ಲಿನ ಬೃಂದಾವನದ ಹೂದೋಟದ ಕೆರೆ-ಪುಷ್ಕರಿಣಿಗಳಲ್ಲಿನ ಕಮಲ / ತಾವರೆಹೂಗಳೂ ಆ ಕೃಷ್ಣನ ಮಧುರ ಸ್ವರಣೆಯನ್ನೇ ಉಂಟುಮಾಡುವುವು (ಕಮಲಂ ಮಧುರಮ್). ಹೀಗೇ ಮಧುರಾಪುರಿಯ ಅಧಿಪತಿಯಾದ ಮಥುರೆಯಲ್ಲಿ ಅವತರಿಸಿದ ಮಾಧವನ ಎಲ್ಲ ಚೇಷ್ಟೆಗಳೂ ಮಧುರವೇ ಆಗಿವೆ (ಮಧುರಾಧಿಪತೇಃ ಅಖಿಲಂ ಮಧುರಮ್).
ಗೋಪೀ ಮಧುರಾ ಲೀಲಾ ಮಧುರಾ
ಯುಕ್ತಂ ಮಧುರಂ ಭುಕ್ತಂ ಮಧುರಮ್ |
ದೃಷ್ಟಂ ಮಧುರಂ ಶಿಷ್ಟಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ || ೭ ||
ಕೃಷ್ಣಭಕ್ತರೂ, ದೇವತಾಸ್ತ್ರೀಯರ ಅವತಾರಿಗಳೂ ಆದ ಗೋಪಿಕಾಸ್ತ್ರೀಯರೂ ತಮ್ಮ ಮಾಧುರ್ಯಭರಿತ ಕೃಷ್ಣನಾಮಸ್ಮರಣೆಯಿಂದ ನಮ್ಮಲ್ಲೂ ಕೃಷ್ಣಭಕ್ತಿಯನ್ನು ಉದ್ದೀಪನಗೊಳಿಸುತ್ತಾರೆ (ಗೋಪೀ ಮಧುರಾ). ಆ ಶ್ರೀಕೃಷ್ಣನ ಅತಿಮಾನುಷಲೀಲೆಗಳೂ ನಮಗೆ ಬಹು ಮಧುರಾನುಭವವನ್ನುಂಟುಮಾಡುತ್ತವೆ (ಲೀಲಾ ಮಧುರಾ).ಆತನು ಯಾರ ಜೊತೆ ಸೇರಿಕೊಂಡಿದ್ದರೂ ಅವರಿಗೆ ಮಾಧುರ್ಯಾನುಭವವನ್ನೀಯುತ್ತಾನೆ (ಯುಕ್ತಂ ಮಧುರಮ್— ಯುಕ್ತ ಅಂದರೆ ಸೇರಿಕೊಂಡ). ಆತನು ಯಾರೊಡನೆ ಉಣ್ಣುವನೋ / ಭುಂಜಿಸುವನೋ ಅವರಿಗೂ ಅತ್ಯಾನಂದಾನುಭೂತಿಯುಂಟಾಗುವುದು (ಭುಕ್ತಂ ಮಧುರಮ್). ಆತನ ಕೃಪಾದೃಷ್ಟಿಯೇ ಮಧುರ. ಆತನು ನೋಡಿದ್ದೆಲ್ಲವೂ ಮಂಗಲಪ್ರದವಾಗುತ್ತದೆ (ದೃಷ್ಟಂ ಮಧುರಮ್). ಆತನು ಉಪಭೋಗಿಸಿ ಉಳಿಸಿದ್ದೂ ಬಹು ಮಧುರ. ಸಾಕ್ಷಾತ್ ಭಗವದವತಾರವೇ ಆದರೂ ಆತನು ತನಗೆ ಅವಶ್ಯವಿಲ್ಲದಿದ್ದರೂ ಲೋಕಮುಖಕ್ಕಾಗಿ ತೋರ್ಪಡಿಸುವ ಶಿಷ್ಟಾಚಾರವೂ ಬಹು ಮಧುರ (ಶಿಷ್ಟಂ ಮಧುರಮ್— "ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ" ಮಹಾತ್ಮರ ದಾರಿಯನ್ನೇ ಉಳಿದವರು ತುಳಿಯುವುದರಿಂದ, ಮಹಾತ್ಮರಿಗನವಶ್ಯವಾದರೂ ಲೋಕಧರ್ಮದ ಉಳಿವಿಗಾಗಿ, ಜನಸಾಮಾನ್ಯರ ಉದ್ಧಾರಕ್ಕಾಗಿ ಶಿಷ್ಟಾಚಾರ, ಸಂಪ್ರದಾಯಾದಿಗಳನ್ನು ಪಾಲಿಸುವುದು ಅಗತ್ಯವೆಂದು ಗೀತೋಪದೇಶದಲ್ಲಿ ಆತನೇ ಹೇಳಿರುವನು. ಇನ್ನೊಂದು ಶಿಷ್ಟವೆಂದರೆ ಅವಶಿಷ್ಟ / ಉಳಿಕೆ). ಹೀಗೆ, ಮಧುರಾನಾಥನ ಸಕಲವೂ ಮಧುರಭಾವವನ್ನು ನಮ್ಮಲ್ಲಿ ಉದ್ದೀಪ್ತಗೊಳಿಸುವುದು (ಮಧುರಾಧಿಪತೇಃ ಅಖಿಲಂ ಮಧುರಮ್).
ಗೋಪಾ ಮಧುರಾ ಗಾವೋ ಮಧುರಾ
ಯಷ್ಟಿರ್ಮಧುರಾ ಸೃಷ್ಟಿರ್ಮಧುರಾ |
ದಲಿತಂ ಮಧುರಂ ಫಲಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ || ೮ ||
ಆ ಗೋಪಾಲಕೃಷ್ಣನ ಜೊತೆಗಾರರಾದ ಗೋಪ-ಗೋಪಿಯರೂ ಆತನಂತೆಯೇ ಸದ್ಗುಣಿಗಳು (ಗೋಪಾ ಮಧುರಾ). ಆತನು ಸಲಹಿ ಪಾಲಿಸಿದ ಗೋವುಗಳೂ ಅತ್ಯಂತ ಆಪ್ಯಾಯಮಾನವಾದವುಗಳು, ಸಕಲದೇವತಾಸಾನ್ನಿಧ್ಯವುಳ್ಳವುಗಳು (ಗಾವಃ ಮಧುರಾಃ). ಆ ಪರಮಾತ್ಮನ ಯಜನ, ಪೂಜೆಗಳು ಅತ್ಯಂತ ಶಾಂತಿ-ನೆಮ್ಮದಿ-ಆನಂದಗಳನ್ನು ಕೊಡುವುವು (ಯಷ್ಟಿಃ— ಯಜ್ಞ, ಪೂಜೆ. ಮಧುರಾ— ಸವಿ). ಆತನ ಸೃಷ್ಟಿಯೆಲ್ಲವೂ ಆತನಿಂದಲೇ ವ್ಯಾಪ್ತವಾಗಿ ಬಲು ಮಧುರಾನುಭವವನ್ನುಂಟುಮಾಡುತ್ತವೆ (ಸೃಷ್ಟಿಃ ಮಧುರಾ). ಆತನಿಂದ ಏಟನ್ನು ತಿಂದರೂ ಅದು ಬಹು ಸುಖವನ್ನೇ ಕೊಡುವುದು, ಆತನಿಂದ ಕೊಲ್ಲಲ್ಪಟ್ಟರೆ ಮೋಕ್ಷವು (ದಲಿತಂ ಮಧುರಮ್— ದಲಿತಂ ಎಂದರೆ ಖಂಡಿತವಾದದ್ದು / ತುಂಡಾಗಿಸಲ್ಪಟ್ಟದ್ದು / ಅಖಂಡವನ್ನು ಖಂಡವಾಗಿಸಿದ್ದು). ಆತನಿಂದ, ಆತನ ಉಪದೇಶ-ಪೂಜೆ-ಭಕ್ತಿ-ಧ್ಯಾನಾದಿಗಳಿಂದ ಪರಿಪಕ್ವವಾದ ಜೀವನೂ ಆತನಂತೆಯೇ ಮಧುರತ್ವವನ್ನು ಹೊಂದುತ್ತಾನೆ (ಫಲಿತಂ ಮಧುರಮ್— ಹಣ್ಣಾದದ್ದು, ಮಾಗಿದ್ದು, ಪಕ್ವವಾದದ್ದು ಮಧುರ, ಸಿಹಿ). ಹೀಗೆ ಆ ಮಧುರಾಧಿಪನ ಎಲ್ಲವೂ ಬಹು ಸಿಹಿಯಾದದ್ದು, ಹಿತವಾದದ್ದು, ಸುಖಕರವಾದದ್ದು (ಮಧುರಾಧಿಪತೇಃ ಅಖಿಲಂ ಮಧುರಮ್).
ಈ ಮಧುರಾಷ್ಟಕವು ವಲ್ಲಭಾಚಾರ್ಯರ ಕೃಷ್ಣಭಕ್ತಿಯಿಂದ ಪಕ್ವಗೊಂಡ ಫಲಾಮೃತಸಾರಸ್ವರೂಪ. ಆ ಆದ್ಯಂತರಹಿತನಾದ ಕೃಷ್ಣನ ಆದ್ಯಂತವೆಲ್ಲವೂ ಸದಾ ನಿತ್ಯಮಧುರವಾದುದೆಂಬುದು ಪುಷ್ಟಿಮಾರ್ಗಸಂಸ್ಥಾಪಕರಾದ ಈ ಆಚಾರ್ಯವರ್ಯರ ಶ್ರೀಕೃಷ್ಣಭಕ್ತಿಯ ಅನುಭಾವದ ಪರಾಕಾಷ್ಠೆಯೇ ಸರಿ!!! ಇದರ ನಿತ್ಯ ಪಠನ, ಅರ್ಥಮನನ, ಕೃಷ್ಣತತ್ತ್ವಧ್ಯಾನ, ಪರಮ ಕೃಷ್ಣಪ್ರೇಮಗಳಿಂದ ಅನುಕ್ರಮವಾಗಿ ಗೋಲೋಕದ ಸಾಲೋಕ್ಯಮುಕ್ತಿ, ಕೃಷ್ಮನ ಸಾಮೀಪ್ಯ-ಸಾರೂಪ್ಯ-ಸಾರ್ಷ್ಟಿ ಮುಕ್ತಿಗಳು ಹಾಗೂ ಕೊನೆಗೆ ತನ್ನೊಳಗಿರುವವನು ಅವನೇ, ತಾನೆಂಬುದಿಲ್ಲ, ಎಲ್ಲಾ ಅವನೇ ಎಂಬ ಭಾವದ, ಜ್ಞಾನದ ಪರಿಪೂರ್ಣಾನುಭವದಿಂದ ಕೃಷ್ಣಸಾಯುಜ್ಯವನ್ನು ಹೊಂದಿ ತಾನೂ ಕೃಷ್ಣನಿಗಿಂತ ಭಿನ್ನನಲ್ಲದೇ ಅವನೇ ತಾನಾಗುವುದರಲ್ಲಿ ಸಂದೇಹವಿಲ್ಲ!!!
|| ಹರೇ ಕೃಷ್ಣ ||
Comments
Post a Comment