ಶ್ರೀರಾಘವೇಶ್ವರಭಾರತ್ಯಷ್ಟಕಮ್

                       ॥ॐ॥

      ಶ್ರೀರಾಘವೇಶ್ವರಭಾರತ್ಯಷ್ಟಕಮ್

(ಅನುಷ್ಟುಪ್ ಛಂದ:)

ಸದ್ಗುರುಂ ಭಜ ಸರ್ವತ್ರ | ದಕ್ಷಿಣಾಮೂರ್ತಿರೂಪಿಣಮ್||
ಆತ್ಮಲಿಂಗಸ್ಥಿತಂ ಶುದ್ಧಂ | ರಾಘವೇಶ್ವರಭಾರತೀಮ್‌||೧||

 (ಆತ್ಮಲಿಂಗಸ್ಥಿತಂ) ಶ್ರೀಗೋಕರ್ಣ ದೇವಾಲಯದ ಗರ್ಭಗುಡಿಯಲ್ಲಿರುವ ಸದಾಶಿವನ ಆತ್ಮಲಿಂಗದಲ್ಲಿ ಸಾರ್ವಭೌಮ ಮಹಾಬಲೇಶ್ವರನಾಗಿ ನೆಲೆಸಿರುವ, (ಶುದ್ಧಂ)ನಿತ್ಯಶುದ್ಧರೂ, (ಸದ್ಗುರುಂ)ಸದ್ಗುರುಗಳೂ, (ದಕ್ಷಿಣಾಮೂರ್ತಿರೂಪಿಣಮ್)ದಕ್ಷಿಣಾಮೂರ್ತಿಸ್ವರೂಪರೂ ಆದ (ರಾಘವೇಶ್ವರಭಾರತೀಮ್‌)ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳನ್ನು (ಸರ್ವತ್ರ)ಎಲ್ಲೆಡೆಯೂ (ಭಜ)ಭಜಿಸು ಹೇ ಮನವೇ !

ಚಾತುರ್ಮಾಸ್ಯವ್ರತೇ ನಿಷ್ಠಂ | ಚಂದ್ರಮೌಳೀಶ್ವರಪ್ರಭಮ್||
ರಾಮಚಂದ್ರಸ್ವರೂಪಂ ಚ | ಸೀತಾಂಜನೇಯಸನ್ನಿಧಿಮ್||೨||

(ಚಂದ್ರಮೌಳೀಶ್ವರಪ್ರಭಮ್)ಚಂದ್ರಮೌಳೀಶ್ವರನಂತಹ ಪ್ರಭೆಯಿಂದ ಕಂಗೊಳಿಸುವ, (ಚಾತುರ್ಮಾಸ್ಯವ್ರತೇ ನಿಷ್ಠಂ)ಪ್ರತಿವರ್ಷವೂ ಚಾತುರ್ಮಾಸ್ಯವ್ರತವನ್ನು ಪೂರ್ವಪರಂಪರೆಯಂತೆ ನಿಷ್ಠೆಯಿಂದ ಕೈಗೊಳ್ಳುವ, (ಸೀತಾಂಜನೇಯಸನ್ನಿಧಿಮ್)ಲೋಕಾನುಗ್ರಹಕ್ಕಾಗಿ ಮಠೀಯ ಸೀತಾಂಜನೇಯಾದಿವಿಗ್ರಹಗಳ ನಿತ್ಯೋಪಾಸಕರಾದ,(ರಾಮಚಂದ್ರಸ್ವರೂಪಂ ಚ)ಹಾಗೂ ಸ್ವಯಂ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರಸ್ವರೂಪರಾದ ಶ್ರೀಗುರುಗಳನ್ನು ಧ್ಯಾನಿಸು ಹೇ ಮನವೇ!

ವರದಾಭಯಹಸ್ತಂ ತಂ | ಪ್ರಸನ್ನವದನಂ ಶಿವಮ್||
ಭಕ್ತಾರ್ತಿಹರಣಂ ಕೃಷ್ಣಂ | ಜಗನ್ಮಾತೃಸ್ವರೂಪಿಣಮ್||೩||

(ವರದಾಭಯಹಸ್ತಂ)ಸದಾ ವರನೀಡುವ ಅಭಯಪ್ರದಕರಮುದ್ರಾಂಕಿತರಾದ, (ಪ್ರಸನ್ನವದನಂ)ಮಂದಸ್ಮಿತ ಶಾಂತಮುಖಮುದ್ರೆಯುಳ್ಳ, (ಶಿವಮ್)ಶಿವಸ್ವರೂಪರೂ ಮಂಗಳಮೂರ್ತಿಯೂ ಆಗಿರುವ, (ಭಕ್ತಾರ್ತಿಹರಣಂ ಕೃಷ್ಣಂ)ಭಕ್ತರ ಕಷ್ಟಗಳನ್ನು ನೀಗುವ ಸಾಕ್ಷಾತ್ ಜಗದ್ಗುರು ಶ್ರೀಕೃಷ್ಣರೂಪರಾದ,(ಜಗನ್ಮಾತೃಸ್ವರೂಪಿಣಮ್) ಜಗಜ್ಜನನೀಸ್ವರೂಪರಾದ,(ತಂ) ಸದ್ಗುರುವನ್ನು ನೆನೆ ಮನವೇ…

ರಾಘವಂ ಈಶ್ವರಂ ಚೈವ | ಭಾರತೀಪದಸಂಯುತಮ್||
ಭಸ್ಮಕುಂಕುಮಲಿಪ್ತಾಂಗಂ | ಸಾಕ್ಷಾತ್ತ್ರಿಮೂರ್ತಿರೂಪಿಣಮ್||೪||

(ರಾಘವಂ ಈಶ್ವರಂ ಚೈವ  ಭಾರತೀಪದಸಂಯುತಮ್)ರಾಘವ, ಈಶ್ವರ ಹಾಗೂ ಭಾರತೀ- ಈ ಪದಗಳಿಂದ ಕೂಡಿದ ನಾಮಾಂಕಿತರಾದ,(ಭಸ್ಮಕುಂಕುಮಲಿಪ್ತಾಂಗಂ) ಭಸ್ಮ-ಕುಂಕುಮಾದಿಭೂಷಿತರಾದ,(ಸಾಕ್ಷಾತ್ತ್ರಿಮೂರ್ತಿರೂಪಿಣಮ್) ಪ್ರತ್ಯಕ್ಷ ತ್ರಿಮೂರ್ತಿಸ್ವರೂಪರಾದ ಗುರುದೇವರನ್ನು ಶರಣುಹೊಂದುತ್ತೇನೆ.

ಶರಣಾಗತಮಂದಾರಂ | ಸಂಸಾರಾರ್ತಿವಿನಾಶನಮ್||
ಅರಿತಿಮಿರಮಾರ್ತಾಂಡಂ | ಭಕ್ತಾನುಕಂಪಿನಂ ಹರಿಮ್||೫||

(ಶರಣಾಗತಮಂದಾರಂ)ಶ್ರೀಗುರುಗಳು ಶರಣಾಗತರಕ್ಷಕರೂ, (ಸಂಸಾರಾರ್ತಿವಿನಾಶನಮ್)ಸಂಸಾರಿಗಳ ಸಂಕಟವಿಮೋಚಕರೂ, (ಅರಿತಿಮಿರಮಾರ್ತಾಂಡಂ)ಅಜ್ಞಾನವೇ ಮೊದಲಾದ ಶತ್ರುಗಳೆಂಬ ಕತ್ತಲೆಯನ್ನು ಸೂರ್ಯನಂತೆ ಹೋಗಲಾಡಿಸುವವರೂ, (ಭಕ್ತಾನುಕಂಪಿನಂ)ನಿಜಭಕ್ತರ ಬಗ್ಗೆ ಅನುಕಂಪಿತಹೃದಯವುಳ್ಳವರೂ, (ಹರಿಮ್)ಸಾಕ್ಷಾತ್ ಶ್ರೀಹರಿಸ್ವರೂಪರೂ ಆಗಿದ್ದಾರೆ. ಅಂತಹ ಗುರುಚರಣಯುಗ್ಮಕ್ಕೆ ಅನಂತ ನಮನ.

ರಾಮಾಯಣಮಹಾಸತ್ರ | ಕುಂಕುಮಾರ್ಚನಪ್ರೇರಣಮ್||
ಗೋವಂಶರಕ್ಷಣೇ ಚಿತ್ತಂ | ಮುಷ್ಟಿಭಿಕ್ಷಾಪ್ರವರ್ತಕಮ್||೬||

(ರಾಮಾಯಣಮಹಾಸತ್ರಕುಂಕುಮಾರ್ಚನಪ್ರೇರಣಮ್)ಹೊಸನಗರ ರಾಮಚಂದ್ರಾಪುರಮಠದಲ್ಲಿ ರಾಮಾಯಣಮಹಾಸತ್ರ, ರಾಮತಾರಕಮಂತ್ರಯಾಗ, ವಿಶ್ವಗೋಸಮ್ಮೇಳನ- ಇತ್ಯಾದಿಗಳನ್ನೂ, ಮನೆ-ಮನೆಗಳಲ್ಲಿ ಲಲಿತಾಸಹಸ್ರನಾಮಪೂರ್ವಕ ಕುಂಕುಮಾರ್ಚನೆಯನ್ನೂ ನಡೆಯುವಂತೆ ಪ್ರೇರಣೆ ನೀಡಿದ ಮಹಾತ್ಮರಿವರು. (ಗೋವಂಶರಕ್ಷಣೇ ಚಿತ್ತಂ)ಸರ್ವದಾ ಸ್ವದೇಶೀ ಗೋತಳಿಗಳ ಸಂರಕ್ಷಣೆಯಲ್ಲೇ  ತೊಡಗಿಸಿಕೊಂಡವರೂ, (ಮುಷ್ಟಿಭಿಕ್ಷಾಪ್ರವರ್ತಕಮ್)ಸಮಾಜದ ಬಡಕುಟುಂಬಗಳಿಗೆ ಅನ್ನನೀಡುವ ಮಹದುದ್ದೇಶವಿರುವ ಮುಷ್ಟಿ-ಅಕ್ಕಿ ಯೋಜನೆಯನ್ನು ಅನುಷ್ಠಾನಿಸಿದವರೂ ಇವರಾಗಿದ್ದಾರೆ.

ಸಂಧ್ಯಾವಂದನಸಂರೂಢಂ | ಭಜನಚಾಲೀಸಪ್ರೇರಕಮ್||
ರುದ್ರಾಭ್ಯಾಸಪ್ರಣೇತಾರಂ | ಕೋಟಿಲೀಲಾಪ್ರದರ್ಶಕಮ್||೭||

(ಸಂಧ್ಯಾವಂದನಸಂರೂಢಂ)ಶ್ರೀರಾಘವೇಶ್ವರರು ಸಮಸ್ತಶಿಷ್ಯವರ್ಗದಲ್ಲಿ ಲುಪ್ತವಾಗಿ ಹೋಗಿದ್ದ ಸಂಧ್ಯಾವಂದನೆಯ ನಿತ್ಯಾನುಷ್ಠಾನವನ್ನು ಪುನ: ರೂಢಿಗೆ ತಂದರು. (ಭಜನಚಾಲೀಸಪ್ರೇರಕಮ್)ಹಿಂದೆ ಮನೆಮನೆಗಳಲ್ಲಿ ನಡೆಯುತ್ತಿದ್ದು, ಮಧ್ಯೆ ಬಿಟ್ಟು ಹೋಗಿದ್ದ, ನಿತ್ಯಸಾಮೂಹಿಕಸಾಯಂಕಾಲದ ಭಜನೆಯನ್ನು ಪುನರಾರಂಭವಾಗುವಂತೆ ಮಾಡಿದರು. ಭಜಗೋವಿಂದಂ ಸ್ತೋತ್ರ,ಹನೂಮಾನ್ ಚಾಲೀಸವೇ ಮೊದಲಾದವುಗಳನ್ನು ಕಂಠಪಾಠಮಾಡಿ ಹಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಪ್ರೇರಕರಾದರು. (ರುದ್ರಾಭ್ಯಾಸಪ್ರಣೇತಾರಂ)ಶಿಷ್ಯಸಮೂಹದಲ್ಲಿ ರುದ್ರಮಂತ್ರಾಭ್ಯಾಸ ಹೆಚ್ಚು ಹೆಚ್ಚು ನಡೆಯುವಂತೆ ಪ್ರೇರೇಪಿಸಿದವರೂ, (ಕೋಟಿಲೀಲಾಪ್ರದರ್ಶಕಮ್)ಗೋಕರ್ಣದೇವಸ್ಥಾನದಲ್ಲಿ ಶಿಷ್ಯರ ಮೂಲಕ ಕೋಟಿರುದ್ರ ಸೇವೆ ನಡೆಸುವ ಬೃಹತ್ಸಂಕಲ್ಪ ತೊಟ್ಟವರೂ, ಇನ್ನೂ ಅನೇಕ, ಅನಂತ ದೈವೀಲೀಲೆಗಳನ್ನು ಲೋಕಕ್ಕೆ ಪ್ರಕಟಪಡಿಸಿದವರೂ, ಪ್ರಕಟಿಸಲಿರುವವರೂ ಆಗಿರುವ ಶ್ರೀಗುರುಚರಣಕೆ ಶರಣು.

ದಂತಸಿಂಹಾಸನಾರೂಢಂ | ಸದಾ ಪ್ರೇಮಮಯಂ ವಿಭುಮ್||
ಶ್ರೀರಾಘವೇಂದ್ರಸಂಜಾತಂ | ಶಂಕರಂ ಲೋಕಶಂಕರಮ್||೮||

(ದಂತಸಿಂಹಾಸನಾರೂಢಂ)ಪರಂಪರೆಯಲ್ಲಿ ಬಹು ಅಪರೂಪವಾಗಿ ದಂತಸಿಂಹಾಸನಾರೂಢರಾದ ಯತಿವರ್ಯರಿವರು. (ಸದಾ ಪ್ರೇಮಮಯಂ ವಿಭುಮ್)ಯಾವಾಗಲೂ ನಗುಮುಖದವರಾಗಿದ್ದು, ಎಂದೂ ಬಿಗುವದನರಾಗದೇ ಸಮಾಜಕ್ಕೆ ಭಗವತ್ಪ್ರೇಮವನ್ನು ಉಣಬಡಿಸಿದ ಅನುಪಮ ಪ್ರೇಮಮಯಿಗಳಿವರು. (ಶ್ರೀರಾಘವೇಂದ್ರಸಂಜಾತಂ)ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳ ಕರಕಮಲಸಂಜಾತರಾಗಿ, (ಲೋಕಶಂಕರಮ್)ಲೋಕಕ್ಕೆ ಶುಭದಾಯಕರಾಗಿ, (ಶಂಕರಂ)ಅಭಿನವ ಶಂಕರರಾಗಿರುವ ಶ್ರೀಮದ್ರಾಘವೇಶ್ವರಭಾರತೀ ಯತಿಪುಂಗವರನ್ನು ತ್ರಿಕರಣಪೂರ್ವಕವಾಗಿ ನಮಿಸುತ್ತೇನೆ.

ಶ್ರೀರಾಘವೇಶ್ವರಸ್ಯೇದಂ | ಅಷ್ಟಕಂ ಪಾಪನಾಶನಮ್||
ಗುರುಕೃಪಾತರಂಗಿಣ್ಯಾ | ಪಾವಿತಂ ಜನ್ಮ ಸಾರ್ಥಕಮ್||೯||

(ಶ್ರೀರಾಘವೇಶ್ವರಸ್ಯೇದಂ  ಅಷ್ಟಕಂ)ಈ “ ಶ್ರೀರಾಘವೇಶ್ವರಭಾರತ್ಯಷ್ಟಕ ”ವು (ಪಾಪನಾಶನಮ್)ಸರ್ವಪಾಪಹರ. (ಗುರುಕೃಪಾತರಂಗಿಣ್ಯಾ)ಗುರುಕೃಪೆಯೆಂಬ ನದಿಯಲ್ಲಿ ಮಿಂದ (ಜನ್ಮ)ಜನ್ಮವು (ಪಾವಿತಂ)ಪವಿತ್ರವಾಯಿತು; (ಸಾರ್ಥಕಮ್)ಸಾರ್ಥಕವಾಯಿತು.

ಯ: ಪಠೇಚ್ಛೃಣುಯಾದ್ವಾಪಿ | ಗುರುಭಕ್ತಿಸಮನ್ವಿತ:||
ಗುರೋ: ಕೃಪಾವಿಶೇಷೇಣ | ಸ ಲೋಕಪ್ರಿಯತಾಂ ವ್ರಜೇತ್||೧೦||

(ಗುರುಭಕ್ತಿಸಮನ್ವಿತ:)ಶ್ರೀಗುರುಗಳಲ್ಲಿ ಅತಿಶಯಭಕ್ತಿಯಿಟ್ಟು (ಯ:)ಯಾವನು (ಪಠೇಚ್ಛೃಣುಯಾದ್ವಾಪಿ)ಇದನ್ನು ಅರ್ಥಾನುಸಂಧಾನದೊಂದಿಗೆ ಓದುತ್ತಾನೋ ಅಥವಾ ಕೇಳುತ್ತಾನೋ, (ಸ:)ಅವನು (ಗುರೋ:)ಗುರುಗಳ (ಕೃಪಾವಿಶೇಷೇಣ)ವಿಶೇಷವಾದ ಕೃಪೆಯಿಂದ ( ಲೋಕಪ್ರಿಯತಾಂ ವ್ರಜೇತ್)ಲೋಕದಲ್ಲಿ ಎಲ್ಲರ ಪ್ರೀತಿ-ವಿಶ್ವಾಸವನ್ನು ಗಳಿಸುತ್ತಾನೆ.

ಇತಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಪ್ರೇರಣಯಾ ದಂಬೆಕೃಷ್ಣಮೂರ್ತಿವಿರಚಿತಮಿದಂ ಶ್ರೀರಾಘವೇಶ್ವರಭಾರತ್ಯಷ್ಟಕಂ ಸದ್ಗುರುಚರಣಾರವಿಂದಯೋ: ಸಮರ್ಪಿತಮಸ್ತು||

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳ ಪ್ರೇರಣೆಯಿಂದ ದಂಬೆ ಕೃಷ್ಣಮೂರ್ತಿಯು ವಿರಚಿಸಿದ ಶ್ರೀರಾಘವೇಶ್ವರಭಾರತ್ಯಷ್ಟಕವು ಸದ್ಗುರುಚರಣಾರವಿಂದಗಳಲ್ಲಿ ಸಮರ್ಪಿತವಾಗಲಿ ||

            ||ಶ್ರೀ ಗುರುಭ್ಯೋ ನಮ:||ಹರೇ ರಾಮ||
     

Comments

Popular posts from this blog

ಸ್ತೋತ್ರಸಂಹಿತಾ ೫.೨ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೫ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)

ಸ್ತೋತ್ರಸಂಹಿತಾ ೫.೩ (ಸ್ವರಚಿತ ಸ್ತೋತ್ರಗಳು, ವಿವರಣೆ ಸಹಿತ)