मुकुन्दमाला / ಮುಕುಂದಮಾಲಾ
ಕುಲಶೇಖರ-ಆಳ್ವಾರ್-ವಿರಚಿತಾ
ಮುಕುಂದಮಾಲಾ
ದಂಬೆ-ಕೃಷ್ಣಮೂರ್ತಿ-ಶಾಸ್ತ್ರೀ-ಕೃತ ಕರ್ಣಾಟಕೀಭಾಷಾವ್ಯಾಖ್ಯಾಸಂವಲಿತಾ
ಘುಷ್ಯತೇ ಯಸ್ಯ ನಗರೇ ರಂಗಯಾತ್ರಾ ದಿನೇ ದಿನೇ |
ತಮಹಂ ಶಿರಸಾ ವಂದೇ ರಾಜಾನಂ ಕುಲಶೇಖರಮ್ ||
(ಅನುಷ್ಟುಪ್-ವೃತ್ತಮ್)
ಯಾವ ಮಹಾತ್ಮನ ದಿವ್ಯವಾದ ನಗರದಲ್ಲಿ ಪ್ರತಿದಿನವೂ ಶ್ರೀರಂಗ-ನಾಥನಾದ ಮುಕುಂದನ ರಥಯಾತ್ರೆಯು ವಾದ್ಯಘೋಷಗಳೊಂದಿಗೆ ಆಚರಿಸಲ್ಪಡುವುದೋ ( ಯಾರ ದೇಹವೆಂಬ ಪುರದಲ್ಲಿ ನಿತ್ಯವೂ ಶ್ರೀರಂಗಸ್ಮರಣೆ, ಕೀರ್ತನೆಗಳೇ ನಡೆಯುತ್ತಿರುವುವೋ), ಅಂತಹ, ರಾಜರುಗಳ ಸಮೂಹಕ್ಕೇ ಶಿಖರಪ್ರಾಯನಾದ ರಾಜಾ ಕುಲಶೇಖರ ಆಳ್ವಾರ್ ರನ್ನು ನಾನು ತಲೆಬಾಗಿ ವಂದಿಸುತ್ತೇನೆ.
(ಮುಕುಂದಃ— “ಮುಕುಮ್ ಅವ್ಯಯಮ್ ಅಂತಂ ಚ ನಿರ್ವಾಣ-ಮೋಕ್ಷ-ವಾಚಕಮ್ | ತದ್ ದದಾತಿ ಚ ಯೋ ದೇವೋ ಮುಕುಂದಃ ತೇನ ಕೀರ್ತಿತಃ ||”— ಮುಕುಃ ಎಂದರೆ ಅವ್ಯಯವಾದ, ಎಂದಿಗೂ ನಾಶ / ವ್ಯಯ ವಾಗದ ಅಂತ್ಯವೆನಿಸಿದ ನಿರ್ವಾಣ / ಮೋಕ್ಷ ಎಂದರ್ಥ. ಅದನ್ನು ಯಾವ ದೇವದೇವನಾದ ಶ್ರೀಹರಿಯು ದಯಪಾಲಿಸುತ್ತಾನಾದ್ದರಿಂದ ಆತನು ಮುಕುಂದನು. “ಮುಕುಂ ದದಾತಿ ಇತಿ ಮುಕುಂದಃ”— ಮುಕ್ತಿಯನ್ನು ನೀಡುತ್ತಾನೆಂಬುದರಿಂದ ಮುಕುಂದ.
“ಮುಕುಂ ಭಕ್ತಿರಸಪ್ರೇಮ-ವಚನಂ ವೇದಸಮ್ಮತಮ್ | ಯಃ ತದ್ ದದಾತಿ ವಿಪ್ರೇಭ್ಯೋ ಮುಕುಂದಃ ತೇನ ಕೀರ್ತಿತಃ ||”— ಭಗವತ್ಪ್ರೇಮರೂಪೀ ಭಕ್ತಿರಸಪೂತವಾದ, ವೇದಕ್ಕೆ ಒಪ್ಪಿಗೆಯಾಗುವಂಥ / ವೇದಸಮ್ಮತವಾದ ನುಡಿಮುತ್ತುಗಳನ್ನು ಯಾವನು ವೇದಾಧ್ಯಾಯೀಗಳಿಗೆ / ವಿಪ್ರರಿಗೆ ಒದಗಿಸುತ್ತಾನೋ, ಅಂತಹ ವಿಷ್ಣುವು ಅದರಿಂದಾಗಿ ಮುಕುಂದನೆನಿಸಿರುವನು.)
ಶ್ರೀವಲ್ಲಭೇತಿ ವರದೇತಿ ದಯಾಪರೇತಿ
ಭಕ್ತಪ್ರಿಯೇತಿ ಭವಲುಂಠನಕೋವಿದೇತಿ |
ನಾಥೇತಿ ನಾಗಶಯನೇತಿ ಜಗನ್ನಿವಾಸೇ-
-ತ್ಯಾಲಾಪಿನಂ ಪ್ರತಿಪದಂ ಕುರು ಮಾಂ ಮುಕುಂದ || ೧ ||
(ವಸಂತತಿಲಕಾವೃತ್ತಮ್— “ಉಕ್ತಾ ವಸಂತತಿಲಕಾ ತಭಜಾ ಜಗೌಗಃ”)
ಹೇ ಮುಕುಂದನೇ!! ನಿನ್ನನ್ನು ಶ್ರೀವಲ್ಲಭ / ಲಕ್ಷೀರಮಣ ನೆಂದೂ, ಬೇಡಿದವರಿಗೆ ವರದಾತನಾದ ವರದನೆಂದೂ, ಕಷ್ಟಗಳನ್ನು ಪರಿಹರಿಸುವ ದಯಾಪರನೆಂದೂ, ತನ್ನ ಭಕ್ತರಿಗೆ ಅತಿಪ್ರಿಯನಾದವನಾಗಿ ಭಕ್ತಪ್ರಿಯನೆಂದೂ, ಭವಸಾಗರವನ್ನು ಕುಂಠಿತ / ಕಡಿತ ಮಾಡುವವರಲ್ಲಿ ಕೋವಿದ / ನಿಪುಣನೆಂದೂ, ಸಕಲರ ಒಡೆಯನಾಗಿ ನಾಥ / ಜಗನ್ನಾಥನೆಂದೂ, ಆದಿಶೇಷನನ್ನೇ ಹಾಸಿಗೆಯನ್ನಾಗಿಸಿ ಕ್ಷೀರಸಾಗರದ ಮೇಲೆ ಪವಡಿಸಿದ ನಾಗಶಯನನೆಂದೂ, ಸಮಗ್ರ ಜಗತ್ತಿನಲ್ಲೇ ವಾಸುದೇವನಾಗಿ ವಾಸವಾಗಿರುವ ಜಗನ್ನಿವಾಸನೆಂದೂ ಸದಾ ಪ್ರತಿಕ್ಷಣವೂ, ಬದುಕಿನ ಹೆಜ್ಜೆ ಹೆಜ್ಜೆಯಲ್ಲೂ ಕೊಂಡಾಡುವವನನ್ನಾಗಿ ನನ್ನನ್ನು ಮಾಡು, ಅನುಗ್ರಹಿಸು.
ಜಯತು ಜಯತು ದೇವೋ ದೇವಕೀನಂದನೋऽಯಂ
ಜಯತು ಜಯತು ಕೃಷ್ಣೋ ವೃಷ್ಣಿವಂಶಪ್ರದೀಪಃ |
ಜಯತು ಜಯತು ಮೇಘ-ಶ್ಯಾಮಲಃ ಕೋಮಲಾಂಗೋ-
ಜಯತು ಜಯತು ಪೃಥ್ವೀಭಾರನಾಶೋ ಮುಕುಂದಃ || ೨ ||
(ಮಾಲಿನೀವೃತ್ತಮ್— “ನನಮಯಯಯುತೇಯಂ ಮಾಲಿನೀ ಭೋಗಿಲೋಕೈಃ”)
ಅನುವಾದ—
ದೇವಕೀಸುತನಾದ ಈ ದೇವ ಕೃಷ್ಣನು ಜಯಿಸಲಿ, ಜಯಶೀಲನಾಗಲಿ. ವೃಷ್ಣಿವಂಶ / ಯಾದವಕುಲದಲ್ಲಿ ಹುಟ್ಟಿದ ಮಹಾಜ್ಞಾನಜ್ಯೋತಿಯಾದ ಶ್ರೀಕೃಷ್ಣನು ವಿಜಯವನ್ನೈದಲಿ, ಸದಾ ಗೆಲ್ಲಲಿ. ನೀಲಮೇಘಶ್ಯಾಮಲವರ್ಣದವನೂ, ಸುಕೋಮಲತನುವುಳ್ಳವನೂ ಆದ ವಾಸುದೇವನು ಮತ್ತೆ ಅಧರ್ಮವನ್ನು ಗೆಲ್ಲಲಿ. ದುಷ್ಟರನ್ನು ಗೆಲ್ಲಲಿ. ಹೀಗೆ ಭೂಭಾರಹರಣವನ್ನು ಮಾಡಿದ ಮುಚುಕುಂದವರದನಾದ ಮುಕುಂದನು ಸತ್ಯ, ಧರ್ಮ, ನ್ಯಾಯ, ನೀತಿಗಳ ವಿಜಯಪತಾಕೆಯನ್ನು ಮೇಲೆತ್ತಲಿ. ಸದಾ ಸತ್ಯಧರ್ಮಸ್ವರೂಪನಾದ ಭಗವಾನ್ ಶ್ರೀಕೃಷ್ಣನು ಲೋಕದಲ್ಲಿನ ಅಸತ್ಯ-ಅಧರ್ಮಗಳನ್ನು ನಿರಂತರವಾಗಿ ಜಯಿಸುತ್ತಿರಲಿ. ಸತ್ಯಧರ್ಮಧ್ವಜವನ್ನು ಶಾಶ್ವತವಾಗಿ ಎತ್ತರೆತ್ತರದಲ್ಲಿ ಹಾರಾಡುತ್ತಿರುವಂತೆ ಹಾರೈಸಲಿ.
ವಿವರಣೆ—
*(ಅಯಂ)* ಈ, *(ದೇವಕೀನಂದನಃ)* ದೇವಕೀದೇವಿಯ ಸುತನೂ, ಆಕೆಗೆ ಕಂಸನ ಸೆರೆಯಿಂದ ಮುಕ್ತಿಗೊಳಿಸಿಯೇ ಮುಂತಾಗಿ ಪರಮಾನಂದವಿತ್ತ ನಂದನೋದ್ಯಾನದಂತೆ ಆಕೆಯ ಮನಃಪ್ರಫುಲ್ಲಗೊಳಿಸಿದ, ದೇವಕೀಯವೆನಿಸಿದ ದೇವತೆಗಳಿಗೆ ಸಂಬಂಧಿಸಿದ (ಉದಾ— ರಾಜಕೀಯವು ರಾಜರಿಗೆ ಸಂಬಂಧಿಸಿದ್ದು) ಸಕಲ ವೇದೋಪನಿಷದ್ರಾಶಿಯಿಂದ ಪ್ರತಿಪಾದ್ಯನಾಗಿಯೂ ದೇವಕೀನಂದನನೆನಿಸಿದ, *(ದೇವಃ)* ಅನಂತಸೂರ್ಯಪ್ರಕಾಶನಾಗಿ ಸ್ವಯಂದೀಪ್ತನಾಗಿ / ಸ್ವಪ್ರಕಾಶದಿಂದ ಕಾಂತಿಯುತನಾಗಿ ಬೆಳಗುವವನಾಗಿ (ದಿವು / ದಿವ್ ದೀಪ್ತೌ ದ್ಯುತೌ ಕಾಂತೌ ವಾ), ದುಷ್ಟನಿಗ್ರಹಕ್ಕೆ ಬಾಲಲೀಲೆಗಳನ್ನೂ ಕೆಲವೆಡೆ ದ್ಯೂತ, ವ್ಯಾಪಾರೀದೃಷ್ಟಿಗಳನ್ನೂ “ಮುಳ್ಳಿನಿಂದಲೇ ಮುಳ್ಳನ್ನು ಕೀಳಬೇಕು” ಎಂಬಂತೆ ಮದಯುಕ್ತ ವಂಚಕರ ಮರ್ದನಕ್ಕೆ ತಾನೂ ಅದೇ ದಾರಿಯನ್ನು ಕೆಲವು ಸಂದರ್ಭಗಳಲ್ಲಿ ಹಿಡಿದು ಅಂಥವರನ್ನು ಇಲ್ಲವಾಗಿಸುವ / ನಿರಸನ ಮಾಡುವ, ತನ್ಮೂಲಕ ಲೋಕವ್ಯವಹಾರವನ್ನು ಸುಗಮಗೊಳಿಸುವ (ದಿವು / ದಿವ್ ಕ್ರೀಡಾಯಾಂ ವ್ಯವಹಾರೇ ಅರ್ದನೇ ಮದೇ ನಿರಸನೇ ವಾ), ದುಷ್ಟಮಥನಾದಿ ಸಕಲ ಯುದ್ಧಗಳಲ್ಲೂ ಸದಾ ಧರ್ಮಕ್ಕೆ ಜಯವಾಗಬೇಕೆಂಬ ಇಚ್ಛೆ / ಸಂಕಲ್ಪವುಳ್ಳ (ದಿವು / ದಿವ್ ವಿಜಿಗೀಷಾಯಾಮ್), ಭಕ್ತೇಷ್ಟಾರ್ಥಪ್ರದನಾಗಿ ಭಕ್ತರಿಗೆ ಪ್ರಿಯವನ್ನುಂಟುಮಾಡುವ (ದಿವು / ದಿವ್ ಪ್ರೀಣನೇ), ಸಕಲರ ಅಂತರಾತ್ಮನಾಗಿ, ಜಗದಾತ್ಮನಾಗಿ ಸಕಲರ ಗತಿಶೀಲತೆಗೆ / ಚಲನಶೀಲತೆಗೆ ಕಾರಣನಾದ (ದಿವು / ದಿವ್ ಗತೌ), ದುಷ್ಟಮಥನದ ಬಳಿಕ ವಿಜಯೋತ್ಸವದ ಘೋಷಗೈಯುವ (ದಿವು / ದಿವ್ ಪರಿಕೂಜನೇ), ಸದಾ ಪರಮಾನಂದಸ್ವರೂಪನಾದ (ದಿವು / ದಿವ್ ಮೋದನೇ), ಸದಾ ಸರ್ವಸ್ತುತನಾದ (ದಿವು / ದಿವ್ ಸ್ತುತೌ), ನಮಗೆ ನಿದ್ದೆಯಂಥ ದಿವ್ಯವಾದ ವರವನ್ನು ಅನುಗ್ರಹಿಸಿದ ಅಥವಾ ನಿದ್ದೆಯಲ್ಲಿ ಸ್ವಪ್ನ / ಕನಸಿನ ಲೋಕವನ್ನುಂಟುಮಾಡಬಲ್ಲವನಾಗಿ (ದಿವು / ದಿವ್ ಸ್ವಪ್ನೇ) ದೇವನೆನಿಸಿದ ಶ್ರೀಕೃಷ್ಣನು *(ಜಯತು)* ಸದಾ ಜಯಶೀಲನಾಗಲಿ, *(ಜಯತು)* ವಿಜಯಶಾಲಿಯಾಗಲಿ.
*(ವೃಷ್ಣಿವಂಶ-ಪ್ರದೀಪಃ)* ಸೂರ್ಯವಂಶದ ನಹುಷನ ಮಗ ಯಯಾತಿಗೆ ಇಬ್ಬರು ಪತ್ನಿಯರು: ದೇವಯಾನಿ ಮತ್ತು ಶರ್ಮಿಷ್ಠೆ. ದೇವಯಾನಿಗೆ ಇಬ್ಬರು ಮಕ್ಕಳು: ಯದು ಮತ್ತು ತುರ್ವಸು. ಯದುವಿನಿಂದ ಯಾದವ ವಂಶ. ಶರ್ಮಿಷ್ಠೆಗೆ ಮೂವರು ಮಕ್ಕಳು: ದ್ರುಹ್ಯು, ಅನು ಮತ್ತು ಪೂರು. ಪೂರುವಿನಿಂದ ಪೌರವವಂಶ. ಈ ವಂಶದಲ್ಲೇ ಕುರು ಜನಿಸಿದ್ದರಿಂದ ಮುಂದಿನ ದುರ್ಯೋಧನಾದಿಗಳು ಕೌರವರೆನಿಸಿದರು. ಪಾಂಡುವಿನ ಸುತರು ಪಾಂಡವರೆನಿಸಿದರು. ಯದು ಎಂಬವನ ವಂಶದಲ್ಲಿ ತಾಲಜಂಘನೆಂಬವನಿಗೆ ೧೦೦ ಮಂದಿ ತಾಲಜಂಘರೆಂದು ಪ್ರಸಿದ್ಧರಾದ ಪುತ್ರರು ಹುಟ್ಟಿದರು. ಭೃಗುವಂಶದ ಮಹರ್ಷಿ ಔರ್ವರೆಂಬವರ ಶಕ್ತಿಯಿಂದ (ಔರ್ವಾನಲ / ಬಡಬಾನಲ / ವಡವಾನಲ / ಸಮುದ್ರಾಂತಸ್ಥವಾದ ವಡವಾ ಅಥವಾ ಅಶ್ವರೂಪೀ ಅಗ್ನಿ / ಸಾಗರತಳದ ಅಗ್ನಿ) ಸಗರರಾಜನು ಇವರನ್ನು ಸಂಹರಿಸಿದನು. ಇವರಲ್ಲಿ ಹಿರಿಯವ ವೀತಿಹೋತ್ರ. ಆತನ ಮಗ ಮಧು. ಮಧುವಿನ ೧೦೦ ಮಕ್ಕಳಲ್ಲಿ ಹಿರಿಯವನು ವೃಷ್ಣಿ. ಹೀಗೆ, ಮಧು, ವೃಷ್ಣಿ, ಸಾತ್ವತ, ಯದು— ಇವರಿಂದ ಈ ವಂಶವು ಮಾಧವ, ವಾರ್ಷ್ಣೇಯ, ಸಾತ್ವತೀಯ ಮತ್ತು ಯಾದವ ಎಂಬ ಹೆಸರುಗಳನ್ನು ಪಡೆಯಿತು. ಇನ್ನೊಬ್ಬ ವೃಷ್ಣಿ ಇದೇ ವಂಶದ ಯುಧಾಜಿತ್ತುವಿನ ಮಗನಾದ ಅನಮಿತ್ರನ ೩ನೆಯ ಮಗ. ಹೀಗೆ, ಈ ವಂಶವು ವೃಷ್ಣಿವಂಶವೆನಿಸಿ, ಸಾಕ್ಷಾತ್ ಮಹಾವಿಷ್ಣುವು ತನ್ನ ಪೂರ್ಣಾಂಶದಿಂದ ಇದೇ ಕುಲದಲ್ಲಿ ವಾಸುದೇವ-ಕೃಷ್ಣನಾಗಿ ಜನಿಸಿದ ಕಾರಣ ವೃಷ್ಣಿವಂಶಕ್ಕೆ ಪ್ರದೀಪಪ್ರಾಯನಾದನು. ಅಂತಹ ವೃಷ್ಣಿಕುಲದೀಪಕನಾದ, *(ಕೃಷ್ಣಃ)* “ಕರ್ಷತಿ ಇತಿ ಕೃಷ್ಣಃ”— ಸಜ್ಜನರನ್ನು ತನ್ನ ಅಲೌಕಿಕ ಗುಣಸೌಂದರ್ಯದೈವತ್ವಾದಿಗಳಿಂದ ಭಕ್ತಿಪ್ರೇಮಯುತರನ್ನಾಗಿಸಿ ತನ್ನೆಡೆಗೆ ಆಕರ್ಷಿಸುವ, ದುಷ್ಟರನ್ನು ದೀಪದ ಹುಳುಗಳಂತೆ ತನ್ನೆಡೆಗೆ ಆಕರ್ಷಿಸಿ ನಾಶಮಾಡುವ, “ಕೃಷಿ”— ಭೂಮಿ / ಲೋಕ ದ “ಣ”— ಸುಸ್ಥಿತಿ / ನೆಮ್ಮದಿ ಗೆ ಕಾರಣನಾಗಿ ಕೃಷ್ಣನೆನಿಸಿದ ಭಗವಂತನು, *(ಜಯತು ಜಯತು)* ಸರ್ವದಾ ಧರ್ಮಸಂರಕ್ಷಣಕಾರ್ಯದಲ್ಲಿ, ದುಷ್ಟದಮನದಲ್ಲಿ, ಭೂಭಾರಹರಣದಲ್ಲಿ, ಶಿಷ್ಟಪರಿಪಾಲನೆಯಲ್ಲಿ, ಭಕ್ತರ ಇಷ್ಟಾರ್ಥಗಳನ್ನಿತ್ತು ಹಿತಕಾಯುವುದರ ಮೂಲಕ ವಿಜಯಧ್ವಜವನ್ನು ಸದಾ ಬಾನೆತ್ತರಕ್ಕೆ ಹಾರಿಸುವಂತಾಗಲಿ; ಆತನಿಗೆ ಜಯವಾಗಲಿ. ತನ್ಮೂಲಕ ಧರ್ಮಕ್ಕೆ ಜಯವಾಗಲಿ, ಅಧರ್ಮಕ್ಕೆ ಅಪಜಯವಾಗಲಿ.
ಮುಕುಂದ ಮೂರ್ಧ್ನಾ ಪ್ರಣಿಪತ್ಯ ಯಾಚೇ
ಭವನ್ತಮೇಕಾನ್ತಮಿಯನ್ತಮರ್ಥಮ್ |
ಅವಿಸ್ಮೃತಿಸ್ತ್ವಚ್ಚರಣಾರವಿನ್ದೇ
ಭವೇ ಭವೇ ಮೇऽಸ್ತು ಭವತ್ಪ್ರಸಾದಾತ್ || ೩ ||
(ಉಪೇಂದ್ರವಜ್ರಾವೃತ್ತಮ್ — “ಉಪೇಂದ್ರವಜ್ರಾ ಯದಿ ತೌ ಜಗೌ ಗಃ”)
*(ಮುಕುಂದ)* ಹೇ ಮುಕುಂದನೆ! *(ಭವನ್ತಮ್)* ತಮ್ಮನ್ನು = ನಿನ್ನನ್ನು, *(ಮೂರ್ಧ್ನಾ)* ಶಿರಸಾ / ತಲೆಬಾಗಿ, *(ಪ್ರಣಿಪತ್ಯ)* ನಮಸ್ಕರಿಸಿ, *(ಏಕಾನ್ತಮ್)* ಏಕಾಂತದಲ್ಲಿರುವಾಗಲೂ ಸದಾ ನಿನ್ನ ಸ್ಮರಣೆಯನ್ನೇ ಮಾಡುತ್ತಾ, *(ಇಯನ್ತಮ್ ಅರ್ಥಮ್)* ಇಷ್ಟುಮಾತ್ರ ಸಂಪತ್ತು / ಬೇಡಿಕೆ / ಆಶೋತ್ತರ ವನ್ನು, *(ಯಾಚೇ)* ಯಾಚಿಸುತ್ತೇನೆ / ಬೇಡುತ್ತೇನೆ; ಅದೇನೆಂದರೆ— *(ಭವತ್-ಪ್ರಸಾದಾತ್)* ತಮ್ಮ = ನಿನ್ನ ಅನುಗ್ರಹದಿಂದ / ವರಪ್ರಸಾದದಿಂದ / ಪ್ರಸನ್ನತೆಯಿಂದ / ಕೃಪೆಯಿಂದ, *(ಮೇ = ಮಹ್ಯಮ್)* ನನಗೆ, *(ಭವೇ ಭವೇ) ಜನ್ಮ ಜನ್ಮದಲ್ಲಿಯೂ / ಪ್ರತಿಜನ್ಮದಲ್ಲೂ, *(ತ್ವತ್-ಚರಣಾರವಿನ್ದೇ)* ನಿನ್ನ ಚರಣಾರವಿಂದಗಳಲ್ಲಿ / ಪಾದಕಮಲಗಳಲ್ಲಿ / ಅಡಿದಾವರೆಗಳಲ್ಲಿ, *(ಅವಿಸ್ಮೃತಿಃ)* ವಿಸ್ಮೃತಿಯಿಲ್ಲದಿರುವಿಕೆ / ಮರೆವು ಉಂಟಾಗದಂತೆ / ಸದಾ ನನ್ನ ಮನವು ನೆಲೆಸುವಂತೆ, *(ಅಸ್ತು)* ಆಗಲಿ.
ನಾಹಂ ವನ್ದೇ ತವ ಚರಣಯೋರ್ದ್ವಂದ್ವಮದ್ವಂದ್ವಹೇತೋಃ
ಕುಂಭೀಪಾಕಂ ಗುರುಮಪಿ ಹರೇ ನಾರಕಂ ನಾಪನೇತುಮ್ |
ರಮ್ಯಾ-ರಾಮಾ-ಮೃದುತನುಲತಾ-ನನ್ದನೇ ನಾಪಿ ರನ್ತುಂ
ಭಾವೇಭಾವೇ ಹೃದಯಭವನೇ ಭಾವಯೇಯಂ ಭವನ್ತಮ್ || ೪ ||
(ಅತ್ಯಷ್ಟಿಶ್ಛನ್ದೋಜಾತಂ ಸಪ್ತದಶಾಕ್ಷರಪಾದಕಂ ಮನ್ದಾಕ್ರಾನ್ತಾವೃತ್ತಮ್— “ಮನ್ದಾಕ್ರಾನ್ತಾ ಜಲಧಿಷಡಗೈರ್ಮ್ಭೌ ನತೌ ತೋ / ತಾದ್ ಗುರೂ ಚೇತ್”)
*(ಹರೇ)* ಹೇ ಶ್ರೀಹರಿಯೆ!, *(ಅದ್ವಂದ್ವಹೇತೋಃ)* ದ್ವಂದ್ವರಹಿತವಾದ ಸಮಾಧಿಸ್ಥಿತಿ / ಜೀವನ್ಮುಕ್ತಿಪ್ರಾಪ್ತಿಯ ಕಾರಣಕ್ಕಾಗಿ, *(ತವ ಚರಣಯೋಃ ದ್ವಂದ್ವಮ್)* ನಿನ್ನ ಪದಕಮಲಗಳೆರಡನ್ನು, *(ಅಹಂ)* ನಾನು, *(ನ ವನ್ದೇ)* ವಂದಿಸುತ್ತಿಲ್ಲ. *(ಕುಂಭೀಪಾಕಂ)* ಕುಂಭೀಪಾಕವೇ ಮುಂತಾದ, *(ಗುರುಂ ನಾರಕಮ್)* ಗುರುತರವಾದ / ಬೃಹತ್ತಾದ ನರಕವನ್ನು, *(ಅಪನೇತುಮ್ ಅಪಿ ನ)* ದೂರಮಾಡಲು ಕೂಡ ಅಲ್ಲ. *(ರಮ್ಯಾ-ರಾಮಾ-ಮೃದು-ತನುಲತಾ-ನಂದನೇ)* ರಮಣಿಯವಾದ / ಮನೋಹರವಾದ / ರಮ್ಯವಾದ / ರಮಿಸಲು ಯೋಗ್ಯವಾದ (ರನ್ತುಂ ಯೋಗ್ಯಂ ರಮ್ಯಮ್) ನಯನಾಭಿರಾಮವಾದ / ಕಣ್ಣುಗಳಿಗೆ ಆನಂದವನ್ನು ಕೊಡುವಂಥ ಸುಂದರವಾದ, ಮೃದುವಾದ / ಸುಕೋಮಲವಾದ ತನು / ದೇಹವೆಂಬ ಲತೆ / ಬಳ್ಳಿಗಳಿಂದ ಕೂಡಿದ ಸ್ತ್ರೀಯರ ನಂದನೋದ್ಯಾನದಲ್ಲಿ, *(ರನ್ತುಮ್ ಅಪಿ ನ)* ಕ್ರೀಡಿಸಲು (ರಮ್ ಕ್ರೀಡಾಯಾಮ್) / ರಮಿಸಲು ಸಹ ಅಲ್ಲ. ಆದರೆ, *(ಹೃದಯಭವನೇ)* ನನ್ನ ಹೃದಯಮಂದಿರದಲ್ಲಿ / ಚಿತ್ತಭಿತ್ತಿಯಲ್ಲಿ ಒಡಮೂಡುವ, *(ಭಾವೇಭಾವೇ)* ಪ್ರತಿಯೊಂದು ಭಾವನೆ / ಯೋಚನೆ / ಸಂಕಲ್ಪಗಳಲ್ಲೂ, *(ಭವನ್ತಮ್)* ನಿನ್ನನ್ನು, *(ಭಾವಯೇಯಮ್)* ಭಾವಿಸುವೆನು. ಅದಕ್ಕಾಗಿ ನಿನ್ನನ್ನು ವಂದಿಸುವೆನು. ಕೃಷ್ಣಾರ್ಪಣಬುದ್ಧಿಯಿಂದ ನಾನು ತ್ರಿ-ಕರಣಪೂರ್ವಕವಾಗಿ ವ್ಯವಹರಿಸುವೆನು. ಕಾಯೇನ, ವಾಚಾ, ಮನಸಾ— ದೇಹದಿಂದ, ಮಾತಿನಿಂದ, ಮನಸ್ಸಿನಿಂದಲೂ ಮಾಡುವ ಪ್ರತಿಯೊಂದು ಕರ್ಮ, ಮಾತು ಮತ್ತು ಚಿಂತನೆಗಳೂ ನಿನ್ನ ಪ್ರೇರಣೆಯಿಂದ, ನಿನ್ನ ಪ್ರೀತ್ಯರ್ಥವಾಗಿ, ನಾನು ನಿನ್ನ ಕೈಯ ಆಯುಧದಂತೆ, ನೀನು ನಡೆಸಿದಂತೆ ನಡೆದು, ಕೊನೆಗೆ ನಿನಗೇ ಅವೆಲ್ಲವೂ ಸಮರ್ಪಿತವಾಗಲಿ.
ನಾಸ್ಥಾ ಧರ್ಮೇ ವಸುನಿಚಯೇ ನೈವ ಕಾಮೋಪಭೋಗೇ
ಯದ್ಯದ್ ಭವ್ಯಂ ಭವತು ಭಗವನ್ ಪೂರ್ವಕರ್ಮಾನುರೂಪಮ್ |
ಏತತ್ ಪ್ರಾರ್ಥ್ಯಂ ಮಮ ಬಹುಮತಂ ಜನ್ಮಜನ್ಮಾಂತರೇऽಪಿ
ತ್ವತ್ಪಾದಾಂಭೋರುಹಯುಗಗತಾ ನಿಶ್ಚಲಾ ಭಕ್ತಿರಸ್ತು || ೫ ||
(ಅತ್ಯಷ್ಟಿಶ್ಛನ್ದೇ ಮನ್ದಾಕ್ರಾನ್ತಾವೃತ್ತಮ್)
ಹೇ ಭಗವಂತನೇ! ನನಗೆ ಧರ್ಮಾಚರಣೆಗಳಲ್ಲಾಗಲೀ, ಅರ್ಥಸಂಗ್ರಹದಲ್ಲಾಗಲೀ, ಕಾಮೋಪಭೋಗದಲ್ಲಾಗಲೀ ಆಸ್ಥೆ / ಆಸಕ್ತಿ ಇಲ್ಲ. ಹಿಂದೆ ನಾನು ಮಾಡಿದ ಪುಣ್ಯ-ಪಾಪಕರ್ಮಗಳಿಗೆ ಅನುರೂಪವಾಗಿ ಅದೇನು ಫಲಗಳು ಬಂದರೂ ಬರಲಿ, “ಬರುವುದೆಲ್ಲ ಬರಲಿ”. ಆದರೆ, ನನ್ನ ಬಹುಮುಖ್ಯವಾದ ಪ್ರಾರ್ಥನೆಯಿದು— “ಜನ್ಮಜನ್ಮಾಂತರಗಳಲ್ಲಿಯೂ ನಿನ್ನ ಪಾದಕಮಲಗಳೆರಡರಲ್ಲೇ ನಿಶ್ಚಲವಾದ, ಅಚಲವಾದ, ಎಂದಿಗೂ ವಿಚಲಿತವಾಗದ ನಿರಂತರ ಭಕ್ತಿಯು ನನಗಿರಲಿ”.
*_ದಿವಿ ವಾ ಭುವಿ ವಾ ಮಮಾಸ್ತು ವಾಸೋ_*
_*ನರಕೇ ವಾ ನರಕಾನ್ತಕ ಪ್ರಕಾಮಮ್ |*_
_*ಅವಧೀರಿತಶಾರದಾರವಿನ್ದೌ*_
*_ಚರಣೌ ತೇ ಮರಣೇऽಪಿ ಚಿನ್ತಯಾಮಿ || ೬ ||_*
_ಹೇ ನರಕವನ್ನು ಇಲ್ಲವಾಗಿಸಿ ಮೋಕ್ಷವನ್ನೀಯುವವನೆ! ನನ್ನ ವಾಸವು ಸ್ವರ್ಗದಲ್ಲಿರಲಿ, ಭೂಮಿಯಲ್ಲಿರಲಿ ಅಥವಾ ನರಕದಲ್ಲಿರಲಿ, ನಿನ್ನಿಚ್ಛೆಯಂತೆ ನಾನು ಎಲ್ಲೇ ವಾಸವಾಗಿರಲಿ; ಆದರೂ, ಶರತ್ಕಾಲದಲ್ಲಿ ಬೆಳಗುವ ಕೆಂದಾವರೆಯ ಹೊಳಪನ್ನೂ ಮೀರುವ ಕೆಂಪಾದ ನಿನ್ನ ಪಾದಪದ್ಮಗಳಲ್ಲೇ ಸದಾ ನೆಲೆಸಿರುವ ಚಿತ್ತವುಳ್ಳವನಾಗಿ, ಮರಣಕಾಲದಲ್ಲೂ ನಿನ್ನ ಚರಣಕಮಲಗಳನ್ನೇ ಚಿಂತಿಸಲು ಬಯಸುತ್ತೇನೆ._
*ಕೃಷ್ಣ ತ್ವದೀಯ-ಪದ-ಪಙ್ಕಜ-ಪಞ್ಜರಾನ್ತಃ*
*ಅದ್ಯೈವ ಮೇ ವಿಶತು ಮಾನಸರಾಜಹಂಸಃ |*
*ಪ್ರಾಣಪ್ರಯಾಣಸಮಯೇ ಕಫವಾತಪಿತ್ತೈಃ*
*ಕಣ್ಠಾವರೋಧನವಿಧೌ ಸ್ಮರಣಂ ಕುತಸ್ತೇ || ೭ ||*
(ಉಕ್ತಾ ವಸನ್ತತಿಲಕಾ ತಭಜಾಜಗೌಗಃ ― ವಸನ್ತತಿಲಕಾವೃತ್ತಮ್)
_ಹೇ ಕೃಷ್ಣ!! ಸ್ವೇಚ್ಛೆಯಿಂದ ವಿಹರಿಸುತ್ತಿರುವ ನನ್ನ ಮನವೆಂಬ ರಾಜಹಂಸವು ನಿನ್ನ ಪಾದಕಮಲಗಳೆಂಬ ಪಂಜರದೊಳಗೆ ಇವತ್ತೇ / ಈಗಲೇ ಪ್ರವೇಶಿಸಿ ಅದರೊಳಗೇ ಸದಾ ಬಂಧಿಯಾಗಲಿ. ಯಾಕೆಂದರೆ, ಪ್ರಾಣ ಬಿಡುವ ಹೊತ್ತಿಗೆ / ಆ ಕಾಲಕ್ಕೆ ಕಫವಾತಪಿತ್ತಾದಿಗಳಿಂದ ಗಂಟಲುಗಟ್ಟಿರುವಾಗ ನಿನ್ನ ಸ್ಮರಣೆ, ಕೀರ್ತನಾದಿಗಳು ಹೇಗೆ ತಾನೇ ಸಾಧ್ಯವಾದೀತು?_
*ಚಿನ್ತಯಾಮಿ ಹರಿಮೇವ ಸನ್ತತಂ*
*ಮನ್ದಮನ್ದಹಸಿತಾನನಾಮ್ಬುಜಮ್ |*
*ನನ್ದಗೋಪತನಯಂ ಪರಾತ್ಪರಂ*
*ನಾರದಾದಿಮುನಿವೃನ್ದವನ್ದಿತಮ್ || ೮ ||*
(ಏಕಾದಶಾಕ್ಷರಾಯಾಂ ವೃತ್ತ್ಯಾಂ ತ್ರಿಷ್ಟುಪ್-ಛನ್ದಸಿ ರಥೋದ್ಧತಾ-ವೃತ್ತಮ್— “ರಾತ್ ಪರೈರ್ನರಲಗೈಃ-ರಥೋದ್ಧತಾ)
_ದೇವರ್ಷಿಗಳಾದ ನಾರದಾದಿ ಮುನಿಸಮೂಹದಿಂದ ವಂದಿತನಾದ, ಮೃದುಮಧುರವಾದ ತಿಳಿನಗೆ / ಮಂದಸ್ಮಿತವನ್ನು ಬೀರುವ ಮುಖಕಮಲವುಳ್ಳ, ನಂದಗೋಪಸುತನಾದ, ಪರಾಪ್ರಕೃತಿಗಿಂತ ಶ್ರೇಷ್ಠನೂ ಅದರಾಚೆಗೂ ಮೀರಿರುವವನಾದ, ಪರಮೇಶ್ವರನಾದ ಶ್ರೀಹರಿಯನ್ನು / ಶ್ರೀಕೃಷ್ಣನನ್ನು / ವಾಸುದೇವನನ್ನು ಎಡೆಬಿಡದೆ (ಸನ್ತತಮ್—ಸಂ ಸಮ್ಯಕ್— ಚೆನ್ನಾಗಿ; ತತಮ್— ತನು ವಿಸ್ತಾರೇ— ಸತತವೂ, ಎಡೆಬಿಡದೆ, ನಿರಂತರವೂ, ಸವಿಸ್ತಾರವಾಗಿ / ಸುದೀರ್ಘವಾಗಿ; ತನು ಶ್ರದ್ಧಾಯಾಮ್— ಶ್ರದ್ಧಾಪೂರ್ವಕವಾಗಿ; ತನು ಉಪಕರಣೇ— ಆತನ ಕೈಯ ಉಪಕರಣವೇ ನಾನಾಗಿ, ಆತನ ಪ್ರಚೋದನೆಯಿಂದಾಗಿಯೇ) ಚಿಂತಿಸುತ್ತೇನೆ / ಸ್ಮರಿಸುತ್ತೇನೆ (ಚಿತಿ ಸ್ಮೃತ್ಯಾಮ್)._
*ಕರ-ಚರಣಸರೋಜೇ ಕಾನ್ತಿಮನ್ನೇತ್ರಮೀನೇ*
*ಶ್ರಮಮುಷಿಭುಜವೀಚಿವ್ಯಾಕುಲೇऽಗಾಧಮಾರ್ಗೇ |*
*ಹರಿಸರಸಿವಿಗಾಹ್ಯಾಪೀಯ ತೇಜೋಜಲೌಘಂ*
*ಭವಮರುಪರಿಖಿನ್ನಃ ಖೇದಮದ್ಯ ತ್ಯಜಾಮಿ || ೯ ||*
(“ನನಮಯಯಯುತೇऽಯಂ ಮಾಲಿನೀ ಭೋಗಲೋಕೈಃ”— ಪಞ್ಚದಶಾಕ್ಷರವೃತ್ತ್ಯಾಂ ವೈದಿಕಾಯಾಮ್ ಅತಿಶಕ್ವರೀ / ಅತಿಶರ್ಕರೀಚ್ಛನ್ದೋಜಾತಂ ಲೌಕಿಕಂ ಮಾಲಿನೀವೃತ್ತಮ್”)
_ಶ್ರೀಹರಿಯ ಹಸ್ತ-ಪಾದಗಳೆಂಬ ಕಮಲಗಳಿಂದ ಸುಶೋಭಿತವಾದ, ಬಹುಕಾಂತಿಯುತವಾದ / ಹೊಳಪುಳ್ಳ ಹರಿನಯನಗಳೆಂಬ ಮೀನುಗಳುಳ್ಳ, ಬಹುಶ್ರಮಸಾಧ್ಯವಾದ (ಮುಷ ವಧೇ ಲುಣ್ಠನೇ ಛಿದಿ ಚ) ಕಂಸಾದಿದುಷ್ಟರ ವಧೆ, ದುಷ್ಟಮೋಹನ / ನವನೀತಚೌರ್ಯ, ಶಿಶುಪಾಲಾದಿ ಅಸುರರ ಶಿರಶ್ಛೇದನಗೈದಂತಹ ಶ್ರೀಹರಿಯ ಬಾಹುಗಳೆಂಬ ಅಲೆಗಳಿಂದ ಪ್ರಕ್ಷುಬ್ಧವಾಗಿ ಅತಿಗಂಭೀರವೂ ದುರವಗಾಹ್ಯವೂ ಆಗಿ (ಅರ್ಥೈಸಲು ಕಠಿನವಾದ) ಕ್ರಮಿಸಲು ಅಗಾಧವಾಗಿರುವ ಪಥವುಳ್ಳ, ಶ್ರೀಹರಿಯೆಂಬ ಸರೋವರದಲ್ಲಿ ಮುಳುಗೆದ್ದು, ಆತನ ತೇಜಸ್ಸೆಂಬ ಜಲರಾಶಿಯನ್ನು ಪಾನಮಾಡಿ, ಸಂಸಾರವೆಂಬ / ಬದುಕೆಂಬ ಸಂಕಟಸರಮಾಲೆಗಳಿಂದ ಕೂಡಿದ ಮರುಭೂಮಿಯ ವಾಸದಿಂದ ದುಃಖಿತನಾದ ನಾನು, ಎಲ್ಲ ದುಃಖ-ದುಮ್ಮಾನಗಳನ್ನೂ ಕಳೆದುಕೊಳ್ಳುತ್ತೇನೆ. ಅಥವಾ— …ಬಹುಶ್ರಮಪರಿಹಾರಕವಾದ, ಹರಿಭುಜಗಳೇ ಅಲೆಗಳಾಗುಳ್ಳ ಶ್ರೀಹರಿಯೆಂಬ ಸರೋವರದಲ್ಲಿ ಮಿಂದೆದ್ದು, ಅದರ ಜಲಪಾನದಿಂದ ಬದುಕಿನ ಬವಣೆಗಳನ್ನೆಲ್ಲ ನೀಗಿಕೊಳ್ಳುತ್ತೇನೆ._
*ಸರಸಿಜನಯನೇ ಸಶಙ್ಖಚಕ್ರೇ*
*ಮುರಭಿದಿ ಮಾ ವಿರಮಸ್ವ ಚಿತ್ತ ರನ್ತುಮ್ |*
*ಸುಖತರಮಪರಂ ನ ತು ಜಾನೇ*
*ಹರಿಚರಣಸ್ಮರಣಾಮೃತೇನ ತುಲ್ಯಮ್ || ೧೦ ||*
_ಎಲೆ ಚಿತ್ತವೆ / ಮನವೆ! ಶ್ರೀಹರಿಯ ಚರಣಕಮಲದ್ವಂದ್ವದ ಸ್ಮರಣೆಯೆಂಬ ಅಮೃತತುಲ್ಯವಾದ ಬೇರಾವ ಸುಖವನ್ನೂ ನಾನರಿಯೆ. ಹಾಗಾಗಿ, ನೀನು ಕಮಲನೇತ್ರನೂ, ಶಂಖ-ಚಕ್ರ-ಗದಾ-ಪದ್ಮಾದಿಗಳ ಸಹಿತನೂ, ಮುರಾಸುರನನ್ನು ಭೇದಿಸಿದವನೂ / ಸಂಹರಿಸಿದವನೂ ಆದ ಆ ಶ್ರೀಹರಿಯ ಸ್ಮರಣೆಯಲ್ಲೇ ಅನವರತವೂ ರಮಿಸುವುದನ್ನು / ಆನಂದವಾಗಿ ವಿಹರಿಸುವುದನ್ನು ಬಿಡಬೇಡ._
*ಮಾ ಭೀರ್ಮನ್ದಮನೋ ವಿಚಿನ್ತ್ಯ ಬಹುಧಾ ಯಾಮೀಶ್ಚಿರಂ ಯಾತನಾಃ*
*ನಾಮೀ ನಃ ಪ್ರಭವನ್ತಿ ಪಾಪರಿಪವಃ ಸ್ವಾಮೀ ನನು ಶ್ರೀಧರಃ |*
*ಆಲಸ್ಯಂ ವ್ಯಪನೀಯ ಭಕ್ತಿಸುಲಭಂ ಧ್ಯಾಯಸ್ವ ನಾರಾಯಣಂ*
*ಲೋಕಸ್ಯ ವ್ಯಸನಾಪನೋದನಕರೋ ದಾಸಸ್ಯ ಕಿಂ ನ ಕ್ಷಮಃ || ೧೧ ||*
(“ಸೂರ್ಯಾಶ್ವೈರ್ಮಸಜಸ್ತಥಾ ಸಗುರವಃ ಶಾರ್ದೂಲವಿಕ್ರೀಡಿತಮ್”— ಅತಿಧೃತಿನಾಮಚ್ಛಂದಸಿ ಏಕೋನವಿಂಶತ್ಯಕ್ಷರಾವೃತ್ತ್ಯಾಂ ಶಾರ್ದೂಲವಿಕ್ರೀಡಿತವೃತ್ತಮ್)
_ಎಲೈ ಮೂಢಚಿತ್ತನೆ! ಕೇವಲ ಯಾಮಕಾಲದಷ್ಟೇ ಚಿರವಾಗಿರಬಲ್ಲ ಕ್ಷಣಿಕವಾದ ಬಹುವಿಧವಾದ ಯಾತನೆ-ದುಃಖ-ನೋವುಗಳನ್ನು ಚಿಂತಿಸಿ ಭೀತನಾಗಬೇಡ. ಸಾಕ್ಷಾತ್ ಸಿರಿದೇವಿಯ ರಮಣನಾದ ಹರಿಯು ನಮ್ಮ ಸ್ವಾಮಿಯಾಗಿರಲು, ಈ ಪಾಪಜನ್ಯವಾದ ರಿಪುಗಳು ನಮ್ಮನ್ನೇನೂ ಮಾಡಲು ಶಕ್ತವಾಗಲಾರವು. ಹಾಗಾಗಿ, ನೀನು ನಿನ್ನ ಜಾಡ್ಯವನ್ನು ತೊರೆದು, ಭಕ್ತಿಗೆ ಬೇಗನೆ ಒಲಿಯುವ ಶ್ರೀಮನ್ನಾರಾಯಣನನ್ನು ಧ್ಯಾನಿಸು. ಇಡೀ ಜಗತ್ತಿನ ದುಃಖವನ್ನೇ ಹೋಗಲಾಡಿಸಬಲ್ಲ ಆತನು, ತನ್ನ ದಾಸನ ನೋವನ್ನು ಪರಿಹರಿಸಲು ಅಸಮರ್ಥನಾಗಲು ಸಾಧ್ಯವೆ? ಖಂಡಿತವಾಗಿಯೂ ತನ್ನ ಶರಣಾಗತರ ಕಷ್ಟವನ್ನು ಶ್ರೀಹರಿಯು ಪರಿಹರಿಸಿಯೇ ತೀರುವನೆಂಬುದು ಇದರ ತಾತ್ಪರ್ಯ._
*ಭವ-ಜಲಧಿ-ಗತಾನಾಂ ದ್ವನ್ದ್ವ-ವಾತಾಹತಾನಾಂ*
*ಸುತ-ದುಹಿತೃ-ಕಳತ್ರ-ತ್ರಾಣ-ಭಾರಾರ್ದಿತಾನಾಮ್ |*
*ವಿಷಮ-ವಿಷಯತೋಯೇ ಮಜ್ಜತಾಮಪ್ಲವಾನಾಂ*
*ಭವತು ಶರಣಮೇಕೋ ವಿಷ್ಣುಪೋತೋ ನರಾಣಾಮ್ || ೧೨ ||*
(“ನನಮಯಯಯುತೇಯಂ ಮಾಲಿನೀಭೋಗಿಲೋಕೈಃ”— ಪಞ್ಚದಶಾಕ್ಷರವೃತ್ತ್ಯಾಂ ವೈದಿಕಾಯಾಮ್ ಅತಿಶಕ್ವರೀ / ಅತಿಶರ್ಕರೀಚ್ಛನ್ದೋಜಾತಂ ಲೌಕಿಕಂ ಮಾಲಿನೀವೃತ್ತಮ್”)
_ಸಂಸಾರಸಾಗರದಲ್ಲಿರುವ ಸುಖ-ದುಃಖಾದಿ ನಾನಾ ದ್ವಂದ್ವಗಳೆಂಬ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ, ಮಗ-ಮಗಳು-ಪತ್ನಿ ಮುಂತಾದ ಕುಟುಂಬಿಕರ ರಕ್ಷಣೆಯ ಹೊರೆಯಿಂದ ನಲುಗಿದ, ಶಬ್ದ-ಸ್ಪರ್ಶ-ರೂಪ-ರಸ-ಗಂಧಾದಿ ಅತ್ಯಂತ ವಿಷಮಯವಾದ ಇಂದ್ರಿಯವಿಷಯಗಳೆಂಬ ಜಲರಾಶಿಯಲ್ಲಿ ನಿಮಗ್ನವಾಗಿ ಮುಳುಗುತ್ತಿರುವಂಥ ಮನುಜರಿಗೆ ವಿಷ್ಣುಪರಮಾತ್ಮನೆಂಬ ನೌಕೆಯೊಂದೇ ಅದ್ವಿತೀಯವಾದ ಶರಣಾಗತಿಯ ಆಧಾರಸ್ಥಾನವಾಗಲಿ._
*ಭವಜಲಧಿಮಗಾಧಂ ದುಸ್ತರಂ ನಿಸ್ತರೇಯಂ*
*ಕಥಮಹಮಿತಿ ಚೇತೋ ಮಾ ಸ್ಮಗಾಃ ಕಾತರತ್ವಮ್ |*
*ಸರಸಿಜದೃಶಿ ದೇವೇ ತಾವಕೀ ಭಕ್ತಿರೇಕಾ*
*ನರಕಭಿದಿ ನಿಷಣ್ಣಾ ತಾರಯಿಷ್ಯತ್ಯವಶ್ಯಮ್ || ೧೩ ||*
(“ನನಮಯಯಯುತೇಯಂ ಮಾಲಿನೀಭೋಗಿಲೋಕೈಃ”— ಪಞ್ಚದಶಾಕ್ಷರವೃತ್ತ್ಯಾಂ ವೈದಿಕಾಯಾಮ್ ಅತಿಶಕ್ವರೀ / ಅತಿಶರ್ಕರೀಚ್ಛನ್ದೋಜಾತಂ ಲೌಕಿಕಂ ಮಾಲಿನೀವೃತ್ತಮ್”)
_ಸಂಸಾರಸಾಗರವು / ಬದುಕೆಂಬ ವಾರಿಧಿಯು ಅಗಾಧವೂ (ತಳಗಾಣದ್ದೂ), ದುಸ್ತರವೂ / ತರಣಮಾಡಲು ದುಸ್ಸಾಧ್ಯವಾದದ್ದೂ / ದಾಟಲು ಕಷ್ಟಸಾಧ್ಯವಾದದ್ದೂ, ನಿಸ್ತರವೂ / ದಾಟಲು ಅಸಾಧ್ಯವಾದದ್ದೂ ಆಗಿದ್ದು, ನಾನು ಹೇಗೆ ಇದರಿಂದ ಪಾರಾಗಬಲ್ಲೆನೋ ಎಂಬ ಚಿತ್ತವುಳ್ಳವನಾಗಿ ಕಾತರನಾಗದಿರು / ವ್ಯಸನಗೊಳ್ಳದಿರು. ನರಕಾಸುರನನ್ನು ಸಂಹರಿಸಿದ, ನಮ್ಮ ಕಷ್ಟವೆಂಬ ನರಕವನ್ನು ನಾಶಮಾಡುವ, ಪುಂಡರೀಕಾಕ್ಷನಾದ ದೇವದೇವ ಶ್ರೀಹರಿಯಲ್ಲಿ ನಿನ್ನದಾದ ಏಕನಿಷ್ಠ ಭಕ್ತಿಯು ನಿಕ್ಷೇಪಿಸಲ್ಪಟ್ಟರೆ, ಆತನೇ “ಯೋಗಕ್ಷೇಮಂ ವಹಾಮ್ಯಹಮ್” ಎಂಬಂತೆ ತನ್ನನ್ನೇ ನಂಬಿ ಶರಣಾದವರನ್ನು ಭವಸಾಗರದಿಂದ ಖಂಡಿತವಾಗಿಯೂ ಪಾರುಮಾಡುವನು. ಇದರಲ್ಲಿ ಸಂಶಯವಿಲ್ಲ._
*ತೃಷ್ಣಾತೋಯೇ ಮದನಪವನೋದ್ಧೂತಮೋಹೋರ್ಮಿಮಾಲೇ*
*ದಾರಾವರ್ತೇ ತನಯಸಹಜಗ್ರಾಹಸಙ್ಘಾಕುಲೇ ಚ |*
*ಸಂಸಾರಾಖ್ಯೇ ಮಹತಿ ಜಲಧೌ ಮಜ್ಜತಾಂ ನಸ್ತ್ರಿಧಾಮನ್*
*ಪಾದಾಮ್ಭೋಜೇ ವರದ ಭವತೋ ಭಕ್ತಿನಾವಂ ಪ್ರಯಚ್ಛ || ೧೪ ||*
(ಅತ್ಯಷ್ಟಿಶ್ಛನ್ದೋಜಾತಂ ಸಪ್ತದಶಾಕ್ಷರಪಾದಕಂ ಮನ್ದಾಕ್ರಾನ್ತಾವೃತ್ತಮ್— “ಮನ್ದಾಕ್ರಾನ್ತಾ ಜಲಧಿಷಡಗೈರ್ಮ್ಭೌ ನತೌ ತೋ / ತಾದ್ ಗುರೂ ಚೇತ್”)
_ಮೂರೂ ಲೋಕಗಳೊಡೆಯನೆ! ವರದಾಯಕನೆ!! ಇಂದ್ರಿಯವಿಷಯತೃಷೆಯೆಂಬ ಜಲದಲ್ಲಿ ಕಾಮನೆಂಬ ಗಾಳಿಗೆ ಸಿಲುಕಿ ಮೇಲೇಳುವ ಮೋಹವೆಂಬ ಹೆದ್ದೆರೆಗಳ ಸಾಲುಗಳುಳ್ಳ, ಪತ್ನಿಯೆಂಬ ಸುಳಿಯುಳ್ಳ ಹಾಗೂ ಸುತ-ಸಹೋದರರೆಂಬ ಮೊಸಳೆಗಳ ಸಮೂಹದಿಂದ ಪ್ರಕ್ಷುಬ್ಧವಾದ, ಸಂಸಾರವೆಂಬ ಮಹಾಸಾಗರದಲ್ಲಿ ಮುಳುಗುತ್ತಿರುವ ನಮಗೆ ನಿನ್ನ ಪಾದಕಮಲಗಳಲ್ಲೇ ಸದಾ ನೆಲೆಯಾದ ಭಕ್ತಿಯೆಂಬ ನಾವೆಯನ್ನು / ನೌಕೆಯನ್ನು / ದೋಣಿಯನ್ನು ದಯಪಾಲಿಸು._
*ಮಾ ದ್ರಾಕ್ಷಂ ಕ್ಷೀಣಪುಣ್ಯಾನ್ ಕ್ಷಣಮಪಿ ಭವತೋ*
*ಭಕ್ತಿಹೀನಾನ್ ಪದಾಬ್ಜೇ*
*ಮಾ ಶ್ರೌಷಂ ಶ್ರಾವ್ಯಬನ್ಧಂ ತವಚರಿತಮಪಾ-*
*-ಸ್ಯಾನ್ಯದಾಖ್ಯಾನಜಾತಮ್ |*
*ಮಾ ಸ್ಮಾರ್ಷಂ ಮಾಧವ ತ್ವಾ-ಮಪಿ ಭುವನಪತೇ*
*ಚೇತಸಾऽಪಹ್ನುವಾನಾನ್*
*ಮಾ ಭೂವಂ ತ್ವತ್ಸಪರ್ಯಾವ್ಯತಿಕರರಹಿತೋ*
*ಜನ್ಮಜನ್ಮಾನ್ತರೇऽಪಿ || ೧೫ ||*
(ಏಕವಿಂಶತ್ಯಕ್ಷರಾ ವೃತ್ತಿಃ; ಪ್ರಕೃತಿಶ್ಛನ್ದಃ; ಸ್ರಗ್ಧರಾವೃತ್ತಮ್— “ಮ್ರಭ್ನೈರ್ಯಾನಾಂ ತ್ರಯೇಣ ತ್ರಿಮುನಿಯತಿಯುತಾ ಸ್ರಗ್ಧರಾ ಕೀರ್ತಿತೇऽಯಮ್”)
_ಹೇ ಭುವನಪತಿಯೇ! ಜಗನ್ನಾಥನೇ!! ನಿನ್ನ ಪಾದಕಮಲಗಳಲ್ಲಿ ಭಕ್ತಿಯಿಲ್ಲದ ಪುಣ್ಯಹೀನರನ್ನು ಒಂದು ಕ್ಷಣವೂ ನಾನು ನೋಡದಂತಾಗಲಿ. ಸುಶ್ರಾವ್ಯವಾದ ನಿನ್ನ ಲೀಲಾಚರಿತೆಯನ್ನು ಹೊರತು ಬೇರಾವ ಕ್ಷುಲ್ಲಕ ಲೌಕಿಕ ನಶ್ವರ ಕಥೆಗಳನ್ನು ನಾನು ಕೇಳದಂತಾಗಲಿ. ಹೇ ಮಾಧವನೆ! ನಿನ್ನನ್ನು ನಿರಾಕರಿಸುವವರನ್ನು ನಾನು ಸ್ಮರಿಸುವಂತೆಯೂ ಕೂಡ ಆಗದಿರಲಿ. ಅಂತೆಯೇ, ಜನ್ಮಜನ್ಮಾಂತರಗಳಲ್ಲೂ ನನಗೆ ನಿನ್ನ ಸೇವಾ-ಪೂಜಾ-ನಾಮಸ್ಮರಣ-ಕೀರ್ತನಾದಿಗಳಲ್ಲಿ ತೊಡಗುವ ಯೋಗವು ತಪ್ಪದಿರಲಿ; ಇವುಗಳಿಲ್ಲದ ಜೀವನ ಎಂದಿಗೂ ನನ್ನದಾಗದಿರಲಿ._
*ಜಿಹ್ವೇ ಕೀರ್ತಯ ಕೇಶವಂ ಮುರರಿಪುಂ*
*ಚೇತೋ ಭಜ ಶ್ರೀಧರಮ್*
*ಪಾಣಿದ್ವನ್ದ್ವ ಸಮರ್ಚಯಾಚ್ಯುತಕಥಾಃ*
*ಶ್ರೋತ್ರದ್ವಯ ತ್ವಂ ಶೃಣು |*
*ಕೃಷ್ಣಂ ಲೋಕಯ ಲೋಚನದ್ವಯ ಹರೇ-*
*-ರ್ಗಚ್ಛಾಙ್ಘ್ರಿಯುಗ್ಮಾಲಯಂ*
*ಜಿಘ್ರ ಘ್ರಾಣ ಮುಕುನ್ದಪಾದತುಲಸೀಂ*
*ಮೂರ್ಧನ್ನಮಾಧೋಕ್ಷಜಮ್ || ೧೬ ||*
(“ಸೂರ್ಯಾಶ್ವೈರ್ಮಸಜಸ್ತಥಾ ಸಗುರವಃ ಶಾರ್ದೂಲವಿಕ್ರೀಡಿತಮ್”— ಅತಿಧೃತಿನಾಮಚ್ಛಂದಸಿ ಏಕೋನವಿಂಶತ್ಯಕ್ಷರಾವೃತ್ತ್ಯಾಂ ಶಾರ್ದೂಲವಿಕ್ರೀಡಿತವೃತ್ತಮ್)
_ಎಲೈ ನಾಲಗೆಯೇ / ಜಿಹ್ವೆಯೇ! ಕೇಶವನ ಮಹಿಮೆಯನ್ನು ಸದಾ ಕೀರ್ತನೆ ಮಾಡು. ಹೇ ಚಿತ್ತ / ಮನವೇ! ಮುರಾಸುರನನ್ನು ಕೊಂದ ಮುರವೈರಿ / ಮುರಾರಿ ಯನ್ನು ಭಜಿಸು. ಎಲೈ ೨ ಕೈಗಳೇ! ಸಿರಿಪತಿಯಾದ ಶ್ರೀಧರನನ್ನು ಚೆನ್ನಾಗಿ ಅರ್ಚಿಸಿ / ಪೂಜಿಸಿ. ಎಲೈ ನನ್ನೆರಡು ಕಿವಿಗಳೇ! ನೀವು ಎಂದಿಗೂ ಚ್ಯುತನಾಗದ / ನಾಶವಿಲ್ಲದ ಅಚ್ಯುತನ ಚರಿತ್ರೆ / ಕಥೆ ಗಳನ್ನು ಕೇಳಿ. ಹೇ ನನ್ನೆರಡು ಕಣ್ಣುಗಳೆ! ಎಲ್ಲದರಲ್ಲೂ ಕೃಷ್ಣನನ್ನೇ ಸದಾ ಕಾಣಿರಿ. ಎಲೈ ನನ್ನ ಪಾದಯುಗಳವೇ! ನೀನು ಶ್ರೀಹರಿಯ ಲೋಕವಾದ ವೈಕುಂಠದೆಡೆಗೆ ನಡೆ. ಹೇ ನಾಸಿಕವೆ / ಘ್ರಾಣೇಂದ್ರಿಯವೆ! ಮುಕುಂದನ ಪಾದಗಳಿಗರ್ಪಿತವಾದ ತುಳಸಿಯ ಸುವಾಸನೆಯನ್ನು ಆಘ್ರಾಣಿಸು. ಹೇ ಶಿರವೆ! ನೀನು ಆ ಅಧೋಕ್ಷಜನನ್ನು ನಮಿಸು._
_ಕೇಶವ— ಕ - ಬ್ರಹ್ಮ, ಈಶ - ಶಿವ, ವ - ಇವರೀರ್ವರೂ ಯಾವನ ವಶವಾಗಿ ವರ್ತಿಸುವರೋ ಅಂತಹ ವಿಷ್ಣು. ಹೀಗೆ, ಕೇಶವನೆಂದರೆ ತ್ರಿಮೂರ್ತ್ಯಾತ್ಮಕ ಶ್ರೀಮನ್ನಾರಾಯಣ / ಪರಬ್ರಹ್ಮ / ಆದಿಶಕ್ತಿ / ಸದಾಶಿವ. ಮುಕುಂದ— “ಮುಕುಂ ಮೋಕ್ಷಂ ದದಾತಿ ಇತಿ ಮುಕುಂದಃ”— ಮೋಕ್ಷವನ್ನೀಯುವವನೇ ಮುಕುಂದ. ಅಧೋಕ್ಷಜ— ಬ್ರಹ್ಮನ ಅಧೋದ್ವಾರದಿಂದ ಒಮ್ಮೆ ಹೊರಬಂದಿರುವುದರಿಂದ ಅಧ+ ಉಕ್ಷ +ಜ._
*ಹೇ ಲೋಕಾಃ ಶ್ರುಣುತ ಪ್ರಸೂತಿಮರಣ-*
*-ವ್ಯಾಧೇಶ್ಚಿಕಿತ್ಸಾಮಿಮಾಂ*
*ಯೋಗಜ್ಞಾಸ್ಸಮುದಾಹರನ್ತಿ ಮುನಯೋ*
*ಯಾಂ ಯಾಜ್ಞವಲ್ಕ್ಯಾದಯಃ |*
*ಅನ್ತರ್ಜ್ಯೋತಿರಮೇಯಮೇಕಮಮೃತಂ*
*ಕೃಷ್ಣಾಖ್ಯಮಾಪೀಯತಾಂ*
*ತತ್ಪೀತಂ ಪರಮೌಷಧಂ ವಿತನುತೇ*
*ನಿರ್ವಾಣಮಾತ್ಯನ್ತಿಕಮ್ || ೧೭ ||*
(“ಸೂರ್ಯಾಶ್ವೈರ್ಮಸಜಸ್ತಥಾ ಸಗುರವಃ ಶಾರ್ದೂಲವಿಕ್ರೀಡಿತಮ್”— ಅತಿಧೃತಿನಾಮಚ್ಛಂದಸಿ ಏಕೋನವಿಂಶತ್ಯಕ್ಷರಾವೃತ್ತ್ಯಾಂ ಶಾರ್ದೂಲವಿಕ್ರೀಡಿತವೃತ್ತಮ್)
_ಹೇ ಲೋಕದ ಜನರೇ! ಜನನ-ಮರಣವೆಂಬ ಮಹಾವ್ಯಾಧಿಗೆ ಯೋಗಮರ್ಮವನ್ನರಿತ ಯಾಜ್ಞವಲ್ಕ್ಯಾದಿ ಮುನಿಗಳು ಯಾವ ಈ ಚಿಕಿತ್ಸೆಯನ್ನು ಉದಾಹರಿಸುತ್ತಾರೋ ಅದನ್ನು ಕೇಳಿರಿ— ಎಂದಿಗೂ ಮೃತಿಯಿರದೆ ಅಮೃತತ್ತ್ವವೆನಿಸಿದ, ಏಕಮೇವಾದ್ವಿತೀಯವಾದ, ಮಾಪನಕ್ಕೆ ಸಿಗದೆ / ಅಳತೆಗಳವಡದೆ ಅಮೇಯವೆನ್ನಿಸಿದ, ಸಕಲರ ಅಂತರಂಗದಲ್ಲಿ ಬೆಳಕಿನ ಸ್ವರೂಪವಾಗಿದ್ದು ದಾರಿದೋರುವುದರಿಂದ ಅಂತರ್ಜ್ಯೋತಿಯೆನಿಸಿದ, ಕೃಷ್ಣನೆಂಬ ಅಮೃತವನ್ನು ಪಾನಮಾಡಬೇಕು. ಅದು ಕುಡಿಯಲ್ಪಟ್ಟರೆ ಜನ್ಮ-ಜರಾ-ಮರಣಗಳಿಗೆ ಪರಮೌಷಧವಾಗಿ ಫಲಕಾರಿಯಾಗುವುದು. ಇದರ ಫಲವೇ ಆತ್ಯಂತಿಕ / ಅಂತಿಮ / ಶಾಶ್ವತ ವಾದ ನಿರ್ವಾಣ / ಮೋಕ್ಷ / ಅಪವರ್ಗ / ಮುಕ್ತಿ / (ಜೀವಾತ್ಮಪರಮಾತ್ಮ)ಸಂಗಮ / ವಿಶ್ರಾಂತಿ / ಗತಿ / ನಿಶ್ಚಲತೆ / ಅ-ಚ್ಯುತತ್ವ / ವಿಷ್ಣು— ವನ್ನು ಪ್ರಾಪ್ತಿಮಾಡುವುದಾಗಿದೆ._
*ಹೇ ಮರ್ತ್ಯಾಃ ಪರಮಂ ಹಿತಂ ಶ್ರುಣುತ ವೋ*
*ವಕ್ಷ್ಯಾಮಿ ಸಂಕ್ಷೇಪತಃ*
*ಸಂಸಾರಾರ್ಣವಮಾಪದೂರ್ಮಿಬಹುಳಂ*
*ಸಮ್ಯಕ್ಪ್ರವಿಶ್ಯ ಸ್ಥಿತಾಃ |*
*ನಾನಾಜ್ಞಾನಮಪಾಸ್ಯ ಚೇತಸಿ ನಮೋ*
*ನಾರಾಯಣಾಯೇತ್ಯಮುಂ*
*ಮನ್ತ್ರಂ ಸಪ್ರಣವಂ ಪ್ರಣಾಮಸಹಿತಂ*
*ಪ್ರಾವರ್ತಯಧ್ವಂ ಮುಹುಃ || ೧೮ ||*
(“ಸೂರ್ಯಾಶ್ವೈರ್ಮಸಜಸ್ತಥಾ ಸಗುರವಃ ಶಾರ್ದೂಲವಿಕ್ರೀಡಿತಮ್”— ಅತಿಧೃತಿನಾಮಚ್ಛಂದಸಿ ಏಕೋನವಿಂಶತ್ಯಕ್ಷರಾವೃತ್ತ್ಯಾಂ ಶಾರ್ದೂಲವಿಕ್ರೀಡಿತವೃತ್ತಮ್)
_ಆಪತ್ತುಗಳೆಂಬ ಬಹುಹೆದ್ದೆರೆಗಳಿಂದ ಕೂಡಿದ ಬದುಕೆಂಬ ಮಹಾಸಮುದ್ರವನ್ನು ಪ್ರವೇಶಿಸಿ ಸ್ಥಿತರಾಗಿರುವ / ಅದರ ನಡುವೆ ಸಿಲುಕಿ ತೊಳಲಾಡುತ್ತಿರುವ ಈ ಮರ್ತ್ಯಲೋಕ / ಮರಣವಿರುವ ಲೋಕದಲ್ಲಿರುವ ಎಲೈ ಮನುಜರೇ!! ನಿಮಗೆ ಪರಮಹಿತಕಾರಿಯಾದದ್ದನ್ನು ಅತಿಸಂಕ್ಷೇಪವಾಗಿ ಹೇಳುವೆನು, ಕೇಳಿರಿ. ನೀವುಗಳು ನಿಮ್ಮ ಚಿತ್ತದಲ್ಲಿರುವ ನಾನಾವಿಧವಾದ ಪೂರ್ವಾಗ್ರಹ, ಭಿನ್ನ ಭಿನ್ನವಾದ ಪರಸ್ಪರ ವೈರುದ್ಧ್ಯವುಳ್ಳ ತಿಳುವಳಿಕೆ ಅಥವಾ ನಾನಾರೀತಿಯ ಅಜ್ಞಾನ-ಅವಿದ್ಯಾಮಾಯೆಗಳನ್ನು ಬದಿಗೊತ್ತಿ ದೂರೀಕರಿಸಿ, ಸರ್ವದಾ / ಯಾವಾಗಲೂ ಪ್ರಣವ / ಓಂಕಾರ ಸಹಿತವಾದ ಹಾಗೂ ಪ್ರಣಾಮ / ನಮಸ್ಕಾರ ಸಮೇತವಾದ *“ಓಂ ನಮೋ ನಾರಾಯಣಾಯ”* ಎಂಬೀ ಮಂತ್ರವನ್ನು ಭಕ್ತಿಶ್ರದ್ಧಾದರಾತಿಶಯಪೂರ್ವಕ ಮನಸಾಪ್ರಣಾಮಸಹಿತ ಪುನಃ ಪುನಃ ಮನದಲ್ಲೇ ಪುನರಾವರ್ತಿಸುತ್ತಾ ಜಪಿಸಿರಿ. (ಇದು ನಿಮ್ಮ ಸಕಲ ಕಷ್ಟಗಳನ್ನೂ ಪರಿಹರಿಸಿ, ನಿಮಗೆ ಹಿತವನ್ನುಂಟುಮಾಡಿ, ನಿಮ್ಮನ್ನು ಈ ಭವಸಾಗರದಿಂದ ಉದ್ಧರಿಸಿ ಸದಾನಂದವನ್ನು, ಪ್ರಸನ್ನಚಿತ್ತತೆಯನ್ನು, ಸಕಲೇಷ್ಟಾರ್ಥಗಳನ್ನೂ ಆ ಭಗವಂತನ ಅನುಗ್ರಹದಿಂದ ಕೊಡುವುದು.)_
*ಪೃಥ್ವೀ ರೇಣುರಣುಃ ಪಯಾಂಸಿ ಕಣಿಕಾಃ*
*ಫಲ್ಗುಃ ಸ್ಫುಲಿಙ್ಗೋ ಲಘುಃ*
*ತೇಜೋ ನಿಃಶ್ವಸನಂ ಮರುತ್ತನುತರಂ*
*ರನ್ಧ್ರಂ ಸುಸೂಕ್ಷ್ಮಂ ನಭಃ |*
*ಕ್ಷುದ್ರಾ ರುದ್ರಪಿತಾಮಹಪ್ರಭೃತಯಃ*
*ಕೀಟಾಸ್ಸಮಸ್ತಾಸ್ಸುರಾಃ*
*ದೃಷ್ಟೇ ಯತ್ರ ಸ ತಾವಕೋ ವಿಜಯತೇ*
*ಭೂಮಾऽವಧೂತಾವಧಿಃ || ೧೯ ||*
(“ಸೂರ್ಯಾಶ್ವೈರ್ಮಸಜಸ್ತಥಾ ಸಗುರವಃ ಶಾರ್ದೂಲವಿಕ್ರೀಡಿತಮ್”— ಅತಿಧೃತಿನಾಮಚ್ಛಂದಸಿ ಏಕೋನವಿಂಶತ್ಯಕ್ಷರಾವೃತ್ತ್ಯಾಂ ಶಾರ್ದೂಲವಿಕ್ರೀಡಿತವೃತ್ತಮ್)
_ಎಲ್ಲಿ / ಯಾವಾಗ (ಯತ್ರ), ಕಾಲಾತೀತವಾದ (ಅವಧೂತ-ಅವಧಿಃ), ಪರಮಾತ್ಮನಾದ ನಿನ್ನ (ತಾವಕಃ), ಮಹತ್ತು (ಭೂಮಾ), ದರ್ಶನವಾಗುವುದೋ / ತಿಳಿದುಬರುವುದೋ ಆಗ / ಅದರ ಮುಂದೆ (ದೃಷ್ಟೇ), ಈ ಇಡೀ ಭೂಮಂಡಲವು ಧೂಳಿನ ಕಣವಾಗಿಯೂ (ಪೃಥ್ವೀ ರೇಣುಃ ಅಣುಃ), ಅದಕ್ಕಿಂತಲೂ ಅಗಾಧವಾದ ಜಲರಾಶಿಯೂ (ಪಯಾಂಸಿ), ಕೇವಲ ಕಿರುಬಿಂದು / ಹನಿಗಳಂತೆಯೂ (ಕಣಿಕಾಃ), ಅಗ್ನಿಯು (ತೇಜಃ), ಕೇವಲ ಒಂದು ಸಣ್ಣ ಆರಿಹೋದ / ತಣಿದು ಹೋದ (ಲಘುಃ ಫಲ್ಗುಃ), ಕಿಡಿಯಂತೆಯೂ (ಸ್ಫುಲಿಂಗಃ), ಮಾರುತವಾದರೋ / ವಾಯುವಾದರೋ (ಮರುತ್), ಬಹು ಅಲ್ಪವಾದ (ತನುತರಮ್), ನಿಃಶ್ವಾಸದಂತೆಯೂ / ಹೊರಬಿಟ್ಟ ಮೆಲ್ಲುಸಿರಿನಂತೆಯೂ (ನಿಃಶ್ವಸನಮ್), ವಿಶಾಲವಾದ ಆಗಸ / ಅಂತರಿಕ್ಷವಾದರೋ (ನಭಃ), ಅತಿಸೂಕ್ಷ್ಮ / ಕಿರಿ ದಾದ ತೂತಿನಂತೆಯೂ (ಸುಸೂಕ್ಷ್ಮಂ ರಂಧ್ರಮ್), ರುದ್ರ-ಬ್ರಹ್ಮಾದಿಗಳಾದರೋ ಆ ಸರ್ವಮೂಲಶಕ್ತಿಯ ಮುಂದೆ ಕೇವಲ ಅಲ್ಪರಾಗಿಯೂ (ರುದ್ರ-ಪಿತಾಮಹ-ಪ್ರಭೃತಯಃ ಕ್ಷುದ್ರಾಃ), ಇಂದ್ರಾದಿ ಸಮಸ್ತ ಸುರರು / ದೇವತೆಗಳು ಕೇವಲ ಕ್ರಿಮಿ-ಕೀಟಗಳಂತೆಯೂ (ಸಮಸ್ತಾಃ ಸುರಾಃ ಕೀಟಾಃ) ಗೋಚರಿಸುವರು / ಅನುಭವಕ್ಕೆ ಬರುವರು. ಇದು ಅವರ್ಣನೀಯವೂ, ಅಗೋಚರವೂ, ಯೋಗಿಗಳ ಭಕ್ತಿಧ್ಯಾನಜ್ಞಾನಾದಿಜನ್ಯವಾದ ಅನುಭವಮಾತ್ರಗಮ್ಯವೂ, ಸರ್ವಶಕ್ತವೂ, ಸರ್ವಾಧಾರವೂ, ಸರ್ವಜ್ಞವೂ, ಆದಿಮಧ್ಯಾಂತರಹಿತವೂ, ಕಲ್ಪನಾತೀತವೂ ಆದ ಮೂಲಶಕ್ತಿಯ ಅಗಾಧತೆ, ಅನಂತತೆ, ಅಸೀಮತೆಯ ಒಂದು ಸಣ್ಣ ಉಪಮೆಯಷ್ಟೇ ಆಗಿರುವುದು. ಈ ಅನಂತಕೋಟಿಬ್ರಹ್ಮಾಂಡವೆಂಬ ಸಮಸ್ತಸೃಷ್ಟಿಯು ಆ ಮೂಲಶಕ್ತಿಯ ಕೇವಲ ಪಾದದ ಕಿರುಬೆರಳಿನಡಿಯ ಒಂದು ಸಣ್ಣ ಧೂಳಿನ ಕಣಕ್ಕೆ ಸಮವಷ್ಟೇ ಎಂಬುದು “ಭಗವದವತಾರಗಳು” ಎಂಬ ಪ್ರವಚನಮಾಲಿಕೆಯ ಸಾಂದ್ರಮುದ್ರಿಕೆಯಲ್ಲಿನ ಬನ್ನಂಜೆ ಗೋವಿಂದಾಚಾರ್ಯರ ಮತ._
*ಬದ್ಧೇನಾಞ್ಜಲಿನಾ ನತೇನ ಶಿರಸಾ*
*ಗಾತ್ರೈಸ್ಸರೋಮೋದ್ಗಮೈಃ*
*ಕಣ್ಠೇನ ಸ್ವರಗದ್ಗದೇನ ನಯನೇ-*
*-ನೋದ್ಗೀರ್ಣಬಾಷ್ಪಾಮ್ಬುನಾ |*
*ನಿತ್ಯಂ ತ್ವಚ್ಚರಣಾರವಿನ್ದಯುಗಳ-*
*-ಧ್ಯಾನಾಮೃತಾಸ್ವಾದಿನಾ-*
*-ಮಸ್ಮಾಕಂ ಸರಸೀರುಹಾಕ್ಷ ಸತತಂ*
*ಸಮ್ಪದ್ಯತಾಂ ಜೀವಿತಮ್ || ೨೦ ||*
(“ಸೂರ್ಯಾಶ್ವೈರ್ಮಸಜಸ್ತಥಾ ಸಗುರವಃ ಶಾರ್ದೂಲವಿಕ್ರೀಡಿತಮ್”— ಅತಿಧೃತಿನಾಮಚ್ಛಂದಸಿ ಏಕೋನವಿಂಶತ್ಯಕ್ಷರಾವೃತ್ತ್ಯಾಂ ಶಾರ್ದೂಲವಿಕ್ರೀಡಿತವೃತ್ತಮ್)
_(ಭಕ್ತಿಪೂರ್ವಕವಾಗಿ)ಜೋಡಿಸಿದ / ನಮಸ್ಕರಿಸಿದ ಅಂಗೈಗಳಿಂದ / ಬದ್ಧಾಂಜಲಿಯಿಂದ, (ವಿನಯಪೂರ್ವಕವಾಗಿ) ಬಾಗಿದ ತಲೆಯಿಂದ, (ಹರ್ಷದಿಂದ) ರೋಮಾಂಚಿತವಾದ ಪುಳಕಿತ ಶರೀರವುಳ್ಳ, (ಭಾವೋದ್ರೇಕತೆಯಿಂದಾಗಿ) ಗದ್ಗದವಾದ ಸ್ವರವುಳ್ಳ ಕಂಠದಿಂದ— ಪ್ರತಿದಿನವೂ ನಿನ್ನ ಪಾದಕಮಲಗಳೆರಡರ ಧ್ಯಾನವೆಂಬ ಅಮೃತವನ್ನು ಎಡೆಬಿಡದೆ ಆಸ್ವಾದಿಸುತ್ತಿರುವ ನಮ್ಮ ಬದುಕನ್ನು ಪರಿಪೂರ್ಣವನ್ನಾಗಿಯೂ, ಸಾರ್ಥಕವನ್ನಾಗಿಯೂ ಮಾಡು ಹೇ ಕಮಲನಯನನೇ! ಪುಂಡರೀಕಾಕ್ಷನೇ!! ರಾಜೀವನೇತ್ರನೇ!!! ಸರಸೀರುಹಾಕ್ಷನೇ!!!!_
हे गोपालक हे कृपाजलनिधे हे सिन्धुकन्यापते
हे कंसान्तक हे गजेन्द्रकरुणापारीण हे माधव ।
हे रामानुज हे जगत्रयगुरो हे पुण्डरीकाक्ष मां
हे गोपीजननाथ पालय परं जानामि न त्वां विना ॥ २१ ॥
(सूर्याश्वैर्मसजस्तथा सगुरवः "शार्दूलविक्रीडितम् " वृत्तम्)
हे गवां (धेनूनां)पालक! हे दयासागर! हे समुद्र-तनया-वल्लभ! हे कंसमर्दन! गजेन्द्रस्यार्तनादं श्रुत्वा मकरमुखात् रक्षितवान् हे गजेन्द्रवरद! हे मधुपुत्र यदुपौत्र लक्ष्मीनाथ विद्यापते! भोः बलरामकनिष्ठसहोदर! भोः त्रिलोकनाथ जगद्गुरो! भोः कमलायतनेत्र! हे गेपीजनवल्लभ! (त्वं) मां रक्ष । (अहं) त्वया विना अपरम् अभयप्रदमाश्रयं न जानामि प्रभो देवदेव!!!
ಅಯ್ಯಾ ಗೋವುಗಳನ್ನು ಪಾಲಿಸುವ ಗೋಪಾಲಕನೇ! ಹೇ ಕೃಪಾಜಲನಿಧಿಯೇ / ದಯಾವಾರಿಧಿಯೇ! ಹೇ ಸಮುದ್ರರಾಜನ ಮಗಳಾದ ಮಹಾಲಕ್ಷ್ಮೀದೇವಿಯ ರಮಣನೇ / ಸಿಂಧುಕನ್ಯಾಪತೇ! ಅಯ್ಯಾ ಕಂಸಾಸುರನನ್ನು ಕೊಂದವನೇ! ಹೇ ಗಜೇಂದ್ರನ ಆರ್ತಮೊರೆಗೆ ಓಗೊಟ್ಟು ದಯೆದೋರಿ ಮೊಸಳೆಯಿಂದ ರಕ್ಷಿಸಿದವನೇ! ಹೇ ಯದುಮಹಾರಾಜನ ಪುತ್ರನಾದ ಮಧುವಿನ ಸುತನಾದ ಮಾಧವನೇ! (यदुपुत्रस्य मधोः अपत्यं पुमान् माधवः) ಲಕ್ಷೀಧವನೇ! (मा लक्ष्मीः, तस्याः धवः पतिः माधवः) ವಿದ್ಯಾಧಿಪನೇ! (मा विद्या, तस्याः धवः पतिः माधवः) ಹೇ ಬಲರಾಮನ ತಮ್ಮನೆ! ಹೇ ಜಗದ್ಗುರುವೆ / ಮೂರ್ಲೋಕಗಳೊಡೆಯನೆ! ಹೇ ಪುಂಡರೀಕ / ಕಮಲದಂತೆ ಅಗಲವಾದ ಕಣ್ಣುಗಳುಳ್ಳವನೆ! (पुण्डति अन्यपुष्पाणां गर्वं चूर्णीकरोति इति पुण्डरीकः) ಹೇ ಗೋಪಿಯರ ಒಡೆಯನೇ! ನನ್ನನ್ನು ಪಾಲಿಸು / ರಕ್ಷಿಸು / ಸಲಹು. ನಿನ್ನನ್ನು ಬಿಟ್ಟು ಬೇರಾರನ್ನೂ ನಾನರಿಯೆನು ಹೇ ದೇವದೇವನೆ!!!
भक्तापाय-भुजङ्ग-गारुड-मणिस्त्रैलोक्यरक्षामणिः
गोपीलोचन-चातकाम्बुज-मणि-स्सौन्दर्य-मुद्रामणिः ।
यः कान्तामणि-रुक्मिणी-घनकुच-द्वन्द्वैकभूषामणिः
श्रेयो देवशिखामणिर्दिशतु नो गोपाल-चूडामणिः ॥ २२ ॥
(सूर्याश्वैर्मसजस्तथा सगुरवः " शार्दूलविक्रीडितम् " —वृत्तम्)
यो भक्तानाम् अपायरूपि-सर्पाणाम् उपायरूपि- / परिहाररूपि-गारुडमणिः (गरुडरेखा) इव वर्तते, जगत्त्रयपालक-वरिष्ठोऽस्ति, स्वातीनक्षत्रकाले वर्षबिन्दून् प्रतीक्षमाणाः चातकपक्षिणां वर्षधारा यथा आनन्दं तनोति तथैव तादृशानां चातकपक्षि-रूपाणां गोपीनयनकमलानां नीलमेघश्याम इव दृश्यमानः तासां गोपीनां मनांसि प्रसादयति, सौन्दर्यातिशये मुद्राङ्गुलीयकनवरत्नमणिः (सौन्दर्यातिशयस्य प्रतीकः, परिपूर्णसौन्दर्यस्य साकारमूर्तिः), भार्यासु वरायाः रमणीमण्याः रुक्मिण्याः पीनस्तनद्वययोः अलङ्कारमणिः, रत्नेषु चूडामणिरिव गोपालकेषु / यादवेषु श्रेष्ठः, समस्तदेवानां मुकुटमणिप्रायः श्रीकृष्णवासुदेवः अस्मभ्यं (नः) श्रेयो (परगतिं, कीर्तिं) दिशतु (ददातु, तनोतु) ॥
ಯಾವನು ಭಕ್ತರ ಅಪಾಯ / ತೊಂದರೆಗಳೆಂಬ ಸರ್ಪಗಳಿಗೆ ಉಪಾಯ / ಪರಿಹಾರರೂಪಿ ಗಾರುಡಮಣಿ (ಗರುಡರೇಖೆ) ಯಂತಿರುವನೋ, ಮೂರು ಲೋಕಗಳನ್ನೂ ಪಾಲಿಸುವುದರಲ್ಲಿ ಶ್ರೇಷ್ಠನಾಗಿರುವನೋ, ಸ್ವಾತಿನಕ್ಷತ್ರಕಾಲದಲ್ಲಿ ಮಳೆಹನಿಗೆ ಕಾಯುತ್ತಿರುವ ಚಾತಕಪಕ್ಷಿಗಳಿಗೆ ವರ್ಷಧಾರೆಯು ಆನಂದವನ್ನುಂಟುಮಾಡುವಂತೆಯೇ ಅಂತಹ ಚಾತಕಪಕ್ಷಿಗಳಂತಿರುವ ಗೋಪಿಯರ ನಯನಕಮಲಗಳಿಗೆ ನೀಲಮೇಘಶ್ಯಾಮನಂತೆ ಕಂಗೊಳಿಸಿ ಮನತಣಿಸುವನೋ, ಸೌಂದರ್ಯಾತಿಶಯದಲ್ಲಿ ಮುದ್ರೆಯುಂಗುರದ ನವರತ್ನಮಣಿಯಂತಿರುವನೋ (ಸೌಂದರ್ಯಾತಿಶಯದ ಪ್ರತೀಕನೋ, ಪರಿಪೂರ್ಣಸೌಂದರ್ಯವೇ ಮೂರ್ತಿವೆತ್ತಂತಿರುವನೋ), ಪತ್ನಿಯರಲ್ಲಿ ಶ್ರೇಷ್ಠಳಾದ ಪತ್ನೀರತ್ನಳಾದ ರುಕ್ಮಿಣೀದೇವಿಯ ಉನ್ನತವಾದ ಕುಚದ್ವಯಗಳಿಗೆ ಅಲಂಕಾರ ಭೂಷಣದಂತಿರುವನೋ, ರತ್ನಗಳಲ್ಲಿ ಚೂಡಾಮಣಿಯು ಅತ್ಯಂತ ವಿಶೇಷವಾಗಿರುವಂತೆ ಗೋಪಾಲಕರಲ್ಲಿ / ಯಾದವರಲ್ಲಿ ಶ್ರೇಷ್ಠನಾಗಿರುವನೋ, ೩೩ ಕೋಟಿ ದೇವತೆಗಳಿಗೂ ಕಿರೀಟಪ್ರಾಯನಾದ ವಸುದೇವಸುತ ವಾಸುದೇವ ಶ್ರೀಕೃಷ್ಣನು ನಮಗೆ ಕೀರ್ತಿಯನ್ನೂ, ಪರಮಗತಿಯನ್ನೂ ಉಂಟುಮಾಡಲಿ. || ೨೨ ||
Comments
Post a Comment