ಉಮಾಸಹಸ್ರಮ್ ೧
ವಾಸಿಷ್ಠ ಗಣಪತಿಮುನಿವಿರಚಿತಂ*_
*ಉಮಾಸಹಸ್ರಮ್*
_(ಟಿ.ವಿ.ಕಪಾಲಿಶಾಸ್ತ್ರೀ-ವಿರಚಿತ-ಪ್ರಭಾವ್ಯಾಖ್ಯಾಯಾಃ ದಂಬೆ-ಕೃಷ್ಣಮೂರ್ತಿ-ಶಾಸ್ತ್ರೀ-ಕೃತ-ಕರ್ಣಾಟಕಭಾಷಾ-ಸಂಗ್ರಹಾನುವಾದ-ಸಹಿತಮ್)_
*ಪ್ರಥಮಂ ಶತಕಮ್*
*_ಪ್ರಥಮಃ ಸ್ತಬಕಃ (—ಗೊಂಚಲು / ಗರಿ)_*
*ವ್ಯೋಮಶರೀರಾ ಸ್ತ್ರೀರೂಪಾ ಚ*
_(ಆರ್ಯಾವೃತ್ತಮ್)_
*ಅಖಿಲಜಗನ್ಮಾತೋಮಾ ತಮಸಾ ತಾಪೇನ ಚಾಕುಲಾನಸ್ಮಾನ್ |*
*ಅನುಗೃಹ್ಣಾತ್ವನುಕಮ್ಪಾ- ಸುಧಾರ್ದ್ರಯಾ ಹಸಿತಚಂದ್ರಿಕಯಾ || ೧ ||*
_*ಅಖಿಲಜಗನ್ಮಾತೆಯಾದ ಉಮಾದೇವಿಯು ತಮಸ್ಸು ಹಾಗೂ ಪರಿತಾಪಗಳಿಂದ ಆಕುಲವಾದ ನಮ್ಮನ್ನು ಅನುಕಂಪವೆಂಬ ಅಮೃತರಸದಿಂದ ಆರ್ದ್ರವಾದ ತನ್ನ ನಗುವೆಂಬ ಚಂದ್ರಿಕೆ / ಬೆಳದಿಂಗಳಿನಿಂದ ಅನುಗ್ರಹಿಸಲಿ.*_
ಇಡೀ ಜಗತ್ತಿನ, ಅನಂತ ಬ್ರಹ್ಮಾಂಡಗಳ ಜನನಿ / ಪ್ರಸವಿತ್ರೀ / ಹೆತ್ತವಳು ಉಮಾನಾಮಕಳೂ ಆದ ಆದಿಮಾಯೆಯು. *“ಓಃ ಶಿವಸ್ಯ ಮಾ ಲಕ್ಷ್ಮೀಃ ಇವ ಇತಿ ಉಮಾ”—* _ಉ ಎಂದರೆ ಶಿವ. ಶಿವನ ಸಂಪತ್ತಿನಂತಿರುವವಳು ಉಮಾ._ *“ಉಂ ಶಿವಂ ಮಾತಿ ಮಿಮೀತೇ ಮನ್ಯತೇ ಪತಿತ್ವೇನ ಇತಿ ಉಮಾ—”* _ಶಿವನ ಆಳ-ಹರವುಗಳನ್ನು ತಿಳಿದು, ಆತನನ್ನು ಪತಿಯಾಗಿ ವರಿಸಿದವಳು ಉಮಾ._ *“ಅವತಿ ಲೋಕಾನ್ ಸರ್ವಾನ್ ಯಾ ಸಾ, ಊಯತೇ ಲೋಕಾಃ ಸರ್ವಾಃ ಅನಯಾ ಇತಿ ವಾ ಉಮಾ”—* _ಸಕಲಲೋಕಗಳ ಸರ್ವರನ್ನೂ ಯಾವಳು ರಕ್ಷಿಸುವಳೋ ಅವಳು ಅಥವಾ ಸರ್ವಲೋಕಗಳ ಸಕಲರೂ ಯಾವಳಿಂದ ಸಲಹಲ್ಪಡುವರೋ ಅವಳೇ ಉಮಾ._
*“ಉ ಮೇತಿ ಮಾತ್ರಾ ತಪಸೋ ನಿಷಿದ್ಧಾ ಪಶ್ಚಾದುಮಾಖ್ಯಾಂ ಸುಮುಖೀ ಜಗಾಮ” (ಕುಮಾರೇ ನಿರುಕ್ತಾಯಾಮ್)—* _ಶಿವನನ್ನು ವರಿಸಲು ಒಲಿಸುವುದಕ್ಕಾಗಿ ತಪಗೈಯಲು ವನಕ್ಕೆ ಹೋಗುವೆನೆಂಬ ಪಾರ್ವತಿಯ (ಪರ್ವತರಾಜನಾದ ಹಿಮಾಲಯನ / ಹಿಮವಂತನ ಪುತ್ರಿಯ) ಮಾತನ್ನು ಕೇಳಿ, *“ಉ— ಓಹ್!, ಮಾ— ಬೇಡ”* , ಎಂಬ ತಾಯಿ ಮೇನಕೆಯ (ಹಿಮವಂತನ ಪತ್ನಿಯ) ಉದ್ಗಾರಪೂರ್ವಕ ತಪೋನಿಷೇಧವಚನದಿಂದಾಗಿ ಹೈಮವತಿಯು (ಹಿಮವಂತನ ಪುತ್ರಿಯು) ಉಮಾ ಎಂದು ಹೆಸರಾದಳು. *“ಯತೋ ಹಿ ತಪಸೇ ಪುತ್ತ್ರಿ ವನಂ ಗನ್ತುಂ ಚ ಮೇನಕಾ | ಉಮೇತಿ ತೇನ ಸೋಮೇತಿ ನಾಮ ಪ್ರಾಪ ತದಾ ಸತೀ ||”(ಕಾಲಿಕಾಪುರಾಣೇ ಅಧ್ಯಾಯಃ ೪೨)—* _ತಪಸ್ಸಿಗಾಗಿ ವನಗಮನಕ್ಕೆ ಮನಮಾಡಿದ ಪುತ್ರಿಯನ್ನು ಕಂಡ ತಾಯಿ ಮೇನಕೆಯು “ಉ! ಮಾ!!” ಎಂದು ತಡೆದದ್ದರಿಂದ (ಸಾ ಉಮಾ ಇತಿ— ಸೋಮೇತಿ) ಆಕೆಯು / ಪುತ್ರಿ ಪಾರ್ವತಿಯು / ಸತೀದೇವಿಯು ಆಗ ಉಮಾ ಎಂಬ ಹೆಸರನ್ನು ಪಡೆದಳು._
_ತಮಸ್ಸೆಂದರೆ ಕತ್ತಲು, ಅಂಧಕಾರ, ಅಜ್ಞಾನ, ಜಾಡ್ಯ, ನಿದ್ರೆ ಇತ್ಯಾದಿ. ತಾಪವು ತ್ರಿವಿಧ— ಆಧಿದೈವಿಕ, ಆಧಿಭೌತಿಕ ಹಾಗೂ ಆಧಿ-ಆತ್ಮಿಕ / ಆಧ್ಯಾತ್ಮಿಕ. ನಮ್ಮ ಪೂರ್ವಕರ್ಮಾನುಸಾರವಾಗಿ ಬರುವ ಫಲಗಳು ಕ್ರಮವಾಗಿ ದೇವತೆಗಳಿಂದ, ಇತರ ಸಹಜೀವಿಗಳು ಹಾಗೂ ಪಶುಪಕ್ಷಿಕ್ರಿಮಿಕೀಟಾದಿ ಸೂಕ್ಷ್ಮಜೀವಿಗಳವರೆಗಿನ ಸಕಲ ಚರಾಚರಗಳಿಂದ, ಮತ್ತು ಸ್ವಯಂಕೃತ / ಸ್ವಯಾರ್ಜಿತ / ಸ್ವಾರ್ಜಿತ ಸ್ಥೂಲ-ಸೂಕ್ಷ್ಮಶರೀರಗಳ ರೋಗಾದಿಗಳ ಮೂಲಕ ಅನುಭವಕ್ಕೆ ಬರುತ್ತವೆ. ಈ ತಾಪತ್ರಯವು ಆಧಿತ್ರಯವೂ ಹೌದು. ಆಧಿಯೆಂದರೆ ಮಾನಸಿಕ ಕ್ಲೇಶ, ರೋಗಾದಿಗಳು. (ವ್ಯಾಧಿ— ಶಾರೀರಿಕರೋಗ). ಇಂತಹ ತಮಸ್ಸು ಹಾಗೂ ತಾಪಗಳಿಂದ ಕ್ಷಣೇ ಕ್ಷಣೇ ಆಕ್ರಮಿಸಲ್ಪಟ್ಟು ವ್ಯಾಕುಲಚಿತ್ತರಾದ ನಮ್ಮನ್ನು ಅನುಗ್ರಹಿಸು ಎಂಬುದು *“ತಮಸಾ ತಾಪೇನ ಚ ಆಕುಲಾನ್ ಅಸ್ಮಾನ್ ಅನುಗೃಹ್ಣಾತು”* ಎಂಬ ವಾಕ್ಯಭಾಗದ ತಾತ್ಪರ್ಯ._
_ಇನ್ನು *“ಅನುಕಂಪಾಸುಧಾ-ಆರ್ದ್ರಯಾ ಹಸಿತಚಂದ್ರಿಕಯಾ”* ಎಂದರೆ, ತಮಸ್ತಾಪಾದ್ಯಾಕುಲವಾಗಿ ಆರ್ತರಾಗಿರುವವರ ಮೇಲೆ ಅನುಕಂಪ / ಕರುಣೆ / ದಯೆ ಎಂಬ ಅಮೃತವರ್ಷದ ತೇವದಿಂದ / ಆರ್ದ್ರತೆಯಿಂದ ಕೂಡಿದ ಹಾಸ / ಹಸಿತ / ಮೆಲುನಗು / ಮಂದಸ್ಮಿತವೆಂಬ ಆಹ್ಲಾದಕರ, ಸಮಾಧಾನಕರ ಚಂದ್ರಿಕೆ / ಬೆಳದಿಂಗಳಿನ ಮೂಲಕ ಅನುಗ್ರಹಿಸು ಎಂದರ್ಥ. ಇಲ್ಲಿ ಅನುಕಂಪ ಹಾಗೂ ಸುಧೆ ಗಳ ನಡುವೆ *(ಉಪಮಾನೋಪಮೇಯಯೋಃ ಅಭೇದಃ ರೂಪಕಮ್)* ಭೇದವಿರದೆ ಅನುಕಂಪವೇ ಸುಧೆಯೆಂದಿರುವುದು ರೂಪಕಾಲಂಕಾರ. ಹಾಗೆಯೇ, ಹಸಿತ ಹಾಗೂ ಚಂದ್ರಿಕೆಗಳ ನಡುವೆಯೂ ಅಭೇದವಿದ್ದು ರೂಪಕಾಲಂಕಾರವಿದೆ. ಈ ಮೊದಲಶ್ಲೋಕದಲ್ಲೇ ಕಾವ್ಯಕಂಠರೆನಿಸಿದ ವಾಸಿಷ್ಠ ಗಣಪತಿಮುನಿಗಳ ಜಗನ್ಮಾತೆಯ ಕುರಿತಾದ ಮಾತೃಪ್ರೇಮಭಾವದ ತೀವ್ರತೆಯನ್ನು ನಾವು ಕಾಣಬಹುದು. ಅವಳ ಜೀವಾತ್ಮಾವರಣರೂಪೀ ಅಜ್ಞಾನನಿವಾರಕಶಕ್ತಿ ಹಾಗೂ ತಾಪತ್ರಯಪರಿಹಾರಕಶಕ್ತಿಯು ಹೇಗಿದೆಯೆಂದರೆ, *“ಸೃಷ್ಟ್ಯುನ್ಮುಖಲಾಸ್ಯ”* ವೆಂಬಂತೆ ಜಗನ್ಮಾತೆಯ ಕೇವಲ ನಗುವಿನಿಂದಲೇ ಜಗತ್ತಿನ ಸೃಷ್ಟ್ಯಾದಿಗಳು ಘಟಿಸುತ್ತವೆಂಬಹಾಗೆಯೇ, ಆಕೆಯ ಹಸಿತಮಾತ್ರದಿಂದ ಭಕ್ತರ ಸಕಲ ತಮಸ್ಸು, ತಾಪತ್ರಯಗಳೂ ನಾಶವಾಗಿ, ಚಿದಾನಂದವು ಸ್ಫುರಿಸಬಲ್ಲದು. ಅಂತಹ ಲೋಕಮಾತೆಗೆ ಅನಂತಪ್ರಣಾಮಗಳು._
*ನಿಖಿಲೇಷು ಪ್ರವಹನ್ತೀಂ ನಿರುಪಾಧಿವಿಮರ್ಶಯೋಗಿದೃಶ್ಯೋರ್ಮಿಮ್ |*
*ಅಜರಾಮಜಾಮಮೇಯಾಂ ಕಾಮಪಿ ವನ್ದೇ ಮಹಾಶಕ್ತಿಮ್ || ೨ ||*
_ಜಗತ್ತಿನ ಎಲ್ಲದರಲ್ಲೂ ನಿರಂತರವಾಗಿ ಪ್ರವಹಿಸುತ್ತಿರುವ *(ಅತ ಸಾತತ್ಯಗಮನೇ ಆತ್ಮಾ— ಸತತ ಚಲನಶೀಲತೆಯಿಂದ ಆತ್ಮವೆನಿಸಿರುವ)*, ಆದರೂ ಅ-ಕ್ಷಯವಾದ, ಯಾವುದೇ ನಾಮರೂಪಗುಣಾದಿ ಉಪಾಧಿರಹಿತವೆಂದು ಆತ್ಮಧ್ಯಾನಮುಖೇನ ವಿಮರ್ಶಿಸಿ ಅನುಭವಿಸುವ ಯೋಗಿಗಳ ಅಂತಶ್ಚಕ್ಷುಗೋಚರವಾದ ಅವಿರತಗತಿಶೀಲ ತರಂಗರೂಪಿಯಾದ, ಜರೆಯಿಲ್ಲದ / ಕುಂದದ, ಜನನವೂ ಇಲ್ಲದ, ಅಳತೆಗಳವಡದೆ ಅಮೇಯವಾದ ಆ ಅವ್ಯಕ್ತವಾದ ಸಕಲಜೀವಾಧಾರವೂ ಇಂದ್ರಿಯಗಮ್ಯವಲ್ಲದ್ದೂ ಆದ ಮಹಾಶಕ್ತಿಯನ್ನು ವಂದಿಸುತ್ತೇನೆ._
ಮೊದಲ ಶ್ಲೋಕದಲ್ಲಿ ಸಮುದಾಯದ / ಸಮಷ್ಟಿಯ ಮಾಂಗಲ್ಯವು ಆಶಿಸಲ್ಪಟ್ಟು, ಉಮಾದೇವಿಯ ಸಮಸ್ತ ಜಗಜ್ಜನನೀತ್ವದಿಂದ ಸ್ವರೂಪದ ಬೃಹತ್ತ್ವವನ್ನು ಊಹಾತ್ಮಕವಾಗಿ ಸ್ಮರಿಸಲಾಗಿದೆ. ಎರಡನೆಯದಾದ ಇದರಲ್ಲಿ ವಂದ್ಯಮಾನಳಾದ ಉಮಾದೇವಿಯನ್ನು ಮಹಾಶಕ್ತಿಸ್ವರೂಪಿಣಿಯೆಂದು ವಿಮರ್ಶಿಸಲಾಗಿದೆ.
*ಸಾ ತತ್ತ್ವತಃ ಸಮನ್ತಾತ್ ಸತ್ಯಸ್ಯ ವಿಭೋಸ್ತತಾ ತಪಶ್ಶಕ್ತಿಃ |*
*ಲೀಲಾಮಹಿಲಾವಪುಷಾ ಹೈಮವತೀ ತನುಷು ಕುಂಡಲಿನೀ || ೩ ||*
_ಅವಳು (ಉಮಾದೇವಿಯು) ತಾತ್ತ್ವಿಕವಾಗಿ / ವಸ್ತುತಃ / ವಿಚಾರದೃಷ್ಟಿಯ ಪರಿಶೀಲನೆಯಿಂದ / ತತ್ತ್ವತಃ ಸತ್ಯದ ಪ್ರಭುವೆನಿಸಿದ ಪರಮಪುರುಷನಾದ ಪರಮೇಶ್ವರನ ಸರ್ವತ್ರ / ಎಲ್ಲೆಡೆ ವ್ಯಾಪಿಸಿದ / ಹಬ್ಬಿದ ತಪಃಶಕ್ತಿಯ ಸ್ವರೂಪಳೇ ಆಗಿರುವಳು. ಆಕೆಯು ತನ್ನ ಲೀಲಾಮಾತ್ರದಿಂದ ಸ್ತ್ರೀಶರೀರವನ್ನು ತಾಳಿ / ಧರಿಸಿ ಹಿಮವಂತ-ಮೇನಕೆಯರ ಪುತ್ರಿಯಾಗಿ ಹೈಮವತಿಯೆನಿಸಿರುವಳು. ಅಂತೆಯೇ, ಸಕಲ ಜೀವರ ಶರೀರದಲ್ಲಿ ಕುಂಡಲಿನೀಶಕ್ತಿಯಾಗಿ ಸ್ಥಿತಳಾಗಿರುವಳು. ಹೀಗೆ, ಪರಶಿವನ ತಪೋಪ್ರಭಾಶಕ್ತಿಯು ಪರಾಶಕ್ತಿಯಾದ ಉಮಾದೇವಿಯ ನಿರಾಕಾರವಾದ ಮೊದಲರೂಪವಾದರೆ, ಭಕ್ತಾನುಗ್ರಹಾರ್ಥವಾಗಿ ಲೀಲಾವಿಗ್ರಹರೂಪೀ ಪರ್ವತರಾಜಪುತ್ರಿ ಹೈಮವತಿ / ಪಾರ್ವತಿಯು ೨ನೆಯ ರೂಪ. *“ಏಕಾನ್ತವಿದೇಹೌ ತೌ ಚೇದತಿಸೂಕ್ಷ್ಮೌ | ಲೀಲಾತನುಬನ್ಧಾಶಕ್ತೌ ಅಭಿಧೇಯೌ ||”—* ಪಾರ್ವತೀಪರಮೇಶ್ವರರು ಅತಿಸೂಕ್ಷ್ಮಸ್ವರೂಪದಲ್ಲಿ ಏಕಾಂತವಾಗಿರುವ ದೇಹರಹಿತರೂ, ಲೀಲಾಮಾತ್ರದಿಂದ ದೇಹದೊಳಗೆ ತಾವೇ ಬಂಧಿಸಿಕೊಂಡು ದೇಹಸಹಿತರಾಗಲು ಶಕ್ತರೆಂದೂ ಹೇಳಲ್ಪಟ್ಟಿರುವರು. ಹೀಗೆ ಶಿವತಪೋಬಲರೂಪವು ಈಕೆಯ *(ಮೊದಲ)* ಬ್ರಹ್ಮಾಂಡವ್ಯಾಪಿಯಾದ ಅಧ್ಯಂಡಸ್ವರೂಪವಾದರೆ, ಹೈಮವತೀರೂಪವು ಪಾರ್ವತೀದೇವಿಯೆಂಬ *(೨ನೆಯ)* ಅಧಿದೈವತಸ್ವರೂಪವೂ, ಕುಂಡಲಿನೀಶಕ್ತಿಯು *(೩ನೆಯದಾದ)* ನಮ್ಮ ಪಿಂಡಾಂಡದೊಳಗಿನ / ದೇಹದೊಳಗಿನ ಅಧ್ಯಾತ್ಮಸ್ವರೂಪವೂ ಆಗಿರುವುದು._
*ಪರಮಃ ಪುರುಷೋ ನಾಭಿ-ರ್ಲೋಕಾನಾಂ ಸತ್ಯ ಉಚ್ಯತೇ ಲೋಕಃ |*
*ಪರಿತಸ್ತತಸ್ಸರನ್ತೀ ಸೂಕ್ಷ್ಮಾಶಕ್ತಿಸ್ತಪೋ ಲೋಕಃ || ೪ ||*
ಅನಂತರ ಪರಮಪುರುಷನ ಹಾಗೂ ಆತನ ಶಕ್ತಿಯ ಸತ್ಯ-ತಪೋ-ಜನೋಲೋಕಾತ್ಮಕ ಸ್ಥಿತಿ (ಇರುವಿಕೆ) ಯ ಪ್ರಕಾರವನ್ನು ಇನ್ನೆರಡು ಶ್ಲೋಕಗಳಲ್ಲಿ ನಿರೂಪಿಸುತ್ತಾರೆ ರಮಣ ಮಹರ್ಷಿಗಳು.
ಪರಮಃ— ಎಂಬ ಮೊದಲ ಚರಣದ ಅನ್ವಯ— "ಪರಮಃ ಪುರುಷೋ ಲೋಕಾನಾಂ ನಾಭಿಃ ಸತ್ಯೋ ಲೋಕಃ, ಉಚ್ಯತೇ |" ಎರಡನೆಯ ಚರಣ— "ತತಃ ಪರಿತಃ ಸರನ್ತೀ ಸೂಕ್ಷ್ಮಾ ಶಕ್ತಿಃ ತಪೋಲೋಕಃ ||"
ಸತ್ಯಸ್ವರೂಪಿಯಾದ ವಿಭುವೆಂದು ಹಿಂದಿನ ಶ್ಲೋಕದಲ್ಲಿ ಹೇಳಿದ ಪರಮಪುರುಷನು ಕರೆಯಲ್ಪಡುತ್ತಾನೆ. ಆತನೇ ಇಲ್ಲಿ ಸತ್ಯಲೋಕರೂಪನೆಂದು ವ್ಯಾಖ್ಯಾನಿಸಲ್ಪಟ್ಟಿರುವನು.
ಸತ್ಯಸ್ವರೂಪನಾದ ಆತನ ಅಖಂಡತ್ವ ಹಾಗೂ ಬೃಹತ್ತ್ವದ ದ್ಯೋತಕವಾಗಿ ಹಾಗೂ ಎಲ್ಲ ಲೋಕಗಳ ಮೂಲನೆಂಬುದನ್ನು ನೆನಪಿಸಲು ಆತನು ಲೋಕಶಬ್ದವಾಚ್ಯನು ಎಂದು ಗ್ರಹಿಸಬೇಕು. ಹೇಗೆ ರಥಚಕ್ರದ ಮೂಲಸ್ಥಾನವೂ, ಮಧ್ಯವೂ ಆದ ನಾಭಿದೇಶದಲ್ಲಿ (hub) ಸಕಲ ಅರೆಕಾಲುಗಳು (spokes) ಅರ್ಪಿತವಾಗಿವೆಯೋ ಹಾಗೆಯೇ ಸತ್ಯಲೋಕರೂಪಿಯಾದ ಪರಮಪುರುಷನಲ್ಲಿ ಎಲ್ಲ ಲೋಕಗಳೂ ಪ್ರತಿಷ್ಠಿತವಾಗಿವೆ ಎಂದರ್ಥ. ವೃತ್ತದ ಮೂಲವು ವೃತ್ತಕೇಂದ್ರವಾಗಿರುವಂತೆ, ಸಕಲಲೋಕಸಮೂಹದ ಮೂಲಕೇಂದ್ರವು ಸತ್ಯಲೋಕಕ್ಕೆ ಮತ್ತೊಂದು ಹೆಸರಾದ ಪರಮಪುರುಷನೇ ಎಂದು ವಿಶದವಾಗುತ್ತದೆ.
ಆತನನ್ನು ಸುತ್ತುವರೆದು, ಆತನ ಎಲ್ಲ ಕಡೆಗಳಿಂದಲೂ ಸಂಚರಿಸುತ್ತಾ ವಿಸ್ತಾರಹೊಂದುತ್ತಾ, ಪ್ರಸರಿಸುತ್ತಾ ರಾರಾಜಿಸುವ ಆ ಶಕ್ತಿಯು ತಪೋಲೋಕವೆನಿಸಿದೆ. ಪ್ರಾಣಿಗಳ ಪ್ರಾಣದಂತೆಯೇ, ಪರಮಪುರುಷನಿಂದ ಆತನ ಶಕ್ತಿಯು ಬೇರ್ಪಡಿಸಲಸಾಧ್ಯಳು. ಸತ್ಯನೂ, ಸರ್ವಶಕ್ತನೂ ಆದ ಪರಮಪುರುಷನ ಸೂಕ್ಷ್ಮವಾದ ಶಕ್ತಿಯು ತಪಶ್ಶಬ್ದವಾಚ್ಯಳೆಂಬುದು ನಿಸರ್ಗಸಿದ್ಧವಾದುದು. ಪುರುಷನ ಹಾಗೂ ಆತನ ಶಕ್ತಿಯ ಸತ್ಯ-ತಪೋಲೋಕಾತ್ಮಕತೆಯನ್ನು ಹೇಳಿ, ಜನೋಲೋಕದ ಸ್ವರೂಪವನ್ನು ವಿವರಿಸುತ್ತಾರೆ ಶ್ರೀ ರಮಣ ಮಹರ್ಷಿಗಳು ತಮ್ಮ ಈ ಉಮಾಸಹಸ್ರಮ್ ಎಂಬ ಪುಣ್ಯಕೃತಿಯಲ್ಲಿ.
Comments
Post a Comment