ಶ್ರೀನಾರಾಯಣಾಷ್ಟಾಕ್ಷರಸ್ತೋತ್ರಮ್
ಶ್ರೀನಾರಾಯಣಾಷ್ಟಾಕ್ಷರಸ್ತೋತ್ರಮ್
(ಅನುಷ್ಟುಪ್ ಛಂದ:)
ಓಂಕಾರನಾದಮೂಲಾಯ | ಪ್ರಣವಾಕ್ಷರರೂಪಿಣೇ ||
ವರನಿರ್ಗುಣತತ್ತ್ವಾಯ | ನಮೋ ನಾರಾಯಣಾಯ ತೇ ||೧||
(ಓಂಕಾರನಾದಮೂಲಾಯ)ಓಂಕಾರನಾದಕ್ಕೆ ಮೂಲಕಾರಣಸ್ವರೂಪನಾದ, (ಪ್ರಣವಾಕ್ಷರರೂಪಿಣೇ)ಹಾಗೆಯೇ, ಪ್ರಣವವಾಚ್ಯವಾದ ಓಂಕಾರಸ್ವರೂಪಿಯೂ ಆದ, (ವರನಿರ್ಗುಣತತ್ತ್ವಾಯ)ಶ್ರೇಷ್ಠವಾದ ಸತ್ತ್ವ-ರಜ-ತಮರಹಿತಸ್ವರೂಪನಾದ, (ನಾರಾಯಣಾಯ)ನಾರಾ:=ನೀರು,ಮೋಕ್ಷ; ಅಯನ=ಮನೆ,ಆಶ್ರಯಸ್ಥಾನ; ನೀರಲ್ಲೇ/ಕ್ಷೀರಸಾಗರದಲ್ಲೇ ವಾಸವಾಗಿರುವ/ಶೇಷತಲ್ಪದಲ್ಲಿ ಮಲಗಿರುವ,ಮೋಕ್ಷಮೂಲನಾದ ಶ್ರೀಮನ್ನಾರಾಯಣನೇ!, (ತೇ ನಮ:)ನಿನಗೆ ನಮಸ್ಕಾರ.
ನರಸಿಂಹಾಯ ದತ್ತಾಯ | ಪ್ರಹ್ಲಾದವರದಾಯ ಚ ||
ಮತ್ಸ್ಯೇಂದ್ರನಾಥವಂದ್ಯಾಯ | ನಮೋ ನಾರಾಯಣಾಯ ತೇ ||೨||
(ಪ್ರಹ್ಲಾದವರದಾಯ ನರಸಿಂಹಾಯ)ಶ್ರೀಹರಿಯ ಭಕ್ತನೂ,ದೇವರ್ಷಿ ನಾರದರಿಂದ ಗರ್ಭಸ್ಥ ಶಿಶುವಾಗಿದ್ದಾಗಲೇ ತಾಯಿ ಕಯಾದುವಿಗೆ ಹೇಳಿದ ಹರಿಭಕ್ತಿಯುಕ್ತಕಥೆಯನ್ನು ಕೇಳಿ, ಶ್ರೀಹರಿಮಂತ್ರೋಪದೇಶ ಪಡೆದವನೂ, (ವೈಕುಂಠದ್ವಾರಪಾಲಕರಾದ ಜಯ-ವಿಜಯರು ನಿತ್ಯಬ್ರಹ್ಮಚಾರಿಗಳೂ,ಬ್ರಹ್ಮಮಾನಸಪುತ್ರರೂ ಆದ ಸನಕ-ಸನಂದನ-ಸನತ್ಕುಮಾರ ಹಾಗೂ ಸನತ್ಸುಜಾತರ ಶಾಪಕ್ಕೆ ತುತ್ತಾಗಿ ಕೃತಯುಗದಲ್ಲಿ ಹಿರಣ್ಯಕಶಿಪು-ಹಿರಣ್ಯಾಕ್ಷರಾಗಿ ಜನಿಸಿದರು.)ಹಿರಣ್ಯಕಶಿಪುವಿನ ಮಗನೂ ಆದ ಪ್ರಹ್ಲಾದನಿಗೆ (ಮುಂದೆ ಮಂತ್ರಾಲಯದ ರಾಘವೇಂದ್ರಸ್ವಾಮಿಗಳಾಗಿ ಅವತರಿಸಿದವನೂ ಅವನೇ ಎನ್ನಲಾಗಿದೆ)ವರದಾತನೂ ಆಗಿರುವ, ಪ್ರಹ್ಲಾದನ ಭಕ್ತಿಗೆ ಮೆಚ್ಚಿ ದೈತ್ಯನಾದ ಹಿರಣ್ಯಕಶಿಪುವಿನ ಸಂಹಾರಕ್ಕಾಗಿ ನರಸಿಂಹನಾಗಿ ಅವತರಿಸಿದ ಶ್ರೀಮನ್ನಾರಾಯಣನಿಗೆ ವಂದನೆ.(ದತ್ತಾಯ)ಬ್ರಹ್ಮಮಾನಸಪುತ್ರರಾದ ಅತ್ರಿಮುನಿಗಳು, ಹಾಗೂ ಪರಮಪತಿವ್ರತೆಯೂ,ಸೌಂದರ್ಯವತಿಯೂ ಆದ ಅನಸೂಯಾದೇವಿ- ಇವರ ಸುತನಾಗಿ ಜನಿಸಿದ ತ್ರಿಮೂರ್ತಿಸ್ವರೂಪನಾದ ದತ್ತಾತ್ರೇಯನಿಗೂ ವಂದನೆ. (ಮತ್ಸ್ಯೇಂದ್ರನಾಥವಂದ್ಯಾಯ)ನಾಥಪರಂಪರೆಯಲ್ಲಿ ಮೊದಲು ಅವತರಿಸಿದ,ನವನಾರಾಯಣರಲ್ಲಿ ಕವಿನಾರಾಯಣನ ಅವತಾರಿಯಾದ, ದತ್ತನ ಪರಮಭಕ್ತನಾದ,ಸಿದ್ಧಪುರುಷನಾದ ಮತ್ಸ್ಯೇಂದ್ರನಾಥನಿಂದ ವಂದಿಸಲ್ಪಡುವ,(ನಾರಾಯಣಾಯ)
ಶ್ರೀಮನ್ನಾರಾಯಣನಾದ (ತೇ)ನಿನಗೆ,(ನಮ:)ಮತ್ತೆ ಮತ್ತೆ ನಮಿಸುತ್ತೇನೆ.
ಮೋದಕಪ್ರಿಯವರದಾಯ | ನಮೋ ಮೋಹನರೂಪಿಣೇ ||
ಮೋದಬೋಧಸ್ವರೂಪಾಯ | ನಮೋ ನಾರಾಯಣಾಯ ತೇ ||೩||
(ಮೋದಕಪ್ರಿಯವರದಾಯ)ಮೋದಕವೆಂಬ ಸಿಹಿತಿನಿಸನ್ನು ಬಹುವಾಗಿ ಇಷ್ಟಪಡುವಂಥ ಈಶಪುತ್ರನಾದ ಗಣೇಶನಿಗೂ ‘ಆದಿಪೂಜಿತನಾಗು,ವಿಘ್ನನಿವಾರಕನಾಗು’ ಎಂದು ಅನುಗ್ರಹಿಸಿದ,(ಮೋಹನರೂಪಿಣೇ)ಎಲ್ಲರನ್ನೂ ಸೆಳೆಯುವಂತಹ ಆಕರ್ಷಕರೂಪಿಯಾದ ಮಹಾವಿಷ್ಣುವಿಗೆ,(ನಮ:)ನಮಸ್ಕಾರ. (ಮೋದಬೋಧಸ್ವರೂಪಾಯ)ಆನಂದರೂಪನೂ ಹಾಗೂ ಸುಜ್ಞಾನಸ್ವರೂಪಿಯೂ ಆದ,(ನಾರಾಯಣಾಯ)ವಿಷ್ಣುವೇ! (ತೇ)
ನಿನಗೆ,(ನಮ:)ನಮಸ್ಕಾರ.
ನಾರಾಯಣಾಯ ಸತ್ತ್ವಾಯ | ಲೋಕಪಾಲನಕಾರಿಣೇ ||
ನಾರದಮುನಿವಂದ್ಯಾಯ | ನಮೋ ನಾರಾಯಣಾಯ ತೇ ||೪||
(ಲೋಕಪಾಲನಕಾರಿಣೇ)ಬ್ರಹ್ಮಸೃಷ್ಟಿಯ ಜಗತ್ತಿನ ಸ್ಥಿತಿಕರ್ತನಾದ,ಪಾಲನಾಕರ್ತೃವಾದ,(ಸತ್ತ್ವಾಯ)ಸಾತ್ತ್ವಿಕಗುಣಪೂರ್ಣನಾದ,(ನಾರಾಯಣಾಯ)ದೇವೋತ್ತಮನಾದ ನಾರಾಯಣನನ್ನು ತ್ರಿಕರಣಪೂರ್ವಕವಾಗಿ(ಕಾಯೇನ ವಾಚಾ ಮನಸಾ) ನಮಿಸುತ್ತೇನೆ, ಸ್ತುತಿಸುತ್ತೇನೆ ಮತ್ತು ಸ್ಮರಿಸುತ್ತೇನೆ. (ನಾರದಮುನಿವಂದ್ಯಾಯ)ದೇವರ್ಷಿಗಳಾದ ನಾರದಮುನಿಗಳಿಂದ ಸದಾಕಾಲವೂ ಜಪಿಸಲ್ಪಡುವ ಮಂತ್ರಪ್ರತಿಪಾದ್ಯನಾದ(ನಾರಾಯಣ ಮಂತ್ರವನ್ನು ಲೋಕಕ್ಕೆ ಪ್ರಚುರಪಡಿಸಿದವರೇ ನಾರದರು. “ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಜಗದೊಳಗೆ” ಎಂಬುದಾಗಿ ದಾಸರು ಹಾಡಿ ಹೊಗಳಿದ್ದಾರೆ.), (ನಾರಾಯಣಾಯ) ನಾರಾಯಣನಾದ, (ತೇ)ನಿನಗೆ, (ನಮ:)ನಮಸ್ಕಾರವಿರಲಿ.
ರಾಮಾಯ ರಾವಣಾಂತ್ಯಾಯ | ರಾಘವೇಶ್ವರರೂಪಿಣೇ ||
ರಾಜೀವನೇತ್ರಯುಗ್ಮಾಯ | ನಮೋ ನಾರಾಯಣಾಯ ತೇ ||೫||
(ರಾವಣಾಂತ್ಯಾಯ)ವಿಶ್ರವಸ್ ಬ್ರಹ್ಮ ಹಾಗೂ ಕೈಕಸೆಯ ಹಿರಿಯ ಮಗನಾದ, ನರರನ್ನು ಹೊರತು ಬೇರಾರಿಂದಲೂ ಮರಣ ಬಾರದಂಥ ವರವನ್ನು ಬ್ರಹ್ಮದೇವನಿಂದ ಪಡೆದ,ಶಿವಭಕ್ತನಾದರೂ ಶ್ರೀರಾಮಚಂದ್ರದೇವನ ಪತ್ನಿ ಸೀತಾದೇವಿಯನ್ನು ಅಪಹರಿಸಿ, ಅವಳನ್ನು ಕೈವಶಮಾಡಲು ಯತ್ನಿಸಿದ ಲಂಕಾಧಿಪತಿ, ದಶಕಂಠ, ರಾವಣನನ್ನು ಮನುಷ್ಯನಾಗಿ ಅವತಾರವೆತ್ತಿ ಸಂಹರಿಸಿ ಅವನ ಜೀವನವನ್ನು ಅಂತ್ಯಗೊಳಿಸಿದ,(ರಾಮಾಯ)ಬ್ರಹ್ಮಾದಿ ಸುರಗಡಣದ “ದುಷ್ಟ ರಾವಣನ ಸಂಹಾರವಾಗಬೇಕು”ಎಂಬ ಪ್ರಾರ್ಥನೆಗೆ ಓಗೊಟ್ಟು, ಅವರನ್ನೂ ತನ್ನ ಕಾರ್ಯಾನುಕೂಲಿಗಳಾಗಿ ವಾನರ-ಭಲ್ಲೂಕಾದಿಗಳಾಗಿ ಅವತರಿಸುವಂತೆ ಸೂಚಿಸಿ,ಪ್ರಸಿದ್ಧವಾದ ಹಾಗೂ ಶ್ರೇಷ್ಠರಾಜರ್ಷಿಪರಂಪರೆಯನ್ನು ಕಂಡ ಸೂರ್ಯವಂಶದಲ್ಲಿ,ದಶರಥ ಮಹಾರಾಜನ ಜ್ಯೇಷ್ಠಪುತ್ರನಾಗಿ ಪುತ್ರಕಾಮೇಷ್ಟಿ ದ್ವಾರಾ, ನಾಲ್ಕಂಶವಾಗಿ,ಭರತ-ಲಕ್ಷ್ಮಣ-ಶತ್ರುಘ್ನರೊಂದಿಗೆ
ಮಹಾವಿಷ್ಣುವಿನ ಹತ್ತು ಪ್ರಸಿದ್ಧ ಅವತಾರಗಳಲ್ಲಿ ಏಳನೆಯದಾಗಿ
ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನಾಗಿ ಪ್ರಸ್ತುತ ನಡೆಯುತ್ತಿರುವ ಬ್ರಹ್ಮನ ಐವತ್ತೊಂದನೇ ವರ್ಷದ ಮೊದಲ ದಿನವಾದ ಶ್ವೇತವರಾಹಕಲ್ಪದ ಸುಮಾರು ಮಧ್ಯಾಹ್ನದ ವೇಳೆಯ,೭ನೆಯದಾದ ವೈವಸ್ವತ ಮನ್ವಂತರದಲ್ಲಿ, ೧೯ನೇ ತ್ರೇತಾಯುಗದಲ್ಲಿ ಅವತರಿಸಿದ(ಕಾಲಗಣನೆಯಆಧಾರ: ದೇವೀಭಾಗವತಮಹಾಪುರಾಣ),(ರಾಘವೇಶ್ವರರೂಪಿಣೇ)ಪ್ರಸ್ತುತ ಅದೇ ಮನ್ವಂತರದ ೨೮ನೇ ಕಲಿಯುಗದಲ್ಲಿ ಹೊಸನಗರ ಶ್ರೀರಾಮಚಂದ್ರಾಪುರಮಠೀಯ ಪರಂಪರೆಯ ೩೬ನೇ ಯತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ರೂಪದಲ್ಲಿ ಭೂಮಿಯಲ್ಲಿ ಅವತಾರವೆತ್ತಿ ಸಮಾಜದಲ್ಲಿ ಅವನತಿಗತಿವಡೆದ ವೈದಿಕಧರ್ಮ ಹಾಗೂ ಭಕ್ತಿಧರ್ಮವನ್ನು ರಾಮಕಥೆ,ರಾಮಾಯಣ ಮಹಾಸತ್ರ,ಗೋಸಂರಕ್ಷಣೆ,ಕೋಟಿರುದ್ರ,ಕೋಟಿ ಲಲಿತಾಸಹಸ್ರನಾಮ ಕುಂಕುಮಾರ್ಚನೆ,ಹನೂಮಾನ್ ಚಾಲೀಸಾ-ಭಜಗೋವಿಂದಂ ಕಂಠಪಾಠ-ನಿತ್ಯಪಠಣ,ಲುಪ್ತವಾಗಿದ್ದ ನಿತ್ಯಾಹ್ನಿಕ ಸಂಧ್ಯಾವಂದನೆಗಳ ಪುನರುತ್ಥಾನ -ಇತ್ಯಾದಿಗಳ ಮೂಲಕ ಸಂರಕ್ಷಿಸಿ,ಪುನರುಜ್ಜೀವನಗೊಳಿಸಿದ(“ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||”ಎಂಬ ಭಗವದ್ಗೀತೆಯ-ಕೃಷ್ಣಾವತಾರದಲ್ಲಿ ಹೇಳಿದ-ವಚನದಂತೆ),(ರಾಜೀವನೇತ್ರಯುಗ್ಮಾಯ)ತಾವರೆಯಂಥ ೨ ಸುಮನೋಹರವಾದ ನಯನಗಳುಳ್ಳ,ಕಮಲನಯನನಾದ,(ನಾರಾಯಣಾಯ)ಕಮಲಾರಮಣನಾದ, ಮಾಧವನಾದ,(ತೇ)ನಿನಗೆ,(ನಮ:)ವಂದನೆಗಳು.
ಯತಿಹೃದಯದೃಶ್ಯಾಯ | ಯಜ್ಞೇಶ್ವರಸ್ವರೂಪಿಣೇ ||
ಯಕ್ಷಗಾನಾದಿಸೇವ್ಯಾಯ | ನಮೋ ನಾರಾಯಣಾಯ ತೇ ||೬||
(ಯತಿಹೃದಯದೃಶ್ಯಾಯ)ಇಂದ್ರಿಯನಿಗ್ರಹ/ದಮ ಹಾಗೂ ಮನೋನಿಗ್ರಹ/ಶಮವುಳ್ಳ ಯತಿಗಳು ಧ್ಯಾನಮಗ್ನರಾಗಿ ತಮ್ಮ ಹೃದಯಕಮಲದಲ್ಲಿ ಯಾರನ್ನು ಕಾಣುತ್ತಾರೋ ಅಂತಹ, (ಯಜ್ಞೇಶ್ವರಸ್ವರೂಪಿಣೇ)ಸರ್ವಕರ್ಮಗಳೆಂಬ ಯಜ್ಞದ ಹಾಗೂ ತತ್ಫಲದ ಅಧಿಪತಿಯಾದ, (ಯಕ್ಷಗಾನಾದಿಸೇವ್ಯಾಯ)ಯಕ್ಷಗಾನಾದಿ ಕಲೆಗಳ ಮೂಲಕ ಸೇವೆಗೊಳ್ಳುವ, (ನಾರಾಯಣಾಯ)ಆದಿನಾರಾಯಣನಾದ (ತೇ)ನಿನಗೆ (ನಮ:)ನಮಸ್ಕಾರವಿರಲಿ.
ಣಾಕಾರಯುಕ್ತನಾಮ್ನೇ ಚ | ಶೇಷತಲ್ಪಾಯ ಚಕ್ರಿಣೇ ||
ಕೃಷ್ಣಾಯ ವಾಸುದೇವಾಯ | ನಮೋ ನಾರಾಯಣಾಯ ತೇ ||೭||
(ಣಾಕಾರಯುಕ್ತನಾಮ್ನೇ) ‘ಣಾ’ಕಾರದಿಂದ ಕೂಡಿದ “ಓಂ ನಮೋ ನಾರಾಯಣಾಯ” ಎಂಬ ಪರಮಪದ/ಮೋಕ್ಷ-ಪ್ರದವಾದ ಅಷ್ಟಾಕ್ಷರೀನಾಮವಾಚ್ಯನಾದ, (ಶೇಷತಲ್ಪಾಯ)ಆದಿಶೇಷನೆಂಬ ಅನಂತಹೆಡೆಗಳುಳ್ಳ ಸರ್ಪವನ್ನೇ ಹಾಸಿಗೆ/ತಲ್ಪವನ್ನಾಗಿ ಮಾಡಿಕೊಂಡ, (ಚಕ್ರಿಣೇ ಚ)ಸುದರ್ಶನಚಕ್ರವನ್ನು ಕರದಲ್ಲಿ ಧರಿಸಿದ ಮತ್ತು (ವಾಸುದೇವಾಯ)ಯದುವಂಶದಲ್ಲಿ, ವಸುದೇವನ ಮಗನಾಗಿ ಜನಿಸಿದ, (ಕೃಷ್ಣಾಯ)ಮಹಾವಿಷ್ಣುವಿನ ಪೂರ್ಣಾವತಾರಿಯಾಗಿ,ಶ್ರೀಕೃಷ್ಣನಾಗಿ, ನರ/ಅರ್ಜುನನಿಗೆ ಮೋಕ್ಷಶಾಸ್ತ್ರವಾದ ಭಗವದ್ಗೀತೆಯನ್ನು ಬೋಧಿಸಿ,ಜಗದ್ಗುರುವೆನಿಸಿದ, (ನಾರಾಯಣಾಯ)ನಾರಾಯಣನೇ! (ತೇ)ನಿನಗೆ (ನಮ:) ಮತ್ತೆ ಮತ್ತೆ ನಮನಗಳು.
ಯಜ್ಞಸ್ವರೂಪಶುದ್ಧಾಯ | ಗದಿನೇ ಶ್ರೀವರಾಯ ಚ ||
ಗರುಡಾರೂಢಗಮ್ಯಾಯ | ನಮೋ ನಾರಾಯಣಾಯ ತೇ ||೮||
(ಯಜ್ಞಸ್ವರೂಪಶುದ್ಧಾಯ)ಯಜ್ಞದಷ್ಟು ಪರಿಶುದ್ಧವಾದ ಸ್ವರೂಪನಾದ, (ಗದಿನೇ)ಕೌಮೋದಕೀಯೆಂಬ ಗದೆಯನ್ನು ಧರಿಸಿದ, (ಶ್ರೀವರಾಯ)ಸಂಪತ್ತಿಗೆ ಅಧಿಪತಿಯೂ,ಸಮುದ್ರಮಥನಸಂಭವೆಯೂ,ಚಂದ್ರಸೋದರಿಯೂ ಆದ ಮಹಾಲಕ್ಷ್ಮಿಯ ರಮಣನಾದ, (ಗರುಡಾರೂಢಗಮ್ಯಾಯ ಚ)ಹಾಗೂ ಗರುಡನನ್ನೇರಿ ಸಂಚರಿಸುವ ಗರುಡವಾಹನನಾದ, (ನಾರಾಯಣಾಯ)ವೈಕುಂಠವಾಸಿಯಾದ ಶ್ರೀಮನ್ನಾರಾಯಣನಾದ (ತೇ) ನಿನಗೆ, (ನಮ:)ನಮಸ್ಕಾರ.
ಭವರೋಗನಿವೃತ್ತಿದಂ | ಧರ್ಮಾರ್ಥಕಾಮದಾಯಕಮ್ ||
ಜ್ಞಾನದಂ ಮೋಕ್ಷದಂ ಚೈವ | ಸರ್ವವಾಂಛಿತಸಿದ್ಧಿದಮ್ ||೯||
(ಭವರೋಗನಿವೃತ್ತಿದಂ)ಸಂಸಾರತಾಪತ್ರಯಗಳೆಂಬ ರೋಗವನ್ನು ಗುಣಪಡಿಸುವ ಶಕ್ತಿಯುಳ್ಳ, (ಧರ್ಮಾರ್ಥಕಾಮದಾಯಕಮ್)ಧರ್ಮ-ಅರ್ಥ(ಸಂಪತ್ತು)-ಕಾಮ(ಬಯಕೆ)ಗಳನ್ನು ಪೂರೈಸುವಂಥ, (ಜ್ಞಾನದಂ)ಸುಜ್ಞಾನವನ್ನು ನೀಡುವ,(ಮೋಕ್ಷದಂ ಚೈವ)ತುರೀಯ/ಚತುರ್ಥ/ನಾಲ್ಕನೇ ಪುರುಷಾರ್ಥವಾದ ಮೋಕ್ಷವನ್ನೇ ನೀಡಬಲ್ಲಂತಹ, (ಸರ್ವವಾಂಛಿತಸಿದ್ಧಿದಮ್)ಹೀಗೆ ನಮ್ಮ ಸರ್ವ ಇಷ್ಟಾರ್ಥ/ಬೇಕು-ಬೇಡಗಳನ್ನು ಒದಗಿಸಬಲ್ಲಂಥ,
ಇದಮಷ್ಟಾಕ್ಷರಸ್ತೋತ್ರಂ | ಯ: ಪಠೇದ್ಭಕ್ತಿಪೂರ್ವಕಮ್ ||
ಸ ಸರ್ವವಿದ್ಭವತ್ಯೇವ | ಜಗದ್ಗುರುಹರಿಪ್ರಿಯ: ||೧೦||
(ಇದಮಷ್ಟಾಕ್ಷರಸ್ತೋತ್ರಂ)ಈ ನಾರಾಯಣಾಷ್ಟಾಕ್ಷರಸ್ತೋತ್ರವನ್ನು,
(ಯ:)ಯಾವನು (ಭಕ್ತಿಪೂರ್ವಕಂ)ಭಕ್ತಿಯಿಂದ ಕೂಡಿದವನಾಗಿ,(ಪಠೇತ್)ಓದುತ್ತಾನೋ,(ಸ:) ಅವನು, (ಸರ್ವವಿದ್)ಎಲ್ಲವನ್ನು ಬಲ್ಲವನೂ, (ಜಗದ್ಗುರುಹರಿಪ್ರಿಯ:)ಜಗದ್ಗುರುವಾದ ಶ್ರೀಹರಿಗೆ ಅತ್ಯಂತ ಪ್ರಿಯನೂ (ಭವತಿ ಏವ) ಆಗಿಯೇ ಆಗುತ್ತಾನೆ.
ಇತಿ ಶ್ರೀಸದ್ಗುರೂಮಾಮಹೇಶ್ವರಪ್ರೇರಣಯಾ ದಂಬೆಕೃಷ್ಣಮೂರ್ತಿವಿರಚಿತಮಿದಂ ಶ್ರೀನಾರಾಯಣಾಷ್ಟಾಕ್ಷರಸ್ತೋತ್ರಂ ಶ್ರೀಗುರುಚರಣಯೋ: ಸಮರ್ಪಿತಮಸ್ತು ||
||ಶ್ರೀಗುರುಭ್ಯೋ ನಮ:||
||ಶ್ರೀ ಉಮಾಮಹೇಶ್ವರ: ಪ್ರಸೀದತು ||
||ಹರೇ ರಾಮ||
Comments
Post a Comment